ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 28, 2012

1

ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?

‍ನಿಲುಮೆ ಮೂಲಕ

 -ಸಂತೋಶ್ ತಮ್ಮಯ್ಯ

ಕೇರಳದ ತ್ರಿಶೂರ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು,ಫ್ಲೆಕ್ಸ್‌ಗಳು,ಬ್ಯಾನರ್‌ಗಳು.ಈ ಬ್ಯಾನರ್‌ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ’ಬೇಕಾಗಿದ್ದಾರೆ’ ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು.ವೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.ಇವನು ಕಮ್ಯುನಿಷ್ಟರ ಪ್ರಾರಬ್ಧ,ಸಾಯಲಿ ಎನ್ನುವಂತೆಯೂ ಇಲ್ಲ.ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ ಕಾಮ್ರೆಡ್‌ಗಳು,ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.

ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು,ಆರ್ಮಿಯಂತೆ ಸಮವಸ್ತ್ರ ಭರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು ’ಕರಾಚಿಯಾ?’ ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್‌ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು ’ಶಹೀದ್ ಭಗತ್ ಸಿಂಗ್ ವೇದಿಕೆ’ ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ,ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯ ಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್ ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದ ಅಸಾಧ್ಯ ಎಂದಿದ್ದ  ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್‌ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು  ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.

ಭಗತ್‌ಸಿಂಗ್ ಜಯಂತಿಯಲ್ಲಿ ಭರಪೂರ ನಾಟಕಗಳು ನಡೆಯುವುದು, ರೌಡಿಗಳನ್ನು ಸಾಕಿದವರ,ಮಕ್ಕಳನ್ನು ಕೊಂದವರ ಸಂಘಟನೆಗಳು, ಜಾತಿಯ ಹೆಸರಲ್ಲಿ ರೋಲ್‌ಕಾಲ್ ಮಾಡುವವರು,ವಿವಿಗಳ ಪ್ರೊಫೆಸರ್‌ಗಳೆಲ್ಲ ನಾಳೆ ಇಂತದ್ದೇ ಮಾತನ್ನು ಆಡುತ್ತಾರೆ. ವರ್ಗ ಸಂಘರ್ಷ ಮತ್ತು ಭಗತ್ ಸಿಂಗ್ ಎಂದು ವಿಚಾರ ಮಂಡಿಸುತ್ತಾರೆ. ಕಾಮ್ರೆಡ್ ಭಗತ್ ಸಿಂಗ್ ಇಂದಿನ ಪ್ರಸ್ತುತತೆ ಎಂದು ತಲೆದೂಗುತ್ತಾರೆ. ೧೯೩೧ರಿಂದಲೇ ಹೀಗೆ ಹೇಳುತ್ತಲೇ ಕೆಲವರು ಕುಟುಕು ಜೀವ ಉಳಿಸಿಕೊಂಡಿದ್ದಾರೆ. ನಿಜ, ಕಾಚಿಗುಡ -ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಇಲಿ ಕೂಡ ಹೈದರಾಬಾದು -ಬೆಂಗಳೂರು ಸಂಚರಿಸುತ್ತದೆ. ಮಂಗಳೂರು ಹಡಗಿನಲ್ಲಿ ಕೂತು ಕಾಗೆ ಪಕ್ಷಿಗಳೂ ಆಸ್ಟ್ರೇಲಿಯಾಕ್ಕೆ ಹೋಗುತ್ತವೆ. ಆದರೆ ಹೋಗುವ ವಿಧಾನ ಅದಲ್ಲವಲ್ಲ. ಭಗತ್‌ಸಿಂಗ್‌ನನ್ನು ಕಮ್ಯುನಿಸ್ಟ್ ತತ್ತ್ವದ ಸಂಘಟನೆಗಳು ಮಾಡಿಕೊಂಡದ್ದು ಕೂಡ ಹಾಗೆಯೆ. ವಾಸ್ತವಾಗಿ ಹಾಗಿಲ್ಲದಿರುವ ಭಗತ್‌ಸಿಂಗ್‌ನನ್ನು ಬಳಸಿಕೊಂಡು ಅವರು ಪ್ರಯಾಣ ಮಾಡುತ್ತಿದ್ದಾರೆ. ಆ ಅನಿವಾರ್ಯತೆ ಅವರಿಗಿದೆ. ಕಮ್ಯುನಿಸ್ಟರಂತೆಯೂ ಕಾಣಬಹುದಾದ ಭಗತ್ ಸಿಂಗ್‌ನನ್ನು ’ಸಂಪೂರ್ಣ ಕಮ್ಯುನಿಸ್ಟ್’ ಎಂದು ಬಣ್ಣ ಬಳಿಯುವ ಕೆಲಸವನ್ನು ಇವರು ಅರ್ಧ ಶತಮಾನದಿಂದ ಮಾಡುತ್ತಾ ಬಂದರು. ಇಂದೂ ಮಾಡುತ್ತಾರೆ. ನಾಳೆ ಅವರ ಜಯಂತಿಯಂದೂ ಮಾಡುತ್ತಾರೆ.

ಹಾಗಾದಾರೆ ಭಗತ್ ಸಿಂಗ್ ಯಾರು? ವಾಸ್ತವವಾಗಿ ಅವನೇನಾಗಿದ್ದ?
ಭಗತ್ ಸಿಂಗ್ ಕನಸುಗಾರ. ಸದಾ ರಾಷ್ಟ್ರ ಧ್ಯಾನಿ. ಆತ ಜನ್ಮದಾತ ಕ್ರಾಂತಿಕಾರಿ. ಬ್ರಿಟಿಷ್ ಕ್ರೌರ್ಯವನ್ನು ಕಣ್ಣಾರೆ ಕಂಡವನು.ಅದನ್ನು ಕಂಡವರು ದೇಶವನ್ನು, ಸ್ವಾತಂತ್ರ್ಯವನ್ನು ಹೇಗೆ ಸ್ವೀಕರಿಸಬೇಕೋ ಹಾಗೆಯೇ ಸ್ವೀಕರಿಸಿದವನು.ತಂದೆ ಮತ್ತು ಚಿಕ್ಕಪ್ಪಂದಿರ ಸಂಸ್ಕಾರವನ್ನು ಪಡೆದ ಭಗತ್ ಸಿಂಗ್ ಕ್ರಾಂತಿಕಾರಿಯಲ್ಲದೆ ಬೇರೇನೂ ಆಗುವಂತಿರಲಿಲ್ಲ. ಹಾಗಾಗಿ ತೊದಲು ಮಾತಾಡುತ್ತಿದ್ದ ಭಗತ್‌ಗೆ ಹೊಲದಲ್ಲಿ ಬಂದೂಕು ನೆಟ್ಟುಬೆಳೆಸುವ ಮನಸಾಗುತ್ತದೆ. ಜಲಿಯನ್ ವಾಲಾಬಾಗ್‌ನ ಪವಿತ್ರ ಮಣ್ಣನ್ನು ಶೀಷೆಯಲ್ಲಿ ತುಂಬಿಟ್ಟು ಪೂಜಿಸಬೇಕು,ಆ ಮಣ್ಣನ್ನು ಮರೆಯಬಾರದು ಎಂಬ ಕೆಚ್ಚು ಹುಟ್ಟುತ್ತದೆ. ಹೀಗೆ ಭಗತ್ ಗೆ ಬಾಲ್ಯದಲ್ಲೇ ದೇಶದ ಮುಕ್ತಿ, ಸ್ವಯಂ ಆಡಳಿತದ ಕಲ್ಪನೆ ಹರಳುಗಟ್ಟಿರುತ್ತದೆ. ಮುಂದಿನದೆಲ್ಲವೂ ಇತಿಹಾಸ. ಕ್ರಾಂತಿಕಾರಿಗಳ ಸಂಪರ್ಕ, ಚಂದ್ರಶೇಖರ ಆಜಾದರ ಒಡನಾಟ,ನೌಜವಾನ್ ಸಭಗಳ ಮೂಲಕ ಕೈಗೊಂಡ ಕ್ರಾಂತಿಕಾರಿ ಚಟುವಟಿಕೆಗಳು, ಭೂಗತ ಸಂಪರ್ಕಗಳು,ಲಾಹೋರ್ ಬಾಂಬ್ ಪ್ರಕರಣಗಳ ಮೂಲಕ ಬ್ರಿಟಿಷ್ ಆಡಳಿತಕ್ಕೆ ತಲೆನೋವಾಗುತ್ತಾನೆ. ಇಂಥ ಕ್ರಾಂತಿಕಾರಿ ಕಾಮ್ರೆಡನೇ? ಅಥವಾ ರಾಷ್ಟ್ರೀಯವಾದಿಯೇ?

ಇಂದು ಭಗತ್ ಸಿಂಗರನ್ನು ಕಾಮ್ರೆಡ್ ಎನ್ನುವವರು ಅಂದಿನ ಕಾಮ್ರೆಡ್‌ಗಳೆಲ್ಲಾ ಚಳವಳಿಯ ಸಮಯದಲ್ಲಿ ಏನೇನು ಮಾಡುತ್ತಿದ್ದರು ಎಂಬುದನ್ನು ಅಪ್ಪಿತಪ್ಪಿಯೂ ಉಲ್ಲೇಖಿಸುವುದಿಲ್ಲ. ಬ್ರಿಟಿಷರ ಹುಚ್ಚು ಕಾಯ್ದೆಗಳಿಗೆಲ್ಲಾ ಅಂದಿನ ಕಮ್ಯುನಿಸ್ಟ್ ಕಾಮ್ರೆಡ್‌ಗಳು ಬೆಂಬಲವನ್ನೇಕೆ ಸೂಚಿಸಿದ್ದರು ಎಂಬುದಕ್ಕೂ ಇಂದು ಅವರಲ್ಲಿ ಉತ್ತರಗಳಿಲ್ಲ. ಅವರೆಲ್ಲರ ಪ್ರಕಾರ ಭಗತ್ ಸಿಂಗ್ ಒಬ್ಬ ಕಾಮ್ರೆಡ್ ಅಷ್ಟೆ. ಅದು ಅವರ ಇಂದಿನ ಆವಶ್ಯಕತೆ ಮತ್ತು ಅವಕಾಶವಾದಿತನ.ಅಂದು ದೇಶಕ್ಕೆ ದೇಶವೇ ಸ್ವದೇಶಿ, ಸ್ವಾತಂತ್ರ್ಯ ಎಂದು ಚಳವಳಿಗೆ ಧುಮುಕಿದ್ದಾಗ ಆಕಳಿಸುತ್ತಾ ಕಾಲಕಳೆಯುತ್ತಿದ್ದ  ಇವರಿಗೆ ಇಂದು ಹೋರಾಟದಲ್ಲಿ ಪಾಲು ಕೇಳಲು ಸಿಕ್ಕಿದ್ದು ಭಗತ್ ಸಿಂಗ್. ಅವರ ಸ್ವಾರ್ಥಕ್ಕೆ ವಿನಾ ಕಾರಣ ಭಗತ್ ಇಂದು ಕಾಮ್ರೇಡನಾಗಬೇಕಾಗಿದೆ.

ಮಹಾತ್ಮರನ್ನು ಅವರಿರುವಂತೆ ಒಪ್ಪಿಕೊಳ್ಳಬೇಕು. ಯಾವಾಗಲೂ ಮಹಾತ್ಮರನ್ನು ವಿಮರ್ಶಿಸಲು ಹಲವು ದಾರಿಗಳಿರುತ್ತವೆ. ವಿಮರ್ಶಿಸಿದಾಗ ಅವರು ಹಲವು ಆಗಿ ಕಾಣುತ್ತಾರೆ. ಹಾಗೆ ಭಗತ್ ಸಿಂಗನನ್ನು ನೋಡಿದರೆ ಅವರು ಏಕ ಕಾಲಕ್ಕೆ ಹಲವು ಆಗಿ ಕಾಣುತ್ತಾರೆ. ಒಂದು ಕೋನದಿಂದ ಅವರು ಬಿಸಿರಕ್ತದ ಯುವಕ. ಹಾಗಾದರೆ ಆತನ ಕೃತ್ಯವೆಲ್ಲವೂ ಎಡವಟ್ಟಿನದ್ದೇ? ಇನ್ನೊಂದು ಕೋನದಿಂದ ಅವರು ಸಂಘಟಕ. ಆದ್ದರಿಂದ ಅವರು ಕೇವಲ ಭಾಷಣ-ಪ್ರವಾಸ ಮಾಡಿಕೊಂಡಿದ್ದ ವ್ಯಕ್ತಿ ಮಾತ್ರ ಆಗುವರೇ? ಇನ್ನೊಂದು ಕೋನದಿಂದ ಭಗತ್‌ಸಿಂಗ್ ರಕ್ತಕ್ರಾಂತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದವರು. ಹಾಗಾದರೆ ಅವರನ್ನು ಕ್ರೂರಿ ಎನ್ನುವುದೇ?  ರೈತರು-ಕಾರ್ಮಿಕರು ಸಂಘಟಿತರಾಗಬೇಕು, ಬ್ರಿಟಿಷ್ ಸಾಮ್ರಾಜ್ಯದ ಬೇರುಗಳಿರುವುದೇ ಇಲ್ಲಿ ಎಂದು ಭಗತ್ ಸಿಂಗ್ ಸದಾ ಹೇಳುತ್ತಿದ್ದರು.ಹಾಗಾದರೆ ಅವರನ್ನು ಕೇವಲ ರೈತ,ಕಾರ್ಮಿಕ ಮುಖಂಡ ಎಂದು ಸೀಮಿತಗೊಳಿಸಿಬಿಡುವುದೇ?

ದುರದೃಷ್ಟದಿಂದ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಪಾಡು ಕೂಡಾ ಹೀಗೆಯೇ.ಕಾಲಕ್ರಮದಲ್ಲಿ ಅವರು ಬಹುಕೋನದಿಂದ ಚರ್ಚಿಸಲ್ಪಟ್ಟರು.ಸ್ವಾತಂತ್ರ್ಯಾನಂತರ ಅವರನ್ನು ವಿಮರ್ಶಿಸುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ ಎಂದೇ ಹೇಳಬೇಕು. ಹೀಗೆ ಚರ್ಚಿಸುತ್ತಾ, ವಿಮರ್ಶೆಗೆ ಒಳಪಡುತ್ತಾ ಗಾಂಧಿ ಪ್ಯೂರ್ ಇಂದಿರಾ ಕಾಂಗ್ರೆಸೇ ಆಗಿ ಹೋಗಿ ಇಂದು ಯುಪಿಎಯ ಆಸ್ತಿಯೂ ಆಗಿಹೋದದ್ದಿದೆ.ಸಾವರ್ಕರ್ ಕೋಮುವಾದಿ ಆಗಿಹೋದರು. ನೇತಾಜಿ ಬೋಸ್ ನಾಜಿಯಾಗಿ ಹೋದರು. ಎಷ್ಟೋ ಯುವ ಕ್ರಾಂತಿಕಾರಿಗಳು ದಾರಿತಪ್ಪಿದ ಯುವಕರಾಗಿಹೋದರು. ಹಾಗೆ ಭಗತ್ ಸಿಂಗ್ ಕೂಡಾ ಕಾಮ್ರೆಡ್ ಆಗಿಹೋದ.

ಯಾವ ಬಾಯಿಂದ ತಾನೇ ಭಗತ್ ಸಿಂಗನನ್ನು ಕಾಮ್ರೆಡ್ ಎನ್ನುವರೋ ಏನೋ. ದೇಶಕ್ಕೊಸ್ಕರ ಮನೆ ಬಿಟ್ಟ, ದೇಶಕ್ಕೊಸ್ಕರ ಸಮಾನ ಮನಸ್ಕರನ್ನು ಜೊತೆಕಟ್ಟಿಕೊಂಡ,ತಾಯಿ ಭಾರತಿಯ ಬೇಡಿ ಕಳಚುತ್ತೇನೆ ಎಂದ,ವಂದೇ ಮಾತರಂ ಎಂದು ಧೈರ್ಯದಿಂದ ಘೋಷಿಸಿದ  ಭಗತ್ ಹೇಗೆ ಸ್ವಾಮಿ ರೌಡಿ ಕಮ್ಯುನಿಸ್ಟನಾಗಬಲ್ಲ?  ಭಗತ್ ಸಿಂಗ್ ಸೋಷಿಯಲಿಸ್ಟ್ ಸ್ಟೇಟ್‌ನ ಕಲ್ಪನೆ ಮಾಡಿದ್ದರು. ಅವರದ್ದು ಸಮಾಜವಾದಿ ಚಿಂತನೆಯಾಗಿತ್ತು. ಸರಿ. ಅವರು ತಮ್ಮ ಸಹ ಕ್ರಾಂತಿಕಾರಿಗಳಿಗೆ ರಷ್ಯನ್ ಕ್ರಾಂತಿಯ,ಟರ್ಕಿಯ ಕ್ರಾಂತಿಯ ಉದಾಹರಣೆಗಳನ್ನು ಕೊಡುತ್ತಿದ್ದರು ಎಂಬುದೆಲ್ಲವೂ ಸರಿ. ಇಷ್ಟಿದ್ದ ಮಾತ್ರಕ್ಕೆ ಅವರು ಕಾಮ್ರೆಡ್ ಆಗಿದ್ದರು ಎಂದರ್ಥವೇ? ಅವರ ರಷ್ಯನ್ ಕ್ರಾಂತಿಯ ಕಲ್ಪನೆ, ಪ್ರೇರಣೆ, ಸಮಾಜವಾದಿ ಚಿಂತನೆ ಎಲ್ಲವೂ ನಡೆದಿದ್ದು ಭಾರತವನ್ನು ದುರುಳರೂ, ಕ್ರೂರಿಗಳೂ, ಲೂಟಿಕೋರರೂ ಆಳುತ್ತಿದ್ದ ಹೊತ್ತಿನಲ್ಲಿ. ಅಂಥವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕಿತ್ತು. ಬ್ರಿಟಿಷರು ಹೆದರುವಂತಹ ತತ್ತ್ವವನ್ನೇ ಅವರೆದುರು ಇಡಬೇಕಿತ್ತು. ಅದು ಜಗತ್ತಿನ ಪ್ರತೀ ಕ್ರಾಂತಿಯ ತತ್ತ್ವ.ಇಂಥ ತತ್ತ್ವವನ್ನು ಭಗತ್ ಮಂಡಿಸದೇ ಹೋಗಿದ್ದರೆ ಅವರೂ ಕೂಡಾ ಇತರರಂತೆ ಉಪವಾಸ ಕೂರಬೇಕಿತ್ತು. ದುಂಡುಮೇಜಿನ ಪರಿಷತ್ತಿಗೆ ಅಲೆದಾಡುತ್ತಾ ಇರಬೇಕಿತ್ತು.ಅದು ಕ್ರಾಂತಿಯಾಗುತ್ತಿರಲಿಲ್ಲ. ದಪ್ಪ ಚರ್ಮದ ಕೋಣದ ಮಂದೆಯ ಮುಂದೆ ನಿಂತು ಅವು ಹೋಗಬೇಕಾದ ದಾರಿ ಎಲ್ಲಿದೆ ಎಂದು ಯಾರೂ ಭಾಷಣ ಮಾಡುವುದಿಲ್ಲ.ಮಾಂಸಾಹಾರಿ ಪ್ರಾಣಿಗೆ ಹಸಿ ಹುಲ್ಲನ್ನು ತಿನ್ನಿಸಬಹುದು ಎಂದು ಯಾರೂ ಕೂಡಾ ಕನಸು ಕಾಣುವುದೂ ಇಲ್ಲ.ಹಾಗಾಗಿ ಭಗತ್ ಹಾಗೆ ಮಾಡಲಿಲ್ಲ.ಬ್ರಿಟಿಷರು ಹೆದರುತ್ತಿದ್ದ ರಷ್ಯನ್ ಕ್ರಾಂತಿಯ ಗುಮ್ಮನಿಂದ ಅವರನ್ನು ಓಡಿಸಲು ನೋಡಿದರು.  ಅಷ್ಟಕ್ಕೆ ಅವರು ಕಮ್ಯುನಿಷ್ಟರಾಗುವರೇ?

ಒಂದು ವೇಳೆ ಅವರು ರಷ್ಯನ್, ಟರ್ಕಿ ಕ್ರಾಂತಿಯ ದಾರಿಯನ್ನು ಬೋಧಿಸಲಿಲ್ಲ ಎಂದಿಟ್ಟುಕೊಳ್ಳೋಣ. ಇನ್ನೇನು ತಾನೇ ಮಾಡಬೇಕಿತ್ತು? ಮಂತ್ರಿಗಳು, ಸರದಾರರು, ಸೇನಾಪತಿಗಳು, ಕಾಲ್ದಳ, ಅಶ್ವಬಲ, ಗಜಪಡೆಗಳನ್ನು ಕಟ್ಟಿ ಸಮರ ಸಾರಲಾಗುತ್ತಿತ್ತೇ? ಕ್ರಾಂತಿಯ ತಂತ್ರಗಳನ್ನು ಯಾರೂ ವಿಮರ್ಶಿಸಲಾಗದು. ವಿಮರ್ಶಿಸಲೂಬಾರದು. ಏಕೆಂದರೆ ಆ ಕ್ರಾಂತಿಯ ಒಟ್ಟು ಉದ್ದೇಶ ದೇಶ. ದೇಶ. ದೇಶ. ಸಾವರ್ಕರ್ ಅಂಡಾಮಾನ್ ಜೈಲಿನಿಂದ ಹೊರಬಂದಾಗಲೂ ಉಪಯೋಗಿಸಿದ್ದು ಆ ತಂತ್ರವನ್ನೇ. ನೇತಾಜಿ ಜರ್ಮನಿಯ ಸಂಗ ಬೆಳೆಸಿದ್ದೂ ಈ ತಂತ್ರದಿಂದಲೇ.ಜರ್ಮನಿಯ ಸಂಪರ್ಕ ಬೆಳೆಸಿದ ನೇತಾಜಿಯ ಗುರಿ ಭಾರತವಾಗಿತ್ತು. ಹಾಗೆಯೇ ರಷ್ಯನ್ ಕ್ರಾಂತಿಯನ್ನು ಉಲ್ಲೇಖಿಸುತ್ತಿದ್ದ ಭಗತ್ ಸಿಂಗರ ಗುರಿಯೂ ಭಾರತವಾಗಿತ್ತು.ಹೇಗೆ ನೇತಾಜಿಯನ್ನು ನಾಜಿ ಎನ್ನಲು ಸಾಧ್ಯವಿಲ್ಲವೂ ಹಾಗೆಯೇ ಭಗತ್ ಸಿಂಗನನ್ನು ಕಾಮ್ರೆಡ್ ಎನ್ನಲೂ ಸಾಭವಿಲ್ಲ. ಭಗತ್ ಸಿಂಗರು ೧೯೨೫-೨೬ರ ಆಸುಪಾಸಿನಲ್ಲೊಮ್ಮೆ ನಾಗಪುರಕ್ಕೆ ತೆರಳಿದ್ದರು. ಡಾ.ಹೆಡಗೇವಾರರ ನಿಕಟವರ್ತಿಯಾಗಿದ್ದ ಭಾವೂಜಿ ಕಾವ್ರೆಯವರನ್ನು ಭಗತ್ ಸಿಂಗ್ ಭೇಟಿಯಾಗಿದ್ದರು. ಅನಂತರ ಕಾವ್ರೆಯವರು ಭಗತ್‌ನನ್ನು ಡಾಕ್ಟರ್‌ಜಿಯವರಿಗೆ ಪರಿಚಯ ಮಾಡಿಸಿದ್ದರು. ಆಗ ತಾನೇ ಆರೆಸ್ಸೆಸ್ಸ್ ಜನಿಸಿತ್ತು. ಅದರ ಕಾರ್ಯವ್ಯಾಪ್ತಿ ಇನ್ನೂ ವಿಸ್ತರಿಸಿರಲಿಲ್ಲ. ತೀರಾ ಸಣ್ಣ ಸಂಘಟನೆ.ಅಂಥ ಸಂಘಟನೆಯ ಪರಿಕಲ್ಪನೆಯನ್ನು ನೋಡಿ ಭಗತ್ ಸಿಂಗ್ ಡಾಕ್ಟರ್‌ಜಿಯವರೊಂದಿಗೆ “ ಇಂಥ ಹಿಂದೂ ಯುವಕರ ಸಂಘಟನೆಯಿಂದ ದೇಶ ಮತ್ತಷ್ಟು ಬಲಶಾಲಿಯಾಗುವುದು. ಶಕ್ತಿ ಬರುವುದು” ಎಂದಿದ್ದರು. ಹಾಗಾದರೆ ಭಗತ್ ಸಿಂಗ್ ಆರೆಸ್ಸೆಸ್ ಎಂದು ಅರ್ಥವೇ? ಇಂಥ ಮಾತನ್ನು ಹೇಳುವ ಭಗತ್ ಸಿಂಗ್ ಎಂದಾದರೂ ರಷ್ಯದ ಮಳೆಗೆ ಭಾರತದಲ್ಲಿ ಕೊಡೆ ಹಿಡಿಯುವ ಕಾಮ್ರೆಡರಾಗಬಲ್ಲರೇ?

ಲಾಹೋರ್ ಅಸೆಂಬ್ಲಿ ಬಾಂಬ್ ಸ್ಪೋಟ ಪ್ರಕರಣದ ಅನಂತರ ಭಗತ್ ಸಿಂಗ್ ಜೈಲೊಳಗಿಂದಲೇ ಸತ್ಯಾಗ್ರಹ ಹೂಡಿದರು.ಅದು ದೇಶಾದ್ಯಂತ ಜನಜಾಗೃತಿಗೆ ಕಾರಣವಾಯಿತು.  ದೇಶದ ವಿವಿಧ ಜೈಲುಗಳಿಂದ ರಾಜಕೀಯ ಖೈದಿಗಳ ಬೇಡಿಕೆಗಾಗಿ ಸತ್ಯಾಗ್ರಹ ಪ್ರಾರಂಭವಾದವು.ಆ ಸಂಧರ್ಭದಲ್ಲಿ  ಬೃಹತ್ ಪ್ರಮಾಣದಲ್ಲಿ ಸಾಧುಸಂತರೂ ಕೂಡಾ ಭಗತ್ ಗೆ ಬೆಂಬಲ ಸೂಚಿಸಿದ್ದರು.ಒಂದು ವೇಳೆ ಭಗತ್ ಕಾಮ್ರೆಡನೇ ಆಗಿದ್ದರೆ ಈ ಕಾವಿಧಾರಿ ಸಂನ್ಯಾಸಿಗಳು ಬೆಂಬಲ ಸೂಚಿಸುತ್ತಿದ್ದರು ಎಂದು ಅನಿಸುವುದೇ?ಭಗತ್ ಸಿಂಗ್ ಜೈಲಲ್ಲಿದ್ದಾಗ ಮಾರ್ಕ್ಸ್ ನ ಜೀವನವನ್ನು ದಾಸ್ ಕ್ಯಾಪಿಟಲ್ಲನ್ನೂ ಓದುತ್ತಾ ಸಮಯ ಕಳೆಯುತ್ತಿದ್ದರು ಎಂದು ಕೆಲವು ಕಮ್ಯುನಿಸ್ಟ್ ಬರಹಗಾರರು ಬರೆದಿದ್ದಾರೆ. ಆದರೆ ಭಗತ್ ಸಿಂಗ್ ಭಗವದ್ ಗೀತೆಯನ್ನೂ ಜೈಲಲ್ಲೂ ಓದುತ್ತಿದ್ದರಲ್ಲಾ? ನೇಣಿಗೇರುವ ದಿನದಂದೂ ಗೀತಾ ಪಾರಾಯಣ ಮಾಡಿದ್ದರಲ್ಲಾ ಅದಕ್ಕೇನನ್ನಬೇಕು? ಅಲ್ಲದೆ ಭಗತ್ ಸಿಂಗ್ ಸ್ವಾಮಿ ವಿವೇಕಾನಂದರನ್ನೂ ಉಲ್ಲೇಖಿಸುತ್ತಿದ್ದರು ಎಂದು ಸಹ ಕ್ರಾಂತಿಕಾರಿಗಳೇ ಹೇಳಿದ ಉಲ್ಲೇಖಗಳಿವೆಯಲ್ಲಾ?

ಭಗತ್ ನನ್ನು ಕಾಮ್ರೆಡ್ ಮಾಡುವ ದಾರಿಯಲ್ಲಿ ಕಮ್ಯನಿಸ್ಟರು ಹಲವು ಎಡವಟ್ಟುಗಳನ್ನು ಮಾಡಿಕೊಂಡಿರುವುದು ಕಾಣುತ್ತದೆ.೧೯೨೮ರಲ್ಲಿ ಸೈಮನ್ ಸಮಿತಿ ಭಾರತಕ್ಕೆ ಬಂತು.ದೇಶಾದ್ಯಂತ ಸೈಮನ್ ಗೋಬ್ಯಾಕ್’ ಚಳವಳಿ ನಡೆಯಿತು. ಲಾಹೋರಿನಲ್ಲಿ ನಡೆದ ಅಂಥ ಒಂದು ಬೃಹತ್ ಚಳವಳಿಯಲ್ಲಿ ಲಾಠಿ ಚಾರ್ಜ್ ನಡೆಯಿತು. ಮಹಾನ್ ನಾಯಕ, ಬ್ರಿಟಿಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸುತ್ತಿದ್ದ ಲಾಲ್-ಬಾಲ್-ಪಾಲ್ ರಲ್ಲೊಬ್ಬರಾದ ಲಾಲಾ ಲಜಪತರಾಯ್ ಅವರಿಗೆ ಮಾರಣಾಂತಿಕ ಪೆಟ್ಟು ಬಿತ್ತು.ಆ ಪೆಟ್ಟಿನಿಂದಲೇ ಲಾಲಾಜಿ ಕೆಲವೇ ದಿನಗಳಲ್ಲಿ ಮೃತರಾದರು.ಈ ಘಟನೆ ಭಗತ್ ಸಿಂಗ್ ಮನದಲ್ಲಿ ಎಷ್ಟೊಂದು ಆಳದಲ್ಲಿ ಗಾಯವನ್ನು ಉಂಟುಮಾಡಿತ್ತೆಂದರೆ ಸೇಡು ತೀರಿಸಿಕೊಳ್ಳುವವರೆಗೆ  ನೆಮ್ಮದಿಯನ್ನೇ ಕಳಕೊಂಡರು. ಯಾವ ಲಾಲಾಜಿ ಭಗತ್ ನಂಥ ಯುವಕರಿಗೆ ದೇವಸಮಾನರಾಗಿದ್ದರೋ,ಯಾವ ಲಾಲಾಜಿಯಿಂದ ಭಗತ್ ಉಗ್ರ ಸ್ವದೇಶಿ ತತ್ತ್ವವನ್ನು ಕಲಿತಿದ್ದರೋ ಅಂಥ ಲಾಲಾಜಿಯನ್ನು ಕೊಂದ ಪೊಲೀಸನ ಬಲಿಗೆ ಅಡಿ ಇಟ್ಟೇ ಬಿಟ್ಟರು. ಒಂದು ವೇಳೆ ಆತ ಕಾಮ್ರೆಡ್ ಆಗಿದ್ದರೆ…? ಎಲ್ಲಿಯ ಉಗ್ರ ಸ್ವದೇಶಿ ತತ್ತ್ವ? ಎಲ್ಲಿಯ ವಿದೇಶಿ ಬೀಜದ ಕಾಮ್ರೆಡ್‌ತನ?

ಭಗತ್ ಸಿಂಗ್ ದೇಶದ ಆಸ್ತಿಯೇ ಹೊರತು ಕಮ್ಯುನಿಸ್ಟರ ಸ್ವತ್ತಲ್ಲ. ಹೀಗೆಲ್ಲಾ ಇದ್ದ ಭಗತ್ ಸಿಂಗ್ ಕಮ್ಯುನಿಸ್ಟ್ ಆಗಲು ಸಾಧ್ಯವೇ ಇರಲಿಲ್ಲ. ಕಮ್ಯುನಿಸ್ಟರೂ ಕೂಡಾ ಭಗತ್ ಸಿಂಗ್‌ನನ್ನು ದೇಶಭಕ್ತನೆಂದು ಹೇಳಿಕೊಳ್ಳಬಹುದು. ಆದರೆ ಕಾಮ್ರೆಡ್ ಎಂದು ಹೇಳಲು ಹಕ್ಕಿಲ್ಲ.೨೦೦೫ ರಲ್ಲಿ ಎ.ಆರ್. ರೆಹಮಾನ್ ರಂಗ್ ದೇ ಬಸಂತಿ ಹಾಡಿಗೆ ಹೊಸ ರಾಗ ಜೋಡಿಸುವವರೆಗೂ  ಈ ಕಮ್ಯುನಿಸ್ಟರಿಗೆ ಆ ಹಾಡು ಗೊತ್ತಿತ್ತು ಎಂಬುದೇ ಸಂಶಯ.

ಕೃಪೆ: ಹೊಸದಿಗಂತ

1 ಟಿಪ್ಪಣಿ Post a comment
  1. ಸೆಪ್ಟೆಂ 28 2012

    very poor article. i dont understand what the author tries to explain here? calling him comrade doesnt make bhagat singh communist. the word Comrade means “friend”, “colleague”, or “ally”. It is just that the left wing organisations use that word frequently.
    If some communists are using bhagat singh’s name along with their goondas then the author here has used bhagat singh’s name to propogate his anger against muslims [or some of its organisations].
    even the right wing organisations are blamed for using bhagat singh’s name!! photos of goondas of right wing parties also flourish with bhagat singh! is that completely acceptable?
    ಭಗತ್ ಸಿಂಗ್ ದೇಶದ ಆಸ್ತಿಯೇ ಹೊರತು ಕಮ್ಯುನಿಸ್ಟರ ಸ್ವತ್ತಲ್ಲ. ಹೀಗೆಲ್ಲಾ ಇದ್ದ ಭಗತ್ ಸಿಂಗ್ ಕಮ್ಯುನಿಸ್ಟ್ ಆಗಲು ಸಾಧ್ಯವೇ ಇರಲಿಲ್ಲ. – His inspiration for revolution is no doubt british ruling, the thoughts and ideas shaped after reading communist writings. no doubt bhagat singh is not restricted to communists but at the same time even the communists belongs to this nation right?
    in eve of bhagat singh’s birthday the author would have written much better and useful article about bhagat.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments