ವಿಷಯದ ವಿವರಗಳಿಗೆ ದಾಟಿರಿ

ಜೂನ್ 3, 2013

4

ಗಾಂಧಿ ಕ್ಲಾಸು: ಸೃಜನಶೀಲ ಬದುಕಿನ ವಿಭಿನ್ನ ಮುಖಗಳು

‍ರಾಕೇಶ್ ಶೆಟ್ಟಿ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ

Gaandhi Clasu‘ಬದುಕು ನನ್ನನ್ನು ರೂಪಿಸಿತೋ, ನಾನೇ ನನ್ನ ಬದುಕನ್ನು ಹೀಗೆ ರೂಪಿಸಿಕೊಂಡೆನೋ ಆದರೆ ಒಂದಂತೂ ಸತ್ಯ ನನ್ನೀ ಬದುಕು ನನ್ನ ಪ್ರಾರಬ್ಧ ಮತ್ತು ಸವಾಲಿನದು. ನಾನು ಬಾಲ್ಯವನ್ನಾಗಲೀ ಹದಿಹರೆಯದ ದಿನಗಳನ್ನಾಗಲೀ ಉತ್ಕಟವಾಗಿ ಎಲ್ಲರಂತೆ ಅನುಭವಿಸುವುದು ಆಗಲೇ ಇಲ್ಲ. ದುರ್ಬರ ಬದುಕು ಅದಕ್ಕೆ ಆಸ್ಪದ ಮಾಡಿಕೊಡಲೇ ಇಲ್ಲ. ಬಾಲ್ಯದ, ಹದಿಹರೆಯದ ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ನನ್ನ ಕಣ್ಣುಗಳು ಒದ್ದೆಯಾಗಿರುವುದೂ ಉಂಟು. ಹಿಂಬಾಲಿಸುತ್ತಲೇ ಇದ್ದ ಆತಂಕ, ಅನಿಶ್ಚಿತತೆಗಳನ್ನು ನಿರಾಸೆಗೊಳಿಸಿ ಬದುಕು ಅರವತ್ತರ ಹೊಸ್ತಿಲ ಬಳಿ ತಂದು ನಿಲ್ಲಿಸಿರುವುದು ಪವಾಡವೇ ಸರಿ.’ ಈ ಸಾಲುಗಳು ಇತ್ತೀಚಿಗೆ ನಾನು ಓದಿದ ‘ಗಾಂಧಿ ಕ್ಲಾಸು’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.

‘ಗಾಂಧಿ ಕ್ಲಾಸು’ ಕನ್ನಡದ ಖ್ಯಾತ ಬರಹಗಾರ ಕುಂವೀ ಎಂದೇ ಹೆಸರಾದ ಕುಂಬಾರ ವೀರಭದ್ರಪ್ಪನವರ ಆತ್ಮಕಥನ. ಕುಂವೀ ನಾನು ಮೆಚ್ಚುವ ಹಾಗೂ ಅತಿಯಾಗಿ ಹಚ್ಚಿಕೊಂಡಿರುವ ಲೇಖಕರಲ್ಲೊಬ್ಬರು. ಅವರ ಆತ್ಮಕಥನ ಪ್ರಕಟವಾಗಿದೆ ಎಂದು ಗೊತ್ತಾದದ್ದೆ ತಡ ಓದಲೇ ಬೇಕೆನ್ನುವ ಉತ್ಕಟ ಆಸೆ ಪುಸ್ತಕವನ್ನು ಹುಡುಕಿಕೊಂಡು ಹೋಗಿ ಖರೀದಿಸಿ0iÉುೀ ಬಿಟ್ಟಿತು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಕುಂ.ವೀರಭದ್ರಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 2009ರಲ್ಲಿ ನಿವೃತ್ತರಾಗಿರುವರು. ನೂರಾರು ಕಥೆಗಳನ್ನು ಬರೆದಿರುವ ಇವರು ಕಾದಂಬರಿಗಳು ಮತ್ತು ಜೀವನ ಚರಿತ್ರೆಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವರು. ಅವರ ಅನೇಕ ಕಥೆಗಳು ಹಾಗೂ ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಜೊತೆಗೆ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸಂಧಿವೆ. ಅದು ಕಥೆ ಇರಲಿ, ಕಾದಂಬರಿಯಾಗಲಿ, ಜೀವನ ಚರಿತ್ರೆ ಇರಲಿ ಪ್ರತಿಯೊಂದರಲ್ಲಿ ಕುಂವೀ ಶೈಲಿ ತನ್ನ ಛಾಪು ಮೂಡಿಸಿ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ತಮ್ಮ ಕೃತಿಗಳ ಓದಿಗಾಗಿ ಓದುಗರ ಒಂದು ವಲಯವನ್ನೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಬರಹಗಾರ ಕುಂವೀ. ಹಲವು ದಶಕಗಳಿಂದ ಕನ್ನಡದ ಸಾಹಿತ್ಯಾಸಕ್ತರನ್ನು ಕಾಡುತ್ತಲೇ ಬಂದಿರುವ ಈ ಲೇಖಕನ ವೈಯಕ್ತಿಕ ಬದುಕು ಹೇಗಿರಬಹುದೆಂಬ ಕುತೂಹಲ ನನ್ನದಾಗಿತ್ತು. ‘ಗಾಂಧಿ ಕ್ಲಾಸು’ ಆ ಕೃತಿ ಕೈಯಲ್ಲಿ ಹಿಡಿದ ಘಳಿಗೆ ಅದು ಹೇಗೆ ಸಮಯ ಸರಿದು ಹೋಯಿತು ಎಂದು ಅರಿವಿಗೆ ಬರದಂತೆ ಆರು ದಶಕಗಳ ಕುಂವೀ ಬದುಕು ಕಣ್ಣೆದುರು ಅನಾವರಣಗೊಂಡಿತು.

ಅದು ವ್ಯಕ್ತಿಯೋರ್ವನ ತೀರ ಖಾಸಗಿ ಬದುಕು ಎನ್ನುವುದಕ್ಕಿಂತ ಅದೊಂದು ಆರು ದಶಕಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ತವಕ, ತಲ್ಲಣ ಹಾಗೂ ಹಿರಿಮೆಗಳ ಹಿನ್ನೋಟ. ಈ ಹಿನ್ನೋಟದಲ್ಲಿ ಅಪ್ರತಿಮ ಸಾಧಕನ ಯಶೋಗಾಥೆ ಇದೆ, ಎದುರಾದ ಸಂಕಷ್ಟಗಳಿವೆ, ಸಂಪ್ರದಾಯಗಳ ಸಂಘರ್ಷವಿದೆ, ಸಾರಸ್ವತ ಲೋಕದ ಸಣ್ಣತನಗಳಿವೆ, ಶೋಷಿತರ ಬದುಕಿನ ಬವಣೆಗಳಿವೆ ಇವುಗಳೆಲ್ಲವನ್ನೂ ಮೀರಿ ಕುಂವೀ ಅವರ ಮುಗ್ಧತೆ ಇಲ್ಲಿ ಮೈಚಾಚಿಕೊಂಡಿದೆ. ಸಾರಸ್ವತ ಲೋಕದ ಏನೆಲ್ಲ ಸಣ್ಣತನಗಳ ನಡುವೆಯೂ ತನ್ನ ಮುಗ್ಧತೆಯನ್ನು ಉಳಿಸಿಕೊಂಡಿರುವ ಆ ಲೇಖಕನನ್ನು ನಾನು ಕೈಹಿಡಿದು ತಂದು ಮತ್ತೆ ‘ಸಮಾಚಾರ’ ಪತ್ರಿಕೆ ಎದುರು ನಿಂತಿದ್ದೇನೆ. ಓದಿ ನೋಡಿ ಇನ್ನು ನೀವುಂಟು ಮತ್ತು ಕು.ವೀರಭದ್ರಪ್ಪನವರುಂಟು. ನಿಮ್ಮಿಬ್ಬರ ನಡುವೆ ನನಗೇನು ಕೆಲಸ.

‘ಅದ್ಯಾಕೆ ಬಾಪೂಜಿ ನೀವು ಮೂರನೆ ತರಗತಿಯ ಭೋಗಿಗಳಲ್ಲಿ ಪ್ರಯಾಣಿಸುವುದು?’ ‘ನಾಲ್ಕನೇ ತರಗತಿಯ ಭೋಗಿಗಳಿಲ್ವಲ್ಲ ಅದಕ್ಕೆ’ ಕುಂವೀ ಅವರ ಆತ್ಮಕಥನ ಪ್ರಾರಂಭವಾಗುವುದೇ ಈ ಸಾಲುಗಳೊಂದಿಗೆ. ತಮ್ಮ ಆತ್ಮಕಥೆಯನ್ನು ಹೇಳುತ್ತ ಹೋಗುವ ಲೇಖಕರು ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ ‘ಹನುಮಂತನ ಬಾಲದೋಪಾದಿಯಲ್ಲಿರುವ ಘಟನೆಗಳು ಒಂದೇ ಎರಡೇ ಲೆಕ್ಕಹಾಕಿದಲ್ಲಿ ನೂರಾರು, ಸಾವಿರಾರು. ಇವುಗಳ ಪೈಕಿ ಕೆಲವು ಮುಖ್ಯವಾದವುಗಳನ್ನು ಪ್ರಸ್ತಾಪಿಸದಿದ್ದಲ್ಲಿ ನನ್ನ ಆತ್ಮಕಥೆ ಬಾಲ್ಕನಿಯಾಗಬಹುದೇ ಹೊರತು ಗಾಂಧಿ ಕ್ಲಾಸ್ ಆಗಲಾರದು’. ಒಟ್ಟಾರೆ ಗಾಂಧಿ ಕ್ಲಾಸ್ ಅದು ಸರಳತೆಯ, ಬಡತನದ ಹಾಗೂ ಸಾವಿರಾರು ಸಂಕಷ್ಟಗಳ ಸಂಕೇತ. ಕುಂವೀ ಅವರ ಬದುಕು ಕೂಡ ದಾರಿದ್ರ್ಯ, ಸಂಕಟಗಳ ಮತ್ತು ಸರಳತೆಯ ಸಮ್ಮಿಶ್ರಣ. ಅದಕ್ಕೆಂದೆ ಅವರು ತಮ್ಮ ಆತ್ಮಕಥನಕ್ಕೆ ‘ಗಾಂಧಿ ಕ್ಲಾಸು’ ಎಂದು ಹೆಸರಿಸುತ್ತಾರೆ.

ಸಪ್ನ ಬುಕ್ ಹೌಸ್‍ನವರು ಪ್ರಕಟಿಸಿರುವ 390 ಪುಟಗಳಿಗೆ ವಿಸ್ತರಿಸಿರುವ ಆತ್ಮಕಥನ ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಅನಾವರಣಗೊಂಡಿದೆ. ಕುಂವೀ ಇಲ್ಲಿನ ಪ್ರತಿಯೊಂದು ಅಧ್ಯಾಯವನ್ನು ಓಣಿ ಎನ್ನುವ ಅನ್ವರ್ಥನಾಮದಿಂದ ಕರೆದಿರುವರು. ಪ್ರಾರಂಭದ ಎರಡು ಅಧ್ಯಾಯಗಳಲ್ಲಿನ ಬರವಣಿಗೆಯನ್ನು ಲೇಖಕರು ತಮ್ಮ ತಂದೆಗಾಗಿ ಮೀಸಲಿಟ್ಟಿರುವರು. ಅಪ್ಪನ ದೈಹಿಕ ಸೌಂದರ್ಯ, ಆತನೊಳಗಿನ ಸಿಟ್ಟು, ಹಟ, ಬಡವರ ಕುರಿತು ಇರುವ ಅನುಕಂಪ, ಮಗನನ್ನು ಓದಿಸಿ ದೊಡ್ಡ ವ್ಯಕ್ತಿಯನ್ನಾಗಿಸಬೇಕೆನ್ನುವ ಹಂಬಲ ಹೀಗೆ ಅಪ್ಪನ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಈ ಎರಡು ಅಧ್ಯಾಯಗಳಲ್ಲಿ ಪರಿಚಯಿಸುತ್ತಾರೆ. ತಂದೆಯ ಅತಿಯಾದ ಕೋಪ ಮತ್ತು ಹಟ ಒಮ್ಮೊಮ್ಮೆ ಸಿಟ್ಟು ತರಿಸಿದರೆ ಮಗದೊಮ್ಮೆ ಮಕ್ಕಳಿಗಾಗಿ ಅಹರ್ನಿಶಿ ದುಡಿಯುತ್ತಿರುವ ಅಪ್ಪ ಆದರ್ಶಪ್ರಾಯನಾಗುತ್ತಾನೆ. ಅಪ್ಪನಲ್ಲಿದ್ದ ಆದರ್ಶ ಮತ್ತು ಸಿಟ್ಟಿನ ಸ್ವಭಾವದಿಂದ ಆಸ್ತಿಯನ್ನೆಲ್ಲ ಕಳೆದುಕೊಂಡು ನಾವು ಬಡತನದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು ಎಂದು ಹೇಳುವ ಕುಂವೀ ತಂದೆಯ ಸಾವಿನ ನಂತರ ಇರುವ ಸಾಲವನ್ನೆಲ್ಲ ತೀರಿಸಿ ಅಪ್ಪನನ್ನು ಋಣಮುಕ್ತನನ್ನಾಗಿಸುವ ಸನ್ನಿವೇಶ ಓದುಗರ ಮನಸ್ಸನ್ನು ಆರ್ದ್ರವಾಗಿಸುತ್ತದೆ. ಆ ಸಂದರ್ಭ ಅರಿವಿಲ್ಲದೆ ಕಣ್ಣೀರು ಕಪಾಲಕ್ಕಿಳಿದು ಭಾವ ತೀವೃತೆಯಿಂದ ಹೃದಯ ಹೊಯ್ದಾಡುತ್ತದೆ.

ನಂತರದ ಅಧ್ಯಾಯಗಳಲ್ಲಿ ಕುಂವೀ ಶಿಕ್ಷಣ, ನಿರುದ್ಯೋಗ, ದಿನಗೂಲಿಯಾಗಿ ಕೆಲಸ ಮಾಡಿದ ಸಂದರ್ಭಗಳನ್ನು ಕುರಿತು ಹೇಳಿಕೊಂಡಿರುವರು. ಒಂದು ಸಂದರ್ಭ ಮನೆಯಿಂದ ದೂರಾಗಿ ಕೆಲಸ ಸಿಗದೆ 36 ಗಂಟೆಗಳ ಕಾಲ ಉಪವಾಸವಿದ್ದ ಪ್ರಸಂಗವನ್ನು ಓದುವಾಗ ಕಣ್ಣುಗಳು ಮತ್ತೊಮ್ಮೆ ಹನಿಗೂಡುತ್ತವೆ. ಆ ಸಮಯ ಯುವ ಈರಭದ್ರನಲ್ಲಿರುವ ಹಸಿವನ್ನು ಗುರುತಿಸಿ ತಾನು ತಂದ ಬುತ್ತಿಯನ್ನೇ ಅರ್ಧ ಹಂಚಿಕೊಂಡು ಉಣ್ಣುವ ದುರುಗ್ಯಾ ನಾಯ್ಕನನ್ನು ಅವನ ಕೊನೆಗಾಲದಲ್ಲಿ ಸತ್ಕರಿಸುವ ಕುಂವೀ ವ್ಯಕ್ತಿತ್ವ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.

ಪುಸ್ತಕದ ಒಂಬತ್ತನೇ ಅಧ್ಯಾಯ ಕುಂವೀ ಬದುಕಿನ ಬಹುಮುಖ್ಯ ತಿರುವಿಗೆ ಸಂಬಂಧಿಸಿದೆ. ‘ನೀನು ಯಾವುದೇ ಕಾರಣಕ್ಕೂ ಊರಿಗೆ ವಾಪಸು ಬರಕೂಡದು. ತೊಲಗು ಇಲ್ಲಿಂದ. ಮುಂದೆಯೂ ನಿನ್ನ ಮುಖ ತೋರಿಸಬೇಡ’ ಹೆತ್ತ ಅಪ್ಪನೇ ಫತ್ವಾ ಹೊರಡಿಸಿದ ಮೇಲೆ ಅದು ಗಡಿಪಾರೋ, ಬಹಿಷ್ಕಾರವೋ ಯಾವ ಸುಡುಗಾಡೆಂಬುದು ತಿಳಿಯದು ಎನ್ನುತ್ತ ಊರು ಬಿಟ್ಟು ಹೊರಡುವ ಕುಂವೀ ನೇರವಾಗಿ ಹೋಗಿ ಸೇರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲ್ಲೂಕಿಗೆ ಸೇರಿದ ವಾಗಿಲಿ ಎನ್ನುವ ಕುಗ್ರಾಮವನ್ನು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಪುಟ್ಟ ಗ್ರಾಮವನ್ನು ಸೇರಿಕೊಳ್ಳುವ ಕುಂವೀಗೆ ನಂತರದ ದಿನಗಳಲ್ಲಿ ಆ ಗ್ರಾಮ ಅವರಲ್ಲಿನ ಅಭಿವ್ಯಕ್ತಿ ಮಾಧ್ಯಮಕ್ಕೆ ವೇದಿಕೆಯಾಗುತ್ತ ಹೋಗುತ್ತದೆ. ಗಾಂಧಿ ಕ್ಲಾಸಿನ ಕಥಾನಾಯಕನ ಬದುಕಿಗೆ ಒಂದು ಸೃಜನಶೀಲತೆಯ ಆಯಾಮ ದೊರೆಯುವುದು ವಾಗಿಲಿ ಎನ್ನುವ ಪುಟ್ಟ ಪ್ರಪಂಚದಲ್ಲೇ. ವಾಗಿಲಿ ಅವರಿಗೆ ಬಡತನ, ಅಜ್ಞಾನ, ಅಂಧಾನುಕರಣೆ, ಶೋಷಣೆ, ವರ್ಗ ಸಂಘರ್ಷ, ದಬ್ಬಾಳಿಕೆ, ಜೀತ ಪದ್ಧತಿ, ಸೇಡು, ಪ್ರತಿಕಾರ, ಮುಗ್ಧತೆ, ಸುಶಿಕ್ಷಿತರ ಸಣ್ಣತನ ಹೀಗೆ ಅನೇಕ ವಿಷಯಗಳನ್ನು ಪರಿಚಯಿಸುತ್ತ ಹೋಗುತ್ತದೆ. ಅವರ ಕಥೆ, ಕಾದಂಬರಿಗಳ ರಚನೆಗೆ ವಾಗಿಲಿ ಸ್ಫೂರ್ತಿಯ ಸೆಲೆಯಾಗುತ್ತದೆ. ಇಲ್ಲಿ ಕುಂವೀ ಬದುಕಿನ ಜೊತೆ ಜೊತೆಗೆ ಆಂಧ್ರದ ರಾಯಲಸೀಮಾದ ರಕ್ತಸಿಕ್ತ ಚರಿತ್ರೆ ನಮ್ಮೆದುರು ತೆರೆದುಕೊಳ್ಳುತ್ತದೆ. ಓದುತ್ತ ಹೋದಂತೆ ಇದು ಆತ್ಮಕಥೆಯೋ ಅಥವಾ ರೋಚಕ ನಿರೂಪಣೆಯಿಂದ ಕೂಡಿದ ಕಾದಂಬರಿಯೋ ಎನ್ನುವ ಅನುಮಾನ ಒಂದು ಹಂತದಲ್ಲಿ ಓದುಗನ ಮನಸ್ಸಿನಲ್ಲಿ ಮೂಡದೇ ಇರದು. ಕುಂವೀ ಇಲ್ಲಿ ಬಳಸಿಕೊಂಡಿರುವ ಭಾಷಾ ಶೈಲಿಯು ತುಂಬ ವಿಶಿಷ್ಟವಾಗಿದ್ದು ಆಕರ್ಷಕವಾಗಿದೆ. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಬಯಲು ಸೀಮೆಯ ಆಡು ಭಾಷೆಯನ್ನು ಇಲ್ಲಿ ಲೇಖಕರು ದುಡಿಸಿಕೊಂಡ ರೀತಿ ಓದುಗನಿಗೆ ಮೆಚ್ಚುಗೆಯಾಗುತ್ತದೆ. ಈ ಗ್ರಾಮದಲ್ಲೇ ತಿಮ್ಮಯ್ಯಶೆಟ್ಟಿ, ಲಕ್ಷ್ಮೀರೆಡ್ಡಿ, ಜೀರ್ರನಾರಾಣಿ, ಗುರುಬಸಪ್ಪ, ಲಿಂಗಾರೆಡ್ಡಿ, ಶಿವಮೂರ್ತಿಶರ್ಮ, ಜಲಜ, ಮಾನಪ್ಪಾಚಾರಿ, ಮೂಲಿಮನಿ ಗೌಡರಂಥ ಮೇಲ್ವರ್ಗದವರ ತಿಮ್ಮ, ತಳವಾರ ನಾರಾಣಿ, ಲಸುಮವ್ವ, ಕರಿಯಾ, ಕುಡುಕ, ಸವಾರೆಕ್ಕನಂಥ ಕೆಳವರ್ಗದವರ ಪರಿಚಯ ಲೇಖಕರಿಗಾಗುತ್ತದೆ. ಇಲ್ಲಿನ ಪ್ರತಿಯೊಂದು ಪಾತ್ರ ಒಂದೊಂದು ಕಥೆಯನ್ನು ಹೇಳುತ್ತವೆ. ಯಾವ ವಿಶ್ವವಿದ್ಯಾಲಯ ಮತ್ತು ಅಕಾಡೆಮಿ ಕಟ್ಟಿಕೊಡದ ಅನುಭವವನ್ನು ವಾಗಿಲಿ ನನಗೆ ನೀಡಿತು ಎಂದು ಹೇಳುವ ಲೇಖಕರು ಒಂದು ಹಂತದಲ್ಲಿ ನನ್ನೊಳಗಿನ ಸೃಜನಶೀಲತೆ ಕಥೆ, ಕವನ, ಕಾದಂಬರಿಗಳ ವಿವಿಧ ಅಭಿವ್ಯಕ್ತಿ ಮಾಧ್ಯಮಕ್ಕೆ ವಿಸ್ತರಿಸುತ್ತ ಹೋಗಲು ಆ ಪುಟ್ಟ ಗ್ರಾಮವೇ ಕಾರಣ ಎಂದು ತಮ್ಮ ಕೃತಜ್ಞತೆ ಮೆರೆಯುತ್ತಾರೆ. ಬಂಡಾಯ ಮನೋಭಾವದ ಕುಂವೀ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆ ಗ್ರಾಮವನ್ನು ಪ್ರವೇಶಿಸಿ ಮುಂದೊಂದು ದಿನ ಅಲ್ಲಿ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾಗುತ್ತಾರೆ. ನಂತರದ ದಿನಗಳಲ್ಲಿ ಆ ಸಾಮಾಜಿಕ ಪರಿವರ್ತನೆ0iÉುೀ ಲೇಖಕರು ವಾಗಿಲಿಯನ್ನು ಬಿಡಲು ಕಾರಣವಾಗುವುದು ಮಾತ್ರ ವಿಪರ್ಯಾಸದ ಸಂಗತಿ.

ಹತ್ತನೇ ಅಧ್ಯಾಯ ಲೇಖಕರು ಗೂಳ್ಯಂನಲ್ಲಿ ಕಟ್ಟಿಕೊಂಡ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ನಕ್ಸಲ್‍ರ ಪರಿಚಯ, ರಾಯಲಸೀಮಾದಲ್ಲಿನ ಹೊಡೆದಾಟಗಳು, ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ, ಶಾಮಣ್ಣ ಕಾದಂಬರಿಯ ರಚನೆ ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ.
ಕುಂವೀ ಅವರ ವೃತ್ತಿ ಬದುಕಿನ ಕೊನೆಯ ದಿನಗಳು ಹನ್ನೊಂದನೇ ಅಧ್ಯಾಯದಲ್ಲಿ ತೆರೆದುಕೊಳ್ಳುತ್ತವೆ. ಗೂಳ್ಯಂನಿಂದ ಹಿರೇಹಾಳಿಗೆ ಬಂದು ನೆಲೆಸುವ ಕುಂವೀ ಇಲ್ಲಿ ತಮ್ಮ ಮಹತ್ವಾಕಾಂಕ್ಷೆಯ ‘ಅರಮನೆ’ ಕಾದಂಬರಿಯನ್ನು ಬರೆಯುತ್ತಾರೆ. ಅರಮನೆಯಂಥ ಬೃಹತ್ ಕಾದಂಬರಿಯನ್ನು ಬರೆಯಬೇಕೆನ್ನುವ ತುಡಿತ, ಪಾತ್ರಗಳ ಹುಡುಕಾಟ, ಅರಮನೆಗಳನ್ನು ಹುಡುಕುತ್ತ ಅಲೆದಾಟ, ಕಟ್ಟಿ ಕೆಡವಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ, ಕೊನೆಗೂ ಹದಿನೈದು ವರ್ಷಗಳ ಕಾಲ ಕಾಡಿದ ಸೃಜನಶೀಲ ತಾಕತ್ತು ಕೃತಿಯಾಗಿ ರೂಪಾಂತರಗೊಂಡ ಸಂದರ್ಭ ಇದೆಲ್ಲವನ್ನು ಲೇಖಕರು ಕೊನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ.
ಪುಸ್ತಕದ ಅಲ್ಲಲ್ಲಿ ಇನ್ನು ಅನೇಕ ವಿಷಯಗಳು ಓದಲು ಸಿಗುತ್ತವೆ. ಶೋಷಣೆಯ ವಿರುದ್ಧ ಕುಂವೀ ಹೋರಾಟ, ಅವರ ಅಕ್ಷರ ಕ್ರಾಂತಿ, ಬಣ್ಣದ ಬದುಕಿನ ಜನರ ಸಣ್ಣತನ, ಸಾಹಿತ್ಯಿಕ ಬದುಕು ತಂದೊಡ್ಡಿದ ಅವಾಂತರಗಳು, ರೌಡಿಗಳೊಂದಿಗಿನ ಒಡನಾಟ ಪ್ರತಿಯೊಂದು ಓದುತ್ತ ಹೋದಂತೆ ಒಂದು ಸೃಜನಶೀಲ ಬದುಕಿನ ವಿಭಿನ್ನ ಮುಖಗಳು ಓದುಗರೆದುರು ಅನಾವರಣಗೊಳ್ಳುತ್ತವೆ. ಜೊತೆಗೆ ಕುಂವೀ ಆಗೊಮ್ಮೆ ಈಗೊಮ್ಮೆ ಕಚುಗುಳಿಯಿಟ್ಟು ಓದುಗರನ್ನು ನಕ್ಕು ನಗಿಸುತ್ತಾರೆ. ಒಟ್ಟಿನಲ್ಲಿ ಪುಸ್ತಕವನ್ನು ಓದಿ ಮುಗಿಸಿದ ನಂತರವೂ ಕುಂವೀ ಎನ್ನುವ ಸೃಜನಶೀಲ ವ್ಯಕ್ತಿತ್ವ ನಮ್ಮನ್ನು ಅನೇಕ ದಿನಗಳವರೆಗೆ ಕಾಡುತ್ತದೆ.
ವಾಗಿಲಿ ಎನ್ನುವ ಮಾಲ್ಗುಡಿ
ವಾಗಿಲಿ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿರುವ ಆಂಧ್ರಪ್ರದೇಶಕ್ಕೆ ಸೇರಿದ ಒಂದು ಪುಟ್ಟ ಊರು. ಹೊರ ಪ್ರಪಂಚದಿಂದ ದೂರವೇ ಉಳಿದ ಕುಗ್ರಾಮವದು. ಪನಿಷ್‍ಮೆಂಟ್ ಪ್ಲೇಸ್ ಎಂದೇ ಹೆಸರಾದ ಆ ಊರಿಗೆ ಕುಂವೀ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಬದುಕಿನ ಮೊದಲ ದಿನದಂದೇ ಕಾಲಿಡುತ್ತಾರೆ. ಅಲ್ಲಿ ಅವರಿಗೆ ಅನೇಕ ವ್ಯಕ್ತಿಗಳ ಒಡನಾಟದ ಜೊತೆಗೆ ಬಡತನ, ಅಜ್ಞಾನ, ಶೋಷಣೆಗಳ ಪರಿಚಯವಾಗುತ್ತದೆ. ಅದರೊಂದಿಗೆ ಅವರ ಅಭಿವ್ಯಕ್ತಿ ಮಾಧ್ಯಮವಾದ ಬರವಣಿಗೆಗೆ ವಿಷಯವಸ್ತು ಸಮೃದ್ಧವಾಗಿ ಲಭಿಸಲಾರಂಭಿಸುತ್ತದೆ. ಆ ಕುಗ್ರಾಮದಲ್ಲೇ ಕುಂವೀ ಅವರ ಸಾಹಿತ್ಯಿಕ ಬದುಕು ಅರಳಿಕೊಳ್ಳುವುದರೊಂದಿಗೆ ಕಥೆ, ಕಾದಂಬರಿಗಳ ಬರವಣಿಗೆಯಿಂದ ಜನಪ್ರಿಯತೆ ಮತ್ತು ಆತ್ಮವಿಶ್ವಾಸ ಅವರದಾಗುತ್ತದೆ. ಒಂದು ಸೃಜನಶೀಲ ಬದುಕಿಗೆ ಅಗತ್ಯವಾದ ಸ್ಫೂರ್ತಿಯನ್ನು ಮೊಗೆ ಮೊಗೆದು ಕೊಟ್ಟ ವಾಗಿಲಿಗೆ ಸಹಜವಾಗಿ0iÉುೀ ಕುಂವೀ ತಮ್ಮ ಆತ್ಮಕಥನದಲ್ಲಿ ಮಹತ್ವದ ಸ್ಥಾನ ನೀಡಿರುವರು. ವಾಗಿಲಿ ಇಲ್ಲಿ ಕೇವಲ ಒಂದು ಭೌತಿಕ ವಸ್ತು ಎಂದೆನಿಸಿಕೊಳ್ಳದೆ ಅದೊಂದು ಪಾತ್ರವಾಗಿ ಮೈದಾಳಿ ನಿಂತಿದೆ. ವಾಗಿಲಿಯ ರಸ್ತೆಗಳು, ಅಲ್ಲಿನ ಮನೆಗಳು, ಹಳ್ಳ ಕೊಳ್ಳಗಳು, ಗಿಡ ಗಂಟಿಗಳು, ಅಲ್ಲಿನ ಬಿರು ಬಿಸಿಲು, ಹೊಲಗದ್ದೆಗಳನ್ನು ಕುಂವೀ ಅತ್ಯಂತ ಆಕರ್ಷಕವಾಗಿ ಚಿತ್ರಿಸಿರುವರು. ಪುಸ್ತಕವನ್ನು ಓದುತ್ತ ಹೋದಂತೆ ಓದುಗನಿಗೆ ವಾಗಿಲಿಯಲ್ಲೇ ಓಡಾಡಿದಂಥ ಅನನ್ಯ ಅನುಭವವಾಗುತ್ತದೆ.
ಕೊನೆಯ ಮಾತು
ಕುಂವೀ ಕನ್ನಡದ ಓದುಗರಿಗೆ ಇಷ್ಟವಾಗಲು ಅನೇಕ ಕಾರಣಗಳಿವೆ. ವಿಶ್ವವಿದ್ಯಾಲಯ ಮತ್ತು ಅಕಾಡೆಮಿಕ್ ಹಿನ್ನೆಲೆಯಿದ್ದೂ ತಮ್ಮ ಬರವಣಿಗೆಯನ್ನು ನಿರ್ಧಿಷ್ಟ ಕೋಮಿಗೆ, ಸಂಪ್ರದಾಯಕ್ಕೆ ಸೀಮಿತಗೊಳಿಸಿಕೊಂಡಿರುವ ಲೇಖಕರ ನಡುವೆ ಕುಂವೀ ತಮ್ಮ ವಿಶಾಲ ಮನೋಭಾವದಿಂದ ನಮಗೆಲ್ಲ ಇಷ್ಟವಾಗುತ್ತಾರೆ. ಕುಗ್ರಾಮದಲ್ಲಿದ್ದುಕೊಂಡೆ ಚಾರ್ಲಿ ಚಾಪ್ಲಿನ್ ಕುರಿತು ಬೃಹತ್ ಪುಸ್ತಕ ಬರೆಯುತ್ತಾರೆ. ಯಾವ ಅಕಾಡೆಮಿಕ್ ಹಿನ್ನೆಲೆ ಇಲ್ಲದೆಯೂ ಲೇಖಕನೋರ್ವ ಜಗತ್ತಿನ ಆಗು ಹೋಗುಗಳಿಗೆ ತೆರೆದುಕೊಳ್ಳುವ ರೀತಿ ಇದು ಕುಂವೀ ಅವರ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ಅವರ ‘ಗಾಂಧಿ ಕ್ಲಾಸು’ ಕುಂವೀ ಹೇಗಿರುವರು ಎನ್ನುವ ಕುತೂಹಲಕ್ಕೊಂದು ಉತ್ತರ. ಪುಸ್ತಕದ ಯಾವ ಭಾಗದಲ್ಲೂ ಕಥಾ ನಾಯಕ ಸ್ವಹೊಗಳುವಿಕೆಯ ಆತ್ಮರತಿಗೆ ಇಳಿಯದಿರುವುದು ನನಗೆ ಮೆಚ್ಚುಗೆಯಾದ ಅಂಶಗಳಲ್ಲೊಂದು.

ಚಿತ್ರ ಕೃಪೆ : http://cautiousmind.wordpress.com/

4 ಟಿಪ್ಪಣಿಗಳು Post a comment
 1. veerabhadrappa kumbar
  ಜೂನ್ 5 2013

  ನನ್ನ ಆತ್ಮಕಥೆ ಗಾಂಧಿಕ್ಲಾಸು ಕುರಿತು ನೀವು ಬರೆದಿರುವ ವಿಮರ್ಶೆ ತುಂಬಾ ಚೆನ್ನಾಗಿದೆ, ನಿಮಗೆ ಅನಂತ ಧನ್ಯವಾದಗಳು ಬಸವರಾಜ್

  ಉತ್ತರ
 2. veerabhadrappa kumbar
  ಜೂನ್ 5 2013

  raajkumar endu odikolli, basavaraj endu tappagi barediruve

  ಉತ್ತರ
 3. ಜೂನ್ 19 2013

  samajamukhiyagi chintisuva kelave lekhakarali kumbar veerabhadrappa avaru obbaru. avar atma kathe gandhi classu kuritu tavu barwediruva vimarshe vastavikatege tumba hattirvagide. nimminda innashtu srajanatmaka lekhanagalu horabarali.
  b.g.kulkarni

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments