ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 13, 2012

4

ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಮಂಗಳೂರು ಹೋಂ-ಸ್ಟೇ ಮೇಲೆ ದಾಳಿ ಮಾಡಿದವರನ್ನು ‘ಆಧುನಿಕ ದುಶ್ಯಾಸನರು’ ಅಂದಾಗ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೈ ಮುಟ್ಟುವುದು,ಹೊಡೆಯುವುದು ಇಂತ ವಿಕೃತಿ ಮಾಡುವವರನ್ನು ದುಶ್ಯಾಸನರೆಂದರೆ ತಪ್ಪಿಲ್ಲ ಅನ್ನಿಸುತ್ತದೆ ಅನ್ನಿಸಲೇಬೇಕು.ಆದರೆ “ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?”.ಹಾಗಂತ ದೃತರಾಷ್ಟ್ರ,ದುರ್ಯೋಧನರ ನೆಪವೊಡ್ಡಿ ದುಶ್ಯಾಸನರ ನಡವಳಿಕೆಯನ್ನು ಬೆಂಬಲಿಸಬೇಕಿಲ್ಲ,ಬೆಂಬಲಿಸುವುದು ಆರೋಗ್ಯವಂತ ಸಮಾಜದ ಲಕ್ಷಣವೂ ಅಲ್ಲ. ಅಂದು ಮಹಾಭಾರತದ ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಂತೆ ಅಪ್ಪಣೆ ಕೊಟ್ಟಿದ್ದು ದುರ್ಯೋಧನ ಮತ್ತು ಅದನ್ನ ಕೇಳಿಯೂ ತೆಪ್ಪಗೆ ಕೂತಿದ್ದು ಅಪ್ಪ ಅನ್ನಿಸಿಕೊಂಡ ಧೃತರಾಷ್ಟ್ರ ಅಲ್ಲವೇ? ಆಗಲೂ ಈಗಿನಂತೆ ಎಲ್ಲ ಗೊತ್ತಿದ್ದೂ ನಮ್ಮ ಸೆಕ್ಯುಲರ್ಗಳಂತೆ ಕಂಡು ಕಾಣದಂತಿದ್ದವರು ಉಳಿದೆಲ್ಲರು.ಒಬ್ಬ ಶ್ರೀ ಕೃಷ್ಣನನ್ನು ಬಿಟ್ಟು..! ಇಂದಿನ ಭಾರತದಲ್ಲಿ ದುಶ್ಯಾಸನರನ್ನೇನೋ ಮಾಧ್ಯಮಗಳು ತೋರಿಸಿವೆ.ಆದರೆ ಧೃತರಾಷ್ಟ್ರ,ದುರ್ಯೋಧನರೆಲ್ಲಿ? ದುಶ್ಯಾಸನ ಅನ್ನುವವನ ಹೆಸರು ಈ ಪರಿ (ಕು)ಖ್ಯಾತಿ ಪಡೆಯಲು ಕಾರಣ  ವಸ್ತ್ರಾಪಹರಣ ಮಾಡಲು ಹೇಳಿದ ಅವನಣ್ಣ ದುರ್ಯೋಧನನಲ್ಲವೇ? ದುರ್ಯೋಧನ,ದುಶ್ಯಾಸನರಿಗೆ ಮೌನ ಸಮ್ಮತಿ ಕೊಟ್ಟ ದ್ರುತರಾಷ್ಟ್ರನು ಸೇರಿ ಇಡಿ ಕುರು ಸಭೆಯಲ್ಲವೇ? ಹಾಗಿದ್ದರೆ ಕರಾವಳಿಯ ಮಹಾಭಾರತದಲ್ಲಿ ದುಶ್ಯಾಸನರ ಸೃಷ್ಟಿಗೆ ಕಾರಣವಾದ ದುರ್ಯೋಧನ ಯಾರು?

ಕರಾವಳಿಯಲ್ಲಿ ಮತ್ತೆ ಮತ್ತೆ ಯಾಕೆ ನೈತಿಕ ಪೊಲೀಸರು ಸದ್ದು ಮಾಡುತ್ತಾರೆ? ಅಲ್ಲಿ ಸರ್ಕಾರಿ ಪೋಲಿಸರಿಲ್ಲವೇ? ಸರ್ಕಾರಿ ಪೊಲೀಸರಿಗಿಂತ ಮೊದಲೇ ಅನಾಚಾರ ನಡೆಯುತ್ತಿರುವ ಬಗ್ಗೆ ನೈತಿಕ ಪೊಲೀಸರು ಮತ್ತು ಮಾಧ್ಯಮದವರಿಗೆ ಮಾತ್ರ ಸುದ್ದಿ ತಲುಪುತ್ತದೆ ಅನ್ನುವುದನ್ನ ನಂಬಬಹುದಾ? ಅಥವಾ ಇಂತ ಅನಾಚಾರದ ತಾಣಗಳಿಗೆ ಧೃತರಾಷ್ಟ್ರ,ದುರ್ಯೋಧನರ ಶ್ರೀ ರಕ್ಷೆ ಇರುವುದರಿಂದಲೇ ಇವರು ಬಬ್ರುವಾಹನ ಯುದ್ಧದಲ್ಲಿ ಮಂತ್ರ ಮರೆತ ಅರ್ಜುನನಂತಾಗಿದ್ದರೆಯೇ (ಅರ್ಜುನನ ಕ್ಷಮೆ ಕೋರುತ್ತ)? ಅರ್ಜುನನಿಗೆ ಮಂತ್ರ ಮರೆಸಿದ ಕೃಷ್ಣ ಗಾರುಡಿಯಂತ ಕಾಣದ ಕೈಗಳು ಯಾವುದು? ದುಶ್ಯಾಸನರ ಕೈ ಕಡಿಯಬೇಕು,ನರ ಕತ್ತರಿಸಬೇಕು ಇನ್ನು ಏನೇನೋ ತರೇವಾರಿ ಸಲಹೆಗಳು.ಸರಿ ಅದನ್ನೆಲ್ಲ ಮಾಡಿ.ಆದರೆ,ಹಿಂದೆ ನಿಂತಿರುವ ಧೃತರಾಷ್ಟ್ರ,ದುರ್ಯೋಧನರನ್ನೆನು ಮಾಡುತ್ತಿರಿ? ಅವರ ಬಗ್ಗೆ ಯಾಕೆ ಜಾಣಗುರುಡು?

ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡುತ್ತಲೇ ಕರಾವಳಿಗೆ ಹೊರಗಿನಿಂದ ವಿದ್ಯಾರ್ಥಿಗಳು ಬರಲಾರಂಭಿಸಿದ್ದು ಎಲ್ಲರಿಗೂ ಗೊತ್ತಿರುವಂತದ್ದೇ.ಹಾಗೆ ಹಣದ ಥೈಲಿ ಹಿಡಿದು ಬಂದವರಿಗೆ ಹಾದಿ ತಪ್ಪಲು ಏನೆಲ್ಲಾ (ಅ)ವ್ಯವಸ್ಥೆಗಳು ಬೇಕು ಅವೆಲ್ಲಾ ಸಿಗಲಾರಂಭಿಸಿದ್ದು ಮತ್ತು ಈ ತಳುಕು-ಬಳುಕಿಗೆ ಇಲ್ಲಿನ ಹದಿ ಹರೆಯದವರು ಸೋತು ಹಾದಿ ತಪ್ಪಲು ಶುರು ಮಾಡಿದ ಮೇಲೆ ತಾನೇ ಈ ನೈತಿಕ ಪೊಲೀಸರಿಗೆ ಕೆಲಸ ಸಿಕ್ಕಿದ್ದು.ಹಾಗಾದ್ರೆ ಇಷ್ಟೆಲ್ಲಾ ನಡೆಯುವಾಗ ಇದನ್ನು ತಡೆಯಬೇಕಾದ ಸರ್ಕಾರ,ಪೋಲಿಸ್ ಇಲಾಖೆ ಏನು ಮಾಡುತಿತ್ತು? ಪಬ್ ದಾಳಿಯಾದ ಮೇಲೆ ಕಾನೂನು ಬಾಹಿರವಾಗಿ ತಲೆ ಎತ್ತಿದ ಪಬ್ ಗಳ ಬಗ್ಗೆ ದಿಢೀರ್ ಗಮನ ಹರಿಯಿತು (ಅದೆಷ್ಟರಮಟ್ಟಿಗೆ ಈಗ ಅದಕ್ಕೆ ಕಡಿವಾಣ ಹಾಕಲಾಗಿದೆ ಅನ್ನುವುದು ಬೇರೆ ವಿಷಯ) ಮತ್ತೀಗ ಅನಧಿಕೃತ ಹೋಂ-ಸ್ಟೇ ಗಳ ಬಗ್ಗೆ ಜ್ಞಾನೋದಯವಾಗಿದೆ.ಉಳಿದ ಅನಧಿಕೃತ ವ್ಯವಹಾರಗಳ ಮೇಲೆ ಮತ್ತೆ ನೈತಿಕ ಪೊಲೀಸರು ಮಾಧ್ಯಮದವರನ್ನ ಕರೆದುಕೊಂಡು ಹೋಗಿ ದಾಳಿ ಮಾಡಿದ ಮೇಲೆ ಮತ್ತೆ ಇವರಿಗೆ ಜ್ಞಾನೋದಯವಾಗಬಹುದೇನೋ…!

ಪಬ್ ದಾಳಿಯೊಂದಿಗೆ ದ.ಕನ್ನಡವೆಂದರೆ ಉಗ್ರ ಬಲಪಂಥೀಯ ಸಂಘಟನೆಗಳ ಭದ್ರ ನೆಲೆ,ಇಲ್ಲಿ ಊಟ ಮಾಡುವುದು ಕಷ್ಟ,ಉಸಿರಾಡುವದು ಕಷ್ಟ ಅನ್ನುವಂತೆ ರಾಷ್ಟ್ರಮಟ್ಟದಲ್ಲೆಲ್ಲ ಸುದ್ದಿಯಾಯಿತು.ಒಬ್ಬ ಮುಸ್ಲಿಂ ಹುಡುಗ ಹಿಂದೂ ಹುಡುಗಿಯೊಂದಿಗೆ ಮಂಗಳೂರು,ಉಡುಪಿಯಲ್ಲಿ ಓಡಾಡುವುದೇ ಕಷ್ಟಕರ ಅನ್ನುವ ಮಾತುಗಳು ಕರಾವಳಿಯನ್ನ ಸರಿಯಾಗಿ ನೋಡದವರ ಬಾಯಿಯಲ್ಲೂ ಸಾಮನ್ಯವಾಗಿದೆ.ಹಾಗೆಯೇ ಮುಸ್ಲಿಂ ಹುಡುಗಿಯೊಂದಿಗೆ ಹಿಂದೂ ಹುಡುಗ ಮಂಗಳೂರು,ಭಟ್ಕಳದ ಕಡೆ ಓಡಾಡಬಹುದಾ? ಅನ್ನುವ ಪ್ರಶ್ನೆಯನ್ನು ಯಾರಾದರೂ ಕೇಳುವ ಧೈರ್ಯ ಮಾಡಿದ್ದಾರ? ಯಾವುದೇ ಸಮಸ್ಯೆಗಳಿಗಾದರೂ ಬೇರೆ ಬೇರೆ ಆಯಾಮಗಳಿರಲೇಬೇಕಲ್ಲವೇ? ಹಾಗಿದ್ದರೆ ಕರಾವಳಿಯ ಇಂದಿನ ಸ್ಥಿತಿಗೆ ಕೇವಲ ಬಲ ಪಂಥೀಯ ಸಂಘಟನೆಗಳು ಮಾತ್ರ ಕಾರಣವೇನು? ಇಲ್ಲಿರುವುದು ಕೇವಲ ಹಿಂದೂ ಸಂಘಟನೆಗಳು ಮಾತ್ರವೇ? ಮುಸ್ಲಿಮರದೆಷ್ಟು ಸಂಘಟನೆಗಳಿವೆ? ಆ ಸಂಘಟನೆಗಳ ಮುಖಂಡರು ಯಾರು ಅದರ ಮೂಲ ನೆಲೆ ಎಲ್ಲಿಯದು? ಅದರ ಬಗ್ಗೆ ಮಾತನಾಡಲು ನಾಲಿಗೆ ಬಿದ್ದು ಹೋಗಿದೆಯೇನು? ಕಳೆದವಾರ ದಾಳಿಯನ್ನ ವಿರೋಧಿಸಿ ‘ಕೋಮು ಸೌಹಾರ್ದ ವೇದಿಕೆ’ ಮಾಡಿದ ಪ್ರತಿಭಟನಾ ಸಭೆಯಲ್ಲಿ ಅವರಿಗೆ ಬೆಂಬಲ ನೀಡಿದ ಸಂಘಟನೆಗಳಲ್ಲಿ ಧರ್ಮವನ್ನೆ ಉಸಿರಾಡುವ ಸಂಘಟನೆಗಳಿರಲಿಲ್ಲವಾ? ಕೇವಲ ಬಲ ಪಂಥೀಯ ಸಂಘಟನೆಗಳನ್ನು ವಿರೋಧಿಸುವುದಷ್ಟಕ್ಕೆ ಈ ವೇದಿಕೆ ಮೀಸಲಾಗಿದೆಯೇನು? ಧರ್ಮದ ಹೆಸರೇಳಿಕೊಂಡು ಉಗ್ರ ಧೋರಣೆ ತಾಳುವ ಎಲ್ಲ ಧರ್ಮದ ಸಂಘಟನೆಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಮನಸ್ಸು ನಿಜಕ್ಕೂ ಈ ಸೆಕ್ಯುಲರ್(?) ಮನಸ್ಸುಗಳಿಗೆ ಇದ್ದಂತಿಲ್ಲ.

ಬಲಪಂಥೀಯ ಸಂಘಟನೆಗಳು ಭದ್ರವಾಗಿ ಬೇರೂರಲು ಇಲ್ಲಿನ ಜನ ಬೆಂಬಲ ಅವರಿಗೆ ಸಿಕ್ಕಿದ್ದಾದರೂ ಹೇಗೆ? ಈ ಸಂಘ,ಸಂಘಟನೆ ಇದ್ಯಾವುದಕ್ಕೂ ಬಾರದೆ ದೂರ ನಿಲ್ಲುವ ಮತ್ತು ಕೋಮುವಾದ,ಮೂಲಭೂತವಾದ ಎರಡನ್ನು ಕಂಡರೆ ಸಿಡಿಮಿಡಿಗೊಳ್ಳುವ ಹಿರಿಯರೊಬ್ಬರನ್ನು ಕೇಳಿದೆ,
‘ಕುಡ್ಲಡು ಮುಕುಲು (ಹಿಂದೂ ಸಂಘಟನೆಗಳು) ಇಜ್ಜೆರ್ಡಾ ಎಂಚಿನಾ ಆವೋಲಿ?’ (ಮಂಗಳೂರಿನಲ್ಲಿ ಇವರಿಲ್ಲದಿದ್ದರೆ ಏನಾಗಬಹುದು?)
‘ಮುಕುಲು ಇಜ್ಜೆರ್ಡಾ ಅಕಲ ರಾಪಾಟನು ಪತ್ತುನಕುಲು ಉಪ್ಪಯೇರ್ ಮಗ,ಯಂಕಲೆಗ್ ಇಷ್ಟ ಇಜ್ಜಿಂಡ ಲಾ ಯಂಕಲೆಗ್ ಬೋಡೆ ಬೋಡು.ಇಜ್ಜಿಡ ನಮ್ಮ ಕುಡ್ಲಲ ಕೇರಳದ ಲೆಕ ಆವು’ (ಇವರಿಲ್ಲವಾದರೆ ಅವರ ಆರ್ಭಟವನ್ನ ತಡೆದು ನಿಲ್ಲಿಸುವವರು ಯಾರು ಇರುವುದಿಲ್ಲ ಮಗ,ನಮ್ಗಿಷ್ಟವಿಲ್ಲದಿದ್ದರು ಇವರು ಬೇಕು ಬೇಕು.ಇಲ್ಲದಿದ್ದರೆ ಕರಾವಳಿಯು ಇನ್ನೊಂದು ಕೇರಳವಾದಿತು)

ಆ ಹಿರಿಯರು ಹೇಳಿದ್ದು ಕೇವಲ ಅವರೊಬ್ಬರ ಆತಂಕವೇ ಅಥವಾ ಅಲ್ಲಿನ ಬಹುಜನರ ಆತಂಕವೇ? ತಣ್ಣಗೆ ಕುಳಿತು ಯೋಚಿಸಬೇಕಾದ ಅಂಶವಲ್ಲವೇ? ಕರಾವಳಿ ಇಷ್ಟೊಂದು ಸೂಕ್ಷ್ಮ ಪ್ರದೇಶವಾಗಿ ಬದಲಾಗಲು ಕೇವಲ ಧಾರ್ಮಿಕ ಆಯಾಮವೊಂದೆ ಕಾರಣವೇ? ಅಥವಾ ಇನ್ನೇನು ಕಾರಣಗಳಿದ್ದಿರಬಹುದು?

ಕರಾವಳಿ ಕೋಮುವಾದಿಗಳ ತಾಣವಾಗಿದೆ ಅನ್ನುವ ಸೆಕ್ಯುಲರ್ಗಳ ಕಣ್ಣಿಗೆ ಅದೂ ಮೂಲಭುತವಾದಿಗಳ ತಾಣವೂ ಹೌದು ಅನ್ನುವುದು ತಿಳಿಯದ್ದೇನಲ್ಲ.ಆದರೆ  ಇಬ್ಬರಿಗೂ ಬೈಯುತ್ತ ಕುಳಿತರೆ ಇವರ ಹಿಂದೆ ನಿಂತು ಜೈಕಾರ ಹಾಕುವವರು ಯಾರೇಳಿ? ಬೈಂದೂರಿನಲ್ಲಿ ಪ್ರಚಾರಕ್ಕಾಗಿ ನಡೆದ ಚಾರ್ಲಿ ಚಾಪ್ಲಿ ಪ್ರಕರಣದಲ್ಲೂ  ಸುಖಾ ಸುಮ್ಮನೆ ‘ಹಿಂದೂ’ ಅಂತ ಎಳೆದುತಂದ ಬುದ್ದಿಜೀವಿ(?)ಗಳಿಗೆಲ್ಲ ಸಮಸ್ಯೆಯ ಪರಿಹಾರ ಕಂಡುಹಿಡಿಯುವ ಮನಸ್ಸಿಲ್ಲ.ಆ ಕ್ಷಣಕ್ಕೆ ಪ್ರತಿಕ್ರಿಯಿಸಿ ಎದುರಾಳಿ ತಂಡದವರಿಗೆ ಈಗ್ಗ-ಮುಗ್ಗಾ ಬೈಯ್ದು ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವಲ್ಲಿಗಷ್ಟೇ ಇವರ ಸಾಮಾಜಿಕ ನ್ಯಾಯ,ಸೌಹಾರ್ದತೆ ಬಂದು ನಿಲ್ಲುವುದು.ಕೊಲೆಗೆ ಸಹಕರಿಸಿದವನು ಕೊಲೆಗಾರನೆ ಅನ್ನುವಂತೆ ಬರಿ ಬಲ ಪಂಥೀಯ ಸಂಘಟನೆಗಳನ್ನು ಮಾತ್ರ ಮಾನವೀಯತೆಯ ವಿರೋಧಿಗಳು ಅನ್ನುವಂತೆ ಚಿತ್ರಿಸಿ ಮೂಲಭೂತವಾದಿಗಳ ಬಗ್ಗೆ ಮೃದು ಧೋರಣೆ ತೋರಿಸುವ ಸೆಕ್ಯುಲರ್ಗಳು ಕೂಡ ಮಾನವೀಯತೆ ವಿರೋಧಿಗಳೇ ಅಲ್ಲವೇ? ಬೇರಿಗೆ ಮದ್ದು ಹಾಕದೆ ರೋಗಗ್ರಸ್ತ ರೆಂಬೆ-ಕೊಂಬೆಗಳನ್ನೇ ಕಡಿದು ಸೌಹಾರ್ದತೆ,ಸಮಾನತೆ ಅಂತೆಲ್ಲ ಪಾಠ ಮಾಡುತ್ತಿರುವುದ್ಯಾಕೆ? ಪ್ರಶ್ನೆಗಳು ಬಹಳಷ್ಟಿವೆ.ಆದರೆ ಉತ್ತರಿಸಬೇಕಾದವರ ಬಾಯಿಗಳು ಬಿದ್ದು ಹೋಗಿವೆ.

ಮತ್ತೆ ಮತ್ತೆ ದುಶ್ಯಾಸನರು ಸುದ್ದಿಯಾಗಬಾರದೆನ್ನುವುದೇ ಆದರೆ ಧೃತರಾಷ್ಟ್ರ,ದುರ್ಯೋಧನರಿಗೂ ಕಡಿವಾಣ ಹಾಕಬೇಕು.ಹಾಗೆಯೇ ಶಕುನಿಗಳಿಗೂ ಕೂಡ…!

 

* * * * * * *

ಚಿತ್ರಕೃಪೆ : ಅಂತರ್ಜಾಲ

 

4 ಟಿಪ್ಪಣಿಗಳು Post a comment
 1. chitraprasca
  ಆಗಸ್ಟ್ 13 2012

  ಉತ್ತಮವಾದ ಹಾಗೂ ಸಮಯೋಚಿತ ಲೇಖನ.

  ಉತ್ತರ
 2. ಆಗಸ್ಟ್ 13 2012

  ಸಕ್ಕತ್ ರೀ ಶೆಟ್ರೇ..

  ಉತ್ತರ
 3. ಆಗಸ್ಟ್ 14 2012

  ಮಾನ್ಯ ರಾಕೇಶ್ ಶೆಟ್ಟಿಯವರೇ ನಿಮ್ಮ ಲೇಖನ ಅರ್ಥಪೂರ್ಣವಾಗಿದೆ. ಆದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಅಲ್ಲವೇ?

  ಉತ್ತರ
 4. ಆಗಸ್ಟ್ 14 2012

  1000 likes

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments