ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 19, 2013

18

ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…

‍ನಿಲುಮೆ ಮೂಲಕ

-ಚಕ್ರವರ್ತಿ ಸೂಲಿಬೆಲೆ

Rama Sethuve1ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು ಮಿತಿಮೀರಿ ರಫ್ತು ನೆಲ ಕಚ್ಚುತ್ತಿರುವುದರಿಂದ ಡಾಲರಿನೆದುರು ರೂಪಾಯಿ ಸೋಲುತ್ತಲೇ ಸಾಗುತ್ತಿದೆ. ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ.
ಅದೇಕೋ ನೆಹರೂ ಕಾಲದಿಂದಲೂ ಈ ದೇಶಕ್ಕೆ ದೂರದೃಷ್ಟಿಯ ಕೊರತೆ ಇದೆ. ಮುಂದಿನ ನೂರು ವರ್ಷಗಳಿಗೆ, ಸಾವಿರ ವರ್ಷಗಳಿಗೆ ಯೋಜನೆ ರೂಪಿಸುವ ಪ್ರಯತ್ನಗಳೇ ಇಲ್ಲ. ಅದು ಬಿಡಿ, ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಇರುವ ಸಂಪತ್ತನ್ನೂ ನಾಶ ಮಾಡಿಕೋಳ್ಳುವ ಜಾಯಮಾನ ನಮ್ಮದು.

ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ. ಉಳಿದ ಮೂರು ರಾಷ್ಟ್ರಗಳೂ ತೈಲ ಹೊರತೆಗೆದು ಸಂಸ್ಕರಿಸಿ ಬಳಸುವಲ್ಲಿ ಸ್ವಾವಲಂಬಿಯಾಗುವತ್ತ, ಅಷ್ಟೇ ಅಲ್ಲ, ತಮ್ಮ ತೈಲ ಕಂಪನಿಗಳನ್ನು ತೈಲ ರಾಷ್ಟ್ರಗಳಿಗೆ ಕಳಿಸುವತ್ತಲೂ ಗಮನ ನೀಡುತಿವೆ. ನಾವು ಮಾತ್ರ ಕಂಡುಹಿಡಿದಿರುವ ತೈಲ ಸಂಪತ್ತನ್ನು ಹೊರತೆಗೆಯಲೂ ಮೀನಾಮೇಷ ಎಣಿಸುತ್ತ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯರ್ಥ ಮಾಡುತ್ತ, ಕಾಲ ಕಳೆಯುತ್ತಿದ್ದೇವೆ. ಅದೇ ಏಜೆನ್ಸಿಯ ಅಂಕಿ ಅಂಶದ ಪ್ರಕಾರ ೨೦೧೦ರಲ್ಲಿ ನಾವು ಏಳುವರೆ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿ ನಿತ್ಯ ಹೊರತೆಗೆದರೆ, ಆ ವರ್ಷ ೩೨ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿನಿತ್ಯ ಬಳಸಿದ್ದೇವೆ. ಅಂದಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ನಮ್ಮ ಮೇಲೆ ಹೇಗಿರಬಹುದೆಂದು ಲೆಕ್ಕ ಹಾಕಿ. ನಮಗೆ ಪೆಟ್ರೋಲು- ಡೀಸೆಲ್ಲು ಕಳಿಸುವುದಿಲ್ಲವೆಂದು ತೈಲ ರಾಷ್ಟ್ರಗಳು ನಿರ್ಬಂಧ ಹೇರಿ ಕುಂತುಬಿಟ್ಟರೆ ನಮ್ಮ ಕಥೆ ಮುಗಿದೇಹೋಯ್ತು. ಹಾಹಾಕಾರ ಉಂಟಾಗಿಬಿಡುತ್ತೆ.

ಹೀಗಾಗಿಯೇ ಹುಡುಕಾಟದ ಪರ್ವ ಜೋರಾಗಿ ನಡೆಯುತ್ತಿರೋದು. ಕಳೆದ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಪಶ್ಚಿಮ ಕರಾವಳಿಯಲ್ಲಿ ಬೃಹತ್ ತೈಲ ನಿಕ್ಷೇಪ ಪತ್ತೆಯಾಗಿದೆಯೆಂದು ಹೇಳಿದಾಗ ಇಡಿಯ ಜಗತ್ತು ಬೆರಗಾಗಿತ್ತು. ಅದರ ಜೊತೆ ಜೊತೆಗೆ ಬಿಹಾರದಲ್ಲೂ ತೈಲ ನಿಕ್ಷೇಪವೊಂದು ಸಿಕ್ಕಿತ್ತು. ಆದರೆ ಅದರಿಂದ ತೈಲ ಹೊರ ತೆಗೆಯುವಲ್ಲಿ ಮಾತ್ರ ಸಾಕಷ್ಟು ಅಡೆತಡೆಗಳು. ಸರ್ಕಾರದ ನೀತಿ ನಿಯಮಾವಳಿಗಳ ಭಾರ. ಒಟ್ಟಿನಲ್ಲಿ ಆಮದು ಮಾತ್ರ ನಿಲ್ಲಲೇ ಇಲ್ಲ.

ಅತ್ತ ಉರಿ ಹಚ್ಚಿಕೊಂಡ ಚೀನಾ, ನಮ್ಮ ತೈಲ ಕಂಪನಿ ವಿಯೆಟ್ನಾಂ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನನ್ಶಾ ದ್ವೀಪದ ಸಾಗರದಲ್ಲಿ ತೈಲ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿತು. ಆರುನೂರು ದಶಲಕ್ಷ ಡಾಲರುಗಳ ಬಂಡವಾಳ ಹೂಡಿ ಭಾರತ ಸರ್ಕಾರ ತೆಪ್ಪಗೆ ಕೂರುವಂತಾಯ್ತು. ನೌಕಾ ಸೇನೆಯ ಮುಖ್ಯಸ್ಥರು ನಮ್ಮ ಹಿತಾಸಕ್ತಿ ರಕ್ಚಿಸಿಕೊಳ್ಲೂವಲ್ಲಿ ನಾವು ಎಂತಹುದೆ ಪ್ರಯೋಗಕ್ಕೂ ಸಿದ್ಧರೆಂದು ಚಾಟಿ ಏಟು ನೀಡಿದರಾದರೂ ಸ್ವತಃ ಸರ್ಕಾರ ಅವರನ್ನು ಗದರಿಸಿ ಸುಮ್ಮನೆ ಕೂರಿಸಿಬಿಟ್ಟಿತು. ಇದು ನಿರ್ವೀರ್ಯತೆಗೆ ಮತ್ತೊಂದು ಸಾಕ್ಷಿಯಾಯಿತೇ ಹೊರತು ನಮ್ಮ ತೈಲ ಕಂಪನಿಗಳು ಸೀಮೆಯ ಹೊರಗೆ ಮಜಬೂತಾಗಿ ಕೆಲಸ ಮಾಡುವಲ್ಲಿ ಸೋಲುವಂತಾಯ್ತು.
ಹೋಗಲಿ. ಶಕ್ತಿ ಉತ್ಪಾದನೆಗೆ ಪರ್ಯಾಯ ಮಾರ್ಗಗಳನ್ನಾದರೂ ಸಾಕಾರ ಮಾಡಿಕೊಳ್ಳುತ್ತಿದ್ದೇವಾ? ತಮಿಳುನಾಡಿನ ರಾಮರ್‌ಪಿಳ್ಳೈ ಈ ತರಹದ ಮಾತಾಡಿದಾಗ ಇಂಗ್ಲಿಷ್ ಮಾಧ್ಯಮಗಳು ಅವನನ್ನು ಹೀಯಾಳಿಸಿಬಿಟ್ಟವು. ನೀರಿನಿಂದ ಗಾಡಿ ಓಡಿಸಲು ಸಾಧ್ಯವೇ? ಎಂದೆಲ್ಲ ಮೂದಲಿಸಿ ಇಂತಹದೊಂದು ಪ್ರಯತ್ನಕ್ಕೆ ಯಾರೂ ಕೈಹಾಕುವ ಯೋಚನೆಯನ್ನೂ ಮಾಡದಂತೆ ಮಾಡಿಬಿಟ್ಟವು. ಸೂರ್ಯ ವರ್ಷದ ಹನ್ನೆರಡೂ ತಿಂಗಳೂ ತಡೆಯಿಲ್ಲದಂತೆ ಶಾನೀಡುವ ದೇಶದಲ್ಲಿರುವ ನಾವು ಇದುವೆವಿಗೂ ಸೌರ ಶಕ್ತಿಯ ಬಳಕೆಯ ಸಂಶೋಧನೆಗಾಗಿ ಮಾಡಿರುವ ವೆಚ್ಚ ಲೆಕ್ಕಾಚಾರ ಹಾಕಿದರೆ, ತೈಲ ಆಮದಿನ ಮುಂದೆ ದೂಳಿನ ಕಣ! ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಬ್ರಹ್ಮ ಕುಮಾರಿಯರ ಈಶ್ವರೀಯ ವಿದ್ಯಾಲಯವು ನೂರಾರು ಎಕರೆ ಜಮೀನಿನಲ್ಲಿ ಸೂರ‍್ಯನ ಕಿರಣಗಳನ್ನು ಹಿಡಿದಿಡುವ ಆಂಟೆನಾಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುವ ಸಂಶೋಧನೆ ನಡೆಸುತ್ತಿದೆ. ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡರೆ, ಇಡಿಯ ಮೌಂಟ್ ಅಬುವನ್ನು ಬೆಳಗಿನ ಹೊತ್ತಲ್ಲಿ ಸೂರ್ಯ ನೇರವಾಗಿ ಬೆಳಗುತ್ತಾನೆ, ರಾತ್ರಿ ಪರೋಕ್ಷವಾಗಿ..
ನೆನಪಿರಲಿ. ಇಂತಹುದೊಂದು ಪ್ರಯತ್ನಕ್ಕೆ ಕೈಹಾಕಿರೋದು ಸರ್ಕಾರಿ ಸಂಸ್ಥೆಯಲ್ಲ; ಪರಿಪೂರ್ಣ ಖಾಸಗಿಯಾಗಿರುವ ಆಧ್ಯಾತ್ಮಿಕ ಸಂಸ್ಥೆ! ಇದು ನಾಚಿಕೆಗೇಡಿನ ಸಂಗತಿಯಲ್ಲವೇನು?

ಹೋಗಲಿ, ಹೋಮಿ ಭಾಭಾಕಾಲದಿಂದಲೂ ಅಣುಶಕ್ತಿಯ ಕುರಿತಂತೆ ಧ್ಯಾನಿಸುತ್ತ ಬಂದಿದ್ದೇವೆ. ಇಂದಾದರೂ ಸ್ವಾವಲಂಬಿತೆ ಸಾಧಿಸಿದ್ದೇವಾ? ಯುರೇನಿಯಮ್ ಬಳಸಿ ವಿದ್ಯುತ್ ಉತ್ಪಾದಿಸುವ ಮೊದಲ ಹಂತದ ರಿಯಾಕ್ಟರುಗಳನ್ನು ಸ್ಥಾಪಿಸಿದ ನಂತರ, ಪ್ಲುಟೋನಿಯಮ್ ಮತ್ತು ಯುರೇನಿಯಮ್ ಬಳಸುವ ಎರಡನೇ ಹಂತದ ರಿಯಾಕ್ಟರುಗಳ ಕಡೆಗೆ ನಾವು ಹೊರಳಿದೆವು. ಆಗೆಲ್ಲ ರಿಯಾಕ್ಟರುಗಳ ನಿರ್ಮಾಣದಿಂದ ಹಿಡಿದು ಕೊನೆಗೆ ಕಚ್ಚಾ ಯುರೇನಿಯಮ್ ಒದಗಿಸುವವರೆಗೂ ನಾವು ಅಮೆರಿಕಾದ ಹಂಗಿನಲ್ಲೆ ಇರಬೇಕಿತ್ತು. ಅಮೆರಿಕಾ ತನ್ನ ಬೆರಳ ತುದಿಯಲ್ಲಿ ನಮ್ಮನ್ನು ಆಡಿಸುತ್ತಿತ್ತು. ಯುರೇನಿಯಮ್ ಆಮದು ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿಯೇ ನಾವು ಸಿಟಿಬಿಟಿಗೆ ಸಹಿ ಮಾಡಿದ್ದೆಂದು ಮನಮೋಹನ ಸಿಂಗರು ಅವತ್ತು ಅಲವತ್ತುಕೊಂಡಿದ್ದರಲ್ಲ, ಅದಕ್ಕೇ! ಈ ಹಿನ್ನೆಲೆಯಲ್ಲಿಯೇ ಹೋಮಿ ಭಾಭಾ ಮೂರನೆ ಹಂತದ ಕನಸಿನ ಯೋಜನೆ ಮುಂದಿಟ್ಟಿದ್ದರು. ಅದು, ‘ಥೋರಿಯಮ್ ಬಳಸಿ ವಿದ್ಯುತ್ ಉತ್ಪಾದಿಸುವ ರಿಯಾಕ್ಟರುಗಳ ಸ್ಥಾಪನೆ.’

ಥೋರಿಯಮ್ ಅನ್ನುನ್ಯೂಟ್ರಾನಿನಿಂದ ಬಡಿದರೆ ಸ್ವಲ್ಪ ಹೆಚ್ಚಿನ ಅಣುಭಾರದ ಯುರೇನಿಯಮ್ ಸಿಗುತ್ತದೆ. ಇದನ್ನು ಇಂಧನವಾಗಿ ಬಳಸಬಲ್ಲ ತಂತ್ರಜ್ಞಾನ ರೂಪಿಸುವಲ್ಲಿ ಜಪಾನಿ- ಚೀನೀಯರೂ ಸೋತಿದ್ದಾರೆ. ಆದರೆ ಭಾರತೀಯರು ಎಂಟ್ಹತ್ತು ವರ್ಷಗಳ ಪ್ರಯಾಸದಿಂದ ಇಂತಹದೊಂದು ಸಂಶೋಧನೆ ನಡೆಸಿ ಯಶಸ್ಸು ಕಂಡಿದ್ದಾರೆ.
ಅದರ ಪ್ರಯೋಗವೇ ತಮಿಳುನಾಡಿನ ಕುಡಂಕುಳಮ್‌ನಲ್ಲಿ ಆಗಬೇಕಿದ್ದುದು. ಅಲ್ಲಿ ಪರಿಸರದ ನೆಪವೊಡ್ಡಿ ಒಂದಷ್ಟು ಎನ್‌ಜಿಓಗಳು ಹೋರಾಟಕ್ಕಿಳಿದವು. ಜನಸಾಮಾನ್ಯರನ್ನು ಸಂಘಟಿಸಿ ಬಲುದೊಡ್ಡ ಚಳವಳಿಯನ್ನೆ ನಡೆಸಿದವು. ಆಮೇಲೆ ಗೊತ್ತಾಯ್ತು, ಈ ಹೋರಾಟಕ್ಕೆ ಅಲ್ಲಿನ ಚರ್ಚು ಹಣ ಪೂರೈಸಿತ್ತು ಅಂತ. ಮತ್ತೆ ಚರ್ಚಿಗೆ ಬೆನ್ನೆಲುಬು ಅಮೆರಿಕಾ. ನಾಲ್ಕಾರು ದಿನಗಳ ಹಿಂದೆಯಷ್ಟೆ ಈ ಹೋರಾಟದ ಪ್ರಮುಖನ ಹೆಂಡತಿಯ ಬ್ಯಾಂಕ್ ಖಾತೆಗೆ ಅಮೆರಿಕಾದಿಂದ ದೊಡ್ಡ ಮೊತ್ತದ ಹಣ ಬಂದು ಬಿದ್ದಿರುವ ಸುದ್ದಿ ಬಂದಿದೆ. ಅಲ್ಲಿಗೆ ಎಲ್ಲವೂ ನಿಚ್ಚಳ. ಭಾರತ ಶಕ್ತಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬಾರದೆಂಬ ಹಠ ಅಮೆರಿಕದ್ದು!

ಕುಡಂಕುಲಮ್‌ನಲ್ಲಿ ನಾವು ಪ್ರಯೋಗ ನಡೆಸಿ ಥೋರಿಯಮ್ ಅನ್ನು ಬಳಸುವಲ್ಲಿ ಯಶಸ್ಸು ಗಳಿಸಿದ್ದರೆ ಸಾರ್ವಭೌಮರೇ ಆಗಿಬಿಡುತ್ತಿದ್ದೆವು. ಏಕೆಂದರೆ ಸದ್ಯಕ್ಕೆ ನಮ್ಮ ಬಳಿ ಇರುವಷ್ಟು ಥೋರಿಯಮ್ ನಿಕ್ಷೇಪ ಜಗತ್ತಿನ ಯಾವ ರಾಷ್ಟ್ರದ ಬಳಿಯೂ ಇಲ್ಲ. ಕನ್ಯಾಕುಮಾರಿಯ ಮರಳ ರಾಶಿ ಇದೆಯಲ್ಲ, ಅದು ಬರಿಯ ಮರಳಲ್ಲ, ಅಪಾರ ಶಕ್ತಿಯನ್ನು ಒಡಲಲ್ಲಿ ಅಡಗಿಸಿ ಇಟ್ಟುಕೊಂಡಿರುವ ಮಹಾನಿಕ್ಷೇಪ. ಮತ್ತು ಈ ನಿಕ್ಷೇಪ ಇಲ್ಲಿ ಸಂಗ್ರಹವಾಗಲು ಕಾರಣವೇನು ಗೊತ್ತಾ? ಉಸಿರು ಬಿಗಿ ಹಿಡಿದುಕೊಳ್ಳಿ.. ವಿಜ್ಞಾನಿಗಳೇ ಹೇಳುತ್ತಾರೆ, ’ರಾಮಸೇತು’ ಅಂತ. ಹೌದು. ಶ್ರೀಲಂಕಾ ಸುತ್ತು ಬಳಸಿ ಹಿಂದೆ ಜಿಗಿದ ಸಮುದ್ರದ ನೀರು, ರಾಮಸೇತುವಿಗೆ ಬಡಿದು ಮರಳುತ್ತದಲ್ಲ, ಆಗ ಒಡಲಿನಲ್ಲಿರುವ ಥೋರಿಯಮ್ ಅನ್ನು ಕನ್ಯಾಕುಮಾರಿಯ ದಂಡೆಗೆ ತಂದು ಸುರಿದು ಹೋಗುತ್ತದೆಯಂತೆ. ಒಮ್ಮೆ ಈ ಸೇತುವನ್ನು ಒಡೆದು ಬಿಸಾಡಿದರೆ ಇನ್ನು ಮುಂದೆ ಥೋರಿಯಮ್ ನಿಕ್ಷೇಪದ ಸಂಗ್ರಹ ನಿಲ್ಲುವುದಲ್ಲದೇ ಸೇತು ಒಡೆಯುವ ನೆಪದಲ್ಲಿ ಇರುವ ನಿಕ್ಷೇಪವನ್ನೂ ಒಯ್ಯುವ ಪ್ರಯತ್ನ ಅಮೆರಿಕಾದ್ದು!

ಹೇಳಿ, ನಾವು ಮೂರ್ಖರಲ್ಲವೆ? ವಿಜ್ಞಾನಿಗಳು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೋರ್ಟು ಎಚ್ಚರ ಹೇಳಿದೆ. ಅಷ್ಟಾದರೂ ರಾಮಸೇತುವನ್ನು ಮುರಿದು ಹಾಕಲು ನಿಂತಿದ್ದಾರಲ್ಲ, ಇವರಿಗೆ ಏನೆನ್ನಬೇಕು ಹೇಳಿ? ಸೋನಿಯಾ ಗಾಂಧಿಯಿಂದ ಹಿಡಿದು ಕರುಣಾನಿಧಿಯವರೆಗೆ ಎಲ್ಲರೂ ಇದರ ಹಿಂದೆ ಬಿದ್ದಿದ್ದಾರೆ. ಅವರಿಗೆಲ್ಲ ದೇಶದ ಕಾಳಜಿಗಿಂತ ಸ್ವಂತದ ಹಿತಾಸಕ್ತಿಯೇ ಮುಖ್ಯ.ಚೀನಾ ನಮ್ಮ ಸುತ್ತ ಹೆಣೆಯುತ್ತಿರುವ ಜಾಲಕ್ಕೆ ನಾವು ಸ್ವಾವಲಂಬಿಯಾಗುವುದೊಂದೇ ಮಾರ್ಗ. ಅದರಲ್ಲಿಯೂ ಶಕ್ತಿ ವಿಚಾರದಲ್ಲಿ ನಾವು ಸಕ್ಷಮರಾಗಿಬಿಟ್ಟರೆ ಚೀನಾವನ್ನು ನಿಂತಲ್ಲೇ ಬಗ್ಗುಬಡಿಯಬಹುದು. ಅಲ್ಲದೆ ಮತ್ತೇನು? ಪ್ರತಿವರ್ಷ ನೂರೈವತ್ತು ಬಿಲಿಯನ್ ಡಾಲರಿನಷ್ಟು ಹಣ ಉಳಿದುಬಿಟ್ಟರೆ ಭಾರತ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರಿಬಿಡುವುದಿಲ್ಲವೆ?

ಹಾ.. ಹೇಳುವುದು ಮರೆತಿದ್ದೆ. ಮನಮೋಹನ ಸಿಂಗರು ಅಧಿಕಾರಕ್ಕೆ ಬಂದ ನಂತರ ೨೦ ಲಕ್ಷ ಟನ್‌ನಷ್ಟು ಥೋರಿಯಮ್‌ಗೆ ಸಮನಾದ ಮೋನಾಝೈಟ್ ನಮ್ಮ ಕರಾವಳಿಯಿಂದ ಕಾಣೆಯಾಗಿದೆ. ಬೆಲೆಕೇರಿಯಿಂದ ಕಾಣೆಯಾದ ಕಬ್ಬಿಣದ ಅದಿರಿನ ತನಿಖೆ ಬಲು ಜೋರಾಗಿ ನಡೆಯುತ್ತಿದೆಯಲ್ಲ, ಈ ಮೋನಾಜೈಟ್ ನಾಪತ್ತೆಯಾದುದರ ಬಗ್ಗೆ ಯಾರು ಮಾಡುತ್ತಾರೆ ಹೇಳಿ!? ನಾವು ಹೀಗೇ ಸುಮ್ಮನಿದ್ದರೆ ಮನಮೋಹನ ಸಿಂಗರು ನಮ್ಮ ವ್ಯಾಪ್ತಿಯ ಗಾಳಿ, ನೀರು, ಮಣ್ಣನ್ನು ಮಾರಿ ಹುಳ್ಳಗೆ ಕೂತುಬಿಡುತ್ತಾರೆ.
ಅದಕ್ಕೇ ಹೇಳಿದ್ದು, ಭಯಾನಕ ಪರಿಸ್ಥಿತಿಯತ್ತ ನಾವು ತೆವಳಿಕೊಂಡು ಹೋಗುತ್ತಿದ್ದೇವೆ ಅಂತ.

18 ಟಿಪ್ಪಣಿಗಳು Post a comment
 1. ರವಿಕುಮಾರ ಜಿ ಬಿ
  ಮಾರ್ಚ್ 20 2013

  ಬೆಲೆಕೇರಿಯಿಂದ ಕಾಣೆಯಾದ ಕಬ್ಬಿಣದ ಅದಿರಿನ ತನಿಖೆ ಬಲು ಜೋರಾಗಿ ನಡೆಯುತ್ತಿದೆಯಲ್ಲ, ಈ ಮೋನಾಜೈಟ್ ನಾಪತ್ತೆಯಾದುದರ ಬಗ್ಗೆ ಯಾರು ಮಾಡುತ್ತಾರೆ ಹೇಳಿ!? ನಾವು ಹೀಗೇ ಸುಮ್ಮನಿದ್ದರೆ ಮನಮೋಹನ ಸಿಂಗರು ನಮ್ಮ ವ್ಯಾಪ್ತಿಯ ಗಾಳಿ, ನೀರು, ಮಣ್ಣನ್ನು ಮಾರಿ ಹುಳ್ಳಗೆ ಕೂತುಬಿಡುತ್ತಾರೆ.
  ಅದಕ್ಕೇ ಹೇಳಿದ್ದು, ಭಯಾನಕ ಪರಿಸ್ಥಿತಿಯತ್ತ ನಾವು ತೆವಳಿಕೊಂಡು ಹೋಗುತ್ತಿದ್ದೇವೆ ಅಂತ.

  >>> ಅಬ್ಬಾ ಭಯಾನಕ!!

  ಉತ್ತರ
 2. janardhan hebbar
  ಮಾರ್ಚ್ 21 2013

  ಯಾಕೋ ಮೈ ಝುಂ ಎಂದು ಬಿಡ್ತು… ಜಾತಿ ಧರ್ಮದ ನಡುವೆ ನಾವು ಕಿತ್ತಾಡುವುದನ್ನ ಬಿಟ್ಟು… ದೇಶದ ಬಗ್ಗೆ ಕಾಳಜಿ ತೋರೋಣ. ಜಸ್ಟ್ ನಮ್ಮ ಕೆಲಸದಲ್ಲಿ ಆ ಕಾಳಜಿ ಇದ್ದರೆ ಸಾಕು.

  ಉತ್ತರ
 3. ಮಾರ್ಚ್ 22 2013

  ಈ ಲೇಖನಕ್ಕೆ ಮಾರ್ಚ್ ೨೧ರ ವಿಜಯವಾಣಿಯಲ್ಲಿ ಹೀಗೊಂದು ಪ್ರತಿಕ್ರಿಯೆ ಬಂದಿದೆ: http://epapervijayavani.in/Details.aspx?id=4684&boxid=23746881

  ಉತ್ತರ
  • krishnappa
   ಮಾರ್ಚ್ 23 2013

   ಖ್ಯಾತನಾಮ ವಿಜ್ಞಾನ ಬರಹಗಾರರು ಸೂಲಿಬೆಲೆಯವರ ಲೇಖನದ ತಪ್ಪುಗಳನ್ನು ಕುರಿತು ಪ್ರತಿಕ್ರಿಯಿಸಿದ ಕಾರಣ ಅದು ವಿಜಯವಾಣಿಯಲ್ಲಿ ಪ್ರಕಟವಾಯಿತು. ಯಾರಾದರೂ ಸಾಮಾನ್ಯ ವ್ಯಕ್ತಿ ಪ್ರತಿಕ್ರಿಯಿಸಿದ್ದರೆ ಅದು ಕಸದ ಬುಟ್ಟಿಗೆ ಸೇರುತ್ತಿತ್ತು. ಹಿಂದುತ್ವವಾದಿ ಪತ್ರಿಕೆಗಳು ತಮಗೆ ಪೂರಕವಾಗಿಲ್ಲದ ಪ್ರತಿಕ್ರಿಯೆಯನ್ನು ಕಸದ ಬುಟ್ಟಿಗೆ ಹಾಕುವುದು ಸಾಮಾನ್ಯ.

   ಉತ್ತರ
 4. ತಪ್ಪುಗಳು:
  ತಪ್ಪು ೧: ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ: ಹಾಗೇನಿಲ್ಲ. ಚೀನಾ, ಬಾರತ ಮುಂತಾದ ದೇಶಗಳು ಡಾಲರನ್ನ ಕೊಂಡುಕೊಂಡು, ಕೂಡಿಟ್ಟು ಬೇಕಂತಲೇ ತಮ್ಮ ಕರೆನ್ಸಿಯನ್ನ ಅಪಮವ್ಲಿಯ ಮಾಡಿಕೊಳ್ಳುತ್ತವೆ. ರಪ್ತು ಮಾಡುವುದು ಸರಾಗವಾಗುತ್ತದೆ ಎಂಬುದೇ ಅದಕ್ಕೆ ಕಾರಣ. ಚೀನಾದವರು ಇದನ್ನ ಹೆಚ್ಚಾಗಿ ಮಾಡುತ್ತಿದ್ದು ಅಮೇರಿಕಾದ ರಾಜಕೀಯದಲ್ಲಿ ದೊಡ್ಡ ಚರ್ಚೆಯ ವಿಶಯವಾಗಿದೆ. ಬರಾಕ್ ಒಬಾಮಾನ ವಿರುದ್ದ ಸೆಣೆಸಿದ್ದ ಮಿಟ್ ರಾಮ್ನಿ ತಾನು ಗೆದ್ದಲ್ಲಿ ಚೀನಾವನ್ನು ‘ಕರನ್ಸಿ ವಂಚಕ’ ಎಂದು ಸಾರುತ್ತೇನೆ ಎಂದು ಚುನಾವಣಾ ಆಶ್ವಾಸನೆ ಕೊಟ್ಟಿದ್ದರು!
  ತಪ್ಪು ೨. ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ: ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ‘ಶಕ್ತಿ’ ಬಳಸುವ ರಾಷ್ಟ್ರ ನಮ್ಮದೇ. ‘ತಯ್ಲ ಬಳಸುವುದರಲ್ಲೂ ನಮ್ಮದು ನಾಲ್ಕನೆಯದು. ಆದರೆ ಮೂರನೆಯದು ರಶ್ಯಾ ಅಲ್ಲ. ಅದು ಜಪಾನ್. ಮತ್ತೊಂದು ತಿಳಿದಿರಲಿ. ಸೂಲಿಬೆಲೆಯವರು ಮಾಹಿತಿಗೆ ಆದಾರವಾಗಿಟ್ಟುಕೊಂಡ ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿ ಅವರೇ ವಿರೋದಿಸುವ ಅಮೆರಿಕಾ ಸರಕಾರದ್ದು!
  ತಪ್ಪು ೩. ಶಕ್ತಿ ಉತ್ಪಾದನೆಗೆ ಪರ್ಯಾಯ ಮಾರ್ಗಗಳನ್ನಾದರೂ ಸಾಕಾರ ಮಾಡಿಕೊಳ್ಳುತ್ತಿದ್ದೇವಾ? ತಮಿಳುನಾಡಿನ ರಾಮರ್‌ಪಿಳ್ಳೈ ಈ ತರಹದ ಮಾತಾಡಿದಾಗ…..
  ರಾಮರ್ ಪಿಳ್ಳೆಯ ಚೂಮಂತ್ರಕಾಳಿ ಪರ್ಯಾಯ ಮಾರ್ಗವಲ್ಲ. ಅದು ಮಾರ್ಗವೇ ಅಲ್ಲ! ಅವನೊಬ್ಬ ತಿಕ್ಕಲ. ವಂಚಕ. ಅವನನ್ನ ಅರಕೆಗಾರ ಅಂದುಕೊಳ್ಳುವುದೂ, ಸೂಲಿಬೆಲೆಯವರನ್ನ ರಕ್ಶಣಾ ತಗ್ನ ಅಂದುಕೊಳ್ಳುವುದೂ ಒಂದೇ!
  ತಪ್ಪು ೪. ನೆನಪಿರಲಿ. ಇಂತಹುದೊಂದು ಪ್ರಯತ್ನಕ್ಕೆ ಕೈಹಾಕಿರೋದು ಸರ್ಕಾರಿ ಸಂಸ್ಥೆಯಲ್ಲ; ಪರಿಪೂರ್ಣ ಖಾಸಗಿಯಾಗಿರುವ ಆಧ್ಯಾತ್ಮಿಕ ಸಂಸ್ಥೆ! ಇದು ನಾಚಿಕೆಗೇಡಿನ ಸಂಗತಿಯಲ್ಲವೇನು?
  ಹಾಗೇನಿಲ್ಲ. ಯಾರು ಬೇಕಾದರೂ ಸಂಸೋದನೆ ಮಾಡಬಹುದು. ಒಳ್ಳೇ ಸಂಸೋದನೆ ಮಾಡುವವರಿಗೆ ಸರಕಾರ, ಸರಕಾರೇತರ ಸಂಸ್ತೆಗಳು ಹಣ ಕೊಡುತ್ತವೆ! ಬ್ರಹ್ಮಕುಮಾರಿಯರು ತಳಹಂತದಲ್ಲಿ ಮಂದಿಗೆ ಸವ್ರಶಕ್ತಿ ದೊರಕಿಸಲು ದುಡಿಯುತ್ತಿದ್ದಾರೆ. ಮೆಚ್ಚಬೇಕಾದ್ದೆ. ಆದರೆ ಅವರು ಹೊಸದಾಗಿ ಏನೂ ಕಂಡುಹಿಡಿಯುತ್ತಿಲ್ಲ. ಬ್ರಹ್ಮಕುಮಾರಿಯರಿಗೆ ಈ ಕೆಲಸಕ್ಕಾಗಿ ಹಣಕೊಟ್ಟವರ ಪಟ್ಟಿ ಇಲ್ಲಿದೆ ನೋಡಿ.
  Participating and contributing organizations:
  – Ministry of New and Renewable Energy, New Delhi
  – Indian Renewable Energy Development Agency, IREDA
  – The Indian Institute of Technology (IIT), New Delhi
  – World Bank , Washington, USA
  – The German Agency for Technical Operations (GTZ), Eschborn, Germany
  – Institute of Solar Energy Technologies (ISET), Kassel, Germany
  – Research Laboratory Experimental Building, University of Kassel, Germany
  – IndiaCare Charitable Trust, Berlin , Germany
  – HTT, High Temperature Technology, Herford, Germany
  – Sunpower, Frankfurt, Germany
  – Advanced Energy Systems, Perth, Australia
  – Australian High Commission, New Delhi
  – ECO Centre, Valsad, India
  – Solar Brücke, Germany
  ತಪ್ಪು ೫: ಆಗೆಲ್ಲ ರಿಯಾಕ್ಟರುಗಳ ನಿರ್ಮಾಣದಿಂದ ಹಿಡಿದು ಕೊನೆಗೆ ಕಚ್ಚಾ ಯುರೇನಿಯಮ್ ಒದಗಿಸುವವರೆಗೂ ನಾವು ಅಮೆರಿಕಾದ ಹಂಗಿನಲ್ಲೆ ಇರಬೇಕಿತ್ತು.
  ಇಲ್ಲ! ಬಾರತೀಯರು ಹೆಚ್ಚಾಗಿ ಕೆನಡಾ ಮತ್ತು ರಶಿಯಾದ ಹಂಗಿನಲ್ಲಿದ್ದೆವು. ಇದ್ದೀವಿ!
  ತಪ್ಪು ೫: ಯುರೇನಿಯಮ್ ಆಮದು ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿಯೇ ನಾವು ಸಿಟಿಬಿಟಿಗೆ ಸಹಿ ಮಾಡಿದ್ದೆಂದು ಮನಮೋಹನ ಸಿಂಗರು ಅವತ್ತು ಅಲವತ್ತುಕೊಂಡಿದ್ದರಲ್ಲ, ಅದಕ್ಕೇ!
  ಇಲ್ಲ!!! ಮನಮೋಹನ ಸಿಂಗರು ಸಿಟಿಬಿಟಿಗೆ ಸಹಿ ಹಾಕಿಲ್ಲ! ಇಲ್ಲಿ ನೋಡಿ: http://www.ctbto.org/the-treaty/status-of-signature-and-ratification/
  ತಪ್ಪು ೬: ಅದರ (ಥೋರಿಯಂನ) ಪ್ರಯೋಗವೇ ತಮಿಳುನಾಡಿನ ಕುಡಂಕುಳಮ್‌ನಲ್ಲಿ ಆಗಬೇಕಿದ್ದುದು.
  ಇಲ್ಲ! ಅದು ರಶ್ಯಾದ ರಿಯಾಕ್ಟರು. ಅದರಲ್ಲಿ ಬಳಸುವ ಇಂದನ ಯುರೇನಿಯಂ. ತೋರಿಯಂ ತಂತ್ರಗ್ನಾನ ಇನ್ನೂ ೫೦ ವರ್ಶವಾದರೂ ಬೇಕಾಗುತ್ತದೆನುವ ಅಂದಾಜಿದೆ.
  ತಪ್ಪು ೭: ರಾಮ ಸೇತು ಬಗೆದರೆ ನಿಕ್ಷೇಪಕ್ಕೆ ಎಳ್ಳುನೀರು.
  ಇದು ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಇರುವ ನಂಟು.
  ನಿಲುಮೆಯಲ್ಲಿ, ನಿಲುಮೆಯ ಓದುಗರಲ್ಲಿ ಇಂಜಿನಿಯರಿಂಗ್ ಪಾಸ್ ಮಾಡಿರುವವರು ಯಾರೂ ಇಲ್ಲವೇ? ಹೋಗಲಿ ಒಂಬತ್ತನೇ ತರಗತಿ ಪಾಸು ಮಾಡಿರುವವರು ಯಾರೂ ಇಲ್ಲವೇ? ಎಲ್ಲ ತತ್ವದ ಎಲ್ಲೆ ಮೀರಿ ಅಂದರೆ ‘ತಿಳುವಳಿಕೆಯ ಎಲ್ಲೆ ಮೀರಿ’ ಅಂತಲೇ?
  (ವಿಸೂ: ನಾನಿದನ್ನ ಬರೆವಶ್ಟರಲ್ಲಿ ನಿಲುಮೆಯ ಗುಣಮಟ್ಟದ ಬಗ್ಗೆ ರೋಸಿಹೋಗಿದ್ದೆ. ನಿಲುಮೆಯನ್ನು ಮರೆತುಬಿಡಬೇಕು ಅಂದುಕೊಂಡಿದ್ದೆ. ಆದರೆ, ಈ ಕಳಪೆ ಅಂಕಣ ವಿಜಯವಾಣಿಯೆಂಬ ಸುದ್ದಿಯಾಳೆಯಲ್ಲಿ ಅಚ್ಚಾಗಿರುವುದು ತಿಳಿದು ದಂಗಾದೆ!! ಇನ್ನೊಂದಶ್ಟು ತಿದ್ದಿ ನೋಡೋಣ ಎಂದು ಮತ್ತೆ ಬಂದೆ.)

  ಉತ್ತರ
  • ಬಸವಯ್ಯ
   ಮಾರ್ಚ್ 23 2013

   ಸಿದ್ಧರಾಜಣ್ಣ..
   ಲೇಖನದಲ್ಲಿ ತಪ್ಪು ಇದೆ..ಭವಿಷ್ಯದಲ್ಲಿ ಅಪಾಯಕಾರಿಯಾಗಬಹುದಾದ ಅಣು ಇಂಧನದ ಅನಗತ್ಯ ಸಮರ್ಥನೆಯಿದೆ, ಥೋರಿಯಂ ಉಪಯುಕ್ತತೆಯ ಬಗ್ಗೆ ಉತ್ಪ್ರೇಕ್ಷೆ ಇದೆ. ಇವೆಲ್ಲ ಒಪ್ಪಿಕೊಳ್ಳಬೇಕಾದದ್ದು. ಆದರೆ ಕೊನೆಯ ಪ್ಯಾರಾದ ಅವಶ್ಯಕತೆ ಇರಲಿಲ್ಲ. ನಿಮ್ಮ ತಿಳಿವಳಿಕೆಯ ಮಟ್ಟ ಉನ್ನತವಾಗಿದ್ದರೆ ಅದರ ಉಪಯೋಗ ನಮ್ಮೆಲ್ಲರಿಗೆ ಆಗಲಿ. ವಿಜಯವಾಣಿಯ ಓದುಗರ ಪ್ರತಿಕ್ರಿಯೆಯಲ್ಲಿ ನಾಗೇಶ ಹೆಗಡೆ ಮತ್ತು ಸಂಗಡಿಗರು ಲೇಖನದ ತಪ್ಪುಗಳನ್ನು ಹೇಳಿದ ರೀತಿ ನೋಡಿ.ತಾನೇ ಬ್ರಹ್ಮ ಎಂಬ ಕುಣಿದಾಟವಿಲ್ಲ ಅಲ್ಲಿ.

   ಉತ್ತರ
   • ಬಸವಯ್ಯನೋರೇ,
    ನಿಮ್ಮ ನೀತಿ ಪಾಟಕ್ಕೆ ನನ್ನಿ. ಆದರದು ನನಗೆ ಬೇಕಿಲ್ಲ. ನನಗೆ ಬ್ರಹ್ಮದಲ್ಲಾಗಲೀ, ಬ್ರಹ್ಮಗ್ನಾನದಲ್ಲಾಗಲೀ ನಂಬಿಕೆಯಿಲ್ಲ. ಗೊತ್ತಿಲ್ಲದವರಿಂದ ನೀತಿಪಾಟ ಹೇಳಿಸಿಕೊಳ್ಳುವದರಲ್ಲೂ ನಂಬಿಕೆಯಿಲ್ಲ. ಮಂದಿಯ ‘ತಪ್ಪೊಪ್ಪಿಕೊಳ್ಳುವುದರ’ (falcifiability) ಮೇಲೆ ನಂಬಿಕೆಯಿದೆ. ನಿಲುಮೆಯ ಸಂಪಾದಕರಲ್ಲಿ ಕಂಪ್ಯೂಟರು, ನಡುಬಲೆಗಳನ್ನ ಬಳಸಬಲ್ಲವರಿದ್ದಾರೆ. ಹಾಗಿದ್ದೂ, ಇದನ್ನೇಕೆ ತಿದ್ದಲಾಗಿಲ್ಲ ಅನ್ನುವುದು ನನಗೆ ತೋರುತ್ತಿಲ್ಲ. ತಪ್ಪುಗಳ ಗುಣಮಟ್ಟಕ್ಕೂ, ಸಂಪಾದಕರ ಓದಿನ ಮಟ್ಟಕ್ಕೂ ತಾಳೆಹಾಕಿ ನೋಡಿದರೆ ‘ತಪ್ಪುಗಳನ್ನು ಬೇಕಂತಲೇ ಬಿಟ್ಟಿದ್ದಾರೆ’ ಅನಿಸದಿರದು.

    ಉತ್ತರ
    • ಬಸವಯ್ಯ
     ಮಾರ್ಚ್ 24 2013

     ಸಿದ್ಧರಾಜಣ್ಣ ನಮಸ್ಕಾರ..
     “ನಿಲುಮೆಯಲ್ಲಿ, ನಿಲುಮೆಯ ಓದುಗರಲ್ಲಿ ಇಂಜಿನಿಯರಿಂಗ್ ಪಾಸ್ ಮಾಡಿರುವವರು ಯಾರೂ ಇಲ್ಲವೇ? ಹೋಗಲಿ ಒಂಬತ್ತನೇ ತರಗತಿ ಪಾಸು ಮಾಡಿರುವವರು ಯಾರೂ ಇಲ್ಲವೇ?”
     “ಗೊತ್ತಿಲ್ಲದವರಿಂದ ನೀತಿಪಾಟ ಹೇಳಿಸಿಕೊಳ್ಳುವದರಲ್ಲೂ ನಂಬಿಕೆಯಿಲ್ಲ.”
     ನಿಲುಮೆಯ ಓದುಗರ ಶೈಕ್ಷಣಿಕ/ಜ್ಞಾನ ಮಟ್ಟದ ಬಗ್ಗೆ (ಅದರಲ್ಲಿ ನಾನು ಒಬ್ಬ) ಪರಿಚಯವಿಲ್ಲದ ನಿಮ್ಮಿಂದ ಪಾಠ ಹೇಳಿಸಿಕೊಳ್ಳುವಲ್ಲಿ ನನಗೂ ಆಸಕ್ತಿಯಿಲ್ಲ, ನನ್ನಂತೆ ಉಳಿದವರಿಗೂ ಆಸಕ್ತಿ ಇರಲಿಕ್ಕಿಲ್ಲ. ನನಗೆ ಆಸಕ್ತಿಯಿದ್ದದ್ದು..ಜನರಲ್ಲಿರುವ ಜ್ಞಾನದಲ್ಲಿ. ಹಂಚಿಕೊಳ್ಳುವುದರಿಂದ ಬೆಳೆಯುತ್ತದೆ ಎಂಬ ನಂಬಿಕೆಯಲ್ಲಿ. ಬ್ರಹ್ಮ ಎಂಬ ಶಬ್ದದ ಉಪಯೋಗ ‘ಎಲ್ಲ ಬಲ್ಲವನು ನಾನು’ ಎಂಬ ನಿಮ್ಮ ನಡವಳಿಕೆಗೆ. ಲೇಖನದಲ್ಲಿಯ ತಪ್ಪುಗಳು ನಿಮ್ಮ ಗಮನಕ್ಕೆ ಬಂದಿದ್ದು ನಾಗೇಶ ಹೆಗೆಡೆ ಇನ್ನೀತರರು ಬರೆದ ಪತ್ರ ಓದಿದ ಮೇಲೆ..ಅದರ ನಂತರವೇ ಹೆಚ್ಚಿನ ಮಾಹಿತಿಗಾಗಿ ನಿಮ್ಮ ‘ ಸಂಸೋದನೆ’ ಸುರುವಾಗಿದ್ದು.
     ನನಗೆ ತಿಳಿದಂತೆ, ನಾನು ಗಮನಿಸಿದಂತೆ ನಿಲುಮೆಯ ಕೆಲಸ ಲೇಖಕರಿಗೆ ವೇದಿಕೆ ಒದಗಿಸುವುದು ಮತ್ತು ತಪ್ಪು/ಒಪ್ಪು ಗಳ ಚರ್ಚೆ ಓದುಗರಿಗೆ ಬಿಟ್ಟಿದ್ದು ಎಂದು. ನಿಲುಮೆ ನಡೆಸುವವರು ದಿನದ ಹೊತ್ತಿನಲ್ಲಿ ಹೊಟ್ಟೆಪಾಡಿಗಾಗಿ ಬೇರೆ ಕೆಲಸ ಕೂಡ ಮಾಡುತ್ತಾರೆ ಎಂದುಕೊಂಡಿದ್ದೇನೆ!.

     ಉತ್ತರ
     • ನವೀನ
      ಮಾರ್ಚ್ 24 2013

      ಬಸವಯ್ಯ, “ನಾನೇ ಬ್ರಹ್ಮ” ಅಂತ ನೀವು ಹೇಳಿದ ಅರ್ಥ ಅವರ ವಿಗ್ನಾನದ ಮನಸ್ಸಿಗೆ ಗೊತ್ತಾಗಿಲ್ಲ ಅನ್ನಿಸುತ್ತೆ. ಅವರ ವಿಗ್ನಾನದ ಭಾಷೆಯಲ್ಲೆ ಹೇಳಿ “Head Weight” ಅಂತ. ಅರ್ಥವಾಗುತ್ತೆ

      ಉತ್ತರ
     • @ಬಸವಯ್ಯ, ನನ್ನದು ನೀತಿ ಪಾಟವಲ್ಲ. ಮಾಹಿತಿ ತಪ್ಪನ್ನು ತೋರಿಸಿದ್ದು ನಾ ಮಾಡಿದ್ದು! ತಪ್ಪನ್ನು ಹೇಗೆ ತೋರಿಸಬೇಕು, ಹೇಗೆ ತೋರಿಸಬಾರದು ಎಂಬು ನಿಮ್ಮದು ನೀತಿ ಪಾಟ. ಇನ್ನು ನಾನು ಯಾವಾಗ ಬರೆದೆ ಎಂಬುದು ನಿಮ್ಮ ಅನಿಸಿಕೆ ಅಶ್ಟೇ. ಅನಿಸಿಕೆಯನ್ನೇ ದಿಟವೆನ್ನುವಂತೆ ಹೇಳಹೋಗುವ ನಿಮಗೂ ಅಳೆದು ತೂಗಿ ಆಡಬೇಕು ಅನ್ನುವ ನನ್ನ ಮಾತಿನಿಂದ ಚುರುಕ್ ಅಂದಿರಬೇಕು. ನಾನ್ಯಾವಾಗ ಬರೆದೆ ಎಂಬ ದಿಟ ನನಗೆ ಗೊತ್ತು. ನಾನು ಕಳಪೆ ಲೇಕನಗಳಲ್ಲಿ ಉದ್ದುದ್ದ ತಪ್ಪು ತೋರಿಸಿದ್ದು ಇದೇ ಮೊದಲಲ್ಲ. ಮೊದಲೇ ತಿಳಿಸಿದ ಹಾಗೆ ನನ್ನ ಅಳತೆಯ ಗುಣಮಟ್ಟ ೯ನೇ ತರಗತಿ ಪರೀಕ್ಶೆ. ಅದು ‘ಎಲ್ಲ ಬಲ್ಲವ ನಾನು’ ಎಂಬ ನಡವಳಿಕೆಯಲ್ಲ. ಅದು ೫ ನಿಮಿಶ ನಡುಬಲೆ ಬಳಸಬಲ್ಲೆ ಎಂಬ ನಡವಳಿಕೆ. ಮೇಲಾಗಿರುವ ತಪ್ಪುಗಳು ಓದುಗರ ಓದನ್ನು ಗಮನಿಸಿದರೆ ತೀರಾ ಎಳವೆಯ ತಪ್ಪುಗಳು. ಅವನ್ನ ತಕ್ಕುದಾಗೇ ತಿದ್ದಬೇಕಾಗುತ್ತದೆ. ೯ನೇ ತರಗತಿಯ ಹಯ್ದ ಹೋಮ್ ವರ್ಕಿಗಾಗಿ ಇದೇ ತಪ್ಪುಗಳನ್ನ ಮಾಡಿದ್ದರೆ ನಾನು ಬೇರೆಯದೇ ತರದಲ್ಲಿ ತಿದ್ದುತ್ತಿದ್ದೆ. ಇದು ನಿಲುಮೆ. ದೊಡ್ಡವರು ಬರೆಯುವ, ಓದುವ ಎಡೆ. ಇದೇ ತರದ ಅಂಕಣಗಳು ಹೆಚ್ಚುತ್ತಾ ಹೋದಲ್ಲಿ ನಿಲುಮೆ ‘Light Head’ಗಳಿಗಾಗಿ ಮಾತ್ರ ಉಳಿದುಕೊಳ್ಳುತ್ತದೆ ಎಂಬುದು ನನ್ನ ಕಳಕಳಿ.

      ಉತ್ತರ
  • Timmegowda
   ಮಾರ್ಚ್ 23 2013

   ಒಳ್ಳೆಯ ಕೆಲಸ ಮಾಡಿದ್ದೀರಿ. ಹಿಂದುತ್ವವಾದಿಗಳಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದರಲ್ಲಿ ಪರಮಾನಂದ ಸಿಕ್ಕುತ್ತದೆ. ಅವರು ಮಾಡಿದ್ದನ್ನು ಹಾಗೂ ಮಾಡದ್ದನ್ನೂ ಸೇರಿಸಿ ಸುಳ್ಳಿನ ಕಂತೆ ಬರೆದು ಅಮಾಯಕರನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ರೋಸಿಹೊಗುವಂತೆ ಮಾಡುವುದು ಇದರ ಉದ್ಧೇಶ. ಇಂಥ ಇನ್ನೊಬ್ಬ ರಾಜಕೀಯ ಉದ್ಧೇಶದ ಲೇಖಕ ಪ್ರತಾಪಸಿಂಹ. ಇವರ ಬರಹಗಳು ವಿಶ್ವಾಸಾರ್ಹವಲ್ಲ. ಆದರೆ ಅಮಾಯಕರು ಇವರ ಲೇಖನಗಳನ್ನು ನಿಜವೆಂದು ತಿಳಿದುಬಿಡುವ ಸಾಧ್ಯತೆ ಇದೆ. ಇದಕ್ಕಾಗಿ ಅವರ ಲೇಖನಗಳಲ್ಲಿ ಇರುವ ಪೊಳ್ಳುತನವನ್ನು ಧೈರ್ಯವಾಗಿ ಬಯಲಿಗೆ ಎಳೆಯುವವರ ಅಗತ್ಯ ಇಂದು ಇದೆ.

   ಉತ್ತರ
   • ನವೀನ
    ಮಾರ್ಚ್ 24 2013

    ಪ್ರಜ್ನಾವಂತರ ಅವಶ್ಯಕತೆಯಿದೆಯಲ್ಲವೇ?

    ಉತ್ತರ
  • ಮಾರ್ಚ್ 23 2013

   ಗೌಡ್ರೆ,
   ನಿಮ್ಮ ಗುಣಮಟ್ಟದ ಮಾಪಕವೇನು?
   ನಿಲುಮೆ ನಿಮಗೆ ಹಿಡಿಸುತ್ತದೋ ಬಿಡುತ್ತದೋ ಅದು ನಿಮಗೆ ಬಿಟ್ಟ ವಿಷಯ.ಎಲ್ಲ ತತ್ವದ ಎಲ್ಲೇ ಮೀರಲಿ ಹೊರಟಿರುವುದರಿಂದಲೇ ಎಲ್ಲರ ಮಾತಿಗೂ ವೇದಿಕೆಯಾಗುತ್ತಿದೆ “ನಿಲುಮೆ”. ಸಹ್ಯಭಾಷೆಯಲ್ಲಿರುವ ಎಲ್ಲಾ ರೀತಿಯ ಕಮೆಂಟು,ಲೇಖನಗಳಿಗೂ ವೇದಿಕೆ ಕೊಟ್ಟಿದ್ದೇವೆ.ಕೊಡುತ್ತೇವೆ.
   ನಿಲುಮೆಯದ್ದು ಬಹಿಷ್ಕಾರ ಹಾಕುವ ಬಳಗವಲ್ಲವಾದ್ದರಿಂದ, ನಿಲುಮೆಯನ್ನು ಮರೆಯುವುದು,ನೆನಪಿನಲ್ಲಿಡುವುದಕ್ಕೂ ತಾವು ಸ್ವತಂತ್ರರು.
   ಕೆಳಗೆ ’ಬಸವಯ್ಯ” ಹೇಳಿದಂತೆ ತಾತ್ವಿಕವಾಗಿ ವಿರೋಧಿಸುವುದಕ್ಕೂ,ತಪ್ಪುಗಳನ್ನು ಕಂಡುಹಿಡಿಯುವುದಕ್ಕೂ,’ನಾನೇ ಬ್ರಹ್ಮ’ ಅಂತ ಬರೆಯುವುದಕ್ಕೂ ವ್ಯತ್ಯಾಸವಿದೆ.

   ಉತ್ತರ
 5. ಶೆಟ್ರೇ,
  ನನ್ನ ಗುಣಮಟ್ಟದ ಮಾಪಕ ದೊಡ್ಡದೇನೂ ಇಲ್ಲ. ಮೇಲೆ ತಿಳಿಸಿರುವಂತೆ ಒಂಬತ್ತನೇ ತರಗತಿಯ ಪರೀಕ್ಶೆಯೇ ಮಾಪಕ. ಅಂಕಣವನ್ನ ೯ನೇ ತರಗತಿಯ ಹಯ್ದ ಪರೀಕ್ಶೆಯಲ್ಲಿ ಬರೆದಿದ್ದಲ್ಲಿ ಪಾಸಾಗುತ್ತಿದ್ದನೇ ಅನ್ನುವುದು ಮಾಪಕ. ಎಲ್ಲರ ಮಾತಿಗೆ ವೇದಿಕೆಯಾಗುತ್ತಿದೆ ಎಂಬ ಮಾತಿಗೇ ನಾನು ತಿಳುವಳಿಕೆಯ ವಿಶಯ ತೆಗೆದಿದ್ದು. ಎಲ್ಲಾ ತತ್ವಗಳಿಗೆ ವೇದಿಕೆಯಾಗುವುದು ಬೇರೆ, ಕಳಪೆ ಗುಣಮಟ್ಟಕ್ಕೆ ವೇದಿಕೆಯಾಗುವುದು ಬೇರೆ. ಎಲ್ಲಾ ಮಾಹಿತಿಯೂ ಸರಾಗವಾಗಿ ಸಿಗುವ ನಡುಬಲೆಯ ನಮ್ಮ ಕಾಲದಲ್ಲಿ ತೀರ ಚಿಕ್ಕ ಮಕ್ಕಳೂ ಮಾಡದ ಮಾಹಿತಿ ತಪ್ಪುಗಳನ್ನು ಮಾಡುವುದು ಅಂದರೇನು? ರಾಮರ್ ಪಿಳ್ಳೆಯದು ಪರ್ಯಾಯ ಮಾರ್ಗ ಅನ್ನುವುದು ಇನ್ನೊಂದು ತತ್ವವಲ್ಲ. ಅದು ದಡ್ಡತನ. ರೋಸಿ ಹೋಗಿದ್ದಕ್ಕೆ ಕಾರಣವಿದೆ. ಇದು ಇತ್ತೀಚೆಗಿನಿಂದ ಅಚ್ಚಾದ ಮೊದಲ ಕಳಪೆ ಅಂಕಣವಲ್ಲ. ಮೊದಮೊದಲು ತಪ್ಪುಗಳು ಆಗುತ್ತಿವೆ ಅನಿಸಿತ್ತು. ಆದರೀಗ ಇದು ನಿಲುಮೆಯ ಚಾಳಿ ಅನಿಸುತ್ತಿದೆ. ನೀವು ತಪ್ಪು ಕಾಣುವವರ ವಿರುದ್ದವೇ ನೆಪಹಿಡಿದು ತಿರುಗಿಬೀಳುತ್ತಿರುವುದು ನೋಡಿದರೆ ತಿದ್ದುಕೊಳ್ಳುವ ಮನಸ್ಸೇ ನಿಮಗಿಲ್ಲ ಅನಿಸುತ್ತಿದೆ.

  ಉತ್ತರ
  • ಮಾರ್ಚ್ 24 2013

   ನಿಮ್ಮ ಎಲ್ಲರ ಕನ್ನಡದಲ್ಲಿ ’ಮಂದಿಯಾಳ್ವಿಕೆ’ ಅಂತೀರಲ್ಲಾ ಅದ್ರಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯ”ಕ್ಕೇ ಏನ್ ಅಂತೀರಾ? ನಮಲ್ಲಿ ಪ್ರಕಟವಾಗುವ ಲೇಖನಗಳು, ಲೇಖಕರ ಅಭಿಪ್ರಾಯವಾಗಿರುತ್ತವೆ.ಅವರ ಅಭಿಪ್ರಾಯವನ್ನು ನಮ್ಮ ಮೂಗಿನ ನೇರಕ್ಕೋ ಅಥವಾ ಇನ್ನೇತಕ್ಕೋ ತಿದ್ದುವುದು ಸ್ವಾತಂತ್ರ್ಯ ಹರಣವೆನಿಸಿಕೊಳ್ಳುತ್ತದೆ.ಪರ-ವಿರೋಧ,ತಪ್ಪು-ಸರಿಗಳ ಚರ್ಚೆಗೆಂದೆ “ಪ್ರತಿಕ್ರಿಯೆಗಳು” ಸದಾ ತೆರೆದಿರುತ್ತವೆ.ನಾವದನ್ನು “ಸಹ್ಯ” ಅನ್ನುವ ಭಾಷೆಯಲ್ಲಿದ್ದಾಗ ಮಾಡರೇಟ್ ಸಹ ಮಾಡುವುದಿಲ್ಲ. ಇಷ್ಟೆಲ್ಲಾ ಇದ್ದ ಮೇಲು “ನಿಲುಮೆ”ಯ ಗುಣ ಮಟ್ಟದ ಬಗ್ಗೆ ಮಾತನಾಡುವುದು ನಿಮ್ಮಿಷ್ಟಕ್ಕೆ ಬಿಟ್ಟದ್ದು.

   ನಾಳೆ ಯಾರಾದರೂ “ರಾಮಸೇತು ಯಾಕೆ ಉಳಿಯಬಾರದು” ಅಂತ ಬರೆದು ಕಳಿಸಿದರೆ ನಾವು ಅದನ್ನೂ ಪ್ರಕಟಿಸುತ್ತೇವೆ.ಜನ ಅವರವರ ಸೀಮಿತ ಬುದ್ದಿಯ ಮಟ್ಟದೊಳಗೆ ನಿಲುಮೆಯನ್ನು ಅಳೆದಾಗ ಹೀಗೆ ಆಗುತ್ತದೆ.ಅಡ್ಡಿಯಿಲ್ಲ.

   ಉತ್ತರ
 6. ಎಲ್ಲರ-ಕನ್ನಡ ಎಲ್ಲರ ಕನ್ನಡ. ಅದು ನನ್ನ ಕನ್ನಡ ಮಾತ್ರವಲ್ಲ. ‘ಅಬಿವ್ಯಕ್ತಿ ಸ್ವಾತಂತ್ರ್ಯಕ್ಕೆ’ ನಾನು ‘ಸೊಲ್ಲೀಳಿಗೆ (ಸೊಲ್ಲು + ಈಳಿಗೆ)’ ಎಂದು ಬಳಸುತ್ತೇನೆ. ನಾನಿಲ್ಲಿ ರಾಮಸೇತು ಯಾಕೆ ಉಳಿಯಬಾರದು ಇಲ್ಲಾ ಉಳಿಯಬೇಕು ಎಂಬ ಅನಿಸಿಕೆಗಳ ಬಗ್ಗೆ ಮಾತಾಡುತ್ತಿಲ್ಲ. ‘ತಪ್ಪು ಮಾಹಿತಿಗಳ’ ಬಗ್ಗೆ ಮಾತಾಡುತ್ತಿದ್ದೇನೆ. ೧+೧=೩ ಅನ್ನುವುದೂ, ಮನಮೋಹನ್ ಸಿಂಗ್ ಸಿಟಿಬಿಟಿಗೆ ಸಹಿ ಹಾಕಿದ್ದಾರೆ ಅನ್ನುವುದೂ ತಪ್ಪು ಮಾಹಿತಿ. ಸಂಪಾದಕರು ತಪ್ಪು ಮಾಹಿತಿಯನ್ನು ತಿದ್ದುವುದು ಇಲ್ಲಾ ತಿದ್ದಲು ಹೇಳುವುದು ಅಂದರೆ ಅಂಕಣ ಬರೆದವರ ಸೊಲ್ಲೀಳಿಗೆಯನ್ನು ದೋಚುವುದು ಎಂದಲ್ಲ. ಅದು ಅಂಕಣಗಳ ಹಾಗಾಗೇ ನಿಲುಮೆಯ ಗುಣಮಟ್ಟವನ್ನ ಕಾಪಾಡುವುದು ಎಂದುರುಳು. ನಾನಿಲ್ಲಿ ಕಮೆಂಟುಗಳ ಬಗ್ಗೆ ಮಾತಾಡುತ್ತಿಲ್ಲ. ಅಂಕಣಗಳ ಬಗ್ಗೆ ಮಾತಾಡುತ್ತಿದ್ದೇನೆ. ನೀವು ಮೇಲೆ ಹೇಳಿರುವಂತೆ ‘ಸಹ್ಯಬಾಶೆ’ಯೊಂದೇ ನಿಲುಮೆಯ ಅಳೆತೆಗೋಲು ಅನ್ನುವ ನಿಲುವು ನಿಮ್ಮದಾದರೆ ಇನ್ನುಮುಂದೆ ಸಂಪಾದಕರಿಂದ ಸರಿ-ತಪ್ಪಿನ ಗುಣಮಟ್ಟವನ್ನ ಬಯಸುವುದನ್ನ ನಿಲ್ಲಿಸುತ್ತೇನೆ. ನಿಲುಮೆಯ ಗುಣಮಟ್ಟದ ಅಳತೆಗೋಲು ಯಾವುದು ಎಂದು ತಿಳಿಸಿಕೊಟ್ಟಿದ್ದಕ್ಕೆ ನನ್ನಿ.

  ಉತ್ತರ
 7. ಬಸವಯ್ಯ
  ಮಾರ್ಚ್ 25 2013

  ಭಾರತ ಸಿ.ಟಿ.ಬಿ.ಟಿ ಗೆ ಸಹಿ ಹಾಕಿದೆಯೊ/ಇಲ್ಲವೊ ಎಂಬ ವಿಷಯವನ್ನು ತಮ್ಮ ಲೇಖನದಲ್ಲಿ ಬಳಸುವ ಮೊದಲು ಲೇಖಕರು ಪುನರ ಪರಿಶೀಲಿಸಬೇಕಾಗಿತ್ತು. ಆಗ ಇಂತಹ ಪ್ರಮಾದ ಇರುತ್ತಿರಲ್ಲಿಲ್ಲ. ಯಾರೇ, ಏನೇ ಬರೆದರೂ ಕುರುಡಾಗಿ ಸ್ವೀಕರಿಸಬಾರದು ಎಂಬುದಕ್ಕೆ ಈ ಲೇಖನ ಉದಾಹರಣೆಯಾಗಿ ಇರಲಿ.

  ಉತ್ತರ
 8. ಪ್ರವೀಣ್
  ಮಾರ್ಚ್ 28 2013

  ಲೇಖನದ ಸರಿ ತಪ್ಪುಗಳನ್ನು ಎತ್ತಿ ಹಿಡಿದು ಚರ್ಚೆ ಮಾಡುವುದು ಬಿಟ್ಟು ನಿಲುಮೆಯ ಮೇಲೆ ಸಮರ ಸಾರಿದಂತಿದೆ. ಲೇಖನದ ತಪ್ಪುಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments