ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 4, 2013

2

ಬದಲಾವಣೇ ತರಲು ಬೇಕಿರುವುದು “ಮನಸ್ಸು” ವಯಸ್ಸಲ್ಲ…!

by ನಿಲುಮೆ

-ರಾಕೇಶ್ ಶೆಟ್ಟಿ

ARONMN“ರಾಜಕಾರಣಕ್ಕೆ ಯುವಕರು ಬರಬೇಕು” ಹಾಗೂ “ರಾಜಕಾರಣಿಗಳಿಗೆ ನಿವೃತ್ತಿ ವಯೋಮಿತಿಯಿರಬೇಕು” ಅನ್ನುವ ಚರ್ಚೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ.ನನ್ನ ಮಟ್ಟಿಗೆ ಯುವಕರು ರಾಜಕೀಯಕ್ಕೆ ಬಂದರೆ/ಯುವಕರ ಕೈಗೆ ಅಧಿಕಾರ ಸಿಕ್ಕರೆ ಎಲ್ಲವೂ ಬದಲಾಗುತ್ತದೆ ಅನ್ನುವುದು ಒಂದು ’ಮಿಥ್’ ಅಷ್ಟೇ.ನಿಜಕ್ಕೂ ಬದಲಾವಣೆ ಬಯಸಲು/ಮಾಡಲು ಬೇಕಾಗಿರುವುದು ವಯಸ್ಸೋ? ಮನಸ್ಸೋ?

ಭಾರತದ ಅತಿಕಿರಿಯ ಮುಖ್ಯಮಂತ್ರಿ ಅನ್ನುವ ಹೆಗ್ಗಳಿಕೆ ಉ.ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ (೩೯) ಅವರದ್ದು.ಅವರು ಗಾದಿಯ ಮೇಲೆ ಕುಳಿತು ಮೊನ್ನೆ ಮೊನ್ನೆಗೆ ಒಂದು ವರ್ಷ ಕಳೆದಿದೆ.ಈ ಒಂದು ವರ್ಷದಲ್ಲಿ ಈ ಬಿಸಿ ರಕ್ತದ ಯುವ ಮುಖ್ಯಮಂತ್ರಿ ಅಧಿಕಾರ ಚಲಾವಣೆಯಲ್ಲಿ ಯಾವುದಾದರೂ ಭರವಸೆಯುತ (’ಕ್ರಾಂತಿಕಾರಕ’ ಅನ್ನುವ ದೊಡ್ಡ ಪದವೂ ಬೇಡ) ರೀತಿಯಲ್ಲಿ ರಾಜ್ಯಭಾರ ಮಾಡಿದ್ದಾರೆಯೇ? ಕನಿಷ್ಟ ಮಂತ್ರಿಮಂಡಲ ರಚನೆ ಮಾಡುವಾಗಲಾದರೂ ಆರೋಪ ಮುಕ್ತರಿಗೆ ಸ್ಥಾನ ಕೊಟ್ಟರೇನು? ಇವರ ಮಂತ್ರಿಮಂಡಲದಲ್ಲಿ ಶೇ.೫೩ರಷ್ಟು ಮಂದಿ ಸಚಿವರ ಮೇಲೆ ಕ್ರಿಮಿನಲ್ ಆರೋಪಗಳಿವೆ.ವರ್ಷದಿಂದ ಉತ್ತರ ಪ್ರದೇಶ ಸುದ್ದಿಯಲ್ಲಿದ್ದರೆ ಅದು ಬರಿ ಕೆಟ್ಟ ಸುದ್ದಿಗಳ ಮೂಲಕವಷ್ಟೇ.ಇತ್ತೀಚೆಗೆ ತಾನೇ ಪ್ರತಾಪ್ ಗಢದಲ್ಲಿ ಡಿವೈಎಸ್ಪಿ ಜಿಯಾ-ಉಲ್-ಹಕ್ ರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದ್ದು ನೆನಪಿರಬೇಕಲ್ಲ.ಒಬ್ಬ ಯುವ (ಅನನುಭವಿ) ಮುಖ್ಯಮಂತ್ರಿಗೆ ಭರವಸೆಯ ಕಾರ್ಯಕ್ರಮ ರೂಪಿಸುವಲ್ಲಿ ಇನ್ನೊಂದಿಷ್ಟು ಸಮಯ ಬೇಕು ಅಂತ ಇಟ್ಟುಕೊಂಡರೂ, ಅಪರಾಧ,ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೊದಲಿಗೆ ಬೇಕಿದಿದ್ದು ಗಟ್ಟಿ ಮನಸ್ಸು.ಬಹುಷಃ ಅದೇ ಈ ಯುವ ಮುಖ್ಯಮಂತ್ರಿಯಲ್ಲಿ ಕಾಣುತ್ತಿಲ್ಲ.ತನ್ನ ಸುತ್ತಲೂ ಕ್ರಿಮಿನಲ್ ಆರೋಪಿಗಳ ಸಂಪುಟವನ್ನಿಟ್ಟುಕೊಂಡು “ಗೂಂಡಾ ರಾಜ್ಯ”ವನ್ನು ಅಳಿಸಿ ಹಾಕುತ್ತೇವೆ ಅನ್ನುವುದೆಷ್ಟು ಸತ್ಯ? “ಬದಲಾವಣೆ ತರಲು ವಯಸ್ಸು ಮುಖ್ಯವೋ,ಮನಸ್ಸು ಮುಖ್ಯವೋ” ಅನ್ನುವ ಈ ಚರ್ಚೆಯ ಮೊದಲ ಉದಾಹರಣೆ ಅಖಿಲೇಶ್ ಯಾದವ್ ರನ್ನು ನೋಡಿದರೇ ಯುವಕರು ರಾಜಕೀಯಕ್ಕೆ/ಅಧಿಕಾರಕ್ಕೆ ಬಂದರೆ ಬದಲಾವಣೆಯಾಗುತ್ತದೆ ಅನ್ನುವುದು ಮಿಥ್ ಅನ್ನಿಸುತ್ತದೆ.ಬದಲಾಯಿಸಲೇಬೇಕು ಅನ್ನುವ ಮನಸಿದ್ದರೆ ವಯಸ್ಸು ಅಷ್ಟು ಅಡ್ಡಿಯಾಗಲಾರದು.

ಅಖಿಲೇಶ್ ಯಾದವ್ ನಂತರದ ಕಿರಿಯ ಮುಖ್ಯಮಂತ್ರಿಯ ಸ್ಥಾನ ಬಹುಷಃ ಕಾಶ್ಮೀರದ ಮುಖ್ಯಮಂತ್ರಿ ೪೩ರ ಹರೆಯದ ಒಮರ್ ಅಬ್ದುಲ್ಲಾ  ಪಾಲಗುತ್ತದೆ.ಕಾಶ್ಮೀರ ಅನ್ನುವುದು ಭಾರತದ ಉಳಿದ ರಾಜ್ಯಗಳಂತಲ್ಲ ಅನ್ನುವ ಸತ್ಯವನ್ನು ಒಪ್ಪುತ್ತಲೇ,ಅಲ್ಲಿನ ಸಮಸ್ಯೆಗಳ ಪಾಲಿಗೆ ಭ್ರಷ್ಟಚಾರದ ಕೊಡುಗೆಯನ್ನು ಅಲ್ಲಗಳೆಯಲಾಗದು.ಕೇಂದ್ರ ಸರಕಾರ ಉಳಿದೆಲ್ಲಾ ರಾಜ್ಯಗಳಿಗೆ ನೀಡುತ್ತಿರುವ ತಲಾವಾರು ನೆರವಿನ ಮೊತ್ತಕ್ಕಿಂತ ರೂ.೮,೦೦೦ ದಷ್ಟು ಹೆಚ್ಚು ಕಾಶ್ಮೀರಕ್ಕೆ ಕೊಡುತ್ತಿದೆ. ರೈಲು, ರಸ್ತೆ, ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸುಮಾರು 25,000 ಕೋಟಿ ರೂ. ಕೇಂದ್ರ ನೆರವಿನ ಯೋಜನೆಗಳು ಅಲ್ಲಿ ಅನುಷ್ಟಾನದಲ್ಲಿವೆ. ಅಲ್ಲಿ ಜಾರಿಯಲ್ಲಿರುವ ಪಂಚವಾರ್ಷಿಕ ಯೋಜನೆಯ 11 ಸಾವಿರ ಕೋಟಿ ರೂಗಳನ್ನು ನೀಡಿರುವುದು ಕೇಂದ್ರವೇ.ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯ ನೀಡುತ್ತಿರುವ ಕೊಡುಗೆ ಇದು.ಇಂತ ರಾಜ್ಯದ ಯುವಮುಖ್ಯಮಂತ್ರಿ ವಿವಾದಿತ AFSPA ಕಾಯ್ದೆಯ ಬಗ್ಗೆ,ಅಫ್ಜಲ್ ಗುರುವಿನ ಬಗ್ಗೆ ಬಿಟ್ಟು ಉಳಿದಿನ್ನೇನನ್ನೂ ಮಾತಾಡಿದ್ದು,ಸಾಧಿಸಿದ್ದು ಕೇಳಿದ್ದೀರೇನು? ಕಲ್ಲು ಬೀಸುವ ಹುಡುಗರ ಕೈಗೆ ಕೆಲಸ ಕೊಡಬೇಕಾದವರು ಈ ’ಯುವ’ ಮುಖ್ಯಮಂತ್ರಿಯ ಸರ್ಕಾರವೇ ಅಲ್ಲವೇ?

ಇವರಿಬ್ಬರನ್ನು ಬಿಟ್ಟು,ಸದ್ಯ ಭಾರತದ ಇತರೇ ರಾಜ್ಯಗಳಲ್ಲಿ ಅಭಿವೃದ್ಧಿ ಮತ್ತು ಭರವಸೆಯುತ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಮುಖ್ಯಂತ್ರಿಗಳ ವಯಸ್ಸನ್ನೊಮ್ಮೆ ನೋಡೋಣ. ಮುಂದಿನ ಪ್ರಧಾನಿ ಅಭ್ಯರ್ಥಿಯೆಂದೇ ಕರೆಸಿಕೊಳ್ಳುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ (೬೨),ತ್ರಿಪುರದ ಮಾಣಿಕ್ ಸರ್ಕಾರ್(೬೪), ಬಿಹಾರದ ನಿತೀಶ್ ಕುಮಾರ್ (೬೧),ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ (೫೪),ಒಡಿಶಾದ ನವೀನ್ ಪಟ್ನಾಯಕ್ (೬೬),ಚತ್ತೀಸ್ ಗಢದ ರಮಣ್ ಸಿಂಗ್ (೬೦).ರಾಜಕೀಯದಲ್ಲಿ “ಯುವಕರು” ಅಂತ ಗುರುತಿಸುವ ಮಾನದಂಡವನ್ನು “೫೦”ಕ್ಕೆ ಏರಿಸಿದರೂ ಈ ಮೇಲೆ ಉದಾಹರಿಸಿದವರೆಲ್ಲ ವಯಸ್ಸಿನ ಸರಾಸರಿ ೫೫ರ ಮೇಲೆಯೇ ಇದೆ.ಇವರ ರಾಜ್ಯಗಳಲ್ಲಿ ಆಗುತ್ತಿರುವ ಅಭಿವೃದ್ಧಿ,ಜನರು ಅವರ ಆಡಳಿತದ ಮೇಲೆ ವಿಶ್ವಾಸವಿಟ್ಟು ಪದೇ ಪದೇ ಅವರನ್ನೇ ಆರಿಸಿ ಕಳುಹಿಸುವಾಗ ಅವರ ವಯಸ್ಸನ್ನು ನೋಡುತ್ತಿಲ್ಲ,ಬದಲಿಗೆ ಕೆಲಸ ಮಾಡುವ ಅವರ “ಮನಸ್ಸನ್ನು” ನೋಡುತಿದ್ದಾರೆ ಅನ್ನಿಸುವುದಿಲ್ಲವೇ?

ಎಲ್ಲದಕ್ಕೂ ರಾಜಕಾರಣಿಗಳನ್ನು ದೂಷಿಸುವ ನಮ್ಮ ಸಿನಿಕತನದ ಭಾಗವಾಗಿಯೇ ಈ ವಯಸ್ಸಿನ ಬಗ್ಗೆಯೂ ಮಾತುಗಳು ಬರುವುದು.ಸ್ವಾತಂತ್ರ ಬಂದಾಗಿನಿಂದ ಸರ್ಕಾರಗಳು ಜನಸಾಮಾನ್ಯರಿಗಾಗಿ ಎಷ್ಟೆಲ್ಲ ಯೋಜನೆಗಳನ್ನು ಹಾಕಿಲ್ಲ.ಅಂತ ಯೋಜನೆಗಳನ್ನು ಜನರ ಬಳಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರವೇ ಬಹಳ ಮುಖ್ಯವಾದದ್ದು.ಇಂತ ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರವೇ ವಯೋಮಿತಿ ನಿಗದಿಪಡಿಸಿರುವುದರಿಂದ ಅವರ ವಯಸ್ಸಿನ ಹಿರಿತನದ ಬಗ್ಗೆ ಮಾತನಾಡುವಂತಿಲ್ಲ. ಅವರ ವಯಸ್ಸಿನ ಬಗ್ಗೆ ಮಾತನಾಡದಿದ್ದ ಮೇಲೆ, ಸರ್ಕಾರದ ಯೋಜನಗೆಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಬಹಳಷ್ಟು ಅಧಿಕಾರಿಗಳು ಹಿಂದೆ ಬೀಳಲು ಕಾರಣ ಅವರ “ವಯಸ್ಸ”ಲ್ಲ, ಕೆಲಸ ಮಾಡಲಾಗದ  “ಮನಸ್ಸು” ಅನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕಲ್ಲವೇ?

Ofcourse “ವಯಸ್ಸು” ಅನ್ನುವುದು ದೈಹಿಕ ಮತ್ತು ಮಾನಸಿಕ ಕ್ಷಮತೆಯ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ.ಆದರೆ ಹಿರಿತನ ಅನ್ನುವುದು “ಅನುಭವ”ವನ್ನು ಕೊಡುತ್ತದೆ. (ಇನ್ನು ಕೆಲವರು ವಯಸ್ಸಿನಲ್ಲಷ್ಟೇ ಹಿರಿಯರಿರುತ್ತಾರೆ ಅಂತವರನ್ನು ಬಿಟ್ಟು).ರಾಜಕೀಯ ಕ್ಷೇತ್ರದಲ್ಲಿ ಸರ್ಕಾರದ ಹಾಗು-ಹೋಗುಗಳಲ್ಲಿ,ವಿವಾದಗಳಲ್ಲಿ,ತುರ್ತು ಪರಿಸ್ಥಿತಿಗಳಲ್ಲಿ ಅತಿ ಮುಖ್ಯ ಪಾತ್ರವಹಿಸುವುದು ಈ “ಅನುಭವ”ವೇ.ಅದೂ ಮಾಧ್ಯಮಗಳು ಅತಿರಂಜಿತ ವರದಿಗಳ ಮೂಲಕ ಮಾತನಾಡುವ,ಜನರು ಸೋಷಿಯಲ್ ನೆಟ್ವರ್ಕಿಂಗಳ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡುವಾಗ ಸಮಚಿತ್ತದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು “ಅನುಭವ”ವೇ ಕೆಲಸಕ್ಕೆ ಬರುವುದು.ಹಾಗಾಗಿ ವಯಸ್ಸಾಯ್ತು ಅಂತ ಕೇವಲವಾಗಿ ನೋಡುವುದು ಅನನುಭವಿ ಯುವಕರ ಹವ್ಯಾಸ ಅನ್ನಬಹುದೇನೋ…! ಅಂತಿಮವಾಗಿ ನಿವೃತ್ತಿ ಪಡೆಯುವ ನಿರ್ಧಾರ ಆಯಾ ವ್ಯಕ್ತಿಗೆ ಬಿಟ್ಟಿದ್ದು.ವಯಸ್ಸಾಗಿದೆ ಅಂತ ತಿಳಿದ ಮೇಲೂ ನಿಭಾಯಿಸಲು ಹೊರಟರೆ ಆಗುವ ಎಡವಟ್ಟುಗಳನ್ನು (ಉದಾ: ವಿಶ್ವಸಂಸ್ಥೆಯಲ್ಲಿ ಬೇರೆ ದೇಶದ ಭಾಷಣ ಓದಿದವರು, ಲೋಕಸಭೆಯಲ್ಲಿ ಅತ್ಯಾಚಾರಕ್ಕೊಳಗಾದವರ ಹೆಸರನ್ನು ಬಾಯಿ ಬಿಟ್ಟವರು.. ಇತ್ಯಾದಿ ಇತ್ಯಾದಿ) ನೋಡಿದ ಮೇಲೆಯೂ ಒಬ್ಬ ವ್ಯಕ್ತಿ ನಿವೃತ್ತಿಯನ್ನು ಘೋಷಿಸದಿದ್ದರೆ ಜನರೇ ಮನೆಗೆ ಕಳಿಸುತ್ತಾರೆ.ಬದಲಾವಣೇ ತರಲು ಬೇಕಿರುವುದು “ಮನಸ್ಸು” ವಯಸ್ಸಲ್ಲ…!

2 ಟಿಪ್ಪಣಿಗಳು Post a comment
 1. ತುಳುವ
  ಏಪ್ರಿಲ್ 4 2013

  very relevant while media is making undue noise about ‘young’ leaders.. all those young faces that media is forcing on us are mostly disappointing..

  ಉತ್ತರ
 2. N.Raghavan
  ಏಪ್ರಿಲ್ 22 2013

  Point to ponder, well written

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments