ವಿಷಯದ ವಿವರಗಳಿಗೆ ದಾಟಿರಿ

ಮೇ 1, 2013

1

ವಚನಗಳ ಧ್ವನಿಯನ್ನು ಎಲ್ಲಿ ಹುಡುಕಬೇಕು?

‍ನಿಲುಮೆ ಮೂಲಕ

– ರಾಜಾರಾಮ ಹೆಗಡೆ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾನಿಲಯ

{ಡಾ. ಆಶಾದೇವಿಯವರು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದು ಪ್ರಜಾವಾಣಿಗೆ ಕಳುಹಿಸಿದ್ದ ಅಪ್ರಕಟಿತ ಲೇಖನ}

Vachana Charche           ಡಾ. ಆಶಾದೇವಿಯವರ ಪ್ರತಿಕ್ರಿಯೆಯಲ್ಲಿ ನನ್ನ ವಿಚಾರಗಳ ಕುರಿತು ವ್ಯಕ್ತವಾದ ಎರಡು ಮುಖ್ಯ ಅಭಿಪ್ರಾಯಗಳ ಕುರಿತು ನನ್ನ ಆಕ್ಷೇಪಣೆಯಿದೆ: 1. ನಾವು ಉಲ್ಲೇಖಿಸುತ್ತಿರುವ ಸಂಶೋಧನಾ ವಿಧಾನವೇ ಒಂದು ಕಣ್ಕಟ್ಟು ಅಥವಾ ಮಾಯೆ. ಅದು ಸ್ವಘೋಷಿತ. ಆ ಮೂಲಕ ನಾವು ಕನ್ನಡಿಗರಿಗೆ ಮೋಸಮಾಡುತ್ತಿದ್ದೇವೆ. 2. ಈ ಸಂಶೋಧನೆಯ ಹಿಂದೆ ಒಂದು ಜಾಗತಿಕ ಹುನ್ನಾರವಿದೆ. ಇಂಥ ಹೇಳಿಕೆಗಳನ್ನು ಇದುವರೆಗೆ ನಾವು ನಿರ್ಲಕ್ಷಿಸಿಕೊಂಡು ಬಂದಿದ್ದೆವು. ಆದರೆ ಇಂಥ ಹೇಳಿಕೆಗಳನ್ನು ಸತ್ಯವೆಂಬಂತೆ ಪುನಃ ಪುನಃ ಮಾಡಲಾಗುತ್ತಿರುವುದರಿಂದ ನಾವು ಇದನ್ನು ಗಂಭೀರವಾಗಿ ಎಣಿಸಲೇಬೇಕಿದೆ.

ಆಶಾದೇವಿಯವರೊಂದೇ ಅಲ್ಲ, ನಾವು ಮಂಡಿಸಿದ ವಿಷಯದ ಕುರಿತು ಆಕ್ಷೇಪಣೆಯೆತ್ತುತ್ತಿರುವ ಬಹುತೇಕರು ಇಂಥ ಆರೋಪಗಳನ್ನು ಯಾವುದೇ ಎಗ್ಗಿಲ್ಲದೇ ತಾವು ಕಂಡುಕೊಂಡ ಸತ್ಯವೆಂಬಂತೆ ಹೇಳುತ್ತಿದ್ದಾರೆ. ಅಂದರೆ ನಾವು ಮೋಸಗಾರರು, ವಿದೇಶೀ ಹಣವನ್ನು ಕಬಳಿಸಲಿಕ್ಕೆ ಇಂಥ ಮಾತುಗಳನ್ನು ಹೇಳುತ್ತಿದ್ದೇವೆ, ಪೂರ್ವಾಗ್ರಹ ಪೀಡಿತರು, ನಮಗೊಂದು ಹುನ್ನಾರವಿದೆ, ನಾವು ದಲಿತರ, ಶೋಷಿತರ ವಿರೋಧಿಗಳು, ವಚನಕಾರರು ಯಾವ ಶಕ್ತಿಗಳ ವಿರುದ್ಧ ಹೋರಾಡಿದ್ದರೊ ನಾವು ಅವೇ ಶಕ್ತಿಗಳು, ಇತ್ಯಾದಿ. ಇವು ಸಣ್ಣಪುಟ್ಟ ಆರೋಪಗಳಲ್ಲ ಎಂಬುದನ್ನು ಪ್ರತ್ಯೇಕ ತಿಳಿಸಬೇಕಿಲ್ಲ. ಇದು ಯಾರ ವಿರುದ್ಧ ಯಾರನ್ನು ಎತ್ತಿಕಟ್ಟುವ ಹುನ್ನಾರ ಎಂಬುದು ನನಗೆ ತಿಳಿಯುತ್ತಿಲ್ಲ. ಇದು ಚಾರಿತ್ರ್ಯಹರಣದ ಪ್ರಯತ್ನ. ನಮ್ಮ ಕುರಿತು ಪ್ರಮಾಣಿತ ಸತ್ಯವೋ ಎಂಬಂತೆ ಈ ಆರೋಪಗಳನ್ನು ಅವರು ಸಾರ್ವಜನಿಕವಾಗಿ ಇಡುತ್ತಿದ್ದಾರೆ.  ಮಾಧ್ಯಮವೊಂದರಲ್ಲಿ ಇಂಥ ಗುರುತರ ಆಪಾದನೆಗಳನ್ನು ಮಾಡುವಾಗ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಅದಿಲ್ಲದ ಹೇಳಿಕೆಗಳು ಮಾನನಷ್ಟಕ್ಕೆ ಸಮನಾಗುತ್ತವೆ. ಹಾಗಾಗಿ ಮೊದಲು ಅದಕ್ಕೆ ಇವರೆಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲದಿದ್ದಲ್ಲಿ ಇದು ಕಪೋಲ ಕಲ್ಪಿತ ಹೇಳಿಕೆ ಎಂಬುದಾಗಿ ಸ್ಪಷ್ಟೀಕರಿಸಬೇಕು ಎಂಬುದು ನನ್ನ ಆಗ್ರಹ.

ಪ್ರತಿವಾದಿಗಳು ನಮ್ಮ ತರ್ಕದ ದೋಷವನ್ನು ತೋರಿಸುವುದಕ್ಕಿಂತ ಚಾರಿತ್ರ್ಯ ಹರಣವನ್ನೇ ಉದ್ದೇಶವಾಗಿಟ್ಟುಕೊಂಡಿದ್ದುದನ್ನು ನೋಡಿದರೆ ಎರಡು ಸಾಧ್ಯತೆಗಳು ಕಾಣಿಸುತ್ತವೆ: 1) ಇವರ ಕಲ್ಪನೆಯ ಪ್ರಕಾರ ಎದುರಾಳಿಯ ಚಾರಿತ್ರ್ಯಹರಣವು ಚರ್ಚೆಯನ್ನು ಗೆಲ್ಲುವ ಒಂದು ಮಾರ್ಗ. ಈ ಸಾಧ್ಯತೆಯನ್ನು ಒಪ್ಪಿಕೊಂಡರೆ ಅವರಿಗೆ ಚರ್ಚಿಸಲು ಏನೂ ಇಲ್ಲ ಎಂದಾಗುತ್ತದೆ.   2)  ನಮ್ಮ ಚಾರಿತ್ರ್ಯದ ಕುರಿತು ಮಾಡುತ್ತಿರುವ ಆರೋಪವನ್ನು ಅವರೆಲ್ಲ ಗಂಭೀರವಾಗಿ ನಂಬಿರುವ ಸಾಧ್ಯತೆಯೂ ಇದೆ. ಹಾಗಾದ ಪಕ್ಷದಲ್ಲಿ ಇವರೆಲ್ಲರ ಗ್ರಹಿಕೆಯಲ್ಲಿ ಈ ಚರ್ಚೆಯ ವಿಷಯವನ್ನು ಬಿಟ್ಟು ನಮ್ಮ ಕುರಿತು ಬೇರೇನೋ ಒಂದು ಸಂಗತಿ ಮನೆಮಾಡಿರುವಂತಿದೆ. ಈ ಸಾಧ್ಯತೆಯನ್ನು ಒಪ್ಪಿಕೊಂಡರೆ ಅವರು ಬ್ರಾಹ್ಮಣ ಪುರೋಹಿತಶಾಹಿಯು ಹಿಂದೂ ಸಮಾಜವನ್ನು ಶೋಷಿಸಿದೆ ಎಂಬ ಕಥೆಯನ್ನು ಭದ್ರವಾಗಿ ನಂಬಿದ್ದಾರೆ ಎಂದಾಗುತ್ತದೆ.  ಅಂದರೆ ನಮ್ಮ ಚಾರಿತ್ರ್ಯ ಹರಣಕ್ಕೆ ಅವರಿಗಿರುವ ಏಕೈಕ ಆಧಾರವೆಂದರೆ ಕ್ಯಾಥೋಲಿಕ್ ಪ್ರೀಸ್ಟ್ಗಳ ಕುರಿತು ಪ್ರೊಟೆಸ್ಟಾಂಟ್ ಟೀಕೆಗಳು.

ಪ್ರೊಟೆಸ್ಟಾಂಟರುಏನು ಹೇಳುತ್ತಾರೆ? ರಿಲಿಜನ್ನು ಮೂಲದಲ್ಲಿ ಶುದ್ಧರೂಪದಲ್ಲಿ ಇರುತ್ತದೆ, ಅದು ಪುರೋಹಿತಶಾಹಿಯಿಂದ ಭ್ರಷ್ಟವಾಗುತ್ತದೆ. ಪುರೋಹಿತಶಾಹಿಯು ರಿಲಿಜನ್ನಿನ ಸಮುದಾಯದಲ್ಲಿ ತರತಮಗಳನ್ನು ಸೃಷ್ಟಿಸಿ ಒಂದು ಶೋಷಣಾತ್ಮಕ ವ್ಯವಸ್ಥೆಯನ್ನು ರಚಿಸುತ್ತದೆ ಹಾಗೂ ರಿಲಿಜನ್ನಿನಲ್ಲಿ ಪುರೋಹಿತರು ಪಡೆದುಕೊಂಡ ಏಕಸ್ವಾಮ್ಯವನ್ನು ಆಧರಿಸಿ ಈ ಶಾಹಿಯು ಅಸ್ತಿತ್ವದಲ್ಲಿ ಇರುತ್ತದೆ. ಅದನ್ನು ನಿವಾರಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಸಲುವಾಗಿ ಪ್ರೊಟೆಸ್ಟಾಂಟ್ ಚಳವಳಿ ನಡೆಯಿತು. ಆದರೆ ಅದೇ ಒಂದು ಪ್ರತ್ಯೇಕ ಸಮುದಾಯವಾಯಿತು ಎಂಬುದೂ ಈ ಸತ್ಯದ ಮತ್ತೊಂದು ಮುಖ. ಈ ನಂಬಿಕೆಯೇ ಭಾರತೀಯ ಇತಿಹಾಸದ ವಿವರಗಳನ್ನೂ, ಅದರ ಕುರಿತು ಮಾತನಾಡುವ ವಾದಶೈಲಿಯನ್ನೂ ರೂಢಿಯಲ್ಲಿ ತಂದಿದೆ. ಅಂದರೆ ಹಿಂದೂ ಅಂತ ಒಂದು ರಿಲಿಜನ್ನು ಹಾಗೂ ಅದನ್ನು ಅನುಸರಿಸುವ ಒಂದು ಸಮುದಾಯ ಇದೆ. ಅಲ್ಲಿ ಬ್ರಾಹ್ಮಣ ಪುರೋಹಿತರು ಜಾತಿ ತರತಮ ಸೃಷ್ಟಿಸಿದರು. ವಚನಕಾರರು ಅವರ ವಿರುದ್ಧ ಪ್ರೊಟೆಸ್ಟಾಂಟರಂತೆ ಹೋರಾಡಿದರು. ಆಶಾದೇವಿಯವರು ಒಂದು ಸಮುದಾಯದ ತಲ್ಲಣ, ಧ್ವನಿ, ಎಂದು ಯಾವೆಲ್ಲ ಪರಿಭಾಷೆಗಳನ್ನು ಬಳಸುತ್ತಾರೊ ಅಂಥ ಸಮುದಾಯಕ್ಕೆ ಪ್ರೊಟೆಸ್ಟಾಂಟ್ ಇತಿಹಾಸದಲ್ಲಿ ಮಾತ್ರವೇ ಅರ್ಥ ಬರಲು ಸಾಧ್ಯ. ಲಿಂಗಾಯತರು ಅಂಥ ರಿಲಿಜಿಯಸ್ ಸಮುದಾಯವಲ್ಲ. ಹಾಗಾಗಿ ಈ ಇತಿಹಾಸವು ಸತ್ಯ ಎಂದು ನಂಬಬೇಕಾದರೆ ಕ್ರಿಶ್ಚಿಯಾನಿಟಿಯ ಇತಿಹಾಸವೇ ನಮ್ಮೆಲ್ಲರ ಇತಿಹಾಸವಾಗಿದೆ ಎಂದು ನಂಬಬೇಕು. ನಾವು ಹಾಗೆ ನಂಬುವುದಿಲ್ಲ.  ಈ ಇತಿಹಾಸವು ತಿಳಿಸುವ ವಿವರಗಳು ಒಂದು ರಿಲಿಜನ್ನಿನ ಆಂತರಿಕ ವಾಸ್ತವಗಳೇ ವಿನಃ ಸಾರ್ವತ್ರಿಕ ಸತ್ಯಗಳಲ್ಲ ಎಂಬುದು ನಮ್ಮ ವಾದ.

ಬರೀ ಅಂಕಿ ಅಂಶಗಳ ಪುರಾವೆಗೆ ಜೋತು ಬೀಳಬಾರದು, ಎನ್ನುವ ಡಾ. ಆಶಾದೇವಿಯವರು ಇಂದಿನ ವಾಸ್ತವವನ್ನು ಪುರಾವೆಗೆ ಪರಿಗಣಿಸಬೇಕೆನ್ನುತ್ತಾರೆ. ಇಂದು ನಮಗೆ ವೈವಿಧ್ಯಪೂರ್ಣವಾದ ಅನೇಕ ಸಂಗತಿಗಳು ಕಾಣುತ್ತಿರುತ್ತವೆ. ಅವುಗಳಲ್ಲಿ ನಮಗೆ ಪೂರಕವಾದ ಉದಾಹರಣೆಗಳನ್ನು ಸೃಷ್ಟಿಸಿಕೊಂಡು  ಪ್ರೊಟೆಸ್ಟಾಂಟ್ ಇತಿಹಾಸವನ್ನು ಇಲ್ಲಿ ಕಾಣುವುದೇನೂ ಕಷ್ಟವಲ್ಲ. ವಚನಗಳು ಜಾತಿವಿರೋಧಿ ಚಳವಳಿ ಎಂಬ ಇತಿಹಾಸವು ಹಾಗೇ ಹುಟ್ಟಿದ್ದು.  ಆಶಾದೇವಿಯವರು ಮಠಗಳನ್ನು ಉದಾಹರಣೆ ಕೊಟ್ಟರು. ವಿರಕ್ತ ಮಠವೇಕೆ ಹಾಗಿದೆ ಎನ್ನುವುದಕ್ಕೆ ವಿರಕ್ತ ಮಠ ಎಂದರೆ ಲಿಂಗಾಯತ ಸಂಪ್ರದಾಯದಲ್ಲಿ ಏನು ಅರ್ಥ ಇಂಗಿತಗಳಿವೆ ಅಂತ ನೋಡಿದರೆ ಸಿಗುತ್ತದೆ. ಆದರೆ ಅದನ್ನು ಅರ್ಥೈಸಲಿಕ್ಕೆ ಪ್ರೊಟೆಸ್ಟಾಂಟ್ ಇತಿಹಾಸವನ್ನು ತಂದರೆ ಮುಂದಿನ ಹೆಚ್ಚುವರಿ ಪ್ರಶ್ನೆಗಳನ್ನು ಉತ್ತರಿಸಿಕೊಳ್ಳುವ ಜವಾಬ್ದಾರಿಯನ್ನು ಅವರು ಮೈಮೇಲೆಳೆದುಕೊಂಡಂತೆಯೇ: ಮೊತ್ತಮೊದಲನೆಯದಾಗಿ ಮಠ ವ್ಯವಸ್ಥೆಯೇಕೆ ಹುಟ್ಟಬೇಕು? ಅವುಗಳಲ್ಲಿ ಭೇದವೇಕೆ ಹುಟ್ಟಬೇಕು? ನಂತರ ಇಂದು ಲಿಂಗ ಕಟ್ಟುವವರೇಕೆ ಅಷ್ಟೊಂದು ಜಾತಿಗಳಿದ್ದಾರೆ. ಜಾತ್ಯಾತೀತ ಸಮುದಾಯವೊಂದು ಇಂದು ಅಲ್ಲಿ ಕಾಣಸಿಗುತ್ತದೆಯೆ? ಇತ್ಯಾದಿ. ಅವುಗಳನ್ನಿಟ್ಟುಕೊಂಡು ಡಾ. ಆಶಾದೇವಿಯವರು ವಚನ ಚಳವಳಿಯ ಕುರಿತು ಏನನ್ನು ವಾದಿಸಲಿಕ್ಕೆ ಹೊರಟಿದ್ದಾರೆ? ಇವುಗಳು ಪ್ರಯೋಜನವಿಲ್ಲವೆಂದೇ ವಚನ ಚಳವಳಿಯ ಇತಿಹಾಸವು ವಚನ ಸಾಹಿತ್ಯಕ್ಕೇ ಶರಣು ಹೋಗಿದೆ ಎಂಬುದನ್ನು ಅವರು ಮರೆತಿದ್ದಂತಿದೆ.

ಒಂದು ಬರವಣಿಗೆಯನ್ನು ವಿಭಿನ್ನವಾಗಿ ಓದಬಹುದು ಅಂತ ಮನಸ್ಸಿಗೆ ಬಂದಂತೆ ಓದುವುದನ್ನೂ ಡಾ. ಆಶಾದೇವಿಯವರೇ ಒಪ್ಪಲಿಕ್ಕಿಲ್ಲ. ಒಬ್ಬನ ಮಾತನ್ನು ಅರ್ಥಮಾಡಿಕೊಳ್ಳುವಾಗ ಅದನ್ನು ಬಳಸುವವನ ಭಾಷಾ ರೂಢಿಯನ್ನೂ, ಅದು ಸೂಚಿಸಿರಬಹುದಾದ ಪರಿಕಲ್ಪನಾ ಪ್ರಪಂಚವನ್ನೂ ಬಿಟ್ಟು ನನಗೆ ಅನಿಸಿದ್ದನ್ನು ಹೇಳುತ್ತೇನೆ ಎಂದರೆ ಸ್ವೇಚ್ಛಾಚಾರವಾಗುತ್ತದೆ. ಹಾಗಾಗಿ ಸಾಹಿತ್ಯದ ಧ್ವನಿಯನ್ನೂ ಅದರ ಭಾಷಾ ರೂಢಿಯ ಹಾಗೂ ಪರಿಕಲ್ಪನೆಗಳ ಚೌಕಟ್ಟಿನೊಳಗೇ ಹುಡುಕುವ ನಿಬಂಧನೆಗೆ ನಾವು ಒಳಪಡುತ್ತೇವೆ. ಡಾ. ಆಶಾದೇವಿಯವರೇ ಪ್ರಸ್ತಾಪಿಸಿದ ಷಟ್ಸ್ಥಲಗಳನ್ನು ಆಧರಿಸಿದ ಓದನ್ನೇ ತೆಗೆದುಕೊಳ್ಳುವುದಾದರೆ, ಅದು ಭವಿಯೊಬ್ಬನು ಭಕ್ತನಾಗಿ ಪ್ರಾರಂಭಿಸಿ ಶಿವನಲ್ಲಿ ಐಕ್ಯನಾಗುವವರೆಗಿನ ಆರು ಹಂತಗಳ ಕುರಿತು ಹೇಳುತ್ತದೆ. ಅದೊಂದು ಆಧ್ಯಾತ್ಮಿಕ ಮಾರ್ಗ. ಈ ಪ್ರಾಪಂಚಿಕ ಭೇದಗಳನ್ನು ಹಾಗೂ ಉಪಾಧಿಗಳನ್ನೂ ದಾಟಿ ಹೋಗಲು ಇಚ್ಛಿಸುವವರ ಮಾರ್ಗ. ಅಲ್ಲಿ ಭವವನ್ನು ದಾಟುವ ಕಲ್ಪನೆ ಬರುತ್ತದೆಯೇ ವಿನಃ ಅದನ್ನು ಬದಲಾಯಿಸುವ ಕಲ್ಪನೆ ಬರುವುದಿಲ್ಲ. ಇಂಥ ಮಾರ್ಗವನ್ನು ತುಳಿದವರೇ ವಚನಗಳನ್ನು ರಚಿಸಿಕೊಂಡರೇ ವಿನಃ ಬೇರೆಯವರು ಅವರಿಗಾಗಿ  ರಚಿಸಿಕೊಟ್ಟದ್ದಲ್ಲ. ಅವರು ಏನನ್ನು ಹೇಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕೆ ಈ ಸ್ಥಲಗಳು ಒಳಗೊಳ್ಳುವ ಆಧ್ಯಾತ್ಮಿಕ ಪರಿಕಲ್ಪನೆಗಳ ಸಹಾಯವನ್ನು ಪಡೆಯುವುದು ಸತಾರ್ಕಿಕವಾಗಿದೆ. ಅಂಥ ವಚನಗಳಲ್ಲಿ ಆಧ್ಯಾತ್ಮದ ಧ್ವನಿ ಇರುವ ಸಾಧ್ಯತೆ ಇದೆಯೇ ವಿನಃ ಪ್ರೊಟೆಸ್ಟಾಂಟ್ ಇತಿಹಾಸದ್ದಲ್ಲ.

ಇನ್ನು ಐಡಿಯಾಲಜಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ನಾವು ನಂಬಿಕೊಂಡದ್ದೇ ಪರಮ ಸತ್ಯ, ಅದು ಸುಳ್ಳಾಗಲಿಕ್ಕೆ ಸಾಧ್ಯವೇ ಇಲ್ಲ ಎಂಬ ಧೋರಣೆಯನ್ನು ಹುಟ್ಟಿಸುತ್ತದೆ. ಒಂದು ವೈಜ್ಞಾನಿಕ ಸಂಶೋಧನೆಯನ್ನು ಪ್ರಾರಂಭಿಸುವುದಕ್ಕೂ ಮೊದಲೇ ಆ ಸತ್ಯ ನಮಗೆ ಧೃಡಪಟ್ಟಿರುತ್ತದೆ. ಅದು ಸುಳ್ಳಾಗಬಾರದು ಎಂದು ಶತಪ್ರಯತ್ನ ನಡೆಸುತ್ತಿರುತ್ತೇವೆ. ಐಡಿಯಾಲಜಿ ಇದ್ದವನಿಗೆ ಹೊಸದೇನೂ ಕಾಣುವುದೇ ಇಲ್ಲ. ಡಾ. ಆಶಾದೇವಿಯವರ ಪ್ರಕಾರ ಐಡಿಯಾಲಜಿ ಇಲ್ಲದ ಸಂಶೋಧನೆಗಳೇ ಇಲ್ಲ. ಆದರೆ ನಮ್ಮ ಪ್ರಕಾರ ಐಡಿಯಾಲಜಿ ಇದ್ದಲ್ಲಿ ಸಂಶೋಧನೆ ಇರಲಿಕ್ಕೇ ಸಾಧ್ಯವಿಲ್ಲ. ಏಕೆಂದರೆ ನಮ್ಮ ಪ್ರಕಾರ ಸಂಶೋಧನೆ ಎಂದರೆ ನಮಗಿನ್ನೂ ಕಾಣದ್ದನ್ನು ಹೊಸದಾಗಿ ಕಂಡುಕೊಳ್ಳುವ ಕೆಲಸ, ಹಾಗೂ ನಾವು ಕಂಡುಕೊಂಡಿದ್ದನ್ನು ಸರಿಯಲ್ಲ ಎಂದು ಯಾರಾದರೂ ಕ್ರಮಬದ್ಧವಾಗಿ ತೋರಿಸಿಕೊಟ್ಟರೆ ನಮ್ಮ ನಿಲುವನ್ನು ಬದಲಾಯಿಸಿಕೊಳ್ಳುವ ಕೆಲಸ. ಈ ಅರ್ಥದಲ್ಲಿ ನಾವು ಸಂಶೋಧನೆಯಲ್ಲಿ ಮಾತ್ರ ಆಸಕ್ತರು. ಹಾಗಾಗಿ ನಮ್ಮ ಪ್ರಕಾರ ಹಲವು ಬಾರಿ ಕನ್ನಡದಲ್ಲಿ ‘ನಮ್ಮದು ಪ್ರೊಟೆಸ್ಟಾಂಟ್ ವಾದವಲ್ಲ’ ಎಂದು ಹೇಳಿದರೆ ಅದು ಕನ್ನಡದವರ ವಾದವಾಗಿಬಿಡುವುದಿಲ್ಲ.  ವಚನಗಳ ಕುರಿತ ನಮ್ಮ ಸಂಶೋಧನೆಯು ಪ್ರೊಟೆಸ್ಟಾಂಟ್ ಇತಿಹಾಸವು ಸಾರ್ವತ್ರಿಕ ಸತ್ಯವಲ್ಲ ಎಂಬುದಕ್ಕೆ ಆಧಾರಗಳನ್ನು ಒದಗಿಸುತ್ತದೆ. ಹಾಗಾಗಿಯೇ ವಚನಗಳಲ್ಲಿ ಅದಕ್ಕೆ ಆಧಾರವನ್ನು ತೋರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನಮ್ಮ ಅಭಿಪ್ರಾಯ.ಈ ಕುರಿತು ಡಾ. ಆಶಾದೇವಿಯವರೂ ಯೋಚಿಸಲಿ ಎಂಬುದು ನನ್ನ ಆಶಯ.

1 ಟಿಪ್ಪಣಿ Post a comment
 1. Annapoorna
  ಜೂನ್ 10 2013

  ಹೆಗಡೆ ಸರ್,

  ರಂಜಾನ್ ದರ್ಗಾ ಅವರು ವಚನಗಳ ‘ಧ್ವನಿ’ ಬಗ್ಗೆ ವಿಸ್ತೃತವಾಗಿ ಇಲ್ಲಿ ಬರೆದಿದ್ದಾರೆ:
  http://ladaiprakashanabasu.blogspot.in/2013/06/blog-post_2207.html

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments