ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?
– ರಾಕೇಶ್ ಎನ್ ಎಸ್
ಇಷ್ಟೇ ಬರೆದು ಪತ್ರ ವ್ಯವಹಾರ ಶುರು ಮಾಡುವುದು ಪತ್ರ ಸಂಪ್ರದಾಯದ ಉಲ್ಲಂಘನೆ ಅನ್ನುವುದೇನೋ ನಿಜ. ಆದರೆ ನಾನು ಏನುಮಾಡಲಿ? ಯಾವ ಪ್ರಿಫಿಕ್ಸ್,ಸಫಿಕ್ಸ್ ಬಳಸೋದು ಅಂತ ಗೊತ್ತೇ ಆಗುತ್ತಿಲ್ಲ ಮಾರಾಯ್ತಿ. ಕಲ್ಲನ್ನು ಕಲ್ಲು ಎಂದು ಕರೆಯುವುದನ್ನು ಬಿಟ್ಟುಅದಕ್ಕೆ ಯಾವುದೇ ಪ್ರಿಫಿಕ್ಸ್ ಆಥವಾ ಸಫಿಕ್ಸ್ ಸೇರಿಸಿದರೂ ಅದು ತನ್ನ ಗುಣ, ಗುಣಮಟ್ಟ, ಆಕಾರ, ಆಕೃತಿ, ದೃವ್ಯರಾಶಿಗಳಲ್ಲಿ ಕಿಂಚಿತ್ತುಬದಲಾವಣೆ ತಂದು ಕೊಳ್ಳಲಾರದು ಎಂಬುದು ಕಲ್ಲು ಹೃದಯದವಳಾದ (ನೀನೇ ಕರೆದುಕೊಂಡಂತೆ) ನಿನಗೆ ಚೆನ್ನಾಗಿಯೇ ಗೊತ್ತಿದೆ.ನಾನು ನಿನ್ನನ್ನು ಏಕೆ ಗೌರವಿಸುತ್ತಿದ್ದೆ ಎಂದು ಕಾರಣ ಕೊಟ್ಟು ಹೇಳಬಹುದಾದ ಕೆಲವೇ ಕೆಲವು ಕಾರಣಗಳಲ್ಲಿ ಒಂದು ನೀನು stone hearted ಆಗಿದ್ದರೂ ಅದಕ್ಕಿಂತ ಹೆಚ್ಚು strong hearted ಆಗಿದ್ದದ್ದು. ಈ ಕಲ್ಲು ಹೃದಯಕ್ಕು ಗಟ್ಟಿ ಹೃದಯಕ್ಕೂ ಅಂಗ್ಲ ಭಾಷೆಯಲ್ಲಿಎರಡೇ ಎರಡು ಸ್ಪೆಲ್ಲಿಂಗ್‌ನ ವ್ಯತ್ಯಾಸವಷ್ಟೇ ಇದ್ದರೂ ಕೂಡ ಆ ಎರಡು ಸ್ಪೆಲ್ಲಿಂಗ್‌ಗಳು ನಮ್ಮ ವ್ಯಕ್ತಿತ್ವ, ವ್ಯವಹಾರ, ನಡೆ ನುಡಿಗಳಲ್ಲಿತರುವ ವ್ಯತ್ಯಯ ಅಪಾರವಾದದ್ದು. ಈ ಸ್ಪೆಲ್ಲಿಂಗ್ ವಿಷಯ ಬಿಟ್ಟು ಬಿಡೋಣ. ಏಕೆಂದರೆ ಈ ಎರಡು ಭಾಷೆಗಳಲ್ಲೂ ’ಅಪಾರ ಪಾಂಡಿತ್ಯ’ಸಂಪಾದಿಸಿರುವ ನಿನಗೆ ನಾನಂತೂ ಏನೂ ಹೇಳಲಾಗದು. “ನನ್ನದು ಏನೇ ಇದ್ದರೂ ಹೇಳಿ ಕೇಳಿ ಮೊದಲೇ ಚೂರು… ಪಾಪಿ ನಾನು”…
ಆದರೂ ನನಗೆ ನನ್ನ ಭಾವ ಮತ್ತು ಜ್ಞಾನ ಪರಿಧಿಯಲ್ಲಿ ಹೊಳೆದ ಒಂದು ಅಂಶವನ್ನು ನಿನ್ನ ಮುಂದೆ ಇಡುತ್ತೇನೆ. ಒಪ್ಪಿಕೊ ಎಂದುಒತ್ತಾಯಿಸಲಾರೆ… ಒಪ್ಪದಿದ್ದರೂ ನಾನೇನು ಕಳೆದುಕೊಳ್ಳಲಾರೆ. ನನ್ನ ಪ್ರಕಾರ ಕಲ್ಲು ಹೃದಯ ಎಂದರೆ ಪಲಾಯನವಾದ. ಯಾವುದೇಸ್ಥಿತಿ, ಪರಿಸ್ಥಿತಿ ಎದುರಾದಗಲೂ ಅದಕ್ಕೆ ಬೆನ್ನು ಹಾಕಿ ಓಡುವುದು. ಉದಾಹರಣೆಗೆ ನಾನು ನಿನಗೆ ಬೈದದ್ದೆ ಆದರೆ ಆಮೇಲೆ ಫೋನ್ರಿಸೀವ್ ಮಾಡದಿರುವುದು, ಮೆಸೆಜ್‌ಗೆ ರಿಪ್ಲೈ ಮಾಡದಿರುವುದು ಇತ್ಯಾದಿ. ಅದೇ ಗಟ್ಟಿ ಹೃದಯ ಎಂದರೆ ನಾನು ನಿನ್ನಲ್ಲಿ ಅದೇಷ್ಟೆ ಪರಿಪರಿಯಾಗಿ ಪಪ್ಪಿ ಕೇಳಿದ್ದರೂ ಕೂಡ ಅದನ್ನು ಕೊಡದೆ ಆದರೆ ನನ್ನನ್ನು ಕಳೆದುಕೊಳ್ಳದೆ ವ್ಯವಹರಿಸುತ್ತಿದ್ದಿ ಅಲ್ವಾ ಅದು. ಇದರಿಂದ ನಿನ್ನಬಗ್ಗೆ ನನಗಿದ್ದ ಪ್ರೀತಿ ಹೆಚ್ಚೇನು ಆಗಿಲ್ಲ. ಅದು ಆಗಲೂ, ಈಗಲೂ, ಆ ಕ್ಷಣವೂ, ಈ ಕ್ಷಣವೂ ಹಾಗೇ ಇದೆ ಸಾಗರದಂತೆ. ಅದರಸಾಂದ್ರತೆ, ತೀವೃತೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಅದ್ದರಿಂದ ನಾನು ನಿನ್ನಿಂದ ಏನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನು ನೀನು ಅರ್ಥಮಾಡಿಕೊಳ್ಳುವಲ್ಲೆ ಸಂಪೂರ್ಣ ಎಡವಿದ್ದಿ ಎಂದು ನನಗನಿಸುತ್ತೆ. ಅದ್ದರಿಂದಲೇ ಈ ಎಲ್ಲ ಸಮಸ್ಯೆ.
ನನ್ನ ನಿನ್ನ ಪರಿಚಯಕ್ಕೆ ೯ರ ಹರೆಯ. ನಿನ್ನ ನನ್ನ ಸಂಬಂಧಕ್ಕ್ಕೆ ೬ರ ಪ್ರಾಯ. ನಿನ್ನನ್ನು ನಾನು ಪಿಯು ದಿನದಲ್ಲಿ ಕಂಡಾಗ ನನಗೆಅನ್ನಿಸಿದ್ದು ನೀನೊಬ್ಬಳು ವಿಶಿಷ್ಟ ಹುಡುಗಿ ಎಂದು. ಆದರೆ ಈಗ ಅನಿಸುತ್ತದೆ ನಿನ್ನದು ವಿಶಿಷ್ಟತೆ ಅಲ್ಲ ವಿಲಕ್ಷಣತೆ ಅಂತ!
ಮೊನ್ನೆ ನನಗೆ ಅಪಘಾತವಾಗಿತ್ತು. ನನ್ನ ಅಕ್ಕ ಪಕ್ಕನೇ ಕೂತಿದ್ದ ಇಬ್ಬರು ಇನ್ನಿಲ್ಲವಾದರು. ನಾನು ಆಸ್ಪತ್ರೆ ಪಾಲಾದೆ. ಬದುಕುತ್ತೇನೋ,ಇಲ್ಲವೋ ಎಂಬುದೆಲ್ಲವೂ ಅನಿಶ್ಚಿತ. ಅದು ಹೇಗೋ ಬದುಕಿಕೊಂಡೆ. ಪವಾಡ ಸದೃಶವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನಾನುಅರೆಪ್ರಜ್ಞಾವಸ್ಥೆಯಲ್ಲೂ ನಿನ್ನ ಹೆಸರು ಬಡ ಬಡಿಸುತ್ತಿದ್ದೆ ಅಂತೆ. ನನ್ನ ಜನ್ಮಕ್ಕಿಷ್ಟು! ನನಗೆ ನನ್ನ ಬಗ್ಗೆನೇ ಅಸಹ್ಯವಾಗುತ್ತಿದೆ ಮಾರಾಯ್ತಿ.
ನಿನಗೆ ಈಗ ನನ್ನ ಮೇಲೆ ಕೋಪಕ್ಕೆ ಕಾರಣ ನಿರಂತರವಾಗಿ ನಾನು ಫೋನ್ ಮಾಡುತ್ತಿರುವುದು ಮತ್ತು ನಿನ್ನ ಮಾತಿನ ಪ್ರಕಾರಹೇಳುವುದಾದರೆ ಬಾಯಿಗೆ ಬಂದಂತೆ ಮೆಸೇಜ್ ಮಾಡುತ್ತಿರುವುದು.ಅಕ್ಸಿಡೆಂಟ್‌ನ ಕತೆ ಮೊದಲು ಹೇಳಿ ಮುಗಿಸುತ್ತೇನೆ. ನಿಜ ಹೇಳಿದರೇ ನೀನು ನಂಬೋದಿಲ್ಲ ಅಂತ ಗೊತ್ತು. ಆದರೆ ನಿಜ ಹೇಳದಿದ್ದರೆನಮ್ಮ ಸಂಬಂಧಕ್ಕಿದ್ದ ಪ್ರಾಮಾಣಿಕತೆ ಮತ್ತು ವಿಶ್ವಾಸರ್ಹತೆಯ ಲೇಪಕ್ಕೆ ಕುತ್ತು. ಏನೇ ಆಗಲಿ, ನಿಜ ಹೇಳುವೆ. ಏಕೆಂದರೆ ಇನ್ನು ನಿನ್ನನ್ನುಕಳ ಕೊಳ್ಳುವ ಭಯ, ಪಡ ಕೊಳ್ಳವ ತವಕ ಎರಡೂ ನನಗಿಲ್ಲ. ಕಳೆದುಕೊಂಡರೆ ಒಂದು ಕಲ್ಲು, ಪಡೆದುಕೊಂಡರೂ ಒಂದು ಕಲ್ಲು ಅಷ್ಟೆಅನ್ನುವಷ್ಟು ನಿನ್ನ (ನಮ್ಮ ಸಂಬಂಧದ) ಬಗ್ಗೆ ನಿರಾಶನಾಗಿದ್ದೇನೆ ಅಥವಾ ವೈರಾಗ್ಯ ಪಡೆದಿದ್ದೆನೆ ಎಂದು ನೀನು ತಿಳಿದುಕೊಂಡರೂಅಡ್ಡಿಯಿಲ್ಲ.
ನನಗೆ ಅಕ್ಸಿಡೆಂಟ್ ಆದವತ್ತು ನಾನು ನಿನಗೆ ಒಂದು ಮೆಸೆಜ್ ಮಾಡಿದ್ದೆ. ನಾನು ಸಾಯೋ ತನಕವೂ ನಿನಗೆ ಕಾಲ್ ಮಾಡುತ್ತಿರುವೆಅಂತ. ಕಾಕತಾಳೀಯವೆಂದರೆ ಹಾಗೇ ಕಾಲ್ ಮಾಡುತ್ತಿರುವಾಗಲೇ ಅಕ್ಸಿಡೆಂಡ್ ಆಗಿತ್ತು. ದುರದೃಷ್ಟವಶಾತ್ ನಾನು ಸಾಯಲಿಲ್ಲ. ನಿನಗೆಕೊಟ್ಟ ಮಾತು ನನಗೆ ಉಳಿಸಿಕೊಳ್ಳಲಾಗಲಿಲ್ಲ. ವೆರಿ ವೆರಿ ಸ್ಸಾರಿ. ಸಾಯುವ ಒಂದು ಅವಕಾಶ ಮತ್ತು ನಿನಗೆ ಕೊಟ್ಟ ಮಾತನ್ನುಉಳಿಸಿಕೊಳ್ಳಬಹುದಾಗಿದ್ದ ಪ್ರಥಮ ಅವಕಾಶ ನನ್ನ ಕೈಯಿಂದ ತಪ್ಪಿತು. ಹಾಗೇಯೇ ನಿನಗೆ ಕಿರಿಕಿರಿ ಮಾಡುತ್ತಿದ್ದ, ರೇಜಿಗೆ ಹುಟ್ಟಿಸಿದ್ದಅಸಭ್ಯ, ಅಸಹ್ಯ ಪ್ರಾಣಿಯೊಂದರ ಕಾಟದಿಂದ ತಪ್ಪಿಸಿಕೊಳ್ಳುವಂತಹ ನಿನ್ನ ಅವಕಾಶ ಕೂಡ ಮುಂದೂಡಲ್ಪಟ್ಟಿತ್ತು. ಇಬ್ಬರದ್ದು ಕೂಡದುರದೃಷ್ಟವೇ ಸರಿ.
ಸರಿ, ಈಗ ಚೇತರಿಸಿಕೊಳ್ಳುತ್ತಿದ್ದೇನೆ, ಖಂಡಿತವಾಗಿಯೂ ಮೊದಲಿನಂತೆಯೆ ಆಗುತ್ತೇನೆ. ನೊ ಡೌಟ್. ನನ್ನ ಮೈಮೇಲಿನ ಎಲ್ಲಾಗಾಯಗಳು ಮಾಯವಾಗುತ್ತದೆ. ಆದರೆ, ಮನಸ್ಸಿಗಾದ ಗಾಯ ಅದರಲ್ಲೂ ನೀನು ಮಾಡಿದ ಗಾಯವಿದೆಯಲ್ಲ ಅದು ಯಾವತ್ತೂಮಾಸಲಾರದು. ನಾನು ಸಾಯುವವರೆಗೂ ಹಸಿ ಹಸಿಯಾಗಿಯೇ ಇರುತ್ತದೆ. ನೀನು ನನ್ನ ಮನಸ್ಸನ್ನು ಗೀರಿ ಗೀರಿ ಹಾಕಿದ್ದಿ, ಪುಡಿ ಪುಡಿಮಾಡಿದ್ದಿ, ಚಿಂದಿ ಚಿತ್ರಾನ್ನ ಮಾಡಿದ್ದಿ. ನಿನ್ನ ಜೊತೆ ಒಮ್ಮೆ ಮಾತಾಡಬೇಕು ಎಂದು ಅದೇಷ್ಟೋ ಬಾರಿ ತವಕಿಸುತ್ತಿದ್ದೆ, ಗಾಯದನೋವಿನಲ್ಲೂ, ರಕ್ತದ ಸೋರುವಿಕೆಯಲ್ಲೂ, ಔಷಧ, ನಿದೆರೆಯ ಅಮಲಿನಲ್ಲೂ, ಸಾಯುವ, ಬದುಕುವ ಈ ಒದ್ದಾಟದಲ್ಲೂ. ಒಮ್ಮೆ ನಿನ್ನಜೊತೆ ಮಾತನಾಡಬೇಕು, ಒಮ್ಮೆ, ಒಮ್ಮೆ, ಒಮ್ಮೆ, ಒಂದೇ ಒಂದು ಸಾರಿ… ಇಲ್ಲ ನಿನ್ನ ಕಲ್ಲು ಮನಸ್ಸು ಕರಗಲೇ ಇಲ್ಲ. ಅದು ಮತ್ತಷ್ಟುಕಲ್ಲಾಯಿತು, ಕರಿ ಕಲ್ಲಾಯಿತು, ಕಲ್ಲಿದ್ದಲ್ಲಾಯಿತು.
ನೋಡು, ನನಗೆ ನೂರಾರು ಗೆಳೆಯರಿದ್ದಾರೆ ಅನ್ನುವುದು ನಿನಗೆ ಸೇರಿದಂತೆ ಎಲ್ಲರಿಗೂ ಗೊತ್ತು. ಆದರೆ ನನಗೆ ಅಪಘಾತವಾದ ಸುದ್ದಿಕೇಳಿ ನನ್ನ ಕೆಲ ಸ್ನೇಹಿತರನ್ನು ಬಿಟ್ಟು ಯಾರೊಬ್ಬರೂ ಸ್ಪಂದಿಸಲಿಲ್ಲ. ದಿನ ಮೆಸೇಜ್ ಮಾಡುವವರದ್ದು, ದಿನಕ್ಕೆರಡು ಬಾರಿ ಕಾಲ್ಮಾಡುತ್ತಿದ್ದವರದ್ದು ಸುದ್ದಿನೇ ಇಲ್ಲ. ನನಗೆ ಡೌಟ್… ನನಗೆ ಅಕ್ಸಿಡೆಂಟ್ ಆದದ್ದೋ ಅಲ್ಲಾ ಅವರಿಗೋ ಅಂತ! ಅವರನ್ನು ಬಿಟ್ಟು ಬಿಡು..ಅವರಿಗೂ ನನಗೂ ಹೆಚ್ಚೇನು ಕೊಡು ಕೊಳ್ಳುವಿಕೆಯೂ ಇಲ್ಲ. ಅಥವಾ ಅವರಿಂದ ಇಂತಹದ್ದನ್ನು ನಿರೀಕ್ಷೆ ಮಾಡುವಷ್ಟು ಮೂರ್ಖನೂನಾನಲ್ಲ. ಇದರರ್ಥ ನಿನ್ನಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ ಎಂದು ತೀರಾ ಬಾಲಿಶವಾಗಿ ನೀನು ನಿರ್ಧರಿಸಬೇಡ.
ನಾನು ನನ್ನ ಈ ಚಿಕ್ಕ ವಯೋಮಾನದಲ್ಲೆ ಒಂದಿಷ್ಟು ಸಾಧನೆ ಮಾಡಿದ್ದರೂ ಕೂಡ ಒಂದೇ ಒಂದು ಅಭಿನಂದನೆ ಮೆಸೆಜ್ ಮಾಡದ,ಮಾತಿನಲ್ಲಿ ಮೆಚ್ಚುಗೆ ಸೂಚಿಸದ, ನಾನು ಅದೇನೋ ಬರೆದು ತಂದು ನಿನ್ನ ಮುಂದಿಟ್ಟಾಗ ಅದನ್ನು ತೀಡಾದ, ನನ್ನ ಸರಿ ತಪ್ಪುಗಳ ಬಗ್ಗೆಒಮ್ಮೆಯೂ, ಒಂಚೂರು ವಿಮರ್ಶೆ ಮಾಡದ ಎಲ್ಲವನ್ನೂ ಲೆಕ್ಕಾಚಾರದ ಮೂಸೆಯಲ್ಲೇ ನೋಡುತ್ತಿದ್ದ ನಿನ್ನತ್ತ ಒಂದು ಹಿಡಿ ಗಾಳಿಗೋಸ್ಕರ,ಈ ಬದುಕಿಗೋಸ್ಕರ ಒದ್ದಾಡುತ್ತಿದ್ದಾಗ ಮಾನಸಿಕ ಬೆಂಬಲಕ್ಕಾಗಿ ನೋಡುವಷ್ಟು ಮುಠ್ಠಾಳ ನಾನಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ನಿನ್ನಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದೇನೆ ಮಾರಾಯ್ತಿ! ನಿನ್ನ ದನಿ ಕೇಳಿದರೆ ನಾನು ಬದುಕುತ್ತೇನೆ ಎಂದು ಗೊತ್ತಾದದ್ದೇ ಆದರೆ ನಿನ್ನಸಿಮ್‌ನ್ನೆ ಬದಲಾಯಿಸಿ ಬಿಡುವಷ್ಟು ನಿಷ್ಕರುಣಿ, ನಿರ್ದಯಿ ಮತ್ತು ಕಠೋರ ಹೃದಯದವಳು ನೀನು.
ಆದರೂ ನಾನು ನಿನಗೆ ಮೆಸೇಜ್ ಮಾಡಿದ್ದೆ. ಬೈದು ಮೆಸೇಜ್ ಮಾಡಿದ್ದೆ, ಮತ್ತೊಮ್ಮೆ ನಿನ್ನ ಮಾತಲ್ಲೇ ಹೇಳುವುದಾದರೆ ಬಾಯಿಗೆಬಂದಂತೆ ಮೆಸೆಜ್ ಮಾಡಿದ್ದೆ. ಒಂದರ ಮೇಲೊಂದರಂತೆ ಕಾಲ್ ಕೊಟ್ಟೆ. ಏಕೆ? ನಿನಗೆ ನಾನು ಇಲ್ಲಿ ಮತ್ತೊಂದು ವಿಷಯ ಸ್ಪಷ್ಟಪಡಿಸಬೇಕು. ನೀನು ನನ್ನನ್ನು ಅದೇಷ್ಟೆ ಕಾಡಿಸಿದ್ದರು, ಪೀಡಿಸಿದ್ದರು ಕೂಡ ನಿನ್ನ ಮೇಲಿನ ಪ್ರ್ರೀತಿ ಮಾತ್ರ ಈಗಲೂ ಈ ಕ್ಷಣವೂ ನನ್ನಲ್ಲಿಚಿಮ್ಮುತ್ತಲೇ ಇದೆ. ಇದೇ ವಿಧಿ ವಿಪರ್ಯಾಸ! ಓ ವಿಧಿಯೇ ನನ್ನನ್ನು ನೀನು ಏನು ಮಾಡಬೇಕೆಂದಿದ್ದಿಯಾ?
ನನ್ನ ನಿನ್ನ ಸಂಬಂಧದ ಮೂಲಭೂತ ಅಂಶಗಳತ್ತ ಒಮ್ಮೆ ಗಮನ ಹರಿಸೋಣ. ನನಗೆ ನಿನ್ನ ಮೇಲೆ ವಿಶೇಷ ಪ್ರೀತಿ (ಇನ್ನು ಲವ್ಎಂದಷ್ಟೇ ತಿಳಿದುಕೊಳ್ಳಬೇಡ) ಹುಟ್ಟಿಕೊಂಡದ್ದು. ಒಂದು ಸಂಜೆ. ಅವತ್ತು ನನ್ನ ನಿನ್ನ ಮಧ್ಯೆ ಏನು ನಡೆದಿತ್ತು ಎಂಬುದು ನಿನಗೆನೆನಪಿರಬಹುದು, ಅದೇ ನೆನಪಿಲ್ಲ ಎಂದಾದರೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ನಿನ್ನ ಬಗ್ಗೆ ನನಗೆ ಸಿಕ್ಕಾಪಟ್ಟೆ ಕೋಪಬಂದಿದ್ದದ್ದು ಈ ಘಟನೆ ನಡೆಯುವುದಕ್ಕಿಂತ ಎಷ್ಟೋ ಹಿಂದೆ. ಅದು ಕೂಡ ಯಾವಾಗ ಎಂದು ನಿನಗೆ ಗೊತ್ತಿರಬಹುದು. ಗೊತ್ತಿಲ್ಲ ಎಂದರೆಮತ್ತೊಮ್ಮೆ ಹೇಳುತ್ತಿದ್ದೇನೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಿಬ್ಬರಿಗೆ ಗೊತ್ತಿದ್ದ ಪಕ್ಕಾ ಸತ್ಯವೆಂದರೆ ನಾವಿಬ್ಬರು ಲವ್(ಲೋಕದ ಕಣ್ಣೆವೆಯ ವ್ಯಾಖ್ಯಾನದಲ್ಲಿ) ಮಾಡುತ್ತಿರಲಿಲ್ಲ. ಆಫ್‌ಕೋರ್ಸ್, ನಾನಂತು ಯಾವ ಆಂಗಲ್‌ನಿಂದಲೂ ನಿನ್ನನ್ನು ಲವ್ ಮಾಡಲುಸಾಧ್ಯವೇ ಇರಲಿಲ್ಲ!
ಆ ಬಳಿಕ ನಮ್ಮ ನಡುವೆ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಯಾವಾಗ, ಏನೆಲ್ಲ ನಡೆದಿದೆ, ನಡೆದಿಲ್ಲ ಅನ್ನುವುದು ನಮ್ಮಿಬ್ಬರಮನದಲ್ಲಿ ಕಲ್ಲಿನ ಮೇಲಿನ ಬರಹದಂತೆ ಇದೆ. ಇರಲಿ ಬಿಡು, ನೀನು ನನ್ನುನ್ನು ನಾಟಕದವ ಅಂದದ್ದು ಅಥವಾ ಕಳೆದ ಏಪ್ರಿಲ್‌ನಲ್ಲಿ ನಾನುಊರಿಗೆ ಬಂದಿದ್ದಾಗ ನೀನು ಸಿಗುವೆ ಎಂದು ಹೇಳಿ ಕೈಕೊಟ್ಟದ್ದು ನನಗೆ ಅತ್ಯಂತ ನೋವು ಕೊಟ್ಟ ಸಂಗತಿ ಅಂತ ನಾನು ನಿನಗೆಹೇಳಿದ್ದೆ. ಹಾಗೇ ನಾಟಕದವ ಅಂದ ವಿಷಯವನ್ನು ನಾವಿಬ್ಬರು ಅಲ್ಲೇ ಬಿಟ್ಟು ಬಹಳಷ್ಟು ದೂರ ಒಂದಾಗಿಯೇ ಬಂದಿದ್ದೇವೆ.
ಆದರೆ ನೀನು ಸಿಗುತ್ತೇನೆ ಎಂದು ಹೇಳಿ ಮೋಸ ಮಾಡಿದ ಘಟನೆ ಮತ್ತು ಮೋಸ ಮಾಡಿದ ರೀತಿಯ ಬಳಿಕ ನಿನ್ನ ಜೊತೆಮಾತನಾಡುವುದನ್ನು ನಾನು ಬಹಳಷ್ಟು ಕಡಿಮೆ ಮಾಡಿದ್ದೆ. ನನಗೆ ಕಳೆದ ವರ್ಷ ಬರ್ತ್ ಡೇ ವಿಶ್ ಕೂಡ ಮಾಡದೇ ನೀನು ಅದೇಷ್ಟುಹಠವಾದಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೆ. ’ಮುಯ್ಯಿಗೆ ಮುಯ್ಯಿ’ ಎಂಬಂತೆ ನಿನ್ನ ಬರ್ತ್ ಡೇಗೂ ನಾನು ವಿಶ್ಮಾಡಿರಲಿಲ್ಲ. ಆ ಮೇಲೆ ನಾನು ನಿನಗೆ ಕಾಲ್ ಮಾಡಿದ್ದು ನಿನ್ನ ಲವರ್‌ಗಳಲ್ಲಿ ಒಬ್ಬ ನನಗೆ ನಿನ್ನ ನಂಬರ್ ಕೊಡು ಎಂದು ದುಂಬಾಲುಬಿದ್ದ ಬಳಿಕವೇ. ಅಂದರೆ ಸುಮಾರು ಆರು ತಿಂಗಳ ಬಳಿಕ. ಅನಂತರ ಕಳೆದ ವರ್ಷಾಂತ್ಯಕ್ಕೆ ಊರಿಗೆ ಬರುತ್ತೇನೆ ಎಂದಾಗಗೆಳತಿಯೊಬ್ಬಳ ಮದುವೆಯ ದಿನ ನಾವು ಭೇಟಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿರಲಿಲ್ಲ. ಅಂದು ನಮ್ಮ ಭೇಟಿ ಕೂಡಆಯಿತು. ಅಂದು ನನಗೆ ನಿನ್ನ ವರ್ತನೆ ನೋಡಿ ತುಂಬ ಖುಷಿಯಾಗಿತ್ತು. ನಿನ್ನ ಆ ಮೋಸದ ಕೊಳೆ ಆ ಮದುವೆಯಲ್ಲಿ ನಿನ್ನ ಅಟಿಟ್ಯೂಡ್ನೋಡಿ ತೊಳೆದು ಹೋಗಿತ್ತು.
ಸೋ ನಾನು ಅವತ್ತು ಒಂದು ನಿರ್ಧಾರಕ್ಕೆ ಬಂದೆ. ಕಳೆದ ವರ್ಷದಲ್ಲಿ ಅಂದರೆ ೨೦೧೧ರ ಏಪ್ರಿಲ್‌ನಿಂದ ಡಿಸೆಂಬರ್ ತನಕ ನನ್ನ – ನಿನ್ನಮಧ್ಯೆ ಇದ್ದ ನಿರ್ವಾತವನ್ನು ಇಲ್ಲವಾಗಿಸಿ ಮತ್ತೆ ನಮ್ಮ ಸಂಬಂಧವನ್ನು ಸರಿ ಪಡಿಸಿಕೊಳ್ಳಬೇಕು ಎಂಬುದೇ ನನ್ನ ನಿರ್ಧಾರವಾಗಿತ್ತು.ಅದೇ ರೀತಿ ನನ್ನ ಜೀವನದಲ್ಲಿ ಆ ಅವಧಿ ಬಹಳ ಮಹತ್ವಪೂರ್ಣವಾಗಿದ್ದು ಆ ಬಗ್ಗೆ ನಿನಗೆ ಗೊತ್ತೆ ಇರಲಿಲ್ಲ. ನಿನ್ನ ಜೊತೆ ಒಮ್ಮೆ ಈ ಬಗ್ಗೆಮಾತಾಡಬೇಕು ಎಂಬುದೇ ನನ್ನ ಆಸೆಯಾಗಿತ್ತು. ಆದರಂತೆ ಈ ವರ್ಷದ ಮೊದಲ ವಾರ ನಾನು ನಿನಗೆ ಕಾಲ್ ಮಾಡಿದ್ದೆ. ಮೆಸೇಜ್ಮಾಡಿದ್ದೆ. ಆದರೆ ಈ ವಾರ ಬೇಡ ಮುಂದಿನ ವಾರ ಕಾಲ್ ಮಾಡು ಅಂದಿದ್ದೆ. ಅದರಂತೆ ನಾನು ಮಾಡಿದರೆ, ನಿನ್ನ ರೆಸ್ಪಾನ್ಸ್ ಇರಲಿಲ್ಲ.ನಂತರ ಒಂದಷ್ಟು ಬಾರಿ ಮಾಡಿದರೆ ಬೇರೆ ಸಮಯದಲ್ಲಿ ನಾನೇ ಮಾಡುವೆ ಎಂಬ ನಿನ್ನ ಉತ್ತರ, ಆ ಬೇರೆ ಸಮಯ ಬೇಗಬಾರದಿರುವುದನ್ನ ಕಂಡಾಗ ನಾನೇ ಮತ್ತೇ ಮತ್ತೇ ಮೆಸೆಜ್ ಮಾಡಿದರೆ ನಾನು ಪ್ರ್ಯಾಕ್ಟೀಸ್ ನಲ್ಲಿದ್ದೆ, ಅರ್ಜೆಂಟ್, ಏನೋ ಬರಿಲಿಕ್ಕೆ ಇದೆ,ಓದಲಿಕ್ಕೆ ಇದೆ ಎಂಬ ನಿನ್ನ ಸಿದ್ಧ ಉತ್ತರಗಳು. ಒಬ್ಬ ಹೊಣೆಗೇಡಿ ವ್ಯಕ್ತಿ ಮಾತ್ರ ಇಂತಹ ಉತ್ತರ ನೀಡಲು ಸಾಧ್ಯ ಎಂಬುದು ನನ್ನಭಾವನೆ. ಸರಿ ಹಾಗೇ ೪೦ ದಿನಗಳು ಉರುಳಿದ ಮೇಲೆ ನಿನಗೆ ನಾನು ಖಾರವಾಗಿಯೇ ಮೆಸೇಜ್ ಮಾಡಿದ್ದೆ. ನೀನು ಕೂಡ ಅಷ್ಟೆಖಾರವಾಗಿ ಪ್ರತಿಕ್ರಿಯಿಸಿದ್ದಿ.
ಮತ್ತೆ, ಮೆಸೇಜ್‌ನಲ್ಲೇ ತೇಪೆ ಎಲ್ಲ ಹಾಕಿ ಒಂದು ಹಂತಕ್ಕೆ ನಿನಗೂ ಸಮಾಧಾನವಾಯಿತು. ನೀನು ಹಗಲು ಕಾಲ್ ಮಾಡಬೇಡ, ರಾತ್ರಿ೯ರ ಬಳಿಕ ಮಾಡು ಎಂದು ಹೇಳಿದ್ದು, ನಾನು ಅದಕ್ಕೆ ಒಪ್ಪಿಕೊಂಡದ್ದು ಎಲ್ಲಾ ನಡೆಯಿತು. ಆಗ ’ನೌ ಅಲ್ ಈಸ್ ವೆಲ್’ ಅಂತಅಂದ್ಕೊಂಡೆ. ಮತ್ತೆ ನಮ್ಮ ಸಂಬಂಧ ಸುಗಮವಾಗುತ್ತದೆ ಎಂದು ಕೊಂಡೆ. ಆದರೆ ನಿನ್ನಲ್ಲಿದ್ದ ಕೆಟ್ಟತನದ ಕಾಳ ಸರ್ಪ ಮತ್ತೇಹುತ್ತದೊಳಗಿನಿಂದ ಬುಸ್ ಗುಟ್ಟಿದ್ದ. ಮತ್ತೇ ೨೦ ದಿನಗಳ ಕಾಲ ರಾತ್ರಿ ೯ ಗಂಟೆ ಬಳಿಕ ಕಾಲ್ ಮಾಡಿದ್ದರೆ ನೀನು ಅದನ್ನು ರಿಸೀವ್ಮಾಡುತ್ತಲೇ ಇರಲಿಲ್ಲ. ಮೆಸೆಜ್ ಮಾಡಿದರೆ ಅದಕ್ಕೂ ರಿಪ್ಲೈ ಇಲ್ಲ.
ವಾಸ್ತವವಾಗಿ ನನಗೂ ಯಾರಾದರೂ ಜಾಸ್ತಿ ಫೋನ್ ಮಾಡಿದ್ದೆ ಆದರೆ ಕಿರಿಕಿರಿ ಆಗುತ್ತದೆ. ಹಾಗಂತ ಹೇಳಿ ಫೋನ್ ರಿಸೀವ್ ಮಾಡದೆಅವರನ್ನು ಸತಾಯಿಸುವಷ್ಟು ನೀಚತನವನ್ನು ನಾನು ಮೈಗೂಡಿಸಿಕೊಂಡಿಲ್ಲ. ಒಂದು ವೇಳೆ ನನಗೆ ಆಗ ಕಾಲ್ ರಿಸೀವ್ ಮಾಡಲುಆಗದಿದ್ದರು ಕೂಡ ಆ ಬಳಿಕ ಮತ್ತೇ ಅವರಿಗೆ ಕಾಲ್ ಮಾಡುವ ಅಥವಾ ಮೆಸೇಜ್ ಮಾಡುವ ಪ್ರಯತ್ನವನ್ನೂ ನಾನು ಮಾಡಿಯೇಮಾಡುತ್ತೇನೆ. ಇದು ನನ್ನ ಒಬ್ಬನ ಮಹಾತ್ಸಾಧನೆ ಮಾತ್ರವಲ್ಲ. ಬಹುತೇಕ ಎಲ್ಲರು ರೂಢಿಸಿಕೊಂಡಿರುವ, ಅನುಸರಿಸುತ್ತಿರುವ ಒಂದುಸಣ್ಣ ಸತ್ಸಂಪ್ರದಾಯವಷ್ಟೆ. ಆದರೆ ನೀನು ಬರೋಬ್ಬರಿ ೬೦ ದಿನಗಳ ಕಾಲ ವಿನಾ ಕಾರಣ ಕಾಲ್ ರಿಸೀವ್ ಮಾಡದೆ, ಮಾತನಾಡದೇಸತಾಯಿಸಿ ಸಾಯಿಸ ಹೊರಟೇ ಅಲ್ಲಾ… ನಾನು ಏನು ತಪ್ಪು ಮಾಡಿದ್ದೆ? ನಿನಗೆ ಏನು ಅನ್ಯಾಯ ಮಾಡಿದ್ದೆ?. ಇಷ್ಟೆಲ್ಲವೂ ಆದಬಳಿಕವೂ ನಿನಗೆ ಅದು ಹೇಗೆ ಸೌಮ್ಯವಾಗಿ ನಾನು ಮೆಸೇಜ್ ಮಾಡಲಿ? ನೀನು ನನ್ನ ಮೆಸೇಜ್‌ಗಳಿಗೆ ರಿಪ್ಲೈ ಮಾಡಿದಾಗ, ಕಾಲ್ರಿಸೀವ್ ಮಾಡುತ್ತಿದ್ದಾಗ ಯಾವತ್ತಾದರೂ ನಿನ್ನ ಮಾತನ್ನು ನಾನು ಮೀರಿದ್ದು ಉಂಟಾ? ಅದೇ ರೀತಿ ನಿನಗೂ ಯಾವುದೇತೊಂದರೆಯಾಗಬಾರದು ಎಂದು ಅನೇಕ ವಿಷಯಗಳಲ್ಲಿ ನಾನೇ ಸ್ವ ನಿಯಂತ್ರಣ ಹಾಕಿಕೊಂಡಿರಲಿಲ್ಲವೇ?
ಮಾರ್ಚ್‌ನ ಆರಂಭಕ್ಕೆ ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಘರ್ಷಣೆ ಜಾಸ್ತಿಯಾದಂತೆ ಒಂದು ಹಂತದ ಬಳಿಕ ಒಡೆದು ಒಳಗಿದ್ದದ್ದು ಹೊರಬರಬೇಕಾದದ್ದು ಪೃಕೃತಿಯ ನಿಯಮ ತಾನೇ.ನೋಡು ಮಾರಾಯ್ತಿ, ನಿನಗೆ ಗೊತ್ತಿರುವಂತೆ ನಾನು ಬರೆಯುವುದನ್ನು ಮತ್ತು ನಿನ್ನ ಜೊತೆ ಮಾತಾನಾಡುವುದನ್ನು ಮಾತ್ರ ತುಂಬಾತುಂಬಾ ಇಷ್ಟ ಪಡುತ್ತಿದ್ದೆ. ಈಗ ನೀನು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಸ್ವ ನಿರ್ಬಂಧ ಹಾಕಿಕೊಂಡಿರುವ ಕಾರಣ ನಾನು ಈಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಅಂದರೆ ನನ್ನ ಮುಂದೆ ಈಗ ಉಳಿದಿರುವ ಏಕೈಕ ನಾನು ಇಷ್ಟ ಪಡುವ ಆಯ್ಕೆ ಎಂದರೆ ಬರವಣಿಗೆ.ಅದನ್ನು ನನ್ನಿಂದ ಯಾರು ಎಂದರೆ ಯಾರು, ನೀನು ಸಹಿತ ಇನ್ಯಾರು ಕೂಡ ಕಿತ್ತು ಕೊಳ್ಳಲಾರರು. ಬೇಕಾದರೆ ವೇದಿಕೆಯನ್ನುನಿರಾಕರಿಸಬಹುದು ಅಷ್ಟೆ.
ಕಳೆದ ೬ ವರ್ಷಗಳಲ್ಲಿ ನನಗೆ ಯಾವುದು ಇಷ್ಟವೋ ಅದಕ್ಕೆ ಉಲ್ಟಾ ಅದದ್ದನ್ನೇ ಮಾಡುತ್ತ ಬಂದಿದ್ದಿ. ಆದರೆ ನಾನು ಅದರ ಬಗ್ಗೆಯಾವತ್ತೂ ಕ್ಯಾತೆ ತೆಗೆದಿರಲಿಲ್ಲ. ಅದು ನಿನ್ನ ಗುಣ. ಅದನ್ನು ನಾನು ತುಂಬು ಹೃದಯದಿಂದಲೇ ಗೌರವಿಸುತ್ತಿದ್ದೆ. ಆದರೆ ನೀನು ನನ್ನಜೊತೆ ಮಾತು ಬಿಟ್ಟಾಗ ನನಗೆ ಸುಮ್ಮನಿರಲಾಗಲಿಲ್ಲ. ಆದೂ ಕೂಡ ಯಾವುದೇ ಕಾರಣ ನೀಡದೆ, ಕಾರಣ ಕೊಡದೆ, ಕಾರಣವಿಲ್ಲದೆಮತ್ತು ಕೊನೆ ಪಕ್ಷ ಒಂದು ಗಲಾಟೆ ಕೂಡ ಮಾಡದೆ!
ನಮ್ಮ ಮಧ್ಯೆ ಇದ್ದದ್ದು ಸೋ ಕಾಲ್ಡ್ ಲವ್ ಅಲ್ಲ… ಹಾಗೇನೆ ಜಸ್ಟ್ ಫ್ರೇಂಡ್ ಶಿಪ್ ಕೂಡ ಅಲ್ಲ ಅನ್ನುವುದು ನಿನಗೆ ಗೊತ್ತೆ ಇದೆ. ಲವ್ಮತ್ತು ಫ್ರೇಂಡ್‌ಶಿಪ್‌ನ ಮಧ್ಯೆ ನಮ್ಮ ಸಂಬಂಧ ಓಲಾಡುತ್ತಿತ್ತು ಅಥವಾ ಅದನ್ನೆಲ್ಲ ಮೀರಿ ಬೆಳೆದಿತ್ತು ಎಂಬುದು ನನ್ನ ನಂಬುಗೆ ಅಥವಾ ಲೆಕ್ಕಾಚಾರ.
ಸರಿ, ನೀನು ನನಗೆ ಕೊಡಬಹುದಾಗಿದ್ದ ಅತ್ಯಂತ ಬೆಲೆಬಾಳುವ ಬಹುಮಾನ ಏನೆಂದರೆ ನನ್ನ ಮಾತಿಗೆ ಕಿವಿ ಆಗುವಂತಾದ್ದು ಅನ್ನುವುದುಕೂಡ ನಿನಗೆ ವೇದ್ಯ. ನನಗೆ ನಿನ್ನ ಜೊತೆ ಮಾತನಾಡುತ್ತಿರಬೇಕು ಅಷ್ಟೆ. ಹಾಗಂತ ಹೇಳಿ ೨೪*೭ ಕಾಲ್ ಮಾಡಿ ನಿನಗೆ ಉಪದ್ರವಕೊಟ್ಟಿದ್ದೆ ಆಗಿದ್ದರೆ ಕೇಳು. ಪ್ರತಿ ಸಲ ನಿನಗೆ ಮೆಸೇಜ್ ಮಾಡಿ, ಕಾಲ್ ಮಾಡೋದಾ ಎಂದು ಕೇಳಿ ನೀನು ಅನುಮತಿ ನೀಡಿದ್ದೆ ಆದರೆಕಾಲ್ ಮಾಡುತ್ತಿದ್ದೆ. ಅದೇ ನೀನು ತಲೆ ನೋವು, ಹೊಟ್ಟೆ ನೋವು, ಮನೆಯಲ್ಲಿದ್ದೇನೆ, ಅವರಿದ್ದಾರೆ, ಇವರಿದ್ದಾರೆ, ಬ್ಯುಸಿ ಇದ್ದೇನೆಎಂದೆಲ್ಲ ಹೇಳಿದಾಗ ನಾನು ನಿನಗೆ ಒತ್ತಾಯ ಪಡಿಸಿದ್ದು ಕಡಿಮೆ ಅನ್ನುವುದು ಒಂಚೂರು ಮುಕ್ತ ಮನಸ್ಸಿನಿಂದ (ಅದು ನಿನಗೆ ಇರುವುದೇಡೌಟು) ನೀನು ಯೋಚಿಸಿದ್ದೇ ಆದರೆ ನಿನಗೆ ಹೊಳೆಯಲೂ ಬಹುದು. ಆದರೂ ನೀನು ಸುಮಾರು ೯೦ ದಿನ ನನ್ನ ಕಾಲ್ ರಿಸೀವ್ಮಾಡಲೇ ಇಲ್ಲ. ಏಕೆ? ನಿನ್ನ ಅಹಂಕಾರಕ್ಕೆ ನನ್ನ ಧಿಕ್ಕಾರ.
ಇವತ್ತಿಗೂ ನಿನ್ನ ಸಣ್ಣತನಗಳ ಬಗ್ಗೆ ನನ್ನ ಯಾವುದೇ ಅಕ್ಷೇಪಣೆಗಳು ಇಲ್ಲ. ಇದನ್ನು ನಾನು ನಿನ್ನ ಜೊತೆ ಮಾತನಾಡುತ್ತಿರುವಾಗಲೇಹೇಳುತ್ತಿದ್ದೆ ಕೂಡ. ನನಗೆ ಸರಿ ಕಾಣದ್ದನ್ನು ನಿನಗೆ ಹೇಳುತ್ತಿದ್ದೆ ಅಷ್ಟೆ. ಆದರೆ ನನ್ನ ಕಾಲ್ ರಿಸೀವ್ ಮಾಡದ ನಿನ್ನ ಕುಬ್ಜತನವನ್ನು ನನಗೆಸ್ವೀಕರಿಸಲೇ ಆಗುತ್ತಿಲ್ಲ ಮಾರಾಯ್ತಿ.ಈ ಪತ್ರ ಓದಿದ ತಕ್ಷಣ ನೀನು ನನಗೆ ಕಾಲ್ ಮಾಡುತ್ತೀಯಾ, ಮೆಸೇಜ್ ಮಾಡುತ್ತಿಯಾ, ನಮ್ಮ ಸಂಬಂಧ ಮತ್ತೆ ಸರಿ ಆಗುತ್ತದೆ ಎಂಬಯಾವುದೆ ಭ್ರಮೆ ನನ್ನಲಿಲ್ಲ ಎಂಬುದನ್ನು ನಾನು ಇಲ್ಲೇ ಸ್ಪಷ್ಟ ಪಡಿಸುತ್ತೇನೆ. ಇನ್ನು ನೀನು ಬೇರೆ ’ಲೆಕ್ಕಾಚಾರ’ ಹಾಕುವ ಶ್ರಮತೆಗೆದುಕೊಳ್ಳಬೇಡ.
ಈ ಪತ್ರ ಓದಿ ನಿನಗೆ ಬೇಸರ, ದುಃಖ, ಖೇದ, ವಿಷಾದ, ನಿರಾಶೆ ಮುಂತಾದದ್ದು ಆದದ್ದೆ ಆದರೆ ನಿನಗೆ ಅದು ಎಷ್ಟು ಆಗುತ್ತೋಅದಕ್ಕಿಂತ ಒಂದು ಹಿಡಿ ಹೆಚ್ಚು ನನಗೆ ಆಗುತ್ತದೆ.ಈಗ ನಿನ್ನ ನೆನಪಾದಾಗ ನನ್ನ ಮುಷ್ಠಿ ಬಿಗಿಯಾಗುತ್ತದೆ. ಆದರೆ ನಿನಗೆ ಹೊಡೆಯಲಲ್ಲ, ನನಗೆ ನಾನೇ ಹೊಡೆದುಕೊಳ್ಳಲು!
ನಿನ್ನೊಂದಿಗೆ ಮಾತನಾಡಬೇಕು ಎಂದು ಅನಿಸುವುದನ್ನು ನನ್ನ ದೌರ್ಬಲ್ಯ ಎಂದು ಭಾವಿಸಿ ನೀನು ನನ್ನ ಮೇಲೆ ಸಾಕಷ್ಟು ದೌರ್ಜನ್ಯಎಸಗಿದ್ದಿ. ಇನ್ನೊಬ್ಬರ ದೌರ್ಬಲ್ಯವನ್ನು ಬಳಸಿ ಅವರನ್ನು ಶೋಷಣೆ ಮಾಡುವುದು ನನ್ನ ಪ್ರಕಾರ ನೀಚತನ. ನೋಡು, ನನಗೂ ಕೆಲವರಜೊತೆ ಮಾತನಾಡಲು ಇಷ್ಟವಾಗುದುದಿಲ್ಲ, ಕಿರಿಕಿರಿ ಆಗುತ್ತದೆ ಆದರೆ ಅವರು ನನ್ನ ಜೊತೆ ಮಾತನಾಡ ಬಯಸಿದಾಗ ನಿನ್ನ ರೀತಿಯಲ್ಲಿಅವರನ್ನು ಹೀಯಾಳಿಸುವುದಿಲ್ಲ. ನಿನ್ನ ವರ್ತನೆ ಯಾವ ರೀತಿ ಇತ್ತು ಎಂದರೆ ನನ್ನನ್ನು ಹಾಳು ಮಾಡಲು ನನ್ನ ಶತ್ರುಗಳೇ ನಿನ್ನನ್ನು ಕಳುಹಿಸಿದಂತೆ ಇದೆ.
ಸಂಬಂಧಗಳು ಸಾಯೋದಿಲ್ಲ, ಕೊಲೆ ಮಾಡಲ್ಪಡುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅದು ನಿಜ, ನನ್ನ ನಿನ್ನ ಸಂಬಂಧಖಂಡಿತವಾಗಿಯೂ ಸಾಯುವಂತದ್ದಾಗಿರಲಿಲ್ಲ. ಆದು ಕೊಲೆಯಾಗಲ್ಪಟ್ಟಿತ್ತು. ಕೊಲೆ ಮಾಡಲ್ಪಟ್ಟಿತ್ತು. ಅದರ ಕೊಲೆಗಡುಕಿ ನೀನೆ…ನೀನೆ… ನೀನೆ… ದಯಮಾಡಿ ನನ್ನ ಮೇಲೆ ನೀನು ಆ ದೋಷಾರೋಪಣೆ ಮಾಡಬೇಡ. ಜಗತ್ತಿನ ಯಾವ ಆಪಾದನೆಯನ್ನುಬೇಕಾದರೂ ನಾನು ಎದುರಿಸಬಲ್ಲೆ. ಆದರೆ ನಮ್ಮ ಮಧ್ಯೆ ಇದ್ದ ನಿಷ್ಕಪಟ, ಅಮೂಲ್ಯ, ಸಾವಯವ, ಸಹಜ, ಬೆಲಕಟ್ಟಲಾಗದ ಒಂದುಸಂಬಂಧವನ್ನು ಕೊಂದ ಆಪಾದನೆಯನ್ನಲ್ಲ. ಈ ಪಾಪ ನಿನಗೆಯೇ ಇರಲಿ, ನಿನಗೆಯೇ ಸೇರಲಿ, ನೀನು ಏಳು ಜನ್ಮವೆತ್ತಿ ಬಂದರೂನಿನ್ನನ್ನೇ ಸುತ್ತಿಕೊಳ್ಳಲಿ.
ನಿನಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ… ಆ ಇಳಿ ಕತ್ತಲಲ್ಲಿ, ಮೋಡದ ಕರಿ ನೆರಳಲ್ಲಿ, ಮೂಲೆಯಲ್ಲಿ ಹುಟ್ಟಿ ಕೊಂಡ ಸಂಬಂಧವದು.ಇಬ್ಬರು ಹುಟ್ಟಿಸಿದ್ದ ಸಂಬಂಧದ ಲಾಲನೆ, ಪಾಲನೆ, ಪೋಷಣೆ ನೀನು ಮಾಡಲೇ ಇಲ್ಲ. ಅದು ನನ್ನ ಜವಾಬ್ದಾರಿಯಾಯಿತು.ಚಿಂತೆಯಿಲ್ಲದೆ, ವ್ಯಥೆಪಡದೆ ನಾನದನ್ನು ಸಲಹಿದ್ದೆ. ನೀನು ಏನು ಮಾಡಲೇ ಇಲ್ಲ ಎಂದು ನಾನು ಹೇಳಿದ್ದೆ ಆದರೆ ಅದು ಘೋರಅಪರಾಧವಾಗುತ್ತದೆ. ಆದರೆ ಆ ಮಗು ಸಂಕಷ್ಟಕ್ಕೆ ಸಿಕ್ಕಾಗ ನಾನು ಅದನ್ನು ಕೈ ಹಿಡಿದು ನಡೆಸಿ ಅದು ಹೇಗೋ ನಿನ್ನನ್ನು ಸಮಾಧಾನಿಸಿನಮ್ಮ ಮಧ್ಯೆ ತಂದು ಅದನ್ನು ಬಿಡುತ್ತಿದ್ದೆ. ಆ ಬಳಿಕ ಅದು ನಮ್ಮ ಮಧ್ಯೆ ತಿಳಿ ಗಾಳಿ, ಅಲೆ ನೀರಿನಂತೆ ಚಿಮ್ಮುತ್ತಿತ್ತು, ಪುಟಿದೇಳುತ್ತಿತ್ತು.ಅಂತಹ ಸಂಬಂಧವೊಂದನ್ನು ಯಾವ ರಾಕ್ಷಸ ಕೂಡ ಕಳೆದುಕೊಳ್ಳಲಾರ. ಆದರೆ ನೀನು ಮಾತ್ರ ಆ ರಾಕ್ಷಸರಿಗೆಯೇ ಸಡ್ಡು ಹೊಡೆದುಬಿಟ್ಟೆ ಮಾರಾಯ್ತಿ.
ನಾನು ನಿನ್ನಲ್ಲಿರುವ ಕೆಟ್ಟತನದ ಬಗ್ಗೆ ಮಾತ್ರ ಏಕೆ ಬರೆದೆ? ನನ್ನಲ್ಲಿ ಒಂದೇ ಒಂದು ಒಳ್ಳೆಯತನವಿಲ್ಲವೇ ಎಂದು ನೀನು ಕೇಳಿ ಕೊಳ್ಳುವಸಾಧ್ಯತೆಯಿದೆ. ನಿನ್ನಲ್ಲಿ ’ಭರಪೂರ’ ಒಳ್ಳೆಯತನಗಳೂ ಇವೆ ಅನ್ನುವುದು ಅಲ್ಲಲ್ಲಿ ತೋರಿಕೆಯಾಗಿದೆ ಅಥವಾ ಸೋರಿಕೆಯಾಗಿದೆ. ನಿನಗೆನೆನಪಿರಬಹುದು, ೨೦೦೩ರ ವರ್ಲ್ಡ್ ಕಪ್‌ನ ಫೈನಲ್ ಪಂದ್ಯ. ಆ ಇಡೀ ಸರಣಿಯಲ್ಲಿ ಸಚಿನ್ ಅದ್ಭುತ ಆಟ ಆಡಿದ್ದರೂ ಕೂಡಫೈನಲ್‌ನಲ್ಲಿ ವಿಫಲವಾದದ್ದೆ ನಮಗೆ ಹೆಚ್ಚು ನೆನಪಿರುವುದು. ಅದೇ ರೀತಿ ೧೯೯೭ರಲ್ಲಿ ಢಾಕದಲ್ಲಿ ನಡೆದ ಇಂಡಿಪೇಡೆನ್ಸ್ ಕಪ್‌ನಲ್ಲಿನಪಾಕ್ ವಿರುದ್ಧದ ಪಂದ್ಯದಲ್ಲಿ ಹೃಷಿಕೇಶ್ ಕಾನಿಟ್ಕರ್ ಹೊಡೆದ ಏಕೈಕ ಬೌಂಡರಿ ನಮ್ಮ ಮನಸ್ಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ.ಉಳಿದಂತೆ ಆತ ವಿಫಲ ಕ್ರಿಕೆಟಿಗನಾದರೂ ಕೂಡ! ಅಂದರೆ ಇದರರ್ಥ ಕೊನೆಗೆ ಯಾವುದೇ ವಿಷಯದ ಪ್ರಕ್ರಿಯೆಗಳೂ ನಮ್ಮಲ್ಲಿನೆನಪುಳಿಯುವುದಿಲ್ಲ, ಅದರ ಫಲಿತಾಂಶ ಆಥವಾ ಕೊನೆಗೆ ಏನು ಉಳಿದ್ದಿತ್ತು ಎನ್ನುವುದೇ ನಮ್ಮ ನೆನಪಲ್ಲಿ ಉಳಿಯುವುದು.
ಅಂದರೆ ನಮ್ಮ ಸುಮಧುರ ಸಂಬಂಧದ ಆರು ವರ್ಷಗಳು ಮರೆಯಾಗಿ ಈಗೀನ ನಮ್ಮಿಬ್ಬರ ರಾಕ್ಷಸಿತನವೇ ನನ್ನ ಮತ್ತು ನಿನ್ನಮನಸ್ಸಿನಲ್ಲಿ ಕೊಟ್ಟ ಕೊನೆಯದಾಗಿ ಉಳಿಯುತ್ತದೆ. ನೀನು ಇದನ್ನು ಬಯಸುತ್ತೀಯಾ ಹೇಳು?
ನೀನು ಈ ಮೂರು ತಿಂಗಳ ಅವಧಿಯಲ್ಲಿ ಒಂದೆ ಒಂದು ಸಲ ಕಾಲ್ ಮಾಡಿ ಮಾತನಾಡುತ್ತಿದ್ದರು ನನ್ನ ನಿನ್ನ ಸಂಬಂಧ ಇಂದಿಗೂ ಜೀವತಾಳಿಯೇ ನಿಂತಿರುತ್ತಿತ್ತು. ಆದರೆ ನಿನ್ನಲ್ಲಿನ ದುಷ್ಟ ಹಠ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಾಗಂತ ಹೇಳಿ ನನ್ನ-ನಿನ್ನದು ಎಲ್ಲವೂನೀನು ಕಾಲ್ ರಿಸೀವ್ ಮಾಡದೇ ಇದ್ದ ಕ್ಷಣಕ್ಕೆಯೇ ಮುಗಿಯುತ್ತದೆ ಎಂಬ ಭ್ರಮೆಯಲ್ಲಿ ನೀನು ಇರಬೇಡ. ಒಂದು ನೆನಪಿಡುಒಳ್ಳೆಯತನಕ್ಕಿಂತ ಕೆಟ್ಟತನಕ್ಕೆ ಬಾಳಿಕೆ ಹೆಚ್ಚು.
ನೀನು ಒಮ್ಮೆ ನನ್ನ ಜೊತೆ ಮಾತನಾಡಿದ್ದೇ ಆದರೆ ನಮ್ಮ ನಡುವಿರುವ ಎಲ್ಲ ಗೊಂದಲಗಳು ಇಲ್ಲವಾಗುತ್ತದೆ ಎಂಬ ಅರಿವು ನಿನಗಿದೆ.ನಾನು ನೀನು ಅದೇಷ್ಟೆ ಗಲಾಟೆ ಮಾಡಿಕೊಂಡರು, ಕಿತ್ತಾಡಿಕೊಂಡರು, ಕಿಚಾಯಿಸಿಕೊಂಡರು, ಸರಸವಾಡಿದರೂ, ಸಲ್ಲಾಪ ಮಾಡಿದರೂಕೂಡ ನಮ್ಮನ್ನು ಅದು ಬೇರೆ ಮಾಡದು ಅನ್ನುವುದು ಕೂಡ ನಿನಗೆ ಗೊತ್ತಿದೆ. ಅದಕ್ಕಾಗಿ ನೀನು ಈ ರೀತಿಯ ಮೌನ ಧಾರಣೆ ಮಾಡುವಧೋರಣೆ ಅನುಸರಿಸಿ ನನ್ನನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿರಲೂಬಹುದು, ನಿನ್ನನ್ನು ನಂಬಲಾಗುವುದಿಲ್ಲ!
ನೋಡು, ವ್ಯಾಖ್ಯೆಯ ಚಿಪ್ಪಿನೊಳಗೆ ಸಿಳುಕದ, ನಿಲುಕದ ಅದ್ಭುತ ಸಂಬಂಧ ನಮ್ಮದು. ಯಾವುದೋ ಕಹಿ ಘಳಿಗೆಯಲ್ಲಿ ಏನೇನೋನಮ್ಮ ನಡುವೆ ನಡೆದಿರಬಹುದು. ಆದರೆ ಅದು ಮುಂದುವರಿಯಬಾರದು ಅನ್ನುವುದು ನನ್ನ ಕಳಕಳಿ. ನನ್ನದು ನಿನ್ನದು ಪ್ರೇಮಸಂಬಂಧವಲ್ಲ, ಅದು ಮದುವೆಯಲ್ಲಿ ಕೊನೆಯಾಗುವಂತದ್ದೂ ಕೂಡ ಅಲ್ಲ ಅನ್ನುವುದು ಇನ್ನೂ ಮುಖ್ಯವಾದ ಸಂಗತಿ.ನೀನಿಲ್ಲದ ನನ್ನ ಜೀವನ ಕೂಡ ಅದ್ಭುತವಾಗಿಯೇ ಇದೆ, ಇರುತ್ತದೆ. ಅದೇ ರೀತಿ ನಾನಿಲ್ಲದ ನಿನ್ನ ಜೀವನ ಕೂಡ ಹಾಗೇಯೆ ಇರಬಹುದುಮತ್ತು ಇರಲಿ. ಅದ್ದರಿಂದ ನಮಗಿಬ್ಬರಿಗೂ ಜೀವನದ ಸುಂದರತೆಯನ್ನು ಅಸ್ವಾದಿಸಲು ಪರಸ್ಪರರ ಯಾವುದೇ ಅನಿವಾರ್ಯತೆ ಹಾಗೂಅವಶ್ಯಕತೆ ಇಲ್ಲ. ಆದರೆ ನಮ್ಮ ಸಂಬಂಧ ಯಾವುದೋ ಅನಿವಾರ್ಯತೆ ಅಥವಾ ಅವಶ್ಯಕತೆಗೋ ಕಟ್ಟು ಬಿದ್ದು ಬೆಳೆದದ್ದು ಅಲ್ಲ ತಾನೇ?
ಈಗ ಚೆಂಡು ನಿನ್ನ ಅಂಕಣದಲ್ಲಿ ಇದೆ. ಹೇಗೆ ಬೇಕಾದರೂ ನೀನು ಆಡಬಹುದು. ಆದರೆ ಚೆಂಡನ್ನು ಮೈದಾನದಾಚೆ ತಳ್ಳಿ ಇನ್ನು ಚೆಂಡೆಇಲ್ಲ, ಆಡಲಾಗದು ಎಂದು ನೀನು ಭಾವಿಸಿದ್ದೆ ಆದರೆ ನಿನ್ನಷ್ಟು ಎಡಬಿಡಂಗಿ, ಮೂರ್ಖ, ಪೆದ್ದ, ಅಹಂಕಾರಿ ಮನುಷ್ಯರು ಬೇರೆ ಯಾರೂಕೂಡ ಇರಲಾರರು. ಅದ್ದರಿಂದ ಮೈದಾನದಾಚೆ ಚೆಂಡು ಕಳಿಸುವ ಪ್ರಯತ್ನವನ್ನು ಮಾಡದೆ ನಮ್ಮ ಸಂಬಂಧದ ಆಟವನ್ನುಮುಂದುವರಿಸುವ ಪ್ರಯತ್ನ ಮಾಡೋಣ. ಪ್ರತಿ ಅಟದಲ್ಲೂ ಸೋಲು, ಗೆಲುವು ಇದ್ದದ್ದೆ. ಪಂದ್ಯ ಮುಕ್ತಾಯಗೊಳ್ಳಬೇಕಾದದ್ದೆ. ಅದರೆಯಾರು ಗೆಲ್ಲುತ್ತಾರೆ, ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?
ನೋಡು, ಕೆಟ್ಟದ್ದು ಮಾಡಬೇಕು, ಕೆಟ್ಟದಾಗಲಿ ಅನ್ನುವ ಯಾವ ಆಶಯವು ಒಂದು ಒಳ್ಳೆಯ ಸಂಬಂಧದ ಕೊನೆಯಲ್ಲಿ ಇರದು. ಹಾಗೆಯೇಒಳ್ಳೆಯದಾಗಲಿ ಅನ್ನುವ ಆಶಯವು ಕೂಡ ಒಳ್ಳೆ ಸಂಬಂಧದ ಕೆಟ್ಟ ಮುಕ್ತಾಯದಾಚೆ ಇರದು. ತಪ್ಪುಗಳು ಇಬ್ಬರಿಂದಲೂ ನಡೆದಿದೆ, ಆದರೆಈ ತಪ್ಪುಗಳೇ ಜೀವನವನ್ನು ಸಾಗಿಸದು ಮತ್ತು ಈ ತಪ್ಪುಗಳ ಸಮರ್ಥನೆಯೇ ನಮ್ಮ ಜೀವನವಾಗಬಾರದು ಅನ್ನುವುದು ನನ್ನ ಬಯಕೆ.
ಈ ಪತ್ರ ಓದಿದೊಡನೆ ನನ್ನ ಜೊತೆ ಮಾತನಾಡು, ಮಾತನಾಡುತ್ತೀಯಾ ಅನ್ನುವುದು ನನ್ನ ನಂಬಿಕೆ. ಈ ನಂಬಿಕೆ ಕುರುಡಾಗದಿರಲಿ,ಕುರುಡು ಪ್ರೀತಿ ರೀತಿ! ಸರಿ, ಮುಗಿಸುತ್ತೇನೆ, ಓದಿ ಫೋನ್ ಮಾಡಲು ಮರೆಯದಿರು ಸಮಸ್ಯೆಯ ಉಲ್ಪಣಕ್ಕೆ ಅವಕಾಶ ನೀಡದಿರು.
ಇಂತೀ…
********************