ಕೈಲಾಗದ ರಾಜಕಾರಣಿಗಳ ಕೊಲವೆರಿ, ಕನ್ನಡಿಗರ ಜೀವನಾಡಿ ಕಾವೇರಿ
– ರಾಕೇಶ್ ಶೆಟ್ಟಿ
ಅವತ್ತು ಬೆಳ್ಳಂಬೆಳಗ್ಗೆ ತಮ್ಮ ಹಿಂಬಾಲಕರ ಹಿಂಡು,ಕ್ಯಾಮೆರಾ ದಂಡಿನೊಂದಿಗೆ ಮೀಡಿಯಾ ಡಾರ್ಲಿಂಗ್ ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಅಶೋಕ್ ಬೆಂಗಳೂರಿನಿಂದ ಗುಳೆ ಹೊರಟಿದ್ದ ಅಸ್ಸಾಂ ಜನರನ್ನು ಸಂತೈಸಲು ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದರು.ಆದರೆ ಈಗ ನೋಡಿ ಕಳೆದ ಇಪ್ಪತ್ತು ದಿನದಿಂದ ಕಾವೇರಿಕೊಳ್ಳದ ರೈತರು ಕಣ್ಣೀರಿಡುತಿದ್ದಾರೆ.ಬಂದ್,ಹರತಾಳಗಳಿಂದ ರಾಜ್ಯದ ಕಾನೂನು ಹದಗೆಡುತ್ತಿದೆ ಆದರೆ ಮಾನ್ಯ ಕಾನೂನು ಸಚಿವರು ನಾಪತ್ತೆಯಾಗಿದ್ದಾರೆ…! ಈ ನಡುವೆ ಗೃಹ ಸಚಿವರು ಅಸ್ಸಾಂಗೆ ಹೋಗಿದ್ದಾರಾ? ತಮಿಳುನಾಡಿಗೆ ಹೋಗಿ ಜಯಲಲಿತಾಗೂ ವಸ್ತುಸ್ಥಿತಿ ತಿಳಿಸಬಹುದಿತ್ತಲ್ಲಾ,ಯಾಕೆ ಹೋಗಲಿಲ್ಲ?
ಸುದ್ದಿ ಮಾಡಲು ಇದೇನು “ಭಾರತ”ದ ವಿಷಯವೋ ಅಥವಾ ಅವರ ಸಂಘ ಪರಿವಾರದ “ದೇಶ ಭಕ್ತಿ”ಯ ವಿಷಯವೋ ಅಲ್ಲವಲ್ಲ.ಇದು ಬರಿ ಕಾವೇರಿಯ ವಿಷ್ಯ,ಇದು ಕರ್ನಾಟಕದ ಜನತೆಯ ಪ್ರಾದೇಶಿಕತೆಯ ಸಂಕುಚಿತತೆಯ ಹೋರಾಟ ಅನ್ನಿಸರಬೇಕು.ಒಂದೆಡೆ ಇಂತ ದೇಶಭಕ್ತ ಕಾನೂನು ಸಚಿವ.ಮತ್ತೊಂದೆಡೆ ಸುಪ್ರೀಂ ಕೋರ್ಟ್ ಮುಂದೆ ನಿಂತು ೧೦ ಟಿಎಂಸಿ ನೀರು ನಾವೇ ಕೊಡ್ತೀವಿ ಅಂತ ಮುಂಚಿತವಾಗಿ ಬರೆದು ಕೊಟ್ಟ ಜಲಸಂಪನ್ಮೂಲ ಸಚಿವ ಮತ್ತು ಇಂತ ಎಡವಟ್ಟು ಸಚಿವರಿಗೊಬ್ಬ ಕಳಸವಿಟ್ಟ ಮುಖ್ಯಮಂತ್ರಿ.
ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಪ್ರಧಾನಿ ತೀರ್ಪನ್ನು ವಿರೋಧಿಸಿ, ಕುರ್ಚಿ ಬೇಕಾದರೂ ಬಿಡುತ್ತೇನೆ, ಕಾವೇರಿ ಬಿಡಲಾರೆ ಅಂದ ಶೆಟ್ಟರ್ ಮುಖಾಂತರ ಒಬ್ಬ ಹೀರೊನನ್ನು ಹುಡುಕಲು ರಾಜ್ಯದ ರೈತರು ಕನಸು ಕಾಣುತಿದ್ದರು.ಆದರೆ ಅವರಿಗೆ ಕಾವೇರಿಗಿಂತ ಕುರ್ಚಿಯೇ ಹೆಚ್ಚಾಯಿತು ನೋಡಿ.ರಾತ್ರೋ ರಾತ್ರಿ ನೀರು ಹರಿಸಲು ಶುರು ಮಾಡಿದ್ದಾರೆ.ಹೀರೊ ಆಗೋದು ಬಿಡಿ ಕಡೆ ಪಕ್ಷ ಜೀರೊ ಆದರು ಅಂತೇಳಿದರೆ, ಅದು ನಾವು ಆ “ಜೀರೊ” ಅನ್ನೋ ಪದಕ್ಕೆ ಅವಮಾನ ಮಾಡಿದಂತೆ. ಇಡೀ ರಾಜ್ಯ ಬಂದ್ ಮಾಡಿ ಹೊತ್ತಿ ಉರಿಯುತಿದ್ದರೆ ಮಾನ್ಯ ಮುಖ್ಯಮಂತ್ರಿಗಳು ಪೋಲಿಸ್ ಸರ್ಪಗಾವಲಿನೊಂದಿಗೆ ಭದ್ರವಾಗಿ ಮನೆಯಲ್ಲಿ ಕುಳಿತಿದ್ದಾರೆ, ರೋಮ್ ಹತ್ತಿ ಉರಿಯುತಿದ್ದಾಗ ಪಿಟೀಲು ಕುಯ್ಯುತಿದ್ದ ನೀರೋನಂತೆ…!
ಕೆ.ಆರ್.ಎಸ್,ಕಬಿನಿ,ಹಾರಂಗಿ,ಹೇಮಾವತಿಯನ್ನು ಬರಿದು ಮಾಡಿ ರಾಜ್ಯದ ರೈತರ,ಜನರಿಗೆ ದ್ರೋಹ ಬಗೆದಿದ್ದು ಸಾಲಲಿಲ್ಲವೇನೋ ಅನ್ನಿಸಿ ನಿನ್ನೆ ರಾತ್ರಿ ಯಗಚಿಯನ್ನು ಖಾಲಿ ಮಾಡಹೊರಟಿದ್ದಾರೆ.ಥೂ ಇದೆಂತ ನಾಚಿಕೆಕೇಡಿನ ನಾಯಕತ್ವ ಸ್ವಾಮೀ? ಯುದ್ಧರಂಗದಿಂದ ಪಲಾಯನ ಮಾಡುವವರನ್ನ ಲೀಡರ್ ಅನ್ನುತ್ತಾರಾ? ಪ್ರಧಾನಿ ಮನಮೋಹನ್ ಅವರ ಮೌನ ವ್ರತಕ್ಕೆ ಪೈಪೋಟಿ ನೀಡುವಂತ ಮುಖ್ಯಮಂತ್ರಿ ಈ ಸಮಯಕ್ಕೆ ನಮಗೆ ಸಿಕ್ಕಿದ್ದಕ್ಕೆ ಧನ್ಯರಾದೆವು ನಾವು.
ಬಹುಷಃ ಬಂಗಾರಪ್ಪ ಅವರ ಕಾಲದಲ್ಲಿ ಬಿಟ್ಟರೆ ಉಳಿದಂತೆ ನಮಗೆ ಅಂತ ಗಂಡು ಮುಖ್ಯಮಂತ್ರಿ ಸಿಗಲೇ ಇಲ್ಲ.ಇಲ್ಲದ ನೀರನ್ನು ಬಿಡಿ ಬಿಡಿ ಅನ್ನುವ ಕೇಂದ್ರ ಸರ್ಕಾರಕ್ಕೆ,ಕಾವೇರಿಯನ್ನ ರಾಜಕಾರಣ ಮಾಡಿಕೊಂಡಿರುವ ತಮಿಳುನಾಡು ಸರ್ಕಾರಕ್ಕೆ ಸೆಡ್ಡು ಹೊಡೆದು ರಾಜ್ಯದ ಪರ ನಿಲ್ಲಬಲ್ಲ ಸರ್ಕಾರ ನಮಗೆ ಸಿಗುವುದ್ಯಾವಾಗ?ಕಾವೇರಿ ಹೋರಾಟದ ಸಮಯದಲ್ಲಿ ನಮಗೊಂದು ಪ್ರಾದೇಶಿಕ ಪಕ್ಷ ಬೇಕು ಅನ್ನೋ ಹಳೆ ಮಾತು ಮತ್ತೆ ಜೀವ ಪಡೆಯುತ್ತಿದೆ.ಅದೆಲ್ಲಾ ಸರಿ.ಆದರೆ,ಈಗ ಇರುವ ಪರಿಸ್ಥಿತಿಯಲ್ಲಿ ನಮಗೆ ನ್ಯಾಯ ಕೊಡಿಸಬೇಕಾಗಿದ್ದು ರಾಜ್ಯ ಸರ್ಕಾರದ ಕರ್ತವ್ಯ,ಅದನ್ನು ಮಾಡಲಾಗದಿದ್ದರೆ ರಾಜಿನಾಮೇ ಕೊಟ್ಟು ಕುರ್ಚಿ ಖಾಲಿ ಮಾಡುವುದು ಒಳ್ಳೆಯದು.
ಹಿರಿಯ ಜೀವ ಮಾದೇಗೌಡರು ೩ ದಿನದಿಂದ ಉಪವಾಸ ಕುಳಿತಿದ್ದಾರೆ,ಹರಿಯುತ್ತಿರುವ ನೀರು ನೋಡಿ ರೈತರು ಬಾಯಿ ಬಡಿದುಕೊಳ್ಳುತಿದ್ದಾರೆ.ಆದರೆ ಈ ರಾಜಕಾರಣಿಗಳು ಕೆಸರೆರಾಚಟದಲ್ಲಿ ಕಾಲಹರಣ ಮಾಡುತಿದ್ದಾರೆ.ಯಡ್ಯೂರಪ್ಪನವರಿಗೆ ೨೦ ದಿನದ ನಂತರ ಧಿಡೀರ್ ಕಾವೇರಿ ನೆನಪಾಗಿದೆ,ಅತ್ತ ಬಿಬಿಎಂಪಿ ಸದಸ್ಯರು ಕಾವೇರಿ ಹೋರಾಟಕ್ಕೆ ಹೋಗಬಾರದು ಅನ್ನುವ ಫ಼ರ್ಮಾನು ದೇಶಭಕ್ತ ಸಂಸದ ಅನಂತ್ ಕುಮಾರ್ ಇಂದ ಹೊರಟಿದೆಯಂತೆ.
ಮೊನ್ನೆ ಯಾರೋ ಒಬ್ಬ ದೇಶ ಭಕ್ತ ಫ಼ೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದ “ಕಾಶ್ಮೀರ ಕೈ ತಪ್ಪಿದಾಗ್ ಸುಮ್ನಿದ್ರಿ,ಅಸ್ಸಾಂ ಉರಿದಾಗ ತೆಪ್ಪಗಿದ್ರಿ,ಕಾವೇರಿ ಬಿಟ್ರೆ ಕಿರುಚಾಡ್ತಿರಾ.ನಮ್ಮ ನಮ್ಮಲೇ ಜಗಳವ್ಯಾಕೆ? ಮೊದಲು ಭಾರತೀಯರಾಗಿ” ಅಂತ.
ಅದಕ್ಕೆ ಉತ್ತರವಾಗಿ ” ಈ ಹೇಳಿಕೆಯನ್ನ ಬರೆದವನಿಗೆ ಒಂದಿಡಿ ದಿನ ನೀರು ಕೊಡದೇ ಕೂರಿಸಿ,ಆಮೇಲೆ ಕೇಳೆ ನೋಡು ಕರ್ನಾಟಕ ಬೇಕೋ,ಭಾರತ ಬೇಕೋ ಅಂತ.ಅವನು ಹೇಳುವುದು “ಕಾವೇರಿ” ಬೇಕು ಅಂತ. ಲಾಜಿಕ್ ಇಲ್ಲದವರಂತೆ ಕಾಶ್ಮೀರ,ಕಾವೇರಿ ಎಲ್ಲವನ್ನೂ ಒಂದೇ ಕಡೆ ಸುತ್ತೋ ಬದಲ ತೆಪ್ಪಗಿರಿ” ಅಂದೆ.
ಕರ್ನಾಟಕವಿಲ್ಲದೇ ಭಾರತವಿಲ್ಲ ಅನ್ನುವ ಕಾಮನ್ ಸೆನ್ಸ್ ಅನ್ನು ಈ ದೇಶಭಕ್ತರಿಗೆ ಆ ತಾಯಿ ಭಾರತಾಂಬೆಯೇ ಕರುಣಿಸಬೇಕು.
ಅಂಬರೀಷ್ ಹೇಳಿದಂತೆ “ನಮ್ಮತ್ರ ನೂರು ರೂಪಾಯಿ ಇದ್ದಾಗ ೫೦ ಕೇಳಿ ಕೊಡ್ತೀವಿ,ನಮ್ ಹತ್ರಾ ಇರೋದೆ ೧ ರೂಪಾಯ್ ಇನ್ನ್ ನಿಮಗೆ ಎಲ್ಲಿಂದ ೫೦ ಕೊಡೋದು?” ಇದು ಸದ್ಯ ರಾಜ್ಯದ ಸ್ಥಿತಿ.ಹೀಗಿರುವಾಗ ಸಂವಿಧಾನ,ದೇಶ,ಭಾರತ ಅನ್ನುವ ಸಬೂಬು ನೀಡಿ ನಮ್ಮ ಬಾಯಿಗೆ ಮಣ್ಣು ಹಾಕುತ್ತಿರುವ ದೇಶ ಭಕ್ತಿಯ ಗುತ್ತಿಗೆ ಪಡೆದ ರಾಜ್ಯ ಬಿಜೆಪಿ ಸರ್ಕಾರಕ್ಕೆ,ಕೇಂದ್ರದಲ್ಲಿ ಸಚಿವರಾಗಿ ಮಂಡಕ್ಕಿ ಮೆಲ್ಲುತ್ತಿರುವ ಕೈಲಾಗದ ಕೈ ನಾಯಕರಿಗೂ ಧಿಕ್ಕಾರ ಧಿಕ್ಕಾರ ಧಿಕ್ಕಾರ…
ಕಾವೇರಿ ನದಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಹರಿದು ಬಂದು ಅರಬೀ ಸಮುದ್ರ ಸೇರುವಂತಿದ್ದರೆ ಮತ್ತು ತಮಿಳ್ನಾಡಿನಲ್ಲಿ ಬರಗಾಲ ಇರುವಾಗ ಅಲ್ಲಿನ ಅಣೆಕಟ್ಟುಗಳಿಂದ ಕರ್ನಾಟಕಕ್ಕೆ ೯೦೦೦ ಕ್ಯುಸೆಕ್ಸ್ ನೀರು ಬಿಡಿ ಎಂದು ಹೇಳಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡು ಹೊತ್ತಿ ಉರಿಯುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ. ಒಂದು ರಾಜ್ಯದಲ್ಲಿ ಬೀಳುವ ಮಳೆಯ ನೀರಿನ ಮೇಲೆ ಆ ರಾಜ್ಯಕ್ಕೆ ಹೆಚ್ಚಿನ ಹಕ್ಕು ಇರಬೇಕಾದದ್ದು ಸಹಜ ನ್ಯಾಯ. ಯಾರನ್ನು ಕೇಳಿದರೂ ತಲೆ ಶುದ್ಧ ಇರುವವರು ಇದೇ ಉತ್ತರ ಕೊಡುತ್ತಾರೆ. ಹಿಂದೆ ವಸಾಹತುಶಾಹಿ ಆಡಳಿತ ಇರುವಾಗ ನಮ್ಮ ಮೇಲೆ ಹೇರಿದ ಮೋಸದ ಹಾಗೂ ಬಲವಂತದ ಒಪ್ಪಂದ ಸ್ವಾತಂತ್ರ್ಯ ದೊರಕಿದ ಮೇಲೆಯೂ ಮುಂದುವರಿಯುತ್ತದೆ ಎಂದರೆ ನಾವು ಭಾರತೀಯ ಒಕ್ಕೂಟದಲ್ಲಿ ಯಾಕೆ ಉಳಿಯಬೇಕು ಎಂಬುದು ಮೂಲಭೂತ ಪ್ರಶ್ನೆ. ದೇಶಭಕ್ತಿಯ ಬಗ್ಗೆ ಹೇಳುವವರು ತಮಿಳುನಾಡಿಗೆ ಮೊದಲು ನೀತಿಪಾಠ ಮಾಡಬೇಕಾಗಿದೆ. ಕರ್ನಾಟಕದಲ್ಲಿ ಇರುವವರೂ ಭಾರತೀಯರೇ ಆಗಿರುವಾಗ ಮತ್ತು ಕರ್ನಾಟಕದ ಭೂಪ್ರದೇಶದಲ್ಲಿ ಬೀಳುವ ಮಳೆನೀರಿನ ಮೇಲೆ ಆ ಪ್ರದೇಶದ ಜನರಿಗೆ ಹೆಚ್ಚಿನ ಹಕ್ಕು ಇರಬೇಕಾಗಿರುವುದು ನ್ಯಾಯವಾಗಿರುವಾಗ ಅದನ್ನು ಇಲ್ಲೇ ಬಳಸಿ ಬೆಳೆ ಬೆಳೆಯುವುದು ಸಮಂಜಸವಾಗಿ ಕಾಣುತ್ತದೆ. ನಾವು ಇಡೀ ರಾಜ್ಯ ಒಂದಾಗಿ ನಿಂತರೆ ಕೇಂದ್ರ ಸರ್ಕಾರ ಏನು ಮಾಡಲು ಸಾಧ್ಯ? ಸರ್ಕಾರವನ್ನು ತೆಗೆದು ರಾಷ್ಟ್ರಪತಿ ಆಡಳಿತ ಹೇರಿ ಸೈನ್ಯ ತಂದು ರಾಜ್ಯಪಾಲರ ಮೂಲಕ ತಮಿಳುನಾಡಿಗೆ ನೀರು ಬಿಡಬಹುದು. ರಾಜ್ಯದ ಜನ ಒಗ್ಗಟ್ಟಾಗಿ ನಿಂತರೆ ಮತ್ತು ರಾಜ್ಯದ ಎಲ್ಲ ಪೋಲೀಸ್ ಬಲ ಒಂದಾಗಿ ನಿಂತರೆ ಸೈನ್ಯವನ್ನು ಕಳುಹಿಸುವ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಲೇ ಬೇಕಾಗುತ್ತದೆ. ನಮಗೆ ನ್ಯಾಯ ಸಿಗದಿದ್ದರೆ ನಮಗೆ ಬೇರೆಯೇ ದೇಶ ಕೊಡಿ ಎಂದು ಕೇಳುವ ಧೈರ್ಯವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.
ನೀವು ಬರೆದಿರೋದು ೧೦೦೦೦೦೦೦೦೦೦೦೦೦% ಸರಿಯಾಗಿದೆ. ಇಂಥ ರಾಜಕಾರಿಣಿಗಳಿಗೆ ಯಾರು ಬುದ್ಧಿ ಕಲಿಸುತ್ತಾರೋ, ಏನೋ? ದರಿದ್ರ ರಾಜಕೀಯ ಆಗೋಗಿದೆ. ಈ ರಾಜಕಾರಿಣಿಗಳ ತಲೆಯಲ್ಲಿ ಏನು ತುಂಬಿದೆಯೋ ಗೊತ್ತಿಲ್ಲ. ಈ ಜನಗಳನ್ನು ಎದುರಿಸಿ ಹೇಗೆ ಬದುಕುತ್ತಿದ್ದಾರೆ ಇವರು? ಇವರುಗಳಿಗೆ ನಾಚಿಕೆ, ಹೇಸಿಕೆ ಎನೂ ಇಲ್ಲವೇ? ಯಾವ ಮುಖ ಹೊತ್ತುಕೊಂಡು ವೋಟ್ ಕೇಳೋಕೆ ಬರುತ್ತಾರೆ?