‘ಪ್ರಜಾವಾಣಿ’ಯ ವಚನಗಳ ಕುರಿತ ಚರ್ಚೆಗೊಂದು ಚರಮಗೀತೆ
ಪ್ರಜಾವಾಣಿ ಪತ್ರಿಕೆಯಲ್ಲಿ ವಚನಗಳ ಕುರಿತು ಡಂಕಿನ್ ಹಾಗೂ ಬಾಲಗಂಗಾಧರರ ವಿಚಾರಗಳ ಕುರಿತ ಚರ್ಚೆಗೆ ತೆರೆ ಎಳೆಯಲಾಗಿದೆ. ಇವರ ವಿಚಾರಗಳನ್ನು ವಿರೋಧಿಸುವವರಿಗೆಲ್ಲ ಸಾಕಷ್ಟು ಅವಕಾಶ ಸಿಕ್ಕಿರುವುದರಿಂದ ಇನ್ನೂ ಹೇಳಲಿಕ್ಕೆ ಅವರ ಬಳಿ ಏನೂ ಇಲ್ಲ ಎಂಬುದು ಸ್ಪಷ್ಟ. ಇವರು ಏನು ಹೇಳಿದ್ದಾರೆ ಎಂಬುದನ್ನೇ ಆಧರಿಸಿ ಅದರಲ್ಲಿ ನಮಗೇನಾದರೂ ಉಪಯೋಗವಾಗುವಂಥದ್ದು ಇದೆಯೆ ಎಂಬ ಕುರಿತ ಸಮೀಕ್ಷೆಯೇ ಈ ಬರೆಹ.
ವಚನಗಳು ಜಾತಿ ವಿರೋಧೀ ಚಳವಳಿಯಲ್ಲ ಎಂಬ ಹೇಳಿಕೆಗೆ ಕನ್ನಡದ ಪ್ರಗತಿಪರರನೇಕರು ಉಗ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅವರು ಕೆಲವೊಂದು ವಚನಗಳನ್ನು ಪದೇ ಪದೇ ಉದ್ಧರಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರ ಪ್ರಕಾರ ವಚನಗಳು ಆಧ್ಯಾತ್ಮಿಕ ಸಾಹಿತ್ಯವೆಂದರೆ ಪುರೋಹಿತಶಾಹಿಯ ಹುನ್ನಾರ. ಅದು ಹೇಗೆ? ಇವರು ವಚನಗಳು ಆಧ್ಯಾತ್ಮವೇ ಅಲ್ಲ ಎನ್ನುವ ದಾರಿಯನ್ನು ಏಕೆ ಹಿಡಿಯುತ್ತಿದ್ದಾರೆಂದರೆ ಇವರ ಪ್ರಕಾರ ಆಧ್ಯಾತ್ಮವು ಪುರೋಹಿತಶಾಹಿಯ ಹುನ್ನಾರ ಎಂಬ ನಿರ್ಣಯವೇ ಆಗಿದೆ. ಅವರು ಆಧ್ಯಾತ್ಮಿಕತೆಗೂ ಪುರೋಹಿತಶಾಹಿಗೂ ಒಂದು ಅವಿನಾಭಾವೀ ಸಂಬಂಧವನ್ನು ಕಲ್ಪಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಅವರ ಪ್ರಕಾರ ವಚನಗಳು ಏಕೆ ಜಾತಿ ವ್ಯವಸ್ಥೆಯ ವಿರುದ್ಧದ ಚಳವಳಿಗಳೆಂದರೆ ಇಷ್ಟೊಂದು ಮಂದಿ ಕೆಳಜಾತಿಯ ವಚನಕಾರರು ಜಾತಿ ಬೇಧ, ಬ್ರಾಹ್ಮಣ ಆಚರಣೆಗಳ ಕುರಿತು ಟೀಕೆಗಳನ್ನು ಮಾಡಿದ್ದೇ ಆಗಿದೆ. ಆದರೆ ಅವರು ನಮ್ಮ ವಾದವನ್ನು ಸರಿಯಾದ ಅರ್ಥದಲ್ಲಿ ಗ್ರಹಿಸಬೇಕಾದರೆ ಆಧ್ಯಾತ್ಮದ ಕುರಿತ ಪೂರ್ವಾಗ್ರಹಗಳನ್ನು ತೊಡೆದುಕೊಳ್ಳಬೇಕಾಗುತ್ತದೆ. ಅವರು ಯಾವಯಾವ ವಚನಕಾರರನ್ನು ಹಾಗೂ ವಚನಗಳನ್ನು ತಮ್ಮ ವಾದದ ಪುಷ್ಟೀಕರಣಕ್ಕೆ ಬಳಸಿಕೊಳ್ಳುತ್ತಾರೊ ಆ ಉದಾಹರಣೆಗಳನ್ನೆಲ್ಲ ಸಾಧ್ಯ ಮಾಡಿದ್ದು ಭಾರತೀಯ ಆಧ್ಯಾತ್ಮ ಸಂಪ್ರದಾಯದ ವೈಶಿಷ್ಟ್ಯತೆಯೇ ಆಗಿದೆ. ಅಂದರೆ ಅಷ್ಟೊಂದು ಕೆಳಜಾತಿಯ ವಚನಕಾರರು, ಅಷ್ಟೊಂದು ನಿಷ್ಟುರವಾಗಿ ಬ್ರಾಹ್ಮಣರನ್ನು ಹಾಗೂ ರೂಢಮೂಲ ಆಚರಣೆಗಳನ್ನು ಖಂಡಿಸುವ ಸಾಧ್ಯತೆಯನ್ನು ಆ ಆಧ್ಯಾತ್ಮಿಕ ಮಾರ್ಗ ಸೃಷ್ಟಿಸುತ್ತದೆ ಅಂತಲೇ ಅರ್ಥ. ಆಧ್ಯಾತ್ಮಿಕತೆಗೆ ನಿಜವಾಗಿಯೂ ಅವರು ಆರೋಪಿಸುವ ಪುರೋಹಿತಶಾಹಿಯ ಏಕಸ್ವಾಮ್ಯದ ಸ್ವರೂಪವಿದ್ದಿದ್ದರೆ ಈ ಮೇಲಿನ ಸಂಗತಿ ಹೇಗೆ ಸಾಧ್ಯವಾಗುತ್ತದೆ? ಹಾಗಾಗಿ ವಚನಗಳು ಆಧ್ಯಾತ್ಮಿಕ ಸಾಹಿತ್ಯಗಳು ಎಂಬುದು ಕೆಳಜಾತಿಯವರ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆ ಎನ್ನುವುದೇ ಒಂದು ಪೂರ್ವಾಗ್ರಹಪೀಡಿತ ನಿಲುವು. ಅದು ಪಾಶ್ಚಾತ್ಯ ಚಿಂತಕರಿಂದ ಬಂದ ಬಳುವಳಿ.
ವಚನಗಳನ್ನು ಆಧ್ಯಾತ್ಮಿಕ ನೆಲೆಯಿಂದ ನೋಡಬೇಕೆಂಬುದು ಪುರೋಹಿತಶಾಹಿಯ ಹುನ್ನಾರ ಎನ್ನುವವರ ಮಾತುಗಳನ್ನೆಲ್ಲ ಆಲಿಸಿದಾಗ ಅವರ ಎದುರು ಅಗಾಧವಾದ ಸವಾಲೇ ಇದೆ ಎಂಬುದು ಕಂಡುಬರುತ್ತದೆ. ಪ್ರಪ್ರಥಮವಾಗಿ ಅವರು ಈ ಹೋರಾಟಗಾರರನ್ನೆಲ್ಲ ಶಿವ ಶರಣರಲ್ಲ ಎನ್ನಬೇಕಾಗುತ್ತದೆ. ಇವರನ್ನೆಲ್ಲ ವಚನಕಾರರೆಂದಷ್ಟೇ ಕರೆಯುತ್ತೇವೆ ಎಂಬ ಉತ್ತರ ಬರಬಹುದು. ಆಗ ಏಳುವ ಪ್ರಶ್ನೆ ಎಂದರೆ, ಅವರ ವಚನಗಳ ಅಂತ್ಯದಲ್ಲಿ ಇರುವ ಶಿವಾಂಕಿತವನ್ನು ಹೇಗೆ ಮರೆಯಲು ಸಾಧ್ಯ? ಇಲ್ಲ ಸುಮ್ಮನೆ ಪ್ರಾಸಕ್ಕಾಗಿ ಬರೆದಿದ್ದಾರೆ, ವಚನಗಳ ಧ್ವನಿಯನ್ನು ಮಾತ್ರವೇ ನಾವು ಗಮನಿಸಬೇಕು, ಅದು ಅಂತ್ಯದಲ್ಲಿ ಇರುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದೇವೆ ಎಂಬ ಉತ್ತರ ಬರಬಹುದು. ಈ ಪ್ರಶ್ನೆಗೇ ಮತ್ತೊಂದು ಉತ್ತರವೂ ಸಾಧ್ಯ. ಅದೆಂದರೆ: ವಚನಕಾರರು ಶರಣರಾಗಿರಬಹುದು, ಶಿವಾಂಕಿತವನ್ನು ಬಳಸಿರಬಹುದು. ಆದರೆ ಅವರು ಶಿವಭಕ್ತಿಯನ್ನು ಜಾತಿ ವಿನಾಶದ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ, ಹಾಗಾಗಿ ಅವರ ಉದ್ದೇಶ ಜಾತಿ ವ್ಯವಸ್ಥೆಯ ವಿರೋಧವಾಗಿದೆ, ಅದಕ್ಕೆ ಮಾರ್ಗ ಶಿವಭಕ್ತಿಯಾಗಿದೆ ಎನ್ನಬಹುದಲ್ಲ? ಮೇಲಿನ ಉತ್ತರಕ್ಕಿಂತ ಇದು ಹೆಚ್ಚು ತರ್ಕಬದ್ಧವಾಗಿ ತೋರುತ್ತದೆ. ಆದರೆ ಈ ಉತ್ತರಕ್ಕೆ ಏಳುವ ಎರಡು ಪ್ರಶ್ನೆಗಳೆಂದರೆ: 1) ಹಾಗಾದಲ್ಲಿ ಈ ಶರಣರೆಲ್ಲರೂ ಜಾತಿ ರಹಿತ ಒಂದು ಗುಂಪಾಗಿ ಮಾರ್ಪಾಟಾಗಬೇಕಿತ್ತು. ಆದರೆ ಐತಿಹಾಸಿಕವಾಗಿ ಎಂದೂ ಹಾಗಾದಂತೇ ಕಾಣುವುದಿಲ್ಲವಲ್ಲ? ಈ ಶರಣರ ಜೊತೆಗೆ ಅವರ ಜಾತಿಯ ಗುರುತು ಹಾಗೇ ಉಳಿದಂತೇ ತೋರುತ್ತದೆಯಲ್ಲ? ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ. ಇತ್ಯಾದಿ. ಅಷ್ಟೇ ಅಲ್ಲ, ‘ಮಾದಾರ ಚೆನ್ನಯ್ಯನ ಮನೆಯ ತೊತ್ತಿನ ಮಗ ನಾನಯ್ಯ’ ಎಂಬಂಥ ಸಾಲುಗಳು ಏನನ್ನು ಸೂಚಿಸುತ್ತವೆ? ಶಿವಶರಣರೆಲ್ಲರೂ ಒಂದೇ ಜಾತಿರಹಿತ ಗುಂಪಾಗಿದ್ದರು ಅಂತಾದಲ್ಲಿ ಚೆನ್ನಯ್ಯನ ಜಾತಿಯ ಉಲ್ಲೇಖ ಮಾಡುವ ಪ್ರಮೇಯ ಹೇಗೆ ಬರುತ್ತದೆ? ಅವರೆಲ್ಲ ಸಮಾನರು ಅಂತಾದರೆ ಅವನ ತೊತ್ತಿನ ಮಗನಾಗಿ ಬಸವಣ್ಣನ ಮೇಲ್ಜಾತಿಯ ಅಹಂಕಾರ ಅಳಿಯುವ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ? ಮಾದಾರ ಚೆನ್ನಯ್ಯನು ಕೆಳಜಾತಿಯವನು ಎಂಬುದನ್ನು ಒಪ್ಪಿಕೊಂಡಾಗಲೇ ಅಲ್ಲವೆ ಬಸವಣ್ಣನ ಈ ವಚನ ಅರ್ಥವಾಗುವುದು? ಅದು ಹೋಗಲಿ, ಶಿವಶರಣರಲ್ಲೇ ಜಾತಿ ಬೇಧ ಮಾಡುವವರನ್ನು ಎಲ್ಲಾ ಜಾತಿಯ ಶರಣರೂ ಉದ್ದಕ್ಕೂ ಖಂಡಿಸುವ ಪ್ರಮೇಯ ಎಲ್ಲಿ ಬರುತ್ತದೆ? 2) ಬಸವಣ್ಣನ ಕಾಲಕ್ಕೆ ಹೋಗಲಿ ಅಷ್ಟರ ನಂತರ ಇಂದಿನವರೆಗೂ ಒಂದು ಜಾತಿರಹಿತ ಗುಂಪು ಲಿಂಗಾಯತರಲ್ಲಿ ಅಸ್ತಿತ್ವದಲ್ಲಿ ಇದ್ದಂತೆ ಕಾಣುವುದಿಲ್ಲವಲ್ಲ? ಇಂದಿನ ಲಿಂಗಾಯತರಲ್ಲಿ ಅನೇಕ ಜಾತಿಗಳಿವೆ ಹಾಗೂ ಜಾತಿ ಭೇದವು ಉಳಿದವರಂತೇ ಪ್ರಚಲಿತದಲ್ಲಿದೆ. ಆದರೂ ಅವರು ಈ ಎಲ್ಲಾ ವಚನಗಳನ್ನೂ ತಮ್ಮ ಸತ್ಸಂಪ್ರದಾಯವಾಗಿ ಉಳಿಸಿಕೊಂಡು ಬಂದಿದ್ದಾರೆ. ಅವುಗಳ ಅರ್ಥವನ್ನು ಮನೋಗತ ಮಾಡಿಕೊಂಡವರೂ ಈವರೆಗೆ ಸಾಕಷ್ಟಿದ್ದಿರಲೇ ಬೇಕು. ಏಕೆ ಅವರಿಗೆ ತಾವು ವಚನ ಹೋರಾಟಕ್ಕೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ ಎಂಬುದಾಗಿ ಅನ್ನಿಸುತ್ತಿಲ್ಲ? ತಾವು ಆಚರಿಸುವ ಜಾತಿ ಆಚರಣೆಗಳು ಸಹಜವಾಗಿಯೇ ಕಾಣಿಸುತ್ತವೆ?
ಈ ಎರಡು ಪ್ರಶ್ನೆಗಳನ್ನು ಉತ್ತರಿಸಿಕೊಳ್ಳದೇ ಜಾತಿ ವಿರೋಧೀ ಚಳವಳಿಯು ವಚನಗಳ ಮೂಲೋದ್ದೇಶವಾಗಿದೆ ಎನ್ನುವ ವಾದವನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಪ್ರಶ್ನೆಗಳಿಗೆ ಕೂಡ ವಿವರಣೆಯನ್ನು ನೀಡಲು ಪ್ರಯತ್ನಿಸಲಾಗಿದೆ: ಬಸವಣ್ಣನ ಕಾಲದಲ್ಲಿ ಕ್ರಾಂತಿಗೆ ಪ್ರಯತ್ನಿಸಿದರು. ಆದರೆ ಅದು ಪುರೋಹಿತಶಾಹಿಯ ಕುತಂತ್ರದಿಂದ ವಿಫಲವಾಯಿತು. ನಂತರ ಕಾಲದಲ್ಲಿ ಪುರೋಹಿತಶಾಹಿಯೇ ಮೇಲುಗೈ ಸಾಧಿಸಿತು. ಇದು ಹೌದೇ ಆಗಿದ್ದರೆ ಬಸವಣ್ಣನ ನಂತರದ ಕಾಲದಲ್ಲೂ, ನಮ್ಮ ಕಾಲದವರೆಗೂ ರಚನೆಯಾದ ವಚನಗಳಲ್ಲೂ ಜಾತಿ ಭೇದದ ಕುರಿತು ಇಂಥದ್ದೇ ಟೀಕೆಯನ್ನು ಕಾಣುತ್ತೇವಲ್ಲ? ಅವನ್ನು ರಚಿಸಿದವರನ್ನೇ ಒಂದೆಡೆ ಪುರೋಹಿತಶಾಹಿ ಅನ್ನುತ್ತೇವೆ ಮತ್ತೊಂದೆಡೆ ಅವರೇ ನಾವು ಯಾವುದನ್ನು ಜಾತಿವ್ಯಸ್ಥೆಯ ವಿರೋಧಕ್ಕೆ ಸಾಕ್ಷಿ ಎನ್ನುತ್ತೇವೆಯೊ ಅಂಥ ವಚನಗಳನ್ನೂ ಬರೆಯುತ್ತಾರೆ. ಅಂದರೆ ಅವರು ಎರಡು ಬದುಕನ್ನು ಬದುಕಿದ್ದರು ಎಂದರ್ಥವೆ? ಅದಕ್ಕಿಂತ ಮುಖ್ಯವಾಗಿ ಈ ಎಲ್ಲಾ ಕ್ರಾಂತಿಕಾರೀ ಎನ್ನುವ ವಚನಗಳನ್ನೂ ಉಳಿಸಿಕೊಂಡು ಬಂದವರೇ ಲಿಂಗಾಯತರ ಮಠಗಳು ಹಾಗೂ ಪುರೋಹಿತರಲ್ಲವೆ? ಅವರು ತಮ್ಮ ಹಿತಾಸಕ್ತಿಗೆ ವಿರುದ್ಧವಾದ ವಚನಗಳನ್ನು ಉಳಿಸಿಕೊಂಡು ಏಕೆ ಬಂದರು? ಇಲ್ಲ ಈ ಪ್ರಗತಿಪರರೇನಾದರೂ ಹನ್ನೆರಡನೆಯ ಶತಮಾನಕ್ಕೆ ಹೋಗಿ ವಚನಕಾರರಿಂದ ಸ್ವತಃ ತೆಗೆದುಕೊಂಡುಬಂದರೊ? ವಚನಗಳು ಬಸವಣ್ಣನ ಕಾಲಕ್ಕೇ ಪತ್ರಾಗಾರವನ್ನು ಸೇರಿ ಸಾಮಾಜಿಕ ನಿರ್ವಾತದಲ್ಲಿ ಉಳಿದು ಬಂದವು ಎಂದು ನಾವು ಅಂದುಕೊಳ್ಳಲಿಕ್ಕೇನೂ ಕಾರಣವಿಲ್ಲವಲ್ಲ?
ಈ ಪ್ರಶ್ನೆಗಳಿಗೆ ಉತ್ತರವಾಗಿ, ವಚನಗಳ ಆಶಯ ಜಾತಿ ವ್ಯವಸ್ಥೆಯ ವಿರೋಧವಾಗಿತ್ತು. ಅದರರ್ಥ ಅವರೇನೂ ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಿದ್ದರು, ಅಥವಾ ಸೃಷ್ಟಿ ಮಾಡಲಿಕ್ಕೆ ಹೊರಟಿದ್ದರು ಅಂತಲ್ಲ ಎಂಬುದಾಗಿ ಹೇಳಿದರೆ ಉಚಿತವಾಗಬಹುದೆ? ಆಗ ಎಷ್ಟು ವಚನಗಳು ಜಾತಿಯ ಟೀಕೆಯನ್ನು ಮಾಡುತ್ತವೆ ಎಂಬ ಲೆಕ್ಕ ಮುಖ್ಯವಾಗುತ್ತದೆ. ಅದು ಹೇಗೆ ಕೆಲವೇ ವಚನಗಳನ್ನು ಮಾತ್ರ ಆಧರಿಸಿ ವಚನಗಳ ಆಶಯವನ್ನು ಕುರಿತು ತರ್ಕಿಸುತ್ತಿರಿ? ಎಂಬ ನಮ್ಮ ಪ್ರಶ್ನೆಗೆ ಪರ್ಸಂಟೇಜ್ ಲೆಕ್ಕದಲ್ಲಿ ಅದನ್ನೆಲ್ಲ ಹೇಳಲಿಕ್ಕೆ ಬರುವುದಿಲ್ಲ ಎಂದು ಹಲವರು ಮುಗಿಬಿದ್ದಿದ್ದಾರೆ. ಅಂದರೆ ಹಾಗೆ ಹೇಳುವವರಿಗೆ ಸತ್ಯವನ್ನು ಅರ್ಥಮಾಡಿಕೊಳ್ಳುವ ಬೇರೆ ಏನೋ ವಿಧಾನವಿದೆ ಅಂತಾಯಿತು. ಆ ವಿಧಾನದಲ್ಲೇ ಉಳಿದ ಬಹುಸಂಖ್ಯಾತ ವಚನಗಳು ಏನನ್ನು ಹೇಳುತ್ತವೆ ಎಂದಾದರೂ ಹೇಳಬಹುದಲ್ಲ? ವಚನಗಳ ಬಗೆಗೆ ಇಷ್ಟೊಂದು ಗೌರವವಿಟ್ಟು ಹೋರಾಡುವವರು ಉಳಿದ ವಚನಗಳೆಲ್ಲ ಅರ್ಥಹೀನ ಶಬ್ದಗಳು ಎಂಬುದಾಗಿ ನಂಬಿರುವುದಂತೂ ಸಾಧ್ಯವಿಲ್ಲ. ಅಂದರೆ ವಚನಗಳು ಒಂದಷ್ಟು ವಿಷಯಗಳ ಬಗೆಗೆ ಹೇಳುತ್ತವೆ, ಅವುಗಳಲ್ಲಿ ಜಾತಿ ಭೇದದ ವಿರೋಧವೂ ಒಂದು ಎಂಬುದಾಗಿ ಅದನ್ನು ನಾನು ಇಟ್ಟರೆ ಬಹುಶಃ ಈ ಹಂತದಲ್ಲಿ ಯಾರೂ ತಿರಸ್ಕರಿಸಲಾರರು.
ಅಂದರೆ ವಚನಗಳು ಬೇರೆ ಬೇರೆ ವಿಷಯಗಳ ಕುರಿತು ಹೇಳುತ್ತವೆ ಎಂಬ ಹೇಳಿಕೆಯನ್ನು ಪರ್ಸಂಟೇಜ್ ರಾಜಕೀಯವನ್ನು ವಿರೋಧಿಸುವವರೂ ಅವರ ತರ್ಕದಲ್ಲೇ ಒಪ್ಪಿಕೊಳ್ಳಲೇಬೇಕಾಗುತ್ತದೆ. ಹಾಗೂ ಅಂಥ ವಿಷಯದಲ್ಲಿ ಆಧ್ಯಾತ್ಮ ಕೂಡ ಇದೆ ಎನ್ನುವುದನ್ನಂತೂ ಅವರು ಅಲ್ಲಗಳೆಯಲಾರರು. ಅದಿಲ್ಲದಿದ್ದರೆ ಬಹಳಷ್ಟು ವಚನಗಳನ್ನು ಕನ್ನಡ ವ್ಯಾಕರಣ ಹಾಗೂ ಶಬ್ದಕೋಶವನ್ನು ಸುಳ್ಳುಮಾಡಲಿಕ್ಕಾಗಿ ಬರೆದಿದ್ದಾರೆ, ಹಾಗಾಗಿ ವಿಶ್ವಾಸಾರ್ಹವಲ್ಲ ಎಂದು ಪರೋಕ್ಷವಾಗಿ ಹೇಳಿದಂತೇ. ಹಾಗಿದ್ದ ಪಕ್ಷದಲ್ಲಿ ವಚನಗಳನ್ನು ಆಧ್ಯಾತ್ಮಿಕ ಸಂಪ್ರದಾಯಗಳ ಹಿನ್ನೆಲೆಯಲ್ಲಿ ನೋಡಬೇಕೆಂಬುದಾಗಿ ಹೇಳಿದರೆ ಎದುರಾಳಿಗಳ ಕುತ್ತಿಗೆಗೆ ಕವೆ ತರುವ ಮಟ್ಟದವರೆಗೂ ಮಾತನಾಡುವ ಪ್ರಶ್ನೆ ಎಲ್ಲಿಂದ ಹುಟ್ಟುತ್ತದೆ? ವಚನಗಳು ಎರಡೂ ವಿಷಯದ ಬಗೆಗೂ ಹೇಳುತ್ತವೆ ಎಂಬುದನ್ನು ಒಪ್ಪಿಕೊಂಡವರು ಅವುಗಳು ಒಂದು ವಿಷಯದ ಬಗ್ಗೆ ಮಾತ್ರವೇ ಹೇಳುತ್ತವೆ ಎನ್ನಲಿಕ್ಕೆ ಸಾಧ್ಯವಿಲ್ಲ. ಆದರೆ ನಮ್ಮನ್ನು ವಿರೋಧಿಸುತ್ತಿರುವವರು ವಚನಗಳು ಅಂತಿಮವಾಗಿ ಜಾತಿ ವ್ಯವಸ್ಥೆಯ ವಿರೋಧೀ ಚಳವಳಿಯೇ ಹೌದು ಎಂದು ವಾದಿಸುತ್ತಿದ್ದಾರೆ. ಅವುಗಳಲ್ಲಿ ಏನೇನೋ ವಿಷಯಗಳಿರಬಹುದು, ಅದೆಲ್ಲ ಗೌಣ. ಜಾತಿ ವಿರೋಧೀ ಹೋರಾಟವನ್ನು ನಡೆಸುವಾಗ ಅವರು ಏನೇನನ್ನೋ ಬರೆದುಕೊಂಡಿರಬಹುದು, ಅದಕ್ಕೆಲ್ಲ ಲಕ್ಷ್ಯ ಕೊಡಬೇಕಿಲ್ಲ.
ಹೀಗೆ ಘೋಷಿಸುವಾಗ ವಚನಕಾರರ ಧ್ವನಿಯನ್ನು ಅಂಥವರು ಹತ್ತಿಕ್ಕುತ್ತಿಲ್ಲ ಎಂದು ಹೇಗೆ ವಿಶ್ವಾಸದಿಂದ ಹೇಳುತ್ತೀರಿ? ಹಾಗೂ ಇಂಥ ವಚನಗಳನ್ನು ತಮ್ಮ ಜೀವಸೆಲೆಯಾಗಿಟ್ಟುಕೊಂಡ ಲಿಂಗಾಯತ ಸಂಪ್ರದಾಯವನ್ನೇ ಏಕಮುಖೀ ನಿರೂಪಣೆಗೆ ಒಗ್ಗಿಸುತ್ತಿಲ್ಲ ಎಂದು ಹೇಗೆ ಹೇಳುತ್ತೀರಿ? ಅವರನ್ನು ಓದುವ ಯಾವ ಓದುಗರಿಗಾದರೂ ಈ ಪ್ರಶ್ನೆ ಎದ್ದೇ ಏಳುತ್ತದೆ. ಅಂದರೆ ಒಂದು ನಿರ್ದಿಷ್ಟ ಹೇಳಿಕೆಯೇ ಸತ್ಯವೆಂದು ಸಾಧಿಸುವ ಸಲುವಾಗಿ ತಮಗೆ ಬೇಕಾದ ಕೆಲವೇ ವಚನಗಳನ್ನು ಆಯ್ದುಕೊಂಡು ಉಳಿದವನ್ನು ಹತ್ತಿಕ್ಕಿ ಇಡುವ ಕೆಲಸ ನಡೆಯುತ್ತಿಲ್ಲ ಎಂದು ಹೇಗೆ ನಂಬುವುದು? ಈ ಕೆಲಸವನ್ನು ಅವರು ಬೇಕೆಂದೇ ಮಾಡಿದ್ದಾರೋ, ಗೊತ್ತಿಲ್ಲದೆಯೇ ಮಾಡುತ್ತಿದ್ದಾರೋ, ಅದು ನಮಗೆ ಇಲ್ಲಿ ಮುಖ್ಯವಲ್ಲ. ಅಂಥದ್ದೊಂದು ಕೆಲಸ ನಡೆಯುತ್ತಿರುವುದಂತೂ ಹೌದು ಎನ್ನಿಸುತ್ತಿದೆ. ಇಲ್ಲಿ ಏನಾಗುತ್ತಿದೆಯೆಂದರೆ ಒಂದು ನಿರ್ದಿಷ್ಟ ಪ್ರತಿಪಾದನೆಗಾಗಿ ವಚನಗಳ ಇತಿಹಾಸದ ಮೇಲೆ ಏಕಸ್ವಾಮ್ಯತೆಯನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಆ ಪ್ರತಿಪಾದನೆಯನ್ನು ಬೆಂಬಲಿಸುವ ಕೆಲವು ವಚನಗಳನ್ನು ಮಾತ್ರವೇ ಆ ಇತಿಹಾಸಕ್ಕೆ ಪ್ರಾತಿನಿಧಿಕ ಎಂದು ಪರಿಗಣಿಸಲಾಗಿದೆ. ಅಂದರೆ ಇವರ ಪ್ರತಿಪಾದನೆಗೆ ಆ ವಚನಗಳು ಮಾತ್ರವೇ ನಿಜಗಳನ್ನು ಒದಗಿಸುತ್ತವೆ. ಹಾಗಾಗಿ ಅವುಗಳಷ್ಟೇ ಸತ್ಯ ಎನ್ನುತ್ತಿದ್ದಾರೆ. ಅವರ ಪ್ರತಿಪಾದನೆಗಳ ಸಮರ್ಥನೆಗಾಗಿಯೇ ಅವರು ಉಲ್ಲೇಖಿಸುವ ಉದಾಹರಣೆಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಅವು ಅವರ ಪ್ರತಿಪಾದನೆಗಳನ್ನು ಪರೀಕ್ಷೆಗೊಡ್ಡುವ ಸಾಧ್ಯತೆಯೇ ಇಲ್ಲ.
ಇದು ಸಂಶೋಧನೆಯ ಪ್ರಗತಿಗೆ ಒಂದು ಅಡ್ಡಗೋಡೆಯನ್ನು ನಿರ್ಮಿಸುತ್ತದೆ. ಒಂದು ಉದಾಹರಣೆಯ ಮೂಲಕ ಹೇಳುವುದಾದರೆ, ಭಾರತದ ಪ್ರಾಗೈತಿಹಾಸಿಕ ಸಂಶೋಧನೆಯಲ್ಲಿ ಇಂಥದ್ದೇ ಒಂದು ಪ್ರಕರಣವಿದೆ. ಆದಿ ಹಳೆಯ ಶಿಲಾಯುಗದ (ಅರ್ಲಿ ಪಾಲಿಯೋಲಿಥಿಕ್) ಮಾನವನ ಶಿಲಾಯುಧಗಳನ್ನು ಹುಡುಕುವಾಗ ಹಿಂದಿನ ಪ್ರಾಕ್ತನಶಾಸ್ತ್ರಜ್ಞರು ಅವನು ನದೀ ದಡಗಳಲ್ಲಿ ವಾಸವಾಗಿದ್ದನು ಎಂಬ ಪೂರ್ವಗ್ರಹೀತವನ್ನು ಇಟ್ಟುಕೊಂಡು ನದೀ ದಡಗಳಲ್ಲೇ ಹುಡುಕಾಡಿದರು. ಅಲ್ಲಿ ಅವಶೇಷಗಳೂ ಸಿಕ್ಕವು. ನಂತರ ಭಾರತದಲ್ಲಿ ಆದಿಮಾನವನ ಸಂಸ್ಕೃತಿಗೆ ಅವಶೇಷಗಳು ನದೀದಡಗಳಲ್ಲೇ ಸಿಗುತ್ತಿದ್ದದರಿಂದ ಅವನು ನದೀ ದಡಗಳಲ್ಲೇ ಇರುವುದು ಸತ್ಯವಾಯಿತು. ಅವನು ಏಕೆ ನದೀ ದಡಗಳಲ್ಲೇ ಇರುತ್ತಿದ್ದನೆನ್ನುವುದಕ್ಕೆ ವಿವರಣೆಗಳನ್ನೂ ಹೊಸೆಯಲಾಯಿತು. ಆದರೆ ಈ ಸತ್ಯಕ್ಕೆ ಕೊನೆಬಂದಿದ್ದು ಕೆಲವು ಪ್ರಾಕ್ತನಶಾಸ್ತ್ರಜ್ಞರು ಅವನಿಗೆ ಸಂಬಂಧಿಸಿದ ಪಳೆಯುಳಿಕೆಗಳನ್ನು ಗುಡ್ಡಬೆಟ್ಟಗಳಲ್ಲಿ, ಅರಣ್ಯಗಳಲ್ಲಿ ಶೋಧಿಸಿದಾಗ. ಅಂದರೆ ನದೀ ದಡಗಳಲ್ಲೇ ನೀವು ಎಷ್ಟೇ ಹುಡುಕಿದರೂ ‘ಮಾನವನು ನದೀ ದಡದಲ್ಲೇ ಇರುತ್ತಿದ್ದ’ ಎನ್ನುವ ಸತ್ಯಕ್ಕೆ ಚ್ಯುತಿ ಬರುವ ಪ್ರಶ್ನೆಯೇ ಇಲ್ಲ. ಅದಕ್ಕೆ ಬೇರೆಡೆ ಹುಡುಕಬೇಕಾಗುತ್ತದೆ. ಬೇರೆಡೆಗೂ ಹುಡುಕಾಟಕ್ಕೆ ಜಾಗಗಳಿವೆಯಲ್ಲ? ಹುಡುಕಾಡುವವರಿಗೆ ಅವು ಸವಾಲುಗಳಾಗಿ ಕಾಡಬೇಕು.
ವಚನಗಳು ಜಾತಿವ್ಯವಸ್ಥೆಯ ವಿರುದ್ಧದ ಚಳವಳಿಗಳು ಎನ್ನುವವರಿಗೆ ನಿಜವಾಗಿಯೂ ಸತ್ಯಶೋಧನೆಯಲ್ಲಿ ಆಸಕ್ತಿ ಇದ್ದದ್ದೇ ಹೌದಾಗಿದ್ದರೆ ಬಾಲಗಂಗಾಧರರು ಹಾಗೂ ಡಂಕಿನ್ ಇಂಥ ಸವಾಲುಗಳತ್ತ ನಮ್ಮ ಗಮನವನ್ನು ಸೆಳೆಯುತ್ತಿದ್ದಾರೆ ಎಂಬುದಾಗಿ ಗ್ರಹಿಸಬೇಕಿತ್ತು. ಅವರು ಮುಂದಿಡುತ್ತಿರುವ ಸಮಸ್ಯೆಗಳನ್ನು ತಮ್ಮ ಪ್ರತಿಪಾದನೆಯ ಪರೀಕ್ಷೆ ನಡೆಸಲು ಬಳಸಿಕೊಳ್ಳಬೇಕಿತ್ತು. ಆದರೆ ಅವರು ಕ್ಷಣಮಾತ್ರವೂ ವಿಚಲಿತರಾಗದೇ ಅನ್ಯ ವಚನಗಳನ್ನು ತೋರಿಸಿ ತಮ್ಮ ವಾದವನ್ನು ಮಂಡಿಸಲು ಪ್ರಯತ್ನಿಸುವವರನ್ನು ಬಲಪ್ರಯೋಗವನ್ನು ಮಾಡಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಇದು ಈ ಚರ್ಚೆಯ ಮತ್ತೊಂದು ಆಯಾಮವನ್ನು ಸ್ಪಷ್ಟಗೊಳಿಸುತ್ತದೆ: ಅಂದರೆ ಇವರು ಯಾವುದೇ ಬೌದ್ಧಿಕ ಹುಡುಕಾಟವನ್ನು ಅಥವಾ ಸಂವಾದವನ್ನು ನಡೆಸುವ ಉದ್ದೇಶವನ್ನು ಇಟ್ಟುಕೊಂಡಿಲ್ಲ. ಬದಲಾಗಿ ಒಂದು ನಿರ್ದಿಷ್ಟ ಸತ್ಯವನ್ನು ಪ್ರತಿಪಾದಿಸುವ ಉದ್ದೇಶವನ್ನಷ್ಟೇ ಇಟ್ಟುಕೊಂಡಿದ್ದಾರೆ. ಅದನ್ನು ಬಲವಂತವಾಗಿಯಾದರೂ, ಬಲಪ್ರಯೋಗ ಮಾಡಿಯಾದರೂ ವಿರೋಧಿಗಳ ಮೇಲೆ ಹೇರುವ ಪ್ರಯತ್ನ ನಡೆಸಿದ್ದಾರೆ.
ಇದು ವಚನಗಳ ಕುರಿತು ಕಳೆದ ಹಲವು ದಿನಗಳಿಂದ ನಡೆದ ಚರ್ಚೆಯಲ್ಲಿ ನಮ್ಮ ಮೇಲೆ ಕೆಂಡ ಕಾರಿದ ಕನ್ನಡ ಬುದ್ಧಿಜೀವಿಗಳ ಕುರಿತು ನಾನು ತೆಗೆದುಕೊಳ್ಳುವ ನಿಲುವು. ಅವರ ಜೊತೆಗೆ ಚರ್ಚೆ ನಡೆಸಿದಾಗ ನಾವೂ ರಾಜಕೀಯ ಮಾಡುತ್ತಿದ್ದೇವೆಂದು ಕಾಣಿಸುತ್ತಿರುವುದು ಅವರಿಗೆ ಸಹಜ, ಏಕೆಂದರೆ ಈಗ ಅವರು ಮಾಡುತ್ತಿರುವುದು ನಿರ್ದಿಷ್ಟವಾಗಿ ಅದನ್ನೇ. ನಾಳೆ ನಮ್ಮ ನಿರೂಪಣೆಯನ್ನಿಟ್ಟುಕೊಂಡು ಒಂದು ಆಳ್ವಿಕೆಯನ್ನು ರಚಿಸುವ ಹುನ್ನಾರ ನಮಗಿದೆ ಎಂದು ಅವರಿಗೆ ಏಕೆ ಹೆದರಿಕೆಯಾಗುತ್ತಿದೆಯೆಂದರೆ ಅವರು ವಚನಗಳನ್ನು ಈಗ ನಿರ್ದಿಷ್ಟವಾಗಿ ಅವನ್ನು ಅದಕ್ಕೇ ಉಪಯೋಗಿಸಿಕೊಂಡಿದ್ದಾರೆ. ಅಂದರೆ ಪರಸ್ಪರರ ಭಾಷೆ ಗೊತ್ತಿಲ್ಲದ ಎರಡು ಬೇರೆ ಬೇರೆ ಭಾಷೆಯವರು ಸಂಭಾಷಣೆ ಮಾಡಿದಂತೇ ಆಗಿದೆ. ಒಬ್ಬನು ಹೇಳಿದ ಯಾವುದೋ ಶಬ್ದವು ಮತ್ತೊಬ್ಬನಿಗೆ ಅವನ ಭಾಷೆಯಲ್ಲಿ ಏನೋ ಅಪಾರ್ಥವನ್ನು ಹುಟ್ಟಿಸಿ ಗಾಭರಿಗೆ ಕಾರಣವಾಗಿದೆ. ಇಷ್ಟು ಅವರ ಪ್ರತಿಪಾದನೆಯನ್ನೇ ಅನುಸರಿಸಿ ಹೋದಾಗ ತಿಳಿದುಬರುವ ಸಂಗತಿ. ಇನ್ನು ನಾವೇನು ಹೇಳುತ್ತಿದ್ದೇವೆಂಬುದರ ಕುರಿತು ಬಹುಶಃ ಸಂಶೋಧನಾ ಲೇಖನಗಳ ರೂಪದಲ್ಲಿ ಬೌದ್ಧಿಕ ಸಂವಾದದಲ್ಲಿ ಆಸಕ್ತಿ ಇರುವವರಿಗಾಗಿ ಮುಂದೆ ಬರೆದೇ ಬರೆಯುತ್ತೇವೆ. ಈಗಾಗಲೇ ಈ ವಿಷಯವನ್ನು ರಾಜಕೀಯಕ್ಕೆ ಉಪಯೋಗಿಸಿರುವ ನಿರ್ದಿಷ್ಟ ಕಾರಣದಿಂದಲೇ ನಮ್ಮ ಸಂಶೋಧನೆಗೆ ರಾಜಕೀಯ ಪರಿಣಾಮಗಳೂ ಇರುವ ಸಾಧ್ಯತೆಯನ್ನು ಅಲ್ಲಗಳೆಯುತ್ತಿಲ್ಲ. ಆದರೆ ನಮ್ಮ ಕಣ್ಣೆದುರಿಗೆ ಸಧ್ಯಕ್ಕೆ ಕಾಣುವುದು ಶುದ್ಧಾಂಗ ಬೌದ್ಧಿಕ ಸಮಸ್ಯೆಯೊಂದೇ. ಬಹುಶಃ ಎಚ್. ಎಸ್. ಶಿವಪ್ರಕಾಶರವರು ಮುಂದಿನ ಸಂವಾದದ ಸಾಧ್ಯತೆಯನ್ನು ತಾವೇ ತಮ್ಮ ಪ್ರತಿಕ್ರಿಯೆಗಳಲ್ಲಿ ಹುಟ್ಟುಹಾಕಿದ್ದಾರೆ. ಅದು ಈ ಇಡೀ ಚರ್ಚೆಯಲ್ಲಿ ನಮಗಾದ ಲಾಭ.
Very logically written. I still remember, in late seventies, there was no going overboard in saying Vachanas are against casteism, and Vachanakaars worked to establish a casteless society. (When I read Prof.M.R.Sri’s Vachana Dharmasaara) I find caste was not prominent in Vachanas but ‘Mysticism’ is. It was only during 2000 onwards, certain group of writers having ‘Marxist’ affiliations started to reinterpret Vachanas as always Marxists twist history according to their ideology.
Umesh
Could you give the details of the book of Prof. M.R.Sri’s
ವಚನ ಧರ್ಮಸಾರ – ಪ್ರೊಫೆಸರ್ ಏಂ. ಆರ್. ಶ್ರೀನಿವಾಸಮೂರ್ತಿ ಪ್ರಕಟಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 1990.
This book is very famous for its explanations and M.R.Sri was felicitated by various Veerashaiva Mathadhipathis at that time for his authority and knowledge on Vachanas. If you need more information on Prof.M.R.Sri, it is available in ‘Jnapaka Chitrashaale’ malike by Dr.D.V.Gundappa.