ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 1, 2012

15

ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ….

by ನಿಲುಮೆ

-ಡಾ. ಅಶೋಕ್ ಕೆ.ಆರ್

ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?

ಅಂತರ್ಜಾಲದ ಪರಿಣಾಮವಾಗಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸುಲಭವಾಗಿದೆ. ಫೇಸ್ ಬುಕ್ಕಿನಲ್ಲಿ, ವಿವಿಧ ಬ್ಲಾಗುಗಳಲ್ಲಿ, ಹೊಸ ದಿಗಂತದಂತಹ ಪತ್ರಿಕೆಗಳಲ್ಲಿ ಪಡೀಲಿನ ಘಟನೆಯ ಬಗ್ಗೆ ಬಹುತೇಕ ವಿದ್ಯಾವಂತರೇ ಬರೆಯುತ್ತಿರುವ ಲೇಖನ, ಕಮೆಂಟುಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ದೋಷವಿದೆಯೇನೋ ಎಂಬ ಅನುಮಾನ ಕಾಡುತ್ತದೆ. “ಮಂಡ್ಯದಲ್ಲಿ ‘ಹಿಂದೂ’ ಹೆಣ್ಣುಮಗಳನ್ನು ನಾಲ್ವರು ‘ಮುಸ್ಲಿಮರು’ ಚಲಿಸುವ ರೈಲಿನಿಂದ ಹೊರತಳ್ಳಿದುದನ್ನು ಯಾಕೆ ದೊಡ್ಡ ಸುದ್ದಿ ಮಾಡಲಿಲ್ಲ? ಅಸ್ಸಾಮಿನಲ್ಲಿ ಬೋಡೋ ಹಿಂದೂಗಳನ್ನು ಬಾಂಗ್ಲಾ ಮುಸ್ಲಿಮರು ಶೋಷಿಸುತ್ತಿರುವುದ್ಯಾಕೆ?” ಎಂಬಂಥಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ!

ಇಂಥ ಮನೋಭಾವ ಹೊಸದಲ್ಲ. ನರೇಂದ್ರ ಮೋದಿಯ ಅಪರೋಕ್ಷ ನೇತೃತ್ವದಲ್ಲಿ ನಡೆದ ನರಮೇದವನ್ನು ಪ್ರಸ್ತಾಪಿಸಿದಾಗ ಮೋದಿ ಬೆಂಬಲಿಗರು ಮೋದಿಯ ಅಭಿವೃದ್ಧಿ ಹಿಂದೆ ನಡೆದ ಸಿಖ್ ಹಿಂಸಾಚಾರದ ಬಗ್ಗೆ ಮಾತನಾಡುತ್ತಾರೆ, ಮೋದಿಯನ್ನು ಖಂಡಿಸಿ ಮಾತನಾಡಿದವನು ಕಮ್ಯುನಿಷ್ಟನಾಗಿದ್ದರೆ ಮಾವೋ ನಡೆಸಿದ ಸಾಂಸ್ಕೃತಿಕ ಕ್ರಾಂತಿ ಹೆಸರಿನ ಹತ್ಯಾಕಾಂಡವನ್ನು ಕೆದಕುತ್ತ ಮೂದಲಿಸುತ್ತಾರೆ. ದಾವೂದ್ ಇಬ್ರಾಹಿಂ ಪ್ರಾಯೋಜಿಸಿದ ಮುಂಬೈ ಬಾಂಬ್ ಸ್ಪೋಟವನ್ನು ಖಂಡಿಸಿದರೆ ಅದಕ್ಕೆ ಕಾರಣವಾದ ಬಾಬರಿ ಮಸೀದಿ ದ್ವಂಸವನ್ನು ನೆನಪಿಸುತ್ತಾರೆ! ಈ ಸಮರ್ಥನೆಗಳಿಗೆ ಕೊನೆಯಿದೆಯೇ? ಒಂದು ತಪ್ಪನ್ನು ತಪ್ಪಾಗಿ ಕಾಣುತ್ತ ಅದರ ಮೂಲಕಾರಣವನ್ನು ಹುಡುಕುವುದು ಬೇರೆ, ಆದರೆ ತಪ್ಪನ್ನು ಇನ್ನೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಮರ್ಥನೀಯ?

ಇನ್ನು ಮಂಡ್ಯದಲ್ಲಿ ನಡೆದ ಘಟನೆಯನ್ನು ಅವಲೋಕಿಸಿದರೆ ಅಲ್ಲಿ ಅಪರಾಧಿಗಳನ್ನು ತತ್ ಕ್ಷಣ ಇಪ್ಪತ್ತು ನಿಮಿಷದೊಳಗಾಗಿ ಬಂಧಿಸಲಾಯಿತು. ಯಾರೊಬ್ಬರಿಗೂ ಇನ್ನೂ ಜಾಮೀನು ಸಿಕ್ಕಿಲ್ಲ. ಪತ್ರಿಕೆಗಳಲ್ಲಿ ಫಾಲೋ ಅಪ್ ವರದಿಗಳೂ ಪ್ರಕಟವಾದವು. ಇದೆಲ್ಲದರ ಪರಿಣಾಮವಾಗಿ ಇಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ಮಹಿಳೆಯರಿಗಾಗಿಯೇ ಮತ್ತೊಂದು ಬೋಗಿಯನ್ನು ಮೀಸಲಿರುಸುವುದಾಗಿ ತಿಳಿಸಿದೆ. ಮಹಿಳಾ ಸಹಾಯವಾಣಿಯನ್ನು ಆರಂಭಿಸಿದೆ. ಮಂಡ್ಯ ಮತ್ತು ಮಂಗಳೂರಿನಲ್ಲಿ ನಡೆದ ಘಟನೆಗಳನ್ನು ಅವಲೋಕಿಸಿದಾಗ ಕಂಡುಬರುವ ಬಹುದೊಡ್ಡ ವ್ಯತ್ಯಾಸವೆಂದರೆ ಪೋಲೀಸರ ಮತ್ತು ರಾಜಕಾರಣಿಗಳ ಪಾತ್ರ. ಮಂಡ್ಯದಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಾವುದೇ ವಿಳಂಬವೂ ಆಗಿಲ್ಲ, ಅಪರಾಧಿಗಳನ್ನು ಜಾಮೀನಿನ ಮೇಲೆ ಬಿಟ್ಟು ಬಿಡುವ ಕೆಲಸವೂ ನಡೆದಿಲ್ಲ. ಇವೆರಡೂ ಮಂಗಳೂರಿನಲ್ಲಿ ನಡೆಯಿತಲ್ಲ ಯಾಕೆ? ಪೋಲೀಸರು ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ನಿರ್ವಹಿಸುವ ವಾತಾವರಣ ಇದೆಯೇ ಮಂಗಳೂರಿನಲ್ಲಿ?

ಕೊನೆಗೆ ಅಸ್ಸಾಮಿನ ವಿಷಯ. ಭಾರತದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರಾದ ಸುದ್ದಿ ಘಟನೆಗಳು ಭಾರತದ ಮುಖ್ಯ ಭಾಗದ ಜನರಿಗೆ ಯಾವತ್ತೂ ಪ್ರಮುಖವಾಗಿ ಕಂಡಿಲ್ಲ. ಅರುಣಾಚಲ ಪ್ರದೇಶದಲ್ಲಿ ಚೀನಾದ ದುರ್ವರ್ತನೆ, ಅಸ್ಸಾಮಿನಲ್ಲಿ ಬಾಂಗ್ಲ ನುಸುಳುಕೋರರ ಸಮಸ್ಯೆಯಿಂದ ಒಂದಷ್ಟು ಸುದ್ದಿ ಮಾಡುತ್ತವೆಯೇ ಹೊರತು ಅಲ್ಲಿನ ಇತರ ಸಮಸ್ಯೆಗಳ ಬಗ್ಗೆ ಮಾಧ್ಯಮದ್ದೂ ಸೇರಿದಂತೆ ನಮ್ಮೆಲ್ಲರದೂ ದಿವ್ಯ ಮೌನ. ಈ ಕಾರಣ ಮತ್ತಲವು ಐತಿಹಾಸಿಕ ಕಾರಣಗಳಿಂದಾಗಿ ಅಲ್ಲಿನ ಜನರು ದಶಕಗಳಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಶಸ್ತ್ರಾಸ್ತ್ರ ಹೋರಾಟ ಕೈಗೊಂಡಿದ್ದು ಸತ್ಯ, ಅದನ್ನು ತನ್ನ ಬಲಾಡ್ಯ ಸೇನೆಯಿಂದ ಭಾರತ ಹತ್ತಿಕ್ಕಿರುವುದೂ ಸತ್ಯ. ಈಗಲೂ ಅಲ್ಲಿ ಅನೇಕ ಪ್ರತ್ಯೇಕವಾದಿ ಸಂಘಟನೆಗಳು ಚಾಲ್ತಿಯಲ್ಲಿವೆ ಆದರೆ ಇವ್ಯಾವೂ ಕಾಶ್ಮೀರದಷ್ಟು ಸದ್ದು ಮಾಡುವುದಿಲ್ಲ. ಕಾಶ್ಮೀರದ ವಿಷಯದಲ್ಲಿ ಶತ್ರು ರಾಷ್ಟ್ರವನ್ನು ದೂಷಿಸಬಹುದು; ಈ ರಾಜ್ಯಗಳಲ್ಲಿ ದೂಷಿಸಬೇಕಾಗಿರುವುದು ಯಾರನ್ನು? ನಮ್ಮದೇ ಪ್ರಜೆಗಳನ್ನು ದೂಷಿಸಬೇಕೆ ಅಥವಾ ಅವರಿಗೆ ಭಾರತವೆಂಬೋ ದೇಶದಲ್ಲಿ ಇರಲು ಇಷ್ಟವಿಲ್ಲದಂತೆ ಮಾಡಿದ ನಮ್ಮನ್ನೇ ದೂಷಿಸಿಕೊಳ್ಳಬೇಕೇ?

ಇವೆಲ್ಲ ಸಂಘಟನೆಗಳು ವ್ಯಕ್ತಿಗಳು ನಡೆಸಿದ ಕ್ರೌರ್ಯದ ಮಾತಾಯಿತು. ಸರಕಾರಿ ಕ್ರೌರ್ಯ? ಸೋನಿ ಸೋರಿ ಎಂಬ ಆದಿವಾಸಿ ಹೆಣ್ಣುಮಗಳಿಗೆ ಮಾವೋವಾದಿಯೆಂಬ ಪಟ್ಟ  ಕಟ್ಟಿ ಬಂಧಿಸಲಾಗುತ್ತದೆ. ವಿಪರ್ಯಾಸವೆಂದರೆ ಆಕೆಯ ತಂದೆಯನ್ನು ಪೋಲೀಸ್ ಮಾಹಿತಿದಾರನೆಂಬ ಆರೋಪ ಹೊರಿಸಿ ಮಾವೋಗಳೇ ಹಲ್ಲೆ ನಡೆಸುತ್ತಾರೆ. ಇಂಥ ಖೊಟ್ಟಿ ಬಂಧನಗಳು ನಕ್ಸಲ್ ಪ್ರದೇಶಗಳಲ್ಲಿ ಹೊಸದಲ್ಲ. ಬಂಧನದ ನಂತರ ನಡೆದಿದ್ದು ನಿಜವಾದ ನಾವು ಊಹಿಸಲಾಗದ ಕ್ರೌರ್ಯ. ಪೋಲೀಸ್ ಅಧಿಕಾರಿಗಳು ಆಕೆಗೆ ದೈಹಿಕವಾಗಿ ಹಿಂಸಿಸುತ್ತಾರೆ. ಆಕೆಗೆ ಮರ್ಮಾಂಗದ ಒಳಗೆ ಕಲ್ಲು ತುರುಕುವ ಹೀನ ಕೆಲಸ ಮಾಡುತ್ತಾರೆ. ಅದನ್ನು ಪತ್ರಿಕೆಗಳಾಗಲೀ ಮಾಧ್ಯಮದವಾರಗಲೀ ಎಷ್ಟರಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ? ಕೆಲವು ಪತ್ರಿಕೆಗಳು, ಮಾಧ್ಯಮದವರು ಅದನ್ನು ಪ್ರಚುರಪಡಿಸಿದರೂ ಈ ಸಂಸ್ಕೃತಿ ರಕ್ಷಕರೆಂಬ ದೇಶಭಕ್ತರು ನಕ್ಸಲರಿಗೆ ಇನ್ನೇನು ಮಾಡಬೇಕೆಂದು ಅಸಡ್ಡೆಯಿಂದಲೇ ಮಾತನಾಡುತ್ತಾರೆ. ಇನ್ನು ವಿಪರ್ಯಾಸದ ಸಂಗತಿಯೆಂದರೆ ಸುಪ್ರೀಂಕೋರ್ಟಿನಲ್ಲಿ ಸೋನಿ ಸೂರಿಯ ಕೇಸಿನ ವಿಚಾರಣೆ ನಡೆಯುತ್ತಿರುವಾಗ, ಆಕೆ ಮೇಲೆ ನಡೆದ ಲೈಂಗಿಕ ಹಲ್ಲೆಗಳು ನಿಜವೆಂದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾದ ನಂತರವೂ ಆ ಘಟನೆ ನಡೆದಾಗ ಎಸ್.ಪಿ ಆಗಿದ್ದ ಅಂಕಿತ್ ಗರ್ಗನಿಗೆ ಗ್ಯಾಲಂಟ್ರಿ ಪದಕ ನೀಡುತ್ತದೆ! ಇಲ್ಲಿ ಹಲ್ಲೆಗೊಳಗಾಗಿದ್ದು ಆದಿವಾಸಿ ಮಹಿಳೆ, ಹಲ್ಲೆ ನಡೆಸಿದ್ದು ಹಿಂದೂ. ಈ ಘಟನೆಯನ್ನು ಮದ್ದೂರಿನ ದುರ್ಘಟನೆಗೆ ಅಸ್ಸಾಮಿನಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಸಮರ್ಥನೆಯಾಗಿ ಬಳಸಲಾದೀತೇ?

ಮಂಗಳೂರು, ಮದ್ದೂರು, ಅಸ್ಸಾಂ, ಸೋನಿ ಸೋರಿ –  ಈ ಎಲ್ಲ ಘಟನೆಗಳೂ ಖಂಡಿಸಲು ಅರ್ಹವಾದದ್ದೇ. ಯಾವುದೇ ಕೋಮಿನವರು ಇದರಲ್ಲಿ ಪಾಲ್ಗೊಳ್ಳಲಿ ಅವರು ಶಿಕ್ಷಾರ್ಹರೇ. ಆದರೆ ಒಂದು ದುರ್ಘಟನೆಯ ಆಶ್ರಯದಲ್ಲಿ ಇನ್ನೊಂದು ದುರ್ಘಟನೆಯನ್ನು ಮರೆಮಾಚುವ ನೀಚ ವಂಚಕತನವ್ಯಾಕೆ?

15 ಟಿಪ್ಪಣಿಗಳು Post a comment
 1. ajay
  ಆಗಸ್ಟ್ 1 2012

  “ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ?”

  ಹೌದಾ? ನಿಜಕ್ಕೂ ನಾವು ಆ ದೃಶ್ಯಗಳನ್ನು ನೋಡಿದಾಗ ಆತನ ಧರ್ಮದ ಬಗ್ಗೆ ಯೋಚಿಸಲೇ ಇಲ್ಲ. ಈಗ ನಿಮ್ಮ ಬರಹ ಓದಿ ಮತ್ತೊಮ್ಮೆ ನೋಡಿದಾಗ ಆತ ’ಮುಸ್ಲಿಂ’ ಎಂಬಂತೆ ಕಾಣುತ್ತಲೂ ಇಲ್ಲ. ಈ ಘಟನೆಗೆ ಹೀಗೆ ಕೋಮುವಾದ ಅಂಟಿಸುವುದೂ ಬೇಕಿತ್ತಾ? ಅವರು ಹಿಂದೂಗಳ ಮೇಲೇ ಹಲ್ಲೆ ಮಾಡಿದ್ದಾರೆ. ಮತ್ಯಾಕೆ ಇಲಿ ಬಂತು ಕೋಮುವಾದ.!

  ಈಗಂತೂ ಮಾತೆತ್ತಿದರೆ ಮೋದಿಯ ಉದಾಹರಣೆ ಕೊಡುವುದು ಒಂಥರಾ ಫ್ಯಾಷನ್. ಎಲ್ಲಿಯ ಗೋದ್ರಾ ಹತ್ಯಾಕಾಂಡ, ಎಲ್ಲಿಯ ಈ ಚಿಲ್ಲರೆ ಘಟನೆ? ಅಲ್ಲಿ ಆಗಿದ್ದು ಸಾವಿರಾರು ನರಹತ್ಯೆ. ಇಲ್ಲಿ ಕೇವಲ ಒಂದಿಷ್ಟು ಗುಂಡುಪಾರ್ಟಿಯ ಜನರನ್ನು ಎಳೆದಾಡಿದ್ದು ಅಷ್ಟೆ. ಹೋಲಿಕೆಗೆ ಮಿತಿಯಿರಲಿ.

  ಉತ್ತರ
  • ಆಗಸ್ಟ್ 1 2012

   sorry, i think you have mistaken my lines about modi. i just gave various examples where we the people start supporting various false acts in the disguise of other acts. nothing to compare various incidents. and regarding muslim guy, i have quoted it only after reading a report from the journalist who was present at that site. u can read it at following link – http://www.hingyake.blogspot.in/2012/07/blog-post_29.html
   with regards
   ashok

   ಉತ್ತರ
 2. ಆಗಸ್ಟ್ 1 2012

  > ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು
  ಧಾಳಿ ಮಾಡಿದವರಲ್ಲಿ ಹಿಂದೂ ಜಾಗರಣ ವೇದಿಕೆಗೆ ಸೇರಿದ ವ್ಯಕ್ತಿಯೂ ಒಬ್ಬ. ವಿಚಾರಣೆಯ ವೇಳೆ ತಿಳಿದು ಬಂದಿರುವ ವಿಷಯವೆಂದರೆ, ಈತ ಹಿಂದೂ ಜಾಗರಣ ವೇದಿಕೆಗೆ ಕೇವಲ ಒಂದು ವಾರದ ಹಿಂದಷ್ಟೇ ಸೇರಿದ್ದಾನೆ. ಈತನು ಹಿಂದಿನಿಂದಲೂ ಅನೇಕ ಅಪರಾಧಗಳನ್ನು ಮಾಡುತ್ತಾ ಬಂದಿರುವವನೇ. ಅರ್ಥಾತ್, ಆತ ಅಪರಾಧ ಕೃತ್ಯವನ್ನೆಸಗಲು ಹಿಂದೂ ಜಾಗರಣ ವೇದಿಕೆಗೆ ಕಾರಣವಲ್ಲ. ಜೊತೆಗೆ, ಹಿಂದೂ ಜಾಗರಣ ವೇದಿಕೆಯು ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
  ಇಷ್ಟೆಲ್ಲಾ ಸತ್ಯಗಳು ಕಣ್ಣಿಗೆ ರಾಚುವಂತಿದ್ದರೂ, ತಾವು ಈ ಕೃತ್ಯವನ್ನು ಹಿಂದು ಜಾಗರಣ ವೇದಿಕೆಯೇ ನಡೆಸಿದೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ಕಾಶ್ಮೀರದಿಂದ ಹಿಡಿದು ಅಸ್ಸಾಮಿನವರೆಗೆ, ಗುಜರಾತು-ಮುಂಬೈ-ಅಯೋಧ್ಯೆಗಳಲ್ಲಿ ನಡೆದ ಹಿಂಸಾಚಾರಗಳು, ಪ್ರತ್ಯೇಕತಾವಾದಕ್ಕೆ ನಮ್ಮವರೇ ಕಾರಣವೇ ಹೊರತು ಅಲ್ಲಿನ ಪ್ರತ್ಯೇಕತಾವಾದಿಗಳಲ್ಲ, ಇತ್ಯಾದಿಗಳನ್ನೆಲ್ಲಾ ಪುರಾವೆ ಸಹಿತ ಓದುಗರ ಮುಂದಿಡಲು ಪ್ರಯತ್ನಿಸಿರುವ ನೀವು, ಇಷ್ಟು ಸುಲಭವಾಗಿ “ಸುಳ್ಳು” ಹೇಳುತ್ತೀರೆಂದರೆ, ಇದನ್ನು ನಿಮ್ಮ ಪೂರ್ವಾಗ್ರಹವೆನ್ನೋಣವೇ ಅಥವಾ ನಿಮ್ಮ ಹಿಂದೆ ಒಂದು “ಅಜೆಂಡಾ” ಇರಬಹುದು ಎಂದು ಅನುಮಾನಿಸೋಣವೇ!?

  ಉತ್ತರ
  • ಆಗಸ್ಟ್ 1 2012

   kumar,
   i am not trying to prove anything or carry any hidden agenda. i had read few years back that during the independence political leaders agreed to the demand of people of nagaland that they will be given seperate nation and independence after few years. i am still searching for those papers to confirm whether they are true. i agree that violence has erupted from seperationists but violence is also fuelled by the governments.
   u r saying that the hindu jagaran vedike is not behind the attack. if it s true i am happy for that. there are many more issues majorly casteism where hindu jagaran vedike should really work. if they do that almost everyone will support them.
   with regards
   ashok

   ಉತ್ತರ
   • Kumar
    ಆಗಸ್ಟ್ 1 2012

    > i had read few years back that during the independence political leaders agreed to the demand of people of nagaland
    > that they will be given seperate nation and independence after few years
    ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟಿಷರ ಕೈಯ್ಯಲ್ಲಿದ್ದ ಪ್ರತಿಯೊಂದು ರಾಜ್ಯವೂ ಕೂಡಲೇ ಭಾರತದಲ್ಲಿ ವಿಲೀನಗೊಂಡವು.
    ಇನ್ನು ಬ್ರಿಟಿಷರ ಕೈಯ್ಯಲ್ಲಿ ಇರದಿದ್ದ ನೂರಾರು ಪ್ರಾಂತಗಳಿದ್ದವು ಮತ್ತು ಅವುಗಳನ್ನು ರಾಜರು ಆಳುತ್ತಿದ್ದರು. ಆ ಎಲ್ಲಾ ರಾಜ್ಯಗಳಿಗೆ ಭಾರತ ಸರಕಾರದ ಗೃಹಮಂತ್ರಾಲಯದಿಂದ ವಿಲೀನ ಪತ್ರವನ್ನು ಕಳುಹಿಸಿಕೊಡಲಾಯಿತು. ಅಲ್ಲಿ ಅವರಿಗಿದ್ದುದು ಎರಡೇ ಆಯ್ಕೆ – ಒಂದು ಭಾರತಕ್ಕೆ ಸೇರುವುದು; ಎರಡನೆಯದು ಪಾಕಿಸ್ತಾನಕ್ಕೆ ಸೇರುವುದು.
    ಆ ವಿಲೀನ ಪತ್ರಕ್ಕೆ ಸಹಿ ಹಾಕುವಾಗ ಯಾವುದೇ ಶರತ್ತನ್ನು ವಿಧಿಸುವ ಹಾಗಿರಲಿಲ್ಲ. ಮತ್ತು ಅದು ಭಾರತ ಸರಕಾರ ಮತ್ತು ಆ ಪ್ರಾಂತದ ರಾಜನ ನಡುವೆ ನಡೆದ ಒಪ್ಪಂದ.
    ಅಂದು ಭಾರತಕ್ಕೆ ಸೇರಿದ ಪ್ರತಿಯೊಂದು ರಾಜ್ಯವೂ ಈ ರೀತಿಯಾಗಿ ಭೇಷರತ್ತಾಗಿ ವಿಲೀನ ಪತ್ರಕ್ಕೆ ಸಹಿ ಹಾಕಿವೆ. ಅವನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ.
    ಕಾಶ್ಮೀರದ ವಿಷಯದಲ್ಲಿಯೂ ಇದೇ ನಡೆದದ್ದು. ರಾಜಾ ಹರಿಸಿಂಗ್ ಭೇಷರತ್ತಾಗಿ ವಿಲೀನ ಪತ್ರಕ್ಕೆ ಸಹಿ ಹಾಕಿದರು. ಆ ನಂತರವೇ ಭಾರತದ ಸೈನ್ಯ ಕಾಶ್ಮೀರದಲ್ಲಿಳಿದದ್ದು.
    ಆದರೆ, ಮುಂದೆ ಪ್ರಧಾನಿ ನೆಹರೂ ಅವರು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು ತಪ್ಪು ಮಾಡಿದರು. ಕಾಶ್ಮೀರ ನಮ್ಮದೆಂದ ಮೇಲೆ, ಅದರ ವಿಷಯದಲ್ಲಿ ವಿಶ್ವಸಂಸ್ಥೆಗೇನು ಕೆಲಸ? ಆದರೆ, ಅವರು ಮಾಡಿದ ತಪ್ಪು ಇಂದಿಗೂ ಕಾಶ್ಮೀರಿಗಳು ಅನುಭವಿಸುತ್ತಿದ್ದಾರೆ.
    ಆದರೆ, ನಾಗಾಲ್ಯಾಂಡ್ ಸೇರಿದಂತೆ ಯಾವ ಈಶಾನ್ಯ ರಾಜ್ಯದಲ್ಲೂ ಈ ರೀತಿಯ ಸಮಸ್ಯೆಯಾಗಲಿಲ್ಲ. ನಾಗಾಲ್ಯಾಂಡ್ ಅಸ್ಸಾಮಿನ ಸ್ವಾತಂತ್ರ್ಯ ಬಂದಾಗ ಅಸ್ಸಾಮಿನ ಭಾಗವಾಗಿತ್ತು. ಬ್ರಿಟಿಷರು ಆಳುತ್ತಿದ್ದಾಗ ಅಸ್ಸಾಂ ಬ್ರಿಟಿಷರ ಕೈಯ್ಯಲ್ಲಿದ್ದ ಬಂಗಾಳ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಹೀಗಾಗಿ ಸ್ವಾತಂತ್ರ್ಯ ಬಂದ ಕೂಡಲೇ ಯಾವುದೇ ಕರಾರಿಲ್ಲದೆ, ಯಾವುದೇ ವಿಲೀನ ಪತ್ರಕ್ಕೂ ಸಹಿ ಹಾಕುವ ಪ್ರಮೇಯವಿಲ್ಲದೆ ಬಂಗಾಳ ಪ್ರೆಸಿಡೆನ್ಸಿಯ ಕೈಯ್ಯಲ್ಲಿದ್ದ ಇಡೀ ಈಶಾನ್ಯ ಭಾರತವು ಭಾರತಕ್ಕೆ ವಿಲೀನಗೊಂಡಿತು. ಇನ್ನು ನಾಗಾಲ್ಯಾಂಡಿಗೆ ಯಾವ ರಾಜಕಾರಣಿ/ನೇತಾ ಯಾವ ಕಾರಣಕ್ಕಾಗಿ ಆಶ್ವಾಸನೆ ನೀಡಿರಬಹುದೆಂದು ನಿಮ್ಮ ಎಣಿಕೆ? ಆ ರೀತಿ ಆಶ್ವಾಸನೆ ನೀಡಿದ್ದರೂ, ಅದಕ್ಕಾವ ಬೆಲೆಯೂ ಇಲ್ಲ.
    ಆದರೂ, ಇಷ್ಟು ವರ್ಷದ ನಂತರ ಅನಾವಶ್ಯಕವಾದ ಈ ವಿಷಯಗಳನ್ನು ಹೊರತೆಗೆಯುವ ಉದ್ದೇಶವೇನೆಂದು ತಿಳಿಯಬಹುದೇ?

    ಉತ್ತರ
    • ಆಗಸ್ಟ್ 1 2012

     ಹೊರತೆಗೆಯುವುದಕ್ಕೇ ಯಾವುದೇ ಗುಪ್ತ ಉದ್ದೇಶವೂ ಇಲ್ಲ. ನಾನಾಗಲೇ ತಿಳಿಸಿದಂತೆ ನಾನು ಮುಂಚೆ ಓದಿದ್ದ ವಿಷಯವದು. ಅದರ ಬಗ್ಗೆ ವಿವರಗಳು ಸಿಕ್ಕರೆ ಖಂಡಿತ ತಿಳಿಸುತ್ತೇನೆ. ಆ ರೀತಿಯ ಆಶ್ವಾಸನೆಗೆ ಬೆಲೆ ಇಲ್ಲ ಎಂದು ತಿಳಿಸಿದ್ದೀರಿ. ಆದರೆ ಆ ಪ್ರತ್ಯೇಕತಾವಾದದಿಂದ ಕಳೆದುಹೋದ ಜೀವಗಳಿಗೆ ಬೆಲೆಯಿದೆಯಲ್ಲವೇ? ಆ ಜೀವ ದೇಶಭಕ್ತನದ್ದಾಗಿರಬಹುದು, ದೇಶದ್ರೋಹಿಯದ್ದಾಗಿರಬಹುದು, ಜೀವ ಜೀವವೇ ಅಲ್ಲವೇ? ಈಶಾನ್ಯ ರಾಜ್ಯಗಳನ್ನು ಉಳಿದವರು ಹೇಗೆ ನಿರ್ಲಕ್ಷಿಸುತ್ತಿದ್ದೀವೆಂದು ಉದಾಹರಣೆ ಕೊಟ್ಟೆನೇ ಹೊರತು ಮತ್ಯಾವ ದುರುದ್ದೇಶದಿಂದಲೂ ಅಲ಻ಲ.

     ಉತ್ತರ
     • Kumar
      ಆಗಸ್ಟ್ 1 2012

      ಪ್ರತಿಯೊಂದು ಜೀವಕ್ಕೂ ಬೆಲೆಯಿದೆ. ಯಾವ ಜೀವವೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ಸರಿ ತಾನೇ!?
      ಆದರೆ, ಕೆಲವರ ಪ್ರಕಾರ ಮನುಷ್ಯರ ಜೀವಕ್ಕೆ ಮಾತ್ರ ಬೆಲೆಯಿದೆಯೇ ಹೊರತು ಪ್ರಾಣಿಗಳ ಜೀವಕ್ಕೆ ಬೆಲೆಯಿಲ್ಲ.
      ನನ್ನ ಮಾತಿನಲ್ಲಿ ನಿಮಗೆ ನಂಬಿಕೆಯಿಲ್ಲವೆಂದರೆ, ಈ ಕೊಂಡಿಯನ್ನೊಮ್ಮೆ ಓದಿ ನೋಡಿ: http://goo.gl/H7MLe

      ಇನ್ನು ಈಶಾನ್ಯ ಭಾರತವನ್ನು, ನಮ್ಮನ್ನು ಆಳಿದವರು ನಿರ್ಲಕ್ಷಿಸಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಭಾರತದ ರಾಜಕೀಯದಲ್ಲಿ ಕೇವಲ ಸಂಖ್ಯೆಗೆ ಮಾತ್ರ ಬೆಲೆ – ಹೆಚ್ಚು ಸಂಸತ್ ಸದಸ್ಯರನ್ನು ನೀಡುವ ರಾಜ್ಯಗಳ ಕುರಿತಷ್ಟೇ ರಾಜಕೀಯ ಪಕ್ಷಗಳಿಗೆ ಆಸಕ್ತಿ. ಇದು ನಿಜಕ್ಕೂ ದುಃಖದ ವಿಷಯವೇ.
      ಈಶಾನ್ಯ ಭಾರತದಂತೆಯೇ ಪ್ರತಿಯೊಂದು ರಾಜ್ಯದ ಒಳಗೂ ನಿರ್ಲಕ್ಷಿತ ಪ್ರದೇಶಗಳಿವೆ. ಉದಾಹರಣೆಗೆ ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ರಾಯಚೂರು, ಕಲಬುರ್ಗಿ, ಬಳ್ಳಾರಿ ನಿರ್ಲಕ್ಷಕ್ಕೊಳಗಾಗಿ ಹೆಚ್ಚಿನ ಬೆಳವಣಿಗೆ ಕಂಡಿಲ್ಲ. ಅದೇ ರೀತಿ ಪಕ್ಕದ ಆಂಧ್ರಪ್ರದೇಶದ ತೆಲಂಗಾಣ ನಿರ್ಲಕ್ಷಿತ ಪ್ರದೇಶವಾಗಿ ಹಿಂದುಳಿದಿದೆ. ಖಂಡಿತ ಇದು ದುಃಖದ ವಿಷಯವೇ!

      ಉತ್ತರ
      • ಆಗಸ್ಟ್ 2 2012

       ಹ್ಹ ಹ್ಹ ಹ್ಹ ನನ್ನದೇ ಲೇಖನದ ಕೊಂಡಿಯನ್ನು ನೀಡಿದ್ದೀರಿ!! ಅದೂ ಇದೂ ಬೇರೆಯದೇ ವಿಷಯವಲ್ಲವೇ. ಆಡಿಕೊಳ್ಳಿ ಸಂತೋಷ. ಆದರೆ ಅದಕ್ಕೂ ಒಂದು ರೀತಿಯಿರಲಿ ಸರ್. ವಾದಕ್ಕೆ ಹೇಳಬೇಕೆಂದರೆ ಸಸ್ಯಗಳಿಗೂ ಜೀವವಿರುತ್ತದೆ, ನಾವುಗಳು ತಿನ್ನುವ ಮೊಳಕೆ ಕಾಳುಗಳೂ ಸಹಿತ ಮತ್ತೊಂದು ಗಿಡವಾಗಿ ಬೆಳೆಯುತ್ತದೆ ಭೂಮಿಯಲ್ಲಿ ನೆಟ್ಟರೆ! ಹಾಗಂತ ಮೊಳಕೆ ಕಾಳುಗಳನ್ನು ತಿನ್ನುವುದನ್ನು ಭ್ರೂಣ ಹತ್ಯೆ ಎನ್ನಲಾದೀತೆ??
       ವಿಷಯಾಂತರ ಒಳ್ಳೆಯದಲ್ಲ.

       ಉತ್ತರ
     • Kumar
      ಆಗಸ್ಟ್ 1 2012

      > ಆ ರೀತಿಯ ಆಶ್ವಾಸನೆಗೆ ಬೆಲೆ ಇಲ್ಲ ಎಂದು ತಿಳಿಸಿದ್ದೀರಿ.
      ಅದು ನಾನು ಹೇಳುತ್ತಿರುವ ಮಾತಲ್ಲ. ಭಾರತದ ಸಂವಿಧಾನದಲ್ಲೇ ಅಂಕಿತವಾಗಿರುವ ವಿಷಯ.
      ಕಾಶ್ಮೀರದ ವಿಷಯದಲ್ಲಿಯೂ ಇದು ಸತ್ಯ. ಇದಕ್ಕೆ ಸಂಬಂಧಿಸಿದಂತೆ ೧೯೯೪ ಫ಼ೆಬ್ರವರಿ ೨೨ರಂದು ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಒಮ್ಮತದ ನಿರ್ಣಯ ಮಂಡಿಸಿದ್ದವು (http://goo.gl/vLb7Y). ಹೀಗಿದ್ದಾಗ್ಯೂ ಯುಪಿಎ ಸರಕಾರ ಸಂವಾದಕಾರರನ್ನು ಕಾಶ್ಮೀರಕ್ಕೆ ಕಳುಹಿಸಿ ಅವರ ಕೈಯ್ಯಲ್ಲಿ ಸಂವಿಧಾನಕ್ಕೆ ವಿರೋಧ ತರುವಂತಹ ವರದಿಯನ್ನು ಮಂಡಿಸುವಂತೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ದೇಶವನ್ನು ಯಾವ ದುರಂತಕ್ಕೂ ತಳ್ಳಲು ಹೇಸದವರು ದೇಶವನ್ನಾಳುತ್ತಿದ್ದಾರೆನ್ನುವುದೇ ಒಂದು ದುರಂತವಾಗಿದೆ. ಇಂತಹ ಮಂದಿ ಯಾವ ರೀತಿಯ ಆಶ್ವಾಸನೆಯನ್ನು ಬೇಕಾದರೂ ಕೊಡಬಲ್ಲರು – ಅವರಿಗೆ ಅದು ಸಂವಿಧಾನ ವಿರೋಧಿಯಾಗಿದ್ದರೂ ಚಿಂತೆಯಿಲ್ಲ. ಇನ್ನು ಇಂತಹ ವಿಷಯಗಳು ಕೈಮೀರಿ ಹೋಗುವಾಗ ಯಾರಾದರೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಸ್ವಂತದ ಹಣ ಖರ್ಚು ಮಾಡಿ ಹೋರಾಡಿ ಇವರು ಮಾಡಿದ್ದನ್ನು ಸರಿಪಡಿಸಬೇಕಾಗುತ್ತದೆ!

      ಉತ್ತರ
 3. ಆಗಸ್ಟ್ 1 2012

  ಪ್ರಿಯ ವೈಧ್ಯರೇ, ಮಂಗಳೂರಿನ ಪಡಿಲಿನಲ್ಲಿ ನಡೆದ ಘಟನೆಯನ್ನು, ಒಂದು ರೀತಿಯಲ್ಲಿ ಇಡಿ ರಾಜ್ಯವೇ ಅಲ್ಲ, ಇಡೀ ದೇಶವೇ, ಖಂಡಿಸಿದೆ, ಘಟನೆ ನಡೆದಿರುವುದು ನಿಜ. ಹುಟ್ಟಿದ ಹಬ್ಬ ಮಾಡಿಕೊಂಡರೆ ತಪ್ಪೇನು. ಅದು ಸಂಜೆಯ ಸಮಯದಲ್ಲಿ. ಅಲ್ಲಿ ಮಾಧಕ ವಸ್ತುಗಳಿಲ್ಲ, ಆಶ್ಲೀಲ ನೃತ್ಯವಿಲ್ಲ, ಅಕಸ್ಮಾತ್ ಅನುಮಾನ ಬಂದಿದ್ದರೆ, ಸ್ಥಳೀಯ ಪೊಲೀಸರಿಗೆ, ಮಾಧ್ಯಮದವರಿಗೆ ತಿಳಿಸಿ, ಅವರಿಗೆ ಸಹಕಾರ ನೀಡಿದ್ದರೆ ಸತ್ಯ ಏನೆಂಬುದು ತಿಳಿಯುತ್ತಿತ್ತು. ನೇರವಾಗಿ ಹಿಂದೂ ಜಾಗರಣ ವೇದಿಕೆಯವರು ಹಲ್ಲೆ ಮಾಡಿದ್ದು ಎಂತಹ ನಾಗರೀಕನು ತಲೆತಗ್ಗಿಸುವಂತದ್ದು. ಹುಟ್ಟಿದ ಹಬ್ಬ ಅಚರಿಸುತ್ತಿದ್ದವರು, ಅವರು ಯಾವ ಜಾತಿಯವರಾದರೇನು. ಯಾವ ಕೊಮಿನವರಾದರೇನು. ಅವರು ನಮ್ಮ ದೇಶದವರು ತಾನೆ.
  ಘಟನೆ ತಿಳಿದ ನಂತರ ಪೊಲೀಸರೂ ಸಹ ಕೂಡಲೇ ಕ್ರಮ ಜರುಗಿಸಬಹುದಿತ್ತು. ಅವರೂ ತಡ ಮಾಡಿದ್ದಾರೆ. ತಪ್ಪಿತಸ್ತ್ರನ್ನು ಬಂದಿಸಲು ಮೀನಾ ಮೇಷಎಣಿಸಿದ್ದಾರೆ.
  ಒಂದು ರೀತಿಯಲ್ಲಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದುದ್ದರಿಂದ, ಈ ಘಟನೆ ಇಸ್ಟೊಂದು ತಾರಕಕ್ಕೆರಲು ಕಾರಣವಾಯಿತು ಎನ್ನಬಹುದು.
  ಒಂದು ಘಟನೆಗೂ, ಮತ್ತೊಂದು ಘಟನೆಗೂ ತಳುಕು ಹಾಕುವುದು ಸರಿಯಲ್ಲ. ತಪ್ಪಿತಸ್ತರನ್ನು ಸಮರ್ಥಿಸಿಕೊಳುವುದು ಸರಿಯಲ್ಲ allave?

  ಉತ್ತರ
 4. ರವಿಕುಮಾರ ಜಿ ಬಿ
  ಆಗಸ್ಟ್ 2 2012

  ಮತ್ತೊಂದು ಮಹತ್ವದ ವಿದ್ಯಮಾನದಲ್ಲಿ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಸಿ ಮಂಜುಳಾ ಅವರು ಕಳೆದ ಶನಿವಾರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಇಬ್ಬರು ಬಾಧಿತ ಯುವಕರ ಪೂರ್ವಾಪರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಯುವತಿಯರ ಅಕ್ರಮ ಸಾಗಣೆ ಜಾಲವೂ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

  ಘಟನೆಯಲ್ಲಿ ಬಾಧಿತ ಇಬ್ಬರು ಯುವತಿಯರು ಮತ್ತು ಅವರ ಪೋಷಕರೊಂದಿಗೆ ಮಾತನಾಡಿದ್ದೇನೆ. ಅವರು ಹೇಳುವ ಪ್ರಕಾರ ಆ ಯುವತಿಯರಿಗೆ ಅಲ್ಲಿದ್ದ ಇಬ್ಬರು ಯುವತಿಯರು ಯಾರು ಎಂಬುದೇ ಗೊತ್ತಿರಲಿಲ್ಲ. ಸ್ನೇಹಿತೆಯೊಬ್ಬಳ ಆಹ್ವಾನದ ಮೇಲೆ ಅಲ್ಲಿಗೆ ತೆರಳಿದ್ದಾಗಿ ಆ ಯುವತಿಯರು ಹೇಳಿದರು.

  ಆ ಇಬ್ಬರೂ ಯುವತಿಯರು ಕಾಲೇಜು ಸಮವಸ್ತ್ರದಲ್ಲಿ ವಿವಾದಿತ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ರೆಸಾರ್ಟಿಗೆ ತೆರಳಿದ್ದಾರೆ. ಅಲ್ಲಿ ಸಮವಸ್ತ್ರ ತೆಗೆದು ರೆಸಾರ್ಟಿನಲ್ಲಿದ್ದ ಪಾರ್ಟಿ ಬಟ್ಟೆ ಹಾಕಿಕೊಂಡಿದ್ದಾರೆ. ಆದ್ದರಿಂದ ಗುರುದತ್ ಮತ್ತು ವಿಜಯ್ ಕುಮಾರ್ ಎಂಬ ಯುವಕರ ಹಿನ್ನೆಲೆ ಬಗ್ಗೆ ತನಿಖೆ ನಡೆಯಬೇಕಿದೆ. ಗುರುದತ್ ತಾಯಿ 2009ರಲ್ಲಿ ಯುವತಿಯರ ಅಕ್ರಮ ಮಾರಾಟ ಮತ್ತು ಸಾಗಣೆ ಜಾಲದಲ್ಲಿ ಭಾಗಿಯಾಗಿದ್ದರು ಎಂದೂ ಆಯೋಗದ ಮುಖ್ಯಸ್ಥೆ ಮಂಜುಳಾ ತಿಳಿಸಿದ್ದಾರೆ.

  ‘ಇನ್ನು ಸ್ಥಳೀಯ ಪೊಲೀಸರ ಬಗ್ಗೆ ಹೇಳಬೇಕೆಂದರೆ 8 ತಿಂಗಳ ಹಿಂದೆಯೇ ಈ ರೆಸಾರ್ಟಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯ ನಾಗರಿಕರು ದೂರಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಆಗ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ’ ಎಂದೂ ಮಂಜುಳಾ ಹೇಳಿದರು.

  ಹಾಗೆಯೇ, ಹಲ್ಲೆ ನಡೆಸಿದ ಯುವಕರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದೂ ಅವರು ಆಗ್ರಹಿಸಿದರು.
  http://kannada.oneindia.in/news/2012/08/02/districts-mcc-notice-to-unauthorised-morning-mist-home-stay-067036.html

  ನಂಜುಂಡ & ಅಶೋಕ್ ಈಗೇನು ಹೇಳುತ್ತೀರಿ?

  ಉತ್ತರ
  • anand prasad
   ಆಗಸ್ಟ್ 3 2012

   ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಮಾತು ಎಷ್ಟರ ಮಟ್ಟಿಗೆ ನಂಬಲರ್ಹ ಎಂಬ ಪ್ರಶ್ನೆಯೂ ಇಲ್ಲಿ ಬರುತ್ತದೆ. ಮಹಿಳಾ ಆಯೋಗದ ಅಧ್ಯಕ್ಷರು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಅಂದರೆ ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಮಾತಾಡುತ್ತಾರೆ, ಪಕ್ಷವನ್ನು ಮುಜುಗರದಿಂದ ಪಾರು ಮಾಡಲು ಇಂಥ ಆಧಾರ ರಹಿತ ಹೇಳಿಕೆಗಳನ್ನು ನೀಡುವ ಸಂಭವವೂ ಇದೆ. ಗುರುದತ್ ಹಾಗೂ ವಿಜಯ ಕುಮಾರ್ ಹಾಗೂ ಗುರುದತ್ ತಾಯಿ ಟಿವಿ ವಾಹಿನಿಯ ಜೊತೆ ಮಾತನಾಡಿ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇವರ ಮೇಲೆ ಸೇಡು ತೀರಿಸಿಕೊಳ್ಳಲು ಇಂಥ ಆಧಾರರಹಿತ ಅಪಾದನೆ ಮಾಡಿರುವ ಸಂಭವವೂ ಇದೆ. ಗುರುದತ್ ತಾಯಿ ನಡೆಸುತ್ತಿರುವ ಮಸಾಜ್ ಕೇಂದ್ರದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಪೊಲೀಸರು ಅಪಾದನೆ ಹೊರಿಸಿ ಅದು ಕೋರ್ಟಿನಲ್ಲಿ ಸಾಬೀತಾಗದೆ ಅವರು ನಿರಪರಾಧಿ ಎಂದು ಕೋರ್ಟು ತೀರ್ಪು ನೀಡಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಇತ್ತೀಚೆಗೆ ಮಂಗಳೂರಿನ ಮಸಾಜ್ ಕೇಂದ್ರವೊಂದರಲ್ಲಿ ತಮಗೆ ಮಾಮೂಲು ನೀಡಲಿಲ್ಲ ಎಂದು ಪೊಲೀಸರೇ ಕಾಂಡೋಮ್ ತಂದಿರಿಸುವ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮೆರದಲ್ಲಿ ದಾಖಲಾಗಿ ರಾಜ್ಯಾದ್ಯಂತ ಈ ದೃಶ್ಯ ಪ್ರಸಾರವಾಗಿ ಪೊಲೀಸರು ನಗೆಪಾಟಲಿಗೀಡಾಗಿರುವ ಹಿನ್ನೆಲೆಯಲ್ಲಿ ಇಂಥ ಆಪಾದನೆಗಳನ್ನು ನೋಡಬೇಕಾಗುತ್ತದೆ.

   ಉತ್ತರ
 5. ಆಗಸ್ಟ್ 2 2012

  ರವಿಕುಮಾರ್,
  ಮಾಹಿತಿಗಾಗಿ ಧನ್ಯವಾದ! ಆದರೆ ಕೊನೆಯಲ್ಲಿ ನೀವು ಈಗೇನು ಹೇಳುತ್ತೀರಿ? ಎಂದು ಕೇಳಿರುವ ರೀತಿ ನಾವೇ ಏನೋ ಅಪರಾಧ ಮಾಡಿದಂತೆ ಕೇಳಿದಂತಿದೆ!! ಮಹಿಳೆಯರ ಅಕ್ರಮ ಮಾರಾಟವಾಗುತ್ತಿದ್ದರೂ ನಾವದನ್ನು ಬೆಂಬಲಿಸುತ್ತೀವಿ ಎನ್ನುವ ಅನುಮಾನ ನಿಮಗ್ಯಾಕೆ ಬಂತೋ ತಿಳಿಯದು! ದಕ್ಷಿಣ ಕನ್ನಡಕ್ಕೆ ನಾನು ಹೊರಗಿನವನು. ಕಳೆದ ಒಂದು ವರುಷದಿಂದ ದಕ್ಷಿಣ ಕನ್ನಡದಲ್ಲಿ ನೋಡಿರುವುದನ್ನು ಅನುಭವಿಸಿರುವುದನ್ನು ಖಂಡಿತವಾಇ ಸದ್ಯದಲ್ಲೇ ಬರೆಯುತ್ತೇನೆ… ಧನ್ಯವಾದ

  ಉತ್ತರ
  • ಆಗಸ್ಟ್ 6 2012

   ಘಟನೆಯ ಪ್ರತ್ಯಕ್ಷ ದರ್ಶಿ ಎಂದು ಹೇಳಿಕೊಳ್ಳುವ ನವೀನ ಸೂರಿಂಜೆ ತಮ್ಮ ಬ್ಲಾಗ್ ನಲ್ಲಿ ಯಾಕೆ ಪೋಲಿಸ್ ಗೆ ಫೋನ್ ತಿಳಿಸಲು ಸಾಧ್ಯವಾಗಲಿಲ್ಲ ಎಂದು ತೋಡಿಕೊಳ್ಳುತ್ತಾರೆ. ಗ್ರಾಮಾಂತರ ಪೋಲಿಸ್ ನಿರೀಕ್ಷಕರಾದ ರವೀಶ್ ನಾಯಕ್ ಅವರು ಇವರು ಕಾಲ್ ಮಾಡಿದಾಗ ಫೋನ್ ಎತ್ತಲಿಲ್ವಂತೆ. ಇದು ತುಂಬಾ ಚೈಲ್ದಿಶ್ ಎಂದೆನಿಸಿತು. ರವೀಶ್ ನಾಯಕ್ ಫೋನ್ ಕರೆ ಸ್ವೀಕರಿಸದಿದ್ದರೆ ನಂಬರ್ 100 ಕ್ಕೆ dial ಮಾಡಿದರೆ ಹತ್ತಿರದಲ್ಲಿರುವ ಪೋಲಿಸ್ ಸ್ಟೇಷನ್ ಗೆ ತಲುಪುತ್ತಿತ್ತಲ್ವ?
   ಹಾಗೆಂದು ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ದಾಂದಲೆ ನಡೆಸಿದವರೂ ಪೋಕರಿಗಳು, ಅದನ್ನು ರೆಕಾರ್ಡ್ ಮಾಡಿದವರೂ opportunists ಗಳು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments