ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2012

ಸ್ವಾಮಿ ವಿವೇಕಾನಂದರ ಪದತಳದಲ್ಲಿ ಅರಳಿದ ಕುಸುಮ ಭಗಿನಿ ನಿವೇದಿತಾ

‍ನಿಲುಮೆ ಮೂಲಕ

– ಶ್ರೀವಿದ್ಯಾ,ಮೈಸೂರು

ಇಂದು ನಮ್ಮ ಸೋದರಿ ನಿವೇದಿತಾ ಅವರ ಜನ್ಮದಿನ. ನಿವೇದಿತಾ ಅವರ ಜೀವನವನ್ನು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದವರು. ಉದಾರ ಮನಸ್ಸು ಅವರದ್ದು. ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸ್ಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆಶಾಲೆಗಳು ಇರಲಿಲ್ಲ. ಜ್ಞಾನವೂ ಕಡಿಮೆಯಿತ್ತು. ಆದರೆ, ಈ ಕಾಲದಲ್ಲಿ ನೋಡಿ, ಎಷ್ಟೋ ಮಹಿಳೆಯರು ವಿದ್ಯಾವಂತರಾಗಿ ಜೀವನ ನಡೆಸುತ್ತಿರುವರು.ಇದೆಲ್ಲಾ ನಿವೇದಿತಾ ಅವರ ಪರಿಶ್ರಮದಿಂದ ! ನಿವೇದಿತಾ ಅವರು ಮನೆ ಮನೆಗಳಿಗೆ ಹೋಗಿ ಮನವೊಲಿಸಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಜಾಗೃತಿ ಮೂಡಿಸಿ ಅನೇಕ ಶಾಲೆಗಳನ್ನು ಕಟ್ಟಿಸಿದರು. ಅಲ್ಲದೇ, ಪ್ಲೇಗ್ ರೋಗ ಬಂದಿದ್ದಾಗ ಜನರ ಸೇವೆ ಮಾಡಿದರು. ಅವರು ಅಸಾಮಾನ್ಯ ಮಹಿಳೆ. ಅವರ ದೇಶವನ್ನು ಬಿಟ್ಟು ಬಂದಾಗಲೂ ಅವರ ಮನಸ್ಸಿನಲ್ಲಿ ಅವರ ದೇಶದ ಜನರು ಅವರನ್ನು ದೂರವಿಡುತ್ತಾರೆಂದು ಹಿಂಸೆ, ನೋವಾಗುತ್ತಿತ್ತು. ಆದರೂ, ಭಾರತ ದೇಶಕ್ಕೆ ಅದೆಲ್ಲ ತ್ಯಾಗ ಮಾಡಿದ್ದು ಅವರ ಪ್ರೀತಿ, ಗೌರವ ದೊಡ್ಡದು ಅಲ್ಲವೇ ? ಅವರು ನಮ್ಮವರೇ ಎಂದು ಅವರ ಜನ್ಮದಿನವನ್ನು ನೆನೆಸಿಕೊಂಡು ಆಚರಿಸೋಣ

ಅವರ ಜೀವನವನ್ನು ತಿಳಿಸುತ್ತಿದ್ದೇನೆ…

೧೮೬೭ರ ಅಕ್ಟೋಬರ್ ೨೮ರಂದು ಮಾರ್ಗರೆಟ್ ಎಲಿಜಬೆತ್ ನೊಬೆಲ್(ನಿವೇದಿತಾ) ಐರ್ಲೆ೦ಡಿನಲ್ಲಿ ಹುಟ್ಟಿದಳು.ತಾಯಿ ಮೇರಿ ಇಸಬೆಲ್, ತಂದೆ ಸಾಮ್ಯುಅಲ್. ಐರ್ಲೆ೦ಡಿನಲ್ಲಿ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿದ್ದಾಗ ಅವಳ ಅಜ್ಜ ಹ್ಯಾಮಿಲ್ಟನ್ ಭಾಗವಹಿಸಿ, ಮನೆಮಾತಾಗಿದ್ದರು. ತಮ್ಮ ಅಜ್ಜನಿಂದ ಅಪಾರವಾದ ಧೈರ್ಯ ಮತ್ತು ದೇಶಭಕ್ತಿ, ಧರ್ಮಗುರುವಾದ ತಂದೆಯಿಂದ “ಮಾನವ ಸೇವೆಯೇ ಭಗವಂತನ ಸೇವೆ” ಎಂಬ ಆದರ್ಶಗಳನ್ನು ಬಾಲ್ಯದಿಂದಲೇ ಅವಳು ರೂಢಿಸಿಕೊಂಡಿದ್ದಳು. ಅಷ್ಟೇ ಅಲ್ಲ, ದಾಷ್ಟ್ರಭಕ್ತಿ, ದೈವಭಕ್ತಿ ಜೊತೆಯಾಗಿ ಅವಳ ಹೃದಯದಲ್ಲಿ ಬೆಳೆದವು. ದುಃಖದಲ್ಲಿರುವವರನ್ನು ಅನುಕಂಪದಿಂದ ಕಾಣುವ ಗುಣ ಬೆಳೆದವು. ಶಾಲೆಯಲ್ಲೂ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದಳು. ರಗ್ಬಿ ಎನ್ನುವ ಸ್ಥಳದಲ್ಲಿ ಹೆಣ್ಣುಮಕ್ಕಳ ಉಚಿತ ಅನಾಥಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದಳು. ನಂತರ, ರೆಕ್ಸ್ ಹಾಮ್ ಎನ್ನುವ ಗಣಿಕೇಂದ್ರದಲ್ಲಿದ್ದ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಸಮಾಜ ಸೇವಕಿಯಾಗಿಯೂ ಕೆಲಸ ಪ್ರಾರಂಭಿಸಿದಳು.೧೮೯೨ರಲ್ಲಿ ತನ್ನದೇ ಸ್ವಂತ ಶಾಲೆಯನ್ನು ಪ್ರಾರಂಭಿಸಿದಳು. ಈ ಶಾಲೆ ಬಹುಬೇಗ ಜನಪ್ರಿಯವಾಯಿತು. ಅವಳು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಮದುವೆ ಮುರಿದುಬಿತ್ತು. ೧೮೯೫, ಮಾರ್ಗರೆಟ್ ಸ್ವಾಮಿ ವಿವೇಕಾನಂದರನ್ನು ಕಂಡ ವರ್ಷ. ಅದು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹತ್ವದ ವರ್ಷ. ಈ ಭೇಟಿಯ ನಂತರ ಅವಳು ಸ್ವಾಮೀಜಿಯ ಮಾತು-ಬರಹಗಳನ್ನು ಮತ್ತೆ-ಮತ್ತೆ ಓದಿದಳು. ಭಾರತೀಯ ತತ್ವಶಾಸ್ತ್ರ, ಉಪನಿಷತ್ತು, ಭಗವದ್ಗೀತೆಯನ್ನು ಅಧ್ಯಯನ ಮಾಡಿ ಚರ್ಚೆ ಮಾಡಿದಳು. ಕ್ರಮೇಣ ಅವಳ ಸಂಶಯಗಳೆಲ್ಲ ದೂರವಾದವು. ವಿವೇಕಾನಂದರು ಭಾರತದ ಬಡಮಕ್ಕಳ, ಸ್ತ್ರೀಯರ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಿರುವಾಗ ಮಾರ್ಗರೆಟ್ ” ನಾನು ಸಿದ್ಧಳಾಗಿದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದಳು.

ಭಾರತಕ್ಕೆ ಬಂದಮೇಲೆ ಕಲ್ಕತ್ತೆಯ ಬೇಲೂರು ಮಠದ ಅತಿಥಿಗೃಹದಲ್ಲಿದ್ದರು. ಅವಳ ಶಿಕ್ಷಣ ಪ್ರಾರಂಭವಾಯಿತು. ಪಾಶ್ಚಾತ್ಯ ಮಹಿಳೆಯರಿಗೆ ಬೋಧನೆ ಮಾಡುತ್ತಿದ್ದಳು. ಇಲ್ಲಿಯ ಜನರ ಕೆಲವು ಭಾವನೆಗಳು, ಆಚರಣೆಗಳು ಅವಳಿಗೆ ಒರಟಾಗಿ, ವಿಚಿತ್ರವಾಗಿ ಕಾಣುತ್ತಿದ್ದವು. ಆದರೂ ಅವರು ಗೌರವದಿಂದ, ತಾಳ್ಮೆಯಿಂದ ಸಹಿಸಿಕೊಂಡರು. ಈ ದೇಶದಲ್ಲಿಯೇ ಹುಟ್ಟಿಬೆಳೆದವಳಂತೆ ಭಾರತೀಯರೊಡನೆ ಹೊಂದಿಕೊಳ್ಳತೊಡಗಿದಳು. ೧೮೯೮ ರ ಮಾರ್ಚ್ ೧೭ರಂದು ಶ್ರೀಮಾತೆ ಶಾರದಾದೇವಿಯವರನ್ನು ಭೇಟಿಯಾದರು. ಬೇಲೂರು ನಿವೇಶನದ ಬಳಿ ಇದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವಳಿಗೆ ‘ನಿವೇದಿತಾ !’ ಎಂಬ ನೂತನ ಹೆಸರಿಟ್ಟರು.

೧೮೯೮ ರ ನವೆಂಬರ್ ೧೩ರಂದು ನಿವೇದಿತಾಳ ಶಾಲೆ ಪ್ರಾರಂಭವಾಯಿತು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ನಿವೇದಿತಾ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪರಿಶ್ರಮ ಪಟ್ಟರು. ಸ್ವಾಮೀಜಿ ಶಾಲೆಯನ್ನು ನಡೆಸಲು ನಿವೇದಿತಾಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಮಹಿಳೆಯರ ಉನ್ನತಿಗಾಗಿ ಶ್ರಮಿಸುವವರು ಹೇಗಿರಬೇಕು ಎಂದು ಅವಳಿಗೆ ವಿವರಿಸುತ್ತಿದ್ದರು. ಈ ಉದ್ದೇಶಕ್ಕಾಗಿ ಅವಳು ತನ್ನನ್ನೇ ಸರ್ಮಪಿಸಿಕೊಂಡಳು. ಕ್ರಮೇಣ ನಿವೇದಿತಾ ಬೇರೆ ದೇಶದವಳು ಎನ್ನುವುದನ್ನು ಕಲ್ಕತ್ತೆಯ ಜನರು ಮರೆಯುತ್ತ ಬಂದರು. ಬ್ರಹ್ಮ ಸಮಾಜದಲ್ಲಿ ಉಪನ್ಯಾಸ ಕೊಡಲು ಆರಂಭಿಸಿದ್ದು ಅವಳಿಟ್ಟ ಮೊದಲ ಹೆಜ್ಜೆ. ಕಲ್ಕತ್ತೆಗೆ ಪ್ಲೇಗ್ ಕಾಯಿಲೆ ಕಾಲಿಟ್ಟಿತು. ಅವಳು ಹಿಂಜರಿಯದೆ ಗಲ್ಲಿಗಳನ್ನು ರಸ್ತೆಗಳನ್ನು ಶುಚಿ ಮಾಡಿದಳು. ಒಂದು ತಿಂಗಳು ಎದೆಬಿಡದೆ ರೋಗಿಗಳ ಸೇವೆ ಮಾಡಿದಳು. ಕ್ರಮೇಣ ಪ್ಲೇಗ್ ಕಡಿಮೆಯಾಯಿತು. ಅವಳ ಸೇವೆಯನ್ನು ಕಂಡವರು ಅವಳನ್ನು ತಮ್ಮ ಅಕ್ಕಳೆಂದು ಭಾವಿಸಿ ಪ್ರೀತಿಯಿಂದ ಗೌರವಿಸಿದರು. ಅವಳು ಕಲ್ಕತ್ತೆಯ ಜನರ ಕೃತಜ್ಞತೆಗೆ ಪಾತ್ರಳಾದಳು. ತನ್ನನ್ನು ರಾಮಕೃಷ್ಣ ಮಹಾಸಂಘದ ಅಜೀವ ಸದಸ್ಯೆಯನ್ನಾಗಿ ಮಾಡಿಕೊಳ್ಳಲು ಸ್ವಾಮೀಜಿಯವರನ್ನು ಪ್ರಾರ್ಥಿಸಿದಳು. ೧೮೯೯ ರ ಮಾರ್ಚ್ ೨೫ ಕ್ಕೆ ಅವಳು ಗುರುವಿನಿಂದ ಮಂತ್ರದೀಕ್ಷೆಯನ್ನು ಪಡೆದು ಸರಿಯಾಗಿ ಒಂದು ವರ್ಷವಾಗಿತ್ತು. ಒಂದು ವರ್ಷಕ್ಕೆ ಸರಿಯಾಗಿ ನಿವೇದಿತಾ ಗುರುವಿನಿಂದ ನೈಷ್ಠಿಕ ಬ್ರಹ್ಮಚರ್ಯದ ದೀಕ್ಷೆಯನ್ನು ಪಡೆದಳು.

ನಿವೇದಿತಾ ನಡೆಸುತ್ತಿದ್ದ ಶಾಲೆ ಕಷ್ಟಗಳ ಸುಳಿಯಲ್ಲಿ ಸಿಕ್ಕಿತ್ತು. ಹಣಕ್ಕಾಗಿ ಪರದಾಟ, ಆದರೂ ಕಷ್ಟಪಟ್ಟು ಹೇಗೋ ಶಾಲೆ ನಡೆಸುತ್ತಿದ್ದಳು. ಭಾರತದ ಜನ, ಸಂಸ್ಕೃತಿ, ತತ್ವಶಾಸ್ತ್ರ ಮುಂತಾದವುಗಳ ಬಗ್ಗೆ ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದಳು. ಇಂಗ್ಲೆಂಡಿನಲ್ಲಿ ಭಾರತದ ಪರವಾದ ಪ್ರಚಾರವನ್ನು ಮಾಡಿ ಮುಖ್ಯವಾದ ಸ್ಥಳಗಳಲ್ಲಿ ಉಪನ್ಯಾಸಗಳನ್ನು ಕೊಟ್ಟಳು. ಇಂಗ್ಲೆಂಡಿನಲ್ಲಿ ಭಾರತದ ಅವಳ ಶಾಲೆಗಾಗಿ ತಕ್ಕಷ್ಟು ಹಣ ಸಂಗ್ರಹವಾಯಿತು. ೧೯೦೨ ಜುಲೈ ೪ರಂದು ಸ್ವಾಮೀಜಿ ತನ್ನ ದೇಹತ್ಯಾಗ ಮಾಡಿದ್ದು ನಿವೇದಿತಾಳಿಗೆ ಆದ ಆಘಾತ ಅಷ್ಟಿಷ್ಟಲ್ಲ, ಈ ಜಗತ್ತಿನಲ್ಲಿ ತನಗಿದ್ದ ಏಕೈಕ ಬಂಧುವನ್ನು ಕಳೆದುಕೊಂಡು ನಿರ್ಗತಿಕಳಾಗಿದ್ದಂತೆ ಅವಳಿಗನ್ನಿಸಿತು. ಅವಳು ಅಸಾಧಾರಣ ಮಹಿಳೆ, ಆಕೆ ಧೀರಪುರುಷ ಸಿಂಹನ ಧೀರ ಶಿಷ್ಯೆ. ತನ್ನ ಗುರುವು ಕೈಗೊಂಡ ಕೆಲಸವನ್ನು ಮುಂದುವರಿಸುವುದೇ ತನ್ನ ಪರಮ ಕರ್ತವ್ಯವೆಂದು ಭಾವಿಸಿದಳು. ಅವಳಿಗೆ ಈಗ ಮುಖ್ಯವಾಗಿ ಕಂಡದ್ದು ಭಾರತದ ಸ್ವಾತಂತ್ರ್ಯ. ದಾಸ್ಯವನ್ನು ಅನುಭವಿಸುತ್ತಿರುವ ದೇಶವು ಏನನ್ನೂ ಹೇಳಹೊರಟರೂ ಅದಕ್ಕೆ ಬೆಲೆಯಿರುವುದಿಲ್ಲ ಎಂದು ಅವಳಿಗನ್ನಿಸಿತು. ನಿವೇದಿತಾ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳಿಂದ ಆಕರ್ಷಿತಳಾಗಿ ಭಾರತಕ್ಕೆ ಬಂದಳು, ಅವಳು ಆಧ್ಯಾತ್ಮಿಕ ವಿಕಾಸಕ್ಕಾಗಿ ಭಾರತದಲ್ಲಿದ್ದಾಳೆ ಎಂದು ಮಠದ ಇತರರಿಗೂ ಭಾವನೆಯಿತ್ತು.

ನಿವೇದಿತಾ ಯೋಚಿಸಿದಳು : ‘ರಾಮಕೃಷ್ಣ ಮಹಾಸಂಘ ಒಂದು ಆಧ್ಯಾತ್ಮಿಕ ಸಂಸ್ಥೆ. ಜನತೆಯ ಸೇವೆಯೇ ಅದರ ಮುಖ್ಯಗುರಿ. ತಾನು ಒಂದು ವೇಳೆ ರಾಜಕೀಯವನ್ನು ಪ್ರವೇಶಿಸಿದರೆ, ಅದರ ಪರಿಣಾಮ ರಾಮಕೃಷ್ಣ ಮಹಾಸಂಘದ ಮೇಲೆ ಆಗಬಾರದು.’ “ನನ್ನ ಕರ್ತವ್ಯ ಇಡೀ ದೇಶವನ್ನು ಎಚ್ಚರಗೊಳಿಸುವುದೇ ಹೊರತು ಕೆಲವು ಸ್ತ್ರೀಯರ ಮೇಲೆ ಪ್ರಭಾವ ಬೀರುವದಲ್ಲ” ಎಂದು ತನ್ನ ಗೆಳತಿ ಮಿಸ್ ಮ್ಯಾಕ್ಲಿಯಡ್‍ಳಿಗೆ ಬರೆದಳು.ಭಾರತದ ಬೇರೆ ಬೇರೆ ಸ್ಥಳಗಳಿಗೆ ಹೋಗಲು ನಿರ್ಧಾರ ಮಾಡಿದಳು.
ಮುಂಬಯಿಯಲ್ಲಿ ಉಪನ್ಯಾಸ ನೀಡಿ ಪಾಶ್ಚಾತ್ಯ ದೇಶಗಳಿಗೆ ಭಾರತಕ್ಕೂ ಇರುವ ವ್ಯತ್ಯಾಸವನ್ನು ವಿವರಿಸುತ್ತಿದ್ದಳು. ಜನತೆಯ ಹೃದಯ ಗೆದ್ದು ಬೇರೆ ಬೇರೆ ಕಡೆಗಳಲ್ಲಿ ಉಪನ್ಯಾಸಗಳನ್ನು ಮಾಡಿದಳು. ಮದರಾಸಿನಲ್ಲಿ ‘ಭಾರತದ ಐಕ್ಯತೆ’ ನಿವೇದಿತಾ ಉಪನ್ಯಾಸಕ್ಕಾಗಿ ಆರಿಸಿಕೊಂಡ ವಿಷಯ. ನಿವೇದಿತಾಳ ಉಗ್ರ ರಾಷ್ಟ್ರೀಯವಾದವನ್ನು ಕಂಡು ವಿವೇಕಾನಂದರ ನಿಷ್ಠಾವಂತ ಭಕ್ತರು ಮೆಚ್ಚಿದರು. ಕಲ್ಕತ್ತೆಗೆ ಹಿಂದಿರುಗಿದಮೇಲೆ ಶಾಲೆಯಲ್ಲಿ ಮಹಿಳೆಯರಿಗೆ ಪಾಠಪ್ರವಚನಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ ಇವುಗಳ ಪ್ರವಚನ ಮಾಡುತ್ತಿದ್ದಳು. ಮೊದಮೊದಲು ಮಹಿಳೆಯರನ್ನು ಅವರವರ ಮನೆಗಳಿಂದ ಗಾಡಿಯಲ್ಲಿ ಕರೆತರುತ್ತಿದ್ದರು. ಹೀಗೆ ಅವರವರಲ್ಲಿ ಪರಸ್ಪರ ಪ್ರೀತಿ, ಸೌಹಾರ್ದ, ವಿಶ್ವಾಸ ಬೆಳೆದವು.

ಗಂಡುಮಕ್ಕಳಿಗೂ ಒಂದು ಶಾಲೆ ತೆರೆಯುವ ಹಂಬಲವೂ ಇತ್ತು ; ಉದ್ದೇಶವೇನೋ ಒಳ್ಳೆಯದ್, ಆದರೆ ಹಣ? ಹೇಗೋ ಹಣ ಕೂಡಿಸಿ ವ್ಯವಸ್ಥೆ ಮಾಡಿದಸಿದರು.ಶಾಲೆಯ ಕೆಲಸಗಳ ನಡುವೆಯೂ ಅವಳು ರಾಷ್ಟ್ರಜಾಗೃತಿಯನ್ನು ಕೈಬಿಡಲಿಲ್ಲ. ತನ್ನ ಉಪನ್ಯಾಸಗಳಿಂದ ಜನತೆಯನ್ನು ಎಚ್ಚರಗೊಳಿಸುತ್ತ ಹೋದಳು. ಉಪನ್ಯಾಸಗಳಿಗಾಗಿ ಪಾಟ್ನ, ರಾಜಗೃಹ, ನಲಂದ, ಬುದ್ಧಗಯ ಮುಂತಾದ ಸ್ಥಳಗಳಿಗೆ ಭೇಟಿ ಕೊಟ್ಟಳು. ನಿವೇದಿತಾಳ ಕಿವಿಗಳಲ್ಲಿ ಸ್ವಾಮಿ ವಿವೇಕಾನಂದರ ವಾಣಿ : “ಮುಂದಿನ ಐವತ್ತು ವರ್ಷಗಗಳಲ್ಲಿ ಭಾರತಮಾತೆಯೇ ನಮ್ಮ ಮುಖ್ಯ ಶ್ರುತಿಯಾಗಲಿ” ಮೊಳಗುತ್ತಲೇ ಇತ್ತು. ತನ್ನ ಗುರು ತಿರುಗಾಡಿದ ಸ್ಥಳಗಳಲೆಲ್ಲಾ ನಿವೇದಿತಾ ಓಡಾಡಿದಳು. ಭಾರತೀಯರನ್ನು ಕೆರಳಿಸುವಂತಹ ಎರಡು ಘಟನೆಗಳು ಆಗ ಜರುಗಿದವು. ಮೊದಲನೆಯದು ೧೯೦೨ ರ ದೆಹಲಿಯ ದರ್ಬಾರು. ಭಾರತೀಯರ ಹಣವನ್ನು ಇದಕ್ಕಾಗಿ ಲೆಕ್ಕವಿಲ್ಲದಂತೆ ಖರ್ಚು ಮಾಡಿದರು. ಜನತೆಯ ನಾಯಕರ ಉಗ್ರ ಪ್ರತಿಭಟನೆಯನ್ನು ಲೆಕ್ಕಿಸದೆ ದರ್ಬಾರು ನಡೆಯಿತು. ಎರಡನೆಯದು, ಲಾರ್ಡ್ ಕರ್ಜನ್ ೧೯೦೨ ರಲ್ಲಿ ‘ಯುನಿವರ್ಸಿಟಿ ಕಮಿಷನ್’ ನೇಮಿಸಿದ. ಇದರ ನಂತರ ೧೯೦೪ ರಲ್ಲಿ ‘ಯೂನಿವರ್ಸಿಟಿ ಆಕ್ಟ್’ ಜಾರಿಗೆ ತಂದ. ಮುನಿಸಿಪಾಲಿಟಿಗಳನ್ನು ದಕ್ಷತೆಯ ನೆಪದಲ್ಲಿ ಸರ್ಕಾರದ ಆಡಳಿತಕ್ಕೆ ತಂದಂತೆಯೇ ಅದೇ ದಕ್ಷತೆಯ ನೆಪವೊಡ್ಡಿ ವಿಶ್ವವಿದ್ಯಾಲಯಗಳನ್ನು ಸರ್ಕಾರದ ಹಿಡಿತಕ್ಕೆ ತಂದ.ವಿಜ್ಞಾನ, ವಿದ್ಯಾಭ್ಯಾಸಗಳನ್ನು ಕೊಲ್ಲುವುದಕ್ಕೆ ಮಾಡಬೇಕಾದ್ದನ್ನೆಲ್ಲ ಈ ಕಮಿಷನ್ ಮಾಡಿದೆ ಎಂದು ನಿವೇದಿತಾ ಬರೆದಳು. ಮುಂದುವರೆದು ‘ಇದು ಭಾರತಕ್ಕೆ ಆಗಿರುವ ದ್ರೋಹ-ಭಾರತದ ಸ್ವಂತ ಆಲೋಚನೆಯ ಹಕ್ಕು, ಭಾರತಕ್ಕಿರುವ ಜ್ಞಾನದ ಹಕ್ಕನ್ನು ಕಸಿದುಕೊಂಡಂತಾಗಿದೆ’ ಎಂದು ಬರೆದಳು.ಆಕೆ ಸ್ವಯಂ ವಿದ್ಯಾಭ್ಯಾಸ ಧುರೀಣಳಾಗಿದ್ದರಿಂದ ಅವಳಿಗೆ ಈ ಅನ್ಯಾಯವನ್ನು ಕಂಡು ಸಹಿಸಲಾಗಲಿಲ್ಲ. ಅನೇಕ ಕಡೆ ತನ್ನ ಭಾಷಣಗಳಲ್ಲಿ ಇದರ ಅರ್ಥ ಏನು, ಇದರ ಪರಿಣಾಮ ಏನು ಎನ್ನುವುದನ್ನು ವಿವರಿಸಿದಳು. ಈ ಸಮಯದಲ್ಲಿ ಜನಜಾಗೃತಿಯನ್ನುಂಟುಮಾಡುವ ಅನೇಕ ಸಂಘಗಳು ಸ್ಥಾಪನೆಯಾದವು. ರಾಮಕೃಷ್ಣ ಮಹಾಸಂಘ, ದಿ ವಿವೇಕಾನಂದ ಸೊಸೈಟಿ, ದಿ ಅನುಶೀಲನ್ ಸಮಿತಿ, ದಿ ಡಾನ್ ಸೊಸೈಟಿ, ದಿ ಗೀತಾ ಸೊಸೈಟಿ – ಇವು ಮುಖ್ಯವಾದವು. ಕರೆ ಬಂದಾಗಲೆಲ್ಲಾ ಸಂಘಗಳಿಗೆ ಹೋಗಿ ಧರ್ಮ, ಭಗವದ್ಗೀತೆ, ಸ್ವಾಮಿ ವಿವೇಕಾನಂದರ ಕೃತಿಗಳನ್ನು ಕುರಿತು ಭಾಷಣ ಮಾಡುತ್ತಿದ್ದಳು. ನಿವೇದಿತಾಳ ಭಾಷಣ ಕೇಳುತ್ತ ಕೇಳುತ್ತ ಭಾರತೀಯ ತರುಣರ ಮೈಯಲ್ಲಿ ಶಕ್ತಿಸಂಚಾರವಾಗುತ್ತಿತ್ತು.

ಅವಳ ಭರತಖಂಡದ ಬಗೆಗಿನ ಅಸೀಮ ಪ್ರೀತಿ, ಭಕ್ತಿಯನ್ನು ಕಂಡು ಏಕಕಾಲದಲ್ಲಿ ನಾಚಿಕೆಯೂ ಅಸೂಯೆಯೂ ಉಂಟಾಗುತ್ತಿತ್ತು. ‘ರಾಷ್ಟ್ರ’ ಮತ್ತು ‘ರಾಷ್ಟ್ರೀಯತೆ’ ಈ ಪದಗಳನ್ನು ನಿವೇದಿತಾ ಮತ್ತೆ ಮತ್ತೆ ಉಪಯೋಗಿಸುತ್ತಿದ್ದಳು. ಮಂತ್ರದಂತೆ ಅವಳು ಅವನ್ನು ಉಚ್ಚರಿಸುತ್ತಿದ್ದಳು. ‘ರಾಷ್ಟ್ರೀಯ ಪ್ರಜ್ಞೆ’ (National Consciousness) ಎಂಬ ಈ ಪದ್ಯಬೃಂದವನ್ನು ಬಳಸಿದ್ದು ಅವಳೇ. ಸೋದರಿಯಾಗಿದ್ದ ನಿವೇದಿತಾ ತರುಣ ಪೀಳಿಗೆಯವರಿಗೆ ‘ಗುರು’ವಾದಳು. ದಿ ಡಾನ್ ಸೊಸೈಟಿ, ಅನುಶೀಲನ ಸಮಿತಿ ಈ ಸಂಘಗಳಲ್ಲಿ ನಿವೇದಿತಾ ಕೆಲಸ ಮಾಡಲು ಪ್ರಾರಂಭಿಸಿದಳು.ಆದರೆ ಈ ಸಂಘಗಳ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿದ್ದವು. ಆ ಸಮಯದಲ್ಲಿ ಶ್ರೀ ಅರವಿಂದ ಘೋಷರು ಕಲ್ಕತ್ತೆಗೆ ಬಂದರು. ಆಗ ಸಂಘದ ಸ್ವರೂಪವೇ ಬದಲಾಯಿಸಿತು. ಅರವಿಂದರು ಕ್ರಾಂತಿಕಾರಿ ಭಾವನೆಗಳನ್ನು ಬಿತ್ತತೊಡಗಿದರು. ಅಸಹಕಾರ ಮತ್ತು ಮಂದ ಪ್ರತಿಭಟನೆ ಇವುಗಳಿಂದ ಸ್ವಾತಂತ್ರ್ಯ ಸಿಗುತ್ತದೆ ಎಂದು ನಿವೇದಿತಾಳಿಗನ್ನಿಸಲಿಲ್ಲ. ಆದ್ದರಿಂದ ಅವಳು ಶ್ರೀ ಅರವಿಂದರ ಕ್ರಾಂತಿಕಾರಿ ಭಾವನೆಗಳಿಗೆ ಬೆಂಬಲ ಕೊಟ್ಟಳು. ೧೯೦೫ ಮಾರ್ಚ್ ೧೩ರಂದು ನಿವೇದಿತಾ ಕಾಯಿಲೆ ಬಿದ್ದಿದ್ದಕ್ಕಾಗಿ ತನ್ನ ಕೆಲಸಗಳನ್ನು ನಿಲ್ಲಿಸಿ ಡಾರ್ಜಿಲಿಂಗ್‍ನಲ್ಲಿ ಎರಡು ತಿಂಗಳು ಇದ್ದು ಆರೋಗ್ಯವನ್ನು ಸುಧಾರಿಸಿಕೊಂಡಳು. ಇದೇ ವರ್ಷ ಬಂಗಾಳದ ವಿಭಜನೆಯಾಯಿತು. ಲಾರ್ಡ್ ಕರ್ಜನ್ ಭಾರತಕ್ಕೆ ಮಾಡಿದ ಮಹಾದ್ರೋಹ ಇದು. ಸಹಸ್ರಾರು ಜನರು ವಿರೋಧವಿದ್ದರೂ ಗಣನೆಗೆ ತಂದುಕೊಳ್ಳದೆ ಬಂಗಾಳವನ್ನು ಒಡೆಯುವುದರಲ್ಲಿ ಆತ ಯಶಸ್ವಿಯಾದ.ಆಗ ನಿವೇದಿತಾ ಬರೆದಳು: ‘ನನಗೆ ಜನ್ಮವಿತ್ತ ನಾಡಿಗೆ ಧಿಕ್ಕಾರ, ಬಲಿದಾನ ಮತ್ತು ಧೈರ್ಯದಿಂದ ಭಾರತೀಯರು ಹೋರಾಡಿ ಈ ವಿಭಜನೆಯ ಗೋಡೆಯನ್ನು ಉರುಳಿಸಲಿ ….’ ದೇಶಾದ್ಯಂತ ಪ್ರತಿಭಟನೆ, ಮೆರವಣಿಗೆ, ಭಾಷಣಗಳು ನಡೆದವು. ಇದಕ್ಕೆ ಬೇಕಾದ ಸಹಕಾರ, ಪ್ರೋತ್ಸಾಹ ನೀಡಲು ನಿವೇದಿತಾ ಸದಾ ಸಿದ್ಧಳಾಗಿದ್ದಳು. ಅವಳ ಭಾರತ ಪ್ರೇಮ ಅಸಾಧಾರಣವಾಗಿತ್ತು. ಅವಳ ಪ್ರಾಣ ಭಾರತವಾಗಿತ್ತು, ಅವಳ ಹೃದಯ ಭಾರತಕ್ಕಾಗಿ ಯಾವಾಗಲೂ ಮಿಡಿಯುತ್ತಿತ್ತು.

ಪೂರ್ವ ಬಂಗಾಳದಲ್ಲಿ ಕ್ಷಾಮವುಂಟಾಯಿತು, ಜೊತೆಗೆ ಪ್ರವಾಹ ಬೇರೆ. ಹಳ್ಳಿಗಳು ನೀರಿನಲ್ಲಿ ಮುಳುಗಿದವು. ಮೊಳಕಾಲಿನವರೆಗೂ ನಿಂತಿದ್ದ ನೀರಿನಲ್ಲಿ ಓಡಾಡಿ, ಕೆಲವೊಮ್ಮೆ ನಾಡದೋಣಿಯಲ್ಲಿ ತೇಲಿ ಮನೆಯಿಂದ ಮನೆಗೆ ಆಹಾರ, ಬಟ್ಟೆ ಮುಂತಾದ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ನಿವೇದಿತಾ ಮಾಡತೊಡಗಿದಳು. ಎದೆಬಿಡದೆ ಹರಿಯುತ್ತಿರುವ ನೀರಿನಲ್ಲು ನಡೆದು ಗುಡಿಸಲು ತಲುಪಿ ಸೇವೆ ಮಾಡಿದ ನಿವೇದಿತಾ ಮತ್ತೊಮ್ಮೆ ತೀರ ಕಾಯಿಲೆ ಬಿದ್ದಳು. ಗೆಳತಿ ಕ್ರಿಸ್ಟೈನ್ ಅವಳ ಸೇವೆ ಮಾಡಿದಳು. ನಿವೇದಿತಾ ‘ನಾ ಕಂಡಂತೆ ನನ್ನ ಗುರುದೇವ’ ಎನ್ನುವ ಕೃತಿರಚನೆಯನ್ನು ಆರಂಭಿಸಿದ್ದಳು. ಜಗದೀಶ ಚಂದ್ರರ ‘ಪ್ಲ್ಯಾಂಟ್ ರೆಸ್ಪಾನ್ಸ್’ ಮತ್ತು ‘ಕಂಪ್ಯಾರಿಟಿವ್ ಎಲಕ್ಟ್ರೋ ಫಿಸಿಯಾಲಜಿ’ ಕೃತಿ ರಚನೆಯಲ್ಲಿ ನಿವೇದಿತಾ ನೆರವನ್ನು ನೀಡಿದಳು. ಆ ಸಮಯದಲ್ಲಿ ಸ್ವಾಮಿ ವಿವೇಕಾನಂದರ ಕೃತಿಗಳ ಮುದ್ರಣ ಕಾರ್ಯ ಮುಗಿದಿತ್ತು. ಅದಕ್ಕೆ ಮುನ್ನುಡಿಯನ್ನು ಬರದಳು. ಅವಳಿಗೆ ವಿಶ್ರಾಂತಿ ತೀರ ಅಗತ್ಯವಾಗಿದ್ದರಿಂದ ೧೯೦೭ ರ ಆಗಸ್ಟ್ ೧೫ ರಂದು ಭಾರತ ಬಿಟ್ಟು ತನ್ನ ಹುಟ್ಟೂರಿಗೆ ಹೊರಟಳು. ವಿಶ್ರಾಂತಿಗೆಂದು ಬಂದ ನಿವೇದಿತಾ ಇಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಭಾರತದ ಪರವಾದ ಕೆಲಸವನ್ನು ಆರಂಭಿಸಿಯೇಬಿಟ್ಟಳು. ನಿವೇದಿತಾ ಬರೆದ ‘ಕ್ರೇಡ್ಲ್ ಟೇಲ್ಸ್ ಆಫ್ ಹಿಂದೂಯಿಸಂ’ ಪುಸ್ತಕ ಇಲ್ಲಿ ಪ್ರಕಟವಾಗಿ ಮನ್ನಣೆಗಳಿಸಿತು.

ಅವಳು ಬ್ರಿಟಿಷರಿಗೆ ಭಾರತೀಯ ಸಂಸ್ಕೃತಿ, ಸ್ವಾಮಿ ವಿವೇಕಾನಂದರ ಜೀವನಕೃತಿಗಳು, ಭಾರತೀಯರ ಸಮಸ್ಯೆ ಮುಂತಾದವುಗಳನ್ನು ಪರಿಚಯಿಸಿದರು. ನಂತರ, ಮತ್ತೆ ಭಾರತಕ್ಕೆ ಹಿಂದಿರುಗಿದಳು. ಬ್ರಿಟನ್ನಿನ ಪ್ರಧಾನಮಂತ್ರಿ ಮ್ಯಾಕ್‍ಡೊನಾಲ್ಡ್ ನಿವೇದಿತಾಳಿಂದ ಭಾರತೀಯ ಆದರ್ಶ ಮತ್ತು ತತ್ವಶಾಸ್ತ್ರಗಳನ್ನು ಕುರಿತು ಬೇಕಾದಷ್ಟು ವಿಷಯಗಳನ್ನು ತಿಳಿದುಕೊಂಡ. ಕಲ್ಕತ್ತದ ಕಲಾಶಾಲೆಯ ಮುಖ್ಯಸ್ಥ ಇ. ಬಿ. ಹವೆಲ್ ನಿವೇದಿತಾಳ ಗೆಳೆಯ. ಅವನಿಗೆ ಕಲೆಯ ವಿಷಯದಲ್ಲಿ ಭಾರತೀಯರ ದೃಷ್ಟಿಕೋನವೇನು ಎನ್ನುವುದನ್ನು ವಿವರಿಸುತ್ತಿದ್ದಳು. ಇದರಿಂದ ಹವೆಲ್‍ನ ದೃಷ್ಟಿಕೋನವೇ ಬದಲಾಯಿತು. ಭಾರತೀಯ ಚಿತ್ರಕಲಾವಿದರಲ್ಲಿ ನಂದಲಾಲ್ ಬಸು, ಅವನೀಂದ್ರನಾಥ ಠಾಕೂರರು ಭಾರತೀಯ ಶೈಲಿಯನ್ನು ಬೆಳೆಸಿಕೊಳ್ಳಲು ನಿವೇದಿತಾ ಬಹಳಮಟ್ಟಿಗೆ ಕಾರಣಳಾದಳು. ಕ್ರಮೇಣ ದಿನಗಳು ಕಳೆದಂತೆ, ಅವಳ ಸಹೋದ್ಯೋಗಿ ಕ್ರಿಸ್ಟೈನ್ ದೂರ ಹೋದಳು. ಆಘಾತದಿಂದ ನಿವೇದಿತಾ ತತ್ತರಿಸಿಹೋದಳು. ಶಾಲೆಯ ಕೆಲಸವನ್ನು ಏಕಾಂದಿಯಾಗಿ ಮುಂದುವರೆಸಿಕೊಂಡು ಹೋಗಬೇಕಾಯಿತು. ಮನಶ್ಯಾಂತಿಯನ್ನು ಅರಸಿ ನಿವೇದಿತಾ ಡಾರ್ಜಿಲಿಂಗಿಗೆ ಹೋದಳು. ಆ ಸುಂದರ ಪರಿಚಯದಲ್ಲಿ ಕೆಲವು ದಿನಗಳು ಶಾಂತವಾಗಿ ಕಳೆದವು. ನಂತರದ ದಿನಗಳಲ್ಲಿ ರಕ್ತಭೇದಿ ಪ್ರಾರಂಭವಾಗಿ ಅವಳ ಆರೋಗ್ಯ ವಿಷಮಿಸಿತು. ದಿನದ ಬಹುಸಮಯವನ್ನು ಧ್ಯಾನದಲ್ಲಿ ಕಳೆಯಲು ಪ್ರಾರಂಭಿಸಿದಳು. ೧೯೧೧ ನೆಯ ಅಕ್ಟೋಬರ್ ೧೩ ರಂದು ಅವಳು ಸ್ವರ್ಗಸ್ಥಳಾದಳು. ಭಾರತಕ್ಕಾಗಿ ತನ್ನದೆಲ್ಲವನ್ನೂ ಅರ್ಪಿಸಿದ, ಈ ದೇಶಕ್ಕಾಗಿ ಅವಿಶ್ರಾಂತವಾಗಿ ದುಡಿದ ಮಹಾಚೇತನವು ಹಿಮಾಲಯದ ಮಡಿಲಲ್ಲಿ ಚಿರಶಾಂತಿಗೆ ಸಂದಿತು. ಅವಳ ಸಮಾಧಿಯ ಮೇಲೆ ಈ ಮಾತುಗಳಿವೆ : “ಭಾರತಕ್ಕಾಗಿ ತನ್ನ ಸರ್ವಸ್ವವನ್ನೂ ನೀಡಿದ ನಿವೇದಿತಾ ಇಲ್ಲಿ ವಿಶ್ರಾಂತಿಯಲ್ಲಿದ್ದಾಳೆ”.

ಕಲ್ಕತ್ತೆಯ ಪುರಭವನದಲ್ಲಿ ನಡೆದ ಸಂತಾಪಸೂಚಕ ಸಭೆಯಲ್ಲಿ ಕವಿ ರವೀಂದ್ರನಾಥ ಠಾಕೂರರು ಹೇಳಿದರು, “ಮಾನವನ ಉದಾತ್ತತೆಯನ್ನು ಸೋದರಿ ನಿವೇದಿತಾಳ ರೂಪದಲ್ಲಿ ಕಂಡ ನಾವೇ ಧನ್ಯರು … ಭಾರತಕ್ಕಾಗಿ ಆಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಳು. ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ. ಮನುಷ್ಯರು ಅನುಭವಿಸಬಹುದಾದ ಎಲ್ಲ ಕಷ್ಟಗಳನ್ನೂ ಅನುಭವಿಸಿದಳು ನಿವೇದಿತಾ …..”

ನಿವೇದಿತಾಳ ಭಾರತದ ಅಪಾರ ಪ್ರೀತಿ, ಗೌರವ, ಸೇವೆ ಎಲ್ಲವನ್ನು ತಿಳಿದು ನಾವೆಲ್ಲರೂ ಅವರಿಗೆ ತಲೆಬಾಗಿ ನಮಿಸೋಣ. ಅಲ್ಲದೇ ಸಮಾಜ ಸುಧಾರಕರಿಗೆ ನಿವೇದಿತಾ ಆದರ್ಶ ವ್ಯಕ್ತಿ ಆಗಬೇಕೆಂದು ನನ್ನ ಆಶಯ.

ವಂದನೆಗಳೊಂದಿಗೆ,

ಚಿತ್ರ ಕೃಪೆ : nbcprabha1.wordpress.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments