ವಿಷಯದ ವಿವರಗಳಿಗೆ ದಾಟಿರಿ

ಮೇ 7, 2013

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಸಂಶೋಧನೆಗೆ ಭವಿಷ್ಯವಿದೆಯೆ?

‍ನಿಲುಮೆ ಮೂಲಕ

ಪ್ರೊ. ರಾಜಾರಾಮ ಹೆಗಡೆ ಮತ್ತು ಡಾ. ಷಣ್ಮುಖ. ಎ

Sr[ಪ್ರೊ.ರಾಜೇಂದ್ರ ಚೆನ್ನಿಯವರು ಬರೆದಿದ್ದು ಎನ್ನಲಾದ “ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ?” ಎಂಬ ಪುಸ್ತಕದ ವಿಮರ್ಶೆಯು ಅವರ ಆಪ್ತ ವಲಯದಲ್ಲಿ ಸರ್ಕುಲೇಟ್ ಆಗುತ್ತಿದೆ. ಆ ವಿಮರ್ಶೆಯ ಮಿತಿಗಳು ಮತ್ತು ಪೂರ್ವಾಗ್ರಹಗಳನ್ನು ಸ್ಪಷ್ಟಪಡಿಬೇಕೆಂದು ಈ ಲೇಖನವನ್ನು ಬರೆಯಲಾಗಿದೆ]

ಇತ್ತೀಚೆಗೆ ಜಾಲತಾಣದಲ್ಲಿ ಸುತ್ತಾಡುತ್ತಿದ್ದ ಒಂದು ಪುಸ್ತಕ ವಿಮರ್ಶೆಯ ಪ್ರಾರಂಭಿಕ ಸಾಲುಗಳು ನಮ್ಮನ್ನು ಬೆಚ್ಚಿಬೀಳಿಸಿದವು. ಅವು ಹೀಗಿವೆ:

“ಈ ಕೃತಿಯು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಕುತೂಹಲವನ್ನು ಹೀಗೆ ವಿವರಿಸಬಹುದು. ಮನುಷ್ಯರು ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ `ತರ್ಕದ ಟಗರ ಹೋರಟೆ’ ಯಾಕೆ ಆಗುತ್ತದೆ? ಬಹು ಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಈ ಜನರು ಆಳವಾಗಿ ನಂಬಿಕೊಂಡು ಬಂದಿರುವ ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು Evil ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ?”

ಈ ಮೇಲಿನ ವಾಕ್ಯಗಳನ್ನು ಓದಿದಾಗ ಯಾರಾದರೂ ಗಾಬರಿ ಬೀಳತಕ್ಕಂಥದ್ದೇ. ಅವು ‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ?’ ಪುಸ್ತಕದ ಕುರಿತು ರಾಜೇಂದ್ರ ಚೆನ್ನಿಯವರು ಬರೆದ ವಿಮರ್ಶೆಯ ಪ್ರಾರಂಭಿಕ ವಾಕ್ಯಗಳು. ಈ ಸಾಲುಗಳು ತಿಳಿಸುವಂತೆ ಆ ಪುಸ್ತಕವು ಮಾನವ ದ್ವೇಷಿಯಾಗಿದೆ, ಅಂತಃಕರಣ, ಪ್ರೀತಿ, ಸದ್ಭಾವನೆಗಳಿಲ್ಲದ ಕ್ರೂರ ವಿಚಾರಗಳಿಂದ ತುಂಬಿದೆ, ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುತ್ತದೆ, ಹೆಚ್ಚೇನು? ಅದು Evil ನ ಆಳವಾದ ಕೆಡುಕಿನ ರೂಪವೇ ಸೈ. ಆದರೆ ನಮ್ಮ ಮಟ್ಟಿಗೆ ಅದು ಯಾವುದೋ ಪುಸ್ತಕ ಎಂದು ಆರಾಮಾಗಿ ಕುಳಿತುಕೊಳ್ಳುವಂತಿಲ್ಲ. ನಮ್ಮ ಸಂಶೋಧನಾ ಗುಂಪಿಗೇ ಸಂಬಂಧಿಸಿದ್ದು. ಆ ಈವಿಲ್ ನಮ್ಮಲ್ಲೇ ಇದೆ ಎಂಬುದನ್ನು ಊಹಿಸಿಕೊಂಡಾಗಲಂತೂ ನಮ್ಮೊಳಗೆ ನಮಗೇ ಗೊತ್ತಿಲ್ಲದೇ ಅಡಗಿಕೊಂಡ ಕರಾಳ ಪ್ರಾಣಿಯೊಂದು ತೆವಳಿದಂತಾಗಿ ಬೆಚ್ಚಿದೆವು. ಒಂದೋ ಇದು ಸತ್ಯವೇ ಆಗಿದ್ದರೆ ಈ ಪುಸ್ತಕದಿಂದ ಮಾನವತೆಗೆ ಇನ್ನು ಮುಂದೆ ಘೋರ ಪರಿಣಾಮವಾಗಬೇಕು. ಇಲ್ಲ ಈ ಮೇಲಿನ ಹೇಳಿಕೆ ಸುಳ್ಳಾಗಿದ್ದರೆ ಕೊನೆಯ ಸಾಲನ್ನು ಚೆನ್ನಿಯವರು ತಮಗೇ ಬರೆದುಕೊಂಡಿರಬೇಕು.

ಈ ವಿಮರ್ಶೆಯನ್ನು ಓದಿ ಶಿವಶಿವಾ! ಏನು ಅನಾಹುತವಾಯಿತಪ್ಪಾ. ಏಕೆ ನಮ್ಮ ಕ್ರೌರ್ಯ ನಮ್ಮ ಅರಿವಿಗೇ ಬರಲಿಲ್ಲ? ಯಾರೂ ಇದುವರೆಗೆ ನಮ್ಮ ಗಮನಕ್ಕೆ ತರಲಿಲ್ಲ? ಎಂದೆಲ್ಲ ಅಲವತ್ತುಕೊಳ್ಳುತ್ತ ಆ ವಿಮರ್ಶೆಯನ್ನು ಓದತೊಡಗಿದೆವು. ತಮ್ಮದು ಸತ್ಯವಾದ ಹೇಳಿಕೆ ಎಂಬುದನ್ನು ಸಾಬೀತು ಪಡಿಸಲು ಚೆನ್ನಿಯವರು ಸಾಕಷ್ಟು ಕಸರತ್ತು ಮಾಡಿದ್ದಾರೆಯಾದರೂ ಎಲ್ಲಾ ಕಡೆಯೂ ಅಷ್ಟು ಯಶಸ್ವಿಯಾಗಿದ್ದಾರೆಂದು ಅನ್ನಿಸುವುದಿಲ್ಲ. ಆದರೂ ಸಂದರ್ಭದಿಂದ ಕಿತ್ತು ಇಟ್ಟ ಸಾಲುಗಳು, ಹಾಗೂ ಅವುಗಳಿಗೆ ವಿಮರ್ಶಕರು ಲೇಪಿಸಿದ ದುಷ್ಟತನ, ಕ್ರೌರ್ಯ, ಇತ್ಯಾದಿ ಘನಘೋರ ಶಬ್ದಗಳ ಹಲ್ಲು ಉಗುರುಗಳುಗಳೆಲ್ಲ ಸೇರಿ ಚೆನ್ನಿಯವರ ಉದ್ದೇಶವನ್ನು ತಕ್ಕಮಟ್ಟಿಗಾದರೂ ಈಡೇರಿಸದೇ ಹೋಗಲಾರವು. ಚೆನ್ನಿಯವರು ನೀಡುವ ವಿಶೇಷಣಗಳನ್ನು ಕಿತ್ತು ನೋಡಿದರೆ ಅವು ಕೂಡ ಭೀಕರ ಎನ್ನಿಸಲಾರವು. ಮತ್ತೊಮ್ಮೆ ಪುಸ್ತಕವನ್ನು ಮಗುಚಿ ಹಾಕಿದೆವು. ನಮ್ಮ ಮೈ ಸೇರಿಕೊಂಡಿದ್ದ ದೆವ್ವ ನಿಧಾನವಾಗಿ ಇಳಿದುಹೋದಂತಾಗಿ ನಿರಾಳವಾಯಿತು.

ಈ ಪುಸ್ತಕವನ್ನು ನಾವೇನೂ ರಹಸ್ಯ ಕರಪತ್ರದಂತೆ ಆಪ್ತವಲಯಕ್ಕಷ್ಟೇ ಸುತ್ತಾಡಿಸಿಲ್ಲ. ಅದರ ಸೈದ್ಧಾಂತಿಕ ವಿಚಾರಗಳನ್ನು ಸಾರ್ವಜನಿಕವಾಗಿಯೇ ನಾವೆಲ್ಲ ಚರ್ಚಿಸಿದ್ದೇವೆ. ಈ ವಿಚಾರವಾಗಿಯೇ ತಾನೆ ನಮ್ಮ ಮೇಲೆ ಅಲ್ಲ ಸಲ್ಲದ ಅಪರಾಧಗಳನ್ನು ಆರೋಪಿಸಿದ ಪ್ರಗತಿಪರರಿಗೂ ನಮಗೂ ಕೊನೆಯಿರದ ಕಟುವಿವಾದ ಕಳೆದ ಹತ್ತೆಂಟು ವರ್ಷಗಳಿಂದ ನಡೆದಿದೆ? ಯಾರೋ ಒಂದಷ್ಟು ಜನ ಸಂಶೋಧನೆ ಮಾಡುತ್ತೇವೆ ಎಂದರೆ, ಅದು ನಮಗೆ ಕಹಿಯಾಗಿದೆ ಅಂದಾಕ್ಷಣ ಮಾನವತೆಯನ್ನೇ ಮುಂದಿಟ್ಟು ನಮ್ಮನ್ನು ರಾಕ್ಷಸರೋ ಎಂಬಂತೆ ಬಿಂಬಿಸಲಾಯಿತು. ಲೇವಡಿ ಮಾಡಲಾಯಿತು. ಅವರೆಲ್ಲರ ಪ್ರತಿಕ್ರಿಯೆಯನ್ನು ಗಮನಿಸಿದ ನಂತರ ನಮಗೆ ನಾವು ಎಲ್ಲೋ ಸಂವಹನೆಯಲ್ಲಿ ವಿಫಲರಾಗುತ್ತಿದ್ದೇವೆ ಎಂದೆನಿಸಿತು. ನಮ್ಮ ವಿಚಾರಗಳನ್ನು ಒಂದೆಡೆ ತಂದರೆ ನಾವು ಏನು ಹೇಳುತ್ತಿದ್ದೇವೆ ಎಂಬುದನ್ನು ಓದುಗರಿಗೆ ಸ್ಪಷ್ಟಗೊಳಿಸಬಹುದು ಎಂಬ ಆಶಯದಿಂದಲೇ ಬಾಲುರವರ ಜೊತೆಗೆ ಜಾಲತಾಣದಲ್ಲಿ ನಡೆದ ಚರ್ಚೆಯನ್ನು ಕನ್ನಡದಲ್ಲಿ ಇಟ್ಟಿದ್ದು. ಈ ಪುಸ್ತಕ ಕೂಡ ಪ್ರಕಟವಾಗಿ ವರ್ಷವೇ ಆಯಿತು. ಎಷ್ಟೋ ಜನರು ಇದನ್ನು ಓದಿದ್ದಾರೆ. ಟೀಕಿಸಿಯೂ ಇದ್ದಾರೆ. ಯಾರ ಮುಖದಲ್ಲೂ ಈ ಗಾಬರಿ, ಆಘಾತಗಳು ನಮಗೆ ಕಾಣಿಸಿರಲಿಲ್ಲ. ಆದರೆ ಬಹುತೇಕ ಪ್ರಗತಿಪರರು ಇದನ್ನು ಮೆಚ್ಚಲಿಲ್ಲ ಅಷ್ಟೇ ಅಲ್ಲ ಇವರೇನು ಹೇಳುತ್ತಾರೆ ಎಂಬುದರಲ್ಲಿ ತಮಗೆ ಆಸಕ್ತಿಯಿಲ್ಲ ಎಂಬಂತೆ ಉಳಿದರು.

ಬಾಲು ಈ ಪುಸ್ತಕದಲ್ಲಿ ಜಾತಿ ವ್ಯವಸ್ಥೆಯ ಕುರಿತು ಪ್ರಚಲಿತದಲ್ಲಿರುವ ಸಿದ್ಧಾಂತವನ್ನು ಅಲ್ಲಗಳೆಯುತ್ತಿದ್ದಾರೆ. ಅವರ ಪ್ರಕಾರ ಅನ್ಯಾಯ ಮತ್ತು ಶೋಷಣೆಗಳು ನಮ್ಮ ಸಮಾಜದಲ್ಲಿ ಇವೆ, ಹಾಗೂ ಅವನ್ನು ಅವರು ಖಂಡಿಸುತ್ತಾರೆ ಕೂಡ. ಜೊತೆಗೆ ಈಗಿರುವ ಸಾಮಾಜಿಕನ್ಯಾಯದ ಕಲ್ಪನೆಯು ಇರುವ ಸಮಸ್ಯೆಗಳನ್ನು ಪರಿಹರಿಸಿಲ್ಲ ಮಾತ್ರವಲ್ಲ, ಅದರಿಂದಾಗಿಯೇ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ. ಹಾಗಾಗಿ ಈ ಸಮಸ್ಯೆಗಳನ್ನು ಸರಿಯಾಗಿ ಗುರುತಿಸಿ ಬಗೆಹರಿಸಲು ಹೊಸ ಸೈದ್ಧಾಂತಿಕ ವಿವರಣೆಗಳ ಅಗತ್ಯವಿದೆ ಎಂಬುದು ನಮ್ಮ ವಾದ. ಅದನ್ನು ಸ್ಪಷ್ಟವಾಗಿ ಈ ಪುಸ್ತಕದ ಪ್ರಾರಂಭದಲ್ಲೇ ತಿಳಿಸಲಾಗಿದೆ (ಪುಟ 54-55). ಆದರೆ ನಾವು ಇದುವರೆಗೆ ಅವನ್ನು ಜಾತಿವ್ಯವಸ್ಥೆಯ ಸಿದ್ಧಾಂತದಿಂದ ಅರ್ಥೈಸಿ ಪರಿಹಾರ ಕಂಡುಕೊಳ್ಳಲು ನೋಡಿದ್ದೇವೆ. ಹಾಗಾಗಿ ಅದರ ಅಸ್ತಿತ್ವಕ್ಕೆ ಪ್ರಮಾಣಗಳು ಇದ್ದಂತೆ ಅನಿಸುತ್ತದೆ. ಈ ಸಂಬಂಧಪಟ್ಟು ನಮ್ಮ ಸಂಶೋಧನಾ ತಂಡವು ಕರ್ನಾಟಕದಾದ್ಯಂತ ಕ್ಷೇತ್ರಕಾರ್ಯವನ್ನು ಕೂಡ ಹಮ್ಮಿಕೊಂಡಿತ್ತು. ಅದರಲ್ಲಿ ಕಂಡುಕೊಂಡ ಇತರ ಪ್ರಮಾಣಗಳನ್ನು ತೋರಿಸಿ ಈ ಚಿತ್ರಣವು ಕಲ್ಪಿತ ಎಂಬ ವಾದವನ್ನು ಇಲ್ಲಿ ಮಂಡಿಸಲಾಗಿದೆ. ಹಾಗೆ ಹೇಳಿದ ತಕ್ಷಣ ಹಾಗಾದರೆ ನಿಮ್ಮ ಸಿದ್ಧಾಂತವೇನು? ಎಂಬ ಪ್ರಶ್ನೆ ಬಹುತೇಕ ಕಡೆ ಎದ್ದಿದೆ. ಹಾಗಾಗಿ ಮತ್ತೆ ಹೇಗೆ ಭಾರತೀಯ ಸಮಾಜವನ್ನು ವರ್ಣಿಸಬಹುದು? ಎಂಬುದಕ್ಕೆ ಊಹಾಸಿದ್ಧಾಂತವನ್ನು ಮಂಡಿಸಲು ಈ ಪುಸ್ತಕದ ಕೊನೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಈ ಊಹಾ ಸಿದ್ಧಾಂತಗಳಾದರೂ ಪರೀಕ್ಷೆಗೆ ಮುಕ್ತವಾಗಿವೆ ಎಂಬುದನ್ನು ಕೂಡ ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಂದರೆ ‘ಇಂಥ ಅಪವಾದಗಳು ಹೆಚ್ಚಾದಂತೆಲ್ಲ ನಮ್ಮ ಊಹಾ ಸಿದ್ಧಾಂತವು ಅವುಗಳ ಭಾರಕ್ಕೆ ಕುಸಿಯಲೂ ಬಹುದು’ (ಪುಟ 230) ಎಂಬುದಾಗಿ ಬಾಲು ಹೇಳುತ್ತಾರೆ. ಇವೆಲ್ಲ ಮೂಲತಃ ಜಾಲತಾಣದ ಚರ್ಚೆಗಳು. ಈ ಸೈದ್ಧಾಂತಿಕ ಚೌಕಟ್ಟನ್ನು ವಿಮರ್ಶಿಸುವಾಗ ಅಂಬೇಡ್ಕರ್ ಹಾಗೂ ಫುಲೆಯವರು ಈ ಚೌಕಟ್ಟನ್ನು ಪ್ರಮಾಣೀಕರಿಸಿಲ್ಲವೆ? ಅವರಿಗೆ ಅನ್ಯಾಯಗಳು ಆಗೇ ಇಲ್ಲವೆಂದು ನಿಮ್ಮ ಅಭಿಪ್ರಾಯವೆ? ಎಂಬ ಪ್ರಶ್ನೆಗಳು ಎದ್ದವು. ಆಗ ಅವರ ಉದಾಹರಣೆಯನ್ನು ತೆಗೆದುಕೊಂಡು ಅವರಿಗೆ ಆದ ಅನುಭವವನ್ನು ನಿರಾಕರಿಸದೇ ತಮ್ಮ ವಿವರಣೆಯನ್ನು ನೀಡಲು ಬಾಲು ಯತ್ನಿಸಿದ್ದಾರೆ. ಇಲ್ಲಿ ಅಷ್ಟನ್ನೇ ಮಾಡಲಾಗಿದೆ. ಇಲ್ಲಿ ಯಾವುದೇ ಮುಂದಾಳುವನ್ನಾಗಲೀ, ಜನಾಂಗವನ್ನಾಗಲೀ, ಜಾತಿಗಳನ್ನಾಗಲೀ ದೂಷಿಸಿಲ್ಲ, ಆ ಉದ್ದೇಶವೂ ಇಲ್ಲ.

ಆದರೆ ಇಂಥ ಅರ್ಥ ಬರುವಂತೆ ಚೆನ್ನಿಯವರ ವಿಮರ್ಶೆ ನೋಡಿಕೊಂಡಿದ್ದರೆ ಅದು ಅವರ ವಿಮರ್ಶೆಯ ಸಾಧನೆ ಎಂದೇ ಹೇಳಬೇಕಾಗುತ್ತದೆ. ‘ದಲಿತರ ಶೇಕಡಾವಾರು ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಲೆಗಳನ್ನು ನಾವೇ ಮಾಡಬೇಕು. ಇದನ್ನು ದಲಿತರ ಪರವಾಗಿರುವ ಪ್ರಗತಿಪರರೇ ಮಾಡಬೇಕು’ ಎಂಬ ಸಾಲಿಗೆ ಚೆನ್ನಿಯವರದೇ ಕಾಪಿರೈಟ್ ಹೊರತೂ ಈ ಪುಸ್ತಕದ ಕತೃಗಳದಲ್ಲ. ಆದರೆ ಅವರು ಈ ಹೇಳಿಕೆಯನ್ನು ಸೇರಿಸುವುದು ಪ್ರಗತಿಪರರ ಸಮರ್ಥನೆಯ ಸಲುವಾಗಿ. ಚೆನ್ನಿಯವರ ಇದೇ ವಾಕ್ಯವನ್ನು ಸಂದರ್ಭದಿಂದ ತೆಗೆದು ನಾವು ಇಟ್ಟರೆ ಅದೆಷ್ಟು ಭೀಕರವಾಗಿ ಕಾಣಿಸುತ್ತದೆ ಎಂಬುದರ ಅರಿವಾದರೂ ಅವರಿಗಿದೆಯೆ?

ನಾವೂ ಈ ಸಂಶೋಧನಾ ತಂಡದ ಭಾಗವಾಗಿಯೇ ಇದ್ದೇನೆ. ನಾವೂ ಮನುಷ್ಯರು, ನಮಗೂ ಮಾನವೀಯ ಕಳಕಳಿಗಳಿಲ್ಲ ಅಂತ ಹೇಗೆ ತೀರ್ಮಾನಿಸುತ್ತೀರಿ? ಅದಕ್ಕೇನಾದರೂ ನಮ್ಮ ಜೀವನದಿಂದ ಆಧಾರವನ್ನು ತೆಗೆದು ತೋರಿಸುವಂತಿದೆಯೆ? ನಮ್ಮ ಸಾಮಾಜಿಕ ನ್ಯಾಯಕ್ಕೆ ಹಾಗೂ ಆ ಸಂಬಂಧಿಸಿದ ನೀತಿಗೆ ಸ್ವೀಕೃತವಾದ ಸಿದ್ಧಾಂತವೊಂದನ್ನು ಪ್ರಶ್ನಿಸುವುದು ಸೂಕ್ಷ್ಮವಾದ ವಿಚಾರ ಎಂಬುದು ನಮಗೂ ತಿಳಿದಿದೆ. ಅದರಲ್ಲೂ ಅದನ್ನೊಂದು ನೈತಿಕ ಸಮಸ್ಯೆಯನ್ನಾಗಿ ಪರಿವರ್ತಿಸಿದರಂತೂ ಮತ್ತೂ ಸೂಕ್ಷ್ಮ. ಹಾಗಾಗಿಯೇ ಪುಸ್ತಕದ ಲೇಖಕರು ಪ್ರಾರಂಭದಲ್ಲೇ ಸ್ಪಷ್ಟವಾಗಿ ತಾವು ಶೋಷಣೆ ಹಾಗೂ ಅನ್ಯಾಯದ ಪರವಾಗಿ ವಾದಿಸುತ್ತಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಅದರ ಉದ್ದೇಶ ಓದುಗರು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಸದ್ಭಾವನೆಯಿಂದ ತಮ್ಮ ವಾದವನ್ನು ಆಲಿಸಲಿ ಎಂಬುದು. ಚರ್ಚಿಸತಕ್ಕ ಸಿದ್ಧಾಂತದ ವಿಮರ್ಶೆ ಮಾಡುವಾಗ ಸಿದ್ಧಾಂತದ ರೂಪುರೇಷೆಗಳಷ್ಟೇ ಗಮನದಲ್ಲಿರುತ್ತವೆ ಅಂದಾಕ್ಷಣ ಅವರು ಆ ಸಿದ್ಧಾಂತವು ಉಲ್ಲೇಖಿಸುವ ಅನ್ಯಾಯವನ್ನು ಸಮರ್ಥಿಸುತ್ತಿದ್ದಾರೆ ಅಂತಲ್ಲ. ಆ ಘೋಷಣೆಯನ್ನು ಪ್ರತೀ ವಾಕ್ಯದ ಹಿಂದೂ ಜೋಡಿಸುತ್ತ ಕೂತರೆ ವಿಷಯ ನಿರೂಪಣೆ ಮಾಡುವುದು ಹೇಗೆ? ಓದಿಕೊಳ್ಳುವವರಿಗೆ ತಾರ್ಕಿಕ ಸಮಸ್ಯೆ ಬಂದರೆ ಸ್ವಾಗತ. ಉದಾಹರಣೆಗೆ ಮೇಲೆ ಉಲ್ಲೇಖಿಸಿದ ಅಂಕಿ ಅಂಶಗಳ ಕುರಿತು ನಮ್ಮ ಧೋರಣೆಯನ್ನು ಒಂದು ಸಂಶೋಧನಾ ಸಮಸ್ಯೆ ಎಂಬುದಾಗಿ ಚೆನ್ನಿಯವರು ನೋಡಬಹುದಿತ್ತು. ಬದಲಾಗಿ ಅದನ್ನೊಂದು ನೈತಿಕ ಸಮಸ್ಯೆಯನ್ನಾಗಿ ಮಾಡಿ ಮೇಲೆ ಉಲ್ಲೇಖಿಸಿದಂಥ ಯೋಚಿಸಲಿಕ್ಕೂ ಹೇಸಿಗೆಯಾಗುವ ವಿಚಾರವನ್ನು ಸೃಷ್ಟಿಮಾಡುತ್ತಾರೆ. ಹಾಗೇಕೆ? ತಮ್ಮ ನೈತಿಕ ನಿಲುವನ್ನು ಲೇಖಕರು ಸ್ಪಷ್ಟಗೊಳಿಸಿ ಆಗಿದೆಯಲ್ಲ? ಇಷ್ಟೆಲ್ಲ ಕಸರತ್ತು ಏಕೆ? ದಲಿತರ ಮೇಲಿನ ಕಾಳಜಿಯೊ, ಇಲ್ಲ ಅವರನ್ನು ನಮ್ಮ ಮೇಲೆ ಎತ್ತಿಕಟ್ಟುವುದೊ ಎಂಬ ಗೊಂದಲ ಈ ವಿಮರ್ಶೆಯನ್ನು ಓದಿದ ಮೇಲೆ ಉಳಿದುಕೊಳ್ಳುತ್ತದೆ. ಮತ್ತೊಂದು ವಿಚಾರ, ಪುಸ್ತಕ ವಿಮರ್ಶೆಯ ಮತ್ತೊಂದು ಬಹುದೊಡ್ಡ ಕೊರತೆ ಎಂದರೆ, ಪುಸ್ತಕದ ಶೀರ್ಷಿಕೆಯೇ ಎತ್ತಿರುವ ಪ್ರಶ್ನೆಯ ಕುರಿತು ಚೆನ್ನಿಯವರ ವಿಮರ್ಶೆ ಚಕಾರವನ್ನು ಎತ್ತಿಲ್ಲ, ಕನಿಷ್ಟಪಕ್ಷ ಆ ಪುಸ್ತಕ ಎತ್ತಿರುವ ಪ್ರಶ್ನೆಗೆ ಸಕಾರಾತ್ಮಕವಾಗಿಯಾದರೂ ಅಥವಾ ನಕಾರಾತ್ಮಕವಾಗಿಯಾದರೂ ಪ್ರತಿಕ್ರಿಯಿಸದಿರುವುದು ವಿಮರ್ಶೆಯ ಜೊಳ್ಳುತನವನ್ನು ತೋರಿಸುತ್ತದೆ.

ರಾಜೇಂದ್ರ ಚೆನ್ನಿಯವರು ಪುಸ್ತಕದಲ್ಲಿರುವ ವಾದ ಮತ್ತು ಹೈಪೋಥೀಸಿಸ್ ಗಳ ಸಂದರ್ಭದಿಂದ ಹೊರತೆಗೆದು ಇಟ್ಟಿರುವ ಸಾಲುಗಳು ಹಾಗೂ ಆಯಾ ಸಂದರ್ಭದಲ್ಲಿ ಆ ಸಾಲುಗಳ ಅರ್ಥವೇನು ಎಂಬುದಕ್ಕೆ ಕೆಲವು ನಿದರ್ಶನಗಳು

1.ಕನ್ನಡದ ಪ್ರಗತಿಪರ ಹೋರಾಟಗಾರರ ವಿರುದ್ಧ ತನ್ನ ವೈಚಾರಿಕ ಸಮರವನ್ನು ಸಾರಿದ್ದೇವೆ ಎನ್ನಲು ಚೆನ್ನಿಯವರು “ಕನ್ನಡದ ಪ್ರಗತಿಪರ ಹೋರಾಟಗಾರರ ಜೊತೆ ನಾವು ತಲೆ ಹಾಳಾಗುವಷ್ಟು ಚರ್ಚೆ ಮಾಡಿದ್ದೇವೆ. ಈ ಚರ್ಚೆಗಳಲ್ಲಿ ನಾವು ಕಂಡುಕೊಂಡಿದ್ದೇನೆಂದರೆ, ಜಾತಿವ್ಯವಸ್ಥೆಯ ಚೌಕಟ್ಟು ಎಂದರೇನು ಎಂಬುದರ ಬಗ್ಗೆ ಅವರಾರಿಗೂ ಸ್ಪಷ್ಟತೆ ಇಲ್ಲ.” ಎನ್ನುವ ಬೆನ್ನುಡಿಯ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಆದರೆ ಅದೇ ಸಾಲಿನ ಮುಂದಿನ ವಾಕ್ಯವು ಅವರೊಂದಿಗೆ ವಾಗ್ವಾದ ಹಾಗೂ ಸಂಘರ್ಷವಾಗಲು ಇದೂ ಒಂದು ಪ್ರಮುಖ ಕಾರಣ ಎಂದಿದ್ದು, ಮುಂದುವರಿದು ಈ ರೀತಿಯ ಅಸ್ಪಷ್ಟತೆಯಿಂದಾಗಿ ನಾವು ಜಾತಿವ್ಯವಸ್ಥೆ ಇಲ್ಲ ಎಂದಾಗ ನಾವು ಹೇಳುತ್ತಿದ್ದೇವೆ ಎನ್ನುವುದೇ ಎಂಬುದೇ ಅವರಿಗೆ ಅರ್ಥವಾಗುವುದಿಲ್ಲ ಎಂದಿದೆ. ಅಂದರೆ ಪ್ರಗತಿಪರರೊಂದಿಗಿನ ನಮ್ಮ ಸಂಘರ್ಷಕ್ಕೆ ನಮ್ಮ ವಾದದ ಕುರಿತು ಅವರಲ್ಲಿ ಅಸ್ಪಷ್ಟತೆ ಇದೆ. ಹೀಗಾಗಿ ನಾವು ಹೇಳುವುದನ್ನು ಅಪಾರ್ಥಮಾಡಿಕೊಂಡು ‘ಮತ, ಪಂಗಡ’ ಮುಂತಾದ ಪ್ರಭೇಧಗಳಿಲ್ಲ ಎನ್ನುತ್ತಿದ್ದಾರೆ ಹಾಗೂ ಅವುಗಳ ನಡುವೆ ಇರುವ ಸಂಘರ್ಷವನ್ನು ನಿರಾಕರಿಸುತ್ತಿದ್ದೇವೆ ಎಂದು ತಿಳಿಯುತ್ತಾರೆ” ಎನ್ನುವ ವಾದವಿದೆ.

2.ದಲಿತ ಸಮುದಾಯಕ್ಕೆ ನ್ಯಾಯ ಸಿಗದೇ ಇರುವುದಕ್ಕೆ ಈ ಸಂಶೋಧಕರು ಪ್ರಗತಿಪರ ಬುದ್ಧಿಜೀವಿಗಳನ್ನು ಜವಾಬ್ದಾರರನ್ನಾಗಿ ಮಾಡಲಿಕ್ಕೇ ಎಂದು ಈ ಸಾಲುಗಳನ್ನು ಉಲ್ಲೇಖಿಸುತ್ತಾರೆ: “ಒಂದು ಕ್ಷಣ ಯೋಚಿಸಿ ನೋಡಿ; ಆ ಘಟನೆ ಒಂದು ಅಪರಾಧದ ಘಟನೆಯಷ್ಟೆ ಆಗಿ ಉಳಿದಿದ್ದರೆ, ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಪೊಲೀಸ್ ಕ್ರಮವನ್ನು ಸರಕಾರವೇ ತೆಗೆದುಕೊಳ್ಳಬಹುದಾಗಿತ್ತು. ಅಥವಾ ತೆಗೆದುಕೊಳ್ಳುವಂತೆ ಜನರೇ ಒತ್ತಡವನ್ನು ಹೇರಬಹುದಾಗಿತ್ತು. ಬದಲಾಗಿ, ಈ ಘಟನೆಯ ‘ಅಸ್ಪೃಶ್ಯತೆ’ ಮತ್ತು ‘ಜಾತಿ ಶೋಷಣೆಗೆ ಒಂದು ಉದಾಹರಣೆ ಎಂದು ನಮ್ಮ ಬುದ್ಧಿಜೀವಿ ವಲಯವು ಘೋಷಿಸುತ್ತಲೆ, ರಾಜ್ಯ(ಸರಕಾರ)ವು ಈ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಶೋಷಿತರಿಗೆ ಪರಿಹಾರದ (ನಾವು ಮೇಲೆ ಕಾಣಿಸಿದ ಈ ಎರಡು) ಕ್ರಮಗಳನ್ನು ಕೈಗೊಳ್ಳುವ ಬದಲು ‘ಅಸ್ಪೃಶ್ಯತೆ’ ಮತ್ತು ‘ ಜಾತಿ ಶೋಷಣೆಯನ್ನು’ ತೊಲಗಿಸುವುದು ಹೇಗೆ ಎಂದು ಯೋಚಿಸುತ್ತ ಕೂರುತ್ತದೆ. ಹೀಗೆ ಜಾತಿವ್ಯವಸ್ಥೆ ಕುರಿತ ತಪ್ಪು ತಪ್ಪು ಸಿದ್ಧಾಂತಗಳಿಂದಾಗಿ, ಒಂದು ಅಪರಾಧದ ಘಟನೆಯು ಸರಿಯಾದ ವಿವರಣೆಯೇ ಇಲ್ಲದ ಒಂದು ಸಂಕೀರ್ಣ ಸಾಂಸ್ಕೃತಿಕ ಸಮಸ್ಯೆಯಾಗಿ ಮಾರ್ಪಡುತ್ತದೆ. (ಪು.11-12).

ಓದುಗರೇ ದಯವಿಟ್ಟು ನಂಬಿ. ಈ ಮಾತುಗಳು ನಿಜವಾಗಿಯೂ ನಾನು ಹೇಳಿದ ಪುಟಗಳಲ್ಲಿಯೇ ಇವೆ. ಪ್ರಾಯಶಃ ಈ ಪ್ರಸ್ತಾವನೆಯನ್ನು ಬರೆದ ಮೇಲೆ ನ್ಯಾಯಾಲಯವು ದಲಿತರ ಕೊಲೆಗಳಿಗೆ ಕಾರಣವಾದ ಆರೋಪಿಗಳನ್ನು ಖುಲಾಸೆ ಮಾಡಿದ್ದು ಕೂಡ ಕನ್ನಡ ಬುದ್ಧಿಜೀವಿ ವಲಯವು ಜಾತಿವ್ಯವಸ್ಥೆ ಕುರಿತಾದ ತಪ್ಪು ಸಿದ್ಧಾಂತಗಳನ್ನು ನಂಬಿರುವುದರಿಂದ!. ಇಲ್ಲದಿದ್ದರೆ ‘ಅಪರಾಧ’ಕ್ಕೆ ತಕ್ಕುದಾದ ಶಿಕ್ಷೆಯನ್ನು ನ್ಯಾಯಾಲಯವು ಕೊಡುತ್ತಿತ್ತು ಎಂದು ಚೆನ್ನಿಯವರು ಲೇವಡಿಮಾಡುತ್ತಾರೆ.

ಆದರೆ ಈ ಸಾಲುಗಳಿಗಿಂತ ಹಿಂದೆ ಈ ಸಮಸ್ಯೆಯನ್ನು ವಿಶ್ಲೇಷಿಸುವಾಗ ಲೇಖಕರು ಇದೊಂದು ಅಮಾನವೀಯ ಘಟನೆಯೆಂದೂ ಈ ಸಮಸ್ಯೆಯಲ್ಲಿ ನೊಂದವರಿಗೆ ಸೂಕ್ತ ಪರಿಹಾರ ಸಿಗಬೇಕಿತ್ತೆಂದು ಮತ್ತು ಪ್ರಗತಿಪರರು ಈ ಘಟನೆಯನ್ನು ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ತನಿಖಾ ಸಮಿತಿಯು ಕ್ಲಿಷ್ಟಕರವೂ ಅರ್ಥವೂ ಆಗದ ಅಷ್ಪಸ್ಟವೆನ್ನುವಂತೆ ನಿರೂಪಿಸಿದ್ದರಿಂದ (ತನಿಖಾ ಸಮಿತಿಯ ವರದಿಯ ಸಾಲುಗಳಾದ [ಕಂಬಾಲಪಲ್ಲಿಯಲ್ಲಿ ನಡೆದ] ಆ ಘಟನೆಯ ಬೇರುಗಳು ಹುದುಗಿರುವುದು ಸಾಮಾಜಿಕ-ರಾಜಕೀಯ ಸಂಗತಿಗಳ ಸಂಕೀರ್ಣ ಜಾಲದಲ್ಲಿ ಮತ್ತು ಬೆಳೆಯುತ್ತಿರುವ ದಲಿತ ಸಂಘಟನೆಗಳ ಹೋರಾಟದ ಹಿನ್ನಲೆಯಲ್ಲಿ ಮೊಳೆತು ನಿಂತಿರುವ ಕೆಳಜಾತಿಗಳ ಬಗ್ಗೆ ಮೇಲ್ಜಾತಿಗಳು ಅಸಹಿಷ್ಣತೆಯ ಆಳದಲ್ಲಿ) ಸರ್ಕಾರದಿಂದ ಸಂತ್ರಸ್ತರಿಗೆ ಸಿಗಲೇಬೇಕಾದ ಪರಿಹಾರದಿಂದ ವಂಚಿತರಾದರು ಎನ್ನುವ ವಿವರಣೆ ಇದೆ. ಅಂದರೆ ದಲಿತರಿಗಾಗುತ್ತಿರುವ ದೌರ್ಜನ್ಯಗಳು ಪರಿಹಾರ ಕಾಣದಂತೆ ಆಗಲು ಇಲ್ಲದೇ ಇರುವ ಜಾತಿವ್ಯವಸ್ಥೆಯ ಚಿತ್ರಣದ ಚೌಕಟ್ಟಿನ ಬಳಕೆಯು’ ತಡೆಯಾಗುತ್ತಿದೆ. ಹಾಗಾಗಿ ಈ ಚೌಕಟ್ಟಿನಿಂದ ಹೊರಗೆ ಸಮಸ್ಯೆಯನ್ನು ಗುರುತಿಸುವ ಪ್ರಯತ್ನ ಮಾಡಿದ್ದರೆ ದಲಿತರಿಗೆ ನ್ಯಾಯ ಲಭ್ಯವಾಗುವ ಸಾಧ್ಯತೆ ಇತ್ತು” ಎನ್ನುವ ವಾದ ಇಲ್ಲಿ ಇದೆ. ಇಲ್ಲಿ ದೌರ್ಜನ್ಯಕ್ಕೊಳಗಾದ ದಲಿತರಿಗೆ ನ್ಯಾಯ ಸಿಗದಿರಲು ಒಂದು ಕಾರಣವನ್ನು ತಾರ್ಕಿಕವಾಗಿ ಮುಂದಿಟ್ಟಾಗ ದಲಿತರ ಸಮಸ್ಯೆಗಳ ಬಗ್ಗೆ ಚೆನ್ನಿಯವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೇ ಹೌದಾದರೆ ಒಂದೋ ಲೇಖನದಲ್ಲಿ ಸೂಚಿಸಿದ ಮಾರ್ಗವು ದಲಿತರಿಗೆ ನ್ಯಾಯ ದೊರಕಿಸುವುದಿಲ್ಲ ಏಕೆಂದರೆ ಜಾತಿವ್ಯವಸ್ಥೆ ನಿಜಕ್ಕೂ ಇದೆ ಎಂದು ತರ್ಕಬದ್ದವಾಗಿ ತೋರಿಸಬೇಕಿತ್ತು. ಇಲ್ಲವೇ ಈ ಕುರಿತು ಪುನರಾವಲೋಕನದ ಅವಶ್ಯಕತೆಯನ್ನು ಮನಗಾಣಬೇಕಿತ್ತು. ಇವೆರಡನ್ನೂ ಮಾಡದ ದಲಿತರಿಗೆ ನ್ಯಾಯಸಿಗಬೇಕಿತ್ತು ಎನ್ನುವ ನಮ್ಮ ವಾದದ ಸಾಲುಗಳನ್ನೂ ಚೆನ್ನಿಯವರು ನಮ್ಮ ಸಂಶೋಧನಾ ತಂಡವೇ ದಲಿತರ ವಿರೋಧೀ ಮಾನವವಿರೋಧೀ ಎನ್ನುವಂತೆ ಚಿತ್ರಿಸುವ ಯತ್ನ ಮಾಡುತ್ತಾರೆ. ಅಂದರೆ ಈಗಾಗಲೇ ಪ್ರಗತಿಪರರು ಎನಿಸಿಕೊಂಡವರು ದಲಿತರ ಸಮಸ್ಯೆಗಳಿಗೆ ಯಾವುದು ಕಾರಣ ಮತ್ತು ಯಾವುದು ಪರಿಹಾರ ಎಂದು ಭಾವಿಸಿದ್ದಾರೋ ಅವುಗಳನ್ನು ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರ ಸಮಸ್ಯೆಗಳು ಹಾಗೇ ಇದ್ದರೂ ಇನ್ನೂ ಹೆಚ್ಚಾದರೂ ಕೂಡ! ಈಗ ಅಂದು ಕೊಂಡಿರುವ ಪರಿಹಾರ ಸರಿಯೇ? ಸಮಸ್ಯೆ ಹಾಗೆ ಉಳಿದಿದೆ ಇಲ್ಲಾ ಹೆಚ್ಚಾಗುತ್ತಿದೆಯಲ್ಲಾ ಎಂದು ಬೇರೆ ರೀತಿಯಲ್ಲಿ ಕನಿಸಿನಲ್ಲೂ ಯೋಚಿಸಬಾರದು, ಏಕೆಂದರೆ ಅದು ಪ್ರಗತಿಪರರೊಟ್ಟಿಗೆ ಸಂಘರ್ಷಮಾಡಿದಂತೆ, ಹಾಗಾಗಿ ಅದು ದಲಿತ ಮತ್ತು ಮಾನವ ವಿರೋಧಿ ಚಿಂತನೆ ಕೂಡ ಎನ್ನುವಂತೆ ಬರೆಯುತ್ತಾರೆ ಚೆನ್ನಿಯವರು. ಇಲ್ಲಿ ದಲಿತರ ಸಮಸ್ಯೆಗಳು ಪರಿಹಾರವಾಗ ಬೇಕೆನ್ನುವ ಕಾಳಜಿ ಇದೆಯೋ ಇಲ್ಲ ತಾನು ಹೇಳಿದ್ದೇ ಸರಿ ಅದನ್ನೇ ಎಲ್ಲರೂ ಒಪ್ಪಿಕೊಂಡು ತೆಪ್ಪಗಿರಬೇಕು ಎನ್ನುವ ನಿಲುವಿದೆಯೋ?

3.”ಅಂಬೇಡ್ಕರ್ ಮತ್ತು ಫುಲೆಯಂಥವರು ಭಾರತೀಯ ಸಮಾಜದಲ್ಲಿ ಅನ್ಯಾಯವನ್ನು ಅನುಭವಿಸಿದ್ದರು ಮತ್ತು ಅದನ್ನು ಬದಲಾಯಿಸಲು ಬಯಸಿದ್ದರು ಎಂದು ಒಪ್ಪಿಕೊಳ್ಳೋಣ, ಅಂತೆಯೇ ಒಪ್ಪಿಕೊಳ್ಳಬೇಕಾದ ಇನ್ನೊಂದು ವಿಚಾರವೆಂದರೆ ಇವರ ಕಹಿ ಅನುಭವಗಳು, ಅದರಿಂದ ಹುಟ್ಟಿದ್ದ ಧೋರಣೆಗಳು ಹಾಗೂ ನಕಾರಾತ್ಮಕವಾದ ಭಾವನೆಗಳು ತಕ್ಷಣವೇ ಹಿಂದೂ ಜಾತಿವ್ಯವಸ್ಥೆಯ ಕುರಿತ ಪ್ರೊಟೆಸ್ಟೆಂಟರ ಕಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಅದರ ಸಾಮಾಜಿಕ ಸ್ವರೂಪದ ಬಗೆಗಿನ ಅವರ ನಕಾರಾತ್ಮಕ ನೈತಿಕ ತೀರ್ಮಾನಗಳ ಜೊತೆ ತಳಕು ಹಾಕಿಕೊಂಡಿತು”(ಪು. 87).
ಈ ಉಲ್ಲೇಖದ ಸಂಧರ್ಭದಲ್ಲಿಯೂ ಸಹ ಅಂಭೇಡ್ಕರ್ ಮತ್ತು ಫುಲೆಯವರ ಅವರಿಗೆ ಅನ್ಯಾಯದ ಅವಮಾನದ ಅನುಭವ ಆಗಲಿಲ್ಲ ಎಂದೇನೂ ಇಲ್ಲಿ ವಾದಿಸಿಲ್ಲ. ಬದಲಿಗೆ ತಮ್ಮ ಈ ಶೋಷಣೆಯ ಅನುಭವವನ್ನು ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ವಿವರಿಸಿಕೊಳ್ಳುವುದರಿಂದ ಈ ಘಟನೆಗಳನ್ನು ತಪ್ಪಾಗಿಯೇ ಗ್ರಹಿಸಿ ವಿವರಿಸುತ್ತಾರೆ ಮತ್ತು ಅದರಿಂದ ಮುಂದೆ ಈ ರೀತಿಯ ಚಿಂತನಾವಲಯವು ನಕಾರಾತ್ಮಕ ವಾದ ಧೋರಣೆಯನ್ನು ಬೆಳೆಸಿಕೊಳ್ಳಲಷ್ಟೇ ಸಹಾಯ ಮಾಡಿತು ಈ ಅನ್ಯಾಯ ಅವಮಾನಗಳಿಂದ ಹೊರಬರಲು ಈ ವಿವರಣೆಗಳು ನೆರವಾಗಲಿಲ್ಲ ಎನ್ನುವ ವಾದವಿದೆ. ಇಂದಿಗೂ ಅಂದರೆ ಶತಮಾನದ ನಂತರವೂ ದಲಿತರಿಗೆ ಇದೇ ರೀತಿಯ ಅನ್ಯಾಯ ಅವಮಾನದ ಘಟನೆಗಳು ಆಗುತ್ತಲೇ ಇವೆ ಆದ್ದರಿಂದ ಸಮಸ್ಯೆಯ ಗ್ರಹಿಕೆಯ ಚೌಕಟ್ಟಿನಲ್ಲಿ ದೋಷವಿರಬಹುದಲ್ಲವೇ ಎಂದು ಯೋಚಿಸುವುದರಲ್ಲಿ ಮತ್ತು ತರ್ಕಬದ್ದವಾಗಿ ಅದನ್ನು ತೋರಿಸುವುದರಲ್ಲಿ ತಪ್ಪೇನಿದೆ. ಹಾಗೆ ಹೇಳಿದರೆ ಈ ರೀತಿಯ ಅನ್ಯಾಯ ಅವಮಾನ ಶೋಷಣೆಗಳೇ ನಡೆಯುತ್ತಿಲ್ಲ ಎಂದಂತಾಗುತ್ತದೆಯೇ? ಇಲ್ಲ ಅವು ಇನ್ನೂ ಸರಿಪಡಿಸದಿರಲಿಕ್ಕೆ ಕಾರಣಗಳನ್ನು ಹುಡುಕಿ ಪರಿಹಾರ ಕಂಡುಹಿಡಿಯುವ ಪ್ರಯತ್ನಮಾಡಬೇಕು ಎನ್ನುವ ಕಾಳಜಿ ಕಾಣುತ್ತದೆಯೇ?

4.ಈ ಮೂಲಕ ಒಂದೆಡೆ ಅನ್ಯಾಯದ ಯಾವುದಾದರೂ ಅನುಭವಗಳು ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟದ ನಡುವೆ ಸಂಬಂಧವನ್ನು ಬೆಸೆಯಲಾಯಿತು. ಇದು ಅತ್ಯಂತ ನಕಾರಾತ್ಮಕ ಭಾವನೆ ಮತ್ತು ನಡವಳಿಕೆಗಳಿಂದ ಪ್ರಚೋದಿತ ಮಾದರಿಯ ಸಾಮಾಜಿಕ ನ್ಯಾಯಕ್ಕಾಗಿನ ಚಳುವಳಿಗಳನ್ನು ಹುಟ್ಟುಹಾಕಿತು. ಇಲ್ಲಿನ ಸಾಮಾಜಿಕ ಸ್ವರೂಪವನ್ನು ಮತ್ತು ಅದನ್ನು ಉಳಿಸಿಕೊಂಡು ಬರುವಂಥ ಗುಂಪುಗಳನ್ನು ನಾಶಪಡಿಸುವುದೊಂದೇ ನ್ಯಾಯವನ್ನು ತರಲು ಇರುವ ಮಾರ್ಗವೆಂದು ಈ ಚಳುವಳಿಗಳು ವಾದಿಸಿದವು”(ಪು.88). ಈ ವಾಕ್ಯಗಳಲ್ಲಿನ ‘ಗುಂಪು’ ಎನ್ನುವಲ್ಲಿ ಬ್ರಾಹ್ಮಣ ಜಾತಿ ಎಂದು ಸೂಚ್ಯವಾಗಿ ಹೇಳುತ್ತದೆ ಈ ಸಂಶೋಧನೆ ಹೇಳುತ್ತದೆ ಎನ್ನುತ್ತಾರೆ. ಇಲ್ಲಿ ಹಾಗೆ ಹೇಳಿದರೆ ತಪ್ಪೇನು? ದಲಿತರಿಗಾಗುತ್ತಿರುವ ಅನ್ಯಾಯಗಳಿಗೆ ಬ್ರಾಹ್ಮಣ ಜಾತಿಗಳವರೇ ಕಾರಣ ಹಾಗಾಗಿ ಆ ಜಾತಿಯವರೆನ್ನೆಲ್ಲಾ ನಾಶ ಪಡಿಸಬೇಕು ಅಂದರೆ ಕೊಲ್ಲಬೇಕು ಎಂದೇ ಹೇಳಬೇಕು ಎಂದು ಚೆನ್ನಿಯವರು ವಾದಿಸುತ್ತಿದ್ದಾರೆಯೇ? ಜಾತಿವ್ಯವಸ್ಥೆಯ ಸಿದ್ದಾಂತ ಇದೆ ಎಂದು ಸಾಬೀತು ಮಾಡಿದರೂ ಸಹ ಹೀಗೆ ಓರ್ವಮನುಷ್ಯ ಮಾತನಾಡಲು ಸಾಧ್ಯವಿಲ್ಲ. ಜಾತಿವ್ಯವಸ್ಥೆ ಇದೆ ಎಂದು ಯಾರೂ ವೈಜ್ಞಾನಿಕವಾಗಿ ಸಾಬೀತು ಮಾಡದಿರುವ ಸಂದರ್ಭದಲ್ಲಿಯೂ ಇದನ್ನೇ ನಂಬಬೇಕು ಮತ್ತು ಅದರಂತೆಯೇ ಮಾಡಬೇಕು ಎನ್ನುವುದು ಶೈಕ್ಷಣಿಕ ಚರ್ಚೆಯೇ ಅಥವಾ ಫ್ಯಾಸಿಸ್ಟ್ ದ್ವೇಷದ ಕಿಡಿಹಚ್ಚುವ ಕೊಲೆಗಡುಕ ವಾದವೋ?

5.ವಿವೇಕಾನಂದರು ಮಲಬಾರಿನಲ್ಲಿ ನಾಯರ‍್ ಜಾತಿಯವರ ಎದುರು ಪರೆಯಾಗಳು (ದಲಿತರು) ಬೀದಿಯಲ್ಲಿ ಬರಬಾರದು ಎಂಬುದನ್ನು ಖಂಡಿಸಿದ ಸಂಗತಿಯೂ ಕೂಡಾ ವಸ್ತು ಸಂಗತಿಯಲ್ಲ. ಅದು ಜಾತಿ ತಾರತಮ್ಯದ ಕತೆಗಳಿಂದ ಪ್ರೇರಿತವಾದ ತಪ್ಪು ನಿರೂಪಣೆಯೆಂದು ಬಾಲು ವಾದಿಸುತ್ತಾರೆ. ಎನ್ನುವ ಚೆನ್ನಿಯವರಿಗೆ ಈ ಸಂಗತಿಯನ್ನು ವಿವರಿಸುವ ಚೌಕಟ್ಟಿನಿಂದಾಗಿ ಈ ರೀತಿಯ ಘಟನೆಗಳಿಗೆ ವಿಭಿನ್ನ ಅರ್ಥಬರುವಂತೆ ಮಾಡಿಬಿಡಬಹದು. ಹೀಗಾಗಿ ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ಇಟ್ಟು ನೋಡಿದರೆ ಅದು ಜಾತಿಶೋಷಣೆಯ ಅರ್ಥವೇ ಕೊಡುತ್ತದೆ ಎನ್ನುವ ಬಾಲು ವಾದವನ್ನು ಅರ್ಥೈಸುವುದಿಲ್ಲ. ಈ ಸಂದರ್ಭದಲ್ಲಿ ಬರುವ ಬಾಲುವಿನ ವಾಕ್ಯವನ್ನೇ ನೋಡುವ:
ಆದರೆ ಇದರಿಂದ ನಮಗೆ ತಿಳಿದುಬರುವುದಾದರೂ ಏನು? ಮಲಬಾರ್ ಮತ್ತು ಕೊಚ್ಚಿನ್ ಗಳಲ್ಲಿ ನಾಯರ‍್ ಗಳ ಸೇವಕರು ತಮ್ಮ ಧಣಿಗಳು ರಸ್ತೆಯಲ್ಲಿ ಬರುವಾಗ ಅವರ ಬರುವಿಕೆಯನ್ನು ಪ್ರಕಟಿಸುತ್ತಿದ್ದರು, ಆಗ ‘ಪೆರಿಯರು’ ಮತ್ತು ‘ಇತರರು’ ನಾಯರ‍್ ಗಳ ಕಣ್ಣಿಗೆ ಕಾಣದಂತೆ ಅಡಗಿಕೊಳ್ಳುತ್ತಿದ್ದರು. ಇದು ‘ಜಾತಿ ತಾರತಮ್ಯ’ವನ್ನು ಸೂಚಿಸುತ್ತದೆಯೋ ಅಥವಾ ಇತಿಹಾಸದ ಮೂಲಕ ನಮಗೆ ಹೆಚ್ಚು ಪರಿಚಿತವಿರುವ ಶ್ರೀಮಂತರು/ಆಧಿಕಾರವರ್ಗದವರು/ಮೇಲಂತಸ್ತಿನವರು ಇತರರ ಬಗ್ಗೆ ಹೊಂದಿರುವ ಧೋರಣೆಯನ್ನು ಸೂಚಿಸುತ್ತದೆಯೋ? ಜಗತ್ತಿನ ಹಲವಾರು ಕಡೆ ಗಣ್ಯವ್ಯಕ್ತಿಗಳ ಬರುವಿಕೆಯನ್ನು ಕೂಗಿ ಪ್ರಕಟಿಸುವ ‘ಘೋಷಕ’ನನ್ನು ಇಟ್ಟುಕೊಳ್ಳುವ ಪ್ರತೀತಿ ಇತ್ತು, ಈಗಲೂ ಇದೆ. ಗಣ್ಯವ್ಯಕ್ತಿಗಳು ಬರುವಾಗ ಅವರ ಸಾಲಿಗೆ ಸೇರದವರು ತಮ್ಮ ಮಂಡಿಗಳ ಮೇಲೆ ನಿಂತು, ತಲೆತಗ್ಗಿಸುವ, ಮುಖವನ್ನು ಮುಚ್ಚಿಕೊಳ್ಳುವ ಅಥವಾ ಪಕ್ಕಕ್ಕೆ ಸರಿದುಕೊಳ್ಳುವ ಮೂಲಕ ಗೌರವವನ್ನು ಸೂಚಿಸಲು ಅನುವು ಮಾಡಿಕೊಡುವುದು ಇದರ ಹಿಂದಿನ ಉದ್ದೇಶ. ಇಂದು ನಮ್ಮ ರಸ್ತೆಗಳಲ್ಲಿ ‘ಗಣ್ಯರು’/ವಿ.ಐ.ಪಿಗಳು ಬರುವಾಗ ಪೋಲಿಸ್ ಬೆಂಗಾವಲು ಪಡೆಗಳು ಮತ್ತು ಕೂಗುತ್ತಿರುವ ಸೈರನ್ಗಳು ರಸ್ತೆಯನ್ನು ತೆರವುಗೊಳಿಸುತ್ತವೆ. ಇದು ‘ಭಯೋತ್ಪಾದಕ ದಾಳಿಯನ್ನು’ ತಪ್ಪಿಸುವ ಒಂದು ಸಾಧನ ಎಂದು ಸಮರ್ಥನೆ ನೀಡಿದರೂ ಸಹ ನಾನು ಇದನ್ನು ಹಳೆಯ ಪದ್ಧತಿಯಾದ ಘೋಷಕನ ಆಧುನಿಕ ಮಾದರಿಯೆಂದೇ ನೋಡುತ್ತೇನೆ. ಹಿಂದೆ ಮಲಬಾರಿನ ನಾಯರ್ಗಳು ಬಳಸುತ್ತಿದ್ದ ‘ಘೋಷಕ’ ಇಂದಿನ ಈ ಸೈರನ್ ಮುಂತಾದವುಗಳನ್ನು ಬಳಸುವ ಆಚರಣೆಗೆ ಸಮಾನವಲ್ಲವೇ?

ಯಾವುದೇ ಒಂದು ನಿಜಾಂಶದ ‘ನಿಜಾಂಶ-ತನ’ (Facticity of a fact) ಎನ್ನುವುದು ಆ ನಿಜಾಂಶವು ಹೇಗೆ ವಿವರಿಸಲ್ಪಡುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಮೇಲಿನ ನಿಜಾಂಶವನ್ನು ‘ಜಾತಿವ್ಯವಸ್ಥೆ’ಗೆ ಸಂಬಂಧಿಸಿದ್ದೆಂದು ವಿವರಿಸಿದರೆ, ಅದು ‘ಜಾತಿ ಸಂಬಂಧಿತ’ ನಿಜಾಂಶವಾಗುತ್ತದೆ. ಅದನ್ನೇ (ಮೇಲಿನ ಉಲ್ಲೇಖಗಳು ಸೂಚಿಸುವಂತೆ) ಅಂತಸ್ತಿನವಿಚಾರಕ್ಕೆ ಸಂಬಂಧಿಸಿದ್ದೆಂದು ವಿವರಿಸಿದರೆ, ನಾವು ‘ಫ್ಯೂಡಲ್ ಸವಲತ್ತು’ಗಳನ್ನು ಟೀಕಿಸುವ ಬೂರ್ಜ್ವಾಗಳಾಗಿಬಿಡುತ್ತೇವೆ. ಸೈರನ್ ಇತ್ಯಾದಿಗಳ ಬಳಕೆಯನ್ನು ‘ಭಯೋತ್ಪಾದನೆ’ ಕುರಿತು ಭ್ರಾಂತಿಗೀಡಾಗುವಷ್ಟು ಬೆಳೆದಿರುವ ಭಯದ ಪರಿಣಾಮವೆಂದು ವಿವರಿಸಿದರೆ ಅದು ಇಂದಿನ ರಾಜಕೀಯ ಜಗತ್ತಿನ ಕುರಿತ ನಿಜಾಂಶವಾಗುತ್ತದೆ. ಇದು ‘ನಡವಳಿಕೆ ಮತ್ತು ರೂಢಿಗೆ’ ಸಂಬಂಧಿಸಿದ ಪ್ರಶ್ನೆಯೆಂದು ಪರಿಗಣಿಸಿದರೆ ಇದು ಪ್ರಾಚೀನ ಮಲಬಾರಿನ ಜನರಿಗಷ್ಟೇ ಸೀಮಿತವಾದ ವಿವರಣೆಯಾಗುತ್ತದೆ. ಅದನ್ನೇ ‘ಜಾತಿಗೆ ಸಂಬಂಧಿಸಿದ ಸಂಗತಿ’ ಎಂದು ನೋಡಿದರೆ, ಅದು ಆಧುನಿಕ ಭಾರತದ ಕಳಂಕವೊಂದರ ಕುರಿತು ಮಾಡಿದ ದೋಷಾರೋಪಣೆಯಾಗಿ ಬಿಡುತ್ತದೆ.
ಈ ವಿವರಣೆಯು ನಡೆದ ವಸ್ತು ಸಂಗತಿಯನ್ನು ನಿರಾಕರಿಸುತ್ತದೆಯೋ ಅಥವಾ ನಡೆದ ಸಂಗತಿಯನ್ನು ವಿವರಿಸುವ ಚೌಕಟ್ಟಿನಿಂದಾಗಿ ನಡೆದ ಸಂಗತಿಯನ್ನು ತಪ್ಪಾಗಿ ಗ್ರಹಿಸಲಾಗುತ್ತದೆ ಎನ್ನುವ ವಾದ ಬರುತ್ತದೆಯೋ?

6.ಚೆನ್ನಿಯವರು ಅತ್ಯಂತ ಬುದ್ದಿವಂತಿಕೆಯಿಂದ ಒಂದು ಟಿಪ್ಪಣಿಯನ್ನು ಉಲ್ಲೇಖಿಸಿ ಇಡೀ ಸಂಶೋಧನಾ ತಂಡದ ಮನುಷ್ಯತ್ವವನ್ನೇ ಪ್ರಶ್ನಿಸುತ್ತಾರೆ. ಆ ಸಾಲುಗಳು ಹೀಗಿವೆ -“ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ದಲಿತರೇ ಇರುವಾಗ (2001 ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗಳು 16 ಪ್ರತಿಶತ, ಪರಿಶಿಷ್ಟ ಬುಡಕಟ್ಟಿನವರು 8 ಪ್ರತಿಶತಕ್ಕಿಂತ ಮೇಲಿದ್ದಾರೆ), ಕೇವಲ 38 ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯತೆ ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ? (ಪು. 123). ಎನ್ನುವ ಸಾಲಿಗೆ ಉಲ್ಲೇಖಿಸಿ ಮುಂದಿನ ವಾಕ್ಯವನ್ನು ಬೇಕೆಂದೇ ಮರೆಮಾಚಿ ಅಡಿಟ್ಟಿಪಣಿಯ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಮರೆಮಾಚಿದ್ದರ ಮರ್ಮವೇನೆಂದರೆ ಅದಕ್ಕೆ ಆ ಸಾಲಿನ ನಂತರ ಇರುವ ಮುಂದಿನ ವಾಕ್ಯವನ್ನು ನೋಡಿ: ಈ ಹೇಳಿಕೆಯ ವಿಲಕ್ಷಣತೆಯನ್ನು ಕಾಣಬೇಕೆಂದರೆ ಮೇಲಿನ ಅಂಕಿ ಅಂಶಗಳ ಜೊತೆ ಆಂಧ್ರಪ್ರದೇಶದಲ್ಲಿ (1999 ರಲ್ಲಿ) ಗುರುತಿಸಲಾದ ಒಟ್ಟು ಅಪರಾಧಗಳ ಯಾದಿಯನ್ನು ಇಟ್ಟು ತುಲನೆ ಮಾಡಿ ನೋಡಿ: ಆಂಧ್ರಪ್ರದೇಶದಲ್ಲಿ 1999ರಲ್ಲಿ ನಡೆದ ಒಟ್ಟು ಕೊಲೆಗಳ ಸಂಖ್ಯೆ 2519, ಅತ್ಯಾಚಾರಗಳು 854. ಒಟ್ಟೂ 2519 ಕೊಲೆಗಳು ಹಾಗೂ 854 ಅತ್ಯಾಚಾರದ ಪ್ರಕರಣಗಳಲ್ಲಿ ಯಾವ ಬಗೆಯ ಮಾದರಿಯನ್ನಾದರೂ ಪಡೆದುಕೊಳ್ಳಬಹುದು. ಅದರಲ್ಲಿ ಕೊನೆ ಪಕ್ಷ 38 ಪ್ರಕರಣಗಳಲ್ಲಾದರೂ ಬಿಳಿ ಕೂದಲಿನವರಿಂದ ಕಪ್ಪು ಕೂದಲಿನವರ ಕೊಲೆಯಾದ ಪ್ರಕರಣಗಳಿರುತ್ತವೆ. ಹಾಗೆಂದು ಬಿಳಿ ಕೂದಲಿರುವವರು ಕಪ್ಪು ಕೂದಲಿರುವವರನ್ನು ದ್ವೇಷಿಸುತ್ತಾರೆ ಹಾಗು ಅವರನ್ನು ಶೋಷಿಸುತ್ತಾರೆ ಎನ್ನಲಾದೀತೆ?
ಇದರರ್ಥ, ಆದ ಕೊಲೆಗಳು ಮತ್ತು ಅತ್ಯಾಚಾರಗಳನ್ನು ಖಂಡಿಸಬಾರದೆಂದಲ್ಲ. ಅದು ನಮ್ಮ ಉದ್ದೇಶವೂ ಅಲ್ಲ. ಆದರೆ ಈ ರೀತಿಯ ದೋಷಯುಕ್ತ ವಿಶ್ಲೇಷಣೆಗಳಿಂದ ಇದ್ದ ಸಮಸ್ಯೆ ಬಗೆಹರಿಯುವುದು ಹಾಗಿರಲಿ, ಅದನ್ನು ಅರ್ಥಮಾಡಿಕೊಳ್ಳಲೂ ಆಗುವುದಿಲ್ಲ ಎಂಬುದಷ್ಟೇ ಇಲ್ಲಿನ ವಾದ.
ಇದನ್ನು ಗಮನಿಸಿದರೆ ಮೇಲ್ನೋಟಕ್ಕೆ ಈ ರೀತಿಯ ಹೇಳಿಕೆಗೆಳು ವಿಲಕ್ಷಣದಂತೆ ಕಾಣುವುದು ಎನ್ನುವುದನ್ನು ಲೇಖಕರೇ ಒಪ್ಪಿಕೊಂಡು ಅದನ್ನು ಈ ವಿಲಕ್ಷಣತೆಯನ್ನು ಈ ರೀತಿಯ ಅಪರಾಧಗಳ ಒಟ್ಟು ಪ್ರಮಾಣಗಳನ್ನು ಇಟ್ಟುಕೊಂಡು ನೋಡಿದಾಗ ಈ ದಲಿತ ಜಾತಿಗಳಿಗೆ ಸೇರಿರುವವರೂ ಇದ್ದೇ ಇರುತ್ತಾರೆ. ಅದೇ ಅಲ್ಲಿ ನಡೆಯುವ ಒಟ್ಟು ಕೊಲೆಗಳಲ್ಲಿ ದಲಿತರ ಅನುಪಾತಕ್ಕಿಂತ ಅತಿಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದರೆ ಆಗ ಖಂಡಿತ ಅದು ವಿಶೇಷವಾಗಿ ದಲಿತರ ಮೇಲಿನ ದೌರ್ಜನ್ಯದ ಅಪರಾಧಗಳೆಂದೇ ತೀರ್ಮಾನಿಸಲು ಸಾಧ್ಯವಾಗುತ್ತದೆ. ಕೊಲೆ ಅತ್ಯಾಚಾರದ ಸಮಸ್ಯೆಗಳನ್ನು ಪರಿಹರಿಸಲು ದೋಷಯುಕ್ತ ವಿಶ್ಲೇಷಣೆಗಳು ಅಡ್ಡಿಯಾಗುತ್ತವೆ ಎನ್ನುವ ಇಂಗಿತವಿದೆಯೇ ವಿನಃ ಹೆಚ್ಚಿನ ದಲಿತರ ಕೊಲೆ ಮಾಡಬೇಕು ಎಂದು ಹೇಳುವ ಅಮಾನುಷ ಮನಸ್ಥಿತಿಯವರು ಈ ತಂಡದವರು ಎಂದ ತೋರಿಸುವಂತಹ ಯಾವ ತರ್ಕವಿದೆ ಇಲ್ಲಿ. ಜೊತೆಗೆ ಅವರೇ ಉಲ್ಲೇಖಿಸುವ ಅಡಿ ಟಿಪ್ಪಣಿಯಲ್ಲಿ ಬೇಕೆಂದೇ ಮೊದಲನೇ ವಾಕ್ಯವಾದ ಇದು ಅಸಾಧ್ಯವೆಂದೇನು ನಮ್ಮ ಊಹೆಯಲ್ಲ ಸಾಲನ್ನು ಬಿಟ್ಟು ಇಂಥ ದೊಡ್ಡ ಹೇಳಿಕೆಯನ್ನು ಸಮರ್ಥಿಸಲು ವಿಸ್ತಾರವಾದ ಸೈದ್ಧಾಂತಿಕ ಚರ್ಚೆ ಮತ್ತು ಒಂದು ಸಿದ್ಧಾಂತದ ಅವಶ್ಯಕತೆ ಇರುತ್ತದೆ’ ಸಾಲನ್ನು ಮಾತ್ರ ಉಲ್ಲೇಖಿಸುವ ಮರ್ಮವೇನು? ಟಿಪ್ಪಣಿಯನ್ನು ಒಟ್ಟಾಗಿ ಓದಿದರೆ ಬರುವ ಅರ್ಥವೇನು? ಕೊಲೆಗಳ ಸಂಖ್ಯೆ ಕಡಿಮೆ ಇದ್ದರೂ ಸಹ ಜಾತಿ ತಾರತಮ್ಯದಿಂದಾಗಿ ಈ ದಲಿತರ ಕೊಲೆಗಳಾಗುತ್ತಿವೆ ಎನ್ನವ ವಾದ ಅಸಾಧ್ಯವೇನೂ ಅಲ್ಲ. ಅದು ನಡೆಯುತ್ತಿರಲೂಬಹದು. ಆದರೆ ಆ ರೀತಿಯ ವಿವರಣೆಯನ್ನು ಸಾಬೀತು ಮಾಡಬೇಕೆಂದರೆ ಇನ್ನೂ ಹೆಚ್ಚಿನ ವಿಸ್ತಾರವಾದ ಸೈದ್ದಾಂತಿಕ ಚರ್ಚೆ ಮತ್ತು ಸುಸಂಬದ್ದವಾಗಿ (ಅಂದರೆ ಕೊಲೆಗಳ ಸಂಖ್ಯೆ ಅಮುಖ್ಯವನ್ನಾಗಿಸುವ) ಒಂದು ಸಿದ್ದಾಂತವನ್ನು ನೀಡಬೇಕಾಗುತ್ತದೆ. ಇಲ್ಲವಾದರೆ ಅದು ವಿಲಕ್ಷಣ ವಿವರಣೆ ಎಂದೇ ತಾರ್ಕಿಕವಾಗಿ ಅನಿಸುತ್ತದೆ ಎನ್ನಲಾಗಿದೆ. ಹೀಗಿರುವಾಗ ಚೆನ್ನಿಯವರು ಇದಕ್ಕೆ ಪೂರಕವಾಗಿ ಸೈದ್ಧಾಂತಿಕ ವಿವರಣೆಯ ಅಗತ್ಯವನ್ನು ಕೇಳುತ್ತಿರುವುದನ್ನು ಮರೆಮಾಚಲು ಮತ್ತು ನಾವು ದಲಿತ ವಿರೋಧಿಗಳು ಮಾತ್ರವಲ್ಲ ಹೆಚ್ಚಿನ ಕೊಲೆಗಳು ನಡೆಯಬೇಕು ಎನ್ನುವ ಮನಸ್ಥಿತಿಯವರು ಎನ್ನುವಂತೆ ಬಿಂಬಿಸಲು ಸಾಲುಗಳನ್ನು ಕತ್ತರಿಸಿ ವಾದದ ಸಂದರ್ಭದಿಂದ ಬೇರೆಮಾಡಿ ಅಪರಾಧಿಗಳನ್ನಾಗಿ ಮಾಡುವ ಯುಕ್ತಿಯನ್ನೇಕೆ ಮಾಡುತ್ತಿದ್ದಾರೆ?

7.ಕೆಳಜಾತಿಗಳಿಂದಲೇ ಜಾತಿವ್ಯವಸ್ಥೆ ಎಂದು ಬಾಲು ಹೇಳುತ್ತಾರೆ ಎನ್ನುವಂತೆ ತೋರಿಸಲು ಚೆನ್ನಿಯವರು ಪ್ರಯತ್ನಿಸುತ್ತಾರೆ ಅದಕ್ಕೆ ಅವರು ಈ ಸಾಲುಗಳನ್ನು ಉಲ್ಲೇಖಿಸುತ್ತಾರೆ: “ಮಾದಿಗರಲ್ಲಿನ ಆಂತರಿಕ ರಚನೆ ಹಾಗೂ ಹೊಲೆಯೆ ಜೊತೆಗಿನ ಅವರ ಒಡನಾಟದ ಸ್ವರೂಪವನ್ನು ಭಾರತೀಯ ಸಮಾಜದ ರಚನೆ ಎಂಬ ತಪ್ಪು ನಂಬಿಕೆಯನ್ನು ಬೆಳೆಸಿಕೊಂಡ ಐರೋಪ್ಯರು ಈ ‘ನಿಜ’ವನ್ನು ಒಳಗೊಳ್ಳಲು ಒಂದು ಸೈದ್ಧಾಂತಿಕ ಚೌಕಟ್ಟನ್ನು ಹುಡುಕಿದರು. ಹಾಗೂ ಅವರು ಅದನ್ನು ಪುರುಷಸೂಕ್ತ ಹಾಗೂ ಮನುಸ್ಮೃತಿಯಲ್ಲಿ ಕಂಡರು. ಅನಂತರ ಇಂಥ ರಚನೆಯನ್ನು ಎಲ್ಲರ ಮೇಲೆ ಬಲಾತ್ಕಾರವಾಗಿ ಹೇರಿದ ‘ಅಪರಾಧಿ’ಗಳಿಗಾಗಿ ಹುಡುಕಾಡಿದರು. ಅವರಿಗೆ ‘ಬ್ರಾಹ್ಮಣ ಪುರೋಹಿತರು’ ಸಿಕ್ಕಿದರು(ಪು.233).
ಇದರಿಂದ ಏನು ಹೇಳಬಹುದು! ಜಾತಿ ವ್ಯವಸ್ಥೆಯ ಕುರಿತು ಅವರಿಗಿರುವ ಗೀಳಿಗೆ ಕಾರಣ ಹೈರಾರ್ಕಿಯು ಅವರ ಜೀವನದಲ್ಲಿ ನಿತ್ಯ ಅನುಭವ. ಆದರೆ ಗಮನಿಸಬೇಕಾದ ವಿಚಾರವೆಂದರೆ, ಈ ಅನುಭವಕ್ಕೆ ಬ್ರಾಹ್ಮಣರು ಕಾರಣರಲ್ಲ. ಬದಲಿಗೆ ಅವರದೇ ಜಾತಿಯವರು ( ಪು.233 ಮತ್ತು 234).

ಈ ಉಲ್ಲೇಖಗಳ ವಾದದ ಸಂದರ್ಭವನ್ನು ಮತ್ತು ಸ್ವರೂಪವನ್ನು ಬೇಕೆಂದೇ ಚೆನ್ನಿಯವರು ಮರೆಮಾಚಿರುವಂತೆ ತೋರುತ್ತದೆ. ಅದನ್ನು ಅರಿಯಬೇಕೆಂದರೆ ಈ ಉಲ್ಲೇಖಕ್ಕೆ ಹಿಂದೆ ಇದ್ದ ಪ್ಯಾರಾವನ್ನು ನೋಡಬೇಕು:
ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಸಂಶೋಧನೆಯನ್ನು ಬಳಸಿ ನಾನು ನಿದರ್ಶನವನ್ನು ನೀಡುತ್ತೇನೆ. ಇಲ್ಲಿನ ಸಂಶೋಧಕರು ಬ್ರಾಹ್ಮಣರಿಂದ ಕುರುಬರವರೆಗೆ ಸಾಮಾಜಿಕ ಶ್ರೇಣೀಕರಣವನ್ನು ಗುರುತಿಸಲು ಪ್ರಯತ್ನಿಸಿದರು. ಅವರಿಗೆ ಶ್ರೇಣೀಕರಣದ ಒಂದು ನಮೂನೆ ಸಿಗಲಿಲ್ಲ, ಬದಲಿಗೆ ಪರಸ್ಪರ ವಿರುದ್ಧವಾದ ಅನೇಕ ನಮೂನೆಗಳು ಸಿಕ್ಕವು. ಈ ಸಂಶೋಧನೆಯು ತೋರಿಸುವಂತೆ ಭಾರತೀಯ ಸಮಾಜದಲ್ಲಿ (ವರ್ಣವ್ಯವಸ್ಥೆಗೆ ಅನುಗುಣವಾದ) ಶ್ರೇಣೀಕರಣವನ್ನು ಹುಡುಕುವುದು ಮೂರ್ಖತನ. ಅನಂತರ ಸಂಶೋಧನೆಯ ಮುಂದಿನ ಹಂತ ಬರುತ್ತದೆ. ಅದರ ಕುರಿತು ನಾವು ಹೆಚ್ಚು ಎಚ್ಚರಿಕೆಯಿಂದ ಆಲೋಚಿಸುವ ಅಗತ್ಯವಿದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಮಾದಿಗರ ನಡುವೆ ‘ಜಾತಿ’ ವಿಭಾಗಗಳಿವೆಯೆ? ಮದುವೆ, ಊಟ, ಮನೆಪ್ರವೇಶ, ವಿಧಿಗಳು, ಹಾಗೂ ಹಬ್ಬಗಳು ಇತ್ಯಾದಿಗಳ ಕುರಿತು ಮಾದಿಗರೊಳಗೇ ‘ಕಟ್ಟಳೆ’ಗಳಿವೆಯೆ? ನಾನು ಈ ಆಂತರಿಕ ವ್ಯತ್ಯಾಸದ ಕುರಿತೇ ಮಾತನಾಡುತ್ತಿದ್ದೇನೆ. ನನ್ನ ಊಹಾಸಿದ್ಧಾಂತದ ಪ್ರಕಾರ ಅನೇಕ ಆಯಾಮಗಳನ್ನಿಟ್ಟುಕೊಂಡು (ಹಾಗೂ ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಿಲ್ಲೊಂದು ಪ್ರಕಾರದ ಒತ್ತನ್ನು ನೀಡುತ್ತ) ಕ್ಷೇತ್ರಕಾರ್ಯವನ್ನು ನಡೆಸಿದಲ್ಲಿ ಮಾದಿಗ ಸಮುದಾಯದಲ್ಲೇ ಶ್ರೇಣೀಕರಣವನ್ನು ನಾವು ಕಾಣುತ್ತೇವೆ. ಮುಂದಿನ ಹೆಜ್ಜೆಯೆಂದರೆ ಮಾದಿಗರೊಳಗೆ ಇರುವ ಶ್ರೇಣೀಕರಣವನ್ನು ಹೊಲೆಯರ ಒಳಗಿರುವ ಶ್ರೇಣೀಕರಣದ ಜೊತೆ ತುಲನೆ ಮಾಡುವುದು. ಆ ಹಂತದಲ್ಲಿ ಕೆಳಜಾತಿಯವರೆಂದು ಕರೆಯುವವರವಲ್ಲಿನ ಶ್ರೇಣಿಕರಣದ ಕುರಿತು ನನ್ನ ಊಹಾಸಿದ್ಧಾಂತದಲ್ಲೇನಾದರೂ ಬದಲಾವಣೆ ಬೇಕೊ ಬೇಡವೊ ಎಂಬುದು ಗೊತ್ತಾಗುತ್ತದೆ. (233)

ಇಡೀ ಭಾರತೀಯ ಸಮಾಜಕ್ಕೆ ಅನ್ವಯವಾಗುಂತ ‘ಜಾತಿ ವ್ಯವಸ್ಥೆ’ ಶ್ರೇಣೀಕರಣವನ್ನು ಗುರುತಿಸಲು ಯಾವುದೇ ಕ್ಷೇತ್ರಾಧ್ಯಯನಗಳು ಸಫಲವಾಗಿಲ್ಲ. ಹಾಗಿದ್ದರೂ ಶ್ರೇಣೀಕರಣದ ಆಧರಿತ ಜಾತಿವ್ಯವಸ್ಥೆ ಎಂಬ ಸಾಮಾಜಿಕ ರಚನೆ ಭಾರತದಲ್ಲಿದೆ ಎನ್ನುವ ಐರೋಪ್ಯರ ತೀರ್ಮಾನ ಎಲ್ಲಿಂದ ಬರುತ್ತದೆ ಎನ್ನುವುದನ್ನು ವಿವರಿಸಲು ಬಾಲಗಂಗಾಧರರು ಒಂದು ಊಹಾ ಸಿದ್ದಾಂತವನ್ನು ಮುಂದಿಡುತ್ತಾರೆ. ಇದನ್ನು ಕಂಡುಕೊಂಡಿರುವ ವಾಸ್ತವವೆಂದೇನೂ ಬಾಲು ಹೇಳುವುದಿಲ್ಲ. ಬದಲಾಗಿ ಶ್ರೇಣೀಕರಣದ ವಿವರಣೆಗಳನ್ನು ಅರ್ಥಮಾಡಿಕೊಳ್ಳಲು ಒಂದು ಊಹಾಸಿದ್ದಾಂತವನ್ನು ಇಡುತ್ತಿದ್ದೇನೆ. ಇದು ಕ್ಷೇತ್ರ ಕಾರ್ಯದಿಂದ ಪರೀಕ್ಷಿಸಲ್ಪಡಬೇಕು ನಂತರ ಈ ಊಹಾಸಿದ್ದಾಂತದಲ್ಲಿ ಬದಲಾವಣೆಯೂ ಆಗಬಹುದು ಎನ್ನುವುದನ್ನು ಸ್ಪಷ್ಟವಾಗಿಯೇ ಹೇಳಿದ್ದಾರೆ. ಹೀಗಿದ್ದ ಮೇಲೆ ಜಾತಿವ್ಯವಸ್ಥೆಯ ಹುಟ್ಟಿಸಿ ಹರಡಿದ ಹೊಣೆಯನ್ನು ದಲಿತರ ಮೇಲೆ ಹೇರುವ ಹುನ್ನಾರ ಮಾಡುತ್ತಿದ್ದಾರೆ ಎನ್ನುವ ತಪ್ಪುಕಲ್ಪನೆಯನ್ನು ಬಿತ್ತುವ ಪ್ರಯತ್ನವನ್ನು ಚೆನ್ನಿಯವರೇಕೆ ಮಾಡುತ್ತಿದ್ದಾರೆ. ಇದರ ಬದಲಿಗೆ ಇನ್ನೂ ಇದು ಊಹಾ ಸಿದ್ದಾಂತವಾದ್ದರಿಂದ ತಮ್ಮ ಅಧ್ಯಯನದ ಮೂಲಕ ಇದು ತಪ್ಪು ಎಂದು ತೋರಿಸಿದರೆ ಈ ಊಹಾಸಿದ್ದಾಂತವೇ ಬಿದ್ದು ಹೋಗುತ್ತದೆ ಅಲ್ಲವೇ? ಆದರೆ ಅದಕ್ಕೆ ಸಂಶೋಧನೆ, ಅಧ್ಯಯನ ಮಾಡಬೇಕು ಇದರ ಬದಲಿಗೆ ಆರೋಪ ಹೊರಿಸಿಬಿಟ್ಟರೆ ಅಪರಾಧಿಗಳನ್ನಾಗಿ ಮಾಡಿಬಿಟ್ಟರೆ ಆ ಶ್ರಮದ ಅಗತ್ಯವೇ ಇಲ್ಲವಲ್ಲ.

8.ಇನ್ನೂ ಮೀಸಲಾತಿಯ ಬಗ್ಗೆ ಸಂಶೋಧನಾ ತಂಡದ್ದೇ ಸಾಲುಗಳನ್ನು ಉದ್ದರಿಸುತ್ತೇನೆ ಎಂದು ವಾದದ ಮಧ್ಯದಿಂದ ಕಡಿಮೆ ಅಂಕಗಳನ್ನು ಗಳಿಸಿದರೂ ಮುಂದಿನ ತರಗತಿಗೆ ತೇರ್ಗಡೆಗೊಳಿಸುವ ಮತ್ತು ಕೆಲಸ ಕೊಡಿಸುವಂತಹ ಮೀಸಲಾತಿಯು ಜನರಿಗೆ ಹೆಚ್ಚು ಪರಿಶ್ರಮ ಪಡದೆಯೇ ಫಲವನ್ನು ಅನುಭವಿಸುವಂತೆ ಪ್ರೋತ್ಸಾಹಿಸುತ್ತದೆ ಎನ್ನುವ ವಾಕ್ಯವನ್ನು ಎತ್ತಿ ಇಟ್ಟು ಅಲ್ಲಿರುವ ವಾದವನ್ನು ಕೈಬಿಡುತ್ತಾರೆ ಈ ವಾಕ್ಯವಿರುವ ಪ್ಯಾರಾದ ವಾದ ಇದು:
“ಜಾತಿಯಾಧಾರಿತ ಮೀಸಲಾತಿಯ ವಿರುದ್ಧ ಮಾಡಬಹುದಾದ ಅತ್ಯಂತ ಡೊಡ್ಡ ಆಪಾದನೆಯೆಂದರೆ, ಇದು ಸಮಾಜದ ಹಾಗೂ ಎಲ್ಲದಕ್ಕಿಂತಲೂ ಹೆಚ್ಚಾಗಿ ‘ಕೆಳ ಜಾತಿ’ಯವರ ಅವನತಿಗೆ ಕಾರಣವಾಗುತ್ತದೆ ಮತ್ತು ಕಾರಣವಾಗುತ್ತಿದೆ. ತಾರ್ಕಿಕವಾಗಿ ಈ ವಿಚಾರವನ್ನು ಸರಳವಾಗಿ ಹೀಗೆ ವಿವರಿಸಬಹುದು. ಕಡಿಮೆ ಅಂಕಗಳನ್ನು ಗಳಿಸಿದರೂ ಮುಂದಿನ ತರಗತಿಗೆ ತೇರ್ಗಡೆಗೊಳಿಸುವ ಮತ್ತು ಕೆಲಸ ಕೊಡುವಂತಹ ಮೀಸಲಾತಿಯು ಜನರಿಗೆ ಹೆಚ್ಚು ಪರಿಶ್ರಮಪಡದೆಯೆ ಫಲವನ್ನು ಅನುಭವಿಸುವಂತೆ ಪ್ರೋತ್ಸಾಹಿಸುತ್ತದೆ. ಅಂದರೆ ಹೆಚ್ಚು ಪರಿಶ್ರಮಪಡದೆ ಇರುವವರಿಗೆ ಅದು ಬಹುಮಾನಗಳನ್ನು ಕೊಟ್ಟು ಪುರಸ್ಕರಿಸುತ್ತದೆ. ಇದು ಮೀಸಲಾತಿ ಪಡೆಯುವ ಸಮುದಾಯಗಳಲ್ಲಿನ ಬೌದ್ಧಿಕ/ಕೌಶಲ್ಯದ ಗುಣಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ. ಅದೇ ತರ್ಕವನ್ನು ಮುಂದುವರೆಸುವುದಾದರೆ, ಮೀಸಲಾತಿ ಪಡೆಯದ ಸಮುದಾಯಗಳು ಶಿಕ್ಷಣ ಮತ್ತು ವೃತ್ತಿ ಕೌಶಲ್ಯಗಳಲ್ಲಿ ಕ್ರಮೇಣ ಮೇಲೇರುತ್ತ ಸಾಗುತ್ತವೆ. ಏಕೆಂದರೆ ಒಳ್ಳೆಯ ಅಂಕಗಳನ್ನು ಪಡೆಯದ ಹೊರತು ಅಥವಾ ಒಳ್ಳೆಯ ಗುಣಮಟ್ಟದ ಕೆಲಸವನ್ನು ಮಾಡದ ಹೊರತು ಅವರು ಮಾರುಕಟ್ಟೆಯಲ್ಲಿ ಬದುಕುಳಿಯುವುದೇ ಕಷ್ಟವಾಗಿಬಿಡುತ್ತದೆ. ಅಂದರೆ ಯಾವ ಕೆಳ ಜಾತಿಗಳ ಉದ್ಧಾರಕ್ಕಾಗಿ ಮೀಸಲಾತಿಯನ್ನು ನಾವು ಜಾರಿಗೆ ತರುತ್ತೇವೆಯೋ ಅದೇ ಜಾತಿಗಳು ಕ್ರಮೇಣ ಮೀಸಲಾತಿಯಿಂದಾಗಿ ಅವನತಿ ಹೊಂದುತ್ತವೆ.
ಇದರಂತೆ ಮೀಸಲಾತಿಯು ದಲಿತರನ್ನು ಸಬಲೀಕರಣಗೊಳಿಸುವ ಬದಲಿಗೆ ದುರ್ಬಲಗೊಳಿಸುತ್ತದೆ ಎನ್ನುವ ವಾದವಿದೆ. ಮೀಸಲಾತಿಯ ಬಗ್ಗೆ ಹಿಂದಿನಿಂದಲೂ ಅನೇಕ ಚರ್ಚೆಗಳು ನಡೆಯುತ್ತಲೇ ಇರುವಾಗ ಮೀಸಲಾತಿಯಿಂದ ದಲಿತರಿಗೆ ನೆರವಾಗುತ್ತದೆಯೇ ಇಲ್ಲ ಅದರಿಂದ ತೋಂದರೆಯಾಗುತ್ತದೆಯೇ ಎಂದು ಚರ್ಚಿಸುವುದೇ ತಪ್ಪೇ? ಈ ವಾದದಲ್ಲಿ ತಪ್ಪಿದ್ದರೆ ಚೆನ್ನಿಯವರು ಈ ವಾದದಲ್ಲಿರುವ ತಾರ್ಕಿಕ ದೋಷವನ್ನು ವಿವರಿಸಿ ಮೀಸಲಾತಿಯನ್ನು ಉಳಿಸಿಕೊಳ್ಳಬೇಕೆನ್ನುವ ವಿವರಣೆ ಕೊಡಬಹುದಿತ್ತಲ್ಲವೇ? ಅದರ ಬದಲಿಗೆ ಕೇವಲ ಸಾಲುಗಳನ್ನು ಮಾತ್ರ ಉಲ್ಲೇಖಿಸಿ ಮೀಸಲಾತಿಯಲ್ಲಿ ಸಮಸ್ಯೆ ಗುರುತಿಸುವವರೆಲ್ಲರೂ ಬಲಪಂಥಿಯರು ಮಾತ್ರವಲ್ಲ ದಲಿತ ವಿರೋಧಿಗಳು ಎನ್ನುವಂತಹ ನಿರೂಪಣೆ ಮಾಡುವ ಯುಕ್ತಿಏಕೆ?

ಈ ಪುಸ್ತಕದಲ್ಲಿ ಈ ಸಾಲುಗಳೂ ಇವೆ ಚೆನ್ನಿಯವರೇ ಅವುಗಳನ್ನೇಕೆ ಮರೆಮಾಚುತ್ತೀರಿ ಇವುಗಳಿಗೆ ಯಾವ ಹುನ್ನಾರದ ಪಟ್ಟಕಟ್ಟುತ್ತೀರಿ? ನೋಡಿ:
ಜಾತಿವ್ಯವಸ್ಥೆ ಇಲ್ಲವೆನ್ನುವುದು ಭಾರತದಲ್ಲಿ ಜಾತಿ ಶೋಷಣೆಯಿದೆ ಎನ್ನುವುದನ್ನು ನಿರಾಕರಿಸುವ ತಂತ್ರವೆಂಬುದಾಗಿ ಪ್ರಗತಿವಾದಿಗಳು ಟೀಕಿಸಿದ್ದಾರಲ್ಲ!
ಮೊದಲೆ ಹೇಳಿದ ಹಾಗೆ ಜಾತಿವ್ಯವಸ್ಥೆ ಎಂಬೊಂದು ಸಾಮಾಜಿಕ ರಚನೆಯು ಭಾರತದಲ್ಲಿಲ್ಲ. ಅಂದಮಾತ್ರಕ್ಕೆ ಭಾರತದಲ್ಲಿ ಅನ್ಯಾಯ ಇಲ್ಲವೆಂದು ನಾನು ಹೇಳುತ್ತಿಲ್ಲ. ಒಂದು ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿ ತಾರತಮ್ಯಕ್ಕೆ ಒಳಗಾಗಿದ್ದರೆ ಅಲ್ಲಿ ಅನ್ಯಾಯ ಇದೆ ಅಂತ ನಾನು ನಂಬುತ್ತೇನೆ ಹಾಗೂ ಅದನ್ನು ವಿರೋಧಿಸುತ್ತೇನೆ. (ಈ ರೀತಿಯ ತಾರತಮ್ಯವು ಅನುಕೂಲವಾಗಿರಬಹುದು, ಅಥವಾ ಪ್ರತಿಕೂಲವಾಗಿರಬಹುದು).
ಜಾತಿ ಶೋಷಣೆ ಎಂದರೇನೆಂಬುದೇ ನನಗಿನ್ನೂ ಅರ್ಥವಾಗಿಲ್ಲ. ಒಂದು ಜಾತಿಯು ಯಾವುದೇ ಕಾಲ, ಪ್ರದೇಶಕ್ಕೆ ಸೇರಿರಲಿ, ನಿರ್ದಿಷ್ಟ ಜಾತಿಯಾಗಿರುವ ಕಾರಣದಿಂದಾಗಿ ವ್ಯವಸ್ಥಿತವಾದ ಶೋಷಣೆಗೆ ಒಳಗಾಗಿದೆ ಎಂದರೆ, ಹೌದು ಅಲ್ಲಿ ಜಾತಿ ಶೋಷಣೆ ಇದೆ ಎನ್ನಬಹುದು. ನಾನು ಇದನ್ನು ಖಂಡಿತವಾಗಿಯೂ ವಿರೋಧಿಸುತ್ತೇನೆ. ಆದರೆ ಜಾತಿ ಶೋಷಣೆ ಎಂದರೆ ಇದಕ್ಕಿಂತ ಹೆಚ್ಚಿಗೆ ಏನೋ ಇದೆ ಎಂಬುದಾಗಿ ಯಾರಾದರೂ ಹೇಳಿದರೆ ಅದೇನೆಂಬುದನ್ನು ನಾನು ತಿಳಿದುಕೊಳ್ಳಲು ಇಷ್ಟಪಡುತ್ತೇನೆ. ಆ ಕಾರಣಕ್ಕಾಗಿ ನನಗೆ ಹುನ್ನಾರಗಳನ್ನು ಆರೋಪಿಸುವುದು ಏಕೆ ಎಂಬುದು ನನಗೆ ಗೊತ್ತಿಲ್ಲ.

ಇಂದಿನ ದಲಿತ ಹೋರಾಟಕ್ಕೆ ನಿಮ್ಮ ವಾದಗಳಿಂದ ಧಕ್ಕೆ ಬರುತ್ತದೆ ಎಂಬುದು ನಿಜವೆ? ಹಾಗಿದ್ದಲ್ಲಿ ಪ್ರಚಲಿತ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಮ್ಮ ಬದ್ಧತೆ ಯಾವ ಸ್ವರೂಪದ್ದು?

ಈಗಾಗಲೆ ಸ್ಪಷ್ಟಪಡಿಸಿದ ಹಾಗೆ ನಾನು ಯಾವುದೇ ರೂಪದ ಅನ್ಯಾಯವನ್ನು ವಿರೋಧಿಸುತ್ತೇನೆ. ಈ ಅರ್ಥದಲ್ಲಿ ದಲಿತರು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಲ್ಲಿ ನನ್ನ ಆಕ್ಷೇಪಣೆಯೇನೂ ಇಲ್ಲ. ಆದರೆ ನಾನು ದಲಿತರ ಹಗೆತನದ ಭಾಷೆಯನ್ನು ಒಪ್ಪುವುದಿಲ್ಲ. ಯಾವ ಜಾತಿವ್ಯವಸ್ಥೆಯ ಪರಿಭಾಷೆಯನ್ನು ಆಧರಿಸಿ ಅವರು ತಮ್ಮ ಹೋರಾಟವನ್ನು ರೂಪಿಸಿಕೊಂಡಿದ್ದಾರೊ ಅದು ಇತರೆ ಜಾತಿಗಳ (ಮೇಲ್ಜಾತಿಯವರು ಎಂದು ಕರೆಯಲ್ಪಡುವವರ ಅಥವಾ ಬ್ರಾಹ್ಮಣರ) ಕುರಿತು ಹಗೆತನವನ್ನು ಪೋಷಿಸುವಂತಿದೆ. ಇದು ಸಮಾಜದಲ್ಲಿ ಘರ್ಷಣೆಯನ್ನು ಉಂಟುಮಾಡುತ್ತದೆ. ಇತರ ಜಾತಿಯ ಗುಂಪುಗಳ ವಿರುದ್ಧ ವ್ಯವಸ್ಥಿತವಾಗಿ ದ್ವೇಷವನ್ನು ಹೆಚ್ಚುಮಾಡುವುದರಿಂದ ಅನ್ಯಾಯದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಅನ್ಯಾಯವು (ಇದು ದಲಿತ ಹೋರಾಟಗಾರರು ಹೇಳುವಂತೆ) ಸಮಾಜದ ವ್ಯವಸ್ಥೆಯೇ ಆಗಿದ್ದಾಗಂತೂ ಅದು ಸಾಧ್ಯವೇ ಇಲ್ಲ: ಅದಕ್ಕಾಗಿ ನೀವು ಸಮಾಜದ ವ್ಯವಸ್ಥೆಯನ್ನೇ ಬದಲಾಯಿಸಬೇಕೇ ಹೊರತು ಕೇವಲ ಹಗೆತನದ ಮಾತುಗಳನ್ನಾಡುವುದರಿಂದ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ.
ನನ್ನ ಪ್ರಕಾರ ದಲಿತರು ತಮಗಾಗುತ್ತಿದೆ ಎನ್ನಲಾದ ಅನ್ಯಾಯವನ್ನು ಅರ್ಥಮಾಡಿಕೊಂಡಿರುವಲ್ಲೇ ಸಮಸ್ಯೆ ಇದೆ. ಅವರ ಈ ತಪ್ಪು ತಿಳುವಳಿಕೆಯು ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿದೆಯೇ ವಿನಃ ಪರಿಹರಿಸುತ್ತಿಲ್ಲ ಎಂಬುದು ಇತ್ತೀಚೆಗಿನ ದಲಿತ ಸಮಸ್ಯೆಗಳನ್ನು ಪರಿಶೀಲಿಸಿದರೆ ಕಂಡುಬರುವ ವಿಷಯ. ಇಂತಹ ಅನ್ಯಾಯಕ್ಕೆ ಇವರು ಜಾತಿವ್ಯವಸ್ಥೆಯೇ ಕಾರಣವೆಂಬುದಾಗಿ ಗುರುತಿಸುತ್ತಾರೆ. ನಾನಿದನ್ನು ಒಪ್ಪುವುದಿಲ್ಲ್ಲ. ಏಕೆಂದರೆ ಅಂತಹ ಒಂದು ಸಾಮಾಜಿಕ ರಚನೆಯೇ ಭಾರತದಲ್ಲಿಲ್ಲ. ಆದರೆ ಕೆಲವರು ಜಾತಿವ್ಯವಸ್ಥೆಯೇ ಅನ್ಯಾಯಕ್ಕೆ ಕಾರಣವೆಂಬ ವಾದವನ್ನು ಬಳಸಿಕೊಂಡು ದಲಿತರನ್ನು ಅಕ್ಷರಶಃ ಶೋಷಿಸುತ್ತಿದ್ದಾರೆ. ಹಾಗೂ ಮೇಲ್ಜಾತಿಯವರ ಕುರಿತಾಗಿ ತಪ್ಪಾದ ಅಭಿಪ್ರಾಯವನ್ನು ಮೂಡಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಈ ಕಥೆಯನ್ನು ಮುಂದುವರಿಸುವುದರಲ್ಲೇ ತಮ್ಮ ಹಿತಾಸಕ್ತಿಯನ್ನು ಕಂಡುಕೊಂಡಿದ್ದಾರೆ. ಇನ್ನೂ ಒಂದು ಪ್ರಮುಖವಾದ ಕಾರಣಕ್ಕಾಗಿ ಇಂತಹ ಜನರ ಜೊತೆಗೆ ನನಗೆ ಸಮಸ್ಯೆಯಿದೆ. ಸರ್ಕಾರವು ಅಳವಡಿಸಿಕೊಳ್ಳುತ್ತಿರುವ ಅವೈಚಾರಿಕ ನೀತಿಗಳು ದಲಿತರ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿರುವುದರಿಂದ ಇದು ಈಗಾಗಲೇ ಆಗಿರಬಹುದಾದ ಅನ್ಯಾಯವನ್ನು ಮುಂದುವರಿಸುತ್ತದೆ ಅಷ್ಟೆ. ಇಂತಹ ಸ್ಥಿತಿಯನ್ನು ಜಾಗರೂಕತೆಯಿಂದ ವಿಶ್ಲೇಷಿಸಿ ಅನ್ಯಾಯವನ್ನು ತೊಡೆದು ಹಾಕಲು ಮಾರ್ಗವನ್ನು ಕಂಡುಕೊಳ್ಳುವ ಬದಲಾಗಿ ಕೇವಲ ಬಾಯಿಮಾತಿನ ಸೇವೆಯಿಂದ ಏನೂ ಉಪಯೋಗವಿಲ್ಲ.
ಭಾರತವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಹಾಗೂ ಹಲವು ರಂಗಗಳಲ್ಲಿ ಬದಲಾವಣೆ ಆಗಬೇಕಿದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಇಂಥ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಒತ್ತಿ ಹೇಳುತ್ತಿರುವುದು. ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಹರಿಸಬೇಕಾದರೆ ಅವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲೇಬೇಕು, ಬೇರೆ ಮಾರ್ಗವೇ ಇಲ್ಲ. (ಪು.54-56).

ಚಿತ್ರ ಕೃಪೆ : http://www.uib.no

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments