ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 6, 2013

1

‘ಮಾನವ ಹಕ್ಕು ಉಲ್ಲಂಘನೆ’ ಅನ್ನುವುದು ಮೋದಿಗೆ ಮಾತ್ರ ಅನ್ವಯವೇ?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

NaModiಕಳ್ಳಬೆಕ್ಕು ತೀರ್ಥಯಾತ್ರೆಗೆ ಹೊರಟು ನಿಂತ ಕತೆ ಗೊತ್ತಿದೆಯಲ್ವಾ! ಅಮೇರಿಕಾದ ವಾರ್ಟನ್-ಇಂಡಿಯಾ ಎಕಾನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಭಾಷಣ ಮಾಡಲು ಆಹಾನ ಕೊಟ್ಟು ಕಡೆಗೆ ಎಡಪಂಥೀಯರ ಒತ್ತಾಯಕ್ಕೆ ಮಣಿದು ಅದನ್ನು ರದ್ದುಗೊಳಿಸಿ ಭಾರತದ ಸಂವಿಧಾನದಡಿ ಜನರಿಂದ ಚುನಾಯಿಸಿ ಬಂದ ಮುಖ್ಯಮಂತ್ರಿಯೊಬ್ಬರಿಗೆ ಅವಮಾನ ಮಾಡುವುದಿದೆಯಲ್ಲ ಅದು ಮೋದಿಗಾದ ಅವಮಾನವಲ್ಲ.ಬದಲಿಗೆ ಆ ರಾಜ್ಯಕ್ಕಾದ ಅವಮಾನ ಕೂಡ ಹೌದು.ಗುಜರಾತ್ ಗಲಭೆಯ ನಂತರ ಮೋದಿಯೆಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಐರೋಪ್ಯ ಒಕ್ಕೂಟ ಇವತ್ತು ಸ್ನೇಹ ಹಸ್ತಚಾಚಿ ನಿಂತಿದೆ.ಆದರೆ ತೀರ್ಥಯಾತ್ರೆಗೆ ಹೊರಟು ನಿಂತ ಕಳ್ಳಬೆಕ್ಕು ಅಮೇರಿಕಾ ಮಾತ್ರ ಇನ್ನು ಹುಸಿ ಧ್ಯಾನದಲ್ಲಿದ್ದಂತಿದೆ.ಮೋದಿಯ ವಿಷಯದಲ್ಲಿ ಅದೂ ಈಗಲೂ ಹಟಮಾರಿ ಧೋರಣೆಯನ್ನು ಮುಂದುವರೆಸಿಕೊಂಡು ಬಂದಿದೆ.

“ನೀವು ಬಯಸುವ ಬದಲಾವಣೆ ನೀವೆ ಆಗಿ ತೋರಿಸಿ” ಅಂದಿದ್ದರು ಗಾಂಧೀಜಿ.ಆದರೆ ಅಮೇರಿಕಾದ ವರಸೆ ಸಲ್ಪ ಉಲ್ಟಾ ಈ ವಿಷಯದಲ್ಲಿ “ತಾನು ಬಯಸುವ ಬದಲಾವಣೆ ಬೇರೆಡೆಯಲ್ಲಿ,ಬೇರಯವರಿಂದ ಆಗಬೇಕು.ತಾನು ಮಾತ್ರ ತನ್ನ ಚಾಳಿ ಬಿಡಲಾರೆ” ಅನ್ನುವಂತೆ.ಮೋದಿಯ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಭಾಷಣ ಬಿಗಿಯುವ ಈ ಅಮೇರಿಕಾ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದೇನು?

ಇಡಿ ಮನುಕುಲದಲ್ಲಿ ಎಂದು ಮರೆಯಾಲಗದಂತಹ ಕ್ರೂರ ಅಧ್ಯಾಯವಾದ ಹಿರೋಷಿಮಾ-ನಾಗಸಾಕಿ ಅಣುಬಾಂಬ್ ದಾಳಿ ಮಾಡುವಾಗ,ಆಫ್ಘನ್ನಲ್ಲಿ ರಷ್ಯಾವನ್ನು ವಿರೋಧಿಸಲಿಕ್ಕಾಗಿ ಬಿನ್ ಲಾಡೆನ್ ಅನ್ನುವ ಭಸ್ಮಾಸುರನನ್ನು ಸೃಷ್ಟಿಸಿದ್ಯಾರು? ಕಡೆಗೆ ಅದೇ ಭಸ್ಮಾಸುರನನ್ನು ಕೊಲ್ಲಲು ಹೊರಟು ಒಂದಿಡಿ ದೇಶವನ್ನೆ ಆಹುತಿ ತೆಗೆದುಕೊಂಡಾಗ,ಇರಾಕಿನಲ್ಲಿ ಕ್ರೂರಿ ಸದ್ದಾಂ ಹುಸೇನ್ ಅನ್ನು ಬೆಳೆಸುವಾಗ,ಸುಳ್ಳು ನೆಪ ಹೇಳಿ ಇರಾಕ್ ಅನ್ನು ಸ್ಮಶಾನ ಮಾಡಿದಾಗ,ವಿಯೆಟ್ನಾಂ ಯುದ್ಧದಲ್ಲಿ ಬಲಿ ತೆಗೆದುಕೊಳ್ಳುವಾಗ,ಬಾಂಗ್ಲಾ ಯುದ್ಧದಲ್ಲಿ ರಕ್ತದಾಹಿ ಪಾಪಿ ಪಾಕಿಗಳ ಜೊತೆ ನಿಂತು ಹೆಂಗಸರು-ಮಕ್ಕಳ ಕಗ್ಗೊಲೆಯಾಗುವುದನ್ನು ನೋಡುತ್ತಾ ಕುಳಿತಾಗ,ಎಲ್ಲಿ ಹೋಗಿತ್ತು ಇವರ ಮಾನವ ಹಕ್ಕುಗಳು? ವಾಲ್ ಸ್ಟ್ರೀಟಿನಲ್ಲಿ ಬಿಕರಿಯಾಗುತ್ತಿತ್ತೇನು?

ಆಫ್ಘನ್,ಇರಾಕ್,ವಿಯೆಟ್ನಾಂ,ಕೊರಿಯಾ ದೇಶಗಳನ್ನು ಹಾಳುಗೆಡವುವಾಗ ಕಾಣದಿದ್ದ ಮಾನವ ಹಕ್ಕುಗಳ ಉಲ್ಲಂಘನೆ ಇವರಿಗೆ ಗುಜರಾತ್ ಗಲಭೆಯಲ್ಲಿ ಕಾಣಿಸಿತಂತೆ.ಅಮೇರಿಕಾದ ವೀಸಾ ಮೋದಿಗೆ ಸಿಗುವುದಿಲ್ಲ ಅಂದರೆ ಅಡ್ಡಿಯಿಲ್ಲ.ಅದರಿಂದ ಪ್ರಪಂಚವೇನು ಮುಳುಗುವುದೂ ಇಲ್ಲ.ಯಾವ ವೀಸಾವನ್ನು ಪಡೆಯದೆಯೇ ಅನಿವಾಸಿ ಭಾರತೀಯರ ಹೂಡಿಕೆ ಗುಜರಾತಿನಲ್ಲಿ ಆಗಿದೆ.ಕೈಗಾರಿಕೆ ಗುಜರಾತ್ ಸೂಕ್ತ ಅನ್ನಿಸಿಕೊಂಡ ಕಾರಣಕ್ಕೆ ಮಾತ್ರ, ಒಂದು ಕಾಲದಲ್ಲಿ ಸೂರ್ಯ ಮುಳುಗದನಾಡು ಅನ್ನುವ ಹೆಸರಿನಲ್ಲಿ ಇದೇ ‘ಮಾನವ ಹಕ್ಕು’ಗಳನ್ನು ಮೂರಾಬಟ್ಟೆ ಮಾಡಿದ್ದ ಬ್ರಿಟನ್ ಕೂಡ ಈಗ ಗುಜರಾತಿನ ಬಾಗಿಲು ತಟ್ಟುತ್ತಿದೆ.ಆದರೆ ‘ಮಾನವ ಹಕ್ಕು’ಗಳ ಉಲ್ಲಂಘನೆಯ ಹರಿಕಾರ ಅಮೇರಿಕಾದ್ದು ಮಾತ್ರ ಇನ್ನು ಅದೇ ಹಳೆ ರಾಗ ಮೋದಿಯ ವಿಷಯದಲ್ಲಿ.ಅಷ್ಟಕ್ಕೂ ಮೋದಿಯೇನು ಹೋಗಿ ಭಾಷಣ ಮಾಡುತ್ತೇನೆಂದು ಕೇಳಿದ್ದರಾ? ಇಲ್ಲವಲ್ಲ! ಅವರೇ ಕರೆದು,ಕಡೆಗೆ ಅವರೆ ಬೇಡ ಅಂತೇಳಿ ಅವಮಾನ ಮಾಡುವುದೆಷ್ಟು ಸರಿ? ಆದರೂ ಈ ವಾರ್ಟನ್ ಬೆಳವಣಿಗೆಯಿಂದ ಮೋದಿಯ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಿತು ಅನ್ನುವುದು ಸುಳ್ಳಲ್ಲ.ಬಹುಷಃ ಅದನ್ನೂ ಊಹಿಸಿಯೇ ಸ್ವಪನ್ ದಾಸ್ ಗುಪ್ತ, “ಥ್ಯಾಂಕ್ಯೂ ವಾರ್ಟನ್.ಭಾರತದಲ್ಲಿನ ‘ನಮೋ’ ಜನಪ್ರಿಯತೆಯ ರೇಟಿಂಗ್ ಗೆ ಇನ್ನೊಂದಿಷ್ಟು ಅಂಕ ಸೇರುವಂತೆ ಮಾಡಿದ್ದಕ್ಕೆ” ಅಂದಿದ್ದು.

ಹೌದು.ಏನಿದು ‘ಮಾನವ ಹಕ್ಕು’ಗಳ ವರಾತ? ಮೋದಿಯನ್ನು ಬಿಟ್ಟು ಇನ್ಯಾರ ಅವಧಿಯಲ್ಲೂ ಕೋಮುಗಲಭೆಗಳು,ಹತ್ಯಾಕಾಂಡಗಳು ಈ ದೇಶದಲ್ಲಿ ನಡೆದೇ ಇಲ್ಲವೇನು? ಮಹಾತ್ಮ ಗಾಂಧೀಜಿಯವರ ಹತ್ಯೆಯಾದಾಗ ‘ಚಿತ್ಪಾವನ ಬ್ರಾಹ್ಮಣ’ರನ್ನು ಗುರಿಯಾಗಿಸಿರಿಲಿಲ್ಲವೇ? ಆಗ ನೆಹರೂವನ್ನು ಯಾರಾದರೂ ಕೊಲೆಗಾರ ಅಂದು ಕರೆದಿರಾ? ಅಕಾಲಿ ದಳವನ್ನು ವಿರೋಧಿಸಲೆಂದೆ ತಾನೇ ಸೃಷ್ಟಿಸಿದ ಭಿಂಧ್ರನ್ ವಾಲೆಯನ್ನು ಆಪರೇಷನ್ ಬ್ಲೂ ಸ್ಟಾರ್ ಮೂಲಕ ಮುಗಿಸಿದ ಇಂದಿರಾ,ಕಡೆಗೆ ಸಿಖ್ ಅಂಗರಕ್ಷಕರಿಂದಲೇ ಹತ್ಯೆಯಾದ ಮೇಲೆ ಸಿಖ್ಖರ ಮೇಲೆ ಮಾರಣಹೋಮ ನಡೆಯಿತಲ್ಲ ಆಗ ರಾಜೀವ್ ಗಾಂಧಿಯನ್ನು ಕೊಲೆಗಾರ ಅನ್ನಿಸಲಿಲ್ಲವೇ? ಅಷ್ಟಕ್ಕೂ ಮೋದಿಯೇನು ಗುಜರಾತ್ ಗಲಭೆಯನ್ನು ರಾಜೀವ್ ರೀತಿಯಲ್ಲಿ “ದೊಡ್ಡ ಮರ ಬಿದ್ದಾಗ ಭೂಮಿ ಅಲುಗಾಡುವುದು ಸಹಜ”ಅಂತ ಉಡಾಫೆಯ,ದರ್ಪದ ಸಮಜಾಯಿಷಿಯನ್ನು ನೀಡಿಲ್ಲ ಅಲ್ಲವೇ? ಹಾಂಷೀಪುರ ಹತ್ಯಾಕಾಂಡದ ಬಗ್ಗೆ ಕೇಳಿದ್ದೀರಿ ತಾನೆ? ಅದು ನಡೆದಿದ್ದು ಯಾರ ಅವಧಿಯಲ್ಲಿ? ಈಗ ವಿತ್ತಮಂತ್ರಿಯಾಗಿರುವ ಚಿದಂಬರಂ ಅವರ ಮೇಲೆ ಆ ಹತ್ಯಾಕಾಂಡ ಕರಿನೆರಳಿದೆ ಮತ್ತದು ರಾಜೀವ್ ಮೂಗಿನಡಿಯಲ್ಲಿ ನಡೆದಿದ್ದು ಅನ್ನುವ ಆರೋಪವೂ ಇದೆ.ಆಗಿದ್ದಾಗ್ಯೂ ಯಾಕೆ ರಾಜೀವ್ ಕಟಕಟೆಯಲ್ಲಿ ನಿಲ್ಲುವುದಿಲ್ಲ?

ಈ ಕೋಮುಗಲಭೆ,ಹತ್ಯಾಕಾಂಡಗಳನ್ನೆಲ್ಲ ಪಕ್ಕಕ್ಕಿಡಿ.ಭೋಪಾಲ್ ಅನಿಲ ದುರಂತದಲ್ಲಿ ನಡೆದಿದ್ದೇನು? ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿಲ್ಲವೇ? ತಮ್ಮದಲ್ಲದ ತಪ್ಪಿಗೆ ಹದಿನೈದು ಸಾವಿರಕ್ಕಿಂತಲೂ ಹೆಚ್ಛು ಅಮಾಯಕ ಜನರು ಪ್ರಾಣ ಕಳೆದುಕೊಂಡು,ಲಕ್ಷಾಂತರ ಜನ ಶಾಶ್ವತ ಅಂಗವಿಕಲರಾಗಿ,ಇಂದಿಗೂ ತಲೆಮಾರುಗಳನ್ನು ಮತ್ತು ಇನ್ನೂ ಹುಟ್ಟದಿರುವ ಮಕ್ಕಳನ್ನು ಕಾಡಿಸುತ್ತಿರುವ ಮಾನವಕುಲದ ಭಯಾನಕ ಕೈಗಾರಿಕ ದುರಂತದ ರೂವಾರಿ ‘ವಾರೆನ್ ಆಂಡರ್ಸನ್’ ಅನ್ನು ದೇಶ ಬಿಟ್ಟು ಕಳಿಸಿದ್ದು ಯಾವ ಸೀಮೆಯ ‘ಮಾನವ ಹಕ್ಕು’ಗಳ ರಕ್ಷಣೆ? ಆಗ ಪ್ರಧಾನಿಯಾಗಿದ್ದವರು ಯಾರು? ಆ ಪ್ರಧಾನಿಯನ್ನು ಕೊಲೆಗಾರ ಅಂತ್ಯಾಕೆ ಕರೆಯಲಿಲ್ಲ?

ಈ ಮಾನವ ಹಕ್ಕುಗಳ ಉಲ್ಲಂಘನೆ ಅನ್ನುವುದು ಗಲಭೆಯಲ್ಲಿ ಮಾತ್ರ ಅಪ್ಪ್ಲೈ ಆಗುವಂತದ್ದೇನು? ಬಹುಷಃ ಕಳೆದ ವರ್ಷ ಉತ್ತರ ಪ್ರದೇಶದ ಚುನಾವಣೆ ಘೋಷಣೆಯಾದ ಸಮಯ ದೆಹಲಿ,ಉ.ಪ್ರಗಳಲ್ಲಿ ಭಯನಾಕ ಚಳಿಗಾಲವಿದ್ದ ಸಮಯ.ಚಳಿಗೆ ಜನ ಸಾಯುತಿದ್ದ,ಪರದಾಡುತಿದ್ದ ಸುದ್ದಿಗಳು ಮಾಮೂಲಿಯಾಗಿದ್ದವು.ತನ್ನನ್ನು ಆರಿಸಿ ಕಳಿಸಿದ ಜನರ ಮೈ ಮುಚ್ಚಲು ತುಂಡು ಬಟ್ಟೆಯೂ ಇಲ್ಲದಿರುವಾಗ,ದಲಿತರ ಹೆಸರೇಳಿಕೊಂಡು ಮುಖ್ಯಮಂತ್ರಿಯಾದ ಮಾಯಾವತಿಯವರ ಮತ್ತು ಅವರ ಪಕ್ಷದ ಚಿನ್ಹೆ ಆನೆಯ ಮೂರ್ತಿಗಳಿಗೆ ಹೊದಿಕೆಯಾಕಲಾಗುತಿತ್ತು.ಜನರನ್ನು ಚಳಿಗೆ ಸಾಯಲು ಬಿಟ್ಟು ಮೂರ್ತಿಗಳಿಗೆ ಬಟ್ಟೆ ಸುತ್ತುವುದ್ಯಾವ ಸೀಮೆಯ ಮಾನವ ಹಕ್ಕು?

ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ,ದಿಗ್ವಿಜಯ್ ಸಿಂಗ್ ಮತ್ತು ಫಾರೂಕ್ ಅಬ್ದುಲ್ಲ ಅವರು ಭಾಗವಹಿಸಿದ್ದರಲ್ಲ,ಆ ಚರ್ಚೆಯಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ಉತ್ತರಿಸುತ್ತ ಮೋದಿ ಹೇಳಿದ್ದು “ಗಲಭೆ ಕೈ ಮೀರುತ್ತಿದ್ದಂತೆ,ನಾನು ಮಧ್ಯಪ್ರದೇಶ,ಮಹಾರಾಷ್ಟ್ರ,ರಾಜಸ್ತಾನದ ಕಾಂಗ್ರೆಸ್ಸ್ ಸರ್ಕಾರಗಳಿಗೆ ತಕ್ಷಣ ಪೋಲಿಸ್ ನೆರವು ಕೋರಿ ಫಾಕ್ಸ್ ಕಳಿಸಿದ್ದೆ.ಆದರೆ ಈ ಮೂರು ರಾಜ್ಯಸರ್ಕಾರಗಳು ಆಗುವುದಿಲ್ಲ ಅಂದು ಬಿಟ್ಟವು” ಅಂದಿದ್ದು ನೆನಪಿದೆಯೇ? ಹಾಗಿದ್ದರೆ ಕಾಂಗ್ರೆಸ್ಸ್ ಕೂಡ ಕಟಕಟೆಯಲ್ಲಿ ನಿಲ್ಲಬೇಕಲ್ಲವೇ?

ಮೋದಿಗೊಂದು ರೂಲ್ಸ್,ಗಾಂಧಿ(ನಕಲಿ)ಗೊಂದು ರೂಲ್ಸಾ? ಇದೆಂಥ Double Standard? ಬಹುಷಃ ಭಾರತದ ಇತಿಹಾಸದಲ್ಲಿ ಮೋದಿಯಷ್ಟು ನಿರಂತರವಾಗಿ ಮಾಧ್ಯಮಗಳಿಂದ ದೂಷಣೆಗೊಳಗಾದ ಇನ್ನೊಬ್ಬ ನಾಯಕನಿಲ್ಲವೇನೋ? ಹಾಗೆಯೇ ಮುಖ್ಯಮಂತ್ರಿಯಾಗಿಯೂ ಈ ಮಟ್ಟಕ್ಕೆ ಜನಪ್ರಿಯತೆ (ಇಷ್ಟೆಲ್ಲಾ ಮೀಡಿಯಾ ಮಸಲತ್ತುಗಳ ನಡುವೆಯೂ) ಪಡೆದ ಮತ್ತೊಬ್ಬ ನಾಯಕನಿಲ್ಲ.ಮೋದಿಯ ವಿರೋಧಿಗಳು,ಹಿತಶತ್ರುಗಳು ಏನೇ ತಿಪ್ಪರಲಾಗ ಹಾಕಿದರೂ ಅವರ ಜನಪ್ರಿಯತೆಗೆ ಅದು ಪೆಟ್ಟು ತರುವಂತದ್ದಲ್ಲ.ಆದ್ದರಿಂದ ಗುಜರಾತ್ ಗಲಭೆ ಅನ್ನುವ ಹಳೆ ಅಸ್ತ್ರವನ್ನು ಮತ್ತೆ ಮತ್ತೆ ಪ್ರಯೋಗಿಸಿ ವಿಫಲವಾಗುವುದಕ್ಕಿಂತ,ಮೋದಿಯನ್ನು ಎದುರಿಸಲು ಬೇರೊಂದು ಅಜೆಂಡಾವನ್ನು ಮೋದಿ ವಿರೋಧಿಗಳು ಹುಡುಕಿಕೊಳ್ಳುವುದು ಒಳ್ಳೆಯದು.

1 ಟಿಪ್ಪಣಿ Post a comment
  1. ತುಳುವ
    ಮಾರ್ಚ್ 7 2013

    ಹೌದು, ಈ ಮಾನವ ಹಕ್ಕುಗಳು ಎಂಬುದು ಕೆಲವರಿಗೆ ಅನುಕೂಲಕ್ಕಾಗಿ ಬಳಾಸಲಿರುವ ಅಸ್ತ್ರ ಅಷ್ಟೆ.. ನಕ್ಸಲರಿಗೆ, ಭಯೋತ್ಪಾದಕರಿಗೆ ಅನ್ವಯಿಸದ ಮಾನವ ಹಕ್ಕುಗಳು ಅಚಾನಕ್ಕಾಗಿ ಪೊಲೀಸರಿಗೆ ಹಾಗೂ ಸೈನಿಕರಿಗೆ ಅನ್ವಯವಾಗಿಬಿಡುತ್ತವೆ.. ಕಾಶ್ಮೀರಿ ಪಂಡಿತರಿಗೆ ಇಲ್ಲದ ಈ ಹಕ್ಕುಗಳು ಅವರನ್ನು ಕಾಶ್ಮೀರದಿಂದ ಓಡಿಸಿದವರಿಗೆ ಸುಲಭವಾಗಿ ದಕ್ಕುತ್ತವೆ.. ಈ ಬಗೆಯ ದ್ವಿಮುಖ ನೀತಿಗೆ ನಮ್ಮ ದೇಶದೊಳಗಡೆ ಅಸಂಖ್ಯ ಉದಾಹರಣೆಗಳು ಸಿಗುತ್ತವೆ..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments