ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 28, 2012

2

ಭಾಷಣ ಮಾಡುವ ಕ(ಕೊ)ಲೆ

‍ನಿಲುಮೆ ಮೂಲಕ

– ಅರೆಹೊಳೆ ಸದಾಶಿವ ರಾವ್

ಇದೇನು ಹೊಸ ರೀತಿಯ ಕೊಲೆ ಎಂದು ಹುಬ್ಬೇರಿಸಬೇಡಿ. ಶೀರ್ಷಿಕೆ ಹೇಳುವಂತೆ ಈ ಭಾಷಣ ಎನ್ನುವುದು ಒಂದು ಕಲೆಯೂ ಹೌದು, ಸ್ವಲ್ಪ ವ್ಯಾಕರಣ ದೋಷ ಕಾಣಿಸಿಕೊಂಡರೆ ಅದು ಕೊಲೆಯೂ ಹೌದು.

ಉತ್ತಮವಾದ ಮಾತುಗಾರಿಕೆ, ಮಾತುಗಾರಿಕೆಯಲ್ಲಿ ವ್ಯಾಕರಣ ಬದ್ಧ, ತೂಕಸಹಿತ ಮಾತು, ಸಿಹಿಯಾದ ನುಡಿಮುತ್ತು, ಸಾಹಿತ್ಯದ ಸಾಂಗತ್ಯ, ಹದಕ್ಕೆ ಬೇಕಾದಷ್ಟು ಏರಿಳಿತ ಮತ್ತು ನಿರರ್ಗಳತೆ, ಇವು ಮೇಳೈವಿಸಿದರೆ ಅದು ಭಾಷಣ ಮಾಡುವ ‘ಕಲೆ’ ಎನಿಸಿಕೊಳ್ಳುತ್ತದೆ. ಇದರಲ್ಲಿ ಯಾವುದಾದರೂ ಒಂದು ಕೈ ಕೊಟ್ಟರೆ ಅದು ಭಾಷಣ ಮಾಡುವ ‘ಕೊಲೆ’ ಆಗುತ್ತದೆ.

ಭಾಷಣ ಮಾಡುವ ‘ಕೊಲೆ’ಯಲ್ಲಿ ಮೊದಲ ಬಲಿಪಶುವಾಗುವುತು ಭಾಷೆ. ನಮ್ಮ ಕರುನಾಡ ಮಾತೃ ಭಾಷೆಯ ಪರಿಸ್ಥಿತಿಯಂತೂ ಇಂದು ಹೇಳತೀರದಷ್ಟು ಹದಗೆಟ್ಟಿದೆ. ಮೊದಲೇ ತಮಿಳು, ಮಲಯಾಳಿ, ಮರಾಠಿ, ತೆಲುಗರಿಂದಾಗಿ ಕನ್ನಡವನ್ನು ಹುಡುಕಿದರೂ, ಹುಡುಕಿದಾತನೇ ಹಾಸ್ಯಾಸ್ಪದವಾಗುತ್ತಿದ್ದಾನೆ. ದುರಂತವೆಂದರೆ ಈ ಭಾಷೆಗಳ ಹೊಡೆತದ ನಡುವೆಯೂ ಅಲ್ಲಲ್ಲಿ ಉಳಿದಿರುವ ಕನ್ನಡಕ್ಕೆ ಇಂಗ್ಲೀಷ್‍ನ ಬೆರಕೆಯಾದ ನಂತರ ಕನ್ನಡವೆನ್ನುವುದು ಕಲಬೆರಕೆ ಆಗಿಬಿಟ್ಟಿದೆ.

ಅದಿರಲಿ ಬಿಡಿ. ನಾವಿಲ್ಲಿ ಭಾಷಾ ಸಮಸ್ಯೆಗಿಂತ ಭಾಷಣದ ಸಮಸ್ಯೆಯ ಬಗ್ಗೆ ಮಾತಾಡ ಹೊರಟಿದ್ದೇವೆ. ಅಳಿದುಳಿದ ಕನ್ನಡದ ಭಾಷೆಯನ್ನು ತನ್ನ ಹರಿಬಿಟ್ಟ ನಾಲಿಗೆಯಿಂದ ಭಾಷಣಕಾರ ಕೊಲ್ಲುತ್ತಲೇ ಇದ್ದರೆ ಹರಿಯೂ ಅದನ್ನು ರಕ್ಷಿಸಲಾರ. ಹಾಗೆಂದಾಗ ಅದು ಭಾಷಣ ಮಾಡುವ ಕೊಲೆಯಾಗುತ್ತದೆ.

ಭಾಷಣ ಎಂದಾಕ್ಷಣ ನನ್ನೆದೆ
ಮಿಡಿಯುವುದು ಅರೆಕ್ಷಣ
ಭಾಷೆಯೇ, ನಿನಗೊದಗದಿರಲಿ
ಭೀಷ್ಮನ ಶರಶಯ್ಯೆಯ ತಾಣ!

ಅಂದ ಹಾಗೆ ಭಾಷಣವೇ ಒಂದು ಕಲೆಯೂ ಹೌದು. ಏನೂ ಅಲ್ಲದ ವಿಷಯವನ್ನು ಎಲ್ಲವೂ ಹೌದೆಂಬಂತೆ ಸುಲಲಿತವಾಗಿ, ಮನೋಜ್ಞವಾಗಿ, ಮನಮುಟ್ಟುವಂತೆ, ಕೇಳುಗ ಸಮಯದ ಪರಿವೆಯೂ ಇಲ್ಲದೆ ಮೈಮರೆಯುವಂತೆ ಮಾಡುವುದು ಭಾಷಣ ಮಾಡುವ ಕಲೆ ಅನಿಸಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದರೂ; ತಮಗೆ ನೀಡಿದ ಸಮಯದ ಮಿತಿಯನ್ನು ಹಾಗೆ ಸಮಯ ನಿಗದಿ ಪಡಿಸಿದವರೂ ಮರೆಯುವಂತೆ ಮಾಡಿ ಮಾತಾಡಿದ ಆ ಕಲೆ, ಭಾಷಣದ ಕಲೆ ಅನಿಸಿಕೊಳ್ಳುತ್ತದೆ. ಇಂದು ಚಿಕಾಗೋ ಅಂದಾಕ್ಷಣ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ. ಅಲ್ಲಿನ ಅಧಿವೇಶನ ನೆನಪಾಗುತ್ತದೆ.

ಭಾಷಣದಲ್ಲಿಯೂ ಹಲವು ವಿಧಗಳಿವೆ. ಯಾವುದೋ ಒಂದು ಉದ್ದೇಶದ ವಿಷಯ ಮಾತಾಡುವುದು, ಏನೂ ಅಲ್ಲದ ವಿಷಯದ ಬಗ್ಗೆ ಮಾತಾಡುವುದು, ತಮ್ಮದೇ ಅದ ಅಜೆಂಡಾಕ್ಕೆ ಜೋತು ಬಿದ್ದು ಮಾತಾಡುವುದು, ಯಾವುದೋ ಸಂಬಂಧವಿಲ್ಲದ ವಿಷಯದ ಬಗ್ಗೆ ಕೊರೆಯುವುದು.. ಇತ್ಯಾದಿ ಇತ್ಯಾದಿ.

ಕೆಲವೊಮ್ಮೆ ಭಾಷಣಕಾರ ಎಷ್ಟೇ ಸೊಗಸಾಗಿ ಮಾತಾಡಿದರೂ ಇವನ ಭಾಷಣ ಬೇಗ ಮುಗಿಸಲಪ್ಪ ಎಂದೇ ಕಾಯುವವರಿರುತ್ತಾರೆ. ಇತ್ತೀಚೆಗೆ ಅಂತಾದ್ದೊಂದು ಅನುಭವ ನನಗೂ ಆಯ್ತು. (ನಾನೇನೂ ಭಾಷಣಕಾರನೂ ಅಲ್ಲ, ಭಾಷಣ ಮಾಡುವ ಕೊಲೆಗೆ ಒಂದು ಉದಾಹರಣೆಯಾದೇನು – ಅದು ಬೇರೆ ಮಾತು) ನಾನು ಓದಿದ ಶಾಲೆಯಲ್ಲಿ ನನ್ನನ್ನು ಪತ್ರಿಕೆಯ ಅಂಕಣಕಾರ ಎಂಬ ವಿಶೇಷಣ ಕೊಟ್ಟು ಒಂದು ಭಾಷಣ ಮಾಡಲು ಕರೆದರು. ಮೊದಲೇ ನಾನು ಓದಿದ ಶಾಲೆ, ಕನಿಷ್ಟ 15 ನಿಮಿಷವಾದರೂ ಮಾತಾಡಲೇಬೇಕೆಂದು 15 ದಿನಗಳಿಂದ ತಯಾರಿ ನಡೆಸಿದೆ. ಅಂತೂ ನಾನು ವೇದಿಕೆ ಏರಿ ಭಾಷಣ ಮಾಡುವ ದಿನ ಬಂದೇ ಬಿಟ್ಟಿತು. ಸಂಜೆ 6.00 ಗಂಟೆಗೆ ಸಭೆ ಆರಂಭವಾಗಬೇಕಿತ್ತು. ಶಾಸಕ ಮಹೋದಯರು, ಎಂದಾದರೂ ಸಮಯಕ್ಕೆ ಸರಿಯಾಗಿ ಬಂದರೆ, ಮುಂದಿನ ಚುನಾವಣೆಯಲ್ಲಿ ಜನ ತಮ್ಮನ್ನು ಆರಿಸುವುದೇ ಇಲ್ಲ ಎಂದು ಭಾವಿಸಿದ್ದಾರೋ ಏನೋ! ಆ ಸಭೆಗೆ ಬರಬೇಕಾಗಿದ್ದ ಶಾಸಕರು, ಕೊನೆಗೂ 8.30ಕ್ಕೆ ಬಂದರು. ಅವರಿಗೆ ಮುಂದೆ ಬೇರೆ ಕಾರ್ಯಕ್ರಮಗಳೂ ಇದ್ದ ಕಾರಣ, ಪ್ರಾರ್ಥನೆ, ಸ್ವಾಗತ ಭಾಷಣದ ನಂತರ ಉಳಿದೆಲ್ಲಾ ಕಲಾಪಗಳನ್ನು ಬದಿಗೊತ್ತಿ, ಮಾನ್ಯ ಶಾಸಕರ ಭಾಷಣಕ್ಕೆ ಅವಕಾಶ ಮಾಡಿಕೊಡಲಾಯ್ತು. ಸರಿ, ಅದು ಭಾಷಣವೋ, ಮುಂದಿದ್ದ ಪಂಚಾಯ್ತಿ ಚುನಾವಣೆಯ ಪರೋಕ್ಷ ಪ್ರಚಾರವೋ ತಿಳಿಯಲಿಲ್ಲ. ಅಂತೂ ಆ ಶಾಸಕ ಮಹಾಶಯರು ತರಾತುರಿಯ ಭಾಷಣ ಮುಗಿಸಿದರು. ಮುಗಿಸುವಾಗ ಒಂದು ಮಾತಂದರು. ಅದೆಂದರೆ “ನಾನೀಗ ಇಲ್ಲಿ ಹೆಚ್ಚು ಮಾತಾಡುವುದಿಲ್ಲ. ಪತ್ರಿಕೆಯ ಅಂಕಣಕಾರರೇ ಇಲ್ಲಿದ್ದಾರೆ. ಅವರಿಗಂತೂ ಭಾಷಣ ಮಾಡುವುದು ಹೇಳಿಕೊಡುವುದೇ ಬೇಡ. ಅವರೇ ಮಾತಾಡುತ್ತಾರೆ!” ನಾನು ತಯಾರಿದ್ದುದು 15 ನಿಮಿಷದ ಭಾಷಣಕ್ಕೆ. ಇದೊಳ್ಳೆ ಗ್ರಹಚಾರವಾಯ್ತಲ್ಲ ಅಂದುಕೊಂಡೆ.

ಅಂತೂ ಶಾಸಕರು ಭಾಷಣ ಮುಗಿಸಿ ಮುಂದಿನ ಸಭೆಗೆ ಹೊರಟು ಹೋದರು. ಒಂದೆರಡು ಸಾಂಪ್ರದಾಯಿಕ ಕಾರ್ಯಕ್ರಮದ ನಂತರ ಮಾನ್ಯ.. ಇವರು, ಅಂಕಣಕಾರರು ನಮ್ಮನ್ನುದ್ದೇಶಿಸಿ ಎರಡೇ ಎರಡು (ಜಾಸ್ತಿಯಾದರೆ ಎಚ್ಚರಿಕೆ!) ಮಾತಾಡುತ್ತಾರೆ ಎಂದು ನಿರೂಪಕರು ತಾಕೀತು ಹಾಕಿದಂತೆ ಹೇಳಿದರು. ಗಂಟಲು ಸರಿಪಡಿಸಿಕೊಂಡು, ಮೈಕಾಸುರನ ಮುಂದೆ ನಿಂತು ನಾನು ಭಾಷಣ ಆರಂಭಿಸಿದೆ. 15 ನಿಮಿಷದ ಗುರಿ ಮುಟ್ಟುವ ಅವಸರದೊಂದಿಗೆ.

ಸಭೆಯಲ್ಲಿ ದಿವ್ಯ ಮೌನ; ನನ್ನ ‘ಕಂಚಿನ ಕಂಠ’ (ಎಂದು ನಾನು ಭಾವಿಸಿದ)ದ ಭಾಷಣ ಆ ವೇದಿಕೆಯ ಹಿಂಭಾಗದಿಂದ ಶ್ಚ್, ಶ್ಚ್ ಎಂಬ ಕರೆ ಯಾರನ್ನೋ ಕರೆಯುತ್ತಿರಬೇಕೆಂದು ನಾನು ಮುಂದುವರಿಸಿದೆ. ತೀರಾ ನನ್ನ ಹಿಂಬಂದಿಗೆ ಬಂದು, ನನ್ನ ಗಮನವನ್ನು ತನ್ನತ್ತ ಸೆಳೆಯಲೆತ್ನಿಸಿದ ನಿರೂಪಕನನ್ನು ಗಮನಿಸಿದೆ.

ಸ್ವಾಮಿ, ಈ ಪ್ರಪಂಚವೇ ಕಣ್ಣಿಗೆ ಕಾಣದ ನಿರೂಪಕನಾಡಿಸುವ ಆಟ ಎಂಬ ವೇದಾಂತ ಓದಿ ತಿಳಿದವರು ನಾವು! ಇನ್ನು ನನ್ನಂತಹ ಹುಲು ಮಾನವ, ನನಗೆ ಭಾಷಣಕ್ಕೊಂದು ಅಪೂರ್ವ ಅವಕಾಶ ಒದಗಿಸಿದ ನಿರೂಪಕನ ಅಣತಿ ಮೀರಲಾದೀತೆ! ‘ಎನು’ ಎಂಬಂತೆ ಹಿಂತಿರುಗಿ ನೋಡಿದೆ; ನಿಮ್ಮದಿನ್ನು ಸಾಕು ಮುಗಿಸಿ ಎಂಬಂತೆ ಅತ ಕಣ್ಣು ಬಿಟ್ಟ. ನಾಲ್ಕೈದು, ನಿಮಿಷ ಅಷ್ಟೇ ನಾನು ಮಾತಾಡಿದ್ದವ, ಸೀದಾ 15ನೆಯ ನಿಮಿಷಕ್ಕೆ ಜಾರಿದೆ. ಧನ್ಯವಾದಗಳು ಎಂದು ನನ್ನ ಸ್ಥಾನದಲ್ಲಿ ಕುಕ್ಕರಿಸಿದೆ. ‘ಮಹಾದುಪಕಾರ’ವೇ ಆಯ್ತೆಂಬಂತೆ ಸಭಿಕರಿಂದ ಅಮೋಘ ಕರತಾಡನವಾಯ್ತು. ಅಂದೇ ನಾನಂದು ಕೊಂಡೆ,

ಭಾಷಣಕಾರನಿಗೂ ನಿರೂಪಕನಿಗೂ
ಇರದಿದ್ದರೆ ಸ್ನೇಹ-ಸಖ್ಯ!
ನಿಮ್ಮ ಭಾಷಣ ಮುಂದು-
ವರಿಯುವುದೇ ಅಶಕ್ಯ!

****
ನಗರದ ಜನತೆ ಇತ್ತೀಚೆಗೆ ನಗುವುದನ್ನು ಮರೆತದ್ದು ನೆನಪಿಸಿಕೊಂಡ ಹಾಗೆ ಕಾಣುತ್ತಿದೆ. ಯಾವುದಕ್ಕೆ ಜನಸೇರಿಸಲಾಗದಿದ್ದರೂ ಹಾಸ್ಯ ಹಬ್ಬ, ಹಾಸ್ಯೋತ್ಸವಗಳಿಗೆ ಜನರನ್ನು ಸೇರಿಸುವುದು ಸುಲಭ ಎಂಬುದು ಇತ್ತೀಚಿನ ಸರ್ವರಿಗೂ ತಿಳಿದ ವಿಚಾರ. ಹಾಗಾಗಿ ಗಣೇಶೋತ್ಸವದಿಂದ ಹಿಡಿದು, ಶಯನೋತ್ಸವದ ತನಕವೂ ಇಂದು ನೆನಪಾಗುವುದು ಹಾಸ್ಯೋತ್ಸವ.ನಾನೂ ಇತ್ತೀಚೆಗೆ ಕೆಲವು ಹಾಸ್ಯೋತ್ಸವಗಳಿಗೆ ಹೋಗಿದ್ದೆ. ಅಲ್ಲಿ ಹಾಸ್ಯಮಯವಾಗಿ ಮಾತಾಡುವ ಖ್ಯಾತಿವೆತ್ತ ‘ಹಾಸ್ಯಗಾರರು’ ವೇದಿಕೆಯ ಮೇಲ ಘಂಟೆಗಟ್ಟಲೆ ನಿರರ್ಗಳವಾಗಿ ಮಾತಾಡಿ ನಿಮ್ಮನ್ನು ನಗೆಗಡಲಲ್ಲಿ ಮುಳುಗಿಸುತ್ತಾರೆ. ಆದರೆ ಆ ನಗೆಯ ಭಾಷಣಕಾರರಾದರೂ (ನಗೆಕಾರರು ಅನ್ನೋಣವೇ) ಅಷ್ಟೊಂದು ನಗಿಸುವ ಸರಕನ್ನು ಎಲ್ಲಿಂದ ಸೇರಿಸಿಕಕೊಳ್ಳಬೇಕು! ಒಂದಷ್ಟು ನಗೆಯ ಸರಕಿಗೆ ಅಂಟುಕೊಂಡಿರುವ ಅವರು ತಂಡವಾಗಿಯೂ ತಾವೇ ರಚಿತವಾಗುತ್ತಾರೆ.

ಹೀಗೆ ನಾನು ಕಂಡ ನಾಲ್ಕು ಹಾಸ್ಯೋತ್ಸವಗಳಲ್ಲಿ ಕಿಕ್ಕಿರಿದು ಜನ ಸೇರಿದ್ದರು. ನನ್ನ ದುರಾದೃಷ್ಟವೋ, ವೇದಿಕೆಯ ಮೇಲೆ ಸೇರಿದ್ದು ಮಾತ್ರ, ಅದೇ ಪುನರಪಿ ನಗೆಕಾರರು! ಒಂದನೆಯ ಹಾಸ್ಯೋತ್ಸವ ಚೆನ್ನಾಗಿತ್ತು. ಎರಡನೆಯ ಹಾಸ್ಯ ಹಬ್ಬದಲ್ಲಿ ಅವರೇ ಮಾತಾಡಿದಾಗ ಇದೆಲ್ಲೋ ಕೇಳಿದ ಹಾಗಿತ್ತು ಅನಿಸಿತ್ತು; ಮೂರನೆಯದರಲ್ಲಿ ಓಹ್, ಇಂತವರ ಕ್ಯಾಸೆಟ್ ಅಲ್ಲವೇ ಅನಿಸಿತು! ನಾಲ್ಕನೆಯ ಹಾಸ್ಯೋತ್ಸವದ ವೇಳೆ ಅಯ್ಯೋ ಪಾಪ ಅನಿಸಿತು. ಇನ್ನೊಂದೆರಡು ಹಾಸ್ಯೋತ್ಸವ ಆದರೆ, ಅಳಿದೂರಿಗೆ ಉಳಿದವನೇ ಗೌಡ ಎಂಬಂತೆ, ನನ್ನೂರಲ್ಲಿ ಒಂದು ಹಾಸ್ಯೋತ್ಸವ ಏರ್ಪಡಿಸಿ, ನಾನೇ ನಗೆಕಾರನಾಗಬಹುದೇನೋ ಅನಿಸುತ್ತದೆ!

ಯಾಕೆಂದರೆ ಮತ್ತೆ ಮತ್ತೆ ಬೇರೆ ಬೇರೆ ವೇದಿಕೆಗಳಲ್ಲಿ, ಅದೇ ಭಾಷಣಕಾರರ, ಅದೇ ಹಾಸ್ಯ ಕೇಳಿ ಕೇಳಿ, ನಗುವುದನ್ನು ಮರೆತು, ಅಳಲು ಅಗದೇ ಕಂಗಾಲಾಗುವ ನಮ್ಮ ಪರಿಸ್ಥಿತಿ, ಆ ಪ್ರಾಯೋಜಕರಿಗೆ ಪ್ರೀತಿ. ಹೀಗೆ ಅಲ್ಲಿ ಹಾಸ್ಯ ಭಾಷಣ ಮಾಡುವ ಕ(ಕೊ)ಲೆ ಭಯಂಕರವಾಗಿರುತ್ತದೆ.

ಭಾಷಣಕಾರ ಯಾರದರೇನು?
ಅವನಿಗೂ ಸರಕು ಬೇಡವೇನು?
ಮಾತಾಡು ಮಾತಾಡು ಎಂದರೆ
ಆತನಾದರೂ ಆಡಬೇಕು ಎಲ್ಲಿಂದ?

ಇದು, ನಮ್ಮ ಹಾಸ್ಯೋತ್ಸವಗಳು ಜನಪ್ರಿಯವಾಗುತ್ತಲೂ ಹಿಡಿದುಕೊಂಡ ದುರಾದೃಷ್ಟಕರ ದಾರಿ!
****
ಇನ್ನು ಮುಖ್ಯವಾಗಿ ನಾವು ಚರ್ಚಿಸಬೇಕಾದ ವಿಚಾರವನ್ನೇ ಬಿಟ್ಟಿದ್ದೇವೆ. ಅದು ನಮ್ಮ ರಾಜಕಾರಣಿಗಳ ಭಾಷಣ. ಯಾವುದೇ ಕ್ಷೇತ್ರಕ್ಕೆ ಹೋಗಲಿ, ರಾಜಕಾರಣಿಯ ಚರ್ಚೆ ಬರದೇ ಹೋದಲ್ಲಿ ಅದೊಂದು ರೀತಿಯ ಅಪೂರ್ಣ ಚರ್ಚೆ.  ದೇಶ ಕಂಡ ಅತ್ಯುತ್ತಮ ಭಾಷಣಕಾರರಲ್ಲಿ ಭಾಷಣ ಮಾಡುವ ಕಲೆ ಮತ್ತು ಕೊಲೆಗಳೆರಡಕ್ಕೂ ರಾಜಕಾರಣಿಗಳಿಗಿಂತ ಉತ್ತಮ ಉದಾಹರಣೆ ಬೇರೆ ಸಿಗಲಿಕ್ಕೇ ಇಲ್ಲ.

ಹಳ್ಳಿಗನಿಂದ ದೆಹಲಿಗನ ತನಕ, ಬಹುಶಃ ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ಮೊದಲು ಭಾಷಣ ಕೇಳುವುದು ರಾಜಕಾರಣಿಯ ಬಾಯಿಯಿಂದ ಇರಬೇಕು. ರಾಜಕಾರಣಿಯ ಬಾಯಿಯಿಂದಲೇ ಮೊದಲು ಭಾಷಣ ಕೇಳಬೇಕು ಎಂಬುದು, ನಮ್ಮ ದೇಶದ ಅಘೋಷಿತ, ಅಲಿಖಿತ ಸಂವಿಧಾನ!! ಒಂದು ಸಂವಿಧಾನದ ವಿಧಿಯನ್ನು ಮಾತ್ರ ಪ್ರತಿ ಪ್ರಜೆಯೂ ಚಾಚೂ ತಪ್ಪದೇ ಪಾಲಿಸುತ್ತಾನೆ – ಪಾಲಿಸದಿದ್ದರೆ ಶಿಕ್ಷೆ ಇಲ್ಲ ಎಂದು ಗೊತ್ತಿದ್ದು!

ಮತದಾರನನ್ನು ಸೆಳೆಯಲು, ರಾಜಕಾರಣಿಗಳು ವಿರೋಧ ಪಕ್ಷದವರಿಗೆ ಬೈಯ್ಯುತ್ತಲೇ ಭಾಷಣ ಆರಂಭಿಸುತ್ತಾರೆ. ಮುಗಿಸುವುದೂ ಅವರಿಂದಲೇ, ವಿಪರ್ಯಾಸವೆಂದರೆ ಚುನಾವಣೆಯ ನಂತರ ರಾಜಕಾರಣಿ ತನ್ನ ಭಾಷಣಕ್ಕೆ ತಾನೇ ವಿಧಿಸಿಕೊಳ್ಳುವ ಸಮಯದ ಗಡುವು, ಮತ ಕೇಳಲು, ಮತ ಕೀಳಲು ಬಂದಾಗ ಇರುವುದಿಲ್ಲ.

ವೇದಿಕೆಯ ಮೇಲೆ, ಅಂದರೆ ಸಭೆಯ ಮುಂಭಾಗದಲ್ಲಿರಬೇಕಾದ ಸಭ್ಯತೆಗಳೂ ರಾಜಕಾರಣಿಯ ಮಟ್ಟಿಗೆ ವಿನಾಯ್ತಿ ಪಡೆದಿರುವುದೂ ಇದೆ. ಏಕವಚನ, ಬಹುವಚನಗಳು ಅವರ ಭಾಷಣದಲ್ಲಿ ಪಕ್ಷವನ್ನವಲಂಬಿಸಿ ಪ್ರಯೋಗಿಸಲ್ಪಡುತ್ತಿವೆ. ಪತ್ರಿಕಾ ಗೋಷ್ಠಿ ಕಂ ಭಾಷಣದಲ್ಲಿ ತಮ್ಮ ಮೆಚ್ಚಿನ ನಾಯಕನನ್ನು ಏಕವಚನದಲ್ಲಿ ಕರೆದರೆಂಬ ಕಾರಣಕ್ಕೆ ಪ್ರತಿಭಟನೆ ತಾರಕ್ಕೇರಿದ್ದನ್ನು ನಾವೂ  ಓದಿದ್ದೇವೆ. ರಾಜಕಾರಣಿಯ ಮಟ್ಟಿಗೆ ಆ ಭಾಷಣವೇ ಕಲೆಯೂ ಹೌದು; ಎದುರಾಳಿಯ ಮಟ್ಟಿಗೆ ಭಾಷಣದಿಂದಾಗುವ ಕೊಲೆಯೂ ಹೌದು. ಅದಕ್ಕೇಂದೇ

ರಾಜಕಾರಣಿಗೆ ಭಾಷಣವೇ ಭೂಷಣ.
ಏಕೆಂದರೆ ಮತ್ತೆಲ್ಲವೂ ಅವನಿಂದ
ಅದ್ಯಾವತ್ತೋ ಆಗಿರುತ್ತದೆ ಪಲಾಯನ!

ಅಂತೂ ನುರಿತ ಭಾಷಣಕಾರ ಕಂ ರಾಜಕಾರಣಿಯಾದರೆ ಯಶಸ್ಸು ಅವನತ್ತ ಪಕ್ಷಪಾತಿಯಾಗಿರುತ್ತದೆ. ಅದಿಲ್ಲವಾದರೆ, ಇವನಿಗೆಂತದು, ಮಾತಾಡುವುದಕ್ಕೆ ಬರುವುದಿಲ್ಲ ಮತ್ತೇಕೆ ಓಟು ಎಂದು ನಾವೇ ಗೊಣಗುತ್ತೇವೆ. ಅಡದೆಯೇ ಮಾಡುವವ ರೂಢಿಯೊಳಗುತ್ತಮರು ಎಂಬುದನ್ನು ಪುಸ್ತಕದ ಬದನೆಕಾಯಿಯ ರಾಶಿಗೆ ಸೇರಿಸಿ, ನಾವು ನಿರಮ್ಮಳಾಗಿದ್ದೇವೆ.

ಭಾಷಣದ ವಿಷಯ ಹೇಳುತ್ತಾ ಹೋದಂತೆ ಮತ್ತು ಒಂದು ವರ್ಗ ನೆನಪಾಗುತ್ತದೆ. ಅದು ಭಾಷಣದ ರಚನೆಕಾರರು! ಅದೆಷ್ಟೋ ಪುಟಾನುಪುಟಗಳಿಗೆ ಭಾಷಣದ ಸ್ವರಚನೆಯ ತಾಕತ್ತಿರುವುದಿಲ್ಲ. ವಿದ್ಯಾರ್ಥಿ ದಿಸೆಯಲ್ಲಿ ದೊಡ್ಡವರು ಮಕ್ಕಳಿಗೆ ಭಾಷಣ ಬರೆದುಕೊಟ್ಟಂತೆ, ಕೆಲವು ಭಾಷಣಕಾರರು ಜೀವಮಾನಿವಿಡೀ ತಾವು ವಿದ್ಯಾರ್ಥಿಯೇ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಬಿಟ್ಟಿರುತ್ತಾರೆ-ಕೊನೆಗೆ ಭಾಷಣದ ಮಟ್ಟಿಗಾದರೂ, ಎಷ್ಟೋ ಉತ್ತಮ ಭಾಷಣಗಳು ವೇದಿಕೆಯ ಮೇಲೆ ಪುಂಖಾನುಸುಪುಂಖವಾಗಿ ಹೊರಬಂದರೂ, ಅವರ ತಯಾರಿ ಮಾಡಿದವ ಬೇರೆಯವನೇ ಆಗಿರುತ್ತಾರೆ. ಅದನ್ನು ಬರೆದುಕೊಟ್ಟ ಆ ಪುಣ್ಯಾತ್ಮ. ಅದೇ ಸಭೆಯ ಮೂಲೆಯಲ್ಲೆಲ್ಲೋ ಕುಳಿತು, ಅವನದೇ ಭಾಷಣ ಬೇರೊಬ್ಬನ ಬಾಯಲ್ಲಿ ಉದುರುವುದು ಕೇಳೆ, ಕೇಕೆ ಹಾಕಿ ಚಪ್ಪಾಳೆ ಹೊಡೆಯುತ್ತಿದ್ದರೆ ಆಶ್ಚರ್ಯವಿಲ್ಲ. ಅದವನ ಪ್ರಾರಬ್ಧ ಎಂದುಕೊಳ್ಳಬೇಕಷ್ಟೇ! ಹೆಚ್ಚಾಗಿ ಇಂತಹ ಪ್ರಾರಬ್ಧ ಕರ್ಮಕ್ಕೊಳಗಾಗಿರುವವರು, ರಾಜಕಾರಣಿಗಳ ಅಪ್ತ ಸಹಾಯಕರು. ಅದೆಷ್ಟೋ ಉನ್ನತ ಮಟ್ಟದ ನಾಯಕರಿಗೂ ಈ ಭಾಷಣ ತಯಾರಕರ ಅವಲಂಬನೆ ತಪ್ಪಿದ್ದಲ್ಲ. ಉದಾಹರಣಿಗೆ ನಮ್ಮ ವಿತ್ತ ಸಚಿವರು ಪುಟಗಟ್ಟಲೇ ಬಜೆಟ್ ಭಾಷಣವನ್ನು ಮಂಡಿಸುತ್ತಾರೆ. ಇಂತಹ ವಿತ್ತ ಸಚಿವರು ನಿರರ್ಗಳವಾಗಿ, ಮನಮೋಹಕವಾಗಿ ಮಾತಾಡಿದರು; ಮಧ್ಯೆ ಮಧ್ಯೆ ಬಜೆಟ್‍ನಲ್ಲಿ ಕವನಗಳೂ ಹರಿದುವು ಎಂಬುದನ್ನು ಓದಿದ್ದೇವೆ. ಓದಿ ಹೇಳಿದ ಸಚಿವರಿಗೆ ಸಾರಾಸಗಟಾಗಿ ಬೆನ್ನು ತಟ್ಟುವ ಬಜೆಟ್ ಇಟ್ಟುಕೊಳ್ಳುವ ನಾವು, ಅದನ್ನು ತಯಾರಿಸಲು ಹಗಲಿರುಳು ಶ್ರಮಿಸಿದ ಅಧಿಕಾರಿವರ್ಗ, ಜವಾನ ವರ್ಗದ ಬಗ್ಗೆ ಮಾತೇ ಎತ್ತುವುದಿಲ್ಲ. ಒಂದು ರೀತಿಯಲ್ಲಿ ಇದನ್ನು ‘ಕೊರತೆಯ ಬಜೆಟ್’ ಅನ್ನಬಹುದು.

ಖ್ಯಾತ ಚಿತ್ರತಾರೆ ಅಮಿತಾಭ್ ಬಚ್ಚನ್ ಒಂದೆಡೆ ಹೇಳಿದ್ದರು, ತನ್ನ ಮಾತಿನ ಮೋಡಿಯಿಂದ ಜನರನ್ನು ಮರುಳು ಮಾಡಿ, ನದಿಯೇ ಇಲ್ಲದೆಡೆ ಸೇತುವೆ ನಿರ್ಮಿಸುವ ಆಶ್ವಾಸನೆ ನೀಡುವವನೇ ನಿಜವಾದ ರಾಜಕಾರಣಿ ಎಂದು! ರಾಜಕಾರಣಿಯ ಮಾತಿನ ಮೋಡಿ ಎಷ್ಟಿರುತ್ತದೆಂದರೆ, ಅವನ ಮಾತಿನ ಭರಾಟೆಗೆ ಮೈಮರೆಯುವ ಸಭಿಕರಿಗೆ, ಅವನು ಸೇತುವೆ ಕಟ್ಟುವುದಾಗಿ ಘೋಷಿಸಿದ ಸ್ಥಳದಲ್ಲಿ ನದಿಯೇ ಇಲ್ಲ ಎಂಬುದು ಅವನ ಮುಂದಿನ ಚುನಾವಣೆಗೆ ಬರುವ ತನಕ ಅಥವಾ ವಿರೋಧ ಪಕ್ಷದವರು ಹೇಳಿಕೊಡುವ ತನಕ ಗೊತ್ತೇ ಆಗುವುದಿಲ್ಲ. (ಅದಕ್ಕೆ ಇರಬೇಕು ಅಮಿತಾಬ್ ರಾಜಕೀಯವನ್ನು ಮಧ್ಯೆಯೇ ಮೊಟಕುಗೊಳಿಸಕೊಂಡಿದ್ದು!).

ಇಷ್ಟವಿರಲಿ, ಇಲ್ಲದಿರಲಿ, ತಾನೊಬ್ಬ ಮಹಾನ್ ಭಾಷಣಕಾರನೆಂಬ ಅಹಂ, ಪ್ರತಿಯೊಬ್ಬನಲ್ಲಿಯೂ ಇರುತ್ತದೆ. ನಮಗೇನು, ಮಾತಾಡಲು ಬರುತ್ತದೆ ಎಂಬ ಅತಿ ವಿಶ್ವಾಸದಿಂದ ವೇದಿಕೆ ಏರಿ, ಎದುರಿನ ಜನಸಾಗರ ಕಂಡೊಡನೇ ಥರಗುಟ್ಟುವ ಆರಂಭಶೂರರಿಗೂ ಕೊರತೆ ಏನಿಲ್ಲ!.

ಇಂದು ತನ್ನ ಭಾಷಣವಿದೆಯೆಂದು, ಬೆಳಗ್ಗೆಯಿಂದ ಮೂರು ಸಲ ಶೇವ್ ಮಾಡಿಕೊಂಡು, ಆರು ಸಲ ಸೆಂಟ್ ಹೊಡೆದುಕೊಂಡು, ಗರಿಗರಿಯಾದ  ಪ್ಯಾಂಟ್ – ಶರ್ಟ್‍ನ್ನು ‘ಇನ್’ ಮಾಡಿಕೊಂಡು, ಎರಡೂವರೆ ಸಲ ಪಾಲಿಶ್ ಮಾಡಿ ಶೂ ತೊಟ್ಟು, ನೆನಪಾದಾಗಲೆಲ್ಲ ತಲೆ ಬಾಚಿಕೊಂಡು, ಠೀಕು ಠಾಕಾಗಿ ವೇದಿಕೆ ಏರಿ, ಮಾತಾಡಬೇಕು ಎಂದು ನಿಂತಾಗ ಎದುರಿನ ಜನಕಂಡು ಮಾತೇ ಹೊರಡದಿದ್ದರೆ ಹೇಗಾಗಬೇಡ!? ನೀವೇ ಹೇಳಿ, ಇದನ್ನೇ ಸಭಾ ಕಂಪನ ಎಂದು ಕರೆಯುತ್ತಾರೆ. ಸಭಾ ಕಂಪನ ಎಂದರೆ ಸಭೆ ಕಂಪಿಸುವುದಲ್ಲ; ಸಭೆಯವರನ್ನು ಕಂಡು, ಸಭೆ, ವೇದಿಕೆಯೆಲ್ಲವೂ ಕಂಪಿಸಿದಂತೆ ಭಾಸವಾಗಿ ಭಾಷಣಕಾರ ಕಂಪಿಸುವುದು-ಅದೇ ಸಭಾ ಕಂಪನ!

ಇಂತಹ ಸಂದರ್ಭದಲ್ಲಿ ತುಸು ವಿವೇಚನೆಯಿಂದ ಚುರುಕಾದರೆ ಮಾನ ಉಳಿಸಿಕೊಳ್ಳಬಹುದು. ಮಾನ್ಯರೇ, ಈಗಾಗಲೇ ಬಹಳ ಸಮಯ ಅಗಿದೆ. ಮುಂದಿರುವ ಮುಖ್ಯ ಕಲಾಪಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ತಮಗೆಲ್ಲರಿಗೂ ಕೃತಜ್ಞತೆ ಹೇಳುತ್ತಾ ನನ್ನ ಮಾತು ಮುಗಿಸುತ್ತೇನೆ ಎಂದು ಬೆವರೊರೆಸಿಕೊಂಡರೆ ಮುಗಿಯಿತು. ಒಂದೊಮ್ಮೆ ಮಾತು ಸಭೆಯ ಆರಂಭದ್ದಾಗಿದ್ದರೆ, ಅದಕ್ಕೂ ದಾರಿ ಇದೆ. ಮುಂದೆ ಬಹುಮುಖ್ಯ ವಿಷಯಗಳು ಚರ್ಚಿತವಾಗುವ ಈ ಸಭೆಯಲ್ಲಿ ನಾನು ಮುಂದೆ ಎಂದಾದರೂ ಮಾತಾಡಬಹುದು. ಅತಿಥಿ ಅಭ್ಯಾಗತರಿಗಾಗಿ ನನ್ನ ಸಮಯ ನೀಡುವರೇ ನಾನು ಮಾತು ಮುಗಿಸುತ್ತೇನೆ. ಧನ್ಯವಾದಗಳು! ಹೀಗೆ, ಪ್ರತೀ ಸಮಸ್ಯೆಗೂ ಪರಿಹಾರ ಇದೆ ಎಂಬಂತೆ ಸಭಾ ಕಂಪನದಿಂದ ಮುಖ ಉಳಿಸಿಕೊಳ್ಳಲು ಸಹಾ ಬೇರೆ ಬೇರೆ ಮಾರ್ಗಗಳಿವೆ. ಆದರೂ, ಪ್ರಾಸಂಗಿಕವಾಗಿ ಉಪಯೋಗವಾಗುವ ಆರನೆಯ ಇಂದ್ರಿಯ ಕೈ ಕೊಟ್ಟರೆ ಮಾತ್ರ ಏನೂ ಮಾಡಲಾಗದು. ಅಂತಹ ಸಂದರ್ಭದಲ್ಲಿ ಮಾತ್ರ
ಸಭೆಯಲ್ಲಿ ಆದರೆ ಒಂದೊಮ್ಮೆ ಕಂಪನ
ಉಪಯೋಗಿಸಿ ಬಿಡಿ ಒಂದೇ ಶಬ್ದ
ಧನ್ಯವಾದಗಳು! ಮತ್ತೆ ಸಭೆ ಸ್ತಬ್ಧ!!
****
ಎಲ್ಲೋ ಓದಿದ ಮಾತೊಂದು ಈ ಹಂತದಲ್ಲಿ ನೆನೆಪಾಗುತ್ತದೆ. ಯುದ್ಧ ವಿಜಯೋತ್ಸಾಹದ, ಉತ್ಸವ ಏರ್ಪಟ್ಟಿದ್ದ ಸಭೆಯಲ್ಲಿ ಮಾತಾಡಲು ವಿನ್‍ಸ್ಟಂಟ್ ಚರ್ಚಿಲ್‍ರು ಬರುತ್ತಾರೆ. ಆಗ ಯುದ್ಧದಲ್ಲಿ ಮಕ್ಕಳನ್ನು ಕಳೆದುಕೊಂಡ ಕೆಲ ತಾಯಂದಿರು ಚರ್ಚಿಲ್‍ರನ್ನು ಸುತ್ತುವರಿದು ಗೋಳೆಂದು ಆಳುತ್ತಾರೆ. ಮಾತನ್ನು ಎಂದು ಬೇಕಾದರೂ ಆಡಬಹುದು. ಈ ಮಾತೆಯರನ್ನು ಇಂದು ಸಮಾಧಾನ ಪಡಿಸಬೇಕೆಂದ ಚರ್ಚಿಲ್‍ರು ಭಾಷಣ ಮಾಡದೇ ಆ ಮಾತೆಯಂದಿರ ಜೊತೆ ಸಮಾಧಾನದ ಮಾತು ಹೇಳುತ್ತಾ, ಯುದ್ಧದ ಅನಿವಾರ್ಯತೆ ವಿವರಿಸುತ್ತಾ ತಾವೂ ಅತ್ತರಂತೆ! ಇದೇನಾದರೂ ನಮ್ಮಲ್ಲಿ ಆಗಿದ್ದರೆ, ಇಂತಹ ಸನ್ನಿವೇಶಗಳಲ್ಲಿ ಜಟ್ಟಿಯಂತಹ ಪೋಲಿಸರು, ಆ ಆಳುವ  ಮಾತೆಯಂದಿರನ್ನು, ಮಾತೇ ಆಡಲು ಬಿಡದೇ ಅನಾಮತ್ತಾಗಿ ಹೊರಹಾಕುತ್ತಿದ್ದರು.

ಅಂದರೆ ಭಾಷಣ ಅಥವಾ ಮಾತಾಡಲು ಸಮಯ, ಸಂದರ್ಭ ನೋಡಿಕೊಳ್ಳಬೇಕಾಗುತ್ತದೆ. ವಾಸ್ತವದಲ್ಲಿ ಯಾವುದರ ಅವಶ್ಯಕತೆ ಹೆಚ್ಚಿದೆ ಎಂಬುದನ್ನು ಮನಗಂಡು, ಅದರತ್ತ ಗಮನಹರಿಸಬೇಕು. ಚರ್ಚಿಲ್‍ರೂ, ಚರ್ಚೆ ಇಲ್ಲದೇ ಅದನ್ನೇ ಮಾಡಿ ಮಹಾನ್ ನಾಯಕರೆನ್ನಿಸಿಕಕೊಂಡರು. ಅದನ್ನು ಬಿಟ್ಟ ನಮ್ಮ ನಾಯಕರು, ಭಾಷಣ ಶೂರರಾಗಿಯೇ ಉಳಿದರು – ಎಲ್ಲೂ ದಾಖಲಾಗದೆ!

ಮುಂದೇನಾದರೂ ಮನೋರಂಜನೆಯ ಕಾರ್ಯಕ್ರಮ ಇದೆಯೆಂದಾದರೆ ಭಾಷಣ ಚುಟುಕಾದಷ್ಟೂ ಒಳ್ಳೆಯದು. ಭಾಷಣಕಾರನಿಗೂ ಅವರಿಂದ ಕ್ಷೇಮ. ಮುಂದೆ ಟೀ ಪಾರ್ಟಿ, ಊಟವನ್ನಾದರೂ ಇಟ್ಟರೆ ಭಾಷಣ ಉದ್ದವಾದರೂ, ನೀರಸವಾದರೂ, ಆ ಕೊರತೆಯನ್ನು ಈ ಪಾರ್ಟಿಗಳು ಮರೆಯುವಂತೆ ಮಾಡುತ್ತವೆ. ಇದೆರಡೂ ಇಲ್ಲದೇ, ಯಾವುದೋ ಮಾತಾಡಬೇಕಾದ ಸಮಸ್ಯೆ ಬಿಟ್ಟು ಬೇರೆ ಕಡೆ ನಾಲಿಗೆ ಹೊರಳಿದರೆ, ಕೊಳೆತ ಟೊಮೊಟೋ, ಮೊಟ್ಟೆ, ಚಪ್ಪಲಿಯ ಹಾರಾಟ ಆರಂಭವಾಗುತ್ತದೆ. ಅದಕ್ಕೆ ಸಮಯ, ಸಂದರ್ಭ ಅರಿತು ಮಾತಾಡಿದರೆ, ಮಾತೇ ಮುತ್ತಾಗುತ್ತದೆ.
ಸಮಯಕ್ಕೆ ಸರಿಯಾಗಿ ಆಡಿದರೆ ಮಾತು
ಅದುವೇ ಅದೀತು ಖಂಡಿತಕ್ಕೂ ಮುತ್ತು!
ಅದ ಮರೆತು ನಡೆದೆಯಾದರೆ ಜೀವವೇ
ಅದೇ ನಿನಗೆ ತಂದೀತು, ಮರೆಯಲಾಗದ ಕುತ್ತು!!

ಹಾಗಾಗಿ ಭಾಷಣದ ಕ(ಕೊ)ಲೆಯ ಸಾಧ್ಯತೆಗೆ ಸಂದರ್ಭವೂ ಒಂದು ಕಾರಣವಾದೀತು ಎನ್ನಬಹುದು.

ಎಲ್ಲಾ ಅಂತ್ಯಕ್ಕೂ ಮುನ್ನು ಆರಂಭಬೇಕಲ್ಲ? ನಾವು ಇಷ್ಟು ಹರಟೆ ಹೊಡೆದರೂ ಭಾಷಣದ ಬಹುಮುಖ್ಯ ಅಂಗವಾದ ಪೀಠಿಕೆಯ ಬಗ್ಗೆ ಮಾತಾಡಿಲ್ಲ ಎಂದು ನಿಮಗೂ ಅನಿಸಿರಬಹುದು. ಸಾಮಾನ್ಯವಾಗಿ ಪೀಠಿಕೆಯಿಂದಲೇ ವ್ಯಕ್ತಿಯ ಭಾಷಣ ಹೇಗೆ ಮತ್ತು ಎತ್ತ ಹರಿದೀತು ಎಂಬುದನ್ನು ಊಹಿಸಬಹುದು. ಮುಖ್ಯವಾಗಿ ಒಮ್ಮೊಮ್ಮೆ ಪೀಠಿಕೆಯೇ ಭಾಷಣಕಾರನ ವೃತ್ತಿಯನ್ನೂ ಸೂಚಿಸುತ್ತದೆ.

ಮುಖ್ಯವಾಗಿ ಪೀಠಿಕೆಯಲ್ಲಿ ಪ್ರತಿಯೊಬ್ಬರನ್ನೂ ಮಾನ್ಯ ಅವರೇ, ಇವರೇ ಎಂದು ಸಂಭೋಧಿಸಿ ಮುಖ್ಯ ವಿಷಯಕ್ಕೆ ಬರುವುದರಿಂದ ಭಾಷಣದ ಅವಧಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ಇದರಿಂದ ಮತ್ತು ಒಂದು ಲಾಭವೆಂದರೆ ವೇದಿಕೆಯಲ್ಲಿ ಕುಳಿತಿರುವವರನ್ನು ಗಣ್ಯರೆಂದು ಸಂಭೋದಿಸಿ, ಭಾಷಣಕಾರ ತಾನು ಗಣ್ಯ, ತನ್ನಂತೆ ಇಲ್ಲಿರುವ ಇತರರೂ ಗಣ್ಯರೆಂಬಂತೆ ಬಿಂಬಿಸಿದಂತಾಗುತ್ತದೆ. ಹಾಗಾಗಿ ವೇದಿಕೆ ಏರಿದ ಎಲ್ಲರೂ ಗಣ್ಯರೇ ಆಗಿ ಹೋಗುತ್ತಾರೆ.

ಇದನ್ನು ತಿಳಿದ ಕೆಲ ಭಾಷಣಕಾರರು ವೇದಿಕೆ ಎದುರು ಅಸೀನರಾಗಿರುವ ಸಭಿಕ ಗಣ್ಯರೇ ಎಂದು ಸಂಭೋದಿಸಿ, ಒಂದು ರೀತಿಯ ಸಮಾನತೆಯನ್ನು ಸೂಚಿಸುತ್ತಾರಲ್ಲದೇ, ತನ್ನ ಭಾಷಣವನ್ನು ಶಾಂತಿಯಿಂದ ಕೇಳುವ ಸ್ವಯಂ ಏರ್ಪಾಟು ಮಾಡಿಕೊಳ್ಳುತ್ತಾರೆ.

ಹೀಗೆ ಭಾಷಣಕ್ಕಿರುವ ನೂರಾರು ಮುಖಗಳನ್ನು ವಿಶ್ಲೇಷಿಸುತ್ತಾ ಹೋದರೆ, ನಮ್ಮ ಕನ್ನಡದ ಕಿರುತೆರೆಯ  ಧಾರವಾಹಿಗಳಂತೆ ವಿಷಯ ಮುಗಿಯುವುದೇ ಇಲ್ಲ. ಭಾಷಣಕ್ಕೆ ಉಪನ್ಯಾಸ, ಮಾತು, ಕೊರೆಯುವುದು, ಕೆರೆಯುವುದು, ಕುಯ್ಯುವುದು.. ಹೀಗೆ ಅನೇಕ ರೀತಿಯ ವಿಶೇಷಣಗಳಿಂದ ಅವುಗಳ ಗುಣ ಮಟ್ಟವನ್ನು ಅಳೆಯಲಾಗುತ್ತದೆ.

ಒಂದಂತೂ ಸತ್ಯ ಎಂದು ಒಪ್ಪಿಕೊಂಡು ಲೇಖನವನ್ನು ಮುಗಿಸುತ್ತೇನೆ. ಅದೆಂದರೆ
ಭಾಷಣ ಮಾಡುವ ಕಲೆ
ತಿಳಿದರೆ ಉಳಿದೀತು ತಲೆ
ಇಲ್ಲವಾದರೆ ಎಚ್ಚರ, ಅದೀತು
ಒಂದಲ್ಲ ಅನೇಕ ಕೊಲೆ!

Read more from ಲೇಖನಗಳು
2 ಟಿಪ್ಪಣಿಗಳು Post a comment
 1. Anitha Naresh Manchi
  ನವೆಂ 28 2012

  idaralli naanu maadida bhaashanada suddhiye illa che 🙂

  ಉತ್ತರ
 2. Prasanna Rameshwara T S
  ಡಿಸೆ 1 2012

  ಅರೆಹೊಳೆ ಸದಾಶಿವರಾವ್ ಅವರ ಭಾಷಣ ಮಾಡುವ ಕ(ಕೊ)ಲೆ ಶೀರ್ಶಿಕೆಯ ಅವರ ‘ನಿಲುಮೆ’ ಓದಿಸಿಕೊಂಡು ಹೋಗುತ್ತದೆ. ಸತ್ಯಾಂಶಗಳಿಂದಲೂ ಕೂಡಿದೆ. ಇಂತಹ ನಗೆಸಂಜೆ, ರಾಜಕಾರಣಿಗಳ ಸಮಾರಂಭಗಳಲ್ಲಿ ಭಾಗವಹಿಸುವ ಪ್ರೇಕ್ಷಕ ಒಂದು ರೀತಿಯ ಸಮೂಹ ಸನ್ನಿಗೆ ಒಳಗಾಗಿರುತ್ತಾನೆ. ತನ್ನ ಸಹಭಾಗೀ ಪ್ರೇಕ್ಷಕರ ಸ್ಪಂದನದ ಪ್ರಭಾವಕ್ಕೆ ತಾನೂ ಒಳಗಾಗಿರುತ್ತಾನೆ. ಹಾಗಾಗಿ ಅವನ ತಕ್ಷಣದ ಪ್ರತಿಕ್ರಿಯೆ ಈ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅದೇ ತಾನು ಇಂಥ ವಾತಾವರಣದಿಂದ ಹೊರಬಂದು [ಟಿವಿ ಯಲ್ಲೋ, ಆಡಿಯೋದಲ್ಲೋ] ಅಂಥ ಭಾಷಣಗಳನ್ನು ಆಲಿಸಿದಾಗ ಆಗ ತನ್ನ ಬಾಲಿಶತನದ ಅರಿವು ಅವನಿಗಾಗುತ್ತದೆ. ಅಂಥ ಭಾಷಣಕಾರನ ಮೋಡಿಯಲ್ಲಿ ತಾನೇಕೆ ಸಿಲುಕಿಕೊಂಡೆ ಅನಿಸುತ್ತದೆ! ಎಷ್ಟೋ ವೇಳೆ ಅಂತಹ ಭಾಷಣಕಾರ ಮಾಡುವ ಅಪಭ್ರಂಶಗಳನ್ನೂ ಕೇಳಿಕೊಂಡು ಸುಮ್ಮನಿರಬೇಕಾದ ಸಂದರ್ಭಗಳನ್ನೂ ಈ ಸಮೂಹ ಸನ್ನಿ ಸೃಷ್ಟಿಸುತ್ತದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments