ವಿಷಯದ ವಿವರಗಳಿಗೆ ದಾಟಿರಿ

ಮೇ 4, 2013

11

‘ಕುಮಾರ’ ಮುಖ್ಯಮಂತ್ರಿ ಗಾದಿಗೆ! ‘ಮೋದಿ’ ಪ್ರಧಾನಿ ಹುದ್ದೆಗೆ!

‍ನಿಲುಮೆ ಮೂಲಕ

– ಗೋಪಾಲಕೃಷ್ಣ

KMಅಭಿವೃದ್ಧಿಯೇ ಮಾತನಾಡುವುದಾದರೆ; ‘ಕುಮಾರಣ್ಣ’ ಮುಖ್ಯಮಂತ್ರಿ ಗಾದಿಗೆ! ‘ಮೋದಿಜಿ’ ಪ್ರಧಾನಿ ಹುದ್ದೆಗೆ!

ಅರವತ್ತಾರು ವಸಂತಗಳ ಬಂಧಮುಕ್ತ ಬದುಕು.ಈ ನಡುವೆ ದೇಶ ಕಂಡದ್ದು 13 ಮಂದಿ ಪ್ರಧಾನಮಂತ್ರಿಗಳನ್ನು. ರಾಜ್ಯವನ್ನಾಳಿದ್ದು 21 ಮುಖ್ಯಮಂತ್ರಿಗಳು.  ಇವರೆಲ್ಲರಲ್ಲಿಯೂ; ದೇಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿಯವರನ್ನು ಮತ್ತೆ ಮತ್ತೆ ನೆನದರೆ, ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಮಾಜಿಕ ಪರಿಕಲ್ಪನೆ, ರಾಮಕೃಷ್ಣ ಹೆಗಡೆ ಅವಧಿಯ ಜನಪರ ಕಾರ್ಯಕ್ರಮಗಳು, ಎಸ್.ಎಂ.ಕೃಷ್ಣ ಅವರ ಲಯ ತಪ್ಪದ ಆಡಳಿತ, ಹೆಚ್.ಡಿ.ಕುಮಾರಸ್ವಾಮಿಯವರ ಇಪ್ಪತ್ತೇ ತಿಂಗಳ ಆಡಳಿತವನ್ನು ಮಾತ್ರ ಇಂದಿಗೂ ಮೆಲುಕು ಹಾಕುವಂತಾಗಿದೆ.

ಭಾರತದ ಜನಸಂಖ್ಯೆ 121 ಕೋಟಿಯನ್ನು ದಾಟಿರಬಹುದು.  ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸುಮಾರು 5400 ಮಂದಿಯಷ್ಟೇ.  ಆದರೆ, ಇಷ್ಟು ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಆಶಯಗಳಿಗೆ ತಕ್ಕಂತೆ ನಡೆಯುವುದು ಅಪರೂಪ.  ಅವರುಗಳ ನಿಷ್ಠೆಯೇನಿದ್ದರೂ ದೇಶವಾದರೆ ಪ್ರಧಾನಿಗೆ! ರಾಜ್ಯವಾದರೆ ಮುಖ್ಯಮಂತ್ರಿಗೆ ಮೀಸಲು ಎಂಬಂತಿರುತ್ತದೆ.  ಸಂವಿಧಾನದ ಪ್ರಕಾರ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯನ್ನು ಶಾಸಕರು, ಲೋಕಸಭಾ ಸದಸ್ಯರು ಆಯ್ಕೆ ಮಾಡಬೇಕು.  ಆ ಪರಿಪಾಠ ಮುರಿದು ಬಿದ್ದು ಎಷ್ಟೋ ವರ್ಷಗಳು ಆಗಿವೆ.  ಈಗೇನಿದ್ದರೂ ಚುನಾವಣಾ ಪೂರ್ವದಲ್ಲಿಯೇ ನಾಯಕನ ಆಯ್ಕೆ ಇಲ್ಲವೇ ಹೈಕಮಾಂಡ್ ಹೇಳಿದವರು ಅತ್ಯುನ್ನತ ಹುದ್ದೆಯಲ್ಲಿ ಕೂರುತ್ತಾರೆ.

ಈ ಹಿನ್ನೆಲೆಯನ್ನೇ ಬಲವಾಗಿ ಆಧರಿಸಿದರೂ, ನಮಗೆ ಬೇಕಿರುವುದು ಸಮರ್ಥ ನಾಯಕತ್ವ.  ಅನಾದಿ ಕಾಲದಿಂದಲೂ ಮತೊಂದಿದೆ; ಒಬ್ಬ ನಾಯಕ ನೂರು ಹೆಜ್ಜೆ ಮುಂದಿಟ್ಟರೆ, ಜನತೆ ಒಂದು ಹೆಜ್ಜೆ ಮಾತ್ರ ಮುಂದಿಡುತ್ತಾರೆ.  ಆತ ಒಂದು ಹೆಜ್ಜೆ ಹಿಂದಿಟ್ಟರೆ ಜನತೆ ಸಾವಿರ ಹೆಜ್ಜೆ ಹಿಂದಿಡುತ್ತಾರೆ.  ಕಳೆದ ಶತಮಾನದ ಇತಿಹಾಸವನ್ನು ಗಮನಿಸಿದರೆ ಕೆಲವು ಸ್ಥಾನಗಳು ಪಲ್ಲಟಗೊಂಡಿದ್ದರೆ ಇವತ್ತಿನ ಸ್ಥಿತಿ-ಗತಿಗಳಲ್ಲಿ ಭಾರೀ ವ್ಯತ್ಯಾಸವೇ ಇರುತ್ತಿತ್ತು.  1915ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಮರಳಿ ಬಾರದೇ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದೇ ಆಗಿದ್ದರೆ?  ಸತತ ಹದಿನೇಳು ವರ್ಷಗಳ ಕಾಲ ದೇಶವನ್ನಾಳಿದ ಜವಹರಲಾಲ್ ನೆಹರು ಅವರ ಬದಲಿಗೆ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ದರೆ?  ಲಾಲ್ ಬಹದ್ದೂರ್ ಶಾಸ್ತ್ರಿಯವರು ಅನುಮಾನಾಸ್ಪದ ಸಾವಿಗೀಡಾಗದೆ, ಇನ್ನಷ್ಟು ವರ್ಷ ದೇಶವನ್ನಾಳಿದ್ದರೆ?  ಬಾಂಗ್ಲಾಗೆ ವಿಮೋಚನೆ ದೊರಕಿಸಿಕೊಟ್ಟ ಇಂದಿರಾಗಾಂಧಿಯವರು, ಪೋಖ್ರಾನ್‍ನಲ್ಲಿ ಅಣು ಪರೀಕ್ಷೆ ನಡೆಸದೇ ಹೋಗಿದ್ದರೆ?  ಪಿ.ವಿ.ಎನ್. ಬೆಂಬಲಿತ ಮನಮೋಹನ್‍ಸಿಂಗ್ ಅವರು 1991ರಲ್ಲಿ ಭಾರತದ ಆರ್ಥಿಕ ಹೆಬ್ಬಾಗಿಲು ತೆರೆಯದೇ ಇದ್ದಿದ್ದರೆ?  ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಕ್ಕೆ ಉತ್ತರವಿತ್ತು, ಯಾವ ವಿರೋಧವನ್ನು ಲೆಕ್ಕಿಸದೆ ಪೋಖ್ರಾನ್‍ನಲ್ಲಿ ಅಣುಪರೀಕ್ಷೆ ನಡೆಸಿದ ಎ.ಬಿ.ವಾಜಪೇಯಿಯವರು ಸಾಲಮುಕ್ತ ಭಾರತಕ್ಕೆ ಅಡಿಗಲ್ಲು ಹಾಕದೇ ಇದ್ದಿದ್ದರೆ?  ಆದರೆ, ಹೋದರೆ ಈ ಮಾತುಗಳ ಅರ್ಥವಿಷ್ಟೇ ಸಮರ್ಥ ನಾಯಕತ್ವದಿಂದ ಮಾತ್ರವಷ್ಟೇ ಸದ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.  ನಮ್ಮ ಧೌರ್ಭಾಗ್ಯವೋ ಏನೋ…?  ಪರಕೀಯರಿಂದ ಸ್ವಾತಂತ್ರ್ಯ ಪಡೆಯುವ ಸಂಧರ್ಭದಲ್ಲೂ ಮತ್ತು ಸ್ವತಂತ್ರ ಭಾರತ ಅಂಬೆಗಾಲಿಟ್ಟ ಸಂಧರ್ಭದಲ್ಲೂ ಆಳಬಲ್ಲವರು ಆಳಾದರು, ಆಳಬೇಕಾದವರು ನಮ್ಮನ್ನಾಳಿದರು.  ದೇಶವನ್ನು ಮುನ್ನಡೆಸುವ ನಾಯಕರ ಯೋಚನೆ, ಯೋಜನೆಗಳು ಮುಂದಿನ ತಲೆಮಾರಿನ ಬೆಳವಣಿಗೆ ಮೇಲೆ ಅಗಾಧ ಪ್ರಮಾಣದ ಪರಿಣಾಮ ಬೀರುತ್ತವೆ.  ಇದನ್ನು ಇತಿಹಾಸ ನಮಗೆ ಸಾರಿ ಸಾರಿ ಹೇಳುತ್ತಿದೆ.

ಇದೇ ನಮಗೆ ಪಾಠವಾದರೆ ಮುಂದಿನ ಚುನಾವಣೆಗಳಲ್ಲಿ ಸಶಕ್ತ, ಸಮರ್ಥ ನಾಯಕನನ್ನು ಅಭಿವೃದ್ಧಿಯ ಮಾನದಂಡದಲ್ಲಿ ಆಯ್ಕೆ ಮಾಡಬೇಕಾಗುತ್ತದೆ.  ಮೇ 05ರಂದು ಕರ್ನಾಟಕದ ಜನ ತಮ್ಮ ನಾಯಕರನ್ನು ಆಯ್ದುಕೊಳ್ಳಲಿದ್ದಾರೆ.  ನಂತರದ ಕೆಲವೇ ತಿಂಗಳಲ್ಲಿ 16ನೇ ಲೋಕಸಭೆಗೆ ಚುನಾವಣೆ ಬರಬಹುದಾದ ಸುದ್ದಿಗಳಿವೆ.

ಅಭಿವೃದ್ದಿ ಕಾರ್ಯಗಳಿಗಷ್ಟೇ ಮಣೆ ಹಾಕಬೇಕಾದ ಸಮಯವಿದು.  ರಾಜ್ಯದಲ್ಲಿ ಭಾಜಪ ಐದು ವರ್ಷದಲ್ಲಿಯೇ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ.  ಸದ್ಯ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾಗಿದ್ದರೂ, ಅವರ ಹಿಂದಿನ ಆಡಳಿತವೇ ನೀರಸವಾಗಿತ್ತು.  ಇನ್ನು ಹೈಕಮಾಂಡ್ ಆಯ್ಕೆ ಮಾಡುವ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.  ಅವರನ್ನು ತಣಿಸಲು ಅಧಿಕಾರಕ್ಕೆ ಬಂದರೆ ಅಧಿಕಾರ ಹಂಚಿಕೆ ಮಾಡುವ ಸಂಭವವೂ(!) ಇದೆ.  ದೇಶದಲ್ಲಿ; ಬರೆದಿಟ್ಟ ಭಾಷಣ ಓದುವ ರಾಹುಲ್ ಗಾಂಧಿ, ಗಳಿಗೆಗೊಂದು ನಿರ್ಧಾರ ಕೈಗೊಳ್ಳುವ ಮುಲಾಯಂಸಿಂಗ್ ಯಾದವ್, ಮಾಯಾವತಿ, ಕ್ರಿಕೆಟ್ ಹಣದ ಹೊಳೆಯಲ್ಲಿ ಖುಷಿಯಾಗಿರುವ ಕೃಷಿ ಸಚಿವ ಶರದ್ ಪವಾರ್, ಒಂದು ಕಾಲದ ರೆಡ್ಡಿಗಳ ಅಮ್ಮಾ(!) ಸುಷ್ಮಸ್ವರಾಜ್ ಅವರುಗಳು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ.  ಇವರುಗಳ ಕೈಯಲ್ಲಿ ಅಧಿಕಾರವನ್ನೇನಾದರು ನೀಡಿದರೆ ಬಾಣಲೆಯಲ್ಲಿ ಬೇಯುತ್ತಿದ್ದವರು ಬೆಂಕಿಯಲ್ಲಿ ಬಿದ್ದಂತಾಗುತ್ತದೆ.  ದೇಶದ ಆಡಳಿತದಲ್ಲಿನ ಒಳ-ಹೊರ ಚಿತ್ರಣಗಳ ಅಗಾಧ ಅನುಭವ ಹೊಂದಿರುವ ಪ್ರಧಾನಿ ಮನಮೋಹನ್‍ಸಿಂಗ್ ಅವರೇ ವೈಫಲ್ಯದ ಬೇಗೆಯಲ್ಲಿ ನರಳುತ್ತಿದ್ದಾರೆ.  ಆರ್ಥಿಕ ಹಿನ್ನಡೆ, ಸಾಲು ಸಾಲು ಹಗರಣಗಳೇ ಇದಕ್ಕೆ ಸ್ಪಷ್ಟ ನಿದರ್ಶನಗಳು.  ಸದ್ಯಕ್ಕೆ ಬಯಸಬೇಕಾಗಿರುವುದು ‘ಕಮ್ಯಾಂಡ್’ ಮನಸ್ಥಿತಿಯ ಪ್ರಧಾನಿ, ಮುಖ್ಯಮಂತ್ರಿಯನ್ನು ಮಾತ್ರ.  ಇಂತಹ ಗುಣಗಳನ್ನು(ಹುದ್ದೆಗೇರುವ ಅವಕಾಶವಿರುವವರು) ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ದೇಶದಲ್ಲಿ ನರೇಂದ್ರ ಮೋದಿಯವರಲ್ಲಿ ಕಾಣಬಹುದು.

ಜಾತಿ, ಧರ್ಮ, ಹಣ, ಭ್ರಷ್ಟಾಚಾರ ಇಂತಹ ನೆಲಗಟ್ಟನ್ನು ಹೊರಗಿಟ್ಟು ಅಭಿವೃದ್ಧಿಯ ಮಾನದಂಡದಿಂದ ಮಾತ್ರ ಈ ನಾಯಕರ ಶಕ್ತಿ, ಸಾಮಥ್ರ್ಯಗಳನ್ನು ಅವಲೋಕಿಸಬೇಕಿದೆ.  ಕುಮಾರಸ್ವಾಮಿಯವರಿಗೆ ಸಿಕ್ಕಿದ್ದು ಕೇವಲ 20 ತಿಂಗಳಷ್ಟೇ.  ನರೇಂದ್ರ ಮೋದಿಯವರ ‘ವೈಬ್ರಂಟ್ ಗುಜರಾತ್’ ಸಾಧನೆಗೆ ಬೇಕಾದದ್ದು ಹನ್ನೊಂದು ವರ್ಷಗಳು.  ಈ ಅವಧಿಯಲ್ಲಿ ಹೊರಬಂದ ಜನಪರ ಯೋಜನೆಗಳು ಮತ್ತು ಅವುಗಳ ಅನುಷ್ಠಾನವೇ ಇವರಿಗೆ ಹೊಸ ವರ್ಚಸ್ಸು ನೀಡಿದೆ.

ಈಗಾಗಲೇ ಚೀನಾ 19 ಕಿ.ಮೀ.ವರೆಗೆ ಗಡಿ ಒತ್ತುವರಿ ಮಾಡಿಕುಳಿತಿದೆ. 1962ರಲ್ಲಿ ಚಾಚಾ ನೆಹರು ‘ಹಿಂದಿ-ಚೀನಿ ಭಾಯಿ ಭಾಯಿ’ ಎನ್ನುತ್ತಿರುವಾಗ ಚೀನಾದಿಂದ ಭಾರತೀಯ ಸೈನಿಕರ ನರಮೇಧ ನಡೆದದ್ದು ಹೇಗೆ ಎಂಬುದನ್ನು ಜಾನ್. ಪಿ ದಳವಿಯವರ ‘ಹಿಮಾಲಯನ್ ಬ್ಲಂಡರ್’ ಎಳೆಎಳೆಯಾಗಿ ಬಿಚ್ಚಿಡುತ್ತದೆ.  50 ವರ್ಷಗಳ ನಂತರ ಮತ್ತೆ ಖ್ಯಾತೆ ತೆಗೆದರೂ, ಚೀನಾ ಉತ್ಪನ್ನಗಳನ್ನು ನಿಷೇಧಿಸುವುದಾಗಲಿ, ವಿಶ್ವಸಂಸ್ಥೆಯ ಬಾಗಿಲು ತಟ್ಟುವುದಾಗಲಿ ಆಳುವ ಪಕ್ಷದಿಂದ ಇನ್ನೂ ಸಾಧ್ಯವಾಗಿಲ್ಲ.  ಆದರೆ ಗುಜರಾತ್ ಸರಹದ್ದಿನಲ್ಲಿ ಬರುವ ಸರ್‍ಕ್ರೀಕ್ ಗಡಿ ವಿವಾದದ ಬಗ್ಗೆ ಪಾಕಿಸ್ತಾನದೊಂದಿಗೆ ಮಾತುಕತೆಯನ್ನೇ ನಿಲ್ಲಿಸಿ ಎನ್ನುವ ನರೇಂದ್ರಿ ಮೋದಿಯವರು ಪ್ರಧಾನಿ ಹುದ್ದೆಗೇರಿದರೆ ಚೀನಾಗೆ ಸರಿಯಾದ ಉತ್ತರ ಹೇಳುವುದರಲ್ಲಿ ಸಂಶಯವಿಲ್ಲ.  ಬೆಳಗಾವಿ ಗಡಿ ವಿವಾದ ಬಗೆಹರಿಸಲು ಅರವತ್ತರ ದಶಕದಲ್ಲಿಯೇ ಮಹಾಜನ್ ವರದಿ ಬಂದಿದ್ದರೂ, ಎಂ.ಇ.ಎಸ್. ಕೀಟಲೆಗಳಿಗೆ ಕಡಿವಾಣ ಬಿದ್ದಿರಲಿಲ್ಲ.  ಮಹಾರಾಷ್ಟ್ರದ ಪ್ರತಿರೋಧದ ನಡುವೆಯೂ 2006ರಲ್ಲಿ ಅಧಿವೇಶನ ನಡೆಸಿದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಹಾರಾಷ್ಟ್ರಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದರು.  ಅಲ್ಲದೆ ಬೆಳಗಾವಿ ಗಡಿ ವಿವಾದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ನಿರ್ಧರಿಸಿ, ಸುವರ್ಣ ಸೌಧಕ್ಕೆ ಶಿಲಾನ್ಯಾಸ ಮಾಡಿದರು.  ಇದು ಸಮಗ್ರ ಕರ್ನಾಟಕದ ವಿಚಾರದಲ್ಲಿ ಹೆಚ್.ಡಿ.ಕೆ. ಅವರಿಗೆ ಖಚಿತ ಮತ್ತು ಸ್ಪಷ್ಟ ಅಭಿಪ್ರಾಯವಿರುವುದನ್ನು ರುಜುವಾತು ಪಡಿಸಿತು.

ಗುಜರಾತ್‍ನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಮೋದಿಯವರು ನಿರ್ಮಲ ಗ್ರಾಮ, ಸ್ವಚ್ಛಗ್ರಾಮ-ಸ್ವಸ್ಥ ಗ್ರಾಮ ಯೋಜನೆ, ಪಂಚವಟಿ ಯೋಜನೆ, ಸರ್ಧಾರ್ ಪಟೇಲ್ ಅವಾಸ್ ಯೋಜನೆ, ಗ್ರಾಮ ಸ್ವಾಗತ್ ಯೋಜನೆಗಳನ್ನು ಹಮ್ಮಿಕೊಂಡರು.  ಹನ್ನೊಂದು ವರ್ಷಗಳಲ್ಲಿ ಹಂತ ಹಂತವಾಗಿ ಈ ಯೋಜನೆಗಳನ್ನು ಗುಜರಾತ್‍ನ ಗ್ರಾಮೀಣಾಭಿವೃದ್ಧಿಗಾಗಿ ಜಾರಿಗೊಳಿಸಿದರು ಮೋದಿ.  2006ರಲ್ಲಿ 20 ತಿಂಗಳ ಪೂರ್ವ ನಿಗದಿಯಂತೆ ಅಧಿಕಾರಕ್ಕೇರಿದ ಕುಮಾರಸ್ವಾಮಿಯವರು ಒಂದೇ ಯೋಜನೆಯಡಿ ಮೂಲಭೂತ ಸೌಲಭ್ಯ ದೊರಕುವ ‘ಸುವರ್ಣ ಗ್ರಾಮ’ ಯೋಜನೆ ಜಾರಿಗೊಳಿಸಿದರು.  ಹಳ್ಳಿಯೊಂದಕ್ಕೆ ಸಮರ್ಪಕ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಉತ್ತಮ ರಸ್ತೆ, ಶೌಚಾಲಯ, ಶಾಲೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಈ ಯೋಜನೆ ಅಂದಿನ ರಾಷ್ಟ್ರಪತಿ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಂಸೆಗೆ ಒಳಗಾಯಿತು.  ಇನ್ನು ಒಂದು ಹೆಜ್ಜೆ ಮುಂದಿಟ್ಟ ಹೆಚ್.ಡಿ.ಕೆ. ಅವರು ‘ಗ್ರಾಮ ವಾಸ್ತವ್ಯ’ದ ಮೂಲಕ ಸರ್ಕಾರವನ್ನೇ ಹಳ್ಳಿಗೆ ತಂದರು.  ಇದರ ಜೊತೆಗೆ ಪ್ರತಿ ಶನಿವಾರದ ‘ಜನತಾ ದರ್ಶನ’ ಇಂದಿಗೂ ಜನಮನ್ನಣೆ ಪಡೆದಿದೆ.  ಇಂದು ಉತ್ತರಪ್ರದೇಶದ ಅಖಿಲೇಷ್ ಯಾದವ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಜನತಾ ದರ್ಶನ ಅಳವಡಿಸಿಕೊಂಡಿದ್ದಾರೆ.  ಹೆಚ್.ಡಿ.ಕೆ. ಅವರ ಕೃಷಿ ಆಧಾರಿತ ಉದ್ಯಮ ಕಲ್ಪನೆ ಜಾರಿಗೆ ಬರಲು ಮತ್ತೆ ಅವರೇ ಅಧಿಕಾರಕ್ಕೆ ಬರಬೇಕಿದೆ.  ‘ಸಾರಾಯಿ ನಿಷೇಧ’ ‘ಲಾಟರಿ ನಿಷೇಧ’ ಇವು ಮಹಿಳೆಯರ ಪಾಲಿಗೆ ವರದಾನದಂತಿವೆ.

ವಾಣಿಜ್ಯ ರಾಜಧಾನಿ ಅಹಮದಬಾದ್‍ಗೆ ಹೊಸ ರೂಪ ನೀಡುತ್ತಿರುವ ನರೇಂದ್ರ ಮೋದಿ ಅವರ ಹೆಗ್ಗಳಿಕೆಗೆ ಕನ್ನಡಿಯಂತಿರುವುದು ಸಬರಮತಿ ನದಿ.  ಅಹಮದಬಾದ್ ನಗರದ ಮೂಲಕವೇ ಹರಿದು ಹೋಗುವ ಸಬರಮತಿ ನದಿ ಎರಡೂ ಬದಿಯಲ್ಲಿ ಕೊಳಚೆ ಪ್ರದೇಶವಾಗಿತ್ತು.  ‘ಸಬರ್‍ಮತಿ ರಿವರ್‍ಫ್ರಂಟ್ ಡೆವಲ್‍ಪೆಂಟ್ ಪ್ರಾಜೆಕ್ಟ್’ ಮೂಲಕ 10 ಕಿ.ಮೀ.ವರೆಗೆ ವಾಯುವಿಹಾರಿಗಳ ನೆಚ್ಚಿನ ತಾಣವನ್ನಾಗಿಸಿದ್ದಾರೆ ನರೇಂದ್ರ ಮೋದಿ.  76 ಕಿ.ಮೀ. ವರ್ತುಲ ರಸ್ತೆಯು ಸಹ ಅಹಮದಬಾದ್ ಬೆಳವಣಿಗೆಗೆ ಸಹಕಾರಿಯಾಗಿದೆ.  ಹತ್ತಿರಹತ್ತಿರ ಒಂದು ಕೋಟಿಯಷ್ಟು ಜನರಿಗೆ ತನ್ನ ಒಡಲಲ್ಲಿ ನೆಲೆ ಕೊಟ್ಟಿರುವ ಬೆಂಗಳೂರಿಗೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರ ಅವಧಿ ಬದಲಾವಣೆ ಪರ್ವ.  ಭೂಗಳ್ಳರ ಪತ್ತೆ ಹಚ್ಚಲು ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದರು.  ಈ ಸಮಿತಿಯು ಸುಮಾರು 40 ಸಾವಿರ ಎಕರೆಗೂ ಹೆಚ್ಚು ಭೂಮಿ ಅತಿಕ್ರಮಣವಾಗಿದೆ ಎಂದು ವರದಿ ನೀಡಿದೆ.  ತೆವಳುತ್ತಾ ಸಾಗಿದ್ದ ಬೆಂಗಳೂರು ಜನರ ಬಹುನಿರೀಕ್ಷಿತ ನಮ್ಮ ಮೆಟ್ರೋ ಯೋಜನೆಗೆ ಇದೇ ಅವಧಿಯಲ್ಲಿ ಚಾಲನೆ ಸಿಕ್ಕಿದ್ದಲ್ಲದೇ, ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರು ಯೋಜನೆಗೂ ಆರಂಭ ದೊರಕಿತು.  ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದ ಬೆಂಗಳೂರು ಮಹಾನಗರ ಪಾಲಿಕೆಯನ್ನು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಎಂದು ಮರುನಾಮಕರಣ ಮಾಡಿ, ವಾರ್ಡುಗಳ ಸಂಖ್ಯೆಯನ್ನು 100ರಿಂದ 197ಕ್ಕೆ ಹೆಚ್ಚಿಸಿ, 7 ನಗರಸಭೆಗಳು, 1 ಪಟ್ಟಣ ಪಂಚಾಯಿತಿ, 110 ಹಳ್ಳಿಗಳನ್ನು ಬಿ.ಬಿ.ಎಂ.ಪಿ.ಯ ವ್ಯಾಪ್ತಿಗೆ ಸೇರಿಸಿದರು.

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯೆಂದರೆ ಗುಜರಾತ್‍ನ ಕಂಬತ್ ಕಣಿವೆಯಲ್ಲಿ ಅಣೆಕಟ್ಟು ನಿರ್ಮಾಣ.  ಐವತ್ತು ಸಾವಿರ ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಿ, ಕುಡಿಯಲು ಮತ್ತು ಕೃಷಿಗಾಗಿ ನೀರು ಬಳಕೆ ಮಾಡುವ ಉದ್ದೇಶ ಹೊಂದಿದ್ದಾರೆ.  ಈ ಅಣೆಕಟ್ಟು ನಿರ್ಮಾಣದ ಜೊತೆಗೆ ವಾಹನ ಮತ್ತು ರೈಲು ಸಂಚಾರಕ್ಕೆ ಅನುಕೂಲವಾಗುವಂತಹ ಸೇತುವೆ ನಿರ್ಮಿಸಿ, ಆ ಮೂಲಕ ಸೂರತ್ ಮತ್ತು ಭವನಗರದ ನಡುವಿನ ಪ್ರಯಾಣದ ಅಂತರವನ್ನು ಸುಮಾರು 200 ಕಿ.ಮೀ.ನಷ್ಟು ತಗ್ಗಿಸುವ ಯೋಜನೆ ಹೊಂದಿದ್ದಾರೆ.  ಕರ್ನಾಟಕದ ಕಾವೇರಿ, ಕೃಷ್ಣ ನದಿಗಳ ವಿಚಾರ ಬಂದಾಗ ಎರಡೂ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನಿಲುವು ಪ್ರದರ್ಶಿಸುವುದೇ ಪರಿಪಾಠ ಆಗಿದೆ.  ಕಾವೇರಿ ವಿಚಾರದಲ್ಲಿಯಂತೂ ತಮಿಳುನಾಡು ಹೆಚ್ಚು ತೃಪ್ತಿಕರವಾಗಿದೆ.  ಅಲ್ಲಿಯವರಂತೆಯೇ ಪ್ರಾದೇಶಿಕ ಪಕ್ಷದ ಕೂಗು ಕರ್ನಾಟಕದಲ್ಲಿ ಆಗಾಗ್ಗೆ ಕೇಳಿ ಬರುತ್ತಿರುತ್ತದೆ.

ನರೇಂದ್ರ ಮೋದಿಯವರು ಮುಖೇಶ್ ಅಂಬಾನಿ, ರತನ್ ಟಾಟಾರವರಂತಹ ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಾರೆ ಎಂಬ ವಾದವಿದೆ.  ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ ವಿದೇಶಿಯರಿಗೆ ಮಣೆ ಹಾಕುವ ಬದಲಿಗೆ ನಮ್ಮ ದೇಶದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ತಪ್ಪೇನಿದೆ.  ಕೃಷಿಗೆ ತೊಂದರೆಯಾಗದಂತೆ ಕೈಗಾರಿಕೆ ಬೆಳವಣಿಗೆಗೆ ಅಡಿಪಾಯ ಹಾಕಿರುವ ಮೋದಿಯವರು ಬಂಡವಾಳ ಹೂಡಿಕೆಯನ್ನು ಯಶಸ್ವಿಯಾಗಿಸಿದ್ದಾರೆ.  ಕರ್ನಾಟಕದಲ್ಲಿ ಎರಡು ಬಾರಿ ಜಾಗತಿಕ ಬಂಡವಾಳ ಹೂಡಿಕೆ ಮಾಡಿದರು, 10 ಲಕ್ಷಕ್ಕೂ ಮಿಕ್ಕು ಉದ್ಯೋಗ ಸೃಷ್ಟಿಸುತ್ತೇವೆ ಎಂದರು, ಫಲಿತಾಂಶ ಏನು ಎಂಬುದನ್ನು ರಾಜ್ಯದ ಜನರೇ ನೋಡಿದ್ದಾರೆ.  ಸಮರ್ಥ ನಾಯಕನಿದ್ದರೆ ಮಾತ್ರವೇ ಯೋಜನೆಗಳು ಫಲಕಾರಿಯಾಗುವುದು.

‘21 ಶತಮಾನವೆಂದರೆ ಅದು ಜ್ಞಾನದ ಕಾಲ.  ಜ್ಞಾನವೇ ಬಡತನವನ್ನು ತೊಲಗಿಸುತ್ತದೆ’ ಎನ್ನುತ್ತಾರೆ ಮೋದಿ.  2006ರಲ್ಲಿಯೇ ಇಂತಹ ಕಲ್ಪನೆಗೆ ಅಡಿಪಾಯ ಹಾಕಿದವರು ಹೆಚ್.ಡಿ.ಕೆ.  ಅರವತ್ತು ವರ್ಷಗಳ ಅವಧಿಯಲ್ಲಿ 900 ಪ್ರೌಢಶಾಲೆಗಳಷ್ಟೇ ಸ್ಥಾಪನೆಯಾಗಿದ್ದವು.  ಕೇವಲ 20 ತಿಂಗಳ ಅವಧಿಯಲ್ಲಿ 1000 ಪ್ರೌಢಶಾಲೆಗಳು ನಿರ್ಮಾಣವಾದವು.  260 ಪದವಿ ಕಾಲೇಜು, 500ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಅಡಿಗಲ್ಲು ಹಾಕಿದರು.  ಇವು ಊಹೆಗೂ ನಿಲುಕದಂತಹವು.

ಅಭಿವೃದ್ಧಿ ವಿಚಾರದಲ್ಲಿ ಒಬ್ಬ ಸಮರ್ಥ ನಾಯಕನಿದ್ದರೆ ಹೇಗೆ ವ್ಯವಸ್ಥೆ ಬದಲಾಯಿಸಬಹುದು ಎಂಬುದಕ್ಕೆ ಮೇಲಿನವು ಉದಾಹರಣೆಗಳಷ್ಟೇ.  ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಆಡಳಿತ ನಡೆಸುತ್ತಿರುವ ಮೋದಿಯವರದ್ದು ಆನೆ ನಡೆದದ್ದೇ ಹಾದಿ ಎನ್ನುವಂತಾಗಿದೆ.  ಸಮ್ಮಿಶ್ರ ಸರ್ಕಾರವಾದರೂ ಕುಮಾರಸ್ವಾಮಿಯವರು 20 ತಿಂಗಳು ಅಚ್ಚುಕಟ್ಟು ಆಡಳಿತ ನಡೆಸಿದ್ದರು.  ಅಭಿವೃದ್ಧಿ ಮತ್ತು ಸಮರ್ಥ ನಾಯಕತ್ವವನ್ನು ಮುಂದು ಮಾಡಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎನ್ನುವುದಾದರೆ ಕರ್ನಾಟಕದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರಲ್ಲದೆ ಬೇರೆ ಆಯ್ಕೆ ಸಿಗಲಾರದು.

ಅಪೌಷ್ಠಿಕ ಆಹಾರದಿಂದ ಜನ ನರಳುತ್ತಿದ್ದರು ಗಮನಿಸುವವರೇ ಇಲ್ಲದಂತಾಗಿದೆ.  ಹಂಗಾಮ(ಊUಓಉಇಖ ಂಓಆ ಒಂಐಓUಖಿಖIಖಿIಔಓ)ದ ವರದಿ ರಾಷ್ಟ್ರೀಯ ಅಪಮಾನವೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಒಪ್ಪಿಕೊಂಡಿದ್ದಾರೆ.  ನಗಾರಿ ಹೊಡೆಯುವ ಕೋಲಿನಂತೆ ಮೂಳೆಗಳು ಕಾಣಿಸುವ ದೇಹಗಳ ಚಿತ್ರಗಳು ಪತ್ರಿಕೆಗಳಲ್ಲಿ ರಾರಾಜಿಸುತ್ತಿದ್ದರೂ ಅಧಿಕಾರದಲ್ಲಿರುವವರು ಕಣ್ಣಿದ್ದು ಕುರುಡರಾಗಿದ್ದಾರೆ.  ಅಧ್ಯಯನದ ನೆಪದಲ್ಲಿ ಆಗಾಗ್ಗೆ ಚೀನಾವನ್ನು ಸುತ್ತುವ ಶಾಸಕರುಗಳು ಅಲ್ಲಿನ ಬೆಳವಣಿಗೆಗೆ ಕಾರಣವನ್ನು ಮಾತ್ರ ತಿಳಿಯುವುದಿಲ್ಲ.  ಆದರೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆಸಕ್ತಿ ತೋರುತ್ತಾರೆ.  ಭಾರತದಂತೆಯೇ ಉದಾರೀಕರಣಕ್ಕೆ ಬಾಗಿಲು ತೆರೆದ ಚೀನಾ, ಹೊರಗಿನವರನ್ನು ಒಳಕ್ಕೆ ಬಿಡದೆ, ತನ್ನಲ್ಲಿಯೇ ಇದ್ದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ, ಹಾಂಕಾಂಗ್, ತೈವಾನ್ ಸೇರಿದಂತೆ ವಿದೇಶಗಳಲ್ಲಿದ್ದ ಚೀನಿಯರನ್ನು ಬಂಡವಾಳ ಹೂಡಲು ಆಕರ್ಷಿಸಿತು.  ಕಮ್ಯುನಿಸ್ಟ್ ರಾಷ್ಟ್ರವಾದರೂ ಅಮೇರಿಕಾಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.  ಆದರೆ ನಮ್ಮ ದೇಶದಲ್ಲಿ ಅಸಮರ್ಥ ನಾಯಕತ್ವದ ಕೊರೆತೆಯಿಂದಲೋ ಏನೋ ವಿದೇಶದಲ್ಲೇ ಇರುವ ನಮ್ಮದೇ ಹಣವನ್ನು ತರಲೂ ಸಹ ಸಾಧ್ಯವಾಗುತ್ತಿಲ್ಲ.  ಸಹಾಯಧನ ನೀಡುವ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸುವ ರಾಜಕಾರಣಿಗಳು  ಜನರಲ್ಲಿ ‘ಕೊಳ್ಳುವ ಶಕ್ತಿ’ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ತರುವ ಮನಸ್ಸು ತೋರುತ್ತಿಲ್ಲ.

ಮಾಹಿತಿ ಹಕ್ಕು, ಶಿಕ್ಷಣ ಹಕ್ಕುಗಳಂತಹ ಜನಪರ ಕಾಯಿದೆಗಳನ್ನು ಜಾರಿಗೆ ತಂದ ಯುಪಿಎ ಹೆಚ್ಚಾಗಿ ಹಗರಣಗಳ ಸುಳಿಯಲ್ಲೇ ಮುಳುಗಿತು.  2ಜಿ, ಕಲ್ಲಿದ್ದಲ್ಲು, ಕಾಮನ್ ವೆಲ್ತ್ ಹಗರಣಗಳಲ್ಲಿನ ಮೊತ್ತವೇ ಸಾಕು ಕರ್ನಾಟಕದ ಐದು ವರ್ಷಗಳ ವೆಚ್ಚವನ್ನು ಸರಿದೂಗಿಸಬಹುದು.  ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಕೊಡುಗೆ.  ಬದಲಾವಣೆ ಬಯಸಿ ಬಂದ ಭಾಜಪ ಕರ್ನಾಟಕದಲ್ಲಿ ಮಾಡಿದ್ದು ಕಾರ್ಯಕರ್ತರೇ ಬೇಸರಪಟ್ಟುಕೊಳ್ಳುವಷ್ಟಿದೆ.  ಕಾರ್ಪೊರೇಟರ್‍ನಿಂದ ಆರಂಭವಾಗಿ ಮಾಜಿ ಮುಖ್ಯಮಂತ್ರಿಯವರೆಗೆ ಪರಪ್ಪನ ಅಗ್ರಹಾರದತ್ತ ಮುಖ ಮಾಡಿದ್ದು, ಪವಿತ್ರವೆನ್ನುವ ಸದನದಲ್ಲೇ ಬ್ಲೂಫಿಲ್ಮ್ ನೋಡಿದವರು ಕೆಲವರಾದರೆ, ಸ್ಪೀಕರ್ ಮಾತ್ರ ಆಡಳಿತ ಪಕ್ಷದ ಕಟ್ಟಾ ಅನುಯಾಯಿಯಂತೆಯೇ ವರ್ತಿಸಿದ್ದು ಸಹ ಕೆಟ್ಟ ಸಂದೇಶ ರವಾನಿಸಿದೆ.  ಭಾಜಪದ ಆಡಳಿತದಲ್ಲಿ ‘ಸಕಾಲ’ ಕಾರ್ಯಕ್ರಮವೊಂದೇ ಮತ್ತೆ ನೆನೆಯಬಹುದಾದದ್ದು.

‘ಈ ಶತಮಾನ ಭಾರತೀಯರದ್ದು’ ಎಂಬುದನ್ನು ಕಾರ್ಯರೂಪಕ್ಕಿಳಿಸುವ ನಾಯಕನ ಅಗತ್ಯತೆ ಇದೆ.  1947ರಿಂದ 1991ರವರೆಗಿನ ಬೆಳವಣಿಗೆಯ ವೇಗಕ್ಕೂ, 1991ರಿಂದೀಚೆಗೆ ಆದ ಬೆಳವಣಿಗೆಗೂ ಅಜಗಜಾಂತರ ವ್ಯತ್ಯಾಸವಿದೆ.  ಭಾರತದ ಅರ್ಥವ್ಯವಸ್ಥೆ ಹಿಗ್ಗಿದೆ.  ಸಂಪರ್ಕ, ಸಾರಿಗೆ, ಹಣಕಾಸು ಹಾಗೂ ಹೈಟೆಕ್ ಕ್ಷೇತ್ರಗಳು ಭಾರತದಲ್ಲಿ ಗಟ್ಟಿ ನೆಲೆ ಕಂಡುಕೊಂಡಿವೆ.  ಅದರಲ್ಲೂ ಬೆಂಗಳೂರಿನ ಬೆಳವಣಿಗೆ ಕಂಡು ಬರಾಕ್ ಒಬಾಮಾ ಅವರೇ ಅಚ್ಚರಿಪಡುತ್ತಿದ್ದಾರೆ.  ಆದರೆ ಈ ಬದಲಾವಣೆಗಳು ಹೆಚ್ಚಿನ ಜನರಿಗೆ ಇನ್ನೂ ತಲುಪಿಲ್ಲ.  ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯುವಂತಹ ಕಾರ್ಯಗಳು ಇನ್ನಷ್ಟೇ ಆಗಬೇಕಿದೆ.  ಶ್ರೀಸಾಮಾನ್ಯನ ನಾಯಕನೆಂದರೆ ಆಟದ ನಿಯಮಗಳನ್ನಷ್ಟೇ ಬದಲಾಯಿಸುವವನಾಗಬಾರದು, ಜನಹಿತಕ್ಕಾಗಿ ಆಟವನ್ನೇ ಬದಲಾಯಿಸುವಷ್ಟು ತಾಕತ್ತಿರಬೇಕು.  ಅಂತಹ ನಾಯಕನ ಆಯ್ಕೆಗೆ ಚುನಾವಣೆಯೇ ಹೆಬ್ಬಾಗಿಲು.

ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ನುಡಿಯನ್ನು ಬದಿಗಿಟ್ಟು, ದೇಶಕ್ಕೆ ನನ್ನಿಂದ ಏನಾದರೂ ಮಾಡಲು ಸಾಧ್ಯವೇ ಎನ್ನುವುದಾದರೆ ಒಬ್ಬ ಉತ್ತಮ ನೇತಾರ ಆಯ್ಕೆ ನಮ್ಮದಾಗಲಿ….

11 ಟಿಪ್ಪಣಿಗಳು Post a comment
 1. satyahanasoge
  ಮೇ 5 2013

  suuuuuuuuuuuuuuuuper lekhana

  ಉತ್ತರ
 2. ಬಸವಯ್ಯ
  ಮೇ 5 2013

  ಸಣ್ಣ ತಪ್ಪಾಗಿದೆ ತಲೆ ಬರಹದಲ್ಲಿ..’ಕುಮಾರಣ್ಣ ಗಾದಿಗೆ’ ಎಂದಾಗಬೇಕಿತ್ತು. ಕುಮಾರಣ್ಣನ ಇಪ್ಪತ್ತು ತಿಂಗಳ ಸಾಧನೆಯಲ್ಲಿ ಒಬ್ಬ ಸಿನಿತಾರೆಯೊಂದಿಗೆ ಗಾದಿ ಸೇರಿದ್ದು, ಆಕೆಗೆ ಮಣಗಟ್ಟಲೇ ಆಸ್ತಿ ಮಾಡಿಕೊಟ್ಟಿದ್ದು ಕೂಡ ಸೇರಬೇಕು. . ಕುಮಾರಸ್ವಾಮಿ ಆಡಳಿತ ಅಬ್ಬಾ ಅನ್ನುವಂತಹದ್ದೇನು ಆಗಿರಲಿಲ್ಲ. ಬ್ರದರ್ ಎಂದು ಹೆಗಲ ಮೇಲೆ ಕೈ ಹಾಕಿದ್ದೆ ಕುಮಾರಸ್ವಾಮಿಯ ಬಂಡವಾಳ. ಎದ್ದಾಗ ಗುರ್ ಎನ್ನುವ, ಬಿದ್ದಾಗ ಗೊಳೊ ಎಂದು ಅಳುವ ಯಡಿಯೂರಪ್ಪನನ್ನು ನೋಡಿದವರಿಗೆ ಕುಮಾರಣ್ಣ ಸ್ವಲ್ಪ ಒಳ್ಳೆಯವನು ಅನಿಸಿದ್ದು ಸಹಜ. ಕುಮಾರಣ್ಣನ ಲೆವಲ್ಲು, ಜಮಿರ್ ಅಹಮ್ಮದನ ಲೆವಲ್ಲು ಎರಡು ಒಂದೇ..ಹೆಚ್ಚಿಲ್ಲ..ಕಡಿಮೆಯಿಲ್ಲ. ಬಿಜೆಪಿಯ ಆಡಳಿತದಲ್ಲಿ ಒಳ್ಳೆಯ ಅಂಶಗಳಿದ್ದರೂ, ಕೆಲವರು ನಡೆಸಿದಂತಹ ಕಣ್ಣಿಗೆ ರಾಚುವಂತಹ ಬೃಷ್ಟಾಚಾರದಿಂದ ಅದರ ಪಾಡು ‘ಎಲ್ಲ ಬಣ್ಣ ಮಸಿ ನುಂಗಿತ್ತು ‘ ಎನ್ನುವಂತಾಯಿತು,.

  ಉತ್ತರ
 3. raghavendra
  ಮೇ 6 2013

  ಗೋಪಾಲ್ ರವರೆ,ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಲಾಲ್ ಬಹದ್ದೂರ್ ಶಾಸ್ತ್ರಿಯವರು ಆ ಕಾಲದಲ್ಲೇ ಸರಳವಾಗಿ ಶುರು ಮಾಡಿದ್ದರು.
  ಏಚ್ ಡಿ ಕೆ ಮಾಡಿದ್ದು ಏನಿದ್ದರೂ ತಮ್ಮ ಸ್ವಾರ್ಥಕ್ಕೆ ಪ್ರಚಾರಕ್ಕಾಗಿ..ತೋರಿಕೆಗಾಗಿ,ಇವರು ವಾಸ್ತವ್ಯ ಹೂಡೋ ಮನೆಯಲ್ಲಿ ಎಲ್ಲ ತರಹದ ಸೌಲಭ್ಯಗಳನ್ನು ಮಾಡಿಸಿಕೊಂಡು….! ಮೋದಿ ಅಂತ ಲೀಡರ್ ಎಲ್ಲಿ???
  ದೇವೇ ಗೌಡ ಮತ್ತು ಅವರ ಕುಟುಂಬದವರ ಹಗರಣಗಳು ಸಾಕಷ್ಟು ಇದೆ. ಸರಿಯಾದ ಸಾಕ್ಷಿಗಳಿಲ್ಲದೆ ಬಚಾವಾಗಿದ್ದಾರೆ.
  ಜನಲೋಕಪಾಲ್ ಬಂದ್ರೆ..ಇವ್ರೆಲ್ಲಾ ಜೈಲ್ ಪಾಲೆ..!ಇವ್ರೆಲ್ಲಾ ಲೀಡರ್ಸ್???
  ಬಸವಯ್ಯರವರು ಹೇಳಿದಂತೆ..ರಾಧಿಕಾ ಕುಮಾರಸ್ವಾಮಿ(ನಮಗೆಲ್ಲಾ ಗೊತ್ತಿರೋ ಹಾಗೆ..ಗೊತ್ತಿಲದೆ ಇನ್ನೆಸ್ಟು ಹೆಣ್ಣುಗಳೋ???)ಅಂತವರ ಹೆಸರಲ್ಲಿ
  ಅದೆಷ್ಟು ಪಾಪದ ಹಣ ಕೋಳೀತಿರೋದು ನಿಮಗೆ ಗೊತ್ತಿಲ್ಲ ಅನ್ಸುತ್ತೆ. ಈ ಸಲ ನಾಮಪತ್ರ ಸಲ್ಲಿಸುವಾಗ,ರಾಧಿಕಾ ಹೆಸ್ರಲ್ಲಿ ಇಟ್ಟಿರೋ ಆಸ್ತಿನ ಯಾಕೆ
  ಘೋಷಿಸಿಲ್ಲ????ಕೇಳೋರು ಯಾರೂ ಇಲ್ಲ…!
  ರೀ ಗೋಪಾಲ್..ಕುರುಡು ಅಭಿಮಾನದಿಂದ ಲೇಖನ ಬರೆಯಬೇಡಿ..!

  ಉತ್ತರ
  • ಮೇ 16 2013

   gopal avare niyattillada naayi kummi na namma devatha manushya modi ge holisabedi….kummi kuthantri avnige adikara next time sigali antha adella nataka maadirodu.

   ಉತ್ತರ
   • ಮೇ 16 2013

    kotta maatike tappi nade da avnu ennu janmadalli mukhyamantri agalla….yeno nimmnna brother antha hegala mele kai haki maathadida antha modi ge holise baribedi

    ಉತ್ತರ
    • gopalkishna
     ಮೇ 16 2013

     ಶ್ಯಾಮ್ ಅವರೇ, ನಾನು ಇವತ್ತಿನವರೆಗೂ ಹೆಚ್.ಡಿ.ಕೆ. ಅವರನ್ನು ಭೇಟಿಯಾದದ್ದೆ ಇಲ್ಲ… ಇನ್ನು ಹೆಗಲ ಮೇಲೆ ಕೈ ಹಾಕುವುದು ಎಲ್ಲಿಂದ ಬಂತು… ಅಭಿವೃದ್ಧಿ ಮಾನದಂಡವಷ್ಟೇ ಲೇಖನದಲ್ಲಿ ಹೇಳಿರುವುದು… ಅವರವರ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ… ವಿರೋಧಿಸಲಿಕ್ಕಾಗಿಯೇ ವಿರೋಧಿಸುವುದು ಸರಿಯಲ್ಲವೆನಿಸುತ್ತದೆ, ಹಾಗೆಯೇ ಮೋದಿಜಿಯವರನ್ನು ‘ದೇವತಾ ಮನುಷ್ಯ’ ಎಂದಿರುವುದು ಅತಿರೇಕದ ಅಭಿಮಾನವೇ ಇರಬೇಕು… ಮೋದಿಯವರ ಹಾಗೆ ಅಭಿವೃದ್ಧಿ ಕೆಲಸ ಮಾಡುವ ನಾಯಕ ಕರ್ನಾಟಕದಲ್ಲಿ ಇನ್ನು ಸಿಕ್ಕಿಲ್ಲ ನಿಜ, ಆದರೆ ಸಿಎಂ ಗಾದಿಗೆ ಏರುವ ಸನಿಹದಲ್ಲಿರುವವರಲ್ಲಿ ಯಾರ ಆಯ್ಕೆ ಸರಿ ಹೋಗಬಹುದು ಎಂಬುದನ್ನಷ್ಟೇ ಬರೆದಿದ್ದೇನೆ….

     ಉತ್ತರ
 4. gopalkishna
  ಮೇ 7 2013

  ರಾಘವೇಂದ್ರರವರೇ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಅನುಮಾನಾಸ್ಪದ ಸಾವಿಗೀಡಾಗಿದ್ದು 1966ರಲ್ಲಿ… ಅಲ್ಲಿಂದೀಚೆಗೆ ಬಂದ ಮುಖ್ಯಮಂತ್ರಿಗಳೆಷ್ಟು! ಪ್ರಧಾನಿಗಳೆಷ್ಟು! ಇವರಲ್ಲಿ ಯಾರಾದರೂ ಗ್ರಾಮ ವಾಸ್ತವ್ಯವನ್ನು ಪುನರ್ ಆರಂಭಿಸಿದ್ದರೇ? ಕೇವಲ ಪ್ರಚಾರಕ್ಕಾಗಿ ಮಾತ್ರವೇ ಎನ್ನುವುದಿದ್ದರೆ, ಅಬ್ದುಲ್ ಕಲಾಂ ಅಂತಹ ‘ತೂಕದ ಮನುಷ್ಯ’ರಿಂದ ಅಂತಹ ಪ್ರತಿಕ್ರಿಯೆ ಪಡೆಯಲು ಸಾಧ್ಯವಿತ್ತೇ? ಲೇಖನದ ಐದನೇ ಪ್ಯಾರಾ ಗಮನಿಸಿ, ಮುಖ್ಯಮಂತ್ರಿ ಮತ್ತು ಪ್ರಧಾನಿ ಹುದ್ದೆಗೇರುವ ಅವಕಾಶವಿರುವವರನ್ನು ಮಾತ್ರ ತುಲನೆ ಮಾಡುತ್ತಿರುವುದಾಗಿ ಬರೆದಿದ್ದೇನೆ… ಬಸವಯ್ಯ ಅವರು ಹೇಳಿರುವಂತೆ ಬಿಜೆಪಿಯದ್ದು ಒಳ್ಳೆಯ ಆಡಳಿತವಾದರೂ, ಕೆಲವರಿಂದ ಮಸಿ ಹತ್ತಿದೆ ಎಂಬುದು ನಿಜವಿರಬಹುದು… ಆದರೆ ಆ ಒಳ್ಳೆಯ ಆಡಳಿತ ಎಂದು ನೀವು ಹೇಳುವುದು ಯಡಿಯೂರಪ್ಪನವರ ಕಾಲದ್ದೇ ಹೊರತು, ಸದಾನಂದ ಗೌಡರದ್ದಾಗಲಿ, ಶೆಟ್ಟರ್ ಅವದ್ದಾಗಲಿ ಅಲ್ಲ… ಇವರ ಕಾಲದಲ್ಲಿ ‘ಸಕಾಲ’ ಕಾರ್ಯಕ್ರಮ ಬಿಟ್ಟರೆ ಮಾಡಿದ್ದೇನು…? ಎಲ್ಲವೂ ನೀರಸ… ಈ ಹಿನ್ನೆಲೆಯಲ್ಲಿ ನೋಡಿದರೆ, ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗಬೇಕು… ಅಂಥದ್ದೊಂದು ಅವಕಾಶವಿದೆಯೇ? ಇನ್ನು ಕಾಂಗ್ರೆಸ್ ಕಥೆ ನಿಮಗೆ ಹೇಳಬೇಕಿಲ್ಲ! ಜನಲೋಕಪಾಲ್ ಬರುತ್ತೆ! ಬಂದ ತಕ್ಷಣ ಭ್ರಷ್ಟರು ಬೆತ್ತಲಾಗುತ್ತಾರೆ ಎನ್ನುವುದು ನಮ್ಮ ಭ್ರಮೆಯಷ್ಟೇ! ಗುಜರಾತ್ ನಲ್ಲಿ ಭ್ರಷ್ಟಾಚಾರವೇ ಇಲ್ಲ ಎನ್ನುವುದೂ ನಮ್ಮ ಕುರುಡು ನಂಬಿಕೆಯೇ ಹೊರತು, ನಿಜವಲ್ಲ!
  ಇನ್ನು ‘ಕುರುಡು ಅಭಿಮಾನ’ದಿಂದ ಲೇಖನ ಬರೆಯಬೇಡಿ ಎಂದಿದ್ದೀರಿ… ನನ್ನ ಲೇಖದಲ್ಲಿರುವ ಅಂಶಗಳಲ್ಲಿ ಯಾವುದಾದರೂ ಸುಳ್ಳು ಅನಿಸುವುದಿದೆಯೇ? ಮೋದಿಜಿಯವರಿಗೆ ನಾನು ಯಾರೆಂಬುದು ಹೇಗೆ ಗೊತ್ತಿಲ್ಲವೋ, ಹಾಗೆಯೇ ಕುಮಾರಸ್ವಾಮಿಯವರಿಗೂ ಸಹ…
  ನನ್ನ ಇಡೀ ಲೇಖನದಲ್ಲಿ ಇರುವ ಅಂಶಗಳು ಎರಡೇ; ಮೊದಲನೆಯದು ಕಮ್ಯಾಂಡ್ ಮಾಡಿ ಆಡಳಿತ ನಡೆಸುವ ನಾಯಕ, ಮತ್ತೊಂದು, ಸಿಕ್ಕ ಅವಕಾಶದಲ್ಲಿ ತಕ್ಕಮಟ್ಟಿನ ಅಭಿವೃದ್ಧಿ ಕೆಲಸ ಮಾಡಿರುವುದು… ವಾಸ್ತವವನ್ನು ಸರಿಯಾಗಿಯೇ ಅರ್ಥೈಸಿಕೊಂಡು ಬರೆಯಲು ಪ್ರಯತ್ನಿಸಿದ್ದೇನೆಯೇ ಹೊರತು, ರಾಮರಾಜ್ಯ ಎಂಬ ಹುಚ್ಚು ಭ್ರಮೆಯಲ್ಲಿ ಅಲ್ಲ…
  ಹೊಗಳಿ ಬರೆದು ಹೆಚ್.ಡಿ.ಕೆ. ಅವರಿಂದ ನಾನು ಪಡೆಯಬೇಕಾದ್ದು ಏನೂ ಇಲ್ಲ…
  ಸಮಯವಿದ್ದರೆ, ಸಾಧ್ಯವಾದರೆ ಲೇಖನವನ್ನು ಮತ್ತೊಮ್ಮೆ ಓದಿ, ನಾನು ಯಾವ ದೃಷ್ಟಿಯಲ್ಲಿ ಬರೆದಿದ್ದೀನಿ ಎಂದು ತಿಳಿಯುತ್ತದೆ…
  ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು

  ಉತ್ತರ
  • ಬಸವಯ್ಯ
   ಮೇ 7 2013

   ‘ಆದರೆ ಆ ಒಳ್ಳೆಯ ಆಡಳಿತ ಎಂದು ನೀವು ಹೇಳುವುದು ಯಡಿಯೂರಪ್ಪನವರ ಕಾಲದ್ದೇ ಹೊರತು, ಸದಾನಂದ ಗೌಡರದ್ದಾಗಲಿ, ಶೆಟ್ಟರ್ ಅವದ್ದಾಗಲಿ ಅಲ್ಲ… ಇವರ ಕಾಲದಲ್ಲಿ ‘ಸಕಾಲ’ ಕಾರ್ಯಕ್ರಮ ಬಿಟ್ಟರೆ ಮಾಡಿದ್ದೇನು…?’

   ಬಿಜೆಪಿಯನ್ನು ಗಟಾರವನ್ನಾಗಿ ಮಾಡಿದ್ದೇ ಈ ಯಡಿಯೂರಪ್ಪ ಬಳಗ ಮತ್ತು ಜೊತೆಗೆ ಕಡ್ಡಿ ಆಡಿಸಿದ ಕೆಲವು ಆರ್.ಎಸ್.ಎಸ್ ‘ಮುಖಂಡ’ರು ( ಆರ್.ಎಸ್.ಎಸ್ ನಂತಹ ಸಂಘಟನೆಗೆ ಮಸಿ ಬಳೆದವರು). ಸದಾನಂದ ಗೌಡರು ಸಿಕ್ಕ ಅವಧಿಯಲ್ಲೇ ಸ್ವಚ್ಛ ಆಡಳಿತ ನೀಡಿದ್ದಾರೆ ಮತ್ತು ಆ ಕಾರಣದಿಂದಲೇ ಬಿದ್ದಿದ್ದಾರೆ. ನಿಷ್ಪಕ್ಷಪಾತವಾಗಿ ವಿಚಾರ ಮಾಡಿದರೆ ಮುಖ್ಯಮಂತ್ರಿಯಾಗುವ ಅರ್ಹತೆ ಕೊಂಚವಾದರೂ ಇರುವುದೆಂದರೆ ಅದು ಸದಾನಂದ ಗೌಡರಿಗೆ.

   ಕುಮಾರಣ್ಣನ ಗ್ರಾಮ ವಾಸ್ತವ್ಯ ಮಹಾನ ಕಾರ್ಯಕ್ರಮ ಅನ್ನುವುದಾದರೆ, ಆ ಕಾರ್ಯಕ್ರಮ ಹಾಕಿಕೊಂಡ ಊರುಗಳು ಸಾಧಿಸಿದ ಪ್ರಗತಿ ಬಗ್ಗೆ ಮಾಹಿತಿ ಕೊಡಿ. ಪ್ರವಾಸಿಗಳಿಗಾಗಿ ಕಟ್ಟಿಸಿದ ಹೊಂ ಸ್ಟೇ ಯಲ್ಲಿ ಎರಡು ದಿನ ಉಳಿದುಕೊಂಡು ಬರುವವರಿಗೂ, ಇವರಿಗೂ ಯಾವುದೇ ವ್ಯತ್ಯಾಸವಿಲ್ಲ.

   ಉತ್ತರ
 5. gopalkishna
  ಮೇ 7 2013

  ಬಸವಯ್ಯನವರೇ, ನಿಮ್ಮ ಮಾತು ನಿಜ, ಯಡಿಯೂರಪ್ಪನವರು ಆ ಒಂದು ಸಮಯದಲ್ಲಿ ಗಟ್ಟಿತನ ತೋರಿದ್ದರೆ ಲಕ್ಷಾಂತರ ಜನ ಸಂಘದ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಗುತ್ತಿತ್ತು… ಆದರೆ ಅವರು ಸಿಎಂ ಆಗಿದ್ದಾಗ ಎಷ್ಟು ಭ್ರಷ್ಟಾಚಾರಗಳ ಕೂಪದಲ್ಲಿ ಮುಳಿಗಿದರು… ಆದರೂ ಆಡಳಿತದಲ್ಲಿ ಒಂದು ಬಿಗಿ ಇತ್ತು, ಅಧಿಕಾರಿಗಳು ಮಾತು ಕೇಳುತ್ತಿದ್ದರು… ಸದಾನಂದಗೌಡರ ಆಡಳಿತವನ್ನು ನಾನು ವಿರೋಧಿಸುತ್ತಿಲ್ಲ… ಆದರೆ ಸರ್ಕಾರದಲ್ಲಿ ಅಧಿಕಾರಿಗಳು ಸ್ವಲ್ಪ ತಣ್ಣಾಗದಂತೆ ಕಂಡಿದ್ದರು, ಎರಡನೇ ವಿಶ್ವಬಂಡವಾಳ ಹೂಡಿಕೆ ಕಾರ್ಯಕ್ರಮ ಮಾಡಿದರು… ಆದರೆ ಯಡಿಯೂರಪ್ಪನವರ ಕಾಲದಲ್ಲಾದ ಮೊದಲನೆಯದ್ದರ ಸ್ಥಿತಿ ಹೇಗಿದೆ ಎಂದು ಯೋಚಿಸಲೇ ಇಲ್ಲ… ಆ ಎರಡು ಜಿಮ್ ನೀರಿನಲ್ಲಿ ಹುಣಸೆ ತೊಳದಂತೆ ಆಗಿದೆ… ಮರಳಿ ಸಿಎಂ ಆಗುವ ಯಾವುದೇ ಅವಕಾಶಗಳು ಅವರ ಮುಂದಿಲ್ಲವೆನಿಸುತ್ತಿದೆ ಹಾಗಾಗಿ, ಲೇಖನದಲ್ಲಿ ಸದಾನಂದಗೌಡರ ಆಡಳಿತವನ್ನು ತುಲನೆ ಮಾಡಿಲ್ಲ…
  ಹೆಚ್.ಡಿ.ಕೆ. ಅವರ ಗ್ರಾಮವಾಸ್ತವ್ಯವೇ ಮಹಾನ್ ಕಾರ್ಯಕ್ರಮವೆಂದು ಎಲ್ಲೂ ಹೇಳಿಲ್ಲ.. ಅವರ ಕಾರ್ಯಕ್ರಮಗಳಲ್ಲಿ ಅದೂ ಒಂದು ಎಂದು ಹೇಳಿದ್ದೇನೆ… ಬೇಕಿದ್ದರೆ ಅಬ್ದುಲ್ ಕಲಾಂ ಅವರು ಬೆಂಗಳೂರು ಮತ್ತು ಹಾಸನಕ್ಕೆ ಭೇಟಿ ಕೊಟ್ಟಾಗ ನೀಡಿದ ಹೇಳಿಕೆಗಳನ್ನು ಗಮನಿಸಿ, ನಿಮಗೆ ಗ್ರಾಮವಾಸ್ತವ್ಯ ಪರಿಕಲ್ಪನೆಯ ಮಹತ್ವ ಅರ್ಥವಾಗುತ್ತದೆ…
  ರಾಕೇಶ್ ಶೆಟ್ಟಿಯವರೊಡನೆ ಚಾಟ್ ಮಾಡುತ್ತಿರುವಾಗ ಅವರು ಹೀಗೆ ಹೇಳಿದರು; ಕರ್ನಾಟಕದಲ್ಲಿನ್ನು ಮೋದಿ ಹುಟ್ಟಿಲ್ಲ ಎಂದು…
  ಅಂತಹ ನಾಯಕ ಸಿಕ್ಕಿಲ್ಲವಾದ್ದರಿಂದ, ಇರುವವರಲ್ಲೇ ಸಿಎಂ ಗಾದಿಗೆ ಸನಿಹವಿರುವವರಲ್ಲಿ ನನ್ನ ಮಟ್ಟಿಗೆ ಸರಿ ಎನಿಸಿದ್ದು ಹೆಚ್.ಡಿ.ಕೆ. ಮಾತ್ರ… ಲೋಪಗಳು ಎಲ್ಲರಲ್ಲೂ ಇರುತ್ತವೆ… ಮೋದಿಯವರೇ ಪ್ರಧಾನಿಯಾಗಲಿ ಎಂದು ನಾವು ಹಂಬಲಿಸುತ್ತಿದ್ದೇವೆ… ಅವರ ಆಡಳಿತದಲ್ಲಿಯೂ ಲೋಪಗಳಿವೆ… ಈಗ ನೋಡಿ ಲೋಕಾಯುಕ್ತರನ್ನು ಆಯ್ಕೆ ಮಾಡುವ ವಿಧಾನವನ್ನು ದುರ್ಬಲಗೊಳಿಸ ಹೊರಟಿದ್ದಾರೆ… ನಿತ್ಯಾನಂದನನ್ನು ಸನ್ಮಾನಿಸಿದ್ದಾರೆ… ಕೆಲವು ಲೋಪಗಳನ್ನು ಹೊರತುಪಡಿಸಿ, ಇರುವುದರಲ್ಲೇ ಸ್ವಲ್ಪ ಕೆಲಸ ಮಾಡಬಹುದಾದವರನ್ನು ಆಯ್ಕೆ ಮಾಡಬಹುದು ಎಂದು ಹೇಳಿದ್ದೇನೆ… ನಾನು ವಾಸ್ತವಕ್ಕೆ ಹೆಚ್ಚು ಒತ್ತು ಕೊಡುತ್ತೇನೆ…

  ಉತ್ತರ
 6. ಬಸವಯ್ಯ
  ಮೇ 9 2013

  ವಿಧಾನ ಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕಳೆದ ಬಾರಿಗೆ ತೀರ್ಪಿಗೆ ಹೋಲಿಸಿದರೆ, ಈ ಬಾರಿಯ ತೀರ್ಪು ಸಾಕಷ್ಟು ವಿಷಯದಲ್ಲಿ ತೃಪ್ತಿಕೊಡುವಂತದ್ದು.

  – ಯಾರೂ ಯಾವ ಪಕ್ಷದಿಂದ ಆರಿಸಿ ಬಂದಿದ್ದಾರೋ ಅವರೆಲ್ಲ ಅಲ್ಲಲ್ಲೇ ಇರುವಂತೆ ಮಾಡಿದ್ದು ಮತದಾರನ ಹೆಗ್ಗಳಿಕೆ. ಅಡ್ಡ ಗೋಡೆಯ ಮೇಲೆ ಕುಳಿತು ಯಾವ ಪಕ್ಕದಲ್ಲಿ ಮೇಯಲು ಹಸಿರಿದೆ ಎಂದು ಲೆಕ್ಕ ಹಾಕಿ ಹಾರುತ್ತಿದ್ದ ‘ಹಾರು ಪ್ರವೀಣ’ರಿಗೆ ಈ ಚುನಾವಣೆಯಲ್ಲಿ ಫುಲ್ ಬ್ರೇಕ್.

  – ಕಿಂಗ್, ಕಿಂಗ್ ಮೇಕರ, ತಾನಿಲ್ಲದೇ ಸರಕಾರವಿಲ್ಲ,ಕರ್ನಾಟಕದ ಕಲ್ಯಾಣವಾಗುವುದಿಲ್ಲ ಎಂದೆಲ್ಲ ಕುಣಿದಾಡಿ, ಭ್ರಮಾಲೋಕದಲ್ಲಿದ್ದವರು ಇಂದು ಸ್ವಿಂಗ್ ಮೇಕರಗಳಾಗಬೇಕಾಗಿದೆ..ಇನ್ನೈದು ವರುಷ ಉಯ್ಯಾಲೆ ಕಟ್ಟಿಕೊಂಡು ತೂಗಾಡುತ್ತ ಗತವೈಭವ, ತಮ್ಮ ಕುಣಿದಾಟಗಳನ್ನು ನೆನೆಸಿಕೊಳ್ಳಲು!.

  – ಸ್ವಚ್ಛ ಎಂದು ತನಗೆ ತಾನೆ ಬೆನ್ನು ತಟ್ಟಿಕೊಳ್ಳುತ್ತಿದ್ದ ಬಿಜೆಪಿಗೆ ಮತದಾರ ಸರಿಯಾಗಿಯೇ ಬುದ್ಧಿ ಕಲಿಸಿದ್ದಾನೆ. ನನಗನಿಸುವಂತೆ ಪ್ರಥಮ ಬಾರಿಗೆ ಈ ಫಲಿತಾಂಶ ಯಾರಿಗೂ ಅಯ್ಯೊ ಅನಿಸುವಷ್ಟು ಬೇಸರ ತರಿಸಿಲ್ಲ. ಈ ಬಿಜೆಪಿಯವರು ಏನು ಮಾಡಿದ್ದಾರೊ ಅದನ್ನು ಅನುಭವಿಸಿದ್ದಾರೆ ‘ಮಾಡಿದ್ದುಣ್ಣೊ ಮಹಾರಾಯ’ ಎನ್ನುವಂತೆ. ಕಳೆದ ಬಾರಿ ನಂಬಿ ಮತ ಕೊಟ್ಟವರನ್ನು, ಯಾಕಾದರೂ ಮತ ಕೊಟ್ಟೆವಪ್ಪ ಎನಿಸುವಂತೆ, ತಾವೇ ಅಸಹ್ಯ ಪಡುವಂತೆ ಮಾಡಿದ್ದು ಬಿಜೆಪಿಯ ಹಿರಿಮೆ. ಈ ಬಾರಿ ಇವರಿಗೆ ವಿಶ್ರಾಂತಿ..ಆತ್ಮಾವಲೋಕನಕ್ಕಾಗಿ. ಮತ್ತು ಗಟಾರಾಗಿರುವ ಪಕ್ಷವನ್ನು ಸ್ವಚ್ಛ ಮಾಡಿಕೊಳ್ಳಲು. ಇವರಲ್ಲಿ ಕೆಲವರು ‘ಕಿಂಗಮೇಕರ್’ ವಾಪಸ ಬರಬೇಕು, ತಮ್ಮ ಪಕ್ಷವನ್ನು ಉದ್ಧಾರ ಮಾಡಬೇಕು ಎಂದು ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿ ಮೊರೆ ಇಡಲು ಪ್ರಾರಂಭಿಸಿದ್ದರು. ಅವರು ತಮ್ಮ ಕೋರಿಕೆ ಪುನರ್ ಪರೀಶಿಲಿಸಲು ಇದು ಸಕಾಲ.. ಫಲಿತಾಂಶ ಬಂದಿದೆ!.

  – ಕಾಂಗ್ರೆಸ್ ನವರು ಈ ಚುನಾವಣಾ ವಿಜಯದಿಂದ ಕುಣಿದಾಡಬೇಕಿಲ್ಲ, ಭರ್ಜರಿ ಬೆನ್ನು ತಟ್ಟಿಕೊಳ್ಳಬೇಕಾಗಿಲ್ಲ..ಹೆಚ್ಚಿನ ಜನ ಆ ರಾಹುಲಗಾಂಧಿ, ಸೋನಿಯಾ ಗಾಂದೀ ಮುಖ ನೋಡಿ, ರಾಜ್ಯ/ದೇಶಕ್ಕೆ ಇವರೇ ದಿಕ್ಕು ಬೇರ್ಯಾರಿಲ್ಲ ಎಂದು ತಿಳಿದುಕೊಂಡು ಕಾಂಗ್ರೆಸ್ ನಿಂದ ನಿಂತವರಿಗೆ ಮತ ಹಾಕಿಲ್ಲ..ಬದಲಾಗಿ ಸಾಕಷ್ಟು ಜನ ಈ ಚುನಾವಣೆಯನ್ನು ಬಳಸಿಕೊಂಡಿದ್ದು, ಸ್ವಚ್ಛ ಪಕ್ಷವೆಂದುಕೊಂಡು ಬಂದು ನಂತರ ರಾಡಿ ಎಬ್ಬಿಸಿದ ಬಿ,ಜೆ.ಪಿ ಗೆ ಬುದ್ಧಿ ಕಲಿಸಲು. ಇದು ಇವರ ಇದುವರೆಗಿನ ಯೋಗ್ಯತೆ ನೋಡಿ ಕೊಟ್ಟ ಅಧಿಕಾರವಲ್ಲ, ದರೂ ಸಾಕಷ್ಟು ಜನ ಯೋಗ್ಯರು (ಮೂಲ ಬೆರೆ ಪಕ್ಷದವರು) ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಬಿ.ಎಲ್.ಶಂಕರ್, ಕುಮಾರ ಬಂಗಾರಪ್ಪ ಇತ್ಯಾದಿಗಳು ಆಯ್ಕೆಯಾಗದಿದ್ದದ್ದು ಕೊಂಚ ಬೇಸರ. ಒಳ್ಳೆ ಆಡಳಿತ ಬರಬಹುದೆಂಬ ನಿರೀಕ್ಷೆಯಿದೆ. ನೋಡೋಣ 🙂

  ಉತ್ತರ
 7. Ramakant
  ಮೇ 19 2013

  ನಮ್ಮ ಭಾರತೀಯ ಮತದಾರರ ದುರಾದೃಷ್ಟ ಎಂದರೆ, ಸ್ವಲಾಭಕ್ಕಾಗಿ ಪರಿಸ್ಥಿತಿಯನ್ನು ಹೀಗೆಯೇ ಇಟ್ಟುಕೊಂಡು ದೇಶವನ್ನು ಕೊಳ್ಳೆ ಹೊಡೆಯುವದನ್ನು ಮುಂದುವರೆಸುವದರಲ್ಲಿ ರಾಜಕಾರಣಿಗಳು ತಮ್ಮ ಪರಾಕ್ರಮ ಮೆರೆಸುತ್ತಲೇ ಬಂದಿದ್ದಾರೆ. ಗಿಲೀಟಿನ ಮಾತುಗಳನ್ನಾಡಿ ಓಟು ಗಿಟ್ಟಿಸುವ ನಯವಂಚನೆಯ ರಾಜಕಾರಣವನ್ನು ಪಳಗಿದ ಹಳೇ ಹುಲಿಗಳು ಹೊಸಬರಿಗೆ ಕಲಿಸುತ್ತಲೇ ಇದ್ದಾರೆ. ಮತದಾರ ತನ್ನ ಓಟಿನಿಂದ ಏನನ್ನು ಪ್ರತಿಪಾದಿಸಬೇಕಾಗಿದೆ ಎಂದು ಅರ್ಥ ಆಗದಿರುವಷ್ಟು ಕೀಳುಮಟ್ಟಕ್ಕೆ ಪರಿಸ್ಥಿತಿ ಬಂದಿದೆ.

  ಯಾವ ಪಕ್ಷವಾದರೇನು, ಆಳುವ ಕುರ್ಚಿ ಸಿಗುವದೊಂದೇ ಗುರಿಯೆಂದು ಅರಿತಿರುವ ರಾಜಕಾರಣಿಗಳು, ಹಾಗೂ, ಅವರನ್ನು ಹೇಗೆ ದಾರಿಗೆ ತರಲಾದೀತೆಂದು ಪ್ರತಿ ಚುನಾವಣೆಯಲ್ಲೂ ಹೆಣಗುತ್ತಿರುವ ಮತದಾರರು. ಈ ಯುದ್ಧದಲ್ಲಿ ಅಂದಿಗೂ ಇಂದಿಗೂ ರಾಜಕಾರಣಿಗಳದೇ ಮೇಲುಗೈ ಆಗಿ ಉಳಿದಿರುವದು ನಮ್ಮೆಲ್ಲರ
  ದೌರ್ಭಾಗ್ಯ.

  ಇನ್ನು ಕರ್ನಾಟಕದ ಸ್ಪೆಶಲ್ ದುರ್ದೈವದ ಬಗ್ಗೆ ಹೇಳುವದಾದರೆ, ಕೇಂದ್ರಶಾಸನದ ಹಾಗೂ ರಾಜ್ಯಶಾಸನದ ಚುನಾವಣೆಗಳು ಏಕಕಾಲಕ್ಕೆ ನಡೆಯುವದು ತಪ್ಪಿ ತುಂಬಾ ವರ್ಷಗಳಾಗಿ ಹೋಗಿವೆ. ರಾಜಕಾರಣಿಗಳಿಗೆ ಪಾಠ ಕಲಿಸುವದರ ಚಿಂತನದಲ್ಲಿ ಮುಳುಗಿದ ಮತದಾರನಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಒಂದೇ ಆಡಳಿತ ಪಕ್ಷವನ್ನು ಆರಿಸಿ ತರುವ ಕೆಲಸ ಆಗುತ್ತಾ ಇಲ್ಲ. ಹೀಗಾಗಿ ಕೇಂದ್ರದಿಂದ ರಾಜ್ಯದ ಬಗ್ಗೆ ಮಲತಾಯಿ ಮನೊಭಾವ ಮುಂದುವರೆಯುತ್ತಲೇ ಇದೆ.

  ಮುಂದಿನ ಕೇಂದ್ರ ಚುನಾವಣೆಯಲ್ಲಿ ನಮ್ಮ ಮತದಾರನ ಎದುರಿಸಲಿರುವ ಯಕ್ಷಪ್ರಶ್ನೆಯೆಂದರೆ, ರಾಜ್ಯದ ಕ್ಷೇಮವನ್ನು ಉಪೇಕ್ಷಿಸದಿರುವ ಕೇಂದ್ರ ಸರಕಾರ ತರೋಣವೇ ಅಥವಾ ಕೇಂದ್ರದಲ್ಲಿ ಇಂದು ಆಗುತ್ತಿರುವ ದುರಾಡಳಿತದಿಂದ ವಿಮೋಚನೆ ಹೊಂದೋಣವೇ ಎಂಬುದು. ಏನಿದ್ದರೂ ಕಾದು ನೋಡಬೇಕು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments