ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 20, 2012

4

ಬಿಜೆಪಿಯ ಅಪಸ್ವರಕ್ಕೆ ‘ಆರ್.ಎಸ್.ಎಸ್’ನದ್ದೇ ಟ್ಯೂನ್

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಅಂದು ಪಾಕಿಸ್ತಾನದ ನೆಲದಲ್ಲಿ ನಿಂತು “ಜಿನ್ನಾ ಜಾತ್ಯಾತೀತರಾಗಿದ್ದರು” ಅನ್ನುವ ಸತ್ಯ ಹೇಳಿದ್ದೆ ಆ ಹಿರಿಯ ಮಾಡಿದ ದೊಡ್ಡ ತಪ್ಪು(!).ಆ ಒಂದು ಮಾತು ಅವರು ಅಲ್ಲಿವರೆಗೂ ದೇಶದ ಮೂಲೆ ಮೂಲೆಗೆ ಹೋಗಿ ಅವರು ಪಕ್ಷಕಟ್ಟಲು ಪಟ್ಟ ಶ್ರಮ,೨ ಸೀಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಪಕ್ಷ ಸಾಗಿ ಬಂದ ಹಾದಿಯಲ್ಲಿ ಅವರು ವಹಿಸಿದ ಜವಬ್ದಾರಿ ಎಲ್ಲವನ್ನು ಮರೆಸಿಹಾಕಿತ್ತು.ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ,ಅಷ್ಟೇ ಸಾಕಿತ್ತು ಅವಮಾನಕಾರಿಯಾಗಿ ಅವರನ್ನು ಪಕ್ಕಕ್ಕೆ  ತಳ್ಳಿ,ಅಲ್ಲಿಯವರೆಗೂ ಮಹಾರಾಷ್ಟ್ರ ಬಿಟ್ಟು ಹೊರಗೆ ಹೆಸರೇ ಕೇಳಿರದ ‘ಯುವ ನಾಯಕ(?)’ ನನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

ಇವತ್ತಿಗೆ ‘ಆ ಹಿರಿಯ’ರನ್ನು ಮರೆತು ಮುಂದೆ ಹೋದ ಆ ಪಕ್ಷದ ಪಾಡು, ಅಹಂಕಾರದಿಂದ ಕೃಷ್ಣ ಪರಮಾತ್ಮನನ್ನು ಬಿಟ್ಟು ಬಿಲ್ವಿದ್ಯೆ ಮರೆತು ನಿಂತ ‘ಅರ್ಜುನ’ನಂತೆಯೇ ಆಗಿದೆ.ಕೂದಲು ಬೆಳೆಯೋ ಜಾಗವೆಲ್ಲ ತಲೆ ಅಂದುಕೊಂಡವರಂತೆ ಆ ಪಕ್ಷದಲ್ಲಿರುವ ಜನರೆಲ್ಲಾ ತಾವೇ ‘ಪ್ರಧಾನಿ ಅಭ್ಯರ್ಥಿ’ಗಳು ಅಂದುಕೊಂಡಿದ್ದಾರೆ.ಅಂದ ಹಾಗೆ,ಆ ಹಿರಿಯರ ಹೆಸರು ಲಾಲ್ ಕೃಷ್ಣ ಅಡ್ವಾಣಿ,ಪಕ್ಷ ಬಿಜೆಪಿ,ಮಾತೃ ಸಂಘಟನೆಯ ಹೆಸರು ‘ಆರ್.ಎಸ್.ಎಸ್’ ಮತ್ತೆ ಆ ಯುವನಾಯಕ(?) ಮೊನ್ನೆ ಮೊನ್ನೆ ತಾನೇ ಎಕರೆಗಟ್ಟಲೆ ರೈತರ ಜಮೀನು ಸ್ವಾಹ ಮಾಡಿದ್ದಾರೆ ಅನ್ನುವ ಆರೋಪ ಹೊತ್ತ ನಿತಿನ್ ಗಡ್ಕರಿ.

ಒಂದೆಡೆ ಗ್ಲಾಮರಸ್(?) ರಾಹುಲ್ ಗಾಂಧೀಯ ಎದುರಿಗೆ ಯಾವುದೇ ಹೊಲಿಕೆಯಲ್ಲೂ ಚಾರ್ಮಿಂಗ್ ಅನ್ನಿಸದ ಗಡ್ಕರಿಯನ್ನು ತಂದು ಕೂರಿಸಿದಾಗಲೇ,ದಿಗ್ವಿಜಯ್ ಸಿಂಗ್ ತಮ್ಮ ಎಂದಿನ ಶೈಲಿಯಲ್ಲೇ ಹೇಳಿದ್ದರು “ಅಲ್ಲಾ ರೀ ಗಲ್ಲ ಪೆಟ್ಟಿಗೆಯಲ್ಲಿ ಕುಳಿತ ಡೀಲರ್ ತರ ಕಾಣೋ ಮನುಷ್ಯನನ್ನು ಹೋಗಿ ಹೋಗಿ ಲೀಡರ್ ಅನ್ನುತ್ತಿರಲ್ಲ” ಅಂತ.ದಿಗ್ವಿಜಯ್ ಸಿಂಗ್ ಅವರಿಗಿರುವ ಆರ್.ಎಸ್.ಎಸ್ ಮೇಲಿನ ಅತಿಯಾದ ಪ್ರೀತಿಯಿಂದಲೋ ಏನೋ ಯಾರು ಆ ಮಾತಿಗೆ ಅಷ್ಟು ಕಿಮ್ಮತ್ತು ಕೊಡಲಿಲ್ಲ.ಆದರೆ ‘ಗಡ್ಕರಿ’ ನೋಡಿದಾಗಲೆಲ್ಲ ನನಗೆ ದಿಗ್ಗಿ ಮಾತು ನೆನಪಾಗುತ್ತಲೇ ಇರುತ್ತದೆ.

ಹೆತ್ತೋರಿಗೆ ಅದೇನೋ ಮುದ್ದು ಅನ್ನೋ ಗಾದೆಯಂತೆ, ಆರ್.ಎಸ್.ಎಸ್ ಗೆ ತಾನು ತಂದು ಕೂರಿಸಿದ ಗಡ್ಕರಿಯ ಮೇಲೆ ಬಹಳ ಪ್ರೀತಿ,ಆ ಕಾರಣದಿಂದಲೇ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತಂದು ಎರಡನೇ ಬಾರಿಗೆ ಅಧ್ಯಕ್ಷ ಪಟ್ಟವನ್ನು ಕರುಣಿಸಿದೆ.ಇನ್ನೊಂದೆಡೆ, ಸಂಘವನ್ನು ಎದುರು ಹಾಕಿಕೊಳ್ಳುವ ಮಟ್ಟಿಗಿನ ವರ್ಚಸ್ಸನ್ನು ಬೆಳೆಸಿಕೊಂಡ ನರೇಂದ್ರ ಮೋದಿಯನ್ನು ಹಣಿಯ ಹೊರಟಿದೆ.ಅದರ ಮೊದಲ ಹಂತವಾಗಿಯೇ,ಮೋಹನ್ ಭಾಗವತ್ ಅವರು ‘ಮೋದಿಗಿಂತ ನಿತೀಶ್ ಒಳ್ಳೆಯ ಮುಖ್ಯಮಂತ್ರಿ’ ಅಂದಿದ್ದು ಅನ್ನಿಸುವುದಿಲ್ಲವೇ? ಕಲ್ಯಾಣ್ ಸಿಂಗ್,ಉಮಾ ಭಾರತಿ ಹಾದಿಯಲ್ಲೇ ಮೋದಿಯನ್ನು ತಡವಿಕೊಳ್ಳಬಹುದು ಅನ್ನುವ ಲೆಕ್ಕಾಚಾರವಿರಬೇಕು.ಆದರೆ,ಮೋದಿ ಕೈ ಕಟ್ಟುವುದು ಕಷ್ಟವಿದೆ.

ಜಾತ್ಯಾತೀತ ಜಿನ್ನಾರನ್ನು ‘ಜಾತ್ಯಾತೀತ’ ಅಂತಲೇ ಸತ್ಯ ನುಡಿದಿದ್ದಕ್ಕೆ ಅಡ್ವಾಣಿಯವರನ್ನು ಮೂಲೆ ಗುಂಪು ಮಾಡಿದ ಸಂಘಕ್ಕೆ ಜಿನ್ನಾ ಮುಸ್ಲಿಂ ಲೀಗ್ಗೆ ಹೋಗುವ ಮೊದಲು ಹೇಗಿದ್ದರೂ ಅನ್ನುವ ಇತಿಹಾಸ ತಿಳಿದಿಲ್ಲವೇ? ಲೋಕಸಭಾ ಚುನಾವಣೆಯ ಮೊದಲೇ ಪ್ರಧಾನಿ ಅಭ್ಯರ್ಥಿಯನ್ನೇ ಅವಮಾನಿಸಿ ಚುನಾವಣೆಯಲ್ಲಿ ಸೋತು ಬಂದ ಮೇಲೂ ಆರ್.ಎಸ್.ಎಸ್ ಗೆ ಅರ್ಥವಾಗದಿರುವುದು,ಬಿಜೆಪಿಯ ವಿಷಯದಲ್ಲಿ ಮೂಗು ತೋರಿಸಬಾರದು ಅನ್ನುವುದು.ಇವತ್ತು ಬಿಜೆಪಿಯಲ್ಲಿ ಅಡ್ವಾಣಿಯವರ ಮಾತಿಗೆ ಕಿಮ್ಮತ್ತಿಲ್ಲದೆ,ಪಕ್ಷದೊಳಗೆ ಅಪಸ್ವರ ಹೆಚ್ಚಾಗಿದೆ ಅಂದರೆ ಅದರ ಟ್ಯೂನ್ ಆರ್.ಎಸ್.ಎಸ್ ನದ್ದೇ.

ಖುದ್ಧು ಗಾಂಧೀಜಿ ಸಹ ಕಾಂಗ್ರೆಸ್ಸಿನಿಂದ ಹೊರ ಬಂದಿದ್ದು ಇದೇ ಕಾರಣಕ್ಕೆ.ಆದರೆ ಕಾಂಗ್ರೆಸ್ಸಿನಿಂದ ಹೊರ ಬಂದ ಮೇಲೆ ಅವರ ಪ್ರಭಾವ ಮೊದಲಿಗಿಂತ ಹೆಚ್ಚಾದ ಹಾಗೆಯೇ ಸಂಘ ನಾವೇ ಬೇರೆ ಅಂತ ಹೇಳುತಿದ್ದರು ಸೂತ್ರ ಇರುವುದು ಯಾರ ಕೈಯಲ್ಲಿ ಅನ್ನುವುದು ಗೊತ್ತಾಗದ ವಿಷಯವೇನಲ್ಲ.ಯಡಿಯೂರಪ್ಪ ಕುರ್ಚಿಯಿಂದ ಇಳಿದಿದ್ದು ಆರೋಪ ಬಂದಾಗಲೇ ಅಲ್ಲವೇ,ಇವತ್ತು ಬಿಜೆಪಿ ಅವರನ್ನು ದೂರ ಇಡುವುದರ ಹಿಂದೆ ಆರ್.ಎಸ್.ಎಸ್ ನ ಅಭಯವಿಲ್ಲದೆ ಅನ್ನಿಸುತ್ತದಾ? ಗಡ್ಕರಿ ವಿಷಯದಲ್ಯಾಕೆ ಯಾವ ಕ್ರಮವೂ ಇಲ್ಲ?

ಕೇಜ್ರಿವಾಲ್ ಆರೋಪ ಮಾಡಿ ೨ ದಿನ ಕಳೆಯಿತು,ಇದಕ್ಕೂ ಮೊದಲೇ ಮಹಾರಾಷ್ಟ್ರ ನೀರಾವರಿ ಹಗರಣದ ಬಗ್ಗೆ ದನಿಯೆತ್ತಲು ಸಹಕರಿಸಿ ಅಂತ ಕೇಳಿಕೊಂಡು ಗಡ್ಕರಿ ಮನೆಗೆ ಹೋದಾಗ “ನಾವು ಅವರ ನಾಲ್ಕು ಕೆಲಸ ಮಾಡಿಕೊಡುತ್ತೇವೆ,ಅವರು ನಮ್ಮ ನಾಲ್ಕು ಕೆಲಸ ಮಾಡಿಕೊಡುತ್ತೇವೆ” ಅಂದಿದ್ದರು ಅಂತ ‘ಐ.ಎ.ಸಿ ಮತ್ತು ಆರ್.ಟಿ.ಐ ಕಾರ್ಯಕರ್ತೆ’ ಅಂಜಲಿ ದಮಾನಿಯ ಮೊದಲೇ ಆರೋಪಿಸಿದ್ದರು.ಬಿಜೆಪಿ ಪಕ್ಷವೇನೋ ಸೇನಾಧಿಪತಿಗಳನ್ನೆಲ್ಲ ಬಿಟ್ಟು ದಳಪತಿಯನ್ನು ಸಮರ್ಥಿಸಿಕೊಂಡಿದೆ.ಏನು ಸಮರ್ಥಿಸಿಕೊಂಡರೇನು ಬಂತು?  ಮಾತು ಮಾತಿಗೆ ‘ನಮ್ ದೇಶ,ನಮ್ ಮಣ್ಣು’ ಅನ್ನುತಿದ್ದ ಪಕ್ಷದ ಮಣ್ಣಿನ ಮೇಲಿನ ಪ್ರೇಮ ಕರ್ನಾಟಕದ ಗಡಿ ದಾಟಿ ಮಹಾರಾಷ್ಟ್ರಕ್ಕೂ ಹಬ್ಬಿರುವುದು ಚೆನ್ನಾಗಿಯೇ ಅರಿತಿದ್ದಾರೆ. ಪ್ರಾಮಾಣಿಕತೆಯಿಲ್ಲದ ರಾಷ್ಟ್ರೀಯತೆಯಿಂದ್ಯಾವ ಪ್ರಯೋಜನ ಅಲ್ಲವೇ?

ಚಿತ್ರ ಕೃಪೆ :topnews.in

4 ಟಿಪ್ಪಣಿಗಳು Post a comment
 1. Sreedhara Sharma. G.T.
  ಆಕ್ಟೋ 20 2012

  ಆತ್ಮೀಯರೇ, ಆ ಕಾಂಗ್ರಸ್ ಸಾಕು ಎಂದು ಈ ಬಿ.ಜೆ.ಪಿ. ತಂದರೆ ಇವರು ಸಾಕಪ್ಪಾ ಸಾಕು ಎನ್ನುವಂತಾಯಿತು. ಮುಂದಿನ ಬಾರಿ ಮತದಾನ ಮಾಡಲೇ ಹೆದರಿಕೆಯಾಗುತ್ತಿದೆ!.

  ಉತ್ತರ
 2. Kumar
  ಆಕ್ಟೋ 23 2012

  > ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ
  > ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ
  ರಾಜಕಾರಣಿಗಳೂ ೭೦ ವರ್ಷ ವಯಸ್ಸಿನ ನಂತರ ರಾಜಕೀಯದಿಂದ ನಿವೃತ್ತಿಯಾಗಬೇಕೆಂಬುದು ಆರೆಸ್ಸೆಸ್ಸಿನ ಬಹುದಿನಗಳ ನೀತಿ.
  ಕು.ಸೀ.ಸುದರ್ಶನ್‌ಜೀಯವರು ವಾಜಪೇಯೀ ಪ್ರಧಾನಿಯಾಗುವುದಕ್ಕೆ ಬಹಳ ಮೊದಲೇ “ವಾಜಪೇಯೀ ಮತ್ತು ಅದ್ವಾಣಿಯವರು ನಿವೃತ್ತರಾಗಬೇಕು; ಅವರಿಗಿಂತ ಕಿರಿಯರಿಗೆ ಜಾಗ ಮಾಡಿಕೊಡಬೇಕು” ಎಂದು ಹೇಳಿದ್ದರು. ಭಾಜಪದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದ ನಾನಾಜಿ ದೇಶ್‌ಮುಖ್ ಇದಕ್ಕೆ ಉದಾಹರಣೆಯನ್ನೂ ಹಾಕಿಕೊಟ್ಟರು. ೧೯೮೦ರಲ್ಲಿ ಅವರಿಗೆ ೬೦ ವರ್ಷ ವಯಸ್ಸಾದಾಗ ರಾಜಕೀಯದಿಂದ ನಿವೃತ್ತರಾಗಿ ಸಾಮಾಜಿಕ ಸೇವೆಗಳಲ್ಲಿ ತೊಡಗಿದರು – ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಸುಮಾರು ೫೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಪೂರ್ಣ ವಿಕಾಸದ ಖ್ಯಾತಿ ಅವರದು. ಮಧ್ಯಪ್ರದೇಶದ ಗೋಂಡಾ ಮತ್ತು ಮಹಾರಾಷ್ಟ್ರದ ಬೀಡ್ ಗ್ರಾಮಗಳನ್ನು ನೋಡಿದರೆ, ನಾನಾಜಿ ದೇಶ್‌ಮುಖ್‌ರವರ ಕಾರ್ಯದ ಹಿರಿಮೆ ತಿಳಿಯುತ್ತದೆ.
  ಹೀಗಾಗಿ, ಅದ್ವಾಣಿಯವರಿಗೆ ವಯಸ್ಸಾಯಿತೆಂಬ ಸಂಗತಿ “ಜಿನ್ನಾ ಹೇಳಿಕೆ”ಯ ನಂತರ ದುತ್ತೆಂದು ಉದ್ಭವವಾಗಿದ್ದಲ್ಲ.

  > ಖುದ್ಧು ಗಾಂಧೀಜಿ ಸಹ ಕಾಂಗ್ರೆಸ್ಸಿನಿಂದ ಹೊರ ಬಂದಿದ್ದು ಇದೇ ಕಾರಣಕ್ಕೆ.
  ನನಗೆ ಈ ವಿಷಯ ತಿಳಿಯದು. ಗಾಂಧೀಜಿಯವರು ಯಾವಾಗ ಕಾಂಗ್ರೆಸ್ ಬಿಟ್ಟರು ಎಂಬುದನ್ನು ದಯವಿಟ್ಟು ತಿಳಿಸಿ.

  > ಕೇಜ್ರಿವಾಲ್ ಆರೋಪ ಮಾಡಿ ೨ ದಿನ ಕಳೆಯಿತು,
  ಕೇಜ್ರೀವಾಲ್ ಅವರು ನಿತಿನ್ ಗಡ್ಕರಿಯವರ ಕುರಿತಾದ ಆರೋಪದ ಬಗ್ಗೆ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ನೀವು ನೋಡಿದ್ದರೆ ಚೆನ್ನಾಗಿತ್ತು. “ನಾವು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದೆವು. ನಮಗೆಲ್ಲಾ ಬಹಳ ನಿರಾಸೆಯಾಗಿದೆ” ಎಂದು ಡಿಗ್ಗಿ ಸಿಂಗ್ ಸಿ.ಎನ್.ಎನ್-ಐ.ಬಿ.ಎನ್ ಎದುರು ಹೇಳಿದರು. ಕಾಂಗ್ರೆಸ್ಸಿನ ಸಾಲುಸಾಲು ಬೃಹತ್ ಹಗರಣಗಳನ್ನು ಹೊರಗೆಳೆಯುತ್ತಿರುವಾಗ, “ಕೇಜ್ರೀವಾಲ್ ಭಾಜಪದ ಏಜೆಂಟ್” ಎಂದು ಡಿಗ್ಗಿ ಸಿಂಗ್ ಹೇಳಿಕೆಯನ್ನು ಸುಳ್ಳು ಮಾಡುವುದಕ್ಕಾಗಿ, ನಿತಿನ್ ಗಡ್ಕರಿಯವರ ಮೇಲೆ ಆರೋಪಕ್ಕೆ ಪ್ರಯತ್ನಿಸಲಾಯಿತೆಂಬುದು ನಿಮಗೆ ತಿಳಿದೇ ಇರುತ್ತದೆ. ಮತ್ತು ಈ ಆರೋಪದ ಪೂರ್ವಾಪರಗಳನ್ನು ವಿಚಾರಿಸದೆ, ಕೇವಲ “ಆರೋಪಿಸಿ ೨ ದಿನಗಳಾದರೂ……” ಎಂದು ನೀವು ಹೇಳುವುದು ಕಂಡರೆ ಆಶ್ಚರ್ಯವೆನಿಸುತ್ತದೆ. ೨ ದಿನಗಳೇ ಆಗಲಿ, ೨೦ ದಿನಗಳೇ ಆಗಲಿ, ಆರೋಪದಲ್ಲಿ ಹುರುಳಿಲ್ಲದಿದ್ದರೆ ನಿತಿನ್ ಗಡ್ಕರಿಯಾಗಲೀ ಆರೆಸ್ಸೆಸ್ ಆಗಲೀ ಏನು ಮಾಡಲು ಸಾಧ್ಯ?

  > ದಿಗ್ವಿಜಯ್ ಸಿಂಗ್ ತಮ್ಮ ಎಂದಿನ ಶೈಲಿಯಲ್ಲೇ ಹೇಳಿದ್ದರು “ಅಲ್ಲಾ ರೀ ಗಲ್ಲ ಪೆಟ್ಟಿಗೆಯಲ್ಲಿ ಕುಳಿತ
  > ಡೀಲರ್ ತರ ಕಾಣೋ ಮನುಷ್ಯನನ್ನು ಹೋಗಿ ಹೋಗಿ ಲೀಡರ್ ಅನ್ನುತ್ತಿರಲ್ಲ” ಅಂತ.
  ಅದಕ್ಕೆ ದಿಗ್ವಿಜಯ್ ಸಿಂಗ್‌ರಿಗೆ ಏಕೆ ಬೇಸರ? ಆವರಿಗೆ ಇದರಿಂದ ಖುಷಿಯೇ ಆಗಬೇಕಲ್ಲವೇ? ಇಂತಹ ವರ್ಚಸ್ಸಿಲ್ಲದ ನಾಯಕನಿಂದ ಭಾಜಪ ಅಧಿಕಾರಕ್ಕೆ ಬರಲಾಗದಿದ್ದರೆ ಕಾಂಗ್ರೆಸ್ಸಿಗಲ್ಲವೇ ಲಾಭ?

  > ಯಡಿಯೂರಪ್ಪ ಕುರ್ಚಿಯಿಂದ ಇಳಿದಿದ್ದು ಆರೋಪ ಬಂದಾಗಲೇ ಅಲ್ಲವೇ,ಇವತ್ತು ಬಿಜೆಪಿ ಅವರನ್ನು ದೂರ
  > ಇಡುವುದರ ಹಿಂದೆ ಆರ್.ಎಸ್.ಎಸ್ ನ ಅಭಯವಿಲ್ಲದೆ ಅನ್ನಿಸುತ್ತದಾ? ಗಡ್ಕರಿ ವಿಷಯದಲ್ಯಾಕೆ ಯಾವ ಕ್ರಮವೂ ಇಲ್ಲ?
  ಯಡ್ಯೂರಪ್ಪ ಕುರ್ಚಿಯಿಂದ ಇಳಿದದ್ದು ಆರೋಪ ಬಂದಾಗ ಅಲ್ಲ. ಆರೋಪದ ಕುರಿತಾಗಿ ತನಿಖೆ ನಡೆಯಬೇಕೆಂದು ನ್ಯಾಯಾಲಯ ತಿಳಿಸಿದ ನಂತರ ಲೋಕಾಯುಕ್ತ ತನಿಖೆಯನ್ನು ಕೈಗೆತ್ತಿಕೊಂಡಾಗ.
  ಆರೆಸ್ಸೆಸ್ಸಿಗೆ ಯೆಡ್ಯೂರಪ್ಪ ಮತ್ತು ಗಡ್ಕರಿ ಇಬ್ಬರೂ ಒಂದೇ. ತಪ್ಪು ಮಾಡಿದ್ದರೆ ಆರೆಸ್ಸೆಸ್ ಅದನ್ನು ಖಂಡಿತ ಕ್ಷಮಿಸುವುದಿಲ್ಲ. ಆದರೆ, ಆರೆಸ್ಸೆಸ್ ತಾನೇ ಕ್ರಮ ಕೈಗೊಳ್ಳುವುದಿಲ್ಲ. ಅದನ್ನು ಭಾಜಪದ ಗಮನಕ್ಕೆ ತರಲಾಗುತ್ತದೆ ಅಷ್ಟೇ. ಯೆಡ್ಯೂರಪ್ಪ ವಿಷಯದಲ್ಲಿಯೂ ಆರೆಸ್ಸೆಸ್ ಕ್ರಮ ಕೈಗೊಳ್ಳಲಿಲ್ಲ. ಹಾಗೇನಾದರೂ ಆಗಿದ್ದರೆ, ಯೆಡ್ಯೂರಪ್ಪ ಮುಖ್ಯಮಂತ್ರಿಯಾಗುವುದೇ ಕಷ್ಟವಾಗುತ್ತಿತ್ತು.

  ಉತ್ತರ
  • ಆಕ್ಟೋ 30 2012

   ಅಡ್ವಾಣಿಯವರಿಗೆ ವಯಸ್ಸಾಯಿತೆಂಬ ಸಂಗತಿ “ಜಿನ್ನಾ ಹೇಳಿಕೆ”ಯ ನಂತರ ದುತ್ತೆಂದು ಉದ್ಭವವಾಗಿದ್ದಲ್ಲ,ಸರಿ ಒಪ್ಪೋಣ.ಆದರೆ “ಜಿನ್ನಾ” ಬಗ್ಗೆ ಅಡ್ವಾಣಿ ಸತ್ಯವನ್ನೇ ಹೇಳಿದ್ದರು.ಆ ಸತ್ಯವನ್ನು ಅರಗಿಸಿಕೊಳ್ಳಲು ಸಂಘಕ್ಕೆ ಕಸಿವಿಸಿಯಾಗಿ ಅಡ್ವಾಣಿಯಂತ ಹಿರಿಯರಿಗೆ ಅಪಮಾನಿಸಿತು ಅನ್ನುವುದು ಸುಳ್ಳೆ?

   >ನನಗೆ ಈ ವಿಷಯ ತಿಳಿಯದು. ಗಾಂಧೀಜಿಯವರು ಯಾವಾಗ ಕಾಂಗ್ರೆಸ್ ಬಿಟ್ಟರು ಎಂಬುದನ್ನು ದಯವಿಟ್ಟು ತಿಳಿಸಿ.

   ೧೯೩೪ರ ಅಕ್ಟೋಬರ್ ನಲ್ಲಿ ಗಾಂಧೀಜಿ ಕಾಂಗ್ರೆಸ್ಸ್ ಬಿಟ್ಟರು,ಬಿಟ್ಟ ನಂತರ ತೆಪ್ಪಗಿದ್ದಿದ್ದರೆ ಕಾಂಗ್ರೆಸ್ಸಿಗೆ ನೇತಾಜಿಯ ನಾಯಕತ್ವ ಸಿಕ್ಕಿರುತಿತ್ತು…!

   ಗಡ್ಕರಿಯ ಬಗ್ಗೆ “ಪೂರ್ತಿ” ವರದಿಗಳು ಹೊರ ಬಂದಿವೆಯಲ್ಲವೇ ಈಗ? ಮೊದಲಿಗೆ ಗಡ್ಕರಿಗೂ ನಮಗು ಸಂಬಂಧವಿಲ್ಲ ಅಂದ ಸಂಘ ಈಗ ಬೆನ್ನಿಗೆ ನಿಂತಿದೆ.ಸಮರ್ಥಿಸಿಕೊಳ್ಳಲೇಬೇಕು ಅನ್ನುವುದಾದರೆ ಎಲ್ಲವನ್ನೂ ಸಮರ್ಥಿಸಿಕೊಳ್ಳಬಹುದು.ಕಾಂಗ್ರೆಸ್ಸಿನ ಸಿಬಲ್,ಚಿದಂಬರಂ,ದಿಗ್ಗಿ ಶೈಲಿಯಲ್ಲಿ.ಆದರೆ ತತ್ವ,ಸಿದ್ಧಾಂತ,ನೈತಿಕತೆಯ ಬಗ್ಗೆ ಮಾತನಾಡುವ ಸಂಘವು ಕಾಂಗ್ರೆಸ್ಸಿನ ಹಾದಿಯ ಹಿಡಿದಂತೆ ಅನ್ನಿಸುತ್ತಿಲ್ಲವೇ?

   >>ಆರೆಸ್ಸೆಸ್ಸಿಗೆ ಯೆಡ್ಯೂರಪ್ಪ ಮತ್ತು ಗಡ್ಕರಿ ಇಬ್ಬರೂ ಒಂದೇ. ತಪ್ಪು ಮಾಡಿದ್ದರೆ ಆರೆಸ್ಸೆಸ್ ಅದನ್ನು ಖಂಡಿತ ಕ್ಷಮಿಸುವುದಿಲ್ಲ. ಆದರೆ, ಆರೆಸ್ಸೆಸ್ ತಾನೇ ಕ್ರಮ ಕೈಗೊಳ್ಳುವುದಿಲ್ಲ. ಅದನ್ನು ಭಾಜಪದ ಗಮನಕ್ಕೆ ತರಲಾಗುತ್ತದೆ ಅಷ್ಟೇ.

   ಅಡ್ವಾಣಿಯವರನ್ನು ಜಿನ್ನಾ ಕೇವಲ ಹೇಳಿಕೆಗಾಗಿ ದೂರ ಇಡಬಲ್ಲಷ್ಟು ತಾಕತ್ತಿರುವ ಸಂಘಕ್ಕೆ ರೈತರ ಭೂಮಿಯ ಕದ್ದ ಆರೋಪ ಮಾಡಿದವನ್ನು ದೂರ ಇಡಲು ಸಾಧ್ಯವಾಗಿಲ್ಲವೇಕೆ?ಯಡ್ಡಿಯನ್ನು ನಾನು ಸಮರ್ಥಿಸುವುದಿಲ್ಲ.ಉಪ್ಪು ತಿಂದವರು ನೀರು ಕುಡಿಯಲೇಬೇಕು.ಅದು ಒಂದು ಚಮಚವಾದರೂ ಸರಿ ಒಂದು ತಟ್ಟೆಯಾದರು ಸರಿ.ಸಂಘದ ಡಬಲ್ ಸ್ಟಾಂಡರ್ಡ್ ಗೆ ಕನ್ನಡಿ ಬೇಕಿಲ್ಲ ಅನ್ನಿಸುತ್ತದೆ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments