ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 14, 2013

34

ವ್ಯಾಲೆಂಟೈನ್ಸ್ ಡೇ ಮತ್ತು ಅದರ ಒಳ ಸುಳಿಗಳು

‍ನಿಲುಮೆ ಮೂಲಕ

ಮಹೇಶ್ ಪ್ರಸಾದ್ ನೀರ್ಕಜೆ

ವ್ಯಾಲೆಂಟೈನ್ಸ್ ಡೇಹೌದ್ರೀ, ನಾನು ಕನ್ನಡ ಪ್ರೇಮಿಯೇ. ಇಂಗ್ಲಿಷ್ ವ್ಯಾಮೋಹದಿಂದ ಶೀರ್ಷಿಕೆಯಲ್ಲಿ ‘ಪ್ರೇಮಿಗಳ ದಿನ’ ಅನ್ನದೇ ವ್ಯಾಲೆಂಟೈನ್ಸ್ ಡೇ ಅಂದಿದ್ದಲ್ಲ. ಪ್ರೇಮಿಗಳ ದಿನ ಅಂತ ಹೇಳದೇ ಇದ್ದಿದ್ದಕ್ಕೆ ಕಾರಣ ತುಂಬಾ ಇದೆ. ಯಾಕೆಂದರೆ ವ್ಯಾಲೆಂಟೈನ್ಸ್ ಡೇ ಎನ್ನುವುದರ ಅರ್ಥ ನಾವೆಲ್ಲರು ತಿಳಿದಿರುವಂತೆ ಪ್ರೇಮಿಗಳ ದಿನ ಅಲ್ಲ! ಅದು ಹೇಗೆ ಅಂತ ಹೇಳುವ ಮೊದಲು ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಸಾಮಾನ್ಯವಾಗಿ ವ್ಯಾಲ್ಲೆಂಟೈನ್ಸ್ ಡೇ ವಿರೋಧಿಸುವ ಬಲ ಪಂಥೀಯರಿಗೂ, ಅಥವಾ ಏನೇ ಇದ್ದರೂ ವ್ಯಾಲೆಂಟೈನ್ಸ್ ಡೇ ಎನ್ನುವುದನ್ನು ಮಾನವತೆಯ ಮಟ್ಟಕ್ಕೆ ಎತ್ತರಿಸಿ ಸಮರ್ಥಿಸುವ ಎಡ ಪಂಥೀಯರಿಗೂ (ಕೆಲ ಎಡಪಂಥೀಯರು ಕೂಡ ಬೇರೆ ಕಾರಣಕ್ಕೆ ವ್ಯಾಲೆಂಟೈನ್ಸ್ ಡೇ ವಿರೋಧಿಸುತ್ತಾರೆ) ಈ ಬರಹ ಅಪಥ್ಯವಾಗಬಹುದು. ನನ್ನ ಪ್ರಯತ್ನವೇನಿದ್ದರೂ ಇವೆರಡನ್ನು ಬಿಟ್ಟು ಅವುಗಳಿಗಿಂತಲೂ ಮೇಲಿನ ಮಟ್ಟದಲ್ಲಿ ಮೂರನೇ ದೃಷ್ಟಿಕೋನವೊಂದನ್ನು ಅನ್ವೇಷಿಸುವುದು.

ಮೊದಲನೆಯದಾಗಿ ವ್ಯಾಲೆಂಟೈನ್ಸ್ ಡೇ ಮೂಲ ಕೆದಕಿದರೆ ನಮಗೆ ಇತಿಹಾಸದಲ್ಲಿ ಸಿಗುವುದು ಒಬ್ಬ ಪ್ರೇಮಿಯೋ ರಸಿಕನೋ ಅಥವಾ ಒಂದು ಪೌರಾಣಿಕ ಕಥೆಯ ಜನಪ್ರಿಯ ಪಾತ್ರವೋ ಅಲ್ಲ. ವ್ಯಾಲೆಂಟೈನ್ಸ್ ಎಂಬುದು ಮೂಲತಹ ಒಬ್ಬ ಸಂತನ ಹೆಸರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕ್ರಿಶ್ಚಿಯಾನಿಟಿ ಇನ್ನೂ ಪಸರಿಸುತ್ತಿದ್ದ ಕಾಲದಲ್ಲಿ ಪೆಗನರ (ಶಬ್ದಾರ್ಥ : ಅನಾಗರಿಕ) ಕೈಯಲ್ಲಿ ಸಾಯುತ್ತಿದ್ದ ಕ್ರೈಸ್ತ ಸಂತರನ್ನು ವ್ಯಾಲೆಂಟೈನ್ ಎಂದು ಕರೆಯಲಾಗುತ್ತಿತ್ತಂತೆ. ಅಂತಹವರಲ್ಲಿ ಮೊಟ್ಟಮೊದಲಾಗಿ ವ್ಯಾಲೆಂಟೈನ್ಸ್ ಎಂದು ಕರೆಯಲ್ಪಟ್ಟವನು ಸಂತ ಟೆರ್ನಿ ಎಂಬಾತ. ಈತ ಹುತಾತ್ಮನಾಗಿದ್ದು ಕ್ರಿ. ಶ. 197 ರಲ್ಲಿ.  ಇನ್ನೊಬ್ಬ ಸಂತ ರೋಮಿನ ವ್ಯಾಲೆಂಟೈನ್ ಅಂತೆ. ಈತ ಕ್ರಿ. ಶ. 269 ರಲ್ಲಿ ಹುತಾತ್ಮನಾದವನಂತೆ. ಈತ ಅರೆಲಿಯನ್ ಎಂಬ ರಾಜನಿಂದ ಕೊಲ್ಲಲ್ಪಟ್ಟವನು. ಇಲ್ಲಿ ಹುತಾತ್ಮನಾಗುವುದು ಎಂದರೆ ಕೆಲವು ಮಧ್ಯಕಾಲೀನ ಪೌರಾಣಿಕ ಕಥೆಗಳ ಪ್ರಕಾರ ಆ ಕಾಲದಲ್ಲಿ ಪೆಗನರಾದ ರೋಮನ್ನರನ್ನು ಕ್ರೈಸ್ತ ಮತಕ್ಕೆ ತರಲು ಕ್ರೈಸ್ತರು ಶ್ರಮಿಸುತ್ತಿದ್ದರೆ, ಕ್ರೈಸ್ತರನ್ನು ಮರಳಿ ಪೆಗನ್ ರನ್ನಾಗಿ ಮಾಡಲು ರೋಮನ್ನರು ಪ್ರಯತ್ನಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಪೆಗನರಿಂದ ಅಥವಾ ರೋಮನ್ ದೊರೆಗಳ ಕೈಯಲ್ಲಿ ಕೊಲ್ಲಲ್ಪಟ್ಟ ಕ್ರೈಸ್ತ ಸಂತರೇ ಹುತಾತ್ಮರು ಅಥವಾ ವ್ಯಾಲೆಂಟೈನ್. ಅಂತಹ ಸಂತರ ಹೆಸರಾದ ವ್ಯಾಲೆಂಟೈನ್ ಎಂಬ ಮೂಲದಿಂದ ಹುಟ್ಟಿದ್ದೇ ವ್ಯಾಲೆಂಟೈನ್ಸ್ ಡೇ. ಹೀಗೆ ಎಲ್ಲಿ ಹುಡುಕಿದರೂ ಈ ಸಂತರಿಗೂ ಈಗಿನ ವ್ಯಾಲೆಂಟೈನ್ ಡೇ ನಲ್ಲಿ ಕೇಳಿಬರುವ ಪ್ರೀತಿ ಪ್ರೇಮದ ಕಥೆಗಳಿಗೂ ಸಂಬಂಧವೇ ಇಲ್ಲ. ಇರುವ ಒಂದೇ ಒಂದು ಸಂಬಂಧವೆಂದರೆ ಹುತಾತ್ಮರಾದ ವ್ಯಾಲೆಂಟೈನ್ ರು ರೋಮನ್ ಸೇನೆಯ ಕೆಲವು ಸೈನಿಕರಿಗೆ ರಹಸ್ಯವಾಗಿ ಮದುವೆ ಮಾಡಿಸಿ ಕೊಟ್ಟಿದ್ದು. ಆ ಕಾಲದಲ್ಲಿ ಸೈನಿಕರಿಗೆ ಮದುವೆಯಾಗುವುದು ನಿಷಿಧ್ಧವಾಗಿತ್ತು. ಈ ಕಥೆಯೂ ಕೂಡ ಕೆಲವು ಕಡೆ ಪ್ರಚಲಿತದಲ್ಲಿದೆಯೇ ಹೊರತು ಇವಕ್ಕೆ ಪುರಾವೆಗಳಿಲ್ಲ. ಒಂದುವೇಳೆ ಈ‌ ಕಥೆ ನಿಜವಾಗಿದ್ದರೂ ಈ ಕಥೆಯಲ್ಲಿನ ಮುಖ್ಯ ವಸ್ತು ಕ್ರೈಸ್ತ ಸಂತನೊಬ್ಬ ಹುತಾತ್ಮನಾಗಿದ್ದೇ ಹೊರತು ಪ್ರೀತಿ ಪ್ರೇಮವಂತೂ ಅಲ್ಲವೇ ಅಲ್ಲ. ಇತಿಹಾಸಕಾರರ ಪ್ರಕಾರ ಇಂತಹ ಪ್ರೀತಿ ಪ್ರೇಮದ ಕಥೆಗಳು  ಹುಟ್ಟಿಕೊಂಡದ್ದು, ಹೆಚ್ಚು ಪ್ರಚಲಿತವಾದ್ದು ತೀರ ಇತ್ತೀಚೆಗೆ, ಅಂದರೆ ಸುಮಾರು ಹದಿನಾಲ್ಕನೇ ಶತಮಾನದಲ್ಲಿ.

ನಮ್ಮಲ್ಲಿ ಒಂದು ಕಾಮನ್ ಸೆನ್ಸ್ ಇದೆ. ಅದೇನೆಂದರೆ ನಮ್ಮ  ಮಾತಿಗೂ ಕೃತಿಗೂ ಒಂದು ಸಂಬಂಧವಿರಬೇಕು. ಅಂದರೆ ಉದಾಹರಣೆಗೆ ನಾವು ಒಬ್ಬಾತನ ಹುಟ್ಟಿದ ಹಬ್ಬದಂದೇ ಹುಟ್ಟುಹಬ್ಬದ ಶುಭಾಶಯ ಹೇಳಬೇಕೇ ಹೊರತಾಗಿ ಆತ ಪತ್ನಿಯನ್ನು ಅಥವಾ ಮಕ್ಕಳನ್ನು ಕಳೆದುಕೊಂಡ ದಿನದಂದು ಅಲ್ಲ. ಆದರೆ ನಾವು ಮಾಡುತ್ತಿರುವುದೇನು! ಒಬ್ಬ ಮತಪ್ರಚಾರಕ್ಕಾಗಿ ಜೀವ ಕಳೆದುಕೊಂಡ ಸಾಧುವೊಬ್ಬನ ಹೆಸರಿನಲ್ಲಿ ಪ್ರೇಮಿಗಳ ದಿನ ಆಚರಿಸುತ್ತಿದ್ದೇವೆ! ಇದು ಎರಡು ಕಾರಣಕ್ಕಾಗಿ ಆಭಾಸವೆನಿಸುತ್ತದೆ. ಒಂದು, ಆತ ಪ್ರೇಮಿಯಾಗಿರಲಿಲ್ಲ, ಬದಲಾಗಿ ಸಂತನಾಗಿದ್ದ. ಎರಡನೇಯದಾಗಿ, ವ್ಯಾಲೆಂಟೈನ್ ಎಂಬ ಹೆಸರು ಬಂದಿದ್ದು ಮತಪ್ರಚಾರಕ್ಕಾಗಿ ದೇಹ ತ್ಯಾಗ ಮಾಡಿದವರಿಗೆ. ಇದು ಶೋಕದ ವಿಷಯ ಹೊರತಾಗಿ ಇಲ್ಲಿ ಸಂಭ್ರಮಿಸುವಂಥದ್ದೇನಿದೆ! ಈ ಎರಡೂ ಕಾರಣಗಳನ್ನು ಅವಲೋಕಿಸಿದಾಗ ಏನೇನೂ ಅರ್ಥವಿಲ್ಲದ ಅಚರಣೆಯೊಂದನ್ನು ಏನೇನೂ ಸಂಬಂಧವಿಲ್ಲದ ಹೆಸರಿನಲ್ಲಿ ಆಚರಿಸುತ್ತಿರುವುದು ದಿಟ. ಈ ಮೊದಲು ಪ್ರಸ್ತಾಪಿದಂತೆ ವ್ಯಾಲೆಂಟೈನ್ ದಿನವನ್ನು ಬೆಂಬಲಿಸುವ, ವಿಚಾರವಾದಿಗಳೆನಿಸಿಕೊಂಡ ಕೆಲವು ಎಡಪಂಥೀಯರು ಈ ಬಗ್ಗೆ ಏನೆನ್ನುತ್ತಾರೆ? ಹಿಸ್ಟಾರಿಕಲ್ ಹಿನ್ನೆಲೆ ಏನಿದೆಯೋ ಗೊತ್ತಿಲ್ಲ, ಆದರೆ ಈಗ ಜನ ವ್ಯಾಲೆಂಟೈನ್ಸ್ ಡೇ ಅಂದರೆ ಪ್ರೇಮಿಗಳ ದಿನ ಅಂದುಕೊಂಡಿದ್ದಾರೆ, ಆದ್ದರಿಂದ ಹಾಗೆಯೇ ಆಚರಿಸಲಿ ಬಿಡಿ ಅನ್ನಬಹುದು. ಅದೇ ವಾದವನ್ನು ಮುಂದುವರೆಸಿ ಗಾಂಧೀಜಿ ಹುಟ್ಟಿದ ದಿನ ದೇಶದಲ್ಲಿ ಶೋಕಾಚರಣೆ ಮಾಡಿದರೆ ಹೇಗಿರುತ್ತದೆ ಎಂದು ಯೋಚಿಸಬೇಕು. ಅದಕ್ಕೇ ಹೇಳಿದ್ದು, ಕಾಮನ್ ಸೆನ್ಸ್ ಇದ್ದವರಿಗೆ ತಾವು ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿರಬೇಕು ಅಂತ. ಇಲ್ಲದಿದ್ದರೆ ಅದು ಆಭಾಸವಾಗುತ್ತದೆ. ವ್ಯಾಲೆಂಟೈನ್ಸ್ ಡೇ ವಿಚಾರದಲ್ಲೂ ಅದೇ ಆಗಿರುವುದು.

ಇನ್ನು ಮತಾಂತರ ವಿಚಾರಕ್ಕೆ ಬರೋಣ. ಇವ್ನೊಬ್ಬ ಪಕ್ಕಾ ಕೋಮುವಾದಿ, ಎಲ್ಲಾ ವಿಚಾರಗಳಲ್ಲೂ ಇವ್ನು ಧರ್ಮ, ಮತ ಅಂತ ಇನ್ನೇನೋ ವಿಚಾರಗಳನ್ನ ಎಳೆದು ತರ್ತಾನಲ್ಲ ಅಂತ ನೀವು ಹೇಳೋದಾದ್ರೆ ಅದಕ್ಕೆ ನನ್ನ ಉತ್ತರ ಕೂಡ ಇಲ್ಲಿದೆ. ಕೆಲವು ಕ್ರೈಸ್ತರು ಈಗಲೂ ಮತಾಂತರವನ್ನು ಬೆಂಬಲಿಸುತ್ತಾರೆ ತಾನೆ. ಚಿ.ಮೂ. ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸಲಾದ ಪ್ರಕರಣವಾದ ಮೇಲಂತೂ ಮತಾಂತರ ಚರ್ಚೆ ಮತ್ತೆ ತಲೆಯೆತ್ತಿದೆ. ಈಗ ವ್ಯಾಲೆಂಟೈನ್ಸ್ ಡೇ ಗೂ ಮತಾಂತರಕ್ಕೂ ಹೇಗೆ ಸಂಬಂಧ ಅಂತ ನೋಡೋಣ. ಆಗ ಪೆಗನರನ್ನು ಮತಾಂತರಿಸಿದರೆ ಈಗ ಕೆಲವು  ಕ್ರೈಸ್ತರು ಹಿಂದೂಗಳ ಮತಾಂತರದಲ್ಲಿ ತೊಡಗಿದ್ದಾರೆ. ಕಾರಣ – ಇತರ ಮತೀಯರ ದೇವರುಗಳು ಸರಿ ಇಲ್ಲ, ಆ ದೇವರುಗಳು ಭಯಾನಕವಾಗಿವೆ, ಅವು ದೇವರಲ್ಲ, ಬದಲಗಿ ಸೈತಾನರು, ಪೆಗನರು/ಹಿಂದೂಗಳು ಮೂರ್ತಿಪೂಜೆ ಇತ್ಯಾದಿ ಮೂಢನಂಬಿಕೆಗಳನ್ನು ಆಚರಿಸುತ್ತಾರೆ ಇತ್ಯಾದಿ. ಆಗಿನ ಪೆಗನರು ಹೇಗಿದ್ದರೋ ಗೊತ್ತಿಲ್ಲ, ಅದರೆ ಈಗಿನ ಹಿಂದೂಗಳೂ, ಅವರ ದೇವರುಗಳ್ಯಾರೂ ಭಯಾನಕವಗಿಲ್ಲ ತಾನೆ. ಕೆಲವು ದೇವತೆಗಳು ಒಂದೊಮ್ಮೆ ಯಾರಿಗಾದರೂ ಭಯಾನಕವಾಗಿ ಕಂಡರೂ ಆ ಭಯಾನಕತೆ ದೇವಸ್ಥಾದ ಗರ್ಭಗುಡಿಯಲ್ಲಿದೆಯೇ ಹೊರತು ಅದರಾಚೆ ಇಲ್ಲ. ಅಲ್ಲದೆ ಹಿಂದೂಗಳು ಈಗ ಬದಲಾಗಿದ್ದಾರೆ, ಬದಲಾಗುತ್ತಿದ್ದಾರೆ. ಒಳ್ಳೆಯ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಮೂಢನಂಬಿಕೆಗಳನ್ನು ನಿಧಾನವಾಗಿಯಾದರೂ ಪ್ರಶ್ನಿಸುತ್ತಿದ್ದಾರೆ. ಆದರೆ ವ್ಯಾಲೆಂಟೈನ್ ಡೇ ಪ್ರೇಮಿಗಳ ದಿನ ಎಂಬ ಮೂಢನಂಬಿಕೆಗಿಂತ ದೊಡ್ಡ ಮೂಢನಂಬಿಕೆ ಬೇಕೆ? ಅಂತಹ ಮೂಢನಂಬಿಕೆ ನಮ್ಮಲ್ಲಿಲ್ಲ. ವ್ಯಾಲೆಂಟೈನ್ ಗಿಂತ ಸಾವಿರಾರು ವರ್ಷ ಮೊದಲೇ ಹುಟ್ಟಿದ ಕೃಷ್ಣನ ಜನ್ಮದಿನವನ್ನು ಇಂದಿಗೂ ಅದೇ ಅರ್ಥದಲ್ಲಿ ಆಚರಿಸುತ್ತೇವೆ. ಅದಕ್ಕೆ ಬೇರೆ ಅಸಂಬಧ್ಧ ಅರ್ಥವನ್ನು ನಾವು ಅನ್ವೇಶಿಸಿಲ್ಲ. ಅಷ್ಟರ ಮಟ್ಟಿಗೆ ನಾವು ಕಾಮನ್ ಸೆನ್ಸ್ ಇಟ್ಟುಕೊಂಡಿದ್ದೇವೆ. ಆದರೂ ಹಿಂದೂಗಳನ್ನು ಮೂಢರು ಎಂದು ಕರೆದು ಮತಾಂತರಿಸಲಾಗುತ್ತಿದೆ. ಅದೂ ಸಮಾಜ ಸೇವೆಯ ಸೋಗಿನಲ್ಲಿ. ಇದಕ್ಕೆ ಪ್ರಗತಿಪರರ ಬೆಂಬಲ ಬೇರೆ ಇರುವುದು ಒಂದು ಚೋದ್ಯದ ಸಂಗತಿಯಾಗಿದೆ. ಪ್ರಗತಿಪರವಾದ ಹಿಂದೂಗಳ (ಮತ್ತು  ಮತಾಂತರ ವಿರೋಧಿಗಳ) ಬೆಂಬಲಕ್ಕೆ ನಿಲ್ಲುವ ಬದಲಾಗಿ ಅಸಂಬಧ್ಧವಾದ ವ್ಯಾಲೆಂಟೈನ್ಸ್ ಡೇ ಆಚರಣೆಗಳನ್ನು ಸಮರ್ಥಿಸುತ್ತಾರೆ ಇವರು. ಈ ಹಿನ್ನೆಲೆಯಲ್ಲಿ ಇವರ ಈ ಸಮರ್ಥನೆಯೂ ಒಂದು ರೀತಿಯ ಆಭಾಸವೇ ಎಂದು ಅನಿಸುವುದರಲ್ಲಿ ತಪ್ಪೇನಿಲ್ಲ ತಾನೆ. ಇಲ್ಲಿ ಮತಾಂತರದ ವಿಷಯವನ್ನು ಎಳೆದು ತಂದಿದ್ದಲ್ಲ. ವ್ಯಾಲೆಂಟೈನ್ ಎಂಬ ಕಾನ್ಸೆಪ್ಟೇ ಮತಪ್ರಚಾರಕ್ಕಾಗಿ ಹುತಾತ್ಮನಾದ ಸಂತನ ಸುತ್ತ ಹೆಣೆದುಕೊಂಡಿರುವುದರಿಂದ ಈ ವಿಚಾರಗಳು ಇಲ್ಲಿ ಖಂಡಿತಾ‌ ಪ್ರಸ್ತುತವೇ.

ಭಾರತದಲ್ಲಿ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ ಅಲ್ಲ. ಪಾಸ್ಚಿಮಾತ್ಯ ದೇಶಗಳಲ್ಲಿ ಕೂಡ ಕೆಲವು ಮಂದಿ ವಿಚಾರವಂತರು ವ್ಯಾಲೆಂಟೈನ್ಸ್ ಡೇ ಯನ್ನು ವಿರೋಧಿಸುತ್ತಾರೆ. ತಮಾಷೆಯೆಂದರೆ ಪಾಸ್ಚಿಮಾತ್ಯ ದೇಶಗಳಲ್ಲಿ ವಿಚಾರವಂತರು ಏನು ಮಾಡುತ್ತಾರೋ ಅದಕ್ಕೆ ವಿರುಧ್ಧವಾಗಿ ನಮ್ಮಲ್ಲಿನ ವಿಚಾರವಂತರು ವಾದಿಸುತ್ತಾರೆ. ಅದಕ್ಕೇ ಬಹುಷಹ ನಮ್ಮಲ್ಲಿನ ವಿಚಾರವಂತರನ್ನು ವಿಚಾರವಾ(ವ್ಯಾ)ದಿಗಳು ಎಂದು ಕರೆಯುವುದು ರೂಢಿಯಾಗಿರಬೇಕು. ಅಲ್ಲಿನ ವಿಚಾರವಂತರು ಮೌಢ್ಯಗಳನ್ನು, ಅಂಧಾನುಕರಣೆಗಳನ್ನು ವಿರೋಧಿಸಿದರೆ ಇಲ್ಲಿನವರು ಅವುಗಳನ್ನು ವಿರೋಧಿಸುವ ಸೋಗಿನಲ್ಲಿ ಪರೋಕ್ಷವಾಗಿ ಬೆಂಬಲಿಸುತ್ತಾರೆ. ಇರಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯಾಲೆಂಟೈನ್ಸ್ ಡೇ ವಿರೋಧಿಸುವುದಕ್ಕೆ ಕೆಲವು ಬಲವಾದ ಕಾರಣಗಳಿವೆ. ಅವುಗಳಲ್ಲೊಂದು ಈ‌ ಪ್ರೇಮಿಗಳ ದಿನ ಎಂಬ ಅಬ್ಬರದ ಆಚರಣೆಯಿಂದ ಪ್ರೇಮಿಗಳಲ್ಲದವರ ಮೇಲೆ ಮಾನಸಿಕವಾಗಿ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದಾಗಿ. ಕಾಲೇಜಿನಲ್ಲಿ ಜೊತೆಯಾಗಿ ಓದಿದವರಲ್ಲಿ ಎಲ್ಲರಿಗೂ ಮದುವೆಯಾಗಿ ತನಗೆ ಮಾತ್ರ ಮದುವೆಯಾಗದಿರುವ ಹುಡುಗ/ಹುಡುಗಿಗೆ ಮನಸ್ಸಿನಲ್ಲೊಂದು ಕೊರಗು ಇರುತ್ತಲ್ಲವೆ, ಆ ಥರ ಇರಬಹುದು. ಇಂಥವರಿಗಾಗಿ ವಿದೇಶಗಳಲ್ಲಿ ‘ಒಬ್ಬಂಟಿ ದಿವಸ’ (Single Awareness Day) ಗಳನ್ನು ಫೆಬ್ರುವರಿ ಹದಿನಾಲ್ಕರಂದೇ ಆಚರಿಸುವ ಪರಿಪಾಠ ಇದೆಯಂತೆ. ಅದೂ ಅಲ್ಲದೆ ವ್ಯಾಲೆಂಟೈನ್ಸ್ ಡೇ ಅನ್ನು ವಿದೇಶಗಳಲ್ಲಿ ಕೆಲವು ಕಡೆ ‘ಹಾಲ್ ಮಾರ್ಕ್ ಹಾಲಿಡೇ’ ಅನ್ನೋ ಅಣಕು ಹೆಸರಿನಿಂದ ಕರೀತಾರಂತೆ. ಈ ಹೆಸರು ವ್ಯಾಲೆಂಟೈನ್ಸ್ ಡೇ ಕಾರ್ಡ್ ಮತ್ತ್ತು ಉಡುಗೊರೆ ಉದ್ಯಮದಲ್ಲಿ ಅಪಾರ ಹಣ ದೋಚಿದ ಹಾಲ್ ಮಾರ್ಕ್ ಎಂಬ ಕಂಪೆನಿಯ ಕುರಿತಾಗಿ. 2008 ರಲ್ಲಿ ಉಂಟಾದ ಆರ್ಥಿಕ ಹಿಂಜರಿತಕ್ಕಿಂತ ಮೊದಲು ವಿದೇಶಗಳಲ್ಲಿ ವ್ಯಾಲೆಂಟೈನ್ಸ್ ಡೇ ಕಾರ್ಡು ಮತ್ತು ಗಿಫ್ಟುಗಳ ವ್ಯವಹಾರ ಯಾವ ಮಟ್ಟಕ್ಕೆ ಇತ್ತೆಂದರೆ 2006 ರಲ್ಲಿ ಬ್ರಿಟನ್ನಿನಲ್ಲಿ ವ್ಯಾಲೆಂಟೈನ್ಸ್ ದೇ ಹೆಸರಿನಲ್ಲಿ ಖರ್ಚು ಮಾಡಲಾದ ಒಟ್ಟು ಮೊತ್ತ 2.4 ಬಿಲಿಯನ್ ಪೌಂಡುಗಳಂತೆ. ಈ ರೀತಿ ಅನವಶ್ಯಕ ವೆಚ್ಚ, ಅದರ ಜೊತೆಗೆ ಹೆಚ್ಚುವ ಕೊಳ್ಳುಬಾಕತನದ ಕಾರಣಕ್ಕಾಗಿಯೇ ವ್ಯಾಲೆಂಟೈನ್ಸ್ ಡೇ ಯನ್ನು ವಿರೋಧಿಸುವವರಿದ್ದಾರೆ. ಇವರಲ್ಲಿ ಬಂಡವಳಶಾಹಿಯನ್ನು ವಿರೋಧಿಸುವ ಕೆಲವು ಎಡಪಂಥೀಯರೂ ಇದ್ದಾರೆನ್ನಿ. ಇತ್ತೀಚೆಗೆ ಆರ್ಥಿಕ ಹಿಂಜರಿತದ ಪರಿಣಾಮ ವ್ಯಾಲೆಂಟೈನ್ಸ್ ಕಾರ್ಡುಗಳ ಮೇಲೆ ಜನ ಸುರಿಯುವ ದುಡ್ಡು ಕಡಿಮೆಯಾಗಿದೆ ಅಂತ ಸುದ್ದಿ. ಭಾರತದಲ್ಲಿ ಮಾತ್ರ ಆರ್ಥಿಕ ಹಿಂಜರಿತ ಅಷ್ಟಾಗಿ ಪರಿಣಾಮ ಬೀರದ್ದರಿಂದಲೋ ಏನೋ, ನಮ್ಮಲ್ಲಿ ವ್ಯಾಲೆಂಟೈನ್ಸ್ ಕಾರ್ಡುಗಳು ಭರ್ಜರಿಯಾಗೇ ಮಾರಾಟವಾಗಿವೆಯಂತೆ. ನಮ್ಮ ಜನಕ್ಕೆ ಏನೋ ವರದಕ್ಷಿಣೆ, ಅದ್ದೂರಿ ಮದುವೆಗಳ ಜೊತೆಗೆ ಇದೊಂದು ಶೋಕಿ ಕೂಡ ಇರಲಿ ಅಂತ ಇರಬಹುದೇನೋ, ಗೊತ್ತಿಲ್ಲ.

ಎಡಪಂಥೀಯರ ಬಗ್ಗೆ ಹೇಳಿದ್ದಾಯಿತು. ಈಗ ಬಲಪಂಥೀಯರ ಬಗ್ಗೆ ನೋಡೋಣ. ವ್ಯಾಲೆಂಟೈನ್ಸ್ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಕೆಲವು ಬಲಪಂಥೀಯ ಸಂಘಟನೆಗಳು ಈ ಬಾರಿ ಸ್ವಲ್ಪ ಮೆತ್ತಗಾದಂತಿವೆ. ಬಹುಷ: ವ್ಯಾಲೆಂಟೈನ್ಸ್ ಡೇ ವಿರೋಧಿಸಲು ಅವರು ಕೊಡುತ್ತಿರುವ ಕಾರಣಗಳು ಜನರಿಗೆ ಅಷ್ಟಾಗಿ ರುಚಿಸಲಿಲ್ಲವೇನೋ. ಉದಾಹರಣೆಗೆ ವ್ಯಾಲೆಂಟೈನ್ಸ್ ಡೇ ಗೆ ಮಾತ್ರ ಯಾಕೆ ಪ್ರೀತಿಸಬೇಕು, ವರ್ಷದ ಮುನ್ನೂರ ಐವತ್ತು ದಿನ ಕೂಡ ಪ್ರೀತಿಸಬಾರದೇ ಅಂತಾರೆ. ಅಲ್ಲಾ ಸ್ವಾಮಿ, ನೀವು ವಿವೇಕಾನಂದ ಜಯಂತಿ ಯಾಕೆ ಆಚರಿಸಬೇಕು, ಆತ ಆ ದಿವ್ಸ ಒಂದು ಬಿಟ್ಟು ಉಳಿದ ದಿನಗಳಲ್ಲಿ ಬದುಕಿರಲಿಲ್ಲವೇ ಎಂದು ಕೇಳಿದರೆ ಅವರೇನು ಹೇಳಿಯಾರು! ಈ ಹುಟ್ಟಿದ ದಿವ್ಸ ಇತ್ಯಾದಿಗಳು ಬರೇ ಒಂದು ಬದಲಾವಣೆಯನ್ನು ಸೂಚಿಸುವಂಥವು ಮಾತ್ರ.. ವ್ಯಾಲೆಂಟೈನ್ಸ್ ಡೇ ದಿನ ನಿಜವಾಗಲೂ ಪ್ರೀತಿಗೆ, ಪ್ರೇಮಕ್ಕೆ ಸಂಬಂಧಪಟ್ಟ ಯಾವುದಾದರೂ ಘಟನೆ ಈ ಮೊದಲು ನಡೆದಿದ್ದರೆ ಅದನ್ನು ವೈಚಾರಿಕವಾಗಿ ವಿರೋಧಿಸುವ ಅಗತ್ಯವಿರಲಿಲ್ಲವೇನೋ – ಗೊತ್ತಿಲ್ಲ. ಆದರೆ ವ್ಯಾಲೆಂಟೈನ್ ಡೇ ಯ ಮೂಲದಲ್ಲಿರುವ ನಿಜ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಈ ಬಲಪಂಥೀಯ ಸಂಘಟನೆಗಳು ಸೋತಿವೆ. ಅದಕ್ಕಾಗಿಯೇ ಅವುಗಳ ಜನಬೆಂಬಲ ಕುಂಠಿತವಾಗಿ ಈಗ ತೆಪ್ಪಗಾಗುವ ಪರಿಸ್ಥಿತಿ ಬಂದಿದೆ ಅಂತ ಅನಿಸುತ್ತಿದೆ.

ಇಷ್ಟಲ್ಲ ಓದಿದ ಮೇಲೂ ತುಂಟರಾದ ಯುವಕರು/ಯುವತಿಯರು ಕೇಳಬಹುದು – ಅಲ್ರೀ ವ್ಯಾಲೆಂಟೈನ್ಸ್ ಮನೆ ಹಾಳಾಗಲಿ, ನಾವು ಪ್ರೇಮಿಗಳ ದಿನ ಅಂತ ಆಚರಿಸ್ಕೋತೀವಿ, ಏನೀಗ? ಅಂತ. ಅದಕ್ಕೆ  – ಅಲ್ರೀ, ಈ ಮೈ ಕೊರೆಯೋ ಛಳೀಲಿ ಏನು ಪ್ರೇಮಿಗಳ ದಿನ ಆಚರಿಸ್ತೀರ, ಅದರ ಬದಲಾಗಿ ಬರೋ ಮಳೆಗಾಲದಲ್ಲಿ ಯವುದಾದರೊಂದು ದಿನ ಇಟ್ಟುಕೊಳ್ಳಿ, ಮಜವಾಗಿರುತ್ತೆ ಅಲ್ವ! ಅಂತ ಪುಕ್ಕಟೆ ಸಲಹೆ ಕೊಟ್ರೆ ಹೇಗಿರುತ್ತೆ? ನಮ್ಮ ಬಾಲಿವುಡ್ ಸೇರಿದಂತೆ ಭಾರತದ ಎಲ್ಲಾ ವುಡ್ಡುಗಳ ಸಿನಿಮಾದಲ್ಲಿ ಮಳೆಯಲ್ಲಿಯೇ ಅಲ್ಲವೇ ಯುವ ಪ್ರೇಮಿಗಳ ಹೃದಯಗಳಲ್ಲಿ ಪ್ರೇಮಾಂಕುರವಾಗುವುದು! ಹಾಗಿದ್ದ ಮೇಲೆ ಮಳೆಗಾಲದಲ್ಲೇ ಪ್ರೇಮಿಗಳ ದಿನ ಆಚರಿಸಿದರೆ ಹೆಚ್ಚು ಮಜ ಇರಬಹುದು ಅಂತ ಅವರ ತಲೆಯೊಳಗೊಂದು ಪ್ರೇಮಜ್ವರದ ಹುಳ ಬಿಟ್ಟು ನನ್ನ ಈ ಚಿಕ್ಕದಾದ ಬರಹ ಮುಗಿಸುತ್ತೇನೆ, ನಮಸ್ಕಾರ.

ಚಿತ್ರಕೃಪೆ:valentines2014.in

34 ಟಿಪ್ಪಣಿಗಳು Post a comment
 1. Narendra Kumar.S.S
  ಫೆಬ್ರ 14 2011

  > ಅಲ್ಲಿನ ವಿಚಾರವಂತರು ಮೌಢ್ಯಗಳನ್ನು, ಅಂಧಾನುಕರಣೆಗಳನ್ನು ವಿರೋಧಿಸಿದರೆ ಇಲ್ಲಿನವರು ಅವುಗಳನ್ನು ವಿರೋಧಿಸುವ ಸೋಗಿನಲ್ಲಿ
  > ಪರೋಕ್ಷವಾಗಿ ಬೆಂಬಲಿಸುತ್ತಾರೆ.
  ಪ್ರಾಯಶಃ ಈ ವರ್ತನೆಯ ಹಿಂದೆ “ಕಪ್ಪು ತೊಗಲಿನ” ಕೀಳರಿಮೆಯ ವ್ಯಾಧಿಯಿದೆ.
  ಬಿಳಿಚರ್ಮದ ಬ್ರಿಟಿಷರನ್ನು ಮೇಲಿನವರು, ತಿಳಿದವರು, ಇತ್ಯಾದಿಗಳಾಗಿ ನಮ್ಮ ಬುದ್ಧಿವಂತರನೇಕರು ನಂಬಿಕೊಂಡದ್ದು ತಿಳಿದ ಸಂಗತಿಯೇ.
  ಆ ಬಿಳಿಯರು, ಭಾರತವನ್ನಾಳಲು ಒಡೆದು ಆಳುವ ನೀತಿಯನ್ನನುಸರಿಸಿದರು – ಅದಕ್ಕಾಗಿ ಇಲ್ಲಿನ ಬಹುಸಂಖ್ಯಾತ ಸಮಾಜದಲ್ಲಿ ಕೀಳರಿಮೆಯುಂಟು ಮಾಡುವ ಆವಶ್ಯಕತೆಯಿತ್ತು.
  ಇದಕ್ಕಾಗಿ ಹಿಂದುಗಳು ಮಾಡುವ ಪ್ರತಿಯೊಂದನ್ನೂ “ಮೂಢನಂಬಿಕೆ”, “ಅಂಧಾನುಕರಣೆ”, “ಮಧ್ಯಯುಗೀನ ಆಚರಣೆ”, “ಅರ್ಥವಿಲ್ಲದ ಆಚರಣೆ”, ಇತ್ಯಾದಿಯಾಗಿ ಹೀಗಳೆಯುತ್ತಿದ್ದರು.
  “ಬಿಳಿಚರ್ಮ”ದವರು ಹೇಳಿದ್ದೆಲ್ಲಾ ಸತ್ಯವೆಂದು ನಂಬುತ್ತಿದ್ದ “ಬುದ್ಧಿವಂತರು” ಇದನ್ನು ನಿಜವೆಂದೇ ನಂಬಿದರು ಮತ್ತು ಈ ಬುದ್ಧಿವಂತರನ್ನು ಬ್ರಿಟಿಷರು “ವಿಚಾರವಾದಿಗಳು”, “ಬುದ್ಧಿಜೀವಿಗಳು” ಇತ್ಯಾದಿಯಾಗಿ ಕರೆದರು.
  ಇಂದಿಗೂ ಇದೇ ಚಾಳಿ ಮುಂದುವರೆದಿದೆ.
  ಬುದ್ಧಿಜೀವಿ ಅಥವಾ ವಿಚಾರವಾದಿ ಅನ್ನಿಸಿಕೊಳ್ಳಬೇಕಾದರೆ “ಹಿಂದುಗಳ” ರೀತಿನೀತಿಗಳನ್ನು ಹೀಗಳೆಯಬೇಕು.

  ಉತ್ತರ
  • ಫೆಬ್ರ 14 2011

   ಸಮಸ್ಯೆಯೆಂದರೆ ಈ ಕೀಳರಿಮೆ ವ್ಯಾಧಿ ಒಂಥರಾ ಕಳೆ ಇದ್ದ ಹಾಗೆ. ಬೆಳೆಗಿಂತ ಹೆಚ್ಚು ಪವರ್ ಫುಲ್ ಅದು.

   ಉತ್ತರ
 2. ಫೆಬ್ರ 14 2011

  ಸ೦ದಾರ್ಭೋಚಿತ ಲೇಖನ ಮಹೇಶ್, ಪಶ್ಚಿಮದ ಅ೦ಧಾನುಕರಣೆಯಲ್ಲಿ ತೊಡಗಿರುವವರು ಅರ್ಥ ಮಾಡಿಕೊಳ್ಳಬೇಕಾದ್ದು ಸಾಕಷ್ಟಿದೆ.

  ಉತ್ತರ
  • ಫೆಬ್ರ 14 2011

   ಧ್ಯನ್ಯವಾದ ಮಂಜು ಅವರೇ. ಇದನ್ನು ಬರೆದ ಮೇಲೆ ನನಗೆ ಅಷ್ಟು ಸಮಾಧಾನವಿರಲಿಲ್ಲ. ನಾನು ಏನು ಹೇಳ ಹೊರಟೆ ಅನ್ನುವುದು ಸ್ಪಷ್ಟವಾಗಿಲ್ಲ ಅನಿಸಿತು. ಆದರೂ ಪ್ರಕಟಿಸುವ ದಯೆ ತೋರಿದ್ದಾರೆ ಸಾತ್ವಿಕ್. ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಸ್ವಾಗತ.

   ಉತ್ತರ
 3. ಫೆಬ್ರ 14 2011

  ಯುವಕ ಯುವತಿಯರಿಗೆ ಪ್ರೇಮಿಗಳ ದಿನ. ಹೋಟೇಲ್ ಮಾಲ್ ನವರಿಗೆ ಡಬಲ್ ರೇಟ್ ಬುಸಿನೆಸ್ ಸೀಸನ್. ಮೀಡಿಯಾದವರಿಗ೦ತೂ ಮೃಷ್ಟಾನ್ನ ಭೋಜನ. ಪ್ರೀತಿ ಹೆಸರಲ್ಲಿ ಹಗಲು ದರೋಡೆ. ಈ ಪ್ರೀತಿಗೆ ಕಣ್ಣು ಇಲ್ಲ. ಪಶ್ಮಿಮವೆ೦ಬ ಶ೦ಖದಿ೦ದ್ದ ಬ೦ದಿದ್ದೆಲ್ಲಾ ತೀರ್ಥವಾಗಿಬಿಟ್ಟಿದೆ

  ಉತ್ತರ
 4. shubha
  ಫೆಬ್ರ 14 2011

  Is it fair to do a half job of providing historical context? If you are objective in your pursuit of historical truth, should you not trace how this ಅಸಂಬಧ್ಧ ಅರ್ಥ came about? In history nothing can be unrelated – asambaddha. leaving out the intermediate links and calling it asambaddha betrays a prejudiced approach that is bent upon proving something wrong. Origin ashte alla matantaradinda premadinadavarege ee paddhati beleyalu kaaranavannu kooda neevu aitihasikavagi anveshisiddare aaga nimma maatige tooka iruttittu. eega idu objectivity-ya bhrameyallli poorvaagrahapeedita vaadavashte.
  “ಅದಕ್ಕೆ ಬೇರೆ ಅಸಂಬಧ್ಧ ಅರ್ಥವನ್ನು ನಾವು ಅನ್ವೇಶಿಸಿಲ್ಲ.” – yaaraadru asambaddha arthavanna anvEShisuttare anta nimage annisutta??!

  ಉತ್ತರ
  • Narendra Kumar.S.S
   ಫೆಬ್ರ 14 2011

   ಶುಭಾ ಅವರೆ, ನಿಮ್ಮ ಮಾತುಗಳು ನನಗೆ ಅರ್ಥವಾಗುತ್ತಿಲ್ಲ.
   ಮಹೇಶ್ ಅವರ ಲೇಖನದಲ್ಲಿ ಇತಿಹಾಸದ ಪೂರ್ಣ ಪಾಠವಿಲ್ಲ ಎಂದು ನೀವು ಹೇಳುತ್ತಿರುವಂತಿದೆ.
   ದಯವಿಟ್ಟು, ಅವರು ಯಾವ ಭಾಗವನ್ನು ಬಿಟ್ಟಿದ್ದಾರೆಂದು ತಿಳಿಸಿದರೆ, ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.

   ಉತ್ತರ
  • ಫೆಬ್ರ 14 2011

   ಕೆಲವು ಸ್ಪಷ್ಟನೆಗಳು :

   {should you not trace how this ಅಸಂಬಧ್ಧ ಅರ್ಥ came about?}
   ಅದನ್ನು ಕೂಡ ಹೇಳಿದ್ದೇನೆ ಲೇಖನದಲ್ಲಿ. ಇನ್ನೊಂದು ಬಾರಿ ಓದಿದರೆ ತಮಗೆ ತಿಳಿಯಬಹುದು.

   {eega idu objectivity-ya bhrameyallli poorvaagrahapeedita vaadavashte}
   ತಮ್ಮ ನಿಲುವಿಗೆ ಸ್ವಾಗತ.

   {yaaraadru asambaddha arthavanna anvEShisuttare anta nimage annisutta??!}
   ವಾಕ್ಯಗಳನ್ನು ಸಂದರ್ಭರಹಿತವಾಗಿ ಕೋಟ್ ಮಾಡಿದರೆ ಬೇರೆಯೇ ಅರ್ಥ ಬರಬಹುದು. ಇಲ್ಲಿ ನಾನು ಅನ್ವೇಷಣೆ ಅಂದಿದ್ದು ನಮ್ಮ ಹಬ್ಬ ಹರಿದಿನಗಳ ಆಚರಣೆಯಲ್ಲಿ ಮೂಲ ಉದ್ದೇಶಕ್ಕೆ ವಿರುಧ್ಧವಾದ ಸಂದೇಶ ನೀಡುವ ತಪ್ಪನ್ನು ಮಾಡಿಲ್ಲ ಎಂಬ ಅರ್ಥದಲ್ಲಿ. ಆಚರಣೆಗಳು ಕಾಲಾಂತರದಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಕಂಡರೂ ಅದು ಮೂಲದಲ್ಲಿ ಒಂದೇ ಸಂದೇಶ ಸಾರುತ್ತಿವೆ ಅಲ್ಲವೇ ನಮ್ಮಲ್ಲಿ? ಇದಕ್ಕೆ ಅಪವಾದ ನಿಮಗೆ ತಿಳಿದಿದ್ದರೆ ಅದಕ್ಕೆ ನನ್ನ ಸ್ವಾಗತವಿದೆ.

   ಉತ್ತರ
   • shubha
    ಫೆಬ್ರ 14 2011

    “ಇತಿಹಾಸಕಾರರ ಪ್ರಕಾರ ಇಂತಹ ಪ್ರೀತಿ ಪ್ರೇಮದ ಕಥೆಗಳು ಹುಟ್ಟಿಕೊಂಡದ್ದು, ಹೆಚ್ಚು ಪ್ರಚಲಿತವಾದ್ದು ತೀರ ಇತ್ತೀಚೆಗೆ, ಅಂದರೆ ಸುಮಾರು ಹದಿನಾಲ್ಕನೇ ಶತಮಾನದಲ್ಲಿ.” how and why did this happen? why did the association with love come about? If you could throw some light on this, then you would have done all that you claim to.

    sandarbharahitavaagi quote maadalu bere ello bareyalillavalla idara bagge? bekaadavarigella mele nimma lekhanada poornapaatha labhyavide andukolteeni. adannu bittu nanna comment oduvavaru iddaara? asambaddhate kaanistirodu nimma kannige, adu itihaasada poorti chitra padeyalu neevu prayatnisadiruvudarinda. nammadu hecchu avaraddu kadime anno drushtiyinda nodidaage bere reeti kaanalu saadhya illa anta helodakke aa saalu quote maadiddu ashte.

    ಉತ್ತರ
    • ಫೆಬ್ರ 15 2011

     {how and why did this happen? why did the association with love come about?}
     ಮೇಡಮ್, ಇದ್ರ ಬಗ್ಗೆ ಬರ್ದಿದೀನಿ. ಎರಡನೇ ಪ್ಯಾರಾ ಇನ್ನೊಮ್ಮೆ ಓದಿ. ಪ್ರಚಲಿತದಲ್ಲಿರುವ ಕೆಲವು ನಂಬಿಕೆಗಳ ಪ್ರಕಾರ ರೋಮನ್ನರ ಕೈಯಲ್ಲಿ ಹತರಾದ ಆ ವ್ಯಾಲೆಂಟೈನ್ ತಾನು ಬದುಕಿದ್ದಾಗ ರಹಸ್ಯವಾಗಿ ಸೈನಿಕರಿಗೆ ಮದುವೆ ಮಾಡಿಸಿ ರಾಜನ ವಿರೋಧ ಕಟ್ಟಿಕೊಂಡಿದ್ದ. ಆ ಮೂಲಕ ಪ್ರೀತಿಯಿಂದ ವಂಚಿತರಾಗಿದ್ದ ಸೈನಿಕರಿಗೆ ಸಹಾಯ ಮಾಡಿದ. ಆತನ ಮರಣಾ ನಂತರ ಈ ಉಪಕಾರದ ನೆನಪಾಗಿ ಪ್ರೇಮಿಗಳು ವ್ಯಾಲೆಂಟೈನ್ಸ್ ಡೇ ಆಚರಿಸಲಾರಂಭಿಸಿದರು ಎಂದು ಕಥೆ ಹೇಳುತ್ತದೆ. ನನ್ನ ಪಾಯಿಂಟ್ ಎಂದರೆ, ಮೊದಲನೇಯದಾಗಿ ಇದು ಒಂದು ಮಿಥ್. ಅಂದರೆ ನಮ್ಮ ಪುರಾಣದ ಕಥೆಗಳಿದ್ದಂತೆ. ಇವನ್ನು ನಂಬಿಕೆಯ ಕಾರಣಕ್ಕೆ ಒಂದು ವೇಳ ನಿಜವೆಂದೇ ಒಪ್ಪಿಕೊಂಡರೂ ಆ ಕಥೆಯಲ್ಲಿ ಮೂಲವಸ್ತು ಏನಿದ್ದರೂ ಅದು ಸಂತನ ಬದುಕು, ಆತನ ಹೋರಾಟವೇ ಹೊರತು ಪ್ರೀತಿ ಪ್ರೇಮ ಅಲ್ಲ ಎಂದು ನಾನು ಹೇಳಿದ್ದು. ಪ್ರೀತಿ ಪ್ರೇಮ ಏನಿದ್ದರೂ ಅದು ಕಥೆಯ ಸೈಡ್ ಎಫೆಕ್ಟ್ ಥರ ಇದೆ. ಇದು ನನಗೆ ತೋಚಿದ್ದು. ನಿಮ್ಮ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದ್ದರೆ ಅದಕ್ಕೆ ಸ್ವಾಗತ!

     ಉತ್ತರ
    • Narendra Kumar.S.S
     ಫೆಬ್ರ 15 2011

     ಶುಭಾ> “ಇತಿಹಾಸಕಾರರ ಪ್ರಕಾರ ಇಂತಹ ಪ್ರೀತಿ ಪ್ರೇಮದ ಕಥೆಗಳು ಹುಟ್ಟಿಕೊಂಡದ್ದು, ಹೆಚ್ಚು ಪ್ರಚಲಿತವಾದ್ದು ತೀರ ಇತ್ತೀಚೆಗೆ, ಅಂದರೆ
     ಶುಭಾ> ಸುಮಾರು ಹದಿನಾಲ್ಕನೇ ಶತಮಾನದಲ್ಲಿ.”. how and why did this happen? why did the
     ಶುಭಾ> association with love come about? If you could throw some light on this, then
     ಶುಭಾ> you would have done all that you claim to.
     ಇತಿಹಾಸ ಆಗಿರುವ ಸಂಗತಿಗಳನ್ನು ಹೇಳುತ್ತದೆ.
     ಅದು ಏಕೆ ಆಯಿತು, ಹೇಗೆ ಆಯಿತು? ಈ ವಿಷಯಗಳು ಇತಿಹಾಸಕ್ಕೆ ತಿಳಿಯದೇ ಹೋಗಬಹುದು.
     ಈ ಪ್ರಶ್ನೆಗಳಿಗೆ ಉತ್ತರವಿಲ್ಲ ಎಂದ ಮಾತ್ರಕ್ಕೆ ಅದು ಇತಿಹಾಸವಲ್ಲ ಅಥವಾ ಅರ್ಧಂಬರ್ಧ ಎಂದು ತಿಳಿದರೆ, ಅದನ್ನು ಹಾಸ್ಯಾಸ್ಪದ ಎಂದಷ್ಟೇ ಹೇಳಬಹುದು.

     ಶುಭಾ> asambaddhate kaanistirodu nimma kannige, adu itihaasada poorti chitra
     ಶುಭಾ> padeyalu neevu prayatnisadiruvudarinda.
     ಮಹೇಶ್ ಅವರು ಇತಿಹಾಸದ ಪೂರ್ತಿ ಚಿತ್ರ ಕೊಡುತ್ತಿಲ್ಲ ಎಂದೆನ್ನಿಸಿದರೆ, ಅದನ್ನು ನೀವೇ ಮಾಡಬಹುದಲ್ಲ.
     ಸುಮ್ಮನೆ ಆರೋಪಿಸುವುದರ ಬದಲು, ಮಹೇಶ್ ಅವರು ತಿಳಿಸಿರುವ ಯಾವ ವಿಚಾರಗಳು ಸರಿಯಿಲ್ಲ ಮತ್ತು ಅದಕ್ಕೆ ವತಿರಿಕ್ತವಾಗಿ ಇತಿಹಾಸದ ಯಾವ ಗ್ರಂಥಧಲ್ಲಿ ಇದೆ, ಇತ್ಯಾದಿ ತಿಳಿಸಿದರೆ ಪ್ರಯೋಜನವಾದೀತು.

     ಶುಭಾ> nammadu hecchu avaraddu kadime anno drushtiyinda nodidaage bere reeti kaanalu
     ಶುಭಾ> saadhya illa anta helodakke aa saalu quote maadiddu ashte.
     ಇಷ್ಟು ವರ್ಷ “ನಮ್ಮದು ಕಡಿಮೆ; ಅವರದು ಹೆಚ್ಚು;” ಇಂತಹ ವಿಚಾರಗಳಿಂದ ಕೀಳರಿಮೆ ಬೆಳೆಸಿಕೊಂಡಿರುವ ದೊಡ್ಡ ಸಮುದಾಯವೇ ನಮ್ಮ ಮಧ್ಯೆ ಇದೆ. ಅದನ್ನು ಸರಿಪಡಿಸುವುದು ಹೇಗೆ? “ನಮ್ಮದು ಯಾವುದಕ್ಕೂ ಕಡಿಮೆಯಿಲ್ಲ; ಹಾಗೆ ನೋಡಿದರೆ ನಾವು ಬೇರೆಯವರಿಗಿಂತ ಮುಂದೆಯೇ ಇದ್ದೇವೆ; (ಉದಾಹರಣೆಗೆ, ಗಣಿತದಲ್ಲಿ ಅಂಕಗಳಿಂದ ಹಿಡಿದು ಪ್ರತಿಯೊಂದು ಶಾಖೆಯೂ ಹುಟ್ಟಿದ್ದು ನಮ್ಮಲ್ಲೇ; Pythagorus Theorem ಕೂಡಾ ನಮ್ಮಲ್ಲೇ ಹುಟ್ಟಿತು;)” ಈ ವಿಚಾರಗಳನ್ನು ತಿಳಿಸುವ ಆವಶ್ಯಕತೆಯಿದೆ ಎಂದು ನನ್ನ ಅನಿಸಿಕೆ. ನಾವು ಹೇಳಿದ್ದರಲ್ಲಿ ತಪ್ಪಿದ್ದರೆ ತಿದ್ದಿಕೊಂಡರಾಯಿತು. ಅದನ್ನು ಬಿಟ್ಟು “ಹಾಗೆ ಹೇಳಲೇಬಾರದು” ಎಂದು ಸರ್ವಾಧಿಕಾರಿ ಪ್ರವೃತ್ತಿಯನ್ನು ಮೆರೆದರೆ ಏನೂ ಸಾಧಿಸಲು ಸಾಧ್ಯವಿಲ್ಲ.

     ಉತ್ತರ
  • Niranjan Padubidri
   ಫೆಬ್ರ 15 2011

   @Shubha,, when you have taken the authority to criticize some one, then you have to justify your argument through facts and figures. Other wise your views need to be termed as prejudiced. Do you have any reliable proof in favor of Valentines day. Since more than one decade we have been observing this westernized stupidity purely to serve some ones commercial gains. More over its your community of half baked is most dangerous than unlettered. At least we could blame them for their innocence and ignorance. But what about you, posing conveniently like Ostrich. Overall your content leads to utter filth, but nothing else. One sincere piece of advice, hence fourth do not attempt to counter the facts if you are not standing right on the earth.

   ಉತ್ತರ
 5. ಫೆಬ್ರ 14 2011

  ವಿರೋಧಿಸಬೇಕೆಂದು ತೀರ್ಮಾನಿಸಿಬಿಟ್ಟರೆ ಅದರ ವಿರುದ್ಧವಾಗಿ ಎಷ್ಟು ಬೇಕಾದರೂ ಬರೆಯಬಹುದು. ಆದರೆ ಈ ಪ್ರೇಮಿಗಳ ದಿನದಲ್ಲಿ ಎಷ್ಟು ಹೃದಯಗಳು ಒಂದಾಗಿರಬಹುದೋ, ಇಷ್ಟು ದಿನ ಮುಚ್ಚಿಟ್ಟ ಪ್ರೀತಿಯನ್ನು ಎಷ್ಟು ಜನರು ಬಿಚ್ಚಿಟ್ಟಿರಬಹುದೋ…
  ವ್ಯಾಲೆಂಟಿನ್ ಎಲ್ಲಿಂದ ಬೇಕಾದರೂ ಬರಲಿ. ಆದರೆ ಅದರಿಂದ ಪ್ರೀತಿಗೆ, ಪ್ರೇಮಿಗಳಿಗೆ ಒಳ್ಳೆಯದಾಗುತ್ತೆ ಅನ್ನೋದದಾರೆ ನಾವ್ಯಾಕೆ ಬೇಡ ಎನ್ನಬೇಕು….

  ಉತ್ತರ
  • Narendra Kumar.S.S
   ಫೆಬ್ರ 14 2011

   > ಆದರೆ ಅದರಿಂದ ಪ್ರೀತಿಗೆ, ಪ್ರೇಮಿಗಳಿಗೆ ಒಳ್ಳೆಯದಾಗುತ್ತೆ ಅನ್ನೋದದಾರೆ ನಾವ್ಯಾಕೆ ಬೇಡ ಎನ್ನಬೇಕು…
   ಒಳ್ಳೆಯದು ಆಗುವುದಾದರೆ ಯಾರೂ ಬೇಡ ಎನ್ನುವುದಿಲ್ಲ.
   ಆದರೆ, ಹುಚ್ಚು ಪ್ರೇಮದಲ್ಲಿ (ಪ್ರೇಮವು ಹುಚ್ಚೂ ಹೌದು, ಕುರುಡೂ ಹೌದು. ಹರೆಯದಲ್ಲಿ ಪ್ರೇಮಕ್ಕಿಂತ ಕಾಮವೇ ಹೆಚ್ಚಿರುತ್ತದೆ) ಕೊಚ್ಚಿಕೊಂಡು ಹೋಗಿ ನಂತರ ಕಣ್ಣೀರಿನಲ್ಲಿ ಕೈತೊಳೆಯುವ ಅದೆಷ್ಟೋ ಜೀವಗಳಿವೆಯಲ್ಲಾ……ಅದರ ಕಡೆಗೆ ಗಮನವೇ ಬೇಡವೇ?
   ಈ ವ್ಯಾಲೆಂಟೇನ್ಸ್ ಡೇ ಸಡಗರದಲ್ಲಿ ತೊಡಗುವವರು ಹೆಚ್ಚಿನ ಜನ ಕಾಲೇಜು ಹುಡುಗ/ಹುಡುಗಿಯರು, ಹದಿಹರೆಯದವರು.
   ಇವರುಗಳು ಪ್ರೀತಿ-ಪ್ರೇಮ ಎಂದು ಹೊರಟರೆ, ಅದರ ಸುಳಿಯಲ್ಲಿ ಅವರ ವಿದ್ಯೆಯೆಲ್ಲಾ ನೈವೇದ್ಯ!
   ವಿವೇಕವಿಲ್ಲದ ಪ್ರೀತಿ-ಪ್ರೇಮಗಳು ಕಾಮದ ಸುಳಿಯಲ್ಲಿ ಸಿಕ್ಕು, ಮುಂದೆಲ್ಲೋ ಮುಗ್ಗರಿಸಿ ಬಿದ್ದು, ಮತ್ತೇನೇನೋ ಎಡವಟ್ಟು ಮಾಡಿಕೊಂಡ
   ಅದೆಷ್ಟು ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಿಲ್ಲ.
   ಪ್ರೇಮವೂ ವಿಫಲ, ವಿದ್ಯೆಯೂ ಗೋವಿಂದ – ಇಲ್ಲಿ ಯಾರಿಗೆ ಒಳ್ಳೆಯದಾಯಿತು ಹೇಳಿ?

   ಪ್ರಾಯಶಃ ಗ್ರೀಟಿಂಗ್ ಕಾರ್ಡ್ ಮಾಡುವವರು, ಅದನ್ನು ಮಾರುವವರು, ಹೊಟೇಲ್‍ಗಳು, ಹೂಗುಚ್ಚ ಮಾಡುವವರು – ಇವರುಗಳಿಗೆ ಒಳ್ಳೆಯದಾಗುತ್ತದೆ ಎಂದು ಒಪ್ಪಬಹುದು.
   ಒಳ್ಳೆಯದಾಗುವುದರೊಡನೆ ಕೆಟ್ಟದ್ದಾಗಿದ್ದನ್ನು ತೂಗಿದರೆ ಯಾವುದು ಹೆಚ್ಚು ಎಂದು ತೂಗಿ ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

   ಉತ್ತರ
   • pravin
    ಫೆಬ್ರ 14 2011

    ಪ್ರಾಯಶಃ ಗ್ರೀಟಿಂಗ್ ಕಾರ್ಡ್ ಮಾಡುವವರು, ಅದನ್ನು ಮಾರುವವರು, ಹೊಟೇಲ್‍ಗಳು, ಹೂಗುಚ್ಚ ಮಾಡುವವರು – ಇವರುಗಳಿಗೆ ಒಳ್ಳೆಯದಾಗುತ್ತದೆ ಎಂದು ಒಪ್ಪಬಹುದು. ಇದನ್ನು ನಾನು ಒಪ್ಪುತ್ತೇನೆ

    ಉತ್ತರ
  • ಫೆಬ್ರ 14 2011

   ಪ್ರವೀಣ್,
   ನನ್ನ ಬರಹದ ವಿಷಯ ವ್ಯಾಲೆಂಟೈನ್ಸ್ ಡೇ. ಪ್ರೀತಿ ಪ್ರೇಮ ಅಲ್ಲ. ಅದನ್ನ ಮೊದಲೇ ಸ್ಪಷ್ಟಪಡಿಸಿದ್ದೇನೆ. ಪ್ರೇಮಿಗಳಿಗೆ ಒಳ್ಳೆಯದಾಗುವುದಾದರೆ ನಾನು ಬೇಡ ಅನ್ನಲ್ಲ. ಆದರೆ ವ್ಯಾಲೆಂಟೈನ್ಸ್ ಡೇ ಯಿಂದ ಪ್ರೇಮಿಗಳಿಗೆ ಒಳ್ಳೆಯದಾಗುತ್ತದೆಂದು ನನಗೆ ನಂಬಿಕೆಯಿಲ್ಲ. ನಂಬಿಕೆ ಇದ್ದವರಿಗೆ ನನ್ನ ವಿರೋಧವೇನೂ ಇಲ್ಲ.

   ಉತ್ತರ
 6. ಫೆಬ್ರ 14 2011

  ಅಪ್ಪನ ದಿನ. ಅಮ್ಮನ ದಿನ. ಅಜ್ಜ ನ ದಿನ. ಸಕ್ಕರೆ ಕಾಯಿಲೆ ದಿನ. ಮಕ್ಕಳ ದಿನ. ಮಹಿಳೆಯರ ದಿನ, ಸ್ನೇಹಿತರ ದಿನ, ಕ್ಯಾಲೆಂಡರ್ ಬಿಚ್ಚಿ ಲೆಕ್ಕ ಹಾಕಿದರೆ ಎಲ್ಲದಕ್ಕೂ ಒಂದೊಂದು ದಿನ ಸಿಗುತ್ತದೆ. ಪ್ರೀತಿಗ್ಯಾಕೆ ಬೇಡ. ನನ್ನ ಪ್ರಶ್ನೆ ಅಷ್ಟೇ. ಪ್ರೀತಿಯಿಂದ ಬದುಕು ಹಾಳು ಮಾಡಿಕೊಳ್ಳಲು ಫೆಬ್ರವರಿ 14 ಆಗಬೇಕೆಂದಿಲ್ಲ, ಜನವರಿ ಒಂದು ಕೂಡ ಆಗಬಹುದು.

  ಉತ್ತರ
  • ಫೆಬ್ರ 14 2011

   ಹುಮ್.. ಪ್ರೀತಿಗೆ ದಿನ ಇರಲಿ, ಆ ದಿನವನ್ನು ಕ್ರೈಸ್ತ ಸಂತನೊಬ್ಬ ಹುತಾತ್ಮನಾದ ದಿನ, ಅವನ ಹೆಸರಿನಲ್ಲಿ ಏಕೆ ಆಚರಿಸಬೇಕು ಅಂತ ನಾನು ಕೇಳಿದ್ದು..

   ಉತ್ತರ
 7. ರವಿ ಕುಮಾರ್ ಜಿ ಬಿ
  ಫೆಬ್ರ 15 2011

  ಮಹೇಶರವರೆ ,
  ಉತ್ತಮ ಲೇಖನ, ಮೊದಲಿಗೆ ಬಹಳಷ್ಟು ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
  ನನಗೆ ಅನ್ನಿಸ್ತಿದೆ, ಈ ಬಹಳಷ್ಟು ಕಂಪನಿ ಗಳು ಇದನ್ನು ಮಾಡಿಸ್ತಿರಬೇಕು ಅಂದರೆ ಅವರ ವ್ಯಾಪಾರಕ್ಕೊಸ್ಕರ , ಪರ ಮತ್ತು ವಿರೋದ ಗುಂಪನ್ನು ಸೃಷ್ಟಿಸಿ ಪ್ರಚಾರ ಮಾಡಿಸಿ ತಮ್ಮ ಬೇಳೆಬೇಯಿಸಿ ಕೊಳ್ಳುತ್ತಿರಬೇಕು. ಅದಕ್ಕೆ ನಮ್ಮ ಜನ ಬಲಿ ಬೀಳುತ್ತಿರಬೇಕು ನಮ್ಮ ದುರಾದೃಷ್ಟ .

  ಈಗಿನ ಜನಾಂಗ ಹೇಗಾಗಿದೆ ಅಂದ್ರೆ, ಪಾಶ್ಚಾತ್ಯರಿಂದ ಬಂದಿದ್ದು ಎಲ್ಲಾ ಒಳ್ಳೆಯದು, ನಮ್ಮದು ಎಲ್ಲಾ ಕೆಟ್ಟದ್ದು ಎಂಬ ಮನಸ್ತಿತಿ. ನಗರಗಳಲ್ಲಿ ಯುವಕ-ಯುವತಿ ಯರನ್ನು ನೋಡಿ ಈ ಭಾವನೆ ಬಾರದಿರದು.
  ನಿನ್ನೆ ಕಬ್ಬನ್ ಪಾರ್ಕ್ ಮತ್ತು ಲಾಲಭಾಗ್ ಗೆ ಹೋದಾಗ ಹಾಗನ್ನಿಸಿತು ಅಲ್ಲಿನ ಸನ್ನಿವೇಶವನ್ನು ನೋಡಿ!! ನಾವು ಎತ್ತ ಸಾಗುತ್ತಿದ್ದೇವೆ ಅನ್ನಿಸಿತು ?
  ಅರೆನಗ್ನ ಬಟ್ಟೆ ಧರಿಸಿ ಮುತ್ತಿಕ್ಕೊದೆ ಪ್ರೇಮಿಗಳ ದಿನಾಚರಣೆಯ ಕ್ರಮವೇ? ಅದು ನಮಗೆ ಒಗ್ಗುತ್ತದೆಯೇ? ನಾವು ಮಾಡುತ್ತಿರುವುದು ಸರಿಯೇ? ಕಾಲವೇ ಉತ್ತರಿಸಬೇಕು.ಮತ್ತು ಸರಿಪಡಿಸಬೇಕು.
  ನಮ್ಮ ಜನರಿಗೆ ಅರ್ಥವಾಗೋವಾಗ ಕಾಲ ಮೀರಿ ಹೋಗದಿದ್ದರೆ ಅಸ್ಟು ಸಾಕು.ಯಾಕಂದ್ರೆ ಹೇಳಿದ್ದನ್ನು ಕೇಳುವ ಮನಸ್ತಿತಿಯಲ್ಲಂತೂ ಯುವಜನಾಂಗ ಸದ್ಯ ದಲ್ಲಿ ಇಲ್ಲ!!! (ಒಂದು ಕಾಲ್ ಸೆಂಟರ್ ಗೆ ಒಮ್ಮೆ ಹೋಗಿ ನೋಡಿದರೆ ಸ್ವಲ್ಪ ಐಡಿಯಾ ಬರುತ್ತೆ ಯಾಕೆ ಹೀಗೆ ಎಂದು.) ನಾವು 21st ಸೆಂಚುರಿ ಯಲ್ಲಿ ಇದ್ದೇವೆ ಅಂತಾರೆ. ಮುಂದುವರಿದಿರೋದು ಅಂದರೆ ಇದೇನಾ ? ಅನ್ಯಥಾ ಭಾವಿಸಬೇಡಿ ಎಲ್ಲೆಲಿಗೋ ಹೋಗ್ತಾನೆ ಅಂತ, ಯಾಕಂದ್ರೆ ಇಂತಹ ಒಂದೊಂದು ಆಚರಣೆ ಗಳಿಂದಲೇ ನಾವು ಅಂದರೆ ಯುವಜನಾಂಗ ದಾರಿ ತಪ್ಪುತ್ತಿದೆ ಅನ್ನಿಸಿತು ಅಸ್ಟೇ.

  ಇನ್ನೊಮ್ಮೆ ಧನ್ಯವಾದ ಮೂರನೇ ದ್ರುಷ್ಟಿಕೊನವೊಂದನ್ನು ಕೊಟ್ಟಿದ್ದಕ್ಕಾಗಿ.

  ಉತ್ತರ
 8. ಕಬೀರ್
  ಫೆಬ್ರ 15 2011

  ಹಿಂದು ಹುಡುಗಿರನ್ನ ಪ್ರೀತಿಸಲು ನಮಗೂ ಅವಕಾಶ ಕೊಡಿ. ನಾವು ಮದುವೆ ಮಾಡಿಕೊತ್ತಿವಿ. ಸುಮ್ನೆ ಅಡ್ಡಿ ಬರ್ ಬೇಡಿ

  ಉತ್ತರ
  • ಫೆಬ್ರ 15 2011

   ತಾವು ಹಿಂದೂ ಆಗೋದಾದ್ರೆ ಅಡ್ಡಿ ಬರಲ್ಲ :)LoL

   ಉತ್ತರ
 9. ರವಿ ಕುಮಾರ್ ಜಿ ಬಿ
  ಫೆಬ್ರ 15 2011

  come onn ಕಬೀರ್!!!!!!!!

  ಉತ್ತರ
 10. ಫೆಬ್ರ 15 2011

  @ಮಹೇಶ್:
  “ವ್ಯಾಲೆಂಟೈನ್ ಡೇ ಯ ಮೂಲದಲ್ಲಿರುವ ನಿಜ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಈ ಬಲಪಂಥೀಯ ಸಂಘಟನೆಗಳು ಸೋತಿವೆ. ಅದಕ್ಕಾಗಿಯೇ ಅವುಗಳ ಜನಬೆಂಬಲ ಕುಂಠಿತವಾಗಿ ಈಗ ತೆಪ್ಪಗಾಗುವ ಪರಿಸ್ಥಿತಿ ಬಂದಿದೆ ಅಂತ ಅನಿಸುತ್ತಿದೆ.”

  ಈ ಮಾತು ಪರ್ಫ಼ೆಕ್ಟ್!, ಈ ಬಲಪಂಥೀಯರು ಇದೊಂದೆ ಅಲ್ಲ ಹಲವು ವಿಷಯಗಳಲ್ಲಿ,ಅವರ approach ಸರಿ ಇಲ್ಲದೆಯೆ ತಪ್ಪು ಮಾಡಿದವರಂತೆ ತೆಪ್ಪಗಾಗುತ್ತಾರೆ.ಈ ವಿಷಯದಲ್ಲಿ ಎಡ ಪಂಥೀಯರೆ ಬುದ್ದಿವಂತರು ನೋಡಿ ಹೇಳಬೇಕಾದದ್ದನ್ನ ಮೆಲ್ಲಗೆ ಹೇಳುತ್ತಾರೆ.ಅಸಲಿಗೆ ಇಂತ ವಿಷಯಗಳನ್ನ ಹೇಳಬೆಕಾದ ರೀತಿಯು ಅದೇ, ಪ್ರೀತಿಯಿಂದ ಹೇಳಿದರೆ ಕೇಳೊ ಮಂದಿ ಬೆದರಿಸಿ ಹೇಳಿದರೆ ’ಹೋಗೋಲ್ಲೊ’ ಅನ್ನೊದಿಲ್ವ?

  @ಶುಭಾ ಮತ್ತು ನಿರಂಜನ್ :
  ನಿಲುಮೆಯಲ್ಲಿ ಆದಷ್ಟು ಕನ್ನಡ ಬಳಸಿದರೆ ಸಂತೋಷ.

  ಉತ್ತರ
 11. ಫೆಬ್ರ 14 2012

  thuba sogasagi heliddeera .. manassige direct hit agathe …

  ಉತ್ತರ
 12. Shakuntala Iyer
  ಫೆಬ್ರ 14 2012

  ಡುಂಡಿ ರಾಜರ ಕವನ ನೆನಪಾಗುತ್ತೆ – ಆಚಾರಕ್ಕು, ವಿಚಾರಕ್ಕೂ ಅಕ್ಷರ ಮಾತ್ರ ವ್ಯತ್ಯಾಸ ; ಆಚಾರದಲ್ಲಿ “ಆ”ಕಾರವು, ವಿಚಾರದಲ್ಲಿ “ವಿ”ಕಾರವು ಇರುತ್ತದೆ!

  ಉತ್ತರ
 13. ಫೆಬ್ರ 14 2012

  ಮಹೇಶ್, ಉತ್ತಮ ಬರಹಕ್ಕಾಗಿ ಧನ್ಯವಾದಗಳು. ಇವತ್ತು ಟಿ.ವಿ.ಯಲ್ಲಿ ಒಂದು ಕಾರ್ಯಕ್ರಮ ಬಿತ್ತರವಾಗುತ್ತಿತ್ತು. ಹೆಚ್ಚು ಹೊತ್ತು ಚುಂಬನ ಸ್ಥಿತಿಯಲ್ಲಿರುವ ಪ್ರೇಮಿಗಳಿಗೆ ಬಹುಮಾನ ಕೊಡ್ತಾರಂತೆ. ಶೋ ನಡೀತಿತ್ತು. ಹೇಗಿದೆ ನೋಡಿ , ಪ್ರೇಮಿಗಳ ದಿನಾಚರಣೆ. ಇದು ಹೇಳಿ ಕೇಳಿ ಹಿಂದು ಸಂಸ್ಕೃತಿ -ಪರಂಪರೆಗಳ ಮೇಲಿನ ಆಘಾತ ಅಷ್ಟೇ ಅಲ್ಲ, ಯುವಕರನ್ನು ಹುಚ್ಚರನ್ನಾಗಿಸುವ ಹುನ್ನಾರಗಳು. ಇಂತಹ ದಿನಾಚರಣೆಗಳಿಗೆ ಧಿಕ್ಕಾರವಿರಲಿ. ಈಗಾಗಲೇ ರಾತ್ರಿ ೮.೦೦ ಗಂಟೆಯಾಗಿದೆ. ನಮ್ಮ ರಾಜ್ಯದ ಒಬ್ಬ ಸಭ್ಯ ಮಂತ್ರಿಯಾಗಿದ್ದ ಡಾ|| ವಿ.ಎಸ್. ಆಚಾರ್ಯರು ವಿಧಿವಶರಾಗಿ ಆರೇಳು ಗಂಟೆಗಳು ಕಳೆದಿದೆ. ಎಲ್ಲರಿಗೂ ವಿಷ್ಜಯ ತಿಳಿದಿದೆ. ಆದರೂ ಟಿ.ವಿ. ಮಾಧ್ಯಮಗಳಲ್ಲಿ ಪ್ರೇಮಿಗಳ ದಿನದ ಹುಚ್ಚಾಟ ಪ್ರದರ್ಶನ ನಡೆಯುತ್ತಲೇ ಇದೆ. ಇವರಿಗೂ ಧಿಕ್ಕಾರ ವಿರಲಿ.

  ಉತ್ತರ
 14. ಫೆಬ್ರ 16 2013

  enadaru agali nimma mathugalu sathyavagide

  ಉತ್ತರ
 15. bharath and shivu
  ಜನ 2 2015

  ನಿಮ್ಮ ಬರವಣಿಗೆ ಓದೆದಮೇಲೆ ನಾವು ತಿಳ್ಕೊಳ್ಳೊದು ತುಂಬಾ ಇದೆ .
  ಅನ್ಸುತ್ತೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments