ಯಡಿಯೂರಪ್ಪರ ಹೊಸ ಪಕ್ಷವೂ..ರಾಜ್ಯ ರಾಜಕೀಯ ಜಂಜಾಟವೂ..!
– ಶಂಶೀರ್ ಬುಡೋಳಿ
ರಾಜ್ಯ ಬಿಜೆಪಿಯ ಆಡಳಿತಾವಧಿಯ ಕಾಲಾವಧಿ ಮುಗಿಯುತ್ತಾ ಬಂದಿದೆ..ಜೊತೆಗೆ ದಿ ಗ್ರೇಟ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಬ್ಲಾಕ್‌ಮೇಲ್ ರಾಜಕಾರಣ ಕೂಡಾ ಹೆಚ್ಚಾಗ್ತಾ ಇದೆ. ಹಗರಣದ ಆರೋಪ ಮೈಮೇಲೆ ಬಂದಾಗ ಅನಿವಾರ್ಯವಾಗಿ ಸಿಎಂ ಪಟ್ಟದಿಂದ ಕೆಳಗಿಳಿಯುವಾಗ ಬಿಜೆಪಿ ಹೈಕಮಾಂಡ್ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆಂದು ಭರವಸೆ ನೀಡಿತ್ತೆಂದು ಹಲವಾರು ಬಾರಿ ಯಡಿಯೂರಪ್ಪರೇ ಹೇಳಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಾಜಿ ಸಿಎಂ ‘ಹಠ’(ಯಡಿ)ಯೂರಪ್ಪ ಬಿಜೆಪಿಯನ್ನ ತೊರೆದು ಕೆಜೆಪಿ ಎಂಬ ಸ್ವಪಕ್ಷ ಕಟ್ಟುವ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಸವಾಲು ಎಸೆದಿದ್ದಾರೆ..ಅದಕ್ಕೂ ಮುನ್ನಾ ಹೈಕಮಾಂಡ್‌ಗೆ ತನಗೆ ಸೂಕ್ತ ಸ್ಥಾನಮಾನ ನೀಡುವುದರ ಬಗ್ಗೆ ಬೇಗ ಯೋಚಿಸಿ ಅಂತಾ ಎಚ್ಚರಿಕೆ ಕೊಟ್ಟು ತಾನೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನ ಆಡಳಿತಕ್ಕೆ ತಂದಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಯಡಿಯೂರಪ್ಪಗೆ ಮಾನ ಮರ್ಯಾದೆ ಎನ್ನುವುದು ಇಲ್ಲವೇ..?
ಮಾಜಿ ಸಿಎಂ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್‌ನಿಂದ ಮುನಿಸಿಕೊಂಡು ಪ್ರತ್ಯೇಕ ಪಕ್ಷವನ್ನ ಕಟ್ಟುವ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ನಿಜಕ್ಕೂ ಇದು ರಾಜ್ಯ ರಾಜಕೀಯದಲ್ಲಿ ಹೊಸ ಶಕೆಯನ್ನ ಆರಂಭಿಸಲಿದೆಯೇ..? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ನಿಜಕ್ಕೂ ಇಲ್ಲ..ಯಾವ ಯಡಿಯೂರಪ್ಪ ತಾನು ಬಿಜೆಪಿಯಿಂದಲೇ ಬೆಳೆದು ಬಂದಿರುವುದನ್ನೇ ಮರೆತುಕೊಂಡು ತಾನು ಕುಣಿಸಿದ ಹಾಗೇ ಶೆಟ್ಟರ್ ಹಾಗೂ ಹೈಕಮಾಂಡ್ ಆಡಿಲ್ಲವೆಂದು ಮುನಿಸಿಕೊಂಡು ಅದಕ್ಕಿಂತಲೂ ಹಠ ಮಾಡಿಕೊಂಡು ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದು ಇವರ ಮೂರ್ಖತನಕ್ಕೊಂದು ಸಾಕ್ಷಿ. ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಶ್ರೀರಾಮುಲು ‘ಬಿಎಸ್‌ಆರ್’ ಪಕ್ಷವನ್ನು ಸ್ಥಾಪನೆ ಮಾಡಿದ ವೇಳೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆಂದು ಭಾವಿಸಲಾಗಿತ್ತು. ಆದರೆ ಇಂದು ಈ ಪಕ್ಷ ಪ್ರಾಥಮಿಕ ಮಟ್ಟದಿಂದಲೇ ಬೇರೂರಲು ಇನ್ನು ಸಾಧ್ಯವಾಗಿಲ್ಲ. ಇನ್ನು ರಾಜ್ಯ ಬಿಜೆಪಿ ಹಾಗೂ ಯಡಿಯೂರಪ್ಪರ ವಿಷಯಕ್ಕೆ ಬರುವುದಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮನದಲ್ಲಿ ಏನೇನೋ ಇದೆ..ಮಾತು ಮೊದಲೇ ಹೇಳಿಬಿಡಲು ಕಾರಣನೂ ಇದೆ. ‘ನಾನು ಪಕ್ಷ ಬಿಟ್ಟು ಹೋಗುತ್ತಿದ್ದೇನೆ. ಯಾರಿಗೆ ಬೇಕಾಗಿದೆ ಬಿಜೆಪಿ. ನನಗೆ ಮಾಡಿದ ಅಪಮಾನಕ್ಕಾಗಿ ಪಕ್ಷ ಬಿಡುತ್ತಿದ್ದೇನೆ’ ಎಂದು ತಾನು ಬೆಳೆದು ಬಂದ ಪಕ್ಷದ ವಿರುದ್ಧನೆ ಇತ್ತೀಚಿಗಷ್ಟೇ ಶಿವಮೊಗ್ಗದಲ್ಲಿ ಹೇಳಿಕೆ ನೀಡಿ ತಾನಿಲ್ಲದೇ ಬಿಜೆಪಿ ಪಕ್ಷ ರಾಜ್ಯದಲ್ಲಿರಲು ಸಾಧ್ಯನೇ ಇಲ್ಲ ಅಂತಾ ಫೋಸು ಕೊಡುತ್ತಿರುವ ಯಡಿಯೂರಪ್ಪರ ಮೊಸಳೆ ಕಣ್ಣೀರು ಜನರಿಗೆ ಅರ್ಥವಾಗಲ್ಲವೇ..?
ಹಗರಣದ ಸುಳಿಯಲ್ಲಿ ಸಿಲುಕಿ ಕೊನೆಗೆ ಜನರು ಯಡಿಯೂರಪ್ಪರ ಮೇಲೆ ಬೇಸತ್ತು ನೀವು ಅಧಿಕಾರದಿಂದ ಕೆಳಗಿಳಿಯಿರಿ ಅಂದ ಮೇಲೆ ಒಲ್ಲದ ಮನಸ್ಸಿನಿಂದ ಸಿಎಂ ಪಟ್ಟದಿಂದ ಕೆಳಗಿಳಿದ ಯಡಿಯೂರಪ್ಪರಿಗೆ ಮರಳಿ ಸಿಎಂ ಸ್ಥಾನ ಕೊಡಬೇಕೆಂದರೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಹಿರಿಯ ನಾಯಕರು ಇಲ್ಲವೇ..? ಬಹುಶಃ ಯಡಿಯೂರಪ್ಪನವರು ಹೀಗೆ ಭಾವಿಸಿರಬೇಕು. ಅಷ್ಟೇ ಅಲ್ಲ, ಈ ರೀತಿಯ ಮನೋಭಾವನೆ ಕೂಡಾ ಯಡಿಯೂರಪ್ಪರ ಮನದಲ್ಲಿದೆ. ಹೀಗಾಗಿ ಯಡಿಯೂರಪ್ಪನವರು ನಾನೇ ರಾಜ್ಯ ಬಿಜೆಪಿಯನ್ನ ಕಟ್ಟಿದ್ದು, ನನ್ನಿಂದಲೇ ಬಿಜೆಪಿ ಬೆಳೆದದ್ದು, ಅಷ್ಟೇ ಅಲ್ಲ ದಕ್ಷಿಣ ಭಾರತದಲ್ಲಿ ಬಿಜೆಪಿ ಗದ್ದುಗೆಗೇರಲು ನಾನೇ ಕಾರಣ ಎಂದು ಪ್ರತಿಸಾರಿ ತನ್ನ ಗುಣಗಾನ ಮಾಡುತ್ತಿರುವ ಯಡಿಯೂರಪ್ಪನವರಿಗೆ ನಾಚಿಕೆ ಎನ್ನುವುದು ಇಲ್ಲವೇ..?
ಬಿಜೆಪಿ ಹೈಕಮಾಂಡ್ ನನಗೆ ನೀಡಿದ ಭರವಸೆಯಂತೆ ನನಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಮಾತನ್ನು ಪದೇ ಪದೇ ಹೇಳಿ ರಾಜ್ಯದ ಜನತೆಯಲ್ಲಿ ನಿರಾಸೆ ಮೂಡಿಸಿಬಿಟ್ಟಿದ್ದಾರೆ. ಹೀಗಾಗಿ ರಾಜ್ಯದ ಜನತೆ ಬಿಎಸ್‌ವೈರ ಮೊಸಳೆ ಕಣ್ಣೀರಿನ ಒಳಾರ್ಥವನ್ನು ಅರ್ಥಮಾಡಿಕೊಂಡಿದ್ದು ಇದು ಯಡಿಯೂರಪ್ಪನವರು ಬೇಕಂತಲೇ ಮಾಡುತ್ತಿರೋ ನಾಟಕ ಎಂಬುದನ್ನ ಕೂಡಾ ಮನಗಂಡಿದ್ದಾರೆ. ಬಿಎಸ್‌ವೈ ರಾಜ್ಯ ಬಿಜೆಪಿಯ ಹಿರಿಯ ನಾಯಕರೂ ಕೂಡಾ ಹೌದು. ಆದರೆ ಅಧಿಕಾರದಲ್ಲಿದ್ದಾಗ ತನ್ನ ಅಧಿಪತ್ಯ ಮೆರೆದು ತನ್ನ ಕುಟುಂಬ ಸಮೇತ ಹಗರಣವೊಂದರಲ್ಲಿ ಸಿಲುಕಿಕೊಂಡು ಶಿಕ್ಷೆ ಅನುಭವಿಸಿದ್ದು ಇವರ ತಪ್ಪಿಗಾಗಿ. ಅದಕ್ಕಾಗಿ ರಾಜ್ಯದ ಜನತೆಯನ್ನ ಬಲಿ ಪಡೆಯುವುದು ಎಷ್ಟು ಸರಿ..?
ಇನ್ನು ನನಗೆ ಬಿಜೆಪಿ ಪಕ್ಷ ಅನ್ಯಾಯ ಮಾಡಿದೆ ಎಂದು ಹೇಳಿ ತನ್ನ ಬೆಂಬಲಿಗ ಶಾಸಕರ ಜೊತೆಗೂಡಿ ‘ಕೆಜೆಪಿ’ ಎಂಬ ಪಕ್ಷವನ್ನ ಕಟ್ಟುತ್ತಿದ್ದಾರೆ. ಇದರ ಅಧಿಕೃತ ಪ್ರಕಟಣೆಗಾಗಿ ಡಿಸೆಂಬರ್‌ರವರೆಗೆ ಕಾಲವಾಕಾಶವನ್ನ ಇಟ್ಟುಕೊಂಡಿದ್ದು ಈ ನಡುವೆ ಹೈಕಮಾಂಡ್ ರಾಜ್ಯಾಧ್ಯಕ್ಷ ಅಥವಾ ಉನ್ನತ ಸ್ಥಾನಮಾನ ನೀಡುವ ಭರವಸೆಯನ್ನ ಇನ್ನು ಇಟ್ಟುಕೊಂಡಿದ್ದಾರೆ ಬಿಎಸ್‌ವೈ. ಹೀಗಾಗಿ ತಾನು ಘೋಷಣೆ ಮಾಡಿರುವ ಹೊಸ ಪಕ್ಷ ‘ಕೆಜೆಪಿ’ ಯ ಅಂತಿಮ ಪ್ರಕಟನೆಯನ್ನ ಡಿಸೆಂಬರ್‌ರವರೆಗೆ ಮುಂದೂಡಿದ್ದಾರೆ. ನಿಜಕ್ಕೂ ಯಡಿಯೂರಪ್ಪನವರು ಹೊಸ ಪಕ್ಷ ಕಟ್ಟುವ ಮೂಲಕ ರಾಜ್ಯದಲ್ಲಿ ಪರ್ಯಾಯ ರಾಜಕಾರಣವನ್ನ ಆರಂಭಿಸುತ್ತಾರೆಯೇ ಎಂಬುದು ಎಲ್ಲರ ಪ್ರಶ್ನೆ.
ಬಿಜೆಪಿ ವಿರುದ್ಧ ಸಿಡಿದೆದ್ದು ಯಡಿಯೂರಪ್ಪನವರು ಕಟ್ಟಲು ಹೊರಟಿರುವ ರಾಜಕೀಯ ಪಕ್ಷ ಒಂದು ವ್ಯಕ್ತಿ ಕೇಂದ್ರಿತ ಪಕ್ಷವಾಗಲಿದೆಯೇ ಹೊರತು ಪರ್ಯಾಯ ರಾಜಕಾರಣದ ಆರಂಭವಾಗಲು ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ ತಾನಿನ್ನು ಕ.ಬು.ಗೆ ಸೇರುವ ಸಮಯದಲ್ಲಿ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳಲು ಯಡಿಯೂರಪ್ಪನವರು ‘ಕೆಜೆಪಿ’ಯನ್ನ ಕಟ್ಟುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಅಂಶ. ಈ ಮೂಲಕ ಯಡಿಯೂರಪ್ಪನವರು ಬಿಜೆಪಿ ಜೊತೆಗೆ ಕಾಂಗ್ರೆಸ್, ಜೆಡಿಎಸ್‌ನ ಪ್ರಭುತ್ವ ಅಲ್ಲಾಡಿಸುವ ಮೂರ್ಖತನಕ್ಕೆ ಕೈಹಾಕುತ್ತಿದ್ದಾರೆ. ಸಿಎಂ ಪಟ್ಟದಲ್ಲಿದ್ದಾಗ ಪ್ರಾಮಾಣಿಕತೆಯಿಂದ ಇರುತ್ತಿದ್ದರೆ ಬಿಎಸ್‌ವೈಗೆ ಇಂದು ಈ ದುರಂತದ ಕಾಲ ಬರುತ್ತಿರಲಿಲ್ಲ. ಹೆಸರಿಗೆ ಜನರ ಪರ ಹೀಗೆ ಏನೇನೂ ಯಡಿಯೂರಪ್ಪನವರು ಹೇಳಿಕೊಂಡರೂ ಅವರ ಹೊಸ ಪಕ್ಷ ಅದು ಎಂದೆಂದಿಗೂ ವ್ಯಕ್ತಿ ಕೇಂದ್ರಿತವಾಗಿರುತ್ತದೆಯೇ ಹೊರತು ಜನಪರ ಆಗಿರಲು ಸಾಧ್ಯನೇ ಇಲ್ಲ. ಮಾತ್ರವಲ್ಲ ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ವಿಚಾರ ಕೂಡಾ ಅಸಾಧ್ಯದ ಮಾತು. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ್ನ ಜನ ನೆಚ್ಚಿಕೊಂಡಿದ್ದಾರೆಯೇ ಹೊರತು ಹೊಸ ಪಕ್ಷಗಳನ್ನು ಜನರು ನೆಚ್ಚಿಕೊಳ್ಳುವುದು ದೂರದ ಮಾತು. ಇದಕ್ಕಾಗಿ ಸಮಾಜವಾದಿ ಪಕ್ಷವನ್ನ ಉದಾಹರಿಸಬಹುದು. ಇನ್ನು ಹಣದ ಮೂಲಕ ಹೊಸ ಪಕ್ಷ ಕಟ್ಟಿ ಆದರ್ಶ, ಸಿದ್ಧಾಂತಗಳನ್ನ ರೂಪಿಸಲು ಹೊರಡುವುದು ಮತ್ತೊಂದು ದೊಡ್ಡ ಮೂರ್ಖತನ. ಯಡಿಯೂರಪ್ಪನವರು ಸಿಡಿದೆದ್ದು ಕಟ್ಟುತ್ತಿರೋ ‘ಕೆಜೆಪಿ’ ಪಕ್ಷ ಬಿಜೆಪಿಗೆ ಪರ್ಯಾಯ ವಿರೋಧಿ ಪಕ್ಷವಾಗುತ್ತದೆಯೇ ಹೊರತು ರಾಜ್ಯದಲ್ಲಿ ಹೊಸ ರಾಜಕೀಯ ಹುಟ್ಟನ್ನು ನಿರ್ಮಿಸಿದೆ ಎನ್ನವುದು ತಪ್ಪು ಭಾವನೆ. ನಿಜಕ್ಕೂ ಇವತ್ತಿಗಲ್ಲ, ಮುಂದೆಯೂ ಕೂಡಾ ಯಡಿಯೂರಪ್ಪರ ಆಡಳಿತವಿಲ್ಲದ ರಾಜ್ಯವನ್ನು ಜನತೆ ನೋಡಲು ಸಾಧ್ಯವಿದೆ. ಈವರೆಗೆ ಸದಾನಂದ ಗೌಡ ಜಗದೀಶ್ ಶೆಟ್ಟರ್ ಆಡಳಿತವನ್ನ ರಾಜ್ಯದ ಜನತೆ ನೋಡಿಲ್ಲವೇ..? ಹಾಗಂದ ಮಾತ್ರಕ್ಕೆ ತಾನೇ ರಾಜ್ಯದ ಅಧಿಪತಿಯಾಗಲು ಹೊರಟಿರೋ ಯಡಿಯೂರಪ್ಪರ ಮೂರ್ಖತನಕ್ಕೆ ಏನೆನ್ನಬೇಕು.?
ಮುಖ್ಯವಾಗಿ ಬಿಜೆಪಿಯಿಂದ ಸಿಡಿದೆದ್ದು ಪಕ್ಷ ಕಟ್ಟಲು ಹೊರಟಿರೋ ಬಿಎಸ್‌ವೈಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನ ಉರುಳಿಸುವುದು ದೂರದ ವಿಚಾರ. ಈಗಾಗಲೇ ಬಿಜೆಪಿ ಸರ್ಕಾರದ ರಾಜಕೀಯ ರಣರಂಗದಾಟದಿಂದ ಜನತೆ ಬೇಸತ್ತಿದ್ದು ಈ ವೇಳೆ ತಾನು ಲಿಂಗಾಯತ ಸಮುದಾಯ ಹಾಗೂ ತನ್ನ ಬೆಂಬಲಿಗ ಶಾಸಕರನ್ನು ನಂಬಿ ಪಕ್ಷ ಕಟ್ಟಲಿ ಬಿಡಿ. ಆದರೆ ಇದನ್ನೇ ಮುಂದಿಟ್ಟುಕೊಂಡು ರಾಜ್ಯದ ಜನತೆಯತ್ತಿರ ಮೊಸಳೇ ಕಣ್ಣೀರು ಹಾಕುವುದು ಎಷ್ಟು ಸರಿ..?ಮೊನ್ನೆ ಮೊನ್ನೆಯಷ್ಟೇ ಶಿವಮೊಗ್ಗದಲ್ಲಿ ನಡೆದ ‘ಪರಾಮರ್ಶೆಯ ಪರಾಕ್ರಮ’ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ ಆದ ಅವಮಾನಕ್ಕಾಗಿ ಪಕ್ಷ ಬಿಡುತ್ತಿದ್ದೇನೆ ಎಂದು ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದಾರೆ. ಪಕ್ಷ ಬಿಡುವುದಾದರೆ ಬಿಡಲಿ. ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಹೀಗಾಗಿ ಹೈಕಮಾಂಡ್ ಇವರ ಯಾವ ಗೊಡ್ಡು ಬೆದರಿಕೆಗಳಿಗೆ ಬಗ್ಗದೇ ತನ್ನ ಚಟುವಟಿಕೆಯನ್ನ ಮುಂದುವರಿಸುತ್ತಿದೆ. ಈ ಹಿಂದೆ ಮಾಜಿ ಸಿಎಂ ದಿ.ಬಂಗಾರಪ್ಪನವರಂತೇ ಪಕ್ಷ ಬದಲಿಸುವ, ಹೊಸ ಪಕ್ಷ ಹುಟ್ಟು ಹಾಕುವ ಪರಂಪರೆಯನ್ನು ಹುಟ್ಟುಹಾಕಿದ್ದರು. ಇದರಲ್ಲಿ ಇವರು ಸೋತಿದ್ದರೂ ಕೂಡಾ. ಈಗ ಮಾಜಿ ಸಿಎಂ ಯಡಿಯೂರಪ್ಪರ ಸರದಿ. ಇವರು ಕೂಡಾ ತನ್ನ ಗುರಿಯನ್ನ ಮುಟ್ಟುತ್ತಾರ ಎನ್ನುವುದು ಮುಂದೆ ನೋಡಬೇಕಾಗಿದೆ. ಇನ್ನು ಹೊಸ ಪಕ್ಷ ಕಟ್ಟಿ ಯಡಿಯೂರಪ್ಪನವರು ಲಿಂಗಾಯತ ಹಾಗೂ ತಮ್ಮ ಬೆಂಬಲಿಗರ ಬೆಂಬಲವನ್ನ ಪಡೆಯಬಹುದೇ ಹೊರತು ಇಡೀ ರಾಜ್ಯದ ಜನತೆಯ ಬೆಂಬಲವನ್ನ ಪಡೆಯಲು ಸಾಧ್ಯ ಇಲ್ಲ. ಈ ಹಿಂದೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಂತರ ಎಡಪಕ್ಷಗಳು ಪರ್ಯಾಯ ರಾಜಕಾರಣವನ್ನ ಸೃಷ್ಟಿಸುತ್ತದೆ ಎಂದು ಭಾವಿಸಲಾಗಿತ್ತಾದರೂ ಅದು ಇನ್ನೂ ಈಡೇರಿಲ್ಲ. ಅದು ಶ್ರೀರಾಮುಲುರ ಬಿಎಸ್‌ಆರ್ ಪಕ್ಷ ಇರಬಹುದು ಅಥವಾ ಯಡಿಯೂರಪ್ಪರ ಕೆಜೆಪಿ ಪಕ್ಷ ಕೂಡಾ ಆರಂಭಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ದಿನ ಕಳೆದಂತೆ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತದೆಯೇ ಹೊರತು ಯಾವ ಪಕ್ಷವಾದರೂ ಒಳ್ಳೆತನದ ಮಾತನಾಡಿದೆಯೇ..? ಇಲ್ಲ. ರೆಡ್ಡಿ ಸೋದರರ ಜಗಳದಿಂದ ನೊಂದ ಬಿಜೆಪಿಗೆ ಈಗ ಯಡಿಯೂರಪ್ಪ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ..ದಿನ ಕಳೆದಂತೆ ಸ್ಥಾನಮಾನದ ಮಾತನ್ನಾಡುವ ಯಡಿಯೂರಪ್ಪರ ಜಗಳದಿಂದ ಬಿಜೆಪಿ ಪಕ್ಷವಿಂದು ಬಡವಾಗಿದೆ. ಹೀಗಾಗಿ ರಾಜ್ಯದ ಜನತೆಗೆ ರಾಜ್ಯ ಸರ್ಕಾರದ ಮೇಲೆ ಭರವಸೆಯೇ ಹೊರಟು ಹೋಗಿದೆ. ಅಂತೂ ಇಂತೂ ಸದಾನಂದ ಗೌಡರನ್ನ ಉರುಳಿಸಿ ತನ್ನ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್‌ರನ್ನ ಸಿಎಂ ಮಾಡಿಸಿ ಆಯಿತು. ಆದರೆ ರಾಜ್ಯ ಸರ್ಕಾರದ ಆಡಳಿತಾವಧಿ ಕೊನೆಗೊಳ್ಳುತ್ತಾ ಬರುತ್ತಿದ್ದಂತೆ ಯಡಿಯೂರಪ್ಪರಿಗೆ ರಾಜ್ಯ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರುವುದು ಕೂಡಾ ಅವರ ಆತಂಕಕ್ಕೆ ಇನ್ನಷ್ಟು ಕಾರಣವಾಗಿದೆ. ಹೀಗಾಗಿ ಮುಂದೆ ತನ್ನ ಅಸ್ತಿತ್ವ ಉಳಿಯಲು ಸಾಧ್ಯ ಇಲ್ಲ ಎಂಬ ಅರಿವು ಕೂಡಾ ಯಡಿಯೂರಪ್ಪರಿಗೆ ಆಗಿದೆ. ಹೀಗಾಗಿ ಪರ್ಯಾಯ ಪಕ್ಷದ ರಚನೆಯಲ್ಲಿ ತೊಡಗಿದ್ದಾರೆ. ನಿಜಕ್ಕೂ ರಾಜ್ಯದ ಜನತೆಗೆ ಯಡಿಯೂರಪ್ಪರಿಲ್ಲದ ರಾಜ್ಯವನ್ನು ನಿರೀಕ್ಷಿಸಲು ಸಾಧ್ಯವಿದೆ ಎನ್ನುವುದನ್ನ ರಾಜ್ಯದ ಜನತೆ ಮನವರಿಕೆ ಮಾಡಿಸಿಕೊಟ್ಟಿದ್ದಾರೆ. ಈ ವಿಚಾರ ಮಾಜಿ ಸಿಎಂ ಬಿಎಸ್‌ವೈರಿಗೆ ಗೊತ್ತಿಲ್ಲವೆನಿಸುತ್ತದೆ. ಈ ವಿಚಾರವನ್ನ ಕೂಡಲೇ ಯಡಿಯೂರಪ್ಪನವರು ಅರಿತುಕೊಂಡರೆ ಅವರ ಮುಂದಿನ ಹಾದಿಗೆ ಸಹಕಾರಿಯಾಗಬಲ್ಲುದು.
ಪಕ್ಷದಲ್ಲಿದ್ದುಕೊಂಡೇ ಯಡಿಯೂರಪ್ಪ ಬಿಜೆಪಿ ನಾಯಕರ ವಿರುದ್ಧ ಹಗೆ ಸಾಧಿಸಿದಾಗಲೇ ಬಿಜೆಪಿಯಲ್ಲಿ ನಿರ್ಣಾಯಕ ಯುದ್ಧ ಶುರುವಾಯಿತು. ಇದಕ್ಕೆ ಬಿಜೆಪಿ ಹೈಕಮಾಂಡ್ ತಿರುಗೇಟು ಕೊಡಲು ಕೂಡಾ ಸಿದ್ಧತೆ ನಡೆಸಿತು. ಅದರ ಪರಿಣಾಮ ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ, ಸಿಎಂ ಸ್ಥಾನವನ್ನ ನೀಡಲೇ ಇಲ್ಲ. ಇದಕ್ಕಾಗಿ ಯಡಿಯೂರಪ್ಪ ಕಳೆದ ಹಲವು ತಿಂಗಳಿಂದ ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರ ವಿರುದ್ಧ ಬಿಎಸ್‌ವೈ ನೇರವಾಗಿ ವಾಗ್ದಾಳಿ ನಡೆಸಿದರು. ತನಗೆ ಬಿಜೆಪಿ ಗೂಟದ ಕಾರು ಕೊಟ್ಟರೂ, ಹಗರಣದ ನಂತರ ರಾಜೀನಾಮೆಯನ್ನ ಕೇಳದೇ, ಎಂಎಲ್‌ಸಿ ಮಾಡಿದ್ದನ್ನ ಮರೆತ ಯಡಿಯೂರಪ್ಪ ತಾವು ಬೆಳೆದು ಬಂದ ತಾಯಿ ಪಕ್ಷವನ್ನೇ ಹಿಗ್ಗಾಮುಗ್ಗ ಟೀಕಿಸಿದರು.ಇವರ ಹಠಮಾರಿತನಕ್ಕೆ ಇವರ ಬೆಂಬಲಿಗರು, ಸೋಮಶೇಖರ್ ರೆಡ್ಡಿ ನಿಂತು ಇವರು ಇದ್ದರೆ ಗುಜರಾತ್ ಅಭಿವೃದ್ಧಿಯನ್ನು ಮೀರಿಸುತ್ತಾರೆ ಎಂದು ಬೊಗಳೆ ಬಿಟ್ಟು ಇವರೇ ಹೀರೋ ಎಂದು ಬಿಂಬಿಸಲು ಪ್ರಯತ್ನಿಸಿದರು.ೊಪ್ಪಳದ ಬೂದಗುಂಪಾದಲ್ಲಿ ರೆಡ್ಡಿ ನೀಡಿದ ಈ ಹೇಳಿಕೆ ಪಕ್ಷಕ್ಕೆ ಮುಜುಗರವಾದರೂ ಬಿಜೆಪಿಯ ಯಾವ ನಾಯಕರು ತುಟಿ ಬಿಚ್ಚಲಿಲ್ಲ. ಇತ್ತ ಬಿಎಸ್‌ವೈ ದೂರವಾಗೋದು ಖಚಿತವಾಗುತ್ತಿದ್ದಂತೆ ಹೈಕಮಾಂಡ್ ತಿರುಗಿಬಿತ್ತು. ಇದರ ಮೊದಲ ಭಾಗದಲ್ಲಿ ಯಡಿಯೂರಪ್ಪ ಆಪ್ತ ಆಯನೂರು ಮಂಜುನಾಥ್‌ರನ್ನ ಉಚ್ಚಾಟನೆ ಮಾಡಿತು. ಜೊತೆಗೆ ಎರಡನೇ ಭಾಗದಲ್ಲಿ ಧನಂಜಯ್ ಕುಮಾರ್‌ರನ್ನ ಉಚ್ಚಾಟನೆ ಮಾಡಿತು. ಇದರ ನಂತರ ಕೆ.ಎಸ್.ಈಶ್ವರಪ್ಪ, ಸಿಎಂ ಶೆಟ್ಟರ್ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿ ಬಿಎಸ್‌ವೈ ಆಪ್ತರು ಪಕ್ಷ ಬಿಡದ ಹಾಗೇ ನೋಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಿದರು. ಇನ್ನು ಎರಡು ನಾಯಕರ ಉಚ್ಚಾಟನೆ ಬಗ್ಗೆ ಬಿಜೆಪಿ ಹೈಕಮಾಂಡ್ ಕಾರಣ ಕೊಡೋದು ಹೀಗೆ – ‘ಕರ್ನಾಟಕ ಬಂದ್ ದಿನ ಪಕ್ಷದ ನಾಯಕರ ವಿರುದ್ಧ ಧನಂಜಯ್ ಹೇಳಿಕೆ ನೀಡಿದ್ದರು. ಸಿಎಂ ಶೆಟ್ಟರ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದರು. ಈ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಬಿಜೆಪಿ ನೋಟಿಸ್ ನೀಡಿತ್ತು’ ಎಂದು. ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಹೈಕಮಾಂಡ್ ಉಚ್ಚಾಟನೆ ಮಾಡಿ ಯಡ್ಡಿ ಕೋಪಕ್ಕೆ ಮತ್ತಷ್ಟು ಇಂಬು ನೀಡಿತು. ಇನ್ನು ಬಿಎಸ್‌ವೈ ಆಪ್ತರಾದ ರೇಣುಕಾಚಾರ್ಯ, ರಾಜುಗೌಡ, ರೇವುನಾಯಕ್ ಬೆಳಮಗಿಯವರಿಗೆ ಹೆಚ್ಚುವರಿ ಖಾತೆ ನೀಡಲು ಯಡ್ಡಿ ಹೇಳಿದ್ದರು. ಆದರೆ ಇವರ ಬೆಲೆ ಕೊಡದ ಸಿಎಂ ಜಾರಕಿಹೊಳಿಗೆ ಹೆಚ್ಚುವರಿ ಖಾತೆ ನೀಡಿದ್ದರು. ಇದರಿಂದ ಕೆರಳಿದ ಯಡಿಯೂರಪ್ಪ ದೂರವಾಣಿ ಮೂಲಕ ಸಿಎಂರನ್ನ ತರಾಟೆ ತೆಗೆದುಕೊಂಡಿದ್ದರು. ಜೊತೆಗೆ ನನ್ನ ಆಪ್ತರನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಕೂಡಾ ಎಚ್ಚರಿಕೆ ನೀಡಿದ್ದರು.
ಹೀಗೆ ಹೈಕಮಾಂಡ್ ತನ್ನ ಬೆದರಿಕೆಗೆ ಬಗ್ಗದೇ ಇದ್ದಾಗ ಯಡಿಯೂರಪ್ಪರು ಹೇಳಿದ್ದೇನು ಗೊತ್ತಾ..?’ನನಗೆ ಮಾಡಿದ ಅಪಮಾನಕ್ಕಾಗಿ ಪಕ್ಷ ಬಿಡುತ್ತೀದ್ದೇನೆ. ಯಾವುದೇ ಸ್ಥಾನಮಾನಕ್ಕಾಗಿ ಆಸೆ ಪಟ್ಟು ಅಲ್ಲ, ಯಾರಿಗೆ ಬೇಕಾಗಿದೆ ಈ ಪಕ್ಷ. ನಾನು ಕಷ್ಟಪಟ್ಟು ಕಟ್ಟಿದ ಮನೆಯಲ್ಲಿ ಅವರೇ ಚೆನ್ನಾಗಿರಲಿ, ಈ ರಾಜ್ಯದ ಜನರ ಆರ್ಶೀವಾದವೊಂದಿದ್ದರೇ ಸಾಕು, ಮತ್ತೆ ಅಧಿಕಾರಕ್ಕೆ ಬರುತ್ತೇನೆ” ಎಂದು ಕಣ್ಣೀರು ಹಾಕುತ್ತಾ ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗದಲ್ಲಿ ನಡೆದ ‘ಪರಾಮರ್ಶೆಯ ಪರಿಕ್ರಮ, ನಿಮ್ಮ ಸಮಕ್ಷಮ’ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆಯುವುದಾಗಿ ಸ್ಪಷ್ಟಪಡಿಸಿದರು. ಹೀಗೆ ಪಕ್ಷದ ಕೇಂದ್ರ ನಾಯಕರಾದ ಅರುಣ್ ಜೇಟ್ಲಿ, ಎಲ್.ಕೆ. ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ವಿರುದ್ದವೂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದೇ ಬಂತು. ಯಡಿಯೂರಪ್ಪನವರ ಜಾಗದಲ್ಲಿ ನಾನಿದ್ದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದ ಡಿಸಿಎಂ ಈಶ್ವರಪ್ಪ, ದೆಹಲಿ ನಾಯಕರ ಜೊತೆ ಚಕ್ಕಂದವಾಡಿ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದರೆಂದು ಎಂದು ಯಡಿಯೂರಪ್ಪರು ಆರೋಪ ಮಾಡಲು ಮರೆತಿರಲಿಲ್ಲ. ಹೀಗೆ ಸಿಎಂ ಜಗದೀಶ್ ಶೆಟ್ಟರ್ ಕೂಡ ಮಾಜಿ ಸಿಎಂ ಸದಾನಂದ ಗೌಡ ಅವರ ಹಾದಿಯಲ್ಲೆೀ ಸಾಗುತ್ತಾ ಇದ್ದಾರೆ. ಶೆಟ್ಟರ್ ಇದರ ಪರಿಣಾಮ ಎದುರಿಸಬೇಕಾಗುತ್ತೆ ಅಂತಾ ಮಾಜಿ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿ ಹೊಸ ಪಕ್ಷವನ್ನ ಕಟ್ಟಿದ್ದಾರೆ. ಈ ಮೂಲಕ ಮಾಜಿ ಸಿಎಂ ದಿ.ಬಂಗಾರಪ್ಪನವರಂತೇ ಪಕ್ಷ ಬದಲಿಸುವ, ಹೊಸ ಪಕ್ಷ ಹುಟ್ಟು ಹಾಕುವ ಪರಂಪರೆಯನ್ನು ಇದೀಗ ಮಾಜಿ ಸಿಎಂ ಯಡಿಯೂರಪ್ಪ ಮುಂದುವರೆಸಿದ್ದಾರೆ. ಹೀಗಾಗಿ ಬಿಎಸ್‌ವೈ ರಾಜಕೀಯ ನಡೆ ಮುಂಬರುವ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಮಾಡುವುದಂತೂ ನಿಶ್ಚಿತ. ವಿಜಯದಶಮಿಯಂದು ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ತನ್ನ ಹೊಸ ಪಕ್ಷದ ಚಟುವಟಿಕೆಗೆ ಬೆನ್ನುಡಿ ಬರೆದಿರುವ ಯಡಿಯೂರಪ್ಪರು ಬರುವ ಡಿ.10ರಂದು ಹಾವೇರಿಯಲ್ಲಿ ನಡೆಯಲಿರುವ ಬಿಎಸ್‌ವೈ ನೇತೃತ್ವದ ಬೃಹತ್ ಸಮಾವೇಶದಲ್ಲಿ ಅಂದೇ ಪಕ್ಷದ ಹೆಸರು ಘೋಷಣೆ ಸಾಧ್ಯತೆ ಇದೆ. ಇನ್ನು ಡಿಸೆಂಬರ್ 10ರಂದು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ತಾಂತ್ರಿಕ ಕಾರಣದಿಂದ ಡಿಸೆಂಬರ್ ಮುಂಚೆ ರಾಜೀನಾಮೆ ನೀಡದ ಯಡಿಯೂರಪ್ಪ ಕೆಜೆಪಿ ಹೆಸರಿಗೆ ಹಾಗೂ ಚಿಹ್ನೆಗೆ ಸವಾರಿ ನಡೆಸಿದ್ದರು. ಯಾಕೆಂದರೆ ಈಗಾಗಲೇ ಇವರ ಪಕ್ಷದ ಹೆಸರು ಹಾಗೂ ಚಿಹ್ನೆ ನೋಂದಣಿಯಾಗಿತ್ತು. ಇನ್ನು ಡಿಸೆಂಬರ್‌ನಲ್ಲಿ ಪಕ್ಷದ ಘೋಷಣೆಯ ಬಳಿಕ ಸದಸ್ಯತ್ವ ಪ್ರಕ್ರಿಯೆ ಆರಂಭ ಮಾಡುತ್ತಾರೆ. ಏನೇ ಆಗಲಿ, ಒಂದಂತೂ ನಿಜ. ಯಡಿಯೂರಪ್ಪ ಇಲ್ಲದೇ ರಾಜ್ಯದ ರಾಜ್ಯಭಾರ ನಡೆಯುತ್ತೆ. ಇದನ್ನು ಸದಾನಂದ ಗೌಡರು, ಶೆಟ್ಟರು ನಿರೂಪಿಸಿದ್ದಾರೆ. ಇನ್ನು ಮುಂದೆ ಬರುವ ಸಿಎಂಗಳು ನಿರೂಪಿಸುತ್ತಾರೆ. ಇದನ್ನ ಯಡಿಯೂರಪ್ಪ ಅರ್ಥ ಮಾಡಿದರೆ ಬಹಳ ಒಳ್ಳೆಯದು.
*************************