ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 15, 2013

17

ಸಾಹಿತ್ಯ ಪರಂಪರೆಯ ಅರಿವಿಲ್ಲದ ’ಎಲ್ಲರ ಕನ್ನಡ’

by ನಿಲುಮೆ

ಡಾ. ಮಾಧವ ಪೆರಾಜೆ ಅವರ ಲೇಖನಕ್ಕೊಂದು ಪೂರಕ ಪ್ರತಿಕ್ರಿಯೆ

– ಡಾ. ಮೋಹನ ಕುಂಟಾರ್

imagesಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣದ ಮೂಲಕ ಡಿ.ಎನ್.ಶಂಕರಭಟ್ಟರು ಕನ್ನಡ ಬರವಣಿಗೆಯಲ್ಲಿ ಹೊಸ ಕ್ರಾಂತಿಯನ್ನು ಮಾಡಲು ಮುಂದಾಗಿದ್ದಾರೆ. ಅವರ ಮಾರ್ಗದಲ್ಲೇ ಮುಂದುವರಿಯುವ ಅವರ ಶಿಷ್ಯವರ್ಗ ಅದನ್ನೇ ಸಮರ್ಥಿಸಿ ಕೃತಿರೂಪಕ್ಕೆ ಇಳಿಸುತ್ತಿದೆ. ಒಂದು ರೀತಿಯಲ್ಲಿ ಇದು ಅತಿಬುದ್ಧಿವಂತಿಕೆಯ ಪ್ರದರ್ಶನವಲ್ಲದೇ ಬೇರೇನೂ ಅಲ್ಲ.

ಕನ್ನಡಕ್ಕೆ ಭಾಷಿಕವಾಗಿಯೂ ಸಾಹಿತ್ಯಿಕವಾಗಿಯೂ ಗೌರವ ತರುವ ಸುದೀರ್ಘ ಪರಂಪರೆಯಿದೆ. ಅದರ ಮೂಲಕವೇ ಕನ್ನಡ ಪರಂಪರೆ ವಿಶಾಲವಾಗಿ ಅಷ್ಟೆ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿರುವುದನ್ನು ಗುರುತಿಸಲಾಗುತ್ತಿದೆ. ಪಂಪ, ಕುಮಾರವ್ಯಾಸಾದಿಗಳು ಬರೆಯುವ ಕಾಲಕ್ಕೆ ಮಾತನಾಡುವ ಭಾಷೆ ಬಳಕೆಯಲ್ಲಿತ್ತು. ಮಾಸ್ತಿ, ಕಾರಂತ, ಕುವೆಂಪು ಅವರ ಕಾಲದಲ್ಲಿಯೂ ಇತ್ತು. ಅವರೆಲ್ಲ ಬರವಣಿಗೆಯ ಭಾಷೆಯೊಂದನ್ನು ಕನ್ನಡದ ಮೂಲಕ ಕಟ್ಟಿಕೊಟ್ಟು ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಇವರೆಲ್ಲರ ಗ್ರಾಂಥಿಕ ಭಾಷೆಗೆ ಆಡುನುಡಿಯ ಸೊಗಡೂ ಪೂರಕವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿ ಕನ್ನಡದ ಮಾತಿನ ಭಾಷೆಯಲ್ಲಿ ಮಹಾಪ್ರಾಣಾಕ್ಷರಗಳಿದ್ದುವು, ಋಕಾರಗಳೂ ಇದ್ದುವು. ಉಚ್ಚಾರದಲ್ಲಿ ಅದನ್ನು ಸ್ಪಷ್ಟವಾಗಿ ಬಳಸದೆ ಇದ್ದಾಗಲೂ ಆ ವ್ಯತ್ಯಾಸವನ್ನು ನಿರಂತರವಾಗಿ ಕನ್ನಡ ಪರಂಪರೆ ಗ್ರಹಿಸುತ್ತಾ ಬಂದಿದೆ. ಅದಕ್ಕಾಗಿ ಕನ್ನಡ ಭಾಷೆಯ ಲಿಖಿತ ಪರಂಪರೆಯ 1500 ವರ್ಷಗಳ ಸುದೀರ್ಘ ಇತಿಹಾಸದ ನಡುವೆ ಆ ಅಕ್ಷರಗಳೆಲ್ಲ ಉಳಿದುಕೊಂಡು ಬಂದಿವೆ. ಬರಹ ಭಾಷೆ ಎನ್ನುವುದು ಭಾಷಾಭಿವ್ಯಕ್ತಿಯ ಒಂದು ಸಾಧ್ಯತೆ ಮಾತ್ರ. ಅದೇ ಅಂತಿಮ ಅಲ್ಲ. ಬಳಕೆಯ ಉಚ್ಚಾರವೆಲ್ಲ ಬರಹದ ಭಾಷೆಯಲ್ಲಿ ಬರಬೇಕೆಂಬ ಹಟ ಸಲ್ಲದು. ಬರವಣಿಗೆಯ ಭಾಷೆಗೆ ಒಂದು ಮಿತಿ ಇದೆ. ಒಂದು ಶಿಸ್ತು ಇದೆ. ಆ ಶಿಸ್ತು ಮಾತಿನ ಭಾಷೆಯಿಂದಲೇ ರೂಪುಗೊಂಡುದು. ಮಾತಿನ ಭಾಷೆಯೇ ಅಂತಿಮ. ಅವುಗಳಲ್ಲಿ ವ್ಯತ್ಯಸ್ಥ ರೂಪಗಳನ್ನು ಅಂಗೀಕರಿಸಿದ ಕಾರಣಕ್ಕೆ ಬರಹದಲ್ಲಿ ವಿಭಿನ್ನ ಸಂಕೇತಗಳು ಬಳಕೆಯಾಗಿವೆ. ಈ ಸಂಕೇತಗಳೇ ಅಲ್ಪಪ್ರಾಣಗಳೆಂದೂ, ಮಹಾಪ್ರಾಣಗಳೆಂದೂ ದಾಖಲಾಗಿವೆ. ಈಗ ಅವು ಕನ್ನಡದ ಬರಹ ಭಾಷೆಯ ಅವಿಭಾಜ್ಯ ಸಂಕೇತಗಳು. ಆಗಾಗ ಕವಿಗಳು ಅಚ್ಚಕನ್ನಡದ ಬಳಕೆಗಾಗಿ ಶ್ರಮಿಸಿದ್ದುಂಟು. ಆಂಡಯ್ಯನಂತಹ ಪ್ರಾಚೀನರು ಹಾಗೂ ಕೊಳಂಬೆ ಪುಟ್ಟಣ್ಣಗೌಡರಂಥ ಆಧುನಿಕರನ್ನು ಇಲ್ಲಿ ಹೆಸರಿಸಬಹುದು. ಆದರೆ ಅವರ ಪ್ರಯೋಗಗಳು ವಿಫಲವಾಗಿ ಅದನ್ನು ಮೀರಿದ ಪ್ರಯೋಗಗಳೇ ಕನ್ನಡದಲ್ಲಿ ದಾಖಲಾದವು.

ಪ್ರಾಚೀನ ಕನ್ನಡ ವ್ಯಾಕರಣವೆಲ್ಲ ಸಂಸ್ಕೃತಾವಲಂಬಿಯಾದುದು ಸರಿ. ಅದನ್ನು ಬಿಟ್ಟರೆ ಪ್ರಾಚೀನ ಪ್ರಯೋಗಶೀಲ ಕವಿಗಳಿಗೆ ಬೇರೆ ದಾರಿಯಿರಲಿಲ್ಲ. ಆ ಮೂಲಕ ಅವರು ಭಾಷಾ ಸಂಪತ್ತನ್ನು ವಿಸ್ತರಿಸಿ ಕನ್ನಡದ ಮಹತ್ವವನ್ನು ಹೆಚ್ಚಿಸಿದ್ದಾರೆ. ಅಂತಹ ಪ್ರಯೋಗಗಳ ಮೂಲಕ ಅಂದು ಅವರು ಅದನ್ನು ಮಾಡದೇ ಇರುತ್ತಿದ್ದರೆ ನಾವು ಇಂದು ಏನನ್ನು ನಮ್ಮ ಕನ್ನಡದ ಭಾಷಾ ಪರಂಪರೆ ಎಂದು ಗುರುತಿಸಬೇಕಾಗಿತ್ತು. ಕೇಶಿರಾಜನ ವ್ಯಾಕರಣವೂ ಅಪ್ರಸ್ತುತ ಎನ್ನುವ ವಿದ್ವಾಂಸರು ಹಳಗನ್ನಡದ ಕಾವ್ಯವನ್ನು ಓದುವುದು ಅಪ್ರಸ್ತುತ ಎಂದಾಯಿತಲ್ಲವೇ! ಮಾಧವ ಪೆರಾಜೆ ಅವರು ಗುರುತಿಸುವಂತೆ “ಈಗಲೂ ಕನ್ನಡ ಕಾವ್ಯಗಳನ್ನು ಅಧ್ಯಯನ ಮಾಡುವವರಿಗೆ ಅವುಗಳ ಉಪಯೋಗವಿದೆ.” ಕನ್ನಡ ಕಾವ್ಯಗಳನ್ನು ಓದದೇ ಇರುತ್ತಿದ್ದರೆ. ಕನ್ನಡ ಈ ಮಟ್ಟಕ್ಕೆ ಬೆಳೆಯುತ್ತಿತ್ತೇ ಎಂಬುದನ್ನು ಈ ಭಾಷಾ ವಿದ್ವಾಂಸರು ದಯಮಾಡಿ ಯೋಚಿಸಲಿ. ಹಾಗಿದ್ದರೆ ಮುಂದಿನ ಕನ್ನಡ ತಲೆಮಾರು ಮಹಾಪ್ರಾಣಾಕ್ಷರಗಳನ್ನು ಬಿಟ್ಟು ಕಲಿತರೆ ಕನ್ನಡದ ಅಮೂಲ್ಯ ಸಂಪತ್ತಿನ ಓದಿನಿಂದ ವಂಚಿತರಾಗಲಾರರೇ? ಇನ್ನು ಮುಂದಿನ ತಲೆಮಾರು ಡಿ.ಎನ್.ಶಂಕರಭಟ್ಟರ ಬರವಣಿಗೆಯ ವಿಧಾನವನ್ನು ಅನುಸರಿಸಿ ಕೃತಿಗಳನ್ನು ರಚಿಸಿ, ಅದನ್ನು ಓದುವಂತಾಗಲಿ ಎಂಬ ನಿರ್ಧಾರವೇ? ಇಂತಹ ಅತೀ ಬುದ್ಧಿವಂತಿಕೆಯ ದುರಾಲೋಚನೆ ಕನ್ನಡಕ್ಕೆ ಒಳಿತನ್ನು ಮಾಡಲಾರದು. ಇವರೆಲ್ಲ ಪಂಪ, ಕುಮಾರವ್ಯಾಸರ ಕಾವ್ಯವನ್ನು ಮತ್ತೆ ತಿದ್ದಿ ಬರೆಯಬೇಕೆಂಬ ಸಲಹೆ ನೀಡಬಲ್ಲಷ್ಟು ಅಗಾಧ ಪಾಂಡಿತ್ಯವುಳ್ಳವರು ಎಂದೆನಿಸುತ್ತದೆ.

ಪೆರಾಜೆ ಅವರು ಲೇಖನದಲ್ಲಿ ಗುರುತಿಸುವಂತೆ ಕ್ರಿಯೆ ಬೇರೆ ಕೆಲಸ ಬೇರೆ. ಕ್ರಿಯಾಪದ ಕೆಲಸ ಪದವಾಗಲಾರದು. ಊಟ ಮಾಡುವುದನ್ನು ಕೆಲಸ ಎಂದು ಹೇಳುವುದಿಲ್ಲ. ಆದರೆ ಅಲ್ಲಿ ಕ್ರಿಯೆ ಇದೆ. ಮಾಡು ಎನ್ನುವುದು ಕ್ರಿಯೆಯನ್ನು ನಿರ್ದೇಶಿಸುತ್ತದೆ. ‘ಕ್ರಿಯಾಪದ’ ‘ನಾಮಪದ’ ಇವೆಲ್ಲ ನಿರ್ದಿಷ್ಟ ವ್ಯಾಕರಣ ಪರಿಭಾಷೆಗಳು. ಹಾಗೆಯೇ ಸಾಮಾಜಿಕ ಪರಿಭಾಷೆಗಳನ್ನು ಜನಸಾಮಾನ್ಯರು ಬಳಸುತ್ತಿಲ್ಲವೇ? ಅವುಗಳೆಲ್ಲ ಸಂಸ್ಕೃತದ ಹಿನ್ನೆಲೆಯಿಂದ ಬಂದವುಗಳಲ್ಲವೇ? ಅವುಗಳನ್ನು ಕನ್ನಡದ ಪರ್ಯಾಯ ಪದಗಳ ಮೂಲಕ ನಿರ್ದೇಶಿಸುವುದು ತಪ್ಪಲ್ಲ. ಆದರೆ ಕನ್ನಡ ಕವಿ ಪ್ರಯೋಗಗಳ ಬಳಕೆಯನ್ನು ನಿಷೇಧಿಸುವುದು ತಪ್ಪು. ಇಂದು ಕನ್ನಡ ಪಾಠ ಕಲಿಯುವ ವಿದ್ಯಾರ್ಥಿಗಳನ್ನು ತಪ್ಪುದಾರಿಗೆಳೆಯುವಲ್ಲಿ ಇಂತಹ ಅಪರ ಆಲೋಚನೆಗಳು ನೆರವಾಗಬಲ್ಲವು. ಆದರೆ ಕನ್ನಡದ ಭಾಷಾಭಿವೃದ್ಧಿಗೆ ವಿಮುಖವಾದ ಆಲೋಚನೆ ಮಾಡುವವರನ್ನು ನಿರ್ಲಕ್ಷ್ಯಿಸುವುದು ಮಾತ್ರ ವಿಹಿತವಾದುದು. ಮಾಧವ ಪೆರಾಜೆ ಅವರ ಲೇಖನದ ನಿಲುವನ್ನು ಸಮರ್ಥಿಸುವುದೂ ಅಗತ್ಯ.

ಜನರು ಮಾತನಾಡುವ ಭಾಷೆಯನ್ನು ಉಪಯೋಗಿಸುವುದೆಂದರೆ ಗ್ರಾಮ್ಯವನ್ನು, ವ್ಯಾಕರಣವಿಹೀನವಾದುದನ್ನು ಉಪಯೋಗಿಸಬೇಕೆ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಅದಕ್ಕೆ ಉತ್ತರವಾಗಿ ಬಿ.ಎಂ.ಶ್ರೀ ಅವರ ಮಾತನ್ನು ಇಲ್ಲಿ ಉಲ್ಲೇಖಿಸಬಹುದು.”ಬಹುಕಾಲದಿಂದಲೂ ಬರೆದು ಬರೆದು ಒಂದು ಕ್ರಮಕ್ಕೆ ಬಂದಿರುವ ಗ್ರಂಥ ಭಾಷೆ ಇರುವಾಗ, ಈಗಿನ ಗ್ರಂಥಕರ್ತರು ಅದನ್ನು ಧಿಕ್ಕಾರ ಮಾಡುವುದಕ್ಕೆ ಆಗುವುದಿಲ್ಲ. ಅದರ ಮೇಲೂ ದೃಷ್ಟಿಯಿರಲಿ, ಹೊಸ ಭಾಷೆಯ ಅಕ್ರಮ, ಅಪರೂಪವನ್ನೆಲ್ಲಾ ಅದರ ಮೇಲಿನ ಗಮನದಿಂದ ಒಂದು ಕ್ರಮಕ್ಕೆ ತರೋಣ. ಭಾಷೆಯನ್ನು ಸುಲಭ ಮಾಡುತ್ತೇವೆಂದು, ಅಬದ್ಧ ಮಾಡಬಾರದು. ಗ್ರಾಮ್ಯವನ್ನು ದೂರವೇ ನಿಲ್ಲಿಸಿ, ಭಾಷೆ ಶುದ್ಧವಾಗಿ ಬಿಗಿಯೂ ಕಟ್ಟೂ ಇರುವಂತೆ ಜಾಗ್ರತೆಯಿಂದ ನೋಡಿಕೊಳ್ಳಬೇಕು. ರೂಢಿ ಭಾಷೆಯನ್ನೇ ಆಧಾರವಾಗಿಟ್ಟುಕೊಳ್ಳುವುದು.. ಯಾವಾಗಲೂ ಜನಸಾಮಾನ್ಯಕ್ಕೇ ಬರೆಯುತ್ತಿದ್ದೇನೆಂತಲೇ ಭಾವಿಸುತ್ತಾ ಜನರು ಆಡುವ ಭಾಷೆಯ ಛಾಯೆಯನ್ನೇ ಹೆಗ್ಗುರುತಾಗಿಟ್ಟುಕೊಳ್ಳಬೇಕು” ಎಂಬ ಮಾತಿನಲ್ಲಿ ಗ್ರಂಥಭಾಷೆಯು ಜನಸಾಮಾನ್ಯರು ಆಡುವ ಭಾಷೆಯ ಸಂಸ್ಕಾರಗೊಂಡ ರೂಪವೆಂದು ಇದರಿಂದ ಸ್ಪಷ್ಟವಾಗುತ್ತದೆ. ಬಿ.ಎಂ.ಶ್ರೀ ಅವರು 20ನೆಯ ಶತಮಾನದ ಆರಂಭದಲ್ಲಿ ಹೇಳಿದ ಈ ಮಾತು ಇವತ್ತಿಗೂ ಪ್ರಸ್ತುತವೆನಿಸುತ್ತದೆ.

ಇಂದ
ವಿಳಾಸ
ಡಾ. ಮೋಹನ ಕುಂಟಾರ್
ಪ್ರಾಧ್ಯಾಪಕ
ಭಾಷಾಂತರ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ 583276, ಹೊಸಪೇಟೆ

17 ಟಿಪ್ಪಣಿಗಳು Post a comment
 1. ಏಪ್ರಿಲ್ 15 2013

  ಕನ್ನಡವನ್ನು ಸರಳೀಕರಿಸುವುದಕ್ಕಿಂತ ಮತ್ತಿನ್ನೇನೋ ಉದ್ದೇಶವೇ ಈ “ಎಲ್ಲರ ಕನ್ನಡ”ದಲ್ಲಿ ಪ್ರಮುಖವಾಗಿರುವಂತಿದೆ.
  ಕನ್ನಡ ಪ್ರೀತಿಗಿಂತ ಸಂಸ್ಕೃತ ಧ್ವೇಷವೇ ಇದರ ಇಂದನವಾಗಿದೆಯೇನೋ ಎನ್ನುವ ಅನುಮಾನ ಹುಟ್ಟುತ್ತಿದೆ.
  ಮತ್ತು ಈ ಸಂಸ್ಕೃತ ಧ್ವೇಷದ ಹಿಂದಿರುವುದು ಮತ್ತದೇ ಬ್ರಾಹ್ಮಣ ಧ್ವೇಷ!!

  ಡಿ.ಎನ್.ಶಂಕರ ಭಟ್ಟರ ಉದ್ದೇಶದಲ್ಲಿ ಪ್ರಾಮಾಣಿಕತೆ ಇರಬಹುದು.
  ಆದರೆ, ಅವರ ಹೆಸರನ್ನು ಮುಂದಿಟ್ಟುಕೊಂಡು ಹೊರಟಿರುವವರೆಲ್ಲಾ ಅದೇ ಉದ್ದೇಶ ಹೊಂದಿದ್ದಾರೆ ಎಂದು ನನಗನ್ನಿಸುತ್ತಿಲ್ಲ.
  ಕೆಲವರ ಉದ್ದೇಶ ನಿಜಕ್ಕೂ ಕನ್ನಡದ ಉದ್ದಾರವೇ ಆಗಿದೆ. ಆದರೆ, ಇನ್ನು ಕೆಲವರಿಗೆ ಕನ್ನಡದ ಉದ್ದಾರಕ್ಕಿಂತ, ಸಂಸ್ಕೃತದ ನಾಶವೇ ಉದ್ದೇಶವಾಗಿದೆ!

  ಈ ರೀತಿಯ ಧ್ವೇಷದ “agenda” ಗಳನ್ನು ಮುಂದು ಮಾಡಿಕೊಂಡು ವರ್ಗಗಳನ್ನು ಹುಟ್ಟುಹಾಕಿ, ಸಂಘರ್ಷವನ್ನು ಹುಟ್ಟಿಸಿ, ಅದರ ಆಧಾರದ ಮೇಲೆ ಬೆಳೆಯುವುದು ಕಮ್ಯುನಿಸ್ಟ್ ವಿಚಾರಧಾರೆಯ ರೀತಿ ಎನ್ನುವುದು ಜಗತ್ತಿನೆಲ್ಲೆಡೆ ಅನುಭವಕ್ಕೆ ಬಂದಿರುವ ಸಂಗತಿ.
  ಇಲ್ಲಿಯೂ ಅದೇ ಶಕ್ತಿ ಕೆಲಸ ಮಾಡುತ್ತಿರುವುದು ಪರೋಕ್ಷವಾಗಿ ಕಾಣುತ್ತಿದೆ.
  ಕಮ್ಯುನಿಸ್ಟರಿಗೆ “ರಾಷ್ಟ್ರವಾದ”, “ಸಂಸ್ಕೃತಿ”, “ಧರ್ಮ”ಗಳಲ್ಲಿ ನಂಬಿಕೆಯಿಲ್ಲ. ಹೀಗಾಗಿ, ಅದು ಸದಾ ಆ ಸಂಗತಿಗಳ ವಿರುದ್ಧವೇ ಕೆಲಸ ಮಾಡುತ್ತದೆ.
  ಆದರೆ, ಅವರ ಹೋರಾಟಕ್ಕೆ ಜಗತ್ತಿನ ಯಾವ ಸ್ಥಳದಲ್ಲೂ ಗೆಲುವು ಸಿಕ್ಕಿಲ್ಲ. ಏಕೆಂದರೆ, ಅದು ಸತ್ಯದ ದಾರಿಯಲ್ಲ.

  ಕನ್ನಡದ ವಿಷಯದಲ್ಲಿಯೂ ಅವರ “ಬೇಳೆ” ಬೇಯುವುದಿಲ್ಲ.

  ಉತ್ತರ
  • ಸೋಮಶೇಖರ
   ಏಪ್ರಿಲ್ 18 2013

   ಬ್ರಾಮಣರ ಬಾಸೆ ನಾವ್ಯಾಕ್ಮಾತಾಡ್ಬೇಕು? ಅದಿಕೆ ಸಂಕ್ರನ್ನ ಬಟ್ರು ಕನಡ ಎತ್ಕಂಬದೀವಿ ಅಂದಂಗೆಯ ಸಂಕರಬಟ್ರು ಬಿರಾಮಣರಾಲ್ವಾ? ಅಲ್ವ? ಮತ್ಯಾಕವಯ್ಯ ಬತ್ತ ಅಂತ ಎಸರು ಮಡಿಕ್ಕಂಡವ್ನೆ?

   ಉತ್ತರ
   • ಬಸವಯ್ಯ
    ಏಪ್ರಿಲ್ 18 2013

    “ಅಂದಂಗೆಯ ಸಂಕರಬಟ್ರು ಬಿರಾಮಣರಾಲ್ವಾ? ಅಲ್ವ? ಮತ್ಯಾಕವಯ್ಯ ಬತ್ತ ಅಂತ ಎಸರು ಮಡಿಕ್ಕಂಡವ್ನೆ?”

    ಸಧ್ಯಕ್ಕೆ ‘ಬತ್ತ’ ಅಲ್ಲ ‘ಬಟ್ಟ’ ಅಂತ ಇಟ್ಕೊಂಡವ್ರೆ. ನಿಮಗೆ ಉಲಿಲಿಕ್ಕೆ ಇನ್ನೂ ಕಷ್ಟ ಆಗುತ್ತೆ ಅಂದ್ರೆ ನೀವೇಳ್ದಂಗೆ ‘ಬತ್ತ’ ಮಾಡ್ಕೊತಾರೆ. ಅದೂ ಕಷ್ಟ ಅನಿಸುತ್ತೆ ಅಂದ್ರೆ ‘ಬತ’ ಮಾಡ್ಕೊತಾರೆ. ಇನ್ನೂ ನಿಮ್ಮ ನಾಲಿಗೆ ತಡವರಿಸಿದ್ರೆ ಬ.ಶಂಕರ ಅಥವಾ ಬ.ಸಂಕರ ಅಂತ ಮಾಡ್ಕೊತಾರೆ. ಕಾಳಜಿ ಬಿಡಿ..ಸಂತೋಷವಾಗಿ ‘ಓಲಿದಂತೆ ಉಲಿಯಿರಿ’ ತಾವು! 🙂

    ಉತ್ತರ
    • ಏಪ್ರಿಲ್ 18 2013

     ಬಲ್ಚಂದಾಗ್ ಹೇಳಿದ್ರಿ ಬಸ್ವಯ್ನವ್ರೆ!

     ಕೆಲುವ್ರಿಗೆ ರ ಹೇಳುಕ್ಕೂ ಕಷ್ಟಾಂತೆ. ಅವ್ರುಗೆ ರ ಬದ್ಲು ಲ ಬಂದ್ಬುಡುತ್ತೆ.
     ಅಂತಾವ್ರು ಹೀಗೆ ಹೇಳ್ಕಳ್ಲಿ:
     “ಬ.ಸಂಕಲ ಅಂತ ಮಾಡ್ಕೋತಾಲೆ…..ಓಲಿದಂತೆ ಉಲಿಯಿಲಿ ತಾವು”.

     ಇನ್ನು ಕೆಲ್ವು ಕಡೆ ಹ ಅಕ್ಷರಕ್ಕೆ ಅ ಅಂತಾನೂ, ಅ ಅಕ್ಷರಕ್ಕೆ ಹ ಅಂತಾನೂ ಹೇಳ್ತಿರ್ತಾರೆ.
     ಆವರು ಬೇಕಾದ್ರೆ ಹೀಗೆ ಹೇಳ್ಕೊಳ್ಲಿ:
     “ಹಿಂದು ಉಗಾದಿ ಅಬ್ಬ.ಅಬ್ಬಗಳು ಬಂದವೆದ್ರೆ ನಮ್ಮ ಎಣ್ಣು ಮಕ್ಕಳಿಗೆ ಇಗ್ಗೋ ಇಗ್ಗು. ನಮ್ಮ ಕನ್ನಡದ ಎಣ್ಣು ಮಕ್ಕಳು ಹಾದರ, ಹಾತಿಥ್ಯಕ್ಕೆ ಎಸರುವಾಸಿಯಾದವರು”

     ಉತ್ತರ
 2. ಕುಮಾರರೇ,
  ಅದು ಧ್ವೇಷ ಅಲ್ಲಾ… ದ್ವೇಷ… ಅದನ್ನು ದ್ವೇಶ ಅಂತಾನೂ ಬರೀಬೋದು. ಯಾಕಂದ್ರೆ ಕನ್ನಡಿಗರ ಷ ಮತ್ತು ಶಕಾರಕ್ಕೆ ಉಲಿಕೆಯಲ್ಲಿ ಬೇರೆತನವಿಲ್ಲ! ಅಂದಂಗೆ ನಿಮ್ಮಂತ ವಿದ್ಯಾವಂತ, ಜ್ಞಾನಿ ಕನ್ನಡಿಗನಿಗೇ ಈ ಮಹಾಪ್ರಾಣ ಗೊಂದಲ ಹುಟ್ಟುಹಾಕಿದೆ ಎನ್ನುವುದನ್ನು ತಾಬ್ವು ಒಪ್ಪುತ್ತೀರಷ್ಟೆ!! ಇನ್ನು ಸಾಮಾನ್ಯ ಕನ್ನಡಿಗರ ಪಾಡೇನು ಸ್ವಾಮಿ? ನೀವು ಎಲ್ಲ ಕನ್ನಡಿಗರ ನಾಲಿಗೆ ತಿಕ್ಕಿ ಮಹಾಪ್ರಾಣ ಹೊರಳುಸುತ್ತೀರಾ? ಅಥವಾ ಎಲ್ಲೆಲ್ಲಿ ಕುಂಡಿ ಸೀಳಬೇಕು, ಎಲ್ಲಿ ಸೀಳಬಾರದು ಅಂತಾ ಹೇಗೆ ಹೇಳಿಕೊಡ್ತೀರಾ ಯೋಚಿಸಿ…

  ಉತ್ತರ
  • ಏಪ್ರಿಲ್ 15 2013

   ನಡೆಯುವವನು ಎಡವುತ್ತಾನೆ. ನಡೆಯುವವನು ಮಾತ್ರ ಎಡವಬಲ್ಲ!
   ಎಡವಿದೆನೆಂದು ನಡೆಯುವುದನ್ನೇ ನಿಲ್ಲಿಸುವವನು ಮುಂದುವರೆಯಲಾರ.
   ಅಥವಾ ಈ ದಾರಿಯಲ್ಲಿ ಎಡವಿತೆಂದು ಬೇರೊಂದು ದಾರಿ ಹಿಡಿಯುವವನು ಗುರಿಯನ್ನು ಮುಟ್ಟಲಾರ.

   ತಪ್ಪಾಗಿದೆ. ಅದು ನನ್ನ ಅರಿವಿನ ಕೊರತೆಯೇ ಇರಬಹುದು, ಇಲ್ಲ ಕೀಲಿಮಣೆಯ ತೊಂದರೆಯೇ ಇರಬಹುದು. ತಿದ್ದಿಕೊಂಡರಾಯಿತು. ತಪ್ಪನ್ನು ತಿದ್ದಿಕೊಂಡು ಸರಿಮಾಡಿಕೊಳ್ಳುವುದು ಕಲಿಯುವ ರೀತಿ.
   ನನ್ನ ತಪ್ಪಿಗೆ ಭಾಷೆಯನ್ನೇ ದೂರಿ, ಭಾಷೆಯನ್ನೇ ತಿದ್ದಿಬಿಡುತ್ತೇನೆ ಎಂದರೆ……!!

   ಕಲಿಯುವವನು ಮಾತ್ರ ತಪ್ಪು ಮಾಡಬಲ್ಲ. ತಪ್ಪು ಮಾಡದವನು ಕಲಿಯಲಾರ. ತಪ್ಪಿಗೆ ಹೆದರುವವನೂ ಕಲಿಯುವುದರಲ್ಲಿ ಹಿಂದುಳಿಯುತ್ತಾನೆ. ತಪ್ಪಾಗಲು ಅರಿವಿನ ಕೊರತೆ ಇರಬಹುದು, ಅಭ್ಯಾಸದ ಕೊರತೆ ಇರಬಹುದು, ಅನ್ಯಮನಸ್ಕತೆ ಇರಬಹುದು.
   ಮುಂದೆ ತಪ್ಪಾಗಬಾರದೆಂದರೆ ಹೆಚ್ಚಿನ ಅಭ್ಯಾಸ ಬೇಕು, ಹೆಚ್ಚು ಏಕಾಗ್ರತೆ ಬೇಕು, ಅಷ್ಟೇ.

   ಮಗು ಎಡವುತ್ತದೆ, ಬೀಳುತ್ತದೆ. ದೊಡ್ಡವರು ಅದಕ್ಕೆ ಹೆಚ್ಚು ಆತ್ಮವಿಶ್ವಾಸ ನೀಡುತ್ತಾರೆ, ಕೈಆಸರೆ ನೀಡುತ್ತಾರೆ. ನಿಧಾನವಾಗಿ ಅದು ನಡೆಯುವುದನ್ನು ಕಲಿಯುತ್ತದೆ.
   ಮಗು ತೊದಲುತ್ತದೆ. “ಅದು ತೊದಲುತ್ತದೆ, ಹಾಗಾಗಿ ತೊದಲುವುದೇ ಸ್ವಾಭಾವಿಕವಾದ ಭಾಶೆ. ಅದರ ಬಾಯಲ್ಲಿ ಕನ್ನಡ ಹುಟ್ಟುತ್ತಿಲ್ಲ. ಎಷ್ಟು ಮಕ್ಕಳಿಗೆ ಕನ್ನಡ ಕಲಿಸುವ ತೊಂದರೆ ತೆಗೆದುಕೊಳ್ಳುವುದು. ಎಲ್ಲ ಮಕ್ಕಳಿಗೂ ಕನ್ನಡ ಕಲಿಸುವುದು ಸಾಧ್ಯವಿಲ್ಲದ ಮಾತು. ಕನ್ನಡ ಭಾಷೆಯನ್ನೇ ಬದಲಾಯಿಸಿ, ತೊದಲು ನುಡಿಗಳನ್ನೇ ಅಧಿಕೃತ ಕನ್ನಡ ಮಾಡಿಬಿಡೋಣ”, ಎಂದುಬಿಟ್ಟರೆ……????

   ಉತ್ತರ
   • ಏಪ್ರಿಲ್ 16 2013

    well said…ಇಂದು ’ಏಳು’ ಅನ್ನಲು ’ಯೋಳು’ ಅನ್ನಬಹುದು. ಒಂದು ವೇಳೆ ’ಯೋಳು’ ಅಂತಲೇ ಅದನ್ನು ಬದಲಾಯಿಸಿದರೆ, ಸ್ವಲ್ಪ ವರ್ಷದ ನಂತರ ಜನ ’ಹೋಲು’ ಎಂದು ಉಚ್ಛರಿಸಬಹುದು. ಆಗ ಕನ್ನಡವನ್ನು ಮತ್ತೆ ಬದಲಾಯಿಸಬೇಕು. ಹೀಗೆ ಭಾಷೆ ಬದಲಾಗುತ್ತಲೇ ಹೊಗುತ್ತದೆ. ಕನ್ನಡದ ಐಡೆಂಟಿಟಿ ಯೇ ಬದಲಾಗುವದು. ಆಗ ಇಂದಿನ ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಯವರು ಅರ್ಥ ಮಾಡಿಕೊಳ್ಳಲಾರರು. ಹಾಗೆಯೇ ಒಂದೊಂದು ಪೀಳಿಗೆಯ ಕನ್ನಡಕ್ಕೆ communication ಇಲ್ಲದಿದ್ದರೆ, ಆ ಭಾಷೆಯಿಂದ ಏನು ಪ್ರಯೋಜನ? ಭಾಷೆ ಕೇವಲ ಮಾತನಾಡುವ ಮಾಧ್ಯಮವಲ್ಲ. ಒಂದು ಕಾಲಘಟ್ಟದ ಸಂಸ್ಕೃತಿ, ಸಾಹಿತ್ಯ, ಇತಿಹಾಸವನ್ನು ಪರಿಚಯಿಸುವ ಕೋಶವೂ ಹೌದು.

    ಉತ್ತರ
    • ಏಪ್ರಿಲ್ 16 2013

     > ಕನ್ನಡದ ಐಡೆಂಟಿಟಿ ಯೇ ಬದಲಾಗುವದು.
     > ಆಗ ಇಂದಿನ ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಯವರು ಅರ್ಥ ಮಾಡಿಕೊಳ್ಳಲಾರರು.
     > ಭಾಷೆ ಕೇವಲ ಮಾತನಾಡುವ ಮಾಧ್ಯಮವಲ್ಲ.
     > ಒಂದು ಕಾಲಘಟ್ಟದ ಸಂಸ್ಕೃತಿ, ಸಾಹಿತ್ಯ, ಇತಿಹಾಸವನ್ನು ಪರಿಚಯಿಸುವ ಕೋಶವೂ ಹೌದು.
     ಸರಿಯಾಗಿ ಹೇಳಿದಿರೆ ಸರ್.
     ಅದಕ್ಕೇ ನಾನು ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಚರ್ಚೆಯಲ್ಲಿ ಸಲಹೆ ನೀಡಿದ್ದು – “ಅಗತ್ಯವಿದ್ದರೆ ಹೊಸ ಭಾಷೆಯನ್ನೇ ಹುಟ್ಟುಹಾಕಿರಿ”.
     ಸಹಸ್ರಾರು ವರ್ಷಗಳಿಂದ ಬೆಳೆದು ಬಂದಿರುವ ಭಾಷೆ ಕನ್ನಡ. ಅದಕ್ಕೆ ಅದರದೇ ಆದ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಗಳಿವೆ. ನೀವು ಕನ್ನಡದ ಲಿಪಿ, ವ್ಯಾಕರಣ ಮತ್ತು ಪದಗಳನ್ನು ಬದಲಾಯಿಸುವುದರ ಮೂಲಕ ಕನ್ನಡ ಭಾಷೆಯೇ ಸೊರಗಿ ಹೋಗುವ ಆತಂಕವಿದೆ.
     ನಿಜಕ್ಕೂ ನಿಮಗೆ ಕನ್ನಡದ ಕುರಿತಾಗಿ ಕಾಳಜಿಯಿದ್ದರೆ ಮತ್ತು ಕನ್ನಡದಲ್ಲಿ ಕೊರತೆಗಳಿವೆ ಎಂಬುದು ಮನವರಿಕೆಯಾಗಿದ್ದರೆ, ಹೊಸ ಭಾಷೆಯೊಂದನ್ನೇ ಹುಟ್ಟು ಹಾಕಿ. ಆ ಹೊಸ ಭಾಷೆಯಲ್ಲಿ, ಕನ್ನಡದಲ್ಲಿರುವ ನ್ಯೂನತೆಗಳನ್ನೆಲ್ಲಾ ತೊಡೆದು ಹಾಕಿ. ಆ ಭಾಷೆಯನ್ನೇ ಬಳಸಿ, ಕನ್ನಡಿಗರ ಮಧ್ಯೆ ಪ್ರಚುರಿಸಿ; ಕನ್ನಡ ಸಾಹಿತ್ಯವನ್ನೆಲ್ಲಾ ಆ ಭಾಷೆಗೆ ಭಾಷಾಂತರಿಸಿ.
     ಕನ್ನಡಿಗರಿಗೆ ನಿಜಕ್ಕೂ ಕನ್ನಡ ಕಲಿಕೆ ಕಷ್ಟವಿದ್ದರೆ ನಿಮ್ಮ ಆ “ಹೊಸ ಭಾಷೆ”ಯನ್ನು ಅವರು ಖಂಡಿತ ಸ್ವಾಗತಿಸುತ್ತಾರೆ, ಅಪ್ಪಿಕೊಳ್ಳುತ್ತಾರೆ, ತಮ್ಮದಾಗಿಸಿಕೊಳ್ಳುತ್ತಾರೆ, ಅದೇ ಕನ್ನಡಿಗರ ಭಾಷೆಯಾಗಿಬಿಡುತ್ತದೆ.

     ಉತ್ತರ
     • ಸರಿಯಾದ ಮಾತು. “ಎಲ್ಲರ ಕನ್ನಡ” ಎಂಬುದು ಒಂದು ಹೊಸ ಭಾಷೆಯೇ ಆಗುವುದಾದರೆ ಅದಕ್ಕೆ ಯಾರ ಅಭ್ಯಂತರವೂ ಇರದು. ಹೆಚ್ಚೇನು, ತಮಿಳು ತೆಲುಗು ಸಂಸ್ಕೃತಗಳನ್ನು ಕಲಿಯುವಷ್ಟೇ ಆಸಕ್ತಿಯಿಂದ ಎಲ್ಲರ ಕನ್ನಡವನ್ನೂ ನಾವು ಕಲಿಯೋಣ. ಬೇಕಿದ್ದರೆ ಆಸಕ್ತಿಯಿದ್ದವರು ಕನ್ನಡದಂತೆಯೇ ಅದಕ್ಕೂ ಒಂದು ಐಡೆಂಟಿಟಿಗೋಸ್ಕರ ಹೋರಾಡಿ, ದೇಶವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿರುವುದರಿಂದ ನೀವು ಇನ್ನೂ ಒಂದು ಹೆಜ್ಜೆ ಹೋಗಿ ಎಲ್ಲರ ಕನ್ನಡ ಮಾತಾಡುವ ಜನಕ್ಕಾಗಿಯೇ ಒಂದು ಪ್ರತ್ಯೇಕ “ಎಲ್ಲರ ಕರ್ನಾಟಕ” ರಚನೆಗಾಗಿ ಹೋರಾಡಲೂ ಬಹುದು (ಎಲ್ಲರ ಕನ್ನಡಕ್ಕೆ ಅಂಥದ್ದೊಂದು ಪ್ರಾದೇಶಿಕತೆ (nativity)ಯನ್ನು ಗುರ್ತಿಸಿಕೊಡಲು ಸಾಧ್ಯವಾಗುವುದಾದರೆ)

      ಇರುವ ಕನ್ನಡವನ್ನು ಕುಟ್ಟಿ ಕೆಡವಿ ಹೊಸ ಕನ್ನಡ, ಹೊಸ ನಾಡು ಕಟ್ಟೋಣವೆಂಬ ಇರಾದೆ ನಿಮ್ಮದಾದರೆ, ಕುಟ್ಟಿ ಕೆಡವುವ ಮಾತು ಬಿಟ್ಟುಬಿಡಿ. ಹೊಸ ಕನ್ನಡ ಕಟ್ಟಿ, ಹೊಸ ನಾಡು ಕಟ್ಟಿಕೊಳ್ಳಿ ಅಲ್ಲಿ ಮಹಾರಾಯರಾಗಿ ಬದುಕಿ ಯಾರೂ ಬೇಡವೆನ್ನುವುದಿಲ್ಲ. ಇರುವುದು ಇದ್ದಹಾಗೇ ಇರಲೆನ್ನುವವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಅವರ ನುಡಿ, ಶಿಕ್ಷಣ, ಪರಂಪರೆ, ನಾಡಿಗತನಗಳಲ್ಲಿ ಕೈಯಿಕ್ಕಬೇಡಿ.

      ಉತ್ತರ
      • ನವೀನ
       ಏಪ್ರಿಲ್ 23 2013

       ಹೌದು ಸ್ವಾಮಿ.ನಾವು ಕರುಣಾನಿಧಿಯ ಆರಾಧಕರು ನಾವು ದ್ರಾವಿಡ ಚಳುವಳಿ ತರಾನೇ ಎಲ್ಲದನ್ನೂ ಕುಟ್ಟಿ ಪುಡಿ ಮಾಡ್ತಿವಿ.ನಮ್ಮ ಕನ್ನಡಕ್ಕೆ ಸೆಕ್ಯುಲರ್ ಪಡೆಯ ಬೆಂಬಲವೂ ಇದೆ.ನೀವು ಏನಾದ್ರೂ ಹೇಳ್ಕೊತಾ ಇರಿ.ನಾವು ಕೆಡವುತ್ತಲೇ ಇರುತ್ತೇವೆ.

       ಉತ್ತರ
       • ಏಪ್ರಿಲ್ 23 2013

        ನವೀನ> ನಮ್ಮ ಕನ್ನಡಕ್ಕೆ ಸೆಕ್ಯುಲರ್ ಪಡೆಯ ಬೆಂಬಲವೂ ಇದೆ.

        ಸೆಕ್ಯುಲರ್ ಎನ್ನುವ ಆಂಗ್ಲ ಮೂಲದ ಪದಕ್ಕೆ ಕನ್ನಡದಲ್ಲಿ ಜಾತ್ಯಾತೀತ ಅಥವಾ ಸರ್ವಧರ್ಮ ಸಮಭಾವ ಎನ್ನುವ ಪದವಿದೆಯಲ್ಲವೆ?
        ಕನ್ನಡಕ್ಕೆ ಕನ್ನಡದ್ದೇ ಪದಗಳಿರಬೇಕೆನ್ನುವವರು ಆಂಗ್ಲ ಪದವನ್ನು ಕಣ್ಮುಚ್ಚಿ ಉಪಯೋಗಿಸುತ್ತಿರುವುದನ್ನು ಕಂಡು ಸೋಜಿಗವೆನಿಸುತ್ತಿದೆ!

        ಕೋಮುವಾದ ಎನ್ನುವ ವಿಚಾರವೇ ನಮ್ಮ ನಾಡಿಗೆ ಪರಕೀಯವಾದುದು ಎಂಬುದು ತಿಳಿದಿರಲಿ.
        ಹೀಗಾಗಿ, ನಮಗೆ ಸೆಕ್ಯುಲರ್ ಅಥವಾ ಜಾತ್ಯಾತೀತವಾದ ಎನ್ನುವ ಪದದ ಆವಶ್ಯಕತೆ ಇರಲಿಲ್ಲ.
        ನಮ್ಮ ದೇಶಕ್ಕೆ ಎಲ್ಲ ರೀತಿಯ ವಿಚಾರಗಳಿಗೂ ಮುಕ್ತ ಸ್ವಾತಂತ್ರ್ಯವಿತ್ತು – ವಿದೇಶೀ ವಿಚಾರಗಳೂ, ನಂಬಿಕೆಗಳೂ ಇಲ್ಲಿ ನೆಲೆಯೂರಲು ಮುಕ್ತ ಅವಕಾಶ ದೊರಕಿತು. ಆ ರೀತಿ ಹೊರಗಿನ ವಿಚಾರಗಳಿಗೆ ಪ್ರತಿಭಟನೆಯೇ ಇಲ್ಲದೆ ಮುಕ್ತ ಅವಕಾಶ ಸಿಕ್ಕ ಏಕೈಕ ದೇಶ ಭಾರತ. ಹೀಗೆ ಭಾರತದ ಸ್ವಭಾವದಲ್ಲೇ ಸರ್ವಧರ್ಮ(ಮತ) ಸಮಭಾವವು ಅಡಕವಾಗಿ ಬಿಟ್ಟಿರುವುದರಿಂದ, ಅದಕ್ಕೆ ಪ್ರತ್ಯೇಕ ಪದವನ್ನು ಹುಡುಕುವ ಆವಶ್ಯಕತೆ ನಮಗೆ ಬರಲಿಲ್ಲ.
        ನೀವು “ಸೆಕ್ಯುಲರ್ ಪಡೆ” ಎನ್ನುವ ಪದವನ್ನು ಎಳೆದು ತಂದು, ಭಾರತದಲ್ಲಿ ಅದಕ್ಕೆ ವಿರುದ್ಧವಾದದ್ದೂ ಇದೆ ಎಂಬ ಅರ್ಥದಲ್ಲಿ ಮಾತನಾಡುತ್ತಿರುವಿರಿ. ಇದು ಬಹಳ ದುರದೃಷ್ಟಕರ ಬೆಳವಣಿಗೆ!!

        ಉತ್ತರ
   • ಬಸವಯ್ಯ
    ಏಪ್ರಿಲ್ 16 2013

    @ಕುಮಾರ
    +೧

    ಉತ್ತರ
 3. ಏಪ್ರಿಲ್ 15 2013

  ನಾನು ಕನ್ನಡ ಬರೆಯಲು “ಬರಹ” ಬಳಸುತ್ತಿದ್ದೆ. ಇದೀಗ, http://www.kannadaslate.com ಬಳಸಲು ಆರಂಭಿಸಿರುವೆ.
  ಎರಡರ ನಡುವೆಯೂ ಬಹಳ ವ್ಯತ್ಯಾಸಗಳಿವೆ. ಬರೆಯುವುದರಲ್ಲಿ ಮಾತ್ರವಲ್ಲ ತಿದ್ದುವಿಕೆಯಲ್ಲಿಯೂ ವ್ಯತ್ಯಾಸ.
  ಇದನ್ನು ಚೆನ್ನಾಗಿ ಬಳಸಲು ನನಗೆ ಮತ್ತೂ ಹೆಚ್ಚು ಅಭ್ಯಾಸ ಬೇಕು.
  ಹೀಗಾಗಿ, ತಪ್ಪುಗಳಾಗುತ್ತಿವೆ. ನಾನು ಈ ರೀತಿ ಮಾಡಿದ ತಪ್ಪುಗಳನ್ನು “ಹೊಟ್ಟೆಗೆ ಹಾಕಿಕೊಳ್ಳದೆ” ತೋರಿಸಿಕೊಟ್ಟವರಿಗೆ ಬಹಳ ಧನ್ಯವಾದಗಳು. ಮುಂದೆಯೂ ನಿಮ್ಮಿಂದ ಇಂತಹ ಉಪಕಾರಗಳಾಗುತ್ತಿರಲಿ. 🙂

  ಉತ್ತರ
  • ಏಪ್ರಿಲ್ 18 2013

   barahada badalu kannadaslate upayogisuva kaaranavenu? adakkintha sulabhave? klishta padagaLannu bareyalu sulabha maargavideye?

   ಉತ್ತರ
   • ಏಪ್ರಿಲ್ 19 2013

    > barahada badalu kannadaslate upayogisuva kaaranavenu?

    ನನ್ನ ಆಫೀಸಿನ Laptop ನಲ್ಲಿ, ಆಫೀಸಿಗೆ ಸಂಬಂಧಿಸದ ಯಾವ software ಅನ್ನೂ ಹಾಕುವಂತಿಲ್ಲ. ನಾನು ಆಫೀಸಿನ Laptop ಉಪಯೋಗಿಸುವಾಗ ಪ್ರತಿಕ್ರಿಯಿಸಲು, ನೀವು ಮಾಡಿದಂತೆ ಆಂಗ್ಲಲಿಪಿಯಲ್ಲಿ ಕನ್ನಡ ಬರೆಯಬೇಕು, ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಕನ್ನಡ ಲಿಪಿಯಲ್ಲಿ ಬರೆದು ಹಾಕಬೇಕು.
    ಆಂಗ್ಲಲಿಪಿಯಲ್ಲಿ ಕನ್ನಡ ಓದುವುದು ಎಷ್ಟು ಕಷ್ಟವೆಂದು ಓದಿದ ನಂತರವೇ ತಿಳಿಯುವುದು. ಅದನ್ನು ಬರೆಯುವುದು ಸುಲಭ, ಬರೆಯುವವರಿಗೆ ಓದುವವರ ಕಷ್ಟ ತಿಳಿಯುವುದಿಲ್ಲ. ಹೀಗಾಗಿ, ಆಂಗ್ಲಲಿಪಿಯಲ್ಲಿ ಬರೆಯುವುದು ನನಗಿಷ್ಟವಿಲ್ಲ.
    ಇದಕ್ಕಾಗಿ kannadaslate.com ಅಂತರ್ಜಾಲ ತಾಣದ ಉಪಯೋಗ ಪಡೆಯುತ್ತಿರುವೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.

    ಈಗಾಗಲೇ ಕನ್ನಡದಲ್ಲಿ ಸೇರಿಹೋಗಿರುವ ಮತ್ತು ಹಲವು ನೂರು ವರ್ಷಗಳಿಂದ ಬಳಕೆಯಲ್ಲಿರುವ ಸಂಸ್ಕೃತ ಪದಗಳಿಗೆ ಕನ್ನಡದ ಹೊಸ ಪದ ಹುಡುಕ ಬೇಕೋ, ಬೇಡವೋ ಕಾಲವೇ ನಿರ್ಧರಿಸುತ್ತದೆ.
    ಆದರೆ, ತುರ್ತಾಗಿ ಆಗಬೇಕಿರುವುದು, ಹೊಸದಾಗಿ ಬರುತ್ತಿರುವ ತಂತ್ರಜ್ಞಾನಗಳಿಗಾದರೂ ಹೊಸ ಪದಗಳನ್ನು ಹುಡುಕೋಣ. ಅವುಗಳ ಕುರಿತಾಗಿ ಯಾರದೂ ಅಭ್ಯಂತರವಿರದು.

    ನನ್ನ ಮೇಲಿನ ಸಾಲುಗಳಲ್ಲಿ ಅಂತಹ ಎರಡು ಪದಗಳನ್ನು ಬಳಸಿರುವೆ – Laptop, Software.
    ಅವುಗಳಿಗೆ ಕನ್ನಡದಲ್ಲಿ ಈಗಾಗಲೇ ಪದಗಳನ್ನು ಯಾರಾದರೂ ಕಂಡುಹಿಡಿದಿದ್ದರೆ ದಯವಿಟ್ಟು ತಿಳಿಸಿ. ಇಲ್ಲದಿದ್ದರೆ, ಉತ್ತಮ ಪದಗಳ ಸಲಹೆ ನೀಡಿ.
    ಇನ್ನೂ ಅಂತಹ ಇನ್ನೆಷ್ಟೋ ಪದಗಳಿವೆಯಲ್ಲ. ಅವುಗಳಿಗೆಲ್ಲಾ ಏನಾದರೂ ಯೋಜನೆ ನಡೆಸಿದ್ದರೆ ತಿಳಿಸಿ?

    ಉತ್ತರ
    • ತೊಡೆಗಣಕ
     ಏಪ್ರಿಲ್ 25 2013

     ತೊಡೆಗಣಕ, ತಂತ್ರಾಂಶ

     ಉತ್ತರ
 4. ಅವಿನಾಶ್
  ಏಪ್ರಿಲ್ 19 2013

  Google Transliteration ಕನ್ನಡ ಬರೆಯಲು ಸುಲಭ ಮತ್ತು ಅತ್ತ್ಯುತ್ತಮವಾದ ಮಾರ್ಗ ಅನ್ನುವುದು ನನ್ನ ಅನಿಸಿಕೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments