Skip to content

ನವೆಂಬರ್ 30, 2012

5

ಸ್ವದೇಶಿ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

by ನಿಲುಮೆ

– ಶ್ರೀವಿದ್ಯಾ,ಮೈಸೂರು

rajiv-dixitಭಾರತದಲ್ಲಿ ಸ್ವಾತಂತ್ರ್ಯ ನಂತರ ಗುಲಾಮಿ ಮಾನಸಿಕತೆ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವದೇಶಿ ಚಿಂತನೆಯ ಮೂಲಕ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಧೀರ ನಾಯಕ ರಾಜೀವ್ ದೀಕ್ಷಿತ್

“ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳವನ್ನು ತರುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ.­ ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ.ನಮ್ಮ ದೇಶದ ಸಂಪತ್ತೇ ಕೊಳ್ಳೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ತಂತ್ರಜ್ಞಾನವನ್ನು ತರುತ್ತವೆ ಎಂಬವಾದವೂ ಒಂದು ದೊಡ್ಡ ಸುಳ್ಳು. ಸಮೀಕ್ಷೆಗಳು ಹೇಳುವಂತೆ ವಿದೇಶಿ ಕಂಪನಿಗಳು ಯಾವುದೇ ಉತ್ಪಾದನಾ ತಂತ್ರಜ್ಞಾನವನ್ನು ನಮ್ಮ ದೇಶಕ್ಕೆ ತರುತ್ತಿಲ್ಲ, ಜತೆಗೆ ಯಾವುದೇ ಸಂಶೋಧನಾ ಕೇಂದ್ರಗಳನ್ನೂ ನಮ್ಮಲ್ಲಿ ಸ್ಥಾಪಿಸುತ್ತಿಲ್ಲ. ತಮ್ಮ ತಮ್ಮ ದೇಶಗಳಿಂದ ಬಿಡಿ ಭಾಗಗಳನ್ನು ತರಿಸಿ, ಇಲ್ಲಿ ಜೋಡಿಸಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿವೆ. ಈ ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಂಪನಿಗಳೆಂದರೆ ISRO ಮತ್ತು DRDO ಮಾತ್ರ. ಅವು ದೇಶೀಯವಾಗಿ ಸುಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಹೀಗೆ ನಾವು ನಮ್ಮ ದೇಶದಲ್ಲೇ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಶಕ್ತವಿರುವಾಗ ವಿದೇಶಿ ಕಂಪನಿಗಳನ್ನೇಕೆ ಕೆಂಪು ಕಂಬಳಿಹಾಕಿ ಆಹ್ವಾನಿಸಬೇಕು? ಈ ದೇಶದ ಸಂಪತ್ತನ್ನೇಕೆ ಲೂಟಿ ಮಾಡಿಕೊಂಡು ಹೋಗಲು ಬಿಡಬೇಕು?

ಈಸ್ಟ್ ಇಂಡಿಯಾ ಕಂಪನಿ!

ಆ ಹೆಸರಿನ ಒಂದೇ ಕಂಪನಿ ನಮ್ಮ ದೇಶವನ್ನು ಎಷ್ಟು ಲೂಟಿ ಮಾಡಿತು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆ ಒಂದು ಕಂಪನಿಯನ್ನು ಓಡಿಸಲು ನಮಗೆ ೨೦೦ ವರ್ಷಗಳು ಬೇಕಾದವು! ಈಗ ಭಾರತದಲ್ಲಿ ಸುಮಾರು ೮,೦೦೦ ವಿದೇಶಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ!! ಹಾಳೂ-ಮೂಳೂ ಸರಕುಗಳನ್ನು ಮಾರಿ, ದೇಶದ ಸಂಪತ್ತನ್ನು ದೋಚುತ್ತಿವೆ. ಒಂದು ವೇಳೆ ನಮ್ಮದೇಶ ಒಂದು ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರವಾಗಬೇಕಾದರೆ ಈ ಕಂಪನಿಗಳನ್ನು ಆದಷ್ಟು ಬೇಗ ದೇಶದಿಂದ ಹೊರಹಾಕಿ ಸ್ವದೇಶಿ ತಂತ್ರಜ್ಞಾನದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು……”

ರಾಜೀವ್ ದೀಕ್ಷಿತ್ ಅವರ ಭಾಷಣವನ್ನು ಕೇಳುವುದೆಂದರೆ ಪ್ರವಾಹಕ್ಕೆ ಬೆನ್ನುಕೊಟ್ಟು ಕುಳಿತುಕೊಂಡಂತೆ, ಅವರ ವಾಗ್ಝರಿ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಿತ್ತು. ಜಾಗತೀಕರಣವೆಂಬ ಮಾಯಾಜಾಲದಲ್ಲಿ ಇಡೀ ದೇಶ ಸಮಸ್ಯೆಗಳಿಗೆ ಸಿಲುಕಿ ಅದರ ಮೂಲ ತಿಳಿಯದೆ ಪರಿಹಾರ ಕಾಣದೆ ನಿಷ್ಠಿಯರಾಗಿದ್ದ ಭಾರತೀಯರನ್ನು ತಮ್ಮ ಪ್ರಖರ ಉಪನ್ಯಾಸಗಳಿಂದ ಸೂಕ್ತಿ-ಅಂಶಗಳಿಂದ ಬಡಿದೆಬ್ಬಿಸಿದ ಧೀರ ಯುವಕ ಶ್ರೀ ರಾಜೀವ್ ದೀಕ್ಷಿತ್. ಒಬ್ಬ ವಿಜ್ಞಾನಿ,ಸ್ವದೇಶಿ ಚಿ೦ತಕ,ದೇಶಭಕ್ತ,ಲೇಖಕ,ಅತ್ಯುತ್ತಮ ಭಾಷಣಕಾರ,ಅಬ್ದುಲ್ ಕಲಾ೦ ಜೊತೆ ಕೆಲಸ ಮಾಡಿದ್ದ ಧೀಮ೦ತ ವ್ಯಕ್ತಿ, ಇಡೀ ದೇಶಕ್ಕೆ ಸ್ವದೇಶಿ ವಸ್ತುಗಳ ಹುಚ್ಚು ಹಿಡಿಸಿ, ಭಾಷಣ ಮಾಡುವಾಗಲೇ ಭಗವ೦ತನ ಪಾದ ಸೇರಿ… ತನ್ನ ಜೀವನವನ್ನೆ ಭಾರತ ಮಾತೆಯ ಸೇವೆಗೆ ಅರ್ಪಿಸಿದ ರಾಜೀವ್ ದೀಕ್ಷಿತರ ಜೀವನ ನಮಗೆ ಸ್ಪೂರ್ತಿಯಾಗಲಿ.!

ರಾಜೀವ್ ದೀಕ್ಷಿತ್ ೧೯೬೬ ನವೆಂಬರ್ ೩೦ ರಂದು ಉತ್ತರಪ್ರದೇಶದ ಅಲಿಗಡ್ ಜಿಲ್ಲೆಯ ನಹಗ್ರಾಮದಲ್ಲಿ ಜನಿಸಿದರು. ತಂದೆ ಶ್ರೀ ರಾಧೇಶ್ಯಾಮ್ ದೀಕ್ಷಿತ್, ತಾಯಿ ಶ್ರೀಮತಿ ಮಿಥಿಲೇಶ್‍ದೇವಿ. ರಾಜೀವ್ ಬಾಲ್ಯದಿಂದಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡವರು. ಅಲಹಾಬಾದ್‍ನಲ್ಲಿ ಶಿಕ್ಷಣ. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಎಸ್.ಸಿ ಪದವೀಧರ. ಪ್ರತಿಷ್ಠರ ಸಿಎಸ್‍ಆರ್‍ಐ ಸಂಸ್ಥೆಯಲ್ಲಿ ಎರಡು ವರ್ಷ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೂ ಕೆಲಕಾಲ ಕೆಲಸ ಮಾಡಿದ್ದರು. ಫ್ರಾನ್ಸ್ ನಲ್ಲಿ ಟೆಲಿಕಮ್ಯುನಿಕೇಶನ್ ಎಂಜಿನಿಯರ್ ಆಗಿ ಉತ್ತಮ ಹುದ್ದೆಯಲ್ಲಿದ್ದ ಅವರಿಗೆ ಅಲ್ಲಿನ ಜನರ ಸ್ವಾಭಿಮಾನವೇ ಭಾರತೀಯತ್ವದ ಪುನರುತ್ಥಾನದ ಅಗತ್ಯೆಯ ಪಾಠ ಕಲಿಸಿತ್ತು. ಭೋಪಾಲ್ ಅನಿಲ ದುರಂತ ಇವರ ಚಿಂತನೆಯನ್ನೇ ಬದಲಿಸಿ ದೇಶದ ಸಮಸ್ಯೆಗಳ ಬಗೆಗೆ ಚಿಂತಿಸಲು ಕಾರಣವಾಯಿತು. ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟ ದೀಕ್ಷಿತ್ ಪ್ರೊ|| ಧರ್ಮಪಾಲ್ ಅವರ ಮಾರ್ಗದರ್ಶನದಲ್ಲಿ ೧೯೯೧ ರಲ್ಲಿ ‘ಆಜಾದಿ ಬಚಾವೋ ಆಂದೋಲನ’ ದ ಸದಸ್ಯರಾದರು.ಪ್ರೊ|| ಧರ್ಮಪಾಲ್‍ರವರು ಲಂಡನ್ನಿನ ಹೌಸ್ ಆಫ್ ಕಾಮನ್ಸ್ ಇಂಡಿಯಾ ಹೌಸ್ ಲೈಬ್ರರಿಗಳಿಂದ ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಸುಮಾರು ೫೦,೦೦೦ ಕ್ಕೂ ಹೆಚ್ಚು ದಾಖಲೆಗಳ ಅಧ್ಯಯನ ಮಾಡಿದ ರಾಜೀವ್ ಭಯ್ಯ ಭಾರತದ ಸಮಸ್ಯೆಗಳ ಮೂಲ ಕಾರಣಗಳನ್ನು ಅರಿತುಕೊಳ್ಳುವಲ್ಲಿ ಯಶಸ್ವಿಯಾದರು. ಈಸ್ಟ್ ಇಂಡಿಯಾ ಕಂಪೆನಿಯಿಂದ ಹಿಡಿದು ಇತ್ತೀಚಿನ ವಿದೇಶಿ ಕಂಪೆನಿಗಳ ಒಳಮರ್ಮವನ್ನು ದೇಶವಾಸಿಗಳ ಗಮನಕ್ಕೆ ತರಲು ಪ್ರಾರಂಭಿಸಿದರು. ಹೊಸ ಮುಕ್ತ ಆರ್ಥಿಕ ನೀತಿಯ ದುಷ್ಟರಿಣಾಮಗಳಾದ ನಿರುದ್ಯೋಗ, ಬಡತನ, ರೈತರ ಆತ್ಮಹತ್ಯೆ, ನಗರಗಳ ಕೈಗಾರಿಕೀಕರಣ, ವಿದೇಶಿ ಉತ್ಪನ್ನದ ಹೆಸರಿನಲ್ಲಿ ಜನರ ಆರೋಗ್ಯ, ಆರ್ಥಿಕ ಲೂಟಿಗಳ ಬಗ್ಗೆ ಸದಾ ಚಿಂತಿಸುತ್ತ ಜನರನ್ನು ಸ್ವದೇಶಿ, ಸ್ವಾವಲಂಬನೆ, ಸ್ವತಂತ್ರ ಆರ್ಥಿಕತೆಯ ಬಗ್ಗೆ ಹೊಸ ಹೊಸ ವಿಚಾರಧಾರೆಗಳ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಮಯದಲ್ಲಿ ದೇಶದಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿದ ದೀಕ್ಷಿತರು ಭಾರತದ ೧೭ ಕ್ಕೂ ಹೆಚ್ಚು ರಾಜ್ಯಗಳಲ್ಲಿ ಯುವಶಕ್ತಿ ತುಂಬಿದ ಆಜಾದಿ ಬಚಾವೋ ಆಂದೋಲನವನ್ನು ಹುಟ್ಟುಹಾಕಿದರು.

ದೇಶಕ್ಕೆ ಮಾರಕವಾಗಿದ್ದ ವಿದೇಶಿ ಕಂಪೆನಿಗಳನ್ನು ದೇಶದಿಂದ ಹೊರಗಟ್ಟುವಲ್ಲಿ ಸಫಲರಾದರು. ಭ್ರಷ್ಟಾಚಾರ, ಇನ್ನಿತರ ಕುತಂತ್ರ ಯೋಜನಗಳಿಂದ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದ ವಿದೇಶಿ ಕಂಪೆನಿಗಳ ಪಾಲಿಗೆ ಸಿಂಹಸ್ವಪ್ನರಾದರು. ವಿದೇಶಿ ಕಂಪೆನಿಗಳ ಢೊಂಗಿತನ, ರಾಜಕಾರಣಿಗಳ ಜೊತೆಗಿನ ಸಂಬಂಧ, ಪರಿಸರ ನಾಶ, ಮಾನವ ಹಕ್ಕುಗಳ ಉಲ್ಲಂಘನೆ, ಮೋಸ ಮಾಡುವ ಜಾಹಿರಾತು, ಹಣಕ್ಕಾಗಿ ತಮ್ಮನ್ನು ಮಾರಿಕೊಂಡ ಕ್ರಿಕೆಟ್ ಆಟಗಾರರು, ಸಿನೆಮಾ ತಾರೆಯರನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದರು. ಭ್ರಷ್ಟಾಚಾರದ ಮುಖಾಂತರ ವಿದೇಶಿ ಬ್ಯಾಂಕುಗಳಲ್ಲಿ ಭಾರತದ ಜನಸಾಮಾನ್ಯರ ಕೋಟ್ಯಾಂತರ ರುಪಾಯಿ ಹಣವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದನ್ನು ದೇಶದ ಜನತೆಗೆ ಮೊಟ್ಟಮೊದಲಿಗೆ ತಿಳಿಸಿದ್ದ ರಾಜೀವ್ ತಮ್ಮ ಪ್ರತಿಯೊಂದು ಭಾಷಣದಲ್ಲಿ ಈ ಹಣವನ್ನು ಭಾರತಕ್ಕೆ ಹಿಂತರಲು ಒತ್ತಾಯಿಸುತ್ತಿದ್ದರು. ಇದರ ಜೊತೆಗೆ ಲಕ್ಷಾಂತರ ಭಾರತೀಯರ ಸಹಿ ಸಂಗ್ರಹಣೆಯ ಮೂಲಕ ಸವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದರು. ಭಾರತೀಯ ಸರ್ವೋಚ್ಚ ನ್ಯಾಯಾಲಯವು ಸ್ವಿಸ್ ಬ್ಯಾಂಕ್‍ಗಳಲ್ಲಿ ಭಾರತೀಯರು ಹೊಂದಿರುವ ಹಣವನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಬೇಕು, ಇದರಿಂದ ವಿದೇಶಿ ಬ್ಯಾಂಕ್‍ಗಳು ಭಾರತದ ಹಣವನ್ನು ಕಾನೂನುಬದ್ಧವಾಗಿ ಹಿಂದಿರುಗಿಸಬಹುದೆಂದು ರಾಜೀವ್‍ರವರ ಅಭಿಪ್ರಾಯವಾಗಿತ್ತು. ಇಡೀ ದೇಶದ ಉದ್ದಗಲಕ್ಕೂ ಊರೂರು ಸುತ್ತಿ ಭಾಷಣ ಮಾಡಿದ್ದರು. ಅವರು ಚಂದ್ರಶೇಕರ್ ಅಜಾದ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಹಾಗೂ ಮುಂತಾದ ಕ್ರಾಂತಿಕಾರಿಗಳನ್ನು ಆರಾಧಿಸುತ್ತಿದ್ದರು. ಅವರ ಬಗ್ಗೆ ಭಾಷಣ ಮಾಡುತ್ತಿದ್ದರು. ಹಲವಾರು ಎಂ ಎನ್ ಸಿ ಕಂಪೆನಿಗಳಾದ ಮನ್‍ಫೋರ್ಸ್, ಕೋಕಾ-ಕೋಲಾ, ಯುನಿಲಿವರಿ ಮತ್ತು ಕೊಲ್ಗೆಟ್ ನಂತಹ ವಿದೇಶಿ ಕಂಪೆನಿಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದನ್ನು ರಾಜೀವ್‍ರವರು ವಿರೋಧಿಸಿ ಹೋರಾಡಿದರು. ಅವರು ಸ್ವದೇಶಿಯನ್ನು ಬೆಂಬಲಿಸುತ್ತಿದ್ದರು. ಅವರು ಸ್ವದೇಶಿ ಚಳುವಳಿ ಮತ್ತು ಆಜಾದಿ ಬಚಾವೋ ಆಂದೋಲನ್ ಎಂಬ ಚಳುವಳಿಗಳನ್ನು ಆರಂಭಿಸಿ ಅದರ ಪ್ರಚಾರಕರಾದರು.

ರಾಜೀವ್ ಅವರು ಸ್ವದೇಶಿ ಜಾಗರಣ ವೇದಿಕೆಯ ನಾಯಕತ್ವವನ್ನು ವಹಿಸಿ ನವದೆಹಲಿಯಲ್ಲಿ ನಡೆದಿದ್ದ ಬೃಹತ್ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು. ೧೮೫೭ ನೇ ವರ್ಷದ ಸ್ವಾತಂತ್ರ್ಯ ಚಳುವಳಿಯ ೧೫೦ ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಕಲ್ಕತ್ತೆಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ನಾಯಕತ್ವವನ್ನು ಶ್ರೀ ರಾಜೀವ್ ದೀಕ್ಷಿತರು ವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳು ಮತ್ತು ಪ್ರಮುಖ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ಬೆಂಬಲಿಸಿದರು. ಆಜಾದಿ ಬಚಾವೋ ಆಂದೋಲನವನ್ನು ಒಂದು ದೊಡ್ಡ ಸಂಘಟನೆಯಾಗಿ ಬೆಳೆಸಿದರು. ಅವರು ದೇಶದ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿ, ಪ್ರೀತಿ ಅಪಾರ. ರಾಜೀವ್‍ರವರು ಕೇವಲ ೩ ರಿಂದ ೪ ಗಂಟೆಗಳ ಮಾತ್ರ ವಿರಮಿಸುತ್ತಿದ್ದರು.ತಾಯಿನಾಡು ಭಾರತದ ಸೇವೆಗಾಗಿ ತಮ್ಮ ದಿನ ರಾತ್ರಿಗಳನ್ನು ಮೀಸಲಿರಿಸಿದರು.ಅವರು ಹಿಂದಿಯಲ್ಲಿ ಒಬ್ಬ ಪ್ರತಿಭಾಶಾಲಿ ವಾಗ್ಮಿ ಆಗಿದ್ದರು. ಆಜಾದಿ ಬಚಾವೋದ ಆಡಿಯೋ/ವಿಡಿಯೋ ಕ್ಯಾಸೆಟ್‍ಗಳು ಅಧಿಕ ಸಂಖ್ಯೆಯಲ್ಲಿ ದೇಶದ ಎಲ್ಲಾ ಕಡೆಗಳಲ್ಲೂ ಮಾರಾಟವಾಯಿತು ಮತ್ತು ಹೆಚ್ಚು ಪ್ರಚಾರ ಪಡೆಯಿತು. ಅವರ ಕ್ಯಾಸೆಟ್‍ಗಳಲ್ಲಿ ದೇಶದ ಜ್ವಲಂತ ಸಮಸ್ಯೆಗಳನ್ನು ಆಧರಿಸಿದ ಉಪನ್ಯಾಸಗಳಿವೆ.

ರಾಜೀವ್ ದೀಕ್ಷಿತ್  ಬಾಬಾ ರಾಮ್‌ದೇವ್ ಜತೆ ಸೇರಿ ‘ಭಾರತ್ ಸ್ವಾಭಿಮಾನ್’ ಎಂಬ ವೇದಿಕೆ ಪ್ರಾರಂಭಿಸಿದ್ದರು. ಅದರ ಮೂಲಕ ದೇಶಭಕ್ತಿಯನ್ನು ಜಾಗೃತಗೊಳಿಸುವ ಉಪನ್ಯಾಸಗಳನ್ನು ನೀಡುತ್ತಿದ್ದರು. ಅವರು ಭಾರತ ಸ್ವಾಭಿಮಾನೆ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದರು. ಪತ್ರಿಕೆಗಳು  ಹಾಗೂ ದೂರದರ್ಶನ ವಾಹಿನಿಯಲ್ಲೂ ಅವರ  ವಿಚಾರಗಳು  ಪ್ರಸಾರವಾಗುತ್ತಿತ್ತು. ಆಸ್ಥಾ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜೀವ್ ಭಯ್ಯ ಅವರ “ರಾಷ್ಟ್ರ ಚೇತನ” ಉಪನ್ಯಾಸ ಮಾಲಿಕೆ ಅತ್ಯಂತ ಪ್ರಸಿದ್ಧವಾಗಿತ್ತು. ಕರ್ನಾಟಕದಲ್ಲಿ “ಹೊಸ ಸ್ವಾತಂತ್ರ್ಯದ ಬೆಳಕು” ಎಂಬ ಪತ್ರಿಕೆ ರಾಜೀವ್ ಭಯ್ಯ ಅವರ ವಿಚಾರಗಳನ್ನು ಪ್ರಸಾರ ಮಾಡುತ್ತಿತ್ತು. ರಾಜೀವ್ ಅವರ ಉಪನ್ಯಾಸಗಳನ್ನು ಸಂಪೂರ್ಣವಾಗಿ ಸತ್ಯ, ತಾರ್ಕಿಕ ಅಂಶಗಳು ಮತ್ತು ವಾಸ್ತವಾಂಶಗಳೊಂದಿಗೆ ಸಾಬೀತು ಪಡಿಸಲಾಗಿದೆ. ಗರ್ವ, ವಿಜಯ ಕರ್ನಾಟಕ ಪತ್ರಿಕೆಗಳಿಗೂ ಅವರ ವಿಚಾರಗಳು ಬರುತ್ತಿದ್ದವು. ಕರ್ನಾಟಕದಲ್ಲೂ ಕೆಲವು ಕಡೆಗಳಲ್ಲಿ ಜನಜಾಗೃತಿ ಮೂಡಿಸಿದ್ದರು. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಸ್ವದೇಶಿ ಜಾಗೃತಿಯ ಬಗ್ಗೆ ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ ರಾಜೀವ್ ಕೊಂಚವೂ ಬೇಸರಿಸದೆ ಉತ್ತರಿಸುತ್ತಿದ್ದರು.

ಬಲಿಷ್ಟ ಗ್ರಾಮದಿಂದ ಸದೃಢ ಭಾರತದ ನಿರ್ಮಾಣ ಮಾತ್ರ ಸಾಧ್ಯವೆಂದು ನಂಬಿದ್ದ ರಾಜೀವ್ ಭಾರತದ ಪುನರ್ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿ ಸುಮಾರು ೧೫,೦೦೦ ಕ್ಕೂ ಹೆಚ್ಚು ರಾಷ್ಟ್ರೀಯ ಚಿಂತನೆಯ ಉಪನ್ಯಾಸಗಳನ್ನು ನೀಡಿದರು. ಬಹಳ ಅಧ್ಯಯನ ಚಿಂತನ ವಿಶ್ಲೇಷಕರೂ ಆಗಿದ್ದ ರಾಜೀವ್ ಭಯ್ಯ ಆರ್ಥಿಕ, ಸಾಮಾಜಿಕ, ಆರೋಗ್ಯದ ಕುರಿತಾದ ವಿಷಯಗಳನ್ನು ಕುರಿತಂತೆ ಹಲವಾರು ಪುಸ್ತಕಗಳನ್ನು, ಪತ್ರಿಕೆಗಳಲ್ಲಿ ಬರೆದಿದ್ದಾರೆ. ಎಂ.ಎಸ್ಸಿ, ಬಿ.ಟೆಕ್ ಪದವೀಧರರಾಗಿದ್ದ ರಾಜೀವ್ ಭಯ್ಯ ಮನಸ್ಸು ಮಾಡಿದ್ದರೆ ಕೈತುಂಬ ಹಣಗಳಿಸುವ ವೃತ್ತಿಯನ್ನು ಮಾಡಬಹುದಿತ್ತು. ಆದರೆ, ದೇಶದ ಬಗೆಗೆ ಅಪಾರ ಕಾಳಜಿ ಅವರನ್ನು ಒಬ್ಬ ದೇಶಭಕ್ತರನ್ನಾಗಿ ಪರಿವರ್ತಿಸಿತ್ತು. ರಾಜೀವ್ ದೀಕ್ಷಿತ್ ಭಾರತದ ಮಹಾನ್ ವ್ಯಕ್ತಿ ಮತ್ತು ಭಾರತದ ನಿಜವಾದ ಕ್ರಾಂತಿಕಾರ ಮತ್ತು ದೇಶಭಕ್ತ. ರಾಷ್ಟ್ರಬಂಧು, ರಾಷ್ಟ್ರೀಯ ಯುವ ಸಂತರೆಂದೇ ಗುರುತಿಸಿಕೊಳ್ಳುತ್ತಿದ್ದ ರಾಜೀವ್ ಭಯ್ಯ ತಮ್ಮ ಜೀವನದಲ್ಲಿ ಸರಳ ಹಾಗೂ ಮಾದರಿ ಜೀವನವನ್ನು ನಡೆಸಿದರು.

೨೦೦೯ ರಲ್ಲಿ ಸ್ವಾಮಿ ರಾಮ್‍ದೇವ್‍ರ ಜೊತೆಗೂಡಿ ಭಾರತ್ ಸ್ವಾಭಿಮಾನ್ ಎಂಬ ಸಂಘಟನೆಯ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸುವ ಯತ್ನದಲ್ಲಿದ್ದ ರಾಜೀವ್ ಭಯ್ಯ ೩೦ ನವೆಂಬರ್ ೨೦೧೦ ರಂದು ಛತ್ತೀಸಗಡದ ಭಿಲಾಯ್‍ನ ಕಾರ್ಯಕ್ರಮಕ್ಕೆ ಹೋಗುವ ಮುನ್ನ ತೀರ್ವ ಹೃದಯಾಘಾತಕ್ಕೀಡಾಗಿ ತಮ್ಮ ೪೨ ನೇ ವಯಸ್ಸಿನಲ್ಲಿ ಭಾರತದ ಪುನರ್ನಿರ್ಮಾಣದ ಯಜ್ಞಕ್ಕೆ ಆಹುತಿಯಾದರು. ಸದಾ ದೇಶದ ಸಮಸ್ಯೆಗಳ ಬಗ್ಗೆ ಚಿಂತಿಸುತ್ತ ದೇಹ ಬಿಟ್ಟರೂ, ದೀಕ್ಷೆ ಬಿಡದ ರಾಜೀವ್ ಭಯ್ಯ ತಮ್ಮ ವಿಚಾರಧಾರೆ, ಪ್ರಖರ ಚಿಂತನೆಗಳ ಮೂಲಕ ಭಾರತೀಯರಿಗೆ ಸದಾ ಪ್ರೇರಕಶಕ್ತಿಯಾಗಿರುತ್ತಾರೆ.

ಶೌರ್ಯ, ಬುದ್ಧಿಮತ್ತೆ, ಸಮರ್ಪಣೆ ಮತ್ತು ತಾಯಿನಾಡಿನ ಬಗೆಗಿನ ನಿಷ್ಠೆ, ಸವಾಲಾಗಿ ಸ್ವೀಕರಿಸುವ ಮನೋಭಾವ, ತಂಡ ಮನೋಭಾವ, ಬಡ ಮತ್ತು ನಿರ್ಗತಿಕರ ಬೆಂಬಲಿಗ, ಆಧ್ಯಾತ್ಮಿಕತೆ, ದೇಶಭಕ್ತಿ, ಸಹಕಾರ ಮತ್ತು ಹೊಂದಾಣಿಕೆ, ಉತ್ತಮ ಆರೋಗ್ಯದ ಬಗ್ಗೆ ಜಾಗೃತಿ, ಸ್ವಾವಲಂಬನೆ, ಸಹನಾಶಕ್ತಿ, ಮಾತೃಭಾಷಾ ಪ್ರೇಮ, ದಯೆ, ಔದಾರ್ಯ ಇವು ರಾಜೀವ್ ಭಯ್ಯ ಅವರ ಸತ್ವ ಗುಣಗಳಾಗಿದ್ದವು.ಇಂದು ದೇಶವು ಕವಲುದಾರಿಯಲ್ಲಿದೆ. ಹೊಸ ಸಹಸ್ರಮಾನದತ್ತ ದೃಷ್ಟಿ ನೆಟ್ಟಿದೆ. ಇತರ ಅಭಿವೃದ್ಧಿಪರ ದೇಶಗಳೊಡನೆ ಸಮಗತಿಯಲ್ಲಿ ಹೆಜ್ಜೆ ಹಾಕುತ್ತಿದೆ. ಆದರೂ ಸಂಸೃತಿ ಮತ್ತು ಪರಂಪರೆಗಳ ದೃಷ್ಟಿಯಿಂದ ಭಾರತವು ತನ್ನ ಪ್ರತ್ಯೇಕವನ್ನು ಕಾಯ್ದುಕೊಳ್ಳಬೇಕಾಗಿದೆ. ಈ ದೃಷ್ಟಿಯಿಂದ ಜನರಲ್ಲಿ ಜಾಗೃತಿ ಮೂಡಿಸಲು ಶ್ರೀ ರಾಜೀವ್ ಭಯ್ಯಾರಂತಹ ಉನ್ನತ ಮೌಲ್ಯಗಳ ವ್ಯಕ್ತಿಯ ಅಗತ್ಯವಿದೆ.

ಇಂದು ರಾಜೀವ್‍ರವರ ಹುಟ್ಟುಹಬ್ಬ ಮತ್ತು ಪುಣ್ಯತಿಥಿ ಎರಡೂ ನಮಗೆ ಸಂತೋಷ, ದುಃಖವನ್ನು ನೀಡುತ್ತಿದೆ. ಮುಖ್ಯವಾಗಿ ಅವರು ಇನ್ನೂ ಇರಬೇಕಿತ್ತು ಎಂದು ನಮಗೆ ಅಪಾರ ನೋವು ನೀಡಿದೆ. ಅವರ ಕನಸುಗಳು ಇನ್ನೂ ಇವೆ. ಹೇಗಾದರೂ ಮಾಡಿ ಅವರ ಕನಸುಗಳನ್ನು ನನಸಾಗಿ ಮಾಡೋಣ !! ಅವರ ಚಿಂತನೆಗಳು ಮತ್ತು ಆದರ್ಶಗಳು ನಮಗೆ ಸದಾ ಇರಲಿ.

* * * * * * * * * *

ಚಿತ್ರಕೃಪೆ : http://kastatic.com

Advertisements
5 ಟಿಪ್ಪಣಿಗಳು Post a comment
  1. Prasanna Rameshwara T S
    ಡಿಸೆ 1 2012

    ಧೀರ ನಾಯಕ ರಾಜೀವ್ ದೀಕ್ಷಿತ್ ಬಗ್ಗೆ ವಿವರಗಳನ್ನು ನೀಡಿದ ಮೈಸೂರಿನ ಶ್ರೀವಿದ್ಯಾರಿಗೆ ನನ್ನ ಧನ್ಯವಾಗಿದೆ. ತಮ್ಮ ಅಲ್ಪ ಜೀವಿತಾವಧಿಯಲ್ಲಿ ಅವರ ಸಾಧನೆ ಬಹು ಸ್ತುತ್ಯಾರ್ಠವಾದುದು. ಸಾಮಾನ್ಯವಾಗಿ ಇಂಥ ದೇಶಭಕ್ತರ ಆಯಸ್ಸು ಹೆಚ್ಚಾಗಿರುವುದಿಲ್ಲ ಎಂಬುದು ವಿಪರ್ಯಾಸವಾದರೋ ಸತ್ಯವೇ ಆಗಿದೆ. ಇದಕ್ಕೆ ಹೆಸರಾಂತ ವ್ಯಕ್ತಿಗಳ [ಶಂಕರಾಚಾರ್ಯರು, ವಿವೇಕಾನಂದ, ಭಗತ್ ಸಿಂಘ್ ಮೊದಲಾದವರು.] ಆದರೆ ದೇಶದ ಸಮ್ಪತ್ತನ್ನು ಲೂಟಿ ಮಾಡಿ ಮೆರೆಯುತ್ತಿರುವವರು ದೀರ್ಘಾಯುಶ್ಯರಾಗಿ ತಮ್ಮ ದೇಶ ದ್ರೋಹಿ ಕೃತ್ಯಗಳನ್ನು ಮುಂದುವರೆಸುತ್ತಿರುತ್ತಾರೆ. ಇದೂ ಒಂದು ಈ ಕಲಿಯುಗದ ವಿಪರ್ಯಾಸ. ರಾಜೀವ್ ದೀಕ್ಷಿತ್ ರಂತಹ ಧೀಮಂತ ನಾಯಕರ ಅವಶ್ಯಕತೆ ಈ ದೇಶಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬೇಕಾಗಿದೆ.

    ಉತ್ತರ
  2. ಡಿಸೆ 1 2012

    ರಾಜೀವ್ ದೀಕ್ಷಿತ್ ಬಗ್ಗೆ ಈ ಬರಹ ಓದಿದಾಗ ಆ ದಿನಗಳು ನೆನಪಾದವು.
    – ಆಗೆಲ್ಲಾ ಹೀರಾಲಾಲ್ ಶರ್ಮ ಮತ್ತು ಭಗವಾನ್ ಎಂಬಿಬ್ಬರು ಮಾರವಾಡಿಗಳು ಆಜಾದಿ ಬಚಾವೋ ಆಂದೋಲನದ ಕಚೇರಿ ನಡೆಸುತ್ತಿದ್ದರು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನೊಬ್ಬನಿಂದ ರಾಜೀವರ ಕ್ಯಾಸೆಟ್ಟುಗಳನ್ನು ಪಡೆದು ಭಾಷಣ ಕೇಳಿದ್ದ ನಾನು ಮೊದಲು ಜಯನಗರ ೪ನೇ ಬ್ಲಾಕಿನ ಒಂದು ಸಭೆಯಲ್ಲಿ ಅವರನ್ನು ಭೇಟಿಯಾಗಿದ್ದೆ. ಮೊದಲ ಪ್ರಶ್ನೆಯೇ “ನಾನೀಗ ವಿದೇಶಿ ಸಂಸ್ಥೆಯ ಉದ್ಯೋಗಿ, ಅಲ್ಲಿನ ಕೆಲಸ ಬಿಡಲಾ?” ಎಂದಿದ್ದಕ್ಕೆ ರಾಜೀವ್ ಬೇಡ ಎಂದಿದ್ದರು. ಆಗೆಲ್ಲಾ ರಾಜೀವರ ಜೊತೆಗಾರರು ಬೆಂಗಳೂರಿನ ಮಾರವಾಡಿಗಳು.
    – ಮುಂದೆ ಹಾಯ್ ಬೆಂಗಳೂರು ಪತ್ರಿಕೆಯ ರವಿ ಬೆಳೆಗೆರೆಯವರನ್ನು ಭೇಟಿಯಾಗಿ ಅವರ ಪತ್ರಿಕೆಯಲ್ಲಿ “ಆಜಾದಿ” ಹೆಸರಿನ ಅಂಕಣವನ್ನು ರಾಘವೇಂದ್ರ ಅವರು ಬರೆಯಲು ಕಾರಣವಾಗಿದ್ದೆ. ರಾಘವೇಂದ್ರರಿಗೆ ರಾಜೀವರ ಒಂದೊಂದೇ ಕ್ಯಾಸೆಟ್ಟುಗಳನ್ನು ಕೊಟ್ಟು ಕೇಳಿಸಿ ಅಂಕಣ ರೂಪಿಸಲು ಸಹಾಯ ಮಾಡಿದ್ದೆ.
    – ಬಳೇಪೇಟೆಯ ಕಚೇರಿಯಲ್ಲಿ ಹಿಂದೀಯಲ್ಲಿ ನಡೆಯುತ್ತಿದ್ದ ಸಭೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸದ ಹೊಣೆ ನನ್ನ ಮತ್ತು ಪರಮ ಪ್ರಾಮಾಣಿಕ “ಹರಿಚಂದ್ರ” ಅವರದ್ದಾಗಿತ್ತು. ಭಾರತ ಮಾತೆಯ ಕರೆ ಎನ್ನುವ ಹೊತ್ತಗೆಯನ್ನು ರೂಪಿಸಿ ಅದರಲ್ಲಿ ನಾಲ್ಕಾರು ಬರಹಗಳನ್ನು ಬರೆದದ್ದು ಇನ್ನೂ ನೆನಪಲ್ಲಿದೆ. ಇಂದುಶೇಕರ್, ಹರಿ ಮತ್ತು ನಾನು ಮಾತ್ರಾ ಅಂದು ಜೊತೆಯಿದ್ದ ಬೆಂಗಳೂರಿಗರು. ತಮಾಶೆಯೆಂದರೆ ಇಂದು ಹೆಸರಾಗಿರುವ ಒಬ್ಬ ಮಾತುಗಾರರು ಇಡೀ ಭಾರತ ಮಾತೆಯ ಕರೆ ಹೊತ್ತಗೆಯನ್ನು ತಾನೇ ಸಂಪಾದಿಸಿದ್ದು ಎಂದು ಹೇಳಿಕೊಂಡು ತಿರುಗುತ್ತಿರುವುದಾಗಿ ವದಂತಿಯಿದೆ.
    – ಮೈಸೂರಿನಲ್ಲಿ ರಾಜೀವರ ಮೊದಲ ಸಭೆ ಆಯೋಜಿಸಿದ್ದು ಒಳ್ಳೆಯ ಅನುಭವ. ಇದನ್ನು ಮಾಡಿದ್ದು ಬರೀ ಮೂರು ಮಂದಿ. ನಾನು ನನ್ನ ಇಬ್ಬರ ಗೆಳೆಯರ ಸಹಾಯ ಪಡೆದು ಮೈಸೂರಿನ ಬೀದಿ ಬೀದಿಗಳಲ್ಲಿ ಪೋಸ್ಟರುಗಳನ್ನು ಅಂಟಿಸಿ ರಾತ್ರಿಯಿಡೀ ಅಂಟಿಸಿಬಂದಿದ್ದೆವು. ಟೌನ್‌ಹಾಲಿನ ಬಯಲಲ್ಲಿ ನಡೆದ ಕಾರ್ಯಕ್ರಮಕ್ಕೆ ಮೈಸೂರಿನ ಇಬ್ಬರು ಪ್ರಮುಖರ ನೆರವು ನೀಡುವುದಾಗಿ ಹೇಳಿದ್ದರು. ಸಂತೆಪೇಟೆಯಲ್ಲಿ ಅಂಗಡಿ ಹೊಂದಿದ್ದ ಪಿಂಜರಾಪೋಲಿನ ಶ್ರೀ ಶಾಂತಿಲಾಲ್ ಎನ್ನುವ ಉತ್ತರ ಭಾರತೀಯ ವ್ಯಾಪಾರಿ ಮತ್ತು ವಿದ್ಯಾರಣ್ಯಪುರದಲ್ಲೆಲ್ಲೋ ಕ್ಲಿನಿಕ್ ನಡೆಸುತ್ತಿದ್ದ ಸಂಘಪರಿವಾರದ ಒಬ್ಬ ಡಾಕ್ಟರ್. ಆ ವೈದ್ಯರ ಹೆಸರು ನೆನಪಿಲ್ಲದಿದ್ದರೂ ಅವರು ಮಾಡಿದ ಮೋಸ ನೆನಪಿದೆ. ಕಾರ್ಯಕ್ರಮಕ್ಕೆ ಭಾರತಮಾತೆಯ ಫೋಟೋ, ವಂದೇಮಾತರಂ ಹಾಡಲು ಸಂಘದ ಹುಡುಗರನ್ನು ಕಳಿಸುತ್ತೇವೆಂದು ಹೇಳಿ ಸಕ್ಕತ್ತಾಗೇ ಕೈಕೊಟ್ಟಿದ್ದರು. ಕೊನೆಗೂ ಒಬ್ಬ ಸಂಘಿ ವಂದೇಮಾತರಂ ಹಾಡಿದ್ದರು. ಸಂಜೆ ಐದಾದರೂ ಜನರೇ ಇರಲಿಲ್ಲ.. ಕೊನೆಗೆ ೩೦೦೦ ಜನರು ಸೇರಿದ್ದರು. ಅಂದು ರಾತ್ರಿ ನನ್ನ ಗೆಳೆಯನ ಮನೆಯಲ್ಲಿಯೇ ರಾಜೀವ್ ನಮ್ಮೊಂದಿಗೆ ಚಾಪೆಯ ಮೇಲೆ ಮಲಗಿದ್ದರು.
    – ಹುಬ್ಬಳ್ಳಿಯಲ್ಲಿ ಒಮ್ಮೆ ಎರಡು ದಿನದ ಶಿಬಿರವೊಂದು ನಡೆದಿತ್ತು. ಅಲ್ಲಿ ಹುಬ್ಬಳ್ಳಿಯ ಸರ್ದಾರ್ಜಿ (ಹೆಸರು ನೆನಪಿಲ್ಲ) ಅಚ್ಚ ಕನ್ನಡದಲ್ಲಿ ವ್ಯವಹರಿಸುತ್ತಾ ನನ್ನಲ್ಲಿ ಅಚ್ಚರಿ ಮೂಡಿಸಿದ್ದರು. ಇಡೀ ಕಾರ್ಯಕ್ರಮದಲ್ಲಿ ಹಿಂದಿ-ಕನ್ನಡ ತರ್ಜುಮೆ ಮಾಡುವ ಹೊಣೇ ನನ್ನದಾಗಿತ್ತು.
    – ನನ್ನ ಮನೆಗೆ ಬಂದು ನನ್ನ ತಂದೆ, ತಾಯಿ ಮನೆಮಂದಿಯೊಂದಿಗೆ ಸರಳವಾಗಿ ಆತ್ಮೀಯತೆಯಿಂದ ರಾಜೀವ್ ನಡೆದುಕೊಂಡಿದ್ದನ್ನು ಎಂದಿಗೂ ಮರೆಯಲಾಗದು.

    ಮುಂದೆ ನನ್ನಲ್ಲೇ ನಡೆದ ಅನೇಕ ಚಿಂತನೆಗಳು, ಚಿಂತನ ಮಂಥನಗಳು – ಭಾರತದ ಬಗ್ಗೆ ರಾಜೀವ್ ಅವರು ಹೊಂದಿದ್ದ ನಂಬಿಕೆಗಳಿಂದ, ಜಾಗತೀಕರಣದ ಬಗ್ಗೆ ಹೊಂದಿದ್ದ ನಂಬಿಕೆಗಳಿಗಿಂತಾ ಭಿನ್ನವಾದ ನಂಬಿಕೆ ಹುಟ್ಟಲು ಕಾರಣವಾದವು. ಆಜಾದಿ ಬಚವೋ ಆಂದೋಲನದಿಂದ ಹೀಗೆ ನಿಧಾನವಾಗಿ ದೂರವಾದ ನಾನು ರಾಜೀವರ ಸರಳ ಜೀವನ, ಗಟ್ಟಿ ನಂಬಿಕೆ, ಆಳವಾದ ಅಧ್ಯಯನ ಮೊದಲಾದವುಗಳ ಆರಾಧಕನಾಗಿರುವುದು ನಿಜ! ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ತೀರಿಕೊಂಡದ್ದನ್ನು ಅರಗಿಸಿಕೊಳ್ಳುವುದು ನನಗಂತೂ ತುಂಬಾ ಕಷ್ಟವಾದದ್ದು!

    ಉತ್ತರ
    • ಏಪ್ರಿಲ್ 4 2016

      ಪ್ರಿಯ ಆನಂದ್ ಅವರೇ,
      ಇವತ್ತು ಏನನ್ನೋ ಹುಡುಕುತ್ತಿದ್ದಾಗ ಈ ನಿಮ್ಮ ಕಮೆಂಟ್ ಕಣ್ಣಿಗೆ ಬಿತ್ತು. 1998/99ರ ಆ ದಿನಗಳಲ್ಲಿ ರಾಜೀವ್ ದೀಕ್ಷಿತರ ವಿಚಾರಧಾರೆಗಳ ಕುರಿತಂತೆ ‘ಹಾಯ್ ಬೆಂಗಳೂರ್!’ನಲ್ಲಿ ನಾನು ‘ಆಜಾದಿ’ ಅನ್ನುವ ಕಾಲಂ ಬರೆಯುತ್ತಿದ್ದೆ. ಆಗ ನನಗೊಬ್ಬರು ರಾಜೀವ್ ಅವರ ಹಿಂದಿ ಭಾಷೆಯ ಕ್ಯಾಸೆಟ್ ಗಳನ್ನು ಪಡೆಯಲು ಸಹಕರಿಸಿದ್ದು ನೆನಪಿದೆ. ಆದರೆ ಆ ವ್ಯಕ್ತಿಯ ಮುಖಚಹರೆ ನೆನಪಿಲ್ಲ. ಅದು ನೀವೇ ಅಂತ ಇವತ್ತಷ್ಟೇ ನಿಮ್ಮ ಕಮೆಂಟಿನಿಂದ ಗೊತ್ತಾಯಿತು. ಬಹುಶಃ ಇತ್ತೀಚಿನ ದಿನಗಳಲ್ಲಿ ನಾವು ಫೇಸ್ ಬುಕ್ ನಲ್ಲಿ ಮಾತನಾಡಿದ ನೆನಪು. (ಕಳೆದ ಕೆಲವು ತಿಂಗಳುಗಳಿಂದ ನಾನು ಫೇಸ್ ಬುಕ್ ನಲ್ಲಿಲ್ಲ.)
      ನಿಮ್ಮ ಆವತ್ತಿನ ಸಹಕಾರಕ್ಕೆ ಇವತ್ತು ಈ ಮೂಲಕ ಧನ್ಯವಾದ ಹೇಳುತ್ತಿದ್ದೇನೆ.
      ಪ್ರೀತಿ ಇರಲಿ,
      -ರಾಘವೇಂದ್ರ ಜೋಶಿ

      ಉತ್ತರ
  3. ಡಿಸೆ 1 2012

    ನೆನಪಿನಲ್ಲಿರುವ ಮತ್ತೊಂದೆರಡು ಘಟನೆಗಳು:
    ಒಮ್ಮೆ ರಾಜೀವ್ ಬೆಂಗಳೂರಿಗೆ ಬಂದಿದ್ದರು. ಆಗಿನ್ನೂ ಹಾಯ್ ಬೆಂಗಳೂರಿನಲ್ಲಿ ಅವರ ಲೇಖನ ಸರಮಾಲೆ ಮುಗಿದಿತ್ತು.(ಬಹುಶಃ). ಆಗ ರವಿ ಬೆಳೆಗೆರೆ ರಾಜೀವರನ್ನು ಸಂದರ್ಶಿಸಲು ಬಳೇಪೇಟೆಯ ಹಳೆಯ ಇರುಕು ಕಟ್ಟಡದ ಮಹಡಿಯ ಮೇಲಿನ ಕಚೇರಿಗೆ ಬಂದಿದ್ದರು. ಸ್ವದೇಶಿ ಚಿಂತನೆಯ ಬಗ್ಗೆ, ಆಂದೋಲನದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ ರಾಜೀವರನ್ನು ರವಿ ಬೆಳೆಗೆರೆ ನೀವು ಬ್ರಹ್ಮಚಾರಿಯೇ ಎಂದು ಕೇಳಿದರು. ಹೌದು ನಾನು ಬ್ರಹ್ಮಚಾರಿ ಎಂದ ರಾಜೀವ್ “ಅಟಲ್‍ ಬಿಹಾರಿ ವಾಜಿಪೇಯಿಯಂತಲ್ಲಾ ನಾನು. ಅವರನ್ನು ಯಾರೋ ನೀವು ಬ್ರಹ್ಮಚಾರಿಯೇ ಎಂದಾಗ ಅವರು ನಾನು ಬ್ರಹ್ಮಚಾರಿ ಅಲ್ಲಾ, ಬರೀ ಅವಿವಾಹಿತ ಅಷ್ಟೇ” ಎಂದಿದ್ದರಲ್ವಾ ಹಾಗಲ್ಲಾ… ನಾನು ನಿಜವಾಗಿಯೂ ಬ್ರಹ್ಮಚಾರಿ ಎಂದು ತಮಾಶೆಯಾಗಿ ಹೇಳಿದ್ದರು. ಆ ನಂತರ ಹಾಯ್ ಬೆಂಗಳೂರಿನ ಮುಖಪುಟದಲ್ಲಿ ಬಂದ ಸುದ್ದಿ “ನಾನು ವಾಜಿಪೇಯಿಯಂತೆ ಬರೀ ಅವಿವಾಹಿತನಲ್ಲಾ, ಆನು ಬ್ರಹ್ಮಚಾರಿ” ಎಂಬರ್ಥದಲ್ಲಿತ್ತು. ಆಗಲೇ ಮೊದಲಬಾರಿಗೆ ರವಿ ಬೆಳಗೆರೆ ಬಗ್ಗೆ ನನಗೆ ಭ್ರಮ ನಿರಸನವಾಗಿದ್ದು. ಮಾಧ್ಯಮಗಳಿಗೆ ವ್ಯಕ್ತಿಯ ಸಿದ್ಧಾಂತ, ನೀತಿ ನಿಲುವುಗಳು ಬೇಕಿಲ್ಲಾ. ಬೇಕಿರುವುದು ಬರೀ ಕಾಂಟ್ರವರ್ಸಿ, ಸೆನ್ಸೇಷನಲ್ ಸುದ್ದಿ ಎಂದೆನ್ನಿಸಿ ಅಸಹ್ಯ ಪಟ್ಟುಕೊಂಡಿದ್ದೆ!
    ಇನ್ನೊಮ್ಮೆ ರುಶಿ ಸಂಸ್ಕೃತಿ ವಿದ್ಯಾಕೇಂದ್ರದ ಪ್ರಭಾಕರ ಗುರೂಜಿಯವರ ಜಯನಗರದ ಕಚೇರಿಗೆ ಹೋಗಿದ್ದೆವು. ಆಗ ಪ್ರಭಾಕರ ಗುರೂಜಿಯವರು “ನಾನು ನಡೆಸೋ ಯೋಗಕಾರ್ಯಕ್ರಮದಲಿ ತರಬೇತಿ ಪಡೆಯಿರಿ, ನಿಮ್ಮ ಕಾರ್ಯಕ್ಷಮತೆ ಹೆಚ್ಚುತ್ತದೆ” ಎಂದೇನೋ ರಾಜೀವರಿಗೆ ಹೇಳಿದ್ದಕ್ಕೆ ರಾಜೀವರು “ನಾನು ನಿಮಗಿಂತಲೂ ಹೆಚ್ಚು ಚಟುವಟಿಕೆಯಿಂದಿದ್ದೇನೆ, ನಿಮ್ಮ ತರಬೇತಿ ನನಗೆ ಬೇಕಾಗಿಲ್ಲ” ಎಂದಿದ್ದನ್ನು ನನ್ನ ಕಣ್ಣೆದುರೇ ಕಂಡೆ.
    ಯಶಸ್ಸಿಗೆ ನೂರಾರು ಜನರು ತಾಯ್ತಂದೆಯರು. ರಾಜೀವರ ಆರಂಭ ಕಾಲದಿಂದಲೂ ಅವರ ಜೊತೆಗಿದ್ದು ಸಂಘಟನೆ ಕಟ್ಟಿದ ಹರಿಚಂದ್ರನಂತಹ, ಇಂದಿಗೂ ಸಿದ್ಧಾಂತಕ್ಕೆ ಬದ್ಧನಾಗಿ ಸರಳ ಜೀವನ ನಡೆಸುತ್ತಿರುವ ಪ್ರಾಮಾಣಿಕರು ಒಂದೆಡೆಯಿದ್ದಲ್ಲಿ… ಸಿದ್ಧಾಂತದ ಜೊತೆಯಲ್ಲೇ ಸ್ವಂತ ಚರಿಶ್ಮಾ ಬೆಳೆಸಿಕೊಂಡು ದೊಡ್ಡವರಾಗಿ ಮೆರೆಯುತ್ತಿರುವವರು ಇನ್ನೊಂದು ಎಡೆಯಲ್ಲಿ! ಆದರೂ ಹರಿಚಂದ್ರನಂತಹವರು ಬೆಳಕಿಗೆ ಬರಬೇಕೆಂಬ ಆಶಯ ನನ್ನದು!

    ಉತ್ತರ
  4. makara
    ಡಿಸೆ 3 2012

    ನಿದ್ದೆ ಮಾಡುತ್ತಿರುವ ದೇಶವಾಸಿಗಳನ್ನು ಬಡಿದೆಬ್ಬಿಸಲು ಇಂತಹ ಲೇಖನಗಳು ಆಗಿಂದಾಗ್ಯೆ ಪ್ರಕಟವಾಗುತ್ತಿರಬೇಕು; ಈ ಸಮಯೋಚಿತ ಲೇಖನಕ್ಕಾಗಿ ಧನ್ಯವಾದಗಳು ಶ್ರೀವಿದ್ಯಾ ಅವರೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Note: HTML is allowed. Your email address will never be published.

Subscribe to comments