ಸಂಶೋಧನೆಗಳ ಮೇಲೆ ಸರ್ಕಾರದ ವಕ್ರದೃಷ್ಟಿ
ರಮಾನಂದ ಐನಕೈ, ನ್ಯಾಯವಾದಿಗಳು, ಶಿರಸಿ
ಸಂಶೋಧನೆ ಅಂದರೇನು? ಸಂಶೋಧನೆಗಳಿಂದ ಸಮಾಜಕ್ಕೆ ಏನು ಪ್ರಯೋಜನ? ವರ್ತಮಾನದ ಎದುರು ಇಂತಹ ಹಲವಾರು ಪ್ರಶ್ನೆಗಳಿವೆ. ಉತ್ತರಿಸುವವರಾರು? ಸಂಶೋಧನೆಗಳ ಕುರಿತಾಗೆ ಸಂಶೋಧನೆ ನಡೆಸಬೇಕಾದ ಅಗತ್ಯ ನಮ್ಮೆದುರಿಗಿದೆ.
ಒಂದುದಿನ ಬೆಳಿಗ್ಗೆ ಶಾಲೆಗೆ ಹೋಗುವ ನನ್ನ ಮಗ ರಂಪಾಟ ಮಾಡುತ್ತಿದ್ದಾನೆ. ಅವನ ಸಮವಸ್ತ್ರದ ಅಂಗಿಚಡ್ಡಿ ಸಿಕ್ಕಿಲ್ಲ. ತಾಯಿಯ ಜೊತೆ ಕೂಗಾಡುತ್ತಿದ್ದಾನೆ. ಆಕೆಗೂ ಸಿಟ್ಟು ಬಂತು. ‘ ಅಪ್ಪಅಮ್ಮ ಇರೋದು ಅಂಗಿಚಡ್ಡಿ ಹುಡುಕಿಕೊಡೋದಕ್ಕಲ್ಲ. ಬೇಕಾದರೆ ನೀನೆ ಹುಡುಕಿಕೊ’ ಎಂದು ತನ್ನ ಕೆಲಸಕ್ಕೆ ಹೋದಳು. ಈತ ಬೆಡ್ ರೂಮಿನಲ್ಲಿ ದಡಬಡ ಸದ್ದುಮಾಡುತ್ತ ಹುಡುಕತೊಡಗಿದ. ಸ್ವಲ್ಪ ಸಮಯದ ನಂತರ ಓಡಿಬಂದು ‘ಸಿಕ್ಕಿತು, ಅಂಗಿಚಡ್ಡಿ ನಾನೇ ಸಂಶೋಧನೆ ಮಾಡಿದೆ’ ಎಂದು ಹೆಮ್ಮೆಯಿಂದ ಹೇಳಿದೆ. ಸಂಶೋಧನೆಯ ಕತೆ ಇಲ್ಲಿಗೆ ಬಂತಲ್ಲ ಎಂದು ನನಗೆ ನಗು ಬಂತು. ಇದಕ್ಕೆ ಪೂರಕವಾಗಿ ನನ್ನ ಮಿತ್ರರೊಬ್ಬರು ‘ಕೆಲವರು ಗೂಗಲ್ನಲ್ಲಿ ಸರ್ಚ ಮಾಡುವುದನ್ನೇ ರಿಸರ್ಚ ಅಂದುಕೊಂಡಿದ್ದಾರೆ’ ಎಂದು ಹೇಳುತ್ತಿದ್ದರು. ಹೀಗೆ ಇಂದು ಸಂಶೋಧನೆಯೆಂದರೆ ನಗೆಪಾಟಲಿನ ವಿಷಯವಾಗಿದೆ. ಮುಖ್ಯವಾಗಿ ಅಕಡೆಮಿಕ್ ರಿಸರ್ಚಗಳು ಇಂಥ ಟೀಕೆಗೆ ಗುರಿಯಾಗಿವೆ. ವಿಶ್ವವಿದ್ಯಾಲಯದ ಸಂಶೋಧನೆಗಳ ಗುಣಮಟ್ಟವಂತೂ ಕಲ್ಪನೆಗೆ ಎಟಕುತ್ತಿಲ್ಲ.
ಹಾಗಂತ ಎಲ್ಲರೂ ಈ ರೀತಿ ಇರುತ್ತಾರೆ ಎಂದರೆ ತಪ್ಪಾಗುತ್ತದೆ. ಕೆಲವರು ಪ್ರಾಮಾಣಿಕವಾಗಿ ತೊಡಗಿಕೊಳ್ಳುವವರೂ ಇದ್ದಾರೆ. ಆದರೆ ಅವರಿಗೂ ಒಂದು ಮಿತಿ ಇದೆ. ಈಗಾಗಲೆ ಚಾಲ್ತಿಯಲ್ಲಿದ್ದ ವಿಚಾರಗಳ ಪುನರುತ್ಪಾದನೆಯನ್ನೆ ಮಾಡುತ್ತಿರುತ್ತಾರೆ. ಏಕೆಂದರೆ ನಮ್ಮಲ್ಲಿನ ಸಂಶೋಧನಾ ವಿಧಾನಗಳೇ ಸರಿಯಾಗಿಲ್ಲ. ಸಂಶೋಧನೆಯ ವಿಷಯ ಏನಿರಬೇಕು? ಸಂಶೋಧನೆಗೆ ಯಾವ ವಿಷಯವನ್ನು ಹೇಗೆ ಆಯ್ದುಕೊಳ್ಳಬೇಕೆಂಬುದರ ಕುರಿತೂ ಸರಿಯಾದ ಮಾರ್ಗದರ್ಶನವಿಲ್ಲ. ಅದರಲ್ಲೂ ಸಮಾಜ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳ ಸಂಶೋಧನೆಯಂತೂ ಶುದ್ಧ ಬಾಲೀಶತನದಿಂದ ಕೂಡಿರುತ್ತದೆ. ಗತ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಸಮಾಜದ ಸಂಶೋಧನೆ ಮಾಡುತ್ತಾರೆ. ಆದ್ದರಿಂದ ಸಮಾಜ ವಿಜ್ಞಾನದ ಸಂಶೋಧನೆಗೆ ಹೊರಡುವ ಆದರ್ಶದ ಯುವಕರಿಗೆ ಪ್ರಾರಂಭದಲ್ಲೇ ಸಮಸ್ಯೆ ಎದುರಾಗುತ್ತದೆ. ಜನರಿಗೆ ಬೇಕಾದ ಜನಪ್ರೀಯ ವಾದಗಳನ್ನು ಸಂಶೋಧನೆಗೆ ಆಯ್ದುಕೊಳ್ಳಬೇಕೋ ಅಥವಾ ಕಷ್ಟವಾದರೂ ಸತ್ಯಶೋಧಿಸಲು ಹೊರಡಬೇಕೋ ಎಂಬ ಆಯ್ಕೆಯ ಸಂದಿಗ್ಧ ಶುರುವಾಗುತ್ತದೆ.
ಸಂಶೋಧನೆ ಅಂದರೆ ಒಂದರ್ಥದಲ್ಲಿ ಸತ್ಯಶೋಧನೆ. ಸತ್ಯಶೋಧನೆ ಅಂದರೆ ಒಂದು ಸಂಗತಿಯ ಕುರಿತು ಇರುವ ಜ್ಞಾನವನ್ನು ಹೆಚ್ಚಿಸುವ ಅಥವಾ ಇರುವ ಜ್ಞಾನಕ್ಕೆ ಪರ್ಯಾಯವನ್ನು ಹುಡುಕುವ ಪ್ರಯತ್ನ. ಆದ್ದರಿಂದ ಒಂದು ಸಂಗತಿಯ ಕುರಿತು ಇರುವ ಸಾಮಾನ್ಯ ತಿಳುವಳಿಕೆ ಮತ್ತು ಅದರ ಕುರಿತು ಸಂಶೋಧನೆಗೆ ಹೊರಟಾಗ ಹೊಂದಿರಬೇಕಾದ ತಿಳುವಳಿಕೆಯ ಮಧ್ಯೆ ವ್ಯತ್ಯಾಸವಿದೆ. ಈ ವ್ಯತ್ಯಾಸ ತಿಳಿಯದ ಹೊರತೂ ನಿಜವಾದ ಸಂಶೋಧನೆ ಸಾಧ್ಯವಿಲ್ಲ. ವರ್ತಮಾನದಲ್ಲಿ ಕಾಣುತ್ತಿರುವ ಸಂಶೋಧನಾ ವಿಧಾನ ಹಳೆ ಮಾದರಿಯದು. ಇದು ಅಂಕಿಅಂಶಗಳನ್ನು ಕಲೆಹಾಕಿ ಕ್ಷೇತ್ರಕಾರ್ಯ ಮಾಡುವ ಕುರಿತು ಹೆಚ್ಚಿನ ಆಸಕ್ತಿ ಮೂಡಿಸುತ್ತಲಿದೆ. ಎಷ್ಟು ಉದಾಹರಣೆಗಳನ್ನು ಆಯ್ದುಕೊಳ್ಳಬೇಕು, ಎಷ್ಟು ಜನರನ್ನು ಸಂದರ್ಶಿಸಬೇಕು, ಎಷ್ಟು ಚಿತ್ರಗಳನ್ನು ಮತ್ತು ರೇಖಾಚಿತ್ರಗಳನ್ನು ಬಳಸಬೇಕು ಎಂಬಿತ್ಯಾದಿ ತಾಂತ್ರಿಕ ವಿಷಯಗಳತ್ತಲೇ ಗಮನ ಕೇಂದ್ರಿಸಲಾಗುತ್ತಿದೆ. ಈ ವಿಧಾನ ಸೈದ್ಧಾಂತಿಕ ಸಂಶೋಧನೆ ನಡೆಸಲು ಬೇಕಾದ ತಯಾರಿಯನ್ನು ಕಲಿಸುವುದಿಲ್ಲ.
ಸಮಾಜ ವಿಜ್ಞಾನದ ಸಂಶೋಧನೆಗಳು ಯಾವತ್ತೂ ಸೂಕ್ಷ್ಮವಾದ ಸಂಗತಿ. ಏಕೆಂದರೆ ಸಾಮಾಜಿಕ ಸಂಗತಿಗಳಾದ ಬಡತನ, ಶೋಷಣೆ, ರೂಢಿ-ಪದ್ದತಿಗಳ ಬಗ್ಗೆ ಸಮಾಜ ವಿಜ್ಞಾನಿಗಳು ಈಗಾಗಲೆ ಒಂದು ರೀತಿಯ ವಿವರಣೆ ನೀಡಿರುತ್ತಾರೆ. ಈ ವಿವರಣೆಗಳನ್ನು ಮೀರಿ ಸತ್ಯಾನ್ವೇಷಣೆ ಮಾಡುವ ಸಾಹಸಕ್ಕೆ ಬಹುತೇಕ ಸಂಶೋಧಕರು ಕೈಹಾಕುವುದಿಲ್ಲ. ಏಕೆಂದರೆ ಅದೊಂದು ಸಿದ್ಧಸತ್ಯವೆಂದು ನಂಬಿಕೊಂಡಿರುತ್ತಾರೆ. ಭಾರತದಂತಹ ದೇಶದಲ್ಲಿ ಈ ಸಿದ್ಧಸತ್ಯದ ಮೇಲೆಯೇ ರಾಜಕೀಯ ವ್ಯವಸ್ಥೆ ಕೂಡ ಕಟ್ಟಿಕೊಂಡಿರುತ್ತದೆ. ದೇಶದ ಚಿಂತನಾ ಪ್ರಪಂಚದ ಬುನಾದಿಯೆ ಅದಾಗಿರುತ್ತದೆ. ಸಮಾಜದಲ್ಲಿ ಒಂದಿಷ್ಟು ಸಮಸ್ಯೆಗಳಿವೆಯೆಂದಮೇಲೆ ಆ ಸಮಸ್ಯೆಗಳಿಗೆಲ್ಲ ಮೂಲವೊಂದಿರಬೇಕೆಂಬುದು ಸಾಮಾನ್ಯ ಜ್ಞಾನ. ಈ ಮೂಲ ಹುಡುಕುವುದು ಸೈದ್ಧಾಂತಿಕ ಸಂಶೋಧನೆಗಳ ಕೆಲಸ. ಸಂಶೋಧನೆ ಯಾವತ್ತೂ ಅಂತಿಮ ಸತ್ಯ ಹೇಳುತ್ತದೆಯೆಂದು ತಿಳಿದುಕೊಳ್ಳಬೇಕಾಗಿಲ್ಲ. ಆದರೆ ಈಗಾಗಲೆ ಇದ್ದದ್ದಕ್ಕಿಂತ ಹೊಸ ಸತ್ಯ ಹೇಳಿರುತ್ತದೆ. ಮುಂದೆ ಯಾರಾದರೂ ಇನ್ನೂ ಹೊಸ ಸಿದ್ಧಾಂತಗಳ ಮೂಲಕ ಅದನ್ನ ಅಲ್ಲಗಳೆಯುವ ವರೆಗೆ ಅದೇ ಸತ್ಯವಾಗಿರುತ್ತದೆ. ಅಂದಾಗ ಮಾತ್ರ ಅದು ವೈಜ್ಞಾನಿಕ ಸಂಶೋಧನೆ ಅನಿಸಿಕೊಳ್ಳುತ್ತದೆ. ಈ ಕಾರಣಕ್ಕಾಗೆ ಸಾಮಾಜಿಕ ಸಂಶೋನೆಗಳು ಸದಾ ನಡೆಯುತ್ತಿರಬೇಕು. ಅದನ್ನ ಹತ್ತಿಕ್ಕಲು ಪ್ರಯತ್ನಿಸಿದರೆ ಆ ಸಮಾಜ ಅಭಿವೃದ್ಧಿ ಹೊಂದಲಾರದು. ಕಲುಷಿತ ನೀರು ಹೊರಹೋಗಬೇಕು. ಹೊಸ ನೀರು ಬಂದು ಸೇರಬೇಕು. ನಿಂತ ನೀರು ಕೆಡುತ್ತದೆ.
ಈಗ ನಡೆಯುತ್ತಿರುವ ಸಂಶೋಧನೆಗಳಿಗೂ ಸಿದ್ಧಾಂತಗಳಿಲ್ಲವೆ ಎಂಬ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ಐಡಿಯಾಲಜಿ ಮತ್ತು ಸಿದ್ಧಾಂತ ಒಂದೇ ಎಂಬುದು ನಮ್ಮ ತಿಳುವಳಿಕೆ. ಆದರೆ ಅವು ಬೇರೆಬೇರೆ. ಐಡಿಯಾಲಜಿ ಈಗಾಗಲೇ ಇರುವ ಸಾಮಾನ್ಯ ತಿಳುವಳಿಕೆಯನ್ನು ಆಧರಿಸಿ ಮಾರ್ಗದರ್ಶನವಾಗಿ ಕೆಲಸ ಮಾಡುತ್ತಿರುತ್ತದೆ. ಹೊಸ ಜ್ಞಾನಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ ಐಡಿಯಾಲಜಿ ಇಟ್ಟುಕೊಂಡು ಸಂಶೋಧನೆ ಮಾಡುವುದೆಂದರೆ ಇರುವ ಜ್ಞಾನವನ್ನು ಪುನರುತ್ಪಾದನೆ ಮಾಡುವುದು. ಅದು ವೈಜ್ಞಾನಿಕ ಸಂಶೋಧನೆ ಅನಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಸಿದ್ಧಾಂತಗಳು ಇರುವ ಜ್ಞಾನವನ್ನ ಒರೆಗೆಹಚ್ಚಿ ಹೆಚ್ಚೆಚ್ಚು ಸ್ಪಷ್ಟಗೊಳಿಸುತ್ತಾ ಹೋಗುತ್ತದೆ. ಸಂಶೋಧನೆಗಳಲ್ಲಿ ಈ ಸ್ಪಷ್ಟತೆ ಹೆಚ್ಚಾಗುತ್ತಾ ಹೋಗಬೇಕು. ನಾವು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಾಗಿದ್ದು ದಿನನಿತ್ಯ ನಾವು ನೀಡುವ ವಿವರಣೆ ನಮ್ಮ ಅನುಭವಕ್ಕೆ ವ್ಯತಿರಿಕ್ತವಾಗಿದ್ದಲ್ಲಿ ಸಮಸ್ಯೆ ಏಳುತ್ತದೆ. ಐಡಿಯಾಲಜಿ ಮತ್ತು ವಾಸ್ತವಗಳ ನಡುವೆ ವೈರುದ್ಧ್ಯ ಇರುತ್ತದೆ. ಇದನ್ನ ಗುರುತಿಸದೆ ಮುಂದೆ ಹೋಗುವವ ನಿಜವಾದ ಸಂಶೋಧಕ ಆಗಲು ಸಾಧ್ಯವಿಲ್ಲ.
ಬೆಳಗಿನ ಸೂರ್ಯೋದಯವನ್ನು ಒಬ್ಬ ಸಾಮಾನ್ಯ ವ್ಯಕ್ತಿ ನೋಡುವುದಕ್ಕೂ, ಕವಿ, ಛಾಯಾಗ್ರಾಹಕ ಅಥವಾ ಭೌತಶಾಸ್ತ್ರದ ವಿಜ್ಞಾನಿಗಳು ನೋಡುವುದಕ್ಕೂ ಭಿನ್ನವಾಗಿರುತ್ತದೆ. ಅದೇರೀತಿ ಸಮಾಜದಲ್ಲಿರುವ ವಿದ್ಯಮಾನಗಳನ್ನು ಒಬ್ಬ ಸಾಮಾನ್ಯ ವ್ಯಕ್ತಿ ನೋಡುವುದಕ್ಕೂ ಒಬ್ಬ ಸಂಶೋಧಕ ನೋಡುವುದಕ್ಕೂ ಭಿನ್ನವಾಗಿರಬೇಕು. ಆದರೆ ಈ ಭಿನ್ನತೆ ಇಂದಿನ ಸಂಶೋಧನೆಗಳಲ್ಲಿ ಕಾಣುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ’ (ಸಿ ಎಸ್ ಎಲ್ ಸಿ) ಎಂಬ ಸಂಶೋಧನಾ ಕೇಂದ್ರ 2007ರಲ್ಲಿ ಪ್ರಾರಂಭವಾಯಿತು. ಭಾರತದಲ್ಲೇ ಸೈದ್ಧಾಂತಿಕ ಸಂಶೋಧನೆಯ ವಿಧಾನವನ್ನು ಶಿಸ್ತುಬದ್ಧವಾಗಿ ತರಬೇತಿ ನೀಡುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೆ ಐವರು ವಿದ್ಯಾರ್ಥಿಗಳು ಸಂಶೋಧನೆ ಮುಗಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ವಿದೇಶಗಳಿಗೂ ಹೋಗಿ ಪ್ರಬಂಧ ಮಂಡಿಸಿ ಸೈ ಅನಿಸಿಕೊಂಡು ಬಂದಿದ್ದಾರೆ. ಇನ್ನೂ ಐದು ವಿದ್ಯಾರ್ಥಿಗಳು ಸಂಶೋಧನೆ ಮಾಡುತ್ತಿದ್ದಾರೆ. ಕರ್ನಾಟಕದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಗಿಟ್ಟುಕೊಂಡು ಅವುಗಳ ತಳಸೋಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಸಂಶೋಧನೆಯ ಹಿಂದೆ ಯಾವುದೇ ಸ್ವಾರ್ಥ ಇಲ್ಲ. ಪೂರ್ವಗ್ರಹವಿಲ್ಲ. ಸಮಸ್ಯೆಗಳ ಮೂಲವನ್ನು ಅರಿವಿಗೆ ತಂದು ಸಂಘರ್ಷ ಮತ್ತು ವೈಶಮ್ಯ ಶಮನಗೊಳ್ಳಬೇಕೆಂಬುದೇ ಇವರ ಗುರಿ.
ಆದರೆ ಕರ್ನಾಟಕದ ಹಲವಾರು ಚಿಂತಕರು ತಮ್ಮ ಐಡಿಯಾಲಜಿಗೆ ಈ ಸಂಶೋಧನೆಗಳು (ಸಿದ್ಧಾಂತಗಳು) ಅಡ್ಡಿಯಾಗಬಹುದೆಂಬ ಉದ್ದೇಶದಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸರ್ಕಾರಕ್ಕೂ ಕಿವಿಊದಿದ್ದಾರೆ. ಇತ್ತೀಚೆಗೆ ಅಸ್ತಿತ್ವದಲ್ಲಿ ಬಂದ ಹೊಸ ಸರ್ಕಾರವೂ ಈ ಸಂಚಿನಲ್ಲಿ ಪಾಲ್ಗೊಂಡಂತಿದೆ. ಸಂಶೋಧನಾ ಕೇಂದ್ರ ಸಮಾಜವಿರೋಧಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ತನಿಖೆಗೆ ಒಳಪಡಿಸಲಾಗಿದೆ. ಮುಖ್ಯವಾಗಿ ಕೇಂದ್ರವನ್ನು ಮುಚ್ಚುವ ಹುನ್ನಾರ ಇದು. ಅದಕ್ಕೂ ಮೊದಲು ಇವರು ಮಾಡಿದ ಸಂಶೋಧನೆಗಳನ್ನು ಓದಲಿ. ಅದು ಹೇಗೆ ಸಮಾಜ ವಿರೋಧಿ ಆಗುತ್ತದೆಯೆಂದು ಸಾಬೀತುಪಡಿಸಲಿ. ಅಂದಾಕ್ಷಣ ಸತ್ಯ ನಾಶವಾಗುವುದಿಲ್ಲ. ಸತ್ಯ ಜನಸಾಮಾನ್ಯರ ತಿಳುವಳಿಕೆಯನ್ನೂ ಮೀರಿ ನಿಂತಿರುತ್ತದೆ. ಅದಕ್ಕೆ ಇತಿಹಾಸದ ನಿದರ್ಶನವಿದೆ. ಜನಸಾಮಾನ್ಯರು ಭೂಮಿಕೇಂದ್ರಿತ ಸಿದ್ಧಾಂತವನ್ನು ನಂಬಿಕೊಂಡ ಸಂದರ್ಭದಲ್ಲಿ ಗೆಲಿಲಿಯೊ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಮಂಡಿಸಿದ. ಗೆಲಿಲಿಯೋನ ಕತೆ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ. ಆದರೆ ಇಂದು ಗೆಲಿಲಿಯೋ ಹೇಳಿದ್ದು ಜಗತ್ತಿನ ಕುರಿತಾದ ಸತ್ಯ ಎಂಬುದು ಸಾಮಾನ್ಯ ತಿಳುವಳಿಕೆ.
ಆದ್ದರಿಂದ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವಾಲಯ ವಿವೇಕದಿಂದ ವರ್ತಿಸಬಹುದೆಂಬ ನಂಬಿಕೆ ಇನ್ನೂ ಉಳಿದಿದೆ. ಏಕೆಂದರೆ ಒಳಿತನ್ನು ಚಿವುಟುವುದು ಪ್ರಭುತ್ವದ ಲಕ್ಷಣ ಅಲ್ಲ. ಇಲ್ಲವಾದಲ್ಲಿ ಸಂಶೋಧನಾ ಕೇಂದ್ರವೊಂದು ನ್ಯಾಯಾಲಯದ ಮೊರೆಹೋಗುವ ವಿಪರ್ಯಾಸ ಎದುರಾಗಬಹುದು.