ವಿಷಯದ ವಿವರಗಳಿಗೆ ದಾಟಿರಿ

ಮೇ 29, 2013

6

ಈಶ್ವರಪ್ಪ ಅವರ ಎದುರು ನಿಂತು ಗೆದ್ದ ಕೆ.ಬಿ.ಪ್ರಸನ್ನಕುಮಾರ್ ಅವರ ಕುರಿತು

by ನಿಲುಮೆ

– ಪಿ.ಬಿಂದುಮಾಧವಿ, ಹೈದರಾಬಾದ್

Prasanna Kumar KBನಮ್ಮಲ್ಲಿ ಅನೇಕರು, ಇಂದಿನ ಸರ್ಕಾರ ಸರಿಯಾಗಿಲ್ಲ, ಎಲ್ಲೆಲ್ಲೂ ಭ್ರಷ್ಟಾಚಾರ, ಚುನಾವಣೆಗೆ ನಿಂತ ಯಾವ ಅಭ್ಯರ್ಥಿಯೂ ಪ್ರಾಮಾಣಿಕರಲ್ಲ, ಹಾಗಾಗಿ ನಾವು ಮತ ಏಕೆ ಚಲಾಯಿಸಬೇಕು ಎಂಬ ಜಿಜ್ನಾಸೆಯಲ್ಲೇ ಅನೇಕ ಸಂವತ್ಸರಗಳನ್ನು ಕಳೆಯುತ್ತೇವೆ. ಸರಿಯಾದ ಅಭ್ಯರ್ಥಿಯಿಲ್ಲ ಎಂದಾದರೆ ನಾನೇ ಏಕೆ ಚುನಾವಣೆಗೆ ನಿಲ್ಲಬಾರದು ಎಂದು ಎಷ್ಟು ಮಂದಿ ಧೈರ್ಯ ಮಾಡುತ್ತಾರೆ ಹೇಳಿ? ನಮಗೆ ನಾವೇ ಆ ಪ್ರಶ್ನೆಯನ್ನು ಮಾಡಿಕೊಂಡರೆ, ನಾವು ಕೊಟ್ಟಿಕೊಳ್ಳುವ ಉತ್ತರ, ಅಯ್ಯೋ ಬಿಡು, ನಮಗೆ ರಾಜಕೀಯದಲ್ಲಿ ಹಿಂದಿಲ್ಲ ಮುಂದಿಲ್ಲ, ಅದರ ಗಾಳಿ ಗಂಧದ ಪರಿಚಯವಿಲ್ಲ, ನಾನು ಹೋಗಿ ರಾಜಕೀಯದಲ್ಲಿ ಏಗಲಾರೆ ಎಂದುಕೊಳ್ಳುತ್ತೇವೆ. ಆದರೆ ಈ ರೀತಿ ಯಾವುದೇ ಹಮ್ಮು ಬಿಮ್ಮು ಇಲ್ಲದೇ ರಾಜಕೀಯಕ್ಕೆ ಧುಮುಕಿ, ಪ್ರಾಮಾಣಿಕವಾಗಿ ಜನಸೇವೆ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಈಶ್ವರಪ್ಪ ಅವರ ಎದುರಿಗೆ ನಿಂತು ಗೆದ್ದ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್.

ಇವರ ತಂದೆ ಕೃಷ್ಣಮೂರ್ತಿ, ತಾಯಿ ಭಾಗೀರಥಿ ಬಾಯಿ ಇಬ್ಬರೂ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಇವರಿಗೆ ಯಾವುದೇ ರೀತಿಯ ರಾಜಕೀಯ ಹಿನ್ನೆಲೆಯಿಲ್ಲ. ಬಂಧು ಬಾಂಧವರಲ್ಲಿ ಯಾರೂ ರಾಜಕೀಯ ರಂಗ ಪ್ರವೇಶ ಮಾಡಿಲ್ಲ. ಆದರೂ ಇವರು ರಾಜಕೀಯಕ್ಕೆ ಧುಮುಕಿದ್ದು ಹೇಗೆ?

ಶಿವಮೊಗ್ಗದ ಹಳೇ ತೀರ್ಥಹಳ್ಳಿ ರಸ್ತೆಯ ವಟಾರವೊಂದರಲ್ಲಿ ವಾಸಿಸುತ್ತಿದ್ದ ಇವರು ಚಿಕ್ಕಂದಿನಲ್ಲೇ ಪಿತೃವಿಯೋಗವನ್ನು ಎದುರಿಸಬೇಕಾಯಿತು. ಕುಟುಂಬಕ್ಕೆ ಆಧಾರವಾಗಲಿ ಎಂದು ಅವರು ಆಗಿನಿಂದಲೇ ಮನೆಮನೆಗೆ ದಿನಪತ್ರಿಕೆ ಹಂಚುವುದು ಇತ್ಯಾದಿ ಕೆಲಸಗಳನ್ನು ಮಾಡತೊಡಗಿದರು. ಇವರ ದೊಡ್ದಮ್ಮ ಶ್ರೀಮತಿ ಮಧುರಾಬಾಯಿ ಇವರಿಗೆ ಸ್ನಾನ ಸಂಧ್ಯಾವಂದನೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಲು ಹೇಳಿದ್ದರು. ಹಾಗಾಗಿ ಮುಂಜಾನೆ ಏಳುವ, ಸ್ನಾನ ಸಂಧ್ಯಾವಂದನೆಗಳನ್ನು ಮಾಡುವ, ದಿನಪತ್ರಿಕೆ ಹಂಚಲು ಸೂರ್ಯೋದಯಕ್ಕೂ ಮುನ್ನವೇ ಏಳುವ ಅಭ್ಯಾಸಗಳನ್ನು ಆಗಿನಿಂದಲೇ ಮೈಗೂಡಿಸಿಕೊಂಡವರು ಪ್ರಸನ್ನಕುಮಾರ್. OTroad ನಲ್ಲಿದ್ದ ಇವರ ಸಮವಯಸ್ಕರೆಲ್ಲಾ ಇವರ ಗೆಳೆಯರೇ. ಆಗಿನಿಂದಲೇ ಯಾವುದೇ ಜಾತಿ ಧರ್ಮದ ಭೇಧವಿಲ್ಲದೇ ಎಲ್ಲಾ ಧರ್ಮ, ಹಾಗೂ ಜಾತಿಯ ಹುಡುಗರೂ ಇವರ ಮಿತ್ರವೃಂದದಲ್ಲಿದ್ದರು. ನಾನೂ ಸಹ ಇವರ ವಟಾರದಲ್ಲೇ ಇದ್ದವಳು. ಬೇಸಿಗೆ ರಜದಲ್ಲಿ ಮಧ್ಯರಾತ್ರಿಯವರೆಗೂ ಐಸ್ ಪೈಸ್ ಆಡುತ್ತಿದ್ದುದು, ನಾನು ಚಿಕ್ಕವಳಾಗಿದ್ದರಿಂದ ನನ್ನನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಪರಿಗಣಿಸುತ್ತಿದ್ದುದು ನನಗೆ ಇಂದಿಗೂ ನಿನ್ನೆ ಮೊನ್ನೆಯ ವಿಷಯದಂತೆ ನೆನಪಿದೆ!

ಶಿವಮೊಗ್ಗದ ದೇಶೀಯ ವಿದ್ಯಾಶಾಲೆಯಲ್ಲಿ ಇವರ ಪ್ರಾರಂಭಿಕ ವಿಧ್ಯಾಭ್ಯಾಸವಾಯಿತು. ನಂತರ ಆಚಾರ್ಯ ತುಳಸೀ ಕಾಮರ್ಸ್ ಕಾಲೇಜಿನಲ್ಲಿ ಬಿ.ಕಾಂ ಮಾಡುತಿದ್ದರು.ಕುಟುಂಬದ ಜವಾಬ್ದಾರಿಯ ಹೊಣೆ ಹೆಚ್ಚಾದುದರಿಂದ ಪ್ರಸನ್ನಕುಮಾರ್ ಅವರಿಗೆ ಓದು ಮುಂದುವರೆಸಲು ಆಗಲಿಲ್ಲ. ಓದಿಗೆ ತಿಲಾಂಜಲಿಯಿತ್ತು, ತಮ್ಮನ್ನು ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಮೊದಲಿನಿಂದಲೂ ಸಮಾಜಸೇವೆಯಲ್ಲಿ ಆಸಕ್ತಿಯಿದ್ದ ಪ್ರಸನ್ನಕುಮಾರ್ ಅವರ ಮನಸ್ಸು ಜನಸೇವೆ ಮಾಡಲು ಹಾತೊರೆಯುತಿತ್ತು. ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದ ಅವರಿಗೆ ಸಹಜವಾಗಿ ಬಡವರ ಬಗ್ಗೆ, ಹಿಂದುಳಿದವರ ಬಗ್ಗೆ, ಸಮಾಜದಲ್ಲಿ ಕೆಳಮಟ್ಟದಲ್ಲಿ ಇರುವ ಜನಸಾಮಾನ್ಯರ ಬಗ್ಗೆ ಸಹಾನುಭೂತಿಯಿತ್ತು. “ದೀನ: ಏವ ವಿಜಾನಾತಿ, ದೀನಾನಾಂ ಕಷ್ಟಂ” ಎನ್ನುತ್ತಾರಲ್ಲ ಹಾಗೆ. ಅಂದರೆ ಬಡವರ ಕಷ್ಟವನ್ನು ಬಡವನೇ ಅರಿಯಬಲ್ಲ ಎಂದು. ಹೀಗಾಗಿ ಅವರು ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಯುವ ಕಾಂಗ್ರೆಸ್ಸನ್ನು ಸೇರಿದರು. ಶ್ರಮಜೀವಿಯಾದ ಇವರು ಕೆಲ ಸಮಯದಲ್ಲೇ ಯುವ ಕಾಂಗ್ರೆಸ್ಸಿನ ಜಿಲ್ಲಾ ಉಪಾಧ್ಯಕ್ಷರಾದರು. ನಂತರದ ದಿನಗಳಲ್ಲಿ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. ತದನಂತರ ಶಿವಮೊಗ್ಗ ನಗರದ ದಕ್ಷಿಣ ಬ್ಲಾಕ್ ನ ಅಧ್ಯಕ್ಷರಾಗಿದ್ದರು. ಇಷ್ಟೆಲ್ಲದರ ಮಧ್ಯೆ ಜೀವನೋಪಾಯಕ್ಕಾಗಿ ಸಿವಿಲ್ ಕಂಟ್ರಾಕ್ಟರ್ ಕೆಲಸವನ್ನು ಮಾಡತೊಡಗಿದರು. ಅದರಲ್ಲೂ ಕೂಡ ಇವರ ಪರಿಶ್ರಮದಿಂದ ಕ್ಲಾಸ್ ೧ ಗುತ್ತಿಗೆದಾರರಾದರು. ಇವರು ಕೈಗೆತ್ತಿಕೊಂಡ ಪ್ರಮುಖ ಪ್ರಾಜೆಕ್ಟ್ ಗಳಲ್ಲಿ ಶಿಕಾರಿಪುರದ ಮಿನಿ ವಿಧಾನಸೌಧವೂ ಒಂದು.

ಪ್ರಸನ್ನಕುಮಾರ್ ಅವರೇ ಹೇಳುವಂತೆ ಅವರಿಗೆ ವಿಧ್ಯಾರ್ಥಿ ಜೀವನದಿಂದಲೂ ಜನಸಾಮಾನ್ಯರ ಕಷ್ಟ ಸುಖಗಳ ಅರಿವಿತ್ತು. ಹೀಗಾಗಿ ಅವರು ಅನೇಕರಿಗೆ ಸಾಧ್ಯವಾದಷ್ಟರ ಮಟ್ಟಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು. ಬಡವರು, ಅನಕ್ಷರಸ್ಥರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಿದ್ದಾಗ ಅವರೊಂದಿಗೆ ಸಂಬಂಧ ಪಟ್ಟ ಕಛೇರಿಗಳಿಗೆ ಹೋಗಿ ಇವರಿಗೆ ತಿಳಿದವರನ್ನು ಕಂಡು ಸಹಾಯ ಮಾಡಿಸುತ್ತಿದ್ದರು. ಇವರ ಸಮಾಜಸೇವೆಯ ಪರಿಣಾಮವಾಗಿ ೨೦೦೭ರಲ್ಲಿ ಇವರಿಗೆ ನಗರಸಭೆಯ ಕೌನ್ಸಿಲರ್ ಚುನಾವಣೆಗೆ ನಿಲ್ಲುವ ಅವಕಾಶ ದೊರಕಿತು. ತಾವು ನೆಲಸಿರುವ ಅಶೋಕನಗರದಿಂದ ಸ್ಪರ್ಧಿಸಿದ ಇವರನ್ನು ಸಹಜವಾಗಿ ಅಶೋಕನಗರದ ಜನತೆ ಚುನಾಯಿಸಿತು. ಮೊದಲ ಚುನಾವಾಣೆಯಲ್ಲೇ ಇವರು ಗಳಿಸಿದ ಗೆಲುವು ಇವರ ಜನಪರ ಹೋರಾಟಕ್ಕೆ ಸಾಕ್ಷಿ. ಚುನಾವಣೆಯಲ್ಲಿ ಸಿಕ್ಕ ಗೆಲುವನ್ನು ಸಕಾರಾತ್ಮಕವಾಗಿ ಬಳಸಿಕೊಂಡ ಪ್ರಸನ್ನಕುಮಾರ್ ಸ್ಲಂ ಎಂದು ಕರೆಸಿಕೊಳ್ಳುತ್ತಿದ್ದ ಅಶೋಕನಗರವನ್ನು ಸಾಕಷ್ಟೂ ಅಭಿವೃದ್ದಿ ಮಾಡಿದರು. ಪಲಾನುಭವಿಗಳಿಗೆ ಅವರಿಗೆ ತಲುಪಬೇಕಾದ ಸರ್ಕಾರದ ಅನುದಾನ, ನಿವೇಶನ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಸೈಕಲ್ ಇತ್ಯಾದಿನಗಳನ್ನು ಸಮರ್ಪಕವಾಗಿ ತಲುಪಿಸಿರುವ ಸಾಧನೆ ಪ್ರಸನ್ನಕುಮಾರ್ ಅವರದ್ದಾಗಿದೆ.

ನಾನು ಕಂಡಂತೆ ಇವರು ಕೌನ್ಸಿಲರ್ ಆದಾಗಿನಿಂದಲೂ ಇವರು ೨೪ ಗಂಟೆಗಳಕಾಲ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಹೇಗೆ ಎಂದರೆ, ತಮ್ಮ ಸಮಾಜಸೇವೆಯಿಂದ ಸುತ್ತ ಮುತ್ತಲ ಜನರಿಂದ ಅಣ್ಣ ಎಂದು ಕರೆಸಿಕೊಳ್ಳುವ ಇವರಿಗೆ ಸಾವಿರಾರು ಜನ ನೆಂಟರು!! ಯಾರ ಮನೆಯಲ್ಲಿ ಏನೇ ಜಗಳವಾದರೂ ಅಣ್ಣಾ ಎಂದು ಇವರ ಬಳಿ ಬರುತ್ತಾರೆ. ಮಧ್ಯರಾತ್ರಿ ಯಾರಿಗೋ ಏನೋ ಸಂಕಷ್ಟ ಒದಗಿದೆ ಎಂದು ದೂರವಾಣಿ ಕರೆಯೋ, ಮನೆಬಾಗಿಲಿಗೆ ಬಂದು ಹೇಳಿದರೋ, ತಕ್ಷಣ ಅವರ ಸಹಾಯಕ್ಕೆ ಧಾವಿಸುತ್ತಾರೆ ಪ್ರಸನ್ನಕುಮಾರ್. ಹೀಗಾಗಿ ಇವರು ಎರಡನೇ ಬಾರಿಗೆ ಕೌನ್ಸಿಲರ್ ಚುನಾವಣೆಗೆ ನಿಂತಾಗೆ ವಿರುದ್ಧ ನಿಂತವರೆಲ್ಲ ಠೇವಣಿಯನ್ನು ಕಳೆದುಕೊಳ್ಳಬೇಕಾಯಿತು. ಗೆದ್ದ ಮೇಲೆ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಇದೇ ನಿದರ್ಶನ.

ಶಿವಮೊಗ್ಗದಲ್ಲಿ ಇಷ್ಟೆಲ್ಲಾ ಸಮಾಜಸೇವೆ ಮಾಡಿ ತಮ್ಮನ್ನು ಗುರುತಿಸಿಕೊಂಡಿರುವ ಪ್ರಸನ್ನ ಕುಮಾರ್ ಅವರಿಗೆ ಈ ಬಾರಿ MLA ಚುನಾವಣೆಗೆ ನಿಲ್ಲುವ ಅವಕಾಶ ದೊರಕಿತು. ಇವರು ಬಾಹ್ಮಣರು, ಹಾಗಾಗಿ ಬಿ.ಜಿ.ಪಿ ಯನ್ನು ಸೋಲಿಸಲು ಇವರನ್ನು ನಿಲ್ಲಿಸಿದ್ದಾರೆ ಎಂಬ ಮಾಧ್ಯಮದ ನಿಲುವಿಗೆ ನನ್ನ ಧಿಕ್ಕಾರ. ಎಂದೂ ಕೂಡ ಯಾವುದೇ ಒಂದು ಕೋಮಿನ ಒಳಿತಿಗಾಗಿ ದುಡಿದವರಲ್ಲ ಪ್ರಸನ್ನಕುಮಾರ್. ಹಾಗಿದ್ದಲ್ಲಿ ಎಂದೋ ಇವರು ಬಿ.ಜೆ.ಪಿ ಯನ್ನು ಸೇರಬಹುದಿತ್ತು. ಆದರೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಧುಮುಕುವ ಚಾಳಿಯಿಲ್ಲದ ಪ್ರಸನ್ನಕುಮಾರ್, ಸಮಾಜ ಸೇವೆ ಮಾಡಲು ಅನುವು ಮಾಡಿಕೊಟ್ಟ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಹಾಗಾಗಿ ಇವರಿಗೆ ಟಿಕೆಟ್ ದೊರಕಿತು.

ಏಪ್ರಿಲ್ ೧೫ ರಂದು ನಾಮಿನೇಷನ್ ಸಲ್ಲಿಸಿದ ಇವರಿಗೆ ಪ್ರಚಾರ ಮಾಡಲು ಸಿಕ್ಕ ಸಮಯ ಕೇವಲ ೧೫ ರಿಂದ ೨೦ ದಿನಗಳು. ಅದೂ ಕೂಡ ಶಿವಮೊಗ್ಗದಲ್ಲಿ ಚುನಾವಣೆ ನೀತಿ ಸಂಹಿತೆ ಸ್ವಲ್ಪ ಕಟ್ಟುನಿಟ್ಟಾಗಿತ್ತು ಎನ್ನಬಹುದು. ಪ್ರಸ್ತುತ DCM ಈಶ್ವರಪ್ಪ ಅವರ ಎದುರು ಇವರು ನಿಂತಿದ್ದರು. ಕೆ.ಜೆ.ಪಿ ಯಿಂದ ಯಡಿಯೂರಪ್ಪನವರ ಕಡೆಯ ಅಭ್ಯರ್ಥಿ ರುದ್ರೇಗೌಡರು ನಿಂತಿದ್ದರು. ಇನ್ನು ಜೆ.ಡಿ.ಎಸ್. ನಿಂದ ಶ್ರೀಕಾಂತ್. ಈಶ್ವರಪ್ಪ ಅವರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಲೇ ಇತ್ತು. ರಾಜ್ಯಮಟ್ಟದಲ್ಲಿ ಪರಿಚಿತರಲ್ಲದ ಪ್ರಸನ್ನಕುಮಾರ್ ಬಗ್ಗೆ ಎಲ್ಲೂ ವಿಶೇಷ ವರದಿಗಳು ಪ್ರಸಾರವಾಗಲಿಲ್ಲ. ಈ ವಿಷಯದಲ್ಲಿ ನಾನು ಟಿವಿ೯, ಪಬ್ಲಿಕ್ ಟಿವಿ, ಹಾಗೂ ಸಮಯ ಟಿವಿಯನ್ನು ಅಭಿನಂದಿಸುತ್ತೇನೆ. ಏಕೆಂದರೆ ಇವರುಗಳು ಯಾವುದೇ ತಾರತಮ್ಯವಿಲ್ಲದೇ ಎಲ್ಲಾ ಅಭ್ಯರ್ಥಿಗಳ ಬಗ್ಗೆಯು ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಪರಿಚಯ ಮಾಡಿಕೊಟ್ಟರು. ಟಿವಿ೯ ರ ಗದ್ದುಗೆ ಗುದ್ದಾಟ ಕಾರ್ಯಕ್ರಮಕ್ಕೆ ಈಶ್ವರಪ್ಪನವರು ಬರಲೇ ಇಲ್ಲ. ಅವರ ಪ್ರತಿನಿಧಿಯಾಗಿ ದತ್ತಾತ್ರಿ ಎನ್ನುವವರು ಬಂದಿದ್ದರು. ನೀವು ಗೆದ್ದರೆ ಶಿವಮೊಗ್ಗದ ಅಭಿವೃದ್ಧಿಗೆ ನಿಮ್ಮ ಆದ್ಯ ಗುರಿಗಳೇನು ಎಂಬ ಪ್ರಶ್ನೇಗೆ ಸಮರ್ಪಕವಾಗಿ ಉತ್ತರಿಸಿದವರು ಪ್ರಸನ್ನಕುಮಾರ್ ಒಬ್ಬರೇ. ಇತರರು ಆಗ ಕೂಡ ನಮಗೇ ಮತ ನೀಡಿ ಎಂದು ಅಲ್ಲಿ ಕೂಡ ಮತಯಾಚಿಸಿದರು ಹೊರತು ತಮ್ಮ ಮುಂದಿರುವ ಪ್ರಮುಖ ಕಾರ್ಯಗಳ ಬಗ್ಗೆ ಮಾತನಾಡಲಿಲ್ಲ.

ಇಷ್ಟರ ಮಧ್ಯೆ ಪ್ರಸನ್ನಕುಮಾರ್ ಅವರು ೧೫ ಕೋಟಿ ಪಡೆದು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತು. ಅದರ ಬಗ್ಗೆ ಫ಼ೇಸ್ ಬುಕ್ ನಲ್ಲಿ ಬಂದ ಸಂದೇಶಗಳಿಗೆ ಪ್ರಸನ್ನಕುಮಾರ್ ಅವರು ನಾನು ಮಾರಾಟದ ವಸ್ತುವಲ್ಲ ಎಂದು ಉತ್ತರಿಸಿದರು. ಯಾವುದೇ ರೀತಿಯ ಆಡಂಬರವಿಲ್ಲದೇ ಪ್ರತಿದಿನವೂ ಮನೆಮನೆಗೆ ಹೋಗಿ ಕ್ಯಾನ್ವಾಸ್ ಮಾಡಿದರು. ಇವರ ಸದ್ಗುಣಗಳನ್ನು ಅರಿತ ಅಶೋಕನಗರದ ಜನತೆ ಸ್ವಯಂಪ್ರೇರಿತರಾಗಿ ತಮ್ಮ ಬಂಧು ಬಾಂಧವರಿಗೆ ಗೆಳೆಯರಿಗೆ ಪ್ರಸನ್ನ ಕುಮಾರ್ ಅವರಿಗೆ ಮತ ಹಾಕಲು ಕೋರಿದರು.  ಇವರನ್ನು ಸೋಲಿಸಲಿಕ್ಕೆಂದೇ ಐದು ಜನ ಸ್ವತಂತ್ರ ಮುಸ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಯಿತು, ಹಾಗಾಗಿ ಮುಸ್ಲಿಂ ಮತಗಳು ಸ್ವಲ್ಪ ಹಂಚಿ ಹೋದವು. ಆದರೂ ಇಷ್ಟೆಲ್ಲದರ ನಡುವೆಯೂ ಪ್ರಸನ್ನ ಕುಮಾರ್ ಅವರನ್ನು ಗೆಲ್ಲಿಸಿದ ಶಿವಮೊಗ್ಗದ ಜನತೆಗೆ ನನ್ನ Hats Off.

ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಜನತೆಯ ಸೇವೆ ಮಾಡಲು ಕಂಕಣ ತೊಟ್ಟಿರುವ ಪ್ರಸನ್ನಕುಮಾರ್ ಅವರು ನಮಗೆಲ್ಲರಿಗೂ ಆದರ್ಶವಾಗಲಿ. ಈ ಗೆಲುವು ಅವರಿಗೆ ಇನ್ನಷ್ಟು ಜನಸೇವೆ ಮಾಡಲು ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ.

6 ಟಿಪ್ಪಣಿಗಳು Post a comment
 1. K. N. PRAKASH
  ಮೇ 30 2013

  ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳು ಪೂರ್ಣವಾಗಿ ಬಂದಿದ್ದರೆ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಬಹುದಿತ್ತು. ವೈಯಕ್ತಿಕ ವರ್ಚಸ್ಸಿನ ಮೇಲೆ ಬಿದ್ದಂತಹ ಮತಗಳು ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದವೆಂದರೆ ತಪ್ಪಾಗಲಾರದು. ಸ್ವಚ್ಛ ವ್ಯಕ್ತಿಯನ್ನು ಗೆಲ್ಲಿಸಿದ ಶಿವಮೊಗ್ಗದ ಜನತೆಗೂ, ನಿಲುಮೆಯ ಓದುಗರಿಗೆ ಪರಿಚಯಿಸಿದ ಲೇಖಕಿಯವರಿಗೂ ಧನ್ಯವಾದಗಳು.
  ಪ್ರಕಾಶ್ – ಮೈಸೂರು.

  ಉತ್ತರ
 2. ಮೇ 30 2013

  ಒಳ್ಳೆಯ ಬರಹ. ಶಿವಮೊಗ್ಗದ ಶಾಸಕರ ಬಗ್ಗೆ ಸರಳವಾಗಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ರಾಜಕೀಯದಲ್ಲಿ ಪ್ರಾಮಾಣಿಕರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸೋಣ.

  ಉತ್ತರ
 3. praveen
  ಮೇ 31 2013

  shimoga da history duddu chaylday gaydha yekaika vyakthi

  ಉತ್ತರ
 4. ಶರತ್
  ಜೂನ್ 4 2013

  ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ತಿತಿ ಆಗಿದೆ ನಮ್ಮ ಶಿವಮೊಗ್ಗದ ಜನರದ್ದು. ಸುಮ್ಮನೆ ಏನೇನೋ ಹೇಳಬೇಡಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments