ಅವರು ಉಳಿಸಿದ್ದು ಒಂದೆರಡು ಕೋಟಿ ಮಾತ್ರವಲ್ಲ…
– ಗೋಪಾಲ್ ಕೃಷ್ಣ
ಓಡುವುದರಲ್ಲಿ ಹುಸೇನ್ ಬೋಲ್ಟ್ ತನ್ನ ದಾಖಲೆಯನ್ನು ತಾನೆ ಸರಿಗಟ್ಟುತ್ತಾನೆ. ಭ್ರಷ್ಟಾಚಾರದಲ್ಲಿ ನಮ್ಮ ನೇತಾರರು, ಅಧಿಕಾರಿಗಳು ಬೋಲ್ಟ್ ಗೆ ಅನುರೂಪ. ಆದರೆ ಭ್ರಷ್ಟಾಚಾರ ಪತ್ತೆ ಹಚ್ಚುವುದರಲ್ಲಿ! ಹೌದು, ಇಂತಹದ್ದೊಂದು ದಾಖಲೆಯೂ ಸೃಷ್ಟಿಯಾದಂತಿದೆ. ಅದು ನಮ್ಮ ಮಹಾಲೇಖಪಾಲರಿಂದ. ಎರಡನೆ ತಲೆಮಾರಿನ ತರಂಗಗುಚ್ಛ ಹಂಚಿಕೆಯಲ್ಲಾದದ್ದು 1.76 ಲಕ್ಷ ಕೋಟಿ ಅವ್ಯವಹಾರ. ಇದೇ ಐತಿಹಾಸಿಕ ದಾಖಲೆ ಎನ್ನುತ್ತಿದ್ದರು. ಅದನ್ನೂ ಮೀರಿಸಿದ್ದು 1.86 ಲಕ್ಷ ಕೋಟಿಯ ‘ಕೋಲ್’ಗೇಟ್ ಹಗರಣ. ಎರಡನ್ನೂ ಹೊರಚೆಲ್ಲಿದವರು ಮಹಾಲೇಖಪಾಲರೇ. ಅಂದ ಮೇಲೆ ಅವರದೇ ಹೊಸ ದಾಖಲೆ ಸೃಷ್ಟಿಯಾಗಿದೆ.
ದೆಹಲಿಯಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿನ ಹಗರಣ, ಎರಡನೆ ತಲೆಮಾರಿನ ತರಂಗಗುಚ್ಛ ಹಗರಣ ಮತ್ತು ಇದೀಗ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಲೋಪಗಳು ಕೇಂದ್ರ ಸರ್ಕಾರವನ್ನು ಬೆತ್ತಲುಗೊಳಿಸಿವೆ. ಭ್ರಷ್ಟಾಚಾರ ವಿರೋಧಿ ಹೋರಾಟವೆನ್ನುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಈ ಒಂದು ಎಳೆಯನ್ನು ಹಿಡಿದುಕೊಂಡು ಖ್ಯಾತಿ, ಪ್ರಖ್ಯಾತಿ, ಕುಖ್ಯಾತಿ ಗಳಿಸುವವರಿಗೇನೂ ಲೆಕ್ಕವಿಲ್ಲ. ಅಂತಹವರುಗಳ ಮಧ್ಯೆಯೇ ಬೆರಳಣಿಕೆಯಷ್ಟು ಜನರು ಮಾತ್ರ ಪ್ರಾಮಾಣಿಕತೆ, ದಿಟ್ಟತನವನ್ನು ತಮ್ಮ ಕಾರ್ಯದಲ್ಲಿ ತೋರಿಸುತ್ತಾರೆ. ಈ ಸಾಲಿನಲ್ಲಿ ಅಗ್ರಗಣ್ಯರೆನ್ನುವಂತೆ ಕಾಣುವವರು ವಿನೋದ್‍ರಾಯ್.
ವಿನೋದ್ ರಾಯ್ ಅವರು ಭಾರತದ ಮಹಾಲೇಖಪಾಲರಾದದ್ದು 2008ರಲ್ಲಿ. 2014ರವರೆಗೆ ಈ ಹುದ್ದೆಯಲ್ಲಿರುತ್ತಾರೆ. ಸಂವಿಧಾನದ 148ನೇ ಅನುಚ್ಛೇಧ ಮಹಾಲೇಖಪಾಲರ ಅಧಿಕಾರದ ಇತಿ-ಮಿತಿಯನ್ನು ತಿಳಿಸುತ್ತದೆ. ಅಧಿಕಾರ ವ್ಯಾಪ್ತಿಯಲ್ಲಿಯೇ ಭ್ರಷ್ಟರ ಪಾಲಿನ ಮುಳುವಾಗಿದ್ದಾರೆ ವಿನೋದ್ ರಾಯ್.
23 ಮೇ 1948ರಂದು ಉತ್ತರಪ್ರದೇಶದ ಗಾಜಿಪುರದಲ್ಲಿ ಜನನ. ನಾಗರೀಕ ಸೇವೆಗೆ ಆಯ್ಕೆಯಾದದ್ದು 1972ರಲ್ಲಿ. ಕೇರಳ ಕೇಡರ್‍ನಿಂದ. ದೆಹಲಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳ ಮೂಲಕ ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1980ರವರೆಗೆ ಕೇರಳದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಣೆ. ಕೇರಳ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ, ನಂತರ ಕೇಂದ್ರ ಹಣಕಾಸು ಮಂತ್ರಾಲಯದ ಪರಿಮಿತಿಯಲ್ಲಿ ಬರುವ ವಿಮೆ, ಬ್ಯಾಂಕಿಂಗ್ ಸೇರಿದಂತೆ ಹಣಕಾಸು ಸೇವೆಗಳನ್ನು ಒದಗಿಸುವ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಣೆ. ಇದೇ ವಿನೋದ್ ರಾಯ್ ಅವರನ್ನು ಮಹಾಲೇಖಪಾಲ ಹುದ್ದೆಗೆ ಪರಿಗಣಿಸಲು ಅನುವು ಮಾಡಿಕೊಟ್ಟಿದ್ದು.
ಸದ್ಯ ವಿಶ್ವಸಂಸ್ಥೆಯ ಹೆಚ್ಚುವರಿ ಆಡಿಟರ್ಸ್ ಘಟಕದ(ಐಎನ್‍ಟಿಒಎಸ್‍ಎಐ) ಚೇರ್‍ಮನ್ ಆಗಿದ್ದಾರೆ. ಫೆಬ್ರವರಿ 2012ರಲ್ಲಿ ಏಷಿಯಾ ಆಡಿಟ್ ಸಂಸ್ಥೆಗಳ (ಎಎಸ್‍ಒಎಸ್‍ಎಐ) ಚೇರ್‍ಮನ್ ಆಗಿಯೂ ಅಧಿಕಾರ ಸ್ವೀಕರಿಸಿದ್ದಾರೆ.
ವಿನೋದ್ ರಾಯ್ ಅವರ ಕಾರ್ಯಕ್ಷಮತೆಯನ್ನು ದೇಶಕ್ಕೆ ಪರಿಚಯಿಸಿದ್ದು 2ಜಿ ಹಗರಣ. ಎರಡನೇ ತಲೆಮಾರಿನ ತರಂಗಗುಚ್ಛ ಹಂಚಿಕೆಯಲ್ಲಿನ ನಡೆದಿದ್ದ ಭಾರೀ ಪ್ರಮಾಣದ ಅವ್ಯವಹಾರನ್ನು ತೆರೆದಿಟ್ಟರು. ದೇಶದ ಬೊಕ್ಕಸಕ್ಕೆ ನಷ್ಟವಾದದ್ದು ಐತಿಹಾಸಿಕ ದಾಖಲೆ ಎನ್ನುವಂತಿದ್ದ 1,76,645 ಕೋಟಿ ರೂಪಾಯಿ. ಯಾವುದಕ್ಕೂ ಜಗ್ಗದೇ ವರದಿಯೊಂದನ್ನು ನೀಡಿದರು. ಇದರ ಪರಿಣಾಮವಾಗಿ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಜೈಲಿನತ್ತ ಮುಖ ಮಾಡಿದರು. ಇವರ ವರದಿಯನ್ನು ಆಧರಿಸಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ 122 ಕಂಪನಿಗಳ ಪರವಾನಗಿ ರದ್ದು ಮಾಡಿತು. ವಿನೋದ್ ರಾಯ್ ಪುನ: ಸುದ್ದಿಯಾದದ್ದು ಕಾಮನ್‍ವೆಲ್ತ್ ಹಗರಣದಲ್ಲಿ. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದ್ದ ಅವ್ಯವಹಾರದ ವರದಿಯನ್ನು ಪಾರ್ಲಿಮೆಂಟ್ ಮುಂದೆ ಇಟ್ಟರು. ಇದು ಆಡಳಿತ ಪಕ್ಷವನ್ನು ತೀರ ಮುಜುಗರಕ್ಕೀಡು ಮಾಡಿತು. ಇವರ ವರದಿಯಿಂದಾಗಿ ಕಲ್ಮಾಡಿಯವರು ಸೆರೆಮನೆಗೆ ಹೋದರು. ಶೀಲಾ ದೀಕ್ಷಿತ್ ಇನ್ನು ಹೊಯ್ದಾಟದಲ್ಲಿದ್ದಾರೆ.
ಇದೀಗ ಹೊರ ತಂದಿರುವುದು ಕಲ್ಲಿದ್ದಲು ಗಣಿಯಲ್ಲಿನ ಲೋಪ. ವಿನೋದ್ ರಾಯ್ ವರದಿ ನೀಡದಿದ್ದಿದ್ದರೆ ಬೊಕ್ಕಸಕ್ಕೆ ಆಗಲಿದ್ದ ನಷ್ಟ 1.86 ಲಕ್ಷ ಕೋಟಿ ರೂಪಾಯಿ. ಮುತುವರ್ಜಿಯಿಂದ ಸಿದ್ಧಪಡಿಸಿದ ವರದಿಯಿಂದಾಗಿ ಕುತಂತ್ರಗಳು ಹೊರಬಂದಿವೆ. ಅಷ್ಟೂ ಹಣವನ್ನು ಉಳಿಸಿದ ಹಿರಿಮೆ ಗರಿಮೆಗಳು ವಿನೋದ್ ರಾಯ್ ಅವರಿಗೆ ಸಲ್ಲಬೇಕು. ಸದ್ಯದ ಕೇಂದ್ರ ಸರ್ಕಾರದಲ್ಲಿನ ಎಷ್ಟೇ ಹಗರಣಗಳು ಹೊರ ಬಂದರೂ, ಪ್ರಧಾನಿ ಮನಮೋಹನ್‍ಸಿಂಗ್‍ರವರ ‘ಕ್ಲೀನ್ ಇಮೇಜ್’ಗೆ ಧಕ್ಕೆ ಉಂಟು ಮಾಡಿರಲಿಲ್ಲ. ಮಹಾಲೇಖಪಾಲರ ‘ಕೋಲ್’ಗೇಟ್ ವರದಿ ಸತ್ಯವನ್ನು ಬಿಚ್ಚಿಟ್ಟಿದೆ.
ವಿನೋದ್ ರಾಯ್ ತಮ್ಮ ಕಾರ್ಯಾವಧಿಯಲ್ಲಿ ಎಲ್ಲಾ ಸರ್ಕಾರಗಳು ಇಡುವ/ಇಟ್ಟಿರುವ ತಪ್ಪು ಹೆಜ್ಜೆಗಳನ್ನು ಬಯಲುಗೊಳಿಸಿದ್ದಾರೆ. ಅದು ಕಾಂಗ್ರೆಸ್ ನೇತೃತ್ವದ ಯುಪಿಎ ಇರಬಹುದು, ಬಿಜೆಪಿ ನೇತೃತ್ವದ ಎನ್.ಡಿ.ಎ ಇರಬಹುದು. ಹಾಗೆಯೇ ರಾಜ್ಯ ಸರ್ಕಾರಗಳಿಗೂ ತಮ್ಮ ಕಾರ್ಯಕ್ಷಮತೆಯ ಬಿಸಿ ಮುಟ್ಟಿಸಿದ್ದಾರೆ. ಗೋವಾದ ಅರಣ್ಯ ನೀತಿಯನ್ನು ವಿರೋಧಿಸಿದ್ದಾರೆ. ಹರ್ಯಾಣ ಸರ್ಕಾರ ತೆರಿಗೆ ವಿಧಿಸುವಲ್ಲಿನ 1,000 ಕೋಟಿ ನಷ್ಟದ ಬಗ್ಗೆಯೂ ಧ್ವನಿ ಎತ್ತಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅವ್ಯವಹಾರ, ರಿಲಾಯನ್ಸ್ ಇಂಡಸ್ಟ್ರೀಸ್‍ಗೆ ಸಂಬಂಧಿಸಿದ ಅನಿಲ ಹಂಚಿಕೆಯಲ್ಲಿನ ಅವ್ಯವಹಾರಗಳ ಬಗ್ಗೆಯೂ ಗಮನ ಸೆಳೆದಿದ್ದರು.
ವಿನೋದ್ ರಾಯ್, ಫೋಬ್ಸ್ ನಿಯತಕಾಲಿಕೆಯ 2011ರ ವರ್ಷದ ವ್ಯಕ್ತಿಯಾಗಿಯಾಗಿದ್ದರು. ಒಬ್ಬ ದಕ್ಷ, ಪ್ರಾಮಾಣಿಕ, ಧೈರ್ಯವಂತ ಅಧಿಕಾರಿ ವಿನೋದ್ ರಾಯ್. ತಮ್ಮ ಕರ್ತವ್ಯ ನಿಷ್ಠೆಯಲ್ಲಿ ಎಲ್ಲಿಯೂ ಲೋಪವಾಗದಂತೆ ಜಾಗ್ರತೆ ವಹಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಬೊಬ್ಬಿಡುವ ಕೆಲವು ಮಂದಿಯ ನಡುವೆ ವಿನೋದ್ ರಾಯ್ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಭ್ರಷ್ಟಾಚಾರಿಗಳಿಗೆ ಸೈಲಂಟ್ ಪಾಯಿಸನ್ ಆಗಿರುವ ವಿನೋದ್ ರಾಯ್, ಒಮ್ಮೊಮ್ಮೆ ವಿಷಸರ್ಪವೂ ಆಗಿದ್ದಾರೆ. ಇದೀಗ ನಿವೃತ್ತಿ ಜೀವನಕ್ಕೆ ಕಾಲಿಟ್ಟರೆ. ಅವರ ನಿರ್ಭಯದ ನಿಷ್ಪಕ್ಷಪಾತ ಸೇವೆಗೊಂದು ಸಲಾಮ್… ನಿವೃತ್ತ ಜೀವನ ಸುಖವಾಗಿರಲೆಂದು ದೇವರಲಿ ಬೇಡುವೆ…
ಚಿತ್ರ ಕೃಪೆ : http://www.deccanchronicle.com