ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2012

1

‘ಲೈಫ್ ಆಫ್ ಪೈ’ ಎಲ್ಲರಲ್ಲೂ ಕಾಡುವಂತಾಗಲಿ…

‍ನಿಲುಮೆ ಮೂಲಕ

– ಚಕ್ರವರ್ತಿ ಸೂಲಿಬೆಲೆ

http://t1.gstatic.com/images?q=tbn:ANd9GcRSr4z5g6UJPHpBVGOSkOk7AaKUuIujEJJxVFIzpuP4A-RjH9wEOZycdZJwಒಂದು ನಾಟಕ, ಸಿನಿಮಾ, ಕೊನೆಗೆ ಸಂಗೀತವೂ ಕೂಡ.. ಮುಗಿಸಿ ಬಂದ ನಂತರವೂ ಎಷ್ಟು ಹೊತ್ತು ನಿಮ್ಮನ್ನು ಕಾಡುತ್ತಿರುತ್ತದೆ ಎಂಬುದರ ಮೇಲೆ ಅದರ ಸಫಲತೆಯನ್ನು ಅಂದಾಜಿಸಬಹುದು. ಕಾಕತಾಳೀಯ ಅಂತಾದರೂ ಹೇಳಿ, ವಿಶ್ವಪ್ರಜ್ಞೆಯ ಪ್ರೇರಣೆ ಅಂತಲಾದರೂ ಕರೀರಿ. ಓಹ್ ಮೈ ಗಾಡ್ ನೋಡಿದ ಮರುವಾರವೇ ಲೈಫ್ ಆಫ್ ಪೈ ನೋಡುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ವಿಶೇಷವೇ ಸರಿ. ಚಿತ್ರ ರಾತ್ರಿಯಿಡೀ ಕಾಡಿದೆ. ಕೆಲವು ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ದೃಶ್ಯಗಳ ವೈಭವದ ಹಿಂದೆ ಅಡಗಿ ಕುಳಿತಿರುವ ಬದುಕಿನ ಸೂಕ್ಷ್ಮ ಅರ್ಥಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ದೇವರ ಕುತರಿತಂತೆ, ಮತಗಳ ಕುರಿತಂತೆ ಕೊನೆಗೆ ಬದುಕಿನ ಕುರಿತಂತೆಯೂ ಪೈ ಹುಟ್ಟು ಹಾಕುವ ಪ್ರಶ್ನೆಗಳಿವೆಯಲ್ಲ, ಅವು ನಿಮ್ಮನ್ನು ಕಾಡದಿದ್ದರೆ ಹೇಳಿ.

ಹೀಗೆ ಕಾಡುತ್ತಾನೆಂದೇ ಅವನು ’ಪೈ’. ಫ್ರಾನ್ಸಿನ ಸ್ವಚ್ಛ ನೀರಿನ ಈಜುಕೊಳದಿಂದಾಗಿ ಬಂದ ಹೆಸರು ಅವನದ್ದು. ಪಿಸಿನ್ ಪಟೇಲ್. ಉಳಿಯೋದು ಪೈ. ಅದೆಷ್ಟು ಸಾಂಕೇತಿಕವೆಂದರೆ, ಪೈನ ಬದುಕು ಗಣಿತದ ಪೈನಂತೆಯೇ. ಅದೊಂದು ಇರ‍್ಯಾಷನಲ್ ನಂಬರ್. ಆದರೆ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ರ‍್ಯಾಷನಲ್ ಆಗಿಯೇ ಬಳಸಲ್ಪಡುತ್ತದೆ. ಭಗವಂತನೂ ಹಾಗೆಯೇ. ಯಾರೂ ಕಾಣಲೇ ಇಲ್ಲ. ಆದರೆ ಎಲ್ಲರೂ ಕಂಡಿದ್ದೇವೆ ಎಂಬಂತೆ ಜೊತೆಯಲ್ಲಿಟ್ಟುಕೊಂಡೇ ಬದುಕು ನಡೆಯುತ್ತದೆ. ಪೈ ವೃತ್ತದ ಪರಿಧಿ ಮತ್ತು ವ್ಯಾಸಗಳ ಅನುಪಾತವನ್ನು ತೋರಿಸುವ ಸಂಖ್ಯೆ. ವ್ಯಾಸವನ್ನು ಬದುಕಿನ ಯಾತ್ರೆ ಅಂತ ಭಾವಿಸುವುದಾದರೆ ಪರಿಧಿ ಧರ್ಮ, ದೇವರು, ವಿಶ್ವಾಸಗಳು. ಬದುಕು ಯಾರದ್ದಾದರೂ ಆಗಿರಲಿ, ಆತ ಆಸ್ತಿಕನಾಗಿರಲಿ, ನಾಸ್ತಿಕನೇ ಆಗಲಿ. ಕೊನೆಗೆ ಅವಕಾಶವಾದಿ ಆಸ್ತಿಕನಾದರೂ ಸರಿ. ಈ ಪರಿಧಿಯೊಳಗಿನ ವ್ಯಾಸವಾಗಿಯೇ ಬದುಕಬೇಕು. ಅದು ಪೈನಂತೆ ಸ್ಥಿರಾಂಕ!

ವಾಸ್ತವವಾಗಿ ಈ ಸಿನಿಮಾ ಯಾನ್ ಮಾರ್ಟೆಲ್‌ನ ಕಾದಂಬರಿಯನ್ನು ಆಧರಿಸಿದ್ದು. ಆತ ಅಪರೂಪದ ಕಾದಂಬರಿಕಾರ. ಭಾರತದ ಮೇಲೆ ವಿಶೇಷವಾದ ಪ್ರೀತಿ ಅವನಿಗೆ. ಹೀಗಾಗಿ ಕಥೆ ಶುರುವಾಗೋದೂ ಭಾರತದಲ್ಲಿಯೇ. ಪಶ್ಚಿಮದ ತುಡಿತಗಳೆಲ್ಲ ಸಮ್ಮಿಳಿತಗೊಳ್ಳೋದು ಭಾರತದಲ್ಲಿಯೇ ಅನ್ನೋದು ವಿಶೇಷ. ಈ ಹಿಂದೆ ಅತಿ ಹೆಚ್ಚು ಮಾರಾಟಗೊಂಡ ’ದ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ’ಯ ಲೇಖಕನೂ ಭಾರತದ ಪಸೆಯಿಟ್ಟುಕೊಂಡೇ ಪುಸ್ತಕ ಬರೆದವ. ಪ್ರಳಯದ ಕುರಿತಂತೆ ೨೦೧೨ ಎಂಬ ಸಿನಿಮಾ ಬಂತಲ್ಲ, ಅಲ್ಲೂ ಭಾರತದ ಝಲಕ್ ಇತ್ತು. ಹಾಗೆಯೇ ಪೈನ ಬದುಕೂ. ಯಾನ್ ಮಾರ್ಟೆಲ್ ಮೂರ್ನಾಲ್ಕು ಬಾರಿ ಭಾರತಕ್ಕೆ ಬಂದು ಹೋದವ. ಇಲ್ಲಿನ ಮತ ಧರ್ಮಗಳ, ಸಂಸ್ಕೃತಿ, ಆಚಾರಗಳ ಕುರಿತಂತೆ ಆಸಕ್ತಿಯಿಂದ ಅಧ್ಯಯನ ನಡೆಸಿದವ. ಮೂವತ್ಮೂರು ಕೋಟಿ ದೇವತೆಗಳ ಗೋಜಲುಗಳನ್ನು ಅರ್ಥ ಮಾಡಿಕೊಳ್ಳಲಾಗದೆ ಹೆಣಗಾಡಿದವ.
ಅದೂ ಸರಿಯೇ. ಹುಟ್ಟಿನಿಂದ ಕ್ರಿಸ್ತನ ಅನುಯಾಯಿಯೋ ಅಲ್ಲಾಹನ ಆರಾಧಕರೋ ಆಗಿರುವವರಿಗೆ ನಮ್ಮಲ್ಲಿರುವ ದೇವತೆಗಳ ತತ್ತ್ವವನ್ನು ಅರಗಿಸಿಕೊಳ್ಳೋದು ಸುಲಭವೇನಲ್ಲ ಬಿಡಿ. ಎರಡು ಸಾವಿರ ವರ್ಷಗಳ ಮತ ಪಂಥಗಳ ದೃಷ್ಟಿಯಿಂದ ಹತ್ತಾರು ಸಾವಿರ ವರ್ಷಗಳ ಆರಾಧನಾ ಪದ್ಧತಿಯನ್ನು ಭಾವಿಸಿಕೊಳ್ಳುವುದು ಕಷ್ಟವೇ. ಹೀಗಿರುವಾಗಲೂ ಮಾರ್ಟೆಲ್ ಭಗವಂತನ ಅಸ್ತಿತ್ವದ ಕುರಿತಂತೆ ಕಟ್ಟಿಕೊಡುವ ಚಿತ್ರಣವಿದೆಯಲ್ಲ, ಅದು ಎಂಥವರನ್ನೂ ಚಿಂತನೆಗೆ ಪ್ರೇರೇಪಿಸಿಬಿಡುತ್ತದೆ.

’ಪೈ’ ಬಾಲ್ಯದಲ್ಲಿಯೇ ಮತಗಳ ಜೇನುಗೂಡಿಗೆ ಕೈಹಾಕಿದವನು. ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್- ಮೂರೂ ಮತಗಳ ಆಚರಣೆಗಳನ್ನು ಸಮರ್ಥವಾಗಿ ರೂಢಿಸಿಕೊಂಡವನು. ಕ್ರಿಸ್ತನು ಪಾಪಗಳನ್ನು ಹೊರುವ ಅಂಶವನ್ನು ಟೀಕಿಸುತ್ತಲೇ ಅವನ ಪ್ರೇಮದ ಪ್ರವಾಹದಲ್ಲಿ ತೊಯ್ದು ಹೋಗುತ್ತಾನೆ. ಲೇಖಕನ ಚಾತುರ್ಯ ಅದೆಂಥದ್ದೆಂದರೆ, ಕ್ರಿಸ್ತನೆಡೆಗೆ ಆಕರ್ಷಿತನಾದವ ಕೃಷ್ಣನಿಗೆ ವಂದಿಸುತ್ತಾನೆ, ಇಂಥವನನ್ನು ಪರಿಚಯಿಸಿದ್ದಕ್ಕಾಗಿ! ಕ್ರಿಸ್ತನಿಗೆ ಹತ್ತಿರವಾದರು ಕೃಷ್ಣನಿಂದ ದೂರವಾಗಬೇಕೆಂದಿಲ್ಲ. ಮೂವತ್ಮೂರು ಕೋಟಿ ದೇವತೆಗಳನ್ನು ಆರಾದಿಸಬಲ್ಲವನಿಗೆ ಮತ್ತೊಬ್ಬರು ಹೊರೆಯಾಗಲಾರರು. ಹೀಗಾಗಿಯೇ ಪೈ ತನ್ನನ್ನು ಪರಿಚಯಿಸಿಕೊಳ್ಳುವಾಗ ಕ್ಯಾಥೊಲಿಕ್ ಹಿಂದೂ ಎಂದೇ ಹೇಳಿಕೊಳ್ಳೋದು.

lipiನಾವು ಮುಟ್ಟಬೇಕಿರುವ ಗುರಿ ನಿರ್ಧರಿತವಾಗಿರಬೇಕು. ಅದರೆಡೆಗೆ ದಾಪುಗಾಲಿಡುತ್ತ ಸಾಗಬೇಕೆ ಹೊರತು ನಡೆಯುವ ಹಾದಿಯ ಕುರಿತಂತೆ ವಾದಿಸುತ್ತ ಕೂರುವುದಲ್ಲ. ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣರು ಹೇಳುತ್ತಾರಲ್ಲ, ’ಮತಗಳೆಂಬ ಜೇನುಗೂಡಿನಿಂದ ಕುಟುಕುವ ಜೇನಿನ ಸಂಗವನ್ನೂ ಬಯಸಬಹುದು; ಸಂಗ್ರಹಿಸಿಟ್ಟ ಮಧುವನ್ನೂ ಸವಿಯಬಹುದು.’ ನಮ್ಮ ಉದ್ದೇಶ ನಾವು ನಿರ್ಧರಿಸಿಕೊಳ್ಳಬೇಕಷ್ಟೆ. ಹೀಗಾಗಿಯೇ ಮಾರ್ಟೆಲ್ ’ದೇವರನ್ನು ಪ್ರೀತಿಸುವ ವಿಚಾರದಲ್ಲಿ ಹಿಂದೂ ಕೇಶಮುಂಡನ ಮಾಡಿಸಿಕೊಂಡ ಕ್ರಿಶ್ಚಿಯನ್ನನಂತೆಯೇ. ಎಲ್ಲದರಲ್ಲೂ ದೇವರನ್ನು ಕಾಣುವ ಮುಸಲ್ಮಾನ ಗಡ್ಡ ಬಿಟ್ಟ ಹಿಂದೂವಿನಂತೆಯೇ. ಹಾಗೂ ದೇವರಿಗೆ ಸಮರ್ಪಿಸಿಕೊಳ್ಳುವ ವಿಚಾರ ಬಂದಾಗ ಕ್ರಿಸ್ತಾನುಯಾಯಿ ಟೋಪಿ ಹಾಕಿಕೊಂಡ ಮುಸಲ್ಮಾನನಂತೆಯೇ’ ಎನ್ನುತ್ತಾನೆ.

ಪೈನ ಬದುಕು ಮೂರಾಬಟ್ಟೆಯಾಗೋದು ದೇಶ ಬಿಟ್ಟು ಹೊರಡುವ ಒಂದು ಅನಪೇಕ್ಷಿತ ನಿರ್ಧಾರದಿಂದ. ಪಾಂಡಿಚೆರಿಯಿಂದ ಕೆನಡಾಕ್ಕೆ ಹೊರಡುವ ಕುಟುಂಬ ಹತ್ತಿದ್ದು ಜಪಾನೀ ಹಡಗು. ಅಲ್ಲೊಂದು ಅನಿರೀಕ್ಷಿತ ತಿರುವು. ಚಂಡಮಾರುತಕ್ಕೆ ಸಿಲುಕಿ ಹಡಗು ಮುಳುಗಿಹೋಗುತ್ತದೆ. ಆದರೆ ಮಿಂಚು ಗುಡುಗುಗಳ ವೈಭವವನ್ನು ನೋಡಬಂದ ಪೈ ಉಳಿದುಬಿಡುತ್ತಾನೆ. ಜೊತೆಯಲ್ಲಿ ಝೂನ ಒಂದಷ್ಟು ಪ್ರಾಣಿಗಳು. ಅನೇಕ ಏರುಪೇರುಗಳ ನಂತರ ಜೀವರಕ್ಷಕ ಬೋಟಿನಲ್ಲಿ ಉಳಿಯೋದು ಒಂದು ಬಂಗಾಳಿ ಹುಲಿ ಮತ್ತು ಪೈ ಮಾತ್ರ. ಒಟ್ಟು ೨೨೭ ದಿನಗಳ ಜೊತೆ ಅವರಿಬ್ಬರದೂ. ಅವರಿಬ್ಬರ ನಡುವಣ ಸಂಭಾಷಣೆಗಳು, ಆಗಾಗ ಮಿಂಚಿ ಮರೆಯಾಗುವ ಭಗವತ್ಕೃಪೆ, ಅದನ್ನು ದೃಶ್ಯದಲ್ಲಿ ಸೆರೆ ಹಿಡಿದಿರುವ ರೀತಿ, ಎಲ್ಲವೂ ಅದ್ಭುತವೇ. ಹುಲಿ ಹಸಿದಾಗ ತನ್ನನ್ನೇ ತಿಂದುಬಿಡಬಹುದೆಂದು ಅರಿವಿದ್ದೂ ಪೈ ಅದಕ್ಕೆ ಮೀನುಗಳನ್ನೆಸೆಯುತ್ತಾ ಪಳಗಿಸಿ ಇಟ್ಟುಕೊಳ್ಳುತ್ತಾನೆ. ಹುಲಿ ತನ್ನನ್ನು ತಿಂದುಬಿಡಬಹುದೆಂಬ ಕ್ರಿಯಾಶೀಲತೆಯೇ ತನ್ನನ್ನು ಕ್ರಿಯಾಶೀಲನನ್ನಾಗಿಯೂ ಸೃಜನಶೀಲನನ್ನಾಗಿಯೂ ಇಡಬಹುದೆಂದು ಅವನಿಗೆ ಗೊತ್ತು. ಇದೇ ಚಿತ್ರದ ಕಾಡುವ ಅಂಶ ಕೂಡ. ಸಂಕೇತದ ಅರ್ಥಗಳನ್ನು ಕೆದಕಿ ನೋಡಿ. ಸೃಷ್ಟಿಯ ಅಂಗಗಳಾದ ನಮ್ಮ ಪಾತ್ರವನ್ನು ಹುಲಿ ನಿರ್ವಹಿಸಿದರೆ, ಪೈ ಭಗವಂತನ ಪಾತ್ರದಲ್ಲಿದ್ದಾನೆ. ಅವಕಾಶ ಕೊಟ್ಟರೆ ಹುಲಿ ಪೈನನ್ನೇ ಕೊಂದುಬಿಡುತ್ತದೆ. ನಾವೂ ಭಗವಂತನನ್ನು ನುಂಗಿಬಿಡುತ್ತೇವೆ. ಆದರೆ ಆತ ನಮ್ಮನ್ನು ಪಳಗಿಸಿ ರಕ್ಷಿಸುತ್ತಿದ್ದಾನೆ. ಆತನ ಅಸ್ತಿತ್ವ ಇರಬೇಕೆಂದರೆ ನಾವು ಬದುಕಿರಲೇಬೇಕು. ನಮ್ಮ ಅಸ್ತಿತ್ವಕ್ಕೆ ಆತನ ಸಹಕಾರ ಬೇಕೇಬೇಕು. ಒಂದು ಜೀವ ರಕ್ಷಕ ದೋಣಿಯನ್ನು ಇಟ್ಟುಕೊಂಡು ಇಷ್ಟೆಲ್ಲ ಕಥೆ ಹೆಣೆದಿರುವುದು ನಿಜಕ್ಕೂ ಅದ್ಭುತ.

ಆಳಕ್ಕೆ ಇಳಿದಷ್ಟು ದೇವರು ಸಂಕೀರ್ಣವಾಉತ್ತ ನಡೆಯುತ್ತಾನೆ. ವೇದಗಳ ಕಾಲ ಅಂತಹ ಸಂಕೀರ್ಣ ಸೂತ್ರಗಳನ್ನು ಎಳೆಎಳೆಯಾಗಿ ಬಿಡಿಸಿದ್ದ ಕಾಲ. ಆಮೇಲಿನ ಘಟ್ಟದಲ್ಲಿ ಇಷ್ಟೆಲ್ಲ ಸಾಹಸಕ್ಕೆಳಸದ ಪೀಳಿಗೆ ಋಷಿಗಳು ಹೇಳಿದ ಭಗವಂತನಿಗೆ ಆಚರಣೆಗಳ ಮೂಲಕ ಕೃತಜ್ಞತೆ ಅರ್ಪಿಸಿ ಕೈತೊಳೆದುಕೊಂಡು ಬಿಟ್ಟಿತು. ಅಲ್ಲಿಂದಾಚೆಗೆ ಭಗವಂತನೊಡನೆ ಒಪ್ಪಂದವೇರ್ಪಡಿಸಲು ಅನೇಕರು ಹುಟ್ಟಿ ಬಂದರು. ಕೆಲವರು ಭಗವಂತನ ಮಕ್ಕಳೆನಿಸಿಕೊಂಡರು, ಕೆಲವರು ಸಂದೇಶವಾಹಕರಾದರು. ಕೆಲವರು ದಾಸರಾದರು, ಇನ್ನೂ ಕೆಲವರು ಶರಣರಾದರು. ಒಬ್ಬೊಬ್ಬರು ಭಗವಂತನನ್ನು ಒಂದೊಂದು ರೀತಿಯಲ್ಲಿ ನಮ್ಮೆದುರಿಗೆ ಇರಿಸಿದರು. ಅವನನ್ನು ಒಲಿಸಿಕೊಳ್ಳಲು ಒಂದೊಂದು ಮಾರ್ಗ ಕಂಡುಕೊಂಡರು. ಅಲ್ಲಿಗೆ ಎಲ್ಲವೂ ಗೋಜಲಾಗತೊಡಗಿತು. ನನ್ನದು ಮಾತ್ರ ಸತ್ಯ, ನಿಮ್ಮದೆಲ್ಲ ಸುಳ್ಳು ಎನ್ನುವ ಭೂಪರೂ ಹುಟ್ಟಿಕೊಂಡರು. ಕತ್ತಿ-ಪಿಸ್ತೂಲುಗಳನ್ನು ಹಿಡಿದು ನಂಬಿಕೆಗಳನ್ನು ಹರಡಿಸುವ ಯತ್ನ ಶುರುವಾಯ್ತು. ವಿಶ್ವಾಸ ಮನಸ್ಸಿಗೆ ಸಂಬಂಧಿಸಿದ್ದು. ಒತ್ತಾಯದಿಂದ ಬಂದದ್ದು ಬಹಳ ಕಾಲ ಉಳಿಯದೆಂಬ ಪ್ರಾಮಾಣಿಕ ಸತ್ಯದ ಅರಿವೂ ಅವರಿಗೆ ಇರಲಿಲ್ಲ.

ಪೈ ಇವುಗಳಿಗೆಲ್ಲ ಸಮರ್ಥ ಉತ್ತರ. ಆಕಸ್ಮಿಕ ದುರ್ಘಟನೆಯಲ್ಲಿ ತನ್ನವರನ್ನೆಲ್ಲ ಕಳಕೊಂಡವ ಭಗವಂತನೆದುರು ತಲೆಬಾಗಿ ನಿಂತ. ’ನಾನು ಶರಣಾಗತನಾಗಿದ್ದೇನೆ’ ಎಂದ. ಅಹಂಕಾರ ಭಾವ ಶೂನ್ಯವಾದೊಡನೆ ಅವನು ಶಕ್ತಿಯ ಸ್ರೋತವೇ ಆದ. ತನ್ನೊಳಗಿನ ಶಕ್ತಿಯ ಮೇಲೆ ಅವನಿಗೆ ವಿಶ್ವಾಸ ಉದಿಸಿತು. ಅವನೀಗ ಮತಗಳ ಆಚರಣೆಯಿಂದ ಮೇಲೇರಿ ನಿಂತ. ಪಕ್ಕಾ ಸಸ್ಯಾಹಾರಿಯಾಗಿದ್ದವ ಬದುಕಲೆಂದು ಹಸಿ ಮೀನನ್ನು ತಿಂದ. ಮೀನಿನ ರೂಪದಲ್ಲಿ ಬಂದು ಜೀವ ಉಳಿಸಿದ ಭಗವಂತನಿಗೆ ವಂದಿಸಿದ! ಮರುಕ್ಷಣವೇ ದೊಡ್ಡದೊಂದು ಶಾರ್ಕ್ ಮೇಲಕ್ಕೆ ರೆಕ್ಕೆ ಅಪ್ಪಳಿಸಿ, ಅವನ ಆಹಾರ ದಾಸ್ತಾನೆಲ್ಲ ಕವುಚಿ ಹಾಕಿತು. ಆಗಲೂ ತನಗೆ ಹೋರಾಡಲು, ತನ್ನನ್ನು ಕಂಡುಕೊಳ್ಳಲು ಅವಕಾಶ ಕೊಟ್ಟೆಯಲ್ಲ ಎಂದು ಭಗವಂತನಿಗೆ ಮತ್ತೆ ಮತ್ತೆ ನಮಿಸಿದ! ಇಡಿಯ ಚಿತ್ರ ಹೀಗೆಯೇ ಬದುಕಿನ ಏರುಪೇರುಗಳ ಸಂಕಲನ. ಈ ಉಬ್ಬುತಗ್ಗುಗಳಲ್ಲೂ ನೆಮ್ಮದಿಯ ಬದುಕಿಗಾಗಿ ಹಂಬಲಿಸುವ ಜೀವನದ ಚಿತ್ರಣ.

ಪೈ ಅನಂತರವೂ ಕಾಡುತ್ತ ಉಳಿಯೋದು ಅದಕ್ಕೇ. ಆತ ಯಾವುದನ್ನೂ ನಮ್ಮ ಮೇಲೆ ಹೇರುವುದಿಲ್ಲ. ಮೇಲ್ನೋಟಕ್ಕೆ ಕಾಣುವ ಧಾರ್ಮಿಕ ವಿಚಾರಗಳನ್ನು, ಅದರಲ್ಲಿ ಕಂಡುಬರುವ ಅಸಂಬದ್ಧತೆಗಳನ್ನು ಜಗ್ಗಾಡುತ್ತ ಉಳಿಯುವುದಿಲ್ಲ. ನೀವು ದೇವರನ್ನು ನಂಬಿ ಎಂತಲೂ ಹೇಳುವುದಿಲ್ಲ, ನಂಬಬೇಡಿರಿ ಎನ್ನುವುದೂ ಇಲ್ಲ. ಹೊರಗಿನ ವಿದ್ಯಮಾನಗಳಿಗೆ ವಿಜ್ಞಾನ ಸಮರ್ಥ ಉತ್ತರ ನೀಡಬಲ್ಲದೇ ಹೊರತು ಒಳಗಿನ ಉತ್ಪಾತಗಳಿಗಲ್ಲ ಎಂಬುದನ್ನು ಮಾತ್ರ ನಮಗೆ ಒಪ್ಪಿಸುತ್ತಾನೆ. ನಾವು ಊಹಿಸಲಾಗದ ರತ್ನದ ಗಣಿ ಪ್ರಕೃತಿ. ನಮ್ಮ ಗ್ರಹಿಕೆಗೆ ನಿಲುಕುವಷ್ಟನ್ನು ಮಾತ್ರ ನಾವು ಒಪ್ಪುತ್ತೇವೆ, ಅನುಭವಿಸುತ್ತೇವೆ ಎಂಬುದನ್ನು ಸಿದ್ಧಪಡಿಸುತ್ತಾನೆ. ಕೊನೆಗೆ ಬದುಕಿಗೊಂದು ಗಮ್ಯವಿರಬೇಕು. ಅದನ್ನು ಸಾಧಿಸಲು ಛಲವಿರಬೇಕು. ಇಲ್ಲವೇ ಹೆದರಿಕೆಯಾದರೂ ಇರಬೇಕು ಎಂಬ ಸೂಕ್ಷ್ಮವನ್ನು ಮರುಸ್ಥಾಪಿಸುತ್ತಾನೆ.

ಅರೆ, ಹೌದಲ್ಲ!? ಹುಲಿಯ ಹೆದರಿಕೆಯಿಂದ ಪೈ ಬದುಕಿದಂತೆ ನಾವೂ ಪಾಪ-ಪುಣ್ಯಗಳ ಹೆದರಿಕೆಯಿಂದ ಬಂಧಿತಗೊಂಡವರಲ್ಲವೆ? ಕೆಲವರು ಭಗವಂತನಿಗೇ ಕೋಪವನ್ನೂ ಆವಾಹಿಸಿ ಹೆದರಿಸಿಟ್ಟರೆ, ಮತ್ತೆ ಕೆಲವರು ಸೈತಾನರ, ರಾಕ್ಷಸರ ಮೂಲಕ ಹೆದರಿಕೆಯನ್ನು ಜೀವಂತವಾಗಿರಿಸಿದರು. ಎಲ್ಲವೂ ಬದುಕನ್ನು ಸುಂದರಗೊಳಿಸಲು ಮಾತ್ರ! ಬದುಕಬೇಕೆಂಬ ಛಲ ಜೀವಂತವಾಗಿರಿಸಲು ಮಾತ್ರ.ಪೈ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟುಬಿಟ್ಟ. ಸೂಕ್ಷ್ಮ ಮನಸ್ಸುಗಳು ಈ ಥ್ರೀ-ಡಿ ಸಿನಿಮಾದ ಮುಂದೆ ಕುಳಿತರೆ ನಾಲ್ಕನೇ ಆಯಾಮವೇನು, ಐದನೇ ಆಯಾಮವನ್ನೂ ಹುಡುಕಿಬಿಡಬಲ್ಲವು. ಇವತ್ತು ಓ ಮೈ ಗಾಡ್ ಅಲ್ಲ, ಥ್ಯಾಂಕ್ ಗಾಡ್ ಅಂತ ಹೇಳಬೇಕೆನ್ನಿಸುತ್ತಿದೆ!

* * * * * * * * *

ಚಿತ್ರಕೃಪೆ : http://t1.gstatic.com

1 ಟಿಪ್ಪಣಿ Post a comment
  1. laxminarayana
    ಜನ 26 2013

    bahala chanagide,

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments