ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 21, 2013

“ಅರ್ನೆಸ್ಟೊ ಚೆಗುವಾರ ಕ್ರಾಂತಿಕಾರಿ ಭಾವಜೀವಿ”

‍ನಿಲುಮೆ ಮೂಲಕ

– ನಾರಾಯಣ್ ಕೆ ಕ್ಯಾಸಂಬಳ್ಳಿ

Cheguvera‘ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ. ಸೋಲಿಗಿಂತ ಸಾವನ್ನೆ ಹೆಚ್ಚು ಇಚ್ಛಿಸುತ್ತೇನೆ’  ಎಂದು ಕ್ಯೂಬ ಬಿಡುವ ಮೊದಲು ಹೇಳಿದ ಮಾತಿನಂತೆಯೇ ನಿರಂತರವಾಗಿ ಹೋರಾಟದಲ್ಲೇ ತಮ್ಮ ಜೀವನವನ್ನು ಸವೆದು ಸೋಲಲು ಇಚ್ಛಿಸಿದೆ ತನನ್ನು ಸಾವಿಗೆ ಒಡ್ಡಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೊ ಚೆಗುವರ ಜಗತ್ತಿನ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರು. ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಅರ್ನೆಸ್ಟೊ ಚೆಗುವಾರ ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ತಂದೆ ತಾಯಿಗಳ ಮೊದಲ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ. ಚೆಗುವರ ಚಿಕ್ಕಂದಿನಿಂದಲೇ ಬಡವರ, ಶ್ರಮಿಕರ ಪರವಾಗಿ ಹೆಚ್ಚು ಪ್ರೀತಿಯನ್ನು ಬೆಳೆಸಿಕೊಂಡವನು ಮತ್ತು ಎಡಪಂಥೀಯ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿಬೆಳೆದ ಅವನಿಗೆ ಚಿಕ್ಕಂದಿನಿಂದಲೇ ಸ್ಪಷ್ಟ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯ ದೊರೆಯುತಿತ್ತು.

ಸ್ಪ್ಯಾನಿಷ್ ಅಂತರ್‍ಯುದ್ಧದ ಕಾಲದಿಂದಲೂ ಗಣತಂತ್ರ ವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತ್ತು.ಚೆಗುವಾರ ತನ್ನ 19ನೇ ವಯಸ್ಸಿನಲ್ಲಿ (1948) ವೈದ್ಯಕೀಯ ಕಲಿಕೆಗಾಗಿ ಬ್ಯೂನಸ್ ಐರ್ಸ್ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಾನೆ. ಆದರೆ 1951ರಲ್ಲಿ ವಿಶ್ವವಿದ್ಯಾಲಯದಿಂದ ಒಂದು ವರ್ಷ ರಜೆ ಪಡೆದು ತನ್ನ ಆಪ್ತಮಿತ್ರ ಅಲ್ಬರ್ಟೊ ಗ್ರೆನಡೋ ಜೊತೆಗೂಡಿ ಮೋಟರ್ ಸೈಕಲ್ ಮೇಲೆ ದಕ್ಷಿಣ ಅಮೆರಿಕಾದ ಪ್ರವಾಸ ಹೊರಡುತ್ತಾನೆ. ಚೆಗುವಾರನ ಬದುಕಿನಲ್ಲಿ ಈ ಪ್ರವಾಸ ಬಹಳ ಪ್ರಮುಖವಾದದ್ದು ಮತ್ತು ಚೆಗುವಾರ ತಾನೊಬ್ಬ ಕ್ರಾಂತಿಕಾರಿಯಾಗಿರಲು ಪ್ರಮುಖ ಕಾರಣ ಈ ಪ್ರವಾಸದ ಅನುಭವಗಳೇ. ಅವನೆ ಹೇಳಿದ, ಬರೆದುಕೊಂಡಿರುವ ಹಾಗೆ “ಆಂಡೀಸ್ ಪರ್ವತಶ್ರೇಣಿಯ ಉನ್ನತ ಶಿಖರವಾದ ಮಾಚು ಪಿಚ್ಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂಮಾಲೀಕರಿಂದ ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನಸಮುದಾಯಗಳ ಹೀನಾಯ ಬದುಕು, ಕಡುಬಡತನ, ನನ್ನ ಮನಸ್ಸಿಗೆ ತಾಕಿತು. ಈ ಜನರಿಗೆ ನೆರವಾಗಬೇಕಿದ್ದಲ್ಲಿ ನಾನು ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ರಾಜಕೀಯ ರಂಗಕ್ಕೆ ಪ್ರವೇಶಿಸಬೇಕಿದೆ ಎಂದು ಮನವರಿಕೆಯಾಯಿತು” ಎಂದು ನಂತರ ಚೆಗುವಾರ ಬರೆದುಕೊಳ್ಲುತ್ತಾನೆ. ಹಾಗಾಗಿ ಈ ಮೋಟಾರ್ ಸೈಕಲ್ ಪ್ರವಾಸ್ ಚೆಗುವಾರನ ಕ್ರಾಂತಿ ಬದುಕಿನ ಬಹಳ ದೊಡ್ಡ ತಿರುವು. ಮೋಟಾರ್ ಸೈಕಲ್ ಪ್ರವಾಸದ ಜೊತೆಗಾರ ಆಲ್ಬರ್ಟೊ ಗ್ರಾನಡೊಸ್  ಚೆ ಕುರಿತು ಹೇಳುತ್ತಾ  ಟೆಟೆ (‘ಚೆ’ ನನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ನನ್ನು ನಾನು ಮೊದಲು ಭೇೀಟಿ ಆಗಿದ್ದು 1941ರಲ್ಲಿ ಅದು ನನ್ನ ಸಹೋದರ ಥಾಮಸ್ ಮೂಲಕ. ಆಗ ನನಗೆ 13 ವರ್ಷ ವಯಸ್ಸು. ನಮ್ಮಿಬ್ಬರನ್ನು ಒಟ್ಟೊಟ್ಟಾಗಿ ತಂದ ವಿಷಯವೆಂದರೆ ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ. ಚೆ ಮನೆಗೆ ನಾನು  ವಾಡಿಕೆಯ ಅಥಿತಿಯಾಗಿದ್ದೆ. ಅಲ್ಲಿದ್ದ ಗ್ರಂಥಭಂಡಾರವನ್ನು ನನ್ನದೆಂಬತೆಯೇ ಬಳಸಿಕೊಳ್ಳುತ್ತಿದ್ದೆ. ಟೆಟೆ (ಚೆ) ಒಬ್ಬ ರೂಢಿಯ ಮಾತುಗಾರನಾಗಿದ್ದ.

ನಾನು ಅವನೊಡನೆ ಎಷ್ಟೋ ರಾತ್ರಿಗಳೂ ಚರ್ಚಿಸುತ್ತಾ ಕಳೆದದುಂಟು. ಒಮ್ಮೆ ವಿದ್ಯಾರ್ಥಿ ಚಳುವಳಿಯಲ್ಲಿ ನನ್ನ ಬಂಧನವಾಯಿತು. ಆಗ ನನ್ನ ಸಹೋದರ ಥಾಮಸ್ ಜೊತೆ ಚೆ ನನ್ನ ನೋಡಲು ಪೋಲಿಸ್ ಠಾಣೆಗೆ ಬಂದಿದ್ದ. ನಾನು ಅವನ ಜೊತೆ ಮಾತನಾಡುತ್ತಾ ಬಂದಿತರನೆಲ್ಲ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳನ್ನು ಬೀದಿಗೆ ಕರೆತರುವಂತೆ ನಾನು ಅವನಿಗೆ ಹೇಳಿದೆ. ಅದಕ್ಕೆ ಚೆ ಹೇಳಿದ ಮಾತು ಮಿಯಾಲ್ (ಆಲ್ಬೊರ್ಟೊ ಗ್ರಾನಡೋಸ್ ನನ್ನು ಪ್ರೀತಿಯಿಂದ ಕರೆಯುತಿದ್ದುದು) ನಮ್ಮನ್ನು ಬೀದಿಗಿಳಿಯಿರಿ ಎಂದು ಹೇಳುತ್ತಿದ್ದಿರಲ್ಲಾ? ಪೋಲಿಸರು ನಮ್ಮ ತಲೆಯ ಮೇಲೆ ಸರಿಯಾಗಿ ದೊಣ್ಣೆಗಳಿಂದ ಇಕ್ಕಲಿ ಅಂತೆಲೊ? ಅದೆಲ್ಲ ಆಗುವುದಿಲ್ಲ. ನನಗೆ ಪಿಸ್ತೂಲು ಕೊಟ್ಟರೆ ಮಾತ್ರ ನಾನು ಬೀದಿಗಿಳಿಯುತ್ತೇನೆ ಎಂದಿದ್ದ. ಇಂತಾ ಅವನೊಟ್ಟಿಗಿನ ನೆನಪುಗಳು ಅದೆಸ್ಟೋ ಇದೆ. ನಾವಿಬ್ಬರೂ ಮಾಡಿದ ಮೊದಲ ಪ್ರವಾಸದಲ್ಲಿ 1952ರಲ್ಲಿ ಫೆಬ್ರವರಿ 18ರಂದು ನಾವು ‘ಚೆಲಿ’ ದೇಶದ ‘ಟೆಮುಕು’ ನಗರಕ್ಕೆ ಬಂದೆವು. ಮಾರನೇ ದಿನ ಅಲ್ಲಿನ ಸ್ಥಳೀಯ ಪತ್ರಿಕೆ ‘ಡೈರಿಯೋ ಆಸ್ಟ್ರಲ್’ ನಮ್ಮ ಬಗ್ಗೆ ಒಂದು ಲೇಖನ ಪ್ರಕಟಿಸಿತು. ಆ ಲೇಖನದ ಶೀರ್ಷಿಕೆ ‘ಮೋಟಾರ್ ಸೈಕಲ್ ಮೇಲೆ ಲ್ಯಾಟಿನ್ ಅಮೆರಿಕಾದಲ್ಲಿ ಇಬ್ಬರು ಕುಷ್ಠರೋಗ ತಜ್ಞರ ಪ್ರವಾಸ’ ಎಂದು  ಆ ಲೇಖನದ ಸಾರಾಂಶ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಮೋಟಾರ್ ಸೈಕಲ್ ಮೇಲೆ ಪ್ರವಾಸ ಮಾಡುತ್ತಿರುವ ಜೀವ ರಸಾಯನ ಶಾಸ್ತ್ರದ ತಜ್ಞ ಆಲ್ಬರ್ಟ್ ಗ್ರಾನೆಡೋಸ್ ಮತ್ತು ಬ್ಯುನಸ್ ಐರಿಸ್ ವಿಶ್ವ ವಿದ್ಯಾಲಯದಲ್ಲಿ ಔಷಧಶಾಸ್ತ್ರ ವಿಭಾಗದಲ್ಲಿ ಅಂತಿಮವರ್ಷದ ವಿದ್ಯಾರ್ಥಿಯಾಗಿರುವ ಅರ್ನೆಸ್ಟೊ ಗುವಾರ ಸೆರ್ನಾ ಅವರು ನೆನ್ನೆ ‘ಟೆಮುಕ’ವಿಗೆ ಆಗಮಿಸಿದ್ದಾರೆ.

ಈ ಮೋಟಾರ್ ಸೈಕಲ್ ಸವಾರರು ಕಾರ್ಡೋವಾ ಪ್ರಾಂತ್ಯದಿಂದ ಡಿಸೆಂಬರ್ 29ರಂದು ತಮ್ಮ ಪ್ರಯಾಣವನ್ನು ಆರಂಭಿಸಿದರು. ದಕ್ಷಿಣ ದಿಕ್ಕಿಗೆ ಹೊರಟ ಅವರು ಮೆಂಡೋಜ ಮತ್ತು ಸಾಲ್ಟ ಮೂಲಕ ಹಾದು ಪೆಯುಲ್ಲಾ ಬಳಿ ಗಡಿದಾಟಿ ಚೆಲಿ ಗೆ ಪ್ರವೇಶಿಸಿದರು. ಎಂದು ಬಹಳ ದೀರ್ಘವಾದ ಲೇಖನವನ್ನೆ ಪ್ರಕಟಿಸಿತ್ತು. ಎನ್ನುವ ಅಲ್ಬರ್ಟೋ ಸಾನ್‍ಪಾಬ್ಲೊ ಕುಷ್ಠರೋಗ ಚಿಕಿತ್ಸಕೇಂದ್ರವನ್ನು ಭೇಟಿ ಮಾಡಿದ ಕುರಿತು ಹೀಗೆ ಹೇಳುತ್ತಾರೆ. ಸಾನ್‍ಪಾಬ್ಲೊ ಕುಷ್ಠರೋಗ ಚಿಕಿತ್ಸ ಕೇಂದ್ರದ ವೈದ್ಯರುಗಳು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ರೋಗಿಗಳ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುವಂತೆ ನಮಗೊಂದು ಪ್ರಯೋಗಾಲಯವನ್ನೇ ಒದಗಿಸಿಕೊಟ್ಟರು. ನಾವು ಕುಷ್ಠರೋಗಿಳಿಗೆ ಮಾನಸಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದೆವು. ರೋಗಿಗಳದ್ದೆ ಆದ ಒಂದು ಕಾಲ್ಜೆಂಡಾಟದ ತಂಡವನ್ನು ಸಂಘಟಿಸಿ ಅವರಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದೆವು. ನಾವು ಅವರ ಬಗ್ಗೆ ಕೊಡುತ್ತಿದ್ದ ಗಮನ ಮತ್ತು ಅವರ ಜೊತೆಗಿದ್ದ ನಮ್ಮ ಹೊಂದಾಣಿಕೆಯ ಸಂಬಂಧ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಅವರೆಲ್ಲ ನಮ್ಮನ್ನು ತುಂಬಾನೆ ಅಚ್ಚಿಕೊಂಡರು. ಸ್ಯಾನ್ ಪಾಬ್ಲೋದಿಂದ ಹೊರಡುವ ಹಿಂದಿನ ದಿನ ಕುಷ್ಠರೋಗಿಗಳ ಒಂದು ನಿಯೋಗ, ಗಂಡಸರು ಮತ್ತು ಮಕ್ಕಳು ಎಲ್ಲ ಸೇರಿ ನಮಗೆ ವಿದಾಯ ಹೇಳಲು ಬಂದರು ಮತ್ತು ನಮ್ಮ ಗೌರವಾರ್ಥ ತೆಪ್ಪಕ್ಕೆ ಮಾಂಬೋ – ಟಾಂಗೋ ಎಂದು ಹೆಸರಿಟ್ಟಿದ್ದರು. ಮಾಂಬೋ ಎನ್ನುವುದು ‘ಪೆರು’ವಿನ ಒಂದು ನೃತ್ಯ ಟಾಂಗೋ ಅರ್ಜೆಂಟೈನಾ ನೃತ್ಯ. ಅವರು ರೂಢಿಸಿದ ಹೆಸರುಗಳು ಅಂರ್ಜೆಂಟೈನಾ ಮತ್ತು ಪೆರುವಿನ ಸ್ನೇಹದ ಸಂಕೇತವಾಗಿತ್ತು. ಆ ಸಂದರ್ಭದಲ್ಲಿ ಮಳೆ ಬಂದಿತು ಆದರೂ ನಮ್ಮನ್ನೂ ಬಿಳ್ಕೊಡಲು ಬಂದಿದ್ದ ಆ ಜನರ ಉತ್ಸಾಹವನ್ನೇನೂ ಅದರು ತೋಹಿಸಲಿಲ್ಲ.ಮೊದಲು ಅವರು ನಮ್ಮ ಗೌರವಾರ್ಥ ಹಾಡುಗಳನ್ನು ಹಾಡಿದರು.

ಮೂರುಜನ ಕುಷ್ಠರೋಗಿಳು ಬಿಳ್ಕೊಡುಗೆ ಭಾಷಣವನ್ನು ಮಾಡಿದರು. ಅವರಿಗೆ ಭಾವಪೂರ್ಣವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಾಗದಿದ್ದರೂ, ಅವರ ಮಾತುಗಳು ಅವರ ಹೃದಯದಿಂದ ನೇರವಾಗಿ ಬಂದಂಥವುಗಳಾಗಿತ್ತು. ಸ್ಯಾನ್ ಪಾಬ್ಲೋದಲ್ಲಿ ನಾವಿದ್ದ ಅವಧಿ ಅಲ್ಪ. ಆದರೆ ನಮ್ಮನ್ನು ಒಳ್ಳೆಯ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದ ಆ ಜನರನ್ನು ಬಿಳ್ಕೋಡಲು ಅರ್ನೆಸ್ಟೋ ನಂತೆ ನನಗೂ ವ್ಯಥೆಯಾಯಿತು.  ಎಂದು ತಾನು ಚೆ ಜೊತೆಗೆ ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಚೇ 1953ರಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ. ಅಲ್ಲಿಂದ ಮತ್ತೆ ಪ್ರವಾಸ ಹೊರಟು ಗ್ವಾಟಮಾಲಾ ಕ್ಕೆ ಬರುತ್ತಾನೆ. ಅಲ್ಲಿ ‘ಚೆ’ ಗೆ ಯುದ್ಧದಲ್ಲಿ ಮುಳುಗಿದ್ದ ದೇಶವೊಂದರ ಮೊದಲ ಅನುಭವ ದೊರೆಯುತ್ತೆ. ನಂತರ 1954ರಲ್ಲಿ ಅರ್ಬೆಂಜ್‍ರ ಸಮಾಜವಾದಿ ಸರ್ಕಾರದ ವಿರುದ್ಧ ಸಿ.ಐ.ಎ. ಪ್ರೇರಿತವಾದ ಕ್ಷಿಪ್ರಕ್ರಾಂತಿಯನ್ನು ಅವರು ಕಣ್ಣಾರೆ ಕಂಡರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಪ್ರಯತ್ನಿಸುವ ಲ್ಯಾಟಿನ್ ಅಮೆರಿಕಾದಂತಹ ಯಾವುದೆ ಸರ್ಕಾರವನ್ನು ಅಮೇರಿಕಾದಂತಾ ಸಾಮ್ರಾಜ್ಯಶಾಹಿ ದೇಶ ವಿರೋಧಿಸುತ್ತದೆ. ಮತ್ತು ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಯತಾಸ್ಥಿತಿಯಾಗಿ ಉಳಿಸಲು ಪ್ರಾರಂಭಿಸುತ್ತೆ. ಎಂಬುದನ್ನು ‘ಚೆ’ ಗ್ರಹಿಸಿದರು. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಸಶಸ್ತ್ರ ಹೋರಾಟದಿಂದ ಸಾಧಿಸುವ ಕ್ರಾಂತಿಯೊಂದೇ ಮದ್ದು ಎಂದು ಚೆ ಯೋಚಿಸುತ್ತಾನೆ. ಆನಂತರ ಹೇಗೋ ಗ್ವಾಟೆಮಾಲದಿಂದ ಹೊರಬಂದ ಚೆ ಫಿಡೆಲ್ ಕ್ಯಾಸ್ಟ್ರೋರನ್ನು ಭೇಟಿ ಮಾಡಿ ಅವರ ಧ್ಯೇಯಕ್ಕೆ ಜೊತೆಯಾಗುತ್ತಾನೆ. ನಂತರ ಕ್ಯೂಬಾದ ಸರ್ವಾಧಿಕಾರಿ  ಜನರಲ್ ‘ಪುಲ್ಗೆನ್ಸಿಯೋ ಬಟಿಸ್ಟಾ’ ವಿರುದ್ಧ ಸೇನಾ ದಂಡಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸುತ್ತಾರೆ. 1956ರಲ್ಲಿ ಚೆ ಮತ್ತು ಕ್ಯಾಸ್ಟ್ರೋ ಹಾಗೂ ಇತರೆ 40 ಮಂದಿ ಸ್ತ್ರೀ-ಪುರುಷ ಹೋರಾಟಗಾರರು ಜನರಲ್ ಬಿಟಿಸ್ಟಾನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬರುತ್ತಾರೆ. ಈ ಹೋರಾಟಗಾರರ ಜನರಲ್ ಬಿಟಿಸ್ಟಾನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬರುತ್ತಾರೆ. ಈ ಹೋರಾಟಗಾರರ ಗುಂಪು ಸಿಯೆರಾ ಮೈಸ್ಟ್ರಾ ಪರ್ವತಗಳಲ್ಲಿ ನೆಲೆಸಲು ತೀರ್ಮಾನಿಸುತ್ತೆ. ಇದಕ್ಕೆ ಉತ್ತರವಾಗಿ ಬಟಿಸ್ಟಾ ಸಿಯೆರಾ ಮತ್ತು ಮೈಸ್ಟ್ರಾಕ್ಕೆ ಹೆಚ್ಚು ಸೈನಿಕ ಪಡೆಗಳನ್ನು ಕಳಿಸುತ್ತಾನೆ. ಚೆ ಮತ್ತು ಕ್ಯಾಸ್ಟ್ರೋ ಸೇರಿದಂತೆ 300 ಜನ ಕ್ರಾಂತಿಕಾರಿಗಳನ್ನು ಮಣಿಸಲು 10 ಸಾವಿರ ಸೈನಿಕ ಪಡೆಯನ್ನು ನಿಯೋಜಿಸುತ್ತಾನೆ. ಬಂಡಾಯಗಾರರ ಬಗ್ಗೆ ಮಾಹಿತಿ ಸಂಗ್ರಹಿಸಲೇಂದೆ ಅನೇಕ ವೇಳೆ ಸರ್ಕಾರಿ ಸೈನಿಕರು ಸಾಮಾನ್ಯ ಜನರನ್ನು ವಿಚಾರಣೆ ಎಳೆದೊಯ್ಯುತ್ತಿದ್ದರು. ಜೊತೆಗೆ ಅನೇಕ ಅಮಾಯಕರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಮಕ್ಕಳನ್ನೂ ಒಳಗೊಂಡಂತೆ ಶಂಕಿತರನ್ನು ಸಾರ್ವಜನಿಕವಾಗಿ ಕೊಲೆಗೈದು ಅವರ ಶವಗಳನ್ನು ಬೀದಿಗಳಲ್ಲಿ ಸಾರ್ವಜನಿಕವಾಗಿ ನೇತು ಹಾಕುತ್ತಿದ್ದರು. ಅಂದರೆ ಸಾಮಾನ್ಯ ಜನರು ಕ್ರಾಂತಿಕಾರಿಗಳ ಜೊತೆ ಸೇರದಂತೆ ಎಚ್ಚರಿಕೆ ನೀಡುವುದು ಮತ್ತು ಭಯ ಹುಟ್ಟಿಸುವುದು ಇದರ ಉದ್ದೇಶವಾಗಿತ್ತು. ಸರ್ವಾಧಿಕಾರಿ ಬಟಿಸ್ಟಾನ ಈ ವರ್ತನೆಗಳಿಂದ ಗೆರಿಲ್ಲಾ ಹೋರಾಟಗಾರರಿಗೆ ಬೆಂಬಲ ಇನ್ನಷ್ಟು ಹೆಚ್ಚಾಗುತ್ತಲೇ ಹೋಯಿತು. ಉದಾಹರಣೆ ವಕೀಲರು, ವಾಸ್ತುಶಿಲ್ಪಿಗಳು, ವೈದ್ಯರು, ಆಕೌಟೆಂಟ್‍ಗಳು ಸಾಮಾಜಿಕಕರ್ತರು ಮುಂತಾದ ಸುಮಾರು 45 ಸಂಘಟನೆಗಳು ಜುಲೈ 26ರ ಚಳುವಳಿಗೆ ಬೆಂಬಲ ಘೋಷಿಸಿದವು. ಅಮೇರಿಕಾ ಸರ್ವಾಧಿಕಾರಿ ಬಟಿಸ್ಟಾಗೆ, ವಿಮಾನ, ಹಡಗು, ಟ್ಯಾಂಕ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಒದಗಿಸಿತು.

‘ನಾಪಾಂಬಾಂಬಿ’ನಂತಹ ವಿನಾಶಕಾರಿ ಅಸ್ತ್ರಗಳು ಇದ್ದಾಗಲೂ ಬಟಿಸ್ಟಾನಿಂದ ಗೆರಿಲ್ಲಾ ಹೋರಾಟಗಾರರನ್ನು ಸೋಲಿಸಲು ಸಾಧ್ಯವಾಗಲಿಲ್ಲ. 1958 ಮಾರ್ಚ್  ಚುನಾವಣೆಗಳನ್ನು ಸರ್ವಾಧಿಕಾರಿ ಬಟಿಸ್ಟಾ ವಿರುದ್ಧ ಕ್ಯೂಬ ಜನತೆ ಬಹಿಷ್ಕರಿಸಿದರು. ರಾಜಧಾನಿ ಹವಾನಗಳಲ್ಲಿ 75% ಚುನಾವಣಾ ಬಹಿಷ್ಕಾರ ಇದ್ದರೆ ಸ್ಯಾಂಟಿಯಾಗೋ ನಗರದಲ್ಲಿ ಶೇ 98% ರಷ್ಟು ಬಹಿಷ್ಕಾರಗಳು ನಡೆಯಿತು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬಟಿಷ್ಟಾನನನ್ನು ನೇರವಾಗಿ ಸೋಲಿಸಲು ಮುಖ್ಯ ನಗರಗಳಿಗೆ ಬಂದರು. ಆದರೆ ಸರ್ವಾಧಿಕಾರಿ ಬಟಿಷ್ಟಾ ಅಮೆರಿಕಾದೊಂದಿಗೆ ಸಮಾಲೋಚಿಸಿ ದೇಶಬಿಟ್ಟು ಪಲಾಯನ ಮಾಡಿದ. 1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗೆವಾರ ಕೂಡ ಇದ್ದರು. ಚೆ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು. ಸರ್ಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು. ಮುಂದೆ ಪಿಡಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಚೆ. ಕೃಷಿ ಮಂತ್ರಿಯಾಗಿ ಅನೇಕಾ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆ ಹೊತ್ತುಕೊಟ್ಟ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ‘ಶಿಕ್ಷಣಕ್ಷೇತ್ರ’ ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಹೊತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸಕಾರವೂ 1961ನೇ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು. ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತ ಆಂದೋಲವನ್ನು ಕೈಗೊಳ್ಳಲಾಯಿತು. ಈ ಆಂದೋಲನ ಮುಗಿಯುವ ವೇಳೆಗೆ 7 ಲಕ್ಷಕ್ಕೂ ಹೆಚ್ಚು ಮಂದಿಗೆ ಓದು ಬರಹ ಕಲಿಸಲಾಯಿತು. ಇಂತಹ ಕ್ರಾಂತಿಕಾರ ಕೆಲಸದಿಂದ ದೇಶದ ಸಾಕ್ಷರತೆ ಶೇ 96 ಕ್ಕೆ ಏರಿಕೆಯಾಯಿತು. ಆನಂತರ ಅವರು 1965ರಲ್ಲಿ ಕ್ಯೂಬಾವನ್ನು ಬಿಟ್ಟು ಹೊರಟು ತೃತೀಯ ಜಗತ್ತಿನ ಕ್ರಾಂತಿಗಳಿಗೆ ಬೆಂಬಲವಾಗಿ ಅವರು ತನ್ನ ಸುತ್ತಾಟವನ್ನು ಮುಂದುವರಿಸಿದರು. ಅದರ ಭಾಗವಾಗಿಯೇ ಅವರು ಬೊಲಿವಿಯದಲ್ಲಿ ಗೆರಿಲ್ಲಾ ಯೋಧರನ್ನು ಸಂಘಟಿಸಲು ಯತ್ನಿಸಿದರು. ಆದರೆ ಬೊವಿಲಿಯಾದಲ್ಲಿ ಚೆ ಗೆ ಸಾಮನ್ಯ ಜನರ ನೆರವು ಸಿಗಲಿಲ್ಲಾ ಕ್ರಾಂತಿಕಾರಿಗಳ ಜೊತೆ ಸೇರಲು ಸಾಮಾನ್ಯಜನ ಎದುರುತ್ತಿದ್ದರು. ಆದರು ಎದೆಗುಂದದೆ ಚೆ ತನ್ನ ಹೋರಾಟವನ್ನು ಮುಂದುವರಿಸಿದರು. ಆದರೆ ಅಮೆರಿಕಾದ ಸಿ.ಐ.ಎ ನೆರವಿನಿಂದ ಬೊಲಿವಿಯಾ ಪಡೆಗಳು ಗೆರಿಲ್ಲಾಹೋರಾಟಗಾರರನ್ನು  ಪತ್ತೆಹಚ್ಚಿ ಹಲವು ಗೆರಿಲ್ಲಾ ಯೋಧರನ್ನು ಕೊಂದು ಚೆ ನನ್ನು 1967 ಅಕ್ಟೋಬರ್ 8ರಂದು  ಸೆರೆಹಿಡಿದರು. ನಂತರ ಹಿಗುಎರಾ ಎಂಬ ಗ್ರಾಮದ ಶಾಲೆಯಲ್ಲಿ ಕೂಡಿಹಾಕಿ ಮಾರನೆ ದಿನ ಅಕ್ಟೋಬರ್ 9  ರಂದು ಮಧ್ಯಾಹ್ನ 1.30ರ ಸುಮಾರಿಗೆ  ಅಮೆರಿಕಾದ ಸಿ.ಐ.ಎ ಅಧಿಕಾರಿಗಳ ಸಮ್ಮುಕದಲ್ಲಿ ಸಿ.ಐ.ಎ ರೇಂಜರ್‍ಗಳು ತೀರ ಸಮೀಪದಿಂದ ಗುಂಡಿಟ್ಟು ಚೆ ನನ್ನು ಹತ್ಯೆ ಮಾಡಿತ್ತಾರೆ.

ನಂತರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೊಟೋ ತೆಗೆಯಲಾಯಿತು. ಮತ್ತು ಅವನ ಕೈಗಳನ್ನು ಮುಂಗೈಬಳಿ ಕತ್ತರಿಸಿ ಅವನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗೆವಾರ ಎಂಬುದರ ಋಜುವಾತುವಿಗಾಗಿ ಅವರ ಹಾಗೆ ಮಾಡಿದರು. ಚೆ. ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು. ಹೀಗ ಚೆ ಕೈಗಳನ್ನು ಕ್ಯೂಬಾ ರಕ್ಷಿಸಿಟ್ಟಿದೆ. ಮತ್ತು ಇವು ವಿಮೋಚನೆಗಾಗಿ ಹೋರಾಟದಲ್ಲಿ ಅಸ್ತ್ರಗಳನ್ನು ಹಿಡಿದ ಕೈಗಳೂ, ತಮ್ಮ ಗಮನಾರ್ಹ ಚಿಂತನೆಗಳನ್ನು ಬರೆದು ಹಂಚಿದ ಕೈಗಳು, ಕಬ್ಬಿನ ಪ್ಲಾಂಟೇಷನ್‍ಗಳಲ್ಲಿ, ಬಂದರುಕಟ್ಟೆಗಳ ಮುಂತಾದ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡಲು ಬಳಸಿದ ಕೈಗಳು ಎಂದು ಕ್ಯಾಸ್ಟ್ರೊ ಉದ್ಘರಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಮೇರಿಕಾದಂತ ದುಷ್ಟಶಕ್ತಿಗಳು ಚೆ ನ ದೇಹವನ್ನು ಮಾತ್ರ ಹತ್ಯೆ ಮಾಡಿರಬಹುದು.

ಆದರೆ ಚೆ ಹಂಚಿದ ಆಲೋಚನೆಗಳನ್ನು ನಿಯಂತ್ರಿಸಲು ಅಥವಾ ಹತ್ಯೆ ಮಾಡಲು ಸಾಧ್ಯವಿದೆಯೇ? ಇಲ್ಲಾ ಯಾಕೆಂದರೆ ಚೆಗೆವಾರ ನೋವುಣ್ಣುತ್ತಿರುವ ಜನತೆಗೆ ತಮ್ಮ ಬದುಕನ್ನು  ಅರ್ಪಿಸಿಕೊಂಡವರು. ಆಗಾಗಿ ವಂಚತ ಜನತೆಗೆ ಚೆ ಎಂದಿಗೂ ಸ್ಫೂರ್ತಿಯಾಗಿರುತ್ತಾರೆ ಅನ್ನುವುದರಲ್ಲಿ ಯಾವ ಅನುಮಾವೂ ಇಲ್ಲ.  ಐರಿಶ್ ಬಂಡಾಯಗಾರರ ರಕ್ತ ನನ್ನ ಮಗನ ಧಮನಿಗಳಲ್ಲಿ ಹರಿಯುತ್ತಿತ್ತು ಎಂಬುದನ್ನು ನಾವು ಮೊಟ್ಟ ಮೊದಲು ಗಮನಿಸೇಕಾದ ವಿಚಾರ’ ಎಂದು ಚೆ ಸತ್ತ ನಂತರ ಅವರ ತಂದೆ ಪ್ರತಿಕ್ರಿಯಿಸಿದ ಹಾಗೆ. ಚೆ ಇಲ್ಲವಾಗಿ ನಲವತ್ತೈದು ವರ್ಷಗಳು ಕಳೆದಿದ್ದರೂ ಅವನು ತನ್ನ ವಿಚಾರ, ಆಲೋಚನೆಗಳ, ಮಾನವೀಯವಾದ ವ್ಯಕ್ತಿತ್ವಗಳ ಮೂಲಕ ದಬ್ಬಾಳಿಕೆ, ಶೋಷಣೆ ಅನ್ಯಾಯಗಳ ವಿರುದ್ಧಾ ಇಂದಿಗೂ ನಮ್ಮ ಸರೀಕನಂತೆ ತನ್ನ ನಂತರದ ತಲೆಮರಿಗೆ ಯುವಕನಾಗಿ ಸದಾ ಜೊತೆಯಾಗುತ್ತಲೇ ಇದ್ದಾನೆ.

ಚಿತ್ರ ಕೃಪೆ :  http://www.cheguevara.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments