ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 8, 2013

1

ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ

‍ನಿಲುಮೆ ಮೂಲಕ

ಡಾ. ಸಂತೋಷ್ ಕುಮಾರ್ ಪಿ.ಕೆ, ಶಿವಮೊಗ್ಗ.

Vachana Charcheಪ್ರಜಾವಾಣಿ ೧೯/೦೩/೨೦೧೩ ರಲ್ಲಿ ಪ್ರಕಟವಾದ ಕಲಬುರ್ಗಿಯವ ಲೇಖನಕ್ಕೆ ಪ್ರತಿಕ್ರಿಯೆ

ವಚನಗಳ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಒಂದು ರೀತಿಯ ಕಂದರವಿದೆ. ಒಂದೆಡೆ ಸಂಶೋಧನೆ ವಾಸ್ತವದ ಕುರಿತು ವಾದಿಸುತ್ತಿದ್ದರೆ ಮತ್ತೊಂದೆಡೆ ಐಡಿಯಾಲಜಿಗಳು ಕಟ್ಟುಕತೆಯನ್ನೇ ಮರುಪ್ರಸಾರ ಮಾಡುತ್ತಿವೆ. ಇಲ್ಲಿ ಕಂದರವಿರುವುದು ಸಂಶೋಧನೆ ಮತ್ತು ಐಡಿಯಾಲಜಿಯ ನಡುವೆ. ಸಂಶೋಧನೆ ನಡೆಸಿ ಸುಮಾರು ೨೨೦೦೦ ವಚನಗಳನ್ನು ಪರಿಶೀಲನೆಗೆ ಒಡ್ಡಿ, ಡಂಕಿನ್ ಮತ್ತು ಬಾಲುರವರು ಒಂದು ಹೊಸ ಹೈಪೋಥೀಸಿಸ್ ನ್ನು ನೀಡುತ್ತಿದ್ದಾರೆ. ಆದರೆ ಅದು ಸಂಶೋಧನಾ ಹೈಪೋಥೀಸಿಸ್ ಎಂಬುದು ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪೂರ್ವಪಕ್ಷದವರಿಗೆ ಅರ್ಥವಾಗದೆ ಇರುವುದು ಖೇದದ ಸಂಗತಿ.

ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ ಎಂದು ಯಾರಾದರೂ ವಾದಿಸಿದರೆ, ಅದಕ್ಕೆ ಪೂರ್ವಪಕ್ಷದವರು ಅದು ಹೇಗೆ ಜಾತಿವ್ಯವಸ್ಥೆಯ ವಿರುದ್ಧವೇ ನಡೆದಿದೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಅರಚಾಟ, ಕಿರುಚಾಟ, ವಯಕ್ತಿಕ ಟೀಕೆಗಳನ್ನು ಮಾಡಿದರೆ ಯಾವುದೇ ಹೈಪೋಥೀಸಿಸ್ ನ್ನು ರೆಫ್ಯೂಟ್ ಮಾಡಿದಂತೆ ಆಗುವುದಿಲ್ಲ. ವಚನಗಳು ಸಾವಿರಾರು ವಿಷಯಗಳ ಕುರಿತು ಮಾತನಾಡಿವೆ, ಅವುಗಳಲ್ಲಿ ಜಾತಿಯ ಕುರಿತು ಮಾತನಾಡಿರುವುದು ಒಂದಾಗಿದೆ. ವಚನಗಳ ಮೂಲ ಸಿದ್ಧಾಂತ (ಕಲಬುರ್ಗಿಯವರು ಹೇಳುವಂತೆ) ಜಾತಿವ್ಯವಸ್ಥೆಯನ್ನು ಹೋಗಲಾಡಿಸುವುದೇ ಆಗಿದ್ದರೆ ಅವರು ರಚಿಸಿರುವ ಬಹುತೇಕ ವಚನಗಳು ಆ ವಿಷಯದ ಸುತ್ತವೇ ಇರಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. ಈ ವಾದವನ್ನು ವಿರೋಧಿಸಬೇಕಾದರೆ ವಚನಗಳು ಬಹುಸಂಖ್ಯೆಯಲ್ಲಿ ಜಾತಿಯನ್ನು ವಿರೋಧಿಸುತ್ತವೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಇಷ್ಟು ಕನಿಷ್ಟ ಜ್ಞಾನವಿರದಿದ್ದರೆ ಐಡಿಯಾಲಜಿ, ಅಂದರೆ ವಾಸ್ತವಕ್ಕಿಂತ ತಾನು ನಂಬಿರುವುದೇ ಸತ್ಯ ಎಂಬ ಧೋರಣೆ ಮುಸುಕಾಗಿ ನಿಲ್ಲುತ್ತದೆ. ಐಡಿಯಾಲಜಿಯು ಸಿದ್ಧಾಂತಕ್ಕೆ ತೀರಾ ವ್ಯತಿರಿಕ್ತವಾದುದಾಗಿದೆ. ಸಾಮಾನ್ಯವಾಗಿ ಸಿದ್ಧಾಂತಗಳು ಇರುವ ಜ್ಞಾನವನ್ನು ಒರೆಗೆ ಹಚ್ಚುವ ಮೂಲಕ ಹೆಚ್ಚೆಚ್ಚು ಸ್ಪಷ್ಟತೆಯನ್ನು ಒದಗಿಸುತ್ತಾ ಹೋಗುತ್ತವೆ.

ಆದರೆ ಐಡಿಯಾಲಜಿಗಳು ಬೇರೆ ಬೇರೆ ಸಿದ್ಧಾಂತಗಳ, ಚಿಂತನೆಗಳ ಗುಚ್ಚದಿಂದ ಅಲ್ಪಸ್ವಲ್ಪ ವಿಚಾರಗಳನ್ನು ತೆಗೆದುಕೊಂಡು ರೂಪಿತವಾಗುತ್ತವೆ. ಹಲವಾರು ಬಾರಿ ಐಡಿಯಾಲಜಿಗಳು ಯಾವ ಸಿದ್ಧಾಂತಕ್ಕೆ ಸೇರಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಏಕಕಾಲದಲ್ಲಿಯೇ ಹಲವಾರು ಸಿದ್ಧಾಂತಗಳೊಡನೆ ಮಿಳಿತವಾಗಿರುತ್ತವೆ. ಹಾಗೂ ಸಿದ್ಧಾಂತವು ವಿದ್ಯಮಾನಗಳ ಒಂದು ವಿವರಣಾ ಚೌಕಟ್ಟಾಗಿ ಜ್ಞಾನವನ್ನು ಬೆಳೆಸುವ ಪ್ರಯತ್ನ ಮಾಡಿದರೆ, ಐಡಿಯಾಲಜಿಯು ತನ್ನ ಜ್ಞಾನವನ್ನು ಯಾವುದೇ ರೀತಿಯಲ್ಲಿಯೂ ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡದೆ ಹಿಂದೆ ಪಡೆದ ಪ್ರಾಥಮಿಕ ಜ್ಞಾನದ ಮೇಲೆಯೆ ಬೆಳೆಯುತ್ತಾ ಹೋಗುತ್ತದೆ. ಸಿದ್ಧಾಂತವು ಅಂತಹ ಪ್ರಾಥಮಿಕ ಜ್ಞಾನದ ಹಂತದಲ್ಲಿಯೇ ನಿಲ್ಲದೆ ಮುಂದುವರೆದು ಸಾಗುತ್ತಿದ್ದರೆ ಐಡಿಯಾಲಜಿ ನಿಂತ ನೀರಾಗಿಬಿಡುತ್ತದೆ. ಹೀಗೆ ಸ್ಥಾವರಗೊಂಡ ಐಡಿಯಾಲಜಿಯು ತನ್ನ ಮುಂದೆ ಬರುವ ಹೊಸ ಜ್ಞಾನವನ್ನು, ಸಿದ್ಧಾಂತವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಮೊದಲು ವಿರೋಧವನ್ನು ವ್ಯಕ್ತಪಡಿಸಿ, ಪರ್ಯಾಯ ಜ್ಞಾನದ ಕೊರತೆಯಿಂದಾಗಿ ಬಡಬಡಿಸಲು ಪ್ರಾರಂಭಿಸುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶವೆಂದರೆ ಕಲಬುರ್ಗಿ ಮತ್ತು ಮೀನಾಕ್ಷಿ ಬಾಳಿ, ಮೊಗಳ್ಳಿ, ಚಂದ್ರಶೇಖರ ಟಿ.ಆರ್ ರವರು,,  ಬಾಳಿಯವರು ಇನ್ನೂ ಹಲವಾರು ವಚನಗಳು ಸಿಕ್ಕಿಲ್ಲ, ಹಾಗಾಗಿ ವಚನಗಳ ಕುರಿತು ಒಟ್ಟಾರೆಯಾಗಿ ಮಾತನಾಡಲು ಬರುವುದಿಲ್ಲ ಎನ್ನುತ್ತಾರೆ. ಇದರಲ್ಲಿ ಎರಡು ಸಮಸ್ಯೆಗಳಿವೆ. ೧. ಒಂದೊಮ್ಮೆ ಅವರ ವಾದವನ್ನು ಒಪ್ಪಿದರೆ, ವಚನಗಳು ಜಾತಿವ್ಯವಸ್ಥೆಯ ವಿರುದ್ದವೇ ಮಾತನಾಡಿವೆ ಎಂದು ಹೇಗೆ ಹೇಳಲು ಸಾಧ್ಯ? ಅದೂ ಇನ್ನು ಹಲವಾರು ವಚನಗಳು ಅಲಭ್ಯವಿದ್ದಾಗ. ಅಂದರೆ ಅವರೂ ಸಹ ಅಲಭ್ಯತೆಯ ದೃಷ್ಟಿಯಲ್ಲಿ ವಚನಗಳ ಕುರಿತು ಡಂಕಿನ್ ರವರ ವಾದವನ್ನು ವಿರೋಧಿಸುವುದು ಒಂದೆಡೆ ಇರಲಿ, ಬಾಳಿಯವರೂ ಸಹ ಯಾವ ವಾದವನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರ ಪ್ರಕಾರ ವಚನಗಳು ಅಲಭ್ಯವಾಗಿದ್ದು, ಅದರ ಕುರಿತು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ೨. ಪ್ರಸ್ತುತದಲ್ಲಿ ಲಭ್ಯವಿರುವ ವಚನಗಳನ್ನು ವಿವರಿಸುವುದು ಅಥೈಸಿಕೊಳ್ಳುವುದು ಮುಖ್ಯವಾಗಿದೆ. ಇನ್ನೂ ನಮಗೆ ಸಿಕ್ಕದಿರುವ ವಚನಗಳ ಕುರಿತು ಏನೂ ಬೇಕಾದರೂ ಹೇಳಬಹುದು, ಅದನ್ನು ಸಾಬೀತು ಪಡಿಸಲಾಗಲಿ, ಅಥವಾ ವಿರೋಧಿಸಲಾಗಲಿ ಸಾಧ್ಯವೇ ಇಲ್ಲ. ಏಕೆಂದರೆ ಅವೆರಡನ್ನು ಮಾಡಲು ಪರೀಕ್ಷಿಸುವ ವಸ್ತುವೇ ದೊರಕಿಲ್ಲ.

ಒಬ್ಬ ವ್ಯಕ್ತಿ ಮನೆ ಸಂಸಾರ ಎಲ್ಲವನ್ನೂ ಬಿಟ್ಟು ಹೊರಗೆ ಹೋದನೆಂದರೆ ಅದರ ಕುರಿತು ನಾವು ನೂರು ಊಹೆಗಳನ್ನು ಮಾಡಬಹುದು. ಆದರೆ ಯಾರ ಊಹೆ ಸತ್ಯ ಎಂಬುದು ಮಾತ್ರ ಇತ್ಯರ್ಥವಾಗದ ಸಂಗತಿ. ಬಸವಣ್ಣ ಶೈವಬ್ರಾಹ್ಮಣ ಕುಟುಂಬವನ್ನು ಬಿಟ್ಟು ಬಂದು ಬೇರೆ ಪರಂಪರೆಯನ್ನು ಕಟ್ಟಿರುವುದಕ್ಕೆ ಆತ ವೈದಿಕರನ್ನು ವಿರೋಧಿಸಿದ ಎಂಬ ವಾದವೂ ಸಹ ಒಂದು ಊಹೆಯಾಗಿದೆ. ಇದು ಏಕೆ ಊಹೆ ಎಂದರೆ ಅವರ ವಚನಗಳಲ್ಲಿ ವಿರಳವಾಗಿ ವಿರೋಧವು ವ್ಯಕ್ತವಾಗುತ್ತದೆ.

ವಚನಗಳು ಕೆಲವು ಕಡೆ ಜಾತಿ, ಕುಲಗಳನ್ನು ತೆಗಳುತ್ತವೆ ಎಂಬುದೇನೋ ನಿಜ, ಆದರೆ ಅವುಗಳನ್ನು ಅರ್ಥೈಸಿಕೊಳ್ಳುವುದು ಹೇಗೆ? ವಚನಗಳು ಬಹುತೇಖವಾಗಿ ಆಧ್ಯಾತ್ಮ ಪರಂಪರೆಗೆ ಸೇರಿವೆ ಎಂಬುದರಲ್ಲಿ ಬಹುಷಃ ಯಾರಿಗೂ ಅನುಮಾನವಿರಲಿಕ್ಕಿಲ್ಲ. ಆಧ್ಯಾತ್ಮ ಪರಂಪರೆಯು ಭೌತಿಕ ಜೀವನದ ಹಂಗುಗಳನ್ನು, ಜಂಜಾಟಗಳನ್ನು ಬದಿಗಿರಿಸಿ ಅಥವಾ ಅವುಗಳಲ್ಲಿಯೇ ಉಳಿದುಕೊಂಡು ಆತ್ಮಾನುಭವ ಪಡೆಯಲು ಅಡ್ಡಿಯಾಗಿರುವ ಕಟ್ಟಲೆಗಳನ್ನು ಮುರಿಯುವುದು ಆ ಪರಂಪರೆಯ ಧ್ಯೇಯ. ಹಾಗಾಗಿ ಬಸವಣ್ಣನರಾಗಲಿ, ಅಲ್ಲಮ ಪ್ರಭುವಾಗಲಿ ಇಲ್ಲಿರುವ ಆಚಾರ ವಿಚಾರಗಳನ್ನು ಟೀಕೆ ಮಾಡಿರುವುದು ಜನರು ಕೇವಲ ತಮ್ಮ ಆಚಾರ ವಿಚಾರಗಳಲ್ಲೇ ನಿಲ್ಲದೆ ಅದಕ್ಕೂ ಮುಂದೆ ಬಂದು ಅಂದರೆ ಅವುಗಳಿಂದ ಬಿಡುಗಡೆ ಪಡೆದು ಆತ್ಮಜ್ಞಾನ ಪಡೆಯಲಿ ಎಂಬುದು ಅವರ ಆಶಯ. ಈ ನೆಲೆಯಲ್ಲಿ ಕುಲಾಚರಣೆ, ಜಾತಿ, ಆಚಾರ ಇವುಗಳನ್ನು ಟೀಕಿಸಿರುವುದು. ಇದರ ಅರ್ಥ ಜಾತಿವ್ಯವಸ್ಥೆಯನ್ನು ಟೀಕಿಸಿರುವುದು ಅಥವಾ ಜಾತಿಯನ್ನು ನಾಶಮಾಡುವ ಒಂದು ಸಾಮಾಜಿಕ ಚಳುವಳಿ ಎಂಬುದಾಗಿ ಖಂಡಿತವಾಗಿಯೂ ಅಲ್ಲ. ಮೋಕ್ಷ ಸಾಧನೆ ಅಡ್ಡಿಯಾಗಿರುವ ಭೌತಿಕ ಸಂಗತಿಗಳಿಂದ ದೂರ ಬನ್ನಿ ಎಂಬುದೇ ಅವರ ಟೀಕೆಗಳ ಆಶಯ. ಈ ಟೀಕೆಗಳನ್ನು ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ನೋಡಿದರೆ ಸಾಮಾಜಿಕ ಚಳುವಳಿ ಎಂಬಂತೆ ಕಾಣುತ್ತದೆ, ಆದ್ದರಿಂದ ಕಲಬುರ್ಗಿಯವರು ಹೇಳುವಂತೆ ವಚನ ಚಳುವಳಿಯ ಮೂಲ ಸಿದ್ಧಾಂತಕ್ಕೆ ಭಂಗ ಬರುತ್ತದೆ ಎನ್ನುವಂತೆ, ಕಲಬುರ್ಗಿ ಮತ್ತು ಅವರಂತೆ ಯೋಚಿಸುವವರು ನಿಜವಾಗಿಯೂ ವಚನಗಳ ಆಧ್ಯಾತ್ಮ ಪರಂಪರೆಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಿರುವುದು ವಿಷಾದನೀಯ. ಒಂದೊಮ್ಮೆ ವಚನಗಳು ಆಧ್ಯಾತ್ಮ ಪರಂಪರೆ ಎಂಬುದು ನಿಜವೇ ಆದ ಪಕ್ಷದಲ್ಲಿ ಮೇಲೆ ನಾನು ಹೇಳಿದ ವಿವರಣೆ ಸೂಕ್ತವಾಗುತ್ತದೆ. ಆದ್ದರಿಂದ ವಚನಗಳನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುವುದು ಇಂದಿನ ತುರ್ತಾಗಿದೆ. ಆದರೆ ಅದರ ಆಧ್ಯಾತ್ಮಿಕ ಮಹತ್ವವನ್ನು ಬದಿಗೊತ್ತಿ, ಕೇವಲ ಸಾಮಾಜಿಕ ಚಳುವಳಿಗೆಂದು ತಪ್ಪಾಗಿ ಅರ್ಥೈಸುವಲ್ಲಿ ಯಾವುದೇ ಹುರುಳಿಲ್ಲ. ಇದರ ಜೊತೆಗೆ ಕಾಡುಮೇಡುಗಳಲ್ಲಿ ಅಲೆದು, ಸಂಸಾರವನ್ನು ಸಂಪೂರ್ಣವಾಗಿ ತೊರೆದು ಆನಂದ ಪಡೆಯುವ ಅಗತ್ಯವಿಲ್ಲ, ಬದಲಿಗೆ ಅಲ್ಲೆ ಇದ್ದು ಅಲ್ಲಿರುವ ಸಂಕೋಲೆಗಳೇ ಅಂತಿಮ ಎಂದು ತಿಳಿದುಕೊಳ್ಳದೆ ಅದರಲ್ಲಿಯೇ ಮೋಕ್ಷ ಮಾರ್ಗವನ್ನು ಹುಡುಕಬಹುದು ಎಂಬುದೂ ಸಹ ಈ ಪರಂಪರೆಯ ಆಶವಾಗಿದೆ.  ಬಸವಣ್ಣ ವೇದ ನಾದದ ಕುರಿತು ಹೇಳುವಾಗ:

ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯಾ
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲವಯ್ಯಾ
ನಾದವ ನುಡಿಸಿದ ರಾವಳಂಗೆ ಅರೆಆಯುಷ್ಯವಾಯಿತ್ತು
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ

ಇಲ್ಲಿ ಸ್ಪಷ್ಟವಾಗಿ ಬಸವಣ್ಣನವರು ವೇದವನ್ನು ಟೀಕೆ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಟೀಕೆಯ ನೆಲೆಯನ್ನು ಗಮನಿಸಿ, ಶಿವ ಎಂಬುದು ಆತ್ಮಾನುಭ ಎಂದು ಪರಿಗಣಿಸಿದರೆ, ಇಲ್ಲಿ ವೇದವನ್ನು ಪಠಣ ಮಾಡುವುದರಿಂದ ಆ ಅನುಭವ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆಯೇ ಹೊರತು ವೇದ ಎಂಬುದು ಬ್ರಾಹ್ಮಣರ ಸೃಷ್ಟಿ ಆದ್ದರಿಂದ ಅದು ಅಧ್ಯಾಸಕ್ಕೆ ಅಡ್ಡಿಯಾಗಿದೆ ಎಂಬರ್ಥದಲ್ಲಿ ಅಲ್ಲ. ವೇದವೇ ಅಂತಿಮ, ಆಚಾರಗಳೇ ಅಂತಿಮ ಎಂಬ ಅಜ್ಞಾನದಲ್ಲಿ ಕೂರಬೇಡಿ ಎಂಬುದು ಮಾತಿನ ಇಂಗಿತಾರ್ಥ. ಅಂದರೆ ಇಲ್ಲಿನ ಸಂಸಾರದಲ್ಲಿರುವುದನ್ನು ಟೀಕೆ ಮಾಡಿದರೆ ಮೋಕ್ಷಕ್ಕೆ ಹಿನ್ನೆಲೆಯಾಗಿ ಮಾಡುತ್ತಿರುವ ಟೀಕೆ ಎಂದರ್ಥಷ್ಟವಷ್ಟೆ. ವಚನಗಳು ಬಹುತೇಕ ಮಟ್ಟಿಗೆ ಆಧ್ಯಾತ್ಮದ ಪರಂಪರೆಗೆ ಎಳೆದುಕೊಂಡು ಆನಂದದ ಮಾರ್ಗವನ್ನು ಹುಡುಕುವ ಸಾಧನವಾಗಿ ರಚಿಸಲ್ಪಟ್ಟಿವೆ. ಆದರೆ ನಮ್ಮ ಆಧ್ಯಾತ್ಮದ ಅಜ್ಞಾನದಿಂದ ಅವುಗಳನ್ನು ಅರ್ಥಮಾಡಿಕೊಳ್ಳಲು ಅಸಹಾಯಕರಾಗಿ ಸಾಮಾಜಿಕ ಚಳುವಳಿ, ಸ್ತ್ರೀವಾದಿ ಚಳುವಳಿ ಎಂಬಿತ್ಯಾದಿ ಲೇಬಲ್ ಗಳನ್ನು ನೀಡಿ ನಿಜವಾಗಿಯೂ ಅವುಗಳ ಮೂಲ ಆಶಯಗಳನ್ನು ಮೂಲೆಗುಂಪು ಮಾಡುವ ಹುನ್ನಾರ ಐಡಿಯಾಲಜಿಯ ಹಿಂಬಾಲಕರಿಗೆ ಇರುವಂತೆ ಕಾಣುತ್ತದೆ. ಕಲಬುರ್ಗಿಯವರು ಉಲ್ಲೇಖಿಸಿರುವ ಒಂದು ವಚನವನ್ನು ಹೇಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದನ್ನು ನೋಡಬಹುದು

ಉಂಬುದು ಊಡುವುದು ಶಿವಾಚಾರ.
ಕೊಂಬುದು ಕೊಡುವುದು ಕುಲಾಚಾರ,
ಎಂಬ ಅನಾಚಾರಿಯ ಮಾತ ಕೇಳಲಾಗದು.

ಶರಣರು ಇತರ ಜಾತಿಯವರೊಡನೆ ರಕ್ತಸಂಬಂಧ ಬೆಳೆಸಬೇಕೆಂದು ಹೇಳಿದ್ದಾರೆ ಎಂದು ಕಲಬುರ್ಗಿಯವರು ಅರ್ಥೈಸುತ್ತಾರೆ. ಆದರೆ ಇಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿರುವುದು ಶಿವಾಚಾರವಾಗಲಿ ಅಥವಾ ಕುಲಾಚಾರವಾಗಲಿ ಭೌತಿಕ ಮಿತಿಗಳಿಂದ ನೋಡಬಾರದು ಎಂಬಂರ್ಥದಲ್ಲಿ. ಶಿವಾಚಾರ ಎಂದರೆ ತಿನ್ನಿಸುವುದು ಕುಡಿಸುವುದು, ಹಾಗೂ ಕುಲಾಚಾರ ಎಂದರೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಅಥವಾ ಕೊಡುಕೊಳ್ಳೆ ವ್ಯವಹಾರ ಎಂಬ ಸೀಮಿತ ಅರ್ಥದಲ್ಲಿ ಮಾತನಾಡುವವನೆ ಅನಾಚಾರಿ ಎಂದು ತಿಳಿಸಿದ್ದಾರೆ. ಆದರೆ ನಮ್ಮ ವಿದ್ವಾಂಸರಿಗೆ ಜಾತಿವ್ಯವಸ್ಥೆಯ ಐಡಿಯಾಲಜಿ (ಇಲ್ಲಿ ಐಡಿಯಾಲಜಿ ಎಂದು ಏಕೆ ಬಳಸುತ್ತಿದ್ದೇನೆಂದರೆ ಅದು ಇಂದು ಕೇವಲ ಒಂದು ಸಿದ್ದಾಂತವಾಗಿ ಉಳಿದಿಲ್ಲ, ಬದಲಿಗೆ ಕೆಲವು ವಿದ್ವಾಂಸರಿಗೆ ಮಾತನಾಡಲು ಮಾರ್ಗದರ್ಶನವಾಗಿದೆ. ಸಿದ್ಧಾಂತದ ಸ್ವರೂಪದಲ್ಲಿದ್ದರೆ ಅದರ ವಾಸ್ತವತೆಯನ್ನು ಒರೆಗೆ ಹಚ್ಚುವ ಸಾಧ್ಯತೆ ಇರುತ್ತದೆ, ಆದರೆ ಒಮ್ಮೆ ಅದು ಐಡಿಯಾಲಜಿಯಾಗಿ ಬದಲಾದೊಡನೆ ಯಾವ ಪರೀಕ್ಷೆಯೂ ಅದರ ಹತ್ತಿರ ಸುಳಿಯುವುದಿಲ್ಲ, ಆದ್ದರಿಂದಲೆ ವಾಸ್ತವ ತಿಳಿದುಕೊಳ್ಳಿ ಎಂದೊಡನೆ, ಹಾರಾಟ,ಚೀರಾಟ ಪ್ರಾರಂಭವಾಗುವುದು) ಆಗಿರುವುದರಿಂದ ರಕ್ತಸಂಬಂಧ ಬೆಳೆಸಿ, ಶಿವಾಚಾರ ಎಂದರೆ ಜೊತೆ ಊಟಮಾಡುವುದು ಎಂಬ ಬಾಲಿಶ ನಿರ್ಣಯಕ್ಕೆ ಬರುವಂತೆ ವಿದ್ವಾಂಸರಿಗೆ ಮಾಡಿದೆ.

1 ಟಿಪ್ಪಣಿ Post a comment
  1. ಏಪ್ರಿಲ್ 8 2013

    ನಿಮ್ಮ ವಚನಗಳ ವ್ಯಾಖ್ಯಾನ/ಅರ್ಥ ವಿವರಣೆ ತುಂಬಾ ಹಿಡಿಸಿತು. ಬಹಳ ತಾರ್ಕಿಕವಾಗಿದೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments