ಕೇದಾರನಾಥನಲ್ಲಿ ಕಳೆದ ಒಂದು ದಿನ…..
– ಶೋಭಾ.ಹೆಚ್.ಜಿ,
ಸಂಪಾದಕರು, ಸ್ತ್ರೀ ಜಾಗೃತಿ ಮಾಸಪತ್ರಿಕೆ
ಶಿವಾ.. ಶಿವಾ .. ಏನಿದು ನಿನ್ನ ತಾಂಡವ ನೃತ್ಯ, ಯಾಕಾಗಿ.? ಈ ವಿನಾಶ ಯಾವುದರ ಮುನ್ಸೂಚನೆ ..? ಮಾನವನ ಯಾವ ಪಾಪಕ್ಕಾಗಿ ಈ ಶಿಕ್ಷೆ..? ರಾತ್ರಿ ಝೀ ಟಿವಿಯಲ್ಲಿ ಈ ಪ್ರಚಂಡ ಪ್ರಳಯದ ನಂತರ ನೋಡಿದ ಮೊದಲ ದೃಶ್ಯ ನೋಡಿದ ಕ್ಷಣ ಅನಿಸಿದ್ದು. ದೇವಸ್ಥಾನದ ಮುಂದೆ ಬಿದ್ದಿರುವ ರಾಶಿ ರಾಶಿ ಶವಗಳು, ಮಂದಿರದ ಒಳಗೆ ಹಾಗೆಯೇ ಶವಗಳು ಬಿದ್ದಿದೆ ಎನ್ನುವುದು ಕೇಳಿದ ಮೇಲೆ ಕರುಳು ಕಿತ್ತು ಬಂದ ಅನುಭವ, ಹೃದಯ ಹಿಂಡಿ ತೆಗೆದಂತೆ, ಅಲ್ಲಿ ನಾನು ಕಳೆದ ಒಂದು ದಿನದ ಸವಿ ನೆನಪು ನಿಮ್ಮೊಂದಿಗೆ…
ಅಪ್ಪಾಜಿ ಸಾವಿನಿಂದ ಕುಸಿದು ಹೋದವಳಿಗೆ ನೆನಪಾದದ್ದು ಹಿಮಾಲಯದ ಕೇದಾರನಾಥ. ಮನಸ್ಸಿಗೆ ಸಮಾಧಾನ ಹುಡುಕಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ಹೊರಟವಳಿಗೆ, ಜೊತೆಯಲ್ಲಿ ಹೊರಟ ಗೆಳತಿಗೆ ಅನಾರೋಗ್ಯವಾಗಿ ಬರಲಾಗದಿದ್ದುದು, ಅದೇ ಟಿಕೇಟಿಗೆ ಹೊರಟ ಮತ್ತಿಬ್ಬರು ಬರಲಾಗದಿದ್ದುದು, ಕೊನೆಗೆ ಒಬ್ಬಳೇ ಹೊರಟವಳಿಗೆ ಮನೆಯವರೆಲ್ಲರ ವಿರೋದ, ಜೂನ್ ನ ಕೊನೆಯಲ್ಲಿ ಎಲ್ಲರೂ ಹೋಗೋಣ ಈಗ ಬೇಡವೆಂದರೂ, ಹಿಮಾಲಯದ ಸೆಳೆತ ನನ್ನನ್ನು ಕೇದಾರತನಕ ಎಳೆದುಕೊಂಡು ಹೋಯಿತು. ಅದು ಕೇದಾರನಾಥನ ಇಚ್ಚೆ ಯಾರನ್ನು ಯಾವಾಗ ತನ್ನ ಹತ್ತಿರ ಕರೆಸಿಕೊಳ್ಳಬೇಕು ಎಂದು ತೀರ್ಮಾನಿಸುವವನು ಅವನೇ ಎಂದು ಈಗ ಅನಿಸುತ್ತಿದೆ. ನಮ್ಮಿಚ್ಛೆಯಂತೆ ಏನೂ ನಡೆಯುವುದಿಲ್ಲ.
ಮೇ ೧೦ ಬೆಂಗಳೂರು ಬಿಟ್ಟವಳು, ಹೃಷಿಕೇಶದಲ್ಲಿ ಎರಡು ರಾತ್ರಿ ಉಳಿದು, ರುದ್ರಪ್ರಯಾಗದ ಮುಖಾಂತರ ರಸ್ತೆಮಾರ್ಗವಾಗಿ ಗುಪ್ತಕಾಶಿ ತಲುಪಿ ಅಲ್ಲಿ ಒಂದು ದಿನ ಉಳಿದೆ. ಅಂದು ವಿಪರೀತ ಮಳೆ – ಚಳಿ, ಅಲ್ಲಿಯೇ ಒಂದು ಮನೆಯಲ್ಲಿ ಉಳಿದೆ, ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಸಿಗುತ್ತಿಲ್ಲ. ಅವರ ಮನೆಯಿದ್ದುದು, ರಸ್ತೆ ಬದಿಯಲ್ಲಿ ಇಳಿದು ಕೆಳಗೆ ಕಟ್ಟಿರುವುದು, ಅದೀಗ ಇದೆಯೇ? ಎನ್ನುವ ಅತಂಕ. ಅ ದಂಪತಿಗಳ ಮುದ್ದಾದ ಮೂರು ಮಕ್ಕಳ ಜೊತೆ ಕಳೆದ ಕ್ಷಣಗಳು, ಆ ಮನೆಯ ಗೃಹಿಣಿ ಮಾಡಿಕೊಟ್ಟ ಬಿಸಿ ಬಿಸಿ ಪುಲ್ಕ-ದಾಲ್, ಚಹಾ, ಅ ಮನೆಯ ಯಜಮಾನ ರಾಣಾ ಸಿಂಗ್ ಅಲ್ಲಿಯ ಜೀವನದ ಕಷ್ಟಗಳನ್ನು ಗಂಟೆಗಟ್ಟಲೆ ಹೇಳಿದ್ದು, ಕೃಷಿಗಿಂತ ಪ್ರವಾಸೋದ್ಯಮವೇ ತಮ್ಮ ಜೀವನಕ್ಕೆ ಆಧಾರವಾಗಿರುವುದು, ಅದರೆ, ಹೊರ ರಾಜ್ಯದವರ ಉದ್ಯಮಿಗಳ ದಾಳಿಯಿಂದ ಸ್ಥಳಿಯರು ಪಡುತ್ತಿರುವ ಪಾಡಿನ ಬಗ್ಗೆ ತೋಡಿಕೊಂಡದ್ದು, ಬೆಳಿಗ್ಗೆ ಶಾಲೆಗೆ ಹೋಗುವಾಗ ಅವರ ಮಕ್ಕಳಿಗೆ ನಾನು ಬಾಯ್ ಹೇಳಿ ಕಳಿಸಿದ್ದು, ಮತ್ತೇ ಬನ್ನಿ ಎಂದು ಅವರು ಹೇಳಿದ್ದು ಎಲ್ಲ ನೆನಪಾಗುತ್ತೆ. ಅವರ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ರೈಲಿನಲ್ಲಿ ನನ್ನ ಬ್ಯಾಗಿನಲ್ಲಿದ್ದ ಪರ್ಸ ಯಾರೋ ತೆಗೆದಿದ್ದರಿಂದ, ತಮ್ಮನು ಎಟಿಎಮ್ ನಿಂದ ದುಡ್ಡು ಕಳಿಸಿ, ರಸ್ತೆ ಮುಖಾಂತರ ಬೇಡ, ಅರೋಗ್ಯದ ದೃಷ್ಟಿಯಿಂದ ನೀನು ಹೆಲಿಕ್ಯಾಪ್ಟರ‍್ನಲ್ಲಿ ಹೋಗು ಎಂದು ಹೇಳಿದ್ದರಿಂದ, ಗುಪ್ತಕಾಶಿಯಿಂದ ಹೆಲಿಕ್ಯಾಪ್ಟರ್ ನಲ್ಲಿ ಕೇದಾರನಾಥನ ತಪ್ಪಲಿಗೆ ಕೇವಲ ಹತ್ತು ನಿಮಿಷದಲ್ಲಿ ತಲುಪಿದೆ. ನಾನಲ್ಲಿ ಇದ್ದಾಗ ಮಾತನಾಡಿಸಿದವರು ಅನೇಕರು, ನನ್ನನ್ನು ಅಲ್ಲಿರುವ ಎಲ್ಲ ಬ್ರಹ್ಮಕುಂಡ, ರೇತಕುಂಡ, ಉದಕಕುಂಡ, ಗಳಿಗೆ ಕರೆದುಕೊಂಡ ಹೋಗಿ ತೋರಿಸಿಕೊಂಡ ಬಂದ ಮಂದಿರದ ಪುರೋಹಿತರ ಮಗ ನೆನಪಾದ, ಅವನು ತನ್ನ ಭವಿಷ್ಯದ ಬಗ್ಗೆ ಕಟ್ಟಿಕೊಂಡು ಹೇಳಿದ ಕನಸಿನ ಮಾತುಗಳು ನೆನಪಾದವು, ತಾನು ಸ್ನಾತಕೋತ್ತರ ಮುಗಿಸಿದ್ದರೂ, ಇನ್ನು ಓದಬೇಕೆಂಬ ಹಂಬಲ, ತಂದೆಯ ಪೌರೋಹಿತ್ಯಕ್ಕೆ ಕಟ್ಟುಬೀಳಬೇಕೆ ಎನ್ನುವ ಅವನ ಮಾತುಗಳು ಎಲ್ಲ ನೆನಪಾದವು, ಅವನಿಗೆ ಐಎಎಸ್ ಓದು, ಎಂದು ಹೇಳಿದಾಗ ಆತ ಗೋಣಾಡಿಸಿದ್ದು, ಅಲ್ಲಿ ನನಗೆ ಮದ್ಯರಾತ್ರಿ ಆದ ಒಂದು ಮಾನಸಿಕ ಅನುಭವ(…… ದಿಂದ ) ನನ್ನ ಎರಡು ಕಾಲಿನ ಮಂಡಿಯ ಶಕ್ತಿಯನ್ನು ಕಳೆದುಕೊಂಡು ನಡೆಯಲಾರದೆ ಒದ್ದಾಡುತ್ತಿದ್ದಾಗ, ಮಂದಿರದ ಸಿಬ್ಬಂದಿ ಪ್ರತಿಯೊಂದು ಹಂತದಲ್ಲೂ ನನ್ನನ್ನು ನೋಡಿಕೊಂಡಿದ್ದು, ದೇವಸ್ಥಾನದಲ್ಲಿ ನನ್ನನ್ನು ಕೂರಿಸಿ ಶಿವನನ್ನು ಮನಃತೃಪ್ತಿಯಾಗುವಷ್ಟು ಪೂಜೆ ಮಾಡಿಸಿದ್ದು, ನಂತರ ಹೆಲಿಪ್ಯಾಡ್ ತನಕ ಕರೆದುಕೊಂಡು ಬಂದು ಬಿಟ್ಟಿದ್ದು, ಅವರೆಲ್ಲ ಕಣ್ಣು ಮುಂದೆ ಬಂದರು. ಅಲ್ಲಿ ಕಾಣಿಸುತ್ತಿದ್ದ ಶವಗಳಲ್ಲಿ ಟಿವಿಯಲ್ಲಿ ಹುಡುಕುವ ಪ್ರಯತ್ನ ಮಾಡಿದೆ, ಅವರೆಲ್ಲ ಬದುಕಿರಲಿ ತಂದೇ ಕೇದಾರನಾಥ … ಎಂದು ಆ ಶಿವನನ್ನು ಪ್ರಾರ್ಥಿಸಿದೆ.
ಬೆಳಿಗ್ಗೆಯಿಂದ ರಾತ್ರಿ ಹತ್ತರವರೆಗೆ ದೇವಸ್ಥಾನದ ಅಸುಪಾಸಿನಲ್ಲಿಯೇ ಸುತ್ತಾಟ, ಮಂದಿರದ ಒಳಗೆ ಕುಳಿತಷ್ಟು ಸಮಾಧಾನವಿಲ್ಲ, ಅಲ್ಲಿಯೇ ಇದ್ದುಬಿಡೋಣ ಅನ್ನೋವಷ್ಟು ತುಡಿತ. ಎಲ್ಲಿ ಕೂತರು, ಇಲ್ಲಿ ದೇವರು ಇದ್ದಾನಲ್ಲವೇ ಎನ್ನಿಸುವ ಸುಖ. ದೇವಸ್ಥಾನದ ಸುತ್ತಲೂ ಸುತ್ತಾತ್ತಾ ಏನನ್ನೋ ಹುಡುಕುವ ತವಕ. ಮಂದಿರದ ಹಿಂದಿನ ಕಲ್ಲಿನ ಮೇಲೆ ಕುಳಿತು ನನ್ನನ್ನು ಮುಟ್ಟು ಎಂದು ಸವಾಲೆಸೆಯುವಂತೆ ಮುಗಿಲೆತ್ತರಕ್ಕೆ ನಿಂತ ಹಿಮ ಪರ್ವತಗಳ ಮದ್ಯೆ ಕಾಣುತ್ತಿದ್ದ ಸ್ವರ್ಗದ್ವಾರವನ್ನ ನೋಡುತ್ತಾ ಇಷ್ಟು ಹ್ತತಿರವೇ ಅದನ್ನು ತಲುಪಲೇ ಎನ್ನುವ ಹಂಬಲ. ಇಲ್ಲಿ ತನಕ ಬಂದಿದ್ದೇನೆ, ಮತ್ಯಾಕೆ ವಾಪಾಸು ನಿನ್ನ ಬಳಿ ಕರೆದುಕೋ ಶಿವಾ… ಎನ್ನುವ ಮನದಾಳದ ಕೂಗು. ಸುತ್ತಲೂ ಕಾಣುವ ಬೆಟ್ಟಗಳಲ್ಲಿ ಅಲ್ಲಲ್ಲಿ ಕಾಣಿಸುವ ಗುಹೆಗಳಿಗೆ ಹೋಗಿ ಅಲ್ಲಿರುವ ತಪಸ್ವಿಗಳನ್ನು ದರ್ಶಿಸಲೇ ಎಂಬ ಅಸೆ. ಅದನ್ನು ಅಲ್ಲಿನವರ ಹತ್ತಿರ ಹೇಳಿದಾಗ, ನಮ್ಮ ನಮ್ಮ ಕರ್ಮ ಕಳೆಯದೇ ಏನೂ ಸಾಧ್ಯವಿಲ್ಲ. ಎಲ್ಲ ಶಿವನಿಚ್ಛೆಯಂತೆ ನಡೆಯುವುದು, ಒಮ್ಮೆ ಆತನೇ ಎಂಟು ಕಿ.ಮೀ ಹಿಮಾಲಯ ದಾಟಿ ಹೋದಾಗ ಕಾಣಿಸಿದ ಗುಹೆಗಳಿಗೆ ಹೋದಾಗ, ತಪಸ್ವಿಗಳು ಕಾಣಿಸುತ್ತಿರಲಿಲ್ಲ, ಓಂಕಾರ ಶಬ್ದ ಕೇಳುತ್ತಿತ್ತು, ನನ್ನ ಕರ್ಮ ಮುಗಿದಿಲ್ಲವೆಂದು ತಿರುಗಿ ಬಂದೆ, ಎಂದು ಹೇಳಿದಾಗ, ನನಗೂ ಇನ್ನೂ ಕರ್ಮ ಕಳೆದಿಲ್ಲವೆಂದು ತೋರಿತು.
ಸರಿಯಾಗಿ ಒಂದು ತಿಂಗಳ ಹಿಂದೆ ಮೇ ೧೫-೧೬ ರಂದು ನಾನು ಅಲ್ಲಿಯೇ ಇದ್ದೆ, ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಸುಮಾರು ೩೫೬೪ ಮೀಟರ್ ಎತ್ತರದಲ್ಲಿರುವ ಈ ಸ್ಥಳದ ವಿಪರೀತ ಚಳಿಯ ವಾತಾವರಣದಿಂದಾಗಿ ದೇವಾಲಯವು ಕೇವಲ ಏಪ್ರಿಲ್ ಕೊನೆಯ ಭಾಗದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರುತ್ತದೆ.
ಸುತ್ತಲೂ ಬೆಟ್ಟಗಳು, ಮದ್ಯೇ ಕೇದಾರ ದೇವಸ್ಥಾನ, ಸುಂದರ ರಮಣೀಯ ದೃಶ್ಯಗಳು, ಪ್ರಶಾಂತ ವಾತಾವರಣ, ಕ್ಷಣ ಕ್ಷಣಕ್ಕು ಬದಲಾಗುವ ಹವಾಮಾನ. ನಾನಲ್ಲಿ ಹೋದ ದಿನ ಇನ್ನು ಅಲ್ಲಲ್ಲಿ ನಾಲ್ಕೈದಡಿಗಳಷ್ಟು ಇದ್ದ ಮಂಜನ್ನು ತೆರವುಗೊಳಿಸುತ್ತಿದ್ದರು. ಮಂದಿರದ ಮುಂಭಾಗದ ಸಣ್ಣ ರಸ್ತೆಯ ಪಕ್ಕದಲ್ಲಿ ಐದಡಿಗಿಂತ ಹೆಚ್ಚು ಮಂಜಿತ್ತು. ಮಂದಿರದ ಮುಂಚೆನೇ ಕಿಲೋಮೀಟರ್‌ನಿಂದ ಸಾಲು ಸಾಲು ಅಂಗಡಿಗಳು, ಹೋಟೆಲ್ ಗಳು. ನಾನು ಹೋಗಿದ್ದು ಅಕ್ಷಯ ತದಿಗೆ ಮಾರನೇ ದಿನ ಅಂದರೆ, ಮಂದಿರ ಬಾಗಿಲು ತೆಗೆದ ಎರಡನೇ ದಿನವೇ ಅಲ್ಲಿ ಇದ್ದುದರಿಂದ, ಅಂಗಡಿಯವರು ಮಾತನಾಡಿಕೊಳ್ಳುತ್ತಿದ್ದುದು ಇಸ್ ಬಾರ್ ದೇಡ್-ದೋ ಲಾಕ್ ಕ ಸಾಮಾನ್ ಖರೀದ.. ಕ್ಯಾ ಹೋತಾ ಹೈ ಭಗವಾನ್ ಕೀ ಕೃಪಾ( ಒಂದುವರೆ ಎರಡು ಲಕ್ಷದ ಸಾಮಾನುಗಳನ್ನು ಈ ಬಾರಿ ಹಾಕಿದ್ದೇವೆ. ಏನಾಗುತ್ತದೋ..? ದೇವರ ಇಚ್ಛೆ) ಎನ್ನುತ್ತಿದ್ದರು. ಅವರೆಲ್ಲ ಈ ಒಂದು ತಿಂಗಳಲ್ಲಿ ಏನು ವ್ಯಾಪಾರ ಮಾಡಿದರೋ? ಅವರೆಲ್ಲರ ಅಂಗಡಿಗಳು ಕೊಚ್ಚಿ ಹೋಗಿದೆ. ಶಿವನೇ ಏನಿದು ನಿನ್ನ ಲೀಲೆ. ನಿನ್ನನ್ನು ದರ್ಶಿಸಲು ಬಂದವರಿಗೆ, ಪೂಜಿಸಲು ಬಂದವರಿಗೆ ನಿನ್ನ ಕೊಡುಗೆ ಇದೆ ಏನು? ಏನೂ ಅರಿಯದ ಮುಗ್ಧಭಕ್ತರನ್ನು ಮುಕ್ತಿ ಕಾಣಿಸಲು ಗಂಗೆಗೆ ಆದೇಶ ಕೊಟ್ಟೆಯೇನು? ಅಥವಾ ಗಂಗೆ ಬೇಡವೆಂದರೂ, ಭಗೀರಥನ ತಪಸ್ಸಿಗಾಗಿ ಅವಳನ್ನು ಭೂಮಿಗೆ ಕಳಿಸಿದ್ದಕ್ಕೆ, ಗಂಗೆ ತೋರಿಸಿದ ಪ್ರತಾಪವೇನು? ಹೀಗೆ ವಿಚಿತ್ರ ಭಾವನೆಗಳು ಮನದಲ್ಲಿ ಸುಳಿದುಹೋಗುತ್ತಿವೆ. ದೇಹಿ ಎಂದು ನಿನ್ನ ಬಳಿ ಬಂದವರಿಗೆ ಜಲಪ್ರಳಯ ದ ಸೂಚನೆ ಏನು?
ಮನುಷ್ಯನ ಅತಿಯಾದ ಲಾಲಸೆ, ತಾಂಡವವಾಡುತ್ತಿರುವ ಭ್ರಷ್ಟತೆ, ಮಡಬಾರದ್ದನ್ನೆಲ್ಲ ಮಾಡಿ ಮೈ ತುಂಬ ಪಾಪ ತುಂಬಿಕೊಂಡು, ನಿನ್ನಲ್ಲಿಗೆ ಬರುವವರನ್ನು ನಿಲ್ಲಿಸಿದ ಪರಿಯೇ ಇದು? ನಿನ್ನ ತಾಣದಲ್ಲಿ ಕೂಡಾ ಅಭಿವೃದ್ಧಿ ಹೆಸರಲ್ಲಿ ಉದ್ಯಮಿಗಳು ಮಾಡಹೊರಟಿದ್ದ ನಾಶಕ್ಕೆ ಕಡಿವಾಣ ಎಂದುಕೊಳ್ಳೋಣವೇ? ಒಂಬತ್ತು ವರುಷದ ಹಿಂದೆ ಹೋದಾಗ ಇದ್ದ ಕೇದಾರನಾಥಕ್ಕು ಇಂದಿಗೂ ಆದ ಬದಲಾವಣೆ ಕಂಡಾಗಲೇ, ಇದಕ್ಕೊಂದು ಕೊನೆಯಿದೆ ಎಂದು. ಅದರೆ ಅದು ಇಷ್ಟು ಬೇಗ ಅಗುತ್ತೆ ಎಂದು ಗೊತ್ತಿರಲಿಲ್ಲ. ದುಡ್ಡಿದ್ದರೇ ಏನು ಬೇಕಾದರು ಮಾಡಬಹುದು ಎಂದುಕೊಂಡಿದ್ದವರಿಗೆ ಈ ಐದಾರು ದಿನಗಳಲ್ಲಿ ಅದು ಗೌಣ ಎಂಬ ಅರಿವನ್ನುಂಟುಮಾಡಿದ್ದು.
ಕಧಯಸ್ವ ಮಹಾದೇವ ವಿಸ್ತರಾ ನಮಃ ಕ್ಷೇತ್ರಕಮ್ ಃ
ಕೇದಾರ ನಾಮ ಯತ್ಪ್ರೋಕ್ತಂ ಸ್ವರ್ಗ ಮೋಕ್ಷ ಪ್ರದಾಯಕಮ್ ಃಃ
ಕೇದಾರನಾಥ ಹಿಮಾಲಯದ ದೇವಭೂಮಿಯ ಪುಣ್ಯಕ್ಷೇತ್ರ. ಪಾಂಡವರಿಗೆ ಶಿವ ದರ್ಶನ ಕೊಟ್ಟ ಸ್ಥಳ, ನಂತರ ಅಲ್ಲಿಯೇ ನೆಲೆಸಿದ ಶಿವನಿಗೊಂದು ಭೀಮನೇ ಕಟ್ಟಿದ ದೇವಸ್ಥಾನ ಎನ್ನುವ ಪ್ರತೀತಿ ಇದೆ, ದೇವಸ್ಥಾನದ ಕಟ್ಟಡದ ವಾಸ್ತುಶಿಲ್ಪ ನೋಡಿದರೆ ಹೇಗೆ ಕಟ್ಟಿದ್ದಾರೆ ಎನ್ನುವುದೇ ನಮಗೊಂದು ವಿಸ್ಮಯ,
ಕೇದಾರೇಶ್ವರನ ನಾಮದಿಂದಲೇ ಮೋಕ್ಷ ಸಿಗುತ್ತೇ ಎನ್ನುವ ಮೇಲಿನ ಶ್ಲೋಕದಂತೆ, ಹಿಂದೆ ಜೀವನದ ಕೊನೆಯ ಹಂತವೆಂಬಂತೆ ನೂರಾರು ಶ್ರದ್ಧಾಳುಗಳು ಹೋಗುತ್ತಿದ್ದರು, ಬರುವುದರ ಬಗ್ಗೆ ಉಲ್ಲೇಖವಿಲ್ಲ. ಆದರೆ ಇಂದು ಲಕ್ಷಾಂತರ ಭಕ್ತಾದಿಗಳು ಸರಾಗವೆಂಬಂತೆ ಹೋಗಿ… ಬರುತ್ತಿದ್ದಾರೆ. ಅದಕ್ಕೆ ಮಾನವನ ಅಭಿವೃದ್ಧಿಗಳೇ ಕಾರಣ.
ರುದ್ರಪ್ರಯಾಗದ ಮುಂದೆ ಹದಿನಾರು ಕಿಲೋಮೀಟರ್ ನಂತರ ಇರುವುದೇ ಅಗಸ್ತ್ಯಮುನಿ, ೨೦೦೪ ರಲ್ಲಿ ಅಲ್ಲಿ ಐದು ದಿನ ಇದ್ದೆ. ಆಗೆಷ್ಟು ಪ್ರಶಾಂತ ಸ್ಥಳವಾಗಿತ್ತು ಒಂದು ಸಣ್ಣ ಹಳ್ಳಿಯದು. ಈ ಬಾರಿ ನೋಡಿದರೆ, ಬೆಂಗಳೂರಿನ ಚಿಕ್ಕಪೇಟೆ ನೋಡಿದ ಹಾಗಾಯ್ತು. ದೇವಭೂಮಿಯಲ್ಲಿ ಈ ಮಟ್ಟದ ಅಭಿವೃದ್ಧಿ ಬೇಡವೆಂದಿತು. ಹೃಷಿಕೇದಿಂದ ಹೊರಟರೆ, ಕಡಿದಾದ ಬೆಟ್ಟ ಮತ್ತು ಪ್ರಪಾತ ದಲ್ಲಿ ಹರಿಯುವ ನದಿಯ ಮದ್ಯೆ ಇರುವ ಸಣ್ಣ ರಸ್ತೆ, ದಟ್ಟಕಾಡು, ಸಾಲು ಸಾಲು ಬೆಟ್ಟ, ಮೇಲಿನಿಂದ ಹರಿಯುವ ಝರಿಗಳು, ಅದಕ್ಕೆ ಕೈಯೊಡ್ಡಿ ನೀರು ಕುಡಿಯುವುದೇ ಒಂದು ಮಜಾ ಎನಿಸುತ್ತಿತ್ತು. ಎಲ್ಲೋ ಒಂದೊಂದು ಕಡೆ ಚಹಾ ಅಂಗಡಿಗಳು, ಇಂತಹ ಯಾತ್ರೆ ನಮಗೆ ತೃಪ್ತಿ ಕೊಡುತ್ತಿತ್ತು. ಗೌರಿಕುಂಡದಿಂದ ಕಡಿದಾದ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮುಖಾಂತರ ಪ್ರಕೃತಿ ಸೌಂದರ್ಯ ಸವಿಯುತ್ತ ಹೋಗಿ ಶಿವನನ್ನ ದರ್ಶಿಸುವುದೇ ಒಂದು ಪುನೀತ ಭಾವ. ಈಗ ಎಲ್ಲ ಸೌಲಭ್ಯಗಳ ಮದ್ಯೆ ಹೋಗಿ ಬರುವ ಯಾತ್ರಿಕರು ಅನ್ನುವುದಕ್ಕಿಂತ ಪಾಪಿಗಳು ಹೆಚ್ಚಾದರೇನೋ….? ಅದಕ್ಕೆ ಕೇದಾರೇಶ್ವರ ಕಡಿವಾಣ ಹಾಕಲು ಈ ಜಲಪ್ರಳಯ ಸೃಷ್ಟಿಸಿದನೇ? ಇದನ್ನು ಮಾನವ ಅರಿತರೇ… ಒಳ್ಳೆಯದು.
ಬದರಿಕೇತ್ರದ ಜೋಷಿಮಠದಿಂದ ೧೪ ಕಿಮಿ ಮೇಲಿರುವ ತಪೋಭೂಮಿ ಹಿಂದಿನ ಬಾರಿ ಹೋದಾಗ ಅಲ್ಲೊಂದು ಹಳ್ಳಿ ಬಿಟ್ಟರೆ ಏನಿರಲಿಲ್ಲ. ವಿಸ್ಮಯದ ಬಿಸಿನೀರಿನ ಬುಗ್ಗೆ, ಪಾರ್ವತಿ ತಪಸ್ಸು ಮಾಡಿದ ಸ್ಥಳ, ಸಿದ್ಧಿಪುರುಷರ ಗುಹೆಗಳು, ಅಲ್ಲಿಂದ ಮುಂದೆ ಭವಿಷ್ಯಬದರಿ, ನಂತರವೇ ದ್ರೋಣಗಿರಿಪರ್ವತ( ಸಂಜೀವಿನಿ ಪರ್ವತದ ಕೆಳಗೆ) ಇದೆ, ಈ ಬಾರಿ ತಪೋವನಕ್ಕೆ ಹೋದರೆ ಅಲ್ಲಿ ಬೆಟ್ಟಗಳನ್ನು ಕಡಿದು ನದಿಗೆ ಅಡ್ಡಲಾಗಿ (ಓಖಿPಅ) ಓಚಿಣioಟಿಚಿಟ Poತಿeಡಿ Pಡಿoರಿeಛಿಣ ನಡೆಯುತ್ತಿದ್ದು ಕಂಡು ಬಂತು. ಅಗಲೇ ಅಂದುಕೊಂಡೆ ಇನಾಶಕಾಲೇ ವಿಪರೀತ ಬುದ್ದಿ ಎಂದು. ಅಭಿವೃದ್ಧಿಯ ಪಥ ಎಂದುಕೊಂಡಿರುವ ಮನುಷ್ಯನಿಗೆ ಇದು ಪರಿಸರ ವಿನಾಶಕ ಎಂದೆನಿಸಲಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳುವವನೇ?
ಇದು ಘೋರ ದುರಂತವೆ..ಮಾನವ ನಿರ್ಮಿತ ದುರಂತ. ಪೃಕೃತಿಯ ಮೇಲೆ ಎಸಗಿದ ಅತ್ಯಾಚಾರಕ್ಕೆ ಉಂಡ ಫಲ. ಸರಕಾರ ಹೊರಗಿನ ಜನ ಅಲ್ಲಿಗೆ ಬಂದು ಪ್ರವಾಸೋದ್ಯಮ ನಡೆಸುವುದನ್ನು ನಿಷೇಧಿಸಿದ್ದರೆ ಆ ಸ್ಥಳಗಳ ಮೇಲೆ ಜನರ ದಟ್ಟಣೆ ಆಗುವುದು ತಪ್ಪುತ್ತಿತ್ತು. ಅನಧಿಕೃತ ಕಟ್ಟಡಗಳು, ಡ್ಯಾಂನಂತಹ ಸರಕಾರಿ ಯೋಜನೆಗಳು ಆ ಪ್ರದೇಶದ ಸಮತೋಲನ ಕೆಡಿಸಿದ್ದವು..ಈ ದುರಂತ ನಿರೀಕ್ಷಿತವೆ ಆಗಿತ್ತು. ದುರ್ಗಮ ಪ್ರದೇಶಗಳಿಗೆ ಕಾಲ್ನಡಿಗೆಯಿಂದ ಹೋಗಿ ಧನ್ಯತೆ ಪಡೆಯುತ್ತಿದ್ದ ತೀರ್ಥಕ್ಷೇತ್ತ ಯಾತ್ರೆಗಳು ಇಂದು ಹೆಲಿಕಾಪ್ಟರಗಳಲ್ಲಿ ಹೋಗಿಬರುವ ಪ್ರವಾಸೋದ್ಯಮವಾಗಿದೆ. ವರ್ಷಕ್ಕೊಂದು ಬಾರಿ, ಎರಡು ಬಾರಿ ಹೋಗಿ ಬರುವಂತಹ ಹವ್ಯಾಸ ಬೆಳೆಸಿಕೊಂಡ ಶ್ರೀಮಂತ ಭಕ್ತರು ಕೂಡ ಈಗ ಇದ್ದಾರೆ. ಈ ದುರಂತದ ನಡುವೆಯೂ ದರೋಡೆಕೋರರಂತೆ ಹಣ, ಬಂಗಾರ ದೋಚಿದವರನ್ನು, ಆಹಾರಕ್ಕೆ ಬೇಕಾಬಿಟ್ಟಿ ಹಣ ವಸೂಲಿ ಮಾಡಿದವರನ್ನು ಕಂಡಾಗ ಆ ದೇವರು ನಮ್ಮನ್ನೆಲ್ಲ ಕಾಯಬೇಕಿತ್ತು ಎಂದೆನಿಸುತ್ತದೆಯೆ? ದಿನದಿಂದ ದಿನಕ್ಕೆ ಕ್ಷುಲ್ಲಕರಾಗುತ್ತಿರುವ ಜನರನ್ನು ಕಾಯುವುದು ದೇವರ ಜವಾಬ್ದಾರಿಯಲ್ಲ..ನಮ್ಮ ತಪ್ಪನ್ನು ನಾವೇ ಸರಿಪಡಿಸಿಕೊಳ್ಳಬೇಕು.
ಈ ಸಂದರ್ಭದಲ್ಲಿ ನಿರಂತರವಾಗಿ ರಕ್ಷಣಾಕಾರ್ಯದಲ್ಲಿ ತೊಡಗಿಸಿಕೊಂಡ ಸೇನೆಗೆ, ಉಳಿದ ಸೇನಾ ಮನೋಭಾವದ ಸಂಸ್ಥೆಗಳಿಗೆ ನಾವು ಕೃತಜ್ಞರಾಗಿರಬೇಕು.
* ಉಳಿದ ಸೇವಾ ಮನೋಭಾವದ ಸಂಸ್ಥೆಗಳಿಗೆ
ಉತ್ತರ ಭಾರತದಲ್ಲಿ ಪ್ರವಾಸ ಅಂದರೆ ನನಗೆ ಪ್ರಾಣಭಯ .. ಅನುಭವ.
ಕೇರಳ ನೋಡಿ ಸೂಪರ್, ಕ್ಲೀನ್ ಅಂಡ್ ನೀಟ್ !!