ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 1, 2013

ವಚನ ಸಾಹಿತ್ಯದ ಬಗೆಗಿನ ಚರ್ಚೆಯ ಕುರಿತು…

by ನಿಲುಮೆ

– ಜೆ.ಎಸ್.ಸದಾನಂದ
ಸ್ಥಳೀಯ ಸಂಸ್ಕಂತಿಗಳ ಅಧ್ಯಯನ ಕೇಂದ್ರ,
ಕುವೆಂಪು ವಿಶ್ವ ವಿದ್ಯಾನಿಲಯ.

Vachana Charche‘ಪ್ರಜಾವಾಣಿ’ಯಲ್ಲಿ ನಡೆಯುತ್ತಿರುವ ಢಂಕಿನ್‍ರವರ ವಚನ ಸಾಹಿತ್ಯ ಹಾಗು ಜಾತಿ ವ್ಯವಸ್ಥೆಯ ಕುರಿತಾದ ಸಂಶೋಧನೆಯ ಮೇಲಿನ ಚರ್ಚೆ ಹೆಚ್.ಎಸ್.ಶಿವಪ್ರಕಾಶ್ ಹಾಕಿಕೊಟ್ಟ ಅಕಾಡಮಿಕ್ ಅಡಿಪಾಯವನ್ನು ಬಿಟ್ಟು ಅತ್ತಿತ್ತ ಓಲಾಡತೊಡಗಿದೆ ಎಂದು ನನಗನಿಸುತ್ತಿದೆ. ಕೆಲವು ನಿರ್ಧಿಷ್ಟ ಲಕ್ಷಣಗಳನ್ನೊಳಗೊಂಡ ಬ್ರಾಹ್ಮಣ ಪುರೋಹಿತಶಾಹಿ ಪ್ರಚೋದಿತ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎನ್ನುವ ಪೂರ್ವನಂಬಿಕೆಯಿಂದ ವಚನ ಸಾಹಿತ್ಯವನ್ನು ನೋಡಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳುವಳಿಗಳಂತೆ ನಮಗೆ ಕಾಣಿಸುತ್ತದೆ. ಅಂತಹ ಭೌದ್ಧಿಕ ಚೌಕಟ್ಟಿನಿಂದ ಹೊರಬಂದು ವಚನಗಳನ್ನು ಓದಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸಿದ್ಧಪಡಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಢಂಕಿನ್‍ರವರ ವಾದದ ಸಾರಾಂಶ ಎಂದು ನಾನು ತಿಳಿದುಕೊಂಡಿದ್ದೇನೆ. ಮತ್ತು ಇದಕ್ಕೆ ಪೂರಕವಾಗಿ ಜಾತಿಯ ಉಲ್ಲೇಖವಿರುವ ವಚನಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಅವರು ಕೊಡುವ ಪುರಾವೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಕೇವಲ ಒಂದು ಅಂಶವಷ್ಟೇ ಎನ್ನುವುದು ನನ್ನ ತಿಳುವಳಿಕೆಯಾಗಿದೆ. ಕೇವಲ ಅದೊಂದರಿಂದಲೇ ತಮ್ಮ ವಾದವನ್ನು ಅವರು ಸಮರ್ಥಿಸಿಕೊಂಡಿರಲು ಸಾಧ್ಯವಿಲ್ಲ. ಹೆಚ್.ಎಸ್.ಶಿವಪ್ರಕಾಶ್‍ರವರು ಈ ಒಂದು ಅಂಶವನ್ನು ಉಲ್ಲೇಖಿಸಿರುವುದರಿಂದ ಅದೇ ಚರ್ಚೆಯ ಪ್ರಮುಖ ಗುರಿಯಾಗಿ ಚರ್ಚೆಗೆತ್ತಿಕೊಳ್ಳಬುದಾಗಿದ್ದ ಇನ್ನಿತರ ಮಹತ್ತರ ಅಂಶಗಳು ಕಣ್ಮರೆಯಾಗಿರುವ ಸಾಧ್ಯತೆ ಇದೆ.

ನನಗನಿಸುವಂತೆ ಇಲ್ಲಿ ಅತ್ಯಂತ ಪ್ರಮುಖವಾಗಿ ಚರ್ಚೆಗೊಳಬೇಕಾದ ಸಂಗತಿಗಳು ಎಂದರೆ: ಢಂಕಿನ್‍ರವರ ಸಂಶೋಧನೆಯು ಅದರ ಅಧ್ಯಯನದ ಕೇಂದ್ರವಾದ ವಿಧ್ಯಮಾನದ ಮೇಲೆ ಎಷ್ಟರ ಮಟ್ಟಿಗೆ ಬೆಳಕು ಚೆಲ್ಲುತ್ತದೆ; ಅವರ ಸಂಶೋಧನೆಯ ಪ್ರಾಕ್‍ಕಲ್ಪನೆಗೆ (ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಚನಗಳನ್ನು ಗ್ರಹಿಸಿದಾಗ ಮಾತ್ರ ಅವು ಜಾತಿ ವಿರೋಧಿ ಚಳುವಳಿಗಳಂತೆ ಕಾಣುತ್ತವೆ ಎನ್ನುವ ಪ್ರಾಕ್‍ಕಲ್ಪನೆ) ಇರುವ ಸಮರ್ಥನೆ ಯಾವುದು; ಸಂಶೋಧನೆಯಲ್ಲಿ ಮಂಡಿಸಲಾಗಿರುವ ವಾದ ಎಷ್ಟು ತರ್ಕಬದ್ಧವಾಗಿದೆ ಇತ್ಯಾದಿ. ಚರ್ಚೆ ಈ ನಿಟ್ಟಿನಲ್ಲಿ ಮುಂದುವರೆದಿದ್ದರೆ ಇದೊಂದು ಅರ್ಥಪೂರ್ಣ ಚರ್ಚೆಯಾಗಿರುತ್ತಿತ್ತು ಹಾಗು ಓದುಗರಿಗೂ ಉಪಯುಕ್ತವಾಗುತ್ತಿತ್ತು.

ಈಗ ನಡೆಯುತ್ತಿರುವ ಚರ್ಚೆಯಲ್ಲಿ ವ್ಯೆಜ್ಞಾನಿಕ ಸಂಶೋಧನೆಗೆ ಪ್ರಮುಖವಲ್ಲದ ವಿಷಯಗಳೇ ಪ್ರಧಾನವಾಗುತ್ತಿರುವಂತೆ ಕಾಣುತ್ತದೆ. ಒಂದು ಸಂಶೋಧನೆಯು ವ್ಯೆಜ್ಞಾನಿಕವಾದದ್ದೇ ಅಥವಾ ಪೂರ್ವಾಗ್ರಹ ಪೀಡಿತವೇ ಎಂದು ನಮಗೆ ಲಬ್ಯವಿರುವ ಸಂಶೋಧನಾ ಪರಿಕರಗಳನ್ನು ಬಳಸಿ ಹೇಳಲು ಸಾಧ್ಯವಿಲ್ಲವೆಂದಾದರೆ ನಮ್ಮಲ್ಲಿ ಇದೂವರೆಗೂ ಸರಿಯಾದ ಸಂಶೋಧನೆಗಳೇ ನಡೆದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ವಚನಗಳನ್ನು ಕುರಿತಾದ ಢಂಕಿನ್ ಹಾಗು ಬಾಲುರವರ ವಾದಗಳು ಬ್ರಾಹ್ಮಣೇತರ ಚಳುವಳಿಯನ್ನು ಹತ್ತಿಕ್ಕುವ, ಹಾಗೂ ಬ್ರಾಹ್ಮಣ ಪುರೋಹಿತಶಾಹಿಯನ್ನು ಪುನರ್‍ಸ್ಥಾಪಿಸುವ ಹುನ್ನಾರವೆನ್ನುವುದನ್ನು ಅವರ ವಾದದಲ್ಲಿಯೇ ತೋರಿಸಲು ಸಾಧ್ಯವಿದೆಯೇ ಅಥವಾ ಅಂತಹುದೊಂದು ಹೇಳಿಕೆ ಅವರ ವಾದಕ್ಕೆ ಹೊರತಾಗಿದೆಯೇ ಎನ್ನುವ ಪ್ರಶ್ನೆ ಇಲ್ಲಿ ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಒಬ್ಬ ಸಂಶೋಧಕನ ವಾದದಲ್ಲಿ ಮತ್ತು ಅವನ ಬರವಣಿಗೆಯಲ್ಲಿ ಅವನ/ಅವಳ ಉದ್ದೇಶವನ್ನು ನಮಗೆ ತೋರಿಸಲಾಗದಿದ್ದರೂ ಕೂಡ ಸಂಶೋಧನೆಯ ಮೌಲ್ಯಮಾಪನದಲ್ಲಿ ಸಂಶೋಧಕರ ಉದ್ದೇಶ ಪ್ರಮುಖ ಪಾತ್ರ ವಹಿಸುತ್ತದೆ ಎಂದಾದರೆ ಅದರ ಪರಿಣಾಮ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಬಾಲು ಅಥವಾ ಢಂಕಿನ್‍ರವರ ವಿಷಯವನ್ನು ಸಧ್ಯಕ್ಕೆ ಬದಿಗಿಟ್ಟು ನೋಡಿ. ಪ್ರಬಲವಾದ ಪ್ರಚಲಿತ ನಂಬಿಕೆಗೆ ವಿರುದ್ಧವಾದ ಯಾವುದೇ ಸಂಶೋಧನೆಯ ಬಗ್ಗೆ ಯೂ ಇಂತಹ ಆಪಾದನೆಯನ್ನು ಮಾಡಲು ಸಾಧ್ಯವಿದೆಯಲ್ಲವೆ? ಇಂತಹ ಧೋರಣೆ ಅಪಾಯಕಾರಿ ಏಕೆಂದರೆ ಒಬ್ಬ ವ್ಯಕ್ತಿಯ ಒಳ ಉದ್ದೇಶ ಅಥವಾ ಇಂಗಿತ ಅವನ/ಅವಳ ಆಂತರ್ಯಕ್ಕೆ ಸಂಬಂದಿಸಿದ್ದು ಅದಕ್ಕೆ ಸಂಬಂದಿಸಿದಂತೆ ಮಾಡಿದ ಆಪಾದನೆ ಸತ್ಯವೇ ಅಲ್ಲವೇ ಎನ್ನುವುದನ್ನು ಆಪಾದನೆ ಮಾಡಿದವರಿಗಾಗಲೀ ಅಥವಾ ಅದಕ್ಕೆ ಒಳಗಾದವರಿಗಾಗಲೀ ಸಿದ್ಧಪಡಿಸಿ ತೋರಿಸಲು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ಯಾವುದೋ ಒಂದು ವಿಷಯದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಸಬೇಕಾಗಿದ್ದ ಚರ್ಚೆ ಅದಕ್ಕೆ ಯಾವದೇ ರೀತಿಯಲ್ಲೂ ಸಂಬಂದಿಸಿರದ ಮತ್ತು ಜ್ಞಾನ ಗಳಿಕೆಗೆ ಯಾವುದೇ ರೀತಿಯಲ್ಲೂ ಸಹಕಾರಿಯಲ್ಲದ ಕೆಸರೆರಚಾಟಕ್ಕೆ ದಾರಿ ಮಾಡಿಕೊಡುತ್ತದೆ.

ವಚನಗಳ ಬಗ್ಗೆ ಹಾಗೂ ಲಿಂಗಾಯಿತ, ವೀರಶ್ಯೆವ ಜಾತಿ/ಸಮುದಾಯಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಾಲೇ ನಡೆದಿವೆ. ಅಂತಹ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದರ  ಆದಾರದ ಮೇಲೆ ಢಂಕಿನ್ ತಮ್ಮದೇ ಆದ ಊಹಾಸಿದ್ಧಾಂತವನ್ನು ಮಂಡಿಸಿದ್ದಾರೆ. ಭಾರತದ ಜಾತಿ ವ್ಯವಸ್ಥೆ ಹಾಗೂ ರಿಲಿಜನ್ ಕುರಿತು ಬಾಲಗಂಗಾಧರ ಅವರ ಸಂಶೋಧನೆ ಅವರ ಊಹಾ ಸಿದ್ಧಾಂತಕ್ಕೆ ಮೂಲ ಪ್ರೇರಣೆಯಾಗಿದೆ. ಹಾಗಿದ್ದಲ್ಲಿ ಇಲ್ಲಿ ಚರ್ಚೆಗೊಳಪಡಬೇಕಾಗಿರುವ ಅಂಶಗಳೆಂದರೆ ಢಂಕಿನ್ ಹಾಗೂ ಬಾಲುರವರ ವಾದ ಪ್ರಚಲಿತ ವಿಧ್ಯಮಾನವಾದ ಜಾತಿಗಳ ಸ್ವರೂಪದ ಬಗ್ಗೆ ಇದೂವರೆಗಿನ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ ಮತ್ತು ಅವುಗಳಿಗಿಂತಲೂ ಹೆಚ್ಚು ಸಮರ್ಥವಾದ ವಿವರಣೆಯನ್ನು ನಮ್ಮ ಮುಂದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆಯೇ ಎನ್ನುವುದು. ಢಂಕಿನ್‍ರವರ ಈ ಸಂಶೋಧನೆಯ ಬಗ್ಗೆ ಎತ್ತಬಹುದಾದ ಇಂತಹ ಪ್ರಶ್ನೆಗಳಿಗೂ ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದೆ ಇದ್ದಿಬಹುದಾದ ಉದ್ದೇಶಗಳಿಗೂ ಏನಾದರೂ ಸಂಬಂಧವಿದೆಯೇ?

ಢಂಕಿನ್ ಅವರ ವಾದಕ್ಕೆ ಬಂದ ಪ್ರತಿಕ್ರಿಯೆಯನ್ನು ನೋಡಿದಾಗ ಸಂಶೋದನೆಯ ಸ್ವರೂಪದ ಬಗ್ಗೆ ಏಳುವ ಕೆಲವು ಪ್ರಶ್ನೆಗಳೆಂದರೆ: ಸದುದ್ದೇಶಗಳನ್ನು ಹೊಂದಿರುವ ಸಾಮಾಜಿಕ/ಸಾಂಸ್ಕøತಿಕ ಚಳುವಳಿಯ ಸ್ಯೆದ್ಧಾಂತಿಕ ನೆಲೆಯನ್ನು ಸಮಸ್ಯೀಕರಿಸುವ ಕೆಲಸವನ್ನು ಸಂಶೋಧನೆ ಕ್ಯೆಗೆತ್ತಿಕೊಳ್ಳಬೇಕೆ ಬೇಡವೆ? ಬ್ರಾಹ್ಮಣೇತರ, ದಲಿತ, ಬಂಡಾಯ ಇತ್ಯಾದಿ ಪ್ರಗತಿಪರ ಚಳುವಳಿಗಳ ಸಿದ್ಧಾಂತಗಳಲ್ಲಿರುವ ವ್ಯೆರುಧ್ಯಗಳನ್ನು ತೋರಿಸಿದರೆ ಅವುಗಳ ಮೂಲ ಆಶಯವನ್ನು ವಿರೋದಿಸಿದಂತಾಗುತ್ತದೆಯೆ? ವಚನಗಳು ಜಾತಿ ವ್ಯವಸ್ಥೆಯ ವಿರುದ್ಧವಾಗಿಲ್ಲ ಎಂದು ಹೇಳಿದರೆ ಅದು ವಚನಗಳ ಮಹತ್ವವನ್ನು ಕಡೆಗಣಿಸಿದಂತಾಗುತ್ತದೆಯೇ? ಪ್ರಚಲಿತ ನಂಬಿಕೆ, ಸಿದ್ಧಾಂತಗಳನ್ನು ವಿಮರ್ಶೆಗೊಳಪಡಿಸುವುದು ಅವುಗಳನ್ನು ಹತ್ತಿಕ್ಕುವ ಹುನ್ನಾರವಾಗುತ್ತದೆ ಎಂದಾದರೆ ಅಂತಹ ಚಳುವಳಿಗಳನ್ನು ಕುರಿತು ಮೂಲಭೂತ ಜಿಜ್ಞಾಸೆಯೇ ಸಾಧ್ಯವಿಲ್ಲ ಎಂದು ಹೇಳಿದಂತಾಗುವುದಿಲ್ಲವೆ? ಯಾವುದೇ ಒಂದು ಸಿದ್ಧಾಂತ ಜೀವಂತವಾಗಿ ಉಳಿಯಬೇಕಾದರೆ ಅದು ನಿರಂತರ ವಿಮರ್ಶೆಗೋಳಪಡುತ್ತಿರಬೇಕು ಮತ್ತು ಅಂತಹ ಪ್ರಕ್ರಿಯೆಯಲ್ಲಿ ಅದರ ಮೂಲ ಸ್ವರೂಪ ಬದಲಾಗುತ್ತಾ ಹೋಗುತ್ತದೆ. ಇಲ್ಲವಾದಲ್ಲಿ ಅದೊಂದು ನಿರ್ಜೀವ ಐಡಿಯಾಲಜಿಯಾಗಿಬಿಡುತ್ತದೆ. ಮಾಕ್ರ್ಸವಾದ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ. ಅದು ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ ‘ಮಾಕ್ರ್ಸ ಇಂದು ಜೀವಂತವಾಗಿದ್ದರೆ ಅವನು ಮಾಕ್ರ್ಸವಾದಿಯಾಗಿರುತ್ತಿಲಿಲ್ಲ’ ಎಂದು ಹೇಳುವಷ್ಟರ ಮಟ್ಟಿಗೆ. ಚರ್ಚೆಯಲ್ಲಿ ಭಾಗವಹಿಸುತ್ತಿರುವವರು ಇದನ್ನೆಲ್ಲಾ ಹೇಳುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ ಢಂಕಿನ್ ಅವರ ವಾದದಲ್ಲಿರಬಹುದಾದ ವ್ಯೆರುಧ್ಯಗಳು, ಪೂರ್ವಾಗ್ರಹಗಳು ಮತ್ತು ಅವರ ಸಂಶೋಧನಾ ವಿಧಾನದಲ್ಲಿರಬಹುದಾದ ಧೋಷಗಳನ್ನು ಅವರು ಮಂಡಿಸುವ ವಾದದ ಚೌಕಟ್ಟಿನಲ್ಲಿ ಚರ್ಚಿಸದೆ ಅವರ ಸಂಶೋಧನೆಯನ್ನು ಸಂಶೋಧನೆಗೆ ಅತೀತವಾದ ಅಂದರೆ ಇಂತಹ ಒಂದು ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದಿರುವ ಒಳಸಂಚು ಇತ್ಯಾದಿಗಳ ನೆಲೆಯೆಂದ ಚರ್ಚಿಸತೊಡಗಿದರೆ ಮೇಲಿನ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಕೊನೆಯಲ್ಲಿ ಒಂದು ಮಾತು ಒಂದು ಅರ್ಥಪೂರ್ಣ ಹಾಗೂ ಅರೋಗ್ಯ ಪೂರ್ಣ ಚರ್ಚೆಯಲ್ಲಿ ವಾದಿ ಪ್ರತಿವಾದಿಗಳಿಬ್ಬರಿಗೂ ಸಮಾನ ಅವಕಾಶವಿರಬೇಕಲ್ಲವೆ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments