ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2013

1

ಚೀನಿಗಳೊಂದಿಗಿನ ಯುದ್ಧ ಸೈನಿಕ ಕಾರ್ಯಾಚರಣೆಯೇ ಆಗಬೇಕಿಲ್ಲ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

chini yuddhaಮೂರುವರೆ ವರ್ಷಗಳ ಹಿಂದಿನ ಮಾತು.ಬಹುಷಃ ೨೦೦೯ರ ನವೆಂಬರ್ ತಿಂಗಳಿರಬಹುದು.ಪ್ರಧಾನಿ ಮ(ಮೌ?)ನಮೋಹನ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು.ಅದನ್ನು ಚೀನಾ ಖಡಕ್ ಆಗಿ ವಿರೋಧಿಸಿ, ’ನೀವು ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!’ ಅಂತ ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರಿತ್ತು.ಅಂದು ಅದು ಕ್ಯಾತೆ ತೆಗೆದಿದ್ದು ’ತವಾಂಗ್’ ನ ಕುರಿತಾಗಿ.

ಚೀನಿಗಳ ಬೆದರಿಕೆ ಬಗ್ಗೆ ಮಾತಡುವುದಕ್ಕಿಂತ ಮೊದಲು, ಏನಿದು ‘ತವಾಂಗ್’ ಅದಕ್ಕಾಗಿ ಯಾಕಿಷ್ಟು ಕಿತ್ತಾಟ? ಇದು ಯಾರಿಗೆ ಸೇರಿದ್ದು? ಭಾರತೀಯರಿಗೋ? ಚೀನಿಗಳಿಗೋ? ಈ ಮೊದಲು ಇದು ಯಾರಿಗೆ ಸೇರಿತ್ತು? ಅಂತ ನೋಡ ಹೊರಟರೆ, ಐತಿಹಾಸಿಕಾವಾಗಿ ಅಂದರೆ ೧೯೧೪ರಲ್ಲಿ ಬ್ರಿಟಿಷರು ಮೆಕ್-ಮಹೂನ್  ರೇಖೆಯನ್ನ ಗುರುತಿಸುವವರೆಗೂ ಅದು ಆಗಿನ ‘ಟಿಬೆಟ್’ ಗೆ ಸೇರಿತ್ತು. ೧೯೧೪ರಲ್ಲಿ ತವಾಂಗ್ ಅನ್ನು ೧೩ನೆ ಲಾಮ ಭಾರತಕ್ಕೆ ಬಿಟ್ಟು ಕೊಟ್ಟರು.ಆ ನಂತರ ಬಂದ ೧೪ನೆ ಅಂದರೆ ಈಗಿನ ‘ದಲೈ ಲಾಮ’ ಕೂಡ ತವಾಂಗ್ ಅನ್ನು ಭಾರತದ ಅಂಗವೆಂದೇ ಮಾನ್ಯ ಮಾಡಿದರು.

ಆದರೆ ೧೯೫೦ ರ ದಶಕದಲ್ಲಿ ಚೀನಿಗಳು ‘ಟಿಬೆಟ್’ ಅನ್ನು ಆಕ್ರಮಿಸಿಕೊಂಡರಲ್ಲ. ಈಗ ಅವರು ಹೇಳುವುದು , ‘ಒಂದು ಕಾಲದಲ್ಲಿ ತವಾಂಗ್ ಟಿಬೆಟ್ಗೆ ಸೇರಿತ್ತು, ಈಗ ಟಿಬೆಟ್ ನಮಗೆ ಸೇರಿದೆ, ಹಾಗಾಗಿ ಈ ತವಾಂಗ್ ನಮಗೆ ಸೇರಬೇಕು’ ಅಂತ (ಅದರ ಜೊತೆಗೆ ಇರಲಿ ಅಂತ ಇಡಿ ಅರುಣಾಚಲ ಪ್ರದೇಶವನ್ನು ಕೊಡಿ ಅನ್ನುತಿದ್ದಾರೆ).

ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಾಗ ವಿಶ್ವದ ರಾಷ್ಟ್ರಗಳೆಲ್ಲ ಚೀನಾದ ತಪ್ಪು ಮಾಡಿದೆ ಅಂತ ವಿಶ್ವ ಸಂಸ್ಥೆಯಲ್ಲಿ ಮಾತಾಡ ಹೊರಟರೆ, ನೆಹರು ಅದು ಚೀನಿಗಳ ಆಂತರೀಕ ವಿಷಯ ನಾವು ಮಾತಾಡೋದೇ ತಪ್ಪು, ಸುಮ್ಮನಿರಿ ಅಂದಿದ್ದರು! ಅಲ್ಲಿಗೆ ಟಿಬೆಟಿಯನ್ನರದು ಅರಣ್ಯ ರೋದನವಾಯ್ತು. ಮುಂದೊಂದು ದಿನ ಇದೆ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು  ಚೀನಿಗಳು ಬಳಸಬಹುದು ಎನ್ನುವ ಸಾಮನ್ಯ ಜ್ಞಾನವೂ ನೆಹರು ಸೇರಿದಂತೆ ಯಾವ ನಾಯಕರಿಗೆ ಅನ್ನಿಸಲೇ ಇಲ್ಲ.ಟಿಬೆಟ್ ಅನ್ನು ಆಕ್ರಮಿಸಿದ ನಂತರ ಚೀನಿಗಳು, ಗಡಿಯುದ್ದಕ್ಕೂ ರಸ್ತೆ,ಬಂಕರ್ಗಳನ್ನ ನಿರ್ಮಿಸಿದರು,ಸೇನಾ ಜಮಾವಣೆ ಮಾಡಿದರು.ಆದರೆ ನಮ್ಮ ‘ಕೆಂಪು ಗುಲಾಬಿ’ಯ ನಾಯಕ ಅವರ ಅಧಿಕಾರಿ ವರ್ಗ,ವಿರೋಧ ಪಕ್ಷ ಎಲ್ಲ ಎಲ್ಲರೂ ಧೀರ್ಘ ನಿದ್ರೆಯಲಿದ್ದರು. ಜನರಲ್ ತಿಮ್ಮಯ್ಯನಂತಹ ದಕ್ಷ ಮಿಲಿಟರಿ ಅಧಿಕಾರಿ ಮುಂದೆ ಇಂತ ಅನಾಹುತವನ್ನ ಊಹಿಸಿ ಮಿಲಿಟರಿ ಬಲಪಡಿಸ ಹೊರಟರೆ, ಅದಕ್ಕೆ ಅಡ್ಡಗಾಲು ಹಾಕಿದ್ದು ರಕ್ಷಣಾ ಮಂತ್ರಿ ಕೃಷ್ಣನ್ ಮೆನನ್!. ಈತನ ರಾಜಕೀಯದಿಂದ ಬೇಸತ್ತ ತಿಮ್ಮಯ್ಯ ರಾಜಿನಾಮೆ ನೀಡ ಹೊರಟರೆ ಕೆಂಪು ಗುಲಾಬಿ ತಡೆದು ಬಿಟ್ಟಿತು,ನಂತರ ಸದನದಲ್ಲಿ ‘ಕೆಂಪು ಗುಲಾಬಿ’ ಆ ವೀರ ಯೋಧನ ಬಗ್ಗೆ ಕೇವಲವಾಗಿ ಮಾತಾಡಿದ್ದರು.

ತಿಮ್ಮಯ್ಯ ನಿವೃತ್ತಿಯಾಗುತ್ತಲೇ, ರಾಜಕೀಯವನ್ನ ದೇಶದ ಸೈನ್ಯದೊಳಗೆ ನುಗ್ಗಿಸಿದ ಕೆಂಪು ಗುಲಾಬಿ, ಹುಡುಕಿ ಹುಡುಕಿ , ಅರ್ಹತೆ ಹಾಗು ಅನುಭವ ಎರಡು ಇಲ್ಲದ ‘ಕೌಲ್ ಮತ್ತೆ ಥಾಪರ್’ ಅನ್ನುವವರನ್ನ ಕರೆದು ಪಟ್ಟ ಕಟ್ಟಿತು.ಆ ಜಾಗಕ್ಕೆ ನ್ಯಾಯವಾಗಿ ಬರಬೇಕಾಗಿದ್ದ ದಕ್ಷ ಅಧಿಕಾರಿ ‘ಜನರಲ್ ಥೋರಟ್’ ಅವರಿಗೆ ಪಿಂಚಣಿ ಮಂಜೂರು ಮಾಡಿ ಬಿಟ್ಟರು.ಕಾರಣ,ಥೋರಟ್ ರಂತ ಅಧಿಕಾರಿ ಇವರ ಹುಚ್ಚತಕ್ಕೆ ಮಣಿಯುತ್ತಿರಲಿಲ್ಲ.ಅವರ ಹಿಂದೆಯೇ ಸಿಡಿದ್ದೆದು ರಾಜಿನಾಮೆ ನೀಡಿ ಹೋದವರು ಮತ್ತೊಬ್ಬ ಹಿರಿಯ ದಕ್ಷ ಅಧಿಕಾರಿ ‘ಜನರಲ್ ವರ್ಮಾ’. ‘ಫಾರ್ವರ್ಡ್ ಫಾಲಸಿ’ ಎಂಬ ಆಕ್ರಮಣಕಾರಿ ಕ್ರಮಕ್ಕೆ ಈ ಇಬ್ಬರು ಜನರಲ್ಗಳು ಸೊಪ್ಪು ಹಾಕಲಿಲ್ಲ ಎಂಬುದೇ ಅವರ ಮೇಲೆ ಕೆಂಪು ಗುಲಾಬಿಗೆ ಮುನಿಸು ಬರಲು ಕಾರಣ.ಭಾರತದ ಮಿಲಿಟರಿಯಲ್ಲಿ ಹೊಲಸು ರಾಜಕೀಯ ಈ ಪರಿ ರಾದ್ದಾಂತ ಮಾಡುತ್ತಲೇ, ಬಂದಿತ್ತು ನೋಡಿ ಇಸವಿ ೧೯೬೨!

ಅತ್ತ ಚೀನಿಗಳು ಸರ್ವ ಸನ್ನದ್ಧರಾಗಿದ್ದರೆ ಇತ್ತ  ನಮ್ಮ ನಾಯಕರಿಗೆ (?) ಇದ್ಯಾವುದರ ಪರಿವೆ ಇರಲಿಲ್ಲ.ಅವರಿನ್ನು ಕೆಂಪು ಗುಲಾಬಿ, ಬಿಳಿ ಪಾರಿವಾಳದ ಗುಂಗಿನಿಂದ ಹೊರ ಬಂದಿರಲೇ ಇಲ್ಲ.ವಿಪರ್ಯಾಸವೆಂದರೆ ಚೀನಿಗಳು ಮುಗಿಬಿದ್ದು ನಮ್ಮ ಸೈನಿಕರ ಬಲಿ ತೆಗೆದುಕೊಳ್ಳುತಿದ್ದರೆ, ಆ ನಾಯಕ ಮಾತ್ರ ಅದೇ ಬಿಳಿ ಪಾರಿವಾಳ,ಕೆಂಪು ಗುಲಾಬಿಯ ಗುಂಗಿನಲ್ಲಿ ವಿದೇಶ ಪ್ರವಾಸದಲ್ಲಿದ್ದರು, ಅವರ ಜೊತೆಗೆ ಅವನೊಬ್ಬ ರಕ್ಷಣಾ ಮಂತ್ರಿ ಅವನದು ಪ್ರವಾಸವೇ, ಇನ್ನುಳಿದ ಜನರಲ್ ಕೌಲ ಕಾಶ್ಮೀರದಲ್ಲಿ ರಜೆಯ ಮೋಜಿನಲ್ಲಿದ್ದ. ಅಲ್ಲಿ ದೂರದ ತವಾಂಗ್,ನಮ್ಕಾಚು,ಬೋಮ್ದಿಲದಲ್ಲಿ ನಮ್ಮ ಸೈನಿಕರು ಚೀನಿಗಳ ಗುಂಡಿಗೆ ಎದೆಯೊಡ್ಡಿ ಧರೆಗುರುಳುತಿದ್ದರು.

ಅಲ್ಲಿಗೆ ಭಾರತ ಅವಮಾನಕಾರಿ ಸೋಲೊಂದರ ಮುಂದೆ ಬಂದು ನಿಂತಿತ್ತು. ಛೆ! ಅದೆಂತ ಅವಮಾನಕರ ಸೋಲು.ನಿಜವೇನೆಂದರೆ ಆ ಯುದ್ಧದಲ್ಲಿ ನಾವು ಆಕ್ರಮಣ ಮಾಡಲೇ ಇಲ್ಲ ನಮ್ಮದೇನಿದ್ದರೂ ರಕ್ಷಣಾತ್ಮಕ ಆಟ. ಜೇಬಿನಲ್ಲಿದ್ದ ಹಿಡಿ ಕಾಡತೂಸು ಖಾಲಿಯಾಗುವವರೆಗಷ್ಟೇ ನಮ್ಮ ಸೈನಿಕರ ಹೋರಾಟ, ಆಮೇಲೆ ಚೀನಿ ಶತ್ರುವಿನ ಆರ್ಭಟ!  ಒಂದು ಬೆಚ್ಚನೆಯ ಅಂಗಿ,ಬೂಟು,ಬಂದೂಕು,ಬಾಂಬು,ಕನ್ನಡಕ,ಸರಿಯಾದ ಆಹಾರ,ಶಸ್ತ್ರ ಬಲ,ಸೈನ್ಯ ಬಲ ಯಾವುದನ್ನು ಕೊಡದೆ ನಮ್ಮ ಯೋಧರನ್ನ ಯುದ್ಧ ಭೂಮಿಗೆ ಕಳಿಸಿತ್ತು ನಮ್ಮ ಘನ ಸರ್ಕಾರ! ನಮ್ಮ ನಾಯಕರ ಹುಚ್ಚಾಟಕ್ಕೆ ಬಲಿಯಾದ ಯೋಧರ ಸಂಖ್ಯೆ ೨-೩ ಸಾವಿರ!

ಇಂದು ಭಾರತ ನಮ್ಮದು ನಮ್ಮದು ಅನ್ನುತ್ತಿರುವ ‘ತವಾಂಗ್’ ಅಂದು ಚೀನಿಗಳ ಕೈವಶವಾಗಿತ್ತು! ಅಂದು ಅಲ್ಲಿ ಹಾರಿದ್ದು ‘ಕೆಂಪು ಬಾವುಟ!’.ಅದೇ ಬಾವುಟವನ್ನ ಮತ್ತೊಮ್ಮೆ ನೆನಪಿಸಿಕೊಳ್ಳಿ ಅಂತ ಚೀನಿಗಳು ಹೇಳಿದ್ದು.ಅಂದು ಯುದ್ಧವೆಲ್ಲ ಮುಗಿದ ಮೇಲೆ ಚೀನಿಗಳು ಬೆನ್ನಿಗೆ ಹಿರಿದರು ಅಂತ ಗೋಳಾಡಿದ್ದರು ’ಕೆಂಪು ಗುಲಾಬಿ’ ನೆಹರು.ಆದರೆ,ಅವರನ್ನು ಹಿರಿಯುವಂತೆ ಆಹ್ವಾನಿಸಿದವರು ಯಾರು?

ಅಂದು ’ದೆಹಲಿ-ಬೀಜಿಂಗ್’ ಮಧ್ಯೆ ಉರಿಯುತ್ತಿರುವ ಬೆಂಕಿಗೆ ‘ತವಾಂಗ್’ ತುಪ್ಪ ಸುರಿದಿದ್ದರೆ, ಇತ್ತೀಚೆಗೆ ಸುದ್ದಿಯಾಗಿದ್ದು “ಲಡಾಖ್‌ನ ದೌಲತ್ ಬೆಗ್ ಓಲ್ಡಿ”. ಬರೋಬ್ಬರಿ ೧೯ ಕಿ.ಮಿಗಳಷ್ಟು ಭಾರತದ ಸರಹದ್ದಿನೊಳಗೆ ಬಂದು ೫ ಟೆಂಟುಗಳನ್ನೆಬ್ಬಿಸಿ ಹದಿನೈದು ದಿನಗಳಿಗಿಂತ ಹೆಚ್ಚು ದಿನವಿದ್ದು,ಕೂದಲು ಕೊಂಕದಂತೆ ಇಲ್ಲಿಂದ ಎದ್ದು ಹೋಗಿದ್ದಾರೆ ಚೀನಿಗಳು.ಮೊದಲಿಗೆ ವಿದೇಶಾಂಗ ಇಲಾಖೆಯ ಪ್ರಯತ್ನ ಶುರುವಾಗಿ,ಎರಡು ಫ್ಲಾಗ್ ಮೀಟಿಂಗ್ ಗಳು ಮುರಿದು ಬಿದ್ದ ನಂತರ ಅವರ ಟೆಂಟಿನಿಂದ ೩೦೦ ಮೀಟರ್ ದೂರದಲ್ಲಿ ನಮ್ಮ ಸೈನ್ಯದ ಟೆಂಟುಗಳೆದ್ದವು.ನಾಲ್ಕನೇ ಫ್ಲಾಗ್ ಮೀಟಿಂಗ್ ಮುಗಿದಾಗ ಚೀನಿಗಳು ಹೊರಟು ಹೋದರು.ಆದರೆ, ಹಾಗೆ ಹೊರಟು ಹೋಗುವಾಗ ಅವರು ಮಾಡಿಕೊಂಡ ಒಪ್ಪಂದವೇನು ಅನ್ನುವುದು ಬಹಿರಂಗವಾಗಿಲ್ಲ.ಹಗರಣಗಳ ಸುಳಿಯಲ್ಲಿ ಸಿಕ್ಕಿ ನಲುಗುತ್ತಿರುವ ಯುಪಿಎ ಸರ್ಕಾರ ಚೀನಿಗಳ ಮುಂದೆ ಮಂಡಿರೂರಿದೆಯೆ? ಎಷ್ಟಾದರೂ ಇಟಲಿಯ ನಾವಿಕರ ವಿಷಯದಲ್ಲಿ ಅದು ಆಡಿದ ನಾಟಕ ಜಗಜ್ಜಾಹೀರಾದ ಮೇಲೂ ಹೇಗೆ ನಂಬಿಕೆ ಇಡುವುದು? ಖುದ್ದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ  ಒಮರ್ ಅಬ್ದುಲ್ಲಾ ನಮ್ಮ ಪ್ರದೇಶದಿಂದ ನಾವೇಕೆ ಹಿಂದೆ ಸರಿಯಬೇಕು ಅಂದು ಸುಮ್ಮನೇ ಕೇಳಿರಬಹುದೇ ಅಂತ ನೋಡುತ್ತ ಹೋದರೆ “ಚುಮರ್”ನಲ್ಲಿ ಭಾರತ ನಿರ್ಮಿಸಿದ್ದ ಬಂಕರ್ ಗಳನ್ನು ತೆರವುಗೊಳಿಸಿ ನಮ್ಮದೇ ಪ್ರದೇಶವನ್ನು ನಿರ್ಜನ ಪ್ರದೇಶವನ್ನಾಗಿಸುವಲ್ಲಿಗೆ ಭಾರತ ಸರ್ಕಾರ ಚೀನಿಗಳೆಡೆಗೆ ಮಂಡಿಯೂರಿ ಹುಸಿ ಶಾಂತಿ ಗೀತೆಯ ಹಾಡುತ್ತಿದೆ.

ಚೀನಿಗಳು ೧೯ ಕಿ.ಮೀ ಒಳಹೊಕ್ಕಿ ಕುಳಿತಾಗ ಇಲ್ಲಿ ಕೆಲವು ಪತ್ರಿಕಗಳು ಚೀನಿಗಳು ಯಾಕೆ ಹಾಗೆ ಮಾಡಿರಬಹುದು ಅಂದು ಯೋಚಿಸಿ ಅನ್ನುವ ಸಲಹೆ ನೀಡಲು ಶುರುಮಾಡಿದ್ದವೇ ಹೊರತು, ಹೀಗೆ ಪದೇ ಪದೇ ಚೀನಿಗಳು ಭಾರತವನ್ನು ಸುಲಭ ತುತ್ತಾಗಿ ಪರಿಗಣಿಸುವ ದಾರ್ಷ್ಟ್ಯ ತೋರಿ ನಮ್ಮದೇ ಗಡಿಯೊಳಗೆ ನುಗ್ಗಿದ್ದು ಹೇಗೆ ಅಂದು ಪ್ರಶ್ನಿಸಲಿಲ್ಲ…! ಇವತ್ತು ಚೀನಾ ತನ್ನನ್ನು ತಾನು ಮುಂದುವರೆದ ರಾಷ್ಟ್ರ ಅಂತ ಜಾಹೀರಾತು ನೀಡುತಿದ್ದರೂ ಆಂತರ್ಯದಲ್ಲಿ ಅಲ್ಲಿಯೂ ಭ್ರಷ್ಟಚಾರ ತಾಂಡವವಾಡುತ್ತಿದೆ.ಚೀನಿ ನವಯುವಕ ಸಮೂಹದಲ್ಲಿ ದಿನೇ ದಿನೇ ಕಮ್ಯುನಿಸ್ಟರ ಆಡಳಿತದ ಬಗ್ಗೆ ಅಸಹನೆ ಮಡುಗಟ್ಟುತ್ತಲಿದೆ.ಕಮ್ಯುನಿಸ್ಟ್ ಸರ್ಕಾರದ ಕಪಿಮುಷ್ಟಿಯಿಂದ ಇಂತ ಸುದ್ದಿಗಳ ಹೊರಬರುತ್ತಿಲ್ಲವಷ್ಟೆ.ಟ್ಯುನಿಷಿಯಾದ ಜಾಸ್ಮಿನ್ ಕ್ರಾಂತಿಯ ನಂತರ ಒಂದೊಂದಾಗಿ ಈಜಿಪ್ಟ್,ಸಿರಿಯಾ ಹೀಗೆ ಬಂಡೆದ್ದಾಗ, ಚೀನಿ ಸರ್ಕಾರ ಇಂಟರ್ನೆಟ್ನಲ್ಲಿ “ಈಜಿಪ್ಟ್” ಅನ್ನುವ ಕೀ-ವರ್ಡ್ ಅನ್ನೇ ಡಿಸೇಬಲ್ ಮಾಡಿತ್ತು.ಅಲ್ಲಿನ ಬೆಳವಣಿಗೆಗಳಿಂದ ಜನ ಇಲ್ಲಿ ಸ್ಪೂರ್ತಿ ಪಡೆದು ತಿರುಗಿ ಬೀಳಬಹುದೆಂಬ ಭಯ ಕಾಡಿತ್ತಾ? ಒಡಲೊಳಗೆ ಈ ಪರಿಯ ಅಸಹನೆಯನ್ನು ಎದುರಿಸುತ್ತಿರುವ ಚೀನಿಗಳಿಗೆ ಸುಲಭವಾಗಿ ಜನರ ಗಮನ ಬೇರೆಡೆ ಸೆಳೆಯಲು ಸಿಗುವುದು ಗಡಿ ತಗಾದೆಗಳೇ.

ರಷ್ಯಾ,ಜಪಾನ್,ತೈವಾನ್,ವಿಯೆಟ್ನಾಂ,ಭಾರತ ಹೀಗೆ ತನ್ನ ಸುತ್ತಲಿರುವ ಎಲ್ಲಾ ದೇಶಗಳೊಂದಿಗೂ ಚೀನಾದ ಗಡಿ ತಗಾದೆಯಿದ್ದೇ ಇದೆ. ತೀರಾ ಇತ್ತೀಚೆಗೆ ಜಪಾನ್ ನಿನ ಸೆಂಕಾಕು ದ್ವೀಪದ ಕುರಿತು ಚೀನಿಗಳು ತಗಾದೆ ತೆಗೆದಿದ್ದರು.ಆದರೆ ಜಪಾನ್ ಭಾರತವಲ್ಲ ನೋಡಿ.ಅದು ಮಿಲಿಟರಿ ಭಾಷೆಯಲ್ಲೇ ಉತ್ತರ ನೀಡಿತು.ಚೀನಿಗಳಿಗೆ ಆ ವಿಷಯದಲ್ಲಿ ಮುಖಭಂಗವೇ ಆಯಿತು, ಚೀನಾದೊಳಗೆ ಇದರ ವಿರುದ್ಧ ಪ್ರತಿಭಟನೆಗಳು ನಡೆದವು.ಪುಟ್ಟ ತೈವಾನ್,ವಿಯೆಟ್ನಾಂ (ಅಮೇರಿಕಾದಂತ ಅಮೇರಿಕಾವನ್ನೆ ಕಂಗೆಡಿಸಿದ ಪುಟ್ಟ ದೇಶವಿದು.!) ಗಳು ಕೂಡ ಚೀನಾದೆಡೆಗೆ ಗುಟುರು ಹಾಕುತ್ತವೆ.ಒಂದು ಭಾರತವನ್ನು ಬಿಟ್ಟು. ಹಾಗಾಗಿಯೇ ಚೀನಿಗಳು ಪದೇ ಪದೇ ಭಾರತದ ಗಡಿಯೊಳಗೆ ಬಂದು ತಮ್ಮ ಗುರುತು ಬಿಟ್ಟು ಹೋಗುವ ಕೆಲಸ ಮಾಡುತ್ತಲೇ ಇದ್ದಾರೆ.ಅದರ ಮುಂದುವರಿದ ಭಾಗವೇ ಈ ಬಾರಿಯ ೧೯ ಕಿ.ಮೀ ಅತಿಕ್ರಮಣ.೧೯೬೨ರ ಭಾರತವಿಂದು ಇಲ್ಲ ಅನ್ನುವುದನ್ನು ೧೯೮೭ರಲ್ಲಿ ರಾಜೀವ್ ಗಾಂಧಿಯ ಸರ್ಕಾರ ಆಪರೇಷನ್ ಫಾಲ್ಕನ್ ನೆಪದಲ್ಲಿ ತೋರಿಸಿಕೊಟ್ಟಿದ್ದು ಚೀನಿಗಳಿಗೆ ನೆನಪಿರಲೇಬೇಕು.ಆದರೂ ಭಾರತ ಸರ್ಕಾರದ ನಿಷ್ಕ್ರೀಯತೆಯ ಬಗ್ಗೆ ಚೀನಿಗಳಿಗೆ ಬಲವಾದ ನಂಬಿಕೆಯಿದೆ.ಆ ನಂಬಿಕೆಯಂತೆ,ಯಥಾ ಪ್ರಕಾರ ಈ ಬಾರಿಯೂ ಭಾರತ ಮಂಡಿಯೂರಿ ಕುಳಿತುಬಿಟ್ಟಿತು.ಸರ್ಕಾರದ ಈ ನಡೆಯ ಬಗ್ಗೆ ಸಹಜವಾಗೇ ಟೀಕೆಗಳು ಬಂದವು.ಚೀನಿಗಳನ್ನು ಹೊಡೆದು ಹೊರಗಟ್ಟಿ ಅನ್ನುವ್ ಆಕ್ರೋಶವೂ ಕೇಳಿಬಂದಿತ್ತು.ಆದರೆ ಹಾಗೆ ಮಾಡಲು ಇದೇನು ಇಂದಿರಾಗಾಂಧಿ ಅಥವಾ ವಾಜಪೇಯಿ ಅವರ ಸರ್ಕಾರವೇ? ಅಲ್ಲವಲ್ಲ…! ನೆನಪಿಡಿ ವರ್ಷದ ಹಿಂದೆ ಜನರಲ್ ವಿ.ಕೆ ಸಿಂಗ್ ನಿವೃತ್ತಿಯಾಗುವ ಕೆಲದಿನಗಳ ಮೊದಲು ಭಾರತೀಯ ಸೇನೆ ತಕ್ಷಣದ ಯುದ್ಧಕ್ಕೆ ತಯಾರಾಗಿಲ್ಲ,ಅಸಲಿಗೆ ನಮ್ಮಲಿ ಯುದ್ಧಕ್ಕೆ ಬೇಕಾದ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳೇ ಇಲ್ಲ ಅಂತ ಪ್ರಧಾನಿಗೇ ಪತ್ರ ಬರೆದಿದ್ದರು.ಇಂತ ಸೈನ್ಯವನ್ನು ಮತ್ತದೇ ಚೀನಿಗಳ ಮುಂದೆ ನಿಲ್ಲಿಸಬೇಕೇ? ಬಡಪಾಯಿ ಸೈನಿಕರು ಈ ಮತಿಗೆಟ್ಟ ಸರ್ಕಾರದ ತೀರ್ಮಾನಗಳಿಗೆ ಬಲಿಯಾಗಬೇಕೆ? ಇಷ್ಟಕ್ಕೂ ಚೀನಾವನ್ನು ಮಣಿಸಲು ಸೈನಿಕ ಕಾರ್ಯಾಚರಣೆಯೊಂದೆ ಮಾರ್ಗವೇ?

ಇನ್ನು ಸಮುದ್ರದ ಗಡಿಯಲ್ಲಿಯೂ ಚೀನಾ ಹಿಂದೆ ಬಿದ್ದಿಲ್ಲ. ಬಾಂಗ್ಲಾದ ಚಿತ್ತಗಾಂಗ್,ಮಯನ್ಮಾರ್ ನ ಕೋಕೋ ದ್ವೀಪ,ಶ್ರೀಲಂಕಾದ ಹಂಬನೊಟ್ಟ,ಪಾಕಿಸ್ತಾನದ ಗದ್ವರ್ ಮೂಲಕ ಅದು ಭಾರತದ ಸುತ್ತ “ಮುತ್ತಿನ ಹಾರ”ವನ್ನು ಪೋಣಿಸಿ ಕುಳಿತಿದ್ದರೆ,ಇತ್ತ ನಮ್ಮ ನೌಕಾಪಡೆಯ ಮೇಲೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಇಂತ ಸನ್ನಿವೇಶದಲ್ಲಿ ಚೀನಿಗಳೊಂದಿಗೆ ಯುದ್ಧಕ್ಕೆ ಹೊರಡುವ ಮುನ್ನ ಗಡಿ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗ ಬೇಡವೇ? ಭಾವೇಶದ ಭಾಷಣದಲ್ಲಿ ಅರುಣಾಚಲ ನಮ್ಮದು ಎನ್ನುವ ಸರ್ಕಾರ  ಹಾಗೆ ಸ್ವಲ್ಪ ಈಶಾನ್ಯ ರಾಜ್ಯಗಳಾದ ಮಣಿಪುರ,ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಹೇಗಿದೆ ಅನ್ನುವ ಬಗ್ಗೆ ಸಹ ಪ್ರಾಕ್ಟಿಕಲ್ ಆಗಿ ಯೋಚಿಸಬೇಕಾಗುತ್ತದೆ ತಾನೇ? ಸ್ಥಳಿಯರ ಬೆಂಬಲವಿಲ್ಲದೆ ಯಾವ ಯುದ್ಧವನ್ನು ತಾನೇ ಗೆಲ್ಲಬಲ್ಲೇವು? ೬೨ರ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ನೆರವಾಗುತಿದ್ದ ಕೂಲಿಗಳೆ ಚೀನಿ ಗುಪ್ತಚರರಾಗಿದ್ದರು.

ಮೊದಲೇ ಹೇಳಿದಂತೆ ಚೀನಾ ತನ್ನ ಸುತ್ತ-ಮುತ್ತಲಿರುವ ಎಲ್ಲಾ ದೇಶಗಳೊಂದಿಗೂ ಗಡಿ ತಗಾದೆಯನ್ನಿಟ್ಟುಕೊಂಡಿದೆ.ಹೇಗೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತದೆಯೋ ಅದೇ ರೀತಿ ಭಾರತವೂ ಜಪಾನ್,ತೈವಾನ್ ಗಳೊಂದಿಗಿನ ರಾಜತಾಂತ್ರಿಕ,ವ್ಯವಾಹರಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಮೂಲಕ ಚೀನಾದ ಅಭದ್ರತೆಯ ಭಾವನೆಯನ್ನು ಬಡಿದ್ದೆಬ್ಬಿಸಬಲ್ಲಂತ ಆಕ್ಸಿಸ್ ಅನ್ನು ಮಾಡಿಕೊಳ್ಳಬಹುದು.ದಲೈಲಾಮ ಅಮೇರಿಕಾಕ್ಕೆ ಭೇಟಿ ನೀಡುವಂತ ವಿಷಯಗಳಿಗೂ ಚೀನಾ ಅದ್ಯತೆ ನೀಡಿದಂತೆ ನಾವು ಸಹ ಕಾಶ್ಮೀರದ ವಿಷಯದಲ್ಲಿ,ಪಾಕಿಸ್ತಾನದ ವಿಷಯದಲ್ಲಿ ಚೀನಾದ ಮೂಗು ತೂರಿಸುವಿಕೆಯನ್ನು ಉಗ್ರವಾಗಿ ಪ್ರತಿಭಟಿಸಲೇಬೇಕು.ಆ ಮೂಲಕ ಭಾರತ ಸುಮ್ಮನಿರಲಾರದು ಅನ್ನುವ ನಿರಂತರ ಸಂದೇಶ ಬೀಜಿಂಗ್ ತಲುಪುತ್ತಲಿರಬೇಕು.

ಮೇಡ್ ಇನ್ ಚೈನಾದ ಪದಾರ್ಥಗಳಿಗೆ ಬದಲಾಗಿ ಮತ್ತು ಅವರಷ್ಟೆ ಸಮರ್ಥವಾಗಿ ನಾವು ಸಹ ಉತ್ಪಾದನ ಕ್ಷೇತ್ರದೊಳಗೂ ತೂರಿಕೊಳ್ಳಬೇಕಾಗಿದೆ.ಹಾಗೇ ಮಾಡಿಕೊಂಡಿದ್ದೇ ಆದರೆ, ವ್ಯಾವಹಾರಿಕವಾಗಿಯೂ ಚೀನಿಗಳಿಗೆ ಪೆಟ್ಟು ನೀಡಬಹುದು. ಚೀನಿಗಳ ವಿರುದ್ಧ ನಾವು ಫೇಸ್ಬುಕ್,ಟ್ವಿಟರ್ ಗಳಲ್ಲೆ ಬಯ್ಯುತ್ತ ಇರುವಾಗ ನಾವು ಬಳಸುವುದು ಅದೇ ಚೀನಾದ ದೈತ್ಯ ಹುವಾಯ್ ಕಂಪೆನಿಯ ಉಪಕರಣಗಳು ಅನ್ನುವುದು ಗೊತ್ತೆ…!? ಇವತ್ತು ನಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನೆಲ್ಲ ಚೀನಿ ಕಂಪೆನಿಗಳು ಯಾವ ಪರಿ ಆಕ್ರಮಿಸಿಕೊಂಡಿವೆಯೆಂದರೆ ಒಂದು ಸಣ್ಣ ಮಾಲ್ವೇರ್ ಪ್ರೊಗ್ರಾಮ್ ಅನ್ನು ಬಿಟ್ಟರು ಭಾರತದ ಮಾಹಿತಿಗಳನ್ನೂ ಚೀನಿಗಳು ಕುಳಿತಲ್ಲೇ ಸೋಸಿಕೊಳ್ಳಬಹುದು. ಚೀನಾಕ್ಕೆ ನಾವು ಸ್ಪರ್ಧೆಯೊಡ್ಡಬೇಕಾದರೆ ಅತ್ಯಗತ್ಯವಾಗಿ ಸ್ವದೇಶಿಯಾಗಿ ಸಂಶೋಧನೆ ಮತ್ತು ಉತ್ಪಾದನೆಯೆಡೆಗೆ ಗಮನ ನೀಡಲೇಬೇಕು.

ಚೀನಾವನ್ನು ಬಡಿಯಲು ಯುದ್ದರಂಗವೇ ಆಗಬೇಕೆಂದೇನಿಲ್ಲ.ಇನ್ನಷ್ಟು ದಾರಿಗಳೂ ಇವೆ,ಆ ಕಡೆಗೆ ಚಾಣಕ್ಯಪುರಿಯಲ್ಲಿ ಕುಳಿತ ಅಧಿಕಾರಿಗಳು ನೋಡಬೇಕಿದೆ.ಯಾವುದೂ ಆಗದೂ ಅನ್ನುವ ಕಾಲಕ್ಕಷ್ಟೆ ಯುದ್ಧದ ಮಾತುಗಳೇಳಬೇಕು.ಮಹಾಭಾರತದಲ್ಲಿ, ಪದೇ ಪದೇ ಮಥುರೆಯ ಮೇಲೆ ಜರಾಸಂಧ ದಾಳಿ ಮಾಡುವುದನ್ನು ತಪ್ಪಿಸಿಕೊಳ್ಳಲು ಶ್ರೀ ಕೃಷ್ಣ ದ್ವಾರಕೆಯ ನಿರ್ಮಾಣದ ಸಲಹೆಯನ್ನಿತ್ತಾಗ ಇಡಿ ರಾಜ್ಯಸಭೆಯ ವಿರೋಧ ವ್ಯಕ್ತಪಡಿಸುತ್ತದೆ.ಆದ ಕೃಷ್ಣ ಹೇಳುವುದು “ಎಲ್ಲಿ ಶಾಂತಿ ಇರುತ್ತದೆಯೋ ಅಲ್ಲಿಯೇ ಅಭಿವೃದ್ಧಿ ಇರುತ್ತದೆ” ಎಂದು.ಹಾಗೇಯೆ ಮಹಾಭಾರತದ ಯುದ್ದವನ್ನು ತಡೆಯುವ ಸರ್ವ ಪ್ರಯತ್ನವೂ ವಿಫಲವಾದ ಮೇಲೆಯೇ ಕೃಷ್ಣ ಕುರುಕ್ಷೇತ್ರದೆಡೆಗೆ ನಡೆದಿದ್ದು.ಕೃಷ್ಣನ ಮಾತಿನಂತೆ ನಡೆಯುವುದಾದರೆ ಯುದ್ಧ ಅನ್ನುವುದು ನಮ್ಮ ಅಂತಿಮ ಆಯ್ಕೆಯಾಗಬೇಕು.

1 ಟಿಪ್ಪಣಿ Post a comment
 1. ಜೂನ್ 5 2013

  ಚೀನಾದ ಅಪಾಯದ ಕುರಿತಾಗಿ ನೆಹರೂ ಸರಕಾರವನ್ನು 1950ರಿಂದಲೇ ಎಚ್ಚರಿಸಿದ್ದು ಶ್ರೀ ಗುರೂಜಿ ಗೊಳವಲ್ಕರ್ ಅವರು.
  ಅದಕ್ಕೆ ನೆಹರೂ ಅವರ ಪ್ರತಿಕ್ರಿಯೆ: “Golwalkar is a war monger”!!

  ಶ್ರೀ ಗುರೂಜಿ ಅವರು ನೆಹರೂ ಅವರಿಗೆ 1950ರಲ್ಲಿ ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ:
  http://www.vigilonline.com/index.php?option=com_content&task=view&id=1142&Itemid=1

  Shri Guruji anticipated the Chinese aggression – http://anandkumar1978.blogspot.com/2006/03/shri-guruji-anticipated-chinese.html

  The Chinese Invasion: A Far-Seeing Shri Guruji – http://www.golwalkarguruji.org/shri-guruji-nations-seer/shri-guruji-biography/smriti-mandir

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments