ಉಪಖಂಡದಲ್ಲಿ ಏಕಾಂಗಿ ಭಾರತ?
– ಡಾ ಅಶೋಕ್ ಕೆ ಆರ್
ತೀರ ಹಿಂದಿನ ಮಾತಲ್ಲ. ಕೆಲವೇ ದಿನಗಳ ಹಿಂದೆ ಅಫ್ಜಲ್ ಗುರುವನ್ನು ನೇಣಿಗೇರಿಸಿ ಅವನ ದೇಹವನ್ನು ಆತನ ಮನೆಯವರಿಗೆ ನೀಡದೆ ಜೈಲಿನಲ್ಲೇ ಮಣ್ಣು ಮಾಡಲಾಗಿತ್ತು. ಕಾಶ್ಮೀರದಲ್ಲಿ ಪ್ರತಿಭಟನೆಗಳಾದವು, ಅಫ್ಜಲ್ ಗುರು ಅಲ್ಲಿಯವನಾಗಿದ್ದರಿಂದ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅಫ್ಜಲ್ ಗುರುವಿನ ದೇಹವನ್ನು ಆತನ ಮನೆಯವರಿಗೆ ಹಿಂದಿರುಗಿಸಬೇಕು ಎಂಬ ನಿರ್ಣಯ ತೆಗೆದುಕೊಂಡವು, ನಿರ್ಣಯ ಮಾಡಿದ್ದು ಹಾದಿಬೀದಿಯಲ್ಲಾಗಿರದೆ ಸಂಸತ್ತಿನಲ್ಲಾಗಿತ್ತು.ಈ ಕಾರಣದಿಂದ ನಿರ್ಣಯಕ್ಕೆ ಅಧಿಕೃತತೆಯ ಮುದ್ರೆ ಲಭಿಸಿತ್ತು. ಪಾಕಿಸ್ತಾನದ ಈ ನಡೆಗೆ ಭಾರತದಲ್ಲಿ ಅಗಾಧ ವಿರೋಧ ವ್ಯಕ್ತವಾಗಿದ್ದು ಸಹಜ ಪ್ರತಿಕ್ರಿಯೆಯಾಗಿತ್ತು. ನಮ್ಮ ಮನೆಯ ವಿಷಯದಲ್ಲಿ ಅನ್ಯರು ಮೂಗು ತೂರಿಸುವುದು ಕೋಪ ತರಿಸುವ ವಿಷಯವೇ ಸರಿ.
ಶ್ರೀಲಂಕಾದ ಎಲ್ ಟಿ ಟಿ ಇ ಸಂಘಟನೆಯ ಹುಟ್ಟಿಗೆ ಅನೇಕ ಐತಿಹಾಸಿಕ ಕಾರಣಗಳಿವೆ.ಶ್ರೀಲಂಕಾದ ಈ ಆಂತರಿಕ ಸಮಸ್ಯೆಯ ಉದ್ಭವವಾಗಿದ್ದು ಬ್ರೀಟೀಷರ ಆಡಳಿತದ ಕಾರಣದಿಂದ ಎಂದರೆ ತಪ್ಪಾಗಲಾರದು.ಶ್ರೀಲಂಕಾದ ಎಸ್ಟೇಟುಗಳಲ್ಲಿ ಕೆಲಸ ಮಾಡಲೆಂದು ಶ್ರಮಜೀವಿಗಳಾದ ತಮಿಳರನ್ನು ಕರೆದುಕೊಂಡು ಹೋಗಿತ್ತು ಅಂದಿನ ಬ್ರಿಟೀಷ್ ಆಡಳಿತ. ಬ್ರಿಟೀಷರು ಶ್ರೀಲಂಕ ತೊರೆದ ನಂತರ ಅಲ್ಲಿನ ಬಹುಸಂಖ್ಯಾತರಾದ ಸಿಂಹಳೀಯರು ಲಂಕ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಕಲಾರಂಭಿಸಿದ್ದರು.
ಸಿಂಹಳೀಯರಿಗೆ ದೊರಕುವ ಅನೇಕ ಸೌಲತ್ತುಗಳು ಅಲ್ಲಿನ ತಮಿಳರಿಗೆ ದೊರೆಯುತ್ತಿರಲಿಲ್ಲ.ಈ ಅಸಮಾನತೆಯ ವಿರುದ್ಧ ಪ್ರತಿಭಟಿಸಲಾರಂಭಿಸಿದ ತಮಿಳರು ಕೊನೆಗೆ ಶಸ್ತ್ರಸಹಿತ ಹೋರಾಟಕ್ಕೆ ದುಮುಕಿದರು. ಶ್ರೀಲಂಕಾ ದಶಕಗಳ ಅಂತರ್ಯುದ್ಧಕ್ಕೆ ಸಾಕ್ಷಿಯಾಯಿತು. ಸಿಂಹಳೀಯರ ವಿರುದ್ಧ ಸಿಡಿದೆದ್ದ ತಮಿಳರಿಗೆ ಭಾರತ ಸರಕಾರ ತಮಿಳುನಾಡು ಸರಕಾರ ನೆರವಾಗಿದ್ದೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಅದೇ ಎಲ್ ಟಿ ಟಿ ಇಯನ್ನು ಸದೆಬಡಿಯಲು ‘ಶಾಂತಿ ಸೈನ್ಯವನ್ನು’ ಶ್ರೀಲಂಕಾಕ್ಕೆ ಭಾರತ ಕಳುಹಿಸಿದ್ದೂ ಉಂಟು. ಶ್ರೀಲಂಕಾಗೆ ಮಾಡಿದ ಈ ಸಹಾಯಕ್ಕಾಗಿ ಭಾರತ ತೆತ್ತ ಬೆಲೆ ರಾಜೀವ್ ಗಾಂಧಿಯ ಹತ್ಯೆ. ಪ್ರಭಾಕರನ್ ನೇತೃತ್ವದ ಎಲ್ ಟಿ ಟಿ ಇಯನ್ನು ಸಂಪೂರ್ಣವಾಗಿ ಸದೆಬಡಿಯಲು ನಿರ್ಧರಿಸಿದ ಶ್ರೀಲಂಕಾ ಸರಕಾರ ತನ್ನ ಸಂಪೂರ್ಣ ಸೈನ್ಯ ಬಲದೊಂದಿಗೆ ಕಾರ್ಯಾಚರಣೆಗಿಳಿದು ಅಂತಿಮವಾಗಿ ಪ್ರಭಾಕರನ್ನನ್ನು ಹತ್ಯೆಗೈದು ವಿಜಯದ ನಗೆಬೀರಿತು.
ಬಹುತೇಕ ಎಲ್ಲಾ ಯುದ್ಧದಲ್ಲೂ ಆಗುವಂತೆ ಈ ಯುದ್ಧದಲ್ಲೂ ಅತಿಹೆಚ್ಚು ನಷ್ಟವನ್ನನುಭವಿಸಿದ್ದು ಮಾನವೀಯತೆ. ಸಾವಿರಾರು ಅಮಾಯಕರು ‘ತಮಿಳ್’ ‘ಸಿಂಹಳೀಯ’ ಎಂಬ ಮನುಷ್ಯ ನಿರ್ಮಿತ ಗಡಿಗಳನ್ನು ದಾಟಿ ಸಾವನ್ನಪ್ಪಿದರು. ಎಲ್ ಟಿ ಟಿ ಇನ ರಕ್ತ ಸಿಕ್ತ ಅಧ್ಯಾಯ ಅಂತ್ಯವಾಗಿದ್ದು ಮತ್ತಷ್ಟು ರಕ್ತ ಸುರಿದ ನಂತರ. ಮಾನವೀಯ ದೃಷ್ಟಿಯಿಂದ ಶ್ರೀಲಂಕಾದಲ್ಲಿ ನಡೆದ ತಮಿಳರ ಮಾರಣಹೋಮವನ್ನು ಖಂಡಿಸಲೇಬೇಕು.ದೃಡವಾಗಲ್ಲದಿದ್ದರೂ ಭಾರತ ಸರಕಾರ ಖಂಡಿಸುವ ಕೆಲಸವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವುದೂ ಸುಳ್ಳಲ್ಲ. ಆದರೆ ಈ ಖಂಡನೆ,ಸತ್ತಿದ್ದು ಭಾರತ ಮೂಲದ ತಮಿಳರು ಎಂಬ ಕಾರಣಕ್ಕಾಗಿ ಮಾತ್ರ ನಡೆದಿದೆಯಾ? ಸತ್ತವರು ಅನ್ಯಭಾಷಿಕರಾಗಿದ್ದರೆ ಅಥವಾ ಅನ್ಯ ದೇಶದ ಮೂಲದವರಾಗಿದ್ದರೆ ಭಾರತ ಸರಕಾರದ ಪ್ರತಿಕ್ರಿಯೆ ಬೇರೆಯಾಗಿರುತ್ತಿತ್ತಾ? ಅಂತರರಾಷ್ಟ್ರೀಯ ವಿಷಯದ ಬಗ್ಗೆ ಒಂದು ರಾಜ್ಯ ಸರಕಾರ ಪ್ರತಿಕ್ರಯಿಸುವುದು ಎಷ್ಟರ ಮಟ್ಟಿಗೆ ಸರಿ? ಇತ್ತೀಚಿನ ಬೆಳವಣಿಗೆಗಳು ಇಂತಹ ಪ್ರಶ್ನೆಗಳನ್ನು ಹುಟ್ಟಿಹಾಕಿರುವುದು ಸುಳ್ಳಲ್ಲ. ಚೆನೈನಲ್ಲಿ ನಡೆಯುವ ಐ ಪಿ ಎಲ್ ಪಂದ್ಯಾವಳಿಗಳ ಶ್ರೀಲಂಕಾ ಆಟಗಾರರನ್ನು ಆಡದಿರುವಂತೆ ಮಾಡುವಲ್ಲಿ ತಮಿಳುನಾಡು ಸರಕಾರ ಸಫಲವಾಗಿದೆ. ಇದರ ಜೊತೆಗೆ ಶ್ರೀಲಂಕಾ ವಿರುದ್ಧ ಹಲವು ನಿರ್ಣಯಗಳನ್ನು ವಿಧಾನಸಭೆಯಲ್ಲಿ ತೆಗೆದುಕೊಂಡಿದೆ. ಅಂತರರಾಷ್ಟ್ರೀಯ ಸಮಸ್ಯೆಯೊಂದನ್ನು ವಿಧಾನಸಭೆಯಲ್ಲಿ ಚರ್ಚಿಸಬೇಕೆ? ಚರ್ಚೆ ನಡೆದ ಕಾರಣ ಶ್ರೀಲಂಕಾದಲ್ಲಿನ ಹಿಂಸಾಚಾರ ನಡೆದಿದ್ದು ತಮಿಳು ಭಾಷಿಕರ ಮೇಲೆ ಎಂಬ ಕಾರಣದಿಂದ ಮಾತ್ರ. ಶ್ರೀಲಂಕಾದ ತಮಿಳರು ಸಿಂಹಳೀಯರ ಮೇಲೆ ಹಲ್ಲೆ ನಡೆಸಿದ್ದರೆ ಅದು ಚರ್ಚೆಯ ವಿಷಯವಾಗುತ್ತಿರಲಿಲ್ಲವೇನೋ? ಮಾನವೀಯ ದೃಷ್ಟಿಯಿಂದ ಪ್ರತಿಭಟನೆ ವ್ಯಕ್ತಪಡಿಸುವುದನ್ನು ಒಪ್ಪಬಹುದು ಆದರೆ ಭಾಷೆ ಧರ್ಮದ ಕಾರಣದಿಂದಷ್ಟೇ ಪ್ರತಿಭಟಿಸುವುದನ್ನು ಒಪ್ಪುವುದು ಸರಿಯೇ?
ಪಾಕಿಸ್ತಾನ ಅಫ್ಜಲ್ ಗುರುವಿನ ವಿಷಯದಲ್ಲಿ ಸಂಸತ್ತಿನಲ್ಲಿ ತೆಗೆದುಕೊಂಡ ನಿರ್ಣಯ ತಪ್ಪಾದಲ್ಲಿ ಶ್ರೀಲಂಕಾದ ಆಂತರಿಕ ವಿಷಯದಲ್ಲಿ ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಕೂಡ ತಪ್ಪಲ್ಲವೇ? ಪಾಕಿಸ್ತಾನವಂತೂ ಬಿಡಿ ಮೊದಲಿನಿಂದಲೂ ಭಾರತದ ಶತ್ರು ರಾಷ್ಟ್ರ. ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದ ಕಾರಣದಿಂದ ಕೆಲವು ವರುಷಗಳ ಕಾಲ ಬಾಂಗ್ಲಾದೇಶ ಭಾರತದ ಮಿತ್ರ ರಾಷ್ಟ್ರವಾಗಿತ್ತು. ಮುಸ್ಲಿಂ ಮೂಲಭೂತವಾದಿಗಳ ಹೆಚ್ಚುವಿಕೆಯಿಂದಾಗಿ ಬಾಂಗ್ಲಾ ಅಪಾಯಕಾರಿ ಮಿತ್ರ ದೇಶವಾಗಿದೆ. ಇನ್ನು ನೇಪಾಳದಲ್ಲಿ ನಡೆದ ಮಾವೋವಾದಿಗಳ ಕ್ರಾಂತಿಯ ಸಂದರ್ಭದಲ್ಲಿ ಭಾರತದ ಬೆಂಬಲವಿದ್ದಿದ್ದು ಅಲ್ಲಿನ ರಾಜಾಡಳಿತಕ್ಕೆ. ಪ್ರಚಂಡ ನೇತೃತ್ವದ ಮಾವೋವಾದಿಗಳು ಅಧಿಕಾರಕ್ಕೆ ಬರುವುದಿಲ್ಲವೆಂದೇ ಎಣಿಸಿದ್ದ ಭಾರತ ಕೊನೆಗೆ ಗಳಿಸಿದ್ದು ನೇಪಾಳಿಗಳ ದ್ವೇಷವನ್ನಷ್ಟೇ. ಭಾರತ ಉಪಖಂಡದಲ್ಲಿ ಎಲ್ಲ ವ್ಯತ್ಯಾಸಗಳ ನಡುವೆಯೂ ಮಿತ್ರನಾಗಿದ್ದುದು ಶ್ರೀಲಂಕಾ. ಬಹುಶಃ ಇನ್ನು ಮುಂದೆ ಅದೂ ಕೂಡ ಮಿತ್ರ ರಾಷ್ಟ್ರಗಳ ಪಟ್ಟಿಯಲ್ಲಿರುವುದಿಲ್ಲ. ಗಮನಿಸಬೇಕಾದದ್ದೆಂದರೆ ಭಾರತದ ಸುತ್ತಲಿರುವ ಈ ಎಲ್ಲ ರಾಷ್ಟ್ರಗಳು ಭಾರತದಿಂದ ದೂರವಾಗುವುದರೊಂದಿಗೆ ಹತ್ತಿರವಾಗುತ್ತಿರುದು ಚೀನಾಕ್ಕೆ. ಅಂತರಾಷ್ಟ್ರೀಯ ಸಂಬಂಧಗಳನ್ನೂ ಕಾಪಿಡುವಲ್ಲಿ ನಾವೇ ವಿಫಲರಾಗುತ್ತಿದ್ದೇವಾ? ಒಂದು ಅರ್ಥಪೂರ್ಣ ಚರ್ಚೆಯಾಗಲೆಂಬ ಉದ್ದೇಶದಿಂದ ಈ ಲೇಖನ.