ಕಾನೂನಿನಂಗಳ ೭ : ಗಂಡ-ಹೆಂಡತಿ ಉತ್ತರ ದಕ್ಷಿಣ- ವಿಚ್ಛೇದನ
-ಉಷಾ ಐನಕೈ ಶಿರಸಿ
ವಿವಾಹ ಒಂದು ಪವಿತ್ರ ಧಾರ್ಮಿಕ ಸಂಸ್ಕಾರ. ಇದರ ಹಿಂದೆ ಮದುವೆಯಾದ ಗಂಡು -ಹೆಣ್ಣಿಗೆ ಅವರದೇ ಆದ ಸಾಮಾಜಿಕ ಹಾಗೂ ಭಾವನಾತ್ಮಕ ಬದ್ಧತೆ ಇರುತ್ತದೆ. ಕಷ್ಟವಿರಲಿ, ಸುಖವಿರಲಿ ಗಂಡ-ಹೆಂಡತಿ ಸಮನಾಗಿ ಹಂಚಿ ಕೊಂಡು ಸಹಬಾಳ್ವೆ ನಡೆಸಬೇಕೆಂಬುದೇ ವಿವಾಹ ಬಂಧನದ ಹಿಂದಿರುವ ತತ್ವ. ಅದಕ್ಕಾಗೇ ಪತ್ನಿಗೆ ‘ಅರ್ಧಾಂಗಿ’ ಎಂದು ಕರೆದಿರುವುದು. ಆದರೆ ಆಧುನಿಕ ಯುಗದಲ್ಲಿ ಇದು ಸಾಧ್ಯವೇ? ಬದಲಾದ ಕಾಲ, ಆಧುನಿಕ ಶಿಕ್ಷಣ, ವೈಚಾರಿಕ ಸ್ವಾತಂತ್ರ್ಯ, ಸಮಾನತೆಯ ಹೋರಾಟ ಮುಂತಾದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಉಳಿದುಕೊಳ್ಳಲು ಸಾಧ್ಯವೇ? ಆಧುನಿಕ ಸಂಪರ್ಕ, ವೈವಿಧ್ಯಮಯ ಮಾಧ್ಯಮಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಹಂಬಲಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ, ಸಹನೆ, ಸಹಬಾಳ್ವೆ ಸ್ವಾಭಾವಿಕವಾಗೇ ಶಿಥಿಲವಾಗತೊಡಗಿವೆ. ವೈಯಕ್ತಿಕ ಪ್ರತಿಷ್ಠೆ ದಿನದಿಂದ ದಿನಕ್ಕೆ ಗಂಡು-ಹೆಣ್ಣು ಇಬ್ಬರಲ್ಲೂ ಹೆಚ್ಚಾಗತೊಡಗಿವೆ. ಗಂಡ-ಹೆಂಡತಿಯ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಕಲಹ, ಅಂತರವೇ ಇಲ್ಲದಿದ್ದರೂ ಕಲಹ. ಹೀಗೆ ಹಲವಾರು ಕಾರಣಗಳಿಂದ ವಿವಾಹ ವಿಚ್ಛೇದನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ದಾಂಪತ್ಯದ ನಡುವೆ ವಿರಸ ಹಿಂದೆಯೂ ಇತ್ತು. ಆದರೆ ಆಗ ನ್ಯಾಯಾಲಯದ ಮೆಟ್ಟಿ ಲೇರುವ ಅವಕಾಶ ಮತ್ತು ಧೈರ್ಯ ಎರಡೂ ಇಲ್ಲವಾಗಿತ್ತು. ಅದರಲ್ಲೂ ಹೆಣ್ಣು ದನಿ ಇಲ್ಲದೇ ಸಹಿಸಿಕೊಂಡೇ ಬಾಳಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೂ ಕಾನೂನಿಗೆ ಮೊರೆಹೋಗುವುದು ಸ್ವಾಭಾವಿಕವಾಗಿದೆ. ಮಹಿಳಾ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಹುಟ್ಟಿ ಕೊಂಡ ಕಾನೂನುಗಳು ಇದಕ್ಕೆ ಅವಕಾಶ ಮಾಡಿ ಕೊಡುತ್ತಿವೆ.
ಮೊದಲೇ ಹೇಳಿದಂತೆ ದಾಂಪತ್ಯ ವಿರಸಕ್ಕೆ ನೂರಾರು ಕಾರಣಗಳುಂಟು. ಶಿಕ್ಷಣ, ಪ್ರತಿಷ್ಠೆ, ಸಮಾನಾವಕಾಶ, ಸಮಾನ ದುಡಿಮೆ, ಆರ್ಥಿಕ ಸ್ವಾತಂತ್ರ್ಯ ಹೀಗೇ ಹಲವಾರು ಸಂಗತಿಗಳಲ್ಲಿ ಗಂಡ- ಹೆಂಡತಿಯರಿಬ್ಬರೂ ಸಮಾನ ಸಾಮಥ್ರ್ಯ ಹೊಂದಿದಾಗ ಗೆಲುವಿನ ಕಿತ್ತಾಟ ನಡೆಯುವುದು ಸಹಜ. ಈ ಎಲ್ಲ ಸಂದರ್ಭದಲ್ಲಿ ಕ್ಷಣಿಕ ನಿರ್ಣಯಗಳಿಂದ ನ್ಯಾಯಾಲಯದ ಮೊರೆ ಹೋಗುತ್ತಾರೆ. ಇಂಥ ಸಮಸ್ಯೆಗಳಿಗೆ ಕಾನೂನುಗಳು ಕೂಡ ಹಲವು ರೀತಿಯ ಪರಿಹಾರ ಸೂಚಿಸುವ ಸಾಮಥ್ರ್ಯ ಹೊಂದಿರುತ್ತದೆ.
ನ್ಯಾಯಿಕ ಪ್ರತ್ಯೇಕೀಕರಣ Judicial Seperation
ಹಿಂದೂ ವಿವಾಹ ಅಧಿನಿಯಮ ಕಲಂ 10ರಲ್ಲಿ ನ್ಯಾಯಿಕ ಪ್ರತ್ಯೇಕೀಕರಣದ ಕುರಿತು ವಿವರ ನೀಡಲಾಗಿದೆ. ನ್ಯಾಯಿಕ ಪ್ರತ್ಯೇಕೀಕರಣ ಎಂದರೆ ವಿವಾಹವಿಚ್ಛೇದನಕ್ಕಿಂತ ಭಿನ್ನವಾಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ತಮ್ಮ ವೈವಾಹಿಕ ಸಂಬಂಧವನ್ನು ಅಥವಾ ಕಾನೂನು ಸಮ್ಮತ ವಿವಾಹವನ್ನು ಕೊನೆಗೊಳಿಸಿಕೊಳ್ಳದೇ ಪರಸ್ಪರ ಪ್ರತ್ಯೇಕವಾಗಿ ವಾಸ್ತವ್ಯ ಮಾಡುವ ವ್ಯವಸ್ಥೆ. ಗಂಡ-ಹೆಂಡತಿಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ತಾವು ಪ್ರತ್ಯೇಕವಾಗಿ ಉಳಿಯಲು ಅವಕಾಶ ನೀಡಬೇಕೆಂದು ಕೇಳಿಕೊಳ್ಳಬಹುದು. ಇದು ಒಂದು ದೃಷ್ಟಿಯಿಂದ ಉತ್ತಮವಾದ ಆಯ್ಕೆ. ಏಕೆಂದರೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಆ ಕ್ಷಣದ ಅಹಂಕಾರಕ್ಕಾಗಿ ಬದುಕಿನ ವಿಘಟನೆಯ ನಿರ್ಧಾರ ತೆಗೆದುಕೊಳ್ಳುವುದು ಮೂರ್ಖತನ. ಒಂದೆರಡು ವರ್ಷ ಪ್ರತ್ಯೇಕವಾಗಿದ್ದಾಗ ಮನಸ್ಸು ಬದಲಾಗುವ ಸಾಧ್ಯತೆ ಇರುತ್ತದೆ. ಆಗ ಪುನಃ ಒಟ್ಟಿಗೇ ಬಾಳುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಈ ಕಾನೂನು ಮುಖ್ಯವಾಗಿ ಗೊಂದಲ ಮತ್ತು ದ್ವಂದ್ವದ ಮನಸ್ಥಿತಿ ಯವರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ತಪ್ಪಿನ ಅರಿವಾದಾಗ ಪುನಃ ತಿದ್ದಿಕೊಳ್ಳಲು ಕಾನೂನು ಇಲ್ಲಿ ಅವಕಾಶ ಕಲ್ಪಿಸಿಕೊಡುತ್ತದೆ.
ವಿವಾಹ ವಿಚ್ಛೇದನ Divorce
ಸಾಮಾನ್ಯವಾಗಿ ಇಂದು ಯಾವುದೇ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಕಾದುನಿಂತ ತರುಣ ಜೋಡಿಗಳನ್ನು ನೋಡಬಹುದು. ವಿಚ್ಛೇದನದಲ್ಲಿ ವೈವಾಹಿಕ ಸಂಬಂಧ ಸಮಾಪ್ತಿಯಾಗುತ್ತದೆ ಅಥವಾ ಕಾನೂನು ಸಮ್ಮತವಾದ ವಿವಾಹ ಕೊನೆಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಗಂಡ-ಹೆಂಡಿರ ನಡುವಿನ ಸಂಬಂಧ ಮುಂದುವರೆಯಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ವಿಚ್ಛೇದನವೇ ಅಂತಿಮ ಫಲಿತಾಂಶವಾಗುತ್ತದೆ. ಗಂಡ ಅಥವಾ ಹೆಂಡತಿ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಆಗ ವಿಚ್ಛೇದನಕ್ಕೆ ಅನಿವಾರ್ಯವಾದ ಕಾರಣಗಳನ್ನು ನೀಡಿ ಸಮರ್ಥಿಸಬೇಕಾಗುತ್ತದೆ. ವಿಚ್ಛೇದನಾ ಕಾನೂನು ಕೂಡ ಯಾವ ಸಂದರ್ಭದಲ್ಲಿ ವಿಚ್ಛೇದನ ನೀಡಬಹುದೆಂಬುದರ ಬಗ್ಗೆ ವಿವರಣೆ ನೀಡುತ್ತದೆ. ಹಿಂದೂ ವಿವಾಹ ಅಧಿನಿಯಮ ಕಲಂ 13 ಈ ಕುರಿತು ಹೇಳುತ್ತದೆ.
1. ಗಂಡ-ಹೆಂಡತಿ ಇಬ್ಬರಲ್ಲಿ ಯಾರಿಗಾದರೊಬ್ಬರಿಗೆ ಅನೈತಿಕ ಸಂಬಂಧವಿದ್ದರೆ ಅಂದರೆ ವಿವಾಹೇತರ ಸಂಬಂಧವಿದ್ದರೆ,
2. ಎರಡಕ್ಕಿಂತ ಹೆಚ್ಚು ವರ್ಷ ಇಬ್ಬರೂ ಬೇರೆ ಬೇರೆ ವಾಸ್ತವ್ಯ ಮಾಡಿಕೊಂಡಿದ್ದರೆ,
3. ಇಬ್ಬರಲ್ಲಿ ಒಬ್ಬರು ಹಿಂದೂ ಧರ್ಮವನ್ನು ತ್ಯಜಿಸಿದರೆ,
4. ಇಬ್ಬರಲ್ಲಿ ಯಾರಾದರೊಬ್ಬರು ಮಾನಸಿಕವಾಗಿ ಬಳಲುತ್ತಿದ್ದರೆ ಅಥವಾ ಇತರೇ ಅಂಟು ರೋಗಕ್ಕೆ ತುತ್ತಾಗಿದ್ದರೆ,
5. ಒಬ್ಬರು ಯಾವುದೇ ಐಹಿಕ ಸುಖಭೋಗಗಳನ್ನು ಬಿಟ್ಟು ಶಾಶ್ವತವಾಗಿ ಸಂನ್ಯಾಸಿಯಾದರೆ,
6. ಏಳು ವರ್ಷಗಳವರೆಗೂ ಗಂಡ ಅಥವಾ ಹೆಂಡತಿ ಯಾರಾದರೊಬ್ಬರು ಪತ್ತೆಯಾಗದೇ ಇದ್ದರೆ,
7. ನ್ಯಾಯಿಕ ಪ್ರತ್ಯೇಕೀಕರಣದ ಡಿಕ್ರಿ ಪಡೆದ ಒಂದು ವರ್ಷದ ನಂತರವೂ ಪರಸ್ಪರ ದಾಂಪತ್ಯ ಜೀವನ ನಡೆಸದೇ ಇದ್ದಲ್ಲಿ ಶಾಶ್ವತವಾಗಿ ವಿಚ್ಛೇದನ ಪಡೆಯಬಹುದು.
ಈ ಮೇಲಿನ ಎಲ್ಲ ಸಂದರ್ಭದಲ್ಲಿ ಗಂಡ- ಹೆಂಡತಿಯರಲ್ಲಿ ಒಬ್ಬರು ಇನ್ನೊಬ್ಬರ ಅನರ್ಹತೆಯ ಕಾರಣಕ್ಕೆ ವಿಚ್ಛೇದನ ಪಡೆಯಬಹುದು.
ಒಂದೊಮ್ಮೆ ಗಂಡ-ಹೆಂಡತಿ ಇಬ್ಬರೂ ಅರ್ಹರಾಗಿದ್ದುಕೊಂಡೇ ವಿಚ್ಛೇದನ ಪಡೆಯಬಹುದೇ? ಹಿಂದೂ ವಿವಾಹ ಅಧಿನಿಯಮ ಕಲಂ 13 ಬಿ ಪ್ರಕಾರ ಇದಕ್ಕೂ ಅವಕಾಶವಿದೆ. ಗಂಡ-ಹೆಂಡತಿ ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಭವಿಷ್ಯದಲ್ಲಿಯೂ ಯಾವ ಕಾರಣಕ್ಕೂ ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಾದರೆ ವಿಚ್ಛೇದನಕ್ಕೆ ಮನವಿ ಮಾಡಿಕೊಳ್ಳಬಹುದು. ವಿವಾಹ ವಿಚ್ಛೇದನಕ್ಕೆ ಇಬ್ಬರೂ ಅನುಮೋದಿಸುತ್ತಾರೆ ಎನ್ನುವುದರ ಮೇಲೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ವಿಚ್ಛೇದನ ಪಡೆಯಬಹುದು. ಆದರೆ ಅರ್ಜಿ ಸಲ್ಲಿಸಿದ ಆರು ತಿಂಗಳ ನಂತರವೇ ವಿಚ್ಛೇದನದ ಡಿಕ್ರಿ ನೀಡಲಾಗುವುದು.
ಕಾನೂನು ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿಯರಲ್ಲಿ ಹೆಂಡತಿಗೆ ಕೆಲವು ಹೆಚ್ಚುವರಿ ಕಾರಣಗಳನ್ನು ಕಲ್ಪಿಸಿಕೊಡುತ್ತದೆ. ವಿವಾಹ ಸಂದರ್ಭದಲ್ಲಿ ಆತನು ಆಗಲೇ ಬೇರೊಬ್ಬಳನ್ನು ಮದುವೆಯಾಗಿದ್ದರೆ, ಆತನು ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದರೆ, ಹೆಂಡತಿ ಜೀವನಾಂಶದ ಡಿಕ್ರಿ ಪಡೆದು ಒಂದು ವರ್ಷದ ನಂತರವೂ ಅವರು ದಾಂಪತ್ಯಜೀವನ ನಡೆಸಿರದಿದ್ದರೆ, ಮದುವೆ ಸಮಯದಲ್ಲಿ ಆಕೆಗೆ 15 ವರ್ಷಗಳಿಗಿಂತ ಕಡಿಮೆ ವಯಸ್ಸಾಗಿದ್ದು 15 ವರ್ಷಗಳ ನಂತರ ಆದರೆ 18 ವರ್ಷ ಪೂರೈಸುವ ಮೊದಲು ಮದುವೆಯನ್ನು ನಿರಾಕರಿಸಿದ್ದರೆ ಹೆಂಡತಿ ವಿಚ್ಛೇದನ ಪಡೆಯ ಬಹುದು.
ಹೀಗೆ ವಿವಾಹ ವಿಚ್ಛೇದನ ಪಡೆದ ದಂಪತಿಗಳು ವಿಚ್ಛೇದನದ ಡಿಕ್ರಿ ಪಡೆದ ನಂತರ ತಮಗೆ ಇಷ್ಟ ವಾದವರೊಂದಿಗೆ ಪುನವರ್ಿವಾಹವಾಗ ಬಹುದು.
ಜೀವನಾಂಶ Maintenance
ಹಿಂದೂ ವಿವಾಹ ಅಧಿನಿಯಮದ ಕಲಂ 24ರಲ್ಲಿ ಜೀವನಾಂಶ ನೀಡುವ ಕುರಿತು ವಿವರಣೆಗಳಿವೆ. ವಿವಾಹ ಅಂದೆ ಪರಸ್ಪರ ಅವಲಂಬನೆ. ಹಿಂದೂ ವಿವಾಹದಲ್ಲಿ ಒಂದು ಸಾಂಸಾರಿಕ ಜವಾಬ್ದಾರಿಯ ಪ್ರಜ್ಞೆಯೂ ಇದೆ. ಗಂಡ-ಹೆಂಡತಿಯರಿಬ್ಬರಲ್ಲಿ ಪರಸ್ಪರ ಹಿತಾಸಕ್ತಿಗಳಿವೆ. ಇವರಲ್ಲಿ ಯಾರೊಬ್ಬರೂ ಅಶಕ್ತರಾದರೂ ಮತ್ತೊಬ್ಬರು ನೋಡಿಕೊಳ್ಳುವ ಕರ್ತವ್ಯಪ್ರಜ್ಞೆ ಇದೆ. ಕಾನೂನಿನ ದೃಷ್ಟಿಯಿಂದ ಹೇಳುವುದಾದರೆ ಗಂಡ ಅಥವಾ ಹೆಂಡತಿ ಯಾರೊಬ್ಬರು ಆದಾಯ ಗಳಿಸುವವರಾಗಿದ್ದಲ್ಲಿ ಇನ್ನೊಬ್ಬರ ಜೀವನ ನಿರ್ವಹಣೆಗೆ ಆರ್ಥಿಕ ಸಹಾಯ ಮಾಡಬೇಕು. ಇಬ್ಬರಲ್ಲಿ ಯಾರು ಅಸಮರ್ಥರೋ ಅವರಿಗೆ ಯಾರು ಸಹಾಯ ಮಾಡಬೇಕೆಂಬುದನ್ನು ನ್ಯಾಯಾಲಯ ತಿರ್ಮಾನಿಸಿ ಆದೇಶ ನೀಡಬಹುದು. ನಮ್ಮ ಭಾರತೀಯ ಸಂದರ್ಭದಲ್ಲಿ ಹೆಚ್ಚಿನಂಶ ಮಹಿಳೆಯರೇ ಜೀವನಾಂಶ ಪಡೆಯುವವರಾಗಿರುತ್ತಾರೆ. ಈ ಜೀವನಾಂಶವನ್ನು ಜೀವನ ಪರ್ಯಂತ ಕೊಡುತ್ತ ಹೋಗಬಹುದು ಅಥವಾ ಒಂದೇ ಮೊತ್ತದಲ್ಲೂ ನೀಡಬಹುದು. ಗಂಡ- ಹೆಂಡತಿಯಲ್ಲಿ ಒಬ್ಬರು ಜೀವನಾಂಶ ನೀಡಲು ನಿರಾಕರಿಸಿದಲ್ಲಿ ನ್ಯಾಯಾಲಯಕ್ಕೆ ಮೊರೆಹೋಗಿ ಜೀವನಾಂಶ ಪಡೆಯಬಹುದು. ವಿವಾಹ ವಿಚ್ಛೇದನ ಪಡೆದು ಪತ್ನಿ ಪುನವರ್ಿವಾಹವಾದರೆ ಅವಳಿಗೆ ಜೀವನಾಂಶದ ಹಕ್ಕು ಇರುವುದಿಲ್ಲ. ಒಂದೊಮ್ಮೆ ವಿವಾಹವಾಗದೇ ಉಳಿದರೆ ತನ್ನ ಕೊನೆಯ ಕಾಲದವರೆಗೂ ಜೀವನಾಂಶವನ್ನು ಪಡೆಯಬಹುದು.
ನ್ಯಾಯಿಕ ಪ್ರತ್ಯೇಕೀಕರಣದ ಆದೇಶದನ್ವಯ ಗಂಡ-ಹೆಂಡತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾಗ ಹೆಂಡತಿಯು ಗಂಡನಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ. ಹೆಂಡತಿ ಖಾಯಂ ಜೀವನಾಂಶವನ್ನು ಪ್ರತೀ ತಿಂಗಳು ಅಥವಾ ನಿಯತಕಾಲಿಕವಾಗಿ ಪಡೆಯುತ್ತಿದ್ದು ಆಕೆ ಅನೈತಿಕ ಸಂಬಂಧ ಹೊಂದಿದ್ದಲ್ಲಿ ಮುಂದಿನ ಜೀವನಾಂಶ ಪಡೆಯುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಅದೇ ರೀತಿ ಜೀವನಾಂಶ ಪಡೆಯುವ ವ್ಯಕ್ತಿ ಗಂಡನಾಗಿದ್ದು ಅವನು ವಿವಾಹೇತರ ಲೈಂಗಿಕ ಸಂಬಂಧ ಹೊಂದಿದ್ದಲ್ಲಿ ಜೀವನಾಂಶ ಹಕ್ಕನ್ನು ಕಳೆದು ಕೊಳ್ಳುತ್ತಾನೆ.
* * * * * * * * *
ಚಿತ್ರಕೃಪೆ : https://encrypted-tbn3.google.com
good informative