ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 19, 2012

5

ಬ್ರಿಟಿಷರ ನಿದ್ದೆ ಕೆಡಿಸಿದ ಭಾರತದ ಸಿಂಹಿಣಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ

‍ನಿಲುಮೆ ಮೂಲಕ

– ಶ್ರೀವಿದ್ಯಾ,ಮೈಸೂರು

ನಮ್ಮ ಭಾರತದ ವೀರ ಮಹಿಳೆ ರಾಣಿ ಲಕ್ಷ್ಮೀಬಾಯಿ ಅವರಂತಹ ಮಹಿಳೆ ಯಾರಾದರೂ ಇದ್ದಾರಾ ಎಂದು ಹೆಮ್ಮೆ ಪಟ್ಟವರು ನಮ್ಮ ಗುರು ಸ್ವಾಮಿ ವಿವೇಕಾನಂದ !!

ಅವಳ ಸೌಂದರ್ಯ, ಶೌರ್ಯ, ನಡವಳಿಕೆ, ಜನರ ಮೇಲೆ ಪ್ರೀತಿ, ದೇಶದ ಪ್ರೇಮ, ಹೋರಾಟ, ನೋವು-ನಲಿವು ಇವೆಲ್ಲವೂ ಯಾರಿಗೂ ಸಮಾನವಿಲ್ಲ. ಅವಳೇ ಭಾರತದ ಏಕಮಾತ್ರ ವೀರಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ಸಿಂಹಿಣಿ ! ಕೊನೆಯಲ್ಲಿ ಅವಳ ಸಾವು ಹೇಗಿತ್ತು ಅಂದರೆ ನಮ್ಮ ಕಣ್ಣೀರು ಸುರಿಸುವಂತೆ ಅಲ್ಲದೇ ಬ್ರಿಟಿಷರ ಮೇಲೆ ರೋಷವೂ ಉಕ್ಕಿ ಬರುತ್ತದೆ ! ಅವಳ ಕೊನೆಯ ಹೋರಾಟ ಹಾಗೂ ಸಾವು ಓದಿದರೆ ಅದು ನಮ್ಮ ಕಣ್ಣ್ಮುಂದೆ ನಡೆಯೋ ಹಾಗೆ ಅನ್ನಿಸುತ್ತೆ !!!

ಅವಳ ಜೀವನ ಹೇಗಿತ್ತು ?? ಓದೋಣ –

ಕಾರ್ತಿಕ ಮಾಸದ ಬಿದಿಗೆಯ ದಿನ ೧೮೩೫ ನೇ ಇಸವಿ ನವೆಂಬರ್ ೧೯ ರಂದು ಮನೂಬಾಯಿ ಜನಿಸಿದಳು. ಅವಳ ತಂದೆ ಮೋರೋಪಂತ್, ತಾಯಿ ಭಾಗೀರಥಿಬಾಯಿ. ಮನೂಬಾಯಿಗೆ ನಾಲ್ಕು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಳು. ಅವಳ ಪೂರ್ಣ ಜವಾಬ್ದಾರಿ ತಂದೆಯದಾಯಿತು. ಅವಳು ನಾನಾಸಾಹೇಬ್, ರಾವ್ ಸಾಹೇಬರ ಜೊತೆಗೆ ಆಪ್ತಳಾಗಿದ್ದಳು. ಅವಳು ಅವರ ಜೊತೆ ಹುಡುಗಾಟ, ಕುದುರೆಸವಾರಿ ಮಾಡುತ್ತಿದ್ದಳು. ಅವಳು ತಂದೆಯವರಿಂದ ಸಾಧ್ವಿಸೀತೆ, ವೀರಮಾತೆ ಜೀಜಾಬಾಯಿ, ವೀರಾಂಗನೆ ತಾರಾಬಾಯಿಯವರ ಜೀವನ – ಆದರ್ಶಗಳನ್ನು ರೂಢಿಸಿಕೊಂಡಿದ್ದಳು. ಕತ್ತಿವರಸೆ, ಕುದುರೆಸವಾರಿ, ಬಂದೂಕುಗುರಿ ಸಾಧನೆಗಳ ಜೊತೆಯಲ್ಲೇ ವಿದ್ಯಾಭ್ಯಾಸವೂ ದೊರಕಿತು.ಅವಳಿಗೆ ಏಳು ವರ್ಷ ಆಗಿದ್ದಾಗ ನಲವತ್ತೈದು ವರ್ಷದ ಝಾನ್ಸಿ ಮಹಾರಾಜ ಗಂಗಾಧರರಾಯರ ಗೃಹಲಕ್ಷ್ಮಿಯಾದಳು. ಝಾನ್ಸಿ ರಾಜ್ಯದ ರಾಣಿ ಲಕ್ಷ್ಮೀಬಾಯಿಯಾದಳು.

೧೯ನೆಯ ಶತಮಾನದ ಆರಂಭ. ಸಾಗರೋತ್ತರ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯ ಹೆಸರಿನಲ್ಲಿ ದಿನ ಕ್ರಮದಲ್ಲಿ ರಾಜ್ಯಸೂತ್ರವನ್ನೂ ಹಿಡಿಯತೊಡಗಿದ್ದರು. ಅಂತಃಕಲಹಗಳಲ್ಲಿ ನಿರತರಾಗಿದ್ದ ಭಾರತೀಯ ರಾಜ ಮಹಾರಾಜರು ಪೈಪೋಟಿಯ ಮೇಲೆ ಬ್ರಿಟಿಷರ ಕೈಗೊಂಬೆಗಳಾಗಿದ್ದರು. ಅಂದಿನ ಭಾರತದ ಪ್ರತಿ ದುರ್ಘಟನೆಯನ್ನೂ ಇಂಗ್ಲಿಷ್ ಸಾಮ್ರಾಜ್ಯದ ವಿಸ್ತಾರಕ್ಕೆ ಬಳಸಿಕೊಳ್ಳಲಾಯಿತು. ಇಂಗ್ಲಿಷರ ಕೈಮೇಲಾದಾಗ ಒಂದು ರೀತಿಯ ಒಪ್ಪಂದವಾದರೆ ಅವರು ಸೋಲನ್ನು ಅನುಭವಿಸಿದಾಗ ಬೇರೊಂದು ಬಗೆಯ ಒಪ್ಪಂದ. ಅಂತೂ ಹಾನಿ ಭಾರತೀಯರಿಗೆ.

ಝಾನ್ಸಿ ಉತ್ತರಪ್ರದೇಶದ ಒಂದು ಜಿಲ್ಲಾಕೇಂದ್ರ. ಇಂಗ್ಲಿಷರಿಗೂ ಝಾನ್ಸಿಯ ರಾಜನಿಗೂ ಆದ ಒಪ್ಪಂದಗಳಲ್ಲಿ ಎರಡು ಷರತ್ತುಗಳಿದ್ದವು. ಇಂಗ್ಲಿಷರಿಗೆ ಅಗತ್ಯವಿದ್ದಾಗ ಝಾನ್ಸಿ ನೆರವಾಗಬೇಕು ಮತ್ತು ಝಾನ್ಸಿಗೆ ಯಾರು ರಾಜರಾಗಬೇಕೆಂಬುದಕ್ಕೆ ಇಂಗ್ಲಿಷರ ಒಪ್ಪಿಗೆ ಬೇಕು. ಹೀಗೆ ಸರ್ವನಾಶದ ಬೀಜ ಬಿತ್ತಿದ್ದಾಯಿತು. ೧೮೩೮ರಲ್ಲಿ ಇಂಗ್ಲಿಷರು ಗಂಗಾಧರರಾಯರನ್ನು ಅಧಿಪತಿಗಳನ್ನಾಗಿ ನೇಮಿಸಿದರು.ಹಿಂದಿನ ಅಧಿಪತಿ ರಘುನಾಥರಾವ್ ರಾಜ್ಯಕೋಶವನ್ನು ಬರಿದುಮಾಡಿ ಹೋಗಿದ್ದರು. ಆಡಳಿತ ಹಾಳಾಗಿ ಪ್ರಜೆಗಳಿಗೆ ನೆಮ್ಮದಿ ದೂರವಾಗಿತ್ತು. ಈ ಕೊರತೆಗಳನ್ನು ರಾಜ ಗಂಗಾಧರರಾಯರು ಬೇಗನೆ ಪರಿಹರಿಸಿದರು. ಗೋಶಾಲೆ, ಗಜಶಾಲೆ, ಅಶ್ವಶಾಲೆಗಳು ಪುಷ್ಪಗೊಂಡವು. ಅಸ್ತ್ರಾಗಾರ ಮದ್ದುಗುಂಡುಗಳಿಂದ ಸಜ್ಜುಗೊಂಡಿತು. ಐದು ಸಾವಿರ ಮಂದಿ ಕಾಲಾಳುಗಳು, ಐನೂರು ಅಶ್ವಾರೋಹಿಗಳನ್ನು ಒಳಗೊಂಡ ಸುಸಜ್ಜಿತ ಸೇನೆಗೆ ಫಿರಂಗಿ ಪಡೆಯ ಬೆಂಬಲವೂ ಇದ್ದು, ಸೇನಾಶಕ್ತಿ ಬಲವಾಗಿತ್ತು. ಆದರೆ ರಾಜ್ಯದಲ್ಲಿ ಇಂಗ್ಲಿಷರ ಸೇನೆಯೂ ಇತ್ತು. ಇದರ ಸಲುವಾಗಿಯೇ ಕೋಶಕ್ಕೆ ೨,೨೭,೦೦೦ ರೂಪಾಯಿಗಳ ವೆಚ್ಚ ತಗಲುತ್ತಿತ್ತು.

೧೮೫೧ರಲ್ಲಿ ಲಕ್ಷ್ಮೀಬಾಯಿಯವರು ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ೪ ತಿಂಗಳಿರುವಾಗ ಮರಣವಪ್ಪಿತು. ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ಅವರನ್ನು ದತ್ತು ಪಡೆದರು. ಆದರೆ ತನ್ನ ಮಗನ ಸಾವಿನ ದುಃಖದಿಂದ ಹೊರಬರಲಾರದ ರಾಜ ಗಂಗಾಧರರಾಯರು ೨೧, ನವೆಂಬರ್ ೧೮೫೩ ರಲ್ಲಿ ಹೃದಯಾಘಾತದಿಂದ ಸಾವಿಗೀಡಾದರು. ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಲಾರ್ಡ್ ಡಾಲ್‍ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಶೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್‍ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ ರೂಪಾಯಿ ೬೦,೦೦೦ ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೋಟೆಯನ್ನು ಬಿಟ್ಟು ಹೋಗಲು ಆಜ್ಞೆ ಮಾಡಿದನು. ಇದನ್ನು ಒಮ್ಮೆಲೇ ನಂಬಲು ರಾಣಿಗೆ ಸಾಧ್ಯವಾಗಲಿಲ್ಲ. ಕ್ಷಣಕಾಲ ಮೈಮರೆತ ಮಹಾರಾಣಿ “ಇಲ್ಲ, ಸಾಧ್ಯವಿಲ್ಲ. ನಾನು ಝಾನ್ಸಿಯನ್ನು ಬಿಟ್ಟುಕೊಡಲಾರೆ” ಎಂದು ಉದ್ಗರಿಸಿದಳು. ಆಡಳಿತದ ಹೊಣೆ ತಪ್ಪಿದ ಮೇಲೆ ರಾಣಿ ಬ್ರಿಟಿಷರನ್ನು ತೊಲಗಿಸಲು ಯುದ್ಧಕ್ಕೆ ಸಜ್ಜಾಗಲು ಕುದುರೆ ಸವಾರಿ, ಬಂದೂಕುಗುರಿ, ಬಾಯಲ್ಲಿ ಲಗಾಮು ಕಚ್ಚಿಕೊಂಡು ಎರಡು ಕೈಗಳಿಂದ ಕತ್ತಿವರಸೆ, ಧನುರ್ವಿದ್ಯ ಇವುಗಳೆಲ್ಲವನ್ನು ಅಭ್ಯಾಸ ಮಾಡಿದಳು. ಅಲ್ಲದೇ ಪೂಜೆ, ದೇವರ ಸ್ಮರಣೆ, ಧ್ಯಾನ, ವ್ಯಾಯಾಮ ಮಾಡುತ್ತಿದ್ದಳು. ಎಲ್ಲ ಕಾರ್ಯಗಳು ನಿಯಮಬದ್ಧವಾಗಿ ಸಾಗುತ್ತಿದ್ದವು. ತಾತ್ಯಾಟೋಪಿ, ರಘುನಾಥ ಸಿಂಹ, ಜವಾಹರ ಸಿಂಹ ಮುಂತಾದ ಸ್ವಾತಂತ್ರ್ಯ ಪ್ರಿಯರು ರಾಣಿ ಲಕ್ಷ್ಮೀಬಾಯಿಯ ಭೇಟಿಗೆ ರಹಸ್ಯವಾಗಿ ಆಗಮಿಸುತ್ತಿದ್ದರು. ಜನತೆಯ ಅತೃಪ್ತಿ ಅಸಮಾಧಾನಗಳ ವಿವರಗಳನ್ನು ನೀಡುತ್ತಿದ್ದರು. ತನ್ನ ರಾಜ್ಯದ ಸುತ್ತಮುತ್ತಲಿನ ಭೌಗೋಳಿಕ ಪರಿಸ್ಥಿತಿ, ಆಯಕಟ್ಟಿನ ಸ್ಥಳಗಳು, ಪಂಜಾಬಿನ ಸಿಖ್ಖರು ಬ್ರಿಟಿಷರೊಡನೆ ಸೆಣಸಿದ ವಿಧಾನ-ವ್ಯೂಹಗಳನ್ನು ಕುರಿತು ರಾಣಿ ಲಕ್ಷ್ಮೀಬಾಯಿ ಎಚ್ಚರಿಕೆಯಿಂದ ಅಭ್ಯಾಸ ನಡೆಸಿದ್ದಳು. ರಾಣಿ ಕುದುರೆ ಸವಾರಿಗೆಂದು ಹೊರಹೊರಟಾಗ ವೀರಯೋಧನ ಉಡುಪು ಧರಿಸುತ್ತಿದ್ದಳು.ಗಾಳ-ಮೇಳ-ಮನೋಲ್ಲಾಸದ ರೂಪದಲ್ಲಿ ಸೇನಾ ಶಿಬಿರದಲ್ಲಿ ಅತೃಪ್ತಿಯ ಅಗ್ನಿಯನ್ನು ಪ್ರಜ್ವಲಗೊಳಿಸುವ ಕಾರ್ಯದಲ್ಲಿ ಮಹಿಳೆಯರೂ ತೊಡಗಿದರು.ಎಲ್ಲ ಸಮಾಚಾರಗಳೂ ರಾಣಿಗೆ ತಲುಪುತ್ತಿದ್ದವು. ಮೇ ೩೧ನೇ ತಾರೀಖು ಭಾನುವಾರ ದೇಶದಲ್ಲಿ ದಂಗೆಯಾಗಬೇಕೆಂದು ತೀರ್ಮಾನವಾಯಿತು.

ಬಾರಕ್‍ಪುರದಲ್ಲಿ ನಿಶ್ಚಿತ ದಿನಕ್ಕೆ ಮೊದಲೇ ತೊಂದರೆ ಆರಂಭವಾಯಿತು. ಮೇ ೧೦ ರಂದೇ ಮೀರತ್‍ನಲ್ಲಿ ಕ್ರಾಂತಿಯ ಕಿಡಿ ಸ್ಫೋಟಿಸಿತು.ಮೀರತ್ ಮತ್ತು ದೆಹಲಿಯ ಭಾರತೀಯ ಸೈನ್ಯ ಒಂದುಗೂಡಿ ದೆಹಲಿಯ ಸಿಂಹಾಸನದ ಮೇಲೆ ಅಧಿಕಾರ ಸ್ಥಾಪಿಸಿಬಿಟ್ಟವು. ಪದಭ್ರಷ್ಟನಾಗಿದ್ದ ಬಹಾದ್ದೂರ್ ಶಹಾನನ್ನು ಹಿಂದೂಸ್ಥಾನದ ಚಕ್ರವರ್ತಿ ಎಂದು ಮತ್ತೆ ಘೋಷಿಸಲಾಯಿತು.ಭಾರತ ವಿಶಾಲವಾದ ರಾಷ್ಟ್ರ. ತಮ್ಮ ವ್ಯಾಪಾರಕ್ಕೆ ಹುಲುಸಾದ ಬೀಡು. ಕಚ್ಚಾಮಾಲನ್ನು ಇಲ್ಲಿಂದಲೇ ಕೊಂಡು ಅದರಿಂದ ಮಾಡಿದ ಸಿದ್ಧವಸ್ತುಗಳನ್ನು ನಾಲ್ಕುಪಟ್ಟು ಹೆಚ್ಚು ಬೆಲೆಗೆ ಮಾರಿ ತಮ್ಮ ಕೋಶವನ್ನು ಹಿಗ್ಗಿಸಿಕೊಳ್ಳುವ ಮುಕ್ತ ಅವಕಾಶ. ಭಾರತೀಯರಲ್ಲಿ ಒಗ್ಗಟ್ಟಿಲ್ಲದೇ ಇದ್ದುದನ್ನೇ ತನ್ನ ಯಶಸ್ಸಿನ ರಹಸ್ಯವನ್ನಾಗಿ ಮಾಡಿಕೊಂಡಿತು ಈಸ್ಟ್ ಇಂಡಿಯಾ ಕಂಪೆನಿ.
೧೭೫೨ರಲ್ಲಿ ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿ ಕೋರಿ ಮೊಗಲ್ ಚಕ್ರವರ್ತಿಗಳ ಮಂಡಿಯೂರಿ ಕುಳಿತಾಗ ಕಂಪೆನಿಯ ಮುಂದೆ ಉಗ್ರಾಣಗಳಿದ್ದವು. ಒಟ್ಟು ಇಪತ್ತು ಚದರ ಮೈಲಿ ಭೂಮಿ ಅವರ ಕೈಯಲ್ಲಿತ್ತು. ಒಂದು ನೂರು ವರ್ಷಗಳ ನಂತರ ಇದೇ ಕಂಪೆನಿಯ ಒಡೆತನಕ್ಕೆ ಸೇರಿದ್ದ ಭೂಮಿ ಆರೂವರೆ ಲಕ್ಷ ಚದರ ಮೈಲಿ.

ರಾಜಕೀಯ, ಅರ್ಥಿಕ ದೃಷ್ಟಿಗಳಿಂದ ದೇಶ ಹಿಡಿತಕ್ಕೆ ಬಂದರೆ ಸಾಲದು, ಧಾರ್ಮಿಕವಾಗಿಯೂ ತನ್ನ ಅನುಚರವಾಗಬೇಕು ಎಂದು ಈಸ್ಟ್ ಇಂಡಿಯಾ ಕಂಪೆನಿ ಕ್ರೈಸ್ತ ಧರ್ಮ ಪ್ರಚಾರವನ್ನೂ ಬಲಗೊಳಿಸಿತು. ಹೀಗೆ ಜನತಾ ಆಂದೋಳನಕ್ಕೆ ಪ್ರೇರಣೆ ನೀಡಿದ ಅಂಶಗಳು ಹಲವು.ರಾಣಿಯ ಜೀವನ ಕ್ರಮದಲ್ಲಿ ಬದಲಾವಣೆ ಇರಲಿಲ್ಲ. ಸ್ನಾನ, ಪೂಜೆ, ಜಪ-ತಪ, ಪುರಾಣ ಪುಣ್ಯಕಥೆಗಳ ಶ್ರವಣದ ನಡುವೆ ಸಮರ ಸಾಧನೆಯೂ ನಡೆದೇ ಇತ್ತು.ಜೂನ್ ನಾಲ್ಕರಂದು ಕಾನ್‍ಪುರದಲ್ಲಿ ಕ್ರಾಂತಿ ಭುಗಿಲೆದ್ದಿತು. ಅಂದೇ ಝಾನ್ಸಿಯಲ್ಲಿ ಆ ಲಕ್ಷಣಗಳು ಕಂಡುಬಂದವು. ಒಬ್ಬ ಹವಾಲ್ದಾರ್ ಕೆಲವು ಸೈನಿಕರೊಡನೆ ಇಂಗ್ಲಿಷರು ಹೊಸದಾಗಿ ನಿರ್ಮಿಸಿಕೊಂಡಿದ್ದ ತಾರಾದುರ್ಗ (ಸ್ಟಾರ್ ಫೋರ್ಟ್) ವನ್ನು ಪ್ರವೇಶಿಸಿ ಯುದ್ಧಸಾಮಗ್ರಿ ಮತ್ತು ಹಣವನ್ನು ವಶಪಡಿಸಿಕೊಂಡ.ತಕ್ಷಣವೇ ಇಂಗ್ಲಿಷರ ಶಿಬಿರದಲ್ಲಿದ್ದ ಅವರ ಹೆಂಗಸರು ಮಕ್ಕಳನ್ನೆಲ್ಲಾ ಕೋಟೆಗೆ ಸಾಗಿಸುವ ಕ್ರಮ ಆರಂಭವಾಯಿತು.ಇಂಗ್ಲಿಷ್ ಅಧಿಕಾರಿಗಳು ರಾಣಿಯ ನೆರವಿನ ಯಾಚನೆಗೆ ಬಂದರು. ಆ ಸಮಯದಲ್ಲಿ ರಾಣಿ ” ಜನತಾ ರಕ್ಷಣೆಗಾಗಿ ಒಂದು ಸೇನೆಯನ್ನು ಕೂಡಿಸಬಲ್ಲೆ, ಇಂಗ್ಲಿಷರ ಹೆಂಗಸರು, ಮಕ್ಕಳಿಗೆಲ್ಲ ಅರಮನೆಯಲ್ಲಿ ಆಶ್ರಯ ಸಿಗುತ್ತದೆ ಎಂದು ಭರವಸೆ ನೀಡಿದಳು. ಅಷ್ಟೇ ಅಲ್ಲ, ಯುದ್ಧದ ಕಾಲದಲ್ಲಿ ಅನ್ನಾಹಾರಗಳನ್ನು ನೀಡಿ ಅವರನ್ನು ಕಾಪಾಡಿದಳು.

ಅಂಕೆ ತಪ್ಪಿದ ಸೇನೆ ಇಂಗ್ಲಿಷರ ಮೇಲೆ ಗೆಲುವನ್ನು ಸಾಧಿಸಿತ್ತು. ಝಾನ್ಸಿ ನಗರವನ್ನು ಲೂಟಿ ಮಾಡುವ ಬಯಕೆ ಮೂಡಿತು. ರಾಣಿ ಆಗ ತನ್ನಲ್ಲಿದ್ದ ನಗನಾಣ್ಯವನ್ನೇ ಸೈನಿಕರಿಗೆ ನೀಡಿ ಅವರನ್ನು ತೃಪ್ತಿಪಡಿಸಿದಳು. ಸೇನೆ ದೆಹಲಿಯ ಕಡೆಗೆ ಹೊರಟಿತು. ಹಗಲು ರಾತ್ರಿಗಳ ಭೇದವಿಲ್ಲದೆ ಝಾನ್ಸಿ ಯುದ್ಧಸಿದ್ಧತೆ ನಡೆಸಿತು. ಹೊಸ ಶಸ್ತ್ರಾಸ್ತ್ರಗಳು ತಯಾರಾಗತೊಡಗಿದವು. ದಳಪತಿ ಸರ್ ಹ್ಯೂರೋಸ್‍ನ ಮುಂದಾಳುತನದಲ್ಲಿ ಒಂದು ಸೇನೆ ಝಾನ್ಸಿಯನ್ನು ತಲುಪಿತು. ಇಂಗ್ಲಿಷರ ಆಡಳಿತ ಕೈತಪ್ಪಿ ಝಾನ್ಸಿಯ ಒಡೆತನ ಲಕ್ಷ್ಮೀಬಾಯಿಯ ಕೈ ಸೇರಿದ ಹತ್ತು ತಿಂಗಳ ಅವಧಿಯಲ್ಲಿ (ಜೂನ್ ೧೮೫೭ ರಿಂದ ೧೮೫೮ ರ ಮಾರ್ಚ್‍‍ವರೆಗೆ) ರಾಜ್ಯದ ಆಡಳಿತ ಉತ್ತಮಗೊಂಡಿತ್ತು. ಖಜಾನೆ ತುಂಬಿತ್ತು. ಸೇನೆಯ ಸಂಘಟನೆ ಉತ್ತಮವಾಗಿ ನಡೆದಿತ್ತು. ಸ್ತ್ರೀ ಸೇನೆಯೊಂದು ಪುರುಷ ಸೇನೆಗೆ ಸರಿಸಾಟಿಯಾಗಿತ್ತು. ಹಳೆಯ ಶಸ್ತ್ರಾಸ್ತ್ರಗಳಿಗೆ ಸಾಣೆ ಕೊಡಲಾಯಿತು. ಹೊಸ ಶಸ್ತ್ರಗಳು ಸಿದ್ಧವಾಗತೊಡಗಿದವು. ಅಂದಿನ ಝಾನ್ಸಿಯ ಪ್ರತಿಮನೆಯೂ ಸಮರ ಸಜ್ಜಿನಲ್ಲಿತ್ತು. ಎಲ್ಲ ಮಹಾರಾಣಿಯ ಮಾರ್ಗದರ್ಶನದಲ್ಲೇ ನಡೆದಿತ್ತು. ಸರ್ ಹ್ಯೂರೋಸ್‍ನ ಸೇನೆ ೧೮೫೮ ರ ಮಾರ್ಚ್ ೨೩ ರಂದು ಸಮರ ಸಾರಿತು. ಪುಟ್ಟ ರಾಜ್ಯವಾದ ಝಾನ್ಸಿ ೧೦-೧೨ ದಿನಗಳವರೆಗೆ ಸೋಲು-ಗೆಲುವುಗಳ ನೆರಳು-ಬೆಳಕಿನಲ್ಲೇ ಸಾಗಿತು. ಒಮ್ಮೆ ಗೆಲುವು ಕಂಡು ನೆಮ್ಮದಿಯುಂಟಾದರೆ ಮರುಗಳಿಗೆಯಲ್ಲೇ ಸೋಲಿನ ಆಘಾತ. ನಿಷ್ಠರಾಗಿದ್ದ ಅನೇಕ ಸರದಾರರು ನೆಲವನ್ನಪಿದ್ದರು. ದುರ್ದೈವದಿಂದ ಹೊರಗಿನ ನೆರವೂ ಬಾರದಾಯಿತು. ಇಂಗ್ಲಿಷರ ಕೈ ಮೇಲಾಗಿ ಹ್ಯೂರೋಸ್‍ನ ಸೇನೆ ಝಾನ್ಸಿ ನಗರವನ್ನು ಪ್ರವೇಶಿಸಿದಾಗ ರಾಣಿಯೇ ಸ್ವಯಂಶಸ್ತ್ರ ಧರಿಸಿದಳು. ಪುರುಷವೇಷ ಧರಿಸಿ ರಣಚಂಡಿಯಂತೆ ಸೆಣಸಿದಳು. ಅವಳು ಎಲ್ಲಿ ನುಗ್ಗಿದರೆ ಅಲ್ಲಿ ಬ್ರಿಟಿಷರ ಸೇನೆಯು ಆಹುತಿಯಾಗುತ್ತಿತ್ತು.ಆಕೆಯ ಸಮರ ಸಂಚಾಲನ ಕಾರ್ಯ ಮತ್ತು ಪುರುಷ ಸಹಜವಾದ ಕೆಚ್ಚಿನ ಕಾದಾಟ ಹ್ಯೂರೋಸ್‍ನನ್ನೂ ಬೆರಗುಗೊಳಿಸಿತು. ಪರಿಸ್ಥಿತಿ ಹತೋಟಿ ತಪ್ಪಿದಾಗ ಮಹಾರಾಣಿ ಕೆಲವು ವೀರರೊಡನೆ ಶತ್ರು ಸೇನೆಯನ್ನು ಸೀಳಿಕೊಂಡು ಝಾನ್ಸಿಯನ್ನು ಬಿಟ್ಟು ಹೊರನಡೆದಳು. ಬೋಕರ್ ಎಂಬಾತ ಸೈನ್ಯದೊಡನೆ ಹಿಂಬಾಲಿಸಿದ. ಕದನದಲ್ಲಿ ಅವನೇ ಗಾಯಗೊಂಡು ಹಿಂದಿರುಗಿದ. ರಾಣಿಯ ಕುದುರೆ ಸಾವನ್ನಪ್ಪಿತು. ಆದರೂ ಆಕೆ ಎದೆಗುಂದದೆ ಕಾಲಪಿಗೆ ಹೋಗಿ ತಾತ್ಯಾಟೋಪಿ ಮತ್ತು ರಾವ್‍ಸಾಹೇಬ್ ಜೊತೆಗೂಡಿದಳು.

ಕಾಲಪಿಯಲ್ಲಿಯೂ ರಾಣಿ ಸೇನೆಯನ್ನೂ ಸಜ್ಜುಗೊಳಿಸುವ ಕೆಲಸದಲ್ಲಿ ಮಗ್ನಳಾದಳು. ಹ್ಯೂರೋಸ್ ಕಾಲಪಿಯನ್ನು ಮುತ್ತಿದ. ಸೋಲು ನಿಶ್ಚಿತವಾದಾಗ ರಾಣಿಯ ಸಹಿತ ರಾ‍ವ್‍ಸಾಹೇಬ್, ತಾತ್ಯಾ ಮತ್ತಿತರರು ಗ್ವಾಲಿಯರ್ ಕಡೆಗೆ ಪಲಾಯನ ಮಾಡಿದರು. ತಾತ್ಯಾಟೋಪಿ ಗ್ವಾಲಿಯರ್‍ಗೆ ಪುಟ್ಟ ಸೇನೆಯೊಡನೆ ಹೋಗಿ ನಿಂತ ಕೂಡಲೇ ಗ್ವಾಲಿಯರ್ ಸೇನೆಯ ಬಹುದೊಡ್ಡ ಭಾಗ ಸಹಕರಿಸಿತು. ಗ್ವಾಲಿಯರ್ ರಾಜ ಅಲ್ಲಿಂದ ಪಲಾಯನ ಮಾಡಿ ಆಗ್ರಾದಲ್ಲಿ ಇಂಗ್ಲಿಷರ ಆಶ್ರಯ ಪಡೆದ. ರಾಣಿ ಮತ್ತು ಅವಳ ಆಪ್ತರನ್ನುಳಿದು ಉಳಿದೆಲ್ಲ ಮುಂದಾಳುಗಳೂ ಭೋಗ ವೈಭವಗಳಲ್ಲಿ ಮೈಮರೆತರು. ರಾಣಿ ನೀಡಿದ ಸಕಾಲಿಕ ಎಚ್ಚರಿಕೆ ಗಾಳಿಯ ಅಲೆಯಲ್ಲಿ ತೇಲಿಹೋಯಿತು. ಈ ಸಡಗರಗಳಿಂದ ದೂರವಿದ್ದ ರಾಣಿ ಗ್ವಾಲಿಯರ್ ಕೋಟೆಯ ಆಯಕಟ್ಟಿನ ಸ್ಥಳಗಳ ನಿರೀಕ್ಷಣೆ ಕೈಗೊಂಡಳು. ಸಮರವ್ಯೂಹ ರಚಿಸಿದಳು. ಆದರೆ ಈ ಹೆಂಗಸಿನ ಬುದ್ಧಿವಾದ ಕೇಳುವ ಕಿವಿಗಳು ನಾಯಕ ಪುರುಷರಿಗೆ ಇರಲಿಲ್ಲ.

ಹ್ಯೂರೋಸ್ ವಿಳಂಬಕ್ಕೆ ತಯಾರಿರಲಿಲ್ಲ. ೧೮೫೮ ರ ಜೂನ್ ೧೭ ರಂದು ಯುದ್ಧ ಪುನರಾರಂಭವಾಯಿತು. ಪುರುಷವೇಷ ಧರಿಸಿ ರಾಣಿ ಸನ್ನದ್ಧಳಾದಳು. ಸಂಖ್ಯಾಬಲದಿಂದ ಸ್ವಲ್ಪವೇ ಆಗಿದ್ದರೂ ಸರದಾರರ ಅಸಾಮಾನ್ಯ ಶೌರ್ಯ ಮತ್ತು ರಾಣಿಯ ಸಮರೋಪಾಯ, ಧೈರ್ಯಗಳ ನಡುವೆ ಬ್ರಿಟಿಷ್ ಸೈನ್ಯ ಸೋಲನ್ನಪ್ಪಿತು. ಅಂದಿನ ಗೆಲುವು ರಾಣಿಗೆ ಲಭಿಸಿತು. ಮರುದಿನ (೧೮ರಂದು) ಸೂರ್ಯೋದಯಕ್ಕೆ ಮೊದಲೇ ಇಂಗ್ಲಿಷರ ರಣಕಹಳೆ ಮೊಳಗಿತು. ರಾವ್ ಸಾಹೇಬರ ಅಧೀನದಲ್ಲಿದ್ದ ಎರಡು ದಳಗಳು ಮತ್ತೆ ಇಂಗ್ಲಿಷರ ಪರ ವಹಿಸಿದ ಸುದ್ದಿಯೂ ತಿಳಿಯಿತು.ರಾಣಿ ಲಕ್ಷ್ಮೀಬಾಯಿ ರಾಮಚಂದ್ರರಾವ್ ದೇಶಮುಖರನ್ನು ಕರೆಸಿ ಹೇಳಿದಳು : “ಇಂದು ಯುದ್ಧದ ಮುಕ್ತಾಯವೆಂದು ತೋರುತ್ತದೆ. ನಾನು ಸತ್ತರೆ ಮಗು ದಾಮೋದರನನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚು ಮುಖ್ಯ ಎಂದು ಕಾಪಾಡಿ. ಇನ್ನೊಂದು ಮಾತು, ನಾನು ಸತ್ತರೆ ನನ್ನ ಶರೀರವನ್ನು ವಿಧರ್ಮೀಯರ ಕೈ ಸೇರದಂತೆ ನೋಡಿಕೊಳ್ಳಿ.”

ನಿರೀಕ್ಷೆಯಂತೆ ರೋಸ್‍ನಕ್ಕೆ ಅಂದು ಬಲಗೊಂಡಿತ್ತು. ವಿಪ್ಲವಕಾರರ ಸೈನ್ಯದ ಬಹುಭಾಗ ನೆಲವನ್ನಪ್ಪಿತು. ಅವರ ಫಿರಂಗಿಗಳು ಇಂಗ್ಲಿಷರ ವಶವಾದವು. ಪ್ರವಾಹದ ರಭಸದೊಡನೆ ಇಂಗ್ಲಿಷ್‍ಸೈನ್ಯ ಕೋಟೆಗ ನುಗ್ಗಿತು. ಇನ್ನು ಅಲ್ಲಿಂದ ಕಣ್ಮರೆಯಾಗದೆ ರಾಣಿಗೆ ಅನ್ಯ ಉಪಾಯವೇ ಇರಲಿಲ್ಲ.ಕುದುರೆಯ ಲಗಾಮನ್ನು ಹಲ್ಲಿನಿಂದ ಕಚ್ಚಿಕೊಂಡು ಎರಡೂ ಕೈಗಳಿಂದ ಕತ್ತಿ ಬೀಸುತ್ತಾ ರಾಣಿ ಮುನ್ನಡೆದಳು. ಹಿಡಿಮಂದಿ ಪಠಾಣ ಸರದಾರರು, ರಘುನಾಥ ಸಿಂಹ, ರಾಮಚಂದ್ರರಾವ್ ದೇಶಮುಖ್ ಜೊತೆಗಿದ್ದರು. ಇಂಗ್ಲಿಷರ ಸೇನೆ ಸುತ್ತುಗಟ್ಟಿತ್ತು. ರಕ್ತದ ಓಕುಳಿ ನಡೆಯುತ್ತಿತ್ತು. ಪಚ್ಚಿಮ ದಿಗಂತದಲ್ಲಿ ಸೂರ್ಯನೂ ಅದೇ ಬಣ್ಣ ತೊಟ್ಟಿದ್ದ. ಕತ್ತಲಾಗುವುದಕ್ಕೆ ಕೆಲವು ಕಾಲ ಮಾತ್ರ ಇತ್ತು. ಅತ್ಯಂತ ಸಮೀಪಕ್ಕೆ ಬಂದ ಇಂಗ್ಲಿಷ್ ಸೈನಿಕನೊಬ್ಬ ರಾಣಿಯ ಎದೆಗೆ ಗುರಿ ಇಟ್ಟು ಚೂರಿಯನ್ನೆಸೆದ. ಅದು ಸ್ವಲ್ಪ ಕೆಳಕ್ಕೆ ತಗುಲಿತು.ರಾಣಿ ಅದನ್ನೆಸೆದ ಸೈನಿಕನನ್ನು ಯಮಸದನಕ್ಕೆ ಕಳುಹಿಸಿದಳು. ಆಕೆಯ ಶರೀರದಿಂದ ರಕ್ತ ಸುರಿಯುತ್ತಿತ್ತು. ರಾಣಿ ಸ್ವರ್ಣರೇಖಾ ನಾಲೆಯನ್ನು ಹಾಯ್ದು ಹೋಗಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಇಂಗ್ಲಿಷ್ ಸೈನ್ಯದ ಸರದಾರನೊಬ್ಬ ಹಾರಿಸಿದ ಗುಂಡು ಬಲತೊಡೆಗೆ ತಗುಲಿತು. ಎಡಗೈಯಿಂದಲೇ ಖಡ್ಗ ಪ್ರಹಾರ ಮಾಡಿದ ರಾಣಿ ಅವನಿಗೆ ಕೊನೆಗಾಣಿಸಿದಳು. ವೇಗವಾಗಿ ಹಿಂಬಾಲಿಸಿದ ಇಂಗ್ಲಿಷ್ ಸೈನಿಕನೊಬ್ಬನ ಖಡ್ಗ ಪ್ರಹಾರದಿಂದ ಬಲಕೆನ್ನೆಯೇ ಹರಿಯಿತು. ಆಕೆಯ ಕಣ್ಣು ಗುಡ್ಡೆಯೇ ಕಿತ್ತು ಬಂತು. ಆದರೂ ರಾಣಿ ಎಡಗೈಯಿಂದಲೇ ಆ ಸೈನಿಕನ ಭುಜವನ್ನು ಕತ್ತರಿಸಿದಳು.

ರಾಣಿಯ ಬೆಂಗಾವಲಾಗಿ ಕಾಯುತ್ತಿದ್ದ ಗುಲ್ ಮಹಮದ್‍ನಿಗೆ ತನ್ನ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಶೌರ್ಯದಿಂದ ಕಾದಾಡಿದ ಆ ಶೂರ ಬಿಕ್ಕಿಬಿಕ್ಕಿ ಅಳತೊಡಗಿದ. ರಘುನಾಥಸಿಂಹ ಮತ್ತು ರಾಮಚಂದ್ರರಾವ್ ದೇಶಮುಖ್ ರಾಣಿಯನ್ನು ಕುದುರೆಯಿಂದ ಕೆಳಗಿಸಿಕೊಂಡರು. ಕಣ್ಣೀರಿಡುತ್ತಿದ್ದ ಮಗು ದಾಮೋದರನನ್ನು ಕುದುರೆಯ ಮೇಲೆ ಕೂರಿಸಿದ ರಾಮಚಂದ್ರರಾವ್ ರಾಣಿಯ ಶರೀರವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಗಂಗಾದಾಸರ ಕುಟೀರಕ್ಕೆ ಧಾವಿಸಿದ. ರಘುನಾಥಸಿಂಹ ಮತ್ತು ಗುಲ್ ಮಹಮದ್ ಬೆಂಗಾವಲಾಗಿ ನಡೆದರು.ಇರುಳಿನಲ್ಲೂ ಬಾಬಾ ಗಂಗಾದಾಸ್ ರಾಣಿಯ ರಕ್ತಮಯ ಮುಖವನ್ನು ಗುರುತಿಸಿದರು. ತಣ್ಣೀರಿನಲ್ಲಿ ಮುಖ ತೊಳೆದರು. ಕೂಡಲೇ ಗಂಗಾಜಲ ಕುಡಿಸಿದರು. ಸ್ವಲ್ಪ ಚೇತರಿಸಿಕೊಂಡ ರಾಣಿ ನಡುಗುತ್ತಿದ್ದ ತುಟಿಗಳಿಂದ “ಹರಹರ ಮಹಾದೇವ್’ ಎಂದು ಅಸ್ಪಷ್ಟವಾಗಿ ಹೇಳಿದಳು. ತಕ್ಷಣ ಮೂರ್ಛಿತಳಾದಳು. ಸ್ವಲ್ಪ ವೇಳೆಯ ನಂತರ ರಾಣಿ ಪ್ರಯಾಸದಿಂದ ಕಣ್ತೆರೆದಳು. ಆಗ ಅವಳು ತನಗೆ ಬಾಲ್ಯದಿಂದ ಬಾಯಿ ಪಾಠವಾಗಿದ್ದ ಭಗವದ್ಗೀತೆಯ ಶ್ಲೋಕಗಳನ್ನು ಮೆಲುಕು ಹಾಕುತ್ತಿದ್ದಳು. ಧ್ವನಿ ಕ್ಷೀಣವಾಗುತ್ತ ಕೊನೆಗೆ, “ವಾಸುದೇವಾಯ ನಮ:” ಎಂದು ಕೇಳಿಬಂತು. ಝಾನ್ಸಿಯ ಭಾಗ್ಯದ ಅಸ್ತಮಯವಾಯಿತು.ರಘುನಾಥಸಿಂಹ, ಗುಲ್‍ಮಹಮದ್, ದಾಮೋದರರಾವ್ ಅಶ್ರುತರ್ಪಣವಿತ್ತರು.
ಗಂಭೀರ ವಾಣಿಯಿಂದ ಬಾಬಾ ಗಂಗಾದಾಸ್ ಹೇಳಿದರು. ” ಪ್ರಕಾಶಕ್ಕೆ ಕೊನೆಯಿಲ್ಲ. ಅದು ಪ್ರತಿ ಕಣದಲ್ಲೂ ಅಡಗಿರುತ್ತದೆ. ಕಾಲ ಬಂದಾಗ ಮತ್ತೆ ಪ್ರಜ್ವಲಿಸುತ್ತದೆ.” ಅಪ್ರತಿಮ ರಾಣಿಯ ದೇಹ ಬೆಂಕಿಯಲ್ಲಿ ಅಡಗಿತು.
ಬ್ರಿಟಿಷ್ ದಳಪತಿ ಸರ್ ಹ್ಯೂರೋಸ್ ತಮ್ಮ ಯುದ್ದದ ಟಿಪ್ಪಣಿಯಲ್ಲಿ ರಾಣಿಯನ್ನು “ಅತೀ ಸುಂದರಿ, ದೃಢನಿಷ್ಠೆ ಹಾಗು ಅತೀ ಬುದ್ದಿವಂತೆ” ಹಾಗೂ “ಅಪಾಯಕಾರಿ ದಂಗೆಕೋರ ನಾಯಕಿ” ಎಂದು ವರ್ಣಿಸಿದ್ದಾನೆ.

ನಮ್ಮ ದೇಶದಲ್ಲಿ ಇಂತಹ ರಾಣಿ ಹುಟ್ಟಿದ್ದು ನಮಗೆ ಅಪಾರ ಹೆಮ್ಮೆ . . . ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಇವರ ಜೀವನ ಸ್ಪೂರ್ತಿ ನೀಡುತ್ತಿದೆ … ಭಾರತೀಯ ಮಹಿಳಾ ಸಮುದಾಯಕ್ಕೇ ಏಕೆ, ಜಗತ್ತಿನ ನಾರೀ ಸಮುದಾಯಕ್ಕೇ ಗೌರವ ತಂದುಕೊಟ್ಟ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಜೀವನವೊಂದು ಪವಿತ್ರಗೀತೆ. . . !!

5 ಟಿಪ್ಪಣಿಗಳು Post a comment
 1. ಹೆಮ್ಮೆಯ ಕನ್ನಡಿಗ
  ನವೆಂ 24 2012

  ಏಕಮಾತ್ರ ವೀರಮಹಿಳೆ ಅನ್ನೋದು ಅತಿಶಯೋಕ್ತಿ ಅನ್ನಿಸೋಲ್ವ ?. ನಮ್ಮದೇ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ , ಕೆಳದಿ ಚೆನ್ನಮ್ಮ , ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಇವರೆಲ್ಲರ ಬಗ್ಗೇನೂ ಬರಿಬೇಕಾದ್ದು ಕನ್ನಡಿಗರಾದ ನಮ್ಮ ಕರ್ತವ್ಯವಲ್ಲವೇ ?

  ಕೆಳಗಿನ ಕೊಂಡಿಗಳನ್ನ ಓದಿ , ನಮ್ಮ ನಾಡಿನ ವೀರಮಹಿಳೆಯರಿಗೇನು ಕಮ್ಮಿ ಇಲ್ಲ

  http://kn.wikipedia.org/wiki/%E0%B2%95%E0%B2%BF%E0%B2%A4%E0%B3%8D%E0%B2%A4%E0%B3%82%E0%B2%B0%E0%B3%81_%E0%B2%B0%E0%B2%BE%E0%B2%A3%E0%B2%BF_%E0%B2%9A%E0%B3%86%E0%B2%A8%E0%B3%8D%E0%B2%A8%E0%B2%AE%E0%B3%8D%E0%B2%AE

  http://kn.wikipedia.org/wiki/%E0%B2%9A%E0%B3%86%E0%B2%A8%E0%B3%8D%E0%B2%A8%E0%B2%AE%E0%B3%8D%E0%B2%AE

  http://kn.wikipedia.org/wiki/%E0%B2%92%E0%B2%A8%E0%B2%95%E0%B3%86_%E0%B2%93%E0%B2%AC%E0%B2%B5%E0%B3%8D%E0%B2%B5

  http://en.wikipedia.org/wiki/Belawadi_Mallamma (ಕನ್ನಡದಲ್ಲಿ ಲೇಕನ ಒಂದೇ ಸಾಲಿದೆ ಅದುಕ್ಕೆ ಇಂಗ್ಲಿಷ್ ಹಾಕಿದ್ದೀನಿ)

  http://kn.wikipedia.org/wiki/%E0%B2%B0%E0%B2%BE%E0%B2%A3%E0%B2%BF_%E0%B2%85%E0%B2%AC%E0%B3%8D%E0%B2%AC%E0%B2%95%E0%B3%8D%E0%B2%95

  http://www.hindu.com/2008/10/26/stories/2008102652370300.htm

  ಹೆಮ್ಮೆಯ ಕನ್ನಡಿಗ

  ಉತ್ತರ
 2. Srividya
  ನವೆಂ 27 2012

  ಹೌದು.. ಆದರೆ ನಾನು ಅವರ ಎಷ್ಟು ಅದ್ಭುತ ಹೋರಾಟ ಅಂತ ಹೊಗಳಿದ್ದು ಅಷ್ಟೇ.. ಕರ್ನಾಟದಲ್ಲೂ ನೀವು ಹೇಳಿದ ವೀರ ಮಹಿಳೆಯರೂ ಇದ್ದಾರೆ ನನಗೂ ತುಂಬಾ ಗೌರವ ಇದೆ. ಅವರ ಹುಟ್ಟುಹಬ್ಬಕ್ಕೂ ಅವರ ಲೇಖನವನ್ನು ಹಾಕುತ್ತೇನೆ.
  ಶ್ರೀವಿದ್ಯಾ . .

  ಉತ್ತರ
 3. ಹೆಮ್ಮೆಯ ಕನ್ನಡಿಗ
  ನವೆಂ 2 2013

  ಶ್ರೀ ವಿದ್ಯಾ ಅವರೇ,

  ನೀವು ಹೇಳಿದ ಹಾಗೆ ನಮ್ಮ ನೆಲದ ಕಿತ್ತೂರು ರಾಣಿ ಚೆನ್ನಮ್ಮನ ಹುಟ್ಟು ಹಬ್ಬಕ್ಕೆ ನಿಮ್ಮ ಅಂಕಣ ಬರಲಿಲ್ಲ. ಇದೆ ಕಾರಣಕ್ಕೆ ನಾನು ಅಂದು ನನ್ನ ಅನಿಸಿಕೆ ಹಾಕಿದ್ದು..ಪೊಳ್ಳು ರಾಷ್ಟ್ರಿಯತೆಗಾಗಿ ನಮ್ಮ ನೆಲದವರನ್ನ ಮರೆಯದಿರಿ. ಕನ್ನಡಿಗರು ಮೊದಲು ನಮ್ಮ ಇತಿಹಾಸ ತಿಳಿಯಲಿ

  ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  ಹೆಮ್ಮೆಯ ಕನ್ನಡಿಗ

  ಉತ್ತರ
  • ನವೀನ
   ನವೆಂ 2 2013

   ಅಣ್ಣ ಕನ್ನಡಿಗ,
   ನೀನೆ ಯಾಕೆ ಬರೆಯಬಾರದಿತ್ತು? ನಿನ್ನ ಕನ್ನಡತನವೂ ಪೊಳ್ಳೇನು?

   ಉತ್ತರ
 4. ಹೆಮ್ಮೆಯ ಕನ್ನಡಿಗ
  ಜನ 26 2014

  ತಮ್ಮ ನವೀನ,

  ಒಬ್ಬ ಹೆಮ್ಮಯ ಕನ್ನಡಿಗನಾಗಿ ನನ್ನ ಕೈಲಾದ ಮಾಹಿತಿ ಕೊಂಡಿಗಳನ್ನ ಹಾಕಿ ನನ್ನ ಕನ್ನಡತನದ ಜವಾಬ್ದಾರಿ/ಗಟ್ಟಿತನ ಹಾಗು ಸಹ ಕನ್ನಡಿಗ ತಿಳಿದುಕೊಳ್ಳಲಿ ಎಂದು ನನ್ನ ಅನಸಿಕೆ ಹಾಕಿ ನನ್ನ ಕರ್ತವ್ಯ ನಾನು ಮಾಡಿದ್ದೇನೆ

  ಅಷ್ಟಕ್ಕೂ ನಾನ್ ಕೇಳಿದ್ದು ಅಂಕಣ ಬರೆದವರನ್ನ ತಮಗೆಕೊ ಕಸಿವಿಸಿ ಆದಂತಿದೆ…

  ಇವತ್ತಿಗೂ ಈ ಅನಿಸಿಕೆ ಮೂಲಕ ನನ್ನ ಕರ್ತವ್ಯ ನಾನ್ ಮಾಡ್ತೀನಿ…

  ಭಗತ್ ಸಿಂಗ್, ರಾಜ್ ಗುರು ಮುಂತಾದವರ ಅಂಕಣಗಳು ನಿಲುಮೆ ಯಲ್ಲಿ ಹಲವು ಬಂದಿವೆ .. ಆದರೆ ಇವತ್ತು ಅಂದರೆ ಜನವರಿ ೨೬ ನಮ್ಮದೇ ನೆಲದ ಕ್ರಾಂತಿವೀರ ೧೮೩ ವರ್ಷಗಳ ಹಿಂದೆ ಗಲ್ಲಿಗೇರಿ ಹುತಾತ್ಮನಾದ ದಿನ. ಯಾಕೋ ನಮ್ಮ ರಾಷ್ಟ್ರೀಯ ವಿಶ್ವಮಾನವ ಕನ್ನಡಿಗರು ಜಾಣ ನಿದ್ದೆ ಮಾಡ್ತಿದ್ದಾರೆ..

  http://kn.wikipedia.org/wiki/%E0%B2%B8%E0%B2%82%E0%B2%97%E0%B3%8A%E0%B2%B3%E0%B3%8D%E0%B2%B3%E0%B2%BF_%E0%B2%B0%E0%B2%BE%E0%B2%AF%E0%B2%A3%E0%B3%8D%E0%B2%A3

  http://en.wikipedia.org/wiki/Sangolli_Rayanna

  ಇದಕ್ಕೆ ಏನೋ ನಮ್ಮ ಹಿರಿಯರು ಹಿತ್ತಲ ಗಿಡ ಮದ್ದಲ್ಲ… ಮನೆಗ್ ಮಾರಿ ಊರಿಗ್ ಉಪಕಾರಿ ಅನ್ನೋ ಗಾದೆಗಳ್ನ ಇಂತಹವರನ್ನ ನೋಡೇ ಮಾಡಿದ್ದು

  ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  ಹೆಮ್ಮೆಯ ಕನ್ನಡಿಗ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments