ವಿಷಯದ ವಿವರಗಳಿಗೆ ದಾಟಿರಿ

ಜುಲೈ 8, 2013

2

’ಹರಶರಣ ದೆನಿಲೋನ ಹಾದಿಯಲ್ಲಿ’ ಶಿವಪ್ರಕಾಶರ ಲೇಖನಕ್ಕೊಂದು ಪ್ರತಿಕ್ರಿಯೆ

by ನಿಲುಮೆ

-ಬಾಲಚಂದ್ರ ಭಟ್

Danielouಈ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾದ ಎಚ್.ಎಸ್.ಶಿವಪ್ರಕಾಶರ ಜುಲೈ ೫ ರಂದು ಪ್ರಕಟವಾದ ’ಹರಶರಣ ದೆನಿಲೋನ ಹಾದಿಯಲ್ಲಿ’ ಬರಹಕ್ಕೆ ಪ್ರತಿಕ್ರಿಯೆ. ಬಹಳಷ್ಟು ವಿಷಯಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದನ್ನು ಓದಿದ ನಂತರ ಸ್ವಲ್ಪ ಲೇಖನ ಏನು ಹೇಳಹೊರಟಿದೆಯೆಂಬುದರ ಬಗ್ಗೆ ಗೊಂದಲ ಮೂಡಿತು. ನಾನು ತಿಳಿದುಕೊಂಡಂತೆ ಲೇಖಕರು ಒಟ್ಟಾರೆಯಾಗಿ ಏನು ಹೇಳುತ್ತಾರೆಂದರೆ,

೧. ಆಲೆನ್ ದೆನಿಲೋ ನ ವಿಚಾರಗಳು, ಬಹುತೇಕ ಭಾರತೀಯ ಆಧ್ಯಾತ್ಮಿಕ ಪರಿಕಲ್ಪನೆಗಳಿಗಿಂತ(‘ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತ’) ಭಿನ್ನವಾಗಿತ್ತು, ಹಾಗೂ

೨. ಭಾರತದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ’ಸ್ಟೀರಿಯೊಟೈಪಡ್ ಪೌರಾತ್ಯ’ ಚಿಂತನೆಗಳಿಂದ, ಹಾಗೂ ವಸಾಹತುಶಾಹಿ ಪರಿಕಲ್ಪನೆಗಳಿಂದ ಹೊರತಾಗಿದ್ದವು.

ಈ ಮೇಲಿನ ಎರಡು ಲೇಖಕರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವಿಮರ್ಶಿಸಿದ್ದೇನೆ.ಹಾಗೆಯೆ ಪ್ರಶ್ನೆಗಳ ಮೂಲಕ ನನ್ನಲ್ಲಿನ ಗೊಂದಲಗಳನ್ನ ಪ್ರಸ್ತಾಪಿಸಿದ್ದೇನೆ. ತಪ್ಪಿದ್ದಲ್ಲಿ ಸರಿಪಡಿಸಿ.

೧. ನಾನು ಹಾಗೆ ತಿಳಿದುಕೊಳ್ಳಲು ಕಾರಣ ಶಿವಪ್ರಕಾಶರು ಹೀಗೆ ಉಲ್ಲೇಖಿಸಿರುವದು: “ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವನ್ನೇ ಭಾರತದ ಸಾರ ಸರ್ವಸ್ವವೆನ್ನುವರು ಆ ಕಾಲದ ಬಹಳ ಮಂದಿ ವಿದ್ವಾಂಸರು. ಅವರಲ್ಲಿ ಬಹುತೇಕ ಪ್ರಭೃತಿಗಳು ಭಾರತೀಯರೆಂದರೆ ಜೀವನೋತ್ಸಾಹ, ರಾಗರತಿಗಳಿಲ್ಲದ ಓಡುಗಾಲ ಯೋಗಿಗಳೆಂದು ಬಗೆದಿದ್ದರು. ಆದರೆ ವಿದ್ವತ್ತು, ರಸಗ್ರಾಹಿತ್ವ ಮತ್ತು ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಗಳ ತ್ರಿವೇಣಿಸಂಗಮವಾಗಿದ್ದ ದೆನಿಲೋ ಒತ್ತು ನೀಡಿದ್ದು ಭಾರತೀಯರ ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದಕ್ಕಲ್ಲ, ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ.”

ದನಿಲೊ ನ ವಿಚಾರಗಳು ಸ್ವಾಭಾವಿಕವಾಗಿಯೆ ಭಾರತೀಯ ಆಧ್ಯಾತ್ಮಿಕ ವಿಚಾರಗಳಿಗಿಂತ ಭಿನ್ನವಾಗಿದ್ದದ್ದು ನಿಜ, ಆದರೆ ಶಿವಪ್ರಕಾಶರು ವ್ಯಾಖ್ಯಾನಿಸಿದಂತೆ ಅಲ್ಲ. ನನಗನ್ನಿಸಿರುವಂತೆ ಹೀಗೆ ಉಲ್ಲೇಖಿಸಿರುವಲ್ಲಿ ಲೇಖಕರು ಎರಡು ಕಡೆಯಲ್ಲಿ ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ಮೊದಲನೆಯದಾಗಿ ದೆನಿಲೊನ ಆಧ್ಯಾತ್ಮಿಕ ಪರಿಕಲ್ಪನೆಯನ್ನು ತಪ್ಪಾಗಿ ವ್ಯಾಖ್ಯಾನಿಸಿರುತ್ತಾರೆ ಹಾಗೂ ವೇದಾಂತವನ್ನು ತಪ್ಪಾಗಿ ಅರ್ಥೈಸುತ್ತಾರೆ. ಎರಡನೆಯದಾಗಿ ’ವೇದಾಂತವೇ ಆ ಕಾಲದಲ್ಲಿ ಭಾರತದ ಸಾರ ಸರ್ವಸ್ವವೆಂದು ಬಹಳಷ್ಟು ವಿಧ್ವಾಂಸರಿಂದ ಬಗೆಯಲಾಗಿತ್ತು” ಎಂದು ಆಧಾರವಿಲ್ಲದೆ ಅಭಿಪ್ರಾಯಕ್ಕೆ ಬರುತ್ತಾರೆ.

ಹಾಗಾದರೆ ದನಿಲೊ ನ ಆಧ್ಯಾತ್ಮಿಕ ಪರಿಕಲ್ಪನೆಗಳು ಶಿವಪ್ರಕಾಶರು ಹೇಳಿರುವಂತೆ “ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ” ಎಂಬುದು ನಿಜವೇ? ದನಿಲೊ ನ ಬರಹಗಳನ್ನು ಸರಿಯಾಗಿ ಓದದೆ ಬೇಕಾದ್ದನ್ನು ಮಾತ್ರ ಆಯ್ದು ಓದಿದರೆ(cherry-picking) ಇಂತ ಅಭಿಪ್ರಾಯಕ್ಕೆ ಬರುವದು ಸಾಧ್ಯ. ’While the Gods Play’ ಪುಸ್ತಕದಲ್ಲಿ ಆತ ’The wandering Shaiva sages, asocial and marginal, both ascetic and lascivious’ {p. 19} ಎಂದು ಉಲ್ಲೆಕಿಸುತ್ತಾನೆ. ಅಂದರೆ ಓಡುಗಾಲ ಶೈವ ಯೋಗಿಗಳು ವಿರಾಗಿಗಳು(ascetic) ಹಾಗೂ ರಾಗಿಗಳು(lascivious) ಇವೆರಡೂ ಆಗಿದ್ದರು ಎಂದು ಆತ ಉಲ್ಲೇಕಿಸಿದ ಮೇಲೆ ಶಿವಪ್ರಕಾಶರು ಯಾಕೆ ದನಿಲೊ ನ ವಿಚಾರಗಳು ಒತ್ತು ನೀಡಿದ್ದು ’ರಾಗರತಿಗಳಿಲ್ಲದ ಓಡುಗಾಲ ಯೋಗಿಗಳಿಗಲ್ಲ’ ಬದಲಾಗಿ ಪೂರ್ಣಾದ್ವೈತಕ್ಕೆ ಎಂದು ತಪ್ಪಾಗಿ ಅರ್ಥೈಸುತ್ತಾರೆ? ಹಾಗೆಯೆ “ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವೇ ಭಾರತದ ಸಾರ ಸರ್ವಸ್ವವೆಂದು ’ಆ ಕಾಲದಲ್ಲಿ’(?) ಬಹಳಷ್ಟು ವಿಧ್ವಾಂಸರಿಂದ ಬಗೆಯಲಾಗಿತ್ತು” ಮತ್ತು ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದ ಎಂದು ಮತ್ತೆ ತಪ್ಪಾಗಿ ಅಭಿಪ್ರಾಯಪಡುತ್ತಾರೆ. ಇಲ್ಲಿ ಶಿವಪ್ರಕಾಶರು ’ಆ ಕಾಲದಲ್ಲಿ..ವೇದಾಂತ’ ಎಂದು ಜನರಲೈಸ್ ಮಾಡಿದಂತೆ ತೊರುತ್ತದೆ. ’ಆ ಕಾಲವೆಂದರೆ’ ಯಾವುದು? ದೆನಿಲೋ ನ ಕಾಲವೇ? ಹಾಗೆಯೆ ಶಿವಪ್ರಕಾಶರು ಹಾಗೆ ಅಂದುಕೊಳ್ಳಲು ಆಧಾರ ಏನು? ನನಗೆ ಗೊಂದಲ ಇಲ್ಲೆ ಇರುವದು. ನನಗನ್ನಿಸಿದ ಪ್ರಕಾರ ಯಾವುದೇ ಕಾಲದಲ್ಲಿಯೂ ಭಾರತದಲ್ಲಿ ಯಾವುದೆ ಒಂದು ಆಧ್ಯಾತ್ಮಿಕ ಸಂಪ್ರದಾಯ ಜನರಲೈಸ್ ಮಾಡುವಷ್ಟು ಮೊನೊಲಿಥಿಕ್ ಆಗಿರಲು ಸಾಧ್ಯವಿಲ್ಲ. ಹಾಗೆಯೆ ಇತ್ತು ಎಂದು ಸಾಭೀತುಮಾಡಲೂ ಆಧಾರವಿಲ್ಲ. ಭಾರತದಲ್ಲಿ ವೈದಿಕ ಶಾಖೆಯಲ್ಲಿಯೇ ಮೊದಲಿನಿಂದಲೂ ಸಾಂಖ್ಯ, ಯೊಗ, ಮಿಮಾಂಸ, ವೇದಾಂತ, ನ್ಯಾಯ, ವೈಷೆಶಿಕ ಪ್ರಚಲಿತದಲ್ಲಿತ್ತು. ಅವೈದಿಕಗಳಾದ ಚಾರ್ವಾಕ, ಬೌದ್ಧ, ಜೈನಗಳೂ ಇತ್ತು. ಹಾಗೆಯೇ ಅವುಗಳಲ್ಲೆ ಪ್ರತಿಯೊಂದು ಶಾಖೆಯಲ್ಲಿ ಭಿನ್ನಾಭಿಪ್ರಾಯಗಳೂ, ಭಿನ್ನಮತಗಳೂ ಇದ್ದವು. ಅದಕ್ಕೆ ವೇದಾಂತ ಶಾಖೆಯೂ ಹೊರತಲ್ಲ. ವೇದಾಂತದಲ್ಲೂ ಜನರಲೈಸ್ ಮಾಡಲಾಗದಷ್ಟು ಭಿನ್ನವಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಬೇರೆ ಬೇರೆ ಮತಗಳಿವೆ. ದೆನಿಲೋ ನ ಕಾಲದಲ್ಲಿಯೂ ಅನೇಕ ಸಂಪ್ರದಾಯ ಮಿಶ್ರಿತ, ಆಧುನಿಕ ಆಧ್ಯಾತ್ಮಿಕ ಪಂಥಗಳು(ಉದಾ: ಬ್ರಹ್ಮಸಮಾಜ, ಆರ್ಯಸಮಾಜ) ಪ್ರಚಲಿತವಾಗಿದ್ದವು. ಹಾಗಾಗಿ ’ಆ ಕಾಲದಲ್ಲಿ ವೇದಾಂತವೊಂದೇ ಸಾರ ಸರ್ವಸ್ವವೆಂದು ನಂಬಲಾಗಿತ್ತು’ ಎಂಬ ಅವರ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ಲೇಖಕರು ’ಆ ಕಾಲದಲ್ಲಿ..’ ಎಂದು ಜನರಲೈಸ್ ಮಾಡುವದರ ಜೊತೆಗೆ ವೇದಾಂತವನ್ನೂ ’ಕನಿಕರ ಹುಟ್ಟಿಸುವ ಮುಖಮುದ್ರೆ’, ಜೀವನೋತ್ಸಾಹವಿಲ್ಲದ, ರಸವಿಮುಖವಾದ ಆಧ್ಯಾತ್ಮವಾದ ಜನರಲೈಸ್ ಮಾಡಿಬಿಡುತ್ತಾರೆ. ಇದು ಕುಚೊದ್ಯವೊ? ಅಥವಾ ಅರೆತಿಳುವಳಿಕೆಯೊ? ಹಾಗಾದರೆ ವೇದಾಂತಿಗಳಲ್ಲಿ ಗ್ರಹಸ್ತಾಶ್ರಮವನ್ನು ಆಶ್ರಯಿಸುವಂತಿಲ್ಲ(ಐಂದ್ರೀಯ ಸುಖಗಳಿಗೆ ತೆರೆದುಕೊಳ್ಳುವಂತಿಲ್ಲ) ಎಂದು ಎಲ್ಲಾದರೂ ಉಲ್ಲೇಖಿಸಿದ್ದಾರೆಯೆ? ಅರ್ಜುನನು ಜೀವನೋತ್ಸಾಹದಿಂದ ವಿಮುಖವಾಗಿ ನಿಂತಾಗಲೇ ಅಲ್ಲವೇ ಕೃಷ್ಣನು ಭಗವದ್ಗೀತ ಉಪದೇಶ ಮಾಡಿದ್ದು? ಆ ಭಗವದ್ಗೀತೆಯೇ ಅಲ್ಲವೇ ವೇದಾಂತದ ಮೂಲ? ಅಷ್ಟಕ್ಕೂ ಶೈವ ಪೂರ್ಣಾದ್ವೈತವೂ ಅದ್ವೈತ ವೇದಾಂತದ ಸಾರದ ಮೇಲೆಯೇ ಅಲ್ಲವೇ ನಿಂತಿರುವದು? ಶಿವಪ್ರಕಾಶರು, ವೇದಾಂತವೆಂದರೆ ಬೌದ್ಧಮತದಂತೆ ವಿರಾಗಮಾರ್ಗವಾದ ಮಾತ್ರ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವಂತಿದೆ. ಮುಖ್ಯವಾಗಿ ಅದ್ವೈತ ವೇದಾಂತ ಶಂಕರರ ಕಾಲದಲ್ಲಿ ಶಿವಾದ್ವೈತ, ಶಾಕ್ತ್ಯ ಅದ್ವೈತ ಎಂದು ಎರಡು ಮೂರು ಬಗೆಯಾಗಿ ಹರಿದು ಹಂಚಿ ಹೋಗಿರಲೇ ಇಲ್ಲ. ಅವೆಲ್ಲವೂ ಶಂಕರರ ಆಧ್ಯಾತ್ಮವನ್ನು ಸರಿಯಾಗಿ ಅರ್ಥೈಸದೆ ನಂತರದ ದಿನಗಳಲ್ಲಿ ಬಂದ ಪಂಥಗಳಷ್ಟೆ. ಅಲ್ಲದೆ ಶಂಕರರ ನಂತರದಲ್ಲಿ ಪ್ರಚಲಿತಕ್ಕೆ ಬಂದ ಶೈವ-ಶಾಕ್ತ್ಯ ಅದ್ವೈತಕ್ಕೂ, ಕ್ರಿ.ಪೂ ದಲ್ಲಿ ಪ್ರಚಲಿತದಲ್ಲಿದ್ದ ಕಾಳಮುಖರ ಅಧ್ಯಾತ್ಮಿಕ ದರ್ಶನ ಮಾರ್ಗಕ್ಕೂ, ಸಂಪ್ರದಾಯಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ.

೨. ಇನ್ನು ಆಲೆನ್ ದೆನಿಲೋ ನ ವಿಚಾರಗಳು ಪೌರಾತ್ಯ ಪರಿಕಲ್ಪನೆಗಳಿಂದ ಹೊರಗುಳಿದಿದ್ದವೇ? ಅಥವಾ ಇನ್ನೊಂದು ಭಿನ್ನ ಪೌರಾತ್ಯ ಕಲ್ಪನೆಯೇ? ಎಂದು ನನಗೆ ಗೊಂದಲ. ಅತನ ಚಿಂತನೆ ಯುರೋಪ್ ಕೇಂದ್ರಿತ ವಿಚಾರ ಹೌದು ಹಾಗೂ ವಸಾಹತುಶಾಹಿ ಚಿಂತನೆಗಳಿಂದ ಭಿನ್ನ ಅಲ್ಲ ಎಂಬುದು ನನ್ನ ಅಭಿಮತ. ಕಾರಣ, ಮೂಲತಃ ದನಿಲೊ ನ ಭಾರತದ ಬಗೆಗಿನ ಆಧ್ಯಾತ್ಮಿಕ ಪರಿಕಲ್ಪನೆಗಳು ನಿಂತಿರುವದೇ ಆರ್ಯ-ದ್ರಾವಿಡ ಕಥೆಯ ಬುನಾದಿಯ ಮೇಲೆ. ಶಿವ ದ್ರಾವಿಡರ ದೇವತೆ ಎಂದು ಆತನೆ ’While the Gods Play’ ನಲ್ಲಿ ಉಲ್ಲೇಕಿಸಿದ್ದಾನೆ. ಹಾಗಿದ್ದರೆ ಅದು ಯುರೋಪ್ ಕೇಂದ್ರಿತ ವಿಚಾರಕ್ಕಿಂತ ಭಿನ್ನವಾಗಲು ಹೇಗೆ ಸಾಧ್ಯ? ಆ ರೀತಿಯ ಸಮನ್ವಯತೆಯ ಪರಿಕಲ್ಪನಾ ವಿಧಾನ ವಸಾಹತುಶಾಹಿ ಪರಿಕಲ್ಪನೆಗಳಿಗಿಂತ ಹೇಗೆ ಭಿನ್ನ?

ಇಷ್ಟನ್ನು ವಿಮರ್ಷೆಗೆ ಒಳಪಡಿಸಿದಾಗ, ನನಗೆ ಅನಿಸುವದೇನೆಂದರೆ ಭಾರತದ ಆಧ್ಯಾತ್ಮದ ಬಗ್ಗೆ ದನಿಲೊ ನ ವಿಚಾರಗಳು ಭಾರತೀಯ ಚಿಂತನೆಗಳಿಗಿಂತ ಭಿನ್ನವಾಗಿದ್ದಿದ್ದು ನಿಜ, ಆದರೆ ಯುರೋಕೇಂದ್ರಿತ ವಿಚಾರಗಳಿಂದ ಹೊರತಾದದ್ದು ಎನ್ನಲು ಸಾಧ್ಯವಿಲ್ಲ. ಶಿವಪ್ರಕಾಶರು ಹೇಳುವ ಶೈವಾದ್ವೈತ ಹಾಗೂ ಅದ್ವೈತ ವೇದಾಂತ ಗಳ ಭಿನ್ನತೆಗಳು ಅವುಗಳಲ್ಲಿನ ಅಧ್ಯಯನದ ಕೊರತೆಯಷ್ಟೆ. ಅಲ್ಲದೆ ಶೈವ ಪಂಥವನ್ನು ದಲಿತರ ಆಧ್ಯಾತ್ಮ ಮಾರ್ಗ, ಅವೈದಿಕ ಆಧ್ಯಾತ್ಮ ಮಾರ್ಗವೆಂದೆಲ್ಲಾ ಘೀಳಿಡುವ ಬುದ್ಧಿಜೀವಿಗಳು ತಿಳಿದುಕೊಳ್ಳಬೇಕಾದುದೇನೆಂದರೆ, ಶೈವ ಪಂಥದ ಮೊದಲ ಮೂಲ ಉಲ್ಲೇಖ ಕೃಷ್ಣಯಜುರ್ ವೇದದ ಭಾಗವಾದ ’ಶ್ವೇತಾಶ್ವತರ ಉಪನಿಶತ್’ ನಲ್ಲಿಯೇ ಇದೆಯೆಂಬುದು. ಕಾಲಕ್ರಮೇಣ ಬದಲಾವಣೆಗೆ ತೆರೆದುಕೊಳ್ಳುವದರ ಮೂಲಕ ಬೇರೆ ಬೇರೆ ಪಂಥಗಳಾದುವಷ್ಟೆ. ಹಾಗೆಯೆ ಬದಲಾವಣೆಗೆ ತೆರೆದುಕೊಳ್ಳುವ ಸಂಸ್ಕೃತಿ, ಸಂಪ್ರದಾಯಗಳು ಇದ್ದಿದ್ದು ನಮ್ಮ ಸಂಸ್ಕೃತಿಯ ಸಿರಿವಂತಿಕೆಯೆ ಸರಿ.

ಚಿತ್ರ ಕೃಪೆ : ಪ್ರಜಾವಾಣಿ

2 ಟಿಪ್ಪಣಿಗಳು Post a comment
  1. Umesh
    ಜುಲೈ 8 2013

    Logical and very well written by Mr. Bhat.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments