ಹನಿ ಹನಿ ಪ್ರೇಂ ಕಹಾನಿ
– ಮಧು ಚಂದ್ರ, ಭದ್ರಾವತಿ
ಅತಿಥಿಗಳಿಗೆ ಕುಡಿಯಲು ನೀರು ಕೊಟ್ಟು ಉಪಚರಿಸುತ್ತಿರಿ. ಇದು ಅನಾದಿ ಕಾಲದಿಂದಲೂ ನಡೆದು ಬಂದ ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ತಪ್ಪದೆ ಪಾಲಿಸುವವರನ್ನು ನಾವು ಭಾರತೀಯನೆನ್ನಬಹುದು.ನೀರನ್ನು ಕೊಟ್ಟು ಉಪಚರಿಸುವುದು ಭಾರತೀಯತೆ, ನೀರು ಇಲ್ಲದಿದ್ದರೆ ಮತ್ತೇನು ಮಾಡುವಿರಿ ಎಂದು ಎಂದಾದರೂ ಯೋಚಿಸಿದ್ದಿರ? ಬಹುಶ ಇರಲಿಕ್ಕಿಲ್ಲ. ಕಾರಣ ಇಷ್ಟೇ ನಮ್ಮಲ್ಲಿ ನೀರಿನ ಮೂಲ ಮತ್ತು ಅಂತರ್ಜಲಕ್ಕೆ ಕೊರತೆ ಇಲ್ಲ ಎನ್ನುವ ಹುಚ್ಚು ಪ್ರಮೇಯ ಇರಬಹುದು. ಈ ಹುಚ್ಚು ಪ್ರಮೇಯವೇ ಇಂದಿನ “ಹನಿ ಹನಿ ಪ್ರೇಂ ಕಹಾನಿ” ಲೇಖನ. ಹಿಂದೆ ನಾನೊಂದು ಓದಿದದ ಕಥೆಯನ್ನು ನಿಮಗೆ ಹೇಳಬಯಸುತ್ತೇನೆ. ಇದು ನೈಜ ಘಟನೆಯೋ ಇಲ್ಲವೋ ನನಗೆ ಅರಿವಿಲ್ಲ ಅದರೂ ಲೇಖನಕ್ಕೆ ಸೂಕ್ತ ಎಂದೆನಿಸುತು.
ವಿಶ್ವವನ್ನೇ ಗೆದ್ದ ಅಲೆಗ್ಸಾಂಡರ್ ಯಾರಿಗೆ ಗೊತ್ತಿಲ್ಲ ಹೇಳಿ.
ಹಲವು ದೇಶಗಳನ್ನುಅಲೆಗ್ಸಾಂಡರ್ ಗೆದ್ದು ಮರುಭೂಮಿಯ ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ಅವನ ಉಗ್ರಾಣದಲ್ಲಿ ಇದ್ದ ಆಹಾರ ಸಾಮಗ್ರಿಗಳು ಖಾಲಿಯಾಗುತ್ತ ಬಂದವು. ಇನ್ನೇನು ಮುಂದಿನ ಊರಿನಲ್ಲಿ ಸಂಗ್ರಹಿಸಬಹುದು ಎಂದು ಮುಂದೆ ಮುಂದೆ ನಡೆದನು. ಆದರೆ ಎತ್ತ ನೋಡಿದರು, ಬರಿ ಮರುಭೂಮಿ ಎಲ್ಲಿಯೋ ಊರಿರುವ ಲಕ್ಷಣಗಳು ಕಾಣಲಿಲ್ಲ. ಕಡೆಗೆ ಅವನ ಹತ್ತಿರವಿದ್ದ ಆಹಾರ ಸಾಮಗ್ರಿಗಳು ಖಾಲಿಯಾದವು. ವಿಶ್ವವನ್ನು ಗೆದ್ದ ವೀರನಿಗೆ ಹೊಟ್ಟೆ ಹಸಿವನ್ನು ಗೆಲ್ಲಲಾಗಲಿಲ್ಲ.
ತಾನು ನೀರು ಕುಡಿಯದೆ ಇದ್ದರೆ ಬದುಕುವುದಿಲ್ಲ ಅರಿತನು. ಅದೇ ಸಮಯದಲ್ಲಿ ದಾರಿಹೋಕನೋಬ್ಬನು ಸಿಕ್ಕನು. ಅವನ ಹತ್ತಿರ ಇದ್ದ ನೀರನ್ನು ಕಂಡು ” ನನಗೆ ನಿನ್ನ ಹತ್ತಿರ ಇರುವ ನೀರು ಬೇಕು, ನನಗೆ ಕೊಡು. ದಯವಿಟ್ಟು, ಏನು ಬೇಕು ಕೇಳು ನಾನು ಕೊಡುತ್ತೇನೆ ” ಎಂದು ಅಲೆಗ್ಸಾಂಡರ್ ಹೇಳಿದನು.
“ಹೌದ!, ಹಾಗಾದರೆ ನಾನು ಏನು ಕೇಳಿದರು ಕೊಡುವೆಯ?” ಎಂದು ದಾರಿಹೋಕನು ಕೇಳಿದನು.
“ನಿನಗೆ ೧೦೦೦ ಬಂಗಾರದ ನಾಣ್ಯ ಕೊಡುತ್ತೇನೆ” ಎಂದನು ಅಲೆಗ್ಸಾಂಡರ್.
” ಅದಕ್ಕೆ ನನ್ನ ಹತ್ತಿರ ಇರುವ ನೀರಿಗೆ ಬೆಲೆ ಅಷ್ಟೇನಾ” ಎಂದು ದಾರಿಹೋಕನು ಕೇಳಿದನು.
” ನಿನಗೆ ೧೦ ಗ್ರಾಮಗಳನ್ನು ಕೊಡುತ್ತೇನೆ ” ಎಂದನು ಅಲೆಗ್ಸಾಂಡರ್.
ಮತ್ತೆ ಅದೇ ಪ್ರಶ್ನೆ ” ನನ್ನ ಹತ್ತಿರ ಇರುವ ನೀರಿಗೆ ಬೆಲೆ ಅಷ್ಟೇನಾ” ಎಂದು ದಾರಿಹೋಕನು ಕೇಳಿದನು.
ಹೀಗೆ ಸುಮ್ಮನೆ ಮಾತು ಮುಂದುವರೆಯಿತು.
ಆದರೆ ದಾರಿಹೋಕನು ಅಲೆಗ್ಸಾಂಡರನ ಆಮಿಷಗಳಿಗೆ ಸಮ್ಮತಿಸಲಿಲ್ಲ. ಆದರೆ ಹಸಿವು ಅಲೆಗ್ಸಾಂಡರನಿಗೆ ನೀರು ಕುಡಿದರೆ ಮಾತ್ರ ಬದುಕುತ್ತೇನೆ ಎನ್ನುವ ಹಂತಕ್ಕೆ ತಂದಿಟ್ಟಿತು.
” ಕಡೆಗೆ ನೀನೆ ಕೇಳು , ನಿನಗೆ ಏನು ಬೇಕು ಅದನ್ನೇ ನಾನು ಕೊಡುತ್ತೇನೆ ” ಅಲೆಗ್ಸಾಂಡರ ಕೇಳಿದನು..
“ನೀನು ಗೆದ್ದಿರುವ ಸಾಮ್ರಾಜ್ಯ ನನಗೆ ಬೇಕು” ಎಂದು ದಾರಿಹೋಕನು ಕೇಳುತ್ತಾನೆ.
ಆಗ ಅಲೆಗ್ಸಾಂಡರನಿಗೆ ಜೀವನದಲ್ಲಿ ಯಾವುದು ಮುಖ್ಯ ಎಂದು ಅರಿವಾಗುತ್ತದೆ. ಅಲೆಗ್ಸಾಂಡರನಲ್ಲಿ ಅದ ಬದಲಾವಣೆಗಳನ್ನು ಕಂಡ ದಾರಿಹೋಕನು
” ನೋಡು ನೀನು ಸಂಪಾದಿಸಿದ ಸಾಮ್ರಾಜ್ಯದ ಬೆಲೆ ಕೇವಲ ಒಂದು ಗುಟುಕು ನೀರಿಗೆ ಸಮ. ಈಗಲಾದರು ತಿಳಿಯಿತೇ ನಿನಗೆ ಬದುಕಲು ಏನು ಅಗತ್ಯ” ಎಂದು ಹೇಳಿ ನೀರಡಿಸಿದನು.
ಹನಿ ಹನಿ ಪ್ರೇಂ ಕಹಾನಿ ಮಹತ್ವ ನಿಮಗೆ ಈಗ ಚೆನ್ನಾಗಿ ಅರಿವಾಯಿತೆಂದು ನನ್ನ ಭಾವನೆ. ಬೇಸಿಗೆಯಲ್ಲಿ ನೀರಿಲ್ಲದೆ ದಿನಗಟ್ಟಲೆ ಕಳೆದವರಿಗೆ, ನೀರಿಲ್ಲದೆ ಒಣಗುತ್ತಿರುವ ಪೈರನ್ನು ಕಂಡ ರೈತನಿಗೆ, ಸ್ನಾನ ಮಾಡುವಾಗ, ಪಾತ್ರೆ ತೊಳೆಯುವಾಗ , ಬಟ್ಟೆ ಓಗೆಯುವಾಗ ನೀರು ನಿಂತಾಗ ಅನುಭವಿಸಿದ ಸುಖ ಉಂಡವರಿಗೆ ಮಾತ್ರ ನೀರಿನ ಮಹಿಮೆ ಗೊತ್ತು. ಇಂದು ನೀರಿಗಾಗಿ ಮನೆಗಳ ಮಧ್ಯೆ, ಊರಿನ ಮಧ್ಯೆ , ರಾಜ್ಯ , ದೇಶಗಳ ಮಧ್ಯೆ ಕಲಹಗಳು ಏರ್ಪಟ್ಟಿವೆ. ಮುಂದೆ ಪರಿಸ್ಥಿತಿ ಕೈ ಮೀರಿ ಹೋದರು ಆಶ್ಚರ್ಯವೇನಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಇಂದಿನಿಂದ ಆರಂಭಿಸಿದರೆ ಒಳಿತು.
ನೀವು ಮಾಡಬೇಕಾದದು ಇಷ್ಟೇ,
- ಪಾತ್ರೆ, ಕೈ , ಮುಖ ತೊಳೆಯುವಾಗ ಸುಮ್ಮನೆ ನೀರನ್ನು ನಲ್ಲಿಯಿಂದ ಬೀಡಬೇಡಿ. ಅಗತ್ಯ ಇದ್ದಾಗ ಮಾತ್ರ ಬಳಸಿ.
- ಸ್ನಾನ ಮಾಡುವಾಗ ಬಾತ್ ಟಬ್ ಅಥವಾ ಶವರ್ ಹೆಚ್ಚಾಗಿ ಬಳಸಬೇಡಿ. ಬಕೇಟ್ನಲ್ಲಿ ನೀರು ಬಳಸಿ.
- ನಳ ಮತ್ತು ಕೊಳವೆಗಳು ಹಾಳಾಗಿದ್ದರೆ ತಕ್ಷಣ ಬದಲಿಸಿ, ಹೊಸ ನಳ ಮತ್ತು ಕೊಳವೆ ಹಾಕಿಸುವುದರಿಂದ ನಿಮ್ಮ ಹಣದ ಹತ್ತರಷ್ಟು , ಬೇರೆಯವರ ಹಣ ಮತ್ತು ನೀರನ್ನು ಉಳಿಸಬಹುದು. ವರ್ಷಕ್ಕೆ ಸುಮಾರು ೧೬೦೦೦ ಲೀಟರ್ ನೀರನ್ನು ನೀವು ಉಳಿಸಬಹುದು.
- ತರಕಾರಿ ಮತ್ತು ಹಣ್ಣುಗಳನ್ನು ಒಂದು ಪಾತ್ರೆಯಲ್ಲಿ ತೊಳೆದು ನಂತರ ಅದೇ ನೀರನ್ನು ಗಿಡಗಳಿಗೆ ಹಾಕಿ.
- ನಲ್ಲಿಗಳಿಂದ ನೀರು ಜಿನುಗುತ್ತಿದ್ದರೆ ನಲ್ಲಿಗಳನ್ನು ಸರಿಯಾಗಿ ತಿರುವಿ.(ಕಛೇರಿಗಳಲ್ಲಿ ಕೆಲಸ ಮಾಡುವವರು ಮಾಡುವ ನೀಚ ಕೆಲಸ ಎಂದರೆ, ನಲ್ಲಿಯನ್ನು ಎಂದಿಗೂ ಸರಿಯಾಗಿ ನೀರು ಸೋರದಂತೆ ತಿರುಗಿಸದೇ ಇರುರುದು. ಯಾರಪ್ಪನ ಮನೆ ಗಂಟು ಹೋಗಬೇಕು ಹೇಳಿ ಅದಕ್ಕೆಹಾಗೆ ಮಾಡುತ್ತಾರೆ)
- ಡಿಶ್ ವಾಶರ್ ಅಥವಾ ವಾಶಿಂಗ್ ಮಶೀನ್ ಬಳಸುವ ಬದಲು ತಾವೇ ತೊಳೆದರೆ ಅರ್ಧದಷ್ಟು ನೀರು, ವಿದ್ಯುತ್ ಮತ್ತು ಹಣವನ್ನು ಉಳಿಸಬಹುದು. ಅದು ಕಷ್ಟವಾದಲ್ಲಿ ಕೆಲಸದವರನ್ನು ಇಟ್ಟುಕೊಂಡರೆ ಒಬ್ಬರಿಗೆ ನೆಲೆ ಒದಗಿಸಿದ ಭಾಗ್ಯ ಸಿಗುತ್ತದೆ.
- ನೀರನ್ನು ಕುಡಿದು, ತನ್ನ ಹೊಟ್ಟೆಯಲ್ಲಿ ಶುಭ್ರ ಮಾಡಿ, ಶುದ್ಧ ನೀರನ್ನು ಸಂಗ್ರಹಿಸಿ ಮತ್ತು ಕೆಟ್ಟ ನೀರನ್ನು ಕಕ್ಕುವ ವಾಟರ್ ಪುರಿಫೈಎರ್ ಎನ್ನುವ ಯಂತ್ರಗಳು ಇತ್ತೀಚಿಗೆ ಎಲ್ಲರ ಅಡಿಗೆ ಮನೆಗಳಲ್ಲಿ ರಾರಾಜಿಸುತ್ತಿವೆ. ಅದು ಕಕ್ಕುವ ನೀರಿನಲ್ಲಿ ದೇಹಕ್ಕೆ ಬೇಡವಾದ ಖನಿಜಗಳು ಮತ್ತು ಲವಣಗಳು ಇರುತ್ತವೆ. ಅ ತ್ಯಾಜ್ಯದ ನೀರನ್ನು ಚೆಲ್ಲದೇ , ಪಾತ್ರೆ ತೊಳೆಯಲು ಅಥವಾ ನೆಲ ಒರೆಸಲು ಉಪಯೋಗಿಸಿದರೆ ನೀರು ಸಂಪೂರ್ಣ ವ್ಯರ್ಥವಾಗದಂತೆ ತಡೆಯಬಹುದು.
- ನೀರಿನ ಟ್ಯಾಂಕ್ ತುಂಬಿ ಹರಿಯುವುದನ್ನು ತಡೆಗಟ್ಟಲು ಅಧುನಿಕ ಉಪಕರಣಗಳು ಮಾರುಕಟ್ಟೆಯಲ್ಲಿ ಬಂದಿವೆ. ಅವುಗಳನ್ನು ಅಳವಡಿಸಿ.
- ಮಳೆ ಬಂದಾಗ ಮಳೆ ನೀರು ಕೊಯ್ಲು ಮಾಡಿ ಹೆಚ್ಚು ನೀರನ್ನು ಸಂಗ್ರಹಿಸಿ.
- ಗಿಡ ಮರಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟೇ ನೀರನ್ನು ಬಳಸಿ.
ಇವೆಲ್ಲವನ್ನೂ ಪಾಲಿಸಲು ಇಂದಿನ ಅಲೆಗ್ಸಾಂಡರ್ಗಳಿಗೆ(ದೊಡ್ಡವರಿಗೆ) ಕಷ್ಟವಾದರೆ ಮನೆಯಲ್ಲಿನ ಮುಂದಿನ ಅಲೆಗ್ಸಾಂಡರ್ಗಳಿಗೆ(ಚಿಕ್ಕ ಮಕ್ಕಳಿಗೆ) ತಿಳಿಸಿ, ಯಾಕೆಂದರೆ ಮುಂದೆ ಬರುವ ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ತಯಾರಿ ಆರಂಭಿಸಬೇಕು.ಮೇಲಿನವುಗಳಲ್ಲಿ ಯಾವುದನ್ನು ಪಾಲಿಸುತ್ತಿರೋ ಬೀಡುತ್ತಿರೋ, ಕಡೆ ಪಕ್ಷ ಎಲ್ಲಾದರೂ ಜೀವ ಜಲ ವ್ಯರ್ಥವಾಗುತ್ತಿದ್ದರೆ, ಸಂಬಂಧ ಪಟ್ಟವರಿಗಾದರೂ ತಿಳಿಸಿ.