ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 4, 2013

3

ಜಾತಿ-ವಿರೋಧಿ ನಿಲುವು : ಸರಿಯಾದ ವೈಧಾನಿಕತೆ!

‍ನಿಲುಮೆ ಮೂಲಕ

– ಡಂಕಿನ್ ಝಳಕಿ

Vachana Charcheಇಂದಿನ ಪ್ರಜಾವಾಣಿಯಲ್ಲಿ (೦೪/೦೪/೨೦೧೩) ಎಂ.ಎಸ್. ಆಶಾದೇವಿಯವರು ಬರೆದ ವಚನ ಕುರಿತ ಚರ್ಚೆಯ ಬರಹಕ್ಕೆ ಇದು ನನ್ನ ಉತ್ತರ.

ನಮ್ಮ ಸಂಶೋಧನೆಯ ಕುರಿತು ಇವರು ಮಾಡುವ ಗುರುತರ ಆಪಾದನೆಯೆಂದರೆ, ಇದಕ್ಕೆ ವಚನಗಳ “ಜೀವಪರ ನಿಲುವು” ಕಾಣಿಸುವುದಿಲ್ಲ. ಏಕೆಂದರೆ ಈ ಸಂಶೋಧನೆಗೆ ಒಂದು “ವೈಧಾನಿಕತೆಯ ಕಣ್ಕಟ್ಟು” ಇದೆ. ಯಾವುದಿದು ವೈಧಾನಿಕತೆಯ ಕಣ್ಕಟ್ಟು? ಆಧ್ಯಾತ್ಮಿಕ ವಿಚಾರವನ್ನು ಅಕಾಡೆಮಿಕ್ ಅಧ್ಯಯನದಲ್ಲಿ ತರುವ ಪ್ರಯತ್ನವೇ ಈ ಕಣ್ಕಟ್ಟು ಅಥವಾ ಮಾಯೆ. ಮುಂದುವರೆಸಿ ಇವರು ಹೇಳುತ್ತಾರೆ, ಈ ಕುರುಡು ವೈಧಾನಿಕತೆಯು ಈ ಮುಂದಿನ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ: “ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು?”

ಇವರ ಈ ಹೇಳಿಕೆಗಳನ್ನು ನಾನು ‘ಆಪಾದನೆ’ ಎಂದು ಯಾಕೆ ಹೇಳಿದೆನೆಂದರೆ ಇವರು ತಮ್ಮ ಈ ಹೇಳಿಕೆಗಳನ್ನು ಮುಂದೆ ಎಲ್ಲೂ ವಿವರಿಸುವುದೂ ಇಲ್ಲ, ಸಮರ್ಥನೆ ಮಾಡಿಕೊಳ್ಳುವುದೂ ಇಲ್ಲ. ಈ ಆಪಾದನೆಯ ನಂತರ ಇವರ ಲೇಖನ ಬೇರೆಡೆ ಹೊರಳುತ್ತದೆ. ತಮ್ಮ ಹೇಳಿಕೆಗಳನ್ನು ಇವರು ತಾವೇ ವಿವರಿಸದೆ ಹೋಗುವುದರಿಂದ ಅದನ್ನು ಅರ್ಥಮಾಡಿಕೊಳ್ಳುವುದು ಓದುಗನಿಗೆ ಬಿಟ್ಟ ಕೆಲಸ. ನನಗೆ ಇವರ ಕಷ್ಟದ ಭಾಷೆ ಅರ್ಥವಾದ ಮಟ್ಟಿಗೆ ಹೇಳುವುದಾದರೆ, ಯಾವುದೇ ಸಂಶೋಧನೆ ಮಾಡದೆ, ನೂರು ವರ್ಷಗಳಿಂದ ಹೇಳುತ್ತಾ ಬಂದಿರುವ ‘ವಚನಗಳು ಜಾತಿವಿರೋಧಿ’ ಎಂಬ ವಿಚಾರವನ್ನು ಒಪ್ಪಿಕೊಳ್ಳುವುದೇ ವಚನಗಳ ಜೀವಪರ ನಿಲುವನ್ನು ಗುರುತಿಸುವ ವೈಧಾನಿಕತೆ ಎಂದಾಯಿತು ಅಲ್ಲವೇ?

(ರಾಜರಾಮರು ತಮ್ಮ ಲೇಖನದಲ್ಲಿ ಕಲಬುರ್ಗಿಯ ಕುರಿತು ಹೇಳಿದ್ದು ಇದನ್ನೇ.) ವಚನಗಳಲ್ಲಿ ಜಾತಿ-ವಿರೋಧಿ ನಿಲುವನ್ನು ನಾವು ಹುಡುಕತೊಡಗಿದ್ದು ವಸಾಹತುಶಾಹಿ ಪ್ರಜ್ಞೆಯ ಪ್ರಭಾವದಡಿ ಎಂಬುದು ನಮ್ಮ ಸಂಶೋಧನೆ ಆಧಾರ ಸಮೇತ ತೋರಿಸುತ್ತದೆ. (ಇದನ್ನು ಈವರೆಗೂ ಆಶಾದೇವಿಯವರೂ ಸೇರಿದಂತೆ ಯಾರೂ ಆಧಾರ ಸಮೇತ ಅಲ್ಲಗಳೆದು ತೋರಿಸಿಲ್ಲ.) ಅಂದ ಮೇಲೆ, ವಚನಗಳಲ್ಲಿ ಇದೆ ಎಂದು ಆಶಾದೇವಿ, ಕಲಬುರ್ಗಿ ಮುಂತಾದವರು ಹೇಳುವ ಈ ಜೀವಪರ ನಿಲುವು ಅದಕ್ಕೆ ತುಂಬಿದ್ದು ವಸಾಹತುಷಾಹಿ ಚಿಂತಕರು ಮತ್ತು ಅವರಂತೆಯೇ ಯೋಚಿಸಲು ಕಲಿತ ‘ವಿದ್ಯಾವಂತರು’. ನಮ್ಮ ಸಂಶೋಧನೆಯ ತೊಂದರೆ ಎಂದರೆ ನಾವೂ ಇದನ್ನು ಪ್ರಶ್ನಿಸುತ್ತಿರುವುದು. (ಇದಕ್ಕೂ ಹೊರತಾಗಿ ಆಶಾದೇವಿಯವರು ಇನ್ನೇನಾದರೂ ಹೇಳುತ್ತಿದ್ದರೆ ಅವರು ಅದನ್ನು ವಿವರವಾಗಿ ಅರ್ಥವಾಗುವ ಕನ್ನಡದಲ್ಲಿ ಬರೆದು ತಿಳಿಸಲಿ.)

ಆಶಾದೇವಿಯವರು ಕೇಳುವ ಮತ್ತೊಂದು ಪ್ರಶ್ನೆ ಇದು: ಶಂಕರರನ್ನೂ ಬಸವನನ್ನೂ ಒಂದೇ ಪರಂಪರೆಯಲ್ಲಿಡಲು ಸಾಧ್ಯವೆ? … ವಿರಕ್ತಮಠಗಳಲ್ಲಿರುವ ಮುಕ್ತತೆ ಶಂಕರಮಠಗಳಲ್ಲಿದೆಯೆ? ಇಲ್ಲಿ ಈ ಪ್ರಶ್ನೆಯ ಪ್ರಸ್ತುತತೆ ಏನೆಂದರೆ, “ವಿರಕ್ತ ಮಠಗಳ ಮುಕ್ತತೆಯ ಹಿಂದೆ ಕೆಲಸ ಮಾಡಿರುವುದು ಜಾತಿವಿನಾಶದ ಗುರಿ” ಎಂಬ ಅವರ ನಂಬಿಕೆ. ಮುಂದುವರೆಸಿ ಹೇಳುತ್ತಾರೆ, ಇದನ್ನು ವಚನಗಳ ಸಂಖ್ಯೆಯ ಆಧಾರದ ಮೇಲೆ ಅಲ್ಲಗಳೆಯಲು ಆಗುವುದಿಲ್ಲ. ಅಷ್ಟೇ ಅಲ್ಲ, “ಮಂಟೆಸ್ವಾಮಿಯಂತಹವರು ರೂಪುಗೊಳ್ಳುವ ಪರಂಪರೆಯನ್ನೂ ಅಂಥ ಸಾಧ್ಯತೆಯನ್ನೇ ಹತ್ತಿಕ್ಕುವ ವೈದಿಕ ಪರಂಪರೆಯನ್ನೂ ಸಮಾನ ಪಾತಳಿಯಲ್ಲಿಡಲು ಸಾಧ್ಯವಿಲ್ಲ. ಇಂಥ ಸಾಧ್ಯತೆಯ ಪ್ರತಿಪಾದನೆಯೇ ಈ ತಥಾಕಥಿತ `ಒಳ್ಳೆಯ ಸಂಶೋಧನೆಯ’ ಬಗ್ಗೆ ಅನುಮಾನಗಳನ್ನು ವಿದ್ವಾಂಸರಲ್ಲಿ ಮಾತ್ರವಲ್ಲ ಹುಲುಮಾನವರಲ್ಲೂ ಹುಟ್ಟಿಸುತ್ತದೆ.” ಈ ವಾದದಲ್ಲಿನ ತೊಂದರೆ ಎಂದರೆ, ನಾವು ಸಂಶೋಧನೆ ಮಾಡ ಹೊರಟಿದ್ದು ಮಠಗಳ ಕುರಿತು ಅಲ್ಲ, ಅವುಗಳ ಇತಿಹಾಸದ ಕುರಿತೂ ಅಲ್ಲ. ಮಠಗಳು ಮತ್ತು ಮಠಗಳ ಸ್ವಾಮೀಜಿಯವರು ಒಂದು ಜಾತಿ, ಪಂಥಕ್ಕೆ ಸೇರಿದ ವಿಧಿ ಆಚರಣೆಗಳನ್ನು ಅನುಷ್ಠಾನಕ್ಕೆ ತರುವ, ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತವರು. ಅವರ ಕುರಿತು ನಮಗೆ (ಆಧುನಿಕ ಜಗತ್ತು ತೋರಿಸುವ) ಯಾವ ಅಸಮಧಾನ, ಶಂಕೆಗಳು ಇಲ್ಲ. ನಮ್ಮ ವಾದವಿರುವುದು ವಚನ ಚಿಂತಕರ ಜೊತೆಗೆ. ಅಷ್ಟಕ್ಕೂ, “ವಿರಕ್ತ ಮಠಗಳ ಮುಕ್ತತೆಯ ಹಿಂದೆ ಕೆಲಸ ಮಾಡಿರುವುದು ಜಾತಿವಿನಾಶದ ಗುರಿ” ಎಂಬುದು ಆಶಾದೇವಿಯವರ ಹೇಳಿಕೆಯೇ ಹೊರತು ಸಂಶೋಧನೆ ಮಾಡಿ ತೋರಿಸಿದ ವಿಚಾರವಲ್ಲ. ಅಂತೆಯೇ, ಶಂಕರಮಠಗಳು ಕರೆದು ಯಾರಿಗೋ ಊಟ ಹಾಕಿಲ್ಲ ಅಥವಾ ಇನ್ಯಾರಿಗೋ ಒಂದೇ ಪಂಕ್ತಿಯಲ್ಲಿ ಕೂರಿಸಿಲ್ಲ ಎಂದ ಮಾತ್ರಕ್ಕೆ ಅವು ಮುಕ್ತವಲ್ಲ ಎಂದು ವಾದಿಸುವುದು ಹೇಗೆ ಸಾಧು? ಸಾಹಿತ್ಯದ, ಸಂಶೋಧನೆಯ ವಿಚಾರ ಮಾತನಾಡುವಾಗ ಮಠಗಳ ವಿಚಾರ ತರುವುದು ಯಾಕೆ?

ಹೀಗೆ ತಪ್ಪು ದಾರಿ ಹಿಡಿಯುವ ಇವರ ವಾದ ಮುಂದೆ ನಮ್ಮ ಲೇಖನ ಮತ್ತು ಸಂಶೋಧನೆಗೆ ಸಂಬಂಧವಿರದ ವಿಚಾರಗಳ ಕುರಿತು ಭಾಷಣ ಮಾಡುತ್ತಾ ಹೋಗುತ್ತದೆ. ಕಡೆಗೊಮ್ಮೆ ಇದ್ದಕಿದ್ದಂತೆ “0.03 ವಚನಗಳಲ್ಲಿ ಮಾತ್ರ ಜಾತಿವಿರೋಧಿ ಮಾತುಗಳಿವೆ  ಎನ್ನುವುದು ತರ್ಕದ ಮಾತೂ ಅಲ್ಲ, ತಾತ್ವಿಕತೆಯ ನಿಲುವೂ ಆಗಲಾರದು” ಎಂದು ಘೋಷಿಸುತ್ತದೆ. ಏಕೆಂದರೆ ಹೀಗೆ “ಅಂಕಿ ಅಂಶಗಳ ಪುರಾವೆಗಳನ್ನೂ ಸಮರ್ಥನೆಯನ್ನೂ ಮೀರಿದ ಸಾವಯವ ಪುರಾವೆಗಳಿರುವಾಗ ಅವುಗಳಿಗೇ ಜೋತುಬೀಳುವುದು ಅವರ ವೈಧಾನಿಕತೆಯ ಮಿತಿ” ಮಾತ್ರ ಎಂದು ಸಾರುತ್ತದೆ. ಅಂಕಿಯ ಹಿಂದೆ ಹೋದರೆ ವಚನಗಳ ಜೀವದ್ವನಿ ಕೇಳಿಸುವುದಿಲ್ಲ ಎಂಬುದು ಇವರ ವಾದ. ಆದರೆ ಇದೊಂದು ಎಲ್ಲರೂ ಮತ್ತೆ ಮತ್ತೆ ಹೇಳುತ್ತಿರುವ, ಮತ್ತು ಯಾರೂ ಇದವರೆಗೂ ಯಾಕೆ ಮತ್ತು ಹೇಗೆ ಎಂದು ತೋರಿಸಿಕೊಡದ ವಿಚಾರ. ಅಷ್ಟಕ್ಕೂ, ಈ ಹಿಂದೆಯೇ ತೋರಿಸಿದಂತೆ, ಇವರು ಯಾವುದನ್ನು ವಚನಗಳ ‘ಜೀವಪರ ನಿಲುವು’ ಎನ್ನುತ್ತಾರೋ ಅದು ೧೯ನೆ ಶತಮಾನದದಿಂದ ಈಚೆಗೆ ನಾವು ಹೇಳಲು ಕಲಿತ ವಿಚಾರ. ಬಸವಣ್ಣ ಮತ್ತು ಇತರ ವಚನಕಾರರನ್ನು, ವಚನಗಳನ್ನು ಜಾತಿ-ವಿರೋಧಿ ಎಂದು ಹರಿಹರ, ಚಾಮರಸ ಮುಂತಾದ ಯಾವ ಕವಿಯೂ ಹೇಳುವುದಿಲ್ಲ. ಅಂದರೆ ನಮ್ಮ ಸಂಶೋಧನೆ ಈ ಮಹಾ ಕವಿಗಳ ಸಾಲಿಗೆ ಸೇರಿತು ಎಂದಾಗುತ್ತದೆ. ಇದು ನಮಗೊಂದು ಹೆಮ್ಮೆಯ ವಿಚಾರವೇ.

ಈ ಎರಡು ಹೇಳಿಕೆಗಳ ನಂತರ ಇವರ ಲೇಖನ ಮತ್ತೆ ನಮ್ಮ ಸಂಶೋಧನೆ ಮತ್ತು ಲೇಖನಕ್ಕೆ ಸಂಬಂಧ ಪಡದ ವಿಚಾರದತ್ತ ಹೊರಳಿ ಆಧಾರವಿಲ್ಲದ ಬರಿಯ ಭಾಷಣದ ರೂಪ ತಾಳುತ್ತದೆ. ಅದಕ್ಕೆ ಸಂಶೋಧನೆಯ ಸಭ್ಯತೆಯ ಮಿತಿಯಲ್ಲಿ (ಅಂದರೆ ಆಪಾದನೆಗಳನ್ನು ಮಾಡದೆ) ಉತ್ತರಿಸುವುದು ಸಾಧ್ಯವಿಲ್ಲದ ಮಾತು.

 

3 ಟಿಪ್ಪಣಿಗಳು Post a comment
 1. ಏಪ್ರಿಲ್ 4 2013

  ವಾಸ್ತವತೆ ಏನು ಅನ್ನುವುದನ್ನು ಬರೀ ಸಂಶೋಧನೆಯಿಂದ ಮಾತ್ರ ತಿಳಿದುಕೊಳ್ಳುವುದು ಮೂರ್ಖತನ. ಬದುಕನ್ನು ಹಾಗಲ್ಲ ಹೀಗೆ ಎಂದು ಅರ್ಥೈಸುವುದು ಬೇರೆ, ಸಾಹಿತ್ಯದ ಓದಿನಲ್ಲಿ ಮರುಸೃಷ್ಟಿಸಿಕೊಳ್ಳುವುದು ಬೇರೆಯಾಗಿರುತ್ತದೆ. ಪ್ರಿಯರೇ ನೀವು ವಚನಗಳನ್ನು ಮತ್ತೊಮ್ಮೆ ಪರಿಶೀಲಿಸಿರಿ.. ಷಟಸ್ಥಲಗಳ ಅಧ್ಯಯನ ಕ್ರಮದಲ್ಲಿರುವ ವಚನಗಳ ಸಂಖ್ಯೆಯೂ ಬಹಳ ಕಡಿಮೆಯೇ ಇದೆ. ನಿಮ್ಮ ಲೆಖ್ಖಾರದಂತೆ ಜಾತಿ ಕುರಿತಾದ ವಚನಗಳು ಎಷ್ಟಿವೆಯೋ ಅದರಷ್ಟೆ ಇತರ ವಚನಗಳೂ ಇವೆ. ಒಂದೇ ವಿಷಯದ ಕುರಿತಾಗಿ ಹತ್ತಾರು ವ್ಯಾಖ್ಯಾನಗಳನ್ನು ಹಲವಾರು ವಚನಕಾರರು ಮಾಡುತ್ತಾ ಹೋಗಿದ್ದಾರೆ. ಅಲ್ಲದೆ ಜಾತಿ ವಿರೋಧಿಸುವಾಗ ಜಾತಿಗೆ ಪರ್ಯಾಯವಾದ ಸಮಾಜ ರೂಪಿಸುವ ಅನಿವಾರ್ಯವಿದ್ದ ಕಾರಣಕ್ಕಾಗಿ ಶರಣರು ಹೊಸ ಸಮಾಜದ ನಡೆ-ನುಡಿಗಳ, ಆಶಯಗಳ, ಆತ್ಮ-ಪರಮಾತ್ಮಗಳ ಕುರಿತಾಗಿ ಮಾತಾಡಬೆಕಿತ್ತು. ಸಾಮಾನ್ಯನ ಸಂಕಟಗಳಿಗೆ ಹೊಸ ಪರಿಭಾಷೆಯೊಂದು ವಚನಗಳ ರೂಪದಲ್ಲಿ ಹುಟ್ಟಿಕೊಂಡಿತು. ಬಸವಣ್ಣನವರಿಗೆ ಜಾತಿಯ ಪ್ರಶ್ನೆ ಕಾಡಿದಷ್ಟು ಇತರ ಶರಣರಿಗೆ ಕಾಡಲಿಲ್ಲ. ಯಾಕೆಂದರೆ ಬಸವಣ್ಣನ ಅರಿವಿನ ಹೆಜ್ಜೆಗಳಲ್ಲಿ ಇವರಿದ್ದ ಕಾರಣಕ್ಕಾಗಿ ಇವರು ತಮ್ಮ ಇಷ್ಟ ದೈವದೆದುರು ನಿಷ್ಟರಾಗಿದ್ದಷ್ಟೆ ಬಸವಣ್ಣನ ಆಶಯಗಳಿಗೂ ಕಟಿಬದ್ಧರಾಗಿದ್ದರು.

  ಉತ್ತರ
 2. ಏಪ್ರಿಲ್ 5 2013

  “ವಾಸ್ತವತೆ ಏನು ಅನ್ನುವುದನ್ನು ಬರೀ ಸಂಶೋಧನೆಯಿಂದ ಮಾತ್ರ ತಿಳಿದುಕೊಳ್ಳುವುದು ಮೂರ್ಖತನ” ಅಂದಮೇಲೆ ವಾಸ್ತವತೆಯನ್ನು ಬೇರೆಯಾವುದರಿಂದ ತಿಳಿದುಕೊಳ್ಳಬೇಕು? ಮೂರ್ಖತನ ದಿಂದ ಎಂದೇ ನಿಮ್ಮ ಅನಿಸಿಕೆ? “ಷಟಸ್ಥಲಗಳ ಅಧ್ಯಯನ ಕ್ರಮದಲ್ಲಿರುವ ವಚನಗಳ ಸಂಖ್ಯೆಯೂ ಬಹಳ ಕಡಿಮೆಯೇ ಇದೆ. ನಿಮ್ಮ ಲೆಖ್ಖಾರದಂತೆ ಜಾತಿ ಕುರಿತಾದ ವಚನಗಳು ಎಷ್ಟಿವೆಯೋ ಅದರಷ್ಟೆ ಇತರ ವಚನಗಳೂ ಇವೆ”-ಅರ್ಥವಾಗಲಿಲ್ಲ ನಿಮ್ಮ ಮಾತು. ಒಂದಷ್ಟು ಅಂಕೆ ಸಂಖೆಗಳು, ಉಲ್ಲೇಖಗಳು ತನ್ನಿ ನೋಡುವ.

  ಉತ್ತರ
 3. santosh ananad
  ಏಪ್ರಿಲ್ 5 2013

  Mr. Dunkin you have not read neither Harihara nor Chamarasa. Why do u simply put forth hollow arguments and exhibit your ignorance? Your read 10th sthala in Harihara’s Basavaraja devara Ragale. How passionately and practically Harihara portrays the scene of Basava dining with Shivanagamaiah who was an untouchable. By the tone of Harihara we can understand his approach. I think I have to tell you this information. In the study of literature tone of the writer is very important in literary criticism and analysis.
  (2). You consider colonial approach to any socio religious movement as taboo. You and your co. have a fear of colonialism. But we consider it as a boon to understand and analyze our ancient literature which had clamped a ceiling on freedom of thought and expression.

  ಉತ್ತರ

ನಿಮ್ಮದೊಂದು ಉತ್ತರ Dunkin Jalki ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments