ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 16, 2013

4

ವೈವಿಧ್ಯತೆಯ ಸಮಾಧಿ ಮೇಲೆ UPSC ಕಟ್ಟಲು ಹೊರಟ ಎಲೈಟ್ ವ್ಯವಸ್ಥೆ

‍ನಿಲುಮೆ ಮೂಲಕ

– ವಸಂತ್ ಶೆಟ್ಟಿ

UPSCಯು.ಪಿ.ಎಸ್.ಸಿ ತನ್ನ ಪರೀಕ್ಷಾ ನಿಯಮಾವಳಿಗಳನ್ನು ಬದಲಾಯಿಸಿದ್ದು, ಅದಕ್ಕೆ ಮಾನ್ಯ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿರುವ ಸುದ್ದಿಯಿದೆ. ಈ ಬದಲಾವಣೆಗಳನ್ನು ಹಲವಾರು ರಾಜ್ಯಗಳು ವಿರೋಧಿಸಿವೆ. ಈ ಬದಲಾವಣೆಗಳೇನು ಮತ್ತು ರಾಜ್ಯಗಳು ಯಾಕೆ ವಿರೋಧಿಸಿವೆ ಎಂದು ಯು.ಪಿ.ಎಸ್.ಸಿ ಮಿಂಬಲೆ ತಾಣ (ಪುಟ 12)  ನೋಡಿದಾಗ ಕಂಡಿದ್ದು ನಿಜಕ್ಕೂ ಅಚ್ಚರಿ ತರುವಂತದ್ದು. ಭಾರತದ ವೈವಿಧ್ಯತೆಯನ್ನು ಶವಪೆಟ್ಟಿಗೆಯೊಳಗೆ ಕೂರಿಸಿ ಪೆಟ್ಟಿಗೆಗೆ ಹೊಡೆಯುತ್ತಿರುವ ಮೊಳೆಗೆ ಇನ್ನೊಂದು ಮೊಳೆ ಸೇರ್ಪಡೆಯಾಗಿದೆ. ಯು.ಪಿ.ಎಸ್.ಸಿಯ  ಬದಲಾದ ನಿಯಮಗಳು ಮತ್ತು ಕನ್ನಡಿಗನೊಬ್ಬನ ಮೇಲೆ ಅದರ ಪರಿಣಾಮಗಳು ಇಂತಿವೆ:

 1. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಪದವಿ ಪಡೆದವರು ಮಾತ್ರ ಮುಖ್ಯ ಪರೀಕ್ಷೆಯಲ್ಲಿ  ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಮುಖ್ಯ ಪರೀಕ್ಷೆ ಬರೆಯಬಹುದು. ಹಿಂದಿನಂತೆ ಯಾವುದೇ ಮಾಧ್ಯಮದಲ್ಲಿ, ಯಾವ ವಿಷಯವನ್ನೇ ಓದಿದ್ದರೂ ಐಚ್ಛಿಕ ವಿಷಯವಾಗಿ ಅಭ್ಯರ್ಥಿಯ ತಾಯ್ನುಡಿಯಲ್ಲಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳಲಾಗದು. ಆದರೆ ಈ ನಿಯಮ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿರುವ ಗಣಿತ, ಅರ್ಥಶಾಸ್ತ್ರ, ಇಂಜಿನಿಯರಿಂಗ್ ಮುಂತಾದ ವಿಷಯಗಳಿಗೆ ಅನ್ವಯಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರತಿಭೆಗಳು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಾಹಿತ್ಯದ ವಿಷಯಕ್ಕೆ ಮಾತ್ರ ರೂಪಿಸಲಾಗಿದೆ. ಕನ್ನಡದಂತಹ ನುಡಿಯಲ್ಲಿ ಲಭ್ಯವಿದ್ದಿದ್ದೇ ಸಾಹಿತ್ಯದಂತಹ ವಿಷಯಗಳು. ಈಗ ಕೇವಲ ಸಾಹಿತ್ಯ ಓದಿದವರಿಗೆ ಮಾತ್ರ ಅದನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬಹುದು ಅನ್ನುವ ಮೂಲಕ ಇಂಜಿನಿಯರಿಂಗ್, ಕಾನೂನು, ವೈದ್ಯಕೀಯ ಪದವಿ ಪಡೆದು ಕನ್ನಡ ಸಾಹಿತ್ಯ ಆಯ್ದುಕೊಂಡು ಪರೀಕ್ಷೆ ಬರೆಯುತ್ತಿದ್ದ ಕನ್ನಡಿಗರಿಗೆ ಮೋಸವಾಗಲಿದೆ. ಇದೇ ಪಾಡು ಇತರೆ ಭಾಷಿಕರದ್ದು ಆಗಲಿದೆ.
 2. ಯಾವ ಮಾಧ್ಯಮದಲ್ಲಿ  ಅಭ್ಯರ್ಥಿಯ ಡಿಗ್ರಿ ಆಗಿದೆಯೋ ಅದೇ ಮಾಧ್ಯಮದಲ್ಲಿ ಆತ ಪರೀಕ್ಷೆ ಬರೆಯಬೇಕು. ಅಂದರೆ ಇಂಗ್ಲಿಶ್ ಮಾಧ್ಯಮದಲ್ಲಿ ಡಿಗ್ರಿ ಓದಿದ ಕನ್ನಡಿಗನೊಬ್ಬ ಕನ್ನಡ ಭಾಷೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತಿಲ್ಲ. ಕರ್ನಾಟಕದಿಂದ ಇತ್ತಿಚೆಗೆ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಬಹಳಷ್ಟು ಜನರು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನು ವೃತ್ತಿಯಿಂದ ಬಂದವರು ಮತ್ತು ತಮ್ಮ ಡಿಗ್ರಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದವರು, ಆದರೆ ಅವರಾರು ಈ ನಿಯಮದ ದೆಸೆಯಿಂದ ಬಯಸಿದರೂ ಕನ್ನಡದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲಾರರು.
 3. ಒಬ್ಬ ಕನ್ನಡ ಮಾಧ್ಯಮದಲ್ಲಿ ಓದಿದದವನು ಕನ್ನಡದಲ್ಲೇ ಪರೀಕ್ಷೆಯ ಆಯ್ಕೆ ಕೈಗೊಂಡಾಗಲೂ ಅವನೊಂದಿಗೆ ಕೊನೆ ಪಕ್ಷ 25 ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಿಗಬೇಕು. ಇಲ್ಲದಿದ್ದಲ್ಲಿ ಅವನಿಗೆ ಕೊಟ್ಟ ಕನ್ನಡ ಆಯ್ಕೆಯನ್ನು ಹಿಂಪಡೆದು ಅವರು ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು ಅನ್ನುವ ನಿಯಮ ರೂಪಿಸಲಾಗಿದೆ.
 4. ಕನ್ನಡದಲ್ಲಿ ಪರೀಕ್ಷೆ ಬರೆಯುವವನು ತನ್ನ ಉತ್ತರದಲ್ಲಿ ಬರುವ ತಾಂತ್ರಿಕ ಶಬ್ದಗಳಿಗೆ ಬ್ರಾಕೆಟ್ಟಿನಲ್ಲಿ ಇಂಗ್ಲಿಷಿನಲ್ಲಿ ವಿವರಣೆ ಬರೆಯಬಹುದು. ಆದರೆ ಅಭ್ಯರ್ಥಿ ಈ ಆಯ್ಕೆಯನ್ನು ಸರಿಯಾಗಿ ಬಳಸದಿದ್ದರೆ ಅಂಕ ಕಡಿತಗೊಳಿಸಲಾಗುವುದು ಅನ್ನುವ ಮೂಲಕ ಇಂಗ್ಲಿಷ್ ಮತ್ತು ಹಿಂದಿಯೇತರ ನುಡಿಗಳಲ್ಲಿ ಪರೀಕ್ಷೆ ಬರೆಯುವುದು ಒಂದು ರೀತಿಯಲ್ಲಿ ರಿಸ್ಕ್ ಅನ್ನುವ ಭಾವನೆಯನ್ನು ಅಭ್ಯರ್ಥಿಗಳಲ್ಲಿ ತರುವ ನಿಯಮ ರೂಪಿಸಲಾಗಿದೆ.
 5. ಸಾಹಿತ್ಯದ ವಿಷಯವೊಂದನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನೀಡಲಾಗುವುದು ಅನ್ನುವ ನಿಯಮ ರೂಪಿಸಲಾಗಿದೆ. ಅಲ್ಲಿಗೆ ಇನ್ನುಳಿದ ಭಾಷೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಸಂದೇಶವನ್ನು ಎಲ್ಲ ಭಾಷೆಗಳನ್ನು ಸಮಾನವೆಂದು ಕಾಣಬೇಕಾದ ಕೇಂದ್ರದ ವ್ಯವಸ್ಥೆಯೇ ನೀಡುತ್ತಿದೆ.
 6. ಮುಖ್ಯ ಪರೀಕ್ಷೆಯಲ್ಲಿ ಎರಡು ಐಚ್ಛಿಕ ವಿಷಯಗಳು ಸೇರಿದಂತೆ ಏಳು ಪತ್ರಿಕೆಗಳಿವೆ. ಅದರಲ್ಲಿ ಇಂಗ್ಲಿಷ್ ಜ್ಞಾನವನ್ನು ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯೂ ಒಂದು. ಇನ್ನು ಮುಂದೆ ಈ ಏಳರಲ್ಲೂ ಪಡೆದ ಅಂಕಗಳನ್ನು ಒಟ್ಟು ಮಾಡಿ ರಾಂಕ್ ಪಟ್ಟಿ ನೀಡಲಾಗುವುದು.ಈ ಮುಂಚೆ ಇಂಗ್ಲಿಷ್ ಮತ್ತು ಒಂದು ಐಚ್ಛಿಕ ವಿಷಯದಲ್ಲಿ ಅರ್ಹತೆ ಪಡೆಯಬೇಕಾಗಿದ್ದರೂ ಅಂತಿಮ ಆಯ್ಕೆಯಲ್ಲಿ ಈ ವಿಷಯಗಳ ಅಂಕಗಳನ್ನು ಲೆಕ್ಕಕ್ಕೆ ಪಡಯುತ್ತಿರಲಿಲ್ಲ. ಆದರೆ ಈಗ ಇಂಗ್ಲಿಷಿನಲ್ಲಿನ ಅಂಕವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದಾಗಿ ಇಂಗ್ಲಿಶ್ ಮೇಲೆ ಹಿಡಿತ ಸಾಧಿಸುವವರಿಗೆ ಸಹಜವಾಗಿ ಮೇಲುಗೈ ದೊರೆಯುತ್ತದೆ.
 7. ಯಾವುದೇ ಒಂದು ಇಲ್ಲವೇ ಎಲ್ಲ ವಿಷಯಗಳಲ್ಲೂ ಅರ್ಹತಾ ಅಂಕವನ್ನು  ತನಗೆ ತೋಚಿದಂತೆ ನಿರ್ಧರಿಸುವ ಹಕ್ಕು ಯು.ಪಿ.ಎಸ್.ಸಿ ಪಡೆದುಕೊಂಡಿದೆ. ಇದರರ್ಥ ಎಲ್ಲ ವಿಷಯಗಳಲ್ಲೂ ಚೆನ್ನಾಗಿ ಸಾಧನೆ ಮಾಡಿದರೂ ಇಂಗ್ಲಿಷಿನಲ್ಲಿ ಅಂಕ ಕಡಿಮೆ ಪಡೆದ ಕನ್ನಡಿಗನೊಬ್ಬ ಅದೇ ಕಾರಣಕ್ಕೆ ಆಯ್ಕೆಯಾಗಲು ಸಾಧ್ಯವೇ ಇಲ್ಲದ ಸ್ಥಿತಿ ಬಂದಿದೆ.

ಇಂಗ್ಲಿಶ್ ಮತ್ತು ಹಿಂದಿ ಬಲ್ಲವರಷ್ಟೇ ನಡೆಸುವ ನಿಯಂತ್ರಿಸುವ ಎಲೈಟ್ ವ್ಯವಸ್ಥೆ ಕಟ್ಟುವ ಕೆಲಸ !

ಪ್ರಿಲಿಮ್ಸ್ ಹಂತದಲ್ಲಿ ಇದ್ದ ಐಚ್ಛಿಕ ವಿಷಯಗಳ ಆಯ್ಕೆಯನ್ನು ಎರಡು ವರ್ಷದ ಹಿಂದೆ ರದ್ದು ಮಾಡಿದ್ದ ಯು.ಪಿ.ಎಸ್.ಸಿ ಅದರ ಜಾಗದಲ್ಲಿ ಇಂಗ್ಲಿಶ್ ಅಪ್ಟಿಟ್ಯೂಡ್ ಪರೀಕ್ಷೆಯನ್ನು ಸೇರಿಸಿತ್ತು, ಇದರಿಂದಾಗಿ ತಾಯ್ನುಡಿಯಲ್ಲಿ ಕಲಿತ ಹಲವರು ಇಂಗ್ಲಿಶ್ ಚೆನ್ನಾಗಿ ಬಾರದ ಕಾರಣಕ್ಕೆ ಪ್ರಿಲಿಮ್ಸ್ ಹಂತವನ್ನೇ ದಾಟುವುದು ಕಷ್ಟವಾಗಿತ್ತು. ಈಗ ಮುಖ್ಯ ಪರೀಕ್ಷೆಯಲ್ಲಿ ಮಾಡಿರುವ ಈ ಬದಲಾವಣೆಗಳು ಹಿಂದಿ/ಇಂಗ್ಲಿಶ್ ಬಾರದ ಭಾರತೀಯರನ್ನು ಯು.ಪಿ.ಎಸ್.ಸಿಯಿಂದ ಹೆಚ್ಚು ಕಡಿಮೆ ಆಚೆ ತಳ್ಳುವಂತಿದೆ. ಆ ಮೂಲಕ ಕೇಂದ್ರದ ವ್ಯವಸ್ಥೆಯೆಲ್ಲವನ್ನು ಕೇವಲ ಇಂಗ್ಲಿಶ್ ಮತ್ತು ಹಿಂದಿ ಬಲ್ಲವರಷ್ಟೇ ನಡೆಸುವ ನಿಯಂತ್ರಿಸುವ ಎಲೈಟ್ ವ್ಯವಸ್ಥೆ ಕಟ್ಟುವ ಕೆಲಸವಾಗುತ್ತಿದೆ. ಇದು ಸಂವಿಧಾನದಲ್ಲಿ ಇರುವ ಸಮಾನ ಅವಕಾಶದ ಆಶಯಗಳಿಗೆ ವಿರುದ್ಧವಾದುದಾಗಿದೆ. ಹಿಂದಿ/ಇಂಗ್ಲಿಷ್ ಎರಡೇ ಭಾಷೆ ಬಲ್ಲವರು ನಾಳೆ ಕರ್ನಾಟಕದ ಸೇವೆಗೆ ನಿಯುಕ್ತರಾದಾಗ ಅವರು ಕನ್ನಡದಲ್ಲಿ ಆಡಳಿತ ಅನುಷ್ಟಾನ ಮಾಡಲಿ ಅನ್ನುವುದು ತಿರುಕನ ಕನಸು ಅನ್ನಿಸುವುದಿಲ್ಲವೇ?

ಜನರ ನುಡಿಯಲ್ಲಿ ಆಡಳಿತ ರೂಪಿಸಲು ಸಾಧ್ಯವೇ ಇಲ್ಲದ ಅಧಿಕಾರಿಗಳನ್ನು ಹೊಂದಿದ ಮೇಲೆ ಆ ವ್ಯವಸ್ಥೆ ಜನರಿಂದ ಇನ್ನಷ್ಟು ದೂರಕ್ಕೆ ಹೋಗುವುದಿಲ್ಲವೇ? ಅಲ್ಲಿಗೆ ಪ್ರಜಾಪ್ರಭುತ್ವವೇ ಬಲಹೀನಗೊಂಡಂತಾಗುವುದಿಲ್ಲವೇ? ಈ ಬಗ್ಗೆ ಚುನಾವಣೆಯಲ್ಲಿ ಮುಳುಗಿರುವ ನಮ್ಮನ್ನಾಳುವ ದೊರೆಗಳು ಇತರೆ ರಾಜ್ಯಗಳ ಜೊತೆ ಸೇರಿ ದನಿ ಈ ಹಿಂದಿ ಅಧಿಕಾರಶಾಹಿಯ ವಿರುದ್ದ ದನಿ ಎತ್ತಲಿ. ಸಂಸತ್ತಿನಲ್ಲಿ ಮೌನ ವೃತ ಆಚರಿಸುವ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ಸಂಸದರು ಬಾಯಿ ಬಿಟ್ಟು ಈ ಅನ್ಯಾಯದ ಬಗ್ಗೆ ಪ್ರತಿಭಟಿಸಿ ಕನ್ನಡದ ಅಭ್ಯರ್ಥಿಗಳ ಹಿತ ಕಾಯಲಿ ಅಥವಾ ಅದಕ್ಕೂ ಇವರ ಹೈಕಮಾಂಡಿನ ಅಪ್ಪಣೆ ಸಿಗಬೇಕೊ ಗೊತ್ತಿಲ್ಲ.

4 ಟಿಪ್ಪಣಿಗಳು Post a comment
 1. ಮಾರ್ಚ್ 16 2013

  ನಿಜಕ್ಕೂ ಈ ನಿಯಮ ಫಾತಕವಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇನ್ನಷ್ಟು ಕೀಳರಿಮೆ ಬೆಳೆಸಿಕೊಳ್ಳಬಹುದು. ಹಿಂದಿ ಮಾತನಾಡುವವರಿಗೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಎಲೈಟ್ ಜನರಿಗೆ ಮೇಲುಗೈ ದೊರೆಯಲು ಅನುಕೂಲವಾಗುವಂತೆ ಮಾಡುತ್ತಿರುವ ವ್ಯವಸ್ಥಿತ ಹುನ್ನಾರ

  ಉತ್ತರ
 2. ಬಸವಯ್ಯ
  ಮಾರ್ಚ್ 16 2013

  ಇಷ್ಟು ದಿವಸ ಹಿಂದಿ ವಿರುದ್ಧದ ಹೋರಾಟದಲ್ಲಿ ಇಂಗ್ಲಿಶ ಆಪ್ತವಾಗಿತ್ತು. ಈಗ ಇಂಗ್ಲಿಶ ವಿರುದ್ಧ ಗೊಣಗಾಟ!. ನಾಳೆ ಕನ್ನಡವೊಂದೆ ಸಾಕು ಎಂಬ ನಿಯಮ ಬಂದರೆ, ಈಗಿರುವ ಕನ್ನಡ ಮತ್ತು ಶಂಕರ ಭಟ್ಟರ ಕನ್ನಡವರ ಮಧ್ಯೆ ಹೊಡೆದಾಟ!!
  ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದ ಜಿಲ್ಲಾಧಿಕಾರಿ,ಮತ್ತೀತರ ಅಧಿಕಾರಿ ವರ್ಗದವರು ಕನ್ನಡ ಕಲೀಲಿಲ್ವಾ? ಸಂವಹನ, ಪತ್ರ ವ್ಯವಹಾರ ಮಾಡಲ್ವಾ? ನಾಳೆ ಇಲ್ಲಿಂದ ಯಾವುದಾದರೂ ಅಧಿಕಾರಿಗೆ ಕೇಂದ್ರದ ಸೇವೆಗೆ ಅಂಥ ಕೊಟ್ಟರೆ, ಅವರಿಗೆ ಇಂಗ್ಲಿಶ್/ಹಿಂದಿಯಲ್ಲಿ ಸಂವಹನ ಸಾಮರ್ಥ್ಯ ಬೇಕಾಗುತ್ತೊ, ಇಲ್ಲವೊ?
  ಬೇಲಿ ಕಟ್ಟಿಕೊಂಡು ಬದುಕುವ, ಇಲ್ಲೇ ಜನಸೇವೆ ಮಾಡುವ ಇಚ್ಛೆ ಇದ್ದಲ್ಲಿ ಕೆ.ಪಿ.ಎಸ್.ಸಿ ಮಾಡಬಹುದಲ್ಲ.. ಅಂತರಿಕ್ಷಕ್ಕೆ ಹೋಗುವ ತವಕ,.ಆದ್ರೆ ಸ್ಪೇಸ್ ಸೂಟ ಹಾಕಿಕೊಳ್ಳಲ್ಲ..ನನಗೆ ಲುಂಗಿ ಹಾಕಿಕೊಂಡಿರೋದೇ ಹಿತ ಎಂಬ ಮೊಂಡಾಟ!.

  ಉತ್ತರ
 3. ಮಾರ್ಚ್ 23 2013

  ನಮ್ಮ ದೇಶದ ಅಧಿಕೃತ ಭಾಷೆಗಳಲ್ಲಿ ಒಂದು ಶಾಸ್ತ್ರೀಯ ಅಂತೆಲ್ಲ ಉಪದೇಶಮಾಡಿ ತಿನ್ನೋದು ಮಾತ್ರ ಬದನೇಕಾಯಿ. ಕನ್ನಡ ಲುಂಗಿ, ಇಂಗ್ಲಿಷ್ ಸೂಟಾ? ಬೇರೆಕಡೆಯಿಂದ ಕರ್ನಾಟಕ್ಕೆ ಬರೋರು ಕನ್ನಡ ಕಲಿತಾರೆ ಹಾಗಾಗಿ ಅವರು ಇಂಗ್ಲಿಷ್ ನಲ್ಲೇ ಬರಿಬಹುದು ಆದ್ರೆ ನಮ್ಮವರಿಗೆ ಇಂಗ್ಲಿಷ್ ಕಲಿಯೊಕಾಗಲ್ಲ ಅಂತಾನಾ ಹಾಗಾಗಿ ಇಂಗ್ಲಿಷ್ ನಲ್ಲೇ ಬರಿಬೇಕು! ಮಾರ್ಜಾಲನ್ಯಾಯ! ಮನಮೋಹನ ಸಿಂಗಂಗೆ ವೋಟು ಹಾಕಲ್ಲ ನಾನು. ನೀವು? ಬುದ್ದಿಕಲಿಸ್ಬೇಕು.

  ಉತ್ತರ
  • ಬಸವಯ್ಯ
   ಮಾರ್ಚ್ 23 2013

   ಅಣ್ಣಾ..
   ಬರೆದಿರೋದರ ಹಿಂದೆ ಇರೋ ಆಶಯ ಅರ್ಥ ಮಾಡಿಕೊಳ್ಳಿ. ನಾನು ಹೇಳಿದ್ದು ವಾತಾವರಣ, ಬೇಡಿಕೆಗೆ ತಕ್ಕಂತೆ ಹೊಂದಿಕೊಬೇಕಾಗುತ್ತೆ ಅಂತ. ಇಂಗ್ಲಿಶ್ ನಲ್ಲಿ ಒಳ್ಳೆ ಹಿಡಿತ ಐ.ಎ.ಎಸ್ ಕೇಡರ್ ಗೆ ಬೇಕೆ ಬೇಕು. ಅವರು ರಾಜ್ಯ, ರಾಷ್ಟ್ರ, ಕೆಲವೊಮ್ಮೆ ಅಂತರರಾಷ್ಟ್ರೀಯ ಸ್ತರದ ಜನರೊಡನೆ ವ್ಯವಹಾರ ಮಾಡಬೇಕಾತ್ತದೆ. ಕವಿಗಳು ‘ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂದಿದ್ದಾರೆಯೇ ಹೊರತು ‘ಕನ್ನಡವೆನೆ ಹೊಟ್ಟೆ ತುಂಬುವುದು’ ಅನ್ನಲಿಲ್ಲ. ಅದಕ್ಕೆಯೇ ಕೊಂಚ ಅಡ್ಜಸ್ಟ ಮಾಡಿಕೊಳ್ಳೋಣ..ಎತ್ತರಕ್ಕೇರೋಣ..ಏನಂತೀರ?

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments