ವಿಷಯದ ವಿವರಗಳಿಗೆ ದಾಟಿರಿ

ಮೇ 23, 2013

58

ಕಸಾಯಿಖಾನೆಗಳನ್ನು ಮುಚ್ಚುವ ಅವಕಾಶವಿದ್ದೂ ಯಾಕೆ ಮೌನ ವಹಿಸಿದಿರಿ,ಹೇಳಿ?

‍ನಿಲುಮೆ ಮೂಲಕ

– ಎ.ಕೆ ಕುಕ್ಕಿಲ

govuಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ ನ  ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
A total ban (on Cattle Slaughter) was not permisseble if, Under economic conditions, keeping useless bull or bullock be a burden on the society and therefore not in the public interest –  ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)

ನಿಜವಾಗಿ, ಕರ್ನಾಟಕದಲ್ಲಿ ಈ ಮೊದಲೇ ಜಾರಿಯಲ್ಲಿದ್ದ ‘ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964’ರ ಬದಲು ರಾಜ್ಯ ಬಿಜೆಪಿ ಸರಕಾರವು ಜಾರಿಗೆ ತರಲು ಹೊರಟಿದ್ದ, ‘ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2010’ರಲ್ಲಿ ಇದ್ದದ್ದು ಈ ಗೊಂದಲಗಳೇ. ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು?

ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ ‘ಶ್ರದ್ಧೆ’ಯಲ್ಲ. ಕೇವಲ ‘ಶ್ರದ್ಧೆ’ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, ‘ಶ್ರದ್ಧಾಬಿಂದು’ ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣ ಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿ ಕೊಂಡಿತೋ ಆಗಲೇ ಹಸು ‘ಶ್ರದ್ಧಾಬಿಂದು’ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, 1964ರ ಗೋಹತ್ಯಾ ತಡೆ ಕಾಯ್ದೆಯನ್ನು ಊರ್ಜಿತದಲ್ಲಿರಿಸಲು ತೀರ್ಮಾನಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರ ನಿಲುವನ್ನು ಪ್ರಶ್ನಿಸುತ್ತಿರುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ಶ್ರದ್ಧೆಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ? ಹೀಗಿರುವಾಗ,  ‘.. ಗೋವು, ಕರು, ಗೂಳಿ, ಎತ್ತು, ಎಮ್ಮೆ, ಕೋಣ.. ಸಹಿತ ಜಾನುವಾರು ಪಟ್ಟಿಯಲ್ಲಿ ಬರುವ ಪ್ರಾಣಿಯನ್ನು ಹತ್ಯೆ ಮಾಡುವುದು 1 ಲಕ್ಷ  ರೂಪಾಯಿ ದಂಡ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾಗಬಹುದಾದಷ್ಟು ಭೀಕರ ಅಪರಾಧವಾಗುತ್ತದೆ..’ ಎಂಬ ಕಾನೂನನ್ನು ಜಾರಿ ಮಾಡಲು ಹೊರಟಿದ್ದ ಬಿಜೆಪಿ ಸರಕಾರದ ಮಸೂದೆಯನ್ನು ರದ್ದುಪಡಿಸದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಇನ್ನೇನು ಮಾಡಬೇಕಿತ್ತು?  ‘.. 12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆಗೆ ಸಮ್ಮತಿ ನೀಡುವ..’ 1964ರ ಮಸೂದೆಯನ್ನು ಊರ್ಜಿತಗೊಳಿಸದೇ ಅವರಿಗೆ ಬೇರೆ ಯಾವ ದಾರಿಯಿತ್ತು?

ಗುಜರಾತ್
ಮಧ್ಯಪ್ರದೇಶ
ಹಿಮಾಚಲ ಪ್ರದೇಶ

ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಸದ್ಯ ಇರುವಂಥ ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಉಳಿದೆರಡು ರಾಜ್ಯಗಳಲ್ಲೂ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, ‘ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ದಾರಾಳ ಜಾನು ವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..’ ಎಂದು ಅನುಷಾ ನಾರಾಯಣ್ ದಿ ಹಿಂದೂವಿನಲ್ಲಿ ಇತ್ತೀಚೆಗೆ (5-5-2013) ಬರೆದಿದ್ದರು. ನಿಜವಾಗಿ, ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷಿದ್ಧಗೊಳಿಸ ಬೇಕಾದರೆ ನಿರುಪಯುಕ್ತ ಜಾನುವಾರುಗಳಿಗೆ ಏನಾದರೂ ವ್ಯವಸ್ಥೆ ಆಗಬೇಕಲ್ಲವೇ? ಒಂದು ರೀತಿಯಲ್ಲಿ, ಇಂಥ ಜಾನುವಾರುಗಳನ್ನು ಪೋಷಕರು ಮಾರಾಟ ಮಾಡದಿರಬೇಕಾದರೆ ಅಥವಾ ರಸ್ತೆಗೆ ಬಿಡಬಾರದೆಂದಾದರೆ ಅವುಗಳನ್ನು ಸೂಕ್ತ ಬೆಲೆ ಕೊಟ್ಟು ಖರೀದಿಸುವ ವ್ಯವಸ್ಥೆ ಸರಕಾರದಿಂದಲೇ ಆಗಬೇಕು. ಗೋಶಾಲೆ, ಮೇವು, ಹಿಂಡಿ..ಗಳ ಸಹಿತ ದೊಡ್ಡದೊಂದು ಬಜೆಟ್ ತಯಾರಾಗಬೇಕು. ಆದರೆ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ತರಲು ಹೊರಟ ಬಿಜೆಪಿ ಸರಕಾರ ಇಂಥದ್ದೊಂದು ಯೋಜನೆಯನ್ನು ತಯಾರಿಸಿರುವ ಬಗ್ಗೆ ಎಲ್ಲಾದರೂ ಹೇಳಿಕೊಂಡದ್ದು ನಿಮಗೆ ಗೊತ್ತೇ? ಇಲ್ಲವಲ್ಲ. ಹಾಗಾದರೆ, ಅದರ ಪೋಷಕರೇ ಅದನ್ನು ಸಾಕಬೇಕು ಎಂದಲ್ಲವೇ ಇದರರ್ಥ? ಇದು ಎಷ್ಟು ಪ್ರಾಯೋಗಿಕ? ಬಿಜೆಪಿ ಯಾರನ್ನು ಮೊರ್ಖರನ್ನಾಗಿಸಲು ಹೊರಟಿದೆ? ಮುಂದೊಂದು ದಿನ, ಜಾನುವಾರುಗಳನ್ನು ರಸ್ತೆಗೆ ಅಟ್ಟಿದ ಆರೋಪ ಹೊರಿಸಿ ಅದರ ಪೋಷಕರನ್ನೇ ಜೈಲಿಗಟ್ಟುವ ಪ್ರಯತ್ನಕ್ಕೂ ಅದು ಮುಂದಾಗಲಾರದು  ಎಂದು ಯಾವ ಆಧಾರದಿಂದ ಹೇಳಬಲ್ಲಿರಿ? ಅಲ್ಲದೇ, 1998ರಲ್ಲಿ ಬಿಜೆಪಿಯ ವಾಜಪೇಯಿ ಯವರೇ ಪ್ರಧಾನಿಯಾಗಿದ್ದರಲ್ಲ, ಆಗ ಈ ದೇಶದಲ್ಲಿರುವ 3500ರಷ್ಟು ಕಸಾಯಿಖಾನೆಗಳನ್ನು ಮುಚ್ಚಿಸಲು ಅವರು ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ (ದಿ ಹಿಂದೂ, ಮೇ 5, 2013 ) ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೆ, ಯಾಕೆ ಹೀಗಾಯಿತೆಂಬುದು ಬಿಜೆಪಿಗರಿಗೆ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. ಕಳೆದ ವರ್ಷ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. 2013ರಲ್ಲಿ ಈ ರಫ್ತಿನ ಪ್ರಮಾಣವನ್ನು 29%ಕ್ಕೆ ಹೆಚ್ಚಿಸಬೇಕೆಂಬ ಗುರಿಯನ್ನೂ ಸರಕಾರ ಇಟ್ಟುಕೊಂಡಿದೆ. ಅಷ್ಟಕ್ಕೂ, 1988ರಿಂದ ವಿಶ್ವದಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ, 2016-17ನೇ ವರ್ಷದ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲಿನ ಗುರಿಯನ್ನು ಹೊಂದಿದ್ದು, ಮೇವಿಗಾಗಿ 2,242 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವ ಮತ್ತು ಮಿಲಿಯಾಂತರ ಜಾನುವಾರಗಳ ಸೃಷ್ಟಿಗೆ ಯೋಜನೆ ರೂಪುಗೊಂಡಿರುವ ದೇಶವೊಂದರಲ್ಲಿ, ರಾಜಕೀಯ ಲಾಭಕ್ಕಾಗಿ ಜಾನುವಾರುಗಳನ್ನು ಕಟಕಟೆಗೆ ತರುವುದು ಎಷ್ಟು ಸರಿ?

ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕ್ರುತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ. (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಬಿಜೆಪಿಯ ಕಾರ್ಯಕರ್ತರು ದೇಶದಾದ್ಯಂತ ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಅಷ್ಟಕ್ಕೂ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು. ಹಾಸ್ಯಾಸ್ಪದ ಏನೆಂದರೆ, ಬಿಜೆಪಿಯ ಗೋಹತ್ಯಾ ನಿಷೇಧ ಮಸೂದೆಯನ್ನು ಹಿಂದೂ ಪರ ಮತ್ತು ಮುಸ್ಲಿಮ್ ವಿರೋಧಿಯೆಂಬಂತೆ ಅದರ ಕಾರ್ಯಕರ್ತರು ಬಿಂಬಿಸುತ್ತಿದ್ದಾರೆ. ನಿಜವಾಗಿ, ಅದು ಮುಸ್ಲಿಮ್ ವಿರೋಧಿಯಲ್ಲ, ಹಿಂದೂ ವಿರೋಧಿ. ಒಂದು ರೀತಿಯಲ್ಲಿ, ಗೋವಿಗೆ ಬಿಜೆಪಿ ಕೊಡುತ್ತಿರುವ ವ್ಯಾಖ್ಯಾನವನ್ನು ಈ ದೇಶದ ಜನಸಾಮಾನ್ಯರು ಖಂಡಿತ ಕೊಡುತ್ತಿಲ್ಲ. ಅವರು ಅದನ್ನು ಗೌರವಿಸುವಂತೆಯೇ ಆಹಾರ ಕ್ರಮಗಳ ಒಂದು ಭಾಗವಾಗಿಯೂ ಪರಿಗಣಿಸಿದ್ದಾರೆ. ನಿರುಪಯುಕ್ತ ಜಾನುವಾರುಗಳನ್ನು ಮಾರುವುದಕ್ಕೂ ಆಹಾರವಾಗಿ ಬಳಕೆ ಮಾಡುವುದಕ್ಕೂ ಮತ್ತು ಗೌರವಿಸುವುದಕ್ಕೂ ಅವರು ಸಂಬಂಧವನ್ನು ಕಲ್ಪಿಸುತ್ತಿಲ್ಲ. ಅವೆಲ್ಲವನ್ನೂ ಅವರು ಭಿನ್ನಭಿನ್ನವಾಗಿಯೇ ಪರಿಗಣಿಸುತ್ತಿದ್ದಾರೆ. ಅಷ್ಟಕ್ಕೂ,ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮಾತ್ರ ಮಾತಾಡಿದರೆ ಈ ಬಿಜೆಪಿಯನ್ನು ಯಾರು ನಂಬುತ್ತಾರೆ,ಹೇಳಿ?

ಚಿತ್ರ ಕೃಪೆ : http://www.srimath.org

58 ಟಿಪ್ಪಣಿಗಳು Post a comment
 1. ಮೇ 23 2013

  “ಹಸುವು ವಯಸ್ಸಾದ ನಂತರ ನಿರುಪಯೋಗಿಯಾಗುತ್ತದೆ; ಅದನ್ನು ಸಾಕುವುದು ಖರ್ಚಿನ ಕೆಲಸ; ಹೀಗಾಗಿ ಅದನ್ನು ಕಸಾಯಿಖಾನೆಗೆ ಮಾರುತ್ತಾರೆ” ಎನ್ನುವುದು ನಿಮ್ಮ ವಾದ. ಅದನ್ನು ನಿಜವೆಂದೇ ಒಪ್ಪಿಕೊಳ್ಳೋಣ. ಆದರೆ, ಹಸುಗಳನ್ನು ಅದೆಷ್ಟು ಕ್ರೂರವಾಗಿ, ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾರಲ್ಲ! ಅದನ್ನಾದರೂ ಖಂಡಿಸಬೇಕಲ್ಲವೇ? ಆ ಮೂಕಪ್ರಾಣಿಗಳಿಗೆ ನಮ್ಮ ಕಾನೂನಿನಲ್ಲಿ ಯಾವ ಹಕ್ಕೂ ಇಲ್ಲವೇ? ಅವಕ್ಕೆ ಬದುಕುವ ಹಕ್ಕೂ ಇಲ್ಲವೇ?

  ಹಸುಗಳನ್ನು ಎಷ್ಟು ಕ್ರೂರವಾಗಿ ಕೊಲ್ಲಲಾಗುತ್ತದೆ ಎನ್ನುವುದಕ್ಕೆ ಈ ಕೊಂಡಿ ನೋಡಿ: http://ssnarendrakumar.blogspot.com/2013/05/how-can-you-tolerate-this.html

  ಮಾನವತೆಯ ಕುರಿತಾಗಿ ದೊಡ್ಡದೊಡ್ಡ ಭಾಷಣ ಬಿಗಿಯುವವರು, ಪ್ರಾಣಿಹತ್ಯೆಯ ವಿಷಯದಲ್ಲಿ ಮಾತ್ರ ದಿವ್ಯಮೌನ ವಹಿಸುವುದು ಆಶ್ಚರ್ಯವೇ!

  ಹಸುಗಳಿಂದಾಗುವ ಉಪಯೋಗ ಹಾಲು ಮಾತ್ರ, ಎಂದು ನೀವು ತಿಳಿದಿರುವಂತಿದೆ. ವಯಸ್ಸಾದ ಹಸುವಿನ ಸೆಗಣಿಯಿಂದ ಉಪಯೋಗವಿಲ್ಲವೇ? ಹಸುವಿನ ಸೆಗಣಿ, ಗಂಜಲಗಳಿಂದ ಔಷಧಗಳನ್ನು ತಯಾರಿಸುತ್ತಾರೆ. ಅದೊಂದು ದೊಡ್ಡ ಉದ್ಯಮವೇ ಆಗುತ್ತಿದೆ.

  ಜಗತ್ತಿನಲ್ಲಿರುವ ಪ್ರತಿಯೊಂದನ್ನೂ ವ್ಯಾಪಾರೀ ದೃಷ್ಟಿಯಿಂದ ನೋಡುವವರು, “ವಯಸ್ಸಾದ ತಂದೆ-ತಾಯಿಯರು ವ್ಯರ್ಥ; ಅವರಿಂದ ಯಾವುದೇ ಉಪಯೋಗವಿಲ್ಲ; ವಯಸ್ಸಾದಷ್ಟೂ ಖಾಯಿಲೆ-ಕಸಾಲೆಗಳೂ ಹೆಚ್ಚು – ಹೀಗಾಗಿ, ವಯಸ್ಸಾದವರಿಂದ ಖರ್ಚು ಹೆಚ್ಚು; ಅವರನ್ನೂ ಕಸಾಯಿ ಖಾನೆಗೇ ಅಟ್ಟಿಬಿಡಿ” ಎಂದೇ ನಿಷ್ಕರ್ಶೆಗೆ ಬರಬಹುದಲ್ಲವೇ!?

  ಉತ್ತರ
 2. ಬಸವಯ್ಯ
  ಮೇ 23 2013

  ಮತೀಯವಾಗಿ ಸೂಕ್ಷ್ಮವಾಗಿರುವ ಒಂದು ವಿಷಯವನ್ನು ಇದ್ದದ್ದು ಇದ್ದ ಹಾಗೆ, ನಮ್ಮ ‘ಪ್ರಗತಿಪರ, ಪ್ರಜ್ಞಾವಂತ,ಸಾಕ್ಷಿಪ್ರಜ್ಞೆ’ಗಳಂತೆ ಅನಗತ್ಯ ವಿಷ ಉಗುಳದೇ ಕೂಡ ಬರೆಯಬಹುದು ಎಂಬುದಕ್ಕೆ ಈ ಲೇಖನ ಒಂದು ಉದಾಹರಣೆ. ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುವ ಸಾಕಷ್ಟು ಅಂಶಗಳು ಈ ಲೇಖನದಲ್ಲಿವೆ. ಪ್ರಸ್ತಾಪಿಸಲ್ಪಟ್ಟ ವಿಷಯದ ಕುರಿತು ನಮ್ಮ ಪರ-ವಿರೋಧ ಏನೇ ಇದ್ದರೂ, ಇಂಥ ಲೇಖನಗಳು ಅರ್ಥಪೂರ್ಣ ಚರ್ಚೆಗೆ ಎಡೆ ಮಾಡಿಕೊಡುತ್ತವೆ.
  ಧನ್ಯವಾದಗಳು ಲೇಖಕರಿಗೆ..

  ಉತ್ತರ
 3. ರವಿ
  ಮೇ 23 2013

  ಹೇಳಬೇಕಾದುದನ್ನು ಬಹಳ ಸಮರ್ಥವಾಗಿ ಲೇಖಕರು ಹೇಳಿದ್ದಾರೆ. ಧನ್ಯವಾದಗಳು..
  ಕಂಠಮಟ್ಟಕ್ಕೆ ನೀರು ಬಂದಾಗ ಮರಿಯ ಮೇಲೇರಿದ ಮಂಗನ ಕಥೆ ಕೇಳಿಲ್ಲವೇ.. ಅದೇ ತರ, ಶೃದ್ಧೆ ಎದುರಿಗೆ ಸಾಕುವುದು ಲಾಭಕ್ಕೆ. ಆದರೂ, ಒಂದು ಪ್ರಾಣಿಯಿಂದ ಅದರ ಜೀವಮಾನ ಪೂರ್ತಿ ಲಾಭ ಅನುಭವಿಸಿ ಅದು ನಿರುಪಯೋಗಿ ಎನಿಸಿದಾಗ ಅದನ್ನು ಸಾಕದೆ
  ಇರುವುದು ಅತಿರೇಕವಲ್ಲವೇ? ಉದಾಹರಣೆಗೆ, ಒಂದು ಸಂಸ್ಥೆಗೆ ದುಡಿಯುವ ನಾವು ನಮ್ಮ ನಿವೃತ್ತಿ ಸಮಯಕ್ಕೆ ಪಿಂಚಣಿ ಬಯಸುವುದಿಲ್ಲವೇ? ಅವುಗಳನ್ನು ಸಾಕುವುದು ಲಾಭ ಪಡೆದವನ ಹಕ್ಕು, ಸರಕಾರ ಏಕೆ ಅವುಗಳನ್ನು ಕೊಳ್ಳಬೇಕು?
  ಆಹಾರಕ್ಕೆಂದೇ ಸಾಕುವ ಪ್ರಾಣಿಗಳೇ ಇವೆ. ಮಾಂಸ ಬಿಟ್ಟರೆ ಅವುಗಳಿಂದ ಬೇರೆ ಲಾಭ ಇಲ್ಲ. ದನ, ಎತ್ತುಗಳನ್ನು ಇವುಗಳ ಸಾಲಿಗೆ ಸೇರಿಸಬಹುದೇ? ಅಷ್ಟೊಂದು ಆಹಾರಕ್ಕೆ ಕೊರತೆ ಬಂದಿಲ್ಲವೇನೋ 🙂 ಕೊನೆಗೂ ಗೆಲ್ಲುವುದು ನಾಲಗೆ ರುಚಿಯೇ ಬಿಡಿ.
  ರಾಜಕೀಯ ಪಕ್ಷಗಳು ಸೂಕ್ಷ್ಮ ವಿಷ್ಯಗಳಲ್ಲಿ ಈ ರೀತಿ ಆಡುವುದು ಇದ್ದಿದ್ದೇ.. ತಮ್ಮ ಮತಬ್ಯಾಂಕ್ ರಕ್ಷಣೆಗೆ ಒಂದೊಂದು ಪಂಗಡದ ಓಲೈಕೆ.

  ಉತ್ತರ
  • krishnappa
   ಮೇ 24 2013

   ರೈತರು ನಡೆಸುವ ಸಣ್ಣ ಮಟ್ಟದ ಹೈನುಗಾರಿಕೆಯಿಂದ ಬಹಳ ಲಾಭವೇನೂ ಇಲ್ಲ. ದೊಡ್ಡ ಮಟ್ಟದಲ್ಲಿ ಉದ್ಯಮದ ರೂಪದಲ್ಲಿ ಹೈನುಗಾರಿಕೆ ನಡೆಸುವವರಿಗೆ ಮಾತ್ರ ಲಾಭ ಸಿಗುತ್ತದೆ. ಸಣ್ಣ ರೈತರು ನಿರುಪಯೋಗಿ ದನಕರುಗಳನ್ನು ಸಾಕಬೇಕೆಂದು ಹೇಳುವವರು ಹಾಲಿಗೆ ಈಗಿರುವ ದರಕ್ಕಿಂತ ಕನಿಷ್ಠ 20 ರೂಪಾಯಿಯಾದರೂ ಹೆಚ್ಚು ತೆರಲು ಸಿದ್ಧ ಇದ್ದಾರೆಯೇ? ಗ್ರಾಹಕರು ಅಷ್ಟು ದರವನ್ನು ಶ್ರದ್ಧೆಯ ಹಾಗೂ ನಂಬಿಕೆಯ ಆಧಾರದಲ್ಲಿ ತೆರಲು ಸಿದ್ಧವಿದ್ದರೆ ಸಣ್ಣ ರೈತರು ನಿರುಪಯೋಗಿ ದನಗಳನ್ನು ಸಾಕಲು ಸಾಧ್ಯವಾಗಬಹುದು. ಇಲ್ಲದಿದ್ದರೆ ಸಣ್ಣ ರೈತರು ತಮ್ಮ ಕುಟುಂಬವನ್ನು ಸಾಕುವುದೇ ಕಷ್ಟವಾಗಿರುವಾಗ ನಿರುಪಯೋಗಿ ದನಗಳನ್ನು ಸಾಕಬೇಕೆಂದು ಫರ್ಮಾನು ಹೊರಡಿಸುವುದು ಅಮಾನವೀಯವಾಗುತ್ತದೆ.

   ಉತ್ತರ
   • ಮೇ 24 2013

    ನಿಜ. ಬರುವ ಲಾಭ ಸಾಕಾಗುತ್ತಿಲ್ಲ ಅಲ್ಲವೇ? ಅಂದರೆ ಎಲ್ಲರೂ ಲಾಭಕ್ಕೋಸ್ಕರ ದನಕರುಗಳನ್ನು ಸಾಕುತ್ತಿಲ್ಲ ಎಂದಾಯಿತು. ಲೇಖಕರು ಲಾಭಕ್ಕೋಸ್ಕರವೇ ಸಾಕುವುದು ಶೃದ್ಧೆಯಿಂದ ಅಲ್ಲ ಎನ್ನುತ್ತಿದ್ದಾರೆ. ಗೊಂದಲವಾಗುತ್ತಿದೆ..

    ಉತ್ತರ
   • ರವಿ
    ಮೇ 24 2013

    ಜಾನುವಾರುಗಳನ್ನು ಲಾಭ ಬರುವವರೆಗೂ ಹಿಂಡಿ ಹಿಪ್ಪೆ ಮಾಡಿ ನಂತರ ಕಸಾಯಿಖಾನೆಗೆ ಕೊಡುವುದು ಅಮಾನವೀಯವಲ್ಲವೇ? ಯಾವುದೇ ವಸ್ತುವಿನ ಬೆಲೆ ಅದರ ಲಭ್ಯತೆ, ಪೂರೈಕೆ ಮತ್ತು ಬೇಡಿಕೆಯ ಮೇಲೆ ಅವಲಂಬಿತ. ಯಾರೂ ಮೂಲ ಬೆಲೆಗಿಂತ 20 ರೂ ಕಡಿಮೆಗೆ ಮಾರುವ ಕರುಣೆ ತೋರಿಲ್ಲ. ಹಾಲಿನ ಬೆಲೆ ಏರಿಸಬೇಕಾದಾಗೆಲ್ಲ ಏರಿಸಿದ್ದಾರೆ.

    ಉತ್ತರ
    • krishnappa
     ಮೇ 24 2013

     ನಿರುಪಯುಕ್ತ ದನಕರುಗಳನ್ನು ಸಾಕುವ ವೆಚ್ಚವನ್ನು ಈಗಿನ ಹಾಲಿನ ಬೆಲೆಯಲ್ಲಿ ಹಿಡಿಯಲಾಗಿಲ್ಲ ಏಕೆಂದರೆ ಸಂಪೂರ್ಣ ಗೋಹತ್ಯಾ ನಿಷೇಧ ಕರ್ನಾಟಕದಲ್ಲಿ ಜಾರಿಯಾಗಿರಲಿಲ್ಲ. ಇದು ಜಾರಿಯಾದರೆ ಹಾಲಿನ ಬೆಲೆಯನ್ನು ಹೆಚ್ಚಿಸಲೇಬೇಕಾಗುತ್ತದೆ ಇಲ್ಲದಿದ್ದರೆ ಹೈನುಗಾರಿಕೆ ನಡೆಸುವುದು ಕೃಷಿಕರಿಗೆ ಬಹಳ ಕಷ್ಟವಾಗಲಿದೆ. ನಿರುಪಯುಕ್ತ ದನಕರುಗಳಿಗೆ ಹೆಚ್ಚಿನ ಮೇವಿನ ಅಗತ್ಯ ಬೀಳುತ್ತದೆ. ಮೇವಿನ ಬೇಡಿಕೆ ಹೆಚ್ಚಿದಂತೆ ಪೂರೈಕೆ ಕಡಿಮೆಯಾಗಿ ಮೇವು ಹಾಗೂ ಇನ್ನಿತರ ಒಳಸುರಿಗಳ ಬೆಲೆ ವಿಪರೀತ ಏರುತ್ತದೆ. ವಾಸ್ತವವಾಗಿ ಸಂಪೂರ್ಣ ಗೋಹತ್ಯಾ ನಿಷೇಧ ಎಂಬುದು ಜನತೆಯ ಬೇಡಿಕೆ ಅಂತೂ ಅಲ್ಲ ಎಂಬುದು ಕಳೆದ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಿದ್ಧರಾಮಯ್ಯನವರು ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದರೆ ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನನ್ನು ರದ್ದುಪಡಿಸುತ್ತೇವೆ ಎಂದು ಚುನಾವಣೆಗೂ ಮೊದಲೇ ಘೋಷಿಸಿದ್ದರು. ಇದು ಜನರ ಬೇಡಿಕೆ ಆಗಿದ್ದರೆ ಬಿಜೆಪಿ ಮೂರನೇ ಎರಡು ಬಹುಮತ ಪಡೆದು ಅಧಿಕಾರಕ್ಕೆ ಬರಬೇಕಾಗಿತ್ತು. ಇದು ಜನತೆಗೆ ನಗಣ್ಯ ವಿಷಯ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ. ಆದರೂ ಇದೇ ವಿಷಯವನ್ನು ಒಂದು ಪಕ್ಷದವರು ಮತ್ತೆ ಮತ್ತೆ ಬಳಸುವ ಪ್ರಯತ್ನ ಮಾಡುತ್ತಿರುವುದು ಅವರಿಗೆ ಜನರ ನೈಜ ಸಮಸ್ಯೆಗಳ ಅರಿವೇ ಇಲ್ಲ ಎಂಬುದನ್ನು ಸೂಚಿಸುತ್ತದೆ.

     ಉತ್ತರ
     • ರವಿ
      ಮೇ 24 2013

      ಗೋ ಹತ್ಯೆ ನಿಷೇಧದ ಮೊದಲು ಎಲ್ಲರೂ (ಕನಿಷ್ಠ ಅರ್ಧದಷ್ಟು ಮಂದಿಯಾದರೂ) ನಿರುಪಯುಕ್ತ ಗೋವುಗಳನ್ನು ಕಸಾಯಿಖಾನೆಗೆ ಅಟ್ಟುತ್ತಿದ್ದರೆ? ಹೋಗಲಿ ಬಿಡಿ. ನಾನು ಕಾನೂನಿನ ಬಗ್ಗೆ ಹೇಳುತ್ತಿಲ್ಲ.. ಕಾನೂನು ಜಾರಿಯಾದರೂ ಇಲ್ಲದಿದ್ದರೂ ಹಾಲಿನ ಬೆಲೆ ಇವೆಲ್ಲ ಖರ್ಚನ್ನೂ ಹೊಂದಿರಲೇ ಬೇಕು

      ಇದೊಳ್ಳೆ ತಮಷೆಯಾಯ್ತು .. ನೀವೂ ನಮ್ಮ ‘ಪ್ರಗತಿಪರ, ಪ್ರಜ್ಞಾವಂತ,ಸಾಕ್ಷಿಪ್ರಜ್ಞೆ’ಗಳಂತೆ ಬರೆಯುತ್ತಿದ್ದೀರಿ .. ಚುನಾವಣಾ ಫಲಿತಾಂಶಕ್ಕೂ ಗೋಹತ್ಯಾ ಕಾನೂನಿಗೂ ತಾಳೆ ಹಾಕುವ ನಿಮ್ಮ ರೀತಿ ಬಹಳ ತಮಾಶೆಯಗಿದೆ.. ಬಿಜೆಪಿ ಸೋತಿರುವ ಕಾರಣ ಎಲ್ಲರಿಗೂ ತಿಳಿದಿದೆ. ಇಬ್ಬರ ಜಗಳದಿಂದ ಕಾಂಗ್ರೆಸ್ಸ್ ಗೆ ಲಾಭವಗಿದ್ದೇ ಹೊರತು. ಗೋ ಹತ್ಯಾ ನಿಷೇಧಕ್ಕೂ ಇದಕ್ಕೂ ಸಂಬಂಧವೇ ಇಲ್ಲ.

      ಉತ್ತರ
     • ಮೇ 24 2013

      > ನಿರುಪಯುಕ್ತ ದನಕರುಗಳನ್ನು ಸಾಕುವ ವೆಚ್ಚವನ್ನು ಈಗಿನ ಹಾಲಿನ ಬೆಲೆಯಲ್ಲಿ ಹಿಡಿಯಲಾಗಿಲ್ಲ
      > ಏಕೆಂದರೆ ಸಂಪೂರ್ಣ ಗೋಹತ್ಯಾ ನಿಷೇಧ ಕರ್ನಾಟಕದಲ್ಲಿ ಜಾರಿಯಾಗಿರಲಿಲ್ಲ.
      > ಇದು ಜಾರಿಯಾದರೆ ಹಾಲಿನ ಬೆಲೆಯನ್ನು ಹೆಚ್ಚಿಸಲೇಬೇಕಾಗುತ್ತದೆ

      ಪಕ್ಕದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳನ್ನೇನೂ ಗೋಹತ್ಯೆ ನಿಷೇಧವಾಗಿಲ್ಲವಲ್ಲ. ಹಾಗಿದ್ದರೆ, ಅಲ್ಲಿ ಹಾಲಿನ ಬೆಲೆ ಕರ್ನಾಟಕದಲ್ಲಿರುವುದಕ್ಕಿಂತ ಹೆಚ್ಚಾಗಿರುವುದೇಕೆ?

      ಡೀಸಲ್ ಬೆಲೆ ಏರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇನ್ನು ಡೀಸೆಲ್ ಬೆಲೆಗೂ, ಡಾಲರ್-ರುಪಾಯಿ ವಿನಿಮಯಕ್ಕೂ ಸಂಬಂಧವಿದೆ. ಹೀಗೆ, ಬೆಲೆ ಏರಿಕೆಗೆ ಅನೇಕ ವಿಷಯಗಳು ಗಂಟುಹಾಕಿಕೊಂಡಿವೆ.

      ಹಾಲಿನ ಬೆಲೆ ಏರುವುದಕ್ಕೂ ಗೋಹತ್ಯಾ ನಿಷೇಧಕ್ಕೂ ಏನೇನೂ ಸಂಬಂಧವಿಲ್ಲ.

      ಬೆಲೆ ಏರುವುದು/ಇಳಿಯುವುದು ನೀವು ಹೇಳಿದಷ್ಟು ಸರಳ ವಿಷಯವಲ್ಲ. ಆರ್ಥಿಕತೆಯ ವಿಷಯವರಿಯದೇ ಮಾತನಾಡಿ, ನಿಮ್ಮ “ಬುದ್ಧಿವಂತಿಕೆ”ಯನ್ನು ಜಗಜ್ಜಾಹೀರು ಮಾಡಬೇಡಿ.

      > ನಿರುಪಯುಕ್ತ ದನಕರುಗಳಿಗೆ ಹೆಚ್ಚಿನ ಮೇವಿನ ಅಗತ್ಯ ಬೀಳುತ್ತದೆ.
      ನೀವು ಹೇಳುವುದು ನೋಡಿದರೆ, ನಿರುಪಯುಕ್ತವೆಂದು ನೀವು ಕರೆಯುವ ದನಗಳ ಸಂಖ್ಯೆಯೇ ಉಳಿದ ದನಗಳ ಸಂಖ್ಯೆಗಿಂತ ಹೆಚ್ಚೇನೋ ಎನ್ನಿಸುವಂತಿದೆ. ಅಂಕಿ-ಅಂಶಗಳನ್ನು ಮುಂದಿಟ್ಟುಕೊಳ್ಳದೆ ಚರ್ಚೆ ಮಾಡಿದರೆ, “ಆಕಾಶಕ್ಕೆ ಬಣ್ಣ ಬಳಿದಂತೆ” ವ್ಯರ್ಥ ಪ್ರಯಾಸವಾಗುತ್ತದೆ.
      ನೀವು ಹೇಳುತ್ತಿರುವ ತರ್ಕವನ್ನು ಆರ್ಥಿಕ ತಜ್ಞರೇನಾದರೂ ಕೇಳಿದಲ್ಲಿ, ಇದೊಂದು ಹಾಸ್ಯವಿರಬೇಕೆಂದು ತಿಳಿಯುತ್ತಾರಷ್ಟೇ.

      > ಸಿದ್ಧರಾಮಯ್ಯನವರು ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದರೆ
      > ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನನ್ನು ರದ್ದುಪಡಿಸುತ್ತೇವೆ
      > ಎಂದು ಚುನಾವಣೆಗೂ ಮೊದಲೇ ಘೋಷಿಸಿದ್ದರು.
      ಮಹಾತ್ಮಾ ಗಾಂಧೀಜಿಯವರು, ಸ್ವಾತಂತ್ರ್ಯ ಬಂದ ನಂತರ ಸಂಪೂರ್ಣ ಗೋಹತ್ಯಾ ನಿಷೇಧವನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆ ನೀಡಿದ್ದು ಮರೆತು ಹೋಯಿತೇನು?
      ಜನರ ಮತ ಗಳಿಸಲು ಗಾಂಧೀಜಿಯವರ ಚಿತ್ರ, ಹೆಸರುಗಳು ಬೇಕು. ಆದರೆ, ಅವರ ವಿಚಾರ ಮಾತ್ರ ಬೇಡ ಎಂದರೆ ಹೇಗೆ?

      ಮತ್ತು ಈ ಚುನಾವಣೆಯೇನೂ “ಗೋಹತ್ಯಾ ನಿಷೇಧ”ದ ಮೇಲಿನ ಜನಮತಗಣನೆಯಲ್ಲ ಎಂಬುದು ನೆನಪಿರಲಿ.
      ಹಿಂದಿನೆರಡು ಚುನಾವಣೆಯಲ್ಲಿ ಕಾಂಗ್ರೆಸ್ಸು ಸೋತಿದ್ದರ ಅರ್ಥ, ಜನರೆಲ್ಲಾ “ಗೋಹತ್ಯಾ ನಿಷೇಧ ಜಾರಿಗೆ ತರಲೇಬೇಕು” ಎಂದೂ ಭಾವಿಸಬಹುದಲ್ಲವೇ?
      ಇದನ್ನು ತರ್ಕ ಎನ್ನುವುದಿಲ್ಲ; ಕುತರ್ಕ ಎನ್ನುತ್ತಾರೆ!

      > ಆದರೂ ಇದೇ ವಿಷಯವನ್ನು ಒಂದು ಪಕ್ಷದವರು ಮತ್ತೆ ಮತ್ತೆ ಬಳಸುವ ಪ್ರಯತ್ನ ಮಾಡುತ್ತಿರುವುದು
      ನಾನು ಈ ಮೊದಲಿಗೆ ನೀಡಿರುವ ಪ್ರತಿಕ್ರಿಯೆಗಳನ್ನೊಮ್ಮೆ ದಯವಿಟ್ಟು ಓದಿಕೊಳ್ಳಿ.
      “ಗೋಹತ್ಯಾ ನಿಷೇಧ”ವೆಂಬುದು ಒಂದು ಪಕ್ಷದ ಕಾರ್ಯಕ್ರಮವಲ್ಲ. ಆ ಪಕ್ಷ ಹುಟ್ಟುವುದಕ್ಕೆ ಮುಂಚಿನಿಂದಲೂ ಬಹುಕೋಟಿ ಹಿಂದುಗಳ ಬೇಡಿಕೆ. ಅಕ್ಬರ್, ಹೈದರ್ ಆಲಿ ಅವರಂತಹ ಮುಸಲ್ಮಾನರ ರಾಜ್ಯದಲ್ಲೂ ಗೋಹತ್ಯಾ ನಿಷೇಧ ಜಾರಿಯಲ್ಲಿತ್ತು. ಅವರೇನು, ನೀವು ಹೇಳುತ್ತಿರುವ ‘ಪಕ್ಷ’ದ ಸದಸ್ಯರೋ, ಶಾಸಕರೋ, ಮಂತ್ರಿಗಳೋ, ಮುಖ್ಯಮಂತ್ರಿಗಳೋ ಆಗಿದ್ದವರೇನು?

      ನೀವು ಕಾಂಗ್ರೆಸ್ಸು ಚುನಾವಣೆಗೆ ಮುಂಚೆ ನೀಡಿದ್ದ ಆಶ್ವಾಸನೆ ಎಂದು ಅದನ್ನು ಸಮರ್ಥಿಸುತ್ತಿದ್ದೀರಿ. ಹೀಗಾಗಿ ನೀವು ಒಂದು ವಿಷಯವನ್ನು ನಮಗೆ ಸ್ಪಷ್ಟಪಡಿಸಬೇಕು.
      ನಿಮಗೆ ಗಾಂಧೀಜಿಯವರ ವಿಚಾರದ ಕುರಿತಾಗಿ ಒಪ್ಪಿಗೆಯಿದೆಯೇ?
      ಒಪ್ಪಿಗೆಯಿದ್ದಲ್ಲಿ, ಅವರ ವಿಚಾರಕ್ಕೆ ವಿರುದ್ಧವಾದುದನ್ನು ಮಾಡುತ್ತಿರುವುದು ಮತ್ತು ಸಮರ್ಥಿಸುತ್ತಿರುವುದು ಏತಕ್ಕಾಗಿ?
      ಒಪ್ಪಿಗೆಯಿಲ್ಲದಿದ್ದಲ್ಲಿ, ಗಾಂಧೀಜಿಯವರ ಚಿತ್ರವನ್ನು ಚುನಾವಣೆಯಲ್ಲಿ ಬಳಸಿ ಜನತೆಗೆ ಮೋಸ ಮಾಡುತ್ತಿರುವುದೇತಕ್ಕೆ?

      ಉತ್ತರ
      • vidya
       ಫೆಬ್ರ 2 2014

       ಚನ್ನಾಗಿ ಹೇಳಿದ್ದೀರಿ ಆದರೆ ಗೋವನ್ನು ಮಾರುವ ವ್ಯಕ್ತಿ ಮಾರದೇ ಹೋದರೆ ನಿಷೇಧವಿದ್ದರೆಷ್ಟು ಬಿಟ್ಟರೆಷ್ಟು? ನಾನೇ ಸಾಕಿಕೊಳ್ಳುತ್ತೇನೆ ಎಂದು ಮುದಿ ಗೋವಿನ ಮಾಲೀಕ ಹೇಳಿದರೆ ಯಾರಾದರೂ ಕಸಾಯಿ ಖಾನೆಗೆ ಕೊಡುವಂತೆ ಒತ್ತಡ ಹೇರಲಾಗುತ್ತೆಯೇ?? ಜನರೇ ತಮ್ಮ ಶ್ರದ್ದೆಯನ್ನು ತೋರಿಸುತ್ತಾ ಹೋದರೆ ಕಾನೂನು ಎನು ತಾನೆ ಮಾಡೀತು??

       ಉತ್ತರ
       • ಫೆಬ್ರ 3 2014

        ಅದೇ ರೀತಿ, ‘ಪಾನ ನಿರೋಧ’ವೂ ಆವಶ್ಯಕವಿಲ್ಲ ಅಲ್ಲವೇ?
        ಜನರೇ ಕುಡಿಯುವುದನ್ನು ಬಿಟ್ಟುಬಿಟ್ಟರೆ, ಸಾರಾಯಿ ಅಂಗಡಿಗಳು ತಾವಾಗಿಯೇ ಮುಚ್ಚಿಹೋಗುತ್ತವೆ. ‘ಪಾನ ನಿರೋಧ’ವನ್ನು ಕಾನೂನಿನ ಮೂಲಕ ಮಾಡಬೇಕಾಗಿಲ್ಲ.

        ಅದೇ ರೀತಿ, ಜನರೆಲ್ಲರೂ ತಾವು ಕಳ್ಳತನ ಮಾಡುವುದಿಲ್ಲವೆಂದು ನಿರ್ಧರಿಸಿಬಿಟ್ಟರೆ, ಪೊಲೀಸ್ ಠಾಣೆಗಳ ಆವಶ್ಯಕತೆಯೇ ಇರುವುದಿಲ್ಲ.
        ಜನರೆಲ್ಲಾ ಲಂಚ ಕೊಡುವುದಿಲ್ಲ ಎಂದು ನಿರ್ಧರಿಸಿಬಿಟ್ಟರೆ, ಭ್ರಷ್ಟಾಚಾರವೇ ಇರುವುದಿಲ್ಲ, ಲೋಕಾಯುಕ್ತದ ಆವಶ್ಯಕತೆಯೇ ಇಲ್ಲ.

        ಈ ರೀತಿಯ ‘ರೇ’ಗಳನ್ನು ಎಲ್ಲದಕ್ಕೂ ಅನ್ವಯಿಸಬಹುದು. ಆ ಆದರ್ಶ ಸ್ಥಿತಿಯನ್ನೇ ಈ ಶ್ಲೋಕದಲ್ಲಿ ತಿಳಿಸಲಾಗಿದೆ:
        ನ ರಾಜ್ಯಂ ನೈವ ರಾಜಾಸೀತ್ ನ ದಂಡೋ ನ ಚ ದಾಂಡಿಕಃ| ಧರ್ಮೇಣೈವ ಪ್ರಜಾಃ ಸರ್ವೇ ರಕ್ಷಂತಿ ಸ್ಮ ಪರಸ್ಪರಮ್||

        ಈ ಆದರ್ಶ ಸ್ಥಿತಿ ತಲುಪುವವರೆಗಾದರೂ ಕಾನೂನುಗಳನ್ನು ಮಾಡಬೇಕು ಎನ್ನುವುದನ್ನು ಒಪ್ಪುತ್ತೀರಿ ಅಲ್ಲವೇ!? 😉

        ಉತ್ತರ
        • Nagshetty Shetkar
         ಫೆಬ್ರ 3 2014

         ಕೃಷ್ಣಪ್ಪ ಸರ್ ಅವರ ಸಮಯೋಚಿತ ಹಾಗೂ ವಿಚಾರಪೂರ್ಣ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ಕಸಾಯಿಖಾನೆ ವಿರೋಧಿಗಳು ಹೈನುಗಾರಿಕೆಯ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳತಕ್ಕದ್ದು. ದನಗಳ ಬಗ್ಗೆ ಕನಿಕರ ಇರುವವರು ಚಂದಾ ಎತ್ತಿ ಹಣ ಸಂಗ್ರಹಿಸಿ ಮುಡಿ ದನಗಳನ್ನು ರೈತರಿಂದ ಕೊಂಡುಕೊಂಡು ಅವುಗಳ ಆರೈಕೆ ಮಾಡಬಹುದು. ಆದರೆ ಅವರುಗಳು ಹಾಗೆ ಮಾಡುತ್ತಿಲ್ಲ. ಏಕೆ?

         ಉತ್ತರ
         • vidya
          ಫೆಬ್ರ 3 2014

          ರಾಘವೇಶ್ವರ ಭಾರತಿ ಸ್ವಾಮಿಗಳು ಮಾಡುತ್ತಿದ್ದಾರೆ. ಬಿಜಾಪುರದಲ್ಲಿ ಬಸನಗೌಡ ಯತ್ನಾಳರು ಗೋಮಾಳ ಮಾಡಿದ್ದಾರೆ. ಹಾಗೆ ಯಲಗೂರ ಗ್ರಾಮದಲ್ಲೂ ಇಂಥ ಗೋಮಾಳ ಇದೆ ಎಂದು ಕೇಳಿದ್ದೇನೆ. ಮಾರವಾಡಿಗಳ ಅಂಗಡಿಗಳಲ್ಲಿ ಇಂಥ ಮುದಿ ದನಗಳ ಮೇವಿಗಾಗೇ ಹಣ ಸಂಗ್ರಹಿಸುತ್ತಾರೆ. ಪ್ರಯತ್ನ ನಡೆದಿದೆ. ಎಲ್ಲವೂ ಕಾನೂನುಗಳಿಂದಲೇ ಸಾಧ್ಯವಿಲ್ಲ. ಜನರು ಜಾಗೃತರಾದರೆ ಪ್ರಾಣಿಗಳು ನೆಮ್ಮದಿಯಿಂದ ಸಾಯಬಹುದು.

          ಉತ್ತರ
          • Nagshetty Shetkar
           ಫೆಬ್ರ 3 2014

           +1

     • Nagshetty Shetkar
      ಫೆಬ್ರ 3 2014
      • ನವೀನ
       ಫೆಬ್ರ 3 2014

       ಶೆಟ್ಕರ್ ಸಾರ್,
       ಶರಣರಾದ ನೀವು ಸಕಲ ಜೀವಿಗಳ ಲೇಸು ಬಯಸುವವರಾಗಿರುವ ಕಾರಣದಿಂದಾಗಿ,ನೀವು ಮತ್ತು ನಿಮ್ಮ ಶರಣ ಮಿತ್ರರು ಗೋವುಗಳನ್ನು ನೋಡಿಕೊಳ್ಳಲು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಯಲು ನನಗೆ ಕುತೂಹಲವಿದೆ.ತಿಳಿಸಿಕೊಡಿ

       ಉತ್ತರ
       • Nagshetty Shetkar
        ಫೆಬ್ರ 3 2014

        ಸಕಲ ಜೀವಿಗಳ ಲೇಸನ್ನು ಬಯಸುವವನು ನಾನು ಎಂಬುದು ೧೦೦% ಸತ್ಯ. ನನ್ನ ಅಭಿಪ್ರಾಯದಲ್ಲಿ ರೈತರು ತಮ್ಮ ಗೋವುಗಳನ್ನು ತಾವೇ ನೋಡಿಕೊಳ್ಳತಕ್ಕದ್ದು, ಅದು ಅವರಿಗೆ ಸಾಧ್ಯವಾಗದಿದ್ದಲ್ಲಿ ಕಸಾಯಿ ಖಾನೆಗೆ ಕಳುಹಿಸುವುದು ಉತ್ತಮ. ಇನ್ನು ಕಸಾಯಿ ಖಾನೆ ಬೇಡ ಅನ್ನುವ ಸಂಘಪರಿವಾರದ ಪ್ರಚಾರಕರು ತಮ್ಮ ಕೈಲಾದಷ್ಟು ಮುದಿ ಗೋವುಗಳ ಆರೈಕೆ ಮಾಡಬಹುದು, ನಾನು ಬೇಡ ಅನ್ನುವುದಿಲ್ಲ, ವಿರೋಧಿಸುವುದಿಲ್ಲ.

        ಉತ್ತರ
        • ಫೆಬ್ರ 3 2014

         [[ಅದು ಅವರಿಗೆ ಸಾಧ್ಯವಾಗದಿದ್ದಲ್ಲಿ ಕಸಾಯಿ ಖಾನೆಗೆ ಕಳುಹಿಸುವುದು ಉತ್ತಮ.]]
         ಒಂದು ಪಕ್ಷಿಯ ಜೀವ ಉಳಿಸುವುದಕ್ಕಾಗಿ ತನ್ನನ್ನೇ ಸಮರ್ಪಣೆ ಮಾಡಿಕೊಂಡ ಶಿಬಿ ಮಹಾರಾಜನ ದೇಶವಿದು.
         ಈ ರೀತಿಯ ಮಹಾನ ಇತಿಹಾಸವಿರುವ ದೇಶದ ಸಂಸ್ಕೃತಿ ನಿಮಗೆ ‘ವೈದಿಕ ವೈರಸ್’ ಎನ್ನಿಸುತ್ತದೆ!
         ಅದೇ “ಸಕಲ ಜೀವಿಗಳ ಲೇಸನ್ನು ಬಯಸುವವನು ನಾನು” ಎಂದು ಕೊಚ್ಚಿಕೊಳ್ಳುವ ನಿಮಗೆ, ನಿಮಗೆ ಹಾಲೂಡಿಸುವ ತಾಯಿಗೆ ಸಮಾನವಾದ ಗೋಮಾತೆಯ ಕುರಿತಾಗಿ ಒಂದು ಸಣ್ಣ ಕನಿಕರದ ಮಾತೂ ಇಲ್ಲ.
         ನಿಮ್ಮ”ಶೇಟ್ಕರತ್ವ” ಎಷ್ಟು ಭೀಷಣವಾಗಿದೆ. ನೀವು ಜಾತೀಯತೆಯ ವಿಷವನ್ನು ಕಕ್ಕುವವರು ಮಾತ್ರವಲ್ಲ, ಹಿಂಸೆಯ ಆರಾಧಕರೂ ಸಹ ಎನ್ನುವುದು ಈಗ ಸಾಬೀತಾಯಿತು.
         ಜಾತೀಯತೆಯ ವಿಷ + ಹಿಂಸೆಯ ಆರಾಧನೆ = ಶೇಟ್ಕರತ್ವ

         ಉತ್ತರ
         • Nagshetty Shetkar
          ಫೆಬ್ರ 4 2014

          “ನಿಮ್ಮ”ಶೇಟ್ಕರತ್ವ” ಎಷ್ಟು ಭೀಷಣವಾಗಿದೆ. ನೀವು ಜಾತೀಯತೆಯ ವಿಷವನ್ನು ಕಕ್ಕುವವರು ಮಾತ್ರವಲ್ಲ, ಹಿಂಸೆಯ ಆರಾಧಕರೂ ಸಹ ಎನ್ನುವುದು ಈಗ ಸಾಬೀತಾಯಿತು.
          ಜಾತೀಯತೆಯ ವಿಷ + ಹಿಂಸೆಯ ಆರಾಧನೆ = ಶೇಟ್ಕರತ್ವ”

          Dear Moderator, please look at the language of the above comment. How can you allow such comments???

          ಉತ್ತರ
          • ಫೆಬ್ರ 4 2014

           ನೀವು ಮಾತುಮಾತಿಗೆ ‘ಬ್ರಾಹ್ಮಣ್ಯ’, ‘ವೈದಿಕ ವೈರಸ್’ ಇತ್ಯಾದಿ ಜಾತಿಧ್ವೇಷದ ವಿಷವನ್ನು ಕಕ್ಕಬಹುದು.
           ಅದು ಬಹಳ ಒಳ್ಳೆಯ ನಡವಳಿಕೆ, ಉದಾತ್ತ ಮನೋಭಾವನೆ ಅಲ್ಲವೇ!?

           ನೀವು ಎಲ್ಲಿಯವರೆಗೆ ‘ಬ್ರಾಹ್ಮಣ್ಯ’ ಎನ್ನುವ ಪದವನ್ನು ಅವಹೇಳನಕಾರಿ ಅರ್ಥದಲ್ಲಿ ಬಳಸುವಿರೋ ಅಲ್ಲಿಯವರೆಗೆ ನಾನೂ ‘ಶೇಟ್ಕರತ್ವ’ ಎನ್ನುವ ಪದವನ್ನು ಬಳಸುವೆ.

          • Nagshetty Shetkar
           ಫೆಬ್ರ 4 2014

           “ನೀವು ಜಾತೀಯತೆಯ ವಿಷವನ್ನು ಕಕ್ಕುವವರು ಮಾತ್ರವಲ್ಲ, ಹಿಂಸೆಯ ಆರಾಧಕರೂ ಸಹ”

           ಶರಣರನ್ನು ಕೆಣುಕುವವರು ಧೂಳಿಪಟವಾಗುತ್ತಾರೆ. ಹುಷಾರ್!

          • ಫೆಬ್ರ 4 2014

           [[Nagshetty Shetkar> ಶರಣರನ್ನು ಕೆಣುಕುವವರು ಧೂಳಿಪಟವಾಗುತ್ತಾರೆ. ಹುಷಾರ್!]]

           ಇತರರನ್ನು ಧ್ವೇಷಿಸುವವನು ಶರಣನಾಗಲಾರ.
           ಜಾತಿಧ್ವೇಷವನ್ನು ತೋರಿಸುವವನು ಶರಣನಾಗಲಾರ.
           ಯಾವುದೇ ವಿಷಯವನ್ನು ತೆಗೆದರೂ ಅದರಲ್ಲಿ ಜಾತಿಯನ್ನು ಹುಡುಕುವವನು ಶರಣನಾಗಲಾರ.
           ಪರನಿಂದೆ ಮಾಡುವವನು ಶರಣನಾಗಲಾರ.
           ತಾಳ್ಮೆ ಇಲ್ಲದವನು ಶರಣನಾಗಲಾರ.
           ಶೇಟ್ಕರತ್ವ ಹೊಂದಿರುವವನು ಶರಣನಾಗಲಾರ.
           ತಮ್ಮನ್ನು ತಾವೇ ಶರಣರೆಂದು ಹೊಗಳಿಕೊಳ್ಳುವವನು ಶರಣನಾಗಲಾರ.
           ಈ ಆರು ನಿಯಮಗಳನ್ನು ಪಾಲಿಸದೆಯೂ ಶರಣನೆಂದು ಹೇಳಿಕೊಂಡು ತಿರುಗಾಡುವವನನ್ನು ನೀನೇ ಕಾಪಾಡು ಕೂಡಲಸಂಗಮದೇವಾ||

          • Nagshetty Shetkar
           ಫೆಬ್ರ 4 2014

           ನೀವೇಕೆ ನನಗೆ ಜಿಗಣೆಯಂತೆ ಅಂಟಿಕೊಂಡಿದ್ದೀರಿ? ಶತ ಶತಮಾನಗಳಿಂದ ಅವೈದಿಕರ ರಕ್ತ ಹೀರುತ್ತಲೇ ಬಂದವರಿಗೆ ಹಳೆಯ ಸಂಸ್ಕೃತಿಯ ವಿಸ್ಮೃತಿ ಆಗುವುದು ಎಂದು?

          • Nagshetty Shetkar
           ಫೆಬ್ರ 4 2014

           ದಯವಿಟ್ಟು ನನ್ನನ್ನು ಜಿಗಣೆಯಂತೆ ಪ್ರಶ್ನಿಸಿ ಉತ್ತರಿಸಲಾಗದಂತೆ ಮಾಡದಿರಿ… ಅದು ಈ ಮಹಾಶರಣನಿಗೆ ಮಾಡುವ ಅಪಮಾನ…..

          • Nagshetty Shetkar
           ಫೆಬ್ರ 4 2014

           SSNK ಅವರೇ, “ದಯವಿಟ್ಟು ನನ್ನನ್ನು ಜಿಗಣೆಯಂತೆ ಪ್ರಶ್ನಿಸಿ ಉತ್ತರಿಸಲಾಗದಂತೆ ಮಾಡದಿರಿ… ಅದು ಈ ಮಹಾಶರಣನಿಗೆ ಮಾಡುವ ಅಪಮಾನ”

           ನೋಡಿ, ನೀವು ಜಾಣರಿರಬಹುದು. ಆದರೆ ಬೇರೆಯವರ ಹೆಸರಿನಲ್ಲಿ ಕಮೆಂಟು ಮಾಡುವುದು ಜಾಣತನವಲ್ಲ, ಅದು ಭಂಡತನ.

          • ಫೆಬ್ರ 4 2014

           ನೀವು ಏನು ಬರೆಯುತ್ತಿದ್ದೀರೋ ನನಗಂತೂ ತಿಳಿಯುತ್ತಿಲ್ಲ.
           ನಿಮಗೆ ನೀವೇ “+1” ಒತ್ತಿಕೊಳ್ಳುತ್ತೀರಿ, ಮತ್ತೊಬ್ಬ ಶರಣರು ನಿಮ್ಮ ಬರಹ ನೋಡಿ ಮೆಚ್ಚಿಕೊಂಡದ್ದಕ್ಕೆ ಹಾಕೊಕೊಂಡೆ ಅನ್ನುತ್ತೀರಿ, ಮತ್ತೆ “+111111” ಎಂದು ನಿಮಗಿಷ್ಟ ಬಂದಷ್ಟು ಅಂಕಿಗಳನ್ನು ಒತ್ತಿಕೊಳ್ಳುತ್ತೀರಿ!
           ಮತ್ತು ಮುಂದುವರೆದು ಬೇರೆಯವರು ನಿಮ್ಮ ಹೆಸರಿನಲ್ಲಿ ಕಾಮೆಂಟು ಮಾಡುತ್ತಿದ್ದಾರೆ ಎನ್ನುವಿರಿ!!

           ನಿಮ್ಮನ್ನು ಯಾರೋ ಮೆಚ್ಚಿರಬಹುದು. ಹಾಗೆಂದ ಮಾತ್ರಕ್ಕೆ, ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಂಡು ಊರಿನಲ್ಲೆಲ್ಲಾ ಓಡಾಡಿದರೆ ಹೇಗಿರುತ್ತದೆ ಊಹಿಸಿ ನೋಡಿ? ಶರಣರಾರೋ ನಿಮ್ಮ ಬರಹವನ್ನು ಮೆಚ್ಚಿದ್ದಕ್ಕೆ ನೀವು ಒತ್ತಿಕೊಂಡ “+1” ಕೂಡಾ ಅದೇ ರೀತಿ ಎನ್ನುವುದು ನಿಮಗೆ ಆದಷ್ಟು ಬೇಗ ಅರ್ಥವಾದರೆ ಒಳ್ಳೆಯದು.

           ಒಟ್ಟಿನಲ್ಲಿ ನಿಮ್ಮಂತಹ ಆಧುನಿಕ ಶರಣರೊಡನೆ ಮಾತನಾಡಿದ ನಂತರ ಎಲ್ಲರೂ ನಿಶ್ಕರ್ಷೆಗೆ ಬರುವ ಸಂಗತಿ ಎಂದರೆ, ಆಧುನಿಕ ಶರಣರು ಕಸಾಯಿಖಾನೆಗಳಿಗೆ ಪ್ರೋತ್ಸಾಹ ನೀಡುತ್ತಾರೆ!!

        • ನವೀನ
         ಫೆಬ್ರ 4 2014

         ಶೆಟ್ಕರ್ ಸಾರ್,
         ಸಕಲ ಜೀವಿಗಳ ಲೇಸನ್ನು ಬಯಸುವ ಶರಣರಾದ ನೀವು ನಿಮ್ಮ ಜವಬ್ದಾರಿಯನ್ನು ಸಂಘಪರಿವಾರದ ಮೇಲೆ ಹೊರಿಸಿ ನುಣುಚಿಕೊಳ್ಳುವುದು ಬೇಸರ ತರಿಸುವ ವಿಷಯವಾಗಿದೆ.

         ಉತ್ತರ
         • Nagshetty Shetkar
          ಫೆಬ್ರ 4 2014

          ಇದೊಳ್ಳೆ ತಮಾಷೆ ಆಯಿತಲ್ಲ! ಸಕಲ ಜೀವಿಗಳ ಲೇಸನ್ನೇ ಬಯಸುವವರೆಲ್ಲರೂ ಮುದಿ ಎತ್ತುಗಳನ್ನು ಸಾಕಿ ಸಲಹಬೇಕು ಎಂಬ ನಿಯಮವಿದೆಯೇ? ಮುದಿ ಎತ್ತುಗಳ ಜವಾಬ್ದಾರಿ ಹೊರಬೇಕಾದವರು ಅವುಗಳ ಮಾಲೀಕರಾದ ರೈತರು. ಅವರಿಗೇ ಆ ಎತ್ತುಗಳು ಬೇಕಿಲ್ಲವೆಂದ ಮೇಲೆ ಶರಣರನ್ನು ದೂರುವುದು ಏತಕ್ಕೆ?? ಎತ್ತುಗಳು ಕಸಾಯಿ ಖಾನೆ ತಲುಪುವುದು ಬೇಡ ಅನ್ನುವ ನೀವು ಬೇಕಿದ್ದರೆ ಮುದಿ ಎತ್ತುಗಳ ಪಾಲನೆಗೆ ಮುಂದಾಗಿ. ಅದು ಬಿಟ್ಟು ಶರಣರ ಬಗ್ಗೆ ಅಪಸ್ವರ ಹೊರಡಿಸುವುದು ಏತಕ್ಕೆ?

          ಉತ್ತರ
          • Nagshetty Shetkar
           ಫೆಬ್ರ 4 2014

           +೧

          • ಫೆಬ್ರ 4 2014

           ಶೇಟ್ಕರ್ ಅವರೇ, ನಿಮ್ಮ “Fake Id”ಯ ಮುಖವಾಡ ಕಳಚಿದೆ!
           ನಿಮ್ಮ ಕಾಮೆಂಟಿಗೆ ನಿಮ್ಮದೇ ಹೆಸರಿನಲ್ಲಿ “+1” ಬರೆದುಕೊಳ್ಳುತ್ತಿದ್ದೀರಿ. ಯಾರಾದರೂ ತಿಳುವಳಿಕಸ್ಥರು ಹೀಗೆ ಮಾಡಲು ಸಾಧ್ಯವೇ? ತಮ್ಮ ಬೆನ್ನಿಗೆ ತಾನೇ ತಟ್ಟಿಕೊಳ್ಳುವವನನ್ನು ಏನೆಂದು ಕರೆಯುತ್ತಾರೆ?
           ನೀವು ಎರಡು Id ಇಟ್ಟುಕೊಂಡಿದ್ದೀರಿ. ಒಂದು Idಯಲ್ಲಿ ಕಾಮೆಂಟು ಬರೆಯುತ್ತೀರಿ.
           ನೀವು ಬರೆದದ್ದನ್ನು ಮೆಚ್ಚುವವರಿದ್ದಾರೆ ಎಂದು ತೋರಿಸಿಕೊಳ್ಳಲು ಮತ್ತೊಂದು Idಯಿಂದ “+1” ಹಾಕಿಕೊಳ್ಳುತ್ತೀರಿ.
           ಆದರೆ, ಎರಡನೆಯ ಕಾಮೆಂಟು ಬರೆಯುವ ಮೊದಲು, ಹಿಂದಿನ Idಯಿಂದ Logout ಆಗಲು ಮರೆತಿರುವಿರಿ! 😉
           ನಿಮ್ಮ ಎರಡನೇ “Id”ಯೇ ನಿಜವಾದ “fake Id” ಮತ್ತು ನೀವೇ ಅದನ್ನುಪಯೋಗಿಸಿ ಬಾಯಿಗೆ ಬಂದ ಹಾಗೆ ಬರೆದು, ನಂತರ ನಿಲುಮೆಯ ಮಾಡರೇಟರ್ ಮೇಲೆ ಹೇಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಿರಿ! 😀

          • Nagshetty Shetkar
           ಫೆಬ್ರ 4 2014

           ನನ್ನ ಜೊತೆ ಕುಳಿತು ನನ್ನ ಕಮೆಂಟನ್ನು ಓದಿದ ಹಿರಿಯ ಶರಣರೊಬ್ಬರು ‘ಭೇಷ್ ಉತ್ತಮ ಪ್ರತಿಕ್ರಿಯೆ’ ಅಂತ ಹೇಳಿದರು. ಅವರ ಅಭಿಪ್ರಾಯಕ್ಕೆ ಗೌರವ ಕೊಡಲೆಂದು ನಾನೇ +೧ ಹಾಕಿದೆ. ಇದರಲ್ಲಿ ಯಾವ ಕಪಟವೂ ಇಲ್ಲ. ನಿಮ್ಮ ಹಾಗೆ ಐಡಿ ಕದ್ದು ಬೇರೆಯವರ ಹೆಸರಿನಲ್ಲಿ ಅಸಂಬದ್ಧವಾದ ಕಮೆಂಟು ಮಾಡುವ ನೀಚ ನಾನಲ್ಲ.

          • Nagshetty Shetkar
           ಫೆಬ್ರ 4 2014

           +1111111111111111111111111111111111

          • Nagshetty Shetkar
           ಫೆಬ್ರ 4 2014

           ನೋಡಿ, ನೀವು ಜಾಣರಿರಬಹುದು. ಆದರೆ ಬೇರೆಯವರ ಹೆಸರಿನಲ್ಲಿ ಕಮೆಂಟು ಮಾಡುವುದು ಜಾಣತನವಲ್ಲ, ಅದು ಭಂಡತನ.

          • ನವೀನ
           ಫೆಬ್ರ 5 2014

           ಹಾಗಿದ್ದರೆ ಮುದಿ ಹಸುಗಳನ್ನು ಕೊಲ್ಲುವುದು ನಿಮಗೆ ಒಪ್ಪಿಗೆಯಿದೆಯೆಂದು ತಿಳಿಯಬಹುದಾಗಿದೆ.ಪ್ರಾಣಿಹಿಂಸೆಯನ್ನು ಶರಣರು ಸಮರ್ಥಿಸುವುದು ನೋವಿನ ವಿಷಯವಾಗಿದೆ 😦
           ಜವಬ್ದಾರಿಗಳ ವಿಷಯ ಬಂದಾಗ ಸಂಘಪರಿವಾರದ ಮೇಲೆ ಹೊರಿಸಿ ಕೈತೊಳೆದುಕೊಳ್ಳುವುದು,ಸಮಸ್ಯೆಗಳಿಗೆ ಬ್ರಾಹ್ಮಣ(ಣ್ಯ)ರನ್ನು ಬೈಯ್ಯುವುದು ಆಶ್ಚರ್ಯಕರವಾದ ವಿದ್ಯಾಮಾನವಾಗಿದೆ

          • Nagshetty Shetkar
           ಫೆಬ್ರ 6 2014

           “ಮುದಿ ಹಸುಗಳನ್ನು ಕೊಲ್ಲುವುದು ನಿಮಗೆ ಒಪ್ಪಿಗೆಯಿದೆಯೆಂದು ತಿಳಿಯಬಹುದಾಗಿದೆ.”

           ನನಗೆ ಒಪ್ಪಿಗೆಯೋ ಅಲ್ಲವೋ ಎಂಬುದು ಇಲ್ಲಿ ಪ್ರಸ್ತುತವಲ್ಲ. ಆ ಹಸುಗಳ ಮಾಲಿಕರಾದ ರೈತರು ನನ್ನನ್ನು ಅಥವಾ ನಿಮ್ಮನ್ನು ಒಪ್ಪಿಗೆ ಕೇಳಿ ತಮ್ಮ ಹಸುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಿದ್ದಾರ???

 4. Rajaram Hegde
  ಮೇ 23 2013

  good analysis

  ಉತ್ತರ
 5. Rajaram Hegde
  ಮೇ 24 2013

  ಕುಕ್ಕಿಲ ಅವರ ಲೇಖನ ಹಾಗೂ ಅದಕ್ಕೆ ಕುಮಾರ್ ಅವರ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಈ ಟಿಪ್ಪಣಿ. ಲೇಖನ ತುಂಬಾ ಚೆನ್ನಾಗಿ ಬಂದಿದೆ. ಅದು ಪ್ರಾಯೋಗಿಕ ಸಮಸ್ಯೆಗಳು ಹಾಗೂ ವಾಸ್ತವ ಸನ್ನಿವೇಶವನ್ನು ಸಾದರ ಪಡಿಸುತ್ತಿದೆ. ನಾವು ಯಾವುದೇ ನಿಲುವು ತೆಗೆದುಕೊಳ್ಳುವುದಕ್ಕೂ ಪೂವ೵ದಲ್ಲಿ, ಅದಕ್ಕೂ ಹೊರತಾಗಿ ಈ ವಾಸ್ತವ ಇದೆ ಎಂಬುದನ್ನು ಗುರುತಿಸುವುದು ಅತೀ ಮುಖ್ಯ. ನಾನು ಸಂಘಪರಿವಾರದ ನನ್ನ ಕೆಲವು ಮಿತ್ರರ ಜೊತೆಗೆ ಇದೇ ವಾದ ಮಾಡಿದ್ದೇನೆ. ವಯಸ್ಸಾದ ತಾಯಿ ತಂದೆಯರನ್ನು ಸಲಹುವುದಕ್ಕೂ ಈ ಸಮಸ್ಯೆಗೂ ನಾವು ತಳಕುಹಾಕುವ ಸಂಬಂಧ ನಾವು ಕಲ್ಪಿಸಿದ್ದೇ ಅಥವಾ ವಾಸ್ತವಿಕ ಸಮಸ್ಯೆಯೆ ಎಂಬುದನ್ನೂ ಯೋಚಿಸಬೇಕು. ಗೋಹತ್ಯೆಯ ಕುರಿತ ಈ ವಾಸ್ತವನ್ನು ಒಪ್ಪಿಕೊಂಡರೆ ತಾಯಿ ತಂದೆಯರನ್ನು ಸಲಹಬೇಕು ಎಂಬ ಮೌಲ್ಯವನ್ನು ನಿಜವಾಗಿಯೂ ನಿರಾಕರಿಸಿದಂತಾಗುತ್ತದೆಯೆ?
  ಈ ಸಮಸ್ಯೆ ಸಾಧಾರಣವಾಗಿ ನಮ್ಮ ಆಧುನಿಕ ಚಿಂತನಾಧಾರೆಗೆ ಸಾಮಾನ್ಯವಾಗಿದೆ. ನಾವು ನಮ್ಮ ಕ್ರಿಯೆಗಳಿಗೆ ಒಂದು ಸಂದಭಾ೵ತೀತವಾದ ನೈತಿಕಮೌಲ್ಯದ ಆಧಾರವನ್ನು ಕಲ್ಪಿಸುತ್ತೇವೆ. ಗೋವು ತಾಯಿ ಎಂದು ನಮ್ಮ ಸಂಪ್ರದ಻ಯ ಹೇಳುತ್ತದೆ ಎಂದಾಕ್ಷಣ ಎಲ್ಲರೂ ಎಲ್ಲಾ ಸಂದಭ೵ದಲ್ಲೂ ಅದರ ಜೊತೆಗೆ ನಡೆದುಕೊಳ್ಳುವ ನೀತಿಯೊಂದನ್ನು ನಮ್ಮ ಹಾಗೂ ನಮ್ಮ ತಾಯಿತಂದೆಗಳ ಸಂಬಂಧ ನೀಡುತ್ತದೆ ಎಂದು ನಡುವೆ ಇರುವ ಎಷ್ಟೋ ಅಂತರಗಳನ್ನೂ, ಸಾಂದಭಿ೵ಕ ವ್ಯತ್ಯಾಸಗಳನ್ನೂ ಸಮಸ್ಯೆಗಳನ್ನೂ ಉಪೇಕ್ಷಿಸಿ ತೀಮಾ೵ನಿಸಿದರೆ ಅದರಷ್ಟು ಅಪ್ರಾಯೋಗಿಕ ವಿಚಾರ ಮತ್ತೊಂದಿಲ್ಲ. ನೀತಿಎಂಬುದು ಆಯಾ ಸಂದಭ೵ದಿಂದ ವಿವೇಚಿಸಿ ತೆಗೆಯುವ ವಿವೇಕವೇ ಹೊರತೂ ಸಂದಭ೵ಗಳ ಹೊರತಾಗಿ ಅಸ್ತಿತ್ವದಲ್ಲಿರುವುದಲ್ಲ. ಏಕೆಂದರೆ ನೀತಿ ಎಂಬುದು ಕ್ರಿಯೆಗೆ ಸಂಬಂಧಿಸಿರುವುದರಿಂದ ಪ್ರಾಯೋಗಿಕವೂ ಆಗಿರಬೇಕಲ್ಲ? ಅಪ್ರಾಯೋಗಿಕವಾದ ನೀತಿಯನ್ನು ಅಳವಡಿಸಿಕೊಂಡರೆ ಎಲ್ಲರೂ ಆಷಾಢಭೂತಿಗಳಾಗಿ ಜೀವಿಸುವ ವಾತಾವರಣ ಸೃಷ್ಟಿಯಾಗುವುದಿಲ್ಲವೆ? ಬಿಜೆಪಿಯ ಕುರಿತು ಈ ಲೇಖನ ಎತ್ತುತ್ತಿರುವ ಪ್ರಶ್ನೆಯನ್ನು ಈ ನಿಟ್ಟಿನಿಂದ ನೋಡಿ.
  ನಾನು ಈ ಸಮಸ್ಯೆಯನ್ನು ಪ್ರಗತಿಪರ ಚಿಂತಕರಲ್ಲೂ ನೋಡಿದ್ದೇನೆ. ನಾವು ಜಾತಿ ವ್ಯವಸ್ಥೆ ಇಲ್ಲ ಎಂದು ಹೇಳಿದಾಕ್ಷಣ ಹಾಗಾದರೆ ಭಾರತದಲ್ಲಿ ಅನ್ಯಾಯ ಶೋಷಣೆಗಳು ಇರಬೇಕೆ? ದಲಿತರಿಗೆ ವಿಮೋಚನೆಯೇ ಇಲ್ಲವೆ? ಎಂದು ತಕ್ಷಣ ನಮ್ಮನ್ನು ಖಳನಾಯಕ ಪಟ್ಟಕ್ಕೆ ಕೂಡ್ರಿಸುತ್ತಾರೆ. ಭಾರತೀಯರು ರೇಪನ್ನು ನೋಡುವುದಕ್ಕೂ ಪಾಶ್ಚಾತ್ಯರು ಅದನ್ನು ನೋಡುವುದಕ್ಕೂ ವ್ಯತ್ಯಾಸವಿದೆ ಎಂದಾಕ್ಷಣ ಹಾಗಾದರೆ ನೀವು ರೇಪನ್ನು ಸಮಥಿ೵ಸುತ್ತೀರಾ? ಎಂದು ನೊಂದುಕೊಳ್ಳುತ್ತಾರೆ. ಅಂದರೆ ಇಂಥ ಸಂದಭಾ೵ತೀತ ನೈತಿಕ ಪ್ರಶ್ನೆಗಳನ್ನು ತಂದು ವ಻ಸ್ತವವನ್ನು ಗುರುತಿಸುವ ಕೆಲಸವನ್ನೇ ಗೊಂದಲಗೊಳಿಸುತ್ತಾರೆ. ಪರಿಣಾಮವಾಗಿ ‘ಹೇಳುವುದೊಂದು ಮಾಡುವುದೊಂದು’ ಜೀವನವನ್ನು ಲೀಲಾಜಾಲವಾಗಿ ಬದುಕುವುದನ್ನು ರೂಢಿಸಿಕೊಂಡಿರುತ್ತಾರೆ.
  ನಮ್ಮ ಕ್ರಿಯೆಗೆ ದಾರಿ ಯಾವುದು? ಗೋವನ್ನು ಪೂಜಿಸುವ ಸಂಪ್ರದಾಯದವರೇ ಈ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ನೋಡಿ. ಅದು ಸಮಸ್ಯೆಯ ನಿಜವಾದ ಸಂದಭ೵. ನಮ್ಮ ನೀತಿಗಳು ಪ್ರಾಯೋಗಿಕವಾಗಬೇಕಾದರೆ ಗೋವನ್ನು ಸಾಕುವ ಸಮಸ್ಯೆಯನ್ನು ಇದರ ಜೊತೆಗೆ ಇಟ್ಟು ಮಾತನಾಡಬೇಕಾಗುತ್ತದೆ. ಅದು ಪೂಜಿಸುವವರೂ ಅಲ್ಲ, ಸಾಕುವವರೂ ಅಲ್ಲ, ಮಾರುವವರೂ ಅಲ್ಲದವರ ಭಾವನಾತ್ಮಕ ಸಮಸ್ಯೆ ಹೇಗಾಗುತ್ತದೆ? ಎಂಬುದರ ಕುರಿತೂ ಚಿಂತಿಸಿ. ಅವರು ತಾವು ಪೂಜಿಸುವ ಗೋವನ್ನೇ ಮಾರುತ್ತಾರೆಂದರೆ ಅವರು ತಮ್ಮ ಭಾವನಾತ್ಮಕ ಸಮಸ್ಯೆಯನ್ನು ಯಾವುದೋ ಹಂತದಲ್ಲಿ ಬಗೆಹರಿಸಿಕೊಂಡಿರುತ್ತಾರೆ. ಅದನ್ನು ಪರಿಶೀಲಿಸಿ. ಇಲ್ಲ ಻ವರೇ ಸಮಸ್ಯೆಯನ್ನು ಬಗೆಹರಿಸಲಾಗದೇ ಬೇಗುದಿ ಪಡುತ್ತಿದ್ದಾರೆ ಅನ್ನಿಸಿದರೆ ಆಗ ಻ದಕ್ಕೊಂದು ಪರಿಹಾರವನ್ನು ಹೊರಗಿನವರು ಯೋಜಿಸಬೇಕು ಎಂಬುದು ಸ್ಪಷ್ಟ.

  ಉತ್ತರ
 6. ಮೇ 24 2013

  ನೀವು ಗೋಹತ್ಯೆಯನ್ನು ವಿವಿಧ ಕಾರಣ ನೀಡಿ ಸಮರ್ಥಿಸುತ್ತಿದ್ದೀರ. ಇರಲಿ.
  ಆದರೆ, ಗೋವನ್ನು ಅಷ್ಟೊಂದು ಕ್ರೂರವಾಗಿ, ನಿರ್ದಯವಾಗಿ ನಡೆಸಿಕೊಳ್ಳುವುದರ ಅಗತ್ಯವೇನು?
  ಆ ವಿಷಯದ ಕುರಿಗಾಗಿ ನಿಮ್ಮ ನಿಲುವು ಏನು?
  ನಿಮ್ಮ ಮೌನವೇ ಆ ರೀತಿಯ ಕ್ರೂರ ಹತ್ಯೆಗೆ ಸಮರ್ಥನೆ ಎಂದಾಗುವುದಿಲ್ಲವೇ?

  ಆಹಾರಕ್ಕಾಗಿ ಗೋಹತ್ಯೆಯನ್ನು ಸಮರ್ಥಿಸುವ ನೀವು, ಆ ಮೂಕಪ್ರಾಣಿಯ ವೇದನೆಯ ಕುರಿತಾಗಿ ಒಂದು ಸಣ್ಣ ಕನಿಕರವನ್ನೂ ತೋರದಿರುವುದು ಸೋಜಿಗವೆನಿಸುತ್ತಿದೆ!

  ಉತ್ತರ
 7. ಮೇ 24 2013

  > ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು.
  ಇದನ್ನೇ “Use and Throw” ಸಂಸ್ಕೃತಿ (ವಿಕೃತಿ?) ಎನ್ನುವುದು.
  ಜಗತ್ತೆಲ್ಲವನ್ನೂ ವ್ಯಾಪಾರದ ದೃಷ್ಟಿಯಿಂದಲೇ ನೋಡುವ ಪಶ್ಚಿಮ ದೇಶಗಳ ಮನೋಭಾವ ಇದು.
  ಹಾಗಾಗಿಯೇ, ಅವರು ನಡೆಸುವ ಸಂಸ್ಥೆಗಳಲ್ಲಿ “Hire and Fire” ಬಹಳ ಸಾಮಾನ್ಯ.
  ಬೇಕಾದಾಗ “ದನದಂತೆ ದುಡಿಸಿಕೋ”……ಬೇಡವಾದಾಗ “ಎತ್ತಿ ಬಿಸಾಕು”!

  ಈ ರೀತಿಯ ಚಿಂತನೆ ಪ್ರಾರಂಭವಾದರೆ, ಅದು ಮನುಷ್ಯರ ಕುರಿತಾಗಿಯೂ ಅದೇ ರೀತಿ ಚಿಂತಿಸುವಂತೆ ಮಾಡುತ್ತದೆ.
  ವ್ಯಾಪಾರವೇ ಪ್ರಧಾನವಾದಾಗ, ಅಲ್ಲಿ ಸಂಬಂಧಗಳು ಯಾವ ಲೆಕ್ಕ?
  ವ್ಯಕ್ತಿ, ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಹಿತ – ಇವುಗಳೇ ಮುಖ್ಯವೆನಿಸಿದಾಗ, ಅಲ್ಲಿ ಕುಟುಂಬ, ಸಮಾಜ ಇವುಗಳೆಲ್ಲಾ ಗೌಣವಾಗಿಬಿಡುತ್ತವೆ!
  ಪರಿಣಾಮವಾಗಿಯೇ ನಾವಿಂದು “Old-age home”ಗಳು ನಗರಗಳಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ.
  ನಿರುಪಯೋಗಿ ಎಂದು ದನವನ್ನು ಕಸಾಯಿಖಾನೆಗಳಿಗೆ ಮಾರುವವರು, ಅದೇ ಕಾರಣ ನೀಡಿ ತಾಯ್ತಂದೆಯರನ್ನು ‘ವೃದ್ದಾಶ್ರಮ’ಗಳಿಗೆ ಅಟ್ಟುತ್ತಾರೆ.

  > ವಯಸ್ಸಾದ ತಾಯಿ ತಂದೆಯರನ್ನು ಸಲಹುವುದಕ್ಕೂ ಈ ಸಮಸ್ಯೆಗೂ ನಾವು ತಳಕುಹಾಕುವ ಸಂಬಂಧ
  > ನಾವು ಕಲ್ಪಿಸಿದ್ದೇ ಅಥವಾ ವಾಸ್ತವಿಕ ಸಮಸ್ಯೆಯೆ ಎಂಬುದನ್ನೂ ಯೋಚಿಸಬೇಕು.
  ನಿಮಗೆ, ಕಸಾಯಿಖಾನೆಗಳಿಗೆ ದನಗಳನ್ನು ಕಳುಹಿಸುವುದಕ್ಕೂ, ತಾಯ್ತಂದೆಯರನ್ನು ವೃದ್ದಾಶ್ರಮಕ್ಕೆ ಕಳುಹಿಸುವುದಕ್ಕೂ ಸಂಬಂಧವಿಲ್ಲದ ವಿಷಯಗಳೆಂದು ಅನ್ನಿಸಬಹುದು. ಆದರೆ, ಸಾಮ್ಯವಿರುವುದು ಚಿಂತನೆಯಲ್ಲಿ. ಆ ರೀತಿಯ “ವ್ಯಾಪಾರಿ ಚಿಂತನೆಯಲ್ಲಿ” ದನಗಳಿಗೂ ಮನುಷ್ಯರಿಗೂ ಯಾವುದೇ ವ್ಯತ್ಯಾಸವಿಲ್ಲ. “ಉಪಯೋಗಕ್ಕೆ ಬರುವವರೆಗೆ ಉಪಯೋಗಿಸಿಕೋ; ಉಪಯೋಗವಿಲ್ಲದಿದ್ದಾಗ ಬಿಸಾಡು” ಎನ್ನುವುದೇ ಈ ಚಿಂತನೆಯ ಸಾರ.

  > ಗೋವನ್ನು ಸಾಕುವ ಸಮಸ್ಯೆಯನ್ನು
  ಗೋವನ್ನು ಸಾಕುವುದು ಸಮಸ್ಯೆ ಎಂದು ನೀವಂದುಕೊಂಡಿದ್ದೀರಷ್ಟೇ. ಆದರೆ, ಸಮಸ್ಯೆಯ ಮೂಲ ಇದಲ್ಲ.
  ಕಸಾಯಿಖಾನೆಗಳು ಗೋಮಾಂಸ ಲಾಭದಾಯಕ ವ್ಯಾಪಾರ. ಹೆಚ್ಚು ಲಾಭ ಬರುವುದರಿಂದ, ಗೋವನ್ನು ಹೆಚ್ಚು ಹಣ ಕೊಟ್ಟು ಖರೀದಿ ಮಾಡಲು ಇವರು ಸಿದ್ಧರಿರುತ್ತಾರೆ. ರೈತರಿಗೆ ಇದೊಂದು ಆಮಿಷವೊಡ್ಡಿದಂತೆ.
  ರೈತ ತನಗೆ ಸಾಕಲಾಗುತ್ತಿಲ್ಲವೆಂದೇ ಹಸುಗಳನ್ನು ಮಾರಿಬಿಡುತ್ತಾನೆ ಎಂದು ತಿಳಿಯುವುದು ಮೂರ್ಖತನವಷ್ಟೇ.
  ತನಗೆ ಸಾಕಲು ಸಾಧ್ಯವಿದ್ದರೂ, ಒಂದೆರಡು ಕಾಸು ಹೆಚ್ಚು ಬರುತ್ತದೆಂಬ ಆಸೆಗೆ ಆತ ಬೀಳುವಂತಾಗುತ್ತಿದೆ.
  ಇದನ್ನು “ದುರಾಸೆ” ಎನ್ನದೆ ಬೇರೆ ದಾರಿಯಿಲ್ಲ.
  ರೈತನಿಗೆ ದನವನ್ನು ಸಾಕಲು ಸಾಧ್ಯವಾಗುತ್ತಿಲ್ಲವಾದ್ದರಿಂದಲೇ ಆತ ಅದನ್ನು ಮಾರುತ್ತಿದ್ದಾನೆ ಎನ್ನುವುದು ಅದನ್ನು ಸಮರ್ಥಿಸುವವರ ಮೊಂಡುವಾದವಷ್ಟೇ. ಅದರಲ್ಲಿ ಯಾವುದೇ ಹುರುಳಿಲ್ಲ, ಸತ್ಯವಿಲ್ಲ, ಸಮಸ್ಯೆಯ ಅರಿವಿಲ್ಲ, ತಮ್ಮ ವಾದವೇ ಗೆಲ್ಲಬೇಕೆಂಬ ಹಟವಿದೆ ಅಷ್ಟೇ!

  ಉತ್ತರ
  • ರವಿ
   ಮೇ 24 2013

   ರೈತ ತನಗೆ ಸಾಕಲಾಗುತ್ತಿಲ್ಲವೆಂದೇ ಹಸುಗಳನ್ನು ಮಾರಿಬಿಡುತ್ತಾನೆ ಎಂದು ತಿಳಿಯುವುದು ಮೂರ್ಖತನವಷ್ಟೇ. ತನಗೆ ಸಾಕಲು ಸಾಧ್ಯವಿದ್ದರೂ, ಒಂದೆರಡು ಕಾಸು ಹೆಚ್ಚು ಬರುತ್ತದೆಂಬ ಆಸೆಗೆ ಆತ ಬೀಳುವಂತಾಗುತ್ತಿದೆ.
   ಇದನ್ನು “ದುರಾಸೆ” ಎನ್ನದೆ ಬೇರೆ ದಾರಿಯಿಲ್ಲ.

   +1

   ಉತ್ತರ
 8. ಮೇ 24 2013

  > ನಾನು ಸಂಘಪರಿವಾರದ ನನ್ನ ಕೆಲವು ಮಿತ್ರರ ಜೊತೆಗೆ ಇದೇ ವಾದ ಮಾಡಿದ್ದೇನೆ
  ಸಂಘಪರಿವಾರದವರೊಡನೆ ನೀವು ‘ವಾದ’ ಮಾಡಿದ ವಿಷಯ ಇಲ್ಲೇಕೆ ಪ್ರಸ್ತಾಪಿಸುತ್ತಿದ್ದೀರೆಂದು ತಿಳಿಯುತ್ತಿಲ್ಲ.
  ನಿಮ್ಮ ಉದ್ದೇಶ, “ಸಂಘಪರವಾರದವರೊಡನೆಯೇ ವಾದ ಮಾಡಿಬಿಟ್ಟಿದ್ದೇನೆ. ಹೀಗಿರುವಾಗ, ಇಲ್ಲಿ ನಿಮ್ಮೊಡನೆ ವಾದ ಮಾಡುವುದಕ್ಕೇನೂ ಉಳಿದಿಲ್ಲ” ಎಂದೋ
  ಅಥವಾ
  “ಗೋರಕ್ಷಣೆ ಸಂಘಪರಿವಾರದವರ ವಿಚಾರ” ಎಂದೋ ಇರಬಹುದೇ?

  ನಿಮ್ಮ ಅಭಿಪ್ರಾಯ ಮೊದಲನೆಯದಾಗಿದ್ದರೆ:
  ನೀವು ಸಂಘಪರಿವಾರದ ಮಿತ್ರರ ಜೊತೆ ಮಾತನಾಡಿರಬಹುದು, ಅಥವಾ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತರೊಡನೆಯೇ ಚರ್ಚಿಸಿರಬಹುದು, ಅದು ಇಲ್ಲಿ ಅಪ್ರಸ್ತುತ.
  ಆದರೆ, ನಿಮ್ಮ ಅಭಿಪ್ರಾಯ ಎರಡನೆಯದಾಗಿದ್ದರೆ:
  ಅದು ನಿಮ್ಮ ತಪ್ಪು ತಿಳುವಳಿಕೆ. ಸಂಘವು ಗೋರಕ್ಷಣೆಯ ಕುರಿತಾಗಿ ನಿಲುವು ತಾಳುವುದಕ್ಕೆ ಬಹುಮೊದಲೇ ಅನೇಕ ಮಂದಿ ಇದರ ಕುರಿತಾಗಿ ಅಭಿಪ್ರಾಯ ತಳೆದಿದ್ದರು.
  ಅದರಲ್ಲಿ ಪ್ರಮುಖರೆಂದರೆ, ಮಹಾತ್ಮಾ ಗಾಂಧಿಯವರು. “ಗೋಹತ್ಯೆ ಮಹಾ ಪಾಪ” ಎಂದೇ ಮಹಾತ್ಮಾ ಗಾಂಧಿ ಅಭಿಪ್ರಾಯ ಪಟ್ಟಿದ್ದರು. ಗೋಹತ್ಯೆಯನ್ನು ತಡೆಯಲು ಕಾನೂನಿನ ತಿದ್ದುಪಡಿಯ ಜೊತೆಗೆ ಇನ್ನೂ ಕೆಲವು ಕ್ರಮಗಳನ್ನು ಅವರು ಸೂಚಿಸಿದ್ದರು.
  ಇದರ ಕುರಿತಾಗಿ ತಿಳಿಯಲು, ಈ ಕೊಂಡಿಯ ಮೇಲೆ ಕ್ಲಿಕ್ಕಿಸಿ: http://www.mkgandhi.org/momgandhi/chap81.htm

  ಮಹಾತ್ಮಾ ಗಾಂಧಿ ಎಂದರೆ ಕಾಂಗ್ರೆಸ್; ಕಾಂಗ್ರೆಸ್ ಎಂದರೆ ಮಹಾತ್ಮಾ ಗಾಂಧಿ – ಎನ್ನುವ ಮಟ್ಟಿಗೆ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ಸಿನೊಂದಿಗೆ ಒಂದಾಗಿದ್ದರು.
  “ಪಾನ ನಿರೋಧ” ಮತ್ತು “ಗೋ ಸಂರಕ್ಷಣೆ” ಮಹ್ತಾತ್ಮಾ ಗಾಂಧಿಯವರಿಗೆ ಬಹಳ ಅಪ್ಯಾಯಮಾನವಾದ ವಿಷಯವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲು ಮಾಡಬೇಕಾದ ಸಂಗತಿಗಳಿವು ಎಂದು ಅವರು ಅನೇಕ ಬಾರಿ ಹೇಳಿದ್ದರು.

  ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ, “ಬಡವರೆಲ್ಲರೂ (ಕುಡಿದು ಹಾಳಾಗಿ, ಮನೆಮಠಗಳನ್ನೂ ಬೀದಿಪಾಲು ಮಾಡಲು) ಅಗ್ಗದಲ್ಲಿ ಮದ್ಯ ದೊರೆಯುವಂತೆ ಮಾಡುತ್ತೇವೆ”, “ಹಿಂದಿನ ಸರಕಾರ ತರಲು ಹೊರಟಿದ್ದ ಗೋಹತ್ಯಾ ನಿಷೇಧ ಕಾನೂನನ್ನು ವಾಪಸ ಪಡೆಯುತ್ತೇವೆ” ಎಂದು ಘೋಷಿಸಿದೆ. ಬಡವರ ‘ಸೇವೆ’ಗೆ ಅದೆಷ್ಟು ಆತುರ, ಆಸಕ್ತಿ!!!!?

  ಇದನ್ನು ಕಂಡ ಗಾಂಧೀಜಿಯವರ ಆತ್ಮ, “ಹೇ ರಾಮ್” ಎಂದು ವಿಲವಿಲ ಒದ್ದಾಡುತ್ತಿರಬಹುದೇ!?

  ಉತ್ತರ
 9. ಮೇ 24 2013

  ಮಹಾತ್ಮಾ ಗಾಂಧಿಯವರು ಗೋರಕ್ಷಣೆಯ ಕುರಿತಾಗಿ ಎಷ್ಟರಮಟ್ಟಿಗೆ ಹೇಳಿದ್ದರೆಂದರೆ, “ನನಗೆ ಗೋರಕ್ಷಣೆ ಮತ್ತು ಸ್ವರಾಜ್ಯ, ಇವೆರಡರಲ್ಲಿ ಒಂದನ್ನು ಆಯ್ದುಕೊಳ್ಳುವಂತೆ ಹೇಳಿದರೆ, ಗೋರಕ್ಷಣೆಯನ್ನೇ ಆಯ್ದುಕೊಳ್ಳುವೆ” ಎಂದಿದ್ದರು.

  ಶಿವಾಜಿ ಮಹಾರಾಜರನ್ನು “ಗೋ ಬ್ರಾಹ್ಮಣ ಪ್ರತಿಪಾಲಕ” ಎಂದು ಕರೆಯುತ್ತಿದ್ದರು.

  ವಿಜಯನಗರ ಸಾಮ್ರಾಜ್ಯದಲ್ಲಿಯೂ ಗೋಹತ್ಯೆ ನಿಶೇಧಗೊಂಡಿತ್ತು.

  ಗುರು ಗೋವಿಂದ ಸಿಂಗ್ ಅವರು ಖಾಲ್ಸಾ ಪ್ರಾರಂಭಿಸಿದಾಗ, ಅದರ ಉದ್ದೇಶವನ್ನು ಹೀಗೆ ವಿವರಿಸಿದರು: “ತುರುಕ್ಕರನ್ನು ಸೋಲಿಸಿ ಓಡಿಸುವುದು. ಮತ್ತು ಆ ಮೂಲಕ ಗೋರಕ್ಷಣೆ ಮಾಡಿ, ಧರ್ಮ ಪರಿಪಾಲನೆ ಮಾಡುವುದು”.

  1857ರ ಸ್ವಾತಂತ್ರ್ಯ ಸಂಗ್ರಾಮದ ಸಿಡಿಯಲು, “ಈಸ್ಟ್ ಇಂಡಿಯಾ ಕಂಪನಿಯವರು ಕಾಡತೂಸುಗಳಿಗೆ ದನದ ಕೊಬ್ಬು ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆ” ಎನ್ನುವುದೇ ಆಗಿತ್ತು. ಗೋವನ್ನು ಕೊಲ್ಲುತ್ತಿದ್ದಾರೆ ಮತ್ತು ಅವುಗಳ ಮಾಂಸವನ್ನು ಹಿಂದುಗಳಿಗೆ ತಿನ್ನಿಸುವುದರ ಮೂಲಕ ತಮ್ಮನ್ನು ಧರ್ಮಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ, ಎನ್ನುವುದು ದೇಶಾದ್ಯಂತ ಯುದ್ಧವನ್ನೆ ಸಿಡಿಸಿತೆಂದರೆ, ಹಿಂದುಗಳಿಗೆ ಅದರ ಕುರಿತಾಗಿ ಅಪಾರ ಶ್ರದ್ಧೆ ಇತ್ತೆಂದೇ ಅಲ್ಲವೇ?

  ಕೂಕಾ ಧಂಗೆಗೂ ಗೋರಕ್ಷಣೆಯೇ ಪ್ರೇರಣೆಯಾಗಿತ್ತು.

  ಮಹಾತ್ಮಾ ಗಾಂಧಿಯವರಂತೆಯೇ, ಲೋಕಮಾನ್ಯ ಬಾಲಗಂಗಾಧರ ತಿಲಕರೂ ಸಹ ಗೋರಕ್ಷಣೆಯು ಸ್ವತಂತ್ರ ಭಾರತದ ಪ್ರಥಮ ಕರ್ತವ್ಯ ಎಂದೇ ತಿಳಿಸಿದ್ದರು.

  ಇಷ್ಟೆಲ್ಲವನ್ನೂ ಹೇಳುತ್ತಿರುವ ಉದ್ದೇಶವೆಂದರೆ, ಗೋರಕ್ಷಣೆ ಎನ್ನುವುದು ಆರೆಸ್ಸೆಸ್ಸಿನ ಅಥವಾ ಸಂಘಪರಿವಾರಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಹಿಂದಿನಂದಲೂ ಈ ದೇಶದ ಎಲ್ಲ ಮಹಾಪುರುಷರೂ, ರಾಜರೂ, ಗೋರಕ್ಷಣೆಗೆ “ಪ್ರಥಮ ಪ್ರಾಶಸ್ತ್ಯ” ನೀಡಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೂ ಗೋರಕ್ಷಣೆ ನಮ್ಮ ಆದ್ಯ ಕರ್ತವ್ಯವೆಂದೇ ಹೇಳಲಾಗುತ್ತಿತ್ತು.

  ಆದರೆ, ಸ್ವಾತಂತ್ರ್ಯಾನಂತರ ಪ್ರಧಾನಿಯಾದ ನೆಹರೂ ಅವರ ಪಶ್ಚಮದ ಕುರಿತಾದ ಆಕರ್ಷಣೆ ಮತ್ತು ಪಶ್ಚಿಮದ ವಿಚಾರಗಳಿಂದ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರ ಆಸೆಗಳೂ ಮಣ್ಣೂಗೂಡುವಂತಾಯಿತು.

  ಇವತ್ತು ನೀವು ಇಲ್ಲಿ “ಗೋರಕ್ಷಣೆಯ ಸಮರ್ಥನೆ”ಯೇ ಪಾಪ ಎಂದು ಮಾತನಾಡುತ್ತಿರುವುದು ನೋಡಿದರೆ, ಏನು ಹೇಳಬೇಕೋ ತಿಳಿಯುವುದಿಲ್ಲ!!!!

  ಉತ್ತರ
 10. ಮೇ 24 2013

  1. Abul Fazal records in Ain-e-Akbari that Akbar prohibited consumption of beef in his kingdom, honouring the sentiments of his Hindu subjects.

  2. Burnier mentions in his travelogue that Mogul king Jahangir had prohibited cow slaughter and this law was strictly implemented

  3. Mark Cubbon, commissioner of Mysore State (1834 – 61), divided the state administration to nine departments, of which ‘Amritha Mahal’, named after the breed of Karnataka’s pride, was dedicated to cow rearing and cow welfare.

  4. A Supreme Court judgement of 1958 notes about an 18th century order by Hyder Ali that if one was found killing a cow, his hands would be cut.

  5. Leading freedom fighters like Veer Savarkar, Chandrashekha Azad, Balagangadhara Tilak, Gopalakrishna Gokhale, Vallabhabahi Patel and Mahatma Gandhi raised voice against cow slaughter.

  6. It was also promised that independent India would ban cow slaughter.

  7. 18th section of the constitution suggests ban of cow slaughter.

  8. Fidel Castro banned cow slaughter in Cuba, which is effective since then.

  9. Iran legally prohibits cow slaughter.

  10. Eating beef is prohibited in Nupanisa Island of Indonesia

  11. Burma used to punish killers of cow with capital punishment.

  12. 110th Ahal Sunnat of Afghanistan had issued fatwa against killing of cows.

  ಉತ್ತರ
 11. ಮೇ 24 2013

  1. Kautilya’s Economic Framework of Maurya era required
  appointment of a government officer (Godhyksha) to govern
  the care of cows, grazing land, and feed.
  (Kautilya Arthashastra – Godhyaksha Chapter)

  2. Ashoka the Great believed that cows should prosper for the
  country to be rich and glorious.

  3. Satavahana dynasty treated care for cows and cow offering
  as supreme.

  4. Rajputs bet their lives to protect cows.

  5. Mohammed Ghori attacked Prithwiraj keeping cows ahead
  of his soldiers with wicked intensions.
  Not willing to kill the cows, Prithwiraj surrendered.

  ಉತ್ತರ
 12. Vasudeva Rao
  ಮೇ 25 2013

  Whether Mr. Kukkil will kill his parents when they become old & do not generate income. From his article it is being conveyed that one who do not generate any income or those who live only and they are burden have no right to live.The way bovine are killed is debatable and Bombay High Court has stayed slaughter of cattle in Goa on a complaint made by Goraksha Abhiyan. IT is an attempt to justify the decision of Siddhu & criticise BJP.

  ಉತ್ತರ
 13. S Joshi
  ಮೇ 25 2013

  I totally agree with Kumar, we are not westerners to follow their rules, Indian culture is rich and cows are regarded as god kamadhenu, killing of cows is considered as ‘Shrap” I totally support “Gohatya Nisheda Kaanuunu”

  ಉತ್ತರ
 14. ಬಸವಯ್ಯ
  ಮೇ 25 2013

  ಲೇಖನದಲ್ಲಿ ಹೇಳಿದ ಈ ಕೆಲವು ಅಂಶಗಳ ಸುತ್ತ ಯಾರೂ ಚರ್ಚಿಸಿಲ್ಲ ಎನಿಸುತ್ತಿದೆ.
  –> ಕೇವಲ ಮುಸ್ಲಿಂದಷ್ಟೇ ಗೋ ಮಾಂಸ ಬಕ್ಷಣೆ ಮಾಡುತ್ತಿಲ್ಲ, ಬದಲಿಗೆ ಉಳಿದವರು ಅವರಿಗಿಂತ ಹೆಚ್ಚು ಪ್ರಮಾಣದಲ್ಲಿ ಭಕ್ಷಿಸುತ್ತಿದ್ದಾರೆ.
  –> ನಿರುಪಯುಕ್ತ ಗೋವುಗಳನ್ನು ಸಾಕಲು ನಾವು ಸರಿಯಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಗೋಹತ್ಯೆ ನಿಷೇದ ಹೇರಿದ ಸರಕಾರ ಕೂಡ ಮುಂದಿನ ದಾರಿ ಏನು ಎಂಬುದರ ಬಗ್ಗೆ ಸರಿಯಾದ ಯೋಜನೆ ಹೊಂದಿಲ್ಲ.
  –> ಮಾಂಸದ ಉದ್ಯಮಕ್ಕೆ ಸರಕಾರವೇ ಉತ್ತೇಜನ ಕೊಡುತ್ತಿದೆ. ಕಸಾಯಿಖಾನೆಗಳಿಗೆ ಸಬ್ಸಿಡಿ ಇದೆ. ಮಾಂಸದ ರಫ್ತಿನಲ್ಲಿ ನಮ್ಮ ದೇಶವೇ ಮೊದಲನೆಯದಾಗಿದೆ.

  ‘ವಯಸ್ಸಾದ ಅಪ್ಪ ಅಮ್ಮನನ್ನು ಕೊಲ್ಲು ‘ ವ ಭಾವನಾತ್ಮಕ ತರ್ಕಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು, ಭಾರತಾದ್ಯಂತ ಗೋಹತ್ಯೆ ನಿಷೇಧ ಹೇರಿದರೆ ಆಗುವ ಪರಿಣಾಮಗಳ ಬಗ್ಗೆ ವಿಚಾರ ಮಾಡಿದ್ದೀರಾ? ಹಳ್ಳಿಗಳಲ್ಲಿರುವ ಪ್ರಸ್ತುತ ಪರಿಸ್ಥಿತಿ ಬಗ್ಗೆ ನಿಮಗೆ ಅರಿವಿದೆಯೆ? ಒಂದು ಹಸು ಸಾಕುವುದರ ಹಿಂದಿನ ಕಷ್ಟ-ನಷ್ಟಗಳ ಕಲ್ಪನೆಯಿದೆಯೆ?

  ಈ ಚರ್ಚೆಯಲ್ಲಿರುವವರು ಒಂದು ಗೋ ಹತ್ಯೆಯ ಪರ, ಇಲ್ಲವಾದರೆ ಗೋ ಹತ್ಯೆಯ ವಿರುದ್ಧ ಎಂದೇನೂ ಆಗಬೇಕಿಲ್ಲ. ವಾಸ್ತವವನ್ನು ಗಮನಿಸಿ ಮಧ್ಯಮ ಮಾರ್ಗ ಹುಡುಕುವವರು ಕೂಡ ಇರಬಹುದು. ಆದ್ದರಿಂದ ಚರ್ಚೆ ಸತ್ಯ ಮತ್ತು ವಾಸ್ತವದ ಸುತ್ತವಿರಲಿ ಎಂದು ನನ್ನ ಕೋರಿಕೆ.

  ಉತ್ತರ
  • ತುಳುವ
   ಮೇ 28 2013

   ಅಷ್ಟೇ ಅಲ್ಲ,

   -> ಬೀಜೇಪಿ ಸರಕಾರ ಇರುವಾಗ ಕೂಡ ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟ ಅವ್ಯಾಹತವಾಗಿ ಸಾಗಿತ್ತು. ಇಲ್ಲೆಲ್ಲಾ ಮನೆಯಿಂದ ದನಕರು ಕಳ್ಳತನ ಸಾಮಾನ್ಯ ವಿಶಯ. ಸಣ್ಣ ರೈತರಿಗೆ ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲ್ಲಾಗಿತ್ತು.

   -> ಗೋ ಹತ್ಯೆ ಕಾನೂನು ಬಂದರೂ ಈ ಪರಿಸ್ಥಿತಿ ಏನೇನೂ ಸುಧಾರಣೆ ಆಗುತ್ತಿರಲಿಲ್ಲ.

   -> ಮಾಂಸ ತಿಂದೆ ಸಿಧ್ಧ ಎಂದು ಹೋರಾಟ ಮಾಡುವ ಜನರಿತುವಾಗ ಗೋವುಗಳಷ್ಟೆ ಅಲ್ಲ ಕಸಾಯಿಖಾನೆಯಲ್ಲಿ ಹತ್ಯೆಗೊಳಗಾಗುವ ಮೋಕಪ್ರಾಣಿಗಳನ್ನು ಅತ್ಯಂತ ಕಡಿಮೆ ನೋವಾಗುವ ರೀತಿಯಲ್ಲಿ ಹತ್ಯೆ ಮಾಡುವಂತೆ ಕಾನೂನು ಮಾಡುವುದು ಹೆಚ್ಚು ಅರ್ಥಪೂರ್ಣವೇನೊ?

   ಉತ್ತರ
   • a k kukkila
    ಮೇ 29 2013

    ನನ್ನ ಲೇಖನದ ವಿವಿಧ ಮಗ್ಗುಲುಗಳನ್ನು ಚರ್ಚೆಗೆ ಒಳಪಡಿಸಿ ನಿಷ್ಠುರ ಅಭಿಪ್ರಾಯಗಳನ್ನು ಮಂಡಿಸಿದ ಎಲ್ಲರಿಗೂ ಕೃತಜ್ಞತೆಗಳು.
    ಗೋವನ್ನು ಅಮಾನವೀಯ ರೀತಿಯಲ್ಲಿ ಸಾಗಿಸುವ, ಕದ್ದು ಕೊಂಡೊಯ್ಯುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ . ಹಾಗೆ ವರ್ತಿಸುವವರ ಹೊರತು ಇನ್ನಾರೂ ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಅಲ್ಲದೆ, ಕರು, ಹಾಲು ಕೊಡುವ ಆಕಳು,ಅನಾರೋಗ್ಯ ಪೀಡಿತ, ಕದ್ದ, ದವ್ರ್ಬಲ್ಯ ಇರುವ ಯಾವುದೇ ಪ್ರಾಣಿಯನ್ನು ಆಹಾರಕ್ಕಾಗಿ ಬಳಸುವುದು ನಿಷಿದ್ದವೆಂದು ನನ್ನ ಧರ್ಮ ಹೇಳುತ್ತದೆ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಬ್ಲಾಗ್ ಅನ್ನು ಓದುವ ಆಸಕ್ತಿ ಇರುವವರು ಈ ಲಿಂಕ್ ಅನ್ನು ಬಳಸಬಹುದು
    http://www.bhoothagannadi.blogspot.in

    ಉತ್ತರ
    • ರವಿ ಕುಮಾರ ಜಿ ಬಿ
     ಮೇ 30 2013

     ಗುಜರಾತ್
     ಮಧ್ಯಪ್ರದೇಶ
     ಹಿಮಾಚಲ ಪ್ರದೇಶ

     ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಸದ್ಯ ಇರುವಂಥ ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ 2011ರಲ್ಲಿ. ಇದರ ಆಸು-ಪಾಸಿನಲ್ಲೇ ಉಳಿದೆರಡು ರಾಜ್ಯಗಳಲ್ಲೂ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, ‘ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ದಾರಾಳ ಜಾನು ವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..’ ಎಂದು ಅನುಷಾ ನಾರಾಯಣ್ ದಿ ಹಿಂದೂವಿನಲ್ಲಿ ಇತ್ತೀಚೆಗೆ (5-5-2013) ಬರೆದಿದ್ದರು.

     >>>

     ಗುಜರಾತ್
     ಮಧ್ಯಪ್ರದೇಶ
     ಹಿಮಾಚಲ ಪ್ರದೇಶ
     => ಹಾಗಾದರೆ ನಿಮ್ಮ ವಾದದಂತೆ ಈ ಮೂರು ರಾಜ್ಯಗಳಲ್ಲಿ ಎಷ್ಟೋ ಪ್ರತಿಶತ ರೈತರು ನಿರುಪಯುಕ್ತ ಗೋವುಗಳನ್ನು ಸಾಕಲಾರದೆ ,ಮಾರಲೂ ಆಗದೆ ಚಡಪಡಿಸುತ್ತಿರಬೇಕು! ಕೃಷಿ ಬಿಟ್ಟು ಓಡಿ ಹೋಗಿರಬೇಕು !!!!

     ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ.

     => ಹಾಗಾದರೆ ಈ ಎಲ್ಲಾ ರಾಜ್ಯಗಳಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ತಿನ್ನುತ್ತಾ ,ಜನರಿಗೆ ತೊಂದರೆ ಕೊಡುತ್ತಾ ಅಲೆದಾಡುವ ಅಲೆಮಾರಿ ನಿರುಪಯುಕ್ತ ಹಸುಗಳು ಕಾಣಸಿಗುವುದೇ ಇಲ್ಲವೇನು?

     ಉತ್ತರ
 15. ಮೇ 29 2013
  ಉತ್ತರ
 16. ಮೇ 29 2013
  ಉತ್ತರ
 17. ರವಿ ಕುಮಾರ ಜಿ ಬಿ
  ಮೇ 30 2013

  ಓಕೆ, ವೃದ್ದ ತಂದೆ ತಾಯಿಯನ್ನು ಕೊಲ್ಲುವ ವಾದ ಬೇಡ ಅದು ಸರಿಯಲ್ಲ ಎಂದೇ ಇಟ್ಟುಕೊಳ್ಳೋಣ , ಆದರೆ ಎಷ್ಟು ಜನ ನಿರುಪಯುಕ್ತ ನಿವೃತ್ತ ಸರಕಾರೀ ನೌಕರರು ತಮ್ಮ ಪೆನ್ಷನ್ ನಿರಾಕರಿಸಲು ಸಿದ್ದರಿದ್ದಾರೆ? ಈ ನಿವೃತ್ತಿ ವೇತನ ಅನ್ನೋದು ಖಂಡಿತಾ ಸರ್ಕಾರಕ್ಕೆ ನಿರುಪಯುಕ್ತರಿಂದ ಆಗುತ್ತಿರುವ ಹೊರೆ !! (ನೀವೇ ಹೇಳುತ್ತಿರುವ ಕೇವಲ ಲಾಭದಾಯಕ ದೃಷ್ಟಿಯಿಂದ ನೋಡಿದಾಗ!!)

  ಉತ್ತರ
 18. ಫೆಬ್ರ 8 2014

  ಮಲೆಯಾಳದ “ಅನುವದನೀಯವಲ್ಲ” ಎಂಬುದನ್ನು ಕನ್ನಡದಲ್ಲಿ “ಅಂಗೀಕಾರಾರ್ಹವಲ್ಲ” ಎನ್ನಬಹುದು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments