-ಪ್ರೇಮಶೇಖರ
ಗಿರೀಶ್ ಕಾರ್ನಾಡ್ ಮತ್ತೆ ಸುದ್ದಿಯಲ್ಲಿದ್ದಾರೆ. ಸರ್ ವಿದಿಯಾಧರ್ ಸೂರಜ್‌ಪ್ರಸಾದ್ ನೈಪಾಲ್ ಅವರನ್ನು ಮುಸ್ಲಿಂ ವಿರೋಧಿ ಎಂದು ಮುಂಬೈ ಸಾಹಿತ್ಯೋತ್ಸವದಲ್ಲಿ ಟೀಕಿಸಿದ ಬಿಸಿ ಆರುವ ಮೊದಲೇ ನೆಲಮಂಗಲದಲ್ಲಿ ರವೀಂದ್ರನಾಥ್ ಟ್ಯಾಗೋರ್ ಎರಡನೆಯ ದರ್ಜೆಯ ನಾಟಕಕಾರ ಎಂದು ಹೇಳಿದ್ದಾರೆ. ಕಾರ್ನಾಡ್ ಪರ/ವಿರೋಧ ಬಾಣಗಳ ಹಾರಾಟ ಸಾಗಿದೆ.
ಎಸ್. ಎಲ್. ಭೈರಪ್ಪ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರಂಥ ಸಾಹಿತ್ಯಕ ದಿಗ್ಗಜಗಳ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದೇವೆಂಬುದರ ಆಧಾರದ ಮೇಲೆ ಸಾಹಿತ್ಯಕ್ಷೇತ್ರದಲ್ಲಿನ ಸ್ಥಾನಮಾನಗಳಿರಲಿ, ವೈಯುಕ್ತಿಕ ಸಂಬಂಧಗಳೂ ಸಹಾ ನಿರ್ಧರಿತವಾಗುವಂಥ ಉಸಿರುಕಟ್ಟುವ ವಾತಾವರಣ ಕನ್ನಡ ಸಾಂಸ್ಕೃತಿಕವಲಯದಲ್ಲಿ ನಿರ್ಮಾಣವಾಗಿರುವ ಕಾಲ ಇದು. ಇಲ್ಲೀಗ ನೈಪಾಲರ ಬಗೆಗಿನ ಕಾರ್ನಾಡರ ಅಸಹನೆಯ ಹಿಂದಿನ ಕಾರಣಗಳಂಥ ವಿವಾದಾಸ್ಪದ ವಿಷಯವನ್ನು ಚರ್ಚೆಗೆತ್ತಿಕೊಳ್ಳುವುದು ಜಾರುವ ನೆಲದಲ್ಲಿ ಕಾಲಿಟ್ಟಂತೆ. ಇಂಥಾ ಪರಿಸ್ಥಿತಿಯಲ್ಲಿ, ಕಾರ್ನಾಡರ ಬಗೆಗಿನ ನನ್ನ ವೈಯುಕ್ತಿಕ ಅನುಮಾನ, ಅಭಿಪ್ರಾಯಗಳ ಸುಳಿವು ನೀಡಿಯೇ ಮುಂದುವರೆಯುವುದು ಸೂಕ್ತ.
ತುಘ್‌ಲಕ್ನ ಹಿಂದಿರುವುದು ಆಲ್ಬರ್ಟ್ ಕಮೂನ ಕಾಲಿಗುಲ ಎಂಬ ಆಪಾದನೆಯಂಥವುಗಳನ್ನು ಕೇಳಿಯೂ ಕಾರ್ನಾಡ್ ಒಬ್ಬ ಅತ್ಯುತ್ತಮ ನಾಟಕಕಾರ ಎಂದು ನಂಬಿದವನು ನಾನು. ಹನ್ನೊಂದು ದಿನಗಳ ಹಿಂದಷ್ಟೇ ದೆಹಲಿಯ ಕೋಟ್ಲಾ ಮೈದಾನದಲ್ಲಿ ಆಸಕ್ತಿಯಿಂದ ತುಘ್‌ಲಕ್ ನೋಡಿ ಕಾರ್ನಾಡರ ಪ್ರತಿಭೆಯ ಬಗ್ಗೆ (ಅದೆಷ್ಟನೆಯ ಬಾರಿಯೋ) ವಿಸ್ಮಿತನಾದವನು ನಾನು. ಆದರೆ ಅವರ ಸಾಹಿತ್ಯೇತರ ಚಿಂತನೆಗಳ ಬಗ್ಗೆ ನನ್ನಲ್ಲಿ ಅಸಹನೆ ಮೂಡಿದ ಉದಾಹರಣೆಗಳುಂಟು. ಕಾವೇರಿ ವಿವಾದದ ಬಗೆಗಿನ ಅವರ ಹೇಳಿಕೆಗಳು, ಮೇಲೇರಲು ನನಗೆ ಯಾರೂ ಸಹಕರಿಸಲಿಲ್ಲ, ಹಾಗಾಗಿ ನಾನೂ ಯಾರಿಗೂ ಸಹಕರಿಸುವುದಿಲ್ಲ ಎಂಬ ಅವರ ಘನತೆಗೆ ತಕ್ಕುದಲ್ಲದ ಮಾತುಗಳು ಮೂಡಿಸಿದ ಬೇಸರದ ಹಿನ್ನೆಲೆಯಲ್ಲಿಯೇ ನಾಟಕಗಳ ಹೊರತಾದ ಅವರ ಸೃಜನಶೀಲ ಕೃತಿಗಳನ್ನೂ ಅನುಮಾನದಿಂದ ನೋಡುವವನು ನಾನು. ಎರಡೂವರೆ ವರ್ಷಗಳ ಹಿಂದೆ ದೇಶ ಕಾಲ ತ್ರೈಮಾಸಿಕದ ವಿಶೇಷ ಸಂಚಿಕೆಯಲ್ಲಿ ಓದಿದ ಮುಸಲ್ಮಾನ ಬಂದ, ಮುಸಲ್ಮಾನ ಬಂದ ಎಂಬ ಅವರ ಸಣ್ಣಕಥೆಯಂತೂ ನನ್ನಲ್ಲಿ ಅತ್ಯಂತ ತಿರಸ್ಕಾರವನ್ನುಂಟುಮಾಡಿತ್ತು. ನಮ್ಮ ಬುದ್ಧಿಜೀವಿಗಳು ಬಹಿರಂಗವಾಗಿ ಇಷ್ಟಪಡದ ಸೌಂದರ್ಯ ಸ್ಪರ್ಧೆಗಳಲ್ಲೊಂದು ನಿಯಮವಿದೆಯಂತೆ. ವಿಶ್ವಸುಂದರಿಯಾಗಿ ಆಯ್ಕೆಯಾದವಳು ಆನಂತರ ತನಗೆ ಪ್ರಶಸ್ತಿ ತಂದುಕೊಟ್ಟ ಮೈಮಾಟದ ಅಂಕಿಅಂಶಗಳಲ್ಲಿ ತೀವ್ರತರದ ಬದಲಾವಣೆಗಳನ್ನು ತಂದುಕೊಂಡರೆ ಆಕೆಯಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳಲಾಗುತ್ತದಂತೆ. ಇಂತಹ ನಿಯಮವನ್ನು ಜ್ಞಾನಪೀಠ ಪ್ರತಿಷ್ಠಾನವೂ ಜಾರಿಗೆ ತಂದು, ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸುವ ಕೃತಿಗಳನ್ನು ರಚಿಸುವ ಜ್ಞಾನಪೀಠಿಗಳಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳುವಂತಾದರೆ ಎಷ್ಟು ಒಳ್ಳೆಯದು ಎಂದು ಯೋಚಿಸಿದ್ದೆ.
ಕಾರ್ನಾಡರನ್ನು ಅನುಮಾನಿಸುತ್ತಲೇ, ತಿರಸ್ಕರಿಸುತ್ತಲೇ, ಮೆಚ್ಚುತ್ತಲೇ ಅವರ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದೇನೆ. ಧೀರ್ಘಕಾಲದ ಮೌನವನ್ನು ಥಟ್ಟನೆ ಭಂಗಿಸಿ ಧಿಗ್ಗನೆದ್ದು ಕೂತು ಮಾತು ಆರಂಭಿಸುವಂತೆ ಅವರು ಆಗಾಗ ನೀಡುವ ಹೇಳಿಕೆಗಳ ಹಿಂದೆ ಸದಾ ಸುದ್ಧಿಯಲ್ಲಿರಬೇಕೆನ್ನುವ ಗೀಳು ಕೆಲಸಮಾಡುತ್ತಿಲ್ಲ. ತಮ್ಮ ಅಭಿಪ್ರಾಯ, ನಿಲುವುಗಳನ್ನು ಇತರರು ಒಪ್ಪಲೇಬೇಕೆನ್ನುವ ಒತ್ತಾಯವೂ ಅವರಲ್ಲಿಲ್ಲ. ಟೀಕೆಗಳ ಬಗ್ಗೆ ಅವರು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸಿದ ಹಾಗೆಯೂ ಕಾಣುವುದಿಲ್ಲ. ಪ್ರಸಕ್ತ ವಿವಾದವನ್ನೇ ಉದಾಹರಣೆಗೆ ತೆಗೆದುಕೊಂಡರೆ, ತಮಗೆ ಪ್ರೊಫೆಷನಲ್ ಸೆಕ್ಯೂಲರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿರುವುದರ ಬಗ್ಗೆ ತಮ್ಮಲ್ಲಿ ಯಾವ ಅಭ್ಯಂತರವೂ ಇಲ್ಲ ಎಂದು ತಣ್ಣಗೆ ಹೇಳಿದ್ದಾರೆ. ಒಟ್ಟಿನಲ್ಲಿ, ತಮಗನಿಸಿದ್ದನ್ನು ನೇರವಾಗಿ, ಪ್ರಾಮಾಣಿಕವಾಗಿ ಹೇಳಿಬಿಡುವ ಅವರು ಚೀರ್‌ಗರ್ಲ್ಸ್‌ರಂಥ ಕಾರ್ಡ್‌ಹೋಲ್ಡರ್ ವಂದಿಮಾಗಧರನ್ನು ಕಟ್ಟಿಕೊಂಡು ದಿನಕ್ಕೊಂದು ಕಡೆ ಗಿಲೀಟಿನ ಮಾತುಗಳನ್ನಾಡುತ್ತಲೇ ಇದುವರೆಗಿನ ಬದುಕು ಕಳೆದವರಲ್ಲ. ಅವರ ಮಾತುಗಳನ್ನು ಮೊದಲು ಗಮನವಿಟ್ಟು ಕೇಳಿದ ನಂತರವಷ್ಟೇ ಅದು ಪುರಸ್ಕಾರಯೋಗ್ಯವೋ, ತಿರಸ್ಕಾರಯೋಗ್ಯವೋ ಎಂದು ತೀರ್ಮಾನಿಸಲು ನನ್ನನ್ನು ಪ್ರೇರೇಪಿಸುವುದು ನನಗೆ ದಕ್ಕಿದ ಅವರ ಈ ವ್ಯಕ್ತಿತ್ವ.
ನೈಪಾಲರಿಗೆ ನೀಡಲಾದ ಜೀವಮಾನ ಸಾಧನೆಯ ಪ್ರಶಸ್ತಿಯ ಉದ್ದೇಶವನ್ನೇ ಕಾರ್ನಾಡ್ ಪ್ರಶ್ನಿಸಿದ್ದಾರೆ. ಇದು ವಿಚಾರಯೋಗ್ಯ ಪ್ರಶ್ನೆ. ಈ ಪ್ರಶಸ್ತಿ ಜಗತ್ತಿಗೆ ನೀಡುತ್ತಿರುವ ಸಂದೇಶವೇನು ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. ಬಹುಮುಖಿ ಭಾರತೀಯ ಸಂಸೃತಿಯ ಬಗ್ಗೆ ಏಕಮುಖ ತೀರ್ಮಾನಗಳನ್ನು ಕೊಡುವ, ಭಾರತೀಯ ಸಂಸ್ಕೃತಿಯಲ್ಲಿ ಇಸ್ಲಾಂನ ಸ್ಥಾನದ ಬಗ್ಗೆ ಪೂರ್ವಗ್ರಹಪೀಡಿತ, ನಕಾರಾತ್ಮಕ ನಿಲುವುಗಳನ್ನು ತಳೆದಿರುವ, ಇಸ್ಲಾಮಿಕ್ ಮೂಲಭೂತವಾದವನ್ನೇ ಇಸ್ಲಾಂನ ನೈಜರೂಪ ಎಂಬ ಅಭಿಪ್ರಾಯ ಹೊಂದಿರುವ, ಮತ್ತವುಗಳನ್ನು ಯಾವ ಹಿಂಜರಿಕೆಯೂ ಇಲ್ಲದೇ ಪ್ರಚುರಪಡಿಸುತ್ತಿರುವ ನೈಪಾಲರಿಗೆ ಈ ಬಗೆಯ ಪ್ರಶಸ್ತಿಯೆಂದರೆ ಅವರ ನಿಲುವುಗಳನ್ನು ಸಮರ್ಥಿಸಿದಂತಾಗುವುದಿಲ್ಲವೇ? ಈ ಪ್ರಶಸ್ತಿಯ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳು ಯಾವುವು ಮತ್ತು ಅವುಗಳ ಉದ್ದೇಶವೇನು?
ನೈಪಾಲರಿಗೆ ನೊಬೆಲ್ ಬಹುಮಾನ ಸಿಕ್ಕಿದ್ದು ೨೦೦೧ರಲ್ಲಿ. ಆ ದಿನಗಳಲ್ಲಿ ಪಾಶ್ಚಿಮಾತ್ಯ ಜಗತ್ತಿಗೆ ಇಸ್ಲಾಮಿಕ್ ಮೂಲಭೂತವಾದ ಒಡ್ಡಿದ ಅಪಾಯ, ಅದಕ್ಕೆ ಅಮೆರಿಕಾ ಮತ್ತು ಪಶ್ಚಿಮ ಯೂರೋಪ್ ಪ್ರತಿಕ್ರಿಯಿಸಿದ ಬಗೆಗೂ ಇಸ್ಲಾಂವಿರೋಧಿ ನೈಪಾಲರ ನೊಬೆಲ್‌ಗೂ ಸಂಬಂಧವಿರಬಹುದೇ? ನೊಬೆಲ್ ಬಹುಮಾನಗಳ (ಮುಖ್ಯವಾಗಿ ಶಾಂತಿ ಮತು ಸಾಹಿತ್ಯ) ಹಿಂದಿರುವ ಪಶ್ಚಿಮಪರ ರಾಜಕೀಯದ ಅರಿವಿದ್ದವರಿಗೆ ನನ್ನ ಪ್ರಶ್ನೆ ಅರ್ಥವಾಗಬಹುದು. ಬ್ರಾಹ್ಮಣರನ್ನು ಜರೆದರೆ ಪ್ರಶಸ್ತಿ ನಿಶ್ಚಿತ ಎಂಬ ಕೆಟ್ಟ ಪರಿಸ್ಥಿತಿ ಇತ್ತೀಚಿನವರೆಗೂ ಭಾರತದಲ್ಲಿತ್ತು. ಈಗ ಇಸ್ಲಾಂ ವಿರುದ್ಧ ಬರೆದರೆ ಅಂತರರಾಷ್ಟ್ರೀಯ ಪ್ರಶಸ್ತಿ ನಿಶ್ಚಿತ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ? ಅದೀಗ ನೈಪಾಲರ ಜೀವಮಾನ ಸಾಧನೆ ಪ್ರಶಸ್ತಿಯ ಮೂಲಕ ಭಾರತಕ್ಕೂ ಕಾಲಿಡುತ್ತಿದೆಯೇ? ಅಂದರೆ ಭಾರತೀಯ ಸಾಹಿತ್ಯದ ಒಂದು ವರ್ಗ ಭಾರತೀಯ ಸಂಸ್ಕೃತಿಗೆ ಇಸ್ಲಾಂನ ಕಾಣಿಕೆಯನ್ನು ನಗಣ್ಯಗೊಳಿಸಲು, ತನ್ಮೂಲಕ ಇಸ್ಲಾಮನ್ನು ನಿರಾಕರಿಸಲು ಪ್ರಯತ್ನ ಆರಂಭಿಸಿದೆಯೇ? ಹಾಗಿದ್ದಲ್ಲಿ ಇದರ ದೂರಗಾಮಿ ಪರಿಣಾಮಗಳೇನು? ಸಂಸ್ಕೃತಿ ಚಿಂತಕರು ಗಮನಿಸಬೇಕಾದ ವಿಷಯ ಇದು.
ನೈಪಾಲ್ ಬಗ್ಗೆ ಮಾತಾಡಲು ಕಾರ್ನಾಡ್ ಆಯ್ದುಕೊಂಡ ಸಂದರ್ಭದ ಔಚಿತ್ಯದ ಪ್ರಶ್ನೆ ಹಲವರನ್ನು ಕಾಡಿದೆ. ಮುಂಬೈ ಸಾಹಿತ್ಯೋತ್ಸವದ ಆಯೋಜಕ ಅನಿಲ್ ಧಾರ್ಕರ್ ಈ ಬಗ್ಗೆ ವಿ. ಎಸ್. ನೈಪಾಲ್ ಬಗ್ಗೆ ಗಿರೀಶ್ ಕಾರ್ನಾಡ್ ಅವರ ಧಾಳಿಯಿಂದ ನಾವೆಲ್ಲಾ ಬೆಚ್ಚಿದ್ದೇವೆ. ಅವರನ್ನು ನಾವಿಲ್ಲಿಗೆ ಆಹ್ವಾನಿಸಿದ್ದು ತಮ್ಮ ರಂಗಯಾನದ ಬಗ್ಗೆ ಮಾತಾಡಲಷ್ಟೆ. ಶ್ರೀ ನೈಪಾಲ್‌ರಿಗೂ ಇದಕ್ಕೂ ಯಾವ ಸಂಬಂಧವೂ ಇರಲಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಂತೋಷ, ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ನೈಪಾಲ್ ಬಗ್ಗೆ ಮಾತಾಡಲು ತಾವು ಆಯ್ಕೆ ಮಾಡಿಕೊಂಡದ್ದು ಸರಿಯಾದ ಸಂದರ್ಭ, ಸರಿಯಾದ ಸ್ಥಳ ಹಾಗೂ ಸರಿಯಾದ ಶ್ರೋತೃಸಮೂಹ ಎಂದು ಕಾರ್ನಾಡ್ ಯಾವ ಹಿಂಜರಿಕೆಯೂ ಇಲ್ಲದೇ ಹೇಳಿದ್ದಾರೆ. ಅವರ ಪ್ರಕಾರ, ಹತ್ತುವರ್ಷಗಳ ಹಿಂದೆ ನೈಪಾಲ್ ಬಿಬಿಸಿ ಟೆಲಿವಿಷನ್‌ನಲ್ಲಿ ಮುಸ್ಲಿಮರ ವಿರುದ್ಧ ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುವುದು ತಾವು ಸರಕಾರೀ ನೌಕರನಾಗಿದ್ದರಿಂದ ಸಾಧ್ಯವಾಗಲಿಲ್ಲ. ಸರಕಾರೀ ನೌಕರರಿರಲಿ, ಸರಕಾರೀವ್ಯವಸ್ಥೆಯಿಂದ ಎಲ್ಲ ಸವಲತ್ತುಗಳನ್ನೂ ಪಡೆದುಕೊಂಡೂ, ವ್ಯವಸ್ಥೆಯ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವವರ ಪರವಾಗಿ ಮಾತಾಡುವವರು ಕಾರ್ನಾಡರಿಂದ ಕಲಿಯುವುದು ಸಾಕಷ್ಟಿದೆ.
ತಮ್ಮ ರಂಗ ಯಾನದ ಬಗ್ಗೆ ಮಾತಾಡುವಂತೆ ತಮಗೆ ಬಹಳ ಹಿಂದೆಯೇ ಆಹ್ವಾನ ಬಂದಿತ್ತೆಂದೂ, ನೈಪಾಲರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಲಾಗುವ ಬಗ್ಗೆ ತಮಗೆ ತಿಳಿದದ್ದು ಎರಡು ದಿನಗಳ ಹಿಂದಷ್ಟೇ ಎಂದೂ ಕಾರ್ನಾಡ್ ಹೇಳಿದ್ದಾರೆ. ಹೀಗಾಗಿಯೇ ಆ ನೊಬೆಲ್ ಪುರಸೃತರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಲು ಇದೇ ಸುಸಂದರ್ಭವೆನಿಸಿತು ಎಂದೂ ಅವರು ಹೇಳಿದ್ದಾರೆ. ಇಲ್ಲಿ ಸುಮ್ಮನಿದ್ದು, ಆಮೇಲೆ ಬೆಂಗಳೂರಿಗೆ ಹೋಗಿ ಮಾತಾಡಿದರೇನು ಪ್ರಯೋಜನ? ಎಂದವರು ಪ್ರಶ್ನಿಸುತ್ತಾರೆ. ಮೇಲೆ ಉಲ್ಲೇಖಿಸಿರುವ ನೈಪಾಲರ ಜೀವಮಾನ ಸಾಧನೆಯ ಪ್ರಶಸ್ತಿಯ ಔಚಿತ್ಯದ ಬಗ್ಗೆ ಯೋಚಿಸಿದರೆ ಕಾರ್ನಾಡರ ಈ ಪ್ರಶ್ನೆ ಅರ್ಥಪಡೆದುಕೊಳ್ಳುತ್ತದೆ. ಎಲ್ಲರಿಗೂ ಗೊತ್ತಿರುವ, ಕಾರ್ನಾಡರೇ ಹಲವು ಕಡೆ ವಿವರಿಸಿರುವ ಅವರ ರಂಗ ಸಾನ್ನಿದ್ಯದ ಬಗೆಗಿನ ಮಾತುಕತೆಗಳಿಗಿಂತಲೂ ನೈಪಾಲರಿಗೆ ನೀಡಲಾದ ಪ್ರಶಸ್ತಿಯ ಉದ್ದೇಶ ಮತ್ತು ಔಚಿತ್ಯದ ಬಗ್ಗೆ ಮಾತಾಡುವುದು ಈ ದಿನದ ಅಗತ್ಯ. ಅದನ್ನು ಕಾರ್ನಾಡ್ ಸರಿಯಾದ ಸಂದರ್ಭದಲ್ಲಿ, ಸರಿಯಾದ ಸ್ಥಳದಲ್ಲಿ, ಸರಿಯಾದ ಶ್ರೋತೃಗಳ ಮುಂದೆ ಸರಿಯಾಗಿ ಮಾಡಿದ್ದಾರೆ.
ನಾನು ಶಾಲೆಯಲ್ಲಿದ್ದಾಗ ಪತ್ರಿಕೆಗಳಲ್ಲಿ ಓದಿದ್ದ ಒಂದು ವಿಷಯವನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತ. ೧೯೭೧-೭೨ರಲ್ಲಿರಬೇಕು, ಚಿಂತಕ ನೋಮ್ ಚೋಮ್‌ಸ್ಕಿ ಬೆಂಗಳೂರಿಗೆ ಆಹ್ವಾನಿತರಾಗಿದ್ದರು. ಅವರು ಭಾಷಾಶಾಸ್ತ್ರಜ್ಞರಾಗಿದ್ದವರು ಮತ್ತು ವಿಯೆಟ್ನಾಂ ಯುದ್ದದ ಕಡುವಿರೋಧಿಯಾಗಿದ್ದವರು. ಅವರ ಕೃತಿ America and the New Mandarins ವಿಶ್ವಾದ್ಯಂತ ಚರ್ಚೆಗೊಳಗಾಗುತ್ತಿತ್ತು. ಬೆಂಗಳೂರಿಗೆ ಅವರು ಅಹ್ವಾನಿತರಾಗಿದ್ದದ್ದು ಭಾಷಾಶಾಸ್ತ್ರದ ಬಗ್ಗೆ ಮಾತಾಡಲು. ಆದರೆ ಅವರು ಮಾತಾಡಿದ್ದು ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿದ್ದ ದೌರ್ಜನ್ಯಗಳ ಬಗ್ಗೆ. ತಮ್ಮ ಭಾಷಣವನ್ನು ಅವರು ಆರಂಭಿಸಿದ್ದು ಸರಿಸುಮಾರು ಹೀಗೆ: …ಈ ಗಳಿಗೆಯಲ್ಲಿ ನಾಗರೀಕ ಪ್ರಪಂಚದ ಮುಂದಿರುವ ಅತ್ಯಂತ ಜಟಿಲ ಪ್ರಶ್ನೆ ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿರುವ ನರಮೇಧ. ಇದನ್ನು ನಿರ್ಲಕ್ಷಿಸಿ ಭಾಷಾಶಾಸ್ತ್ರದ ಬಗ್ಗೆ ಮಾತಾಡುವುದು ಅರ್ಥಹೀನ. ಭಾಷಾಶಾಸ್ತ್ರದ ಬಗೆಗಷ್ಟೇ ನನ್ನ ಮಾತುಗಳನ್ನು ನಿರೀಕ್ಷಿಸಿ ಇಲ್ಲಿಗೆ ಬಂದಿರುವವರು ಹೊರಹೋಗಬಹುದು…
ಟ್ಯಾಗೋರ್ ಕುರಿತು ಕಾರ್ನಾಡ್ ಹೇಳಿಕೆಯ ಬಗ್ಗೆ ಒಂದೆರಡು ಮಾತು. ಕಾರ್ನಾಡ್‌ರಂತಹ ಒಬ್ಬ ಪ್ರತಿಭಾವಂತ ನಾಟಕಕಾರ ಮತ್ತೊಬ್ಬರ (ಅವರು ಯಾರೇ ಆಗಿರಲಿ) ನಾಟಕಗಳ ಬಗ್ಗೆ ಏನನ್ನಾದರೂ ಹೇಳಿದರೆ ರಂಗಕರ್ಮಿಗಳು ಮತ್ತು ರಂಗಾಸಕ್ತರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ನಾಟಕಕಾರರಿಂದ ಹಿಡಿದು ರಾಜಕಾರಣಿಗಳವರೆಗೆ ಹಲವಾರು ಬಂಗಾಲಿ ಪ್ರಮುಖರು ಕಾರ್ನಾಡ್ ಹೇಳಿಕೆ ವಿರುದ್ಧ ಮುಜುಗರ, ಅಸಂತೋಷ, ಕೋಪ ವ್ಯಕ್ತಪಡಿಸುತ್ತಿರುವುದರ ಹಿಂದಿರುವುದು ವಸ್ತುನಿಷ್ಟ ಅವಲೋಕನಕ್ಕಿಂತಲೂ ಸಬ್‌ನ್ಯಾಷನಲಿಸ್ಟ್ ಎಂದು ಕರೆಯಬಹುದಾದಷ್ಟು ಉಗ್ರವಾದ ಬಂಗಾಲೀ ಭಾಷೀಯ, ಪ್ರಾದೇಶಿಕ, ಸಾಂಸ್ಕೃತಿಕ ಅಭಿಮಾನ ಎಂದು ನನಗನಿಸುತ್ತದೆ. ರವೀಂದ್ರನಾಥ್ ಟ್ಯಾಗೋರ್ ಭಾರತದ ಮೊಟ್ಟಮೊದಲ ಹಾಗೂ ಏಕೈಕ ನೊಬೆಲ್ ಪುರಸ್ಕೃತ ಸಾಹಿತಿ, ಭಾರತೀಯ ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದವರು. ಈ ಕಾರಣಗಳಿಂದಾಗಿಯೇ ಅವರ ಸಾಹಿತ್ಯಕ ಕೃತಿಗಳ ವಿಮರ್ಶೆ, ಪುನರ್ವಿಮರ್ಶೆ ಮತ್ತೆ ಮತ್ತೆ ನಡೆಯಬೇಕಾದ ಅಗತ್ಯವಿದೆ. ಯಾವುದೇ ಸಾಹಿತ್ಯ ಕೃತಿಯೊಂದು ಜೀವಂತವಾಗಿ ಉಳಿಯಬೇಕಾದರೆ ಅದರ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಲೇ ಇರಬೇಕು. ಯಾವಾಗ ವಿಮರ್ಶೆ, ಪುನರ್ವಿಮರ್ಶೆಗಳು ನಿಂತುಹೋಗುತ್ತವೋ ಆಗ ಆ ಕೃತಿಯೊಂದು ಸಾಹಿತ್ಯಕ ಮಮ್ಮಿಯಾಗಿಬಿಡುತ್ತದೆ. ಕೃತಿಯೊಂದನ್ನು ಕೊಲ್ಲುವ ಅತ್ಯುತ್ತಮ ವಿಧಾನವೆಂದರೆ ಅದರ ಬಗ್ಗೆ ಚರ್ಚೆ ಮಾಡದಿರುವುದು. ಹಾಗೆ ಕೃತಿಯೊಂದನ್ನು ಕೊಂದರೆ ಕೃತಿಕಾರನ ಅಸ್ತಿತ್ವವೂ ಅಷ್ಟರ ಮಟ್ಟಿಗೆ ಘಾಸಿಗೊಳಗಾಗುತ್ತದೆ, ಇತಿಹಾಸದಲ್ಲಿ ನಗಣ್ಯವಾಗುತ್ತದೆ. ಟ್ಯಾಗೋರರಿಗೆ ಅಂತಹ ದುರ್ಗತಿ ಬರುವುದು ಬೇಡ. ಅವರ ಕೃತಿಗಳು ಪವಿತ್ರ ಗೋವುಗಳಾಗುವುದು ಬೇಡ. ಕಾರ್ನಡರು ಎತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಅವರ ಬಗ್ಗೆ ವೈಯುಕ್ತಿಕ ನಿಂದನೆಗಳಿಲ್ಲದ ಅರೋಗ್ಯಕರ ಚರ್ಚೆಯೊಂದು ಆರಂಭವಾದರೆ ಟ್ಯಾಗೋರರನ್ನು ನಮ್ಮ ನಡುವೆ ಮತ್ತೊಮ್ಮೆ ಜೀವಂತಗೊಳಿಸಿಕೊಳ್ಳಬಹುದು.
ಟ್ಯಾಗೋರರು ಕವನಗಳನ್ನಲ್ಲದೇ ನಾಟಕಗಳನ್ನೂ ಬರೆದಿದ್ದಾರೆ ಎನ್ನುವದು ಅರಿವಾಗಿದ್ದೇ ಕಾರ್ನಾಡರ ಟೀಕೆಯ ನಂತರ. ಚರ್ಚೆ ಮಾಡದೇ ಒಪ್ಪಿ ಆರಾಧಿಸಬೇಕು ಎನ್ನುವದೇ ಮೂಲಭೂತವಾದದ ಮೂಲ, ಕಾರ್ನಾಡರು ಯಾವ ಆಧಾರಗಳಿಂದ ಟ್ಯಾಗೋರರನ್ನು ಎರಡನೇ ದರ್ಜೆಯ ನಾಟಕಕಾರ ಎಂದಿದ್ದಾರೆ ಎನ್ನುವದನ್ನು ಸ್ಪಷ್ಟಪಡಿಸಲಿ. ನಮ್ಮ ಬೇಂದ್ರೆಯವರು ಸಹ ಉತ್ತಮ ಕವಿಗಳಾಗಿದ್ದರೂ ನಾಟಕ ಬರೆಯುವದರಲ್ಲಿ ಅಷ್ಟೇನೂ ಯಶಸ್ನು ಗಳಿಸಲಿಲ್ಲ. ಉತ್ತಮ ನಾಟಕಕಾರರಾಗಿಲ್ಲದೇ ಹೋದರೂ ಟ್ಯಾಗೋರರ ಕವನಗಳ ಬೆಲೆಯೇನು ಕಡಿಮೆಯಾಗುವದಿಲ್ಲ.
ಚಿಂತನಾರ್ಹ ಲೇಖನ..
ಈ ಕಾರ್ನಾಡ, ಅನಂತಮೂರ್ತಿಗಳದ್ದು “U can hate me or u can love me but u just can’t ignore me” ತರಹದ ವಕ್ತಿತ್ವ. ಪ್ರತಿಭೆ, ಸಾಧನೆ ಮತ್ತು ತಿಕ್ಕಲುತನ..ಎಲ್ಲವೂ ಸಮಾನ. ಒಲೈಸ ಬೇಕಾದವರನ್ನು ಒಲೈಸಿ ಸರಕಾರಿ ಪೀಠಗಳನ್ನು ಅಲಂಕರಿಸುವ, ಸಕಲ ಸವಲತ್ತುಗಳನ್ನು ಅನುಭವಿಸುವ ಮತ್ತು ಪೀಠ ಇಳಿದ ಮೇಲೊಂದು ಲೇಖನ ಬರೆದು ತಮ್ಮ ‘ಸ್ವತಂತ್ರ’ ವ್ಯಕ್ತಿತ್ವವನ್ನು ‘ಪ್ರಖರ’ವಾಗಿ ಸಾಬೀತುಪಡಿಸುವ ಚಾಣಾಕ್ಷತನ ಇಬ್ಬ್ರರಲ್ಲೂ ಇದೆ. ( ಪ್ರಜಾವಾಣಿಯ ಇತ್ತೀಚಿನ ಸಾಪ್ತಾಹಿಕ ಪುರವಣಿಯಲ್ಲಿ ನರಸಿಂಹರಾಯರ ಬಗ್ಗೆ ಕಾರ್ನಾಡರ ಲೇಖನವನ್ನು ತಾವು ಓದಿರಬಹುದು).
“ಅವರ ಪ್ರಕಾರ, ಹತ್ತುವರ್ಷಗಳ ಹಿಂದೆ ನೈಪಾಲ್ ಬಿಬಿಸಿ ಟೆಲಿವಿಷನ್‌ನಲ್ಲಿ ಮುಸ್ಲಿಮರ ವಿರುದ್ಧ ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುವುದು ತಾವು ಸರಕಾರೀ ನೌಕರನಾಗಿದ್ದರಿಂದ ಸಾಧ್ಯವಾಗಲಿಲ್ಲ”.
ಹೀಗೆ ಸರಕಾರಿ ಪೀಠದ ಮೇಲಿದ್ಧಾಗ ತಮ್ಮ ಉಗ್ರ ಜಾತ್ಯತೀತ ವ್ಯಕ್ತಿತ್ವ, ಸ್ವತಂತ್ರ ವಿಚಾರಧಾರೆಗಳನ್ನು ಹತ್ತಿಕ್ಕಿಕೊಳ್ಳುವ ಬುದ್ಧಿವಂತಿಕೆಯೂ ಅವರಲ್ಲಿದೆ.
ನೈಪಾಲರಿಗೆ ಕೊಟ್ಟ ಪ್ರಶಸ್ತಿಯ ಬಗ್ಗೆ ಪ್ರಶ್ನಿಸುವಂತೆ, ಕಾರ್ನಾಡರಿಗೆ ಕೊಟ್ಟ ಜ್ಞಾನಪೀಠದ ಬಗ್ಗೆಯೂ ಪ್ರಶ್ನಿಸಬಹುದು. ಇದು ಮುಸ್ಲಿಂ ವಿರೋಧಿಗಳ ಲಾಬಯೆಂದಾದರೆ ,.ಕಾರ್ನಾಡರದ್ದು ಬಲಪಂಥಿಯ ವಿರೋಧಿ ಲಾಬಿಯಿಂದ ಸಿಕ್ಕಿದ್ದು.
ಇನ್ನೂ ಟ್ಯಾಗೋರ ಬಗ್ಗೆ ಅವರು ಹೇಳಿದ್ದು “ಟ್ಯಾಗೋರರು ದ್ವೀತಿಯ ದರ್ಜೆಯ ನಾಟಕಕಾರರಾಗಿದ್ದರು’ ಎಂದು. ಟ್ಯಾಗೋರರ ಕವಿತ್ವದ ಬಗ್ಗೆ ಅವರೇನೂ ಟೀಕೆ ಮಾಡಿಲ್ಲ. ನಾಟಕಕಾರರಾಗಿ, ರಂಗಕರ್ಮಿಯಾಗಿ ಈ ಬಗ್ಗೆ ಮಾತನಾಡುವ ಅರ್ಹತೆ ಕಾರ್ನಾಡರಿಗೆ ಖಂಡಿತವಾಗಿಯೂ ಇದೆ, ತಲೆ ಮೇಲೆ ಹೊತ್ತು ಮೇರೆದಾಡುವ, ವ್ಯಕ್ತಿಪೂಜೆಯ ಸಂಸ್ಕೃತಿ ಇರುವ ನಮ್ಮ ದೇಶದಲ್ಲಿ ಅವರಾಡಿದ ಮಾತುಗಳು ಗದ್ದಲ ಎಬ್ಬಿಸಿದ್ದು ಆಶ್ಚರ್ಯವಲ್ಲ. ಇಲ್ಲಿ ಪವಿತ್ರ ಗೋವುಗಳು ಸಾಕಷ್ಟು ಸಂಖ್ಯೆಯಲ್ಲಿವೆ!.
ದರ್ಜೆಯೆನ್ನುವುದು ಜಾತೀಯತೆಯ ಮುಂದುವರೆದ ಭಾಗವಲ್ಲವೇ? ಭಾರತೀಯ ಜಾತಿ ಪದ್ದತಿ ವಿರೋಧಿಸುವವರು ಯೂರೋಪಿನ ಕ್ಲಾಸ್ ಮತ್ತು ದರ್ಜೆಯನ್ನು ಒಪ್ಪಿಕೊಳ್ಳುವುದು ಅದರಂತೆ ನಡೆದುಕೊಳ್ಳುವುದು ವಿಪರ್ಯಾಸವಲ್ಲವೆ?
ಗ್ರೀಟಿಂಗ್
ಸಾಲ ಮತ್ತು ಸಾಲ ಎಲ್ಲಾ ರೀತಿಯ 3% ಬಡ್ಡಿ
ಅವರು $ 1,500 $ 10,000,000.00, 30,000.00 ಪೌಂಡ್ ಕನಿಷ್ಠ ರಷ್ಟಿದೆ
30 ವರ್ಷಗಳ ಸಮಯ. ಸಾಲ ನೀವು ಬದಲಾಯಿಸಲು ಬಯಸಿದಲ್ಲಿ
ಪೂರ್ಣಗೊಂಡಿತು ಅಪ್ಲಿಕೇಶನ್ ಫಾರ್ಮ್ ಕಳುಹಿಸಿ. ಮಾತ್ರ ಮೂಲಕ ಇಮೇಲ್: mrsjoannaannhelpsinvestment.uk@gmail.com
ನಮ್ಮ ಸೇವೆಗಳು
* ಅಡಮಾನ
* ವಾಹನ ಸಾಲಗಳು
* ಅಡಮಾನ
* ಉದ್ಯಮ ಸಾಲ
* ಅಂತರರಾಷ್ಟ್ರೀಯ ಸಾಲಗಳ
* ವೈಯಕ್ತಿಕ ಸಾಲಗಳು
ಕ್ರೆಡಿಟ್