ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 13, 2013

ಭಾರತ ಕಂಡ ವಿಶ್ವಶ್ರೇಷ್ಠ ಗುರು ಶ್ರೀರಾಮಕೃಷ್ಣ ಪರಮಹಂಸ

by ನಿಲುಮೆ

ಶ್ರೀವಿದ್ಯಾ,ಮೈಸೂರು

 

ರಾಮಕೃಷ್ಣ ಪರಮಹಂಸರು ಪರಮದೈವಭಕ್ತ. ಯಾವಾಗಲೂ ದೇವರನ್ನು ಕುರಿತು ಚಿಂತಿಸುತ್ತಿದ್ದರು. ಅವರಿಗೆ ಎಲ್ಲರಲ್ಲಿಯೂ ದೇವರ ಭಾವನೆಯಿತ್ತು. ಅವರು ಸಾಧಾರಣ ಗುರುಗಳಲ್ಲ. ದೇವರನ್ನು ನೋಡುವ ಶಕ್ತಿಯ ಮಟ್ಟದಲ್ಲಿರುವ ಗುರುಗಳು. ಧ್ಯಾನ ಮಾಡುವಾಗಲೆಲ್ಲಾ ದೇವರ ಜೊತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು ಎಂದು ಅವರ ಶಿಷ್ಯರು ಹೇಳುತ್ತಿದ್ದರು. ಅವರು ನಮ್ಮನ್ನು ಪ್ರೀತಿಯಿಂದ ಮಕ್ಕಳ ತರಹ ನೋಡುವರು.ಅವರು ಹೇಳುತ್ತಿದ್ದರು “ಮುಗ್ಧ ಮನಸ್ಸುಳ್ಳವರು ದೊಡ್ಡ ಜ್ಞಾನಿಗಳಾಗುವರು”. ಅವರ ಮನಸ್ಸನ್ನು ನಾವು ಅರ್ಥ ಮಾಡಿಕೊಂಡರೆ ಅವರೆಷ್ಟು ಮಹಾತ್ಮರೆಂದು ಗೊತ್ತಾಗುವುದು. ಅವರು ಎಲ್ಲಾ ಧರ್ಮಗಳನ್ನು ಹಾಗೂ ದೇವರನ್ನು ಗೌರವದಿಂದ ನೋಡುತ್ತಿದ್ದರು. ಅವರು ತನ್ನ ಪತ್ನಿ ಶಾರದಾದೇವಿಯವರನ್ನು ತಾಯಿಯ ಭಾವನೆಯಿಂದ ನೋಡುತ್ತಿದ್ದರು. ಕಾಳಿಮಾತೆಯ ಭಕ್ತರಾಗಿದ್ದರು. ಅವರಿಗೆ ವಿಷಿಷ್ಟವಾದ ಶಕ್ತಿ ಇದ್ದರೂ ಕೂಡ ಜನರಿಗೆ ಸುಲಭವಾಗಿ ಹಂತ ಹಂತವಾಗಿ ವಿಗ್ರಹ ಪೂಜೆ ಮಾಡುವುದನ್ನು ತೋರಿಸಿದರು. ಅವರು ಕರುಣಾಮಯಿ. ವಿವೇಕಾನಂದನನ್ನು ತನ್ನ ಸ್ನೇಹಿತ ಹಾಗೂ ಮಗನಂತೆ ನೋಡಿಕೊಳ್ಳುತ್ತಿದ್ದರು. ರಾಮಕೃಷ್ಣರಿಗೆ ವಿವೇಕಾನಂದನಲ್ಲಿ ಅಪಾರ ವಿಶ್ವಾಸವಿತ್ತು ಹಾಗೂ ವಿವೇಕಾನಂದ ಮಹಾನ್ ವ್ಯಕ್ತಿ ಆಗುವನೆಂದು ಭರವಸೆ ಇತ್ತು. ಆದರೆ, ವಿವೇಕಾನಂದ ಅದನ್ನು ನನಸಾಗಿಸಿದರು. ವಿವೇಕಾನಂದ ರಾಮಕೃಷ್ಣರ ಸಂದೇಶಗಳನ್ನು ಜಗತ್ತಿಗೆ ಸಾರಿದರು.ರಾಮಕೃಷ್ಣರಲ್ಲಿ ಅಹಂಕಾರ, ಕಾಮ, ಮೋಹ, ವಂಚನೆ ಯಾವುದೂ ನುಸುಳುತ್ತಿರಲಿಲ್ಲ. ಆದರೆ ಕೆಲವರಿಗೆ ರಾಮಕೃಷ್ಣ- ಶಾರದಾದೇವಿ ಪ್ರೀತಿಯ ಮೇಲೆ ತಪ್ಪಾಗಿ ಭಾವಿಸಿದ್ದಾರೆ. ಆದರೆ ಅವರಿಗೆ ಲೈಂಗಿಕ ಜೀವನದ ಮೇಲೆ ಒಂದು ಚೂರು ಆಸಕ್ತಿ ಇರಲಿಲ್ಲ. ಶಾರದಾದೇವಿಯವರು ರಾಮಕೃಷ್ಣರ ಸೇವೆ ಮಾಡುತ್ತಿದ್ದರು. ರಾಮಕೃಷ್ಣರು ಶಾರದಾದೇವಿಯವರನ್ನು ತಾಯಿ-ಮಗು ಭಾವನೆಯಿಂದ ನೋಡುತ್ತಿದ್ದರು. ಶಾರದಾದೇವಿಯವರಿಗೆ ಆರೋಗ್ಯ ಸರಿ ಇಲ್ಲದಿರುವಾಗ ಮಹಿಳೆಯರನ್ನು ಕಳುಹಿಸಿ ಶುಶ್ರೂಷೆ ಮಾಡಿಸುತ್ತಿದ್ದರು. ಶಾರದಾಮಾತೆಗೆ ಒಂದು ಚೂರು ನೋವಾಗದಂತೆ ಹೂವಿನ ತರಹ ನೋಡಿಕೊಳ್ಳುತ್ತಿದ್ದರು. ಇದರಲ್ಲಿ ಯಾಕೆ ಅನುಮಾನ, ತಪ್ಪು ಭಾವನೆ ?? ಅವರ ಗುಣಗಳು, ಆದರ್ಶಗಳು ತುಂಬಾ ಅದ್ಭುತ. ಅವರಿಂದ ವಿವೇಕಾನಂದ ಜಗತ್ತಿನಲ್ಲಿ ಮಹಾನ್ ವ್ಯಕ್ತಿಯಾಗಿದ್ದು !! ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ !! ಹಿಂದೂ ಪಂಚಾಂಗದ ಪ್ರಕಾರ ಇಂದು ಅವರ ಜನ್ಮಜಯಂತಿ ಪ್ರಯುಕ್ತ ಅವರ ಜೀವನವನ್ನು ಓದಿ ..

ಬಂಗಾಳದ ಕಾಮಾರಪುಕುರದಲ್ಲಿ ಧರ್ಮಿಷ್ಠ ಬ್ರಾಹ್ಮಣ ಕುಟುಂಬ. ಭಕ್ತಿ-ಭವ್ಯತೆಯ ಸಾತ್ವಿಕ ಜೀವನಕ್ಕೆ ಹೆಸರುವಾಸಿಯಾದ ಮನೆತನ. ಕ್ಷುದೀರಾಮ ಚಟ್ಟೋಪಾಧ್ಯಾಯ ಮನೆಯ ಯಜಮಾನ. ಚಿನ್ನ-ಬೆಳ್ಳಿ, ಹಣ-ಕಾಸು, ಭೂಮಿ-ಕಾಣಿ ಅಷ್ಟಾಗಿ ಏನೂ ಇಲ್ಲದ ದೌಭಾಗ್ಯ ದೇವತೆಯ ದಾಸನಾಗಿದ್ದರೂ, ಪ್ರಾಮಾಣಿಕತೆ, ಸತ್ಯಸಂಧತೆ, ನ್ಯಾಯನಿಷ್ಠತೆ, ಧರ್ಮ ಪರಾಯಣತೆಗೆ ಕಾಮಾರಪುಕುರದಲ್ಲಿಯೇ ಅಲ್ಲ, ನೆರೆಹೊರೆಯ ಗ್ರಾಮಗಳಲ್ಲಿಯೂ ಹೆಸರುವಾಸಿಯಾಗಿದ್ದನು.

ಈತನ ಜೀವನದ ಸಂಗಾತಿ, ಚಂದ್ರಮಣಿದೇವಿ, ಕುಲೀನ ನಾರಿ. ಸರಳ ಸ್ವಭಾವಿ. ಸದ್ಗುಣಿ ಹಾಗೂ ವಾತ್ಸಲ್ಯಮಯಿ. ಅತಿಥಿ-ಅಭ್ಯಾಗತರ ಸತ್ಕಾರ ಎಂದರೆ ದೈವಭಕ್ತಿಯಷ್ಟೇ ನಿಷ್ಠೆ. ಪತಿಗೆ ತಕ್ಕ ಸತಿಯಾಗಿ, ಗ್ರಾಮದ ಜನರೆಲ್ಲರಿಗೂ ಅಚ್ಚುಮೆಚ್ಚಿನವಳಾಗಿ ಬಡತನದಲ್ಲಿಯೂ ಮನೆಯ ಭಾಗ್ಯದೇವಿ ಎನಿಸಿ, ಬಂಗಾಳದ ಬಾಳುವೆ ನಡೆಸುತ್ತಿದ್ದಳು.

ಈ ದಂಪತಿಗಳಿಗೆ ದೇವರ ಅನುಗ್ರಹದಿಂದ ೧೮೩೬ನೆಯ ಫೆಬ್ರವರಿ ೧೭ರಂದು ಗಂಡುಮಗು ಜನಿಸಿತು. ಗಯೆಯ ದೇವರ ಹೆಸರಿನಲ್ಲಿಯೇ ಗದಾಧರ ಎಂದು ನಾಮಕರಣ ಮಾಡಿದರು. ತಾಯ್ತಂದೆಯರ ಕಣ್ಮಣಿಯಾಗಿ ಬೆಳೆಯುತ್ತಿದ್ದ ಗದಾಧರನನ್ನು ಮುದ್ದಿಗೆ ಗದಾಯ್ ಎಂದು ಕರೆಯುತ್ತಿದ್ದರು, ಮಗುವಿಗೆ ಎಲ್ಲಿ ಏನು ಹಾನಿ ಆಗುವುದೋ ಎಂಬ ಭಯದಲ್ಲಿಯೇ ಎಚ್ಚರಿಕೆಯಿಂದ ಚಂದ್ರಮಣಿ ನೋಡಿಕೊಳ್ಳುತ್ತಿದ್ದಳು. ತಂದೆ ಕ್ಷುದೀರಾಮನಿಗಂತೂ ಮಗನು ಮುದ್ದೋ ಮುದ್ದು. ತನಗೆ ವಿರಾಮ ದೊರೆತಾಗಲೆಲ್ಲಾ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ದೇವರ ನಾಮ ಹೇಳಿಕೊಡುತ್ತಿದ್ದ. ಸಾಕಷ್ಟು ಮಂದಿ ಸಾಧು-ಸಂತರ ಚರಿತ್ರೆಯನ್ನು ಕಥೆಯ ರೂಪದಲ್ಲಿ ತಿಳಿಸುತ್ತಿದ್ದ. ಏನೇ ಹೇಳಿದರೂ ಗದಾಯ್‍ಗೆ ಥಟ್ಟನೆ ಗ್ರಹಿಸುವ, ಗ್ರಹಿಸಿದ ವಿಚಾರವನ್ನು ಚಿರಕಾಲ ಸ್ಮರಣೆಯಲ್ಲಿಟ್ಟುಕೊಂಡಿರುವ ಅದ್ಭುತ ಶಕ್ತಿ ಇತ್ತು. ಅವನು ಹಾಸ್ಯಪ್ರವೃತ್ತಿಯವನು, ತುಂಟ ಮತ್ತು ಮುದ್ದಾಗಿದ್ದ. ಅವನಲ್ಲಿ ಸ್ತ್ರೀಸಹಜವಾದ ಸೊಬಗಿತ್ತು. ಬಾಲ್ಯದಿಂದಲೇ ಅವನಿಗೆ ವಿಚಿತ್ರವಾದ ಅನುಭವಗಳಾಗುತ್ತಿದ್ದವು.

ಅವನಿಗೆ ಎಂಟು ವರ್ಷವಾಗಿದ್ದಾಗ ಅವನ ತಂದೆ ಇದ್ದಕ್ಕಿದ್ದಂತೆ ಆಕಸ್ಮಿಕ ಮರಣಕ್ಕೆ ತುತ್ತಾದ. ಈ ತಾಯಿ ಚಂದ್ರಮಣಿ ದೇವಿಗೆ ತನ್ನ ಮೂವರು ಗಂಡು ಮಕ್ಕಳಲ್ಲಿ ಗದಾಯ್ ಬಗ್ಗೆಯೇ ಹೆಚ್ಚಿನ ಯೋಚನೆ, ಇಲ್ಲದ ಚಿಂತೆ ಹೆಚ್ಚಿತು. ಇದರ ಕಾರಣ. ಹುಡುಗಾಟಿಕೆಯಲ್ಲಿಯೂ ವಿಲಕ್ಷಣ ಬುದ್ಧಿ.

ಗದಾಯ್‍ಗೆ ಒಂಬತ್ತು ವರ್ಷವಾಗಿದ್ದಾಗ ಲೌಕಿಕ ಜ್ಞಾನ ಪೂರ್ಣವಾಗಿ ಫಲಿಸಿತ್ತು. ಅವನಿಗೆ ಉಪನಯನ ಸಂಸ್ಕಾರವನ್ನು ತಾಯಿ ಮಾಡಿಸಿದಳು. ಗದಾಯ್ ನಿಜಕ್ಕೂ ತುಂಬಾ ರಸಿಕ. ಯಾರ ಮನಸ್ಸಿಗೂ ನೋವಾಗದಂತೆ ಜನರನ್ನು ನಲಿಸುವುದರಲ್ಲಿ, ನಗಿಸುವುದರಲ್ಲಿ ತುಂಬಾ ನಿಪುಣ. ಅದರಲ್ಲೂ ಯಾರಾದರೂ ತುಂಬಾ ಯಾವ ವಿಚಾರದಲ್ಲಿ ಆದರೂ ಜಂಬ ಕೊಚ್ಚಿಕೊಳ್ಳುತ್ತಿದ್ದರೆ ನಯವಾಗಿ ಅವರನ್ನು ತನ್ನ ಮುದ್ದಿನ  ಬುಟ್ಟಿಯಲ್ಲಿಳಿಸಿ, ಸರಿದಾರಿಗೆ ತರುವುದರಲ್ಲಿ ತುಂಬಾ ಜಾಣ.

ಗದಾಯ್ ದಿನಕ್ರಮೇಣ ಜಾಣತನ, ತುಂಟತನ ಎರಡರಲ್ಲೂ ಪ್ರವೀಣನೆನಿಸುತ್ತಾ ಹೋದ. ಶಾಲೆಗೆ ನೆಪಮಾತ್ರಕ್ಕೆ ಹೋಗುತ್ತಿದ್ದರೂ ಸಹ, ಅಲ್ಲಿನ ಪಾಠಪ್ರವಚನಗಳಲ್ಲಿ ಅಷ್ಟಾಗಿ ಅಭಿರುಚಿ ಇರಲಿಲ್ಲ. ಪುಸ್ತಕದ ಹಾಳೆಯ ಮೇಲೆ ಯಾವುದಾದರೂ ದೇವರ ಚಿತ್ರವನ್ನು ಬಿಡಿಸುತ್ತಲೋ, ಗುನುಗುವ ಧ್ವನಿಯಲ್ಲಿ ದೇವರನಾಮವನ್ನು ಹಾಡುತ್ತಲೋ ಕುಳಿತಿರುತ್ತಿದ್ದ.

ಗದಾಯ್‍ಗೆ ಕ್ರಮೇಣ ಶಾಲೆಯ ಓದು ತೀರ ಬೇಸರ ತಂದಿತು. ತುಂಬಾ ಕಾಲ ಮನೆಯಲ್ಲಿಯೇ ಏಕಾಂತದಲ್ಲಿಯೇ ಕಳೆಯತೊಡಗಿದ. ಪರಮಾತ್ಮನ ಪಾರಮಾರ್ಥಿಕ ಚಿಂತನೆ ಇವನ ಅಂತರಂಗದಲ್ಲಿ ಹೆಚ್ಚಾಗತೊಡಗಿತು.  ಚಂದ್ರಮಣಿದೇವಿಗೆ ತನ್ನ ಈ ಕಡೆಯ ಮಗನದೇ ತೀರ ಯೋಚನೆ ಆಯಿತು. ಗದಾಯ್ ಈಗ ಹದಿನೇಳು ವರ್ಷದ ಚಿಗುರು ಪ್ರಾಯದ ಯುವಕ ಆದ. ಲೌಕಿಕ ಆಸೆ ಆಕಾಂಕ್ಷೆಗಳ, ಸುಖ-ಸಂತೋಷದ ಯಾವ ಲಾಲಸೆಯೂ ಇವನಲ್ಲಿರಲಿಲ್ಲ. ಸದಾ ಲೌಕಿಕ ಬಂಧನದಿಂದ ಮುಕ್ತಿಪಡೆಯುವುದು ಹೇಗೆ? ಎಂಬ ವೈಚಾರಿಕ ದೃಷ್ಟಿ ಹರಿಯತೊಡಗಿತು.

ಚಿಕ್ಕ ವಯಸ್ಸಿನಲ್ಲಿಯೇ ತಮ್ಮನ ಮನಸ್ಸಿನಲ್ಲಿ ಮೂಡುತ್ತಿರುವ ದೈವಕ ವಿಚಾರಗಳನ್ನು ತಿಳಿದು ಅಣ್ಣ ದಿಗ್ರ್ಭಾಂತನಾದ. ತಾಯಿ ಧಿಕ್ಕರಿಯದೆ ತಲೆಯ ಮೇಲೆ ಕೈಯಿಟ್ಟುಕೊಂಡು ಕುಳಿತಳು. ಕಡೆಗೆ ಗದಾಯ್ ಅನ್ನು ಅವನ ಸ್ವತಂತ್ರ ಜೀವನದ ದಾರಿಯಲ್ಲಿ ಯಾರಿಗೂ ಅಡ್ಡಿ ಆಗಲೂ ಮನಸ್ಸಾಗಲಿ, ಧೈರ್ಯ ಬರಲಿಲ್ಲ. ಗದಾಯ್ ಸದಾ ರಾಮನ ಬಗ್ಗೆ, ಕೃಷ್ಣನ ಬಗ್ಗೆ ಹಾಡುತ್ತಿದ್ದ. ಒಬ್ಬನೇ ಕುಳಿತು ಏಕಾಂತದಲ್ಲಿ ಚಿಂತಿಸುತ್ತಿದ್ದ. ಏಕಪಾತ್ರಾಭಿನಯ ಮಾಡುತ್ತಿದ್ದ. ಆದ್ದರಿಂದ ಎಲ್ಲರೂ ಅವನನ್ನು ರಾಮಕೃಷ್ಣ ಎಂದು ಕರೆಯುತ್ತಿದ್ದರು. ಗದಾಯ್‍ಗೂ ಈ ಹೆಸರು ತುಂಬಾ ಹಿಡಿಸುತ್ತಿತ್ತು.

ಅಣ್ಣ ರಾಮೇಶ್ವರ ಗದಾಯ್‍ನನ್ನು ಕಲ್ಕತ್ತೆಗೆ ಕರೆದುಕೊಂಡು ಬಂದ. ಕಲ್ಕತ್ತಾದಿಂದ ಉತ್ತರ ದಿಕ್ಕಿನಲ್ಲಿ ಮೂರು-ನಾಲ್ಕು ನೈಲಿಗಳ ದೂರದಲ್ಲಿಯೇ ಗಂಗಾ ನದಿಯ ದಡದಲ್ಲಿ ಒಂದು ಪುಣ್ಯ ಸ್ಥಳ, ದಕ್ಷಿಣೇಶ್ವರ. ಅಲ್ಲಿ ರಾಸಮಣಿ ಎಂಬ ಒಬ್ಬ ಸಿರಿವಂತ ವಿಧವೆ. ತುಂಬಾ ದೈವಭಕ್ತೆ. ಆಕೆ ಗಂಗಾನದಿಯ ಪೂರ್ವದಲ್ಲಿ ಕಾಳಿಮಾತೆಯ ದೇಗುಲವನ್ನು ಕಟ್ಟಿಸಿದ್ದಳು. ದಿವ್ಯ ಭವ್ಯ ದೇಗುಲ, ದೇವಾಲಯಕ್ಕೆ ಅರ್ಹನೆನಿಸಿದ ಅರ್ಚಕನೋರ್ವನ ಅವಶ್ಯಕತೆ ಇತ್ತು. ವಿಧವೆ ಕಟ್ಟಿಸಿದ ದೇವಾಲಯವೆಂದು ಯಾರೊಬ್ಬರೂ ಅರ್ಚನೆಗೆ ಬರಲು ಹಿಂಜರಿದರು. ಕಲ್ಕತ್ತೆಯಲ್ಲಿಯೇ ಅಣ್ಣ, ರಾಮೇಶ್ವರನೊಂದಿಗೆ ಇರುತ್ತಿದ್ದ ರಾಮಕೃಷ್ಣರು ದಿನವೂ ಕಾಳಿಕಾ ದೇವಾಲಯದ ಕಡೆಬರುತ್ತಿದ್ದರು. ದೇವಾಲಯದ ಸುತ್ತಲೂ ಪ್ರದಕ್ಷಿಣೆ ಬಂದು, ಭಕ್ತಿಯಿಂದ ಕೈಜೋಡಿಸಿಕೊಂಡು, ಮಾತೆಯ ಮಹಿಮೆಯ ಬಗ್ಗೆ ಹಾಡುತ್ತಿದ್ದರು.

ಮಧುರನಾಥ ವಿಶ್ವಾಸ ಎಂಬುವವನು, ರಾಸಮಣಿಯ ಅಳಿಯ. ರಾಮಕೃಷ್ಣರಿಗೆ ದೇವಿಯ ಬಗ್ಗೆ ಇದ್ದ ಶ್ರದ್ಧೆ-ಭಕ್ತಿಯನ್ನು ಕಂಡು ಮಾರುಹೋಗಿದ್ದ. ದಿನಕ್ರಮೇಣ ಈರ್ವರಲ್ಲೂ ಸ್ನೇಹವೂ ಬೆಳೆಯಿತು. ರಾಸಮಣಿಯೊಂದಿಗೆ ರಾಮಕೃಷ್ಣರ ಪರಿಚಯ ಮಾಡಿಸಿದ. ರಾಮಕೃಷ್ಣರು ಮಧುರನಾಥನ ಸಲಹೆಗೆ ಒಪ್ಪಿಕೊಂಡು ದೇಗುಲದ ಅರ್ಚಕನ ಕೆಲಸಕ್ಕೆ ಸೇರಿದರು.

ರಾಮಕೃಷ್ಣರು ಕಾಳಿಮಾತೆಯನ್ನು ಆರಾಧಿಸುತ್ತಿದ್ದ ರೀತಿಯೇ ವಿಶಿಷ್ಟ ಮತ್ತು ವಿಚಿತ್ರ ಎನಿಸಿತ್ತು,. ಬಾಲ್ಯದಿಂದಲೂ ಅವರಿಗೆ ಧ್ಯಾನದಲ್ಲಿ ಮೈಮರೆಯುವ ಯೋಗ ಒಲಿದು ಬಂದಿತ್ತು. ಇಹಲೋಕದ ಪರಿವೆಯೇ ಅವರಿಗೆ ಇರುತ್ತಿರಲಿಲ್ಲ. ಎಲ್ಲೆಲ್ಲೂ ವಿಗ್ರಹರೂಪದ ಕಾಳಿಮಾತೆಯೇ ಅವರ ದೃಷ್ಟಿಯೇ ಮಹಾಮಾತೆಯಾಗಿ ಕಾಣುತ್ತಿದ್ದಳು. ವಿವಿಧ ರೀತಿಯಲ್ಲಿ, ವಿವಿಧ ಪುಷ್ಪಗಳಿಂದ ಮಾತೆಯನ್ನು ಅಲಂಕರಿಸುತ್ತಿದ್ದಂತೆಯೇ ಆನಂದದಿಂದ ಅಲೌಕಿಕ ರೀತಿಯಲ್ಲಿ ಹುಚ್ಚರಂತಾಗುತ್ತಿದ್ದರು. ತನ್ಮಯತೆಯಲ್ಲಿ ಮೈಮರೆಯುತ್ತಿದ್ದರು. ತಾಯಿಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ತಾಯಿಯ ದರ್ಶನಕ್ಕಾಗಿ ಅವರ ತವಕ ಅಪಾರ. ತಾಯಿಯನ್ನು ಪ್ರತ್ಯಕ್ಷವಾಗಿ ಕಾಣುವ ಹಂಬಲದಿಂದ ಹುಚ್ಚರಂತೆ ಪ್ರತಿಮೆಯ ಮುಂದೆ ಅಳುತ್ತಿದ್ದರು.

ದಿನಗಳು ಕಳೆದಂತೆ ರಾಮಕೃಷ್ಣರಿಗೆ ದೇವಿಯ ದರ್ಶನವಾಗಲಿಲ್ಲವೆಂದು ಅಸಮಾಧಾನವಾಯಿತು. ಅವರ ಹೃದಯ ವಿಚಲಿತಗೊಂಡು, ಭಕ್ತಿಯ ಹುಚ್ಚು ಪರಮಾವಧಿ ಮುಟ್ಟಿತು. ಕಾಳಿಮಾತೆಯ ಖಡ್ಗವನ್ನು ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಖಡ್ಗವು ಹೂಮಾಲೆ ಆಯಿತು. ಅವರಿಗೆ ಪ್ರಜ್ಞೆತಪ್ಪಿ ಸುತ್ತಲಿನ ದೃಶ್ಯ, ವಸ್ತುಗಳು ಕಾಣುತ್ತಿರಲಿಲ್ಲ. ಒಂದು ದಿವ್ಯ ಬೆಳಕು ಅವರ ಕಣ್ಣಿನ ಮುಂದೆ ಕಾಣಿಸಿತು. ಕಾಳಿಮಾತೆ ಪ್ರತ್ಯಕ್ಷಳಾಗಿ ಅವರಿಗೆ ಸಮಾಧಾನ ಮಾಡಿ, ಪ್ರೀತಿಯಿಂದ ಮಾತನಾಡಿಸಿ, ದರ್ಶನ ನೀಡಿದಳು. ಆಮೇಲೆ ಅವರನ್ನು ಲೋಕದಲ್ಲಿ ಮತ್ತೆ ತಂದುಬಿಟ್ಟಿತು.

ರಾಮಕೃಷ್ಣರಿಗೆ ದೇವಿಯ ಮೇಲೆ ಆನಂದವಾಗಿ, ಕುಣಿದಾಡಿ, ಭಕ್ತಿ ಹೆಚ್ಚಾಗತೊಡಗಿತು. ಮನಬಂದಾಗ ಧ್ಯಾನನಿರತನಾಗಿ ತಾಯಿಯೊಂದಿಗೆ ನಿರರ್ಗಳವಾಗಿ ಮಾತಾಡುತ್ತಿದ್ದರು, ಆನಂದಿಸುತ್ತಿದ್ದರು. ತಾಯಿಯನ್ನು ನಗಿಸುತ್ತಾ, ತಾವೂ ನಗುತ್ತಿದ್ದರು. ನೈವೇದ್ಯದ ತಿಂಡಿಯನ್ನೂ, ಹಣ್ಣುಹಂಪಲನ್ನೂ ತಿನ್ನಿಸುತ್ತಿದ್ದರು, ಹಾಲು ಕುಡಿಸಿ, ಚಪ್ಪಾಳೆ ತಟ್ಟುತ್ತಾ ಕುಣಿಯುತ್ತಿದ್ದರು. ಜನರಲ್ಲರ ಕಣ್ಣಿಗೆ ಹುಚ್ಚರಂತೆ ಕಂದುಬಂದರೂ, ರಾಮಕೃಷ್ಣರು ಕಾಳಿಮಾತೆಯ ಸೆರಗಿಗೆ ಅಂಟಿಕೊಂಡಿರುವ ಮುದ್ದು ಮಗುವಿನಂತಾಗಿ ಹೋದರು. ರಾಸಮಣಿಗೆ ರಾಮಕೃಷ್ಣರು ಮಹಾತ್ಮರೆಂದು ಭಾಸವಾಯಿತು.

ರಾಮಕೃಷ್ಣರ ಕಾಳಿಮಾತೆಯೊಂದಿಗೆ ಸಾಕ್ಷಾತ್ಕಾರದ ವಿಚಾರ ಶರವೇಗದಲ್ಲಿ ಎಲ್ಲೆಡೆ ಹಬ್ಬತೊಡಗಿತು. ಜೊತೆಗೆ ಹುಚ್ಚುಭಕ್ತಿ ಎಂಬ ಕಿಂವದಂತಿಯೂ ಹರಡುತ್ತಾ ಹೋಯಿತು. ತಾಯಿ ಚಂದ್ರಮಣಿಗೆ ಚಿಂತೆಯಾಯಿತು. ಮದುವೆ ಮಾಡಿಸಿದರೆ ಸರಿಹೋಗಬಹುದೆಂದು ಪ್ರಯತ್ನಿಸಿದರು. ಸರಿಯಾದ ವಧು ಸಿಗುತ್ತಿರಲಿಲ್ಲ. ಒಂದು ದಿನ ರಾಮಕೃಷ್ಣರು ತಾಯಿಯ ಚಿಂತೆಯನ್ನು ವಿಚಾರಿಸಿದಾಗ “ನಿಮಗೆ ಬೇಕಾದ ವಧು ಜಯರಾಂಬಾಟಿಯಲ್ಲಿ ರಾಮಚಂದ್ರ ಮುಖರ್ಜಿ ಎಂಬುವವರ ಮನೆಯಲ್ಲಿ ಬೆಳೆಯುತ್ತಿದೆ, ಹೋಗಿ, ಅಲ್ಲಿ ವಿಚಾರಿಸಿ, ನಿಮ್ಮ ಇಚ್ಛೆ ಈಡೇರುವುದು” ಎಂದು ಹೇಳಿದರು.

ತಾಯಿ ಚಂದ್ರಮಣಿ, ಮಗ ರಾಮೇಶ್ವರನೊಂದಿಗೆ ಜಯರಾಂಬಾಟಿಗೆ ಬಂದು ವಿಚಾರಿಸಿದಾಗ ರಾಮಕೃಷ್ಣರ ಮಾತು ನಿಜವಾಗಿತ್ತು. ರಾಮಚಂದ್ರ ಮುಖರ್ಜಿ ಮನೆಯಲ್ಲೂ ಶಾರದಾಮಣಿ ಎಂಬ ಐದು ವರ್ಷದ ಹುಡುಗಿಗೆ ವಧುವನ್ನು ಹುಡುಕುತ್ತಿದ್ದರು. ಸರಿಯಾದ ಸಮಯದಲ್ಲಿ ವಧು ಸಿಕ್ಕಿದನಲ್ಲಾ ಎಂದು ಆನಂದವಾಯಿತು. ರಾಮಚಂದ್ರ ಮುಖರ್ಜಿ ಅವರು ಆದಷ್ಟು ಸಂಭ್ರಮದಿಂದಲೇ ತಮ್ಮ ಮಗಳಾದ ಶಾರದೆಯನ್ನು ರಾಮಕೃಷ್ಣರಂತಹ ದೈವಭಕ್ತರಿಗೆ ಕೊಟ್ಟು ಮದುವೆ ಮಾಡಿದರು.

ತಾಯಿ ಚಂದ್ರಮಣಿ ಮದುವೆಗೆ ಶಾರದಾಮಣಿಗೆ ಆಭರಣಗಳನ್ನು ನೆರೆಮನೆಯಿಂದ ಸಾಲವಾಗಿ ತಂದಿದ್ದರು. ಮದುವೆ ಆದಮೇಲೆ ಅವುಗಳನ್ನು ಹಿಂದಿರುಗಿಸಬೇಕಾಯಿತು. ಆದರೆ ತಾಯಿ ಶಾರದಾಮಣಿಗೆ ಇರುವ ಆಭರಣಗಳ ವ್ಯಾಮೋಹವನ್ನು ಅರಿತಿದ್ದಳು. ಆದ್ದರಿಂದ ತಾಯಿಗೆ ಚಿಂತೆಯಾಗಿ ರಾಮಕೃಷ್ಣರಿಗೆ ತಿಳಿಸಿದಳು. ಶಾರದಾಮಣಿ ಮಲಗಿರುವಾಗ ಗೊತ್ತಾಗದಂತೆ ರಾಮಕೃಷ್ಣ ಆಭರಣಗಳನ್ನು ಕಳಚಿದರು. ಶಾರದಾಮಣಿ ಎದ್ದಾಗ ಆಭರಣಗಳು ಮಾಯವಾಗಿರುವುದನ್ನು ನೋಡಿ ರಂಪಾಟ ಮಾಡಿದಳು. ತಾಯಿ ಚಂದ್ರಮಣಿ ಅವಳನ್ನು ಎತ್ತಿಕೊಂಡು, ಮುದ್ದಿಸುತ್ತಾ, ಸಮಾಧಾನ ಮಾಡಿದಳು. ಶಾರದಾಮಣಿಯ ಚಿಕ್ಕಪ್ಪನಿಗೆ ವಿಷಯ ತಿಳಿದು ಕೋಪದಿಂದ ಅವರ ಮನೆಗೆ ಬಂದು ಶಾರದಾಮಣಿಯನ್ನು ಕರೆದುಕೊಂಡು ಜಯರಾಂಬಾಟಿಗೆ ಹೊರಟುಹೋದನು. ತಾಯಿ ಗಾಬರಿಯಿಂದ ಇದ್ದನ್ನು ನೋಡಿ ರಾಮಕೃಷ್ಣ ಸಮಾಧಾನ ಪಡಿಸಿದ.

ಮದುವೆ ಆದರೂ ಸಹ ರಾಮಕೃಷ್ಣರ ಮುಖದಲ್ಲಿ ವೈರಾಗ್ಯದ ಲಕ್ಷಣವೇ ತುಂಬಿ ತುಳುಕುತ್ತಿತ್ತು. ಬ್ರಹ್ಮಚರ್ಯೆಯ ದಿವ್ಯ ತೇಜಸ್ಸೇ ತಾಂಡವ ಆಡುತ್ತಿತ್ತು. ಮದುವೆಯ ನಂತರ ಕಾಮಾರಪುಕುರದಲ್ಲಿಯೇ ಸುಮಾರು ಒಂದೂ-ಒಂದೂವರೆ ವರ್ಷಗಳ ಕಾಲ ಇದ್ದ ರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಮಾತೆಯ ಸನ್ನಿಧಿಗೆ ಮರಳಿದರು. ದೇವಿಯ ಆರಾಧನೆ ಹಾಗೂ ಆಧ್ಯಾತ್ಮ ಸಾಧನೆಯಲ್ಲಿ ಮುಳುಗಿದರು. ಅಶನ-ವಸನಗಳ ಪರಿವೆಯೂ ಇಲ್ಲದೆ ಸದಾ ತಾಯಿಯ ದರ್ಶನದಲ್ಲಿಯೇ ತಲ್ಲೀನತೆ, ತಾದಾತ್ಮ್ಯತೆಯಲ್ಲಿ ಲೀನವಾಗಿರಬೇಕೆಂಬುದೇ ರಾಮಕೃಷ್ಣರ ಮಹತ್ವಾಕಾಂಕ್ಷೆ ಆಗಿತ್ತು.

ಕಾಳಿಮಾತೆಯ ದರ್ಶನಕ್ಕೆ ಬರುತ್ತಿದ್ದ ಭಕ್ತಾದಿಗಳಿಗೆ ಶ್ರೀರಾಮಕೃಷ್ಣರು ಹುಚ್ಚರಂತೆನಿಸುತ್ತಿರಲಿಲ್ಲ. ಸಕಲ ವೇದ-ಶಾಸ್ತ್ರಾದಿಗಳಲ್ಲಿಯೂ ನಿಷ್ಣಾತರಂತೆ ಕಂಡುಬಂದರು. ಮಹಾತ್ಮನ ಸಕಲ ಗುಣಗಳಲ್ಲಿ ಸರ್ವಲಕ್ಷಣಗಳೂ ಇವರ ಮುಖ ಕಮಲದಲ್ಲಿ ಕಂಗೊಳಿಸತೊಡಗಿದವು. ಭಕ್ತಿಜ್ಞಾನದ ಬೆಳಕು ಕಣ್ಣುಗಳಿಂದ ಹೊರಬರತೊಡಗಿತು. ಶ್ರೀರಾಮಕೃಷ್ಣರ ವೈರಾಗ್ಯ ಕೇವಲ ‘ಸ್ವತಃ ಸುಖಾಯ’ ಆಗಿರಲಿಲ್ಲ. “ಬಹುಜನ ಹಿತಾಯ” ಎನಿಸಿತ್ತು. ವೈರಾಗ್ಯದ ಮೂಲಕ ದೊರೆತ ಫಲವನ್ನು ಜನತೆಗೆ ಧಾರೆ ಎರೆಯಲು ಬಯಸುತ್ತಿದ್ದರು.

ಎಲ್ಲಾ ಧರ್ಮಗಳ ವಿಚಾರವನ್ನು ತಿಳಿದುಕೊಂಡು ದೇವರ ದರ್ಶನ ಮಾಡಿದರು. ಜನರಿಗೆ ಉಪದೇಶ ಮಾಡಿದರು. ಜನರಲ್ಲಿ ಸಮಾನವಾದ ಭಾವನೆಯನ್ನು ಮೂಡಿಸಿದರು. ಶ್ರೀರಾಮಕೃಷ್ಣರು ಅಲೌಕಿಕ ಆನಂದದ ಸಾಗರದಲ್ಲಿ ತೇಲು ಮುಳುಗು ಹಾಕತೊಡಗಿದರು. ಆತ್ಮೀಯರಂತೆ ಈರ್ವರೂ ಅಪ್ಪಿಕೊಂಡರು. ಸರ್ವಧರ್ಮ ಸಮನ್ವಯಾಚಾರ್ಯರೆನಿಸಿದ ಶ್ರೀರಾಮಕೃಷ್ಣ ಪರಮಹಂಸರೇ ಆದರು.

ದಕ್ಷಿಣೇಶ್ವರದಲ್ಲಿ ರಾಮಕೃಷ್ಣರಿಗೆ ಆರೋಗ್ಯ ಕೆಟ್ಟಿದ್ದರಿಂದ ಕಾಮಾರಪುಕುರಕ್ಕೆ ಹೊರಟರು. ಹಿಂದೆ ಕಾಮಾರಪುಕುರದಲ್ಲಿ ಜನರು ರಾಮಕೃಷ್ಣರನ್ನು ಹುಚ್ಚನೆಂದು ಭಾವಿಸಿದ್ದರು. ಆದರೆ, ಈಗ ಜನರಿಗೆ ಅವರ ಭಕ್ತಿಯ ಮಹತ್ವ ತಿಳಿದು ಮಹಾತ್ಮರೆಂದು ತಿಳಿಯಿತು. ಜಯರಾಂಬಾಟಿಯಲ್ಲಿಯೇ ಇದ್ದ ಶಾರದಾಮಣಿಗೆ ಈಗ ಹದಿನಾಲ್ಕು ವರ್ಷ ವಯಸ್ಸಾಗಿತ್ತು. ವ್ಯವಹಾರ ಜ್ಞಾನ ಪ್ರಾಪ್ತವಾಗಿತ್ತು. ಆಕೆಯ ಕಿವಿಗೂ ತನ್ನ ಪತಿಯ ಬಗ್ಗೆ ಜನ ಆಡಿಕೊಳ್ಳುತ್ತಿದ್ದ ಕುಹಕ ಮಾತುಗಳು ಬೀಳದಿರಲಿಲ್ಲ. ನಿಜವಾದ ವಿಚಾರವನ್ನು ತಿಳಿಯಲು ಜಯರಾಂಬಾಟಿಯಿಂದ ಮನೆ ಬಿಟ್ಟು ಕಾಮಾರಪುಕುರಕ್ಕೆ ಹೊರಟರು.

ದಾರಿಯಲ್ಲಿ ಹೋಗುವಾಗ ರಾತ್ರಿಯ ಸಮಯದಲ್ಲಿ ಅವಳಿಗೆ ಆರೋಗ್ಯ ಕೆಟ್ಟಿತು. ಆಗ ದೇವಿಯೇ ವೇಷದಲ್ಲಿ ಬಂದು ಅವಳನ್ನು ಸಮಾಧಾನ ಪಡಿಸಿ, ಕಳುಹಿಸಿದಳು. ದೇವಿಯ ದರ್ಶನ, ರಕ್ಷಣೆಯಿಂದ ಅವಳು ಕಾಮಾರಪುಕುರಕ್ಕೆ ತಲುಪಿದಳು. ನಡೆದ ಸಂಗತಿಯನ್ನು ತನ್ನ ಪತಿಗೆ ವರದಿ ಒಪ್ಪಿಸಿದಳು. ಮನೆಮಂದಿಗೆಲ್ಲಾ ಶಾರದಾಮಣಿಯ ಬಗ್ಗೆ ಮೆಚ್ಚುಗೆಯ ಮನೋಭಾವ ಮೂಡಿತು. ಶ್ರೀರಾಮಕೃಷ್ಣರಿಗಂತೂ ತಮ್ಮ ಮಡದಿಗೆ ಮಹಾಮಾತೆ ಆದ ಕಾಳಿದೇವಿಯ ಅನುಗ್ರಹ ಇಷ್ಟೊಂದು ಸುಲಭವಾಗಿ ಲಭ್ಯವಾಗಿರುವುದನ್ನು ಕಂಡು ಅಲೌಕಿಕ ಆನಂದದ ತನ್ಮಯತೆಯಲ್ಲಿ ಮೈಮರೆತರು.

ಶಾರದಾಮಣಿಯನ್ನು ಮಣೆಯ ಮೇಲೆ ಶ್ರದ್ಧೆಯಿಂದ ಕುಳ್ಳಿರಿಸಿ ದೇವಿಯ ಪೂಜಾವಿಧಾನದ ಕ್ರಮದಲ್ಲಿಯೇ ಈ ದೇವಿಯನ್ನೂ ಪೂಜಿಸುತ್ತಿದ್ದರು. ಪೂಜೆ ಮಾಡಿದಾಗಲೂ ಶಾರದಾಮಣಿಗೆ ದೇವರ ದರ್ಶನವಾಗಿ ಧ್ಯಾನಾಸಕ್ತರಾಗಿರುತ್ತಿದ್ದರು. ಶಾರದಾದೇವಿಯವರನ್ನು ರಾಮಕೃಷ್ಣರು ಮಾತೃವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು.

ದಿನಗಳು ಕಳೆದಂತೆ ನರೇಂದ್ರ ಎಂಬ ಬಾಲಕ ದೇವರ ಕರ್ಶನಕ್ಕಾಗಿ, ಬಡತನ ಕಷ್ಟದ ಪರಿಹಾರಕ್ಕಾಗಿ ಹಾತೊರೆಯುತ್ತಿದ್ದನು. ಶ್ರೀರಾಮಕೃಷ್ಣರ ವಿಷಯ ಕೇಳಿ ಅವರನ್ನು ಭೇಟಿ ಮಾಡಲೆಂದು ದಕ್ಷಿಣೇಶ್ವರಕ್ಕೆ ಹೊರಟನು. ಶ್ರೀರಾಮಕೃಷ್ಣರಿಗೆ ಮೊದಲೇ ಗೊತ್ತಿತ್ತು ನರೇನ್ ಮುಂದೆ ಮಹಾನ್ ವ್ಯಕ್ತಿಯಾಗುವನೆಂದು. ನರೇಂದ್ರ ಬಂದ ಕೂಡಲೇ ಅವನನ್ನು ಕೊಠಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಸಿಹಿತಿಂಡಿ ತಿನ್ನಿಸಿ, ಮಾತನಾಡಿಸಿ, ಬಿಕ್ಕಿಬಿಕ್ಕಿ ಅತ್ತರು. ನರೇಂದ್ರನಿಗೆ ರಾಮಕೃಷ್ಣರು ಹುಚ್ಚರಂತೆ ಕಂಡರು ಅಲ್ಲದೇ ಮಹಾತ್ಮರಂತೆ ಕಂಡರು. ನರೇಂದ್ರ ಆಗಾಗ ರಾಮಕೃಷ್ಣರ ಬಳಿ ಧಾವಿಸುತ್ತಿದ್ದನು. ರಾಮಕೃಷ್ಣರಲ್ಲಿ ನರೇಂದ್ರನಿಗೆ ಅಪಾರವಾದ ವಿಶ್ವಾಸ ಬೆಳೆಯಿತು.

ನರೇಂದ್ರ ರಾಮಕೃಷ್ಣರಲ್ಲಿ ನನಗೆ ದೇವರ ದರ್ಶನವಾಗಬೇಕು, ನನ್ನ ಬಡತನ ಕಷ್ಟಗಳನ್ನು ಪರಿಹರಿಸಬೇಕು ಎಂದು ಕೇಳಿಕೊಂಡನು. ರಾಮಕೃಷ್ಣರು ನರೇಂದ್ರನಿಗೆ ಕಾಳಿಮಾತೆಯನ್ನು ಕೇಳಲು ಸೂಚಿಸಿದರು. ನರೇಂದ್ರ ದೇವಾಲಯಕ್ಕೆ ಬಂದು ಕಾಳಿಮಾತೆಯ ಮುಂದೆ ಭಕ್ತಿಯಿಂದ ಪ್ರಾರ್ಥಿಸಿದನು. ಕಾಳಿಮಾತೆ ಪ್ರತ್ಯಕ್ಷಳಾಗಿ ಆಶೀರ್ವಾದ ಮಾಡಿ ದರ್ಶನ ನೀಡಿದಳು. ದಿವ್ಯಜ್ಞಾನದ ಬೆಳಕಿನಲ್ಲಿ ನರೇಂದ್ರನಿಗೆ ಇಹಲೋಕದ ವಿಚಾರವೇ ಮರೆತುಹೋಗಿತ್ತು. ನರೇಂದ್ರ ದರ್ಶನ ಪಡೆದು ಬಂದಮೇಲೆ ಶ್ರೀರಾಮಕೃಷ್ಣರಲ್ಲಿ ತನ್ನನ್ನು ಮಾಯೆಯಿಂದ ಬಿಡಿಸಲು ಕಾಡಿ, ಬೇಡಿದ.

ಶ್ರೀರಾಮಕೃಷ್ಣರ ಮನ ಕರಗಿತು. ಕನಿಕರದಿಂದ ನರೇಂದ್ರನ ಕಡೆಯೇ ನೋಡುತ್ತಾ, ನಿಧಾನವಾಗಿ ಅವನ ತಲೆಯ ಮೇಲೆ ಕೈ ಇಡುತ್ತಾ ಸ್ಪರ್ಶಿಸಿದರು. ಕೂಡಾಲೇ ದೇಹಾದ್ಯಂತ ವಿದ್ಯುತ್ ಸಂಚಾರ ಆದಂತಾಯಿತು. ಈ ಮೊದಲ ಅನುಭವದಲ್ಲಿಯೇ ಮಗುವಿನಂತೆ ನರೇಂದ್ರ ತತ್ತರಿಸಿದ. ಆತನ ಹೃದಯದಲ್ಲಿ ವಿವೇಕ ಹಾಗೂ ಆನಂದದ ಕಾರಂಜಿ ಚಿಮ್ಮತೊಡಗಿತು. ಶ್ರೀರಾಮಕೃಷ್ಣರಿಂದ ಈಗ ದೀಕ್ಷೆ ಪಡೆದು ವಿವೇಕಾನಂದ ಆದರು.

೧೮೮೫ರ ಸುಮಾರಿಗೆ ಶ್ರೀರಾಮಕೃಷ್ಣರ ದೇಹಸ್ಥಿತಿ ಹದಗೆಡತೊಡಗಿತು. ಶಿಷ್ಯರ ಸಂಖ್ಯೆ ಹೆಚ್ಚಾದುದರ ಜೊತೆಗೆ ದರ್ಶಕರ ಸಂಖ್ಯೆಯೂ ದಿನಕ್ಕೆ ಒಂದೇ ಸಮನೆ ಹೆಚ್ಚುತ್ತಲೇ ಬಂತು. ಆದರೆ ಯಾರೊಬ್ಬರಿಗೂ ಬೇಸರ ಆಗದ ರೀತಿಯಲ್ಲಿ ಮಾತಾಡಿ, ಸಲಹೆಗಳನ್ನು ನೀಡಿ ಶ್ರೀರಾಮಕೃಷ್ಣರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಕಳುಹಿಸಿ ಕೊಡುತ್ತಿದ್ದರು.

ಒಂದು ಬಾರಿ ಗಂಟಲು ನೋವು ಕಾಣಿಸಿಕೊಂಡಿತು. ಕಾಣಿಸಿಕೊಂಡದ್ದು, ಚಿಕಿತ್ಸೆಗಳೇನೇ ನಡೆದರೂ ಕಣ್ಮರೆ ಆಗಲಿಲ್ಲ. ಹವೆಯ ಬದಲಾವಣೆಗಾಗಿ ನಗರದಿಂದ ಹೊರಗೆ ಕಾಶೀಪುರ ಎಂಬ ಗ್ರಾಮದಲ್ಲಿ ಒಂದು ತೋಟದಲ್ಲಿ ಮನೆ ಮಾಡಿದರು. ವಿವೇಕಾನಂದರು ಶಿಷ್ಯವೃಂದವನ್ನು ಸಂಘಟಿಸಿ, ಶ್ರೀರಾಮಕೃಷ್ಣ ಮಿಷನ್ ಕೆಲಸ ಕಾರ್ಯಗಳು ಯಶಸ್ವೀ ನಡೆಯುವಂತೆ ನೋಡಿಕೊಳ್ಳುತ್ತಲೇ ಬಂದರು. ದಿನೇ ದಿನೇ ಗಂಟಲು ನೋವು ಹೆಚ್ಚಿತು. ವೈದ್ಯರು “ಗಂಟಲು ಕ್ಯಾನ್ಸರ್” ಎಂದು ತಿಳಿಸಿದಾಗ ಆಶ್ರಮದ ಶಿಷ್ಯರೆಲ್ಲಾ ದುಃಖಸಾಗರದಲ್ಲಿ ಮುಳುಗಿದರು.

ಒಂದು ದಿನ ರಾಮಕೃಷ್ಣರು ವಿವೇಕಾನಂದರನ್ನು ಕರೆದು ತನ್ನ ಕಾರ್ಯಗಳನ್ನು ಮುಗಿಸಬೇಕೆಂದು ತಿಳಿಸಿದರು. ೧೮೮೬ನೇ ಆಗಸ್ಟ್ ೧೫ ಭಾನುವಾರ ಶ್ರೀರಾಮಕೃಷ್ಣರ ಪರಿಸ್ಥಿತಿ ಪೂರ್ತಿ ಹದಗೆಟ್ಟಿತು. ಮಧ್ಯರಾತ್ರಿಯ ಸಮಯದಲ್ಲಿ ಕಾಳಿಮಾತೆಯ ಸ್ಮರಣೆ ಮಾಡುತ್ತಾ, ಚಿರ ಸಮಾಧಿಯಲ್ಲಿ ಮುಳುಗಿದರು.

ಶ್ರೀರಾಮಕೃಷ್ಣರು ಸರ್ವಧರ್ಮೀಯರ ಮನದಲ್ಲಿಯೂ ಅಚ್ಚಳಿಯದೆ ಉಳಿದಿದ್ದಾರೆ .. !!

* * * * * * * * * * * *

ಚಿತ್ರಕೃಪೆ : https://encrypted-tbn3.gstatic.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments