ಕೋಳಿಮೊಟ್ಟೆ ನ್ಯಾಯ ಅರಿಯುವ ತುರ್ತಿದೆ
– ಚಕ್ರವರ್ತಿ ಸೂಲಿಬೆಲೆ
‘ಇವನ್ಯಾಕೋ ಏಳು ತಿಂಗಳಿಗೇ ಹುಟ್ಟಿದವನ ಹಾಗೆ ಆಡ್ತಾನಲ್ಲ!’ ಹಾಗಂತ ಹೇಳೋದನ್ನು ಕೇಳಿದ್ದೀರಾ? ಪ್ರತಿಯೊಂದನ್ನೂ ತುರ್ತುತುರ್ತಾಗಿ, ಮುಂದಾಲೋಚನೆ ಇಲ್ಲದೆ ಅರ್ಧಂಬರ್ಧ ಕೇಳಿ ನಿರ್ಣಯ ತೆಗೆದುಕೊಳ್ಳೋರಿಗೆ ಹೇಳುವ ಮಾತು ಇದು. ಕೆಲವೊಮ್ಮೆ ಹೀಗೆ ಮಾಡಿದ ಕೆಲಸಗಳು ತಮಾಷೆಯಾಗಿರ‍್ತವೆ, ಕೆಲವೊಮ್ಮೆ ಬೋಧಪ್ರದವಾಗಿರುತ್ತವೆ, ಮತ್ತು ಕೆಲವೊಮ್ಮೆ ಭಯಾನಕ ಪರಿಣಾಮವನ್ನೂ ಉಂಟು ಮಾಡುತ್ತವೆ.
ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನೆಂಬ ಆನೆ ಸತ್ತಾಗ ಧರ್ಮರಾಯ ಹೇಳಿದ ಮಾತು ಹಾಗೇ ಅಲ್ಲವೆ? ’ಅಶ್ವತ್ಥಾಮೋ ಹತಃ’ ಇಷ್ಟು ಮಾತನ್ನು ಕೇಳುತ್ತಲೇ ಪುತ್ರವ್ಯಾಮೋಹಿಯಾದ ದ್ರೋಣರು ಶಸ್ತ್ರತ್ಯಾಗ ಮಾಡಿ ರಣರಂಗ ಮಧ್ಯದಲ್ಲಿ ಕುಳಿತುಬಿಟ್ಟರು. ಅಲ್ಲೇ ಅವರ ವಧೆಯಾಯಿತು. ’ಕುಂಜರಃ’ ಎಂದು ಹೇಳಿದ್ದನ್ನು ಕೇಳುವ ವ್ಯವಧಾನ ಅವರಿಗಿರಲಿಲ್ಲ, ಅಥವಾ ಬಹುಶಃ ಧರ್ಮರಾಯನೇ ಹೇಳಿದ್ದು ಸರಿಯಾಗಿ ಕೇಳುವಂತಿರಲಿಲ್ಲ.
’ಅಹಿಂಸಾ ಪರಮೋಧಮಃ’ ಎಂಬ ವಾಕ್ಯವನ್ನ ಪದೇಪದೇ ಕೇಳಿದ್ದೇವಲ್ಲ, ಅದೊಂಥರಾ ನಮ್ಮ ಘೋಷ ವಾಕ್ಯ. ಅದರ ಆಧಾರದ ಮೇಲೆಯೇ ರಾಷ್ಷ್ರವನ್ನು ಕಟ್ಟುವ ಭ್ರಮೆಯ ಮೇಲಿದ್ದೇವೆ ನಾವು. ಹಾಗೆನ್ನುತ್ತಲೇ ಬ್ರಿಟಿಷರ ಲಾಠಿಗೆ ಎದೆ ಕೊಟ್ಟೆವು, ಪಾಕಿಸ್ತಾನ ಕಳಕೊಂಡೆವು. ಹಾಗೆನ್ನುತ್ತಲೇ ಚೀನಾಕ್ಕೆ ಸಾವಿರಾರು ಹೆಕ್ಟೇರ್‌ಗಳಷ್ಟು ಭೂಮಿಯನ್ನು ಬಿಟ್ಟುಕೊಟ್ಟೆವು. ಅಹಿಂಸೆಯ ಆರಾಧನೆ ಮಾಡುತ್ತಲೇ ಕಸಬ್‌ನನ್ನು ಅಳಿಯನಂತೆ ಗೌರವದಿಂದ ಸಾಕಿಕೊಂಡೆವು. ಆದರೆ ಇದೇ ವಾಕ್ಯದ ಉತ್ತರಾರ್ಧ ’ಧರ್ಮ ಹಿಂಸಾ ತಥೈವ ಚ’ ನಮಗೆ ಕೇಳಿಸಲೇ ಇಲ್ಲ. ಧರ್ಮ ಸ್ಥಾಪನೆಗೋಸ್ಕರ ಹಿಂಸೆ ಮಾಡಿದರೆ ತಪ್ಪಲ್ಲ ಎನ್ನುವುದೂ ಈ ರಾಷ್ಟ್ರದ ಘೋಷ ವಾಕ್ಯವೇ. ಹೀಗಾಗಿಯೇ ಪರಮ ಶಾಂತ, ಧ್ಯಾನ ಸಿದ್ಧರೂ ಹತ್ತು ಕೈಗಳಲ್ಲಿ ಆಯುಧ ಹಿಡಿದ ದೇವಿಯನ್ನೇ ಪೂಜಿಸುವುದು. ಧರ್ಮ, ಶಾಂತಿ, ಹಿಂಸೆಗಳ ಪರಿಧಿಯನ್ನು ಚೆನ್ನಾಗಿ ಅರಿತವನು ಅವನು.
ಸಂಸ್ಕೃತದಲ್ಲಿ ಒಂದು ನ್ಯಾಯ ಇದೆ. ಅದು ಕೋಳಿಮೊಟ್ಟೆಯನ್ನು ಮುಂದಿಟ್ಟುಕೊಂಡು ಹೇಳುವ ನ್ಯಾಯ. ಹಸಿ ಮೊಟ್ಟೆಯನ್ನು ಒಡೆದು, ’ಬಿಳಿಯ ಭಾಗ ನನಗೆ, ಹಳದಿ ಭಾಗ ನಿನಗೆ’ ಎನ್ನುವಂತಿಲ್ಲ. ಒಂದೋ ಪೂರ್ತಿ ಮೊಟ್ಟೆ ಸ್ವೀಕರಿಸಿ, ಇಲ್ಲವೇ ಪೂರ್ತಿ ತಿರಸ್ಕರಿಸಿ. ಈ ಅರ್ಧಂಬರ್ಧ ಸೂಕ್ತವೇ ಅಲ್ಲ. ಸ್ವಾತಂತ್ರ್ಯ ಬಂದಾಗ ಪಂಡಿತರ‍್ಯಾರಾದರೂ ಈ ನ್ಯಾಯವನ್ನು ಗಾಂಧೀಜಿ ಸ್ಮರಣೆಗೆ ತಂದುಕೊಟ್ಟಿದ್ದರೆ ಇಂದು ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುತ್ತಿತ್ತು. ಮುಸಲ್ಮಾನರನ್ನು ಅರ್ಧ ಅಲ್ಲಿ, ಅರ್ಧ ಇಲ್ಲಿ ಉಳಿಸುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಈ ನ್ಯಾಯವನ್ನು ಧಿಕ್ಕರಿಸಿ ಇಲ್ಲೇ ಉಳಿದಿರುವ ಆ ಅರ್ಧ ಅದೆಷ್ಟು ತಲೆನೋವಾಗಿದೆಯೆಂದು ದಡ್ಡನಿಗೂ ಅರ್ಥವಾಗುವಂತಹದ್ದು.
ಇದರಲ್ಲೆಲ್ಲ ಕಮ್ಯುನಿಸ್ಟರು ಬಲು ಚುರುಕು. ಸಾಧಕರ ಹೇಳಿಕೆಯಲ್ಲಿ ತಮಗೆ ಬೇಕಾದುದನ್ನು ಮಾತ್ರ ಆರಿಸಿಕೊಂಡು, ಆ ವ್ಯಕ್ತಿಯನ್ನೇ ಎಡ ಪಂಥೀಯನೆನಿಸುವಂತೆ ಮಾಡುವಲ್ಲಿ ಅವರು ನಿಸ್ಸೀಮರು. ಕುವೆಂಪುರವರ ವಿವೇಕಾನಂದ ಪ್ರೇಮ, ರಾಮಕೃಷ್ಣ ಭಕ್ತಿ ಅವರಿಗೆಂದೂ ಕಾಣುವುದೇ ಇಲ್ಲ. ಕಾಣುವುದು ಒಂದು ಕವನದ ಸಾಲು ಮಾತ್ರ. ’ನೂರು ದೇವರನೆಲ್ಲ ನೂಕಾಚೆ ದೂರ’ ಇಷ್ಟನ್ನು ಮಾತ್ರ ಕೇಳಿದವರು, ಓದಿದವರು ಕುವೆಂಪುರವರ ಬಗ್ಗೆ ಬೆಳೆಸಿಕೊಳ್ಳಬಹುದಾದ ಸೈದ್ಧಾಂತಿಕ ಭಾವನೆಗಳೇನು? ಯೋಚಿಸಿ. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡದಾಗಿ ಕಂಗೊಳಿಸುತ್ತಿದ್ದ ಈ ಸಾಲನ್ನು ಕಂಡು ಅನೇಕರು ಗಾಬರಿ ಬಿದ್ದಿದ್ದರು. ಅನಂತರ ಮುಂದಿನ ಸಾಲನ್ನು ತಿಳಿದು ಸಾವರಿಸಿಕೊಂಡರು. ಅದರಲ್ಲಿ ಪುಟ್ಟಪ್ಪನವರು ’ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರಾ’ ಅನ್ನುತ್ತಾರೆ. ಅಕ್ಷರಶಃ ವಿವೇಕಾನಂದರ ವಿಚಾರ ಧಾರೆಯ ಕವನ ರೂಪವದು. ’ನಿಮ್ಮ ಮೂವತ್ಮೂರು ಕೋಟಿ ದೇವತೆಗಳನ್ನು ಸಮುದ್ರಕ್ಕೆಸೆಯಿರಿ. ಇನ್ನು ಎಪ್ಪತ್ತು ವರ್ಷಗಳ ಕಾಲ ಭಾರತ ಮಾತೆಯನ್ನು ದೇವರೆಂದು ಪೂಜಿಸಿ’ ಎಂದು ಸ್ವಾಮೀಜಿ ಪಶ್ಚಿಮದಿಂದ ಭಾರತಕ್ಕೆ ಬಂದೊಡನೆ ಹೇಳಿದ ಮಾತಿನ ಪರಮಾದ್ಭುತ ಕನ್ನಡೀಕರಣ ಅದು. ದೇಶವೇ ದೇವರು, ತಾಯಿ ಭಾರತಿಯೆ ದುರ್ಗೆ – ಕಾಳಿ ಎಂಬಂತೆ ಅದು. ಮೊದಲರ್ಧವನ್ನು ಒಪ್ಪಿದವರಿಗೆ ಉತ್ತರಾರ್ಧವನ್ನೂ ಸ್ವೀಕರಿಸುವ ಧೈರ್ಯವಿದೆಯೇನು?
ಇತ್ತೀಚೆಗೆ ಸಂತರೊಬ್ಬರು ಭಜನೆ ಸತ್ಸಂಗಗಳಲ್ಲಿ ಧಾವಂತ ಇಡಬೇಡಪ್ಪಾ ಅಂದಿದ್ದು ಮತ್ತೆ ಮತ್ತೆ ನೆನಪಾಗುತ್ತಿದೆ. ಗುರಿ ಮುಟ್ಟುವೆಡೆಗೆ ವೇಗ ಇರಬೇಕು. ಹಾಗಂತ ಆರಂಭ ಸೂಚಿಸುವ ಪಿಸ್ತೂಲು ಸದ್ದು ಮಾಡುವ ಮುನ್ನವೇ ಓಡಿದರೆ ಓಟ ವ್ಯರ್ಥವಾಗುತ್ತದೆಯಷ್ಟೆ.
ಕಥೆ ಅದೆಷ್ಟು ಸತ್ಯವೋ ಗೊತ್ತಿಲ್ಲ. ಮತ್ತೆ ಮತ್ತೆ ಉಲ್ಲೇಖವಂತೂ ಆಗ್ತಿರುತ್ತದೆ. ಅದೊಮ್ಮೆ ಗುರುವೊಬ್ಬರು ಶಿಷ್ಯರೊಡನೆ ಹೊರಟಿದ್ದರಂತೆ. ಪ್ರಸಾದ ದೊರೆತು ಬಹಳ ದಿನಗಳಾಗಿದ್ದವು. ಹಸಿವಿನಿಂದ ಶಿಷ್ಯರ ಪ್ರಾಣ ಹೋಗ್ತಿತ್ತು. ಗುರುಗಳು ದಾರಿಯಲ್ಲಿ ಹೆಂಡ ಇಳಿಸುವ ಜನರನ್ನು ಕಂಡರು. ಅವರು ಇಳಿಸಿಟ್ಟ ಹೆಂಡವನ್ನೆ ಪ್ರಸಾದವೆಂದು ಸ್ವೀಕರಿಸಿ, ಹೊರಡಲನುವಾದರು. ಶಿಷ್ಯರು ಆರಂಭದಲ್ಲಿ ಗಾಬರಿಯಾದರೂ ಸಾವರಿಸಿಕೊಂಡು ಗುರುಗಳನ್ನು ಅನುಸರಿಸಿ, ವಿಧೇಯತೆಯಿಂದ ಎಂಬಂತೆ ತಾವೂ ಕುಡಿಯತೊಡಗಿದರು. ಹೆಂಡ ಗಟಗಟನೆ ಗಂಟಲಿಂದ ಇಳಿಯಿತು. ತೂರಾಡುತ್ತ ನಡೆದರು. ಆದರೆ ಗುರುಗಳು ಮಾತ್ರ ದೃಢವಾಗಿಯೇ ಇದ್ದರು. ಮತ್ತೆ ಮೂರ‍್ನಾಲ್ಕು ದಿನ ಪ್ರಯಾಣ ಸಾಗಿತು. ನಡು ದಾರಿಯಲ್ಲೆಲ್ಲೂ ಪ್ರಸಾದ ದೊರೆಯಲಿಲ್ಲ. ಶಿಷ್ಯರ ಮೇಲೆ ಕರುಣೆದೋರಿದ ಗುರುಗಳು, ದಾರಿಯಲ್ಲಿ ಕಬ್ಬಿಣ ಕಾಸುವ ಕಮ್ಮರನಿಂದ ಕಾದ ಕಬ್ಬಿಣದ ರಸವನ್ನು ಆಹಾರವಾಗಿ ಪಡೆದು, ಗಂಟಲಿಗೆ ಸುರಿದುಕೊಂಡರು, ಕೃತಜ್ಞತೆ ಅರ್ಪಿಸಿ ಹೊರಟರು. ಶಿಷ್ಯರ ಕಥೆ ಹೇಳಿ! ಅವರು ಕಕ್ಕಾಬಿಕ್ಕಿ. ಮಾತಿಲ್ಲ, ಕಥೆಯಿಲ್ಲ.. ಎಲ್ಲವೂ ಮೌನ!
ಇಷ್ಟನ್ನೂ ಹೇಳಿದ್ದೇಕೆ ಗೊತ್ತೆ? ಇತ್ತೀಚೆಗೆ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡರಲ್ಲ, ಅದಕ್ಕೆ. ನಮ್ಮೆಲ್ಲ ಮಾಧ್ಯಮಗಳೂ ’ವಿವೇಕಾನಂದರು ಮತ್ತು ದಾವೂದರ ಐಕ್ಯೂ ಒಂದೇ’ ಎಂಬ ಗಡ್ಕರಿ ಹೇಳಿಕೆಯನ್ನು ಪದೇ ಪದೇ ಪ್ರಕಟಿಸಿದವು. ಈ ಸಾಲು ಕೇಳಿದವರೆಲ್ಲ ನಖಶಿಖಾಂತ ಉರಿದುಹೋದರು. ಗಡ್ಕರಿಯ ಐಕ್ಯೂ ಬಗ್ಗೆಯೇ ಚರ್ಚೆಗಳಾದವು. ಅಚ್ಚರಿಗೊಂಡು ಹೇಳಿಕೆಯ ಪೂರ್ಣಪಾಠ ಕೇಳಿದಾಗ ಆ ರಾಜಕಾರಣಿಯ ಬಗ್ಗೆ ಅಯ್ಯೋ ಪಾಪ ಅನ್ನಿಸಿಬಿಟ್ಟಿತು!
’ವಿವೇಕಾನಂದರ ಮತ್ತು ದಾವೂದನ ಐಕ್ಯೂ ವೈಜ್ಞಾನಿಕವಾಗಿ ಒಂದೇ. ಒಬ್ಬ ಅದನ್ನು ಕೆಟ್ಟದಕ್ಕೆ ಬಳಸಿಕೊಂಡ. ಮತ್ತೊಬ್ಬರು ಅದನ್ನು ಬಳಸಿ ಉತ್ತಮ ಕೆಲಸಗಳನ್ನು ಮಾಡುತ್ತಾ ಶ್ರೇಷ್ಠ ವ್ಯಕ್ತಿ ಎನ್ನಿಸಿಕೊಂಡರು. ನೀವೂ ನಿಮ್ಮ ಬುದ್ಧಿಮತ್ತೆಯನ್ನು ಸತ್ಕಾರ್ಯಗಳಿಗೆ ಬಳಸಿಕೊಳ್ಳಿ’ ಎಂದಿದ್ದರು ಗಡ್ಕರಿ. ಹೌದು, ಹೋಲಿಕೆ ಅಸಂಬದ್ಧವೆನಿಸಿದರೂ ಹೇಳಿಕೆ ಅಸಂಬದ್ಧವಲ್ಲ. ರಾಮನಷ್ಟೇ ರಾವಣನೂ ಸಮರ್ಥ ಎಂದಾಗ ತಪ್ಪೆನಿಸುವುದೇನು? ಬುದ್ಧಿವಂತಿಕೆಯಲ್ಲಿ ಹಿಟ್ಲರ್ ಗಾಂಧೀಜಿಗಿಂತ ಕಡಿಮೆಯೇನಿರಲಿಲ್ಲ. ಆದರೆ ಹಿಡಿದ ದಾರಿಗಳು ಸರಿಯಿರಲಿಲ್ಲ ಎಂದರೆ ನಾವು ತಲೆಯಾಡಿಸುತ್ತೇವಲ್ಲ, ಹೀಗೇಕೆ? ಇದ್ದಕ್ಕಿದ್ದ ಹಾಗೆ ಬರ್ಖಾ, ರಾಜೀವ್, ಅರ್ಣಬ್‌ರಿಗೆ ವಿವೇಕಾನಂದರ ಮೇಲೆ ಇಷ್ಟೊಂದು ಪ್ರೀತಿ ಉಕ್ಕಲು ಕಾರಣವೇನು? ಎಲ್ಲಬಿಡಿ, ಮಫಿಯಾ ಡಾನ್‌ಗಳನ್ನು ಗೌರವದಿಂದ ಸಂಬೋಧಿಸುವ, ಅವರ ಶವ ಸಂಸ್ಕರಗಳಿಗೆ ಹೂಹಾರ ಒಯ್ಯುವ ಕೈ ನಾಯಕರಿಗೆ ಈಗೇಕೆ ವಿವೇಕಾನಂದರ ಮೇಲೆ ಅಭಿಮಾನ ಉಕ್ಕಿಬಿಟ್ಟಿದೆ!? ಕೇಸರಿಯನ್ನು ಕಂಡರೆ ಕೆಂಡ ಕೆಂಡವಾಗಿ ಬಿಡುವವರು ವಿವೇಕಾನಂದರ ಬೆನ್ನ ಹಿಂದೆ ನಿಂತು ಬಿಟ್ಟಿದ್ದಾರಲ್ಲ, ಹೇಗೆ? ಏಕೆ? ಅಂದ ಮೇಲೆ ಹೋರಾಟವೂ ರಾಜಕೀಯವಾ? ಗಡ್ಕರಿಯವರ ರಾಜಕೀಯ ಬದುಕು ಮುಗಿಸಲೆಂದೆ ಪ್ರಸಾರಗೊಂಡಿದ್ದವೇ ಆ ಸಾಲುಗಳು? ಈ ಪ್ರಶ್ನೆ ಕಾಡುವುದಿಲ್ಲವೆ? ಇಲ್ಲವಾದರೆ ಅರ್ಧಂಬರ್ಧ ಸಾಲುಗಳನ್ನು ಬಿತ್ತರಿಸಿ, ಜನರ ತಲೆಕೆಡಿಸುವ ಜರೂರತ್ತೇನಿತ್ತು?
ಇತ್ತೀಚಿನ ದಿನಗಳಲ್ಲಿ ಇದೊಂದು ಫ್ಯಾಷನ್ ಆಗಿದೆ. ಮಾಧ್ಯಮಗಳು ಮನಸೋ ಇಚ್ಛೆ ಒಬ್ಬನನ್ನು ಹೀರೋ ಮಾಡಿಬಿಡುತ್ತವೆ, ಮರು ದಿನವೇ ಅವನನ್ನು ಝೀರೋ ಮಾಡಿಬಿಡುತ್ತವೆ. ಎಲ್ಲಾ ಬೆರಳ ತುದಿಯ ಕೆಲಸ. ಅರವಿಂದ್ ಕೇಜ್ರೀವಾಲ್‌ರಂಥವರೂ ಈ ಮಾಧ್ಯಮಗಳ ಹುನ್ನಾರಕ್ಕೆ ಬಲಿಯಾಗಿಬಿಟ್ಟಿದ್ದಾರೆ. ರಾಬರ್ಟ್ ವಾಧ್ರಾನ ಮೇಲೆ ಮುಗಿಬಿದ್ದು ಟೀವಿಯ ಪ್ರೈಮ್ ಟೈಮ್‌ಗಳನ್ನು ಆಕ್ರಮಿಸಿತ್ತು ಟೀಮ್ ಅರವಿಂದ್. ಕೆಲವೇ ದಿನಗಳಲ್ಲಿಅವರನ್ನು ಬಿಟ್ಟು ಮತ್ತೊಬ್ಬರ ಹಿಂದೆ ಬಿದ್ದಿತು. ಮತ್ತೆ ಕೆಲವು ದಿನಗಳಲ್ಲಿ ಗಡ್ಕರಿಯ ಬೆನ್ನು ಪರಚಿತು. ಇಷ್ಟೆಲ್ಲ ಮಾಡಿ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅದು ಕೆಲಸ ಮಾಡಲಿಲ್ಲ. ಬದಲಾಗಿ, ಬಡಿದು ಓಡುವ ಪುಟ್ಟ ಮಕ್ಕಳ ಆಟದಂತೆ, ಜನ ಸಾಮಾನ್ಯರ ನಂಬಿಕೆ, ವಿಶ್ವಾಸಗಳೊಂದಿಗೆ ಅದು ಚೆಲ್ಲಾಟವಾಡಿತು. ’ಶುದ್ಧ ರಾಜಕಾರಣಿ’ ಎನ್ನುವುದೇ ಅಸಾಧ್ಯ ಪ್ರಯೋಗವೇನೋ ಎನ್ನಿಸುವಷ್ಟರ ಮಟ್ಟಿಗೆ ಮಾಡಿಟ್ಟುಬಿಟ್ಟಿವೆ ಮಾಧ್ಯಮಗಳು.
ಉಡುಪಿಯ ಶಾಸಕರೊಬ್ಬರ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದು ಮಾಧ್ಯಮಗಳಲ್ಲ ಎಂದು ಯಾರಾದರೂ ಹೇಳುತ್ತಾರೇನು? ಆಕೆಯೊಂದಿಗೆ ಆ ಶಾಸಕರ ರಾಜಕೀಯ ಬದುಕು ಅಂಧಕಾರದತ್ತ ತಳ್ಳಲ್ಪಟ್ಟಿತಲ್ಲ, ಅದರ ಹೊಣೆ ಯಾರು ಹೊರುತ್ತಾರೆ?
ಎಂದಾದರೂ ಸೀಧೀ ಬಾತ್ ಥರದ, ಡೆವಿಲ್ಸ್ ಅಡ್ವೊಕೇಟ್ ಥರದ ಕಾರ್ಯಕ್ರಮಗಳನ್ನು ನೋಡಿ. ಇಲ್ಲೆಲ್ಲ ಪ್ರಶ್ನೆಗೆ ಉತ್ತರ ಪಡೆಯಬೇಕೆನ್ನುವ ಪ್ರಯತ್ನಕ್ಕಿಂತ, ಎದುರಿಗೆ ಕುಳಿತಿರುವವರನ್ನು ಸಿಕ್ಕಿ ಹಾಕಿಸಿ ಮುಗಿಸಿಬಿಡಬೇಕೆನ್ನುವ ಆತುರವಷ್ಟೆ ಕಾಣುತ್ತದೆ. ಅರ್ಧ ಉತ್ತರ ಕೊಡುತ್ತಿರುವಾಗಲೇ ಅದನ್ನು ಆಧರಿಸಿ, ಮುಂದಿನ ಪ್ರಶ್ನೆ ತಯಾರು. ಉತ್ತರಿಸುವವ ಕಕ್ಕಾಬಿಕ್ಕಿಯಾದಷ್ಟೂ ಬೆವರು ಹರಿಸಿದಷ್ಟೂ ನಿರೂಪಕರಿಗೆ ಆನಂದ. ಇದು ವಿಕೃತವಲ್ಲದೆ ಮತ್ತೇನು?
ಸತ್ಯವನ್ನು ಹೊರತರುವುದೇ ಮಾಧ್ಯಮಗಳ ನಿಜವಾದ ಪ್ರಯತ್ನವಾಗಿದ್ದರೆ, ಅವರು ರಾಬರ್ಟ್ ವಾಧ್ರಾನನ್ನು ಬಿಟ್ಟಿದ್ದಾದರೂ ಏಕೆ? ಅನೇಕ ರಾಜಕಾರಣಿಗಳ ಹಿಂದೆ ಬಿದ್ದು ಅವರ ಕಥೆ ಮುಗಿಸಿಬಿಡುವ ಈ ಘಟಾನಿಘಟಿಗಳು ವಾಧ್ರಾ ವಿಚಾರದಲ್ಲಿ ಸುಮ್ಮನಾಗಿದ್ದು ಹೇಗೆ? ಎಲ್ಲ ಹೋಗಲಿ, ನೀರಾ ರಾಡಿಯಾ ವಿಚಾರದಲ್ಲಿ ಬರ್ಖಾಳ ರಾಡಿ ಜಗದ್ ವ್ಯಾಪಕವಾದಾಗಲೂ ವಿದ್ಯುನ್ಮಾನ ಮಾಧ್ಯಮಗಳು ಮಿಸುಕಾಡಲಿಲ್ಲವಲ್ಲ? ಗಡ್ಕರಿಯ ರಾಜೀನಾಮೆ ಬೇಡಿಕೆಯಂತೆ ಆಕೆಗೂ ಕ್ಷೇತ್ರ ಬಿಟ್ಟು ಹೋಗುವಂತೆ ತಾಕೀತು ಮಾಡಲಿಲ್ಲವೇಕೆ? ತಮಗೊಂದು ನ್ಯಾಯ,ಬೇರೆಯವರಿಗೆ ಮತ್ತೊಂದಾ?
ಸಮಯ ಪಕ್ವವಾಗಿದೆ. ಅರ್ಧವನ್ನಷ್ಟೆ ಕಕ್ಕುವವರು ಹೊಟ್ಟೆಯೊಳಗೆ ಜೀರ್ಣಶೇಷವನ್ನು ಇನ್ನೂ ಉಳಿಸಿಕೊಂಡಿದ್ದಾರೆಂದೇ ಅರ್ಥ. ಅಂಥವರನ್ನು ಮುಂದಿಟ್ಟುಕೊಂಡು ಬದುಕದಿದ್ದರೆ ಒಳಿತು.
ಚಕ್ರವರ್ತಿಗಳೇ,
ಏನು ಹೇಳಲು ಹೊರಟಿದ್ದೀರಿ? ನಿಮ್ಮ ಬರಹದ ಆರಂಭದಲ್ಲಿ ಕಸಬ್‌ನ ಬಗ್ಗೆ ಹೇಳಿ, ಆಮೇಲೆ ಭಾರತ ವಿಭಜನೆಗೆ ಮೊಟ್ಟೆಯ ಕಥೆ ಹೇಳಿ…ಕೊನೆಗೆ ಗಡ್ಕರಿ ಕಥೆಗೆ ಬಂದಿದ್ದೀರಿ. ಸಿಕ್ಕಾಪಟ್ಟೆ ವಿಚಲಿತರಾದಂತೆ ತೋರುತ್ತಿದೆ. ನಿಮ್ಮ ನಿಲುವು ಏನು ಸ್ಪಷ್ಟಪಡಿಸಿ.
೧) ಕಸಬ್‍ನನ್ನು ಸುರಕ್ಷಿತವಾಗಿ ಜೈಲಿನಲ್ಲಿ ಇಡಬಾರದಿತ್ತೇ? ಕಸಬ್‌ಗೆ ಮರಣದಂಡನೆ ತೀರ್ಪು ನೀಡಲು ಭಾರತೀಯ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಾದಗಳ ಅವಶ್ಯಕತೆ ಇಲ್ಲೆಂದೇ? ಉಳಿದೆಲ್ಲಾ ಅರ್ಜಿಗಳನ್ನು ಬದಿಗೆ ಸರಿಸಿ ರಾಷ್ಟ್ರಪತಿಗಳು ಇವನ ಕ್ಷಮಾದಾನದ ಅರ್ಜಿಯನ್ನು ಕೈಗೆತ್ತಿಕೊಳ್ಳಬೇಕೆಂದೇ? ಬರೀ ಭಾವುಕತೆಯಿಂದ ವಿಚಾರ ಮಾಡಿ, ಕಸಬ್‌ನನ್ನು ಕೊಂದುಬಿಡಬೇಕು ಎನ್ನುವಷ್ಟು ದೇಶದ ಕಾನೂನುಗಳು, ನಡಾವಳಿಗಳು ಇರುವುದಿಲ್ಲಾ ಎನ್ನುವುದು ನಿಮಗೆ ಗೊತ್ತಿಲ್ಲವೇ?
೨) ಭಾರತ ವಿಭಜನೆಯಾದಾಗ ಭಾರತದಿಂದ ಮುಸ್ಲಿಮರನ್ನೆಲ್ಲಾ ಓಡಿಸಿಬಿಡಬೇಕಿತ್ತು ಎನ್ನುವುದು ನಿಮ್ಮ ನಿಲುವೆ? ಪಂಜಾಬು ಮತ್ತು ಬಂಗಾಳದ ಮುಸ್ಲಿಮರು ಮತ್ತು ಕೇರಳ, ತಮಿಳುನಾಡು, ಕರ್ನಾಟಕದ ಮುಸ್ಲಿಮರೆಲ್ಲಾ ಒಂದೇ ಎನ್ನುವುದು ನಿಮ್ಮ ನಿಲುವೆ? ಬೇರೆ ದೇಶ ಬೇಕು ಅನ್ನುವುದು ಇಲ್ಲಿನ (ನಮ್ಮೂರಿನ) ಮುಸ್ಲಿಮರ ನಿಲುವೂ ಆಗಿತ್ತು ಎನ್ನುವುದು ನಿಮ್ಮ ಅನಿಸಿಕೆಯಾಗಿದ್ದರೆ ಅದು ತಪ್ಪಲ್ಲವೇ? ಇಲ್ಲಿನ ಜಟಕಾ ಸಾಬಿಗೆ ಬಹುಶಃ ಪಾಕಿಸ್ತಾನ್ ಅನ್ನೋ ದೇಶ ಭಾರತದಿಂದ ಒಡೆದು ಹುಟ್ಟುತ್ತಿದೆ ಎನ್ನುವುದೂ ಗೊತ್ತಿಲ್ಲದಿರುವ ಸಾಧ್ಯತೆಯಿಲ್ಲವೇ? ಹುಟ್ಟಿನಿಂದ ಮನುಷ್ಯರ ಯೋಗ್ಯತೆ/ ಹಣೆಬರಹ ನಿಶ್ಚಯಿಸುವ ಅಸ್ಪೃಶ್ಯತೆಯನ್ನು ಪೊರೆಯುವ ಜಾತಿ ಪದ್ದತಿಯ ಮುಂದುವರೆದ ರೂಪವೇ ಹುಟ್ಟಿನಿಂದ ಮುಸ್ಲಿಮನಾದವನನ್ನು ದೇಶದ್ರೋಹಿಯಂತೆ ನೋಡುವ ನಿಮ್ಮ ಮನಸ್ಥಿತಿಯೂ ಅಲ್ಲವೇ?
೩) ಗಡ್ಕರಿಯವರು ವಿವೇಕಾನಂದರ ಬಗ್ಗೆ ಹೇಳಿದ ಮಾತನ್ನು ಖಂಡಿಸುತ್ತಿರುವವರೆಲ್ಲಾ ಕಮ್ಯುನಿಸ್ಟರು ಎಂದು ಕೊಳ್ಳುತ್ತಿರುವಂತೆ ನಿಮ್ಮ ಆಲೋಚನೆ ಇರುವುದಾದರೆ ನಿಮ್ಮ ಅವಿವೇಕಕ್ಕೆ ಮರುಕವುಂಟಾಗುತ್ತದೆ. ಇದೇ ನಿಲುಮೆಯ ರಾಕೇಶ್ ಶೆಟ್ಟರೂ ಸೇರಿದಂತೆ ಅನೇಕರು ಈ ನಿಲುವನ್ನು ಹೊಂದಿದ್ದು ಅವರ್ಯಾರೂ ಎಡಪಂಥೀಯರಲ್ಲಾ ಎನ್ನುವುದು ನಿಮಗೆ ಕಾಣುತ್ತಿಲ್ಲವೇ? ಗಡ್ಕರಿಯವರ ಮಾತನ್ನು ಉದಾಹರಿಸಿ ಇದೇ ನಿಲುಮೆಯಲ್ಲೊಂದು ಕಮೆಂಟು ಬಂದಿತ್ತು. ಅದನ್ನೇ ನಿಮಗೂ ಅನ್ವಯಿಸಿ ಹೇಳಬೇಕೆಂದರೆ… “ಚಕ್ರವರ್ತಿ ಸೂಲಿಬೆಲೆ ಮತ್ತು ಕೊಚ್ಚೆಯಲ್ಲಿರುವ ಹಂದಿ.. ಈ ಎರಡಕ್ಕೂ ಬಾಯಿದೆ. ಆದರೆ ಹಂದಿ ಆ ಬಾಯನ್ನು …ತಿನ್ನಲು ಬಳಸುತ್ತದೆ, ಆದರೆ ಚಕ್ರವರ್ತಿ ಸೂಲಿಬೆಲೆಯವರು ಅನ್ನ ತಿನ್ನಲು ಬಳಸುತ್ತಾರೆ” ಎನ್ನುವ ಹೋಲಿಕೆ ನೀಡಿದರೆ ತಮಗೇನನ್ನಿಸುತ್ತದೆ ಹೇಳಿ! ದಾವೂದ್ ಮತ್ತು ವಿವೇಕಾನಂದರ ಹೋಲಿಕೆಯೂ ಇಂಥದ್ದೇ ಅಲ್ಲವೇ? ಇದು ತಪ್ಪಾದ ಹೋಲಿಕೆಯಲ್ಲವೇ?
“ಹುಟ್ಟಿನಿಂದ ಮನುಷ್ಯರ ಯೋಗ್ಯತೆ/ ಹಣೆಬರಹ ನಿಶ್ಚಯಿಸುವ ಅಸ್ಪೃಶ್ಯತೆಯನ್ನು ಪೊರೆಯುವ ಜಾತಿ ಪದ್ದತಿಯ ಮುಂದುವರೆದ ರೂಪವೇ ಹುಟ್ಟಿನಿಂದ ಮುಸ್ಲಿಮನಾದವನನ್ನು ದೇಶದ್ರೋಹಿಯಂತೆ ನೋಡುವ ನಿಮ್ಮ ಮನಸ್ಥಿತಿಯೂ ಅಲ್ಲವೇ?” wow!!
ನಿಮ್ಮ ಮಾತನ್ನು ಒಪ್ಪೋಣ.ಆದ್ರೆ ನೀವು ಜಾಣ ಮರೆವು ತೋರಿಸುತ್ತಿರುವ ಅಂಶವೊಂದಿದೆ. ಈ ಘನಂದಾರಿ ಕೆಲಸ ಮಾಡಿರೋದು ನೀವೂ ಸೇರಿದಂತೆ ನಿಮ್ಮ ಪ್ರಗತಿಪರ(?) ಗೆಳೆಯರು ತಲೆ ಮೇಲೆ ಹೊತ್ತು ಕುಣಿಯುವ ಕಾಂಗ್ರೆಸ್ಸು.೨೧ರ ಹುಡುಗಿಯರನ್ನು ಒಳ ಹಾಕಿದವರು,ಕಾರ್ಟೂನ್ ಬರೆದವನನ್ನು ,ಟ್ವೀಟ್ ಮಾಡಿದವನನ್ನು ತಳ್ಳಿದವರು ಇವರೇ.ಅದನ್ನೆಲ್ಲ ಮಾಡಿದ ಮೇಲೆಯೂ ನಿಮ್ಮ ತಂಡ ಹೇಗೆ ಕಾಂಗ್ರೆಸ್ಸನ್ನು ಸಮರ್ಥಿಸುತ್ತೋ, ಇವರು ಸಹ ಹಾಗೇ ಸಮರ್ಥಿಸಿದ್ದಾರೆ ಅಷ್ಟೆ.
ಸೂಲಿಬೆಲೆಯವರೆ,
’ಮೊಟ್ಟೆಯನ್ನು ಇಡಿಯಾಗಿ ತೆಗೆದುಕೊಳ್ಳಬೇಕು, ಇಲ್ಲಾ, ಇಡಿಯಾಗಿ ಬಿಟ್ಟುಬಿಡಬೇಕು, ಮಂಜಳು ಪಾಲು ಒಬ್ಬರಿಗೆ ತಿಳಿ ಪಾಲು ಇನ್ನೊಬ್ಬರಿಗೆ ಎಂದು ಮಾಡಲಾಗುವುದಿಲ್ಲ’ ಎನ್ನುವ ನಿಮ್ಮ ಮಾತು ಸರಿ ಅಲ್ಲ. ಮಂಜಳು ಪಾಲನ್ನು ತಿಳಿ ಪಾಲಿನಿಂದ ಬೇರ್ಪಡಿಸುವುದು ತುಂಬಾ ಸುಲಭ. ಕೊಲೆಸ್ಟರಾಲಿನ ಅಂಜಿಕೆಯಿಂದ ವಿಶ್ವಾದ್ಯಂತ ಕೋಟಿಕೋಟಿ ಮಂದಿ ಇದನ್ನು ದಿನವೂ ಮಾಡುತ್ತಾರೆ!
ಬರೀ ತಮಾಷೆ ಮಾರಾಯರೆ. ಗಂಭೀರವಾಗಿ ತೆಗೆದುಕೊಳ್ಳಬೇಡಿ.
ನನಗನಿಸುವಂತೆ ಹೋಲಿಕೆ ಮಾಡಬೇಕಾಗಿದ್ದು ಸಮಕಾಲೀನರ ನಡುವೆ. ಸಮಕಾಲೀನರಾದ ರಾಮ-ರಾವಣರ , ಗಾಂಧೀಜಿ-ಹಿಟ್ಲರ್ ಗಳ ಮಧ್ಯೆ ಹೋಲಿಕೆ ಮಾಡಿ ಒಬ್ಬ ಹೇಗೆ ಒಳ್ಳೆಯವನಾದ, ಇನ್ನೊಬ್ಬ ಕೆಟ್ಟ ಎನ್ನುವ ಉದಾಹರಣೆ ಕೊಡಬಹುದು. ಅದು ಒಪ್ಪುವಂತದ್ದು.
ಗಡ್ಕರಿ ಸಾಹೇಬರು ತಮ್ಮ ಮತ್ತು ದಾವೂದ ನಡುವೆ ಹೋಲಿಸಿಕೊಳ್ಳಬಹುದಿತ್ತು..ತಮ್ಮಿಬ್ಬರ ಐ.ಕ್ಯೂ ಒಂದೇ ಇದ್ದರೂ, ಲೂಟಿ ಹೊಡೆದೂ, ತಾನು ಹೇಗೆ ರಾಷ್ಟ್ರೀಯ ಪಕ್ಷದ ‘ಗೌರಾವಾನ್ವಿತ’ ಅಧ್ಯಕ್ಷನಾದೆ ಮತ್ತು ದಾವೂದ ಹೇಗೆ ಭೂಗತದೊರೆಯಾದ ಎನ್ನುವ ಉದಾಹರಣೆ ಕೊಡಬಹುದಿತ್ತು. ಆಕ್ಷೇಪಕ್ಕೆ ಅವಕಾಶವೇ ಇರಲಿಲ್ಲ!.
ಪುಣ್ಯವೆಂದರೆ ಗಡ್ಕರಿ ಸಾಹೇಬರು ದಾವೂದ ಮತ್ತು ಮೊಹಮ್ಮದರ ನಡುವೆ ಹೋಲಿಕೆ ಮಾಡಲಿಲ್ಲ..ಮಾಡಿದ್ದರೆ ಜಗತ್ತಿನಾದ್ಯಂತ ಪ್ರಖ್ಯಾತರಾಗುತ್ತಿದ್ದರು! ದಾವೂದ ಭಾಯಿಯನ್ನು ಆರಾಧಿಸುವವರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗುತ್ತಿತ್ತು..ಪ್ರತಿಭಟನೆ ಮಾಡಬೇಕೊ ಬಿಡಬೇಕೊ ಎಂಬ ಗೊಂದಲ ಸೃಷ್ಟಿಸುತ್ತಿತ್ತು.
ಮೇಲಿನ ಪ್ರತಿಕ್ರಿಯೆಯಲ್ಲಿ ಆನಂದ್ ಎನ್ನುವವರು “ಚಕ್ರವರ್ತಿ ಸೂಲಿಬೆಲೆ ಮತ್ತು ಕೊಚ್ಚೆಯಲ್ಲಿರುವ ಹಂದಿ ” ಎಂಬ ಹೋಲಿಕೆಯ ಕೊಟ್ಟು, ಹೀಗೆಂದರೆ ಹೇಗಾಗಬಹುದು ಎಂದು ಪ್ರಶ್ನಿಸಿ ತಮಗೆ ತಾವೇ ಭರ್ಜರಿ ಖುಷಿ ಪಟ್ಟಂತಿದೆ. ಆನಂದರಿಗೆ ನನ್ನ ಉತ್ತರ ‘ ಗಡ್ಕರಿ ನಿಮಗಿಂತ ಕೊಂಚವಾದರೂ ಹೆಚ್ಚು ಯೋಗ್ಯರು ಅನಿಸುತ್ತದೆ ಅಷ್ಟೆ!’ :).
ವಿಜಯ್ ಪೈ,
ನನ್ನ ಕಮೆಂಟು ಪೂರ್ತಿ ಓದಿ. ಈ ಹಿಂದೆ ಒಬ್ಬರು ನಿಲುಮೆಯ ಒಂದು ಕಮೆಂಟಿನಲ್ಲಿ ಬರೆದಿದ್ದಂತೆ… ಎಂದಿದ್ದೇನೆ. ನೀವ್ಯಾಕೆ ಉರ್ಕೋತೀರಿ? ವಿವೇಕಾನಂದರನ್ನು ದಾವೂದಿಗೆ ಹೋಲಿಕೆ ಮಾಡಿದರೆ ನಮಗೂ ನಿಮ್ಮಷ್ಟೇ ಉರಿಯುತ್ತದೆ! ನೀವು ಭಾವ ನೋಡಬೇಕು! ಚಕ್ರವರ್ತಿಯವರು ಬರೆದಿದ್ದ “ಹೌದು, ಹೋಲಿಕೆ ಅಸಂಬದ್ಧವೆನಿಸಿದರೂ ಹೇಳಿಕೆ ಅಸಂಬದ್ಧವಲ್ಲ. ರಾಮನಷ್ಟೇ ರಾವಣನೂ ಸಮರ್ಥ ಎಂದಾಗ ತಪ್ಪೆನಿಸುವುದೇನು? ಬುದ್ಧಿವಂತಿಕೆಯಲ್ಲಿ ಹಿಟ್ಲರ್ ಗಾಂಧೀಜಿಗಿಂತ ಕಡಿಮೆಯೇನಿರಲಿಲ್ಲ. ಆದರೆ ಹಿಡಿದ ದಾರಿಗಳು ಸರಿಯಿರಲಿಲ್ಲ ಎಂದರೆ ನಾವು ತಲೆಯಾಡಿಸುತ್ತೇವಲ್ಲ, ಹೀಗೇಕೆ?” ಈ ಸಾಲಿನಂತೆ ನೀವು ನನ್ನ ಯೋಗ್ಯತೆಯನ್ನು ಅಳೆಯಬಾರದು! ಹೋಲಿಕೆ ಕೊಡುವಾಗ ತಲೆ ನೆಟ್ಟಗಿರಬೇಕು… ಬಾಯಿಗೆ ಬಂದಂತೆ ಹೋಲಿಸಬಾರದು ಮತ್ತು ಕುರುಡರಂತೆ ಅದನ್ನು ಸಮರ್ಥಿಸಬಾರದು ಎಂದಿದ್ದೇನೆ! Anyhow, ತಮಗೆ ಮರ್ಮಾಘಾತವಾಗಿದೆ ಎಂದರೆ ನನ್ನ ಮಾತಿನ ಅರ್ಥ/ ಸಂದೇಶ ಸರಿಯಾಗಿ ತಾಕುವಲ್ಲಿ ತಾಕಿದೆ ಎಂದೇ ಅರ್ಥ!
ಆನಂದ್..
ನಾನೊಂದು ನಾಟಕ ನೋಡಿದ್ದೆ. ಅದರಲ್ಲಿ ಒಂದು ಸಂದರ್ಭದಲ್ಲಿ ,ಊರ ಗೌಡನ ಚೇಲ, ಆ ಗೌಡನಿಗೆ ಹೀಗೆ ಹೇಳುತ್ತಾನೆ “ಗೌಡರೆ..ಈ ಊರಿನಲ್ಲಿ ನಿಮ್ಮ ಎದುರಿಗೆ ನಿಲ್ಲುವಂತಹ, ಮಾತನಾಡುವಂತಹ ಧೈರ್ಯ ಯಾವ ನನ್ನ ಮಗನಿಗೂ ಇಲ್ಲ.. ಯಾರಿಗಾದ್ರೂ ಆ ಧೈರ್ಯ ಇದ್ರೆ, ನಿಮ್ಮ ಎದುರಿಗೆ ನಿಮ್ಮನ್ನ ಸೂ.ಮಗ, ಬೊ.ಮಗ, ಬೆವರ್ಸಿ ನನ್ನ ಮಗ ಅಂತ ಬೈಯ್ಯಲಿ ನೋಡೋಣ” ಅಂತ. ಗೌಡಪ್ಪನಿಗೆ ತಿರುಗಿ ಮಾತನಾಡಲಾರದ ಪರಿಸ್ಥಿತಿ..ಚೇಲನಿಗೆ ಗೌಡನಿಗೆ ಹೀಗಾದರೂ ಬೈದೆ ಎಂಬಂತಹ ಸಂತೋಷ.
ನಿಮ್ಮ ವರೆಸೆಯೂ ಇಂತದ್ದೆ..ಇನ್ನೊಬ್ಬರ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸುವುದು..ಒಳಗೊಳಗೆ ಪುಳಕ ಅನುಭವಿಸುವುದು :).
ಇನ್ನೊಬ್ಬರ ಕಮೆಂಟಿನಿಂದ ಇದನ್ನು ತೆಗೆದುಕೊಂಡೆ ಎಂದಿದ್ದಿರಿ..ಅವರ ಕಮೆಂಟ್ ಹೀಗಿದೆ
” ಕೊಚ್ಚೆಯಲ್ಲಿರುವ ಹಂದಿ ಮತ್ತು ನಿತಿನ್ ಗಡಕರಿ – ಇಬ್ಬರಿಗೂ ಜೀವವಿದೆ. ಆದರೆ ಅವರು ತಿನ್ನೋದೆ ಬೇರೆ, ಇದು ತಿನ್ನೋದೆ ಬೇರೆ ”
ಅದನ್ನು ನೀವು ಪರಿವರ್ತಿಸಿದ್ದು ಹೀಗೆ..
“ಚಕ್ರವರ್ತಿ ಸೂಲಿಬೆಲೆ ಮತ್ತು ಕೊಚ್ಚೆಯಲ್ಲಿರುವ ಹಂದಿ.. ಈ ಎರಡಕ್ಕೂ ಬಾಯಿದೆ. ಆದರೆ ಹಂದಿ ಆ ಬಾಯನ್ನು …ತಿನ್ನಲು ಬಳಸುತ್ತದೆ, ಆದರೆ ಚಕ್ರವರ್ತಿ ಸೂಲಿಬೆಲೆಯವರು ಅನ್ನ ತಿನ್ನಲು ಬಳಸುತ್ತಾರೆ”
ಈಗ ನಿಮ್ಮ ಯೋಗ್ಯತೆ ನೀವೇ. ಅಳಿದುಕೊಳ್ಳಿ..ನಾವದನ್ನು ಮುಟ್ಟುವುದು ಬೇಡ!
—
ಗಡಕರಿಯ ಹೋಲಿಕೆ ಅಸಂಬದ್ಧ ಎನಿಸುವುದು ಯಾಕೆಂದರೆ ವಿವೇಕಾನಂದ ಮತ್ತು ದಾವೂದ ಇಬ್ಬರೂ ಸಮಕಾಲೀನರಲ್ಲ, ಇದಕ್ಕೂ ಮಿಗಿಲಾಗಿ ಅಸಂಬದ್ಧವೆನಿಸುವುದು ಅವರಿಬ್ಬರ ಬುದ್ಧಿಮತ್ತೆ ಸಮಾನವಿತ್ತು ಎಂದರು ಎನ್ನುವುದರಿಂದ. ವಿವೇಕಾನಂದ ಮತ್ತು ದಾವೂದ ಸಮಕಾಲೀನರಾಗಿದ್ದರೆ, ಆಗ..ಒಬ್ಬ ಮನಸ್ಸು ಮಾಡಿದರೆ ವಿವೇಕಾನಂದನೂ ಆಗಬಹುದು ಅಥವಾ ದಾವೂದನೂ ಆಗಬಹುದು ಎನ್ನಬಹುದಿತ್ತು. ಅಷ್ಟು ಬಿಟ್ಟರೆ ಗಡ್ಕರಿ ಹೇಳಿದ್ದು ತೀರ ಪ್ರಳಯ ಆಗಿಬಿಡುವಂತಹದಲ್ಲ.
ಕಾಲದ ಪರಿವೆಯಿಲ್ಲ..ಕಸಬನಿಗೆ ಸಂವಿಧಾನಬದ್ಧವಾಗಿ, ಭಾವನಾತ್ಮಕತೆಗೆ ಅವಕಾಶವಿಲ್ಲದೆ ಶಿಕ್ಷೆಯಾಗಬೇಕು ಎನ್ನುವಷ್ಟು ಸಂವಿಧಾನವಾದಿಯಾಗಿರುವ ತಾವು ದಾವೂದ ಕೊಚ್ಚೆಯೊಳಗಿನ ಹಂದಿಯಂತೆ ಎಂದು ಪರಿಭಾವಿಸಿದ್ದು ಯಾಕೊ? ನಮ್ಮ ಕೋರ್ಟುಗಳು ಹಾಗೆ ಕರೆದಿವೆಯೆ ಆತನನ್ನು?? ಸಂವಿಧಾನ ಬದ್ಧವಾಗಿ ವಿಚಾರ ಮಾಡಿ..ಭಾವನಾತ್ಮಕತೆ ಬಿಡಿ!.
ಕೊನೆಯದಾಗಿ ನನಗೆ ನಿಮ್ಮ ಕಮೆಂಟಿನಿಂದ ಉರಿಯೂ ಆಗಲಿಲ್ಲ..ಮರ್ಮಘಾತವೂ ಆಗಲಿಲ್ಲ. ನಿಮಗೆ ಪುಳಕ ಅನುಭವಿಸುವ ಅವಕಾಶವಿಲ್ಲ..ಕ್ಷಮಿಸಿ! 🙂