ಸಾಮಾಜಿಕ ಸಂಶೋಧನೆ ಯಾಕಾಗಿ?
– ಪ್ರೊ.ಜೆ.ಎಸ್.ಸದಾನಂದ
{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.
ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ.
ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ.
ಭಾರತದಲ್ಲಿ ಜಾತಿ ವಿನಾಶವನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮಗಳು ನಿರೀಕ್ಷಿತ ಫಲ ಕೊಡುತ್ತಿಲ್ಲ ಏಕೆ? ಜಾತಿಯ ವಿರುದ್ಧ ಹೊರಾಟಗಳು ನಡೆದಂತೆಲ್ಲಾ ಜಾತಿ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತಿರುವಂತೆ ನಮಗನಿಸುವುದು ಏಕೆ? ಜಾತಿವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಬೇಕೆಂದು ಬಯಸುವ ಗುಂಪುಗಳೇ ತಮ್ಮ ಗುರಿಯನ್ನು ತಲುಪಲು ತಮ್ಮ ಜಾತಿ ಅಸ್ಮಿತೆಯನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕಾದ ಆಂತರಿಕ ವ್ಯೆರುಧ್ಯವನ್ನು ಎದುರಿಸಬೇಕಾದ ಪರಿಸ್ಥಿತಿಗೆ ಏಕೆ ಒಳಗಾಗಿವೆ? ದಲಿತರ ಮೇಲಿನ ಶೋಷಣೆಗೆ ಜಾತಿಯ ಅಸ್ತಿತ್ವವೇ ಕಾರಣವೆಂದಾದರೆ ಜಾತಿಗಳನ್ನು ಉಳಿಸಿಕೊಂಡು ದಲಿತರೊಡನೆ ಸಂಘರ್ಷರಹಿತ ಸಹಬಾಳ್ವೆಯನ್ನು ಮಾಡುತ್ತಿರುವ ಹಲವು ಉದಾಹರಣೆಗಳನ್ನು ವಿವರಿಸುವುದು ಹೇಗೆ? ಜಾತಿವ್ಯವಸ್ಥೆಯ ಸಿದ್ಧಾಂತದ ಮೂಲದಿಂದ ಹುಟ್ಟಿಕೊಂಡ ಜಾತಿಯಾದಾರಿತ ಅಧಿಕಾರ ರಾಜಕೀಯ ಜಾತಿಗಳ ನಡುವಿನ ವ್ಯೆಮನಸ್ಯದ ಸಮಸ್ಯೆಯನ್ನು ಶಮನಗೊಳಿಸುತ್ತಿದೆಯೆ ಅಥವಾ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆಯೆ? ಜಾತಿ ವ್ಯವಸ್ಥೆಯ ಕುರಿತು ಇದೂವರೆಗೆ ನಡೆದಿರುವ ಅಸಂಖ್ಯಾತ ಸಂಶೋಧನೆಗಳು ಅದರ ಸ್ವರೂಪವನ್ನು ಗುರುತಿಸಲು ಏಕೆ ವಿಫಲವಾಗಿವೆ? ಎಲ್ಲರಲ್ಲೂ ಮಾನವೀಯತೆಯ ಮೌಲ್ಯವನ್ನು ಬಿತ್ತುವ ಆಶಯವನ್ನು ಇಟ್ಟುಕೊಂಡ ಚಳುವಳಿಗಳು ಪ್ರಬಲವಾದಂತೆಲ್ಲಾ ಜಾತಿ ಧ್ವೇಷ ಹಾಗೂ ವ್ಯೆಮನಸ್ಯಗಳೂ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಹಾಗೂ ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಾದ ತುರ್ತು ನಮಗೆಲ್ಲರಿಗೂ ಇದೆ ಎನ್ನುವುದನ್ನು ದೇವನೂರರೂ ಒಪ್ಪುತ್ತಾರೆ ಎಂದು ನಾನು ಭಾವಿಸಿದ್ದೇನೆ. ನಾವೆದುರಿಸುತ್ತಿರುವ ಈ ಸಮಸ್ಯೆಗಳೇ ಜಾತಿಯನ್ನು ಕುರಿತ ಸಂಶೋಧನಾ ಪ್ರಶ್ನೆಗಳನ್ನು ಚರ್ಚೆಗೊಳಪಡಿಸಲು ನಮಗೆ ಮೂಲ ಪ್ರೇರಣೆಯಾಗಿವೆ.
ಬಾಲುರವರ ಪ್ರಕಾರ ಜಾತಿವ್ಯವಸ್ಥೆ ಇದೆ ಎನ್ನುವ ನಂಬಿಕೆಯನ್ನು ಆಧರಿಸಿರುವ ಚಿಂತನೆಗಳು ಹಾಗೂ ಚಳುವಳಿಗಳು ನಾವು ತಲುಪಬೇಕಾದ ಗುರಿಯನ್ನು ಅಂದರೆ ಶೋಷಣಾರಹಿತ, ಪರಸ್ಪರ ಸಹಬಾಳ್ವೆಗೆ ಪೂರಕವಾದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅಡ್ಡಿಯಾಗಿವೆ. ನಮ್ಮ ಸಮಾಜದಲ್ಲಿ ಹತ್ತು ಹಲವು ವಿಧದ ಶೋಷಣೆಗಳು, ಸಂಘರ್ಷಗಳು ಪ್ರಕಟಗೊಳ್ಳುತ್ತಲೇ ಇವೆ. ಜಾತಿ ಶೋಷಣೆ ಎಂದು ನಾವು ಗುರುತಿಸುವ ವಿದ್ಯಮಾನದಲ್ಲಿ ಜಾತಿ ಒಂದು ಸಾಧನವಾಗಿ ಬಳಕೆಯಾಗುತ್ತಿದೆಯೇ ಹೊರತು ಜಾತಿಯಿಂದಾಗಿಯೇ ಅಂತಹ ಶೋಷಣೆ ಹುಟ್ಟಿಕೊಳ್ಳುತ್ತದೆ ಎಂದು ನಮಗೆ ತೋರಿಸಲಾಗುವುದಿಲ್ಲ. ಜಾತಿ ವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ನೋಡಿದಾಗ ಜಾತಿಗಳು ಇದ್ದದ್ದರಿಂದಾಗಿಯೇ ಅಂತಹ ಸಂಘರ್ಷ ಉಂಟಾಯಿತೆಂಬಂತೆ ಕಾಣುತ್ತದೆ ಎನ್ನುವುದು ಅವರ ವಾದ. ಉದಾಹರಣೆಗೆ, ಒಂದು ಹಾಸ್ಟೆಲ್ನಲ್ಲಿರುವ ವಿವಿಧ ಜಾತಿಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ಉಂಟಾದಾಗ ಜಾತಿಯೇ ಕಾರಣವೆಂಬಂತೆ ನಾವು ಪರಿಗಣಿಸುತ್ತೇವೆ. ಆದರೆ ಅದೇ ವಿದ್ಯಾರ್ಥಿಗಳು ವಿವಿಧ ಭಾಷೆಯವರಾಗಿದ್ದರೆ ಅಥವಾ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದರೆ ಮತ್ತು ಅವರ ನಡುವೆ ಜಗಳ ನಡೆದರೆ ಆಗ ಭಾಷೆ ಅಥವಾ ಜಿಲ್ಲೆಗಳು ಇರುವುದರಿಂದಲೇ ಸಮಸ್ಯೆ ಉದ್ಭವಿಸಿತು ಎನ್ನು ತೀರ್ಮಾನಕ್ಕೆ ನಾವು ಬರುವುದಿಲ್ಲ ಮತ್ತು ಆ ಕಾರಣಕ್ಕಾಗಿ ಭಾಷೆಗಳನ್ನೇ ಅಥವಾ ಜಿಲ್ಲೆಗಳನ್ನೇ ನಿರ್ಮೂಲನೆ ಮಾಡಬೇಕೆಂದು ನಮಗನಿಸುವುದಿಲ್ಲ. ತಮ್ಮ ನಡುವಿನ ವೈಮನಸ್ಯಕ್ಕೆ ಭಾಷೆ ಅಥವಾ ಜಿಲ್ಲೆಗಳನ್ನು ಸಾಧನವಾಗಿ ಬಳಸಿಕೊಂಡರು ಎಂದಷ್ಟೇ ನಾವು ನೋಡುತ್ತೇವೆ. ಆದರೆ ಜಾತಿ ಘರ್ಷಣೆಗಳ ವಿಷಯಕ್ಕೆ ಬಂದಾಗ ಜಾತಿ ನಿರ್ಮೂಲನವೊಂದೇ ಪರಿಹಾರವಾಗಿ ನಮಗೆ ಕಾಣತೊಡಗುತ್ತದೆ.
ಒಂದು ಶೋಷಣಾರಹಿತ ಹಾಗೂ ನ್ಯಾಯಯುತ ಸಮಾಜವನ್ನು ನಿರ್ಮಿಸಬೇಕೆಂಬ ಕಳಕಳಿ ಇರುವವರಿಗೆ ಮುಖ್ಯವಾಗಬೇಕಾದ ಅಂಶವೆಂದರೆ ಸಮಸ್ಯೆಯ ಸ್ವರೂಪವನ್ನು ಗುರುತಿಸುವಲ್ಲಿ ಯಾವ ಮಾರ್ಗ ಹೆಚ್ಚು ವ್ಯೆಜ್ಞಾನಿಕವಾದುದು ಮತ್ತು ಅದು ಎಷ್ಟರಮಟ್ಟಿಗೆ ಸಮಾಜದಲ್ಲಿ ಕಂಡುಬರುತ್ತಿರುವ ಅಸಮಾನತೆ, ಅನ್ಯಾಯ ಶೋಷಣೆಗಳಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಮರ್ಥವಾಗಿದೆ ಎನ್ನುವುದರತ್ತ ಗಮನ ಹರಿಸುವುದು. ಈ ನಿಟ್ಟಿನಲ್ಲಿ ಬಾಲುರವರದು ಒಂದು ಪ್ರಾಕ್ಕಲ್ಪನೆ (ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎನ್ನುವ) ಮಾತ್ರ. ಈ ಪ್ರಾಕ್ಕಲ್ಪನೆ ಮುಂದೆ ಈ ನಿಟ್ಟಿನಲ್ಲಿ ಯಾರಾದರೂ ಕ್ಯೆಗೊಳ್ಳಬಹುದಾದ ಸಂಶೋಧನೆಯ ಸಾಧ್ಯತೆಯನ್ನು ತೋರಿಸುತ್ತದೆ ಹಾಗೂ ಅಂತಹ ಒಂದು ಸಂಶೋಧನೆಯಲ್ಲಿ ಅವರ ಪ್ರಾಕ್ಕಲ್ಪನೆಯು ನಿರಾಕಾರಿಸಲ್ಪಡುವ ಸಾಧ್ಯತೆಯೂ ಇದೆ. ಅವರ ಪ್ರಾಕ್ಕಲ್ಪನೆಯು ಸಂಶೋಧನೆಯ ಮೂಲಕ ಸಾಬೀತಾಗಬೇಕಾದರೆ ಕೆಲವು ಕನಿಷ್ಟ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ. ಅವುಗಳೆಂದರೆ: 1) ಜಾತಿಶೋಷಣೆಯ ವಿದ್ಯಮಾನದ ಬಗ್ಗೆ ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ನಾವು ಕೊಡುತ್ತಿರುವ ವಿವರಣೆಗಳಿಗಿಂತ ಉತ್ತಮವಾದ, ಅಂದರೆ ಕಡಿಮೆ ಆಂತರಿಕ ವ್ಯೆರುಧ್ಯಗಳನ್ನೊಳಗೊಂಡ (ಸಂಶೋಧನೆಯಲ್ಲಿ ಯಾವುದೇ ವಿವರಣೆಯು ಸಂಪೂರ್ಣವಾದ ಅಥವಾ ಅಂತಿಮವಾದ ವಿವರಣೆಯಾಗಿರುವುದಿಲ್ಲ) ಹಾಗೂ, 2) ಆ ವಿದ್ಯಮಾನದಲ್ಲಿ ನಾವು ಗುರುತಿಸುವ ಸಮಸ್ಯೆಗಳಿಗೆ ಈಗಿರುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವಂತಹ ವಿವರಣೆ ಅದಾಗಿರಬೇಕು. ಹಾಗಿದ್ದಾಗ ಮಾತ್ರ ಅದು ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ಇಲ್ಲವಾದಲ್ಲಿ ಅವರ ಪ್ರಾಕ್ಕಲ್ಪನೆ ಬಿದ್ದುಹೋಗುತ್ತದೆ. ಮೇಲಿನ ಈ ಎರಡು ಅಂಶಗಳು ಅವರ ಪ್ರಾಕ್ಕಲ್ಪನೆಯನ್ನು ಪರೀಕ್ಷಿಸುವ ಮಾನದಂಡಗಳೂ ಕೂಡ ಆಗಿವೆ.
ಅದರೆ ಈಗ ಬಾಲುರವರ ಪ್ರಾಕ್ಕಲ್ಪನೆಗೆ ಬರುತ್ತಿರುವ ಟೀಕೆಗಳ ಮಾನದಂಡ ಯಾವುದಾಗಿದೆ ನೋಡಿ. ಮೊದಲನೆಯದಾಗಿ, ಈಗಿರುವ ವಿವರಣೆಗಳು (ಜಾತಿವ್ಯವಸ್ಥೆ, ಪುರೋಹಿತಶಾಹಿ, ಬ್ರಾಹ್ಮಿಣಿಸಂ ಇತ್ಯಾದಿ) ಪ್ರಶ್ನಾತೀತ ಎನ್ನುವ ಧೋರಣೆ. ಎರಡನೆಯದಾಗಿ, ಜಾತಿ ವ್ಯವಸ್ಥೆಯ ಸೈದ್ಧಾಂತಿಕ ಚೌಕಟ್ಟನ್ನು ಪ್ರಶ್ನಿಸುವುದೆಂದರೆ ಅದನ್ನು ಆದರಿಸಿ ಇದೂವರೆಗೂ ಕಟ್ಟಿಕೊಂಡು ಬಂದ ಚಳುವಳಿಗಳ, ಹೋರಾಟಗಳ, ಮತ್ತು ಅದಕ್ಕಾಗಿ ಲಕ್ಷಾಂತರ ಮಂದಿ (ಅಂಬೇಡ್ಕರ‍್ ರವರನ್ನೂ ಒಳಗೊಂಡಂತೆ) ಮಾಡಿದ ತ್ಯಾಗದ ಮೂಲ ಆಶಯವನ್ನೇ ಅಲ್ಲಗಳೆದಂತೆ ಎನ್ನುವ ಮನೋಭಾವ. ಮೂರನೆಯದಾಗಿ, ಈಗ ಅನುಸರಿಸುತ್ತಿರುವ ಮಾರ್ಗಕ್ಕೆ ಯಾವುದೇ ಪರ್ಯಾಯ ಇರುವುದು ಸಾಧ್ಯವೇ ಇಲ್ಲ ಎನ್ನುವ ಅಚಲ ನಂಬಿಕೆ. ಸಾಮಾಜಿಕ ಅಥವಾ ಯಾವುದೇ ಚಳುವಳಿಯಲ್ಲಿ ತೊಡಗಿರುವವರಿಗೆ ಇಂತಹ ಧೋರಣೇಗಳಿರುವುದು ಅಸಹಜವೇನಲ್ಲ. ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ತಾನು ಸಾಗುತ್ತಿರುವ ಮಾರ್ಗದ ಬಗ್ಗೆ ನಂಬಿಕೆ ಹೊಂದಿರದ ವ್ಯಕ್ತಿ ಚಳುವಳಿಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಶೋಧನೆಯಲ್ಲಿ ಅಂತಹ ಧೋರಣೆ ಅತ್ಯಂತ ಅಪಾಯಕಾರಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಸ ಸಾಧ್ಯತೆಗಳನ್ನೇ ಶಾಶ್ವತವಾಗಿ ಅದು ಮುಚ್ಚಿಬಿಡುತ್ತದೆ. ದೇವನೂರರು ಕೇವಲ ಒಬ್ಬ ಚಳುವಳಿಯ ಕಾರ್ಯಕರ್ತ ಮಾತ್ರವಲ್ಲ ಅವರು ಒಬ್ಬ ಚಿಂತಕರೂ ಹೌದು. ಆದರೆ ಬಾಲುರವರ ಸಂಶೋಧನಾ ಪ್ರಾಕ್ಕಲ್ಪನೆಯನ್ನು ವಿಮರ್ಶೆಗೊಳಪಡಿಸುವಾಗ ಅವರು ಅನುಸರಿಸುತ್ತಿರುವ ಮಾನದಂಡ ಮಾತ್ರ ಚಳುವಳಿಯ ಕಾರ್ಯಕರ್ತನದು.
ಬಾಲು ಅವರ ವಾದದ ಬಗ್ಗೆ ಟೀಕೆಗಳು, ವಿಮರ್ಶೆಗಳು ಬಂದಷ್ಟೂ ಒಳ್ಳೆಯದೇ. ಹಾಗಿದ್ದಾಗ ಮಾತ್ರ ಜ್ಞಾನದ ಮುಂದುವರಿಕೆ ಸಾಧ್ಯ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೊಂದು ದಿನ ಬಾಲು ಮಂಡಿಸಿದ ಪ್ರಾಕ್ಕಲ್ಪನೆಯನ್ನು ಅದಕ್ಕಿಂತಲೂ ಉತ್ತಮವಾದ ಮತ್ತೊಂದು ಪ್ರಾಕ್ಕಲ್ಪನೆಯು ಬದಲಿಸದಿದ್ದರೆ ಅವರು ಈಗ ಮಾಡುತ್ತಿರುವುದು ವ್ಯೆಜ್ಞಾನಿಕ ಸಂಶೋಧನೆಯೇ ಅಲ್ಲ ಎಂದಾಗುತ್ತದೆ. ಅವರು ಹೆಳುತ್ತಿರುವುದು ಸಾರ್ವಕಾಲಿಕ ಅಂತಿಮ ಸತ್ಯವೆಂದು ಯಾರಾದರೂ ಹೇಳಿದರೆ ಅವರಿಗೆ ಸಂಶೋಧನೆಯ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಹೇಳಬೇಕಾಗುತ್ತದೆ. ಜಾತಿ ವ್ಯವಸ್ಥೆಯನ್ನು ಕುರಿತ ಬಾಲು ಅವರ ಪ್ರಾಕ್ಕಲ್ಪನೆಯನ್ನು ನಿರಾಕರಿಸಲು ಜಾತಿ ವ್ಯವಸ್ಥೆಯ ಬಗ್ಗೆ ಈಗಾಗಲೇ ಕಟ್ಟಿಕೊಂಡಿರುವ ಬೌದ್ಧಿಕ ಚೌಕಟ್ಟಿನ ಬಗ್ಗೆ ಅವರು ಎತ್ತುವ ಸಮಸ್ಯೆಗಳಿಗೆ ಸಮರ್ಥ ಉತ್ತರ ನೀಡಬೇಕಾಗುತ್ತದೆ. ಅಂತಹ ಸಂಶೋಧನೆಯಲ್ಲಿ ತೊಡಗುವುದೇ ಹುನ್ನಾರ, ಕುಯುಕ್ತಿ ಎನ್ನುವುದು ಉತ್ತರವಾಗುವುದಿಲ್ಲ. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ನಾವು ಈಗಾಗಲೇ ಕಂಡುಕೊಂಡಿರುವ ಮಾರ್ಗಕ್ಕೆ ಪರ್ಯಾಯಗಳೇ ಇಲ್ಲ, ಅಂತಹ ಒಂದು ಪರ್ಯಾಯದ ಹುಡುಕಾಟ ನಿರರ್ಥಕ ಎನ್ನುವ ನಿಲುವು ಜ್ಞಾನದ ಬೆಳವಣಿಗೆಯನ್ನೇ ಸ್ಥಗಿತಗೊಳಿಸಿಬಿಡುತ್ತದೆ.
ಮೀಸಲಾತಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ತನ್ನೆಲ್ಲಾ ಮಿತಿಗಳ ನಡುವೆ ಮೀಸಲಾತಿಯು ಅದರ ಫಲಾನುಭವಿ ಜಾತಿಗಳ ಅಭ್ಯುದಯದಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿದೆ ಎನ್ನುವುದು ನನ್ನ ನಿಲುವು. ಎರಡು ದಶಕಗಳ ಹಿಂದೆ ನಾನು ಮಂಡಿಸಿದ ಪಿ.ಹೆಚ್.ಡಿ ಪ್ರಬಂಧದ ಕೊನೆಯಲ್ಲಿ ‘ಯಾವ ವ್ಯವಸ್ಥೆಯೊಳಗೆ ಹಾಗೂ ಯಾವ ವ್ಯವಸ್ಥೆಯ ಕಾರಣದಿಂದಾಗಿ ಮೀಸಲಾತಿಯ ಬೇಡಿಕೆ ಹುಟ್ಟಿಕೊಂಡಿದೆಯೋ ಅಂತಹ ವ್ಯವಸ್ಥೆಯಲ್ಲಿರುವ ಅನ್ಯಾಯಕ್ಕಿಂತ ಮಿಗಿಲಾದ ಅನ್ಯಾಯ ಮೀಸಲಾತಿಯಿಂದಾಗುವುದು ಸಾಧ್ಯವಿಲ್ಲ’, ಹೇಳಿರುವ ನನ್ನ ನಿಲುವು ಸರಿ ಎಂದು ಇಂದಿಗೂ ನನಗನಿಸುತ್ತದೆ. ಆದರೆ ಯಾವ ಗುರಿಯನ್ನು ಮುಟ್ಟುವ ಉದ್ದೇಶದಿಂದ ಮೀಸಲಾತಿಯನ್ನು ಸಾಧನವನ್ನಾಗಿ ನಾವು ಬಳಸುತ್ತಿದ್ದೇವೆಯೋ ಅಂತಹ ಗುರಿಯನ್ನು ನಾವು ಅದರ ಮೂಲಕ ಮುಟ್ಟಲು ಸಾಧ್ಯವಾಗುವುದಿಲ್ಲ, ಬದಲಿಗೆ ದೀರ್ಘಕಾಲದಲ್ಲಿ ಮೀಸಲಾತಿಯ ಫಲಾನುಭವಿ ಜಾತಿಗಳಿಗೆ ಅದರಿಂದ ಅನ್ಯಾಯವೇ ಆಗುತ್ತದೆ ಎಂದು ಯಾರಾದರೂ ವಾದಿಸಿದರೆ ಅಂತಹ ವಾದವನ್ನು ಮುಕ್ತಮನಸ್ಸಿನಿಂದ ಕೇಳಿಸಿಕೊಳ್ಳುತ್ತೇನೆ. ಹಾಗೆ ವಾದಿಸುವುದೇ ಒಂದು ಅಪರಾಧ ಎಂದು ನನಗನಿಸುವುದಿಲ್ಲ. ಏಕೆಂದರೆ ಅನ್ಯಾಯವನ್ನು ಸರಿಪಡಿಸುವುದು ನನಗೆ ಮುಖ್ಯವೇ ಹೊರತು ಮೀಸಲಾತಿಯನ್ನಾಗಲೀ ಅಥವಾ ಜಾತಿ ವ್ಯವಸ್ಥೆಯ ಕುರಿತು ಈಗಿರುವ ಬೌದ್ಧಿಕ ಚೌಕಟ್ಟನ್ನಾಗಲೀ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆನ್ನುವ ಹಠ ಸರಿ ಎಂದು ನನಗನಿಸುವುದಿಲ್ಲ. ಅಂತಹ ಹಠಮಾರಿತನದ ನಿಲುವಿನಿಂದ ಹುಟ್ಟಬಹುದಾದ ಪಟ್ಟಭದ್ರ ಶಕ್ತಿಗಳು ಸೃಷ್ಟಿಸಬಹುದಾದ ಅಪಾಯದ ಲಕ್ಷಣಗಳು ಈಗಾಗಲೇ ಗೋಚರಿಸತೊಡಗಿವೆ.
”ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ.”
Kannada Pls
ಜ್ಞಾನಕ್ಕೆ ಪ್ರಾಧಾನ್ಯ ಕೊಡಲಿಚ್ಚಿಸದವರ ಬಗ್ಗೆ ಇಷ್ಟು ಕುತುಹಲ ಎಕೆ? ಹಿಂದೂ ಸಂಕೃತಿಯನ್ನು ತಿರಸ್ಕರಿಸುತ್ತಿರುವ ಕಾರಣವೇ? ಬಿಡಿ, ಡಾ|| ಅಂಬೇಡ್ಕರರವರೇ ದ್ವೇಷಕ್ಕೆ ಶರಣಾಗಿ ಹಿಂದೂ ಸಮಾಜಶಾಸ್ತ್ರದ ಕುರಿತು ಟೀಕೆ ಮಾಡುವ ಬದಲಾಗಿ ಕಟಾಕ್ಷ ಮಾಡಿರುವಾಗ ಈ ಮಹಾದೇವರಂಥವರ ದ್ರಿಷ್ಟಿಕೊನಕ್ಕೆ ಉಪ್ಪು ಹಾಕುವುದಾದರೂ ಏಕೆ? ಅವರಲ್ಲಿ ಅಷ್ಟು ಜಾಣ್ಮೆ ಇದ್ದಲ್ಲಿ ನನ್ನೊಡನೆ ತಾರ್ಕಿಕ ಚರ್ಚಾಕೂಟಕ್ಕೆ ಅಣಿಯಾಗಲಿ. Open debate ಇದಕ್ಕೆ ತಕ್ಕ ಸೂಕ್ತ ಉಪಚಾರ. ಅಲ್ಲೇ ಜನರಿಗೆ ತಿಳಿದು ಬರುವುದು ಇವರ ವಾದದಲ್ಲಿ ಎಷ್ಟು ವಿಷಯ-ಅರ್ಥವಿದೆ ಎನ್ನುವುದು. ಇದೇನೂ ಸತ್ಯ ಇಂದು 1980 ರಿಂದೀಚೆ ಶರದ ಪವಾರವರ ರಾಜಕೀಯ ಸ್ವಾರ್ಥಕ್ಕೆಂದು ನಾಗಪೂರದಿಂದ ಮುಂಬಾಯಿಗೆ ಪ್ರಕಾಶ್ ಅಂಬೇಡ್ಕರ್ ಹಾಗು ಅವರ ಮಾತೋಶ್ರೀಯವರನ್ನು ಕರೆತಂದು, ಇಲ್ಲಿಯ ಗಿರಗಾಂವ ಹತ್ತಿರ ಆಗಲೇ ಅಂದರೆ 1979 ರಲ್ಲಿ ಸ್ಥಾಪಿಸಿದ್ದ ದಲಿತ-ಪ್ಯಾಂಥರ ಸಂಘಟನೆಯ ಮುಂದಾಳತ್ವ ವಹಿಸಲು ಸ್ವಾಗತಿಸಲಾಯಿತು. ಶಿವಸೇನೆಯಿಂದ ಮಹಾರ ಜಾತಿಯ ಜನರನ್ನು ಮೊದಳುಬಾರಿಗೆ ಬೇರಪಡಿಸಲಾಯಿತು. ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಡಾ|| ಬಾಬಾಸಾಹೇಬ್ ಅಂಬೇಡ್ಕರ ರವರ ಹೆಸರು ನೀದಲ್ಗುವುದೆಂದು ಘೋಶಿಸಲಾಯಿತು, ಆಗ ಶಾರದಾ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.ಅಲ್ಲಿಯವರೆಗೆ ಜಾತಿಯ ಭೇದಭಾವ್ ನಗರಗಲೆಲ್ಲೂ ಕಾಣಬರುತ್ತಿರಲಿಲ್ಲ. ಅಂಬೇಡ್ಕರ ಇವರು ತಮ್ಮ ವಿಚಲಿತ್ ಮನಸ್ಥಿತಿಯಲ್ಲಿ ಕೆಲವು ಲೇಖನೆಗಳನ್ನು ಬರೆದಿದ್ದರೂ ಪ್ರಕಟಿಸದೆ ರದ್ದಿಗೆ ಎಸೆದಿದ್ದನ್ನೆಲ್ಲ ಒಂದುಗೂಡಿಸಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ಆ ಲೇಖನಗಳ ಪುಸ್ತಕಗಳನ್ನು ಪ್ರಕಟಿಸುವಂತೆ ಆದೇಶ ನೀಡಿದರು. ಮಾತ್ರ ಅದು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ದಲಿತ ಮುಖಂಡರಲ್ಲಿ ಒಬ್ಬರು ಆ ಪುಸ್ತಕಗಳನ್ನು ನನಗೆ ಓದಲು ಕೊಟ್ಟಾಗ ನನಗರಿವಾದದ್ದು ಒಂದೇ, ಹೊಟ್ಟೆಯಲ್ಲಿ ಕಿಚ್ಚಿಟ್ಟು ಪಂಡಿತನೂ ಪ್ರತಿಪಾದಿಸಲು ಹೋದಾಗ್ ಅವನಾಥ ಮೂರ್ಖ ಬೇರೆಲ್ಲೂ ಕಾಣಿರಿ. ಕೊನೆಗೆ ನಾನೇ ದಲಿತ ಸಂಘಟನೆಯ ವಿದ್ಯಾವಂತ ಜನರನ್ನು ಉದ್ದೇಶಿಸಿ ಬಾಬಾ ಸಾಹೇಬರು ಆಕ್ಷೇಪವೆತ್ತಿದ್ದ ವಿಷಯದ ವಿವೇಚನೆ ಮಾಡಿ ಭಾರತಿಯ ಸಮಜವಿಜ್ನಾನ ಹಾಗು ಸಮಾಜಶಾಸ್ತ್ರದ ಆಧಾರದ ಮೇಲೆ ಆ ಆಕ್ಷೇಪಗಳನ್ನು ಕೇವಲ ಮಾನಸಿಕ ಅಸಮಂಜಸತನೆ ಎಂದು ಸಿದ್ಧ ಮಾಡಿದೆ. ಅಲ್ಲಿ ನೆರೆದ ಎಲ್ಲರೂ ನನ್ನ ಅವಲೋಕನವನ್ನು ಮನ್ನಿಸಿ ಭಾರತಿಯ ಸನಾತನ ಸಮಾಜ್ ಶಾತ್ರವನ್ನು ಶ್ರೇಷ್ಟವೆಂದು ಒಪ್ಪಿಕೊಂಡರು. ಇದು ಸಾಧಾರಣ ಕಾರ್ಯವಾಗಿರಲಿಲ್ಲ. ಅವರದೇ ಬಹುಸಂಖ್ಯ ವಸಾಹತಿನಲ್ಲಿ ಅಂಬೇಡ್ಕರರನ್ನು ತಪ್ಪು ಎಂದು ಸಿದ್ಧ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ನನ್ನ ವ್ಯಕ್ತಿತ್ವವೇ ಭಿನ್ನ, ನನಗೆ ಎಳ್ಳಷ್ಟು ಜೀವದ ಭಯವಿಲ್ಲ. ನನ್ನ ವಿಚಾರವನ್ನು ಮಾಡಿಸಲು ಎಂದೂ ಸಂಕೋಚ ಪಡುವುದೂ ಇಲ್ಲ, ತಿಕಾಕರರ್ನ್ನು ಯಾವತ್ತೂ ಸ್ವಾಗತಿಸುತ್ತೇನೆ ಮಾತ್ರ ಕಟಾಕ್ಷ ಯಾವ ಕಾರಣಕ್ಕೂ ಸಹಿಸಲಾರೆ. ಇದೂ ಇತಿಹಾಸದ ಒಂದು ಭಾಗ ಎನ್ನುವುದನ್ನು ಮರೆಯ ಬೇಡಿ.
.
ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಘನವಾದ, ತುಂಬಾ ತೂಕದ ( ಸುಮಾರು ಒಂದು ಕ್ವಿಂಟಲ್ ನಷ್ಟು ತೂಕದ್ದು) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಚರ್ಚೆಗೆ ನೆಲೆಯಾಗಿರುವ ಅತಂತ್ಯ ವಿಶ್ವಾಸಾರ್ಹ ಪತ್ರಿಕೆ ಯೊಂದು ‘ವಿಕೃತ ಸಂಶೋಧನೆಗೆ ಕಡಿವಾಣ ಬೇಕು’ ಎಂಬುದನ್ನೆ ತಲೆಬರಹವಾಗಿ ಉಪಯೋಗಿಸಿದೆ ಮತ್ತು ೧ ಸೆಂ.ಮಿ ಗಾತ್ರದ ಅಕ್ಷರಗಳಲ್ಲಿ ಅದನ್ನು ಪ್ರಕಟಿಸಿದೆ! ಅದನೆಂದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವಿಕೃತ ಸಂಶೋಧನೆಗಳಿಗೆ ಕಡಿವಾಣ ಹಾಕಬೇಕು..ಈ ಎಲ್ಲ ಸಂಶೋಧನೆಗಳು ಸಮಾಜಕ್ಕೆ ತಪ್ಪು ಕಲ್ಪನೆಯನ್ನು ನೀಡುತ್ತವೆ ಎಂದು. ಕೆಲವು ಸಂಶೋಧಕರಿಗೆ ತಾವು ಮಾಡಿದ್ದು, ಮಾಡುತ್ತಿರುವುದು ಮಾತ್ರ ‘ಸುಕೃತ’ ಸಂಶೋಧನೆ, ತಾವೇ ಒಂದು ವಿಷಯದ ಬಗ್ಗೆ ಫೈನಲ್ ಅಥಾರಿಟಿ ಎಂಬ ಭ್ರಮೆಯಿರುತ್ತದೆ. ಯಾರೇನೂ ಬ್ರಹ್ಮರಲ್ಲ.. ಆಣ್ಣಿಗೇರಿಯ ತಲೆಬುರುಡೆ ಯ ಇತಿಹಾಸ ಕುರಿತು ಕಲ್ಬುರ್ಗಿಯವರ ‘ಕರಾರುವಾಕ್ಕು’ ವಾಖ್ಯಾನ ಓದಿದ್ದು..ನಂತರ ವೈಜ್ಞಾನಿಕವಾಗಿ ಅದರ ಕಾಲ ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ.
.. ‘ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಸಂಶೋಧಕ ಎಂ.ಎಂ ಕಲ್ಬುರ್ಗಿಯವರು’ ಅಂತಾಗಬೇಕಿತ್ತು.. ಕ್ಷಮಿಸಿ
ಸ್ಥಾಪಿತ ವಾದಗಳಿಗೆ ವಿರುದ್ದವಾಗಿ ಪ್ರಶ್ನೆಗಳನ್ನು ಎತ್ತಿದ್ದರೆ ಅವುಗಳಿಗೆ ಬೌದ್ದಿಕವಾಗಿ ಉತ್ತರಿಸಲಾಗದೆ ಅಧಿಕಾರದ ಧರ್ಪದ ಮೂಲಕ ಆ ರೀತಿಯ ಪ್ರಶ್ನೆಗಳನ್ನು ಕೇಳುವ ದ್ವನಿಗಳನ್ನು ಅಡಗಿಸುವ ಫ್ಯಾಸಿಸ್ಟ್ ಧೋರಣೆಯನ್ನು ಪ್ರದರ್ಶಿಸುವುದು ಹಲವು ದಶಕಗಳಿಂದ ಘನಸಂಶೋಧಕರೆಂಬ ಹಣೆಪಟ್ಟಿಹೊತ್ತವರಿಗೆ ಭೂಷಣವೇ? ಸಾಮಾಜಿಕ ವಾಸ್ತವಗಳನ್ನು ಶೋದಿಸುವ ಅವಶ್ಯಕತೆಯನ್ನೇ ನಿರಾಕರಿಸುವ ಮತ್ತು ತಾವು ಒಪ್ಪಿತ ನಿಲುಗಳ ಕುರಿತ ಮೂಲಭೂತ ಪ್ರಶ್ನೆಗಳು ಎದ್ದಾಗ ಆ ಪ್ರಶ್ನೆಗಳ ಬೌದ್ದಿಕ ಆಯಾಮಗಳನ್ನೇ ಮರೆಮಾಚಿ ಆ ರೀತಿ ಪ್ರಶ್ನಿಸುವವರೆಲ್ಲರೂ ಅನೈತಿಕರೂ ಮತ್ತು ಅಮಾನವೀಯ ಜೀವಿಗಳು ಎಂಬಂತೆ ತೀರ್ಪುಕೊಟ್ಟು ಅಮಾಯಕರನ್ನು ಎತ್ತಿಕಟ್ಟುವ ಕುಟಿಲತೆ ಯಾವ ಬೌದ್ದಿಕ ಚಿಂತನೆಯ ಲಕ್ಷಣ?
ನೂರಾರು ವರ್ಷಗಳಿಂದ ಈ ಮಹಾನ್ ಬುದ್ದಿಜೀವಿಗಳ ವಿವರಿಸಿದ್ದನ್ನೆಲ್ಲಾ ಒಪ್ಪಿ ಅವರು ಸೂಚಿಸಿದ್ದೆಲ್ಲವನ್ನು ಕಾಯ್ದೆಗಳ ರೂಪದಲ್ಲಿ ಜಾರಿಗೊಳಿಸಿ ಐದಾರು ದಶಕಗಲು ಕಳೆದ ಮೇಲೂ ಶೋಷಣೆ ಅನ್ಯಾಯಗಳೆನ್ನಿಸುವ ವಾಸ್ತವಗಳು ನಮ್ಮ ಕಣ್ಣೆದುರಿಗೇ ರಾಚುವಂತೆ ಜೀವಂತವಿದ್ದಾಗಲೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವಲ್ಲಿ ಮತ್ತು ಅವುಗಳಿಗೆ ನೀಡಿರುವ ಪರಿಹಾರಗಳಲ್ಲಿ ಧೋಷಗಳಿರಬಹುದೇ ಮತ್ತು ಈ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಬೇರುಸಹಿತ ನಿರ್ಮೂಲನ ಮಾಡಲು ಈಗಿರುವ ವಿವರಣೆಗಳಿಗಿಂತ ಉತ್ತಮವಾದ ಸಿದ್ದಾಂತಗಳನ್ನು ರೂಪಿಸಲು ಸಾಧ್ಯವಿದೆಯೇ ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗುವುದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿರುವ ಈ ಸ್ಥಾಪಿತ ನಿಲುವುಗಳ ವಕ್ತಾರರ ಹಿಂದಿರುವ ಕಾಳಜಿಯಾದರೂ ಏನು?
ಇವರಿಗೆ ಈ ಅನ್ಯಾಯ ಶೋಷಣೆಗಳನ್ನು ನಮ್ಮ ಸಮಾಜದಿಂದ ಬೇರುಸಹಿತ ಕಿತ್ತುಹಾಕುವುದು ಬೇಕಿಲ್ಲವೇ? ಈ ಸಮಸ್ಯೆಗಳು ಮರೆಯಾದರೆ ತಮ್ಮ ಮಾನವೀಯ ಮುಖವಾಡದ ಪ್ರದರ್ಶನಕ್ಕೆ ನಿಧರ್ಶನಗಳು ಸಿಗದಲ್ಲಾ ಎನ್ನುವ ಅಂಜಿಕೆ ಇವರುಗಳಿಗಿದೆಯೇ? ಈ ಶೋಷಣೆಯ ಅನ್ಯಾಯದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿಕೊಂಡಿರುವ ‘ಬೌದ್ದಿಕ ನಾಯಕತ್ವ’ ಮತ್ತು ಇತರೆ ಸ್ಥಾನಮಾನ, ಪ್ರಶಸ್ತಿಗಳಿಂದ ವಂಚಿತವಾಗಿಬಿಡಬಹದು ಎನ್ನುವ ಭಯ ಇವರನ್ನು ಆವರಿಸಿದೆಯೇ? ಇವರ ಕಿರೀಟಗಳು ಶಾಶ್ವತವಾಗಿರಬೇಕೆಂಬ ಕಾರಣಕ್ಕೆ ನಮ್ಮ ಜನ ಇದೇ ಸ್ಥಿತಿಯನ್ನು ಮತ್ತು ಇನ್ನೂ ಹೆಚ್ಚಿನ ಕಷ್ಟಕೋಟಲೆಗಳನ್ನು ಅನುಭವಿಸುತ್ತಾ ಮುಂದುವರಿಯಬೇಕೇ? ಅನ್ಯಾಯ ಮತ್ತು ಶೋಷಣೆಗಳಿಗೆ ಒಳಗಾಗಿರುವುವರು ಈ ಸೋಗಲಾಡಿ ಮೊಸಳೆ ಕಣ್ಣೀರನ್ನು ಇನ್ನೂ ಎಷ್ಟುದಿನ ನಂಬಿಕೊಂಡು ಹೋಗಬೇಕು?
ನನ್ನ ಪ್ರಕಾರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಬಹುಬೇಗ ಈ ವೇಷಗಳನ್ನು ಕಳಚಲೇಕಾದ ಅನಿವಾರ್ಯತೆ ಬರುತ್ತದೆ. ಇನ್ನೂ ಈ ಕಪಟನಾಟಕಗಳನ್ನು ಸಹಿಸಿಕೊಂಡು ಇವರು ನಮ್ಮನ್ನು ಉದ್ದಾರಮಾಡುವ ಅವತಾರಪುರಷರೆಂದು ನಂಬಿಕೊಂಡಿರುವ ಸಹನೆ ಈ ಅನ್ಯಾಯಶೋಷಣೆಗೊಳಗಾಗಿರುವ ಜನರಿಗೆ ಇಲ್ಲ. ನಮ್ಮ ಸಮಾಜದ ಕುರಿತ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಅವರ ಸ್ಥಾಪಿತ ನಿಲುವುಗಳಿಗೆ ವಿರುದ್ದವಾಗಿರುವ ಎತ್ತುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ತೋರುತ್ತಿರುವ ಅವರ ವರ್ತನೆಗಳೇ ಅವರ ನಾಟಕಗಳು ಜಗಜ್ಜಾಹಿರಾಗುವಂತೆ ನಿದರ್ಶನಗಳನ್ನು ಕೊಡುತ್ತಿವೆ.