ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2013

7

ಮೀನಾಕ್ಷಿ ಬಾಳಿಯವರ ಅಸೈದ್ಧಾಂತಿಕ ವಿಮರ್ಶೆಗೊಂದು ಸೈದ್ಧಾಂತಿಕ ಉತ್ತರ

by ನಿಲುಮೆ

– ಡಂಕಿನ್ ಝಳಕಿ

Vachana Charcheನಮ್ಮ ವಚನ ಸಂಶೋಧನೆ ಕುರಿತು ಡಾ.ಮೀನಾಕ್ಷಿ ಬಾಳಿಯವರು ಪ್ರಜಾವಾಣಿಯ ೧೮/ಮಾರ್ಚ್/೨೦೧೩ರ ಸಂಚಿಕೆಯಲ್ಲಿ ಬರೆದ “ಆಧುನಿಕೋತ್ತರ ವಾದದ ಅಪಸವ್ಯ” ಎಂಬ ಬರಿಯ ಬೈಗುಳಗಳಿಂದಲೇ ತುಂಬಿರುವ ಇವರ ಬರಹಕ್ಕೆ ಇದು ನನ್ನ ಪ್ರತಿಕ್ರಿಯೆ.

(೧) ಅವರ ಟೀಕಾ ಪ್ರಹಾರ ಆರಂಭವಾಗುವುದೇ ನಮ್ಮ ವಾದದಲ್ಲಿ “ಯಾವುದೇ ಹೊಸ ಚಿಂತನೆಯಾಗಲಿ ಅಥವ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲ” ಎಂದು ಸಾರುತ್ತಾ, ನಮ್ಮ ಸಂಶೋಧನೆಯು ಪೂರ್ವಗ್ರಹ ಪೀಡಿತವಾಗಿದೆ ಮತ್ತು “ಈ ನಿಲುವಿಗೆ ಬರಲು ಬಳಸಿಕೊಂಡ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ” ಎನ್ನುವ ಮೂಲಕ. ನಮ್ಮ ವಾದದಲ್ಲಿ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲದ ಮೇಲೆ ಬಾಳಿಯವರು ಈ ಲೇಖನವನ್ನು ಬರೆದದ್ದಾದರೂ ಹೇಗೆ, ಪ್ರಜಾವಾಣಿ ನಮ್ಮ ವಿರುದ್ಧ ಅಷ್ಟೊಂದು ಲೇಖನಗಳನ್ನು ಪ್ರಕಟಿಸಿದ್ದು  ಹೇಗೆ? ಈ ಪ್ರಶ್ನೆಗಳು ಹಾಗಿರಲಿ, ಮುಖ್ಯವಾದ ವಿಷಯಕ್ಕೆ ಬರೋಣ. ನಮ್ಮ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ ಎಂದು ಇವರು ಹೇಳುವುದು ನಾವು ಕೇವಲ ವಚನಗಳಲ್ಲಿನ ಶಬ್ದ ಬಳಕೆಯ ಲೆಕ್ಕ ಮಾತ್ರ ಮಾಡುತ್ತೇವೆ, ಒಟ್ಟು ವಚನಗಳ ಜೀವಧ್ವನಿ, ಅವರ ಬದುಕಿನ ಸಂಘರ್ಷ ಮುಂತಾದವುಗಳನ್ನು, ವಚನಕಾರರ ನಂತರ ಅವರ ಬದುಕು ಕುರಿತು ರಚನೆಯಾದ ಕಾವ್ಯ ಪುರಾಣಗಳು ಶಾಸನಗಳು ಜಾನಪದ ಸಾಹಿತ್ಯರಾಶಿ ಇತ್ಯಾದಿಗಳನ್ನು ನಾವು ಗುರುತಿಸುವುದಿಲ್ಲವಂತೆ. ಇಂತಹ ಹೇಳಿಕೆಗಳನ್ನು ಮಾಡುವ ಮೊದಲು ನಾವು ಬರೆದ ಲೇಖನ, ಪುಸ್ತಕಗಳನ್ನು ಇವರು ಓದಬೇಕಿತ್ತು. ಅವರು ಉಲ್ಲೇಖಿಸುವುದು ನಮ್ಮೆಲ್ಲ ವಚನ ಸಂಶೋಧನೆಯ ಸಾರಾಂಶವನ್ನು ಕೊಟ್ಟಿರುವ, ನಾನು ಸಂಪಾದಿಸಿದ ಭಾರದಲ್ಲಿ ಜಾತಿವ್ಯವಸ್ಥೆ ಇದೆಯೇ? ಕೃತಿಯಲ್ಲಿನ ಎರಡು ಪುಟಗಳ ಲೇಖನವನ್ನಷ್ಟೇ. ಇದನ್ನು ಏನೆಂದು ಕರೆಯೋಣ: ಬಾಳಿಯವರ ವಿದ್ವತ್ತಿನಲ್ಲಿನ ಕೊರತೆ ಎಂದೋ ಅಥವಾ ಸೋಮಾರಿತಂವೆಂದೋ?

ಬಾಳಿಯವರು “ವಚನಗಳ ಜೀವಧ್ವನಿಯನ್ನು” ಹೇಗೆ ಗುರಿತಿಸುವುದು? ಎಂದು ತೋರಿಸಿಕೊಡದ ಹೊರತು ಅವರ ಆಕ್ಷೇಪಣೆಗೆ ಮಹತ್ವ ಬರುವುದೇ ಇಲ್ಲ. ವಚನಗಳು ಜಾತಿವಿರೋಧಿ ಎಂದು ಪರಿಗಣಿಸುವುದೇ “ವಚನಗಳ ಜೀವಧ್ವನಿ”ಯನ್ನು ಗುರುತಿಸುವುದು  ಎಂದು ಅವರು ಅಂದುಕೊಂಡಿದ್ದರೆ ಅದು ತಪ್ಪು. ೧೮-೧೯ನೆ ಶತಮಾನದಲ್ಲಿ ಆರಂಭವಾದ ಈ ಓದು ವಚನಗಳ ಜೀವಧ್ವನಿಯಲ್ಲ ಬದಲಿಗೆ ವಸಾಹತಶಾಹಿಯ ಧ್ವನಿ. ವಸಾಹತು ಬರಹಗಾರರು ಲಿಂಗಾಯತ ಸಂಪ್ರದಾಯದ ಕುರಿತು ಅದು ಜಾತಿ ವಿರೋಧಿ ಮತ್ತು ಆದ್ದರಿಂದ ಅದು ಪ್ರಗತಿಪರವಾದದ್ದು ಎಂದು ತೋರಿಸುವ ತನಕ ಬಸವನನ್ನು, ಅಲ್ಲಮನನ್ನು (ಹರಿಹರ, ಚಾಮರಸ ಮುಂತಾದ) ಭಾರತೀಯ ಚಿಂತಕರು ನೋಡಿದ್ದು ಕೇವಲ ಭಕ್ತ, ಆಧ್ಯಾತ್ಮ ಚಿಂತಕ ಎಂದು. ಇನ್ನು ನನ್ನ ಮಹಾಪ್ರಬಂಧದಲ್ಲಿ ಕಾವ್ಯ, ಪುರಾಣ, ಜಾನಪದ ಸಾಹಿತ್ಯರಾಶಿ ಎಲ್ಲವನೂ ಪರಾಮರ್ಶೆಗೆ ಒಳಪಡಿಸಿ, ಅಲ್ಲೆಲ್ಲೂ ವಚನಗಳನ್ನಾಗಲಿ, ಅವುಗಳ ಕರ್ತೃಗಳನ್ನಾಗಲಿ ಆಗಿನ ಚಿಂತಕರು ‘ಸಮಾಜ ಸುಧಾರಕರು’ ಎಂಬ ದೃಷ್ಟಿಯಿಂದ ನೋಡಿದ್ದೇ ಇಲ್ಲವೆಂದು ತೋರಿಸಿದ್ದೇನೆ. ಇದನ್ನು ಓದದೆ ಬಾಳಿಯವರು ಮಾಡುವ ಆಪಾದನೆ ಒಂದು ಬಾಲಿಶ ಪ್ರತಿಕ್ರಿಯೆ.

೨) ಹನ್ನೆರಡನೆ ಶತಮಾನದ ವಚನಕಾರರ ಎಲ್ಲ ವಚನಗಳು ಲಭ್ಯವಾಗಿಲ್ಲ  ಆದರಿಂದ ಸಿಕ್ಕಿರದ ಆ ವಚನಗಳು ಜಾತಿವಿರೋಧಿಯಾಗಿರಬಹುದಲ್ಲ? ಇದು ಬಾಳಿಯವರ ಮತ್ತೊಂದು ಆಕ್ಷೇಪಣೆ. ಇದೊಂದು ಹಾಸ್ಯಾಸ್ಪದವಾದ ಮಾತು. ಇದನ್ನು ಗಂಭೀರವಾಗಿ ಪರಿಗಣಿಸಿದರೆ, ನಾವು ಯಾವಾಗಲೂ ಸಿಕ್ಕಿರದ ಸಾಹಿತ್ಯದ ಹಿಂದೆ ಓಡುತ್ತಿರ ಬೇಕಾಗುತ್ತದೆಯೇ ಹೊರತು ಅಧ್ಯಯನದಲ್ಲಿ ತೊಡಗುವಂತಿಲ್ಲ. ನಮ್ಮ ಸಂಶೋಧನಾ ತಂಡದ ಶಿವ ಕುಮಾರರು ಈ ಆಕ್ಷೇಪಣೆಗೆ ಹೀಗೆ ಪ್ರತಿಕ್ರಿಯಿಸಿದ್ದರು: “ವಚನಗಳು ಕಳೆದು ಹೋಗಿವೆ ಇನ್ನೂ ಸಿಕ್ಕಿಲ್ಲ ಎನ್ನುವಾಗ ವಚನಗಳು ಜಾತಿ ವಿರೋಧಿ ಎನ್ನುತ್ತಿರುವುದು ಇರುವ ವಚನಗಳನ್ನು ಆಧರಿಸಿಯೇ ಅಲ್ಲವೇ? ಹಾಗೊಂದುವೇಳೆ ವಚನಗಳು ಸಿಕ್ಕಮೇಲೆ ವಾದವನ್ನು ಮಂಡಿಸಬೇಕು ಎನ್ನುವುದಾದರೆ! ವಚನಗಳು ಜಾತಿವಿರೋಧಿ ಎನ್ನುವವರಿಗೆ ಈ ನಿಲುವು ತಳೆಯಲು ಸಾಧ್ಯವೇ ಇಲ್ಲ. ನಾಳೆ ಯಾರಾದರೊಬ್ಬರು ಈ ಕೆಳಗಿನಂತೆ ಹೇಳಬಹದು: ಮುಂದಿನ ಶತಮಾನಗಳಲ್ಲಿ ಅಥವಾ ಇನ್ನೂ ಹಲವು ಶತಮಾನಗಳ ನಂತರ ವಚನಗಳ ಸೃಷ್ಟಿ ಆಗಬಹುದೇನೋ! ಬಾಳಿಯವರು ಹೇಳುವಂತೆ ಕಳೆದು ಹೋದ ವಚನಗಳ ಬಗ್ಗೆ ಕಾಳಜಿ ಬೇಕು ಎನ್ನುವುದಾದರೆ, ಮುಂದಿನ ಶತಮಾನದಲ್ಲಿ ಹುಟ್ಟುವ ವಚನಗಳ ಬಗೆಗೂ ಕಾಳಜಿ ಬೇಕೆ ಬೇಕು. ಅಲ್ಲವೇ!! ಅದಕ್ಕೇನು ಮಾಡುವುದು ಎಂದರೆ, ಅಲ್ಲಿಯವರೆಗೂ… ಸುಮ್ಮನೇ ಇರಬೇಕು. ಬಹುಶಃ ಇದನ್ನು ಸ್ವತಃ ಬಾಳಿಯವರು ಒಪ್ಪುವುದಿಲ್ಲವೇನೋ!”

೩) “ಆಧುನಿಕೋತ್ತರ ಚಿಂತಕರ ಕಣ್ಣೋಟದ ಮೂಲಕ ವಚನಗಳ ಪ್ರವೇಶ ಮಾಡಿದುದರ ಫಲವಾಗಿ” ನನ್ನಂಥವರು “ಇಂಥ ಅಪಸವ್ಯಗಳನ್ನು ಹುಟ್ಟು ಹಾಕುತ್ತಿದ್ದಾರೆ” ಎಂಬುದು ಬಾಳಿಯವರ ಮತ್ತೊಂದು ತಕರಾರು. ಇಲ್ಲಿ ‘ಆಧುನಿಕೋತ್ತರ’ ಚಿಂತನೆ ಎಂದು ಇವರು ಕರೆಯುತ್ತಿರುವುದು “ಭಾರತದಲ್ಲಿ ಜಾತಿವ್ಯವಸ್ಥೆಯು ಇರಲೇ ಇಲ್ಲ. [ಅದು] ವಸಾಹತುಶಾಹಿ ಚಿಂತಕರು ಈ ದೇಶವನ್ನು ಒಡೆದು ಆಳಲೆಂದೇ ಉತ್ಪಾದಿಸಲಾದ ಸಂಗತಿಯಾಗಿದೆ ಎಂಬ ವಾದವನ್ನು”. ಈ ಕುರಿತು ಹಲವು ವಿವರಣೆಗಳ ಅವಶ್ಯಕತೆ ಇದೆ. ಮೊದಲಿಗೆ, ಜಾತಿವ್ಯವಸ್ಥೆಯ ಕುರಿತು ನಮ್ಮ ತಂಡದವರಾರೂ ಈ ವಾದವನ್ನು ಎಂದೂ ಮಾಡಿಲ್ಲ. ಇದು post-structuralism ಚಿಂತನೆಯಿಂದ ಪ್ರೇರಿತರಾದ Nicholas Dirks, Bernard Chon ಮುಂತಾದ post-colonial ಚಿಂತಕರ ವಾದ. (ಬಾಳಿಯವರಿಗೆ ತಿಳಿದಿರಲಿಕ್ಕಿಲ್ಲ, ‘ಆಧುನಿಕೋತ್ತರ’ ಎಂಬ ಪದವನ್ನು ಕನ್ನಡದಲ್ಲಿ post-modern ಎಂಬ ಅಂಗ್ಲ ಪದದ ತರ್ಜುಮೆಯಾಗಿ ತೆಗೆದುಕೊಳ್ಳುವುದು ವಾಡಿಕೆ, post-structuralism ಪದದ ತರ್ಜುಮೆಯಾಗಿ ಅಲ್ಲ,) ಎರಡನೆಯದಾಗಿ, ಜಾತಿವ್ಯವಸ್ಥೆ ಕುರಿತ ನಮ್ಮ ವಾದದ ಪ್ರಕಾರ ಜಾತಿವ್ಯವಸ್ಥೆ ಎನ್ನುವುದು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಇನ್ನು ನಮ್ಮ ಈ ವಾದದ ಮೂಲಕ ವಚನಗಳನ್ನು ನೋಡಿದರೆ, ಅವು ಜಾತಿವ್ಯವಸ್ಥೆಯ ಕುರಿತು ಮಾತನಾಡುವುದಿಲ್ಲ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ ನಿಜ. ಆದರೆ ಇದು ಒಂದು ಸಂಶೋಧನೆಯ ನಿರ್ಣಯ. ಇದು ‘ಅಪಸವ್ಯ’  ಏಕೆ? ಹಾಗೆಂದರೇನು? ಮುಂತಾದ ಪ್ರಶ್ನೆಗಳಿಗೆ ಇವರು ಉತ್ತರ ಕೊಡದ ಹೊರತು, ಇದು ಕೇವಲ ಒಂದು ಬೈಗುಳವಾಗಿ ಉಳಿಯುತ್ತದೆ.

೪) ಬಾಳಿಯವರ ಮುಂದಿನ ಎರಡು ಹೇಳಿಕೆಗಳು ನನಗಿನ್ನು ಸರಿಯಾಗಿ ಅರ್ಥವಾಗಿಲ್ಲ. (a) “ಆಧುನಿಕ ಕಾಲಘಟ್ಟದ ವೀರಶೈವರೆಂಬ ಉಗ್ರ ಬಸವವಾದಿಗಳ ವಿದ್ಯಮಾನಗಳನ್ನು ಗಮನಿಸಿ ವಚನಕಾರರನ್ನು ಗ್ರಹಿಸುವ ಒತ್ತಡಕ್ಕೆ ಒಳಗಾಗಿಯೂ ಡಂಕಿನನಂಥವರು ಇಂಥ ನಿಲುವಿಗೆ ಬಂದಂತಿದೆ.” (b) “ಜೇಡರ ದಾಸಿಮಯ್ಯನಿಂದ ಹಿಡಿದು 19ನೇ ಶತಮಾನದ ಒಟ್ಟು ವಚನಕಾರರನ್ನು ಒಂದೇ ಮಾನದಂಡದಡಿಯಲ್ಲಿ ಗ್ರಹಿಸಿ ವಚನಕಾರರು ಜಾತಿವ್ಯವಸ್ಥೆಯ ವಿರೋಧಿಗಳಾಗಿರಲಿಲ್ಲ ಎಂಬ ತೀರ ಬಾಲಿಶವೆನಿಸಬಹುದಾದ ಅಭಿಪ್ರಾಯಕ್ಕೆ ಬಂದಂತಾಗಿದೆ. ಯಾವ ಕಾಲಕ್ಕಾದರೂ ಸಾಂಸ್ಕೃತಿಕ ರಾಜಕಾರಣದ ಉಪಕರಣದಂತಿರುವ ಸಾಹಿತ್ಯವನ್ನು ಅದು ನಿರ್ದಿಷ್ಟ ಹೋರಾಟದ ಫಲವಾಗಿ ಮೂಡಿ ಬಂದ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದ ಮಾದರಿ ತುಂಬಾ ಸಂಕೀರ್ಣವೂ ಮತ್ತು ಬಹುಮುಖಿ ನೆಲೆಯದ್ದೂ ಆಗಿರಬೇಕಾಗುತ್ತದೆ.” ಆಧುನಿಕ ಕಾಲಘಟ್ಟದ ವೀರಶೈವರೆಂಬ ಉಗ್ರ ಬಸವವಾದಿಗಳು ಎಂದರೆ ಯಾರು? ನಮ್ಮ ವಿರುದ್ಧ, ನಮ್ಮ ಲೇಖನವನ್ನೂ ಓದದೆ, ಟೀಕಾ ಪ್ರಹಾರ ಮಾಡಿರುವ ಬಾಳಿ, ಕಲ್ಬುರ್ಗಿ ಮುಂತಾದ ಬರಹಗಾರರನ್ನೇ ಇವರು ಹೀಗೆ ಕರೆದಿರಬಹುದೇ? ಬಾಳಿಯವರು ಹೇಳುವ ಅವರ ವಿದ್ಯಮಾನಗಳು ಯಾವುವು? ಅವುಗಳನ್ನು “ಗಮನಿಸಿ ವಚನಕಾರರನ್ನು ಗ್ರಹಿಸುವ ಒತ್ತಡಕ್ಕೆ ಒಳಗಾದರೆ” ನನ್ನ ನಿಲುವಿಗೆ ಹೇಗೆ ಬರಬಹುದು?

೫) “ಸಾಹಿತ್ಯದ ಸಂಶೋಧನೆ ಸಾಮ್ರೋಜ್ಯಶಾಹಿ ಬಿಂಬಿತ ಉತ್ಪಾದಿತ ಅಭಿಪ್ರಾಯಗಳ ಲೆಕ್ಕಾಚಾರದಂತಲ್ಲ” ಎನ್ನುತ್ತಾರೆ ಬಾಳಿಯವರು. ಮುಂದುವರೆದು “ಹೀಗಾಗಿಯೇ ವಚನಕಾರರನ್ನು ಕುರಿತು ಡಂಕಿನ್ ಅವರು ತೀರ ಅಸಂಬದ್ಧ ನಿಲುವಿಗೆ ಬರುವುದರ ಮೂಲಕ ಅನಾರೋಗ್ಯಕರ ಮತ್ತು ಅನರ್ಥಕಾರಿ ವಿವಾದಗಳಿಗೆ ಎಡೆ ಮಾಡಿಕೊಟ್ಟಿರುತ್ತಾರೆ. ಹೀಗೆಂದು ವಚನಕಾರರು ಪ್ರಶ್ನಾತೀತರಂತಲ್ಲ. ಅವರು ಸಾರ್ವಕಾಲಿಕ ಬದುಕಿನ ಸಮಗ್ರ ಆಯಾಮಗಳನ್ನು ಕುರಿತು ಮಾತನಾಡಿದ್ದಾರೆ ಎಂದೂ ಅಲ್ಲ. ಜಾತಿವ್ಯವಸ್ಥೆಯ ಉತ್ಪಾದಿತ ಶೋಷಣೆ ಕುರಿತು ವಚನಕಾರರ ಪೂರ್ವದಲ್ಲಿ ಯಾರೂ ಪ್ರತಿಭಟಿಸಿರಲಿಲ್ಲ ಎಂದೂ ಅಲ್ಲ. ಹಾಗೆ ನೋಡಿದರೆ ಲೋಕಾಯತ ಬೌದ್ಧ ಜೈನ ಮುಂತಾದ ದಾರ್ಶನಿಕ ಧಾರೆಗಳು ವೈದಿಕ ವರ್ಣಾಶ್ರಮ ಜಾತಿವ್ಯವಸ್ಥೆ ಕುರಿತು ತಾತ್ವಿಕ ಸಂಘರ್ಷಕ್ಕೆ ಇಳಿದದ್ದು ಇದೆ. ಆದ್ದರಿಂದಲೇ ವಚನಕಾರರನ್ನು ಕುರಿತು ಈ ಹೊತ್ತು ಬಹುಮುಖಿ ನೆಲೆಯಲ್ಲಿ ಅಧ್ಯಯನಿಸಬೇಕಾದ ಜರೂರಿ ಇದ್ದೇ ಇದೆ. ನಮ್ಮ ಕಾಲದ ವಾಗ್ವಾದಗಳೊಂದಿಗೆ ವಚನಕಾರರನ್ನು ಮುಖಾಮುಖಿಯಾಗಿಸಬೇಕಾದ ತುರ್ತು ಇದೆ. ಎಲ್ಲ ಬಗೆಯ ವಾಗ್ವಾದ ನಡೆಸಬಹುದಾದ ಬಹುದೊಡ್ಡ ಸ್ಪೇಸ್ ಅವಕಾಶ ವಚನಗಳಲ್ಲಿದೆ. ಜಾತಿ ವ್ಯವಸ್ಥೆಯನ್ನು ಕುರಿತು ಮೇಲ್ವರ್ಗದ ವಚನಕಾರರ ಗ್ರಹಿಕೆಗೂ ಕೆಳವರ್ಗದಿಂದ ಬಂದ ವಚನಕಾರರ ಗ್ರಹಿಕೆಗೂ ಸಕಾರಣವಾಗಿಯೇ ಭಿನ್ನತೆ ಇದೆ. ಅಂತೆಯೇ ಒಟ್ಟು ವಚನಕಾರರ ಆಶಯ, ಉದ್ದೇಶ, ದೃಷ್ಟಿ, ಧೋರಣೆ ದರ್ದುಗಳಲ್ಲಿ ಬಸವಯುಗದ ವಚನಕಾರರಿಗೂ ಬಸವೋತ್ತರ ಯುಗದ ವಚನಕಾರರಿಗೂ ತೀವ್ರ ಸೈದ್ಧಾಂತಿಕ ಭಿನ್ನತೆಗಳಿವೆ.” ಇಷ್ಟು ಉದ್ದದ ಈ ಮಾತಿನ ಸರಮಾಲೆಯಲ್ಲಿ ಬಾಳಿಯವರು ಪ್ರತಿಕ್ರಿಯೆ ನೀಡಬಲ್ಲ ಒಂದು ವಿಚಾರವನ್ನೂ ಹೇಳುವುದಿಲ್ಲ. ಇದಕ್ಕೆ ಮರಳಿ ಬಯ್ಯುವುದನ್ನು ಬಿಟ್ಟು ಹೇಗೆ ಪ್ರತಿಕ್ರಿಯಿಸುವುದು?

೬) “ಒಟ್ಟು ವಚನಕಾರರನ್ನು ಒಂದೇ ಮಾನದಂಡಗಳಡಿಯಲ್ಲಿ ಅಳೆಯ ಹೊರಟಿರುವುದು ತುಂಬ ಅಪಾಯಕಾರಿ ನಿಲುವು” ಎನ್ನುತ್ತಾ ಬಾಳಿಯವರು ಹೇಳುತ್ತಾರೆ “ಬಸವಯುಗದ ವಚನಕಾರರ ನಿಲುವಿಗೂ ಬಸವೋತ್ತರ ವಚನಕಾರರ ನಿಲುವಿಗೂ ಅಜಗಜಾಂತರ ವ್ಯವತ್ಯಾಸವಿದೆ ಎಂಬ ಕನಿಷ್ಠ ಪ್ರಜ್ಞೆಯೂ ಇವರಿಗಿದ್ದಂತಿಲ್ಲ.” ಆಶ್ಚರ್ಯವೆಂದರೆ ಇಂದಿನ ವಚನ ಚಿಂತಕರು ‘ವಚನಗಳು ಜಾತಿ ವಿರೋಧಿ ಸಾಹಿತ್ಯ’ ಎಂದು ಘೋಷಿಸುವಾಗ ವಚನಗಳನ್ನು ಬಸವ ಪೂರ್ವ, ಬಸವಕಾಲದ, ಬಸವೋತ್ತರ ಎಂದು ವಿಂಗಡಿಸಿಕೊಂಡು ಮಾತನಾಡುವುದಿಲ್ಲ ಎಂಬುದು ಬಾಳಿಯವರು ಮರೆತಿದ್ದಾರೆ. ಉದಾಹರಣೆಗೆ, ಡಿ.ಆರ್. ನಾಗರಾಜರು, ತಮ್ಮ ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ (1999: 181) ಕೃತಿಯಲ್ಲಿ “ಜಾತಿವಿರೋಧಿ ತಾತ್ವಿಕತೆಯೆನ್ನುವುದು ವಚನ ಚಳುವಳಿಯ ಮೂಲ ನಿಲುವು” ಎಂದು ಹೇಳುವಾಗ ಅಥವಾ ಕಲಬುರ್ಗಿಯವರ ಹೇಳುವ ಈ ಮಾತುಗಳ ಹಿಂದೆ (ಉದಾ: ಶರಣರು ಸಾಹಿತ್ಯವನ್ನು ಈ ವರ್ಣಬೇಧದ ನಿರ್ಮೂಲನೆಗೆ ಮಾಧ್ಯಮವಾಗಿ ಬಳಸಿಕೊಂಡರು. ಇದರ ಫಲವಾಗಿ ಸೃಷ್ಟಿಯಾದ ವಚನ ಸಾಹಿತ್ಯದ ಮೂಲಕ ‘ವರ್ಣಬೇಧ ನಿರ್ಮೂಲನ ಆಂದೋಲನ’ ತುಂಬಾ ಪ್ರಚಾರ ಪಡೆಯಿತು [ಮಾರ್ಗ 1 1988: 283]) ಬಾಳಿಯವರು ಹೇಳುವ ರೀತಿಯ ವಚನಗಳ ವಿಂಗಡಣೆ ಇದೆಯೇ? ಇಲ್ಲ. ಅಂದಮೇಲೆ, ಅವರ ಈ ಹೇಳಿಕೆಗಳನ್ನು ವಿಮರ್ಶಿಸುತ್ತಾ ನಾವು ಮಂಡಿಸುವ ವಿಚಾರಗಳು ಮಾತ್ರ ಬಸವಯುಗ-ಬಸವೋತ್ತರ ಯುಗ ಎಂಬ ವ್ಯವತ್ಯಾಸವನ್ನು ಏಕೆ ಪರಿಗಣಿಸಬೇಕು? ಇದು ಬಾಳಿಯವರ ಜಾಣ ಕುರುಡೋ ಅಥವಾ ಅಜ್ಞಾನವೋ?

೭) “ಬಸವಾದಿ ಶರಣರ ಕಾಲಘಟ್ಟವು ತನ್ನ ಜಾತಿವಿರೋಧಿ ನಿಲುವಿನಿಂದಾಗಿಯೇ ಗಮನ ಸೆಳೆಯುತ್ತದೆ. …  ಜಾತಿವ್ಯವಸ್ಥೆಯ ತಾಯಿ ಬೇರಾದ ಕರ್ಮಸಿದ್ಧಾಂತದ ವಿರುದ್ಧ ತಾತ್ವಿಕ ಸಂಘರ್ಷಕ್ಕಿಳಿದದ್ದು ಸಾವಿರಾರು ವಚನಗಳಲ್ಲಿ ನಿಚ್ಚಳವಾಗಿ ಕಾಣಿಸಿಕೊಂಡಿದೆ.” ಪ್ರಚಲಿತದಲ್ಲಿರುವ ಈ ಅಭಿಪ್ರಾಯಗಳನ್ನೇ ನಾವು ನಮ್ಮ ಸಂಶೋಧನೆಯಲ್ಲಿ ಪ್ರಶ್ನಿಸಿರುವುದು. ಅಂದಮೇಲೆ ನಮ್ಮ ವಾದಗಳನ್ನು ನಿರಾಕರಿಸಲು ಹೊರಟವರು ತಮ್ಮ ಅದೇ ಹಳೆಯ ವಿಚಾರಗಳನ್ನು ಮರಳಿ ಮಂಡಿಸಲು ಆಗುವುದಿಲ್ಲ. ಹಾಗೆ ಮಾಡಿದರೆ ಚರ್ಚೆ ಮುಂದೆ ಹೋಗುವುದೇ ಇಲ್ಲ. ಬಾಳಿಯವರು ನಮ್ಮ ವಾದಕ್ಕೆ ಉತ್ತರ ಕೊಡಬೇಕಾದರೆ ಯಾವ ಮತ್ತು ಎಷ್ಟು ವಚನಗಳಲ್ಲಿ ಜಾತಿವಿರೋಧಿ ವಿಚಾರ ಬರುತ್ತದೆ ಎಂದು ತೋರಿಸಬೇಕಾಗುತ್ತದೆ. ಅದನ್ನು ಬಿಟ್ಟು ಅವರು, “ನೇರವಾಗಿ ಜಾತಿ ವಿರೋಧಿ ನಿಲುವು ಸಂಖ್ಯಾತ್ಮಕವಾಗಿ ಎಷ್ಟು ವಚನಗಳಲ್ಲಿ ಹೇಳಲ್ಪಟ್ಟಿದೆ ಎಂಬುದು ಮುಖ್ಯವಲ್ಲ. ಎಷ್ಟು ಪ್ರಖರವಾಗಿ ಈ ವಿಷಯ ಪ್ರಸ್ತಾಪಿಸಲ್ಪಟ್ಟಿದೆ ಎಂಬುದೇ ಮುಖ್ಯ” ಎಂದು ಹೇಳಿ ಜಾರಿಕೊಳ್ಳುತ್ತಾರೆ. ಹೀಗೆ ಜಾರಿಕೊಳ್ಳಲು ಅವರು ಬಳಸುವ ಮತ್ತೊಂದು ಮಾರ್ಗವೆಂದರೆ “ಜಾತಿ ಎಂಬ ಶಬ್ದ ಬಳಸದೆಯೂ ಜಾತಿ ವ್ಯವಸ್ಥೆಯನ್ನು” ವಚನಕಾರರು ಖಂಡಿಸಿದ್ದಾರೆ ಎನ್ನುವ ಮೂಲಕ. ಪದಗಳಲ್ಲೇ ಬರದ ಈ ಜಾತಿವಿರೋಧಿ ವಿಚಾರವನ್ನು ನಾವು ತಿಳಿದುಕೊಳ್ಳುವುದು ಹೇಗೆ? ಹಾಗೆ ತಿಳಿದುಕೊಂಡದ್ದನ್ನು ಸರಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ ನೋಡುವುದು ಹೇಗೆ? ಇಲ್ಲಿ ಮುಖ್ಯವಿಚಾರವೆಂದರೆ ವಚನಗಳಲ್ಲಿ ನೆರವಾಗಿ ಜಾತಿವಿಚಾರ ಬರುವುದಿಲ್ಲ ಎಂದು ಬಾಳಿಯವರೇ ಒಪ್ಪಿಕೊಳ್ಳುತ್ತಾರೆ.

7 ಟಿಪ್ಪಣಿಗಳು Post a comment
 1. ವಿಜಯ್ ಪೈ
  ಏಪ್ರಿಲ್ 3 2013

  ಧನ್ಯವಾದಗಳು ಡಂಕಿನ್ ಮತ್ತು ಸಿ.ಎಸ್.ಎಲ್.ಸಿ ಬಳಗದವರಿಗೆ ನಮಗೆ ತಿಳಿಯದ ವಿಷಯಗಳನ್ನು ತಿಳಿಸಿದ್ದಕ್ಕಾಗಿ. ಪ್ರಜಾವಾಣಿಯ ಕಣ್ಣು ಈಗ ತೆರೆದಿದೆ!.

  ಉತ್ತರ
 2. ಬಸವಯ್ಯ
  ಏಪ್ರಿಲ್ 3 2013

  ಹುನ್ನಾರ, ಗುಪ್ತಕಾರ್ಯಯೋಜನೆ, ಸನಾತನ ಪ್ರಯತ್ನ ಮುಂತಾದ ನಿಗೂಢ ಶಬ್ದಗಳನ್ನು ಬಳಸಿ ಸಿ.ಎಸ್.ಎಲ್.ಸಿ ಸಂಶೋಧನೆಯ ಹಿನ್ನಲೆಯನ್ನು ಪಾಮರರಿಗೆ ತಿಳಿಸಿಕೊಡುವ ಮಿನಿ ಸಂಶೋಧನಾತ್ಮಕ ಲೇಖನ ಓದಬೇಕೆ? ಇಲ್ಲಿದೆ ನೋಡಿ!

  http://www.prajavani.net/article/ಕಣ್ಣ-ಗಾಯವನು-ಅರಿಯಲುಬಾರದ

  ಅದರಲ್ಲಿರುವ ಒಂದು ಅತ್ಯದ್ಭುತ ಪ್ಯಾರಾವನ್ನು ಇಲ್ಲಿ ಕೊಡುತ್ತಿದ್ದೇನೆ. ಪೂರ್ತಿ ಲೇಖನ ಓದುವತ್ತ ನಿಮ್ಮ ಕುತೂಹಲ ಕೆರಳಿಸಲು,,

  “ಇನ್ನು ಮೂರನೆಯ ಆಯಾಮವು ಸ್ವಲ್ಪ ದೂರಗಾಮಿ ದೃಷ್ಟಿಯನ್ನು ಒಳಗೊಂಡಿದೆ. ವಚನಗಳಲ್ಲಿ ಜಾತಿ ವಿರೋಧವಿಲ್ಲವೆಂದ ಮೇಲೆ ಸಮಾಜದಲ್ಲಿ ಜಾತಿಪದ್ಧತಿಯೂ ಇಲ್ಲವೆಂದೇ ಅರ್ಥ. ಪ್ರಜಾಪ್ರಭುತ್ವ ಸರ್ಕಾರಗಳು ಜಾರಿಗೆ ತರುತ್ತಿರುವ ಜನ ಕಲ್ಯಾಣ ಯೋಜನೆಗಳು ಕೆಳ ತಳ ಜಾತಿಯ ಸಮುದಾಯಗಳಿಗೆ ದಕ್ಕುವುದರಿಂದ ಮೇಲ್ಜಾತಿಗೆ ಸೇರಿದ ಬಡವರಾಗಿರುವವರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ. ಬ್ರಾಹ್ಮಣರಲ್ಲಿ ಬಡವರಿಲ್ಲವೆ? ಎಂದು ಪ್ರಶ್ನಿಸುವವರು ಎಲ್ಲಾ ಕಡೆ ಕಾಣಸಿಗುತ್ತಾರೆ. ಆದ್ದರಿಂದ ಜಾತಿಪದ್ಧತಿ ಇಲ್ಲವೆಂದು ಸಂಶೋಧನೆಗಳ ಮೂಲಕ ಸಾಧಿಸಿದರೆ ಸಾಮಾಜಿಕ ಏಣಿ ಶ್ರೇಣಿಯ ಮಾನದಂಡ ಕುಸಿದು ಹೋಗುವುದು. ಆಗ ಎಲ್ಲಾ ಜಾತಿಯ ಬಡವರು ಒಂದೇ ಆಗುತ್ತಾರೆ. ಆಗ ಬ್ರಾಹ್ಮಣರಿಗೂ ರಾಷ್ಟ್ರೀಯ ಸಂಪನ್ಮೂಲದಲ್ಲಿ ಫಲ ಸಿಗುತ್ತದೆ ಎನ್ನುವ ಗುಪ್ತ ಕಾರ್ಯಯೋಜನೆಯನ್ನೂ ಇದು ಒಳಗೊಂಡಿದೆ.”

  ಇದೆಲ್ಲ ನಮಗೆ ಗೊತ್ತೆ ಇರಲಿಲ್ಲ .. ಡಾ. ನಾರಾಯಣ ಸ್ವಾಮಿಗಳು ನಮ್ಮ ಕಣ್ಣು ತೆರೆಸಿದ್ದಾರೆ, ಹೌದು..ಜಾತಿಪದ್ಧತಿ ನಾಶದಿಂದ ಬ್ರಾಹ್ಮಣರಿಗೆ ಲಾಭ ಆಗುತ್ತೆ. ಹಾಗೆ ಆಗಲು ಬಿಡಬಾರದು. ಜಾತಿಪದ್ಧತಿ ಎಂದೆಂದಿಗೂ ಇರಲಿ. ಈ ಡಂಕಿನ್ ಜಳಕಿ ಬಳಗದವರು ಹೊಸ ಸಮಸ್ಯೆ ತಂದು ಹಾಕಿದ್ದಾರೆ. ಸಧ್ಯಕ್ಕೆ ನಾವು ಜಾತಿಪದ್ಧತಿ ವಿನಾಶ ಮಾಡುವ ಚಳವಳಿ ಕೈ ಬಿಡೋಣ..ಜಾತಿಪದ್ಧತಿ ಬೇಕು ಚಳವಳಿ ಪ್ರಾರಂಭ ಮಾಡೋಣ!.

  ಉತ್ತರ
  • shiva kumar
   ಏಪ್ರಿಲ್ 4 2013

   ಬಸವಯ್ಯ ಅವರೆ,

   ಸಾಮಾಜಿಕ ಚಳುವಳಿಗಳ ಪರ, ಸಾಮಾಜಿಕ ನ್ಯಾಯದ ಪರ ಎಂದು ಹೇಳಿಕೊಳ್ಳುವ ನಮ್ಮ ಬೌದ್ದಿಕ ವಗ೵ ಮತ್ತು ಅಂತಹ

   ಚಿಂತನೆಗಳಲ್ಲಿನ ಬಹುದೊಡ್ಡ ವೈರುದ್ಯವನ್ನು ಚೆನ್ನಾಗಿ ಗುರುತಿಸಿದ್ದೀರಿ.

   ಉತ್ತರ
  • ಏಪ್ರಿಲ್ 4 2013

   ಬ್ರಾಹ್ಮಣರಲ್ಲಿ ಬಡವರಿಲ್ಲವೆ? ಎಂದು ನಾವು ಕೇಳುವುದರಲ್ಲಿ ತಪ್ಪೇನು? ಮಾನವೀಯತೆ ಇರುವ ಯಾವ ವ್ಯಕ್ತಿಯಾದರೂ ಈ ಪ್ರಶ್ನೆ ಕೇಳಲೇ ಬೇಕು ತಾನೇ?

   ಉತ್ತರ
   • santosh ananad
    ಏಪ್ರಿಲ್ 7 2013

    Brahmins are already sharing more number of posts in state and central government jobs, banking sector, IT sector. It is much above to their population proportion. you calculated the percentage of vachanas speaking about caste system. Cant you do this small statistical sum of percentage?

    ಉತ್ತರ
    • ಏಪ್ರಿಲ್ 7 2013

     well, actually you should do it if you have to counter my arguments. I am only saying what is wrong in asking the question “ಬ್ರಾಹ್ಮಣರಲ್ಲಿ ಬಡವರಿಲ್ಲವೆ?”

     ಉತ್ತರ
 3. shripad
  ಮಾರ್ಚ್ 15 2019

  ಮತ್ಸಿಗದ ವಚನಗಳು ಜಾತಿ ವಿರೋಧಿಯಾಗಿರಬೇಕು? ಇದೂ ಒಂದು ವಿಮರ್ಶೆ, ಕರ್ಮಕಾಂಡ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments