ವಿಷಯದ ವಿವರಗಳಿಗೆ ದಾಟಿರಿ

ಮೇ 3, 2013

8

ಸಂಶೋಧನೆ ಅಂದರೇನು? – ಒಂದು ಚರ್ಚೆ

‍ನಿಲುಮೆ ಮೂಲಕ

Samshodhane“ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಶುರುವಾದಾಗ ಒಂದು ’ಅಕಾಡೆಮಿಕ್ ಚರ್ಚೆ’ಯ ನಿರೀಕ್ಷೆ ನಾಡಿನ ಸಂಶೋಧನಾ ವಿದ್ಯಾರ್ಥಿವಲಯದಲ್ಲಿತ್ತು.ಆದರೆ ಈ ಚರ್ಚೆ ಅಕಾಡೆಮಿಕ್ ಆಗುವುದಕ್ಕಿಂತಲೂ ಹೆಚ್ಚಾಗಿ ಪೊಲಿಟಿಕಲ್ ಚರ್ಚೆಯಾಗಿ ಮಾರ್ಪಟ್ಟಿದೆ.೨೧ ಸಾವಿರಕ್ಕೂ ಹೆಚ್ಚು ವಚನಗಳನ್ನು ಅಧ್ಯಯನ ಮಾಡಿದವರ ಜೊತೆ ೨೧ ವಚನಗಳನ್ನೂ ಸರಿಯಾಗಿ ಓದಿಕೊಳ್ಳದವರು ವಾದಕ್ಕಿಳಿಯುತಿದ್ದಾರೆ. ಗೂಗಲ್ ನಲ್ಲಿ ಸರ್ಚ್ ಮಾಡುವುದನ್ನೆ ’ರಿಸರ್ಚ್’ ಅಂದುಕೊಂಡಿರುವಂತಿದೆ ಕೆಲವರು. “ಸಂಶೋಧನೆ” ಅಂದರೇನು ಅನ್ನುವ ಕುತೂಅಲವನ್ನಿಟ್ಟುಕೊಂಡು ನಾನು ಸಿ.ಎಸ್.ಎಲ್.ಸಿ ತಂಡದವರ ಜೊತೆ ನಡೆಸಿದ ಮಾತುಕತೆಯಿದೆ ಇಲ್ಲಿದೆ ನೋಡಿ

ಸಾತ್ವಿಕ್ :  ಸಂತೋಷ್ ಶೆಟ್ಟಿ, ಸಂಶೋಧನೆಗೆ ಹೈಪೋಥಿಸಿಸ್ ರಚಿಸಿಕೊಳ್ಳುವಾಗ ಜನರಿಗೆ ಬೇಕಾದ (ಜನಪ್ರಿಯ) ವಾದಗಳನ್ನು ಆರಿಸಿಕೊಳ್ಳಬೇಕೋ ಇಲ್ಲವೇ ಕಠಿಣವಾದರೂ ಸತ್ಯದ ಕಡೆ ಹೆಜ್ಜೆ ಹಾಕಬೇಕೋ? ಅಥವಾ ಇಂದಿನ ಸಂಶೋಧನೆಗಳು ಯಾವ ದಿಕ್ಕಿನಲ್ಲಿವೇ?

ಸಂತೋಷ್ ಶೆಟ್ಟಿ : ಸಾತ್ವಿಕ್ , ಜನರಿಗೆ ಬೇಕಾದ ಜನಪ್ರಿಯ ವಾದಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡಲು ಏನಿದೆ? ಈಗಾಗಲೆ ಪ್ರಚಲಿತದಲ್ಲಿರುವ ವಾದವನ್ನು ಪುಷ್ಠೀಗೊಳಿಸಬೇಕೆಂಬ ಐಡಿಯಾಲಜಿಯ ಬೆನ್ನು ಹತ್ತಿದರೆ ಅಂತಹ ವಿಷಯಗಳನ್ನು ಆಯ್ಕೆ ಮಾಡಬಹುದು, ಹಾಗೆ ಮಾಡುವ ಮೂಲಕ ಚಲಾವಣೆಯಲ್ಲಿರುವ ವಾದವೇ ಸತ್ಯವೆಂದು ಕೆಲವಾರು ಫ್ಯಾಕ್ಡ್ ನ್ನು ಸೇರಿಸಬಹುದು. ಹೀಗೆ ಮಾಡುವುದರಿಂದ ಯಾವ ಸಂಶೋಧನೆಯೂ ಆಗುವುದಿಲ್ಲ, ಏಕೆಂದರೆ ಮೊದಲೇ ಹೇಳಿದಂತೆ ಸಂಶೋಧನೆ ಮಾಡಿ ಕಂಡುಕೊಳ್ಳುವಂತದ್ದು ಅಲ್ಲಿ ಏನೂ ಇರುವುದಿಲ್ಲ.ಇನ್ನೊಂದು ಮಾರ್ಗವೆಂದರೆ ಅಧ್ಯಯನ ಮಾಡಲು ಮೊದಲು ಅಧ್ಯಯನದ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಪರಿಶೀಲಿಸಿ ಅಲ್ಲಿಂದ ಸಮಸ್ಯೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಜನರು ಏನನ್ನು ಒಪ್ಪುತ್ತಾರೆ ಏನನ್ನು ತಿರಸ್ಕರಿಸುತ್ತಾರೆ ಎಂಬುದಕ್ಕಿಂತ ಆ ವಿಷಯದ ಕುರಿತು ಏನೇನು ಅಧ್ಯಯನಗಾಳಗಿವೆ ಎಂಬುದನ್ನು ಗಮನಿಸಿ ಅದಕ್ಕಿಂತ ಮುಂದೆ ಹೋಗುವ ಕಾರ್ಯವನ್ನು ಸಂಶೋಧನೆ ಮಾಡಬೇಕಾಗುತ್ತದೆ. ಇನ್ನು ಈಗಿರುವ ಸಂಶೋಧನೆಯ ಕುರಿತು ನಾನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಸಂಶೋಧನೆ ಮಾಡದೆ ಮತ್ತು ಸಂಶೋಧನೆಯನ್ನು ಅರ್ಥವೂ ಮಾಡಿಕೊಳ್ಳದೆ ಹಾಗೂ ಚರ್ಚೆಯನ್ನೂ ಮಾಡದೆ ಪ್ರತಿಕ್ರಿಯಿಸುವವರು ಮಾತ್ರ ಹೆಚ್ಚಾಗಿದ್ದಾರೆ. ಅವರ ಬಹುತೇಕ ಪ್ರಶ್ನೆಗಳು ನಿಜವಾಗಿಯೂ ತಿಳಿದುಕೊಳ್ಳಲು ಇರುವ ಹಂಬಲವನ್ನು ಸೂಚಿಸದೆ ಅವರ ಅಸಮಾಧಾನವನ್ನು ಹೊರಹಾಕುವುದನ್ನು ಸೂಚಿಸುತ್ತದೆ…

ಸಾತ್ವಿಕ್ : ಹಾಗಾದರೆ, ನೀವು ಹೇಳುವಂತೆ ಸಂಶೋಧನೆಯ ವಿಚಾರಗಳಿಗೂ ಸಾಮಾನ್ಯ ತಿಳುವಳಿಕೆಗೂ ವ್ಯತ್ಯಾಸವಿದೆ ಅಂತ ಆಯ್ತು. ಹಾಗಾದ್ರೆ ಸಂಶೋಧನೆ ಅಂದ್ರೆ ಒಂಥರಾ ಈ ಆಧ್ಯಾತ್ಮದ ಸತ್ಯದ ಹುಡುಕಾಟದ ಹಾಗೆ ಅಲ್ವಾ?

ಸಂತೋಷ್ ಶೆಟ್ಟಿ : ಸಾಮಾನ್ಯ ತಿಳುವಳಿಕೆ ಮತ್ತು ಸಂಶೋಧನೆಗೂ ನಿಜವಾಗಿಯೂ ವ್ಯತ್ಯಾಸವಿದೆ, ಅವೆರಡೂ ಒಂದೇ ಆದರೆ ಮತ್ತೆ ಹೇಳುತ್ತೇನೆ, ಸಂಶೋಧನೆ ಮಾಡುವುದರ ಫಲವೇನು? ಸಂಶೋಧನೆಯಲ್ಲಿ ತೊಡಗಿಕೊಂಡವರು ಅದನ್ನು ಯಾವ ರೀತಿಯಾದರೂ ನೋಡಬಹುದು, ಕೆಲವರಿಗೆ ಆಧ್ಯಾತ್ಮದ ಸಾಧನೆಯಂತೆ ತೋರಬಹದು, ಮತ್ತೆ ಕೆಲವರಿಗೆ ಆಳವಾದ ಅಧ್ಯಯನದಂತೆ ತೋರಬಹುದು, ಅದು ಸಂಶೋಧಕರ ಮೇಲೆ ಅವಲಂಬಿತವಾದುದು. ಆದರೆ ಒಂದಂತೂ ಸತ್ಯ ಸಂಶೋಧನೆ ಎಂಬುದು ಒಂದು ಸಂಗತಿಯ ಕುರಿತು ಇರುವ ಜ್ಞಾನವನ್ನು ಹೆಚ್ಚಿಸುವ ಅಥವಾ ಇರುವ ಜ್ಞಾನಕ್ಕೆ ಪರ್ಯಾಯವನ್ನು ಹುಡುಕುವ ಕೆಲಸ…

ಸಾತ್ವಿಕ್ :  ಸಂಶೋಧಕನೊಬ್ಬ ತನ್ನ ಸಂಶೋಧನೆಯ ಮೂಲಕ ಜನಪ್ರಿಯ ಅಥವಾ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧವಾದ ಫಲಿತಗಳನ್ನು ಹೇಳಬೇಕಾಗಿ ಬರುತ್ತದೆ. ಇದರಿಂದ ಸಂಶೋಧಕನ ವೈಯಕ್ತಿಕ ಚಾರಿತ್ರ್ಯಹರನವೂ ಆಗಬಹುದು. ಇದನ್ನೆಲ್ಲ ಸಂಶೋಧಕ ನಿಭಾಯಿಸುವುದು ಕಷ್ಟ ಅಲ್ವಾ? ಈ ತರಹದ ಕೆಸರು ಎರಚುವ ಕೆಲಸ ಬೇರೆ ದೇಶಗಳಲ್ಲೂ ಆಗುತ್ತಾ?

ಸಂತೋಷ್ ಶೆಟ್ಟಿ : ಇದು ಎಲ್ಲಾ ದೇಶ ಕಾಲಗಳಲ್ಲಿಯೂ ಇದ್ದೇ ಇರುತ್ತದೆ, ಜನಸಾಮಾನ್ಯರು ಅಂದುಕೊಂಡಿರುವುದಕ್ಕಿಂತ ಬೇರೆಯದನ್ನೇ ಹೇಳಿದರೆ ಚಾರಿತ್ರ‍್ಯಹರಣ ಆಗೇ ಆಗುತ್ತದೆ. ಅದಕ್ಕೂ ಮುಂದಿನ ಹಂತ ತಲುಪುವ ಸಾಧ್ಯತೆಗಳೂ ಇರುತ್ತವೆ. ಗೆಲಿಲಿಯೋ ಭೂಮಿಕೇಂದ್ರಿತ ತಿಳುವಳಿಕೆಗೆ ಪರ್ಯಾಯವಾಗಿ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿದ. ಆದರೆ ಭೂಮಿಕೇಂದ್ರಿತ ತಿಳುವಳಿಕೆಯನ್ನ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಪ್ರಬಲ ಸಮುದಾಯಗಳು ಅಂತಿಮವಾಗಿ ಗೆಲಿಲಿಯೋ ಗೆಲಿಲಿಯನ್ನು ಏನು ಮಾಡಿದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಂದು ಗೆಲಿಲಿ ಹೇಳಿರುವುದು ಜಗತ್ತಿನ ಕುರಿತ ಸತ್ಯ ಎಂಬುದರಲ್ಲಿ ಯಾರಿಗೂ ಅನುಮಾನವಿರಲಿಕ್ಕಿಲ್ಲ.

ಸಾತ್ವಿಕ್ :  ಹಾಗಾದ್ರೆ ತನಗೆ ವೈಯುಕ್ತಿಕವಾಗಿ ಹಾಗೂ ಗೆಲಿಲಿಯ ಹಾಗೆ ದೈಹಿಕವಾಗಿ ದೌರ್ಜನ್ಯಗಳನ್ನು ಸಮಾಜದಿಂದ ಪಡೆಯುವುದಾದರೆ ಆ ಸಮಾಜಕ್ಕೆ ಸಂಶೋಧಕ ತನ್ನ ಸಂಶೋಧನೆಯ ಫಲಗಳನ್ನು ನೀದುವ ಕೆಲಸ ಯಾಕೆ ಮಾದಬೇಕು?

ಶಂಕರ್ ಎನ್.ಎಸ್ : ಸಂಶೋಧಕನು ಸಾಮಾಜಿಕ ಸಮಸ್ಯೆಗೂ ಮತ್ತು ಸಂಶೋಧನಾ ಸಮಸ್ಯೆಗೂ ಇರುವ ವ್ಯತ್ಯಾಸವನ್ನು ಗುರುತಿಸಬೇಕು. ಸಾಮಾಜಿಕ ಸಮಸ್ಯೆಯು ಒಂದು ವಿದ್ಯಮಾನವಾಗಿರುವತ್ತದೆ. ಉದಾಹರಣೆಗೆ ಬಡತನ, ಶೋಷಣೆ ಇತ್ಯಾದಿ. ಇಂತಹ ವಿದ್ಯಮಾನಗಳ ಬಗ್ಗೆ ಸಾಮಾಜಿಕ ವಿಜ್ಞಾನಿಗಳು ಈಗಾಗಲೇ ವಿವರಣೆಗಳನ್ನು ನೀಡಿರುತ್ತಾರೆ. ಇಂತಹ ವಿವಣೆಗಳೇ ಥಿಯರಿಗಳು. ಇಂತಹ ವಿದ್ಯಮಾನದ ಬಗ್ಗೆ ಈಗಾಗಲೇ ಇರುವ ಥಿಯರಿಗಳು ನೀಡಿದ ವಿರವಣೆಗಳಲ್ಲಿರುವ ಸಮಸ್ಯೆಯನ್ನು ಗುರುತಿಸುವ ಮೂಲಕ ಸಂಶೋಧನೆಯ ಸಮಸ್ಯೆಯನ್ನು ತಿಳಿದುಕೊಳ್ಳಲಾಗುವುದು. ಆದರೆ ಇಂತಹ ಪ್ರಾಥಮಿಕ ಅಂಶಗಳೇ ನಮಗೆ ತಿಳಿದಿರುವುದಿಲ್ಲ.

ಸಂತೋಷ್ ಶೆಟ್ಟಿ : ಒಬ್ಬನಿಗೆ ಸತ್ಯ ಅಂತ ಅನ್ನಿಸಿದ್ದನ್ನು ಹೇಳಬೇಕಾಗುತ್ತದೆ, ಸತ್ಯಕ್ಕೆ ಯಾರ ಅಂಜಿಕೆ ಭಯವೂ ಇಲ್ಲ, ನಾವು ಮಾಡದಿದ್ದರೆ ಮತ್ಯಾರಾದರೂ ಮಾಡಿಯೇ ಮಾಡುತ್ತಾರೆ. ಮತ್ತೆ ಸಂಶೋಧನೆಯನ್ನ ಜಗತ್ತಿಗೆ ಏನೋ ಸತ್ಯ ಹೇಳುತ್ತೇನೆಂದು ಹೊರಡುವ ಅಗತ್ಯವೂ ಇಲ್ಲ. ಅದರ ಬದಲಿಗೆ ಎಲ್ಲಿ ಸಮಸ್ಯೆ ಎಂದೆನೆಸುತ್ತದೆಯೋ ಅಲ್ಲಿಂದ ಸಂಶೋಧನೆ ಪ್ರಾರಂಭವಾಗುತ್ತದೆ, ಅದರ ಮೂಲಕ ಬರುವ ಫಲಿತಾಂಶಗಳು ಏನಾದರೂ ಆಗಿರಬಹುದು.

ಸಾತ್ವಿಕ್ : ಸಂಶೋಧನೆ ಎಂಬುದು ಶೂನ್ಯದಲ್ಲಿ ನಡೆಯುವ ಪ್ರಕ್ರಿಯೆಯೇನು ಅಲ್ಲ. ಈಗಾಗಲೆ ನಮ್ಮ ತಲೆಯಲ್ಲಿ ಒಂದು ಐಡಿಯಾಲಜಿ ಎಂಬುದು ಇರುತ್ತದೆ. ಇದರ ಪರಿಣಾಮ ಸಂಶೋಧನೆಯ ಮೇಲೆ ಆಗುವುದಿಲ್ಲವೇ? ಸಾಮಾಜಿಕ ಸಮಸ್ಯೆಗಳು ಸಂಶೋಧನೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರದೇ ಇರುತ್ತವಯೇ?

ಸಂತೋಷ್ ಶೆಟ್ಟಿ : ಐಡಿಯಾಲಜಿ ಮತ್ತು ಸಿದ್ಧಾಂತ ಎರಡೂ ಒಂದೇ ಅಲ್ಲ. ಐಡಿಯಾಲಜಿಯು ಬೇರೆ ಬೇರೆ ಸಿದ್ಧಾಂತಗಳಿಂದ ಮತ್ತು ಹಲವಾರು ವಿಚಾರಗಳಿಂದ ಐಡಿಯಾಗಳನ್ನು ತೆಗೆದುಕೊಂಡು, ಒಂದು ರೀತಿಯ ಚಿಂತನೆಯನ್ನು ರೂಪಿಸಿಕೊಳ್ಳುವುದು. ಆದರೆ ಸಂಶೋಧನೆಯ ಮೂಲಕ ಸಿದ್ಧಾಂತ ರೂಪಿಸುವುದು ಬೇರೆಯದೆ ಕೆಲಸ. ಐಡಿಯಾಲಜಿಯು ಪ್ರಸ್ತುತದಲ್ಲಿರುವ ಜ್ಞಾನವನ್ನೇ ಅವಲಂಬಿಸಿ ಮಾರ್ಗದರ್ಶನವಾಗಿ ಕೆಲಸಮಾಡುತ್ತಿರುತ್ತದೆ, ಮತ್ತು ಹೊಸ ಜ್ಞಾನಕ್ಕೆ ಅವಕಾಶವನ್ನು ನೀಡುವುದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಸಿದ್ಧಾಂತಗಳು ಸದಾ ಇರುವ ಜ್ಞಾನವನ್ನು ಒರೆಗೆ ಹಚ್ಚಿ ವಿದ್ಯಮಾನದ ಕುರಿತ ವಿವರಣೆಯನ್ನು ಹೆಚ್ಚೆಚ್ಚು ಸ್ಪಷ್ಟಗೊಳಿಸುತ್ತಾ ಹೋಗುತ್ತದೆ. ಹಾಗಾಗಿ ಐಡಿಯಾಲಜಿಯನ್ನು ಇಟ್ಟುಕೊಂಡು ಸಂಶೋಧನೆ ಮಾಡುವುದು ಎಂದರೆ ಇರುವ ಜ್ಞಾನವನ್ನೇ ಪುನರುತ್ಪಾದನೆ ಮಾಡುವುದು ಎಂದರ್ಥ. ಇನ್ನೂ ಸಾಮಾಜಿಕ ಸಮಸ್ಯೆಗಳು ಸಂಶೋಧನೆಯ ಮೇಲೆ ಪ್ರಭಾವ ಬೀರಬಹುದು, ಆದರೆ ಸಂಶೋಧನಾ ಸಮಸ್ಯೆ ಮತ್ತು ಸಾಮಾಜಿಕ ಸಮಸ್ಯೆ ಎರಡೂ ಒಂದೇ ಅಲ್ಲ, ಅವೆರಡಕ್ಕೂ ವ್ಯತ್ಯಾಸವಿದೆ.. ಸಾತ್ವಿಕ್

ಸಾತ್ವಿಕ್ :  ಈಗ ಸಂಶೋಧನಾ ಆಕರಕ್ಕೂ ನನಗೂ ಒಂದು ಸಂಬಂಧವಿರುತ್ತದೆ ಅಂದುಕೊಳ್ಳಿ. ಸುಮ್ಮನೆ ಉದಾಹರಣೆಗೆ ಹೇಳುವುದಾದರೆ ನಾನು ಲಿಂಗಾಯತನಾಗಿದ್ದು ವಚನಗಳ ಬಗ್ಗೆ ಸಂಶೋಧನೆಗೆ ಇಳಿದರೆ ನಾನು ಈ ಐದೆಂಟಿತಿಯಿಂದ ಹೇಗೆ ಅಂತರ ಕಾದುಕೊಳ್ಳುವುದು?

ಶಂಕರ್ ಎನ್.ಎಸ್ : ಲಿಂಗಾಯಿತ, ಬ್ರಾಹ್ಮಣ ಎಂಬ ಜಾತಿಯ ಗುರುತುಗಳು ಸಂಶೋಧಕನಿಗೆ ಮುಖ್ಯವಲ್ಲ, ಬದಲಿಗೆ ಸಂಶೋಧಕನಿಕೆ ಕೆಲಸು ಕೌಶಲ್ಯಗಳ ಅವಶ್ಯಕತೆ ಇರುತ್ತದೆ. ಅಂಹತ ಕೌಶಲ್ಯಗಳನ್ನು ಕರಗತವನ್ನು ಮಾಡಿಕೊಂಡವರು ಸಂಶೋಧಕರು ಎನಿಸಿಕೊಳ್ಳುತ್ತಾರೆ. ಅಂತಹ ಕೌಶಲ್ಯಗಳೆಂದರೆ 1. ಒಂದು ವಿದ್ಯಾಮಾನದ ಕುರಿತು ಈಗಾಗಲೇ ಇರುವ ಪುಸ್ತಕಗಳು ಮತ್ತ…ಮತ್ತಷ್ಟು ನೋಡಿರಿ

ಸಂತೋಷ್ ಶೆಟ್ಟಿ : ಒಂದು ಸಮುದಾಯದ ಸದಸ್ಯನಾಗಿದ್ದುಕೊಂಡು, ಆ ಸಮುದಾಯದ ಕುರಿತು ನೀಡಿರುವ ವಿವರಣೆ ಒಂದೊಮ್ಮೆ ಆ ವ್ಯಕ್ತಿಯ ಅನುಭವಕ್ಕೆ ವ್ಯತಿರಿಕ್ತವಾಗಿದ್ದರೆ ಅಲ್ಲಿ ಸಮಸ್ಯೆ ಏಳುತ್ತದೆ, ಆಗ ಆ ಸಮಸ್ಯೆಯನ್ನು ಅಧ್ಯಯನದ ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಂಡು ಸಂಶೋಧನೆ ನಡೆಸಬಹುದು. ಈಗ ನೋಡಿ ಭಾರತೀಯನಾಗಿದ್ದುಕೊಂಡು ಭಾರತದ ಬಗ್ದೆ ಸಂಶೋಧನೆ ನಡೆಸಿದರೆ ಆ ಅಸ್ಮಿತೆ ಹಿಂದೆ ಬರುವುದಿಲ್ಲವೇ? ಎಂದು ಕೂಡ ಕೇಳಬಹುದು, ಅಂತಹ ಅಸ್ಮಿತೆ ಇದ್ದೊಡನೆ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಐಡಿಯಾಲಜಿಯ ಮೊರೆ ಹೋಗಬೇಕಿಲ್ಲ, ಆ ಸಮಸ್ಯೆಯನ್ನು ಅಧ್ಯಯನದ ಸಮಸ್ಯೆಯನ್ನಾಗಿ ಮಾರ್ಪಡಿಸಿ ಸಂಶೋಧನೆ ಮಾಡಬಹುದು.

ಸಾತ್ವಿಕ್ : ಶಂಕರ್ ಎನ್.ಎಸ್, ಸಾಮಾಜಿಕ ಪರಿಪ್ರೇಕ್ಷೆಗಳಿಂದ ವ್ಯಕ್ತಿಯೊಬ್ಬ ಬಿಡಿಸಿಕೊಳ್ಳುವುದು ನೀವು ಹೇಳಿದಷ್ಟು ಸುಲಭ ಸಾಧ್ಯವಲ್ಲ. ಹೀಗಾಗಿಯೇ ಇವತ್ತಿನ ಕೆಲವು ಸಂಶೋಧನೆಗಳು ‘ಜಾತಿಯಲ್ಲಿರುವ ಸಾಂಸ್ಕೃತಿಕ ವಿಶೇಷಗಳನ್ನು ಇಲ್ಲವೇ ಅನನ್ಯತೆಗಳನ್ನು ಹೇಳುವ ಮೂಲಕ ತನ್ನ ಜಾತಿಯ ಐಡೆಂಟಿಟಿಗೆ ಹೊಸದೊಂದು ಕಾಯಕಲ್ಪ ನೀಡುವ ಕೆಲಸಕಷ್ಟೇ ನಿಂತು ಬಿಟ್ಟಿವೆ. ಅಥವಾ ಈಗಾಗಲೇ ಸಿದ್ಧ ಮಾದರಿಯ ವಾದಗಳಿಗೆ ಸಾಮಾಜಿಕ ಸಂಗತಿಗಳನ್ನು ಜೋದಿಸುವುದನ್ನೇ ಸಂಶೋಧನೆ ಎಂದು ಕರೆಯುವುದು ಕಂಡು ಬರುತ್ತಿದೆ. ಈ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿ.

ಶಂಕರ್ ಎನ್.ಎಸ್ : ಸಾತ್ವಿಕ್ . ಅವರೆ ಸಂಶೋಧನೆಯು ಕಲಿಕೆಗೆ ಸಂಬಂಧಿಸಿದ್ದು, ಯಾವ ದೇವರೋ ವರವಾಗಿ ಕೊಟ್ಟಿದ್ದಲ್ಲ. ಹಾಗಾಗಿ ಒಬ್ಬ ಸಂಶೋಧಕನಿಗೆ ಸಂಶೋಧನೆಗೆ ಬೇಕಾದ ಯಾವ ಅಂಶಗಳನ್ನು ಕಲಿಯಬೇಕು ಮತ್ತು ಯಾವ ಅಂಶಗಳನ್ನು ಕಲಿಯಬಾರದು ಎಂಬುದರ ಬಗ್ಗೆ ತಿಳುವಳಿಕೆಯು ಇರಬೇಕಾಗುತ್ತದೆ. ಆದ್ದರಿಂದ ಸಂಶೋಧಕನು ಜಾತಿಯ ಅನನ್ಯತೆಯಿಂದ ಬಿಡಿಸಿಕೊಳ್ಳಬೇಕೆಂಬ ವಿಷಯವೇ ಇಲ್ಲಿ ಅಪ್ರಸ್ತುತ. ಅಂದರೆ ಒಬ್ಬ ಸಂಶೋಧಕನು ತಾನು ಇಂತಹ ಜಾತಿಯವನು ಹಾಗಾಗಿ ತನ್ನ ಸಂಶೋಧನೆಯಿಂದ ಇಂತಹ ತೀರ್ಮಾನಗಳನ್ನೇ ತೆಗೆದುಕೊಳ್ಳಬೇಕೆಂದು ಹೊರಟರೆ ಅದು ಸಂಶೋಧನೆ ಎನಿಸುವುದಿಲ್ಲ, ಬದಲಿಗೆ ಅಂತಹ ಸಂಶೋಧನೆಯು ಪ್ರಿಟಿಶಿಯೊ ಪ್ರಿನಿಕಿಪಿ ಎಂಬ ತಾರ್ಕಿಕ ದೋಷದಿಂದ ಕೂಡಿದ್ದಾಗಿರುತ್ತದೆ. ಪ್ರಿಟಿಶಿಯೊ ಪ್ರಿನಿಕಿಪಿ ಎಂದರೆ ಸಂಶೋಧನೆಯಿಂದ ಹೊರಬೀಳಬೇಕಾಗಿದ್ದ ಫಲಿತಾಂಶವನ್ನು ಮುಂಚೆಯೇ ತೀರ್ಮಾನಿಸಿಕೊಂಡು ಸಂಶೋಧನೆಗೆ ತೊಡಗುವುದು. ಅಸಲಿಗೆ ಅಂತಹ ಸಂಶೋಧನೆಯು ಸಂಶೋಧನೆಯೇ ಅಲ್ಲ. ಜೊತೆಗೆ ಮುಂಚೆಯೇ ತೀರ್ಮಾನಿಕೊಂಡ ಫಲಿತಾಂಶಕ್ಕೂ ಹೈಪೋಥೀಸಿಸ್ ಗೂ ವ್ಯತ್ಯಾಸವಿದೆ. ಅಂದರೆ ಒಬ್ಬ ಸಂಶೋಧಕನು ಹೈಪೋಥೀಸಿಸ್ ಇಟ್ಟುಕೊಂಡು, ಅದನ್ನು ಪರೀಕ್ಷೆ ಮಾಡುವಾಗ ಸಿಗುವ ಆಧಾರಗಳು ಅಂತಹ ಹೈಪೋಥೀಸಿಸ್ ಸುಳ್ಳು ಎಂದು ದೃಢಪಡಿಸಿದರೆ, ಅಂತಹ ಹೈಪೋಥೀಸಿಸ್ ಅನ್ನು ಮಾರ್ಪಡಿಸಬೇಕಾಗುತ್ತದೆ. ಅಂತಹ ಬದಲಾವಣೆಯನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಮಾತ್ರ ಕಾಣಲು ಸಾಧ್ಯ.

ಸಾತ್ವಿಕ್ :  ಪ್ರಿಟಿಶಿಯೊ ಪ್ರಿನಿಕಿಪಿ ಇದರ ಇನ್ನಷ್ಟು ಮಾಹಿತಿ ನೀಡಿ.. ಯಾಕಂದರೆ ಈ ರೀತಿಯ ಸಂಶೋಧನೆಗಳೆ ಹೆಚ್ಚು ಎನಿಸುತ್ತಿದೆ ಶಂಕರ್ ಎನ್.ಎಸ್

ಶಂಕರ್ ಎನ್.ಎಸ್ : ಹೆಚ್ಚಿನ ಮಾಹಿತಿಗೆ ನೋಡಿ:
1. http://en.wikipedia.org/wiki/Begging_the_question ;
2. http://philosophy.lander.edu/logic/circular.html ;
3. http://courses.csusm.edu/fallacies/petitio.htm ;
4. http://www.thefreedictionary.com/petitio+principii etc.
Begging the question – Wikipedia, the free encyclopedia
en.wikipedia.org

ಸಾತ್ವಿಕ್ : ಥ್ಯಾಂಕ್ಯು ಶಂಕರ್. ಈಗ ನಮ್ಮ ಸಮಾಜ ವಿಜ್ನಾನದ ಸಂಶೋಧನೆಗಳು ಪಶ್ಚಿಮ ಪ್ರಣೀತವಿಚಾರಗಳಿಂದ ಪ್ರೇರಿತವಾಗಿವೆ ಎನ್ನುತ್ತಾರೆ ಬಾಲು ಅವರು. ಈ ಸಂಶೋಧನೆ ಎನ್ನುವುದೇ ಪಶ್ಚಿಮ ಪ್ರಣಿತ ಕಲ್ಪನೆ ಅಲ್ಲವೇ?

ಶಂಕರ್ ಎನ್.ಎಸ್ : ಈ ಸಂಶೋಧನೆ ಎಂದರೆ ಯಾವುದು?

ಸಾತ್ವಿಕ್ :  ಸಂಶೋಧನೆ ಎನ್ನುವ ಪ್ರಕ್ರಿಯೆ .

ಷಣ್ಮುಖ ಆರ್ಮುಗಂ : ಪ್ರಿಟಿಶಿಯೊ ಪ್ರಿನಿಕಿಪಿ ಎಂದರೆ ವಾಸ್ತವ ವೆಂದು ತೋರಿಸದೇ ಇರುವ ಒಂದು ವಾದವನ್ನೇ ಆಧಾರವಾಗಿಟ್ಟುಕೊಂಡು ಮತ್ತೊಂದು ವಾದವನ್ನು ಕಟ್ಟುವುದು. ಉಧಾ: ಭಾರತದಲ್ಲಿ ಜಾತಿವ್ಯವಸ್ತೆ, ಪುರೋಹಿತಶಾಹಿ, ವೈಧಿಕ/ಹಿಂಧೂ ರಿಲಿಜನ್ ಗಳಿವೆ/ಇತ್ತು ಎನ್ನುವ ವಾದವನ್ನು ನಂಬಿಕೊಂಡು ವಚನಗಳು ಜಾತಿವ್ಯವಸ್ಥೆ ವಿರುದ್ಚದದ ಚಳುವಳಿ ಎನ್ನುವ ವಾದ ಈ ಪ್ರಿಟಿಶಿಯೊ ಪ್ರಿನಿಕಿಪಿ ಗೆ ಅತ್ಯುತ್ತಮ ಉಧಾಹರಣೆ.

ಶಂಕರ್ ಎನ್.ಎಸ್ : ವಿಜ್ಞಾನಗಳು ಸೃಷ್ಟಿಯಾದುದು ಪಶ್ಚಿಮದಲ್ಲಿ ಎಂದರೆ ತಪ್ಪಾಗಲಾರದು. ಅಂತಹ ವಿಜ್ಞಾನಗಳು ನೈಸರ್ಗಿಕ ವಿದ್ಯಮಾನಗಳ ಕುರಿತ ವೈಜ್ಞಾನಿಕ ವಿವರಣೆಗಳನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಕುರಿತ ವೈಜ್ಞಾನಿಕ ಅಧ್ಯಯನಗಳನ್ನು ಮಾಡಲು ಇವು ವಿಫಲವಾಗಿವೆ. ಏಕೆಂದರೆ ಬಾಲಗಂಗಾಧರ ಅವರು ಹೇಳಿದಂತೆ ಇಂದಿನ ಸಮಾಜ ವಿಜ್ಞಾನಗಳು ಕ್ರಿಶ್ಚಿಯನ್ ಥಿಯಾಲಜಿಯ ಅಂಶಗಳನ್ನು ಸೆಕ್ಯುಲರ್ ರೂಪದಲ್ಲಿ ಪುನರ್ ಪಟಿಸುವುದಕ್ಕೆ ಸೀಮಿತವಾಗಿವೆ. ಹಾಗೆಂದ ಮಾತ್ರಕ್ಕೆ ಇಂತಹ ಸಾಂಸ್ಕೃತಿ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅಸಾಧ್ಯ ಎಂದಲ್ಲ, ಬದಲಿಗೆ ಇಂತಹ ವಿದ್ಯಮಾನಗಳ ಕುರಿತು ಚರ್ಚೆಯನ್ನು ತಾರ್ಕಿಕವಾಗಿ ಮತ್ತು ಅನುಭವಾತ್ಮಕವಾಗಿ ಭಾರತದ ಮಹಾನ್ ಪುರುಷರು ಮಾಡಿದ್ದಾರೆ. ಉದಾಹರಣೆಗೆ ಬುದ್ಧ, ಶಂಕರ, ಬಸವ, ಅಲ್ಲಮ, ರಾಮಕೃಷ್ಣ ಪರಮಾಂಸರು ಇತ್ಯಾದಿ…

ಷಣ್ಮುಖ ಆರ್ಮುಗಂ : ಜಾತಿವ್ಯವಸ್ತೆ, ಪುರೋಹಿತಶಾಹಿ, ವೈದಿಕ/ಹಿಂದೂ ರಿಲಿಜಿನ್ ಇದೆ/ಇತ್ತು ಎಂದು ತೋರಿಸಲು or ಎನ್ನುವ ವಾದವನ್ನು ಕಟ್ಟಲು ವಚನಗಳು ಜಾತಿವಿರುದ್ದ ಚಳುವಳಿಯಾಗಿತ್ತು ಎನ್ನುವ ವಾದವನ್ನು ಆದರಿಸುವುದು. ಅಂದರೆ ”ಈ ವಾದವನ್ನು ಕಟ್ಟಲು ‘ಆ’ ವಾದವನ್ನು ಆದರಿಸುವುದು; ಮತ್ತು ‘ಆ’ ವಾದವನ್ನು ಕಟ್ಟಲು ‘ಈ’ ವಾದವನ್ನು ಆದರಿಸುವುದು. ಇದನ್ನು ‘ವಿಷಿಯಸ್ ಸರ್ಕಲ್’ (ಒಂದು ವಿಷವರ್ತುಲ ಎಂದ ಹಾಗೆ) ಎನ್ನುತ್ತಾರೆ.

ಸಾತ್ವಿಕ್ :  ಷಣ್ಮುಖ ಆರ್ಮುಗಂ ಸರ್ ನೀವು ಹೇಳಿದ್ದು ಸಂಸ್ಕೃತಿ ಕುರಿತ ಸಂಶೋಧನೆಯ ಮಾದರಿಗಳಿಗೆ ಸರಿ. ಅದಲ್ಲದೇ ಇತರೆ ಸಮಾಜ ವಿಜ್ನಾನದ ಶಾಖೆಗಳ ವಿಚಾರದಲ್ಲಿ ಈ ಅಂಶವನ್ನು ಹೇಗೆ ಅನ್ವಯಿಸಬಹುದು? ಉದಾಹರಣೆಗೆ ಪತ್ರಿಕೋದ್ಯಮದ ಒಂದು ಸಂಶೋಧನೆ.

ಷಣ್ಮುಖ ಆರ್ಮುಗಂ : ಸಂಸ್ಕೃತಿ ಕುರಿತ ಚಿಂತನೆ ಮತ್ತು ಸಮಾಜ ಕುರಿತ ಚಿಂತನೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಸಾಮಾಜಿಕ ಜಗತ್ತಿನ ಕುರಿತ ಇರುವ ವಿವರಣೆಗಳೇ ಸಮಾಜ ವಿಜ್ಞಾನಗಳಾಗಿವೆ. ಸಂಸ್ಕೃತಿಗಳು ಒಂದು ಸಮಾಜದಲ್ಸಲಿರುವ ಇರುವ ಕಲಿಕಾ ಪ್ರಕ್ರಿಯೆ ಎನ್ನುತ್ತಾರೆ ಬಾಲು. ಯೂರೂಪು ಮತ್ತು ಏಷ್ಯಾ/ಭಾರತ ಸಮಾಜದಲ್ಲಿ ವ್ಯತ್ಯಾಸವೇ ಈ ಕಲಿಕಾ ಪ್ರಕ್ರಿಯೆಲ್ಲಿರುವ ವ್ಯತ್ಯಾಸ. ಹಾಗಾಗಿ, ಸಮಾಜ ವಿಜ್ಞಾನಗಳ ಕುರಿತ ವೈಜ್ಞಾನಿಕ ಸಂಶೋಧನೆಗಳೇ ಸಂಸ್ಕೃತಿ ಅಧ್ಯಯನಕ್ಕೂ ಅನ್ವಯವಾಗುತ್ತದೆ.

ಪತ್ರಿಕೋಧ್ಯಮವೂ ಸಹ ಸಮಾಜದ ಓರೆ ಕೋರೆಗಳ ಕುರಿತು ವರಧಿ ಸಲ್ಲಿಸುವಾಗ ಹಾಗೆಯೇ ಸಾಮುದಾಯಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾದಾಗ ಇದೇ ರೀತಿಯ ವೈಜ್ಞಾನಿಕ ಸಿದ್ದಾಂತಗಳನ್ನು ಬಳಸುವುದು ಅಥವಾ ಬೆಳಸುವುದು ಅನಿವಾರ್ಯ. ಆದರೆ ಇಂದು ಬಹುತೇಕ ಪತ್ರಿಕೋದ್ಯ ಸಂಶೋಧನೆಗಳು ಒಂದಲ್ಲಾ ಒಂದು ಐಡಿಯಾಲಜಿಯ ಬಾಗವಾಗಿ ನಡೆಯುವುದರಿಂದ ವಾಸ್ತವಕ್ಕಿಂತ ವ್ಯತಿರಿಕ್ತವಾದ ಐಡಿಯಾಲಜಿಗಳ ಘೋಷಣೆಗಳು ಅಥವಾ ಅದಕ್ಕೆ ಪೂರಕವಾದ ಫ್ಯಾಕ್ಟ್ ಗಳಷ್ಟೇ ಅಲ್ಲಿ ಪ್ರದರ್ಶಿಸಲ್ಪಡುತ್ತವೆ.

ಸಾತ್ವಿಕ್ : ಸರ್, ಮತ್ತೊಂದು ವಿಷಯ ವಿವಿಗಳಲ್ಲಿ ಹರಿದಾಡುತ್ತಿರುತ್ತದೆ. ನಾವು ಇದಿಗ ಬಳಸುತ್ತಿರುವ ವೈಧಾನಿಕತೆಗಳು ಹಳೆಯ ಮಾದರಿಯವು ಅಂತ. ಇದು ನಿಜವೇ? ಸಂಶೋಧನಾ ವಲಯದಲ್ಲಿ ಇತ್ತಿಚೆಗೆ ಆಗಿರುವ ಬದಲಾವನೆಗಳೇನು?

ಶಂಕರ್ ಎನ್.ಎಸ್ : ಜಾತಿಯ ಅನನ್ಯತೆಯು ಕೇವಲ ಸಂಶೋಧಕರಿಗೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಇಂದಿನ ಶಿಕ್ಷಿತರಲ್ಲೂ ಇದೆ. ಶಿಕ್ಷಿತರಲ್ಲಿರುವ ಈ ಜಾತಿಯ ಅನನ್ಯತೆಯ ಅಂಶವನ್ನು ಕ್ಷೇತ್ರಕಾರ್ಯ ಮಾಡುವಾಗ ತಿಳಿದುಕೊಂಡೆನು: 1. ಒಂದು ಸರ್ಕಾರಿ ಕಛೇರಿಯಲ್ಲಿ ಇರುವ ಬ್ರಾಹ್ಮಣ ಅಧಿಕಾರಿಯು, ಅದೇ ಕಛೇರಿಯಲ್ಲಿರುವ ಅಸ್ಪೃಶ್ಯ ಅಟೆಂಡರಿಗೆ ತನ್ನ ಪಾತ್ರೆಯನ್ನು ಮುಟ್ಟಿಸುವುದರಲ್ಲಿ ತಪ್ಪಿಲ್ಲ ಎಂದೂ ಗೊತ್ತಿದ್ದರೂ ಮುಟ್ಟಿಸುತ್ತಿರಲಿಲ್ಲ. ಏಕೆಂದು ಆ ಪ್ರಶ್ನಿಸಿದಾಗ, ಈ ಅಸ್ಪೃಶ್ಯ ವ್ಯಕ್ತಿಯು ತನ್ನ ಪಾತ್ರೆಗಳನ್ನು ಮುಟ್ಟಿದರೆ, ತನ್ನ ಬ್ರಾಹ್ಮಣ್ಯ ಹಾಳಾಗುತ್ತದೆ ಎಂದು ಉತ್ತರವನ್ನು ನೀಡಿದರು. ಆದರೆ ಪಾತ್ರೆ ಮುಟ್ಟುವುದರಿಂದ ಬ್ರಾಹ್ಮಣರ ಬ್ರಾಹ್ಮಣ್ಯ ಹಾಳಾಗುವುದಿಲ್ಲ ಎಂಬ ಅರಿವು ಆ ಬ್ರಾಹ್ಮಣನಿಗೆ ಇರಲಿಲ್ಲ. 2. ಅದೇ ರೀತಿ ಒಬ್ಬ ದಲಿತ ಚಳುವಳಿಕಾರರು, ತನ್ನ ಜಾತಿಗೆ ಸೇರಿದ ಒಬ್ಬ ಬಾಲಕನ ಸಮಸ್ಯೆಯ ಬಗ್ಗೆ ಹೇಳುತ್ತಾರೆ. ಅದೇನೆಂದರೆ ‘ಅಸ್ಪೃಶ್ಯ’ ವಿದ್ಯಾರ್ಥಿಯು ಕಾಲೇಜಿಗೆ ಹೋಗುವಾಗ ತನ್ನ ಊರಿನವರೇ ಆದ ಲಿಂಗಾಯಿತ ಜಾತಿಗೆ ಸೇರಿದ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದನಂತೆ, ಇದು ಆ ವಿದ್ಯಾರ್ಥಿನಿಗೆ ಸರಿ ಎನಿಸಿಲಿಲ್ಲವಂತೆ, ಅದನ್ನು ಗಮನಿಸಿಯೂ, ಆ ‘ಅಸ್ಪೃಶ್ಯ’ ಜಾತಿಗೆ ಸೇರಿದ ವಿದ್ಯಾರ್ಥಿಯು ಲಿಂಗಾಯಿತ ಜಾತಿಗೆ ಸೇರಿದ ವಿದ್ಯಾರ್ಥಿನಿಯನ್ನು ಚುಡಾಯಿಸುವುದನ್ನು ಮುಂದುವರೆಸುತ್ತಾನಂತೆ. ಹಾಗೂ ಇದರಲ್ಲಿ ‘ಅಸ್ಪೃಶ್ಯ’ ವಿದ್ಯಾರ್ಥಿಯದ್ದೇ ತಪ್ಪು ಎಂದು ಆ ಚಳುವಳಿಕಾರರು ಹೇಳುತ್ತಾರೆ. ಆದರೂ ಆ ಚಳುವಳಿಕಾರರು ತನ್ನ ಜಾತಿಗೆ ಸೇರಿದ ವಿದ್ಯಾರ್ಥಿಯ ಪರವಾಗಿ ನಿಲ್ಲದಿದ್ದರೆ ತಪ್ಪಲ್ಲವೇ ಎಂದು ತಪ್ಪು ಇರುವ ತನ್ನ ಜಾತಿಯ ವಿದ್ಯಾರ್ಥಿಯ ಪರವಾಗಿ ನಿಲ್ಲುತ್ತಾರೆ. ಈ ಎರಡು ಘಟನೆಗಳಲ್ಲಿ ಶಿಕ್ಷಿತ ಬ್ರಾಹ್ಮಣ ಮತ್ತು ದಲಿತ ಚಳುವಳಕಾರರು ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಜಾತಿಯ ಅನನ್ಯತೆಯು ಅವರನ್ನು ಹಾಗೇ ಮಾಡಿಸಲು ಒತ್ತಾಯಿಸುತ್ತದೆ.ನೀವು ಹೇಳಿದಂತೆ, ಇಂತಹ ಜಾತಿ ಅನನ್ಯತೆಯು ಎಲ್ಲಾ ಜಾತಿಗಳಿಗೆ ಸೇರಿದ ಸಂಶೋಧಕರಲ್ಲೂ ಇದೆ. ಬ್ರಾಹ್ಮಣ ಸಂಶೋಧಕರಾದರೆ ಹೇಗಾದರೂ ಮಾಡಿ ಬ್ರಾಹ್ಮಣರ ಮೇಲಿರುವ ಆರೋಪವನ್ನು ತೆಗೆದುಕೊಳ್ಳಬೇಕೆಂದು ವಾದಿಸುವುದರಲ್ಲೇ ಕಾಲವನ್ಮುಂನು ಕಳೆದರೆ, ದಲಿತ ಸಂಶೋಧಕರಾದರೆ, ತಮ್ಮ ಜಾತಿಗಳು ಶತಮಾನಗಳ ಕಾಲ ಶೋಷಣೆಗೆ ಒಳಗಾಗಿದ್ದವು ಎಂದು ತೋರಿಸುವ ಪ್ರಯತ್ನದಲ್ಲೇ ತಮ್ಮ ಸಂಶೋಧನ ಪ್ರಬಂಧವನ್ನು ರಚಿಸುತ್ತಾರೆ. ಇವರಿಗೆ ತಮ್ಮ ಜಾತಿಗಳ ಸಾಮಾನ್ಯ ಜನರು ಎದರಿಸುವ ನೈಜ ಸಮಸ್ಯೆಗಳೇನು ಮತ್ತು ಅವುಗಳನ್ನು ಹೇಗೆ ಸರಿಪಡಿಸಬೇಕು ಎಂಬ ವಿಷಯಗಳ ಬಗ್ಗೆ ಗಮನವೇ ಇರುವುದಿಲ್ಲ. ಬದಲಿಗೆ ಈಗಾಗಲೇ ಮಂಡಿಸಲಾದ ವಾದಗಳನ್ನೇ ಇಟ್ಟುಕೊಂಡು ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗಲೂ ಮತ್ತೆ ಅದೇ ರೀತಿ ಕಾಣುತ್ತದೆ ಎಂದು ಹೇಳುವುದರಲ್ಲೇ ಕಾಲವನ್ನು ಕಳೆಯುತ್ತಿದ್ದಾರೆ. ಇದರಿಂದ ಈಗಾಗಲೇ ಹೇಳಿದ ಬ್ರಾಹ್ಮಣ ಅಧಿಕಾರಿ ಮತ್ತು ದಲಿತ ಚಳುವಳಿಕಾರರಿಗೂ ಹಾಗೂ ಸಂಶೋಧಕರಿಗೂ ಏನಾದರೂ ವ್ಯತ್ಯಾಸ ಇದೆಯೇ? ಎಂಬ ಪ್ರಶ್ನೆಯು ನನ್ನಲ್ಲೂ ಕಾಡುತ್ತಿದೆ. ಏಕೆಂದರೆ, ಸಮಾಜದ ಕುರಿತು ಸಂಶೋಧನೆಯನ್ನು ಮಾಡುವ ಸಂಶೋಧಕರಿಗೆ ಸಮಾಜವು ಸಾಮಾನ್ಯ ಜನರಿಗಿಂತ ಭಿನ್ನವಾಗಿ ಕಾಣಬೇಕು. ಅಂದರೆ ಬೆಳಗಿನ ಸೂರ್ಯೋದಯವನ್ನು ಒಬ್ಬ ಸಾಮಾನ್ಯ ವ್ಯಕ್ತಿಯು ನೋಡುವುದಕ್ಕೂ ಮತ್ತು ಕವಿ ಅಥವಾ ಛಾಯಾಗ್ರಹಾಕ ಅಥವಾ ಭೌತಶಾಸ್ತ್ರದ ವಿಜ್ಞಾನಿಗಳು ನೋಡುವುದಕ್ಕೂ ಭಿನ್ನವಾಗಿರುತ್ತದೆ. ಅದೇ ರೀತಿ ಸಮಾಜದಲ್ಲಿರುವ ವಿದ್ಯಮಾನಗಳನ್ನು ಸಾಮಾನ್ಯ ವ್ಯಕ್ತಿ ನೋಡುವುದಕ್ಕೂ ಮತ್ತು ಸಂಶೋಧಕರು ನೋಡುವುದಕ್ಕೂ ಭಿನ್ನವಾಗಿರಬೇಕು. ಆದರೆ ಈ ಭಿನ್ನತೆಯು ಇಂದಿನ ಸಮಾಜ ವಿಜ್ಞಾನಗಳಲ್ಲಿ ನಡೆಯುವ ಸಂಶೋಧನೆಗಳಲ್ಲಿ ಕಾಣುತ್ತಿಲ್ಲ.

ಸಾತ್ವಿಕ್ : ಖಂಡಿತಾ ಶಂಕರ್. ಸಂಶೋಧಕನ ಅನನ್ಯತೆಯು ಆತನ ದೃಷ್ಟಿಕೋನದಲ್ಲಿರುತ್ತದೆ ಅಲ್ಲವೇ? ರೋಗವಿಡಿದ ಮರದ ಎಲ್ಲ ಎಲೆಗಳಿಗೂ ಚಿಕಿತ್ಸೆ ಕೊಡುವ ಅಗತ್ಯವಿಲ್ಲ. ಬದಲಾಗಿ ನೇರವಾಗಿ ಬೇರಿಗೆ ಮದ್ದು ಕೊದಬಹುದು. ಇದು ಸಂಶೋಧಕನ ಆಶಯವಾಗಿರಬೇಕು ಕೂಡ. ನಿಜ ಹೇಳಬೇಕು ಅಂದ್ರೆ ನಾನು ಸಂಶೋಧಕ ಎಂಬ ಮನಸ್ಥಿತಿ ತಂದುಕೊಳ್ಳುವುದೇ ಸಂಶೋಧನೆಯ ದೊಡ್ಡ ಧನಾತ್ಮಕ ಆರಂಭ

ಶಂಕರ್ ಎನ್.ಎಸ್ : ನಿಮ್ಮ ಪ್ರಶ್ನೆಯು ನನಗೆ ಅರ್ಥವಾಗಲಿಲ್ಲ.

ಸಾತ್ವಿಕ್ : ಅಂದ್ರೆ ಸಮಸ್ಯೆಯ ಮೂಲವನ್ನು ಗುರುತಿಸುವ ಬಗ್ಗೆ ಹೇಳಿದೆ..

ಸಂತೋಷ್ ಶೆಟ್ಟಿ : ಸದ್ಯಕ್ಕೆ ಒಪ್ಪಿತವಾಗಿರುವ ಸಂಶೋಧನಾ ವಿಧಾನವು ಹಳೆಯ ಮಾದರಿಯದೆ. ಬಹುತೇಕ ಮಟ್ಟಿಗೆ ಆ ವಿಧಾನವು ಫ್ಯಾಕ್ಟ್ ಗಳನ್ನು ಕಲೆಹಾಕುವುದರ ಕುರಿತು ಕಲಿಸುತ್ತದೆ. ಅಂದರೆ ಕ್ಷೇತ್ರಕಾರ್ಯವನ್ನು ಮಾಡುವುದರ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಎಷ್ಟು ಸ್ಯಾಂಪ್ಲಿಂಗ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಎಷ್ಟು ಜನರವನ್ನು ಸಂದರ್ಶಿಸಬೇಕು, ಉತ್ತಮ ಸಂಶೋಧಕನ ಧೋರಣೆ ಹೇಗಿರಬೇಕು ಇನ್ನೂ ಮುಂತಾದ ಇಂತವೇ ಸಂಗತಿಗಳನ್ನು ತಿಳಿಸುತ್ತದೆ. ಆದರೆ ಸೈದ್ಧಾಂತಿಕವಾಗಿ ಸಂಶೋಧನೆ ನಡೆಸಲು ಬೇಕಾದ ತಯಾರಿಯನ್ನು ಅದು ಕಲಿಸುವುದಿಲ್ಲ ಎಂದರೆ ತಪ್ಪಾಗಲಾರದು. ಅಸ್ತಿತ್ವದಲ್ಲಿರುವ ಯಾವುದೋ ಸಿದ್ಧಾಂತಕ್ಕೆ ಫ್ಯಾಕ್ಟ್ ಗಳನ್ನು ಕಲೆಹಾಕುವುದೇ ಸಂಶೋಧನೆಯಾಗಿದೆ. ಸಮಾಜವಿಜ್ಞಾನ ಸಂಶೋಧನೆಯಲ್ಲಿ ಕೇವಲ ಅನ್ವಯಿಕ ಸಂಶೋಧನೆಗಳು ಮಾತ್ರ ಆಗುತ್ತಿವೆ, ಶುದ್ಧ (ಪ್ಯೂರ್ ರಿಸರ್ಚ್) ಆಗುತ್ತಿಲ್ಲ ಎಂದು ಕೆಲವರು ವಾದಿಸುತ್ತಾರೆ. ಅನ್ವಯಿಕ ಸಂಶೋಧನೆಗೆ ಬೇಕಾದ ಪರಿಕರ ಪರಿಭಾಷೆಗಳನ್ನು ಕಲಿಸಿಕೊಡುತ್ತಾ ಶುದ್ಧ ಸಂಶೋಧನೆ ಆಗುತ್ತಿಲ್ಲ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಅದರ ಜೊತೆಗೆ ಶುದ್ಧವಾದ ಅಂದರೆ ಹೊಸ ಜ್ಞಾನವನ್ನು ಸೃಷ್ಟಿಸುವ ಕೆಲಸ ಯಾರಾದರೂ ಪ್ರಾರಂಭಿಸಿದರೆ ಇವರ ವೈಧಾನಿಕತೆ ಸರಿ ಇಲ್ಲ ಎಂದು ಅತಾರ್ಕಿಕವಾಗಿ ಜರುಗುತ್ತಾರೆ. ಇಲ್ಲಿ ಸಂಶೋಧನಾ ವಿಧಾನ ಇಂತದ್ದೇ ಇರಬೇಕೆಂದು ಹೇಳುವುದು ಒಳ್ಳೆಯದಲ್ಲ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಸಂಶೋಧನಾ ಸಮಸ್ಯೆ ಮತ್ತು ಹೈಪೋಥೀಸಿಸ್ ಗಳ ಆಧಾರದ ಮೇಲೆ ವೈಧಾನಿಕತೆಯನ್ನು ನಿರ್ಧಾರ ಪಡಿಸಿಕೊಳ್ಳಬೇಕೇ ಹೊರತು ವೈಧಾನಿಕತೆಯಿಂದ ಹೈಪೋಥೀಸಿಸ್ ರೂಪುಗೊಳ್ಳುವುದು ಅನವಶ್ಯಕ. ಹಾಗೂ ಹೈಪೋಥೀಸಿಸ್ ಗಳು ಯಾವುದಾದರೂ ಒಂದು ಸಿದ್ಧಾಂತದ ಹಿನ್ನೆಲೆಯಲ್ಲಿ ರೂಪುಗೊಂಡರೆ ಅದನ್ನು ಪರೀಕ್ಷಿಸುವ ಮಾರ್ಗವೂ ಸುಲಭವಾಗಿರುತ್ತದೆ. ಕೇವಲ ೪ ಫ್ಯಾಕ್ಟ್ ಗಳನ್ನು ನೋಡಿ ಅದರ ಆಧಾರದ ಮೇಲೆ ಕಟ್ಟುವ ಹೈಪೋಥೀಸಿಸ್ ತಾತ್ಪೂರ್ತಿಕವಾಗಿರುತ್ತದೆ (ಆಡ್ ಹಾಕ್). ಇಂತಹ ಹೈಪೋಥೀಸಿಸ್ ಗಳನ್ನು ಪರೀಕ್ಷಿಸುವ ಯಾವ ವಿಧಾನಗಳೂ ಇಲ್ಲ. ಒಂದೊಮ್ಮೆ ಹೈಪೋಥೀಸಿಸ್ ಗಳನ್ನು ಪರೀಕ್ಷಿಸಲು ಸಾಧ್ಯವಿರದಿದ್ದರೆ ವಿದ್ಯಮಾನದ ಕುರಿತ ಜ್ಞಾನವೂ ಸಹ ಬೆಳೆಯಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಕ್ಷೇತ್ರಕಾರ್ಯವನ್ನು ಏಕೆ ಮಾಡಬೇಕು ಯಾವ ಸಿದ್ಧಾಂತದ ಭಾಗವಾಗಿ ತನ್ನ ಸಂಶೋಧನೆ ನಡೆಯುತ್ತಿದೆ ಎಂಬುದು ಅಜ್ಞಾತವಾಗಿ ಉಳಿಯುವಂತಹ ವೈಧಾನಿಕತೆ ಪ್ರಸ್ತುತದಲ್ಲಿದೆ. ಈಗ ಸೈದ್ಧಾಂತಿಕ ಸಂಶೋಧನೆಯ ಒಲವು ಹೆಚ್ಚಾಗುತ್ತಿದೆ ಸಾತ್ವಿಕ್.

ಶಂಕರ್ ಎನ್.ಎಸ್ : ಈಗಾಗಲೇ ಹೇಳಿದಂತೆ ಸಂಶೋಧಕನಿಗೆ ಸಾಮಾಜಿಕ ಸಮಸ್ಯೆಗೂ ಮತ್ತು ಸಂಶೋಧನಾ ಪ್ರಶ್ನೆಗೂ ಇರುವ ವ್ಯತ್ಯಾಸದ ಅರಿವು ಇರಬೇಕು. ಸಂಶೋಧಕನಿಗೆ ಸಾಮಾಜಿಕ ಸಮಸ್ಯೆಯ ಬಗ್ಗೆ ಕಾಳಜಿ ಇರಬೇಕು, ಅದರೆ ಅದಕ್ಕೂ ಹೆಚ್ಚಿನದಾಗಿ ಸಂಶೋಧನಾ ಸಮಸ್ಯೆ ಏನೆಂದು ತಿಳಿದುಕೊಳ್ಳಬೇಕು ಮತ್ತು ಅಂತಹ ಸಮಸ್ಯೆಗೆ ಹೈಪೋಥೀಸಿಸ್ ರೂಪದಲ್ಲಿ ಉತ್ತರ ನೀಡಬೇಕು. ನಂತರ ತನ್ನ ಹೈಪೋಥೀಸಿಸ್ ಸಂಬಂಧಪಟ್ಟ ಸಾಮಾಜಿಕ ಸಮಸ್ಯೆಗೆ ಉತ್ತರವನ್ನು ನೀಡಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಅದನ್ನು ಬಿಟ್ಟು ನೇರವಾಗಿ ಇರುವ ಸಾಮಾಜಿಕ ಸಮಸ್ಯೆಯ ಬಗ್ಗೆ ಪರಿಹಾರವನ್ನು ನೀಡುತ್ತೇನೆ ಎಂದುಕೊಂಡು ಸಂಶೋಧನೆಯನ್ನು ಮಾಡಲು ಹೊರಟರೆ, ದೊರೆಯುವುದು ಈಗಾಗಲೇ ಇರುವ ವಿವರಣೆಗಳ ಪರವಾಗಿ ಅಥವಾ ವಿರುದ್ಧವಾಗಿ ನೀಡುವ ಹೇಳಿಕೆಗಳಿಗೆ ಸಂಶೋಧನೆಯು ಸೀಮಿತವಾಗುತ್ತದೆ.

ಸಮಾಜ ವಿಜ್ಞಾನಗಳ ಸಂಶೋಧನೆಯಲ್ಲಿ ಈ ದೃಷ್ಟಿಕೋನಗಳ ಸಂಸ್ಕೃತಿ ಬೆಳದದ್ದೂ ಸಹ ಸೆಕ್ಯುಲರಿಕೃತ ಕ್ರಿಶ್ಚಿಯನ್ ಥಿಯಾಲಜಿಯಯಿಂದ ಎಂದರೆ ತಪ್ಪಾಗಲಾರದು. ಹೇಗೆಂದರೆ, ಪ್ರತಿಯೊಬ್ಬ ಮಾನವರಿಗೂ ಅವರದ್ದೇ ಆದ ಸೋಲ್ ಗಳಿವೆ. ಒಬ್ಬರ ಸೋಲ್ ಇನ್ನೊಬ್ಬರ ಸೋಲ್ ನಂತೆ ಇರುವುದಿಲ್ಲ. ಪ್ರತಿಯೊಂದು ಸೋಲ್ ಗೂ ಅದರದ್ದೇ ಆದ ವೈಶಿಷ್ಟತೆ ಮತ್ತು ಅನನ್ಯತೆ ಇದೆ. ಪ್ರತಿಯೊಂದು ಸೋಲ್ ಗೂ ತನ್ನದೇ ಆದ ರೀತಿಯಲ್ಲಿ ಪ್ರಪಂಚವನ್ನು ಗ್ರಹಿಸವಸಹ ಸ್ವತಂತ್ರವಿದೆ. ಪ್ರಪಂಚವನ್ನು ಒಂದು ಸೋಲ್ ಒಂದು ರೀತಿ ಗ್ರಹಿಕೆಯು ಬೇರೆ ಸೋಲ್ ಮತ್ತೊಂದು ರೀತಿಯಲ್ಲಿ ಗ್ರಹಿಸುತ್ತದೆ. ಹಾಗಾಗಿ ಪ್ರಪಂಚವನ್ನು ಗ್ರಹಿಸವು ರೀತಿಯಲ್ಲೂ ಭಿನ್ನತೆ ಇದೆ. ಇಂತಹ ಭಿನ್ನತೆಯನ್ನು ಮಾನವರಾಗಿ ನಾವು ಒಪ್ಪಿಕೊಳ್ಳಲೇ ಬೇಕು. ಹಾಗಾಗಿ ಜಗತ್ತಿನಲ್ಲಿ ಇರುವ ಮತ್ತು ಮರಣ ಹೊಂದಿದ ಮತ್ತು ಮುಂದೆ ಹುಟ್ಟುವ ಎಷ್ಟು ಮನುಷ್ಯರು ಇದ್ದಾರೋ, ಅಷ್ಟು ಸೋಲ್ ಗಳಿವೆ ಮತ್ತು ಅಷ್ಟು ಭಿನ್ನವಾದ ದೃಷ್ಟಿಕೋನಗಳಿವೆ. ಇಂತಹ ಭಿನ್ನ ದೃಷ್ಟಿಕೋನಗಳನ್ನು ಪ್ರತಿಯೊಬ್ಬ ಮಾನವರು (ಸಂಶೋಧಕರು) ಒಪ್ಪಿಕೊಳ್ಳಲೇ ಬೇಕು. ಇಲ್ಲವಾದರೆ ವ್ಯಕ್ತಿಯ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹರಣ ಮಾಡಿದಂತಾಗುತ್ತದೆ (ಇಂತಹ ಹರಣವನ್ನು ಸಂಶೋಧನೆಯಲ್ಲೂ ಕಾಣುತ್ತೇವೆ). ಇಲ್ಲಿ ಹುಟ್ಟುಕೊಳ್ಳುವ ಒಂದು ಸಮಸ್ಯೆ ಎಂದರೆ ಈಗಾಗಲೇ ಮರಣ ಹೊಂದಿದ, ಈಗ ಇರುವ ಮತ್ತು ಮುಂದೆ ಹುಟ್ಟು ಮನುಷ್ಯರಲ್ಲಿರುವ ಭಿನ್ನ ದೃಷ್ಟಿಕೋನಗಳನ್ನು ಇಟ್ಟುಕೊಂಡು ಸಂಬಂಧಪಟ್ಟ ಸಾಮಾಜಿಕ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ? ಹಾಗಾಗಿ ಸಾಮಾಜಿಕ ಸಂಶೋಧನೆಗೆ ಅಸಂಖ್ಯಾತ ದೃಷ್ಟಿಕೋನಗಳ ಮಾರ್ಗಕ್ಕಿಂತ, ವಿಜ್ಞಾನವು ಹಾಕಿಕೊಟ್ಟ ಹಾದಿಯೇ ಸೂಕ್ತ ಎನಿಸುತ್ತದೆ.

ಶಂಕರ್ ಎನ್.ಎಸ್ : ಸಾತ್ವಿಕ್ ಅವರೆ ಭಾರತೀಯ ಸಮಾಜದ ಕುರಿತು ಅಧ್ಯಯನ ಮಾಡುವ ಸಂಶೋಧಕರ ಬಗ್ಗೆ ಮೊನ್ನೆ ಬಾಲಗಂಗಾಧರ ಅವರು ಮುಂದಿನಂತೆ ಹೇಳಿದರು: ಸಂಶೋಧಕನು ಯಾವುದನ್ನು ಕಲಿಯಬೇಕು ಎನ್ನುವುದಕ್ಕಿಂತ ಯಾವುದನ್ನು ಕಲಿಯಬಾರದು ಎಂಬುದನ್ನು ಕಲಿಸಿಕೊಂಡುವುದೇ ಒಂದು ಚಾಲೆಂಜ್ ಆಗಿದೆ.

ಸಾತ್ವಿಕ್ : ಸಂತೋಷ್ ಶೆಟ್ಟಿ, ಶಂಕರ್ ಎನ್.ಎಸ್, ಸಂಶೋಧನೆಗೆ ಬಳಸುವ ಭಾಷೆ ವಿಶಿಷ್ಠವಾದುದೇ? ಅಥವಾ ಸಂಶೋಧನೆಗೆ ಮಾತ್ರ ಸಂಬಂಧಿಸಿದ ಪರಿಭಾಷೆಗಳು ಇವೆಯೇ?

ಶಂಕರ್ ಎನ್.ಎಸ್ : ಶಬ್ದಕ್ಕೂ ಮತ್ತು ಪರಿಭಾಷೆಗೂ ವ್ಯತ್ಯಾಸಗಳಿವೆ. ಅಂದರೆ ನೈಸರ್ಗಿಕ ವಿಜ್ಞಾನಗಳಲ್ಲಿರುವ ಪರಿಭಾಷೆಗಳಂತೆ ಸಮಾಜ ವಿಜ್ಞಾನಗಳಲ್ಲೂ ಪರಿಭಾಷೆಗಳಿವೆ. ಉದಾಹರಣೆಗೆ ಸಾಮಾನ್ಯ ಜನರು ತಮ್ಮನ್ನು ಜನರು ಅಥವಾ ವ್ಯಕ್ತಿಗಳು ಎಂದು ಕರೆದುಕೊಂಡರೆ, ಜೀವಶಾಸ್ತ್ರದಲ್ಲಿ ಇದೇ ಮನುಷ್ಯರನ್ನು ಹೋಮೊ ಸೆಫಿಯನ್ಸ್ ಎಂಬ ಪರಿಭಾಷೆಯಲ್ಲಿ ಗುರುತಿಸುತ್ತಾರೆ. ಮತ್ತು ಜೀವಶಾಸ್ತ್ರದಲ್ಲಿ ಬಳಸುವ ಈ ಪರಿಭಾಷೆಗೇ ಜೀವಶಾಸ್ತ್ರಜ್ಞರು ತಮ್ಮದೇ ಆದ ರೀತಿಯಲ್ಲಿ ಗ್ರಹಿಸಕೊಂಡು ಮಾನವ ವಿಕಾಸದ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದಾರೆ. ಹಾಗೇಯೇ ಸಮಾಜಶಾಸ್ತ್ರದಲ್ಲಿ ಇದೇ ಮಾನವರನ್ನು ಸಮಾಜದದಲ್ಲಿರು ‘ಸಾಮಾಜಿಕ ವಸ್ತುಗಳು’ ಎಂದು ಗ್ರಹಿಕೊಳ್ಳುತ್ತಾರೆ. ಇಂತಹ ನಿರ್ದಿಷ್ಟ ಅರ್ಥದಲ್ಲಿ ಬಳಿಸಿದರೆ ಮಾತ್ರ ಸಂಶೋಧನೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಏಕೆಂದರೆ ವಿಜ್ಞಾನಗಳಲ್ಲಿ ಬಳಸುವ ಪರಿಕಲ್ಪನೆಗಳಿಗೆ ತ,ಮ್ಮದೇ ಆದ ಇತಿಹಾಸವಿದೆ, ನಿರ್ದಿಷ್ಟ ಅರ್ಥವಿದೆ, ಸೈದ್ಧಾಂತಿಕ ಚೌಕಟ್ಟಿದೆ. ಆ ಚೌಕಟ್ಟಿನಲ್ಲೇ ನಿರ್ದಿಷ್ಟ ವಿದ್ಯಮಾನದ ಕುರಿತ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂತಹ ಚೌಕಟ್ಟನ್ನು ಒಪ್ಪಿಕೊಳ್ಳದೇ ನಿಮ್ಮ ದೃಷ್ಟಿಕೋನ ಬೇರೆ ನನ್ನ ದೃಷ್ಟಿಕೋನವು ಬೇರೆ ಎಂದು ಭಿನ್ನವಾಗಿ ಗ್ರಹಿಸಿ ಅರ್ಥೈಸಿದರೆ, ಅಂತಹ ಸಂಶೋಧನೆ ಮತ್ತು ಪರಿಶೀಲನೆ ಮಾಡಿದಂತಾಗುವುದಿಲ್ಲ.

ಷಣ್ಮುಖ ಆರ್ಮುಗಂ: ಹೌದು, ಸಂತೋಷ್ ಮತ್ತು ಶಂಕರ್ ಹೇಳಿದ್ದು ಸರಿ. ಸಂಶೋಧನ ವಿಧಾನ ಮತ್ತು ತಂತ್ರಗಳು ಸಂಶೋಧನೆಗೆ ಆಯ್ದುಕೊಂಡಿರುವ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಇಲ್ಲಿ ಎರಡು ವಿಚಾರಗಳಿಗೆ ಸಂಬಂದಿಸಿದಂತೆ ವೈಧಾನಿಕತೆಯ ಆಯ್ಕೆ ಪ್ರಶ್ನೆ ಬರುತ್ತದೆ. ಒಂದು ಸಂಶೋಧನಾ ಸಮಸ್ಯೆಯನ್ನು ರೂಪಿಸಿಕೊಳ್ಳುವುಕ್ಕೆ ಸಂಬಂದಿಸಿದ್ದು; ಎರಡನೆಯದು ಮಾಹಿತಿ ಕಲೆ ಹಾಕುವುದಕ್ಕೆ ಸಂಬಂದಿಸಿದ್ದು. ಮೊದಲನೆಯದಾಗಿ ಸಂಶೋಧನೆಗೆ ಸಮಸ್ಯೆಗಳನ್ನು ರೂಪಿಸುವಾಗ ಯಾವ ವಿಧಾನ ಅನುಸರಿಸಿದೆವು ಎನ್ನುವುದು ಮುಖ್ಯು. ಅಂದರೆ, ಐಡಿಯಾಲಜಿಗಳ ಚೌಕಟ್ಟುಗಳಲ್ಲಿ ಸಮಸ್ಯೆ ರೂಪಿತವಾದರೆ ಅಲ್ಲಿಗೆ ಆರಂಭದಲ್ಲೇ ಸಂಶೋಧನಾ ಫಲಿತಾಂಶವೂ ನಿರ್ಧರಿತವಾಗಿಬಿಡುತ್ತದೆ.ಇದು ವೈಜ್ಞಾನಿಕ ವಿಧಾನವೆಂದಾಗುವುದಿಲ್ಲ. ಹಾಗಾಗಿ ಒಂದು ಸಂಗತಿ ಅಥವಾ ವಿಚಾರದ ಬಗ್ಗೆ ತರ್ಕಬದ್ದವಾದ ಮತ್ತು ಸಸಂಭದ್ದವಾದ ಪ್ರಶ್ನೆಗಳನ್ನು ಕೇಳಿಕೊಂಡು ಸಮಸ್ಯೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಉಧಾ: ಕೊಡುವುದಾದರೆ. ಭಾರತೀಯ ಸಮಾಜದಲ್ಲಿರುವ ಆಚರಣೆಗಳನ್ನು ಶ್ರದ್ದೆಯಿಂದ ಬಹುತೇಕ ಜನರು ಆಚರಿಸಿ ಕೊಳ್ಳುತ್ತಾ ಬರುತ್ತಿದ್ದಾರೆ. ಅನ್ಯ ಸಂಸ್ಕೃತಿಯಿಂದ ಉಧಾ: ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಬಂದವರು ಈ ಆಚರಣೆಗಳನ್ನು ಮೂಢ ನಂಬಿಕೆಗಳು ಎಂದು ವಿವರಿಸುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಈ ಸಂಧರ್ಭದಲ್ಲಿ ಈ ಆಚರಣೆಗಳು ಮೂಡ ನಂಭಿಕೆಗಳೇ ಸರಿಯಾದ ನಂಭಿಕೆಗಳೇ ಎಂದು ಎನ್ನುವ ಪ್ರಶ್ನೆಗಳನ್ನು ನೇರವಾಗಿ ಎತ್ತಿಕೊಂಡು ಬಿಡುತ್ತೇವೆ. ಅದರ ಬದಲಿಗೆ ಇದರ ಬಗ್ಗೆ ಇನ್ನೊಂದು ರೀತಿಯಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಅದು ಪಾಶ್ಚಿಮಾತ್ಯರಿಗೆ ಇವು ಏಕೆ ಮೂಢ ನಂಬಿಕೆಯಾಗಿ ಕಾಣುತ್ತಿದೆ? ಭಾರತೀಯರೇಕೆ ಅವನ್ನು ಹಾಗೆ ಭಾವಿಸದೆ ಶ್ರದ್ದೆಯಿಂದ ಆಚರಿಸುತ್ತಿದ್ದಾರೆ? ಮೊದಲನೆಯ ಪ್ರಶ್ನೆಗೆ ಉತ್ತರಿಸಲು ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಎರಡನೇ ಪ್ರಶ್ನೆಗೆ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಮಾಡಲು ಎರಡೂ ಸಂಸ್ಕೃತಿಗಳನ್ನು ವಿವರಿಸುವ ಸಿದ್ದಾಂತಗಳನ್ನು ಬೆಳಸಬೇಕಾಗುತ್ತದೆ. ಹೀಗೆ ಮಾಡಿದ ಮೇಲೆ ಭಾರತದಲ್ಲಿರುವುದು ಮೂಢನಂಬಿಕೆಗಳೇ ಅಲ್ಲವೇ ಎನ್ನುವ ಪ್ರಶ್ನೆಯ ಸಮಂಜಸತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ಚಿತ್ರ ಕೃಪೆ : http://www.onlineuniversities.com

8 ಟಿಪ್ಪಣಿಗಳು Post a comment
 1. ಮೇ 3 2013

  ಸಾತ್ವಿಕ್, ಒಳ್ಳೆಯ ಕೆಲಸ. ಧನ್ಯವಾದಗಳು.

  ಉತ್ತರ
 2. ಮೇ 3 2013

  nice work

  ಉತ್ತರ
 3. ಮೇ 3 2013

  good work …keep it up

  ಉತ್ತರ
 4. jag
  ಮೇ 3 2013

  olleya kelasa. arivu hechiside…

  ಉತ್ತರ
 5. ಮೇ 6 2013

  It is not good instead you people try to elevate yourself. This is not good for researchers. i don’t why you have taken the examples of Indian tradition and culture. If anybody wants to do good research would learn the technicalities for himself. There are abundance of sources available. In the name of research you should not try to propagate false practices.

  ಉತ್ತರ
 6. ಮೇ 8 2013

  ಪ್ರಶ್ನೆ ೧: Rajendra Prasad ರವರ ಪ್ರಶ್ನೆ: ಸಾತ್ವಿಕ್ : ಹಾಗಿದ್ದರೆ ಈ Research Methodology ಎಲ್ಲಿಯದು ಹೇಳಿ… ಬೆಂಗಳೂರು.. ಮಂಗಳೂರು, ಕಾಶ್ಮೀರ, ಕನ್ಯಾಕುಮಾರಿ, ಶಿಲ್ಲಾಂಗ್, ಕಾಥೇವಾಡ ?? ಎಲ್ಲಿಂದ ಬಂತು?? ಇದು ಕೂಡ ಐರೋಪ್ಯರ ಆವಿಷ್ಕಾರವೇ ಅಲ್ಲವೇ.

  ಉತ್ತರ: Sathvik Nimma Snehita DXer ರಾಜೇಂದ್ರ ಇನ್ನಷ್ಟು ಸೂಕ್ಷ್ಮವಾಗಿ ಗ್ರಹಿಸಲು ಪ್ರಯತ್ನಿಸಿ. ಜಾತಿಯೇ ಇಲ್ಲ ಎನ್ನುವುದಕ್ಕೂ ಜಾತಿ ವ್ಯವಸ್ಥೆ ಇಲ್ಲ ಎನ್ನುವುದಕ್ಕೂ ವ್ಯತ್ಯಾಸವಿದೆ. ನಿಮ್ಮ ಎರಡನೆಯ ಪ್ರಶ್ನೆಯನ್ನೇ ನಾನು ಮೊದಲು ಅವರನ್ನು ಕೇಳಿದ್ದು ಖಂಡಿತಾ ಪಾಶ್ಚಿಮಾತ್ಯರದ್ದೆ. ಅದನ್ನೇ ಆಧರಿಸಿಯೇ ನಾವು ಅಕಾಡೆಮಿಕ್ ವಲಯಗಳಲ್ಲಿ ಚರ್ಚಿಸುವುದು

  ಪ್ರಶ್ನೆ ೨: Rajendra Prasad, ಸಾತ್ವಿಕ್: ಇವತ್ತು ನಮ್ಮಲಿ ಲಭ್ಯವಿರುವ ಎಲ್ಲ ಸಾಹಿತ್ಯ ಸಂಪನ್ಮೂಲಗಳು ಐರೋಪ್ಯರ ಬಳುವಳಿಯೇ ಅಲ್ಲವೇ? ವಿದ್ಯೆಯನು ಬಚ್ಚಿಟ್ಟ ಜನರಿಂದ ತಾಳೆ,ಓಲೆ ಗರಿಗಳನು ಸಂಗ್ರಹಿಸಿ ಸಂಸ್ಕೃತ, ಪ್ರಾಕೃತ, ಪಾಳಿ, ಅರ್ಧ ಮಾಗದಿ, ಪೈಶಾಚಿ ಭಾಷೆಗಳನು ಕಲಿತು ಅವುಗಳನು ತಿದ್ದಿ ತೀಡಿ.. ನಮಗೆ ಕೊಟ್ಟವರು ಐರೋಪ್ಯರೇ!! ಹಾಗೆಂದು ಅವುಗಳನ್ನು ಅವರೇ ಬರೆದರೆಂದು ಹೇಳಲಾಗುವುದೇ?? ಮತ್ತು Manjunatha Kollegala ಅವರ ಪ್ರಶ್ನೆ ಹೌದೇ? ಬ್ರಾಂಬ್ರು, ಸೆಟ್ಟ್ರು, ಮ್ಯಾದರು, ಚಮ್ಮಾರರು, ಉಪ್ಪಾರರು ಎಲ್ಲಾ ಅವರವರ ಜಾತಿಗೆ ಸಂಬಂಧಪಟ್ಟ ಕೆಲಸ ಮಾಡೊಕ್ಕೆ ಶುರು ಮಾಡಿದ್ದು ಐರೋಪ್ಯರ influenceನಿಂದಲೇ? ಅದಕ್ಕೆ ಮೊದಲು ಬ್ರಾಂಬ್ರು ಚಪ್ಪಲಿ ಹೊಲೆದದ್ದು, ಉಪ್ಪಾರರು ತಿತಿ ಮಾಡಿಸಿದ್ದು, ಚಮ್ಮಾರರು ಬುಟ್ಟಿ ಹೆಣೆದದ್ದು ಎಲ್ಲಾದ್ರು ಇತ್ತೇ?

  ಉತ್ತರ: Sathvik Nimma Snehita DXer ವೈಜ್ಞಾನಿಕ ಸಂಶೋಧನೆಯ ಮೂಲವೇ ಪಾಶ್ಚಾತ್ಯ ಚಿಂತನೆ ನಾವು ಪಾಶ್ಚಾತ್ಯ ಚಿಂತನೆಗಳನ್ನು ಅವು ಪಾಶ್ಚ್ಯಾತ್ಯ ಎನ್ನುವ ಕಾರಣಕ್ಕೆ ವಿರೋಧಿಸುತ್ತಿಲ್ಲ ಹಾಗೇ ಯಾರೂ ಮಾತನಾಡಲು ಸಾಧ್ಯಾವೇ ಇಲ್ಲ ಎಕೆಂದರೆ ನಾವು ವಿಜ್ಞಾನವನ್ನು ಅದರ ಸಂಶೋಧನೆಯನ್ನು ಪಾಶ್ಚಾತ್ಯ ಎನ್ನುವ ಕಾರಣಕ್ಕೆ ದೂಷೀಸಿದರೆ ಬಾಲಿಷವಾಗುತ್ತದೆ. ನಮ್ಮ ಪ್ರಶ್ನೆ ಭಾರತದ ಸಮಾಜ ವಿಜ್ಞಾನ ಸೈಂಧಾಂತಿಕ ಸಂಶೋಧನೆಯಲ್ಲಿ ಪಾಶ್ಚಾತ್ಯರ ಹಿನ್ನಲೆ ಬಹುವಾಗಿ ಪ್ರಭಾವ ಬಿರಿದೆ ಅದ್ದರಿಂದ ಅದನ್ನು ಪರಿಶೀಲಿಸಬೇಕಿದೆ. ಜ್ಞಾನವನ್ನು ಪೌರಾತ್ಯ ಪಾಶ್ಚಾತ್ಯ ಎಂಬ ಕಾರಣಕ್ಕೆ ವಿರೋಧಿಸಲು ಸಾಧ್ಯವಿಲ್ಲ. ಮುಂದುವರೆದು Sathvik Nimma Snehita DXer ರವರು @manjunatha ರವರಿಗೆ.. ನಾನು ಮಾತಾಡ್ತಾ ಇರೋದು ಗೃಹಿತಗಳ ಬಗ್ಗೆ. ಸಾಮಾಜಿಕ ಜೀವನದ ಬಗ್ಗೆ ಅಲ್ಲ

  ಪ್ರಶ್ನೆ ೩: Manjunatha Kollegala ಈ ’ಗೃಹಿತ’ಗಳನ್ನು ಸ್ವಲ್ಪ ವಿವರಿಸಿದರೆ ಚರ್ಚೆಗೊಂದು ದಿಕ್ಕು ದಕ್ಕುತ್ತದೆ. ಮತ್ತು ಜ್ಞಾನವನ್ನು ಪೌರಾತ್ಯ ಪಾಶ್ಚಾತ್ಯ ಎಂಬ ಕಾರಣಕ್ಕೆ ವಿರೋಧಿಸಲು ಸಾಧ್ಯವಿಲ್ಲ ಎಂದಾದ ಮೇಲೆ ಈಗ ಪರಿಶೀಲಿಸ ಹೊರಟದ್ದು ಏನನ್ನು? ಗೃಹಿತ & ವಾಸ್ತವಗಳು ಬೇರೆ ಬೇರೆ ಇದೆ ಎನ್ನುತ್ತೀರೇನು? ಅಲ್ಲವಾ? ಉತ್ತರ ವೈದಿಕ ಯುಗದಲ್ಲೇ ಇದರ ಆರಂಭ ಎಂದು ಓದಿದ್ದೇನೆ ಆದ್ರೆ ಅದು ಐರೋಪ್ಯರು ಬರೆದಿದ್ದು.

  ರಾಜೇಂದ್ರ ಪ್ರಸಾದರು ಹೇಳಿದರು “ನಂಗ್ಯಾಕೋ ಡೌಟು … ಈ ವೇದ – ಪುರಾಣಗಳೆಲ್ಲಾ ಯುರೋಪಿಂದಾನೇ ಬಂದವೆ ಅಂತ… ಆರ್ಯರು ಬಂದಿದ್ದು ಮಧ್ಯ ಯುರೋಪಿಂದ ಅಂತಾರೆ .. ಹಾಗಾಗಿ ಜೊತೆಗೆ ಅಲ್ಲಿಂದಾನೇ ತಂದಿರ್ಬೇಕು… ಅದ್ಕೆ ಜಾತಿವ್ಯವಸ್ಥೆನೂ ಮರ್ತು ಬಂದಿರಿರಿ ಅಂತ ಅಲ್ಲಿಯೊರು ಬಂದು ವಾಪಾಸು ಇಲ್ಲಿಗೆ ಕೊಟ್ಟು ಹೋಗಿದ್ದು ಅನ್ನಿಸುತ್ತೆ … ಇನ್ಮೇಲೆ ಇದ್ನ ಸೋಸಿ ಸೋಸಿ ಸೋದನೆ ಮಾಡ್ಬೇಕು” – ಆಮೇಲೆ ಅದನ್ನು ವ್ಯಂಗ್ಯ ಅಂತ್ಲೂ ಅವರೇ ಹೇಳಿದರು. ಅಂದರೆ ಅವರ ಅಭಿಪ್ರಾಯ “ವೇದ – ಪುರಾಣ ಎಲ್ಲಾ ನಮ್ಮವೇ, ಹಾಗೇ ಆತಿ ವ್ಯವಸ್ಥೇನೂ ನಮ್ಮವೇ” ಅಂದುಕೊಳ್ತೇನೆ. ಅಲ್ವಾ? ॒ರಾಜೇಂದ್ರ ಪ್ರಸಾದ್

  ಜಾತಿವಾದ, ಕರ್ಮವಾದ ಅಂತೆಲ್ಲಾ ಏನೇನೋ ಬಂದ್ವು ಅಂತ ನಾನು ಮತ್ತೆ ಮಾತನ್ನ ಹಳೀಗೆ ತರೋಕ್ಕೆ ಪ್ರಯತ್ನಿಸಿದೆ

  ಅದಕ್ಕೆ ಸಾತ್ವಿಕರು ಸಾಮಾಜಿಕ ವ್ಯವಸ್ಥೆ ಐರೋಪ್ಯ ಪ್ರೇರಿತ ಅಲ್ಲ, ಆದರೆ ಅದನ್ನು ನಾವು ನೋಡುವ ದೃಷ್ಟಿಕೋನ ಪಾಶ್ಚಾತ್ಯರ ಬಳುವಳಿ ಅಂದ್ರು. ಅಂದರೆ ಏನು ಎಂದು ನನಗೆ ಅರ್ಥವಾಗಲಿಲ್ಲ. ಹಾಗಂದರೆ ನಾವು ಇವತ್ತು ನೋಡುತ್ತಿರುವ ಮೇಲು-ಕೀಳು, ಅದರ ಕೆಡಕು ಇವೆಲ್ಲಾ ಪಾಶ್ಚಾತ್ಯರ ಬಳುವಳಿಯೇ? ನನಗೆ ತಿಳಿದಂತೆ ಮೂಲಭೂತವಾಗಿ ಒಂದು ಸೊಗಸಾದ ಸಾಮಾಜಿಕ/ಆರ್ಥಿಕ ವ್ಯವಸ್ಥೆಯಾದ ಜಾತಿಪದ್ಧತಿ ಆ ಸೊಗಸುಗಳನ್ನು ಕಳಕೊಂಡು ಕುಲಗೆಟ್ಟುಹೋಗಿ ಎಷ್ಟೋ ಶತಮಾನಗಳೇ ಕಳೆದುವಲ್ಲ! ಇದಕ್ಕೆ ಪಾಶ್ಚಾತ್ಯರ ಕೊಡುಗೆಯೂ ಇಲ್ಲದಿಲ್ಲ, ಆದರೆ ಅವರಿಂದಲೇ ಈ ದೃಷ್ಟಿಕೋನ ಶುರುವಾಗಿದ್ದು ಎಂದರೆ ನಂಬಲಾಗುವುದಿಲ್ಲ.

  ಮತ್ತೆ ಅವರೇ ಮುಂದುವರೆದು “ಜಾತಿಯೇ ಇಲ್ಲ ಎನ್ನುವುದಕ್ಕೂ ಜಾತಿ ವ್ಯವಸ್ಥೆ ಇಲ್ಲ ಎನ್ನುವುದಕ್ಕೂ ವ್ಯತ್ಯಾಸವಿದೆ” ಎಂಬ ಕ್ಲಾರಿಫಿಕೇಶನ್ನನ್ನೂ ಕೊಟ್ಟರು. ಆದರೆ ಆ ಕ್ಲಾರಿಫಿಕೇಶನ್ನಿನಿಂದ ಮತ್ತಷ್ಟು ಗಲಿಬಿಲಿಯೇ ಆಯಿತು. ಅದರ ಅರ್ಥ, ಜಾತಿಯಿತ್ತು, ಆದರೆ ಜಾತಿ ವ್ಯವಸ್ಥೆ ಮಾತ್ರ ಪಾಶ್ಚಾತ್ಯರ ಬಳುವಳಿಯೆನ್ನೋಣವೇ ಅನ್ನೋ ಪ್ರಶ್ನೆ ಎದ್ದಿತು. ಅದಕ್ಕೇ ನಾನು ಕೇಳಿದೆ “ಹೌದೇ? ಬ್ರಾಂಬ್ರು, ಸೆಟ್ಟ್ರು, ಮ್ಯಾದರು, ಚಮ್ಮಾರರು, ಉಪ್ಪಾರರು ಎಲ್ಲಾ ಅವರವರ ಜಾತಿಗೆ ಸಂಬಂಧಪಟ್ಟ ಕೆಲಸ ಮಾಡೊಕ್ಕೆ ಶುರು ಮಾಡಿದ್ದು ಐರೋಪ್ಯರ influenceನಿಂದಲೇ?”

  ಅದಕ್ಕೆ ಸಾತ್ವಿಕರು ಮತ್ತೆ ಹೇಳಿದರು, “ಇಲ್ಲ ಇಲ್ಲ, ನಾನು ಹೇಳುತ್ತಿರುವುದು ’ಗೃಹಿತ’ಗಳ ಬಗ್ಗೆ”. ಗೃಹಿತ ಅಂದರೆ ಗ್ರಹಿಕೆ ಅಂದುಕೊಳ್ಳಲೇ? ಹಾಗಿದ್ದರೆ ಮತ್ತೆ ಪ್ರಶ್ನೆ ಮೊದಲಿಗೇ ಬಂತು. ಯಾವ ಗೃಹಿತ, ಯಾವ ದೃಷ್ಟಿಕೋನ? ಅದನ್ನಿನ್ನೂ ಸಾತ್ವಿಕರು ಸ್ಪಷ್ಟಪಡಿಸಿಯೇ ಇಲ್ಲ

  ಈಗ ಈ ಎಲ್ಲ ಚರ್ಚೆಯ ಮುಖ್ಯ ಅಂಶ ಏನು? ಜಾತಿ ಯೂರೋಪಿನಿಂದ ಬಂತು? ಅಲ್ಲ, ಜಾತಿ ವ್ಯವಸ್ಥೆ ಯೂರೋಪಿನಿಂದ ಬಂತು? ಅಲ್ಲ, ಜಾತಿಯನ್ನು ನಾವು ನೋಡುವ ರೀತಿ (ಮೇಲು-ಕೀಳು) ಯೂರೋಪಿನಿಂದ ಬಂತು? ಅಥವಾ ಇದೆಲ್ಲದರ documentation and study methodology ಯೂರೋಪಿನಿಂದ ಬಂತು?

  ಉತ್ತರ: Kiran Gajnur ಮೇಲಿನ ಯಾವುದು ಅಲ್ಲ ಭಾರತದಲ್ಲಿ ಜಾತಿಗಳು ಒಂದು ಸಮಾಜಿಕ ರಚನೆಗಳಾಗಿ ವ್ಯವಸ್ಥೆಯ ಮಾದರಿಯಲ್ಲಿ ಕೆಲಸಮಾಡುತ್ತಿವೆ ಈ ವ್ಯವಸ್ಥೆಯಲ್ಲಿ ಎಲ್ಲಾ ಜಾತಿಗಳ ನಡುವೆ ಒಂದು ರಚನಾತ್ಮಕ ಸಂಭಂದವಿದೆ ಅದನ್ನು ಜಾತಿ ಪದ್ಧತಿ ಎನ್ನುತ್ತಾರೆ ಎಂಬ ಸಮಾಜ ಸಾಸ್ತ್ರಿಯ ವಿವರಣೆಯ ಹಿಂದೆ ಪಾಶ್ಚ್ಯಾತ್ಯರ ಸಾಂಸ್ಕೃತಿಕ ಹಿನ್ನಲೆಯ ಪ್ರಭಾವವಿದೆ (ಜಾತಿ ಪದ್ಧತಿಕ ವಿವವರಣೆ ನೀಡಿದ್ದೆ ಪಾಶ್ಚಾತ್ಯರು). . .ಆದರೆ ಭಾರತದ ವಾಸ್ತವದಲ್ಲಿ ಜಾತಿಗಳ ನಡುವೆ ಜಾತಿ ಪದ್ಧತಿ ವಿವರಿಸುವ ಒಂದು ರಚನಾತ್ಮಕ ಸಂಬಂದವನ್ನು ಗುರುತಿಸಲು ಸಾಧ್ಯವಿಲ್ಲ ಅದ್ದರಿಂದ ಜಾತಿಗಳ ನಡುವಿನ ಸಂಬಂದಕ್ಕೆ ಬೆರೆಯದೇ ಆದ ಸಿದ್ಧಾಂತದ ಶೋಧ ನಮ್ಮ ಮುಂದಿರುವ ಗುರಿ. ಮತ್ತು Praveen Konandur: 1) ಬಾಲು ಮತ್ತು ಆ ತಂಡದ ಸಂಶೋಧಕರು ಯಾವುದನ್ನು ಯೂರೋಪಿನದ್ದು/ಪಶ್ಚಿಮದ್ದು ಅನ್ನೋ ಕಾರಣಕ್ಕೆ ವಿರೋಧಿಸಉವುದು ತಿರಸ್ಕರಿಸುವುದು ಮಾಡುತ್ತಿಲ್ಲ. 2)ಜಾತಿಗಳು ಭಾರತದಲ್ಲಿ ಇದ್ದವು ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಆದರೆ ಜಾತಿವ್ಯವಸ್ಥೆ ಎಂಬ ಚೌಕಟ್ಟನ್ನು ನಿರ್ಮಿಸಿಕೊಟ್ಟವರು ಪಾಶ್ಚಾತ್ಯರು. ಹಾಗೆಂದ ಮಾತ್ರಕ್ಕೆ ವೇದಗಳನ್ನು ಪಶ್ಚಿಮದಿಂದ ತಂದರು, ಪುರಾಣಗಳನ್ನು, ಮುನುಧರ್ಮಶಾಸ್ತ್ರವನ್ನೂ ಅಲ್ಲಿಂದಲೇ ತಂದರು ಎಂದಲ್ಲ. ವೇದಗಳನ್ನು, ಪುರಾಣಗಳನ್ನು, ಮನುಧರ್ಮಶಾಸ್ತ್ರಗಳನ್ನು ‘ಹೀಗೆಯೇ’ (ಅಂದರೆ ಹಿಂದೂಧರ್ಮದ ಪವಿತ್ರಗ್ರಂಧಗಳು, ಅವುಗಳು ಜನರ ಜೀವನವನ್ನು ನಿರ್ಧರಿಸುತ್ತವೆ) ನೋಡಬೇಕೆಂದು ಹೇಳಿದರು ಎಂದರ್ಥ. ಹಾಗೆಯೇ ಜಾತಿಗಳನ್ನು ಕೂಡ. 3) ಜಾತಿ ಜಿಜ್ಞಾಸೆಯಿಂದ ಉಪಕಾರ ಎಂದರೆ ಸಮಾಜದ ಹಲವು ಸಮಸ್ಯೆಗಳಿಗೆ ಜಾತಿಯೇ ಕಾರಣ ಎಂದು ನಂಬಿರುವುದರಿಂದ ಯಾವ ಅನುಕೂಲವೂ ಇಲ್ಲ, ಅದರಾಚೆಗೆ ಸಮಸ್ಯೆಗೆ ಕಾರಣಗಳು-ಪರಿಹಾರಗಳು ಇರಬಹುದು. ಹಾಗೆಯೇ ಜಿಜ್ಞಾಸೆ ನಮ್ಮ ಸಮಾಜದ ಕುರಿತ ತಿಳುವಳಿಕೆ/ಜ್ಞಾನವನ್ನು ಹೆಚ್ಚಿಸುತ್ತದೆ. ಹಾಗಾದರೆ ಸಿಸ್ಟಮ್ ಎಂದರೇನು? ಎಂಬ ಪ್ರಶ್ನೆ ಎದುರಾಗಬಹುದು. ಈಗ “system ಎನಿಸಿಕೊಳ್ಳುವ ಸಂಗತಿಗಳನ್ನು ಉಧಾಹರಣೆಗಿಟ್ಟಿಕೊಂಡು ಉಧಾ: ಬ್ಯಾಂಕ್, ವಿಶ್ವವಿದ್ಯಾನಿಲಯ, ರಾಜಕೀಯ ವ್ಯವಸ್ಥೆ (ಪ್ರಭುತ್ವ) etc., ಇವುಗಳಲ್ಲಿ ಯಾವುದು ಇಲ್ಲದಿದ್ದರೆ ಈ ಸಂಗತಿಗಳು (system) ಇಲ್ಲವಾಗುತ್ತದೆ ಎಂದು ನೋಡುವ. ಈ ಬಗ್ಗೆ ಒಂದು ಸಿಸ್ಟಂ ಥಿಯರಿಯೇ ರಾಜ್ಯಶಾಸ್ತ್ರ (ಮೂಲತಃ ಇದು ಜೀವಶಾಸ್ತ್ರದ್ದು) ದಲ್ಲಿ ಇದೆ. ಅದರಂತೆ ನೋಡಿದರೆ, system ಎನಿಸಿಕೊಳ್ಳಬೇಕಾದರೆ ಅದರಲ್ಲಿ ಘಟಕ (unit) ಗಳಿರಬೇಕು, ಆ ಘಟಕಗಳ ನಡುವೆ ನಿರ್ಧಿಷ್ಟ ರೀತಿಯ (ಸಾಮಾನ್ಯವಾಗಿ hierarchical ಆದ) ನಿರಂತರ interaction ಮತ್ತು interrelation ಇರಬೇಕು. ಈ ಪ್ರತಿಯೊಂದು ಘಟಕಗಳಿಗೆ ಮತ್ತು ಈ ಘಟಕಗಳೆಲ್ಲವನ್ನೂ ಒಳಗೊಂಡ ಒಂದು ಎಲ್ಲೆ (Boundary) ಇರಬೇಕು. ಇವೆಲ್ಲವನ್ನೂ ಸೂಕ್ತವಾಗಿ ರಚಿಸಿ, ನಿರ್ಧೇಶಿಸಿ ನಿಯಂತ್ರಿಸುವ ನಿಯಮಗಳು (Rules) ಇರಬೇಕು, ಈ ನಿಯಮಗಳನ್ನು ರೂಪಿಸಿ, ಅರ್ಥೈಸಿ, ಜಾರಿಗೊಳಿಸುವ ಅಧಿಕಾರವ್ಯವಸ್ಥೆಗಳಿರ ಬೇಕು. ಇವೆಷ್ಟು ಒಂದು system ನ ಪ್ರಾಪರ್ಟಿಗಳು(shanmukha armugam)” ಈ ಪ್ರಾಪರ್ಟಿಗಳು ಜಾತಿಗಳಿಗೆ ಸಂಬಂಧಿಸಿದಂತೆ ಇವೆಯೇ?

  ಉತ್ತರ
 7. ಮೇ 8 2013

  ಪ್ರಶ್ನೆ ೪: Manjunatha Kollegala ರವರು Kiran Gajnur ರವರಿಗೆ “ಭಾರತದಲ್ಲಿ ಜಾತಿಗಳು ಒಂದು ಸಮಾಜಿಕ ರಚನೆಗಳಾಗಿ ವ್ಯವಸ್ಥೆಯ ಮಾದರಿಯಲ್ಲಿ ಕೆಲಸಮಾಡುತ್ತಿವೆ ಈ ವ್ಯವಸ್ಥೆಯಲ್ಲಿ ಎಲ್ಲಾ ಜಾತಿಗಳ ನಡುವೆ ಒಂದು ರಚನಾತ್ಮಕ ಸಂಭಂದವಿದೆ ಅದನ್ನು ಜಾತಿ ಪದ್ಧತಿ ಎನ್ನುತ್ತಾರೆ” ಎಂಬ ವಿವರಣೆಯಲ್ಲಿ ಪಾಶ್ಚಾತ್ಯ ಪ್ರಭಾವವಿದೆ ಎಂದಿರಿ. ಮುಂದುವರೆದು “ಆದರೆ ಭಾರತದ ವಾಸ್ತವದಲ್ಲಿ ಜಾತಿಗಳ ನಡುವೆ ಜಾತಿ ಪದ್ಧತಿ ವಿವರಿಸುವ ಒಂದು ರಚನಾತ್ಮಕ ಸಂಬಂದವನ್ನು ಗುರುತಿಸಲು ಸಾಧ್ಯವಿಲ್ಲ” ಎಂದಿರಿ. ಇದು ಹೇಗೆ ಅರ್ಥವಾಗಲಿಲ್ಲ. ಸ್ವಲ್ಪ ವಿವರಿಸುವಿರಾ? ನಾನು ಈ ಒಂದೆರಡು ಕಾಮೆಂಟುಗಳ ಮೊದಲು ಎತ್ತಿದ್ದ ಪ್ರಶ್ನೆಗೆ ಇದು ಉತ್ತರಿಸಲಿಲ್ಲ
  Praveen Konandur ರವರಿಗೆ ನಮ್ಮ ಸಮಾಜ ಕುರಿತ ತಿಳುವಳಿಕೆಯನ್ನು ಹೆಚ್ಚಿಸುವುದೇ ಈ ಚರ್ಚೆಯ ಉದ್ದೇಶವಾಗಿದ್ದರೆ ಅಗತ್ಯವಾಗಿ ಆಗಲಿ. ನನಗೆ ಮೊದಲಾಗಿ ಯಾರು ಯಾವುದನ್ನು ತಿರಸ್ಕರಿಸುತ್ತಿದ್ದಾರೆ ಯಾವುದನ್ನು ಪುರಸ್ಕರಿಸುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಚರ್ಚೆಯಲ್ಲಿ ಪೂರ್ವಪಕ್ಷವೇನೆಂಬುದೇ ತಿಳಿಯುತ್ತಿಲ್ಲ. ಆದ್ದರಿಂದ ಇದು ನನ್ನ ಪ್ರಶ್ನೆಯಲ್ಲ. ನನ್ನ ಒಂದೇ ಪ್ರಶ್ನೆ “ಜಾತಿಗಳು ಭಾರತದಲ್ಲಿ ಇದ್ದವು ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಆದರೆ ಜಾತಿವ್ಯವಸ್ಥೆ ಎಂಬ ಚೌಕಟ್ಟನ್ನು ನಿರ್ಮಿಸಿಕೊಟ್ಟವರು ಪಾಶ್ಚಾತ್ಯರು” ಎಂದಿರಲ್ಲ, ಹಾಗಂದರೆ ಏನು, ಅದು ಹೇಗೆ? ಇದೇ ಮಾತನ್ನು ಸಾತ್ವಿಕರೂ, ಕಿರಣ್ ಗಾಜನೂರರೂ ಬೇರೆಬೇರೆ ರೀತಿಯಲ್ಲಿ ಹೇಳಿದರು. ಆದರೆ ಒಬ್ಬರೂ ಅದನ್ನು ವಿವರಿಸುತ್ತಿಲ್ಲ.

  ಉತ್ತರ:Praveen Konandur ಮಂಜುನಾಥ್‌ರವರೇ, ಪೂರ್ವಪಕ್ಷವು ಭಾರತದಲ್ಲಿ ಶತಶತಮಾನಗಳಿಂದ ಜಾತಿವ್ಯವಸ್ಥೆ ಇದೆ ಎನ್ನುವವರಾದರೆ, ಜಾತಿವ್ಯವಸ್ಥೆ ಎಂಬ ಸಂಗತಿಯು ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ, ಬದಲಾಗಿ ಭಾರತೀಯ ಸಮಾಜವನ್ನು ಅರ್ಥೈಸುವ ವಿವರಣಾ/ಗ್ರಹಿಕಾ ಚೌಕಟ್ಟಾಗಿ ಮಾತ್ರ ಅಸ್ತಿತ್ವದಲ್ಲಿದೆ ಎಂಬುದು ನಮ್ಮ ವಾದವಾಗಿದೆ. ಜಾತಿವ್ಯವಸ್ಥೆ ಎಂಬ ಚೌಕಟ್ಟನ್ನು ನಿರ್ಮಿಸಿಕೊಟ್ಟವರು ಪಾಶ್ಚಾತ್ಯರು…ಹಾಗೆಂದರೇನು ಎಂಬುದಕ್ಕೆ ಇಲ್ಲಿದೆ ಉತ್ತರ (ಬೇರೆ ಕಡೆ ಚರ‍್ಚೆಯಲ್ಲಿ ಷಣ್ಮುಖರವರು ನೀಡಿದ ಉತ್ತರವನ್ನು ಇಲ್ಲಿ ಇಡುತ್ತಿದ್ದೇನೆ.) ಈ ಹಿಂದೆ ವ್ಯವಸ್ಥೆಯ ಪ್ರಾಪರ್ಟಿಗಳನ್ನು ನೋಡಿದ್ದೇವೆ. ಜಾತಿಗಳಿಗೆ ಸಂಬಂಧಿಸಿದಂತೆ/ ಭಾರತೀಯ ಸಾಮಾಜಿಕ ರಚನೆಗೆ ಸಂಬಂಧಿಸಿದಂತೆ ಅವುಗಳನ್ನು ನೋಡಲು ಸಾಧ್ಯವೇ?

  ಘಟಕಗಳು = ಜಾತಿಗಳು [ಎನ್ನಬಹುದಾದರೂ ಅದರಲ್ಲಿ ತಾರ್ಕಿಕ ಸಮಸ್ಯೆ ಇದೆ ಅದನ್ನು ಮುಂದೆ ಹೇಳುತ್ತೇನೆ. (ಮತ್ತು ಉಪಜಾತಿಗಳು ಈ ಘಟಕಗಳ ಉಪಘಟಕಗಳು ಎನ್ನುತ್ತಾರೆ. ಆದರೆ ಜಾತಿಗೆ ಯಾವ ಪ್ರಾಪರ್ಟಿಗಳನ್ನು ಗುರ್ತಿಸುತ್ತಾರೋ ಅದೇ ಪ್ರಾಪರ್ಟಿಗಳನ್ನೇ ಉಪಜಾತಿಗಳಿಗೂ ಗುರುತಿಸುತ್ತಾರೆ. ಹಾಗಾಗಿ ಜಾತಿ ಮತ್ತು ಉಪಜಾತಿಗಳ ಕುರಿತ ವಿವರಣೆಯಲ್ಲಿ ಸ್ಪಷ್ಟತೆ ಇಲ್ಲ. ಹೇಳಬೇಕೆಂದರೆ ಜಾತಿಗಳ ಪ್ರಾಪರ್ಟಿ ಎಂದು ಗುರುತಿಸುವ ಪ್ರಾಪರ್ಟಿಗಳೆಲ್ಲವೂ ಉಪಜಾತಿಗಳೆಂದು ಗುರುತಿಸುವ ಘಟಕಗಳಿಗೆ ಮಾತ್ರವೇ ಅನ್ವಯವಾಗುತ್ತವೆ)] interaction and Inter-relation = ಶ್ರೇಣೀಕೃತವಾಗಿದೆ ಎನ್ನುತ್ತಾರೆ (ಒಂದು ವ್ಯವಸ್ಥೆಯಲ್ಲಿ ಒಂದು ಘಟಕದ ಸ್ಥಾನ ಅಲ್ಲಿಯ ನಿಯಮಗಳಿಂದ ನಿರ್ಧಿಷ್ಟ ಪಡಿಸಲಾಗಿರುತ್ತದೆ. ಆ ಸ್ಥಾನಮಾನಕ್ಕೆ ತಕ್ಕ ಹಾಗೆ ಉಳಿದ ಘಟಕಗಳೊಂದಿಗಿನ ಈ ಘಟಕದ ಸಂಬಂದದ ಸ್ವರೂಪ ನಿರ್ಣಯವಾಗುತ್ತದೆ. ಜಾತಿಗಳ ಸಂಧರ್ಭದಲ್ಲಿ ಈ ರೀತಿಯ ನಿಯಮಗಳು ಎಲ್ಲಿವೆ ಇದನ್ನು ಜಾತಿಗಳು ಹೇಗೆ ಅರಿತು ನಿರ್ಣಯಿಸಿಕೊಂಡು ವ್ಯವಹರಿಸುತ್ತವೆ? ಸ್ಪಷ್ಟವಿಲ್ಲ.) ಎಲ್ಲೆ= ಅಸ್ಪಷ್ಟವಾಗಿ ಘಟಕಗಳಾದ ಜಾತಿ/ಉಪಜಾತಿಗಳಿಗೆ ಎಲ್ಲೆಗಳಿವೆ ಎನ್ನಬಹುದು(ಆಯಾ ಜಾತಿ/ಉಪಜಾತಿಗಳಿಗೆ ಸೇರಿರುವ ಜನರನ್ನು ಮಾತ್ರ ಈ ಎಲ್ಲೆ ಒಳಗೊಂಡಿರುತ್ತದೆ) ಆದರೆ ಈ ಎಲ್ಲಾ ಘಟಕಳನ್ನೂ ಒಳಗೊಂಡ Boundary ಯಾವುದು? ಚಿಂತಕರ ವಿವರಣೆಯನ್ನು ನೋಡಿದರೆ ಹಿಂದೂ ರಿಲಿಜನ್ ಆ Boundary ಎನ್ನುವ ಹಾಗೆ ಕಾಣುತ್ತದೆ. ಅಂದರೆ ಹಿಂದೂ ರಿಲಿಜನ್ ಇದ್ದರೆ ಮಾತ್ರ ಈ ಜಾತಿಗಳೆಲ್ಲ ಸೇರಿ ಒಂದು ಸಿಸ್ಟ್ಂ ಆಗುತ್ತದೆ. ವಿಪರ್ಯಾಸವೆಂದರೆ ಹಿಂದೂ ರಿಲಿಜನ್ ಇಲ್ಲದೇ ಹೋದರೆ ಈ ಎಲ್ಲಾ ಜಾತಿಗಳು ಸೇರಿ ಒಂದು ಸಿಸ್ಟಂ ಆಗುವುದಿಲ್ಲ ಮಾತ್ರವಲ್ಲ; ಈ ಜಾತಿಗಳೂ ಘಟಕಗಳಾಗಿರಲು ಸಾಧ್ಯವಿಲ್ಲ. ಅಂದರೆ ಯಾವುದಕ್ಕೆ ಇವುಘಟಕಗಳು ಎನ್ನುವ ಪ್ರಶ್ನೆಉಳಿಯುತ್ತದೆ.

  ನಿಯಮಗಳು= ಹಿಂದೂ ರಿಲಿಜನ್ ನ ಶಾಸ್ತ್ರಗಳು ಎನ್ನಲಾಗುತ್ತದೆ. [ಸಾಮಾನ್ಯವಾಗಿ ಮನುಧರ್ಮಶಾಸ್ತ್ರ; ಪುರುಷಸೂಕ್ತ ಮುಂತಾದುವುಗಳನ್ನು ಉಲ್ಲೇಖಿಸಲಾಗುತ್ತದೆ. ಈ ಶಾಸ್ತ್ರಗಳಲ್ಲಿ ಇಂತಿತ ಜಾತಿಯವರ (ಸದ್ಯಕ್ಕೆ ವರ್ಣ ಮತ್ತು ಜಾತಿ ಒಂದೇ ಎಂದು ಭಾವಿಸಿಕೊಳ್ಳುವ) ಹೀಗೆ ಹೀಗೆ ನಡೆದುಕೊಳ್ಳಬೇಕು ಎಂದಿವೆ ಎಂದಿಟ್ಟುಕೊಳ್ಳೋಣ. ಜಾತಿ ಎನ್ನುವ ಘಟಕಗಳಿಗೆ ನಿಯಮಗಳಾಗ ಬಲ್ಲವೇ? ಆಗದು ಏಕೆಂದರೆ ಯಾವುದೇ ನಿರ್ದೇಶನ ನಿಯಮವಾಗ ಬೇಕೆಂದರೆ ಅದಕ್ಕೆ ಮೂರು ಪ್ರಾಪರ್ಟಿಗಳಿರಲೇಬೇಕು: 1. ನಿಯಮಗಳನ್ನು ರೂಪಿಸುವ ಅಧಿಕಾರ ಇರುವ ಸಂಸ್ಥೆ 2. ಜಾರಿಗೊಳಿಸುವ ಸಂಸ್ಥೆ. 3. ಉಲ್ಲಂಘಿಸುವವರನ್ನು ಶಿಕ್ಷಿಸುವ ಸಂಸ್ಥೆ ಇರಬೇಕು. ಈ ಮೂರರಲ್ಲಿ ಒಂದಿಲ್ಲವೆಂದರೂ ಅದಕ್ಕೆ ನಿಯಮದ ಸ್ವರೂಪ ಬರುವುದಿಲ್ಲ (ಆಟದ ನಿಯಮಗಳಿಂದ ಚರ್ಚಿನ ನಿಯಮಗಳವರೆಗೂ ನೀವು ಉಧಾ. ತೆಗೆದು ಕೊಂಡು ಪರೀಕ್ಷಿಸಬಹುದು) ಆದರೆ ಧರ್ಮಶಾಸ್ತ್ರಗಳಲ್ಲಿ ಯಾರೋ ಒಬ್ಬ ಅವರು ಹೀಗೆ ಇರಬಕು ಇವರು ಹಾಗೆ ಇರಬೇಕು ಎನ್ನುವಂತೆ ಬರೆದು ಬಿಟ್ಟರೆ ಅದು ನಿಯಮವಾಗುತ್ತದೆಯೇ? ಜನರ ಜೀವನದಲ್ಲಿ ಜಾತಿ ಜಾತಿ ಗಳೊಟ್ಟಿಗೆ ಮತ್ತು ಜಾತಿಗಳೊಳಗೆ ವ್ಯವಹರಿಸುವಾಗ ಯಾರು ಈ ನಿಯಮಗಳನ್ನು ಪಾಲಿಸುತ್ತಾರೆ, ಅದನ್ನು ಜಾರಿಗೊಳಿಸುವವರು ಯಾರು? ಉಲ್ಲಂಘಿಸುವವರಿಗೆ ಶಿಕ್ಷಷೆ ಕೊಡುವವರು ಯಾರು? ಇದು ವಾಸ್ತವ ಜಗತ್ತಿನಲ್ಲಿ ಸಹಜವಾಗಿ ಕಾಣುವುದಿಲ್ಲ ವಾದ್ದರಿಂದ ಸಾಮಾನ್ಯವಾಗಿ ಚಿಂತಕರು ಏಕಲವ್ಯನ ಕಥೆಯನ್ನೋ ಶಂಭೂಕನ ಕಥೆಯನ್ನೋ ಸಾಕ್ಷಿ ನೀಡಲು ಪ್ರಯತ್ನಿಸುತ್ತಾರೆ. ಆದರೆ ಜಾತಿ ವ್ಯವಸ್ಥೆ ಅಂದು-ಇಂದು ಸರ್ವವ್ಯಾಪಕವಾಗಿದ್ದ ಪಕ್ಷದಲ್ಲಿ ಸುಲಭವಾಗಿ ಸಾವಿರಾರು ಉದಾಹರಣೆಗಳನ್ನು ವಾಸ್ತವ ಸಮಾಜದಿಂದ ಎತ್ತಿ ಕೊಡಲು ಸಾಧ್ಯವಾಗ ಬೇಕಲ್ಲವೇ? ಅದೇ ಮುಸ್ಲೀಂ ಸಮುದಾಯ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಈ ರೀತಿಯ ನಿಯಮಗಳಿರುವುದನ್ನು, ಪಾಲಿಸುವುದನ್ನು, ಮತ್ತು ಉಲ್ಲಂಘಿಸಿದವರಿಗೆ ಶಿಕ್ಷಿಸವ ವ್ಯವಸ್ಥೆಯನ್ನು ಮತ್ತು ಉಧಾಹರಣೆಗಳನ್ನು ಬೇಕಾದಷ್ಟು ಕೊಡಬಹದು.]

  ಈ ನೆಲೆಯಲ್ಲಿ ಜಾತಿ ವ್ಯವಸ್ಥೆಯ ಪ್ರಾಪರ್ಟಿಯನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯವೇ ಆಗುವುದಿಲ್ಲ!!! ಅಂದಮೇಲೆ ಜಾತಿ ವ್ಯವಸ್ಥೆ ಇದೆಯೇ????

  ಪ್ರಶ್ನೆ ೫: Rajendra Prasad ಹಾಗಿದ್ದರೆ ಭಾರತದಲಿ ಇದ್ದದ್ದು.. ಈಗ ಇರುವುದು ಏನು?

  ಉತ್ತರ:Santhosh Shetty ಭಾರತದಲ್ಲಿ ಇದ್ದುದ್ದು ಸಾವಿರಾರು ಸಂಗತಿಗಳು.. ಜಾತಿ, ಸಂಪ್ರದಾಯ, ಆಚರಣೆಗಳು, ಆಧ್ಯಾತ್ಮ.. ಇನ್ನೂ ಮುಂತಾದವು… ಈಗ ಇರುವುದು ಅವುಗಳು ಮಾರ್ಪಾಟಾಗಿರುವ ರೂಪ, ಮತ್ತು ಈಗಿರುವುದು ಅವುಗಳನ್ನು ನೋಡುವ ದೃಷ್ಟಿಕೋನದಲ್ಲಿ ಆಗಿರುವ ಬದಲಾವಣೆ… ಹೀಗೆ ಹತ್ತು ಹಲವು ಬದಲಾವಣೆಗಳಾಗಿವೆ. ಸ್ಪಷ್ಟವಾಗಿ ಹಿಂದೆ ಏನಿತ್ತು ಎಂದು ನೀವು ಅಂದುಕೊಂಡಿದ್ದೀರಿ ಹಾಗೂ ಈಗ ಏನಿದೆ ಎಂದು ಎಂದುಕೊಂಡಿದ್ದೀರಿ? ಅದನ್ನು ಸ್ಪಷ್ಟಪಡಿಸಿದರೆ ಚರ್ಚಿಸಲು ಅನುಕೂಲವಾಗಬಹುದು..
  Praveen Konandur ನಿಮ್ಮ ಪ್ರಶ್ನೆಯ ಸ್ವರೂಪ ಅರ್ಥ ಆಗಲಿಲ್ಲ. ನಿಮ್ಮ ಪ್ರಶ್ನೆ ಏನನ್ನು ಪೂರ್ವ ಕಲ್ಪನೆಯಾಗಿ ಇಟ್ಟುಕೊಳ್ಳುತ್ತದೆ ಎಂದರೆ ಜಾತಿವ್ಯವಸ್ಥೆಯನ್ನು ಹೊರತು ಪಡಿಸಿ ಬೇರೆನೂ ಇರಲಿಲ್ಲ ಎಂಬುದನ್ನು.

  ಪ್ರಶ್ನೆ ೬: Rajendra Prasad ನನ್ನಂತ ಸಾಮಾನ್ಯನಿಗೆ ಉಂಟಾಗುವ ಗೊಂದಲವೆಂದರೆ ” ಜಾತಿ ಇದ್ದ ಮೇಲೆ ಜಾತಿವ್ಯವಸ್ತೆ ಇರಲಿಲ್ಲ ಎನ್ನುವುದು… ಅಂತೆಯೇ ಕೆಲವೇ ವಚನಗಳಲ್ಲಿ ಮಾತ್ರ ಜಾತಿಯ ಉಲ್ಲೇಖವಿರುವುದರಿಂದ ಅವು ಜಾತಿಯ ನಿರಾಕರಣೆ ಮಾಡುವುದಿಲ್ಲವೆಂಬ ವಾದ…” ಅಂತೆಯೇ ವಚನಗಳ ಇನ್ನುಳಿದ ವಿಷಯಗಳ ಕುರಿತು ಚರ್ಚೆಯಾಗಿಲ್ಲ ಎಂಬುದೂ ಸತ್ಯ…

  ಉತ್ತರ: Shanmukha Armugam ಬೀದಿಯಲ್ಲಿ ಜನ ಓಡಾಡುತ್ತಿರುತ್ತಾರೆ ಆದರೆ ಅವರು ಒಂದು ವ್ಯವಸ್ಥೆಗೆ ಸೇರುವುದಿಲ್ಲ; ಹಾಗಾಗಿ ಅವರು ಆ ವ್ಯವಸ್ಥೆಯ ಘಟಕವಾಗುವುದಿಲ್ಲ; ಅದೇ ಕಾರಣಕ್ಕೆ ಅವರೆಲ್ಲರೂ ಸೇರಿ (ಬೀದಿಯಲ್ಲಿರುವವರೆಲ್ಲರೂ ಸೇರಿ) ಒಂದು ವ್ಯವಸ್ಥೆ ಯಾಗುವುದಿಲ್ಲ. ಅವರೆಲ್ಲರೂ ಸೇರಿ ಒಂದು ವ್ಯವಸ್ಥೆಯಾಗುವುದಿಲ್ಲ ಎಂದ ಮಾತ್ರಕ್ಕೆ ಅವರ್ಯಾರು ಇಲ್ಲ ಎಂದೇನೂ ಆಗುವುದಿಲ್ಲ. ಅದೇ ಅವರು ಯಾವುದಾದರೂ ಒಂದು ಸಂಸ್ಥೆಯೊಳಗೆ ಉಧಾ ಬ್ಯಾಂಕು ಅಥವಾ ಇತರ ಕಛೇರಿಗಳೊಳಗೆ ಕಾರ್ಯ ನಿರ್ವಹಿಸುತ್ತಿದ್ದರೆ ಆಗ ಅವರು ಆ ಸಂಸ್ಥೆ ಎನ್ನುವ ವ್ಯವಸ್ಥೆಯ ಭಾಗವಾಗುತ್ತಾರೆ. ಆ ಕಛೇರಿಯ ನಿಯಮಗಳಗಳಂತೆ ಅವರಿಗೆ ನಿರ್ಧಿಷ್ಟ ಸ್ಥಾನಮಾನಗಳು ನಿಗಧಿಯಾಗಿ ಅಲ್ಲಿರುವ ಪ್ರತಿಯೊಬ್ಬರ ಸಂಬಂದಗಳ ಸ್ವರೂಪವು ನಿರ್ಧಿಷ್ಟ ಪಡಿಸಲಾಗಿರುತ್ತದೆ ಅದರಂತೆಯೇ ಅಲ್ಲಿರುವ ರೆಲ್ಲರ ಸಂಬಂದಗಳೂ ಅಂತಸ್ತುಗಳು ವ್ಯವಹಾರಗಳು ನಿಯಂತ್ರಿಸಿ ನಿರ್ಧೇಶಿಸಲ್ಪಡುತ್ತದೆ. ಹಾಗಾಗಿ ಅಲ್ಲಿ ಅವರು ವ್ಯವಸ್ಥೆಯ ಭಾಗವಾಗುತ್ತಾರೆ.
  ಈ ರೀತಿಯಲ್ಲಿ ಜಾತಿಗಳು ಇವೆ; ಆದರೆ ಅವುಗಳೆಲ್ಲವೂ ಸೇರಿ ಒಂದು ವ್ಯವಸ್ಥೆಯ ಭಾಗವಾಗಿ ವ್ಯವಹರಿಸುತ್ತಿಲ್ಲ. ಹಾಗಾಗಿ ಜಾತಿ ವ್ಯವಸ್ಥೆ ಇಲ್ಲವೆಂದರೆ ಜಾತಿಗಳಿಲ್ಲ ವೆಂದೇನೂ ಆಗುವುದಿಲ್ಲ.
  ಈಗ ನಮ್ಮ ಮುಂದಿರುವ ಪ್ರಶ್ನೆ ಹಾಗಾದರೆ ಈ ಜಾತಿಗಳು ತಮ್ಮೊಳಗೆ ಮತ್ತು ಬೇರೆ ಜಾತಿಯೊಡನೆ ಹೇಗೆ ವ್ಯವಹರಿಸುತ್ತವೆ? ಅವುಗಳ ಬೇಕಾ ಬಿಟ್ಟಿ ವ್ಯವಹರಿಸುತ್ತವೆಯೋ ಅಥವಾ ಆ ವ್ಯವಹಾರಗಳಿಗೂ ಒಂದು ರಚನೆ ಇದೆಯೋ? ಇದ್ದರೆ ಅದರ ಸ್ವರೂಪವೇನು? ಇವೆಲ್ಲವೂ ಈಗ ನಮ್ಮ ಮುಂದಿರುವ ಸಂಶೋಧನಾ ಪ್ರಶ್ನೆಗಳು. ಈ ರಚನೆ ಮತ್ತು ಸ್ವರೂಪಗಳನ್ನು ಅರ್ಥಮಾಡಿಕೊಳ್ಳದಿದ್ದಲ್ಲಿ ಈಗ ನಾವು ನೋಡುತ್ತಿರುವ ಜಾತಿ ಶೋಷಣೆ ಅಸ್ಪೃಶ್ಯತೆಯ ಆಚರಣೆಗಳು ಹೇಗೆ ನಡೆಯುತ್ತಿವೆ ಎನ್ನುವುದನ್ನು ವಿವರಿಸಲಾಗುದು. ಆದರೆ ಈಗಾಗಲೇ “ಜಾತಿಗಳ ವ್ಯವಹಾರಗಳು ಜಾತಿವ್ಯವಸ್ಥೆಯ ರಚನೆಯ ಚೌಕಟ್ಟಿನಲ್ಲಿ ನಡೆಯುತ್ತಿವೆ” ಎಂದು ಪಾಶ್ಚಾತ್ಯ ನಿರೂಪಣೆಯನ್ನು ಸಾರ್ವತ್ರಿಕ ಸತ್ಯವೆನ್ನುವಂತೆ ಒಪ್ಪಿಕೊಂಡಿರುವುದರಿಂದ ನಮ್ಮ ನಡುವೆ ನಡೆಯುವ ಎಲ್ಲಾ ಸಮಸ್ಯೆಗಳಿಗೂ ಈ “ವ್ಯವಸ್ಥೆ”ಯೇ ಹೊಣೆ ಎನ್ನುವಂತೆ ಆ ಸಮಸ್ಯೆಯ ಕುರಿತು ವಿಶೇಷ ಅಧ್ಯಯನದ ಅವಶ್ಯಕತೆಯೇ ಇಲ್ಲವೇನೋ ಎನ್ನುವಂತೆ ತೀರ್ಮಾನಗಳನ್ನು ಕೊಟ್ಟುಬಿಡುತ್ತಿದ್ದೇವೆ. ಇದು ನಮ್ಮ ನಡುವೆ ಇರುವ ಜಾತಿ ಅನ್ಯಾಯ ಶೋಷಣೆಗಳನ್ನುಸರಿಯಾಗಿ ಗ್ರಹಿಸಿ ನಿಖರ ಪರಿಹಾರಗಳನ್ನು ಹುಡುಕುವಲ್ಲಿ ದೊಡ್ಡ ತೊಡಕಾಗಿದೆ ಮಾತ್ರವಲ್ಲ ಹಾಗೆ ಹುಡುಕ ಹೊರಡುವುದೇ ಅಮಾನವೀಯತೆಯ ಪರಮಾವಧಿ ಎನ್ನುವಂತೆ ನೋಡಮಾಡಿದೆ.

  Santhosh Shetty ನೋಡಿ, ಜಾತಿ ಮತ್ತು ಜಾತಿವ್ಯವಸ್ಥೆ ಇವೆರಡಕ್ಕೂ ವ್ಯತ್ಯಾಸವಿದೆ. ಜಾತಿ ನಮ್ಮ ಸಮಾಜದಲ್ಲಿರುವ ವಾಸ್ತವ ಸಂಗತಿ, ಅಂದರೆ ಇಲ್ಲಿರುವ ಸಮುದಾಯಗಳು ಬೇರೆ ಬೇರೆ ಅಸ್ಮಿತೆಗಳಿಂದ ಗುರುತಿಸಿಕೊಳ್ಳುವಂತೆ ಜಾತಿ ಎಂಬ ಅಸ್ಮಿತೆಯಿಂದಲೂ ಗುರುತಿಸಿಕೊಳ್ಳುತ್ತವೆ. ಆದರೆ ಜಾತಿವ್ಯವಸ್ಥೆ ಎಂಬುದು ಒಂದು ಪರಿಕಲ್ಪನಾತ್ಮಕ ವಿವರಣೆ, ಆ ಪರಿಕಲ್ಪನೆಯು ಇಲ್ಲಿರುವ ವಿಭಿನ್ನ ಜಾತಿಗಳನ್ನು ಮತ್ತು ಸಮುದಾಯಗಳನ್ನು ಏಕೀಕೃತಗೊಳಿಸಿ ಎಲ್ಲಾ ಜಾತಿಗಳನ್ನು ನಿಯಂತ್ರಿಸುವ ಒಂದು ಚಾಲಕಶಕ್ತಿ ಜಾತಿವ್ಯವಸ್ಥೆಯಾಗಿದೆ ಎನ್ನುತ್ತದೆ. ಅಂತಹ ವಿವರಣೆ ಜಾತಿಯ ಅಸ್ತಿತ್ವದ ಆಧಾರದ ಮೇಲೆಯೇ ಬೆಳದು ಬಂದಿದೆ, ಹಾಗೆಂದು ಜಾತಿ ಇದ್ದ ಮಾತ್ರಕ್ಕೆ ಅದುವೇ ಸಿಸ್ಟಂ ಎಂದು ಹೇಳಲು ಸಾಧ್ಯವಿಲ್ಲ. ಅಂದರೆ ಜಾತಿಯ ಅಸ್ತಿತ್ವದ ಸಾಕ್ಷ್ಯವೇ ಒಂದು ಸಿಸ್ಟಂನ ಅಸ್ತಿತ್ವಕ್ಕೆ ಸಾಕ್ಷಿಯಾಗಲಾರದು. ಉದಾಹರಣೆಗೆ, ಎಕ್ಸ್ ಮತ್ತು ವೈ ಎಂಬ ಇಬ್ಬರು ವ್ಯಕ್ತಿಗಳು ಇದ್ದಾರೆ ಎಂದಿಟ್ಟುಕೊಳ್ಳಿ, ಅವರಿಬ್ಬರು ನಮ್ಮ ಮುಂದೆ ಇದ್ದಾರೆ ಎನ್ನುವ ಮಾತ್ರಕ್ಕೆ ಅವರಿಬ್ಬರೂ ಗಂಡ ಹೆಂಡತಿ, ಅಥವಾ ಸ್ನೇಹಿತರು, ಅಥವಾ ಅಣ್ಣತಂಗಿ ಇನ್ನೂ ಯಾವುದಾದರೂ ಸಂಬಂಧವಿದೆ ಎಂದು ಹೇಳಲು ಸಾಧ್ಯವಿದೆಯೇ? ಖಂಡಿತ ಇಲ್ಲ, ಏಕೆಂದರೆ ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆ ಎನ್ನುವುದು ಅಭ್ಯಸಿಸಿದ ನಂತರವೇ ತಿಳಿಯುವುದು. ಅವರಿಬ್ಬರೂ ಅಲ್ಲಿದ್ದಾರೆ ಹಾಗಾಗಿ ಅವರಿಬ್ಬರಿಗೂ ಯಾವುದೋ ಒಂದು ಸಂಬಂಧವಿದೆ ಎನ್ನುವುದು ಅತಾರ್ಕಿಕವಾಗುತ್ತದೆ, ಏಕೆಂದರೆ ಕೇವಲ ಅವರ ಅಸ್ತಿತ್ವವು ಅವರ ನಡುವೆ ಸಂಬಂಧವಿದೆ ಎನ್ನುವುದಕ್ಕೆ ಆಧಾರವಾಗುವುದಿಲ್ಲ..

  ಅಂತೆಯೇ, ಜಾತಿಗಳು ಇದ್ದ ಮಾತ್ರಕ್ಕೆ ಒಂದು ಸಿಸ್ಟಂ ಇದೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತೂ ಒಂದು ಉದಾಹರಣೆ ನೋಡಿ, ಒಂದು ಊರಿನಲ್ಲಿ ಶೇಕಡ ೯೦ ರಷ್ಟು ಕ್ರಿಕೆಟ್ ಆಡುತ್ತಾರೆ ಎಂದಿಟ್ಟುಕೊಳ್ಳಿ, ಅದರಿಂದ ಏನು ಹೇಳಬಹುದು? ಜನರು ಕ್ರಿಕೆಟ್ ಆಡುತ್ತಿದ್ದಾರೆ, ಇವರೆಲ್ಲಾ ಕ್ರಿಕೆಟ್ ಪ್ರಿಯರು ಎಂದು ಸಹಜವಾಗಿ ಹೇಳಬಹುದು.. ಆದರೆ ಈ ಸಹಜತೆ ಮಾಯವಾಗುವುದು ಕ್ರಿಕೆಟ್ ಇಲ್ಲಿನ ಸಾಮಾಜಿಕ ವ್ಯವಸ್ಥೆ, ಏಕೆಂದರೆ ಎಲ್ಲಿ ನೋಡಿದರೂ ಅದುವೆ ಗೋಚರವಾಗುತ್ತಿದೆ ಎಂದಾಗ.. ಇದೇ ರೀತಿ ಜಾತಿ ಇದೆ ಎನ್ನುವ ಕಾರಣಕ್ಕೆ ಅದು ಸಿಸ್ಟಂ ಆಗಿದೆ ಎನ್ನುವುದು ಅಸಹಜವಾದ ಒಂದು ವಿವರಣೆ. ಒಂದೊಮ್ಮೆ”ಜಾತಿವ್ಯವಸ್ಥೆ’ ಎಂಬ ವಿದ್ಯಮಾನ ಇದೆ ಎಂದಾದರೆ ಅದನ್ನು ನಾವು ಗುರುತಿಸಲು ಶಕ್ತರಾಗಬೇಕು, ನನಗೆ ತಿಳಿದಿರುವ ಮಟ್ಟಿಗೆ ಅದರ ಕುರಿತು ಬರೆದಿರುವ ಸಾಹಿತ್ಯದಲ್ಲಿ ಯಾರೂ ಸಹ ಅದನ್ನು ತೋರಿಸುವಲ್ಲಿ ಸಫಲರಾಗಿಲ್ಲ. ನೋಡಿ ಇನ್ನೂ ಒಂದು ಪ್ರಯೋಗ ಮಾಡಬಹುದು, ನಾವು ನಮ್ಮ ಜಾತಿ ಭಾಗವಾಗಿ ಇರುವುದು ನಮಗೆ ತಿಳಿದಿರುತ್ತದೆ, ಆದರೆ ಯಾವಾಗ ನಾವು ಒಂದು ಸಿಸ್ಟಂನ ಭಾಗ ಎಂದು ಅನುಭವವನ್ನು ಪಡೆಯುತ್ತೇವೆ ಎಂಬುದನ್ನು ಆಲೋಚಿಸಿ…ಜಾತಿ ಇದೆ ಎಂದಮಾತ್ರಕ್ಕೆ ಅವೆಲ್ಲಾ ಕ್ರೂಡೀಕೃತವಾಗಿ ಯಾವುದೋ ಒಂದು ಆಜ್ಞೆಯನ್ನು ಎಲ್ಲಾ ಸಮುದಾಯಗಳು ಪಾಲಿಸುತ್ತವೆ ಎಂಬುದು ಅವಾಸ್ತವಿಕ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments