Skip to content

ಏಪ್ರಿಲ್ 5, 2013

1

ಸಂಶೋಧನೆಯ ರೂಪುರೇಷೆಗಳನ್ನರಿಯದ ವಿಮರ್ಶಕರು

by ನಿಲುಮೆ

– ಡಂಕಿನ್ ಝಳಕಿ

Vachana Charcheಇಂದಿನ (04/05/2013) ಪ್ರಜಾವಾಣಿಯಲ್ಲಿ ಜಿ.ಬಿ. ಹರೀಶರು ಬರೆದ ಲೇಖನ ಮತ್ತು ಇದುವರೆಗೂ ಬಂದಿರುವ ಇನ್ನಿತರ ಪ್ರತಿಕ್ರಿಯೆಗಳಲ್ಲಿ  ಸಂಶೋಧನೆ ಎಂದರೇನು ಎಂಬ ವಿಚಾರದ ಕುರಿತು ಬಹಳಷ್ಟು ಗೊಂದಲವನ್ನು ನಾವು ಕಾಣಬಹುದು. ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯಲ್ಲಿ ನಾವು ಪದೇಪದೇ ಕಾಣುವ ಹಲವು ಸಣ್ಣ ದೊಡ್ಡ ತಪ್ಪುಗಳು ಈ ಪ್ರತಿಕ್ರಿಯೆಗಳ ತುಂಬಾ ಕಾಣಿಸುತ್ತವೆ. ಅಂತಹ ಕೆಲವು ಸಮಸ್ಯೆಗಳನ್ನು ಕುರಿತು ಚರ್ಚಿಸುವುದೇ ಈ ಪುಟ್ಟ ಲೇಖನದ ಉದ್ದೇಶ.

(೧) ಸಂಶೋಧನೆಗಳು ಮತ್ತು ಉಲ್ಲೇಖಗಳು: ನಾನು ನನ್ನ ಲೇಖನ ಮತ್ತು ಪ್ರಬಂಧಗಳಲ್ಲಿ ಯಾರನ್ನು ಮತ್ತು ಎಷ್ಟು ಮಂದಿಯನ್ನು ಉಲ್ಲೇಖಿಸುತ್ತೇನೆ ಮತ್ತು ಉಲ್ಲೇಖಿಸುವುದಿಲ್ಲ ಎಂಬ ವಿಚಾರವನ್ನು ಕುರಿತು ಮಾತನಾಡುತ್ತಾ ಹರೀಶರು ಹೀಗೆ ಹೇಳುತ್ತಾರೆ “ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ.”

ಒಂದು ಸಂಶೋಧನೆಯಲ್ಲಿ ಉಲ್ಲೇಖಗಳು ಮಾಡಬೇಕಾದ ಒಂದು ಮುಖ್ಯ ಕೆಲಸವೆಂದರೆ, ಮಂಡಿತ ವಾದವನ್ನು ವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳುವುದು. ತಕ್ಕನಾದ ಪುರಾವೆಗಳನ್ನು ಒದಗಿಸುವುದು ಹೀಗೆ ಸಮರ್ಥಿಸಿಕೊಳ್ಳುವ ಒಂದು ವಿಧಾನ. ಸರಿಯಾದ ಉಲ್ಲೇಖಗಳನ್ನು ಕೊಡುವುದು ಪುರಾವೆಗಳನ್ನು ಒದಗಿಸುವ ಒಂದು ವಿಧಾನ. ಆದ್ದರಿಂದ ಒಂದು ವಾದವನ್ನು ವಿಮರ್ಶಿಸುವವರು ಮೊದಲು ಆ ವಾದವೇನು, ಅದಕ್ಕೆ ಬೇಕಾದ ಪುರಾವೆಗಳನ್ನು ವಾದಿಯು ಕೊಟ್ಟಿದ್ದಾನೋ ಇಲ್ಲವೋ, ಆ ಪುರಾವೆಗಳು ಉಲ್ಲೇಖನದ ರೂಪದಲ್ಲಿ ಬರುವ ಅವಶ್ಯಕತೆ ಇದೆಯೋ ಇಲ್ಲವೋ, ಎಂಬ ವಿಚಾರದ ಕುರಿತು ಯೋಚಿಸಬೇಕು. ಇವುಗಳ ಯಾವುದರ ಗೋಜಿಗೂ ಹೋಗದೆ, ಒಂದು ಸಂಶೋಧನಾ ಪ್ರಬಂಧ ಎಷ್ಟು ಉಲ್ಲೇಖಗಳನ್ನು ಕೊಟ್ಟಿದೆ ಎಂಬ ವಿಚಾರಕ್ಕೆ ಮಹತ್ವ ಕೊಡುವುದು ಸಂಶೋಧನೆಯ ವಿಮರ್ಶೆಯಾಗುವುದಿಲ್ಲ. ಕನ್ನಡದಲ್ಲಿ ವಚನಗಳು ಕುರಿತು ಬಂದ ಪುಸ್ತಕಗಳೆಲ್ಲವನ್ನೂ ಉಲ್ಲೇಖಿಸುವುದು ನನ್ನ ಸಂಶೋಧನೆಯ ಉದ್ದೇಶವಾಗಿರಲಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ಬರೆಯ ಹೊರಟಿದ್ದು ‘ಕನ್ನಡದಲ್ಲಿ ವಚನ ಸಂಶೋಧನೆಯ’ ವಿಶ್ವಕೊಶವನ್ನಲ್ಲ. ಇರುವ ಪುಸ್ತಕಗಳನ್ನೆಲ್ಲವನ್ನು ಹಿಡಿದು ಉಲ್ಲೇಖಿಸ ಹೊರಟರೆ ಆ ಅಧ್ಯಯನವು ಎಂದೂ ಮುಗಿಯುವುದೇ ಇಲ್ಲ.

(೨) ಸಂಶೋಧನೆಯ ವಿಷಯವ್ಯಾಪ್ತಿಗೆ ಸೇರದ ಪ್ರಶ್ನೆಗಳು: “ಹನ್ನೆರಡರಿಂದ ಹದಿನೇಳನೇ ಶತಮಾನದಲ್ಲೇ ವಚನಗಳಲ್ಲಿ ಉಂಟಾದ ಆಂತರಿಕ ಬದಲಾವಣೆ ಡಂಕಿನ್ ಅವರು ಗಮನಿಸಿಯೇ ಇಲ್ಲ” ಎನ್ನುವುದು ಹರೀಶರು ಎತ್ತುವ ಮತ್ತೊಂದು ಆಕ್ಷೇಪಣೆ. ನಾನು ನನ್ನ ಪ್ರಬಂಧದಲ್ಲಿ ಗಮನಿಸದ ವಿಚಾರಗಳ ಪಟ್ಟಿ ಮಾಡ ಹೊರಟರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಸ್ವಲ್ಪ ವ್ಯಂಗ್ಯವಾಗಿ ಹೇಳುವುದಾದರೆ, ನಾನು ಇಡ್ಲಿ, ಸಾಂಬಾರು, ಸೀರೆ ಇತ್ಯಾದಿಗಳ ಕುರಿತು ನನ್ನ ಲೇಖನದಲ್ಲಿ ಎಲ್ಲೂ ಮಾತನಾಡುವುದಿಲ್ಲ. ಅಂದರೆ ಈ ರೀತಿಯ ಆಕ್ಷೇಪಣೆ ಎತ್ತುವುದು ಅರ್ಥವಿಲ್ಲದ ಕೆಲಸ. ಯಾವುದೋ ಒಂದು ವಿಚಾರವನ್ನು ನಾನು ಗಮನಿಸದೆ ಹೋದದ್ದರಿಂದ ನನ್ನ ವಾದ ಹೇಗೆ ಬಡವಾಗಿದೆ, ನಾನು ಎತ್ತಿಕೊಳ್ಳುವ ಪ್ರಶ್ನೆ ಮತ್ತು ನಾನದಕ್ಕೆ ಕೊಟ್ಟ ಉತ್ತರದಲ್ಲಿ ಏನು ತೊಂದರೆಯಾಗಿದೆ ಎಂದು ತೋರಿಸಿಕೊಡದ ಹೊರತು ಇಂತಹ  ಆಕ್ಷೇಪಣೆ ಬರೀಯ  ಆಕ್ಷೇಪಣೆಯಾಗಿ ಉಳಿಯುತ್ತದೆ.

(೩) ಸಂಶೋಧನೆ ಎಂದರೇನು ಎಂಬ ವಿಚಾರದ ಕುರಿತು ಗೊಂದಲ:  “ಡಾ. ಬಾಲಗಂಗಾಧರ ಮತ್ತು ಡಾ. ಡಂಕಿನ್ ಅವರ ಸಂಶೋಧನೆಯ ದೊಡ್ಡ ಸಮಸ್ಯೆಯೆಂದರೆ ತಾವು ಹಿಡಿದಿರುವ ವೈಧಾನಿಕತೆಯ ಪರಮ ಪ್ರಾಮಾಣ್ಯವನ್ನು ಮಾತ್ರ ನೋಡುವುದು. ಹಳೆಯ ಸಂಸ್ಕೃತ-ತರ್ಕ ಪಾಂಡಿತ್ಯದವರ ದಾರಿ ಇದಾಗಿತ್ತು.” ನನಗೆ ಈ ಆಕ್ಷೇಪಣೆ ಅರ್ಥವೇ ಆಗುವುದಿಲ್ಲ. ಒಂದು ಸಂಶೋಧನೆ ತನ್ನದಲ್ಲದ ಮತ್ತೊಂದು ವೈಧಾನಿಕತೆಯ ಪರಮ ಪ್ರಾಮಾಣ್ಯವನ್ನು ಬಳಸುವುದು ಎಂದರೇನು? ಹೀಗೆ ಮಾಡುವುದು ಒಳ್ಳೆಯ ಪರಿಪಾಠ ಯಾಕೆ? ಉದಾಹರಣೆಗೆ, ಒಮ್ಮೆ ಗೆಲಿಲಿಯೋ ತನ್ನ ಸಂಶೋಧನೆಯಲ್ಲಿ ತನ್ನ “ವೈಧಾನಿಕತೆಯ ಪರಮ ಪ್ರಾಮಾಣ್ಯವನ್ನು ಮಾತ್ರ ನೋಡುವುದ”ನ್ನು ಬಿಟ್ಟು, ಆಗಿನ ಚರ್ಚ್ ಹೇಳುತ್ತಿದ್ದ ವೈಧಾನಿಕತೆಯನ್ನು ಬಳಸಿದ್ದರೆ ಆತನ ಹೊಸ ಸಿದ್ಧಾಂತಗಳು ಹುಟ್ಟುತ್ತಿದ್ದವೆ? ಅಂದರೆ ನಾವು ಮಾಡುತ್ತಿರುವ ‘ನಾವು ಹಿಡಿದಿರುವ ವೈಧಾನಿಕತೆಯ ಪರಮ ಪ್ರಾಮಾಣ್ಯವನ್ನು ಮಾತ್ರ ನೋಡುವುದು’ ಇತಿಹಾಸದುದ್ದಕ್ಕೂ ವಿಜ್ಞಾನಿಗಳು ಮಾಡಿದ ಕೆಲಸವೇ ಎಂದಾಯಿತು. ಇದನ್ನೇ ಆಕ್ಷೇಪಿಸುವ ವ್ಯಕ್ತಿ ತನ್ನ ಆಕ್ಷೇಪಣೆಯನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಲೇಖನದ ಕಡೆಯಲ್ಲಿ ಇಂತಹದೇ ಮತ್ತೊಂದು ಆಕ್ಷೇಪಣೆ ಎತ್ತುತ್ತಾರೆ ಹರೀಶರು: “ಬಾಲಗಂಗಾಧರ ಮತ್ತು ಡಂಕಿನ್ ಮಾಡಿರುವ ಪ್ರಯತ್ನದಲ್ಲಿ  `ಚೌಕಟ್ಟಿನ’  (ಫ್ರೇಂವರ್ಕ್) ವಿಜೃಂಭಣೆಯೇ ಅತಿಯಾಗಿದೆ”. ಒಂದು ಸಂಶೋಧನೆಯ ಕುರಿತಂತೆ `ಚೌಕಟ್ಟಿನ ವಿಜೃಂಭಣೆಯೇ ಅತಿಯಾಗಿದೆ’ ಎಂದರೇನು ಎಂಬುದು ನನಗೆ ಇನ್ನೂ ಅರ್ಥವಾಗದ ಸಮಸ್ಯೆ. ಮತ್ತೆ ಒಂದು ಉದಾಹರಣೆಯ ಮೂಲಕ ಹೇಳುವುದಾದರೆ, Albert Einstein E = mc² ಸಿದ್ಧಾಂತವನ್ನು ಚೌಕಟ್ಟಿನ ವಿಜೃಂಭಣೆಯನ್ನು ಅತಿಯಾಗಿ ಮಾಡದೆ ಮಂಡಿಸುವುದು ಹೇಗೆ? ಒಂದುವೇಳೆ Einstein ಸಂಶೋಧನೆಯಲ್ಲಿ ‘ಚೌಕಟ್ಟಿನ ವಿಜೃಂಭಣೆ’ ಎಂಬ ಒಂದು ಸಮಸ್ಯೆ ಇದೆ ಎಂದಿಟ್ಟುಕೊಳ್ಳಿ. ಅವರು E = mc² ಸಿದ್ಧಾಂತವನ್ನು ಮಂಡಿಸಿದಾಗ ನಾವು ಆ ಸಿದ್ಧಾಂತದ ಕುರಿತು ಮಾತನಾಡಬೇಕೋ ಅಥವಾ ಅವರ ಭಾಷೆ, ಧೋರಣೆಗಳ ಕುರಿತು ಮಾತನಾಡಬೇಕೋ? ಇಷ್ಟಂತೂ ಸತ್ಯ, Einsteinರ E = mc² ಸಿದ್ಧಾಂತವನ್ನು ವಿಮರ್ಶೆ ಮಾಡಲು ಅದೇ ಕ್ಷೇತ್ರದಲ್ಲಿ ನಮಗೂ ಸಾಕಷ್ಟು ಜ್ಞಾನವಿರಬೇಕು. ಅವೆಲ್ಲ ಇಲ್ಲದೆಯೂ ಅವರನ್ನು ವಿಮರ್ಶಿಸಬೇಕು ಎಂದರೆ ಅವರ ಭಾಷೆ, ಧೋರಣೆ, ಕಡೆಗೆ ಅವರು ಕ್ರಾಪು ಮಾಡಿಕೊಳ್ಳುವ ವಿಧಾನ ಮುಂತಾದ ಸಿಕ್ಕ ಸಿಕ್ಕ ವಿಚಾರಗಳೆಲ್ಲದರ ಕುರಿತೂ ಮಾತನಾಡ ಬೇಕಾಗುತ್ತದೆ. ಆದರೆ ಹೀಗೆ ಮಾಡಿದರೆ E = mc² ಸಿದ್ಧಾಂತದ ವಿಮರ್ಶೆಗೂ, ಒಂದು ಕವನದ ವಿಮರ್ಶೆಗೂ, ರಾಜಕಾರಣಿಗಳ ಭಾಷಣಕ್ಕೂ ಅಂತರವೇ ಉಳಿಯುವುದಿಲ್ಲ.

ಅಂತೆಯೇ, ಕ್ಷುಲ್ಲಕ ಸಮಸ್ಯೆಗಳನ್ನು ನಾವಿಂದು ಯಾವುದೇ ಹಿಂಜರಿಕೆಯಿಲ್ಲದೆ ಸಂಶೋಧನೆಯ ವಿಮರ್ಶೆ ಎಂಬಂತೆ ಪ್ರಸ್ತುತಪಡಿಸುವುದು. ಉದಾಹರಣೆಗೆ, ಇದನ್ನು ಗಮನಿಸಿ: “ಇದುವರೆಗೂ ಕನ್ನಡದಲ್ಲಿ ವಚನ ಸಂಶೋಧನೆ `ಸರಿಯಾಗಿ’  ನಡೆದಿಲ್ಲ ಎಂದು ಹೇಳುವ ಇವರಿಗೆ ಕರ್ನಾಟಕ ಸರ್ಕಾರ ಸಮಗ್ರ ವಚನಗಳ 15 ಸಂಪುಟ ಪ್ರಕಟಿಸಿದೆ ಎಂದು ತಿಳಿಯದೆ  `14′  ಎಂದು ಹೇಳುತ್ತಾರೆ.  `15′ ನೆಯದು ವಚನ ಪರಿಭಾಷಾಕೋಶ.” ಅವರೇ ಹೇಳುವಂತೆ, ೧೫ ಸಂಪುಟಗಳಲ್ಲಿ ೧೪ ಸಂಪುಟಗಳು ಮಾತ್ರ ವಚನಗಳನ್ನು ಹೊಂದಿದ್ದು 15ನೆಯದು ಪರಿಭಾಷಾಕೋಶವಾದರೆ, ಮಾತನಾಡುವಾಗ ವಚನಗಳ ೧೪ ಸಂಪುಟ ಎನ್ನಬೇಕೋ ಅಥವಾ ೧೫ ಸಂಪುಟ ಎನ್ನಬೇಕೋ? ಈ ಪರಿಭಾಷಾಕೋಶವನ್ನು ನಾನು ನನ್ನ ಬರವಣಿಗೆಯಲ್ಲಿ ಮಾಡಿಲ್ಲ ಎಂಬುದು ನನ್ನ ಬರವಣಿಗೆಯ ಒಂದು “ಮುಖ್ಯ ದೋಷ” ಎಂಬುದು ಇವರ ಮತ್ತೊಂದು ಆಕ್ಷೇಪಣೆ? ಇಂಗ್ಲಿಷಿನಲ್ಲಿ ಇಂತಹ ವಿಮರ್ಶೆಗಳನ್ನು nitpicking ಎಂದು ಕರೆಯುತ್ತಾರೆ.

ಇದುವರೆಗೂ ನಮ್ಮ ಸಂಶೋಧನೆಗೆ ಬಂದ ಪ್ರತಿಕ್ರಿಯೆಗಳನ್ನು ನೋಡಿದರೆ, ಕನ್ನಡದಲ್ಲಿನ ಬುದ್ದಿಜೀವಿಗಳಿಗೆ ಸಿದ್ಧಾಂತದ ಮತ್ತು  ಕವನದ ವಿಮರ್ಶೆಗೂ ಹಾಗೂ ರಾಜಕಾರಣಿಗಳ ಭಾಷಣಕ್ಕೂ ನಡುವಿನ ಅಂತರದ ಕುರಿತು ಸರಿಯಾದ ಕಲ್ಪನೆಯೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಹರೀಶರ ಇಂದಿನ ಲೇಖನವೂ ಇದಕ್ಕೆ ಹೊರತಲ್ಲ.

Advertisements
1 ಟಿಪ್ಪಣಿ Post a comment
  1. ಏಪ್ರಿಲ್ 6 2013

    ಸರಿಯಾಗಿ ಹೇಳಿದ್ದೀರಿ…..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Note: HTML is allowed. Your email address will never be published.

Subscribe to comments