ವಿಷಯದ ವಿವರಗಳಿಗೆ ದಾಟಿರಿ

ಜನವರಿ 22, 2013

1

ರಾಜರಿಲ್ಲದ ರಾಜ್ಯದಲ್ಲಿ ವಂಶಾಡಳಿತದ ಪೋಷಣೆ

‍ನಿಲುಮೆ ಮೂಲಕ

-ಗೋಪಾಲ ಕೃಷ್ಣ

vamshadalitaರಾಜಪ್ರಭುತ್ವದ ನೆರಳು ಮಾಸುವ ಮುನ್ನವೇ, ಕುಟುಂಬ ರಾಜಕಾರಣ ತಲೆ ಎತ್ತುತ್ತಿದೆ. ಪ್ರಜಾಪ್ರಭುತ್ವದ ಹರೆಯದಲ್ಲೇ ಆಶಯಗಳು ಸತ್ತು ಬೀಳುತ್ತಿವೆ.  ಜನಸೇವೆಯೆಂಬ ಟೊಳ್ಳು ಕುದುರೆಗೆ ಹಣ, ಹೆಣ್ಣು, ಅಧಿಕಾರದ ಲೇಪನ ಹಚ್ಚಿ ಹಾದಿ ತಪ್ಪಿಸಲಾಗುತ್ತಿದೆ.  ದೇಶ ವಿಭಜನೆಯ ನಂತರ, ಧರ್ಮದ ಮೂಲಕ ವಿಭಜನೆ, ಇದೀಗ ಜಾತಿ ಜಾತಿಗಳ ನಡುವೆ ವಿಭಜಿಸಿ, ಸಾಮರಸ್ಯದ ಬದಲಿಗೆ ಸಂಘರ್ಷದ ಬೋಧನೆ ನಡೆಯುತ್ತಿದೆ.ಕಾಲು ಮುರಿದ ಕಾರ್ಯಾಂಗ,ಸವೆದು ಹೋದ ಶಾಸಕಾಂಗಗಳ ಮಧ್ಯೆ ಆಮ್ ಆದ್ಮಿ ಕಂಗಾಲಾಗಿದ್ದಾನೆ.

ಇಲ್ಲಿ ದೂರುವುದಾದರೂ ಯಾರನ್ನು? ಸಂತತಿ ರಾಜಕಾರಣದ ಉನ್ನತೀಕರಣಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ವಂಶಾಡಳಿತದ ಫಲ ದೊರೆಯದೆ ಮತ್ತಿನ್ನೇನು ಸಿಕ್ಕೀತು…..? ನಾಗರೀಕ, ಜ್ಞಾನಸಂಪನ್ನ ಸಮಾಜದಲ್ಲಿಯೇ ಜನತಂತ್ರ ವ್ಯವಸ್ಥೆಗೆ ಧಕ್ಕೆಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವುಂಟೇ?ಉದಾತ್ತ ಭಾರತ ಸಂಸ್ಕೃತಿಯನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋದ ಯುವ ಜನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣವನ್ನು ಬಯಸಲಾದೀತೆ? ತಪ್ಪು-ಒಪ್ಪುಗಳಿಗೆ ನಮ್ಮ ಮನಸ್ಸುಗಳು ಒಗ್ಗೂಡದಿರುವಾಗ, ಚಾರಿತ್ರ್ಯವಂತ ಸಮಾಜದ ನಿರೀಕ್ಷೆ ನಮ್ಮ ಭ್ರಮೆಯಲ್ಲವೇ?
ನಾವು ಸ್ವತಂತ್ರರಾಗಿ ಕೇವಲ 65 ವಸಂತಗಳು ಕಳೆದಿವೆಯಷ್ಟೇ.ಎಲ್ಲಾ ವ್ಯವಸ್ಥೆಗಳಲ್ಲೂ ಅತ್ಯಂತ ಕಡಿಮೆ ನ್ಯೂನ್ಯತೆ ಹೊಂದಿರುವುದು ಪ್ರಜಾಪ್ರಭುತ್ವ ಮಾತ್ರ.ಇದನ್ನು ಭಾರತಕ್ಕೆ ಅಳವಡಿಸುವಾಗಲೇ ಹಾದಿ ತಪ್ಪಬಹುದೆಂಬ ದೂರಾಲೋಚನೆಯಿಂದ ಲಿಖಿತ ಸಂವಿಧಾನವನ್ನು ನೀಡಿದವರು ಅಂಬೇಡ್ಕರ್ ಅವರಂತಹ ಮಹನೀಯರು.ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರುವುದನ್ನು ಕಲಿಸಿಕೊಟ್ಟದ್ದು ನಮ್ಮ ನೇತಾರ ವರ್ಗ.ಜನರಿಗೆ ಪರಮಾಧಿಕಾರ ಕೊಟ್ಟಿದ್ದೇನೋ ನಿಜ.ಆದರೆ ಅಧಿಕಾರವನ್ನು ಅನುಭವಿಸುವುದು ಮಾತ್ರ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ.ಜನಪ್ರತಿನಿಧಿಯೊಬ್ಬ ತನ್ನ ಉಸ್ತುವಾರಿಯಾಗಿ ನೇಮಿಸುವುದು, ತನ್ನ ಕುಟುಂಬದ ಸದಸ್ಯರನ್ನೇ ಹೊರತು, ತತ್ವಸಿದ್ಧಾಂತಗಳೊಂದಿಗೆ ಹೋರಾಡಿ ಬಂದ ಕಾರ್ಯಕರ್ತನನ್ನಲ್ಲ.ಒಂದು ಕ್ಷೇತ್ರದ ಜನಪ್ರತಿನಿಧಿ ತನ್ನ ಅವಧಿ ಮುಗಿಯುತ್ತಾ ಬಂದಾಗ ಅಥವಾ ಆತನಿಂದ ರಾಜಕಾರಣ ಮಾಡಲು ಸಾಧ್ಯವಾಗದೇ ಇದ್ದಾಗ, ತನ್ನ ಕುಟುಂಬ ಸದಸ್ಯರಲ್ಲೇ ಇತರರನ್ನು ಉಸ್ತುವಾರಿಯಾಗಿ ನೇಮಿಸುವ ಪರಿಪಾಠ ಬೆಳೆಯುತ್ತಿದೆ.

ಕಳೆದ ಅರವತ್ತೈದು ವರ್ಷಗಳಲ್ಲಿನ ಭಾರತ ರಾಜಕಾರಣವನ್ನು ಗಮನಿಸಿದರೆ, ಕುಟುಂಬ ರಾಜಕಾರಣ ನಿಧಾನವಾಗಿ ಟಿಸಿಲೊಡೆಯುತ್ತಾ ಬರುತ್ತಿದೆ.ಪರಕೀಯರಿಂದ ಬಿಡುಗಡೆ ಪಡೆದ ಆರಂಭದ ಕೆಲವು ದಶಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ರಾಜಕೀಯ ಮತ್ತು ಅಧಿಕಾರದ ಆಯಾ ಕಟ್ಟಿನ ಸ್ಥಳಗಳಲ್ಲಿ ಸ್ಥಾನ ಪಡೆಯುತ್ತಿದ್ದರು.  ಆಗ ಸಂಪೂರ್ಣ ಪ್ರಾಮಾಣಿಕತೆ ಇಲ್ಲದಿದ್ದರೂ, ಭ್ರಷ್ಟಚಾರ, ಅಧಿಕಾರದ ಲಾಲಸೆಗೆ ಪ್ರಾಮುಖ್ಯತೆ ಇರಲಿಲ್ಲ.  ನಂತರದ ದಿನಗಳಲ್ಲಿ ಹೋರಾಟ-ಕಿರುಚಾಟಗಳ ಮೂಲಕ ರಾಜಕೀಯವನ್ನೇ ವೃತ್ತಿಯನ್ನಾಗಿಸಿಕೊಂಡ ವರ್ಗವೊಂದು ಜನ ಪ್ರಾತಿನಿಧ್ಯದಲ್ಲಿ ತಲ್ಲೀನವಾಯಿತು.ಇಲ್ಲಿಯೂ ತನ್ನ ಸೈದ್ಧಾಂತಿಕ ನಿಲುವುಗಳಿಗೆ ಬದ್ಧವಾಗಿ ನಡೆಯುವ ಪರಿಪಾಠ ಬೆಳೆಸಿಕೊಂಡು ಬರಲಾಗಿತ್ತು.  ಈ ವರ್ಗದ ಮುಂದಿನ ತಲೆಮಾರೇ ಕುಟುಂಬ ರಾಜಕಾರಣಕ್ಕೆ ಭದ್ರ ಬುನಾದಿ ಹಾಕುವ ಪ್ರಯತ್ನದಲ್ಲಿದೆ.  ಕಳೆದ ಮೂರು ದಶಕಗಳ ರಾಜಕರಣವನ್ನು ಗಮನಿಸಿದರೆ ಜನತಂತ್ರ ವ್ಯವಸ್ಥೆಯಲ್ಲಿ ವಂಶಾಡಳಿತದ ಪಾಲು ಮೇರೆ ಮೀರುತ್ತಿರುವುದು ಕಂಡು ಬರುತ್ತಿದೆ.  ಜನಪ್ರತಿನಿಧಿಯಂತೆ ಪೋಂಗು ಬಿಡುವ ವರ್ಗವು ರಾಜಕಾರಣವನ್ನು ಒಂದು ವ್ಯವಹಾರವನ್ನಾಗಿ ಮಾರ್ಪಡಿಸಿದೆ.

ಕುಟುಂಬ ರಾಜಕಾರಣವೆಂದರೆ ಮೊದಲಿಗೆ ನಮ್ಮ ಕಣ್ಣ ಮುಂದೆ ಬರುವುದು ನೆಹರು-ಗಾಂಧಿ ಕುಟುಂಬ.ಸ್ವಾತಂತ್ರ್ಯ ಪಡೆದ ನಂತರ ಕಾಂಗ್ರೆಸ್ ವಿಸರ್ಜಿಸುವ ಮಹಾತ್ಮ ಗಾಂಧೀಜಿಯವರ ನಿಲುವಿಗೆ ವಿರೋಧವಾಗಿ ಕಾಂಗ್ರೆಸ್ ಅನ್ನು ಒಂದು ರಾಜಕೀಯ ಪಕ್ಷವನ್ನಾಗಿ ಮುಂದುವರೆಸಿದವರು ನೆಹರು.ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಮೂಲಕ 17 ವರ್ಷಗಳ ಕಾಲ ಅಧಿಕಾರ ಅನುಭವಿಸಿದರು.  ಲಾಲ್ ಬಹದ್ದೂರು ಶಾಸ್ತ್ರಿಯವರು ತಾಷ್ಕೆಂಟ್‍ನಲ್ಲಿ ಅನುಮಾನಸ್ಪದ ಸಾವಿಗೀಡಾದ ನಂತರ ಕಾಂಗ್ರೆಸ್ ಮೇಲೆ ಬಿಗಿ ಹಿಡಿತ ಸಾಧಿಸಿದ ಇಂದಿರಾಗಾಂಧಿಯವರು 16 ವರ್ಷಗಳು ಭಾರತದ ಪ್ರಧಾನಿಯಾಗಿದ್ದರು.ಇಂದಿರಾ ಹತ್ಯೆಯ ಅನುಕಂಪವನ್ನು ಬಂಡವಾಳ ಮಾಡಿಕೊಂಡ ರಾಜೀವ್ ಗಾಂಧಿ ಐದು ವರ್ಷಗಳು ಭಾರತದ ಪ್ರಧಾನಿಯಾಗಿ ಮೆರೆದರು.  ಅಂದರೆ ನೆಹರು-ಗಾಂಧಿ ಕುಟುಂಬವೊಂದೇ ಭಾರತವನ್ನು ಬರೋಬ್ಬರಿ 38 ವರ್ಷಗಳ ಕಾಲ ಆಳಿದೆ.  ಇದರ ಮುಂದುವರೆದ ಭಾಗವೆಂದರೆ, ಮುಂಬರುವ 2014ರ ಚುನಾವಣೆಯ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಲಿರುವ ರಾಹುಲ್ ಗಾಂಧಿ ಮತ್ತು ಸಾರ್ವಜನಿಕವಾಗಿ ತನ್ನ ಅಜ್ಜಿಯಂತೆ ವೇಷ ಧರಿಸಿ ‘ಜೂನಿಯರ್ ಇಂದಿರಾ’ ಎನ್ನುವಂತೆ ಬಿಂಬಿಸಿಕೊಳ್ಳುವ ಪ್ರಿಯಾಂಕ ಗಾಂಧಿ.  ತನ್ನ ಕುಟುಂಬದ ‘ರಾಜಕೀಯ ತವರು’ ಉತ್ತರಪ್ರದೇಶ ಚುನಾವಣೆಯಲ್ಲಿ ಮುಗ್ಗರಿಸಿದರೂ, ಪ್ರಧಾನಿ ಅಭ್ಯರ್ಥಿಯಾಗಲು ರಾಹುಲ್ ಗಾಂಧಿಯವರಿಗಿರುವ ಏಕೈಕ ಅರ್ಹತೆ ಕುಟುಂಬದ ಹಿನ್ನೆಲೆ.  ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶವೆಂದರೆ, 2004ರಿಂದಲೂ ಅಧಿಕಾರದಲ್ಲಿರುವ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಸರ್ಕಾರದ ಹಿಂದಿರುವುದು ಇದೇ ಕುಟುಂಬದ ಸೋನಿಯಾಗಾಂಧಿ.ಭಾಜಪದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತಿರುವ ಮನೇಕಾ ಗಾಂಧಿ ಮತ್ತು ಅವರ ಪುತ್ರ ವರುಣ್ ಗಾಂಧಿ ಸಹ ಕುಟುಂಬ ರಾಜಕಾರಣದ ಫಲಶೃತಿಗಳೇ.

ಇನ್ನು ರಾಜ್ಯಗಳ ಕಡೆ ಗಮನ ಹರಿಸಿದರೆ ಕುಟುಂಬ ರಾಜಕಾರಣದ ಪ್ರಾಬಲ್ಯ ಪ್ರಶ್ನಿಸದಿರುವ ಮಟ್ಟಕ್ಕೆ ಬೆಳೆದಿದೆ.ಆಂಧ್ರದಲ್ಲಿ ಎನ್.ಟಿ.ಆರ್,ಕರ್ನಾಟಕದಲ್ಲಿ ದೇವೇಗೌಡರು, ಒರಿಸ್ಸಾದಲ್ಲಿ ಪಟ್ನಾಯಕ್, ಹರ್ಯಾಣದಲ್ಲಿ ಹೂಡಾ, ಮಧ್ಯಪ್ರದೇಶದ ಸಿಂಧಿಯಾ, ದಂಗಿ, ಉತ್ತರಪ್ರದೇಶದ ಯಾದವ್(ಎಲ್ಲರನ್ನೂ ಮೀರಿಸಿ, ಅಖಿಲೇಷ್ ಯಾದವ್ ಮುಖ್ಯಮಂತ್ರಿಯಾದದ್ದು), ಚೌಧರಿ, ಮಹಾರಾಷ್ಟ್ರದ ಪವಾರ್, ಪಾಟೀಲ್, ಠಾಕ್ರೆ ಜಮ್ಮು ಕಾಶ್ಮೀರದ ಅಬ್ದುಲ್ಲಾ, ಪಂಜಾಬ್‍ನ ಬಾದಲ್, ತಮಿಳುನಾಡಿನ ಕರುಣಾನಿಧಿ ಕುಟುಂಬಗಳು ತಮ್ಮ ತಮ್ಮ ರಾಜ್ಯದಲ್ಲಿ ವಂಶಪಾರಂಪರ್ಯ ರಾಜಕಾರಣದ ನೆಲೆಗಟ್ಟನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

ಎಲ್ಲಾ ವ್ಯವಸ್ಥೆಗಳಂತೆಯೇ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿಯೂ ನ್ಯೂನ್ಯತೆಗಳಿವೆ.  ಅದನ್ನು ಒಪ್ಪಬಹುದು.ಆದರೆ ಮುಂಬರುವ ಚುನಾವಣೆಗಳಿಗೆ ನಡೆಯುತ್ತಿರುವ ತಯಾರಿಯನ್ನು ಗಮನಿಸಿದರೆ ಜನತಂತ್ರ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ ಬುತ್ತಿಯಂತಿದೆ.  ಈಗಿರುವ ವಿಧಾನ ಸಭಾ ಮತ್ತು ಲೋಕಸಭಾ ಸದಸ್ಯರುಗಳೇ ಮುಂದಿನ ಅವಧಿಗೂ ಅಭ್ಯರ್ಥಿಗಳಾಗಲಿದ್ದು, ಈಗಾಗಲೇ ಅಸುನೀಗಿರುವ ರಾಜಕಾರಣಿಗಳ ಪತ್ನಿಯರು, ಪುತ್ರರು, ಪುತ್ರಿಯರು, ಸಂಬಂಧಿಕರು ಅವರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.ಇದು ಹೀಗೆ ಮುಂದುವರಿದರೆ, 10-15 ವರ್ಷಗಳಲ್ಲಿ ಸಾಮಾನ್ಯ ಜನರು ಚುನಾವಣೆ ಎದುರಿಸುವುದು ಕನಸಿನ ಮಾತಾಗುತ್ತದೆ.

ಸದ್ಯ ಲೋಕಸಭಾ ಸದಸ್ಯರ ಸಂಖ್ಯೆ 545.ಇದರಲ್ಲಿ ಶೇ.28ರಷ್ಟು ಜನ ವಂಶಪಾರಂಪರ್ಯ ರಾಜಕಾರಣದ ಕುಡಿಗಳೇ.35 ವರ್ಷ ವಯಸ್ಸಿಗಿಂತ ಕೆಳಗಿನ ಲೋಕಸಭಾ ಸದಸ್ಯರೆಲ್ಲರೂ ರಾಜಕೀಯ ಹಿನ್ನೆಲೆಯುಳ್ಳವರು.40ರ ಆಸುಪಾಸಿನ ವಯಸ್ಸಿನ ಲೋಕಸಭಾ ಸದಸ್ಯರಲ್ಲಿ ಮೂರನೇ ಎರಡರಷ್ಟು ರಾಜಕೀಯ ಕುಟುಂಬದವರು.ಕುಟುಂಬ ರಾಜಕಾರಣದಲ್ಲಿ ಪಾರುಪತ್ಯ ಮೆರೆಯುತ್ತಿರುವುದು ಕಾಂಗ್ರೆಸ್ ಪಕ್ಷ.ಕಾಂಗ್ರೆಸ್‍ನ 207 ಲೋಕಸಭಾ ಸದಸ್ಯರಲ್ಲಿ ಶೇ.37ರಷ್ಟು ಜನ ರಾಜಕಾರಣಿಗಳ ಉತ್ತರದಾಯಿತ್ವವನ್ನು ಪಡೆದವರು.ಇನ್ನು ಪ್ರಾದೇಶಿಕ ಪಕ್ಷಗಳ ಮುಖಾಂತರ ಆಯ್ಕೆಯಾಗಿ ಬಂದ ಲೋಕಸಭಾ ಸದಸ್ಯರುಗಳಲ್ಲಿ ಶೇ.30 ರಿಂದ ಶೇ.40ರಷ್ಟಾದರೂ ಪ್ರಬಲ ಕುಟುಂಬದವರಿದ್ದಾರೆ.  ಇದು 2009ರ ಲೋಕಸಭಾ ಚುನಾವಣೆಯಲ್ಲಿ ಆರಿಸಿ ಬಂದಿರುವವರ ವಿವರವಷ್ಟೇ.

2014ರ ಚುನಾವಣೆಗಾಗಿ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಲು ನಡೆಯುತ್ತಿರುವ ತಯಾರಿ ಗಮನಿಸಿದರೆ,ಸಾಮಾನ್ಯರಿಗೆ ರಾಜಕೀಯ ಸಾಧ್ಯವೇ ಇಲ್ಲವೆನ್ನುವಂತಾಗಿದೆ.ಪಕ್ಷಗಳೂ ಸಹ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಬಿ-ಫಾರಂ ನೀಡಲು ಪರಿಗಣಿಸುತ್ತಿರುವುದರಲ್ಲಿ ಕೌಟುಂಬಿಕ ಹಿನ್ನೆಲೆಯು ಪ್ರಮುಖವಾಗಿದೆ.  ಹದಿನೈದನೇ ಲೋಕಸಭೆಯಲ್ಲೇ ಶೇ.28ರಷ್ಟನ್ನು ಮೀರಿರುವ ಕುಟುಂಬ ರಾಜಕಾರಣ, ಬಹುಶ: ಇನ್ನೆರಡು ಮಹಾಚುನವಾಣೆಗಳಲ್ಲಿ ಶೇ.60ರಷ್ಟನ್ನು ಮೀರುವ ಸಾಧ್ಯತೆ ಇದೆ.  ಇದು ರಾಷ್ಟ್ರ ರಾಜಕಾರಣದ ವ್ಯಥೆಯಾದರೆ, ಇನ್ನು ರಾಜ್ಯ ವಿಧಾನಸಭೆಗಳ ಚುನಾವಣೆ ಮತ್ತಷ್ಟು ಕೈ ಮೀರಿ ಹೋಗಿದೆ.  ಮುಂಬರುವ ಕರ್ನಾಟಕ ಚುನಾವಣೆಯನ್ನು ಗಣನೆಗೆ ತೆಗೆದುಕೊಂಡರೆ, 224 ಕ್ಷೇತ್ರಗಳಿಗೆ ಅಭ್ಯರ್ಥಿಗಳಾಗುವವರಲ್ಲಿ ಬಹುತೇಕರು ಕೌಟುಂಬಿಕ ಹಿನ್ನೆಲೆಯವರು.  ಈಗಿರುವ ಇನ್ನೂರಿಪ್ಪತ್ನಾಲ್ಕು ಶಾಸಕರುಗಳು ಆಯಾ ಪಕ್ಷಗಳಿಂದ ಸ್ಪರ್ಧಿಸುವುದು ಖಚಿತ.  ಇನ್ನು ಇಪ್ಪತ್ತೈದು ಸಾವಿರ ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿರುವವರಿಗೆ ಪುನ: ಅವಕಾಶ ಕೊಡುವುದು ಪಕ್ಷಗಳ ವಾಡಿಕೆಯಾಗಿದೆ.  ಇನ್ನು ಪ್ರಭಾವಿ ಸಚಿವರು, ಶಾಸಕರುಗಳು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ತಮ್ಮ ಕುಟುಂಬಸ್ಥರಿಗೆ ನೆಲೆ ಮಾಡಿಕೊಡಲು ಪ್ರಯತ್ನ ಮುಂದುವರೆಸಿದ್ದಾರೆ.  ತತ್ವ ಸಿದ್ಧಾಂತವೆನ್ನುವ ಪಕ್ಷಗಳ ಬಿ-ಫಾರಂ ಈ ರೀತಿ ಬಿಕರಿಯಾದರೆ, ಸಾಮಾನ್ಯ ಪ್ರಜೆಯೊಬ್ಬ ಪಕ್ಷೇತರನಾಗಿಯೇ ಚುನಾವಣೆ ಎದುರಿಸಬೇಕಾಗುತ್ತದೆ.ತನ್ನ ಸೈದ್ಧಾಂತಿಕ ನಿಲುವುಗಳನ್ನು ಪ್ರದರ್ಶಿಸಲು ಸಾಧ್ಯವಾಗದ ಪಕ್ಷೇತರನೊಬ್ಬ ಚುನಾವಣೆಯನ್ನು ಗೆದ್ದಾನೆಯೇ? ಗೆದ್ದರೂ, ಬೆರಳೆಣಿಕೆಯಷ್ಟು ಮಂದಿಯಿಂದ ನಿರೀಕ್ಷೆಯನ್ನಿಟ್ಟುಕೊಳ್ಳುವುದಾದರು ಹೇಗೆ?

ಇದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮಾತ್ರವಲ್ಲ. ಇಡೀ ವಿಶ್ವವನ್ನೇ ಆವರಿಸಿಕೊಳ್ಳುತ್ತಿದೆ.ನೇಪಾಳದಲ್ಲಿ ಕೋಯಿರಾಲಾ ಕುಟುಂಬ, ಪಾಕಿಸ್ತಾನದ ಭುಟ್ಟೋ ಕುಟುಂಬ,  ಶ್ರೀಲಂಕಾದಲ್ಲಿ ಚಂದ್ರಿಕಾ ಕುಮಾರತುಂಗೆ, ಬಾಂಗ್ಲಾದೇಶದ ಶೇಕ್ ಹಸೀನಾ ಎಲ್ಲರೂ ತಮ್ಮ ಕುಟುಂಬದ ಅಧಿಕಾರವನ್ನು ಮುಂದುವರೆಸಿಕೊಂಡು ಹೋಗುವ ವಾರಸುದಾರರುಗಳೇ.  ಇನ್ನು ಅಮೇರಿಕಾದಲ್ಲಿಯೂ ಅಷ್ಟೇ, ಎಂಟು ವರ್ಷ ಅಧಿಕಾರ ನಡೆಸಿದ ಜಾರ್ಜ್ ಬುಷ್, ಮುಂದಿನ ಅವಧಿಗೆ ಅಧ್ಯಕ್ಷೆಯಾಗಲು ಪ್ರಯತ್ನಿಸಲಿರುವ ಹಿಲರಿ ಕ್ಲಿಂಟನ್ ಅವರು ಸಹ ಕುಟುಂಬದ ಪ್ರಭಾವದಿಂದಲೇ ರಾಜಕೀಯಕ್ಕಿಳಿದವರು. ಥೈಲ್ಯಾಂಡ್‍ನ ಯಂಗಲಕ್ ಶಿನವಾತ್ರ ಸೇರಿ, ಬಹುತೇಕ ಜನತಂತ್ರ ವ್ಯವಸ್ಥೆಯ ರಾಷ್ಟ್ರಗಳಲ್ಲಿ ವಂಶಪಾರಂಪರ್ಯ ಮೇರೆ ಮೀರಿದೆ.

ಇದು ಜನತಂತ್ರ ವ್ಯವಸ್ಥೆಯನ್ನು ಅಣಕಿಸಿ, ಇಡೀ ವಿಶ್ವವನ್ನೇ ಆವರಿಸಿಕೊಳ್ಳುತ್ತಿರುವ ‘ಸೈಲೆಂಟ್ ಪಾಯಿಸನ್’.  ಪರಿಣಾಮ, ಪ್ರಜಾಪ್ರಭುತ್ವವೆನ್ನುವುದು ವಂಶಪ್ರಭುತ್ವವಾಗಿ ಬದಲಾಗುತ್ತಿದೆ.ರಾಜಪ್ರಭುತ್ವವನ್ನು ತಿರಸ್ಕರಿಸಿ ಇನ್ನು ಒಂದು ಶತಮಾನವನ್ನೂ ಮುಟ್ಟಲಾಗಿಲ್ಲ.  ಅದಾಗಲೇ ಕುಟುಂಬ ರಾಜಕಾರಣ ಪ್ರಬಲವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.  ಹಣ, ಧರ್ಮ, ಜಾತಿಯ ಜೊತೆಗೆ ಅಭ್ಯರ್ಥಿಯ ಕುಟುಂಬದ ಹಿನ್ನೆಲೆಯನ್ನು ನೋಡಿ ಮತ ಹಾಕಿ, ಪದೇ ಪದೇ ಅವರನ್ನೇ ಪ್ರತಿನಿಧಿಗಳನ್ನಾಗಿ ಮಾಡುತ್ತಿರುವ ನಾವು ಬದಲಾವಣೆಯನ್ನು ಬೇಡುವುದು ಮರೀಚಿಕೆ ಎನಿಸುವುದಿಲ್ಲವೇ?

1 ಟಿಪ್ಪಣಿ Post a comment
  1. raghavendra
    ಜನ 22 2013

    congress think that making a PM of India..is like making HERO in film industry..let them keep Rahul as hero in congress home..not in INDIA..!we will not support him…stop your non sense..!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments