ವಿಷಯದ ವಿವರಗಳಿಗೆ ದಾಟಿರಿ

ಮೇ 30, 2013

10

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

‍ನಿಲುಮೆ ಮೂಲಕ

– ಚಕ್ರವರ್ತಿ ಸೂಲಿಬೆಲೆ

NS(ಮೇ ೨೮) ಸಾವರ್ಕರ್ ಜನ್ಮ ದಿನ. ಈ ಸಂಧರ್ಭದಲ್ಲಿ ಭಾರತದ ದಿಕ್ಕು ಬದಲಿಸಿದ ಇಬ್ಬರು ವ್ಯಕ್ತಿಗಳ ತುಲನಾತ್ಮಕ ಬರಹ ಇಲ್ಲಿದೆ. ಯಾರು ಯಾವ ಬಗೆಯಲ್ಲಿ ದಿಕ್ಕು ಬದಲಿಸಿದರು ಅಥವಾ ತಪ್ಪಿಸಿದರು ಎನ್ನುವುದು ಓದುಗರ ವಿವೇಚನೆಗೆ ಬಿಟ್ಟಿದ್ದು…

ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ- ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ ಪರಿಪೂರ್ಣ ಉನ್ನತಿಗಾಗಿ ತಮ್ಮ ಜೀವನವನ್ನೇ ತೇಯ್ದುಬಿಟ್ಟರೋ ಆ ವ್ಯಕ್ತಿ ಅದೇ ದೇಶದ ಸ್ಮೃತಿಯಿಂದ ದೂರವಾಗೋದು ದುರಂತವೇ ಸರಿ.

ಹಾಗೆ ನೋಡಿದರೆ ಕಳೆದ ಶತಕದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬೌದ್ಧಿಕವಾಗಿ ಹಾಗೆಯೇ ಪ್ರತ್ಯಕ್ಷವಾಗಿ ಪಾಲ್ಗೊಂಡ ಅಪರೂಪದ ಸಾಹಸಿ ಸಾವರ್ಕರರೇ ಎಂಬುದರಲ್ಲಿ ಅನುಮಾನವಿಲ್ಲ. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಅದನ್ನೇ ಕ್ರಾಂತಿ ಎನ್ನುತ್ತಿರಲಿಲ್ಲ ಸಾವರ್ಕರ್. ಅವರ ಪ್ರತಿಯೊಂದು ಕೆಲಸದ ಹಿಂದೆ ಬೆಟ್ಟದಷ್ಟು ಚಿಂತನೆ, ಫಲಿತಾಂಶದ ನಂತರದ ಪರಿಸ್ಥಿತಿಯ ಕುರಿತು ಮುಂದಾಲೋಚನೆ- ಎಲ್ಲವೂ ಇರುತ್ತಿತ್ತು. ಅವರು ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮ ಲೆಖಕರನ್ನೂ ಮೀರಿಸುವಷ್ಟು ಪ್ರತಿಭಾವಂತ. ಪಿಸ್ತೂಲು ಹಿಡಿದರೆ, ಎದುರಾಳಿಗಳ ರಕ್ತವೇ ತಣ್ಣಗಾಗುವಷ್ಟು ಕೆಚ್ಚೆದೆ. ಮಾತಿಗೆ ನಿಂತರೆ ಮೈಯೆಲ್ಲ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ, ಅಸ್ಖಲಿತ ವಿಚಾರಗಳ ಧಾರಾಪ್ರವಾಹ. ಬಿಡಿ. ಅಂತಹ ವ್ಯಕ್ತಿ ಯುಗಕ್ಕೊಬ್ಬರೇ!

ಆದರೆ… ಈ ದೇಶದಲ್ಲಿ ಅಂತಹ ವ್ಯಕ್ತಿಗಳಿಗೆ ಮೌಲ್ಯ ದೊರೆಯಲೇ ಇಲ್ಲ. ಅವರುಬದುಕಿದ ಹಾದಿಯನ್ನು ಜನರಿಗೆ ತೋರುವ ಪ್ರಯತ್ನ ನಡೆಯಳೇ ಇಲ್ಲ. ಅದಕ್ಕೆ ವಿರುದ್ಧವಾಗಿ ಅಧಿಕಾರವನ್ನು, ಕೀರ್ತಿಯನ್ನು ಮತ್ತೊಬ್ಬರ ಬುಡಕ್ಕೆಸೆದು ನಾವು ಸುಮ್ಮನಾಗಿಬಿಟ್ಟೆವು. ಹೀಗೆ ಬುಡ ಭದ್ರವಾಗಿಸಿಕೊಂಡವರು ಆಲದ ಮರವಾಗಿ ಬೆಳೆದುನಿಂತುಬಿಟ್ತರು. ಅವರ ಆಶ್ರಯದಲ್ಲಿ ಬೇರೆಯವರನ್ನು ಬೆಳೆಯಗೊದಲೇ ಇಲ್ಲ. ಸ್ವಂತ ಮಕ್ಕಳು, ಮೊಮ್ಮಕ್ಕಳು, ಕೊನೆಗೆ ಮರಿಮಕ್ಕಳು ಕೂಡ ಅಧಿಕಾರಕ್ಕೆ ಹತ್ತಿರ ಸುಳಿದಾಡುತ್ತ ಉಳಿದುಬಿಟ್ಟರು. ದೇಶಕ್ಕೂ ಅಂತಹವರೆ ಅಪ್ಯಾಯ. ಮತ್ತೊಂದೆಡೆ ತಾವು ಅಧಿಕಾರಕ್ಕೆ ಏರುವುದಿರಲಿ, ಮಕಕ್ಳನ್ನೂ ಹತ್ತಿರಕ್ಕೆ ತರದವರು ಮಾತ್ರ ನಮ್ಮಿಂದ ದೂರವಾದರು. ಮರೆತೆಹೋದರು! ಅದಕ್ಕೆ ಇಂತಹವರ ಕುರಿತು ಆಗಾಗ ಚರ್ಚೆಯಾಗಬೇಕು ಅನ್ನೋದು. ಅಧಿಕಾರಕ್ಕೆ ಹತ್ತಿರದ ಗುಂಪಿನ ನಾಯಕರಾಗಿ ಜವಹರ್ ಲಾಲ್ ನೆಹರೂ ಕಂಡುಬಂದರೆ, ದೇಶಕ್ಕಾಗಿ ಬದುಕು ಸವೆಸಿಯೂ ಕುರ್ಚಿಯಿಂದ ದೂರವುಳಿದ ಮಹಾಮಹಿಮರ ಗುಂಪಿನ ಮುಂದಾಳುವಾಗಿ ಸಾವರ್ಕರ್ ನಿಲ್ಲುತ್ತಾರೆ. ಅವರೀರ್ವರ ಬದುಕನ್ನು ವಿಶ್ಲೇಷಿಸುತ್ತ ನಡೆದಂತೆ ಎರಡು ದೊಡ್ಡ ಪ್ರವಾಹದ ಆಳಕ್ಕೆ ಹೊಕ್ಕಿದಂತೆ ಭಾಸವಾದಲ್ಲಿ ಅನುಮಾನ ಪಡಬೇಕಿಲ್ಲ.

ಆರಂಭಕ್ಕೆ ಬಾಲ್ಯದ ಬದುಕನ್ನೇ ಗಮನಿಸಿ. ಸಿರಿವಂತಿಕೆಯ ಬದುಕಲ್ಲ ಸಾವರ್ಕರ್‌ರದು. ಇದ್ದುದರಲ್ಲಿಯೇ ಹೊಂದಾಣಿಕೆ ಮಾಡಿಕೊಮ್ಡು ಬದುಕುವ ಪಾಠ ಬಾಲ್ಯಕ್ಕೇ ಅವರಿಗೆ ದಕ್ಕಿತ್ತು. ಹದಿಮೂರನೇ ವಯಸ್ಸಿಗೆ ಬರುವ ವೇಳೆಗೆ ಪ್ಲೇಗ್ ರೋಗ ಮನೆಯವರನ್ನು ಬಲಿ ತೆಗೆದುಕೊಂಡ್ಇತ್ತು. ಅಪ್ಪ ಕೂಡ ವಿಧಿವಶವಾದರು. ಬದುಕಿನಿಂದ ವಿಮುಖರಾಗಲು ಬೇಕಾದ್ದೆಲ್ಲ ಬಾಲ್ಯದಲ್ಲಿಯೇ ನಡೆಯಿತು. ಬಹುಶಃ ಮನಸ್ಸೂ ಗಟ್ಟಿಯಾಯಿತು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಹೆಮ್ಮೆಯಿಂದ ಬದುಕುವ ಸಾಮರ್ಥ್ಯ ಸಿದ್ಧಿಸಿತ್ತು. ಹಾಗಂತ ಸಮಸ್ಯೆಗಳ ನಡುವೆ ಅಧ್ಯಯನದಲ್ಲಿ ಹಿಂದಿರಲಿಲ್ಲ. ಯಾವ ಶಾಲೆಗೆ ಹೋದರೂ ಉನ್ನತ ಸ್ಥಾನ ಅವರಿಗೆ ಕಟ್ಟಿಟ್ಟ ಬುತ್ತಿ. ಆ ವೇಳೆಗೇ ಆಂಗ್ಲ ದ್ವೇಷ ಅವರ ಹೃದಯಕ್ಕೆ ಹುದುಗಿಬಿಟ್ಟಿತ್ತು. ಹೀಗಾಗಿ ರಕ್ತದ ಕಣಕಣದಲ್ಲೂ ದೇಶಪ್ರೇಮವೇ ಮೈದಳೆದಿತ್ತು. ಕಾಲೇಜಿನಲ್ಲಿ ಪ್ರಿನ್ಸಿಪಾಲರು ದೇಶಪ್ರೇಮದ ಆರೋಪ ಹೊರೆಸಿ ಕಾಲೇಜಿಂದ ಹೊರದಬ್ಬುವಷ್ಟರ ಮಟ್ಟಿಗೆ ಅವರ ಖದರ್ರು!

ಜವಹರ ಲಾಲರದು ಇದಕ್ಕೆ ವಿರುದ್ಧವಾದ ಬಾಲ್ಯ. ತಂದೆ ಮೋತಿಲಾಲರು ಪ್ರಸಿದ್ಧ ವಕೀಲರೂ ಆಂಗ್ಲರ ನಿಕಟವರ್ತಿಗಳೂ ಆಗಿದ್ದರಿಂದ ಶ್ರೀಮಂತಿಕೆ ಸಹಜವಾಗಿಯೇ ನಲಿದಾಡುತ್ತಿತ್ತು. ಸಿರಿವಂತಿಕೆಯೊಂದಿಗೆ ಸರಸ್ವತಿಯ ಒಡನಾಟವಿರುವುದು ಬಲು ಅಪರೂಪ. ನೆಹರೂ ಓರಗೆಯವರ ಗಮನ ಸೆಳೆಯುವಂತಹ ಬುದ್ಧಿವಂತರೇನೂ ಆಗಿರಲಿಲ್ಲ. ತಂದೆ ಕೆಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರು ತಿಣುಕಾಡುತ್ತಿದ್ದುದಕ್ಕೆ ಪುರಾವೆಗಳಿವೆ. ಮೋತೀಲಾಲರ ಮನೆಯಲ್ಲಿ ಎಲ್ಲರೂ ಇಂಗ್ಲೀಶಲ್ಲೆ ಮಾತಾಡಬೇಕೆಂಬ ನಿಯಮವಿತ್ತು. ಮುಂದೆ ನೆಹರೂ ಪಾಲಿಗೆ ಪಾಸಿಟಿವ್ ಆಗಿ ಉಪಯೋಗಕ್ಕೆ ಬಂದಿದ್ದು ಇದೊಂದೇ. ಉಳಿದಂತೆ ಅವರ ಶೈಕ್ಷಣಿಕ ಸಾಧನೆಗಳು ಅಷ್ತಕ್ಕಷ್ಟೇ.

ನೆಹರೂ ಆಗಲೀ ಸಾವರ್ಕರ್ ಆಗಲೀ ಲಂಡನ್ನಿಗೆ ತೆರಳಿದ್ದು ಬ್ಯಾರಿಸ್ಟರ್‌ಗಿರಿ ಪಡೆಯಲಿಕ್ಕೇ. ಆದರೆ ನೆಹರೂರಂತೆ ಬಿಳಿಯರ ಕೋರ್ಟುಗಳಲ್ಲಿ ಕರಿಕೋಟು ಧರಿಸಿ ವಾದ ಮಾಡುವ ವಕೀಲರಾಗುವುದು ಸಾವರ್ಕರ್ ಉದ್ದೇಶವಾಗಿರಲಿಲ್ಲ. ಅದಕ್ಕೆ ಬದಲಾಗಿ ಆಂಗ್ಲರ ನಡುವೆಯೇ ಇದ್ದುಕೊಂಡು, ಅವರ ಬುಡಕ್ಕೆ ಪೆಟ್ಟುಕೊಡುವ ಯೋಜನೆ ಅವರದು. ಲಂದನ್ನಿನ ಲೈಬ್ರರಿಗಳಲ್ಲಿ ಓದಿಕೊಂಡೇ ಸಾವರ್ಕರ್, ೧೮೫೭ರ ಸಂಗ್ರಾಮದ ಐವತ್ತನೆ ವರ್ಷಾಚರಣೆಯ ಉತ್ಸವವನ್ನು ಆಚರಿಸಿದರು. ಅಂದಿನ ಸಂಗ್ರಾಮದ ವಿಸ್ತೃತ ಚಿತ್ರಣ ಕೊಡುವ ಪುಸ್ತಕವನ್ನೂ ಬರೆದರು. ಸಾವರ್ಕರ್ ಮಾಸ್ಟರ್ ಪ್ಲ್ಯಾನ್ ನಿಂದಲೇ ಮದನ್ ಲಾಲ್ ಧಿಂಗ್ರಾ ಕರ್ಜನ್ ವೈಲಿಯನ್ನು ಹತ್ಯೆ ಮಾಡಿದ್ದು. ಇನ್ನು ಅವರಿಂದ ಪ್ರೇರಣೆ ಪಡೆದವರಂತೂ ಅನೇಕ.

ಆದರೆ ನೆಹರೂ ಹೇಗಿದ್ದರು ಗೊತ್ತೇನು? ತಂದೆ ಮೋತೀಲಾಲರ ಆದೇಶದಂತೆ ಅವರು ಸಾವರ್ಕರ್ ಬಳಿಯೂ ಸುಳಿಯುತ್ತಿರಲಿಲ್ಲ. ಬದಲಿಗೆ ಲಂಡನ್ನಿನ ಬೀದಿಬೀದಿ ಸುತ್ತುತ್ತಾ ಹಣವ್ನ್ನು ನೀರಂತೆ ಕರ್ಚು ಮಾಡುತ್ತ ಮೇಜವಾನಿ ನಡೆಸುತ್ತಿದ್ದರು. ಹೀಗಾಗಿ ಓದು ಕೂಡ ಸುಸೂತ್ರ ಸಾಗಲಿಲ್ಲ. ಅವರೆಂದಿಗೂ ಪ್ರಭಾವೀ ವಕೀಲರಾಗಿ ಬೆಳೆಯಲೇ ಇಲ್ಲ.

ಸಾವರ್ಕರ್ ಲಂಡನ್ನಿಂದ ಮರಳಿದಾಗ ಒಬ್ಬರೇ ಬರಲಿಲ್ಲ. ಅವರು ಬಂದಿದ್ದು ಪೊಲೀಸರೊಂದಿಗೆ, ಬಂಧಿಯಾಗಿ! ಹೀಗಾಗಿ ಅಧಿಕಾರದ ಕನಸು ಕಾಣಲು ಅವರಿಗೆ ಅವಕಾಶವೇ ಇರಲಿಲ್ಲ. ಅವರ ಗಮನವೆಲ್ಲ ಹೋರಾಟದಲ್ಲಿ ಮಾತ್ರ ನೆಲೆಯಾಗಿತ್ತು. ನೆಹರೂ ಭಾರತಕ್ಕೆ ಮರಳಿದವರು, ಪ್ರಭಾವಶಾಲಿಯಾಗಿದ್ದ ಗಾಂಧೀಜಿಯ ಅನುಯಾಯಿಯಾದರು. ತಮ್ಮೆಲ್ಲ ವಾಂಛೆಗಳನ್ನು ಮರೆಮಾಚಿ ಖಾದಿ ಧರಿಸಿ ಓಡಾಡಿದರು. ಗಾಂಧೀಜಿಯ ಕುರುಡುಪ್ರೇಮ ಹಾಗೂ ಮೋತೀಲಾಲರ ಕುಮ್ಮಕ್ಕು ಅವರ ಬೆನ್ನಿಗಿದ್ದವು. ಈ ಕಾರಣದಿಂದ ಅವರು ಪಟೆಲರಂತಹ ಮುತ್ಸದ್ದಿಯನ್ಣೂ ಓವರ್ ಟೇಕ್ ಮಾಡಿ ಗದ್ದುಗೆಯ ಸಮೀಪ ಬಂದುಬಿಟ್ಟರು.

ಇನ್ನು ಪ್ರಮುಖ ವಿಚಾರಗಳತ್ತ ಹೊರಳೋಣ. ನೆಹರೂರ ಚಿಂತನೆಗೆ ಮೂಲ ಪ್ರೇರಣೆ ಎಲ್ಲಿಂದ ದೊರೆತಿತ್ತೆಂಬುದನ್ನು ಊಹಿಸುವುದು ಕಷ್ಟ. ಅವರು ಒಂದು ಸಿದ್ಧಾಂತದ ಹಾದಿಯಲ್ಲಿ ನಡೆದುದಕ್ಕಿಂತ ಎದವಿದ್ದು, ಹೊರಳಿದ್ದೇ ಜಾಸ್ತಿ. ಅವರು ಯಾವಾಗ ಎದಪಂಥೀಯರಾಗಿರುತ್ತಿದ್ದರೋ ಯಾವಾಗ ಸಮಾಜವಾದಿಗಳಾಗುತ್ತಿದ್ದರೋ ದೇವರೇ ಬಲ್ಲ. ಹೀಗಾಗಿ ರಷ್ಯನ್ನರು ಅವರನ್ನು ಇಂಪೆರಿಯಲಿಸಮ್ಮಿನ ಹಿಂದೆ ಓಡುವ ನಾಯಿ ಎಂದು ಕರೆದರೆ, ಅಮೆರಿಕನ್ನರು ಅನುಮಾನಿಸಬೇಕಾದ ಕಮ್ಯುನಿಸ್ಟೇತರ ಎನ್ನುತ್ತಿದ್ದರು. ಯಾರಿಗೂ ಅವರ ಬಗ್ಗೆ ನಂಬಿಕೆ ಇರಲಿಲ್ಲ. ತಮ್ಮ ಇಷ್ಟಪೂರ್ತಿಗಾಗಿ ಆಯಾ ಗುಂಪುಗಳೊಡನೆ ಗುರುತಿಸಿಕೊಂಡು ಲಾಭ ಪಡೆಯುವ ಪರಮ ಬುದ್ಧಿವಂತ ನೆಹರೂ. ಬಹುಶಃ ಇದರಿಂದಾಗಿಯೆ ಅವರು ಆಯಾ ವಿಚಾರಗ್ಅಳ ಆಳವಾದ ಅಧ್ಯಯನ ನಡೆಸಿದ್ದು ಕಂಡುಬರುವುದಿಲ್ಲ. ಗಾಂಧೀಜಿಯ ಸಮರ್ಥ ಅನುಯಾಯಿ ಎಂದು ಹೊಗಳಿಸಿಕೊಂಡರೂ ಆಂತರ್ಯದಲ್ಲಿ ದೇಸೀ ಚಿಂತನೆಗೆ ವಿರುದ್ಧವಾದ ಯೋಚನೆಗಳನ್ನೆ ಹೊಂದಿದ್ದರು. ಗಾಂಧೀಜಿಯ ರಾಮ ರಾಜ್ಯ ಪರಿಕಲ್ಪನೆ ತನಗೆ ಬೋರ್ ಆಗುತ್ತದೆ ಎಂದಿದ್ದುದು ಇದೇ ನೆಹರೂವೇ. ಅವರ ದಾರ್ಶನಿಕತೆಯನ್ನು ಮೂದಲಿಸುತ್ತಿದ್ದವರೂ ಅವರೇ. ಯಾವ ಚಿಂತನೆಯ ಕಾರಣಕ್ಕಾಗಿ ಗಾಂಧೀಜಿಯ ಅಸ್ತಿತ್ವ ಇದೆಯೋ ಅವೇ ಚಿಂತನೆಗಳನ್ನು ನೆಹರೂ ಖಂದತುಂದವಾಗಿ ವಿರೋಧಿಸುತ್ತಿದ್ದರು. ಗಾಂಧೀಜಿಗೂ ನೆಹರೂವಿಗೂ ಇದ್ದ ಚಿಂತನೆಯ ಸಮಾನ ಅಂಶ ಅಂದರೆ, ಮುಸ್ಲಿಮ್ ತುಷ್ಟೀಕರಣ ಮಾತ್ರ. ಹಾಗಂತ ಗಾಂಧೀಜಿಯವರಿಗೂ ನೆಹರೂವಿಗೂ ಆಗಸ- ಭೂಮಿಯಷ್ಟು ಅಂತರ. ಗಾಂಧೀಜಿಗೆ ಸನಾತನ ಧರ್ಮದ ಬಗ್ಗೆ ಪ್ರೀತಿ ಗೌರವಗಳಿದ್ದರೆ, ಆ ಬಗ್ಗೆ ಏನೊಂದೂ ಅರಿಯದ ನೆಹರೂ ಅದನ್ನು ಸುಖಾಸುಮ್ಮನೆ ದ್ವೇಷಿಸುತ್ತಿದ್ದರು. ಅವರಿಗೆ ತಾವು ಅನುಸರಿಸುತ್ತಿರುವ ಧರ್ಮದ ಬಗ್ಗೆ ಮಾಹಿತಿಯೇ ಇರಲಿಲ್ಲ. ಹೀಗಾಘಿ ಅವರ ಚಿಣ್ತನೆಗಳು ಲೋಲಕದಂತೆ ಓಲಾಡುತ್ತಿತ್ತೇ ಹೊರತು ಒಂದೆಡೆ ನಿಲ್ಲಲು ಸಾಧ್ಯವಾಗಲಿಲ್ಲ.

ಸಾವರ್ಕರರದು ಹಾಗಾಗಲಿಲ್ಲ. ಅವರಿಗೆ ಮನೆಯಲ್ಲಿ ಭಾರತೀಯ ವಾತಾವರಣ ದೊರಕಿದ್ದರಿಂದ ಅವರು ಚಿಕ್ಕಂದಿನಲ್ಲೇ ನಮ್ಮ ಸಂಸ್ಕ್ರ್ತಿ , ಧರ್ಮ ಮೊದಲಾದವುಗಳ ಅರಿವು ಮತ್ತು ಮಾಹಿತಿ ಇತ್ತು. ಇದರಿಂದಾಗಿ ಅವರು ದಾರಿ ತಪ್ಪುವ ಪರಿಸ್ಥಿತಿ ಬರಲಿಲ್ಲ. ಇಟಲಿಯ ಮ್ಯಾಝಿನಿಯ ಜೀವನದಿಂದ ಅಪಾರವಾದ ಪ್ರೇರಣೆ ಪಡೆದವರು ಸಾವರ್ಕರ್. ಆದರೆ ಅವರು ಅದನ್ನು ಭಾರತೀಯತೆಗೆ ಹೊರಳಿಸಿ ಹೊಸ ಸಿದ್ಧಾಂತ ರೂಪಿಸಿದರು. ಗಾಂಧೀ ಚಿಂತನೆಗಳೊಂದಿಗೆ ಸಾವರ್ಕರ್ ಗೆ ಎಂದಿಗೂ ಸಹಮತವಿರಲಿಲ್ಲ. ಹಾಗೆ ಒಪ್ಪುವ ನಾಟಕವನ್ನು ಕೂಡ ಅವರು ಆಡಲಿಲ್ಲ. ಅವರನ್ನು ಕೆಲವರು ಸಮಾಜವಾದಿಗಳೆಂದೂ ಕೆಲವರು ಕಮ್ಯುನಿಸ್ಟರೆಂದೂ ಕರೆಯುತ್ತಿದ್ದರು. ಅಚ್ಚರಿಯ ವೀಷಯವೆಂದರೆ, ಸಾವರ್ಕರ್, ಮೂಢನಂಬಿಕೆಗಳನ್ನು ಜರಿದಷ್ಟೇ ಸರಾಗವಾಗಿ ಕಮ್ಯುನಿಸಮ್ಮಿನ ಪ್ರಮಾದಗಳನ್ನೂ ಜಾಲಾಡಿಬಿಡುತ್ತಿದ್ದರು. ಹೀಗಾಗಿಯೇ ಅವರನ್ನು ಸಾವರ್ಕರಿಸಮ್‌ನ ಪ್ರಣೀತರೆನ್ನುವುದು ಸೂಕ್ತವಾದೀತು. ಹೀಗಾಗಿಯೇ ಅವರು ಉಳಿದ ಹೋರಾಟಗಾರರಿಗಿಂತ ಒಂದು ಕೈ ಮೇಲೆ ಸಲ್ಲುವುದು. ಅವರಷ್ಟು ಕಲ್ಪನಾ ಶಕ್ತಿ, ಬುದ್ಧಿ ಸಾಮರ್ಥ್ಯ- ಸಂಪೂರ್ಣ ಭಿನ್ನ ಚಿಂತನೆಯುಳ್ಳ ಲೇಖಕ ಭಾರತದಾದ್ಯಂತ ಮತ್ತೊಬ್ಬರಿರಲಿಲ್ಲ ಎಂದರೆ ಸುಳ್ಳಲ್ಲ.

ಅವರ ಕೃತಿಗಳು ಚಿಟ್ಟೆಯಷ್ಟು ಚೆಂದ, ಸಾಗರದಷ್ಟು ಆಳ, ಹದ್ದು ಹಾರಿದಷ್ಟು ವಿಸ್ತಾರ. ಅವರ ಕೃತಿಗಳು ಹೂಬಿಡುವ ಗಿಡದಂಥಲ್ಲ, ಮಿಂಚಿನ ಪ್ರಕಾಶ ನೀಡುವಂಥದ್ದು- ಎಂದು ತರುಣಭಾರತವೆಂಬ ಮರಾಠಿಪತ್ರಿಕೆಯು ಅಭಿಪ್ರಾಯಪಟ್ಟಿತ್ತು. ಮರಾಠಿ ಕವಿ ಸಮ್ಮೇಳನದಲ್ಲಂತೂ ಅವರು `ಒಂದಷ್ಟು ಕಾಲ ಪ್ರಣಯ ಸಾಹಿತ್ಯದಂತಹ ಅಭಿರುಚಿಯನ್ನು ಕೆಲಕಾಲ ಪಕ್ಕಕ್ಕಿಡಿ. ದೇಶ ಕಟ್ಟಲು ಬನ್ನಿ. ಕವಿಗಳು, ಲೇಖನಕಾರರು ಇಲ್ಲವೆಂದರೆ ದೇಶಕ್ಕೇನೂ ನಷ್ಟವಿಲ್ಲ. ದೇಶಕಾಯಬಲ್ಲ ಜನರಿಲ್ಲದಿದ್ದರೆ ಮಾತ್ರ ಅದು ಭಾರೀ ನಷ್ಟ. ಪೆನ್ನುಗಳನ್ನು ಚೆಲ್ಲಿ ಗನ್ನುಗಳನ್ನು ಹಿಡಿಯಿರಿ. ಆಸ್ಟ್ರಿಯಾದ ದೊರೆ ನಾವು ಸೋತಿದ್ದು ಜರ್ಮನಿಯ ಬಾನೆಟ್ ಗಳಿಗೆ ಎನ್ನುತ್ತಿದ್ದನೇ ಹೊರತು, ಸಾನೆಟ್ ಗಳ ಮುಂದೆ ತಲೆಬಾಗಿದೆವು ಎನ್ನುತ್ತಿರಲಿಲ್ಲ‘ಎಂದು ಖಾರವಾಗಿ ಮಾತನಾಡಿದ್ದರು. ಹಾಗೆಂದು ಕವಿಗಳನ್ನೆನೂ ತುಚ್ಛೀಕರಿಸಲಿಲ್ಲ. ಅವರೂ ಕೂಡಾ ವಿರೋಧಿಸಲಾಗದಂತಹ ವಾದ ಶೈಲಿಯಿಂದ ಅವರ ಮನಸ್ಸನ್ನೂ ಗೆದ್ದಿದ್ದರು.

ಸಾವರ್ಕರ್ ಅಪಾರ ಅಧ್ಯಯನದ ನಂತರ ಸೂಕ್ಷ್ಮವಾದ ನಿರ್ಣಯ ಕೊಡುವುದರಲ್ಲಿ ನಿಸ್ಸೀಮರಾಗಿದ್ದರು. ಸಮಕಾಲೀನ ಲೇಖಕರಲ್ಲಿ ಆ ರೀತಿಯ ಗುಣ ಖಂಡಿತ ಇರಲಿಲ್ಲ. ಅವರದು ಒಂದಕ್ಕಿಂತ ಒಂದು ಪರಮಾದ್ಭುತ ಕೃತಿಗಳು. Tha Machine, God or Gun Powder, God of Men and Lord of Universe, Women’s place in Manusmruti, Women’s beauty and Duty, The Cowನಂತಹ ಲೇಖನಗಳೂ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದವು. ರತ್ನಾಗಿರಿಯ ಜೈಲಿನಲ್ಲಿದ್ದಾಗ ಬರೆದ ಹಿಂದೂ ಪದ ಪಾದಶಾಹಿ ಶಿವಾಜಿಯ ನಂತರ ಮರಾಠಾ ಇತಿಹಾಸವೇ ಇರಲಿಲ್ಲ ಎನ್ನುತ್ತಿದ್ದವರಿಗೆ ಉತ್ತರದಂತಿತ್ತು. ಮೊಘಲರ ವಿರುದ್ಧ ಶಿವಾಜಿಯ ಹೋರಾಟವನ್ನು ಸಾವರ್ಕರ್ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. `ಶಿವಾಜಿಯ ನಂತರ ಮರಾಠಾ ಇತಿಹಾಸ ಆರಮ್ಭವಾಗಿದೆ‘ಎಂದು ಗಟ್ಟಿ ದನಿಯಲ್ಲಿ ಪ್ರತಿಪಾದಿಸಿದರು. ಸಾವರ್ಕರರ ನನ್ನ ಜೀವಾವಧಿ ಶಿಕ್ಷೆ ಕೃತಿಯಂತೂ ಜಗತ್ತಿನ ಉನ್ನತ ಕೃತಿಗಳಲ್ಲಿ ಒಂದಾಗಿ ನಿಲ್ಲುವಂಥದ್ದು. ಕೈದಿಗಳು ಅನುಭವಿಸುತ್ತಿದ್ದ ಯಮಯಾತನೆಗಳು, ತಾವು ಸ್ವತಃ ಅವನ್ನು ಅನುಭವಿಸಿದ್ದು, ರಕ್ತದ ಕಣ್ಣೀರು ಹರಿಸಿದ್ದು, ಮೊಳೆಯಿಂದ ಮಹಾಕಾವ್ಯವನ್ನು ಗೋಡೆಯ ಮೇಲೆ ಕೆತ್ತಿದ್ದು… ಇವೆಲ್ಲ ಮಹಾಕೃತಿಯ ಸುಧೆ!

ಸಾವರ್ಕರ್ ಬರಹಗಳೊಂದಿಗೆ ನೆಹರೂ ಬರಹಗಳನ್ನು ಹೋಲಿಸುವ ಅಪದ್ಧಗಳು ಅಲ್ಲಲ್ಲಿ ನಡೆಯುತ್ತವೆ. ನೆಹರೂ ಮತ್ತು ಸಾವರ್ಕರರ ಬರಹಗಳಲ್ಲಿ ಆಗಸ ಭುವಿಗಳಷ್ಟು ಅಂತರ. ಸಾವರ್ಕರ್ ವಿಷಯದ ಆಳಕ್ಕಿಳಿದು ಅಳುಕದೇ ಪ್ರಸ್ತಾಪಿಸಿದರು. ಭಾರತಕ್ಕಾಗಿ ಬರೆದರು, ಭಾರತವನ್ಣೇ ಬರೆದರು. ನೆಹರೂ ತುಂಬಾ ಓದುತ್ತಿದ್ದರು ಮತ್ತು ಹಾಗೆ ಓದಿದ್ದನ್ನೇ ಭಟ್ಟಿ ಇಳಿಸುತ್ತಿದ್ದರು. ನೆಹರೂ `ಗ್ಲಿಂಪ್ಸಸ್ ಆಫ್ ಹಿಸ್ಟರಿ‘ಬರೆದು, ಅದರಲ್ಲಿ ಅಫ್ಜಲ್ ಖಾನನನ್ನು ಶಿವಾಜಿ ಕೊಂದಿದ್ದು ಸರಿಯಲ್ಲ ಎಂಬಂತೆ ಚಿತ್ರಿಸಿದ್ದರು. ತಮ್ಮ `ಡಿಸ್ಕವರಿ ಆಫ್ ಇಂಡಿಯಾ‘ದಲ್ಲಿ ಅಕ್ಬರನನ್ನು ಹೀರೋ ಆಗಿಸಿದರು. ಸಹಜವಾಗಿಯೇ ರಾಣಾ ಪ್ರತಾಪ ಅವರಿಗೆ ಪರಕೀಯನಾಗಿ ಕಂಡ. ಆದರೆ ಸಾವರ್ಕರ್ ಚಿತ್ರಿಸಿದ ಇತಿಹಾಸದ ದಿಕ್ಕೇ ಬೇರೆ. ಅವರಿಗೆ ಅಕ್ಬರ್ ವಿದೇಶೀ ಶಕ್ತಿ, ರಾಣಾ ಪ್ರತಾಪ ದೇಶ ಕಟ್ಟಿದವನು.

ನೆಹರೂರವರ ಐತಿಹಾಸಿಕ ಚಿಂತನೆಗಳು ಅದೆಷ್ಟು ಬಾಲಿಶವಾಗಿದ್ದವೆಂಬುದಕ್ಕೆ ಆರ್ಯರ ಆಕ್ರಮಣವಾದದ ಅವರ ನಂಬುಗೆಯೇ ಸಾಕ್ಷಿ. ಆರ್ಯರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿ ಆಳ್ವಿಕೆ ನಡೆಸಿದರು. ಇಲ್ಲಿನ ಮೂಲನಿವಾಸಿಗಳ ಮೂಲೋಚ್ಛಾಟನೆ ಮಾಡಿದರು ಎಂಬ ಬ್ರಿಟಿಷ್ ಪ್ರಣೀತ ಸಿದ್ಧಾಂತವನ್ನು ನೆಹರೂ ಅಕ್ಷರಶಃ ಒಪ್ಪಿದ್ದಾರೆ. ವಾಸ್ತವವಾಗಿ ಈ ಸಿದ್ಧಾಂತದಲ್ಲಿ ಹುರುಳೇ ಇಲ್ಲ. ಸಂಶೋಧಕರೆಲ್ಲ ಬ್ರಿಟಿಷರು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಈ ಸಿದ್ಧಾಂತಕ್ಕೆ ಹೆಗಲುಕೊಟ್ಟು ನಿಲ್ಲುವುದು ಎಷ್ಟು ಸರಿ? ಅದೂ ಭಾರತೀಯರಾಗಿ!

ನೆಹರೂ ಗ್ರಹಿಕೆ ಎಂಥದ್ದು ಎನ್ನುವುದಕ್ಕೆ ಅವರು ಬರೆದಿರುವ ಹಿಂದೂ ಧರ್ಮದ ಕುರಿತಂತ ಸಾಲುಗಳೇ ಸಾಕ್ಷಿ. `ಸನಾತ ಧರ್ಮ ಎಂದರೆ ಪೂರ್ವಕಾಲದ ಧರ್ಮ. ಇದು ಬೌದ್ಧಮತ, ಜೈನ ಮತಗಳನ್ನು ಒಳಗೊಂಡ ಎಲ್ಲ ಭಾರತೀಯ ಮತಗಳಿಗೂ ಅನ್ವಯಿಸುತ್ತದೆ. ಆದರೆ ಈಗ ಹಿಂದೂಗಳಲ್ಲಿ ಪೂರ್ವಾಚರಣೆಯಲ್ಲಿದ್ದೇವೆ ಎಂದು ನಂಬಿರುವ ಶಾಸ್ತ್ರನಿಷ್ಠ ಪಂಗಡಗಳಿಗೆ ಮಾತ್ರ ಅನ್ವಯಿಸುತ್ತದೆ. ಬೌದ್ಧಮತ, ಜೈನಮತ ನಿಶ್ಚಯವಾಗಿಯೂ ಹಿಂದೂ ಮತಗಳಲ್ಲ. ಅವು ಹುಟ್ಟಿದ್ದು ಭಾರತದಲ್ಲಿಯಾದ್ದರಿಂದ ಇಲ್ಲಿನ ಜನಜೀವನ, ಸಂಸ್ಕೃತಿ, ದರ್ಶನಗಳ ಮುಖ್ಯ ಅಂಗಗಳಾಗಿವೆ. ಈ ಮತಾನುಯಾಯಿಗಳು ಭಾರತೀಯ ಸಂಸ್ಕೃತಿಯ ಶಿಶುಗಳಾದರೂ ಅವರು ಹಿಂದೂ ಧರ್ಮೀಯರಲ್ಲ. ಭಾರತೀಯ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿ ಎಂದು ಕರೆಯುವುದು ತಪ್ಪು. ದೀರ್ಘಕಾಲದ ಇಸ್ಲಾಮ್ ಘರ್ಷಣೆಯಿಂದ ಈ ಸಂಸ್ಕೃತಿಯಲ್ಲಿ ಹಲವು ಮಾರ್ಪಾಟುಗಳಾದವು. ಆದರೂ ಮೂಲದಲ್ಲಿ ಭಾರತೀಯ ಸಂಸ್ಕೃತಿಯಾಗಿಯೇ ಉಳಿದಿದೆ. ಪಾಶ್ಚಾತ್ಯ ಔದ್ಯೋಗೀಕರಣ, ನಾಗರಿಕತೆ ಮೊದಲಾದ ಪ್ರಭಾವಗಳಿಂದ ಇದು ಮತ್ತಷ್ಟು ಬದಲಾವಣೆ ಕಾಣುತ್ತಿದೆ. ಇದರ ಅಂತಿಮ ಪರಿಣಾಮ ಏನೆಂಬುದು ಯಾರಿಂದಲೂ ಖಚಿತವಾಗಿ ಹೇಳಲಾಗದು. ಹಿಂದೂ ಧರ್ಮ ಮತ ದೃಷ್ಟಿಯಿಂದ ಅಸ್ಪಷ್ಟ, ಅನಿರ್ದಿಷ್ಟ, ಬಹುಮುಖ. ಯಾರಿಗೆ ಏನು ಬೇಕಾದರೂ ಕಾಣಬಹುದು. ಸಾಮಾನ್ಯವಾಗಿ ಮತದ ನಿರ್ವಚನೆಯ ದೃಷ್ಟಿಯಿಂದ ಅದನ್ನೊಂದು ಮತ ಎಂದು ಕರೆಯುವುದೂ ಕಷ್ಟ. ಒಂದಕ್ಕೊಂದು ವಿರೋಧವಿರುವ ಅನೇಕ ನಂಬಿಕೆಗಳನ್ನು ಸಂಪ್ರದಾಯಗಳನ್ನು ಅದು ಹೊಂದಿದೆ. ಅವುಗಳಲ್ಲಿ ಕೆಲವು ಅತ್ಯುತ್ಕೃಷ್ಟ, ಇನ್ನು ಕೆಲವು ಅತಿ ನಿಕೃಷ್ಟ‘ ಇವು ನೆಹರೂ ಬರೆದ ಸಾಲುಗಳೇ. ಹೀಗಿರುವಾಗ ಅವರನ್ನು ಸಾವರ್ಕರ್‌ರೊಂದಿಗೆ ಹೋಲಿಸುವುದಾದರೂ ಹೇಗೆ?

ಕೆಲವೊಮ್ಮೆ ಸಾವರ್ಕರರದ್ದೂ ಗಾಬರಿ ಹುಟ್ಟಿಸುವ ಚಿಂತನೆಯೆ. ಗೋವಿನ ಬಗ್ಗೆ ಅವರೊಂದಿಗೆ ಮಾತಿಗಿಳಿದರೆ ಭಯವಾಗುತ್ತಿತ್ತು. ಅವರೆಂದಿಗೂ ಗೋವನ್ನು ಪೂಜಿಸುವುದನ್ನು ಸಮರ್ಥಿಸಲಿಲ್ಲ. ಗೋವನ್ನು ಪ್ರಾಣಿಯಂತೆ ಭಾವಿಸಿ, ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಿ ಅನ್ನುವುದು ಅವರ ಕರೆ.

ನೆಹರೂ ಅಭಿಪ್ರಾಯ ಹೀಗೆಯೇ ಇದ್ದರೂ ಅದು ಮುಸ್ಲಿಮರಿಗೆ ಗೋಪ್ರಿಯವಾದ ಆಹಾರ, ಅದು ಅವರಿಗೇನೂ ಪೂಜ್ಯವಲ್ಲ ಅನ್ನುವ ಪ್ರಜ್ಞೆಯೇ ಪ್ರಾಮುಖ್ಯತೆ ಪಡೆದಿತ್ತು.

ಸಾವರ್ಕರ್ ವೈಜ್ಞಾನಿಕವಾಗಿ ಆಲೋಚಿಸುವುದರಲ್ಲಿ ಮುಂದು. ಮೆಶೀಣುಗಳು ವ್ಯಾಪಕವಾಗಿ ಕೆಲಸ ಮಾಡಬೇಕು. ಆ ಮೂಲಕ ರಾಷ್ಟ್ರದ ಉತ್ಪನ್ನ ಹೆಚ್ಚಬೇಕು. ನಾಡು ಸಮೃದ್ಧಿಗೊಂಡು ಯಶಸ್ಸಿನ ತುದಿಗೇರಬೇಕೆಂಬುದು ಅವರ ಮನದಾಳ. ಹೀಗಾಗಿಯೇ ಅವರೊಂದಿಗೆ ಮಾತಿಗೆ ಕುಳಿತರೆ ಹೊಸ ಲೋಕವೇ ಅನಾವರಣಗೊಂಡಂತಾಗುತ್ತಿತ್ತು. ನೆಹರೂ ಹಾಗಲ್ಲ. ಜೆಆರ್‌ಡಿ ಟಾಟಾ ನೆಹರೂರನ್ನು ಭೇಟಿಯಾಗಿ ಬರುವಾಗ ಮುಖ ಕಿವುಚಿಕೊಂಡು ಬರುತ್ತಿದ್ದರು. ವಿಜ್ಞಾನದ ವಿಚಾರದಲ್ಲಿ ನೆಹರೂದು ಅಷ್ಟೊಂದು ಅಜ್ಞಾನ. ಈ ರೀತಿ ವೈಜ್ಞಾನಿಕ ಚಿಂತನೆ, ಸಾಂಸ್ಕೃತಿಕ ಹಿನ್ನೆಲೆ ಇರದ ವ್ಯಕ್ತಿ ನಾಯಕರಾದರೆ ಲಾಭಕ್ಕಿಂತ ನಷ್ಟವೆ ಹೆಚ್ಚು. ಹಾಗೆಯೇ ಆಯಿತು. ಪಾಕಿಸ್ಥಾನದ ವಿಚಾರದಲ್ಲಿ ನೆಹರೂ ಕೈಗೊಂಡ ಆತುರದ ನಿರ್ಧಾರಗಳು, ಚೀನಾ ಯುದ್ಧದ ಸಂದರ್ಭದಲ್ಲಿ ನಮ್ಮವರ ನಿಧಾನ ನಿಲುವು, ಇವೆಲ್ಲ ಇದರದ್ದೇ ಪರಿಣಾಮಗಳು.

ಸಾವರ್ಕರರ ಧಾಡಸೀತನ ನೋಡಿ. ಪಾಕಿಸ್ಥಾನದ ವಿಚಾರ ಹಾಗಿರಲಿ, ಮುಸ್ಲಿಮ್ ಲೀಗನ್ನು ಎಲ್ಲಿಟ್ಟಿರಬೇಕೆಂಬ ಪರಿಕಲ್ಪನೆ ಅವರಿಗೆ ಸ್ಪಷ್ಟವಾಗಿತ್ತು. ಪಾಕಿಸ್ಥಾನ ತುಂಡಾಗುವುದನ್ನು ತಡೆಯದಾದಾಗ `ಅನೇಕ ಶಕ ಸ್ಥಾನ, ಹೂಣಸ್ಥಾನಗಳನ್ನು ನುಂಗಿ ನೊಣೆದ ಹಿಂದೂಸ್ಥಾನಕ್ಕೆ ಪಾಕಿಸ್ಥಾನ ಯಾವ ಲೆಕ್ಕ ಹೇಳಿ. ಒಂದಷ್ಟು ಕಾಲ ಅಸಹ್ಯಕರ ಬದುಕು ನಡೆಸಿ ಸಾಕಾಗಿ, ಪಾಕಿಸ್ಥಾನವೇ ಹಿಂದೂಸ್ಥಾನಕ್ಕೆ ಬಂದು ಸೇರಿಕೊಂಡುಬಿಡುತ್ತದೆ‘ ಎಂದಿದ್ದರು. ದೇಶವಿಭಜನೆಯ ಮುನ್ಸೂಚನೆ ಕಾಣುತ್ತಿದ್ದಂತೆ ಇಲ್ಲಿನ ಯುವಕರಿಗೆ ಸೈನ್ಯ ಸೇರುವಂತೆ ತಾಕೀತು ಮಾಡತೊಡಗಿದರು. ಆರಂಭದಲ್ಲಿ ಜನ ಇದನ್ನು ವಿರೋಧಿಸಿದರೂ ಬರಬರುತ್ತ ಸಾವರ್ಕರರ ಇಂಗಿತ ಅರ್ಥ ಮಾಡಿಕೊಂಡರು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತವನ್ನು ಉಳಿಸಿದ್ದು ಈ ಸೈನಿಕರೇ ಎಂಬುದು ನೆನಪಿದ್ದರೆ ಸಾಕಷ್ಟಾಯ್ತು.

ಹೇಳುತ್ತಾ ಹೊರಟರೆ ಅಸಂಖ್ಯ ವಿಚಾರಗಳು. ಪ್ರತೀ ಚಿಂತನೆಯೂ ಹೊಸ ದಿಕ್ಕಿನತ್ತಲೇ ಮುಖ ಮಾಡಿ ನಿಲ್ಲುತ್ತವೆ. ಪ್ರತೀ ಬಾರಿ ಹೊಸ ದಿಕ್ಕಿನೆಡೆ ನಿಂತಾಗಲೂ ಸಾವರ್ಕರ್ ಅಗಾಧವಾಗಿ ಬೆಳೆದುನಿಂತಂತೆ ಭಾಸವಾಗುತ್ತಾರೆ. ಅವರ ಬರಹ, ಮಾತು, ಚಿಂತನೆ, ಕೃತಿ- ಇವುಗಳಲ್ಲಿನ ತೇಜಸ್ಸು ಪ್ರಖರವಾಗಿ ಕಂಡು ಬೆಚ್ಚಿ ಬೀಳಿಸುತ್ತವೆ. ನಾವು ಮರೆತರೂ ಮರೆಯಾಗದ ವ್ಯಕ್ತಿ ಅವರು ಎಂಬುದು ನಮಗೇ ಮನದಟ್ಟಾಗುತ್ತದೆ. ಏನಂತೀರಿ?

10 ಟಿಪ್ಪಣಿಗಳು Post a comment
  1. ಮೇ 30 2013

    ನೆಹರೂ ಅವರ (ಅ)ಜ್ಞಾನ, ಸ್ವಾರ್ಥ, ಸ್ವಜನಪಕ್ಷಪಾತ, ವಿದೇಶೀ ಪ್ರಭಾವ, ಲಂಪಟತನ, ಇತ್ಯಾದಿಗಳು ತಿಳಿದಿರುವಂತಹದೇ.
    ನೆಹರೂ ಮತ್ತು ಗಾಂಧೀಜಿಯವರ ಮಧ್ಯೆ ಸಮಾನವಾದ ಒಂದಂಶವೂ ಇರಲಿಲ್ಲ.
    ಹೀಗಿದ್ದಾಗ್ಯೂ ಗಾಂಧೀಜಿಯವರು ನೆಹರೂ ಅವರನ್ನು ತಮ್ಮ “ಮಾನಸ ಪುತ್ರ”ನಂತೆ ಕಂಡು, ನೆಹರೂ ಆವರೇ ದೇಶದ ಪ್ರಧಾನಿಯಾಗಬೇಕೆಂದು ಹಟ ಹಿಡಿದದ್ದರ ಮರ್ಮ ತಿಳಿಯುವುದಿಲ್ಲ.

    ಉತ್ತರ
    • Gopalakrishna Bhagwat
      ಆಗಸ್ಟ್ 3 2013

      Mr. you are also talking as if you are MANASA PUTRA of Savarkar. Regarding the Savarkar’s “contribution” to this country is well analysed in the Frointline pl read

      ಉತ್ತರ
      • ಆಗಸ್ಟ್ 5 2013

        You are talking as if you are MANASA PUTRA of Frontline!
        First of all, find out who is behind Frontline, what is their agenda, how they spread lies, etc.

        ಉತ್ತರ
        • Gopalakrishna Bhagwat
          ಆಗಸ್ಟ್ 5 2013

          Mr. Kumar this logic applies to you also. You are behaving as if the MANASAPUTRA of this coterie of website. Dont think all you people have hidden agenda like your gang. There is no logic in yoour argument. Without evidences you have made the statement that the facts in the frontline are all false. You provide evidences and prove it.

          ಉತ್ತರ
          • Ramakrishna Nadiga
            ಆಗಸ್ಟ್ 5 2013

            Well said mr. Gopal. These people are jobless people and they post usleless articles with same old agenda of communal hatred and violence to fulfill their selfish needs. They think tht people are ignorant still to believe their cunning tricks. People are just ignoring these people who sit behind screen create some noise.

            ಉತ್ತರ
  2. Shashidhar Hemmady
    ಮೇ 31 2013

    ‘ಎಲ್ಲ ತತ್ವದೆಲ್ಲೆ ಮೀರಿ’ ಎಂಬ ಕುವೆಂಪು ಹೇಳಿದ ಮಾತನ್ನು ಇಟ್ಟುಕೊಂಡು ಈ ದರಿದ್ರ ಸೂಲೆಬೆಲೆಯ ಕೊಳಕು ಮನಸ್ಸಿನ ಲೇಖನಗಳನ್ನು ಪ್ರಕಟಿಸುತ್ತೀರಲ್ಲ, ನಿಮಗೆ ಏನೆನ್ನಬೇಕೋ ಕುವೆಂಪುವೇ ಬಲ್ಲ.

    ಉತ್ತರ
    • “ದರಿದ್ರ” ಅನ್ನುವಲ್ಲೇ ಮನಸ್ಸಿನ ಕೊಳಕು ಕಾಣುತ್ತಿದೆ ಶಶಿಧರ್. “ಎಲ್ಲ ತತ್ವದ ಎಲ್ಲೆ ಮೀರಿ” ನಿಂತಿರುವುದಕ್ಕೆ ನಾವು ಎಡ-ಬಲ ಅದೆರಡೂ ಇಲ್ಲದವರ ಲೇಖನಗಳಿಗೆ ಸ್ಥಾನ ಕೊಡುತ್ತೇವೆ.ನಾಳೆ ನೀವು ಸಾವರ್ಕರ್ ವಿರೋಧಿಸಿ ಒಂದು ಲೇಖನ ಕಳಿಸಿದರೆ ನಾವು ಅದನ್ನೂ ಪ್ರಕಟಿಸುತ್ತೇವೆ.ಕಳಿಸಿಕೊಡಿ.
      ಅದು ನಿಲುಮೆಯ ಬಗ್ಗೆಯಾಯಿತು.

      ಇನ್ನು ಲೇಖನದ ವಿಷ್ಯಕ್ಕೆ ಬರೋಣ.ಅಲ್ಲೇನು ಕೊಳಕು ಕಂಡಿರಿ?

      ಉತ್ತರ
  3. Vikas Nayak
    ಜೂನ್ 1 2013

    ಸಾವರಕರ !!! ಸ್ವಾತಂತ್ರ ಸೇನಾನಿ !!! ವಿದ್ವಾನರು, ಧಿಮಂತ ಹೋರಾಟಗಾರರು, ಭಾರತಿಯ ಸಮಾಜವಾದಿ ತತ್ವಜ್ಞಾನದಲ್ಲಿ ಪೂರ್ಣ ವಿಶ್ವಾಸವನ್ನಿಟ್ಟವರು !!!!! ಅವರ ವರ್ಣನೆ ಕವಿ ಗಳಿಗೂ ನಿಲುಕದಷ್ಟು ವ್ಯಾಪಕ. ಹೌದು, ಇದರಲ್ಲಿ ಏನೂ ಸಂಶಯ ಎನ್ನುವಂತಹದು ಎಳ್ಳಷ್ಟೂ ಇಲ್ಲ.
    ಜವಾಹರ ಲಾಲ ನೆಹರು, ಒಂದು ಅದ್ಭುತ ವ್ಯಕ್ತಿತ್ವ !!! ನಿಸ್ವಾರ್ಥ, ನಿರ್ಮಲ ಮನದ ಅಹಿಂಸಾ ಪರಮ ಧರ್ಮ ಎನ್ನುವುದರಲ್ಲಿ ಪೂರ್ಣ ವಿಶ್ವಾಸ ಇಟ್ಟವರು. ಮಹಾತ್ಮರ ನೆಚ್ಚಿನ ಅನುಯಾಯಿ. ಸ್ವಾವಲಂಬನೆಯಲ್ಲಿ ತಮ್ಮ ಜನ್ಮಸಿದ್ದ್ಹ ಹಕ್ಕನ್ನು ಕಾಣುತ್ತಿದ್ದ ಮೇಧಾವಿ. ಅಖಂಡ ಭಾರತದ ಪ್ರಥಮ ಪ್ರಧಾನಿ? ಸಕಾರಾತ್ಮಕ ವಾಕ್ಯದ ನಡುವೆ ಒಂದು ಪ್ರಶ್ನಾರ್ಥಕ ಚಿಹ್ನೆ !!! ಸಾವರಕರ, ಇವರ ಬಗೆಗಿನ ವರ್ಣನೆಯಲ್ಲಿ ಎಲ್ಲಿಯೂ ಪ್ರಶ್ನಾರ್ಥಕ ಚಿಹ್ನೆ ಬರದೆ? ಪ್ರಶ್ನೆಗಳು ಎಲ್ಲರ ಬಗೆಗೂ ಇದ್ದೆ ಇವೆ ಮಾತ್ರ ನ್ಯೂನತೆಗಳನ್ನು ಮರೆ ಮಾಡಿ ವಿಶೇಷತೆಗಳನ್ನು ಎತ್ತಿ ತೋರಿಸಿದಾಗ ಭೇದವೆನ್ನುವುದು ಮಾಯವಾಗುತ್ತದೆ. ಭೇದ ಎಲ್ಲೆಡೆ ಅಪೇಕ್ಷಿತವಲ್ಲ. ಲೇಖಕರೇ, ತತ್ವ ಜ್ಞಾನದ ಮೂಲದಲ್ಲಿ ಸಮಾಜಶಾಸ್ತ್ರವು ಇದೇ ಸಿದ್ಧಾಂತವನ್ನು ಕಡ್ಡಾಯ ಪಡಿಸುತ್ತದೆ. ಅನಿಸಿದ್ದೆಲ್ಲ ಬರೆಯಲೇ ಬೇಕು ಎಂದಿಲ್ಲ. ಭೇದ ಭಾವ ವನ್ನು ಹುಗಿದು ಸಮ್ಮತವಿಚಾರಗಳಿಗೆ ನೀರೆರೆದರೆ ಎಲ್ಲೆಲ್ಲೂ ಸ್ವರ್ಗವನ್ನು ಕಾಣುವೆವು.

    ಉತ್ತರ
    • WITIAN
      ಜುಲೈ 5 2015

      ನಾಯಕರೆ, ಆ ಪ್ರಶ್ನಾರ್ಥಕ ಚಿಹ್ನೆ ಸಮಂಜಸವಾಗಿಯೇ ಇದೆ. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳೆಂಬ ಎರಡು ತುಂಡುಗಳು ಬೇರೆಯಾದ, ಅಗಣಿತ ಸ್ವಾತಂತ್ರ್ಯ ಹೋರಾಟಗಾರರು ಕನಸನ್ನು ಭಗ್ನಗೊಳಿಸಿದ, ತುಂಡಾದ ಭಾರತಕ್ಕೆ ಪ್ರಥಮ ಪ್ರಧಾನಿ ಆದವರು ಜವಾಹರಲಾಲ್ ನೆಹರು. ವಸ್ತುಸ್ಥಿತಿ ಹೀಗಿದ್ದರೂ ‘ಅಖಂಡ ಭಾರತ’ದ ಪ್ರಥಮ ಪ್ರಧಾನಿ ಎಂದು ನೆಹರೂ ಅವರನ್ನು ಕರೆಯಲು ಹೇಗೆ ಸಾಧ್ಯ?

      ಉತ್ತರ
  4. Shashidhar Giddappagoudar
    ಜೂನ್ 2 2013

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments