‘ಅಪಶೂದ್ರಾಧಿಕರಣ’ ಏನನ್ನು ಹೇಳುತ್ತದೆ?
ಶಂಕರಾಚಾರ್ಯರ ಬ್ರಹ್ಮಸೂತ್ರಭಾಷ್ಯದ ಅಪಶೂದ್ರಾಧಿಕರಣದಲ್ಲಿ ಮಂಡಿತವಾದ ವಿಚಾರಗಳ ಕುರಿತು ಬರುತ್ತಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ.
ಯಾರು ಎಷ್ಟೇ ದೊಡ್ಡ ವ್ಯಕ್ತಿಯಾಗಿರಬಹುದು, ಗ್ರಂಥವಾಗಿರಬಹುದು ಅದನ್ನು ಟೀಕೆ ಮಾಡುವುದರಲ್ಲಿ ಅಥವಾ ಅದರ ವಿಚಾರಗಳನ್ನು ಖಂಡಿಸುವುದರಲ್ಲಿ ಯಾವ ದೋಷವೂ ಇಲ್ಲ. ಆದರೆ ಈ ಕೆಲಸವನ್ನು ತರ್ಕಬದ್ಧವಾಗಿ ಪ್ರಮಾಣಪೂರ್ವಕವಾಗಿ ಮಾಡಬೇಕೆಂಬುದು ಒಂದು ಬೌದ್ಧಿಕ ಚರ್ಚೆಯ ನಿಬಂಧನೆ. ಪ್ರಸ್ತುತ ಟೀಕೆಗಳನ್ನೇ ಗಮನಿಸಿ. ಈ ಟೀಕೆಯನ್ನು ನಡೆಸುವವರು ಎರಡು ಹೆಜ್ಜೆಗಳನ್ನು ಇಡುತ್ತಿದ್ದಾರೆ. 1) ಶಂಕರಾಚಾರ್ಯರು ಏನನ್ನು ಹೇಳುತ್ತಿದ್ದಾರೆ ಎಂಬುದು ಮೊದಲನೆಯದು ಹಾಗೂ 2) ಅದು ಸ್ವೀಕಾರಾರ್ಹವಲ್ಲ ಎಂಬುದು ಎರಡನೆಯದು. ಮೊದಲನೆಯದು ಸಿದ್ಧವಾಗದೇ ಎರಡನೆಯದು ಸಾಧ್ಯವಿಲ್ಲ. ಒಂದೊಮ್ಮೆ ಶಂಕರರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನೇ ತಪ್ಪಾಗಿ ತಿಳಿಯಲಾಗಿದೆ ಅಂತಾದರೆ ಎರಡನೆಯ ಹೆಜ್ಜೆಯೂ ದಿಕ್ಕು ತಪ್ಪಿಹೋಗಿರುತ್ತದೆ. ಈ ಟೀಕೆಗಳಿಗೂ ಇದೇ ಗತಿಯಾಗಿದೆ ಎಂಬುದು ನನ್ನ ಅಭಿಪ್ರಾಯ.
ಮೊದಲನೆಯದು, ಅಂದರೆ ಶಂಕರಾಚಾರ್ಯರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂಬುದು ಬ್ರಹ್ಮಸೂತ್ರ್ರಭಾಷ್ಯದ ಅಪಶೂದ್ರಾಧಿಕರಣವನ್ನು ಓದಿದಾಗ ಸ್ಪಷ್ಟವಾಗುತ್ತದೆ. ಶಂಕರರು ಈ ಭಾಗದಲ್ಲಿ ಬ್ರಹ್ಮಸೂತ್ರದ ಕೆಲವು ಸೂತ್ರಗಳ ಅರ್ಥವನ್ನು ಶ್ರುತಿ, ಸ್ಮೃತಿಗಳ ಅಭಿಪ್ರಾಯಗಳನ್ನು ಆಧರಿಸಿ ನಿರ್ಣಯಿಸುತ್ತಾರೆ. ಈ ಭಾಗವು 1) ಶೂದ್ರರಿಗೆ ಬ್ರಹ್ಮಜ್ಞಾನ ಸಾಧ್ಯವಿಲ್ಲ ಎಂದು ನಿರ್ಣಯಿಸುತ್ತಿಲ್ಲ. 2) ಶೂದ್ರರಿಗೆ ಉಪನಯನಕ್ಕೆ ಹಾಗೂ ವೇದವಿದ್ಯೆಗೆ ಅಧಿಕಾರವಿಲ್ಲ ಎಂಬುದಾಗಿಯೂ ಹೇಳುತ್ತಿಲ್ಲ. 3)ವೇದಾಧ್ಯಯನದಿಂದ ಮಾತ್ರವೇ ಬ್ರಹ್ಮಜ್ಞಾನ ಸಾಧ್ಯ ಎಂಬುದಾಗಿ ಹೇಳುತ್ತಿಲ್ಲ. ಈ ಅಧಿಕರಣದಲ್ಲ್ಲಿ ಹೇಳುತ್ತಿರುವುದೇನೆಂದರೆ ಶೂದ್ರರಿಗೆ ವೇದಾಧ್ಯಯನದ ಮೂಲಕ ಜ್ಞಾನಾಧಿಕಾರವಿಲ್ಲ ಎಂಬುದಷ್ಟೇ. ಉಪನಯನ ಸಂಸ್ಕಾರವಿಲ್ಲದವರಿಗೆ ವೇದಾಧ್ಯಯನಕ್ಕೆ ಅರ್ಹತೆ ಬರುವುದಿಲ್ಲ ಎಂಬುದೇ ಶ್ರುತಿಗಳ ಅಭಿಪ್ರಾಯ ಎಂಬುದನ್ನು ನಿರ್ಣಯಿಸುತ್ತಿದ್ದಾರೆ. ಹುಟ್ಟಾ ಎಲ್ಲರೂ ಶೂದ್ರರು, ಉಪನಯನ ಸಂಸ್ಕಾರವನ್ನು ಹೊಂದಿದವನನ್ನು ದ್ವಿಜ (ಉಪನಯನ ಎರಡನೆಯ ಹುಟ್ಟು) ಎಂಬುದಾಗಿ ಕರೆಯಲಾಗಿದೆ. ಹಾಗಾಗಿ ಎರಡು ಪ್ರಕಾರದ ಶೂದ್ರರನ್ನು ಕುರಿತು ಅವರು ಚರ್ಚಿಸುತ್ತಾರೆ: 1) ಉಪನಯನ ಸಂಸ್ಕಾರವಾಗುವುದಕ್ಕೂ ಪೂರ್ವದ ಅವಸ್ಥೆ (ಇವರಲ್ಲಿ ಬ್ರಾಹ್ಮಣಾದಿ ನಾಲ್ಕು ವರ್ಣಗಳೂ ಬರುತ್ತವೆ) 2) ಜಾತಿ ಶೂದ್ರರು: ಪಾರಂಪರಿಕವಾಗಿ ಉಪನಯನ ಸಂಸ್ಕಾರದ ಆಚರಣೆಯನ್ನೇ ಹೊಂದಿಲ್ಲದ ಜಾತಿಗಳು. ಭಾಷ್ಯವು ವೇದಾಧಿಕಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರಲ್ಲೂ ಯಾವುದೇ ವ್ಯತ್ಯಾಸವನ್ನು ಮಾಡುತ್ತಿಲ್ಲ.
ಶಂಕರಾಚಾರ್ಯರ ಪರವಾಗಿ ಇದುವರೆಗೆ ಮಂಡಿಸಲಾದ ವಾದಗಳಲ್ಲಿ ಕೂಡ ಒಂದು ವಿಷಯವು ಸ್ಪಷ್ಟವಾಗಿ ಮೂಡಿ ಬರುತ್ತಿಲ್ಲ. ಅದೆಂದರೆ ಶ್ರುತಿ ಸ್ಮೃತಿಗಳಲ್ಲಿ ವೇದಾಧ್ಯಯನವನ್ನು ಕೈಗೊಂಡ ಶೂದ್ರನಿಗೆ ಶಿಕ್ಷೆಯನ್ನು ವಿಧಿಸುವ ಪ್ರಸ್ತಾಪ ಬಂದಾಗಲೆಲ್ಲ ಈ ಮೇಲಿನ ಯಾವ ಪ್ರಕಾರದ ಶೂದ್ರರನ್ನು ಉದ್ದೇಶಿಸಲಾಗಿದೆ ಎಂಬುದು ಪ್ರಾಚೀನ ಕಾಲದಲ್ಲಿ ಚರ್ಚಾವಿಷಯವಾಗಿತ್ತೆಂಬುದಾಗಿ ಕಾಣುತ್ತದೆ. ಜಾತಿ ಶೂದ್ರನಿಗೆ ವೇದಾಧ್ಯಯನವನ್ನು ನಡೆಸುವ ಬುದ್ಧಿ ಹಾಗೂ ಸಾಮರ್ಥ್ಯಗಳಿದ್ದರೂ ಅವರಿಗೆ ವೇದಾಧ್ಯಯನದ ನಿಷೇಧವೇಕೆ? ಎಂಬ ಪ್ರಶ್ನೆಗಳೆದ್ದಿದ್ದವು. ಸಾಕಷ್ಟು ಜಾತಿ ಶೂದ್ರರು ಉಪನಯನ ಸಂಸ್ಕಾರವನ್ನು ಹೊಂದಿ ವೇದಜ್ಞಾನವನ್ನು ಹೊಂದಿದ ಉದಾಹರಣೆಗಳೂ ಹಾಗೂ ಇವ್ಯಾವವೂ ಇಲ್ಲದೇ ಬ್ರಹ್ಞಜ್ಞಾನಿಗಳೂ ದೃಷ್ಟಾರರೂ ಆಗಿ ಮಾನ್ಯತೆ ಪಡೆದ ಉದಾಹರಣೆಗಳೂ ಇತಿಹಾಸ ಪುರಾಣಾದಿಗಳಲ್ಲಿದ್ದವು (ವ್ಯಾಸ, ವಾಲ್ಮೀಕಿ). ಅದಕ್ಕೆ ಭಾಷ್ಯವೇ ಅನೇಕ ಉದಾಹರಣೆಗಳನ್ನು ನೀಡುತ್ತದೆ. ಹಾಗಾಗಿ ಈ ಚರ್ಚೆಗಳನ್ನೆಲ್ಲ ಪೂರ್ವಪಕ್ಷದಲ್ಲಿಟ್ಟುಕೊಂಡು ಅಪಶೂದ್ರಾಧಿಕರಣವು ವೇದಾಧ್ಯಯನದ ಅಧಿಕಾರವನ್ನು ಕುರಿತು ಜಿಜ್ಞಾಸೆ ನಡೆಸುತ್ತದೆ. ಶಂಕರಾಚಾರ್ಯರು ಶ್ರುತಿ ಸ್ಮೃತಿಗಳಲ್ಲಿ ಬರುವ ಉಲ್ಲೇಖಗಳ ಅರ್ಥವನ್ನು ನಿರೂಪಿಸುತ್ತಾ ಅಲ್ಲಿ ಶೂದ್ರ ಎಂಬುದು ಸಂಸ್ಕಾರವನ್ನು ಉದ್ದೇಶೀಸಿ ಹೇಳಿದ್ದೇ ವಿನಃ ಜಾತಿಯನ್ನಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ. ಏಕೆಂದರೆ ಸತ್ಯಕಾಮ ಜಾಬಾಲನ ಸಂದರ್ಭದಲ್ಲಿ ಅವನ ಜಾತಿ ಯಾವುದೆಂಬುದೇ ತಿಳಿಯದು. ಆದರೆ ಅವನ ಸತ್ಯಸಂಧತೆಯನ್ನು ಗಮನಿಸಿ ಗೌತಮ ಋಷಿಗಳು ಅವನಿಗೆ ಉಪನಯನವನ್ನು ಮಾಡಿ ಅವನನ್ನು ದ್ವಿಜನನ್ನಾಗಿ ಮಾಡಿಯೇ ವೇದೋಪದೇಶವನ್ನು ನೀಡುತ್ತಾರೆ. ಇಲ್ಲಿ ಜಾತಿಗಿಂತಲೂ ಉಪನಯನದಿಂದಲೇ ವೇದೋಪದೇಶಕ್ಕೆ ಅಧಿಕಾರವನ್ನು ಹೊಂದುತ್ತಾರೆ ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಂದರೆ ಈ ಸಂದರ್ಭದಲ್ಲಿ ಶೂದ್ರನೆಂದರೆ ಉಪನಯನವಾಗದವನು ಅಥವಾ ದ್ವಿಜನಲ್ಲದವನು ಎಂಬರ್ಥವನ್ನು ಬಿಟ್ಟು ಬೇರಾವ ಅರ್ಥವನ್ನು ಹಚ್ಚುವ ಸಾಧ್ಯತೆಯೂ ಇಲ್ಲ. ಜಾತಿಬ್ರಾಹ್ಮಣರಲ್ಲೂ ಕೂಡ ಎಲ್ಲರೂ ದ್ವಿಜರಲ್ಲ (ಉಪನಯನವಾಗದ ಪುರುಷರು ಹಾಗೂ ಎಲ್ಲಾ ಸ್ತ್ರೀಯರು) ಎಂಬುದನ್ನು ಗಮನಕ್ಕೆ ತಂದುಕೊಂಡಾಗ ಇದು ಯಾವುದೇ ಜಾತಿಗಳ ಶೋಷಣೆಗೆ ಸಂಬಂಧಪಟ್ಟ ಹೇಳಿಕೆಯಲ್ಲ ಎಂಬುದು ವಿದಿತವಾಗುತ್ತದೆ.
ಅಂದರೆ ವೇದಾಧ್ಯನಕ್ಕೆ ಉಪನಯನವೆಂಬ ಕರ್ಮವು ಶಾಸ್ತ್ರನಿಬಂಧನೆಯಾಗಿದೆ. ಶಾಸ್ತ್ರಾಧಿಕಾರದ ಸಂದರ್ಭದಲ್ಲಿ ಅಪಶೂದ್ರಾಧಿಕರಣದ ನಿಬಂಧನೆಗಳನ್ನು ಅರ್ಥೈಸಬೇಕು (ಹೊರತೂ ಜಾತಿಯ ಸಂದರ್ಭದಲ್ಲಿ ಅಲ್ಲ) ಎಂಬುದೇ ಭಾಷ್ಯದ ನಿರ್ಣಯ. (ಶ್ರುತಿ ಹಾಗೂ ಸ್ಮೃತಿಗಳ ಅಭಿಪ್ರಾಯವನ್ನೇ ಶಂಕರರು ಜಿಜ್ಞಾಸೆಗೊಳಪಡಿಸಿರುವುದರಿಂದ ಅವೂ ಬೇರೆ ರೀತಿಯಲ್ಲಿ ಹೇಳಿರುವ ಸಾಧ್ಯತೆ ಇಲ್ಲ.) ಶೂದ್ರರಿಗೆ/ಜಾತಿಶೂದ್ರರಿಗೆ ವಿದ್ಯಾಧಿಕಾರವೇ ಇಲ್ಲ ಎಂಬುದಾಗಲೀ, ಜ್ಞಾನಕ್ಕೆ ಅಧಿಕಾರವೇ ಇಲ್ಲ ಎಂಬುದಾಗಲೀ ಮೇಲಿನ ಹೇಳಿಕೆಗಳ ಅರ್ಥವಲ್ಲ. ಬದಲಾಗಿ ಆ ಆಧಿಕಾರ ಇದೆ ಎಂಬುದಾಗಿ ಯಾವುದೇ ಸಂಶಯಕ್ಕೆಡೆಗೊಡದಂತೆ ಭಾಷ್ಯವು ತಿಳಿಸುತ್ತದೆ. (ಇದನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಒಂದು ಉದಾಹರಣೆಯನ್ನು ನೋಡಬಹುದು: ವಿಶ್ವವಿದ್ಯಾನಿಲಯಗಳಲ್ಲಿ ಪಿ.ಹೆಚ್.ಡಿ. ಪದವಿ ಪಡೆಯಲು ಸ್ನಾತಕೋತ್ತರ ಪದವಿ ಅಗತ್ಯವಾಗಿರುತ್ತದೆ, ಹಾಗೆಂದು ಸಂಶೋಧನೆ ನಡೆಸಲು ಹಾಗೂ ಜ್ಞಾನವನ್ನು ಪಡೆಯಲು ಆ ಪದವಿ ಮುಖ್ಯವೆಂದು ಅಲ್ಲ. ಆದರೆ ಪಿ.ಹೆಚ್.ಡಿ. ಪದವಿ ಬೇಕಾದ ಪಕ್ಷದಲ್ಲಿ ಸ್ನಾತಕೋತ್ತರ ಪದವಿ ಅಗತ್ಯತೆ ಪೂರ್ವನಿಬಂಧನೆಯಾಗಿರುತ್ತದೆ). ಅಂದರೆ ವೇದಕ್ಕೂ ಹೊರತಾದ ವಿದ್ಯೆಯನ್ನೂ ಜ್ಞಾನವನ್ನೂ ಭಾಷ್ಯವು ಗುರುತಿಸಿರುತ್ತದೆ. ಹಾಗಿರುವಾಗ ಈ ವಿಷಯಕ್ಕಾಗಿ ಶಂಕರರನ್ನು ಟೀಕಿಸುವವರೆಲ್ಲರೂ ಅವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಗ್ರಹಿಸುವಲ್ಲೇ ವಿಫಲರಾಗಿದ್ದಾರೆ ಎಂಬುದು ಇದರಿಂದ ಹೊಲಬಾಗುತ್ತದೆ. ಭಾಷ್ಯಾರ್ಥವು ಇಷ್ಟು ಸ್ಪಷ್ಟವಾಗಿರುವಾಗ ಶಂಕರರನ್ನು ಟೀಕಿಸುವವರ ಗೊಂದಲ ಎಲ್ಲಿಂದ ಹುಟ್ಟುತ್ತದೆ?
ಶಂಕರರು ಈಗಾಗಲೇ ಇದ್ದ ಸೂತ್ರಗಳಿಗೆ ಪ್ರಾಚೀನ ಗ್ರಂಥಗಳ ಸಹಾಯದಿಂದ ಅರ್ಥವನ್ನು ನಿಷ್ಕರ್ಷಿಸುತ್ತಿದ್ದರು ಎಂಬುದನ್ನು ನೋಡಿದಮೇಲೆ ಅವುಗಳ ಸ್ವೀಕಾರಾರ್ಹತೆಯ ಕುರಿತ ಪ್ರಶ್ನೆ ಬರುತ್ತದೆ. ಪ್ರಾಚೀನ ಗ್ರಂಥಗಳು ಶೂದ್ರರ ಕುರಿತು ಏನನ್ನು ಹೇಳುತ್ತವೆ ಎಂಬುದರ ಕುರಿತು ಚರ್ಚೆನಡೆಸಬಯಸುವವರು ಈ ಮುಂದಿನ ಸಂಗತಿಗಳನ್ನು ಮುಂಚಿತವಾಗಿ ಅರಿತಿರಬೇಕಾಗುತ್ತದೆ: 1) ಶೂದ್ರ ಎಂದರೆ ಉಪನಯನವಾಗದವನು, ಅಥವಾ ಒಂದೇ ಹುಟ್ಟಿನವನು ಎಂಬ ಅರ್ಥದಲ್ಲಿ ದ್ವಿಜತ್ವ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯೆಗಳ ಸಂದರ್ಭದಲ್ಲಿ ಉಲ್ಲೇಖಿಸಲಾಗುತ್ತದೆ. ಜನ್ಮದಿಂದ ಎಲ್ಲರೂ ಶೂದ್ರರೇ ಎಂಬುದನ್ನು ಸ್ಪಷ್ಟವಾಗಿ ಅವು ಹೇಳುವುದರಿಂದ ಶೂದ್ರ ಎಂಬುದು ಒಂದು ಸಾಮಾಜಿಕ ಪ್ರಭೇದವಲ್ಲ. ಉದಾಹರಣೆಗೆ: ಅನಕ್ಷರಸ್ಥರು, ಪದವೀಧರರು, ಇವೆಲ್ಲ ಸಾಮಾಜಿಕ ಪ್ರಭೇದಗಳೆ? ಶೂದ್ರ ಎಂಬುದೂ ಹಾಗೇ. ಇಂದು ನಾವು ಉಪನಯನ ಆಚರಣೆಯಿಲ್ಲದ ಜಾತಿಗಳನ್ನೆಲ್ಲ ಶೂದ್ರ ಎಂಬುದಾಗಿ ಗುರುತಿಸುವುದರಿಂದ ಅದೊಂದು ಸಾಮಾಜಿಕ ಪ್ರಬೇಧವಾಗಿ ಆಭಾಸವಾಗುತ್ತದೆ ಅಷ್ಟೆ. ಪ್ರಾಚೀನ ಕಾಲದಲ್ಲಿ ಇವರನ್ನು ಜಾತಿ ಶೂದ್ರ ಎಂಬುದಾಗಿ ಜಾತಿ ಬ್ರಾಹ್ಮಣ ಎಂಬ ಪ್ರಭೇದಕ್ಕೆ ಎದುರಾಗಿ ಗುರುತಿಸಿದ್ದೂ ಕಂಡುಬರುತ್ತದೆ. ಆದರೆ ಶೂದ್ರರಿಗೆ ವೇದಾಧಿಕಾರವನ್ನು ಕುರಿತು ಮಾತನಾಡುವಾಗ ‘ಜಾತಿಶೂದ್ರರಿಗೆ’ ಎಂದೇನೂ ನಿರ್ದಿಷ್ಟಪಡಿಸುವುದಿಲ್ಲವಲ್ಲ? 2) ನಾವು ವಸಾಹತು ಪ್ರಜ್ಞೆಯಿಂದಾಗಿ ವೇದವನ್ನು ಜ್ಞಾನಕ್ಕೆ ಹಾಗೂ ವಿದ್ಯೆಗೆ ಸಮೀಕರಿಸುವ ತಪ್ಪು ಅಭ್ಯಾಸವನ್ನು ಮಾಡಿಕೊಂಡಿದ್ದೇವೆ. ಅಪಶೂದ್ರಾಧಿಕರಣವು ಈ ದೃಷ್ಟಿಯಿಂದ ಮಹತ್ವದ್ದು. ಅದು ವೇದವೊಂದೇ ವಿದ್ಯೆಯಲ್ಲ, ಜ್ಞಾನಕ್ಕೆ ವೇದವೊಂದೇ ಮಾರ್ಗವಲ್ಲ, ಹಾಗೂ ಶೂದ್ರನಿಗೆ ವಿದ್ಯೆ ಹಾಗೂ ಜ್ಞಾನ ಎರಡಕ್ಕೂ ಅಧಿಕಾರವುಂಟು ಎಂಬುದನ್ನು ಸ್ಪಷ್ಟವಾಗಿ ಯಾವುದೇ ಸಂದೇಹಕ್ಕೆ ಎಡೆಗೊಡದಂತೆ ಪ್ರತಿಪಾದಿಸುತ್ತದೆ. ಅಂದರೆ ವೇದವನ್ನು ಕಲಿಯದವರು ಅವಿದ್ಯಾವಂತರು, ಅಜ್ಞಾನಿಗಳು ಎಂಬ ಅವಹೇಳನೆಯನ್ನು ನಾವು ಪಾಶ್ಚಾತ್ಯರ ಸಂಗದಲ್ಲಿ ಹುಟ್ಟುಹಾಕಿಕೊಂಡಿದ್ದೇವೆ. ಅದಕ್ಕಾಗಿ ನಾವು ಶಂಕರಾಚಾರ್ಯರನ್ನು ದೂರುತ್ತಿದ್ದೇವೆ.
ಇಂದು ಶೂದ್ರ ಎಂಬುದನ್ನು ಜಾತಿಗೆ ಸಮೀಕರಿಸುತ್ತಿದ್ದೇವೆ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಇಂದಿನ ಬ್ರಾಹ್ಮಣೇತರ ಜಾತಿಗಳಿಗೆ ಸಮೀಕರಿಸುತ್ತಿದ್ದೇವೆ. ಈ ಜಾತಿಗಳು ವೇದಾಧ್ಯಯನವನ್ನು ಮಾಡಿದರೆ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಿದ ಉಗ್ರ ಶಿಕ್ಷೆಯನ್ನು ನೀಡುತ್ತಿದ್ದರು, ಬ್ರಾಹ್ಮಣ ಪುರೋಹಿತಶಾಹಿಯು ಅವರ ಜ್ಞಾನದ ಹಾಗೂ ವಿದ್ಯೆಯ ಅಧಿಕಾರವನ್ನು ಕಿತ್ತುಕೊಂಡು ಅವರನ್ನು ಅಂಧಃಕಾರದಲ್ಲಿಟ್ಟಿತು, ಶಂಕರಾಚಾರ್ಯರ ಭಾಷ್ಯವು (ಅಥವಾ ಬ್ರಾಹ್ಮಣರ ಗ್ರಂಥಗಳು) ಇದಕ್ಕೆ ಸಂಬಂಧಿಸಿದ ಕಾನೂನನ್ನು ರಚಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ, 8ನೇ ಶತಮಾನದ ಸಮಾಜವನ್ನು ಇವರು ಜಾತಿ ವ್ಯವಸ್ಥೆ ಎಂಬುದಾಗಿ ಪಾಶ್ಚಾತ್ಯರು ಏನನ್ನು ಕಟ್ಟಿಕೊಟ್ಟಿದ್ದಾರೋ ಆ ಕಣ್ಣಿನಿಂದ ನೋಡುತ್ತಿದ್ದಾರೆ. ಅಥವಾ ಪ್ರೊಟೆಸ್ಟಾಂಟರು ಕ್ಯಾಥೋಲಿಕರ ಕುರಿತಾಗಿ ಕಟ್ಟಿದ ಕಥೆಯನ್ನು ಕಡತಂದು ನಮ್ಮ ಸಮಾಜದ ವಾಸ್ತವವೊ ಎಂಬಂತೆ ಹೇಳುತ್ತಿದ್ದಾರೆ. ಈ ಕಥೆ ನಿಜವಾಗಿದ್ದ ಪಕ್ಷದಲ್ಲಿ ಈ ಕಾನೂನು ಎಲ್ಲಿ ಯಾವಾಗ ಜಾರಿಯಾಗಿತ್ತು, ಎಷ್ಟು ಮಂದಿ ಸಂತ್ರಸ್ತರಾದರು, ಯಾವ ರಾಜರು ಜಾರಿ ಮಾಡಿದ್ದರು? ಎಂಬುದಕ್ಕೆಲ್ಲ ಐತಿಹಾಸಿಕ ಆಧಾರಗಳೇನಿವೆ? ಇವರದೇ ಕಥೆಯ ಪ್ರಕಾರ ಬ್ರಾಹ್ಮಣ ಶಾಹಿಯು ಮುಗಿದು ವಸಾಹತು ಶಾಹಿ ಹಾಗೂ ಸ್ವತಂತ್ರ ಭಾರತದ ಸಮಾನತೆಯ ಕಾನೂನುಗಳು ನೂರಾರು ವರ್ಷಗಳಿಂದ ಜಾರಿಯಲ್ಲಿದ್ದಮೇಲೆ ವೇದಾಧ್ಯಯನದ ಏಕಸ್ವಾಮ್ಯವು ಮುರಿದುಹೋಗಿರಬೇಕಾಗಿತ್ತು. ಶೂದ್ರರು ವೇದಾಧ್ಯಯನದಲ್ಲಿ ಪರಿಣತರಾಗಿ ಭಾರತದ ತುಂಬೆಲ್ಲ ಕೇವಲ ವೇದವಿದರೇ ಇರಬೇಕಿತ್ತು. ಆದರೆ ವಿಪರ್ಯಾಸವೆಂದರೆ, ಸಂಪ್ರದಾಯಸ್ಥ ಬ್ರಾಹ್ಮಣ ಪುರೋಹಿತರ ಕುಟುಂಬಗಳಲ್ಲೂ ಇಂದು ವೇದವನ್ನು ಕಲಿಯುವವರಿಲ್ಲವಾಗಿದೆ. ಅಳಿದುಳಿದವರನ್ನೂ ಅರ್ಚಕವೃತ್ತಿ ಆಕರ್ಷಿಸುತ್ತಿದೆಯೇ ಹೊರತೂ ವೇದಗಳಲ್ಲ. ಈ ಮೇಲಿನ ಪ್ರೊಟೆಸ್ಟಾಂಟ್ ಕಥೆಯ ಪ್ರಕಾರ ಪ್ರಾಚೀನ ಭಾರತದಲ್ಲಿ ಜ್ಞಾನವು ಕಡೇ ಪಕ್ಷ ಬ್ರಾಹ್ಮಣ ಜಾತಿಗಳಲ್ಲಾದರೂ ಇತ್ತು, ಇಂದು ಸ್ವಾತಂತ್ರ್ಯ ಯುಗದಲ್ಲಿ ಅದು ಎಲ್ಲ ಜಾತಿಗಳಿಗೂ ಹೋಗುವ ಬದಲು ಬ್ರಾಹ್ಮಣರಿಗೂ ಬೇಡವಾಗಿದೆ. ಅಂದರೆ ವೇದವನ್ನು ಕಲಿಯದವರು ವಿದ್ಯೆಯಿಂದ ಹಾಗೂ ಜ್ಞಾನದಿಂದ ವಂಚಿತರಾದವರು ಎಂಬ ಈ ಮೇಲಿನ ಕಥೆಯನ್ನು ಒಪ್ಪುವವರು ಭಾರತವು ಇಂದು ಹಿಂದಿಗಿಂತಲೂ ಹೆಚ್ಚು ಅಂಧಃಕಾರದಲ್ಲಿ ಮುಳುಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ, ಇಲ್ಲ ಈ ಕಥೆಯನ್ನು ಬಿಟ್ಟು ಸ್ವಲ್ಪ ಗಂಭೀರವಾಗಿ ಸಂಶೋಧನೆಗಳನ್ನು ನಡೆಸಬೇಕಾಗುತ್ತದೆ.
ಆಶ್ಚರ್ಯವೆಂದರೆ ವಿವೆಕಾನಂದರೂ ಕೂಡ ವಸಾಹತುಶಾಹಿಯ ಪ್ರಭಾವಕ್ಕೆ ಒಳಗಾಗಿದ್ದರು. ಅವರು ಶಂಕರರ ವೆದಾಂತ ಮಾರ್ಗದಲ್ಲೆ ನಡೆದೂ ಶಂಕರರನ್ನು ಗೌರವಿಸಿದರೂ ಕೂಡ ಅವರನ್ನು casteist ಎಂದು ಕರೆದಿದ್ದಾರೆ.
ತರ್ಕಬದ್ಧ ಲೇಖನ. ತಿರೋಗಾಮಿ ಹಾಗೂ ಪುರೋಗಾಮಿ ಎಂದು ಹೇಳಿಕೊಳ್ಳುವ ಎರಡೂ ಬಗೆಯ ಕುರುಡುನಂಬಿಕೆಗಳ ಗೊಂದಲದಲ್ಲಿ ಈ ಬರಹ ಬೆಳಕಿನಂಥದ್ದು
That’s why indian communists took legacy of vivekananda’s works and cherry pick his quotes to suite their political motives.
ಓಶೊ ವಿವೆಕಾನಂದರ ಬಗ್ಗೆ ಹೇಳಿದ್ದೆನೆಂದರೆ ‘Vivekananda was a clever politician’ ಅಂತ.
“ಶಂಕರಾಚಾರ್ಯರ ಬ್ರಹ್ಮಸೂತ್ರಭಾಷ್ಯದ ಅಪಶೂದ್ರಾಧಿಕರಣದಲ್ಲಿ ಮಂಡಿತವಾದ ವಿಚಾರಗಳ ಕುರಿತು ಬರುತ್ತಿರುವ ಟೀಕೆಗಳಿಗೆ…”
ಮನ್ನಿಸಿ, ನನಗೆ ಹಿನ್ನೆಲೆ ಗೊತ್ತಿಲ್ಲ. ಯಾರು ಈ ಟೀಕೆಗಳನ್ನು ಮಾಡಿರುವುದು? ಎಲ್ಲಿ? ಏನಾದರೂ ಕೊಂಡಿ (URL) ಇದ್ದರೆ ದಯವಿಟ್ಟು ಹಾಕುವುದು.
ಶ್ರೀಯುತ ಕಿರಣ್ ಬಾಟ್ನಿಯವರೆ ಕಳೆದ ವರ್ಷ ಕನ್ನಡ ಪ್ರಭದಲ್ಲಿ ಈ ಚಚೆಱ ಎದ್ದಿತ್ತು. ಈ ಲೇಖನ ಕಳುಹಿಸಿದ್ದೆ. ಅಚ್ಚಾಗಿರಲಿಲ್ಲ. ೀಗ ನಿಲುಮೆಯಲ್ಲಿ ಅದಕ್ಕೆ ಸಂಬಂಧಿಸಿದ ಚರ್ಚೆ ಎದ್ದಿದ್ದರಿಂದ ಹಾಕಿದ್ದೇನೆ.
ನನ್ನಿ ರಾಜಾರಾಮ ಹೆಗಡೆಯವರೇ.
ಆ ಚರ‍್ಚೆಯನ್ನು ಹೆಕ್ಕಿ ತೆಗೆಯಲಾರೆ. ಆದರೆ ಅದೇನೇ ಇರಲಿ, ನಿಮ್ಮ ಇಲ್ಲಿಯ ಬರಹದ ಬಗ್ಗೆ ನನ್ನ ಅನಿಸಿಕೆಯನ್ನು ಬರೆಯುತ್ತೇನೆ.
“ಶೂದ್ರರಿಗೆ ವೇದಾಧಿಕಾರವನ್ನು ಕುರಿತು ಮಾತನಾಡುವಾಗ ‘ಜಾತಿಶೂದ್ರರಿಗೆ’ ಎಂದೇನೂ ನಿರ್ದಿಷ್ಟಪಡಿಸುವುದಿಲ್ಲವಲ್ಲ?” ಎಂದು ನೀವು ಕೇಳುತ್ತೀರಿ. ಆದರೆ ಹಾಗೆ ಜಾತಿಶೂದ್ರರಿಗೇ ವೇದಾದಿಕಾರವಿಲ್ಲವೆಂದು ಶಂಕರರು ತಮ್ಮ ಬಾಶ್ಯದಲ್ಲಿ ತಿಳಿಸಿರುವುದು. ಬಾಶ್ಯದ ತುಣುಕು ಇಲ್ಲಿದೆ:
शक्यते चायं शूद्रशब्दोsधिकृतविषये योजयितुम्; कथमित्युच्यते — ‘कम्वर एनमेतत्सन्तं सयुग्वानमिव रैक्वमात्थ’ इत्यस्माद्धंसवाक्यादात्मनोsनादरं श्रुतवतो जानश्रुतेः पौत्रायणस्य शुक् उत्पेदे; तामृषी रैक्वः शूद्रशब्देनानेन सूचयां बभूव आत्मनः परेक्षज्ञाताख्यापनायेति गम्यते; जातिशूद्रस्यानधिकारात् | (1.3.34)
ರಯ್‍ಕ್ವನೆಂಬಾತನು ಜಾನಶ್ರುತ ಪವ್ತ್ರಾಯಣನೆಂಬನನ್ನು ’ಶೂದ್ರ’ ಎಂಬ ಪದವನ್ನು ಬಳಸಿ ಕರೆದಿರುತ್ತಾನಾದರೂ ಅವನಿಗೆ ವೇದಾದಿಕಾರವಿರುವುದರಿಂದ ಶೂದ್ರರಿಗೆ ವೇದಾದಿಕಾರವುಂಟೆಂಬುದು ಎದುರ‍್ಬದಿಯವರ ವಾದ. ಆ ವಾದವನ್ನು ತಳ್ಳಿಹಾಕುತ್ತ ಶಂಕರರು ಈ ಮೇಲಿನ ವಾದವನ್ನು ಮುಂದಿಡುತ್ತಾರೆ.
ಶಂಕರರ ಮುಂದಿರುವ ಕೇಳ್ವಿ ಈ ಕೆಳಗಿನ ಮೂರು ಸೊಲ್ಲುಗಳಲ್ಲಿರುವ ಬಿಕ್ಕಟ್ಟನ್ನು ಹೇಗೆ ನಿವಾರಿಸಿಕೊಳ್ಳುವುದು ಎಂಬುದು (ಒಂದನ್ನೂ ಇವರು ತಪ್ಪೆನ್ನುವಂತಿಲ್ಲ – ಏಕೆಂದರೆ ಎಲ್ಲವೂ ಶ್ರುತಿಯಲ್ಲಿರುವುದು!) : (ಅ) ಜಾನಶ್ರುತನು ಶೂದ್ರನಾಗಿದ್ದರೆ ಅವನಿಗೆ ವೇದಾದಿಕಾರವಿರಲಾರದು (ಆ) ರಯ್ಕ್ವಬನು ಅವನನ್ನು ’ಶೂದ್ರ’ನೆಂದು ಕರೆದಿದ್ದಾನೆ, ಮತ್ತು (ಇ) ಜಾನಶ್ರುತನಿಗೆ ವೇದಾದಿಕಾರವಿದೆ.
ಈ ಬಿಕ್ಕಟ್ಟನ್ನು ಶಂಕರರು ಮೇಲಿನ ಬಾಶ್ಯಬಾಗದಲ್ಲಿ ಒಂದು ನುಡಿಮೋಡಿಯಿಂದ ನಿವಾರಿಸಿಕೊಳ್ಳುತ್ತಾರೆ. ಅದೇನೆಂದರೆ ’ಶೂದ್ರ’ನೆಂಬ ಪದಕ್ಕೆ ಹೊಸದೊಂದು ಹುರುಳನ್ನೇ ಅಂಟಿಸುವುದು!
ಅವರ ಚಿಕಿತ್ಸೆ ಹೀಗಿದೆ: ಹಿಂದೊಮ್ಮೆ ’ಹೀಗಿರುವ ಇವನನ್ನು ಕುರಿತು ಸುಯುಗ್ವಾನನಾದ ರಯ್‍ಕ್ವನೆಂಬಂತೆ ಹೇಗೆ ಮಾತನಾಡಬಲ್ಲೆ?’ ಎಂಬ ಹಂಸವಾಕ್ಯವೊಂದರಿಂದ ಜಾನಶ್ರುತನನ್ನು ತೆಗಳಿದಂತಾಗಿ, ಅದು ಅವನಲ್ಲಿ ಶೋಕವನ್ನುಂಟುಮಾಡಿರುತ್ತದೆಯಂತೆ. ಆ ಶೋಕವನ್ನು ’ಶೂದ್ರ’ ಎಂಬ ಪದದಿಂದ ಹೇಳಲಾಗಿದೆ ಎಂಬುದು ಶಂಕರರ ವಾದ. ಶೂದ್ರನಿಗೂ ಶೋಕಕ್ಕೂ ಎಲ್ಲಿಯ ನಂಟು? ಸಂಸ್ಕ್ರುತದ ಮೇಲೆ ಇನ್ನಿಲ್ಲದ ಹಿಡಿತವಿರುವ ಶಂಕರರು ’ಶೂದ್ರ’ ಎಂಬ ಪದವನ್ನು ’शुचं अभिदुद्राव’ ಎಂದು ಬಿಡಿಸಿ ಅದಕ್ಕೆ ’ಶೋಕ’ವೆಂಬ ಹುರುಳನ್ನು ಆರೋಪಿಸುತ್ತಾರೆ (ಈ ನುಡಿಮೋಡಿ ಬಾಶ್ಯದಲ್ಲಿ ಕೊಂಚ ಮುಂದಕ್ಕೆ ಬರುತ್ತದೆ)! ಕೊನೆಗೆ ’अवयवार्थसंभवात्, रूढ्यर्थस्य चासंभवात्’ ಎಂದರೆ ’ಶೂದ್ರ’ ಪದಕ್ಕೆ ರೂಡಿಯಲ್ಲಿರುವ ಹುರುಳನ್ನು ಇಲ್ಲಿ (ಎಂದರೆ ರಯ್‍ಕ್ವನು ಜಾನಶ್ರುತನನ್ನು ’ಶೂದ್ರ’ನೆಂದು ಕರೆದಿರುವಲ್ಲಿ) ಕೊಡುವುದಕ್ಕಾಗುವುದಿಲ್ಲ, ಅವಯವಾರ‍್ತವನ್ನು ಮಾತ್ರ ಕೊಡಲಾಗುವುದು ಎಂದು ಕೂಡ ತೀರ್ಮಾದನಿಸುತ್ತಾರೆ.
ಶಂಕರರ ಪ್ರಕಾರ ಆ ಅವಯವಾರ‍್ತವು ಏನೆಂದು ತಿಳಿಸಿದ್ದಾಯಿತು: ಶೋಕ. ಉಳಿದಿರುವ ಕೇಳ್ವಿ ’ರೂಡಿಯಲ್ಲಿರುವ ಹುರುಳು’ ಎಂದರೆ ಯಾವುದು ಎಂಬುದು. ಅದನ್ನು ಅವರೇ ಹೇಳುತ್ತಾರೆ: ಹುಟ್ಟಿನಿಂದ ಬಂದಿರುವ ಶೂದ್ರತನವೇ ’ಶೂದ್ರ’ ಪದಕ್ಕೆ ರೂಡಿಯಲ್ಲಿರುವ ಹುರುಳು! ಬಾಶ್ಯದಲ್ಲೇ ಇದೆ: ’जातिशूद्रस्यानधिकारात्’ – ’ಜಾತಿಶೂದ್ರನಿಗೆ, ಎಂದರೆ ಜಾತಿಯಿಂದ ಶೂದ್ರನಾದವನಿಗೆ, ಎಂದರೆ ಹುಟ್ಟಿನಿಂದ ಶೂದ್ರನಾದವನಿಗೆ ಅದಿಕಾರವು ಇಲ್ಲದೆ ಇರುವುದರಿಂದ’. ಇಲ್ಲದೆ ಇರುವುದರಿಂದ ಏನು? ಇಲ್ಲದೆ ಇರುವುದರಿಂದ ಜಾನಶ್ರುತನನ್ನು ಜಾತಿಶೂದ್ರತನವೆಂಬ ರೂಡಿಯ ಹುರುಳಿನಲ್ಲಿ ’ಶೂದ್ರ’ ಎಂದು ರಯ್ಕ್ವಅನು ಕರೆದಿರಲಾರನು. ಹಾಗಾದರೆ ’ಶೂದ್ರ’ ಎಂದು ಕರೆದಿರುವುದೇಕೆ? ಏಕೆಂದರೆ, ಮೇಲೆ ತಿಳಿಸಿದಂತೆ ಶಂಕರರ ಪ್ರಕಾರ ರಯ್‍ಕ್ವನಿಗೆ ಜಾನಶ್ರುತನಲ್ಲಿ ಶೋಕವು ಕಂಡುಬಂದಿತ್ತಂತೆ, ಮತ್ತು ’ಶೋಕ’ ಎಂಬ ಹುರುಳನ್ನು ’ಶೂದ್ರ’ ಪದಕ್ಕೆ ಆರೋಪಿಸಬಹುದಂತೆ!
ಈಗ ನೀವು ಉತ್ತರಿಸಬೇಕಾದುದು ಬಹಳ ಇದೆ. ಎತ್ತುಗೆಗೆ: (1) ’जातिशूद्रस्यानधिकारात्’ ಎಂಬುದನ್ನು ನೀವು ಶಂಕರರ ಬಾಶ್ಯದಲ್ಲಿ ನೋಡಿರಲಿಲ್ಲವೇ? (2) ಶಂಕರರು ಮೇಲಿನೆ ವಿಚಿತ್ರವಾದ ವಾದವನ್ನು ಮಾಡಿರುವುದೇಕೆ? ಜಾನಶ್ರುತನು ’ರೂಡಿಯ ಹುರುಳಿನ ಶೂದ್ರ’ನೇ ಆಗಿದ್ದರೆ ಶಂಕರರಿಗೇನು ಕಶ್ಟ? (3) ರೂಡಿಯ ಹುರುಳು ಜಾತಿಶೂದ್ರತನವೇ ಎಂದು ಶಂಕರರ ಬಾಶ್ಯದಿಂದಲೇ ಸ್ಪಶ್ಟವಾಗಿರುವಾಗ, ಮತ್ತು ಆ ಜಾತಿಶೂದ್ರತನದಿಂದಲೇ ಶೂದ್ರನಿಗೆ ವೇದಾದಿಕಾರ ಇಲ್ಲದಿರುವಾಗ, ’ಹುಟ್ಟಿನಿಂದ ಎಲ್ಲರೂ ಶೂದ್ರರು’ ಮುಂತಾದ ಹುರುಳುಗಳನ್ನು ಏಕೆ ಇಟ್ಟುಕೊಳ್ಳಬೇಕು?
ನನ್ನ ಪ್ರಕಾರ “ಶೂದ್ರರಿಗೆ ವೇದಾಧಿಕಾರವನ್ನು ಕುರಿತು ಮಾತನಾಡುವಾಗ ‘ಜಾತಿಶೂದ್ರರಿಗೆ’ ಎಂದೇನೂ ನಿರ್ದಿಷ್ಟಪಡಿಸುವುದಿಲ್ಲವಲ್ಲ?” ಎಂಬ ನಿಮ್ಮ ವಾದ ನಿಲ್ಲುವುದಿಲ್ಲ. ಹಾಗೆ ಶಂಕರರೇ ನಿರ‍್ದಿಶ್ಟಪಡಿಸಿದ್ದಾರೆ!
—
ಕೊನೆಹನಿ: ಇಡೀ ಬಾರತವೆಂಬುದರಲ್ಲಿ ಉಳಿಸಿಕೊಳ್ಳಲು ತಕ್ಕುದಾದದು ಏನಾದರೂ ಇದ್ದರೆ ಅದು ಉಪನಿಶತ್ತುಗಳಲ್ಲಿರುವ ಬ್ರಹ್ಮ ಮತ್ತು ಅದರ ಬಗ್ಗೆ ಹಲವರು ಹಿಂದಿನವರು ಹೇಳಿರುವ ಸೊಲ್ಲುಗಳು ಮಾತ್ರ ಎಂಬುದು ನನ್ನ ನಿಲುವು (ಬವ್ದ್ದ ರು ಮತ್ತು ಜಯ್ನರೂ ಅದೇ ಬ್ರಹ್ಮನನ್ನು ಅರಸುವುದೆಂದು ನನ್ನ ವಾದ; ಇರಲಿ). ಆದುದರಿಂದ ಆ ಬ್ರಹ್ಮನ ಬಗ್ಗೆಯ ಸುದ್ದಿ ಎಲ್ಲಿಂದ ಬಂದರೂ ಅದನ್ನು ಬರಮಾಡಿಕೊಳ್ಳುತ್ತೇನೆ. ಆ ಸುದ್ದಿಯೇನಾದರೂ ಶಂಕರರಿಂದ ಬಂದರೆ ಅದಕ್ಕೂ ಸಯ್, ಮತ್ತೊಬ್ಬರಿಂದ ಬಂದರೆ ಅದಕ್ಕೂ ಸಯ್.
ಆದರೆ ಹಾಗೆಂದ ಮಾತ್ರಕ್ಕೆ ಇವರೆಲ್ಲರ ಸಾಮಾಜಿಕ ನಿಲುವುಗಳನ್ನೂ ಒಪ್ಪುತ್ತೇನೆ ಎಂದಲ್ಲ. ಏಕೆಂದರೆ (ಇಲ್ಲಿ ಚರ್ಚೆಶಯಲ್ಲಿರುವ ಬ್ರಹ್ಮಸೂತ್ರದ ಬಾಶ್ಯದಲ್ಲೇ ಅವರು ಬರೆದ ಒಂದು ಮಾತನ್ನು ತಿರುಗಿಸಿ ಹೇಳುತ್ತಿದ್ದೇನೆ) ಹೇಗೆ ಉಪನಯನವಾಗದಿದ್ದರೆ ’ಅದಿಕಾರ’ವಿಲ್ಲ ಎಂದು ಶಂಕರರು ಹೇಳುವರೋ ಹಾಗೆಯೇ ಸಮಾಜದಿಂದ ದೂರವುಳಿದ ಅವರಿಗೆ ಸಮಾಜದ ಬಗೆಗಿನ ವಿದ್ಯೆಯ ’ಅದಿಕಾರ’ವೂ ಇರುವುದಿಲ್ಲ; ಹಿಂದಿನವರು ಹೇಳಿರುವುದನ್ನು ಮತ್ತೆ ’ಸರಿಯಾಗಿ’ ಹೇಳುತ್ತಿದ್ದೇನೆ ಎಂಬುದಶ್ಟೇ ಅವರ ನಿಲುವು. ಆದರೆ ಆ ಹಿಂದಿನವರೂ ಸಮಾಜದಿಂದ ಬಲುದೂರವುಳಿದವರೇ; ಒಂದು ಕಡೆ ಕುಳಿತು ಬ್ರಹ್ಮನನ್ನು ಅರಿತುಕೊಳ್ಳುವುದೊಂದೇ ಅವರ ಕೆಲಸವಾಗಿತ್ತು; ಕೂಡಣಕ್ಕೂ ಅವರಿಗೂ ನಂಟು ಅಶ್ಟಕ್ಕಶ್ಟೇ.
ನಿಮ್ಮ
ಕಿರಣ್ ಬಾಟ್ನಿ
Priya Kiran, “ಇಡೀ ಬಾರತವೆಂಬುದರಲ್ಲಿ ಉಳಿಸಿಕೊಳ್ಳಲು ತಕ್ಕುದಾದದು ಏನಾದರೂ ಇದ್ದರೆ ಅದು ಉಪನಿಶತ್ತುಗಳಲ್ಲಿರುವ ಬ್ರಹ್ಮ ಮತ್ತು ಅದರ ಬಗ್ಗೆ ಹಲವರು ಹಿಂದಿನವರು ಹೇಳಿರುವ ಸೊಲ್ಲುಗಳು ಮಾತ್ರ ಎಂಬುದು ನನ್ನ ನಿಲುವು” tamma niluvu fashionable aagi eno ide (praayada sokkinalli nimmante nanagoo ide namooneya niluvugaliddavu), aadare adarinda vachanakaararara bagge athavaa jaativyavasthe bagge yaava samasyegalu bageharidavu, yaava prashnegalige parihaara sikkitu? nimma niluvininda brahmada parikalpane bagge yaava hosa holahugalu namage doretavu? “idu nanna niluvu” endashte heluvudu humbatana allave? heege kelutiddene endu sittu hagoo besara maadabedi. “idee bhaaratadalli ulisikollalu takkudaadudu enaadaroo did are adu seegadi meenina curry maatra, aadudarinda adara recipe ellinda bandaroo baramaadikolluttene” endu naanu helidare eshtu haasyaaspadavaagiruttado ashte haasyaaspadavaagide tamma kone hani. allave?
ಅನ್ನಪೂರ‍್ಣ ಅವರೇ, ’ಕೊನೆಹನಿ’ ನನ್ನ ಮನಸ್ಸಿನಲ್ಲಿರುವುದನ್ನು ಸರಿಯಾಗಿ ಹೇಳಿಲ್ಲ ಎನಿಸುತ್ತಿದೆ. ನಾನು ಹೇಳಲು ಹೊರಟಿದ್ದೇನೆಂದರೆ: ಒಟ್ಟಾರೆಯಾಗಿ ಬಾರತದಲ್ಲಿ ಮತ್ತು ಅದರ ಇತಿಹಾಸದಲ್ಲಿ ಅದು ಚೆನ್ನಾಗಿದೆ, ಇದು ಚೆನ್ನಾಗಿದೆ, ಮತ್ತು ಇಲ್ಲಿಯ ದಾರ‍್ಮಿಕ ಪರಂಪರೆಗಳಲ್ಲಿ ಬರೀ ಅಪರಂಜಿ ಚಿನ್ನವೇ ಇದೆ ಎಂದೆಲ್ಲ ನಾವು ಕೇಳಿಸಿಕೊಂಡಿರುವುದುಂಟು, ಅದಕ್ಕಾಗಿ ಹೆಮ್ಮೆ ಪಡಬೇಕೆಂದು ಕೂಡ ಕೇಳಿಸಿಕೊಂಡಿರುವುದುಂಟು. ಆದರೆ ಇದಾವುದೂ ನನಗೆ ಸರಿಯೆನಿಸುವುದಿಲ್ಲ. ನಿಜಕ್ಕೂ ಬಾರತದ ಇತಿಹಾಸದಲ್ಲಿ ಸಾಕಶ್ಟು ಹುಳುಕಿದೆ. ಆದರೆ ಆ ಹುಳುಕೆಲ್ಲದರ ನಡುವೆ ಬ್ರಹ್ಮನೆಂಬ ಕಲ್ಪನೆ ಮತ್ತು ಅದರ/ಅವನ ಬಗೆಗಿನ ಅರಿಮೆಯೆಲ್ಲವೂ ಸೇರಿಕೊಂಡಿದೆ. ಇದನ್ನು ಬಿಟ್ಟರೆ ’ಬಾರತ’ದ ಬಗ್ಗೆ ಹೆಮ್ಮೆ ಪಡಬೇಕಾದುದು ಇನ್ನೇನೂ ಇಲ್ಲವೆಂದು ನನ್ನ ಅನಿಸಿಕೆ. ವಿಶೇಶವಾಗಿ ಬಾರತೀಯರು ಸಮಾಜವನ್ನು ಕಟ್ಟಿಕೊಂಡಿರುವ ರೀತಿಯ ಬಗ್ಗೆಯಂತೂ ನನಗೆ ಬೇಸರವೇ ಇದೆ. ಇವೆರಡನ್ನೂ – ಎಂದರೆ ಬ್ರಹ್ಮವಿದ್ಯೆಯಲ್ಲಿ ಬಾರತೀಯರು ಮುಂದಿರುವುದನ್ನು ಮತ್ತು ಸಾಮಾಜಿಕವಾಗಿ ಬಹಳ ಹಿಂದಿರುವುದನ್ನು – ಬೇರೆಬೇರೆಯಾಗಿ ನೋಡದೆ ಹೋದರೆ ಇಲ್ಲವೇ ಬಾರತದ ಇತಿಹಾಸವು ಅಪರಂಜಿ ಚಿನ್ನವಾಗಿ ಕಾಣಿಸುತ್ತದೆ (ಇದು ’ಬಲಗಡೆ’), ಇಲ್ಲವೇ ಅದು ಬರೀ ಗೆದ್ದಲಾಗಿ ಕಾಣಿಸುತ್ತದೆ (ಇದು ’ಎಡಗಡೆ’). ನಾನು ನಡುವಿನ ಹಾದಿಯೊಂದನ್ನು ಹಿಡಿದಿದ್ದೇನೆ: ನಮ್ಮ ಇತಿಹಾಸದಲ್ಲಿ ’ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ’ – ಎಲ್ಲವೂ ಇದೆ. ಪಾಪ-ನರಕಗಳಿರುವುದು ನಮ್ಮ ಸಾಮಾಜಿಕ ಕಟ್ಟುಪಾಡುಗಳಲ್ಲಿ; ಪುಣ್ಯ-ನಾಕಗಳಿರುವುದು ಅದ್ಯಾತ್ಮದಲ್ಲಿ.
ಶ್ರೀಯುತ ಕಿರಣ್ ಬಾಟ್ನಿಯವರಿಗೆ ಪ್ರತಿಕ್ರಿಯೆ. ಈ ಲೇಖನವು ಶಂಕರಾಚಾರ್ಯರನ್ನು ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಾಗಿ ನಿಮಗೆ ಕಂಡಿದ್ದರೆ ನನಗೆ ಆ ಉದ್ದೇಶವಿಲ್ಲ ಎಂದಷ್ಟೇ ಹೇಳಬಯಸುತ್ತೇನೆ. ಹಾಗೂ ಅಂಥ ಅಭಿಪ್ರಾಯ ನನ್ನ ಲೇಖನದಿಂದ ಹೊರಡುತ್ತದೆ ಎಂಬುದಷ್ಟೇ ಅಲ್ಲದೆ ಶಂಕರರು ಈ ವಿಷಯದಲ್ಲಿ ತಪ್ಪೆಸಗಿದ್ದಾರೆ ಎಂಬುದಾಗಿ ನಿಮಗೆ ಏಕೆ ಕಾಣುತ್ತಿದೆ ಎಂಬುದೂ ಯೋಚಿಸಬೇಕಾದ ವಿಷಯ. ಗಂಭೀರವಾದ ಒಂದು ಚರ್ಚೆಯನ್ನಂತೂ ಎತ್ತಿದ್ದೀರಿ. ಅದೆಲ್ಲ ಸರಿ. ಆದರೆ ನೀವು ವೃಥಾ ಬಾಲಗಂಗಾಧರರ ಹೆಸರನ್ನು ಎಳೆದು ತಂದಿದ್ದೀರಿ ಎಂಬುದೇ ಬೇಸರದ ವಿಷಯ. ಶಂಕರರ ಕುರಿತ ನನ್ನ ಅಭಿಪ್ರಾಯಗಳಿಗೂ ಬಾಲಗಂಗಾಧರರಿಗೂ ಸಂಬಂಧವಿಲ್ಲ.
ಅಪಶೂಧ್ರಾಧಿಕರಣವನ್ನು ಓದಿದಾಗ ನೀವು ತಿಳಿಸುವ ಜಾನಶ್ರುತಿಯ ಉದಾಹರಣೆಯನ್ನು ಹಾಗೂ ಶಂಕರರು ಅದರಿಂದ ಹೊರಡಿಸುವ ತಾತ್ಪರ್ಯವನ್ನೂ ಗಮನಸದಿರಲಿಕ್ಕೆ ಸಾಧ್ಯವಿಲ್ಲ. ಆದರೆ ನನ್ನ ಲೇಖನದಲ್ಲಿ ಶಂಕರಾಚಾರ್ಯರು ಜಾತಿಶೂದ್ರರಿಗೆ ವೇದಾಧಿಕಾರವಿದೆ ಎನ್ನುತ್ತಾರೆ ಎನ್ನುವ ಹೇಳಿಕೆ ಎಲ್ಲೂ ಬಂದಿಲ್ಲವಲ್ಲ? ನೀವು ತಿಳಿಸುವ ಆ ವಾಕ್ಯವು ಶಂಕರರ ಸಂದರ್ಭದಲ್ಲಿ ಬಂದಿಲ್ಲ , ಶ್ರುತಿ ಸ್ಮೃತಿಗಳ ಸಂದರ್ಭದ ಹಿನ್ನೆಲೆಯಲ್ಲಿ ಈ ವಿಷಯವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದಾಗಿ ಹೇಳುವಾಗ ಬಂದಿದೆ ಎಂಬುದನ್ನು ಗಮನಿಸಿ. ಬಹುಶಃ ನನ್ನಿಂದ ಇದೊಂದು ಅವಸರದ ಹೇಳಿಕೆಯೂ ಆಗಿರಬಹುದು. ಆದರೆ ಈ ವಿಷಯವನ್ನು ಚರ್ಚಾಸ್ಪದವಾಗಿ ಮಾಡುವ ಅಗತ್ಯವಿದೆ. ಶೂದ್ರರ ಸ್ಥಾನಮಾನದ ಕುರಿತು ಶಂಕರರ ಮೇಲೆ ಬರುತ್ತಿರುವ ಟೀಕೆಗಳು ಕೆಲವೊಂದು ಸತ್ಯಗಳನ್ನು ಚರ್ಚಿಸದೇ ಒಪ್ಪಿಕೊಂಡು ಹೊರಡುತ್ತವೆ. ಶಂಕರರು ಶ್ರುತಿ ಸ್ಮೃತಿಗಳನ್ನು ಆಧಾರವಾಗಿ ಬಳಸಿಕೊಂಡು ತಮ್ಮ ನಿರ್ಣಯಕ್ಕೆ ಬರುತ್ತಾರೆ. ಆದರೆ ಶ್ರುತಿ ಸ್ಮೃತಿಗಳು ಶೂದ್ರ ಎಂದರೆ ಯಾರನ್ನು ಉಲ್ಲೇಖಿಸುತ್ತವೆ ಎನ್ನುವುದು ಅಷ್ಟೊಂದು ಸ್ಪಷ್ಟವಾಗಿದ್ದಿದ್ದರೆ ಅಪಶೂದ್ರಾಧಿಕರಣದಂಥ ಜಿಜ್ಞಾಸೆ ಏಕೆ ಏಳುತ್ತಿತ್ತು ಎಂಬ ಪ್ರಶ್ನೆ ಹಾಗೇ ಉಳಿದುಕೊಳ್ಳುತ್ತದೆ. ಹಾಗಾಗಿ ಶಂಕರರ ಕಾಲದಲ್ಲೂ ಇದೊಂದು ಚರ್ಚೆಯ ವಿಷಯವಾಗಿತ್ತು ಅದಕ್ಕೂ ಪೂರ್ವಪಕ್ಷ-ಪ್ರತಿಪಕ್ಷಗಳು ಇದ್ದವು ಎನ್ನುವುದನ್ನು ಗಮನದಲಿಟ್ಟುಕೊಳ್ಳುವುದು ಅಗತ್ಯ.
ನನ್ನ ಲೇಖನದ ಶೀರ್ಷಿಕೆ ‘ಅಪಶೂದ್ರಾಧಿಕರಣವು ಏನೆನ್ನುತ್ತದೆ?’ ಅಂತ. ಅದನ್ನು ಬರೆಯಲಿಕ್ಕೆ ನಾನು ಆಧರಿಸಿಕೊಂಡಿದ್ದು ಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳ ಅನುವಾದ. ಭಾಷ್ಯವು ಶ್ರುತಿ ಸ್ಮೃತಿಗಳನ್ನಾಧರಿಸಿ ಶೂದ್ರನಿಗೆ ವೇದಾಧ್ಯಯನದ ಮೂಲಕ ಜ್ಞಾನಕ್ಕೆ ಅಧಿಕಾರವಿಲ್ಲ ಆದರೆ ಇತಿಹಾಸಪುರಾಣಾದಿಗಳ ಮೂಲಕ ಇದೆ ಎನ್ನುವುದಾಗಿ ತಾತ್ಪರ್ಯವನ್ನು ಹೊರಡಿಸುತ್ತದೆ ಎನ್ನುವುದು ಮುಖ್ಯ. ಅಂದರೆ ಜಾತಿ ಶೂದ್ರನಿಗೆ ಜ್ಞಾನದ ಅಧಿಕಾರವಿದೆ ಆದರೆ ವೇದಾಧ್ಯಯನದ ಅಧಿಕಾರವಿಲ್ಲ ಎಂದಂತೆ ಆಗುತ್ತದೆ. ಅದರರ್ಥ ಉಪನಯನವಾಗದ ದ್ವಿಜಾತಿಯವನಿಗೆ ವೇದಾಧಿಕಾರವಿದೆ ಅಂತಾಗಲೀ, ಜಾತಿ ಶೂದ್ರನಿಗೆ ವೇದಾಧ್ಯಯನವನ್ನು ಬಿಟ್ಟು ಅನ್ಯ ವಿದ್ಯೆಯ ಅಧಿಕಾರವಿಲ್ಲ ಅಂತಾಗಲೀ ತೀರ್ಮಾನ ಹೊರಡುವುದಂತೂ ಅಸಾಧ್ಯ. ಶಂಕರರಿಗೆ ಜ್ಞಾನದ ಬಗ್ಗೆ ಹಾಗೂ ವೇದಗಳ ಬಗ್ಗೆ, ಕರ್ಮಕಾಂಡದ ಬಗ್ಗೆ ಯಾವ ನಿಲುವುಗಳಿದ್ದವು ಎಂಬುದರ ಹಿನ್ನೆಲೆಯಲ್ಲಿ ನೋಡಿದರೆ ವೇದವೊಂದೇ ಮಹಾವಿದ್ಯೆ ಎಂದು ಅವರು ಸಾರುತ್ತಿರುವುದು ಅಸಂಭವ. ಹಾಗಾಗಿ ಅವರು ವೇದಾಧ್ಯಯನದ ತಾಂತ್ರಿಕ(ಶಾಸ್ತ್ರೀಯ) ಅಗತ್ಯಗಳ ಕುರಿತು ಜಿಜ್ಞಾಸೆ ಮಾಡುತ್ತಾರೆ.
ಶೂದ್ರನೆಂದರೆ ಜಾತಿಶೂದ್ರನೇ ಎಂಬುದಾಗಿ ನಿರ್ಣಯಿಸುವುದು ಅಪಶೂದ್ರಾಧಿಕರಣ ಭಾಷ್ಯದ ಒಂದು ಭಾಗ. ಆದರೆ ಇಲ್ಲಿ ಶಂಕರರು ತಮಗೂ ಹಿಂದಿರುವ ಶಾಸ್ತ್ರಗಳು ಏನನ್ನು ಹೇಳುತ್ತವೆ ಎಂಬುದರ ತಾತ್ಪರ್ಯವನ್ನು ತರ್ಕಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಶಂಕರರು ಏನನ್ನು ಹೇಳುತ್ತಿದ್ದಾರೆ ಎಂಬುದರ ಜೊತೆಗೇ ಈ ‘ಅಪಶೂದ್ರಾಧಿಕರಣ’ವು ನಮಗೆ ಒಂದು ಪ್ರಾಚೀನ ಚರ್ಚೆಯ ಸನ್ನಿವೇಶವನ್ನೂ ಸ್ಫುಟಗೊಳಿಸುತ್ತದೆ. ಆದರೆ ಇಂಥ ಒಳನೋಟಗಳನ್ನು ನೀಡಬಲ್ಲ ಒಂದು ಚರ್ಚೆಯನ್ನು ಇಂದು ನಾವು ನಿರೂಪಿಸುತ್ತಿರುವ ರೀತಿ ಸರಿಯೆ? ನಮ್ಮ ಇಂದಿನ ಪೂರ್ವಾಗ್ರಹಗಳನ್ನೆಲ್ಲ ಅದು ತಾಳಿಕೊಳ್ಳಬಲ್ಲದೆ? ಎಂಬುದು ಯೋಚಿಸತಕ್ಕ ವಿಷಯ. ಈ ಕಾರಣಕ್ಕೇ ನಾನು ಶೂದ್ರ ಎಂಬ ಶಬ್ದದ ಸಂದಿಗ್ಧತೆಯ ಕುರಿತು ಪ್ರಸ್ತಾಪಿಸಿದ್ದು. ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಶಾಸ್ತ್ರರೀತ್ಯಾ ಈ ಭಾಷ್ಯಕ್ಕೆ ಪ್ರವೇಶ ಪಡೆದುಕೊಂಡವರು ಈ ಪ್ರಶ್ನೆಗಳನ್ನು ಇಟ್ಟುಕೊಂಡು ಅಭ್ಯಸಿಸಿದರೆ ಅವರಿಗೇನು ಕಾಣುತ್ತದೆ ಎಂಬ ಕುತೂಹಲ ನನಗಿದೆ. ಆದರೆ, ಇವೆರಡೂ ಇಲ್ಲದ ನನಗೆ ಇತಿಹಾಸಕಾರನಾಗಿ ಕೆಲವು ಆಸಕ್ತಿಪೂರ್ಣ ವಿಚಾರಗಳು ಅದರಲ್ಲಿ ಕಾಣುವುದಂತೂ ನಿಶ್ಚಿತ.
ಹಾಗಾಗಿ ಶಂಕರರ ತಪ್ಪು ಸರಿಗಳನ್ನು ತೀರ್ಮಾನಿಸುವುದಕ್ಕೂ ಪೂರ್ವದಲ್ಲಿ ಈ ಚರ್ಚೆಯ ಸಾಂಸ್ಕೃತಿಕ ಸಂದರ್ಭ ನಮಗೆ ಸ್ಪಷ್ಟವಾಗಬೇಕು. ಅದಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಅದು ಸ್ಪಷ್ಟವಾಗದೇ ಉಪನಯನವನ್ನು ನಿರಾಕರಿಸುವುದು ಅನ್ಯಾಯ, ವೇದವೊಂದೇ ವಿದ್ಯೆ, ಅದು ಇಲ್ಲದವರು ಸಮಾಜದಿಂದ ಹೊರಗುಳಿದಿದ್ದರು, ಶಂಕರರು ತಪ್ಪು ಮಾಡಿದ್ದಾರೆ, ಇತ್ಯಾದಿ ನಿರ್ಣಯಗಳೆಲ್ಲ ಅವರ ಮೇಲೆ ಅಕಾರಣವಾದ ತಪ್ಪನ್ನು ಹೊರಿಸುತ್ತವೆ. ಅಪಶೂದ್ರಾಧಿಕರಣವು ಇಂಥ ನಿರ್ಣಯಗಳಲ್ಲಿ ಇರುವ ಸಮಸ್ಯೆಗಳನ್ನೇ ಎತ್ತಿತೋರಿಸುತ್ತದೆ ಎಂಬುದು ನನ್ನ ಅಭಿಪ್ರಾಯ.
ಶ್ರೀಯುತ ರಾಜಾರಾಮ ಹೆಗಡೆಯವರಿಗೆ ನಮಸ್ಕಾರ.
ಶ್ರೀಯುತ ಎಸ್.ಎನ್. ಬಾಲಗಂಗಾದರರ ಹೆಸರನ್ನು ಈ ಸಂದರ‍್ಬದಲ್ಲಿ ಬಳಸಿದ್ದು ನಿಮ್ಮನ್ನು ಬೇಸರಿಸುತ್ತದೆ ಎನಿಸಿರಲಿಲ್ಲ; ಮನ್ನಿಸಿ. ನಾನು ಹಾಗೆ ಮಾಡಿದ್ದಕ್ಕೆ ಕಾರಣವಿದೆ, ಆದರೆ ಅದಿಲ್ಲಿ ಬೇಡ. ಮಿಕ್ಕ ಮಾತುಗಳನ್ನೆಲ್ಲ ಬದಿಗಿಟ್ಟು ದಯವಿಟ್ಟು ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿದರೆ ನಮ್ಮ ಚರ‍್ಚೆಗೆ ಅರ‍್ತವಿದೆ:
1. ಶಂಕರರು ’न शूद्रस्याधिकारः … उपनयनस्य च वर्णत्रयविषयत्वात् ।’ – ’ಶೂದ್ರನಿಗೆ ಅದಿಕಾರವಿಲ್ಲ…ಮೂರು ವರ‍್ಣಗಳಿಗೆ ಮಾತ್ರ ಉಪನಯನವಿರುವುದರಿಂದ…’ ಎನ್ನುತ್ತಾರೆ. ನೀವು ಶಂಕರರು ’ಶೂದ್ರರಿಗೆ ಉಪನಯನಕ್ಕೆ ಹಾಗೂ ವೇದವಿದ್ಯೆಗೆ ಅಧಿಕಾರವಿಲ್ಲ ಎಂಬುದಾಗಿಯೂ ಹೇಳುತ್ತಿಲ್ಲ’ ಎಂದು ಹೇಳುತ್ತೀರಿ. ಏಕೆ?
2. ’ಎರಡು ಪ್ರಕಾರದ ಶೂದ್ರರನ್ನು ಕುರಿತು ಅವರು ಚರ್ಚಿಸುತ್ತಾರೆ’ ಎನ್ನುತ್ತೀರಿ (ಉಪನಯನವಾಗಿಲ್ಲದವನು + ಜಾತಿಶೂದ್ರನು). ಇದು ಶಂಕರಬಾಶ್ಯದಲ್ಲಿ ಎಲ್ಲಿದೆ?
3. ‘ಶೂದ್ರನೆಂದರೆ ಜಾತಿಶೂದ್ರನೇ ಎಂಬುದಾಗಿ ನಿರ್ಣಯಿಸುವುದು ಅಪಶೂದ್ರಾಧಿಕರಣ ಭಾಷ್ಯದ ಒಂದು ಭಾಗ.’ ಎಂದು (ಕಾಮೆಂಟಿನಲ್ಲಿ) ಹೇಳಿದ್ದೀರಿ. ಈ ವಾಕ್ಯದಲ್ಲಿ ನೀವು ಶಂಕರರು ಶೂದ್ರನೆಂದರೆ ಜಾತಿಶೂದ್ರನೇ ಎಂದು ತೀರ‍್ಮಾನಿಸಿದ್ದಾರೆ ಎಂದು ಒಪ್ಪುತ್ತಿರುವಿರೋ? ಇಲ್ಲಾ ’ಜಾತಿಶೂದ್ರನೋ ಅಲ್ಲವೋ ಎಂದು ತೀರ‍್ಮಾನಿಸುವುದು ಬಾಶ್ಯದ ಒಂದು ಬಾಗ’ ಎಂದು ಹೇಳುತ್ತಿರುವಿರೋ? ಎರಡನೆಯದಾದರೆ ಕೊನೆಗೆ ಬಾಶ್ಯ ಯಾವ ತೀರ‍್ಮಾನಕ್ಕೆ ಬರುತ್ತದೆ, ಮತ್ತು ಆ ತೀರ‍್ಮಾನದ ಪ್ರಕ್ರಿಯೆ ಮತ್ತು ಹೊರಹೊಮ್ಮಿಕೆಗಳು ಬಾಶ್ಯದಲ್ಲಿ ಎಲ್ಲಿವೆ?
4. ’ಆದರೆ ಶೂದ್ರರಿಗೆ ವೇದಾಧಿಕಾರವನ್ನು ಕುರಿತು ಮಾತನಾಡುವಾಗ ‘ಜಾತಿಶೂದ್ರರಿಗೆ’ ಎಂದೇನೂ ನಿರ್ದಿಷ್ಟಪಡಿಸುವುದಿಲ್ಲವಲ್ಲ?’ ಎಂದು ಕೇಳುವಾಗ ನೀವು ಶಂಕರರ ಬಗ್ಗೆ ಮಾತನಾಡುತ್ತಿರುವಿರೋ ಇಡೀ ವೇದಪರಂಪರೆಯ ಬಗ್ಗೆ ಬಗ್ಗೆ ಮಾತನಾಡುತ್ತಿರುವಿರೋ? ಶಂಕರರ ಬಗ್ಗೆ ಮಾತನಾಡುತ್ತಿದ್ದರೆ ನೀವು ’जातिशूद्रस्यानधिकारात्’ ಎನ್ನುವುದನ್ನು ನೋಡಿರಲಿಲ್ಲವೇ? ಪರಂಪರೆಯ ಬಗ್ಗೆ ಮಾತನಾಡುತ್ತಿದ್ದರೆ ಶಂಕರರು ’जातिशूद्रस्यानधिकारात्’ ಎಂದು ಏಕೆ ಹೇಳಿದ್ದಾರೆ?
5. ‘ಆದರೆ ನನ್ನ ಲೇಖನದಲ್ಲಿ ಶಂಕರಾಚಾರ್ಯರು ಜಾತಿಶೂದ್ರರಿಗೆ ವೇದಾಧಿಕಾರವಿದೆ ಎನ್ನುತ್ತಾರೆ ಎನ್ನುವ ಹೇಳಿಕೆ ಎಲ್ಲೂ ಬಂದಿಲ್ಲವಲ್ಲ?’ – ಈ ಮಾತನ್ನು ನೀವು ಏಕೆ ಹೇಳಿದ್ದೀರಿ? ನಾನೇನು ಶಂಕರರು ಹಾಗೆ ಹೇಳಿದ್ದಾರೆ ಎನ್ನಲಿಲ್ಲವಲ್ಲ? ನಾನು ಹೇಳಿದ್ದು ಶಂಕರರು ಜಾತಿಶೂದ್ರರಿಗೆ ವೇದಾದಿಕಾರ **ಇಲ್ಲ** ಎಂದು ಹೇಳಿದ್ದಾರೆಂದು.
ಅಂದಹಾಗೆ, ಇದೆಲ್ಲದರ ಮೇಲೆ, ನಿಮ್ಮ ಬರಹವನ್ನು ’ಅಪಶೂದ್ರಾಧಿಕರಣ’ ಏನನ್ನು ಹೇಳುತ್ತದೆ?’ ಎಂಬುದಾಗಿ ಹೆಸರಿಸಿದ್ದೀರಿ. ನಿಜಕ್ಕೂ ಅದು ಏನು ಹೇಳುತ್ತದೆ ಎನ್ನುವುದು ಆ ಬ್ರಹ್ಮನಿಗೇ ಗೊತ್ತು! ಏಕೆಂದರೆ ’ಅಪಶೂದ್ರಾದಿಕರಣ’ದಲ್ಲಿ ’ಶೂದ್ರ’ನೆಂಬ ಪದವೇ ಬಳಕೆಯಾಗಿಲ್ಲ! ಇನ್ನು ’ಜಾನಶ್ರುತಿ’ ಮತ್ತು ’ರಯ್‍ಕ್ವ’ ಪದಗಳೂ ಬಳಕೆಯಾಗಿಲ್ಲ. ಇವೆಲ್ಲ ಇರುವುದು ಬಾಶ್ಯಗಳಲ್ಲಿ! ಹೀಗಿರುವಾಗ, ಹೆಚ್ಚು-ಕಡಿಮೆ ಅಪಶೂದ್ರಾದಿಕರಣಕ್ಕೆ ಶಂಕರರ ಬಾಶ್ಯವಿಲ್ಲದೆ ಅರ‍್ತವೇ ಇಲ್ಲ (ರಾಮಾನುಜ ಮತ್ತು ಮದ್ವರು ಹೆಚ್ಚು-ಕಡಿಮೆ ಶಂಕರರನ್ನು retweet ಮಾಡಿದ್ದಾರೆ!). ಇಡೀ ಬ್ರಹ್ಮಸೂತ್ರವೇ ಒಂದಕ್ಕೊಂದು ನಂಟಿಲ್ಲದ ಸೊಲ್ಲುಗಳ ಕಲಸುಮೇಲೋಗರ. ಅದೇತಕ್ಕೆ ಇದನ್ನು ಅಶ್ಟು ಮುಕ್ಯವಾದ ಗ್ರಂತವೆನ್ನುತ್ತಾರೋ ನಾ ಕಾಣೆ.
ನಂಬಿಕೆಯಿರಲಿ. ನನಗೆ ಒಂದೇ ’ಪೂರ‍್ವಾಗ್ರಹ’ವಿರುವುದು: ಅದೇನೆಂದರೆ – ವೇದಪರಂಪರೆಯನ್ನು ಕಟ್ಟಿದ್ದು ಮನುಶ್ಯರು, ಮತ್ತು ಮನುಶ್ಯರು ತಪ್ಪು ಮಾಡಬಲ್ಲರು.
ನಿಮ್ಮ
ಕಿರಣ್
ಶ್ರೀಯುತ ಕಿರಣ್ ಅವರಿಗೆ,
ಅಪಶೂದ್ರಾಧಿಕರಣ ಭಾಷ್ಯವನ್ನು ಓದುವಾಗ ನನ್ನಲ್ಲಿ ಈ ಮುಂದಿನ ಪ್ರಶ್ನೆಗಳಿದ್ದವು: 1)ಐತಿಹಾಸಿಕ ಕಾಲದಲ್ಲಿ ಅನೇಕ ದ್ವಿಜಾತಿ ಸಮೂಹಗಳು ದ್ವಿಜಾತಿಗಳಾಗಿ ಬದಲಾಗಿ ಗೋತ್ರಸೂತ್ರಗಳನ್ನು ಪಡೆದಿರುವುದು ಕಂಡುಬರುತ್ತದೆ. ವರ್ಣೋತ್ಕರ್ಷ ಎಂಬ ಕಲ್ಪನೆಯೇ ಇದೆಯಲ್ಲ? ಅದು ಹೌದೇ ಆಗಿದ್ದರೆ ಸ್ಮೃತಿ ಹಾಗೂ ಭಾಷ್ಯಗಳು ಅದನ್ನು ಒಪ್ಪಿಕೊಂಡಿರಲೇಬೇಕು. 2) ವರ್ಣಗಳು ವೃತ್ತಿಯಾಧಾರಿತವಾದಗಿದ್ದಾಗ ಹುಟ್ಟು ಅವುಗಳಿಗೆ ಮೂಲಭೂತವಾದ ನಿಬಂಧನೆ ಆಗಲಿಕ್ಕೆ ಹೇಗೆ ಸಾಧ್ಯ? 3) ವೇದಗಳನ್ನು ಪ್ರಾಚೀನ ಭಾರತದ ಅನೇಕ ಆಧ್ಯಾತ್ಮಿಕ ಸಂಪ್ರದಾಯಗಳು ಗೌಣವಾಗಿ ನೋಡುತ್ತವೆ. ಶಂಕರರೂ ಅಂಥ ಸಂಪ್ರದಾಯಕ್ಕೆ ಸೇರಿದ್ದಾರೆ.ಹಾಗಿರುವಲ್ಲಿ ಅವರ ಭಾಷ್ಯದಲ್ಲಿ ಶೂದ್ರರಿಗೆ ವೇದಾಧಿಕಾರವನ್ನು ನಿರಾಕರಿಸುವುದಕ್ಕೆ ನಿರ್ದಿಷ್ಠವಾಗಿ ಯಾವ ಮಹತ್ವವನ್ನು ಆರೋಪಿಸಬಹುದು? ಇತ್ಯಾದಿ. ಈ ಹಿನ್ನೆಲೆಯಲ್ಲಿ ನಾನು ಭಾಷ್ಯದ ಅರ್ಥವನ್ನು ತರ್ಕಿಸಿದೆ.
“ಶೂದ್ರನಿಗೆ ವೇದಾಧ್ಯಯನವೇ ಇಲ್ಲ; ಏಕೆಂದರೆ ಉಪನಯನಪೂರ್ವಕವೇ ಅದು ಆಗಬೇಕು” ಎಂಬ ಹೇಳಿಕೆ ನನಗೆ ನಿರ್ಣಾಯಕವಾಗಿ ಕಾಣಿಸಿತು. ಅಲ್ಲಿ ‘ಉಪನಯನವಾಗದಿದ್ದುದರಿಂದ’ ಎಂಬ(ಕಾರಣವೇನೇ ಇರಲಿ) ತಾಂತ್ರಿಕ ಅಂಶವನ್ನು ತೋರಿಸಲಾಗಿದೆ. ಭಾಷ್ಯದಲ್ಲಿ ಬೇರೆಡೆಯಲ್ಲೂ ಉಪನಯನವನ್ನು ಮಾಡಿ ವೇದಾಧ್ಯಯನವನ್ನು ಪ್ರಾರಂಭಿಸಿದ ಉಲ್ಲೇಖ ಬರುತ್ತದೆ. ಉಪನಯನವು ಶೂದ್ರತ್ವವನ್ನು ಕಳೆಯುವ ಸಂಸ್ಕಾರವಾಗಿರುವಾಗ ಶೂದ್ರರಿಗೆ ವೇದಾಧಿಕಾರವಿಲ್ಲ ಎಂದು ಭಾಷ್ಯವು ಹೇಳಲು ಸಾಧ್ಯವೇ ಇಲ್ಲ. ಹಾಗೆ ಹೇಳಿದಾಗ ಉಂಟಾಗುವ ಗೊಂದಲವನ್ನು ಪರಿಹರಿಸಲಿಕ್ಕಾಗಿ ‘ಜಾತಿಶೂದ್ರ’ ಎಂಬುದನ್ನು ನಿರ್ದಿಷ್ಟಪಡಿಸುವ ಪ್ರಸಂಗ ಬಂದಿದೆ.
ಜಾತಿಶೂದ್ರ ಎನ್ನುವ ಶಬ್ದವು ಅದಲ್ಲದ ಶೂದ್ರ ನನ್ನು ಸೂಚಿಸುತ್ತದೆ. ‘ಜನ್ಮನಾ ಜಾಯತೆ ಶೂದ್ರಃ’ ಎಂಬ ಹಿನ್ನೆಲೆಯಲ್ಲಿ ಅದನ್ನು ಗಮನಿಸಿದಾಗ ಜಾತಿಯವನಲ್ಲದ ಶೂದ್ರ ಯಾರು ಎಂಬುದೂ ಸ್ಪಷ್ಟ. ಭಾಷ್ಯಕಾರರಿಗೆ ಆ ಶಬ್ದವನ್ನು ಬಳಸುವಾಗ ಎರಡೂ ರೀತಿಯ ಶೂದ್ರರೂ ಗಮನದಲ್ಲಿರಬೇಕು.
ಇದನ್ನು ನಾನು ನನ್ನ ಪ್ರಶ್ನೆಗಳ ನಿಟ್ಟಿನಿಂದ ಓದಿದ್ದರಿಂದ ಕಂಡದ್ದು. ಆದರೆ ನೀವೆತ್ತಿದ ಪ್ರಶ್ನೆಯು ನಾನು ನನ್ನ ಅಭಿಪ್ರಾಯವನ್ನು ಮರುಪರಿಶೀಲಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ಅದಕ್ಹಾಗಿ ನಿಮಗೆ ಧನ್ಯವಾದಗಳು. ನನ್ನ ಲೇಖನದ ಓದುಗರು ಅಂಥ ಹೇಳಿಕೆಗಳನ್ನು ಗೌಣಮಾಡಿ ಓದಿಕೊಳ್ಳುವುದೊಳ್ಳೆಯದು. ನನ್ನ ಲೇಖನದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಬಿಟ್ಟರೂ ನಾನು ಏನನ್ನು ಹೇಳಹೊರಟಿದ್ದೇನೋ ಅದಕ್ಕೆ ಧಕ್ಕೆ ಬರಲಾರದು. ಇಂದು ಶಂಕರರ ವಿರುದ್ಧ ಮಾತನಾಡುವವರು ಜ್ಞಾನಕ್ಕೂ ವೇದಕ್ಕೂ ಮಾಡುವ ಸಮೀಕರಣ, ಅವರು ಜಾತಿವಾದಿ, ಶೂದ್ರವಿರೋಧಿ ಎಂಬೆಲ್ಲ ಹೇಳಿಕೆಗಳು ಸಮರ್ಥನೀಯವಲ್ಲ ಎಂಬುದನ್ನು ಹೇಳುವುದು ನನ್ನ ಲೇಖನದ ಉದ್ದೇಶ.
ಆದರೆ ಎರಡು ವಿಷಯಗಳ ಕುರಿತು ನಿಮ್ಮ ಸ್ಪಷ್ಟೀಕರಣ ನನಗೆ ಇನ್ನೂ ಸಿಕ್ಕಿಲ್ಲ: 1) ಮನುಷ್ಯರ ತಪ್ಪುಗಳ ಕುರಿತು ಮಾತನಾಡಲಿಕ್ಕೆ ಹಿಂಜರಿಯಬಾರದು ಎಂದಿದ್ದೀರಿ. ತಮ್ಮ ಭಾಷ್ಯದಲ್ಲಿ ಶಂಕರರು ಮಾಡಿದ ತಪ್ಪು ಏನು ಎಂಬುದನ್ನು ಸ್ವಲ್ಪ ಬಿಡಿಸಿ ಹೇಳುವಿರಾ? 2) ಶಂಕರರ ತಪ್ಪುಗಳನ್ನು ನಾನು ಸಮರ್ಥಿಸುತ್ತಿದ್ದೇನೆ ಎಂಬುದಾಗಿ ನೀವು ಹೊನಲು ನಲ್ಲಿನ ಲೇಖನದಲ್ಲಿ ಬರೆದಿದ್ದೀರಿ. ಅದೇಕೆ ನಿಮಗೆ ಹಾಗನಿಸುತ್ತದೆ?
ಮಿ. ಕಿರಣ್ ಬಾಟ್ನಿಯವರೇ, ಹೊನಲಿನಲ್ಲಿನ ತಮ್ಮ ಲೇಖನದಲ್ಲಿ “….ಆದರೆ ಆ ಮಾರ‍್ಪಾಟು ಎಂತದ್ದು, ಎಲ್ಲಿಯವರೆಗೆ ಎಂದು ಅವರಾಗಲಿ ಪ್ರೊ|| ಎಸ್. ಎನ್. ಬಾಲಗಂಗಾದರರಾಗಲಿ ಅವರ ಗುಂಪಿನ ಇತರರಾಗಲಿ ಸರಿಯಾಗಿ ಅರಿತುಕೊಳ್ಳಲು ಹೋಗಿಲ್ಲವೆನಿಸುತ್ತದೆ; ಸುಮ್ಮನೆ ನಮ್ಮ ಕೂಡಣದ ಬಗ್ಗೆ ನಾವು ತಿಳಿದಿರುವುದೆಲ್ಲವೂ ತಪ್ಪೆಂದು ಕಯ್ಬೀಸಿ ಹೇಳುತ್ತಿರುವುದು ಅದರ ಗುರುತು. ಹಾಗೆ ಕಯ್ಬೀಸಿ ಹೇಳುವುದು ಹೆಗಡೆಯವರ ಮೊನ್ನೆಯ ಬರಹದಲ್ಲೂ ಕಾಣಿಸಿಕೊಂಡಿದೆ…..” ಎಂದು ನಮ್ಮ ಸಂಶೋಧನಾ ಕಾರ್ಯಕ್ರಮದ ಎಲ್ಲಾ ಬರವಣಿಗೆಗಳ ಬಗ್ಗೆ ಸಾರಾಸಗಟಾದ ‘ಅಪ್ರಭುದ್ದವಾದ’ ತೀರ್ಪನನ್ನು ಕೊಟ್ಟೀದ್ದೀರಿ. ವಸಾಹತುಶಾಹಿ ಚಿತ್ರಣಗಳು ಹೇಗೆಲ್ಲಾ ಭಾರತೀಯ ಸಮಾಜವನ್ನು ತನ್ನದೇ ಸಾಂಸ್ಕೃತಿಕ ಅನುಭವದ ನೆಲೆಯಲ್ಲಿ ವಿವರಿಸುತ್ತಾ ಇಲ್ಲಿ ಇಲ್ಲದ ಹಲವು ಸಂಗತಿಗಳನ್ನು ಇದ್ದಂತೆ ಮತ್ತು ಇಲ್ಲಿರುವ ಸಂಗತಿಗಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿರುವ ಸಂಗತಿಗಳ ಅಪಭ್ರಂಶ ರೂಪಗಳೆಂಬಂತೆ ಹೇಗೆಲ್ಲಾ ವಿವರಿಸಿದೆ ಮತ್ತು ಅವು ಯಾವಮಟ್ಟದ distort ಆಗಿವೆ ಎನ್ನುವ ಕುರಿತು ಹಲವಾರು ಸಂಗತಿಗಳನ್ನು (ಸೆಕ್ಯಲರಿಸಂ, ಜಾತಿವ್ಯವಸ್ಥೆ, ಹಿಂದೂಯಿಸಂ, ಲಾ, ಸ್ಟೇಟ್, ಹಕ್ಕುಗಳು, ಉದಾರವಾದ, ಸಂಪ್ರದಾಯಗಳು, ಆಚರಣೆಗಳು, ಸುಧಾರಣಾವಾಧಿ ಚಳುವಳಿಗಳು,… ಇನ್ನೂ ಬಹಳಷ್ಟು) ತೆಗೆದುಕೊಂಡು ಸ್ಪಷ್ಟವಾಗಿ ವಿಶ್ಲೇಷಿಸಿ ಅವುಗಳಲ್ಲಿರುವ ತಾರ್ಕಿಕ ಸಮಸ್ಯೆಗಳನ್ನು ಮತ್ತು ಅದರಿಂದ ಹೊರಬರುವ ದಾರಿಗಳನ್ನು ವಿವರಿಸುತ್ತಾ ಬರಲಾಗುತ್ತಿದೆ. ಅದಷ್ಟನ್ನೂ ನೀವು ಓದಿ ಈ ತೀರ್ಮಾನಕ್ಕೆ ಬಂದಿರುವಿರೇ??? ಈ ಹುಂಬ ತೀರ್ಮಾನಕ್ಕೆ ನೀವು ಬರುವ ಮುಂಚೆ ನೀವು ಮೊದಲು ಬಾಲು ವಿಚಾರಗಳ ಕುರಿತ ಚರ್ಚಾ ವೇಧಿಕೆಯಾದ http://groups.yahoo.com/group/TheHeathenInHisBlindness/message ಗೆ ಹೋಗಿ ಅಲ್ಲಿನ ಚರ್ಚೆಗಳನ್ನು ಮೊದಲಿನಿಂದಲೂ ಓದಿ (ಈಗಾಗಲೇ ಈ ಸಲಹೆಯನ್ನು ನಾನು ನಿಮಗೆ ಅಲ್ಲಿ ಕೊಟ್ಟಿದ್ದೇನೆ. ಪುನಃ ಇಲ್ಲಿ ನೆನಪಿಸುತ್ತಿದ್ದೇನೆ).
ನಿಮ್ಮಂತೆ ಮತ್ತು ನಿಮಗಿಂತಲೂ ಪ್ರಖಾಂಡ ಪಾಂಡಿತ್ಯದ ಪ್ರಶ್ನೆಗಳನ್ನು ಹಲವು ವಿದ್ವಾಂಸರು ಈಗಾಗಲೇ ಅಲ್ಲಿ ಕೇಳಿದ್ದಾರೆ ಮತ್ತು ದೊಡ್ಡ ಮಟ್ಟದಲ್ಲಿ ಆ ಕುರಿತು ಚರ್ಚೆಗಳಾಗಿವೆ. ಅದನ್ನೆಲ್ಲಾ ಓದಿ ಮತ್ತು ನಮ್ಮ ಉಳಿದೆಲ್ಲಾ ಬರವಣಿಗೆಗಳನ್ನು ಓದಿ ಅದರಲ್ಲಿ ವಸಾಹತು ಚಿತ್ರಣಗಳ ಧೋಷಗಳೆಂದು ನಾವು ನಿರೂಪಿಸಿರುವುದರಲ್ಲಿರವ ತಪ್ಪುಗಳನ್ನು ಆಧಾರ ಸಮೇತ ತೋರಿಸಿ ಆನಂತರ ಈ ರೀತಿಯ ಹೇಳಿಕೆಗಳನ್ನು ನೀಡಿ. (ಸಂಸ್ಕೃತದಿಂದ ಕನ್ನಡವನ್ನು ಬಿಡಿಸಿ ಸ್ವಚ್ಚಕನ್ನಡದಲ್ಲೇ ಬರೆಯಬೇಕು ಎನ್ನುವ ನಿಮ್ಮ ನಿಲುವು ಸಹ ಮೊದಲು “ವಸಾಹತುಶಾಹಿಯ ಪ್ರಜ್ಞೆಯ” ಒಂದು ರೂಪ ಎನ್ನುವುದು ಮನದಟ್ಟಾದರೆ ಉಳಿದ ನಿಮ್ಮ ನಿಲುವಗಳಲ್ಲಿನ ಧೋಷಗಳು ನಿಮಗೇ ಅರಿವಾಗುತ್ತದೆ. ಮರಿಯಾನ್ ರ ಲೇಖನಕ್ಕೆ ನಿಮ್ಮ ಪ್ರಖಾಂಡ ವಿಮರ್ಶೆಯ ನಿರೀಕ್ಷೆಯಲ್ಲಿದ್ದೇವೆ ಮತ್ತು ಆ ಲೇಖನದ ಓದು ನಿಮ್ಮ ಈ ರೀತಿಯ ಕನ್ನಡವೇ ಸರಿ ಎಂಬ ತಮ್ಮ ನಿಲುವಿನ ಮೂಲವನ್ನು ಮನದಟ್ಟು ಮಾಡಿಸಿದೆ ಎಂದು ಭಾವಿಸುತ್ತೇನೆ. ನಮ್ಮ ಪ್ರಕಾರ ನೀವು ನಿಮ್ಮ ಲೇಖನದಲ್ಲಿ ಬಳಸುತ್ತಿರುವುದು ತಮಿಳ್ಗನ್ನಡ. ಇರಲಿ, ನೀವು ಯಾವ ಭಾಷೆಯಲ್ಲಾದರೂ ಬರೆಯಿರಿ ನನಗೇನೂ ಸಮಸ್ಯೆ ಇಲ್ಲ. ಆದರೆ ವಸಾಹತು ಪ್ರಜ್ಞೆ ಹೀಗೂ ಹರಡುತ್ತಿದೆಯಲ್ಲಾ ಎನ್ನುವುದಷ್ಟೇ ನನ್ನ ಸೋಜಿಗ.)
ಇನ್ನು ನೀವು ಇಲ್ಲಿ ಎತ್ತಿರುವ ಪ್ರಶ್ನೆಗಳಿಗೆ ರಾಜಾರಾಮ ಹೆಗಡೆಯವರು ತಮ್ಮ ಊರಿನಿಂದ ಹಿಂದಿರುಗಿದ ನಂತರ ಉತ್ತರಿಸಬಹುದೆಂದು ಭಾವಿಸಿದ್ದೇನೆ.
ನನ್ನ ಪ್ರಶ್ನೆ ಎಂದರೆ ‘ಜಾತಿ ಶೂದ್ರ’ರಿಗೇ ವೇದಾಧಿಕಾರ ವಿರಲಿಲ್ಲವೆಂದೇ ಇಟ್ಟುಕೊಳ್ಳೋಣ. ಅದರರ್ಥ ಇಂದಿನ ತತಾಕಥಿತ ನಿಲುವುಗಳಂತೆ ‘ಇದರಿಂದಲೇ ಶೂದ್ರಾಧಿಯಾಗಿ ಇತರರಿಗೆ ಈ “ಮಹಾಜ್ಞಾನ” ವನ್ನು ನಿರಾಕರಿಸಿ ಅಜ್ಞಾನದ ಕತ್ತಲೆಯಲ್ಲಿಡಲಾಗಿತ್ತು’ ಎಂದಾಗುವುದೇ? ವೇದಗಳೇ ‘ಮಹಾಜ್ಞಾನ’ವಾಗಿದ್ದು ಅದನ್ನು ತಿಳಿಯದಿರುವುದು ಅಜ್ಞಾನವಾಗಿತ್ತೇ/ವಾಗಿದೆಯೇ? ಅಂತಹ ‘ಮಹಾಜ್ಞಾನ’ವನ್ನು ಇಂದು ಎಲ್ಲರಿಗೂ ಸಾರ್ವತ್ರಿಕ ಕಲಿಕೆಗೆ ಅವಕಾಶವಿದ್ದರೂ ಏಕೆ ಈ ಮಹಾಜ್ಞಾನವನ್ನು ಪಡೆಯಲು ಯಾರೂ ಸರಿತಿನಿಂತು ಮುಗಿಬೀಳುತ್ತಿಲ್ಲ?
ಚರ್ಚೆಗೆ ಮುಖ್ಯವಾದ ಈ ರೀತಿಯ ವಿಚಾರಗಳನ್ನು ನೀವು ಪ್ರಜ್ಞಾಪೂರ್ವಕವಾಗಿ ಬದಿಗೊತ್ತಿ ಅಮುಖ್ಯವಾದ ವಿಚಾರಗಳನ್ನೇ ಮುಂದೊತ್ತಿ ನಿಮ್ಮಂತವರು ಏತಕ್ಕೆ ಹೊರಡುತ್ತಿದ್ದೀರಿ ಎಂಬುದೇ ಒಂದು ದೊಡ್ಡ ಕೇಳ್ವಿ.
ಶಣ್ಮುಕ ಅವರೇ,
ಬೇಸರಿಸಿಕೊಳ್ಳಬೇಡಿ. ನಿಮ್ಮ ಅರಕೆಯ ಬಗ್ಗೆ ನನ್ನ ಅನಿಸಿಕೆಯನ್ನು ನಾನು ಬರೆದಿದ್ದೇನಶ್ಟೆ. ಯಾರ ಅನಿಸಿಕೆಯೂ ನಿಮಗೆ ಬೇಡವಾದರೆ ಅದಕ್ಕೆ ಒಂದೇ ದಾರಿ: ನಿಮ್ಮ ಬರಹಗಳನ್ನು ಬಯಲು ಮಾಡದಿರುವುದು.
ಇನ್ನು ನೀವು ಹೇಳುತ್ತಿರುವ ಗುಂಪಿನಲ್ಲಿ ನಾನು ಈಗಾಗಲೇ ಇದ್ದೇನೆ. ಮರಿಯಾನ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದ್ದೆ; ಅದಕ್ಕೆ ಅವರಿನ್ನೂ ಉತ್ತರಿಸಿಲ್ಲ. ನೀವೇನಾದರೂ ಅವರಿಗೆ ಒಮ್ಮೆ ನೆನಪಿಸಲಾದರೆ ಒಳ್ಳೆಯದು.
ಅಂದಹಾಗೆ – ನೀವು ವೇದಗಳಲ್ಲಿರುವುದನ್ನು ಮಹಾಗ್ನಾನ ಎನ್ನದೆ ಇರಬಹುದು, ಆದರೆ ಅದು ಮುಕ್ಯವಲ್ಲ. ಮುಕ್ಯವಾದುದು, ಶೂದ್ರರಿಗೆ ವೇದಾದಿಕಾರವಿಲ್ಲ ಎಂದು ಹೇಳಿದವರು ಅದನ್ನು ಮಹಾಗ್ನಾನ ಎಂದರೋ ಇಲ್ಲವೋ ಎನ್ನುವುದು.
ನಾನು ಯಾವ ವಿಶಯವನ್ನು ಬದಿಗೊತ್ತುತ್ತಿದ್ದೇನೆ ಎಂದು ನಿಮಗನ್ನಿಸುತ್ತಿದೆಯೋ ಅದು ಬಹಳ ಮುಕ್ಯವಾದುದೇ: ನಿಮಗಲ್ಲದಿರಬಹುದು, ನನಗೆ. ಒಬ್ಬರಿಗೆ ಮುಕ್ಯವಲ್ಲದ್ದು ಇನ್ನೊಬ್ಬರಿಗೆ ಮುಕ್ಯವಾಗುವುದು ಹೊಸದೇನಲ್ಲ: ನಿಮ್ಮ ಇಡೀ ಅರಕೆಯಲ್ಲಿ ನಿಮಗೆ ನುಡಿಯರಿಮೆ ಮುಕ್ಯವಲ್ಲ ಎನಿಸುತ್ತದೆ, ಆದರೆ ನನಗೆ ಅದು ಮುಕ್ಯ.
ನಿಮಗೆ ಎಲ್ಲರಕನ್ನಡ ವಸಾಹತು ಪ್ರಗ್ನೆಯಿಂದ ಹುಟ್ಟಿದ್ದು ಎನಿಸುತ್ತದೆ, ಆದರೆ ಅದು ಹಾಗಲ್ಲ. ಅದು ನಿಜಕ್ಕೂ ಹುಟ್ಟಿರುವುದು ಕನ್ನಡತನವೆಂದರೆ ಏನೆಂದು ಆಳವಾಗಿ ಅರಿತುಕೊಂಡಿರುವುದರಿಂದ ಮಾತ್ರ. ನಿಮಗೆ ಈ ಕನ್ನಡತನದ ಬಗ್ಗೆ ಅಂತಹ ಕಾಳಜಿಯಿದ್ದಂತಿಲ್ಲ.
ಅಲ್ಲದೆ, ನನಗೆ ನಿಮ್ಮ ಈ ಪರಂಪರೆಯನ್ನು ಅಪರಂಜಿ ಚಿನ್ನವಂತೆ ಬಿಂಬಿಸುವ ಪ್ರಯತ್ನ ವಸಾಹತುಶಾಹಿಯಿಂದ ತುಳಿಯಲ್ಪಟ್ಟವರು ಅರಿಮೆಯನ್ನು ಬದಿಗೊತ್ತಿ ತಮ್ಮದೆಲ್ಲವೂ ನೂರಕ್ಕೆ ನೂರು ಸರಿ ಎಂದು ಕೂಗಿ ಹೇಳುತ್ತಿರುವಂತೆ ಕಾಣುತ್ತದೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕೆಲಸ ಮಾಡಿತ್ತು; ಈಗ ಮಾಡುವುದಿಲ್ಲ.
ತಪ್ಪೊಪ್ಪಿಗೆ.
ಇದರ ಬದಲಾಗಿ:
// ನಾನು ಯಾವ ವಿಶಯವನ್ನು ಬದಿಗೊತ್ತುತ್ತಿದ್ದೇನೆ ಎಂದು ನಿಮಗನ್ನಿಸುತ್ತಿದೆಯೋ ಅದು ಬಹಳ ಮುಕ್ಯವಾದುದೇ //
ಇದನ್ನು ಓದಿಕೊಳ್ಳಿ:
// ನಾನು ಯಾವ ವಿಶಯವನ್ನು ಮುಂದೊತ್ತುತ್ತಿದ್ದೇನೆ ಎಂದು ನಿಮಗನ್ನಿಸುತ್ತಿದೆಯೋ ಅದು ಬಹಳ ಮುಕ್ಯವಾದುದೇ //
ಪರಂಪರೆಯಲ್ಲಿರುವುದೆಲ್ಲಾ ಅಪರಂಜಿ ಎಂದು ಬಿಂಬಿಸಲೆತ್ನಿಸುವವರು ವೇದಗಳು ‘ಮಹಾಜ್ಞಾನವೇ’ ಎಂದೇಕೆ ಕೇಳುತ್ತಿದ್ದರು ಎನ್ನುವುದನ್ನು ಯೋಚಿಸಲಾರದಷ್ಟು ಬಾಲಿಶತನವೇ? ಭಾರತದ ಬಗೆಗಿರುವ ‘ಹಿಂದೂ/ಸಾಂಸ್ಕೃತಿಕ ರಾಷ್ಟ್ರೀಯವಾದವೇ ವಸಾಹತುಶಾಹಿ ಚಿತ್ರಣದ ಕೂಸು’ ಎನ್ನುತ್ತಿರುವ ನಮ್ಮ ಬರವಣಿಗೆಗಳನ್ನು ‘ನಮ್ಮ ಪರಂಪರೆಯಲ್ಲಿರುವುದೆಲ್ಲವನ್ನೂ ಅಪರಂಜಿ’ ಎಂದು ಬಿಂಬಿಸುವ ಯತ್ನವಾಗಿಸುವ ತಮ್ಮ ಹೇಳಿಕೆ ಅಧ್ಬುತ. ಯಾವುದನ್ನೇ ಅಪರಂಜಿ ಇಲ್ಲವೇ ಬರೀ ಕಲ್ಲು-ಮಣ್ಣು ಎನ್ನುವುದಕ್ಕಿಂತ ಮುಂಚೆ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಅಷ್ಟೇ. ನಂತರ ಅದು ಅಪರಂಜಿಯೇ ಇಲ್ಲ ಕಲ್ಲು-ಮಣ್ಣೇ ಎನ್ನುವುದು ತಾನೇ ನಿರ್ಣಯವಾಗುತ್ತದೆ. ಸರಿಯಾಗಿ ಅರ್ಥವಾಗದಿದ್ದರೆ ಕಲ್ಲು-ಮಣ್ಣು ಅಪರಂಜಿಯಾಗುತ್ತದೆ; ಅಪರಂಜಿ ಕಲ್ಲುಮಣ್ಣು ಆಗುತ್ತದೆ. ಹಾಗೆಯೇ, ನಮಗೆ ಬೇಕಿರುವುದು ಅಭಿಪ್ರಾಯ-ಅನಿಸಿಕೆಗಳಲ್ಲ; ಬೇಕಿರುವುದು ಸರಿಯಾದ ಓದು ಮತ್ತು ತರ್ಕಬದ್ದವಾದ ವಾದ. ಆಗ ಮಾತ್ರ ವೈಜ್ಞಾನಿಕ ತಿಳುವಳಿಕೆ ಮುಂದುವರಿಯಬಲ್ಲದು. ಅನಿಸಿಕೆ ಅಭಿಪ್ರಾಯಗಳೇ (ವಾಖ್ಯಾನಗಳ ಹೆಸರಿನಲ್ಲಿ) ನಮ್ಮ ಸಮಾಜವಿಜ್ಞಾನಗಳೆಲ್ಲಾ ತುಂಬಿ ಗೊಂದಲದ ಗೂಡು ಮತ್ತು ಅಪಾರ್ಥಗಳ ಗೋಜಲಾಗಿದೆ. ನಿಮ್ಮ ಅನಿಸಿಕೆ ಅದಕ್ಕೊಂದು ಸೇರ್ಪಡೆ ಅಷ್ಟೇ. ಅದಕ್ಕೆಲ್ಲಾ ಹಿಂಜರಿಕೆ ನಮಗೇನೂ ಇಲ್ಲ. (ಮತ್ತು ಸ್ವಾತಂತ್ರ ಹೋರಾಟದ ಸಂಧರ್ಭದ ರಾಷ್ಟ್ರೀಯವಾದೀ ಚಿಂತನೆಯಲ್ಲಿರುವ ಪ್ರಮಾಧ ಮತ್ತು ಧೋಷಗಳನ್ನು ರಾಜ್ಯಶಾಸ್ತ್ರ ಭೋದಿಸುತ್ತಿರುವ ನಾನು ನಿಮಗೆ ಸವಿವರವಾಗಿ ಹೇಳುತ್ತೇನೆ ಬನ್ನಿ. ಆದರೆ ನೀವು ಅದಕ್ಕೆ ನಮ್ಮ ವಾದಗಳನ್ನು ಹೋಲಿಸುತ್ತಿರುವದನ್ನು ನೋಡಿದರೆ ನಮ್ಮ ಬರವಣಿಗೆಗಳ ಬಗ್ಗೆ ನಿಮ್ಮ ತಿಳುವಳಿಕೆ ಮತ್ತು ಅವನ್ನು ಎಷ್ಟು ಓದಿದ್ದೀರಿ ಎನ್ನುವದನ್ನು ಅಷ್ಟೇ ತೋರಿಸುತ್ತದೆ. ಅದಕ್ಕೆ ಪುನಃ ಪುನಃ ನೆನೆಪಿಸುತ್ತೇನೆ ನಮ್ಮನ್ನು ಪೂರ್ತಿ ಓದಿ ಇಲ್ಲವೇ ನಿಮ್ಮ ಹೇಳಿಕೆಗಳು ಅಪ್ರಭುದ್ದವೆಂದು ಕಾಣುತ್ತದೆಯೇ ಹೊರತು ನಮ್ಮ ಚಿಂತನೆಗಳನ್ನು ಪುನರ್ ಪರಿಶೀಲಿಸಬೇಕಿರುವ ಸವಾಲಾಗಿ ಅಲ್ಲ.)
ಮತ್ತು ಮರಿಯಾನ್ ಗೆ ನೀವು ಕೇಳಿದ ಪ್ರಶ್ನೆ ‘ಈ ಪದ/ಸಾಲನ್ನು ಸ್ವಲ್ಪ clarify ಮಾಡ್ತೀರಾ ಎಂದು. ಈ ತರದ ಪ್ರಭೃತಿಗಳನ್ನು ಸೆಮಿನಾರ್ ಗಳಲ್ಲಿ ಬಹಳ ನೋಡಿದ್ದೇವೆ ಅವರ 60 ಕ್ಕೂ ಮಿಕ್ಕಿದ ಪುಟದ ಲೇಖನದಲ್ಲಿ ಒಂದು ಸಾಲು ತೆಗೊಂಡು ವಿವರಿಸ್ತೀರಾ ಅಂತ ಕೇಳೋದು. ವಾದಗಳನ್ನು ಚರ್ಚೆಗಳನ್ನು ಸದಾ ಮಾಡುತ್ತಿರುವವರಿಗೆ ಈ ರೀತಿಯ ‘ಕೇಳ್ವಿ’ಗಳು ಎಂತಹ ‘ಗಿಮಿಕ್ಕು’ ಎಂದು ಗೊತ್ತು, ಹಾಗಾಗಿ ಇಂತಹದ್ದಕ್ಕೆ ಉತ್ತರಿಸುವುದಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ನಾವು ಮೊದಲು ಹೇಳಿಕೊಡುವುದೇ ಈ ರೀತಿಯಲ್ಲಿ ಒಂದು ಸಾಲನ್ನು ತೆಗೆದುಕೊಂಡು ಹಾಗಂದರೇನು? ಇದು ಸರಿಯಾದ ರೀತಿಯಲ್ಲಿಲ್ಲ ಎನ್ನುವಂತಹ ಪಾಂಡಿತ್ಯ ಪ್ರದರ್ಶನ ಸರ್ಕಸ್ ಗಳು ವಾದ/ಚರ್ಚೆಯನ್ನು ಮುಂದಕ್ಕೆ ತೆಗೆದಕೊಂಡು ಹೋಗುವುದಿಲ್ಲ ಬದಲಾಗಿ ಚರ್ಚೆಯನ್ನೇ ಕೊಲ್ಲಬಲ್ಲದು ಅಷ್ಟೆ ಎಂದು ಕಿವಿಹಿಂಡುತ್ತೇವೆ. ಇಡೀ ಲೇಖನದಲ್ಲಿನ ವಾದದ ಕುರಿತ ತಕರಾರು ಪ್ರಶ್ನೆಗಳಿಗೆ ಮಾತ್ರವೇ ಉತ್ತರ. ಒಂದೆರಡು ಸಾಲುಗಳೆನ್ನಿತ್ತಿಟ್ಟು ಅದನ್ನೇ ಪ್ರಶ್ನೆಯಾಗಿಸುವುದನ್ನೇ ಪಾಂಡಿತ್ಯವೆಂದುಕೊಳ್ಳುವ ಪ್ರಶ್ನೆಗಳಿಗೆ ಉಧಾಸೀನವೇ ಮದ್ದು.
ನಿಮ್ಮೊಡನೆ ಮಾತನಾಡುವಾಗ ಅದೇಕೋ ಕೆಟ್ಟ ಕೆಟ್ಟ ಮಾತು ಬಾಯಿಗೆ ಬರುತ್ತದೆ. ರಾಜಾರಾಮ ಹೆಗಡೆ, ಮರಿಯಾನ್ ಕೆಪನ್ಸ್, ಇಲ್ಲವೇ ಬಾಲಗಂಗಾದರ ಅವರೊಡನೆ ಮಾತನಾಡಿದಾಗ ಹಾಗಾಗುವುದಿಲ್ಲ. ಅಲ್ಲದೆ, ಅವರೊಡನೆ ಕಲಿಯಲು ಮತ್ತು ವಾದಿಸಲು ಇಂತದ್ದೆಂಬುದಿದೆ. ನಿಮ್ಮೊಡನೆ ಅಂತದ್ದೇನೂ ಇಲ್ಲ. ಆದ್ದರಿಂದ ಅವರವರೊಡನೆ ಮಾತನಾಡುತ್ತೇನೆ. ನಮಸ್ಕಾರ.
Asambaddavaagi charcheyalli illadavara hesaru taruvudu mattu namma idee gumpina bagge sweeping helikegalannu taavu needadiddare tammodane maatanaduva dardu nanagoo illa. Jaativyavasthe bagegina charcheyalliye tamma (palayanda) jotegina kalike manavarike aagide. Anda haage uttarisalu padagalu sigadiddaaga ketta maatugalu baruvudu sahajave!! 🙂
Namaskaara
Dr. Shanmukha
Just posted this to Marianne. Have fun.
Marianne,
Can you please reply to this in the next two days? A certain Shanmukha seems to
think that I have run away from this debate because you haven’t responded to my
question here.
His logic is that if great people (such as those with a “Dr” calling) don’t
respond to a certain question from non-great people (such as those who with a
“Mr” calling like me) the question is stupid.
I have a longer response to the text in question here. I will wait for two days
for your answer to my question below about ‘a people’ here, before posting that
response.
Regards
Kiran
ಮಾನ್ಯ ಲೇಖಕರಲ್ಲಿ ಒಂದು ನನ್ನ ವಿನಂತಿಯು.
ವಿನಂತಿಗೆ ಕಾರಣವು – ನಮಗೆ ಶಂಕರಾಚಾರ್ಯರ ಬಗ್ಗೆ ವಾದ-ವಿವಾದದ ಅಗತ್ಯವೂ ಕಾಣದು. ಹಾಗು ಅವರ ಬಗ್ಗೆ ವಾದಗಳನ್ನು ನಡೆಸಿ ನಮ್ಮ (ಶಂಕರಾಚಾರ್ಯರ ಪರಂಪರೆಗೆ ಬೆಸೆದುಕೊಂಡಿರುವ ಮನೆತನದವರ ಹಾಗು ಜಾತಿಯವರ ) ಧಾರ್ಮಿಕ ನಂಬಿಕೆಗಳಿಗೆ ಅಪಚಾರವೆಸೆಗುತ್ತಿದ್ದೀರಿ ಎಂದು ಅನ್ನಿಸುತ್ತದೆ.
ಅವರೊಬ್ಬ ಧಾರ್ಮಿಕ ಗುರುಗಳು. ಧರ್ಮದ ಮೂಲವು ಹಾಗು ಉದ್ದೇಶಗಳು ಶ್ರದ್ಧೆ ಹಾಗು ನಂಬಿಕೆಗಳೇ ಹೊರತು ಆಧಿನತೆಯ ಸಮಾನತೆ , ವೈಚಾರಿಕತೆ ಹಾಗು ಸಮಾಜಸುಧಾರಣೆಗಳಲ್ಲ.
ಶಂಕಾರಾಚಾರ್ಯರು ಏನೇ ಹೇಳಿದ್ದರೂ, ಅದು ಅವರ ಶ್ರದ್ಧಾನುಯಾಯಿಗಳಿಗೆ ಅನ್ವಯವಾಗುವುದು ಹೊರತು ಅವರ ಬೋಧನೆಗಳ ಮೇಲೆ ಶ್ರದ್ಧೆಯಿರದವರಿಗಲ್ಲ.
ಶಂಕಾರಚಾರ್ಯರ ಶಿಷ್ಯಪರಂಪರೆಯ ಮಠಗಳು ನಮ್ಮ ನಡುವೆ ಹೇಗೆ ಅಬ್ಬರ ಹಾಗು ವಿವಾದಗಳು ಇಲ್ಲದೇ ತಮ್ಮ ಕೆಲಸಗಳನ್ನು ನೋಡುತ್ತಿರುವುದಕ್ಕೆ ಸಂತೋಷ-ಪಡೋಣ.
ಇನ್ನೂ ‘ಭೇದ’ ಹಾಗು ‘ತಾರತಮ್ಯ’ವೇ ಮೂಲಸಿದ್ಧಾಂತದಂತಿರುವ ಮತಗಳ ಬಗ್ಗೆ ಚರ್ಚೆಗಳನ್ನೂ ಮಾಡಿಕೊಳ್ಳಿ..
ಮಾಯ್ಸಣ್ಣನನ್ನು ನಿಲುಮೆಯಲ್ಲಿ ಮತ್ತೆ ನೋಡಿ ಖುಷಿಯಾಯಿತು :). ಸ್ವಾಗತವು!
@ ಡಾ,ಶಣ್ಮುಖ
ತಾವು ಕಿರಣ ಜೊತೆ ಏಕೆ ಸಿಟ್ಟಾದಿರಿ ಎಂದು ಗೊತ್ತಾಗಲಿಲ್ಲ. ನನಗೆ ಎಲ್ಲರ ಕನ್ನಡದ ಬಳಗದಲ್ಲಿ ಹಿಡಿಸಿದವರೆಂದರೆ ಕಿರಣ್, ಪ್ರಿಯಾಂಕ್, ಸಂದೀಪ್. ಕುಯುಕ್ತಿಯಿಂದ, ಕೆಸರೆರೆಚಲು ಚರ್ಚೆ ಮಾಡುವವರು ಅವರಲ್ಲ ಎಂಬ ನಂಬಿಕೆ ಕೆಲವು ವರ್ಷಗಳಿಂದ ಅವರ ಪ್ರತಿಕ್ರಿಯೆಗಳನ್ನು, ಲೇಖನಗಳನ್ನು ನೋಡಿರುವ ನನಗಿದೆ. ನಿಮ್ಮ ಮತ್ತು ಅವರುಗಳ ನಡುವಣ ಆರೋಗ್ಯಪೂರ್ಣ ಚರ್ಚೆಯಿಂದ ಓದುಗರಾದ ನಮಗೆ ಸಾಕಷ್ಟು ವಿಷಯ ತಿಳಿಯುವ ಸಾಧ್ಯತೆ ಇರುತ್ತದೆ..ಆದ್ದರಿಂದ……:)
@ಬಸವಯ್ಯ
ರೀ ನೀವು ಖುಷಿಯಾದಿರಿ ಸರಿ. ಆದರೆ ಶ್ರೀಮಾನ್ ಕಿರಣ್ ಅವರು ತಾವೇ ಹೇಳಿಕೊಂಡಿರುವಂತೆ ‘ಶಂಕರರ ಮತದವರಲ್ಲ’. ಶಂಕರರ ಮತದ ವಿರೋಧೀಮತಸ್ಥ. http://honalu.net/2013/05/31/%E0%B2%B6%E0%B2%BF%E0%B2%B5-%E0%B2%A8%E0%B2%BE%E0%B2%A8%E0%B3%81-%E0%B2%B6%E0%B2%BF%E0%B2%B5-%E0%B2%A8%E0%B2%BE%E0%B2%A8%E0%B3%81/
ಇವರು “ಹಿಂದಿನವರು ತಪ್ಪು ಮಾಡಿರಬಹುದೆಂದು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ” ಎಂದು ಶಂಕರರ ತಪ್ಪುಗಳನ್ನು ಎಣಿಸುವುದು ಮತದ್ವೇಷವೊ, ಮತ್ತೊಂದೋ ನಾ ಕಾಣೇಂ!
ಅದೇ ಅವರದೇ ಮತದ ಆಚಾರ್ಯರು, ಮಠಾಧೀಶರು, ಪಂಕ್ತಿಬೇಧ, ತಾರತಮ್ಯವಾದ ಇವರಿಗೆ ಕಾಣಿಸಲ್ವೇ!
ನೀವು ಅವರ ಹಾಗು ಅವರ ಬಳಗದ ವಕಾಲತ್ತು ಬಿಟ್ಟು, ನಿಮ್ಮ ಸ್ವಂತದ್ದು ಯಾವುದಾದರೂ ಉಪಯುಕ್ತ ವಾದಾಂಶ ಸೇರಿಸಲು ತಲೆಯೋಡಿಸೋದು ಲೇಸು.
ಇನ್ನು ಮಹಾಮೇಧಾವಿಗಳು “ನಿಮ್ಮೊಡನೆ ಮಾತನಾಡುವಾಗ ಅದೇಕೋ ಕೆಟ್ಟ ಕೆಟ್ಟ ಮಾತು ಬಾಯಿಗೆ ಬರುತ್ತದೆ” ಎಂದು ಬರೆಯುತ್ತಾರೆ ಅಂದರೇನು ಅರ್ಥ!
ನಾನು ಮೊದಲೇ ಹೇಳಿದಂತೆ ಈ ‘ಶಂಕರರ ಸಿದ್ಧಾಂತದ’ ಹುಳುಕನ್ನು ಹುಡುಕುವುದು ಅವರ ಶ್ರದ್ಧಾನುಯಾಯಿಗಳಿಗೆ, ಶಂಕರರ ಸಿದ್ಧಾಂತವನ್ನು ಮನೆಯ ಪರಂಪರೆಯಾಗಿ ಉಳ್ಳವರಿಗೆ ರೇಗಿಸುವ ಕೆಲಸ.
ಇನ್ನು ಶ್ರೀಮಾನ್ ಕಿರಣ ಅವರ ಮತದಲ್ಲಿ ‘ತಾರತಮ್ಯ ಗೀತೆಗಳು’ ಅಂತ ಉಂಟು .. ಆ ತಾರತಮ್ಯ-ಗೀತೆಗಳಲ್ಲಿ ಒಂದು ಸಾಲು ‘ಅದ್ವೈತಿಗಳನ್ನು ಧ್ವಂಸ’ಗೊಳಿಸಿದ **ಧ್ವೇಶ ‘ ಹೀಗೆ. ಆ ತಾರತಮ್ಯ-ಗೀತೆಗಳಷ್ಟು ಪರಮತ-ಅಸಹಿಷ್ಣು ಸಾಹಿತ್ಯ ಮತ್ತೆಲ್ಲೂ ಕಾಣಲಾರಿರಿ.
ಶಂಕರರ ತತ್ವಜ್ಞಾನವು ಒಂದು ಆಸ್ಥೆಯ ವಿಚಾರವು. ಅದನ್ನು ಮತದ್ವೇಷಿಗಳು ಒರೆಹಚ್ಚು ಅಗತ್ಯ ಹಾಗು ಅದಕ್ಕೆ ಬೆಲೆ ಎರಡೂ ಇಲ್ಲ . !
ಇನ್ನು ಷಣ್ಮುಖ ಅವರಿಗೆ ” ಕೆಟ್ಟ ಕೆಟ್ಟ ಮಾತು” ಎರೆಯುವಂತ ಸನ್ನಿವೇಶ ಹಾಗು ಅವರ ಅಪರಾಧವೇನು?
ನನಗೆ ಕಾದಿದೆ ಗ್ರಹಚಾರ .. ಹಿಂಡು ಎರಗುವುದು!
ಶ್ರೀಯುತ ರಾಜಾರಾಮ ಹೆಗಡೆಯವರೇ,
ಇಲ್ಲಿ ನಮ್ಮ ಚರ‍್ಚೆಯ ವಾತಾವರಣವನ್ನು ಕೆಲವರು ಕೆಡಿಸುತ್ತಿದ್ದಾರೆ. ನಿಮಗೆ Facebook ನಲ್ಲಿ ಒಂದು ಗುಟ್ಟೋಲೆಯನ್ನು ಕಳುಹಿಸಿದ್ದೇನೆ.
’ನಿಲುಮೆ’ಯ ನಡೆಸುಗರೇ,
’ನಿಲುಮೆ’ ನನಗೆ ಬಹಳ ಇಶ್ಟವಾದ ಮಿಂಬವಾಗಿತ್ತು. ಇಲ್ಲಿ ಬರೆಯಬೇಕು ಮತ್ತು ಚರ‍್ಚೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ನನಗೆ ಬಹಳ ಇತ್ತು. ಆದರೆ ಅವೆಲ್ಲ ಸಾದ್ಯವಾಗದಂತಹ ವಾತಾವರಣವನ್ನು ಕೆಲವರು ಕಾಮೆಂಟುಗಾರರು ಹುಟ್ಟಿಹಾಕಿದ್ದಾರೆ ಎಂದು ನನಗೆ ಈಗ ಅರಿವಾಗಿದೆ. ಆದ್ದರಿಂದ ಸಾಕಶ್ಟು ದುಕ್ಕದಿಂದಲೇ ’ನಿಲುಮೆ’ಗೆ ನಮಸ್ಕಾರ ಹೇಳಿ ಹೋಗುತ್ತಿದ್ದೇನೆ.
ನನ್ನ ಕಾಮೆಂಟ್-ಗೆ ಬರೆದಿರುವುದರಿಂದ ಇದಕ್ಕೆ ಪ್ರತಿಕ್ರಿಯೆ ….
“ಇಲ್ಲಿ ನಮ್ಮ ಚರ‍್ಚೆಯ ವಾತಾವರಣವನ್ನು ಕೆಲವರು ಕೆಡಿಸುತ್ತಿದ್ದಾರೆ”
ದಯವಿಟ್ಟು ಯಾರು ಮೊದಲು ಷಣ್ಮುಖ ಅವರಿಗೆ ‘ಕೆಟ್ಟ ಕೆಟ್ಟ ಮಾತು ಬರುತ್ತೆ ‘ ಎಂದು ನೆನೆಪಿಸಿಕೊಳ್ಳಿ.!
ಮಾನ್ಯ ಕಿರಣ ಅವರಿಗೆ ನಾನು ಯಾವ ಅನಿಸಿಕೆಯನ್ನೂ ಬರೆದಿಲ್ಲ.
ಮೊದಲನೇ ಕಾಮೆಂಟ್ ಈ ಬರಹದ ಟೀಕೆ. ಎರಡನೇದು ಕಿರಣ್ ಅವರು ದ್ವೈತಿ ಎಂದು ತಾವೇ ಹೇಳಿಕೊಂಡಿರುವುದರಿಂದ, ಶಂಕರರ ಬಗ್ಗೆ ಪರಮಾತದ್ವೇಷ ಎಂಬ ಊಹೆ. ದ್ವೈತಿಗಳಿಗೆ ಶಂಕರರ ಬಗ್ಗೆ ದ್ವೇಷವಿರುವುದು ಸಾಮಾನ್ಯಜ್ಞಾನ.
ವಾತಾವರಣ ಕೆಟ್ಟಿದ್ದೇ ಅನಾವಶ್ಯ ಶಂಕರರ ಸಿದ್ಧಾಂತದಲ್ಲಿ ಭಾಷ್ಯಗಳಲ್ಲಿ ದೊಡ್ಡಮೇಧಾವಿಯ ಪೋಸ್ ಕೊಟ್ಟುಕೊಂಡು ಇನ್ನೊಬ್ಬರ ಪ್ರತಿವಾದಕ್ಕೆ ‘ಕೆಟ್ಟ ಕೆಟ್ಟ ಮಾತು ಬರುತ್ತೆ’ ಎಂದು ಧಿಮಾಕು ತೋರಿಸಿದಾಗ!
ಅಷ್ಟೇ!
ಒಹೋ ಮಾಯ್ಸ ಬಹಳ ದಿನದ ನಂತರ ನಿಲುಮೆಯಲ್ಲಿ ಕಾಣಿಸಿಕೊಂಡಿರಿ…
ಚರ್ಚೆ ನಡೆಯಬೇಕಾಗಿರುವುದು “ಶಂಕರರ ‘ಅಪಶೂದ್ರಾಧಿಕರಣ’ ಏನನ್ನು ಹೇಳುತ್ತದೆ?” ಅನ್ನುವುದರ ಬಗ್ಗೆ “ಕಿರಣ್ ಅವರ ಬಗ್ಗೆಯಲ್ಲ” 🙂
ವಿಷಯಕ್ಕೆ ಚರ್ಚೆಯನ್ನು ಸೀಮಿತಗೊಳಿಸುವ… ವೈಯುಕ್ತಿಕವಾಗಿ ದಯವಿಟ್ಟು ಯಾರು ಇಳಿಯಬೇಡಿ.
ಅಲ್ರೀ ಇಲ್ಲಿ ವೈಯಕ್ತಿಕ ಏನು? ನೀವೊಬ್ರು!!
ಸರಿ ಬಿಡಿ ..
ಮಾನ್ಯ ಬಸವಯ್ಯನವರೇ, ತಮ್ಮ ಕಾಳಜಿಯನ್ನು ನಾನು ಗೌರವಿಸುವೆ. ನಾನು ಖಂಡಿತಾ ಕಿರಣ್ ರವರ ಮೇಲೆ ಸಿಟ್ಟಾಗಿರಲಿಲ್ಲ. ಬದಲಿಗೆ ಅವರ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆಗಳನ್ನಷ್ಟೇ ಕೊಟ್ಟಿದ್ದೇನೆ. ಈ ಪ್ರತಿಕ್ರಿಯೆಗಳಿಂದ ಅವರು ಸಿಟ್ಟಾಗಿದ್ದಾರೆ. ಬಹುಷಃ ನಾನು ಪ್ರತಿಕ್ರಿಯೆಯಲ್ಲಿ ಬಳಸಿದ ‘ಅಪ್ರಭುದ್ದ’ ಮತ್ತು ‘ಬಾಲಿಶ’ ಎನ್ನುವ ಪದಗಳು ಮತ್ತು ಮರಿಯಾನ್ ಗೆ ಅವರು ಕೇಳಿದ ಪ್ರಶ್ನೆಗೆ ನಾನು ನೀಡಿದ ಪ್ರತಿಕ್ರಿಯೆ ಅವರ ಸಿಟ್ಟಿಗೆ ಕಾರಣವಿರಬಹುದು ಈ ಸಂಧರ್ಬದಲ್ಲಿ ತಮಗೆ ಕೆಲವು ಸ್ಪಷ್ಟೀಕರಣ ಕೊಡಲು ಬಯಸುತ್ತೇನೆ.
1. ‘ಅಪ್ರಭುದ್ದ’ ಎಂಬ ಪದದ ಬಳಕೆಗೆ ಕಾರಣ ಇದು. ಕಿರಣ್ ರವರು ಯಾವುದೇ ವೇದಿಕೆಯಲ್ಲಿ ನಮ್ಮ ತಂಡದ ಸದಸ್ಯ ಅಥವಾ ಇತರರು ನಮ್ಮ ಯಾವುದೋ ಒಂದು ವಿಚಾರದ ಬಗ್ಗೆ ಚರ್ಚಿಸುತ್ತಿದ್ದರೆ ಕಿರಣ್ ರವರು ತಮ್ಮ ಪ್ರತಿಕ್ರಿಯೆಗಳನ್ನು ಆರಂಭಿಸುವುದೇ ‘ಬಾಲು ಮತ್ತು ಅವರ ಗುಂಪಿನ ವಾದಗಳಲ್ಲಿ ಮೂಲಭೂತ ಧೋಷವಿದೆ ಇದು ಅವರ ಅರಿವಿಗೆ ಬಂದಿಲ್ಲ’ ‘ವಸಾಹತು ಚಿತ್ರಣಗಳು ಎಲ್ಲವನ್ನೂ ಬದಲಾಯಿಸಿಬಿಟ್ಟಿವೆ ಎನ್ನುತ್ತಾರೆ ಆದರೆ ಅದರ ಬಗ್ಗೆ ಸ್ಪಷ್ಟತೆ ಇಲ್ಲ’ ಎನ್ನುವಂತ ಹೇಳಿಕೆಗಳ ಮೂಲಕ. ಈ ಹೇಳಿಕೆಗಳನ್ನು ನೀಡಬೇಕಾದ ಅಗತ್ಯವೇನಿದೆ? ಚರ್ಚೆಯಲ್ಲಿರುವ ವಿಚಾರದ ಬಗ್ಗೆ ಅದರಲ್ಲಿ ಪ್ರತಿಪಾಧಿಸಿರುವ ವಾದದಲ್ಲಿರುವ ಧೋಷಗಳ ಬಗ್ಗೆ ವಿಮರ್ಶೆ ಮಾಡಬಹುದು ಇಲ್ಲವೇ ಪ್ರಶ್ನೆಗಳನ್ನು ಕೇಳಬಹುದು. ಆದರೆ sweeping statement ಮಾಡುತ್ತಾರೆ. ಅದಕ್ಕೆ ಅವರು ಬಾಲು ತಂಡದ ಎಲ್ಲಾ ಲೇಖನ ಪುಸ್ತಕಗಳನ್ನು ಓದಿರಬೇಕು. ಓದಿದ್ದರೂ ಪ್ರತಿಯೊಂದು ಕೃತಿಯಲ್ಲಿನ ವಿಚಾರಗಳ ಕುರಿತು ತರ್ಕಬದ್ದವಾದ ಪ್ರಶ್ನೆಗಳನ್ನು ಎತ್ತಿದರೆ ಸಾಕು ಅವು ಯೋಚನೆಗೆ ಹಚ್ಚಿ ಮುಂದಿನ ಸಂಶೋಧನೆಗೆ ನೆರವಾಗಬಲ್ಲದು. ಅದನ್ನು ಬಿಟ್ಟು ಬ್ಲಾಗ್ ಮತ್ತು FB ಬರಹಳನ್ನು ಮಾತ್ರವೇ ಓದಿ ಆದರೆ ಅವಕ್ಕೆ ಮಾತ್ರ ಪ್ರತಿಕ್ರಿಯಿಸದೆ ಅವರು ಪದೇ ಪದೇ ಎಲ್ಲ ಕಡೆಗಳಲ್ಲಿ ಈ ರೀತಿಯಲ್ಲಿ sweeping statements ಮಾಡುವುದು ಅಪ್ರಭುದ್ದವಲ್ಲವೇ?
2. ‘ಬಾಲಿಶ’ವೆನ್ನುಲು ಕಾರಣ, ನಾವು ನಮ್ಮ ಪರಂಪರೆಯಲ್ಲಿರುವುದೆಲ್ಲವನ್ನೂ ಅಪರಂಜಿ ಚಿನ್ನ ಎಂದು ಬಿಂಬಿಸಲು ಪ್ರಯತ್ತಿಸುತ್ತಿದ್ದೇವೆ’ ಎನ್ನುತ್ತಿದ್ದಾರೆ. ಇವರ ಈ ನಿಲುವಿಗೆ ಆಧಾರವೇನು? ನಮ್ಮಲ್ಲಿರುವುದೆಲ್ಲ ಶ್ರೇಷ್ಟ ಎಂದು ನಾವು ಎಲ್ಲಿ ಯಾವಾಗ ಹೇಳಿದ್ದೇವೆ? ನಮ್ಮಲ್ಲಿರುವ ಸರಿ-ತಪ್ಪುಗಳನ್ನು ತೀರ್ಮಾನಿಸುವ ಮೊದಲು ನಮ್ಮನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿದ್ದೇವೆಯೇ ಎನ್ನುವದನ್ನು ಪರಾರ್ಶಿಸೋಣ ಎಂದರೆ ಎಲ್ಲವನ್ನು ಅಪರಂಜಿ ಎಂದಂತಾಗುತ್ತದೆಯೇ? ವೇದಗಳೂ ನಮ್ಮ ಪರಂಪರೆಯದ್ದೇ ಆಗಿದ್ದೂ ಅದೇನೂ ‘ಮಹಾಜ್ಞಾನವೇ’ ಎಂದು ನಾವು ಕೇಳಿದೆವೆಂದರೆ ಅದರರ್ಥ ಅದನ್ನು ಅಪರಂಜಿ ಎಂದು ಬಿಂಬಿಸಿದಂತಾಗುತ್ತದೆಯೇ? ಇಷ್ಟನ್ನು ಅರ್ಥಮಾಡಿಕೊಳ್ಳದೆ ನಾವು ಎಲ್ಲವನ್ನೂ ಅಪರಂಜಿ ಚಿನ್ನವೆಂದು ಬಿಂಬಿಸುತ್ತಿದ್ದೇವೆ ಎನ್ನುವುದು ಬಾಲಿಶತನವಲ್ಲವೇ?
ಅವರ ಬಾಲಿಶ ನಿರ್ಣಯಕ್ಕೆ ಇನ್ನೊಂದು ಉಧಾ. ಸ್ವಾತಂತ್ರ ಹೋರಾಟದ ಕಾಲದ ರಾಷ್ಟ್ರೀಯವಾದೀ ಚಿಂತನೆಗಳನ್ನೆ ಪುನರುತ್ಪಾಧಿಸುತ್ತಿದ್ದೇವೆ ಎನ್ನುವಂತೆ ಹೇಳುತ್ತಾರೆ. ಇವರು ಬಾಲು ರವರ ‘ಭಾರತೀಯರಿಗೆ ಏನು ಬೇಕು: ಚರಿತ್ರೆಯೋ? ಗತಕಾಲವೋ? ‘ಸೆಕ್ಯುಲರಿಸಂನ ಕರಿನೆರಳು’ ಎನ್ನುವ ಎರಡರಲ್ಲಿ ಒಂದೇ ಒಂದು ಲೇಖನ ಓದಿದ್ದರೂ ರಾಷ್ಟ್ರೀಯವಾದೀ ಚಿಂತನೆಗೂ ಬಾಲು ಚಿಂತನೆಗೂ ಎಂತಹ ವ್ಯತ್ಯಾಸ ಮತ್ತು ರಾಷ್ಟ್ರೀಯ ವಾದೀ ಚಿಂತನೆಯ ಮೂಲಭೂತ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ತೋರಿಸಿದ ಮೊದಲ ವಾದ ಇವರದ್ದು ಎನ್ನುವುದು ಅವರ ಅರಿವಿಗೆ ಬರುತ್ತಿತ್ತು. ಅದನ್ನು ಬಿಟ್ಟು ರಾಷ್ಟ್ರೀಯವಾದಿ ಚಿಂತನೆಯ ಕಾಲದಲ್ಲಿ ಸರಿ ಇರಬಹದು ಈಗ ಉಪಯೋಗವಾಗುವುದಿಲ್ಲ ಎಂದರೆ ಬಾಲಿಶತನವಲ್ಲವೇ?
3. ಮರಿಯಾನ್ ಗೆ ಅವರ ಪ್ರಶ್ನೆಗೆ ನನ್ನ ಪ್ರತಿಕ್ರಿಯೆ ಬಗ್ಗೆ. ಮೇಲಿನ ಎರಡು ಕಾರಣಗಳಿಂದಾಗಿ ನಮ್ಮ ಚರ್ಚೆಯನ್ನು ಮೊದಲಿನಿಂದಲೂ ಓದಿ ಅರ್ಥಮಾಡಿಕೊಂಡರೆ ಈ ರೀತಿಯ ಅನಗತ್ಯ ಹೇಳಿಕೆಗಳು ನಿಂತು ಚರ್ಚೆಯ ವಿಚಾರದ ಬಗ್ಗೆ ಮಾತ್ರ ಗಮನಹರಿಸಲು ಸಹಾಯ ವಾಗಬಹುದೆಂದು ನಮ್ಮ ಚರ್ಚೆಯ ತಾಣದ ಲಿಂಕನ್ನು ಕೊಟ್ಟು ಮೊದಲಿನಿಂದ ಓದುವ ಸಲಹೆ ನೀಡಿದೆ. ಆ ತಾಣದಲ್ಲೂ ಅವರು ಹೀಗೆಯೇ ಒಂದು sweeping statement ಮಾಡಿದ್ದಾಗ ನಾನು ಮತ್ತು ಇತರರು ಅವರಿಗೆ ಇದೇ ಸಲಹೆಯನ್ನೇ ಕೊಟ್ಟೆವು. ಆದರೂ ನಾನು ಈ ಸಂಶೋಧನಾ ವಿಚಾರಗಳ ಬಗ್ಗೆ ಮೂಲಭೂತ ಪ್ರಶ್ನೆ ಎತ್ತಿದರೂ ಬಾಲು ಮತ್ತು ಅವರ ತಂಡ ಉತ್ತರಿಸುತ್ತಿಲ್ಲ ಎಂದು ನಮ್ಮ ತಾಣದಲ್ಲಿ ಬೇಸರಿಸಿಕೊಂಡಾಗ ಮರಿಯಾನ್ ರವರು ತಮ್ಮದೊಂದು ಧೀರ್ಘ ಪ್ರತಿಕ್ರಿಯೆ ಬರೆದದ್ದಲ್ಲದೆ ತಮ್ಮ ಸುಧೀರ್ಘ ಲೇಖನವನ್ನು ನೀಡಿದರು (ಆಗ ಅವರಿಗೆ ವೈಯುಕ್ತಿಕ ಸಂದೇಶ ಕಳುಹಿಸಿ ಅದನ್ನು ಗಮನಿಸುವಂತೆ ನಾನೇ ಕಿರಣ್ ರವರನ್ನು ಕೋರಿದ್ದೆ). ಅದಕ್ಕೆ ಇವರು ಕೇಳಿದ ಪ್ರಶ್ನೆ:
Thanks for this file. As usual, great lit survey. I’m still reading it, but have
a question: what exactly do you mean by ‘a people’? You keep saying ‘this is not
a people’, ‘that is not a people’, so I need to understand what ‘this’ and
‘that’ are not 🙂
Also, you seem to both call AND not call the Aryans as a people in this
sentence. Please clarify (bold mine)
ಲೇಖನವನ್ನು ಪೂರ್ತಿಓದದೆ ಒದುವಾಗ ಸಿಕ್ಕ ಕೆಲವು ಸಾಲುಗಳ ಮಧ್ಯದಿಂದ ವಿವರಣೆ ಬಯಸುವುದು ಚರ್ಚಾ ತಾಣದಲ್ಲಿ ಅಸಂಬದ್ದವಲ್ಲವೇ. ಮತ್ತು ಬಾಲು ವಾದದಲ್ಲಿ ಮೂಲಭೂತವಾದ ಸಮಸ್ಯೆ ಕಂಡು ಹಿಡಿದವರು ಅವರ ಪ್ರಶ್ನೆಗಳಿಗೆ ಉತ್ತರ ಮತ್ತು ಲೇಖನಗಳನ್ನು ಕೊಟ್ಟಾಗ ಅವನ್ನು ಓದಿ ಸವಿವರವಾಗಿ ವಿಮರ್ಶೆ ಬರೆಯಬೇಕಲ್ಲವೇ? ಅವರು ಜೂನ್ 11 ಕ್ಕೆ ತಮ್ಮ ಲೇಖನವನ್ನು ನೀಡಿದರೂ (ಮೇಲಿನ ಕಮೆಂಟನ್ನು ಹೊರತು ಪಡಿಸಿ) ಇದುವರೆಗೂ ಅದ್ಯಾವ ಸೂಚನೆಯ ಕಾಣುತ್ತಿಲ್ಲ. ಬದಲಿಗೆ ಈ ಮಹಾ ಪ್ರಶ್ನೆಗೆ ಉತ್ತರಿಸುವಂತೆ ಮರಿಯಾನ್ ರಿಗೆ ನೆನಪಿಸಿ ಎಂದು ನನಗೆ ಆದೇಶ ಕೊಡುವುದು ಉದ್ದಟತನವಲ್ಲವೇ?
ಹಾಗೆಯೇ ನನ್ನಿಂದ ಕಲಿಯುವುದೇನೂ ಇಲ್ಲ ಎನ್ನುವ ಅವರ ಹೇಳಿಕೆಗೆ ಬರೋಣ. ಹಿಂದೆ FB ಯಲ್ಲಿ ಜಾತಿವ್ಯವಸ್ಥೆಯ ಬಗ್ಗೆ ಇವರು ಇದೇ ರೀತಿಯಲ್ಲಿ ಹೇಳಿಕೆಗಳನ್ನು ಹೇಳುತ್ತಾ ‘ಜಾತಿವ್ಯವಸ್ಥೆ = ‘ಊಟದ ವ್ಯವಸ್ಥೆ’ ಸಮೀಕರಣ ಮಾಡುತ್ತಾ ನಮ್ಮ ತಿಳುವಳಿಕೆ ಮತ್ತು ವಾದಗಳು ಮೂಲಭೂತ ಧೋಷ ಎನ್ನತೊಡಗಿದರಲ್ಲದೆ ಪ್ರೊ.ಸದಾನಂದರವರಿಗೆ ಫೋನು ಮಾಡಿದೆ ಅವರೂ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನುವಂತೆ ಬರೆದರು. ಸರಿ, ಆಗ ನಾನು ಮತ್ತು ಪ್ರವೀಣ ಇದೇ ನಿಲುಮೆಯಲ್ಲಿ ‘ಜಾತಿವ್ಯವಸ್ಥೆ’ ಇಲ್ಲ ಎಂದಾಗ ನಾವು ಏನು ಇಲ್ಲ ಎನ್ನುತ್ತಿದ್ದೇವೆ ಎನ್ನುವ ಬಗ್ಗೆ ಲೇಖನವನ್ನು ಬರೆದು ಪ್ರಕಟಿಸಿದೆವವು. ಆಗ ಮೂಲಭೂತ ಧೋಷ ಕಂಡು ಹಿಡಿದು ಟಾಂಟಾಂ ಹೊಡೆಯುತ್ತಿದ್ದ ಇದೇ ಕಿರಣ್ ರವರು ಈ ಲೇಖನದ ಕುರಿತು ಯಾವ ವಿಮರ್ಶೆ ಚರ್ಚೆಯನ್ನೂ ಮಾಡದೆ ನನ್ನ ಚರ್ಚೆಯನ್ನು ನಿಲ್ಲಿಸುತ್ತೇನೆ ಎಂದು ನಮಸ್ಕಾರ ಹೇಳಿ ಹೋದರು. ಕಲಿಯಲಿಕ್ಕೆ ಏನೂ ಇಲ್ಲವೆಂದಾದರೆ ಆ ರೀತಿಯ ಪ್ರಶ್ನೆಗಳನ್ನು ಕೇಳಿದ್ದೇಕೆ? ಮತ್ತು ಆ ಪ್ರಶ್ನೆಗಳಿಗೆ ನಾವು ವಾರಗಟ್ಟಲೆ ಸಮಯ ವ್ಯಯ ಮಾಡಿ ಲೇಖನವನ್ನು ಬರೆದು ಉತ್ತರಿಸಿದಮೇಲೆ ನಮಸ್ಕಾರ ಹೇಳಿ ಹೋಗುವುದೇಕೆ?
ಇವಿಷ್ಟನ್ನು ನಾನು ಅವರ ಮೇಲಿನ ಸಿಟ್ಟಿನಿಂದ ಹೇಳುತ್ತಿಲ್ಲ. ಅವರಿಗೆ ಚರ್ಚೆಗೆ ಬೇಕಾದ ಬೌದ್ದಿಕ ಸಾಮಾರ್ಥ್ಯವಿದೆ. ಅದನ್ನು ಚರ್ಚೆಯ ವಿಚಾರಗಳಿಗೆ ಕೇಂದ್ರೀಕರಿಸಿ ಮಾತನಾಡಲಿ ಎನ್ನುವುದಷ್ಟೇ ನನ್ನ ಕೋರಿಕೆ. ಹಾಗಾದಲ್ಲಿ ಅವರಿಂದ ನಾನೂ ಕಲಿಯುವಂತದ್ದು ಬಹಳಷ್ಟು ಹೊರಬರಬಹುದು ಎನ್ನುವ ನಿರೀಕ್ಷೆ ನನ್ನದು. (ನನ್ನಿಂದ ಅವರು ಕಲಿಯಲಿಕ್ಕೆ ಏನೂ ಇಲ್ಲ ಎನ್ನುವುದನ್ನು ವಿನಮ್ರವಾಗಿಯೇ ಒಪ್ಪಿಕೊಳ್ಳುತ್ತೇನೆ)
ಡಾ.ಎ.ಷಣ್ಮುಖ
ಮಾನ್ಯ ಬಸವಯ್ಯನವರೇ,
ಕಿರಣ್ ಬಾಟ್ನಿಯವರು ಅಪಾದನೆ ಮಾಡುವ ಹಾಗೆ “His logic is that if great people (such as those with a “Dr” calling) don’t respond to a certain question from non-great people (such as those who with a
“Mr” calling like me) the question is stupid.” ಎನ್ನುವ ರೀತಿಯಲ್ಲಿ ನಾನು ಇಲ್ಲಿ ಎಲ್ಲಾದರೂ ಹೇಳಿದ್ದೇನೆಯೇ? ಅಂದರೆ ‘ಡಾ. ಗಳು ಗ್ರೇಟ್; ಮಿ. ಗಳು ಗ್ರೇಟ್ ಅಲ್ಲದವರಾಗಿದ್ದು ಅವರು ಕೇಳುವುದೆಲ್ಲಾ ಸ್ಟುಪಿಡ್ ಪ್ರಶ್ನೆಗಳು’ ಅನ್ನುವ ರೀತಿಯಲ್ಲಿ…. ಏಕೆ ಈ ರೀತಿಯ ವಿಕೃತ ನಿಲುವುಗಳು? ನನಗೆ ಅರ್ಥವಾಗಲಿಲ್ಲ.
“ನಮ್ಮಲ್ಲಿರುವ ಸರಿ-ತಪ್ಪುಗಳನ್ನು ತೀರ್ಮಾನಿಸುವ ಮೊದಲು ನಮ್ಮನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿದ್ದೇವೆಯೇ ಎನ್ನುವದನ್ನು ಪರಾರ್ಶಿಸೋಣ” ಎಂಬ ಷಣ್ಮುಖ ಅವರ ಮಾತನ್ನು ನಾನೂ ಸಹ ಕಿರಣ್ ಮೊದಲಾದವರಿಗೆ ಹೇಳಬಯಸುತ್ತೇನೆ. ಅಷ್ಟೇ ಅಲ್ಲ, ಸರಿ-ತಪ್ಪು ಅನ್ನು ನಿರ್ಧರಿಸಲು ಬಳಸುವ ಮಾನದಂಡದ ಬಗ್ಗೆ ಕೂಡ ಸ್ವಲ್ಪ ಚಿಂತಿಸಿ ಎಂದು ಕೋರುತ್ತೇನೆ.
@ ಡಾ.ಷಣ್ಮುಖ
ಇದರ ಹಿಂದೆ ಇಷ್ಟೆಲ್ಲ ರಾಮಾಯಣ ಇದೆ ಎಂದು ಫೇಸಬುಕ್ ಚರ್ಚೆಗಳಲ್ಲಿ ಭಾಗವಹಿಸಿದ ನನಗೆ ಗೊತ್ತಿರಲಿಲ್ಲ..ಕ್ಷಮಿಸಿ :).
@ಮಾಯ್ಸ..
ಅಂತರ್ಜಾಲ ಅಸ್ಪ್ರಶ್ಯತೆಯ ವಿಕ್ಟಿಮ್ಮು ? 🙂
*ಭಾಗವಹಿಸದ
@ಬಸವಯ್ಯ
“ಅಂತರ್ಜಾಲ ಅಸ್ಪ್ರಶ್ಯತೆಯ ವಿಕ್ಟಿಮ್ಮು ?” ಇದರ ಅರ್ಥ ನಿಮಗೇ ಅರ್ಥವಾಗ ಬೇಕು.. ಅದೇನು ಇನ್ನೊಂದೆರಡು ಸಾಲು ಹೆಚ್ಚಿಗೆ ಬಿಡಿಸಿ ಬರೆದಿದ್ರೆ ತಮ್ಮ ಗಂಟು ಹೋಗ್ತಿತ್ತಾ?
ಮತ್ತೊಂದು ತಾವು ನನ್ನ ಬೆನ್ನ ಹತ್ತಿದ ಬೇತಾಳ ಅನ್ನಿಸುತ್ತೆ!. ನಿಮ್ಮ ಗುರುತು ಸಿಗಲಿ ನಂಗೆ .. ಆಮೇಲೆ ಇದೆ ! 🙂
ಕೆಲವರು ಕನ್ನಡದ ಹೆಸರು ಹೇಳಿ ಚಂದ ಎತ್ತಿ ಹಣದ ಗಂಟು ಮಾಡಿ, ದೊಡ್ಡ ಪೋಸು ಕೊಟ್ಟುಕೊಂಡು, ಮನೆಯಲ್ಲಿ ಮಾತ್ರ ಮಡಿ ಮಡಿ .. ! ಇಂತೋರಿಗೆ ನಾಳೆ ‘ಕರ್ನಾಟಕ ರತ್ನ’ ಸಿಕ್ಕರೂ ಅಚ್ಚರಿ ಇಲ್ಲ. ಹಿಂಗೆ ಇರೋದು ಸಮಾಜ. !
ನನಗ್ಯಾಕೆ ಇವೆಲ್ಲ .. ಟಾಟಾ ..
ನಾಳೆ ಶುಕ್ರವಾರ..! ಬೇಗ ಆಫೀಸ್ ಮುಗಿಸೋ ವಾರ !
ಶಂಕರಾಚಾರ್ಯರ ಹೇಳಿಕೆಯ ನೈಜ ಅರ್ಥ ಏನೇ ಇರಲಿ. ಈಗ ಅದು ಅಪ್ರಸ್ತುತ. ಹತ್ತೊಂಬತ್ತನೇ ಶತಮಾನದಲ್ಲಿ ಮೂಡಿ ಬಂದು ಮಹಾನ್ ವೇದ ಪ್ರತಿಭೆ. ಸ್ವಾಮಿ ದಯಾನಂದ ಸರಸ್ವತಿ. ಶೂದ್ರ ರಿಗೆ ವೇಧಾದಿಕಾರವಿಲ್ಲ ಎಂಬುದನ್ನು ವೇದಗಳ ಆಧಾರವಿತ್ತೇ ಖಂಡಿಸಿ ವೇದಗಳನ್ನು ಶೂದ್ರರು ಮತ್ತು ಸ್ತ್ರೀಯರು ಓದಬಹುದೆಂದು ಹೇಳಿದ್ದಾರೆ. ವಿವರಗಳಿಗೆ ಅವರು ಬರೆದಿರುವ ಅಮೋಘ ಕ್ರಾಂತಿ ಗ್ರಂಥ ” ಸತ್ಯಾರ್ಥ ಪ್ರಕಾಶ” ವನ್ನು ಓದಬಹುದು. ಅವರು ಸ್ಥಾಪಿಸಿದ ಆರ್ಯಸಮಾಜವು ವೇದಗಳನ್ನು ಓದುವ ಕೇಳುವ, ಮತ್ತು ಪ್ರಚಾರ ಮಾಡುವ ಹಕ್ಕನ್ನು ಎಲ್ಲ ಮಾನವರಿಗೆ ಅಂದರೆ, ಜಾತಿ, ಪಂಗಡ, ಪಕ್ಷ ಮತ್ತು ಲಿಂಗ ಭೇದವಿಲ್ಲದೆ ನೀಡಿದೆ. ಆರ್ಯಸಮಾಜದಲ್ಲಿ ಸ್ತ್ರೀಯರಿಗೂ ಉಪನಯನ ಆಧಿಕಾರವಿದೆ. ಸ್ತ್ರೀ ಪುರೋಹಿತರೂ ಇದ್ದಾರೆ. ಆರ್ಯಸಮಾಜದ ಸಂಪರ್ಕಕ್ಕೆ ಬಂದವರು ಆವರು ಶೂದ್ರರಾಗಿರಬಹುದು ಅಥವಾ ಮತ್ತಾವುದೇ ಜಾತಿಗೆ ಸೇರಿದ್ದರೂ ವೇದ ವಿದ್ವಾಂಸರಾಗಿ ಮೆರಿದಿದ್ದಾರೆ. ವೇದಗಳು ಹೇಳುವ ಭ್ರಾತೃತ್ವ, ಸಮಾನತೆ, ಮಾನವೀಯತೆ ಅಂಶಗಳನ್ನು ಅಕ್ಷರಶಃ ಜಾರಿಗೆ ತಂದ ಸಂಸ್ಥೆ ಇದೊಂದೆ. ಶಂಕರಾಚಾರ್ಯರನ್ನು ಮತ್ತು ಅವರು ವೇದಗಳ ಆಧಿಕಾರದ ಬಗ್ಗೆ ಹೇಳಿರುವ ಮಾತುಗಳನ್ನು ಸ್ವಲ್ಪ ಮಟ್ಟಿಗೆ ಪಕ್ಕಕ್ಕಿಟ್ಟು ಸರ್ವರಿಗೂ ವೇದಗಳು ತಲುಪಿಸುವ ಪ್ರಯತ್ನ ಮಾಡಬೇಕು. ಇದೇ ನಾವು ವೇದ ಮಾತೆಗೆ ಸಲ್ಲಿಸುವ ನಿಜವಾದ ಗೌರವ. ಹಳೆಯದೆಲ್ಲವೂ ಪೂಜ್ಯವಲ್ಲ. ಹಾಗೆಯೇ ಶಂಕರಾಚಾರ್ಯರ ವಿಚಾರಗಳು ಇಂದಿನ ಪರಿಸ್ಥಿತಿಗೆ ಅನುಗುಣವಾಗಿಲ್ಲದಿದ್ದಲ್ಲಿ ಅದನ್ನು ಬಿಡುವುದೇ ಕ್ಷೇಮ.
ati uttama salahe