ಇರ್ಫಾನ್ ಹೇಳಿದ ಗುಜರಾತಿ ಮುಸ್ಲಿಮರ ಹೊಸ ಶಕೆ
-ಸಂತೋಷ್ ತಮ್ಮಯ್ಯ
೩೫ ವರ್ಷದ ಮೆಮನ್ ಮುಸಲ್ಮಾನ ಯುವಕ. ರಾಜ್‌ಕೋಟ್ ಜಿಲ್ಲೆಯವರು. ಪೋರ್ ಬಂದರ್ ನಿಂದ ೭೦ ಕಿ.ಮೀ ದೂರದ ಉಪ್ಲೇಟಾ ಎಂಬ ತಾಲೂಕು ಕೇಂದ್ರದವರು. ಉಪ್ಲೇಟಾದಲ್ಲೇ ಹುಟ್ಟಿ ಬೆಳೆದು ಕಳೆದ ೧೨ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದವರು. ಓದಿದ್ದು ಇಂಗ್ಲೀಷ್ ಎಂ.ಎ. ಉದ್ಯೋಗ ಔಷಧ ಮಾರಾಟ ಕಂಪನಿಯೊಂದರಲ್ಲಿ ಸೇಲ್ಸ್ ಮತ್ತು ಮಾರ್ಕೇಟಿಂಗ್ ಅಧಿಕಾರಿ. ಟ್ವಿಟರ್ ನಲ್ಲಿ ಸಕ್ರೀಯರು. ಬ್ಲಾಗ್ ಬರಹಗಾರರು. ಈಗಾಗಲೇ FATAL ADMIRATION ಎಂಬ ಇಂಗ್ಲಿಷ್ ಕಾದಂಬರಿಯೊಂದನ್ನು ಕೂಡಾ ಬರೆದವರು.
ಅಚಾನಕ್ಕಾಗಿ ಮಾತಿಗೆ ಸಿಕ್ಕ ಇರ್ಫಾನ್ ಇಕ್ಬಾಲ್ ಘೆಟ್ಹಾ ತಾನೊಬ್ಬ ಸಾಮಾನ್ಯ ಮುಸಲ್ಮಾನ ಎಂದು ಪರಿಚಯ ಮಾಡಿಕೊಂಡರು. ಆದರೆ ಅವರು ಗುಜರಾತನ್ನು ಹೇಳುತ್ತಾ ಹೋದಂತೆ ಪತ್ರಿಕೆಗಳು ಬರೆಯದೇ ಇರುವ, ಟಿವಿಗಳು ತೋರಿಸದೇ ಇರುವ ಗುಜರಾತ್ ಇನ್ನೂ ಎಷ್ಟಿವೆ ಎಂದೆನಿಸುತ್ತಿತ್ತು. ಅವರು ಮಾತಾಡುತ್ತಿದ್ದರೆ “ಮೋದಿ ಮುಸಲ್ಮಾನರನ್ನು ಪ್ರತಿನಿಸುವುದಿಲ್ಲ” ಎಂದವರ ಮಾತುಗಳು ಸಮುದ್ರಪಾಲಾಗುತ್ತಿದ್ದವು.
ಇರ್ಫಾನ್ ಹೇಳುತ್ತಾ ಹೋದರು.
“ನಮ್ಮ ಗುಜರಾತಿನಲ್ಲಿ ಹುಟ್ಟಿ ವಿಶ್ವವಿಖ್ಯಾತರಾದವರಲ್ಲಿ ಗಾಂಧೀಜಿಯ ಅನಂತರದ ಹೆಸರು ಮೋದಿಯವರದ್ದೇ. ಪಟೇಲರೂ ಕೂಡಾ ಮಹಾವ್ಯಕ್ತಿಯೇ ಆದರೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದವರು ನಮ್ಮ ನರೇಂದ್ರ ಭಾಯಿಯೇ. ಅವರ ಪ್ರಭಾವವೆಷ್ಟಿದೆಯೆಂದರೆ ನನ್ನಂಥ ಒರ್ವ ಸಾಮಾನ್ಯ ಗುಜರಾತಿಯನ್ನೂ ಜನ ನನ್ನ ನಾಯಕನ ಹೆಸರಿನಿಂದಲೇ ಗುರುತ್ತಿಸುತ್ತಾರೆ. ನಮ್ಮನ್ನು ಪರಿಚಯವಾದ ತಕ್ಷಣ ಜನ ನಮ್ಮನ್ನು ಮೋದಿಯವರ ಬಗ್ಗೆ ಪ್ರಶ್ನಿಸುತ್ತಾರೆ. ತನ್ನೂರಿನ ಬಗ್ಗೆ ಹೆಮ್ಮೆ ಪಡದವನೂ ಕೂಡ ಇಂಥ ಅನುಭವಗಳಿಂದ ಹೆಮ್ಮೆ ಪಡುತ್ತಾನೆ. ಇಂಥ ಹೆಮ್ಮೆ-ಪುಳಕ ಎಷ್ಟು ರಾಜ್ಯದ ಪ್ರಜೆಗಳಿಗೆ ಸಿಕ್ಕಿದೆ? ಅದೃಷ್ಟವಶಾತ್ ಮೋದಿ ಭಾಯಿ ಗುಜರಾತಿಗಳಿಗೆ ಅದನ್ನು ಒದಗಿಸಿದ್ದಾರೆ. ನನ್ನನ್ನು ನಾನು ಗುಜರಾತಿ ಎಂದು ಪರಿಚಯ ಮಾಡಿಕೊಂಡಾಗ, ಪೋರ್ ಬಂದರಿನ ಸಮೀಪದವನು ಎಂದಾಗ ಜನ ಗಾಂಧೀಜಿ ಬಗ್ಗೆ ಪ್ರಶ್ನಿಸುವುದಿಲ್ಲ. ಮೋದಿ ಬಗ್ಗೆ ಪ್ರಶ್ನಿಸುತ್ತಾರೆ. ಇದು ಆಧುನಿಕ ಗುಜರಾತಿಗೆ ಸಲ್ಲುವ ಗೌರವ. ನನ್ನ ನಾಯಕ ನನಗೆ ನೀಡಿರುವ ಅಪೂರ್ವ ಅವಕಾಶ” ಎಂದು ಅವರು ಹೇಳುತ್ತಿದ್ದರೆ “ಏನ್ ಸ್ವಾಮಿ, ನಿಮ್ಮ ಮುಖ್ಯಮಂತ್ರಿಗಳು ಯಾವುದೋ ರಾಜ್ಯದ ವೇದಿಕೆಯಲ್ಲಿ ಕುರಿ ಹಿಡ್ಕೊಂಡು ನಿಂತಿರುವ ಫೋಟೋ ಬಂದಿದೆ ” ಎಂದು ಕೇಳಬೇಕಾದ ಸಂಕಟದ ಮುಂದೆ ಗುಜರಾತಿಗಳ ಹಿತಾನುಭವ ಅರ್ಥವಾಗಿತ್ತು.
” ಮೊದಲೆಲ್ಲಾ ಸರಕಾರಿ ಕಛೇರಿಗಳಲ್ಲಿ ಲಂಚವಿಲ್ಲದೆ ಕೆಲಸವೇ ನಡೆಯುತ್ತಿರಲಿಲ್ಲ. ಕಾಫಿ-ತಿಂಡಿಯನ್ನಾದರೂ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾಗಿತ್ತು. ಇನ್ನು ಬಡ ಮುಸಲ್ಮಾನ ಹೇಗೆ ಬದುಕಬೇಕು? ಆತನ ಯಾವ ಕೆಲಸವೂ ಆಗುತ್ತಿರಲಿಲ್ಲ. ಹಾಗಾಗಿ ಆತ ಬಡವನಾಗಿಯೇ ಇದ್ದ. ಮುಸಲ್ಮಾನನಾಗಿ ಹುಟ್ಟಿದ ಮೇಲೆ ಕಾಂಗ್ರೆಸಿಗೆ ಬಿಟ್ಟು ಬೇರೆ ಪಕ್ಷಕ್ಕೆ ವೋಟು ಹಾಕುವುದು ತಪ್ಪು ಎಂಬ ಭ್ರಮೆಯಲ್ಲಿ ಎಲ್ಲರೂ ಬಿದ್ದಿದ್ದೆವು. ನಿರಂತರ ನಡೆಯುತ್ತಿದ್ದ ಗಲಭೆಗಳು ಹಿಂದೂ ಮತ್ತು ಮುಸಲ್ಮಾನರ ಅಂತರವನ್ನು ಹೆಚ್ಚು ಮಾಡುತ್ತಿದ್ದವು. ಆದರೆ ಯಾವಾಗ ಮೋದೀಜಿ ಅಧಿಕಾರಕ್ಕೆ ಬಂದರೋ ಅಂದಿನಿಂದ ಪರಿಸ್ಥಿತಿಯೇ ಬದಲಾಗಿದೆ. ಈಗ ಸರಕಾರಿ ಕಛೇರಿಗಳಲ್ಲಿ ಕೆಲಸಗಳು ಶೀಘ್ರವಾಗಿ ನಡೆಯುತ್ತಿದೆ. ಸರಕಾರಿ ಕಛೇರಿಯ ವಾತಾವರಣ ನಂಬಲಸಾಧ್ಯವೆಂಬಂತೆ ಬದಲಾಗಿದೆ. ನಮ್ಮ ಊರಿನಲ್ಲಿ ಮೆಮನ್ ಮುಸಲ್ಮಾನರೇ ಬಹುಸಂಖ್ಯಾತರು. ಮೋದಿ ಬರುವವರೆಗೂ ನೀರಿನ ಬವಣೆ ತೀವ್ರವಾಗಿತ್ತು. ಮಳೆ ಇಲ್ಲ. ಬಯಲು ಸೀಮೆ, ವಿಪರೀತ ಸೆಕೆ. ಪ್ರತೀ ಬುಧವಾರ ಬಂತೆಂದರೆ ಕಿರಿಕಿರಿ ಉಂಟಾಗುತ್ತಿತ್ತು. ಬೆಳಿಗ್ಗೆ ಏಳಕ್ಕೆ ಕರೆಂಟು ಹೋದರೆ ಸಂಜೆ ಏಳಕ್ಕೆ ಬರುತ್ತಿತ್ತು. ಹಾಗಾಗಿ ಯಾವ ದಿನ ಮರೆತರೂ ಬುಧವಾರ ಮಾತ್ರ ಮರೆತುಹೋಗುತ್ತಿರಲಿಲ್ಲ. ಈಗ ನಮ್ಮೂರಿಗೆ ಬಂದು ನೋಡಿ, ನೀರಿನ ಸಮಸ್ಯೆ ಇಲ್ಲ. ಏಕೆಂದರೆ ಮೋದಿ ನರ್ಮದಾ ಯೋಜನೆ ಕೈಗೆತ್ತಿಕೊಂಡರು. ಬಯಲು ಸೀಮೆಗೂ ನೀರು ಹರಿಸಿದರು. ಕರೆಂಟಂತೂ ಹೋಗುವುದೇ ಇಲ್ಲ. ಹೇಗೆ ಬ್ರಾಹ್ಮಣರ ಮನೆಯಲ್ಲಿ ಕರೆಂಟು ಹೋಗುವುದಿಲ್ಲವೋ, ಪಟೇಲರ ಮನೆಯಲ್ಲಿ ಕರೆಂಟು ಹೋಗುವುದಿಲ್ಲವೋ. ಬನಿಯಾನ ಮನೆಯಲ್ಲಿ ಹೋಗುವುದಿಲ್ಲವೋ ಹಾಗೆಯೇ ಮುಸಲ್ಮಾನನ ಮನೆಯಲ್ಲೂ ಹೋಗುವುದಿಲ್ಲ. ಇನ್ನು ಮೋದಿಯವರನ್ನು ಮುಸಲ್ಮಾನರು ದೂರುವ ಮಾತೆಲ್ಲಿಂದ ಬಂತು?”
ಹೀಗೆ ಮೋದಿಯನ್ನು ದೂರುವ, ದ್ವೇಷಿಸುವ ಮುಸಲ್ಮಾನರು ಎಂಬ ಹಳೆಯ ಅಲಾಪಗಳೆಲ್ಲಾ ಈಗ ಗುಜರಾತಿನಲ್ಲಿ ನಡೆಯಲಾರವು. ರಾಜ್‌ಕೋಟ್‌ನ ಆಸುಪಾಸಿನ ಹಳ್ಳಿಗಳನ್ನೇ ತೆಗೆದುಕೊಂಡರೂ ಕೂಡಾ ಈ ಪ್ರದೇಶಗಳ ಮುಸಲ್ಮಾನರು ಬಡವರಾಗಿದ್ದವರು. ಸ್ವತಃ ಇರ್ಫಾನ್ ಹೇಳುವಂತೆ ಉಪ್ಲೇಟಾ ಸುತ್ತಮುತ್ತಲಿನ ೭೨ ಗ್ರಾಮಗಳಲ್ಲಿ ನೆಲೆಸಿರುವ ಮೆಮನ್ ಮುಸಲ್ಮಾನರ ಪರಿಸ್ಥಿತಿ ಮೋದಿ ಅಧಿಕಾರಕ್ಕೆ ಬರುವವರೆಗೂ ಹೀನಾಯವಾಗಿಯೇ ಇತ್ತು. ಅವರ ಸಣ್ಣ ಉದ್ಯಮಗಳಿಂದ ಕುಟುಂಬ ಸಾಗುತ್ತಿರಲಿಲ್ಲ. ಬ್ಯಾಂಕುಗಳು ಸಾಲ ಕೊಡುತ್ತಿರಲಿಲ್ಲ. ಇನ್ನು ವ್ಯಾಪಾರ ಉದ್ಧಾರವಾಗುವುದೆಂತು? ಇದೀಗ ಅದೇ ೭೨ ಗ್ರಾಮಗಳ ಮುಸ್ಲಿಮರೆಲ್ಲರೂ ಬಂಗಲೆ ನಿವಾಸಿಗಳು. ಮೋದಿ ಅಲ್ಲಿಗೆ ಕರೆಂಟು ಕೊಟ್ಟರು. ಸಾಲ ಒದಗಿಸಿದರು. ಈಗ ಉಪ್ಲೇಟಾ ತಾಲೂಕು ಗಾರ್ಮೆಂಟ್ ಮತ್ತು ಕರಕುಶಲ ಉದ್ಯಮಗಳಿಗೆ ಖ್ಯಾತವಾದ ಪ್ರದೇಶ. ಹಾಗೆಂದು ಅಲ್ಲಿನ ಮುಸಲ್ಮಾನರೆಲ್ಲರೂ ಶಾಲೆ ಅರ್ಧಕ್ಕೆ ಬಿಟ್ಟು ವ್ಯಾಪಾರಕ್ಕೆ ಇಳಿಯುತ್ತಿಲ್ಲ. ಈಗ ಅಲ್ಲಿನ ಮುಸಲ್ಮಾನರ ಕನಿಷ್ಠ ವಿದ್ಯಾರ್ಹತೆಯೇ ಪದವಿಯಂತೆ. ಹಾಗಾದರೆ ವಿದ್ಯಾವಂತ ಮುಸಲ್ಮಾನನೂ ಹುನ್ನಾರಕ್ಕೆ ಬಲಿಯಾಗುವನು ಎನ್ನುವ ಪಿಲಾಸಫಿ ಗುಜರಾತಿನಲ್ಲಿ ಸುಳ್ಳಾಗುವುದೇಕೆ? ಕಾರಣ ಮೋದಿಯಲ್ಲದೆ ಬೇರಾರೂ ಅಲ್ಲ.
ಇರ್ಫಾನ್ ಇಕ್ಬಾಲ್ ಮುಸ್ಲಿಮರ ಆರ್ಥಿಕ ಸ್ಥಿತಿಗತಿಯೊಟ್ಟಿಗೆ ಅವರ ಸಾಮಾಜಿಕ ಸ್ಥಿತಿಗಳನ್ನೂ ಹೇಳಿದರು.
” ಮೊದಲೆಲ್ಲಾ ನಮ್ಮೂರಲ್ಲಿ ಮುಸಲ್ಮಾನ ಏರಿಯಾ, ಹಿಂದು ಏರಿಯಾ ಎಂಬ ಮಾನಸಿಕ ಬೇಲಿ ಭದ್ರವಾಗಿತ್ತು. ನಾವು ಮುಸಲ್ಮಾನರು ರಾತ್ರಿಯಾಗುತ್ತಿದ್ದಂತೆಯೇ ಹಿಂದೂ ಏರಿಯಾಗಳಿಗೆ ಹೋಗಲು ಹೆದರುತ್ತಿದ್ದೆವು. ಹಿಂದುಗಳೂ ನಮ್ಮ ಏರಿಯಾಗಳಿಗೆ ಬರಲು ಹೆದರುತ್ತಿದ್ದರು. ಈಗ ಅಂಥ ಹೆದರಿಕೆ ಯಾರಿಗೂ ಇಲ್ಲ. ಈಗ ಮನಸ್ಸು ಒಟ್ಟಾಗಿದೆ. ೨೦೦೨ರಲ್ಲಿ ಏನು ನಡೆಯಬಾರದ್ದು ನಡೆಯಿತೋ, ಅದರ ಅನಂತರ ಒಂದೇ ಒಂದು ಸಣ್ಣ ಗಲಭೆಯೂ ನಡೆಲಿಲ್ಲ. ನಮ್ಮಲ್ಲಿ ಈಗ ಸಮೃದ್ಧಿ ಬಂದಿದೆ, ಶಾಂತಿ ಇದೆ, ಸೌಹಾರ್ಧತೆ ಮೂಡಿದೆ. ಇವೆಲ್ಲಕ್ಕೂ ಮೂಲ ಕಾರಣ ಮೋದಿ ಭಾಯಿ. ಅಂಥವರನ್ನು ಯಾರ್ಯಾರೋ ಬಯ್ಯುವರೆಂದು ನಾವು ಹೇಗೆ ತಾನೇ ಬಯ್ಯಲು ಸಾಧ್ಯ ಹೇಳಿ? “ಹಾಗಾದರೆ ಇವತ್ತಿಗೂ ಕೆಲವು ಮಾಧ್ಯಮಗಳು, ರಾಜಕಾರಣಿಗಳು, ಎನ್‌ಜಿಒಗಳು ಮೋದಿಯನ್ನು ಸಾವಿನ ವ್ಯಾಪಾರಿ, ಮುಸಲ್ಮಾನ ದ್ವೇಷಿ ಎನ್ನುತ್ತಿರುವರಲ್ಲಾ? ನಿಮಗೆಂದಾದರೂ ಹಾಗೆನಿಸಿದ್ದಿದೆಯೇ ಎಂದು ಇರ್ಫಾನ್ ಅವರನ್ನು ಕೇಳಿದರೆ ” ಆ ಎಲ್ಲಾ ತೆಗಳಿಕೆಗಳು ಗುಜರಾತಿ ಮುಸಲ್ಮಾನರ ಧ್ವನಿಗಳಲ್ಲ. ತಮಗೆ ಧೈರ್ಯ ಕೊಟ್ಟವರ, ಬದುಕು ಕೊಟ್ಟವರ ಬಗ್ಗೆ ಗುಜರಾತಿ ಮುಸಲ್ಮಾನರು ಹಾಗೆ ಹೇಳಲು ಸಾಧ್ಯವೇ ಇಲ್ಲ. ಮೋದಿಯವರು ನರಮೇಧ ನಡೆಸಿದ್ದಿದ್ದರೆ ಅದನ್ನು ತೀರ್ಮಾನಿಸಲು ಸಿಬಿಐ ಇದೆ, ನ್ಯಾಯಾಂಗವಿದೆ, ಯೋಗ್ಯ ವ್ಯವಸ್ಥೆಗಳಿವೆ. ಆದರೆ ಅವೆಲ್ಲವೂ ಮೋದಿಯವರನ್ನು ನಿರಪರಾಧಿಎಂದಿವೆ. ಮೋದಿ ಟೀಕಾಕಾರರಿಗೆ ಮೋದಿ ಬಗ್ಗೆ ಭರವಸೆ ಇಲ್ಲವೆಂದರೆ ನ್ಯಾಯಾಂಗದ ಮೇಲಾದರೂ ಭರವಸೆ ಇಡಬೇಕಲ್ಲವೇ? ಅವರೆಲ್ಲರೂ ಮೋದಿ ಮುಸ್ಲಿಮರನ್ನು ಕೊಂದ ಸಾಕ್ಷಿಗಳನ್ನು ನಮ್ಮೆದುರು ಇಡಲಿ. ಆಗ ನಾವೂ ನಂಬುತ್ತೇವೆ” ಎಂದರು. ಆದರೂ ಗುಜರಾತಿನ ಮುಸಲ್ಮಾನರು ಭಯದಿಂದಲೇ ಬದುಕುತ್ತಿದ್ದಾರೆ ಎಂದು ಕರ್ನಾಟಕದಲ್ಲೂ ಸೆಮಿನಾರುಗಳು ನಡೆಯುತ್ತವಲ್ಲಾ ಇರ್ಫಾನ್ ಸಾಬ್ ಎಂದಾಗ ಅವರು ಅದು ನನಗೂ ಗೊತ್ತು ಎನ್ನುವರು. ” ಹಾಗಾದರೆ ದೆಹಲಿಯಲ್ಲಿ ಮುಸಲ್ಮಾನರು ಸುರಕ್ಷಿತರಿರುವರೇ? ಆಂಧ್ರದಲ್ಲಿ ಮುಸಲ್ಮಾನರಿಗೆ ಸುವರ್ಣಯುಗವೇ? ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಚೆನ್ನಾಗಿದೆಯೇ? ಹೊರಗಿನ ಜನರ ಬಳಿ ಇವರು ಗುಜರಾತಿನ ಮುಸಲ್ಮಾನರು ಭಯದಿಂದ ಬದುಕುತ್ತಿದ್ದಾರೆ ಎಂಬ ಕಥೆಯನ್ನು ನಂಬಿಸಬಹುದೇನೋ. ಆದರೆ ಇದು ನಮಗೆ ಕೇವಲ ಜೋಕಿನ ಸಂಗತಿ. ಇಂದು ಗುಜರಾತಿನಲ್ಲಿ ಟಾಟಾ, ಇನ್ಫೋಸಿಸ್, ವಿಪ್ರೋ, ರಿಲಾಯನ್ಸ್ ಮೊದಲಾದ ಕಂಪನಿಗಳಿವೆ. ಅವೆಲ್ಲದರಲ್ಲೂ ಮುಸಲ್ಮಾನ ಕಾರ್ಮಿಕರು ಹಿಂದೂ ಕಾರ್ಮಿಕರಷ್ಟೇ ಇದ್ದಾರೆ. ಒಂದು ವೇಳೆ ಮುಸಲ್ಮಾನರಿಗೆ ಭಯವಿದ್ದಿದ್ದೇ ಆಗಿದ್ದರೆ ಇದು ಹೇಗೆ ಸಾಧ್ಯವಾಗುತ್ತಿತ್ತು? ಅಂಥಲ್ಲಿ ಬಂದು ಬಂಡವಾಳ ಹೂಡಲು ಅಜೀಂಪ್ರೇಮ್‌ಜಿ, ಅಂಬಾನಿ, ನಾರಾಯಣಮೂರ್ತಿ, ಟಾಟಾದವರಿಗೇನು ಹುಚ್ಚೇ? ಇಂದಿಗೂ ಕೆಲವು ಘಟನೆಗಳು ಹೊರಗಿನ ಜನಕ್ಕೆ ಸುದ್ಧಿಯಾಗುವುದಿಲ್ಲ. ಮುಖ್ಯಮಂತ್ರಿಗಳು ನಮ್ಮ ಹಬ್ಬಗಳಿಗೆ ಶುಭ ಹಾರೈಸುತ್ತಾರೆ. ಮೋದಿಜೀ ಮುಸಲ್ಮಾನ ದ್ವೇಷಿ ಆಗಿದ್ದರೆ ಪಂಚಾಯತ್, ಪಾಲಿಕೆಗಳಲ್ಲಿ ಮುಸಲ್ಮಾನರಿಗೆ ಟಿಕೇಟುಗಳನ್ನು ಕೊಡುತ್ತಿದ್ದರೇ? ಆದರೆ ಸ್ಥಳೀಯ ಚುನಾವಣೆಗಳಲ್ಲಿ ಆರಿಸಿಬಂದವರಲ್ಲಿ ಮುಸಲ್ಮಾನರೇ ಹೆಚ್ಚಿದ್ದಾರೆ. ಇತ್ತೀಚೆಗೆ ಇರ್ಫಾನ್ ಪಠಾಣ್ ತನ್ನ ಸೋದರ ಯೂಸಫ್ ಪಠಾಣನ ಮದುವೆಗೆ ಕರೆಯಲು ಮೋದೀಜಿ ಮನೆಗೆ ಹೋಗಿದ್ದ. ಸುರಕ್ಷಿತವಾಗಿಯೇ ಹೊರಬಂದ. ದಿನಂಪ್ರತಿ ಹತ್ತಾರು ಮುಸಲ್ಮಾನರು ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಾರೆ. ಯಾರೂ ಕೊಲೆಯಾಗಿಹೋಗಿಲ್ಲ. ಇತಿಹಾಸವನ್ನು ಅರಿತು ಹೇಳಬೇಕೆಂದರೆ ನಾವು ಮೊದಲಿಗಿಂತಲೂ ಈಗ ಸೇಫಾಗಿದ್ದೇವೆ. ದೇಶದ ಯಾವುದೇ ಭಾಗದಲ್ಲಿ ಬಾಂಬ್ ಸ್ಪೋಟವಾದರೂ ಮೊದಲು ಸಂಶಯದ ಮೇಲೆ ಬಂಧಿತರಾಗುವವರು ಮುಸಲ್ಮಾನರೇ. ಆದರೆ ಗುಜರಾತಿನಲ್ಲಿ ಇದು ನಡೆಯುವುದಿಲ್ಲ. ಏಕೆಂದರೆ ನಮ್ಮ ಮೇಲೆ ಯಾರಿಗೂ ಸಂದೇಹವಿಲ್ಲ. ನಾವು ಬಾಂಬ್ ಸ್ಪೋಟಿಸುವುದಿಲ್ಲ ಎಂದು ಸರಕಾರಕ್ಕೂ ಗೊತ್ತಿದೆ. ಸಂಶಯಾಸ್ಪದರನ್ನು ನಾವೇ ಸೂಚಿಸುತ್ತೇವೆ. ಈ ಮಾತನ್ನು ಕಾಂಗ್ರೆಸ್ ಸರಕಾರಗಳಿರುವ ರಾಜ್ಯಗಳಿಗೆ ಹೋಲಿಸಿ ಹೇಳಬಹುದೇ?”
ಇರ್ಫಾನ್ ಮಾತಾಡುತ್ತಲೇ ಹೋದರು. ಆಗಾಗ್ಗೆ ಪುಳಕಗೊಳ್ಳುತ್ತಿದ್ದರು. ನಾನೊಬ್ಬ ಕಚ್ಛೀ ಭಾಷೆ ಮಾತಾಡುವ ಮುಸಲ್ಮಾನ ಎಂದರು. ಮೋದಿ ಮುಖ್ಯಮಂತ್ರಿಯಾಗದಿರುತ್ತಿದ್ದರೆ ನಮಗೆಲ್ಲಾ ಕಷ್ಟವಿತ್ತು ಎಂದರು. ಮೋದಿ ಮುಸಲ್ಮಾನರ ಮನಸ್ಸಿಗೆ ಆಪ್ತವಾಗಿದ್ದಾರೆ ಎಂದರು. ಮೋದಿ ಬಗ್ಗೆ ಮಾತಾಡುವವರು ಗುಜರಾತನ್ನು, ಅಲ್ಲಿನ ಮುಸಲ್ಮಾನರನ್ನು ಅರಿತು ಮಾತಾಡಬೇಕು ಎಂದರು. ನಾವಂತೂ ನಮ್ಮ ಮುಖ್ಯಮಂತ್ರಿ ಪ್ರಧಾನ ಮಂತ್ರಿಯಾಗುವುದನ್ನು ಕಾತರದಿಂದ ಕಾಯುತ್ತಿದ್ದೇವೆ ಎಂದರು. ಇರ್ಫಾನ್ ಅವರ ಎದೆಯಾಳದಿಂದ ಉಕ್ಕುತ್ತಿದ್ದ ಖುಷಿ, ಅಭಿಮಾನಗಳ ಮುಂದೆ ಮೋದಿ ಅವರ ಸ್ವತ್ತೇನೋ ಎನ್ನಿಸಲು ಪ್ರಾರಂಭವಾಯಿತು. ಅಂಥ ನಾಯಕನನ್ನು ಪಡೆದ ಗುಜರಾತೇ ಧನ್ಯ ಎನಿಸುತ್ತಿತ್ತು. ಅಂಥದ್ದೇ ದನಿಯನ್ನು ಟ್ವಿಟರ್‌ನಲ್ಲಿ ಅಸ್ಮಾ ಖಾನ್ ಪಠಾಣ್ ಎಂಬ ಹುಡುಗಿ ” ಮೋದಿ ರಾಷ್ಟ್ರೀಯವಾದಿ. ಆಂಥ ರಾಷ್ಟ್ರೀಯವಾದವನ್ನು ಮುಸ್ಲಿಂ ದ್ವೇಷ ಎಂದು ಅರ್ಥೈಸಬಾರದು” ಎಂದು ಉಲಿದಿದ್ದು, ಅಬ್ದುಲ್ ಜಬ್ಬಾರ್ ಎಂಬವರು”ಮಥುರಾದಲ್ಲಿ ನಾವು ಗೋಹತ್ಯೆಯನ್ನು ಸಹಿಸುವುದಿಲ್ಲ” ಎಂದು ಗುಡುಗಿದ್ದು,(ಔಟ್‌ಲುಕ್, ಜನವರಿ ೧೦, ಅಂತರ್ಜಾಲ ಸಂಚಿಕೆ). ೨೦೦೨ರ ದಂಗೆಯ ಅನಂತರ ಮೌಲಾನಾ ಇಸಾ ಮನ್ಸೂರಿ ಎಂಬ ವಿದ್ವಾಂಸ ” ಮೋದಿ ಸಾಬ್ ನೀವು ನ್ಯಾಯಕ್ಕಾಗಿ ಹೋರಾಡಿ. ನಮ್ಮ ಚಿಂತೆ ಬಿಡಿ. ನಾವಿರುವವರು ಶೇ.೧೫ರಷ್ಟು. ದಂಗೆಯಲ್ಲಿ ಹೆಚ್ಚು ನೊಂದವರು ಹಿಂದು ಬಾಂಧವರು” ಎಂದು ಮುಖ್ಯಮಂತ್ರಿಗಳಿಗೆ ಧೈರ್ಯ ತುಂಬಿದ್ದು, ಕಟ್ಟರ್ ಮತಾಂಧನಾಗಿದ್ದ ಜಾಫರ್ ಸರೇಶ್‌ವಾಲಾ ಎಂಬ ಉದ್ಯಮಿ ಕ್ರಮೇಣ ಮೋದಿ ಮೋಡಿಗೊಳಗಾಗಿದ್ದು ಎಲ್ಲವೂ ನೆನಪಾಗುತ್ತಿತ್ತು. ಗುಜರಾತಿನ ಆರು ಕೋಟಿ ಜನರಂತೆ ದೇಶದ ನೂರಿಪ್ಪತ್ತೆಂಟು ಕೋಟಿ ಆಗಬಾರದೇ ಎನಿಸುತ್ತಿತ್ತು.
ಅಷ್ಟಕ್ಕೂ ಈ ಮೋಯ್ಲಿಯವರಿಗೆ ಮೋದಿಯನ್ನು ಮುಸಲ್ಮಾನರು ಒಪ್ಪಲಾರರು ಎಂದು ಏಕೆ ಅನಿಸಿತ್ತೋ ಗೊತ್ತಾಗುತ್ತಿಲ್ಲ. ಅಸಲು ಮೋಯ್ಲಿಗೆ ಸರಿಯಾಗಿ ರಾಮಾಯಣವೇ ಅರ್ಥವಾಗಿಲ್ಲ. ಇನ್ನು ಮೋದಿ ಹೇಗೆ ಅರ್ಥವಾದಾರು? ಕಳೆದ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಮೋದಿ ಬೆಂಗಳೂರಿಗೆ ಬಂದಿದ್ದಾಗ ಅವರು ಮುಸ್ಲಿಮರನ್ನೇನೂ ಬಯ್ಯಲಿಲ್ಲ. ಮಂಗಳೂರಿಗೆ ಬಂದಿದ್ದಾಗಲೂ ಈ ಬ್ಯಾರಿಗಳನ್ನು ಓಡಿಸಿ ಎನ್ನಲಿಲ್ಲ, ಬೆಳಗಾವಿಯಲ್ಲಿ ಕೂಡಾ ಮುಸ್ಲಿಮರನ್ನು ಪ್ರಸ್ತಾಪಿಸಲೇ ಇಲ್ಲ. ದೆಹಲಿಯಲ್ಲಿ ಮ್ಯಾನೇಜ್‌ಮೆಂಟ್ ಬಗೆಗಿನ ಉಪನ್ಯಾಸದಲ್ಲೂ ಅವರು ಮುಸ್ಲಿಮರನ್ನು ಬಯ್ಯಲಿಲ್ಲ. ಕಲ್ಕತ್ತಾದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸುವಾಗಲೂ ಬಯ್ಯಲಿಲ್ಲ. ಕಳೆದ ವರ್ಷ ಗೂಗಲ್ ಹ್ಯಾಂಗ್‌ಔಟ್‌ನಲ್ಲೂ ಕೂಡಾ ಮುಸ್ಲಿಮರನ್ನು ಬಯ್ಯಲಿಲ್ಲ. ಅವರ ಯಾವ ಭಾಷಣಗಳಲ್ಲೂ ವಿಷಯಾಂತರವಾಗುವುದಿಲ್ಲ. ಮುಸ್ಲಿಮರನ್ನು ಬಯ್ಯುವುದು ಬಿಡಿ, ಕನಿಷ್ಠ ಅವರ ಇತ್ತೀಚಿನ ಭಾಷಣಗಳಲ್ಲೆಲ್ಲೂ ಹಿಂದೂ ಎಂಬ ಪದಪ್ರಯೋಗಮಾಡಿದ್ದನ್ನೇ ಯಾರೂ ಕೇಳಿಲ್ಲ.
ಮೋದಿಯಿಂದ ಗುಜರಾತಿ ಮುಸಲ್ಮಾನರ ಹೊಸ ಶಕೆಯೊಂದು ಪ್ರಾರಂಭವಾಗಿದೆ. ಕರ್ನಾಟಕದ ಮುಸಲ್ಮಾನರು ಮೋಯ್ಲಿ ಮಾತಿಗೋ, ಜುಜುಬಿ ಯೂನಿವರ್ಷಿಟಿಗೋ ಆಸೆಪಟ್ಟು ಕೆಡುವರೋ ಏನೋ
ನಿನ್ನೆ ರಾತ್ರಿ ಇಲ್ಲಿ ಯಾವುದೊ ಮಹಾನುಭಾವರು ಹಾಕಿದ ಕಮೆಂಟ್ ಓದಿದ್ದೆ..ಇವತ್ತು ಇಲ್ಲಿಲ್ಲ ಅದು.ಸ್ವಕುಚಮರ್ಧನ ಅಂತೆನೊ ಬರೆದಿದ್ದರು..ಹಾಗಂದ್ರೇ ಏನು ಅಂತ ಈ ಲೇಖನ ಓದಿದರೆ ಅರ್ಥವಾಗುತ್ತೆ..ಅದಕ್ಕೆ ಬಂದಿರುವಂತಹ ಪ್ರತಿಕ್ರಿಯೆಗಳನ್ನು ಕೂಡ ಓದಿ..
http://www.sunday-guardian.com/investigation/development-will-not-shield-modi-from-his-past.
ಜಗದೀಶ ಟೈಟ್ಲರ್ ,ಸಜ್ಜನಕುಮಾರಗಳನ್ನು ನಾಚಿಕೆಯಿಲ್ಲದೆ ಅಪ್ಪಿಕೊಳ್ಳಲು ಹಿಂಜರಿಯದ ಜನ ಬೇರೆಯವರಿಗೆ ಕೋಮುಸೌಹಾರ್ದದ ಬುದ್ದಿ ಹೇಳೋಕೆ ಹೊರಡ್ತಾರೆ..
ಮೋದಿಯವರನ್ನು ಹೊಗಳಿ ಅಟ್ಟಕ್ಕೇರಿಸುವ ಪ್ರಯತ್ನಗಳು ಕೂಡ ದುರಂತಕಾರಿಯೇ..ಈಗಿನ ಪರಿಸ್ಥಿತಿ ಅವರು ಉಳಿದೆಲ್ಲರಿಗಿಂತ ಉತ್ತಮರು, ಅಭಿವೃದ್ಧಿಯ ನಿರೀಕ್ಷೆ ಮಾಡಬಹುದು ಎಂಬುದೊಂದೆ ಸದ್ಯದ ಸತ್ಯ. ಅತಿಯಾದ ನಿರೀಕ್ಷೆ ನಿರಾಸೆಯಲ್ಲಿ ಕೊನೆಯಾಗುತ್ತದೆ. ಈ ಭೃಷ್ಟ ಕಾಂಗ್ರೇಸಿಗರು ಮಾಡಿದ್ದು ತೊಳೆದು, ಒಂದು ಹಂತಕ್ಕೆ ತರಲೇ ಇನ್ನು ಹತ್ತು ವರ್ಷವಾದರೂ ಬೇಕು.
ಮೋದಿ ರಾಮಮಂದಿರ ಅದು ಇದು ಅಂತ ಕ್ಷಣಿಕ ಜನಪ್ರಿಯತೆಗಳ ಸುದ್ದಿಗೆ ಹೋಗಬಾರದು…ಸಂದರ್ಭ ಕಾದು ಗೌ ಗೌ ಎನ್ನುವ, ಕಡ್ಡಿಯನ್ನೇ ಗುಡ್ಡ ಮಾಡುವವರ ಬಾಯಿಗೆ ಸುಮ್ಮನೆ ಆಹಾರ ಕೊಡಬಾರದು. ಈವತ್ತಿನ ಜನಕ್ಕೆ ಈ ಮಂದಿರ ರಾಜಕೀಯ ಪಥ್ಯವೂ ಅಲ್ಲ…ಗುಜರಾತಿನಲ್ಲಿ ಕಳೆದ ಹತ್ತು ವರ್ಷಗಳಿಂದ ಏನು ಆಗಿದೆಯೊ ಅಂತ ಅಬಿವೃದ್ದಿಯೇ ನಾಕು..