ಸಿದ್ಧಾಂತ ಮತ್ತು ಐಡಿಯಾಲಜಿ ಒಂದೇ ಅಲ್ಲ – “ಗೆಳೆಯ ಫಣಿರಾಜ್ ರವರ ಪತ್ರಕ್ಕೆ ಒಂದು ಪ್ರತಿಕ್ರಿಯೆ”
– ಪ್ರೊ.ಜೆ.ಎಸ್.ಸದಾನಂದ
ನಿಮ್ಮ ಪತ್ರ ಓದಿದ ನಂತರ ಒಂದು ತರದ ಹಿತಕರ ಅನುಭವವಾಯಿತು. ಹಿತಕರ ಏಕೆಂದರೆ ಇದೂವರೆಗೂ ನಮ್ಮ ಬಗ್ಗೆ ಪ್ರತಿಕ್ರಿಯಿಸಿದ ಬಹಳಷ್ಟು ಮಂದಿಗೆ ನಮ್ಮ ಸಂಶೋಧನೆಯ ಹಿಂದಿರುವ ಕುತಂತ್ರ, ಹುನ್ನಾರ ಹಾಗೂ ಆಮಿಷಕ್ಕೆ ಒಳಗಾಗುತ್ತಿರುವುದಷ್ಟೇ ಕಾಣಿಸುತ್ತಿತ್ತು. ಅದಕ್ಕೆ ವ್ಯತಿರಿಕ್ತವಾಗಿ ನೀವು ನಮ್ಮ ಸಂಶೋಧನೆಯ ಬಗ್ಗೆ ನಿಮಗಿರುವ ಕೆಲವು ಸಂದೇಹಗಳ ಕುರಿತು ತುಂಬಾ (ಸಾಮಾಜಿಕ ಹೋರಾಟದಲ್ಲಿ ಬಹಳ ಕಾಲದಿಂದಲೂ ತೊಡಗಿಸಿಕೊಂಡ ಬದ್ಧತೆಯಿಂದ ಹುಟ್ಟಿದ) ಕಾಳಜಿಯಿಂದ ಚರ್ಚೆ ಮಾಡಲು ಹೊರಟಿದ್ದೀರಿ. ನಮ್ಮ ಉದ್ದೇಶವೂ ಸಹ ನಮ್ಮ ಕೇಂದ್ರದಲ್ಲಿ ಕ್ಯೆಗೊಳ್ಳುತ್ತಿರುವ ಸಂಶೋಧನೆಗಳು ಸಾರ್ವಜನಿಕ ವಿಮರ್ಶೆಗೊಳಪಡಬೇಕು ಮತ್ತು ಅದರ ಪರಿಣಾಮದಿಂದ ನಮಗೂ, ಈ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿರುವ, ಚಿಂತಿಸುತ್ತಿರುವ ಇತರರಿಗೂ ಪ್ರಚಲಿತ ಚಿಂತನೆಯಲ್ಲಿರುವ (ನಮ್ಮದನ್ನೂ ಒಳಗೊಂಡು) ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗಬೇಕು ಎನ್ನುವುದೇ ಆಗಿದೆ.
ನಮ್ಮ ಸಂಶೋಧನಾ ವಿಧಾನದ ಬಗ್ಗೆ ಈಗಾಗಲೇ ಹೇಳಿರುವುದರಿಂದ ಅದನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಆದರೆ ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ಜಾತಿವ್ಯವಸ್ಥೆ, ಸೆಕ್ಯುಲರಿಸಂ, ಮಡೆಸ್ನಾನ ಇತ್ಯಾದಿಗಳ ಬಗ್ಗೆ ನಾವಾಗಲೀ ಬಾಲುವಾಗಲಿ ಯಾವುದೇ ವ್ಯೆಜ್ಞಾನಿಕ ಸಿದ್ದಾಂತವನ್ನು ಮಂಡಿಸುತ್ತಿಲ್ಲ. ಮುಂದಿನ ಸಂಶೋಧನೆಗಳು ಕ್ಯೆಗೆತ್ತಿಕೊಳ್ಳಬಹುದಾದ ಸಂಶೋಧನಾ ಪ್ರಶ್ನೆಗಳನ್ನಷ್ಟೇ ಮುಂದಿಡುತ್ತಿದ್ದೇವೆ. ಅದರ ಮೊದಲ ಹಂತವಾಗಿ ಅವುಗಳ ಕುರಿತಾಗಿ ಬರೆದ ಲೇಖನಗಳು ಈ ವಿದ್ಯಮಾನಗಳ ಸದ್ಯದ ಗ್ರಹಿಕೆಯ ಸ್ವರೂಪದಲ್ಲಿ ಇರುವ ಸಮಸ್ಯೆಗಳನ್ನು ಮಾತ್ರ ಗುರುತಿಸುವ ಪ್ರಯತ್ನ ಮಾಡುತ್ತವೆ. ನಾವು ಒಪ್ಪಿಕೊಂಡಿರುವ ಲಿಬರಲ್ ಪ್ರಜಾಪ್ರಭುತ್ವ, ಸೆಕ್ಯುಲರರ ಹಾಗೂ ವ್ಯೆಚಾರಿಕ ಸಿದ್ಧಾಂತಗಳ ಚೌಕಟ್ಟಿನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾದಾಗ ಉದ್ಭವಿಸುವ ಸಮಸ್ಯೆಗಳೇನು ಎಂದು ಗುರುತಿಸಲು ಪ್ರಯತ್ನಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಮುಂದೊಂದು ದಿನ ಯಾರಾದರೂ ಸಂಶೋಧನೆ ಕ್ಯೆಗೊಂಡರೆ ನಾವು ಸಮಸ್ಯೆಯನ್ನು ಗುರುತಿಸಿರುವ ವಿಧಾನದಲ್ಲೂ ತಪ್ಪಿದೆ ಎಂದು ತೋರಿಸುವ ಸಾಧ್ಯತೆ ಇದೆ. ಹಾಗಾದಾಗ ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ನೀವೇಕೆ ಇಂತಹ ವಿಷಯಗಳನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ನಾವು ಖಂಡಿತಾ ಕೇಳುವುದಿಲ್ಲ.
ನಮ್ಮಲ್ಲಿ ಹಲವರು ಕ್ಯೆಗೊಂಡಿರುವ ಸಂಶೋಧನೆಯ ವಿಶಾಲವಾದ ಚೌಕಟ್ಟಿನ ಬಗ್ಗೆ ನಿಮಗೆ ಗುಮಾನಿ ಇದ್ದಂತಿದೆ. ಅದು ಹೇಗೆ ರೂಪುಗೊಂಡಿತು ಎನ್ನುವುದನ್ನು ನಾನಿಲ್ಲಿ ಸಂಕ್ಷಿಪ್ತವಾಗಿಯಾದರೂ ಹೇಳಬೇಕಿದೆ. ಬಾಲು ಅವರ ‘ಹೀದನ್…..’ ಕೃತಿಯನ್ನು ಮೊದಲ ಓದಿದಾಗ ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ ಎನ್ನುವುದು ಇಲ್ಲ, ಆದರೆ ರಿಲಿಜನ್ ಇಲ್ಲದ ಸಂಸ್ಕೃತಿ ಅಸ್ತಿತ್ವದಲ್ಲಿರುವುದು ಸಾಧ್ಯವೇ ಇಲ್ಲ ಎನ್ನುವ ನಂಬಿಕೆ ಬಹಳ ಆಳವಾಗಿ ಬೇರೂರಿದ್ದ ಪಾಶ್ಚಾತ್ಯರು (ಯುರೋಪಿಯನ್ನರು) ಭಾರತಕ್ಕೆ ಬಂದಾಗ ಇಲ್ಲಿನ ರಿಲಿಜನ್ನಿನ ಸ್ವರೂಪವನ್ನು ಶೋಧಿಸುತ್ತಾ ಹೋದುದರ ಪರಿಣಾಮವಾಗಿ, ವಾಸ್ತವದಲ್ಲಿಲ್ಲದ ಹಿಂದೂಯಿಸಂ ಅವರಿಗೆ ಕಾಣತೊಡಗಿತು (ಅವರ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ರಿಲಿಜನ್ ಇಲ್ಲದ ಸಂಸ್ಕೃತಿ ಇರಬಹದಾದ ಸಾಧ್ಯತೆಯನ್ನು ಅವರಿಗೆ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿತ್ತು). ನಂತರ ಆಧುನಿಕ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದಾಗಿ ಕ್ರಮೇಣ ಈ ನಂಬಿಕೆ ಭಾರತೀಯ ವಿದ್ವಾಂಸರಲ್ಲೂ ಅವರ Common sense ನ ಒಂದು ಭಾಗವಾಯಿತು, ಎನ್ನುವ ಬಾಲು ಅವರ ವಾದ ಕುತೂಹಲಕಾರಿಯಾಗಿ ಕಾಣಿಸಿತು. ನಮ್ಮ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ ಆ ಕೃತಿಯಲ್ಲಿನ ಮತ್ತೊಂದು ಅಂಶವೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ರೂಪಿಸಿದ ಕ್ರಿಶ್ಚಿಯನ್ ಥಿಯಾಲಜಿಯ ಲೋಕಗ್ರಹಿಕೆಯು ಕ್ರಮೇಣ ತನ್ನ ಸ್ವರೂಪವನ್ನು ಬದಲಿಸಿಕೊಂಡು ಸೆಕ್ಯುಲರ್ ಅವತಾರದಲ್ಲಿ ನಮ್ಮ ಆಧುನಿಕ ಸಮಾಜ’ವಿಜ್ಞಾನ’ವಾಗಿದೆ ಎನ್ನುವ ಅವರ ವಾದ. ಸಮಾಜವಿಜ್ಞಾನಗಳಲ್ಲಿ ಭೋದನೆ ಹಾಗೂ ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿರುವವರೆಲ್ಲರೂ ಗಮನಿಸುತ್ತಿರುವ ಮುಖ್ಯ ಸಂಗತಿ ಎಂದರೆ ನಾವು ತರಗತಿಗಳಲ್ಲಿ ಭೋದಿಸುತ್ತಿರುವ ಹಾಗೂ ಕಲಿಯುತ್ತಿರುವ ಸಂಗತಿಗಳಿಗೂ ವಾಸ್ತವದ ವಿದ್ಯಮಾನಗಳಿಗೂ ನಡುವೆ ಇರುವ ಅಂತರ. ಸಮಾಜವಿಜ್ಞಾನಗಳ ವಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ನೀತಿ ನಿರೂಪಣೆಗೆ ಯಾವ ಪ್ರಯೋಜನವೂ ಆಗುತ್ತಿಲ್ಲವಷ್ಟೇ ಅಲ್ಲ ಅವುಗಳ ಕುರಿತು ನಮ್ಮದೇ ಆದ ಸಿದ್ಧಾಂತಗಳೂ ಹೊರಬರುತ್ತಿಲ್ಲ. ಪ್ರಚಲಿತ ವಿದ್ಯಮಾನದ ಬಗ್ಗೆ ಬೆಳಕು ಚೆಲ್ಲುವ ಹೊಸ ವಿಚಾರಗಳಿಗೆ ಈಗಲೂ ನಾವು ಪಶ್ಚಿಮದತ್ತಲೇ ಮುಖ ಮಾಡಿ ಕುಳಿತ್ತಿದ್ದೇವೆ. ಸಮಾಜವಿಜ್ಞಾನಗಳ ಬಗ್ಗೆ ಬಾಲುರವರು ಹೇಳುತ್ತಿರುವುದು ಇಂದಿನ ಅವುಗಳ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಬಹುದೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೆಲವು ಪ್ರಚಲಿತ ಸಿದ್ಧಾಂತಗಳ ಚೌಕಟ್ಟನ್ನು ಏಕೆ ಪರೀಕ್ಷಿಸಬಾರದು ಎನ್ನುವ ಉಮೇದಿನಿಂದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಪ್ರಾರಂಭವಾಯಿತು. ಒಟ್ಟಾರೆಯಾಗಿ ನಮ್ಮ ಉದ್ದೇಶ ಇದ್ದದ್ದು ಸಮಾಜವಿಜ್ಞಾನಗಳಲ್ಲಿರುವ ಮೂಲಭೂತ ಸಮಸ್ಯೆಯನ್ನು ಗುರುತಿಸುವುದು. ಬಾಲುರವರು ಕಳೆದ ನಲವತ್ತು ವರ್ಷಗಳಿಂದಲೂ ತೊಡಗಿಕೊಂಡಿರುವುದು ಸಂಸ್ಕೃತಿಗಳ ತುಲನಾತ್ಮಕ ವಿಜ್ಞಾನದ ಅಧ್ಯಯನದಲ್ಲಿ (ಗೆಂಟ್ ವಿಶ್ವವಿದ್ಯಾಲಯದಲ್ಲಿ ಅವರು ಪ್ರಾರಂಭಿಸಿರುವ ಅಧ್ಯಯನ ಕೇಂದ್ರದ ಹೆಸರು ಅದೇ).
ಈ ಮೇಲಿನ ಹಿನ್ನೆಲೆಯಲ್ಲಿ ನಿಮ್ಮ ಸಂದೇಹಗಳತ್ತ ಈಗ ಗಮನ ಹರಿಸೋಣ. ನಿಮ್ಮ ಮೊದಲ ಸಂದೇಹ ನಮ್ಮ ಸಂಶೋಧನೆಯಲ್ಲಿ ನೀವು ಕಾಣುತ್ತಿರುವ Pattern ಬಗ್ಗೆ. ಜಾತಿವ್ಯವಸ್ಥೆ, ಸೆಕ್ಯುಲರಿಸಂನಂತಹ ಪ್ರಗತಿಪರವೆಂದು ಗುರುತಿಸಲ್ಪಟ್ಟಿರುವ ನಿರ್ದಿಷ್ಟ ವಿಷಯಗಳನ್ನೇ ನಾವು ಸಂಶೋಧನೆಗೆ ಆರಿಸಿಕೊಳ್ಳುತ್ತಿದ್ದೇವೆ. ನಿಮ್ಮ ಸಂದೇಹ ನಿರಾಧಾರವಾದುದು. ದಯವಿಟ್ಟು ನಮ್ಮಲ್ಲಿ ಹಾಗೂ ಗೆಂಟ್ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳ ವಿವರಗಳನ್ನು ನೋಡಿ. ದರ್ಗಾ ಸಂಪ್ರದಾಯ, ಸಹಿಷ್ಣುತೆ, ನಿರ್ವಹಣಾಶಾಸ್ತ್ರ ಹಾಗೂ ಸಂಸ್ಕೃತಿಯ ನಡುವಿನ ಸಂಬಂಧ, ಇತಿಹಾಸದ ಪರಿಕಲ್ಪನೆ, ಪ್ರಾಚೀನ ಭಾರತದಲ್ಲಿ ರಾಜಕೀಯ ಚಿಂತನೆ ಮುಂತಾದ ಸಂಶೋಧನೆಗಳೂ ನಡೆಯುತ್ತಿವೆ. ಬಾಲುರವರು ಸಧ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಂಶೋಧನೆಯ ವಿಷಯವೆಂದರೆ: ಪಾಶ್ಚಾತ್ಯ ಸಂಸ್ಕೃತಿಯನ್ನು ಬಹಳಷ್ಟು ಪ್ರಭಾವಿಸಿರುವ ಅಲ್ಲಿನ ನಾರ್ಮೇಟಿವ್ ಎಥಿಕ್ಸ್ ನ ಚೌಕಟ್ಟು ಭಾರತದಲ್ಲಿ ಇದೆಯೇ ಎನ್ನುವುದರ ಕುರಿತು. ಸಮಾಜವಿಜ್ಞಾನಗಳ ಸಮಸ್ಯೆಯನ್ನು ನಾವು ಗುರುತಿಸಿರುವ ಚೌಕಟ್ಟಿನಲ್ಲಿ ಇನ್ನೂ ಹತ್ತು ಹಲವು ಸಂಶೋಧನಾ ಸಾಧ್ಯತೆಗಳಿವೆ. ಸಂಶೋಧನೆಗೆ ಸರಿಯಾದ ಬೆಂಬಲ ಸಿಕ್ಕಿದರೆ ಭಾರತೀಯ ‘ಸ್ವ’, ಭ್ರಷ್ಟಾಚಾರ, ಸಾರ್ವಜನಿಕ ಹಾಗೂ ಖಾಸಗಿವಲಯಗಳನ್ನು ಪ್ರಭುತ್ವವು ಗುರುತಿಸುವ ರೀತಿ, ಭಾರತೀಯ ಸಂಸ್ಕೃತಿ ಹಾಗೂ ಸೆಕ್ಯುಲರ್ ಪ್ರಜಾಪ್ರಭುತ್ವದ ನಡುವಿನ ಸಂಬಂಧ, ಇತ್ಯಾದಿ (ಇತ್ಯಾದಿಗಳ ಉದ್ದವಾದ ಪಟ್ಟಿಯನ್ನೇ ಕೊಡಬಹುದು) ಇತರ ಸಮಕಾಲೀನ ಸಮಸ್ಯೆಗಳ ಬಗ್ಗೆ ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಇಚ್ಚೆ ನಮಗಿದೆ. ಸಮಾಜವಿಜ್ಞಾನಗಳ ಎಲ್ಲ ವಿಭಾಗಗಳನ್ನೂ ಒಳಗೊಂಡ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ಕನಸು ನಮ್ಮದು. ಬಾಲುರವರ ಸಂಶೋಧನಾ ತಂಡ ಮಾಡುತ್ತಿರುವ ಇಂತಹ ಹಲವಾರು ಸಂಶೋಧನೆಗಳಲ್ಲಿ ಜಾತಿವ್ಯವಸ್ಥೆ, ಮತ್ತು ಸೆಕ್ಯುಲರಿಸಂ ಮಾತ್ರ ಏಕೆ ಬಿಸಿಬಿಸಿ ಚರ್ಚೆಗೊಳಪಡುತ್ತಿವೆ ಎನ್ನುವುದಕ್ಕೆ ನೀವೇ ಉತ್ತರಿಸಬೇಕು. . ಒಂದು ಸಂಸ್ಕೃತಿ (ಪಾಶ್ಚಾತ್ಯ) ಮತ್ತೊಂದು (ಭಾರತೀಯ) ಸಂಸ್ಕೃತಿಯನ್ನು ಅರ್ಥೈಸಿಕೊಂಡಿರುವುದರಿಂದ ಹುಟ್ಟಿರಬಹುದಾದ ಸಮಸ್ಯೆಗಳೇನು ಎನ್ನುವುದೇ ಒಂದು Pattern ಎನ್ನುವುದಾದರೆ ಹೌದು, ನಮ್ಮ ಸಂಶೋಧನೆಗಳಿಗೆ ಒಂದು Pattern ಇದೆ ಆದರೆ ಅದು ನೀವು ಹೇಳುವ Pattern ಅಲ್ಲ.
ನಮ್ಮ ಸಂಶೋಧನಾ ತಂಡವು ತೊಡಗಿರುವ ಸಂಶೋಧನೆಗಳು ಬಾಲುರವರು ತಮ್ಮ ಸಂಶೋಧನೆಯ ಮೂಲಕ ಕಂಡುಕೊಂಡಿರುವ ಸ್ಯೆದ್ಧಾಂತಿಕ ಚೌಕಟ್ಟಿನಲ್ಲಿಯೇ ನಡೆಯುತ್ತಿವೆ ಎನ್ನುವುದು ಈಗ ನಿಮಗೆ ಸ್ಪಷ್ಟವಾಗಿರಬೇಕು. ಅದರಲ್ಲಿ ಇರುವ ತಪ್ಪೇನು ಎಂದು ನೀವು ತೋರಿಸಬೇಕು. ಅದೊಂದು ಅಪರಾಧವೆನ್ನುವ ರೀತಿಯಲ್ಲಿ ನೀವೇಕೆ ನೋಡುತ್ತಿದ್ದೀರಿ? ವ್ಯೆಜ್ಞಾನಿಕ ಸಿದ್ಧಾಂತ ಹಾಗೂ ಐಡಿಯಾಲಜಿಯ ನಡುವಿನ ವ್ಯತ್ಯಾಸದ ಬಗ್ಗೆ ನಿಮಗೆ ಗೊಂದಲವಿರುವಂತಿದೆ. ಅಥವಾ ಅವೆರಡು ಒಂದೇ ಎಂದು ನೀವು ಭಾವಿಸಿದ್ದೀರಾ? ನನಗೆ ಗೊತ್ತಿಲ್ಲ. ಯಾವುದೇ ಒಂದು ವಾದದ ನಿರಾಕರಣೆಯ ಸಾಧ್ಯತೆ ಅದರೊಳಗಿನ ಒಂದು ಅಂತರ್ಗತ ಅಂಶವಾಗಿದ್ದರೆ ಅದೊಂದು ವ್ಯೆಜ್ಞಾನಿಕ ಸಿದ್ಧಾಂತವಾಗುತ್ತದೆ. ಸಮಾಜವಿಜ್ಞಾನಗಳ ವಲಯದಲ್ಲಿ ಈಗಾಲೇ ವಿದ್ವಾಂಸರು ಒಪ್ಪಿಕೊಂಡಿರುವ ಸಂಶೋಧನೆಯ ವಿಧಾನಗಳನ್ನು ಅನುಸರಿಸಿ ಆ ವಾದವನ್ನು ಪುರಸ್ಕರಿಸುವ ಅಥವಾ ಅಲ್ಲಗಳೆಯುವ ಸಾಧ್ಯತೆ ಇಲ್ಲದಿದ್ದರೆ ಅದು ವ್ಯೆಜ್ಞಾನಿಕ ಸಿದ್ಧಾಂತ ಎನಿಸಿಕೊಳ್ಳುವುದಿಲ್ಲ. ಐಡಿಯಾಲಜಿಯಲ್ಲಿ ಅಂತಹ ಸಾಧ್ಯತೆಗಳೇ ಇರುವುದಿಲ್ಲ. ಇಲ್ಲಿ ನಂಬಿಕೆ ಹಾಗೂ ಯಾವುದನ್ನು ನಾವು ನಂಬಿದ್ದೇವೆಯೋ ಅದರ ಬಗೆಗಿನ ಬದ್ಧತೆ ಬಹಳ ಮುಖ್ಯವಾಗುತ್ತದೆ. ಬಾಲುರವರದು ಐಡಿಯಾಲಜಿಯಲ್ಲ. ಉದಾಹರಣೆಗೆ ಯುರೋಪಿಯನ್ನರು ಭಾರತಕ್ಕೆ ಬರುವ ಮೊದಲು ಹಾಗೂ ನಂತರ ಭಾರತೀಯ ಸಂಸ್ಕೃತಿಯ ಕುರಿತಾದ ವಿವರಣೆಗಳಲ್ಲಿ ಅಂತಹ ಮೂಲಭೂತವಾದ ವ್ಯತ್ಯಾಸವೇನೂ ಇಲ್ಲ ಹಾಗೂ ನಮ್ಮ ಸಂಸ್ಕೃತಿ ಮತ್ತು ಸಮಾಜದ ಇಂದಿನ ವಿವರಣೆಗಳಲ್ಲಿ ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವವಿಲ್ಲ ಎಂದು ಯಾರಾದರೂ ತೋರಿಸಿದರೆ ಅವರ ವಾದ ಬಿದ್ದು ಹೋಗುತ್ತದೆ. ಹಾಗಲ್ಲದೆ ನಾನು ಹೇಳಿರುವುದೇ ಅಂತಿಮವಾದುದು ಅದನ್ನು ಅಲ್ಲಗಳೆಯಲೂ ಯಾರಿಗೂ ಸಾಧ್ಯವಿಲ್ಲ ಎಂದು ಬಾಲು ವಾದಿಸಿದರೆ ಅವರ ವಾದ ಐಡಿಯಾಲಜಿಯಾಗಿಬಿಡುತ್ತದೆ. ಈಗ ಹೇಳಿ ಬಾಲು ಅವರ ಸಂಶೋಧನೆಯು ಎತ್ತಿರುವ ಪ್ರಶ್ನೆಗಳನ್ನು ಆಧರಿಸಿ ಸಂಶೋಧನೆಯನ್ನು ನಡೆಸುವುದರಲ್ಲಿ ಇರುವ ದೋಷವಾದರೂ ಏನು?
ಸೆಕ್ಯುಲರಿಸಂನ ಮಿತಿಗಳನ್ನು ತೋರಿಸುವಲ್ಲಿ ಬಾಲು ಸೋತಿದ್ದಾರೆ ಹಾಗೂ ಆ ಕಾರಣದಿಂದಾಗಿ ಹಿಂದುತ್ವದ ಉಗಮಕ್ಕೆ ಸೆಕ್ಯುಲರಿಸಂ ಕಾರಣವಾಯಿತು ಎನ್ನುವ ವಾದದಲ್ಲಿ ಸತ್ವವಿಲ್ಲ ಎಂದು ತೋರಿಸುವ ಮೂಲಕ ಸೆಕ್ಯುಲರಿಸಂ ಕುರಿತು ಬಾಲು ಮಂಡಿಸುತ್ತಿರುವ ವಾದವನ್ನು ಅಲ್ಲಗಳೆಯಬಹುದು. ಯಾವುದೇ ಒಂದು ಪ್ರಾಕ್ಕಲ್ಪನೆಯನ್ನು (ಸಧ್ಯದ ಸಂದರ್ಭದಲ್ಲಿ ಸೆಕ್ಯುಲರಿಸಂ ಕೋಮುಘರ್ಷಣೆಗೆ ಒಂದು ಪರಿಹಾರವಾಗುವುದರ ಬದಲಾಗಿ ಅಂತಹ ಘರ್ಷಣೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ ಎನ್ನುವ ಪ್ರಾಕ್ಕಲ್ಪನೆ) ಆಧಾರವಿಲ್ಲದೆ ಕೇವಲ ಸಾಬೀತುಪಡಿಸುವ ಹಠತೊಟ್ಟು ಕ್ಯೆಗೊಂಡ ಸಂಶೋಧನೆ ಅದರ ಒಂದು ದೊಡ್ಡ ದೋಷವಾಗುತ್ತದೆ ಮತ್ತು ಅಂತಹ ದೋಷವನ್ನು ಆ ಸಂಶೋಧನೆಯ ಚೌಕಟ್ಟಿನಲ್ಲೇ ಗುರುತಿಸಬೇಕಾಗುತ್ತದೆ. ಹಾಗೆ ಮಾಡುವುದು ಸಾಧ್ಯವಿಲ್ಲವೆಂದಾದರೆ ಸಮಾಜವಿಜ್ಞಾನಗಳಲ್ಲಿ ವೈಜ್ಞಾನಿಕ ಸಂಶೋಧನೆಯೇ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಕೋಮುಘರ್ಷಣೆಯನ್ನು ನೀವು ಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಮಂಡಿತವಾದ ಮತ್ತು ಈಗಲೂ ಮಂಡಿಸಲ್ಪಡುತ್ತಿರುವ ಸೆಕ್ಯುಲರ್ ಸಿದ್ಧಾಂತ/ಗಳು ಕೆಲಸ ಮಾಡುತ್ತಿವೆಯಲ್ಲವೆ? ಬಾಲುರವರ ಸಿದ್ಧಾಂತವನ್ನು ಹೇಗಾದರೂ ಮಾಡಿ ಸಾಬೀತು ಮಾಡಲು ನಾವು ಹೊರಟಿದ್ದೀವಿ ಎಂದು ಆರೋಪಿಸುತ್ತೀರಿ. ಅದೇ ಆರೋಪವನ್ನು ನಿಮ್ಮ ಮೇಲೂ ಮಾಡಬಹುದಲ್ಲವೆ? ಅಂದರೆ ಹೇಗಾದರೂ ಮಾಡಿ ಕೋಮುಘರ್ಷಣೆಯ ಕುರಿತ ಪ್ರಚಲಿತ ಸೆಕ್ಯುಲರ್ ಸಿದ್ಧಾಂತದ ವಿವರಣೆಯಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡಲು ನೀವು ಹೊರಟಿದ್ದೀರಿ ಎಂದು. ಇಂತಹ ಆರೋಪ ಪ್ರತ್ಯಾರೋಪಗಳಿಂದ ಏನಾದರೂ ಪ್ರಯೋಜನವಿದೆಯೆ?
ಕಲ್ಕುಂದ ಜಾತ್ರೆಯ ಬಗ್ಗೆ ಹೇಳಿದ್ದೀರಿ. ಅಲ್ಲಿ ಭಜರಂಗದಳದವರು ತೆಗೆದುಕೊಂಡ ನಿಲುವನ್ನು ವಿರೋಧಿಸಲು ಬಾಲುರವರ ವಾದ ಪರಿಣಾಮಕಾರಿಯಾದುದು ಎಂದು ನಿಮಗೇಕೆ ಅನಿಸಲಿಲ್ಲ. ಸೆಕ್ಯುಲರ‍್ ವಾದದ ಬಗ್ಗೆ ಪ್ರಶ್ನಿಸಿದವರೆಲ್ಲರೂ ಹಿಂದುತ್ವವಾದದ ಪರವಾಗಿ ಇರುತ್ತಾರೆ ಎನ್ನುವ ತೀರ್ಮಾನಕ್ಕೆ ಬರುವುದು ಎಷ್ಟರಮಟ್ಟಿಗೆ ಸರಿ? (ನೀವು ಇದನ್ನು ನೇರವಾಗಿ ಹೇಳುತ್ತಿಲ್ಲ ಆದರೆ ನಿಮ್ಮ ಲೇಖನದಲ್ಲಿನ ವ್ಯಂಗ್ಯ ಅದನ್ನು ಪ್ರಕಟಪಡಿಸುತ್ತದೆ) ಬಾಲು ಅವರ ವಾದ ಹಿಂದುತ್ವವಾದಿಗಳಿಗೂ ನಿಮ್ಮಷ್ಟೇ ಮುಜುಗರವನ್ನುಂಟುಮಾಡಿದೆ. ಹಿಂದೂಯಿಸಂ ಎನ್ನುವ ರಿಲಿಜನ್ನೇ ಇಲ್ಲ ಎನ್ನುವ ವಾದವನ್ನು ಧಕ್ಕಿಸಿಕೊಂಡು ಹಿಂದುತ್ವವಾದ ಉಳಿಯುವುದಾದರೂ ಹೇಗೆ ಎಂದು ಒಮ್ಮೆ ಯೋಚಿಸಿ. ಅದೇ ರೀತಿಯಲ್ಲಿ ಜಾತಿವ್ಯವಸ್ಥೆಯ ಕುರಿತು ಬಾಲುರವರ ವಾದವನ್ನು ಅವರು ಪ್ರಬಲವಾಗಿ ವಿರೋಧಿಸುತ್ತಾರೆ. ಅವರೊಡನೆ ನಡೆದ ಮಾತುಕತೆಯಲ್ಲಿ ಇದು ನಮಗೆ ಸ್ಪಷ್ಟವಾಯಿತು. ಜಾತಿವ್ಯವಸ್ಥೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಪ್ರಗತಿಪರರ ಹಾಗೂ ಹಿಂದುತ್ವ ವಾದಿಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಆದರೆ ಅಸ್ಪೃಷ್ಯತೆ, ಶೋಷಣೆಯನ್ನು ಕೊನೆಗಾಣಿಸಲು ಪ್ರಗತಿಪರರು ಸಂಘರ್ಷದ ಮಾರ್ಗವನ್ನು ಅನುಸರಿಸಿದರೆ ನಾವು ಸಾಮರಸ್ಯದ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಅವರು ಹೇಳುತ್ತಾರೆ.
ಸುಮಾರು ಎರಡು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಪ್ರೊ, ಪಿ,ವಿ,ಕೃಷ್ಣಭಟ್ ಅವರು ಬೆಂಗಳೂರಿನ ಸೆಂಟ್ರಲ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ಒಂದು ಸಭೆಯಲ್ಲಿ ಬಾಲುರವರು ಭಾರತೀಯ ಸಂಸ್ಕೃತಿಯನ್ನು ಕುರಿತು ಮಾತನಾಡಿದರು. ಸಭಿಕರಲ್ಲಿ ಹಿಂದುತ್ವವಾದಿಗಳ ಸಂಖ್ಯೆಯೇ ಹೆಚ್ಚಾಗಿತ್ತು. ಭಾಷಣದ ನಂತರ ಸಂವಾದ ಕಾರ್ಯಕ್ರಮದಲ್ಲಿ ಸಭಿಕರಲ್ಲೊಬ್ಬರು ಎದ್ದು ನಿಂತು ಆರ್.ಎಸ್.ಎಸ್ ಚಿಂತನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಭಾರತೀಯ ಸಂಸ್ಕೃತಿಯ ನಿಮ್ಮ ಕಾಳಜಿಯ ಬಗ್ಗೆ ನನಗೆ ಗೌರವವಿದೆ. ಆದರೆ, ನಿಮ್ಮ ‘ಹಿಂದೂ ರಾಷ್ಟ್ರ’ತ್ವದ ಪರಿಕಲ್ಪನೆ ಮಾತ್ರ ಈ ದೇಶಕ್ಕಂಟಿದ ಕ್ಯಾನ್ಸರ್ ರೋಗದಂತೆ ಎಂದರು. ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಯವರು ಆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ಸಂಸ್ಕೃತಿ ಹಾಗೂ ಸಮಾಜದ ಬಗೆಗಿನ ಪಾಶ್ಚಾತ್ಯ ವಿವರಣೆಯೇ ನಮ್ಮ ಸಂಸ್ಕೃತಿ ಹಾಗೂ ಸಮಾಜದ ನಿಜವಾದ ಸ್ವರೂಪ ಎಂದು ಪ್ರಗತಿಪರ ಹಾಗೂ ಹಿಂದುತ್ವ ವಾದಿ ಈ ಎರಡೂ ಗುಂಪಿನವರು ಒಪ್ಪಿಕೊಂಡಿದ್ದಾರೆ ಮತ್ತು ಆ ಚೌಕಟ್ಟಿನೊಳಗೆ ಒಬ್ಬರನ್ನೊಬ್ಬರು ವಿರೋಧಿಸುತ್ತಿದ್ದಾರೆ ಎನ್ನುವುದು ಬಾಲು ಅವರ ನಿಲುವು. ಮೂಲಭೂತವಾಗಿ ಆ ಚೌಕಟ್ಟನ್ನೇ ಬಾಲುರವರು ತಮ್ಮ ಸಂಶೋಧನೆಯ ಮೂಲಕ ಪ್ರಶ್ನಿಸುತ್ತಿದ್ದಾರೆ. ಅಂತಹ ವಾದ ಯಾರ ಪರವಾಗಿ ಇರಲು ಸಾಧ್ಯ. ಸೆಕ್ಯುಲರ್ ನಂಬಿಕೆಯನ್ನು ಪ್ರಶ್ನಿಸಿದವರು ಬಲಪಂಥೀಯರೇ ಆಗಿರಬೇಕು (ನೇರವಾಗಿ ಅಥವಾ ವೇಷ ಮರೆಸಿಕೊಂಡು) ಅಥವಾ ಅವರ ಪರವಾಗಿರಬೇಕು ಎನ್ನುವ ಪೂರ್ವಾಗ್ರಹವನ್ನು ಬದಿಗಿಟ್ಟು ನೋಡಿ. ನೀವು ಯಾವುದರ ವಿರುದ್ಧ ಹೋರಾಡುತ್ತಿದ್ದೀರೋ ಆ ಸಮಸ್ಯೆಗೆ ಬಾಲುರವರ ವಾದದಲ್ಲಿ ಪರಿಹಾರವಿರಬಹುದೋ ಏನೊ.
ಪತ್ರ ಉದ್ದವಾಯಿತು ಕ್ಷಮಿಸಿ. ಆರೋಪ ಮಾಡುವವರಿಗೆ ಕಡಿಮೆ ಸಾಲುಗಳು ಸಾಕು ಆದರೆ ಅದಕ್ಕೆ ಉತ್ತರಿಸುವವರಿಗೆ ಜಾಸ್ತಿ ಬೇಕಲ್ಲವೆ?
olleya nirupane. . . . .
ನೀವೇ ನಿಮ್ಮ ಬೆನ್ನುಗಳನ್ನು ಚಪ್ಪರಿಸಬೇಕು. ಇದು ಸಂಶೋಧನೆಯ ದುರಂತ.
Hagadare heliruvudara bagge nimma takararannu tilisi odugarige nanna vadadalliruva doshvannu torisuva kripe madi Vasanth avare.