ವಿಷಯದ ವಿವರಗಳಿಗೆ ದಾಟಿರಿ

ಮೇ 17, 2013

ಹೇಗೆ ಹೇಳಲಿ? ಏನು ಹೇಳಲಿ?

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ ಹೆಗಡೆ
Vachana Charche ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ {ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}

ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.

ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.

ಹಾಗಾಗಿ ಈ ಆರೋಪ ನಿರಾಧಾರವಾದುದು ಎಂಬುದನ್ನು ಸ್ಪಷ್ಟೀಕರಿಸುತ್ತಿದ್ದೇನೆ. ಈ ಆರೋಪವನ್ನು ಮಾಡಲಿಕ್ಕೆ ದೊರೆಯುವ ಸಮರ್ಥನೆಗಳು ಯಾವವು? 1) ನಾವು ಈಗ ಪ್ರಚಲಿತದಲ್ಲಿರುವ, ವಿದ್ವಾಂಸರು ಸತ್ಯವೆಂದುಕೊಂಡಿರುವ ವಿಚಾರಗಳಲ್ಲಿ ಸಮಸ್ಯೆಗಳಿವೆ ಎಂಬುದನ್ನು ತೋರಿಸುತ್ತಿದ್ದೇವೆ. 2) ಈ ವಿಚಾರಗಳು ಇಂದಿನ ಸಾಮಾಜಿಕ ನ್ಯಾಯದ ಜೊತೆಗೆ ತಳಕು ಹಾಕಿಕೊಂಡಿವೆ. 3) ಇಂದಿನ ಸಾಮಾಜಿಕ ನ್ಯಾಯದ ಹಾಗೂ ಅದನ್ನಾಧರಿಸಿದ ನೀತಿಗಳ ಕುರಿತು ಮರುಚಿಂತನೆ ನಡೆಸಬೇಕೆಂಬ ಆಶಯವೂ ನಮ್ಮ ಸಂಶೋಧನೆಯಲ್ಲಿದೆ. ಈ ಸಂಗತಿಗಳು ಇವೆ ಎಂದಾಕ್ಷಣ ನಾವು ಅನ್ಯಾಯದ ಪರ, ಸಮಾಜವಿರೋಧಿಗಳು ಎಂಬುದಾಗಿ ಯಾವ ಸೀಮೆಯ ತರ್ಕದ ಪ್ರಕಾರ ಹೇಳುತ್ತೀರಿ? ಈ ಆಶಯವು ವಿಶೇಷವಾಗಿ ನಮ್ಮ ಮಾನವೀಯ ಕಳಕಳಿಯಿಂದಲೇ ಹುಟ್ಟಿದೆ ಎಂಬುದಾಗಿ ಗ್ರಹಿಸುವ ಸಾಧ್ಯತೆಯೂ ಇದೆಯಲ್ಲ? ನಮ್ಮ ಈ ಕೆಲಸದಲ್ಲಿ ಒಂದೊಮ್ಮೆ ನಾವು ತಪ್ಪುಗಳನ್ನು ಮಾಡಿರಬಹುದಾದರೂ ಅವನ್ನು ನಮ್ಮ ಸಂಶೋಧನೆಯ ಮಿತಿಗಳು ಎಂದು ಸಹಜವಾಗಿಯೇ ಗುರುತಿಸಬಹುದಲ್ಲ? ವೃಥಾ ದುರುದ್ದೇಶದ ಆರೋಪವೇಕೆ? ಇಂಥ ಸಂಶೋಧನೆಯನ್ನೇ ಮಾಡಕೂಡದು, ಅದು ಸಮಾಜ ವಿರೋಧಿ ಧೋರಣೆಯಾಗುತ್ತದೆ ಎಂದು ವಾದಿಸುವುದಾದರೆ ನಿಮ್ಮ ಪ್ರಕಾರ ಇಂದಿನ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಂತಿಮ ವಾದುದು, ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ, ಹಾಗೂ ಅದಕ್ಕೆ ಯಾವ ಪರ್ಯಾಯವೂ ಇಲ್ಲ ಎಂಬುದಾಗಿ ನಂಬಬೇಕಾಗುತ್ತದೆ. ಆಗ ನಮ್ಮ ಉದ್ದೇಶಗಳನ್ನು ಶಂಕಿಸುವ ಬದಲು ಸಮಾಜ ವಿಜ್ಞಾನ ವಿಭಾಗಗಳನ್ನೇ ಮುಚ್ಚಲು ಕರೆ ಕೊಡುವುದು ಒಳ್ಳೆಯ ಉಪಾಯವಲ್ಲವೆ?

ಈ ಹಿಂದೆ ಉಲ್ಲೇಖಿಸಿದ ಮೂರು ಅಂಶಗಳನ್ನು ಬಿಟ್ಟು ನಮ್ಮ ಸಂಶೋಧನೆಗೆ ಬೇರಾವುದೇ ಉದ್ದೇಶವಿದೆ ಎಂಬುದನ್ನು ನಮ್ಮ ಯಾವುದೇ ಬರೆಹಗಳಾಗಲೀ, ಭಾಷಣಗಳಾಗಲೀ ತಿಳಿಸುತ್ತಿಲ್ಲ. ಆದರೆ ನಮ್ಮ ಲೇಖನಗಳ ಸಾಲುಗಳನ್ನು ಸಂದರ್ಭದಿಂದ ಪ್ರತ್ಯೇಕಿಸಿ, ಅವುಗಳ ಅಭಿವ್ಯಕ್ತಿಯಲ್ಲಿರಬಹುದಾದ ಮಿತಿಗಳನ್ನು ದೊಡ್ಡಮಾಡಿ ನಾವು ದುರುದ್ದೇಶದಿಂದ ಸಂಶೋಧನೆ ಮಾಡುತ್ತಿದ್ದೇವೆ ಎಂಬುದನ್ನು ದೃಷ್ಟಾಂತ ಪಡಿಸಲೆಂದೇ ಅವನ್ನು ಬಳಸಿಕೊಂಡಾಗ ತತ್ ಕ್ಷಣಕ್ಕೆ ಅದು ನಮ್ಮ ಮೇಲೆ ಸಂದೇಹ ಮೂಡಿಸುವ ಸಾಧ್ಯತೆ ಇದೆ. ಉದಾಹರಣೆಗೆ ದಲಿತರ ಮೇಲಿನ ದೌರ್ಜನ್ಯದ ಕುರಿತ ಅಂಕಿ ಅಂಶಗಳು. ಅದರ ಅಡಿ ಟಿಪ್ಪಣಿಯಲ್ಲಿ “ಇದು ಅಸಾಧ್ಯವೆಂದೇನೂ ನಮ್ಮ ಊಹೆಯಲ್ಲ” ಎಂಬ ಸಾಲನ್ನು ಚೆನ್ನಿಯವರು ಕೈಬಿಟ್ಟಿದ್ದಾರೆ. ನಂತರ ಆ ಭಾಗವನ್ನು ನಿರೂಪಿಸಿ ಮುಂದಿನ ಪ್ಯಾರಾ, ಪುಟ 124 ರಲ್ಲಿ ” ಇದರರ್ಥ ಕೊಲೆಗಳನ್ನು ಮತ್ತು ಅತ್ಯಾಚಾರಗಳನ್ನು ಖಂಡಿಸಲೇಬಾರದೆಂದಲ್ಲ. ಅದು ನಮ್ಮ ಉದ್ದೇಶವೂ ಅಲ್ಲ. ಆದರೆ ಈ ರೀತಿಯ ದೋಷಯುಕ್ತ ವಿಶ್ಲೇಷಣೆಗಳಿಂದ ಇದ್ದ ಸಮಸ್ಯೆ ಬಗೆಹರಿಯುವುದು ಹಾಗಿರಲಿ, ಅದನ್ನು ಅರ್ಥಮಾಡಿಕೊಳ್ಳಲೂ ಆಗುವುದಿಲ್ಲ ಎಂಬುದಷ್ಟೇ ಇಲ್ಲಿನ ವಾದ” ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಂದರೆ ಇಂಥ ದೌರ್ಜನ್ಯಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ವಿಶ್ಲೇಷಣೆಗಳು ಬೇಕಾಗಿವೆ ಎಂಬ ಆಶಯ ಇಲ್ಲಿದೆ. ಇದರಲ್ಲಿ ಏನು ಅಂಥ ಕ್ರೌರ್ಯವನ್ನು, ಅಮಾನವೀಯತೆಯನ್ನು ಗುರುತಿಸುತ್ತೀರಿ? ಅಂದರೆ ಒಂದು ಕೃತಿಯನ್ನು (ಅಥವಾ ಕಥಯನ್ನೇ ಇಟ್ಟುಕೊಳ್ಳಿ) ಒಟ್ಟಾಗಿ ಅರ್ಥೈಸುತ್ತೀರೊ ಅಥವಾ ವಾಕ್ಯಕ್ಕೊಂದೊಂದು ಅರ್ಥ ಹಚ್ಚುತ್ತೀರೊ? ನಮ್ಮ ಕುರಿತು ಪೂರ್ವಾಗ್ರಹವನ್ನು ಬಿಟ್ಟು, ನಮಗೆ ಸದುದ್ದೇಶವನ್ನು ಆರೋಪಿಸಿ ದೇವನೂರರು ಮತ್ತೊಮ್ಮೆ ಆ ಪುಸ್ತಕವನ್ನು ಮೊದಲಿನಿಂದ ಕಡೆಯವರೆಗೆ ಓದಿದಲ್ಲಿ ಅದು ಹೀಗೆಯೇ ಕಾಣಿಸುತ್ತದೆಯೆ ಎಂಬುದನ್ನು ಒಮ್ಮೆ ಪರೀಕ್ಷಿಸಿ.

ನಮ್ಮ ಕೃತಿಗಳಲ್ಲಿ ನಾವು ಸ್ವೀಕೃತ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿದ್ದೇವೆಯೇ ವಿನಃ ಯಾವುದೇ ಸಮುದಾಯವನ್ನು ನಿಂದಿಸುತ್ತಿಲ್ಲ, ಅನ್ಯಾಯವನ್ನು ಸಮರ್ಥಿಸುತ್ತಿಲ್ಲ. ಹೀಗಿರುವಾಗ ನಮ್ಮ ಕೃತಿಗಳ ಸಾಲುಗಳನ್ನು ಹೀಗೆ ಸಂದರ್ಭದಿಂದ ಬೇರ್ಪಡಿಸಿ ದುರುದ್ದೇಶವನ್ನು ಆರೋಪಿಸುವವರಲ್ಲಿ ಏನು ಸದುದ್ದೇಶವಿರಬಹುದು? ಜಾತಿಗಳನ್ನು ಹಾಗೂ ಸಮುದಾಯವನ್ನು ನಮ್ಮ ವಿರುದ್ಧ ಎತ್ತಿಕಟ್ಟುವುದೆ? ನಾವು ಕ್ರೂರಿಗಳು, ಮಾನವ ದ್ವೇಷಿಗಳು ಎಂಬುದನ್ನು ಸಾಬೀತು ಪಡಿಸುವುದೆ? ಮೂಲತಃ ಇನ್ನೂ ಕೊನೆಮುಟ್ಟದ ಸಂಶೋಧನೆಯ ಪ್ರಕ್ರಿಯೆಯಾಗಿರುವ ನಮ್ಮ ಬರವಣಿಗೆಗಳನ್ನು ಈ ರೀತಿಯಲ್ಲಿ ಬೀದಿ ರಂಪಕ್ಕೆಳೆಯಲು ಹೊರಟಿರುವವರಿಗೆ ತಮ್ಮ ನಂಬಿಕೆಯನ್ನು ಪ್ರಶ್ನಿಸುವ ಸಂಶೋಧನೆಯೇ ನಡೆಯ ಕೂಡದು ಎಂಬ ಅಭಿಪ್ರಾಯವಲ್ಲದೇ ಇನ್ನಾವ ಸದುದ್ದೇಶವಿದ್ದೀತು? ಆದರೆ ಇಂಥ ಕೆಲಸಗಳು ಪ್ರಚೋದನಕಾರಿಯಾಗಿರುವುದಂತೂ ಹೌದು. ಈಗಾಗಲೇ ಇದರ ಫಲವಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ನಮ್ಮ ಕೇಂದ್ರವನ್ನು ಮುಚ್ಚಬೇಕೆಂಬುದಾಗಿ ಸಹಿ ಸಂಗ್ರಹಣೆ ನಡೆಯುತ್ತಿದೆ. ಸಂಶೋಧನಾ ಕೇಂದ್ರಗಳನ್ನು ಮುಚ್ಚಿಬಿಟ್ಟರೆ ಸಂಶೋಧನೆಯಾಗಲೀ, ಚಿಂತನೆಯಾಗಲೀ ನಿಂತುಹೋಗುತ್ತದೆಯೆ ಎಂಬುದು ಬೇರೆ ವಿಚಾರ. ಆದರೆ ಅಷ್ಟು ಮಂದಿಗೆ ನಮ್ಮ ವಿರುದ್ಧ ದ್ವೇಷಭಾವನೆಯನ್ನು ಹುಟ್ಟುಹಾಕಿದ್ದೇನೂ ಸುಳ್ಳಲ್ಲವಲ್ಲ! ಇದೇ ಕೆಲಸವನ್ನು ನಾವೂ ಮಾಡಬಹುದಲ್ಲ? ತಮ್ಮೆಲ್ಲರ ಕೃತಿಗಳಿಂದ ಒಂದಷ್ಟು ಸಾಲುಗಳನ್ನು ಸಂದರ್ಭದಿಂದ ಎತ್ತಿಟ್ಟು ಜನಾಂಗ ದ್ವೇಷ, ಜಾತಿ ದ್ವೇಷಗಳನ್ನು ತೋರಿಸಿ ಬೀದಿ ರಂಪ ಮಾಡುವುದು ಕಷ್ಟವೆ? ಆಗ ಕೋಮುವಾದಿ ಹಿಂಸೆಯನ್ನು ಪ್ರಚೋದಿಸುವವರಿಗೂ ನಮಗೂ ಏನು ವ್ಯತ್ಯಾಸ ಉಳಿದಂತಾಯಿತು? ಈ ತಂತ್ರವನ್ನು ಅನುಸರಿಸುವುದು ಅನಾರೋಗ್ಯಕರ ಅಷ್ಟೇ ಅಲ್ಲ ಅನಾಹುತಕಾರಿ ಕೂಡ.

ಇನ್ನು ನಮ್ಮನ್ನು ವೈದಿಕ ಶಾಹಿ (ಬ್ರಾಹ್ಮಣ ಪುರೋಹಿತಶಾಹಿ)ಯ ರಕ್ಷಣೆಗೆ, ಪುನರುತ್ಥಾನಕ್ಕೆ ಸಂಚು ಮಾಡುವವರು ಎಂಬ ಆಪಾದನೆಯನ್ನು ಮಾಡಲಿಕ್ಕೆ ಕೂಡ ನಮ್ಮ ಬರವಣಿಗೆಗಳಲ್ಲಿ ಸಾಕ್ಷ್ಯಾಧಾರಗಳನ್ನು ತೋರಿಸಬೇಕಾಗುತ್ತದೆ. ಈ ಮೇಲೆ ಹೇಳಿದಂತೆ ಇಂದು ನಾವು ನಮ್ಮ ಸಂಸ್ಕೃತಿ ಹಾಗೂ ಸಮಾಜದ ಕುರಿತು ಸತ್ಯವೆಂಬುದಾಗಿ ನಂಬಿಕೊಂಡಿರುವ ಚಿಂತನೆಗಳನ್ನು ಪ್ರಶ್ನಿಸುತ್ತಿದ್ದೇವೆ. ಆಗ ಅದರ ಅಂಗವಾದ ಬ್ರಾಹ್ಮಣ ಪುರೋಹಿತಶಾಹಿ, ಮೂಢನಂಬಿಕೆ, ಹಿಂದೂಯಿಸಂ, ಸೆಕ್ಯುಲರಿಸಂ, ಜಾತಿ ವ್ಯವಸ್ಥೆ ಇತ್ಯಾದಿಗಳ ಕುರಿತು ನಾವು ಪ್ರಚಲಿತ ಅಭಿಪ್ರಾಯಗಳು ಆಧಾರರಹಿತ ಎಂಬುದನ್ನು ಕಂಡುಕೊಳ್ಳುತ್ತಿದ್ದೇವೆ. ಕಂಡುಕೊಂಡಿದ್ದನ್ನು ಹೇಳುತ್ತಿದ್ದೇವೆ. ಬ್ರಾಹ್ಮಣ ಪುರೋಹಿತಶಾಹಿ ಇದೆಯೆಂದು ಕಂಡುಬಂದಿದ್ದರೆ ಇಲ್ಲ ಎಂಬುದಾಗಿ ಸುಳ್ಳನ್ನೂ ಹೇಳುತ್ತಿರಲಿಲ್ಲ. ಇಲ್ಲ ಸುಳ್ಳು ಹೇಳುತ್ತಿದ್ದೇವೆ ಅನ್ನಿಸಿದರೆ ಅದನ್ನು ನಮ್ಮ ವಾದದಲ್ಲೇ ತೋರಿಸಲಿಕ್ಕೆ ಮಾರ್ಗಗಳಿರುತ್ತವೆ. ಒಂದೊಮ್ಮೆ ನಾನು ಹೇಳಿದ್ದು ಸುಳ್ಳಾದರೂ ಕೂಡ ಅದು ನನ್ನ ತಪ್ಪಾಗಬಹುದೇ ವಿನಃ ಸಂಚು ಎಂದು ಹೇಗೆ ಹೇಳುತ್ತೀರಿ? ಹಿಂದೂಯಿಸಂ ಇಲ್ಲವೇ ಇಲ್ಲ ಎಂದು ವಾದಿಸುವ ನಮಗೆ ಅದರ ಪುರೋಹಿತಶಾಹಿಯನ್ನು ಜಾರಿಯಲ್ಲಿ ತರುವ ಹುನ್ನಾರವಿದೆ ಎಂದರೆ ನಗಬೇಕೋ ಅಳಬೇಕೊ ತಿಳಿಯುವುದಿಲ್ಲ.

ಇನ್ನು ಅಪರಾಧೀ ಪ್ರಜ್ಞೆಯ ಕುರಿತು. ನಾನು ಬ್ರಾಹ್ಮಣ ಜಾತೀಯವ. ಕಳೆದ 30 ವರ್ಷಗಳಿಂದ ವೃತ್ತಿಯಲ್ಲಿ ನಾನೊಬ್ಬ ಇತಿಹಾಸಕಾರ, ಹಾಗೂ ಸಂಶೋಧಕ. ನನಗೆ ಭಾರತೀಯ ಇತಿಹಾಸದಲ್ಲಿ ನನ್ನ ಹಿಂದಿನವರು ಇತ್ತು ಎಂಬುದಾಗಿ ಭಾವಿಸಿಕೊಂಡ ಅನೇಕ ಸಂಗತಿಗಳಿಗೆ ಸೂಕ್ತ ಆಧಾರಗಳಿಲ್ಲ ಎಂಬುದು ಇಂದು ಮನದಟ್ಟಾಗಿದೆ. ಅವುಗಳಲ್ಲಿ ರಿಲಿಜನ್ನು, ಪವಿತ್ರಗ್ರಂಥ, ಪುರೋಹಿತಶಾಹಿ, ಸ್ಟೇಟ್ ಎಂಬ ವ್ಯವಸ್ಥೆ, ಲಾ ಹಾಗೂ ಲೀಗಲ್ ವ್ಯವಸ್ಥೆ, ಇತ್ಯಾದಿಗಳೆಲ್ಲ ನಮ್ಮಲ್ಲಿ ಇದ್ದವು ಎನ್ನಲಿಕ್ಕೆ ಆಧಾರಗಳಿಲ್ಲ. ಇವತ್ತಿನ ಇತಿಹಾಸ ತಜ್ಞರಲ್ಲಿ ಯಾರೂ ಈ ಸಮಸ್ಯೆಗಳನ್ನು ನಿರಾಕರಿಸುವುದಿಲ್ಲ ಅಷ್ಟೇ ಅಲ್ಲ ಅವರು ಎತ್ತಿದ ಸಮಸ್ಯೆಗಳನ್ನೇ ನನ್ನಂಥವರು ಪರಿಹರಿಸಲು ಪ್ರಯತ್ನಿಸುತ್ತಿರುವುದು. ನನಗೆ ಈಗ ಸ್ಪಷ್ಟವಾಗಿರುವುದೆಂದರೆ, ಜಾತಿ ವ್ಯವಸ್ಥೆ ಸಿದ್ಧಾಂತವು ಭಾರತದಲ್ಲಿ ಇರುವ ಅನ್ಯಾಯ, ಅನಾಚಾರಗಳಿಗೆಲ್ಲ ಬ್ರಾಹ್ಮಣ ಜಾತಿಯೇ ಹೊಣೆ ಎನ್ನುತ್ತದೆ. ಅವರೇ ಈ ತರತಮಗಳನ್ನು ಹುಟ್ಟುಹಾಕಿದ್ದಾರೆನ್ನುತ್ತದೆ. ಆದರೆ ಅದೊಂದು ಐತಿಹಾಸಿಕ ಸತ್ಯವಲ್ಲ. ಕಪೋಲಕಲ್ಪಿತ ಆವಾಂತರ. ಹಾಗಾಗಿ ನನಗಂತೂ ನೀವು ಹೇಳುವ ಅಪರಾಧೀ ಪ್ರಜ್ಞೆ ಇಲ್ಲ, ಆದರೆ ಕಷ್ಟದಲ್ಲಿರುವವರ ಬಗ್ಗೆ ಕಳಕಳಿಯಿದೆ. ಆ ಕಥೆಯನ್ನು ಇನ್ನೂ ಮುಂದುವರೆಸಬೇಕು ಎಂದು ಪಟ್ಟು ಹಿಡಿದರೆ ನಿರಪರಾಧಿಯ ಮೇಲೆ ಅಪರಾಧವನ್ನು ಹೇರುವ ಪ್ರಯತ್ನವಾಗುತ್ತದೆ. ನನ್ನ ಪ್ರಕಾರ ಈ ಕಥೆಯನ್ನು ಹಿಡಿದುಕೊಂಡು ಯಾವುದೋ ಜಾತಿ ಅಪರಾಧೀ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂಬುದಾಗಿ ನಿರೀಕ್ಷೆಗಳನ್ನು ಬಿಟ್ಟು ಮಾನವ ಹಿತದ ಚಿಂತನೆಯನ್ನು ನಡೆಸುವ ಕಾಲ ಬಂದಿದೆ. ನಮಗೆಲ್ಲರಿಗೂ ಬೇಕಾದುದು ದಯೆ, ಪ್ರೀತಿ ಹಾಗೂ ಮನುಷ್ಯ ಕಾಳಜಿಗಳು. ಅನ್ಯಾಯವನ್ನು ಚೆಂಡಿನ ಥರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ರವಾನಿಸುವ ಆಟದ ಬದಲು ಅದನ್ನು ನಮ್ಮೆಲ್ಲರಿಂದ ದೂರ ಸರಿಸುವ ಉಪಾಯ ಹುಡುಕುವದರಲ್ಲೇ ಎಲ್ಲರ ಶ್ರೇಯಸ್ಸು ಅಡಗಿದೆ.

ಸಾಧಾರಣವಾಗಿ ನಮಗೂ ಬಲಪಂಥೀಯರಿಗೂ, ಅಥವಾ ಬಲಪಂಥೀಯ ಸಂಘಟನೆಗಳಿಗೂ ಇರುವ ಸಂಬಂಧವನ್ನು ಪ್ರಸ್ತಾಪಿಸಿ ನಮ್ಮನ್ನು ವೈದಿಕ ಶಾಹಿಯ ವಕ್ತಾರರು ಎಂಬ ವಾದವನ್ನು ಗಟ್ಟಿ ಮಾಡಲಾಗುತ್ತದೆ. ನಮಗೆ ನಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಿಸುತ್ತಿರುವ ಮನುಷ್ಯರು ಮತ್ತು ಸಂಘಟನೆಗಳು ಮಾತ್ರವೇ ಕಾಣಿಸುತ್ತಾರೆ. ಅವರ ಜಾತಿಗಳಾಗಲೀ, ರಾಜಕೀಯ ಕ್ಯಾಂಪುಗಳಾಗಲೀ, ಐಡಿಯಾಲಜಿಗಳಾಗಲೀ ಸಂಬಂಧವಿಲ್ಲ. ನಾವು ಯಾವ ರಾಜಕೀಯ ನಿಲುವುಗಳನ್ನು ಸಮರ್ಥಿಸಲಿಕ್ಕಾಗಿ ಸಂಶೋಧನೆ ಮಾಡುವವರೂ ಅಲ್ಲ. ನಮ್ಮ ಸಮಾಜ ಮತ್ತು ಸಂಸ್ಕೃತಿಯ ಕುರಿತು ಪ್ರಚಲಿತದಲ್ಲಿರುವ ತಿಳುವಳಿಕೆಯಿಂದ ಪ್ರಣಾಳಿಕೆಗಳನ್ನು ರೂಪಿಸಿಕೊಂಡ ಪ್ರಸ್ತುತ ರಾಜಕೀಯದ ಮಿತಿಗಳನ್ನೇ ನಾವು ಪರೀಕ್ಷಿಸುತ್ತಿದ್ದೇವೆ. ಹಾಗೆಯೇ ಮಿತಿಗಳನ್ನು ಮೀರುವ ಹಂಬಲ ಪ್ರತೀ ಮನುಷ್ಯನಿಗೂ ಇರುತ್ತದೆ ಎಂದು ಧೃಡವಾಗಿ ನಂಬಿದ್ದೇವೆ.

ದೇವನೂರು ಮಹಾದೇವ ಅವರಂಥವರು ಏನು ಹೇಳಿದರೂ ಅವರ ಅಭಿಮಾನಿಗಳಿಗೆ ಅದು ಸತ್ಯದ ಸ್ಥಾನವನ್ನು ಅಲಂಕರಿಸಬಹುದು, ಆದರೆ ಅದು ನಮಗೆ ಸುಳ್ಳಾಗಿ ಕಾಣುತ್ತಿದೆ ಎಂಬುದನ್ನು ಅವರ ಗಮನಕ್ಕೆ ತರುತ್ತಿದ್ದೇನೆ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments